ಬುಧವಾರ, ಡಿಸೆಂಬರ್ 5, 2018

'ನಾನು' ಸತ್ತರೆ..

ಸುನಿಧಿಯ ಆಲೋಚನೆ ಹಿಂದಕ್ಕೋಡಿತ್ತು. ಅದರ ಹಿಂದಿನ ಪ್ರಶ್ನೆ ಇದ್ದದ್ದು.. "'ನಾನು' ಸತ್ತರೆ..?

ತಾನು ಬಂದದ್ದು ತುಂಬಿದ ಸಂಸಾರದ ಸೊಸೆಯಾಗಿಯೇ.. ಹಿಂದೆಂದೂ ಇಲ್ಲದ ಹೊಸ ರೀತಿಯ ಭಾವನೆಗಳು, ಈ ಕುಟುಂಬವನ್ನು ನೋಡಿದೊಡನೆ ಉಂಟಾಯಿತು. ಬಹುಶಃ ನನ್ನಮ್ಮ ನೋಡಿ ಮಾಡಿದ ಮದುವೆಯೇ ಆಗಿದ್ದಿದ್ದರೆ ಅಮ್ಮ ಹೇಳುವ ಹಾಗೆಯೇ  ಹೈ ಸೊಸೈಟಿ ಫ್ಯಾಮಿಲಿಯ, ಯಾವುದೋ ಸಾಫ್ಟ್ವೇರ್ ಗಂಡ ಸಿಕ್ಕಿರುತ್ತಿದ್ದ. ಆದರೆ ಇದು ನಾನೇ ಬೇಕೆಂದು ಆರಿಸಿಕೊಂಡ ಸಂಬಂಧವಲ್ಲವೇ..?

ಬೇಕೆಂದಾಗ ಹೊಕ್ಕು, ಬೇಡವೆನ್ನಲು ಇದು ಬಿಟ್ಟು ಹೊರಡುವ ಸಂಬಂಧವಲ್ಲವಲ್ಲಾ..!? ಸಾತ್ವಿಕ್ ನನ್ನು ಮದುವೆಯಾಗುವಾಗ ಅವನು ತಿಳಿಸಿದ್ದ "ನೀನು ಮದುವೆಯಾಗುವುದು ನನ್ನನ್ನು ಮಾತ್ರವಲ್ಲ.. ನನ್ನ ಕುಟುಂಬವನ್ನು" ಎಂದು. ಹದಿಹರೆಯದ ಪ್ರೀತಿ, ಬಿಸಿ ರಕ್ತ ಎಲ್ಲವನ್ನೂ ಎಲ್ಲರನ್ನೂ ಒಪ್ಪಿಕೊಳ್ಳುವಂತೆ ಮಾಡಿತ್ತು. ನಾನು ನೋಡಿದ ದಾಂಪತ್ಯಗೀತೆಗಳೂ ಹಾಗೆಯೇ ಇದ್ದವಲ್ಲಾ.. ಮೊದಮೊದಲಿಗೆ ಮನೆಯವರೆಲ್ಲಾ ಸರ್ವಸ್ವ, ಮನೆಯವರು ಹೇಳಿದಂತೆಯೇ.., ಆದರೆ ನಂತರ ನನ್ನ ಮನೆದೇವರು ಹೇಳಿದಂತೆಯೇ.. ನನ್ನ ಮನೆಯಾಕೆಯೇ ನನ್ನ ಸರ್ವಸ್ವ.

ಆದರೆ ನಾನು ನೋಡಿದ ಹೆಚ್ಚಿನ ದಾಂಪತ್ಯಗಳೆಲ್ಲಾ ವಿಷಮಗೀತೆಗಳೇ.. ದಾಂಪತ್ಯ ಇನ್ನೂ ಚೆನ್ನಾಗಿ ಹೊಂದಿಕೊಂಡಿದೆಯೆಂದರೆ ಅದಕ್ಕೆ ಕಾರಣ ಒಡೆದ ಮನೆಗಳು ಅರ್ಥಾತ್ ಅವಿಭಕ್ತ ಕುಟುಂಬಗಳು. ಅತ್ತೆ-ಸೊಸೆ ಬೇರೆ ಬೇರೆ ಇರುವುದು ಆಷಾಡದಲ್ಲಿ ಮಾತ್ರವಲ್ಲ.. ಯಾವಾಗಲೂ..!

ಅಜ್ಜಿ ಅತ್ತೆಯರ ಸಂಬಂಧವೂ ಹಾಗೇ ಇದ್ದಿತ್ತು. ಒಂದೇ ನಾಣ್ಯದ ಎರಡು ಮುಖಗಳಂತೆಯೇ..? ಅಜ್ಜಿಯದ್ದು ಮಾತು ಜಾಸ್ತಿ ಆದರೂ ಮಾತುಗಳಲ್ಲಿ ಕೊಂಕು ಇರುತ್ತಿರಲಿಲ್ಲ.ಅತ್ತೆಯೂ ಅನುಸರಿಸಿಕೊಂಡು ಹೋಗದವರೇನೂ ಅಲ್ಲ. ಆದರೆ ಅವರ ಹೊಂದಾಣಿಕೆ ಮನೆಯವರೊಂದಿಗೆ ಮಾತ್ರ ಅಲ್ಲ ಎಂಬುದು ವಿಪರ್ಯಾಸ. ಅಮ್ಮ ಕೂಡಾ ಬಾಳಿದ್ದು ಕೂಡು ಕುಟುಂಬದಲ್ಲೇನೂ ಅಲ್ಲ. ಅಲ್ಲದೆ ಅತ್ತೆ ಮನೆಯಲ್ಲಿ ಹೀಗೇ ಇರಬೇಕೆಂದೂ ಅಮ್ಮ ಹೇಳಿಕೊಡಲಿಲ್ಲ. ಹೀಗೇ ಇರಬೇಕೆಂಬುದನ್ನು ಹೇಳಿಕೊಡಲು ಅಮ್ಮನಿಗೆ ಸಮಯವಾದರೂ ಎಲ್ಲಿತ್ತು..?  ಲೇಟ್ ನೈಟ್ ಪಾರ್ಟಿಗಳು, ಸೊಸೈಟಿ, ಕ್ಲಬ್ ಗಳ ಮೀಟಿಂಗ್ ಗಳು ಇದೆಲ್ಲದರ ನಡುವೆಯೇ ಅಮ್ಮ ಅಲ್ಲಲ್ಲ ಮಮ್ಮಿ ಕಳೆದುಹೋಗಿದ್ದಳು.

ಆದರೆ ನಾನು ಹೀಗಿರಲು ಕೊಂಚ ಮಟ್ಟಿಗೆ ಕಾರಣ ಅಪ್ಪನೇ.. ಸಾತ್ವಿಕ್ ನ ಸಂಬಂಧವನ್ನೂ ಯಾವ ತಕರಾರೂ ಇಲ್ಲದೆ ಒಪ್ಪಿಕೊಂಡಿದ್ದರು. ಅಲ್ಲದೆ ನನ್ನನ್ನು ಬೆಂಬಲಿಸಿದ್ದರು. ಅಲ್ಲದೆ ಹೊರಡುವ ಮುನ್ನ ಕೂಡ ಒಂದು ಕಿವಿಮಾತನ್ನೂ ಹೇಳಿದ್ದರು. "ಮನಸ್ಸೆಂಬುದು ನೀನು ಹರಿಯಬಿಟ್ಟಂತೆ, ಲಂಗು ಲಗಾಮು ನಿನ್ನೆಡೆಯೇ ಇರಲಿ".

ಆದರೆ ಈ ಮಾತನ್ನು ಮೀರುವ ಅಥವಾ ಮತ್ತೆ ನೆನಪಿಸಿಕೊಳ್ಳುವ ಸಂದರ್ಭ ಇದುವರೆಗೂ ಬಂದಿರಲಿಲ್ಲ. ಆದರೆ ಅಮ್ಮ ಇತ್ತೀಚೆಗೆ ಹೇಳಿದ ಮಾತು ತುಲನೆ ಮಾಡುವಂತೆ ಮಾಡಿತು ಅಷ್ಟೇ.  ಅಮ್ಮ ಅಲ್ಲಲ್ಲಾ ಮಮ್ಮಿ ಹೇಳಿದ್ದು, "ಆದಷ್ಟು ಬೇಗ ಆ ಜಾತ್ರೆಯಿಂದ ಹೊರಗಡೆ ಬಾ."

ಆದರೆ ನನಗೆಂದೂ ಇಲ್ಲಿ ಜಾತ್ರೆ ಅಥವಾ ಇಕ್ಕಟ್ಟಿನ ಅಥವಾ ಮತ್ತಾವುದೇ ಇರುಸುಮುರುಸಿನ ಅನುಭವವಾಗಿರಲಿಲ್ಲ. ಯಾವ ಕೆಲಸವೂ ಬರದ ನನಗೆ ಅತ್ತೆ ಅಮ್ಮನಾಗಿ.. ಓರಗಿತ್ತಿಯರು ಗೆಳತಿಯರಾಗಿ ಸಹಕರಿಸಿದರು. ಮೈದುನ, ಭಾವ, ಮಾವ ಎಲ್ಲರೂ ಒಳ್ಳೆಯವರೇ..

ಎಲ್ಲವನ್ನೂ ತಿದ್ದುತ್ತಿದ್ದ ಎಲ್ಲರೂ ಇಂದು ಅಷ್ಟು ಕಠೋರವಾಗಿ ನಡೆದುಕೊಂಡದ್ದಾದರೂ ಏಕೆ..?

ಕೆಲಸದವರನ್ನು ನಮ್ಮ ಮನೆಯಲ್ಲಿ ನಡೆಸಿಕೊಳ್ಳುತ್ತಿದ್ದದ್ದೇ ಹಾಗೆ..!

ಕೆಲಸದವನಾಗಿ ನನಗೇ ಏಕವಚನದಿಂದ ಮಾತನಾಡಿಸಿದ್ದೇ ಅಲ್ಲದೆ ನನ್ನ ಚಪ್ಪಲಿ ಹೊಲಿಸಿಕೊಂಡು ಬಾ ಎಂದದ್ದಕ್ಕೆ "ಆಗುವುದಿಲ್ಲ, ನಮಗೂ ಆತ್ಮಗೌರವವಿದೆ, ಹಿರಿಯರಿಗೆ ಗೌರವ ಕೊಡುವುದನ್ನು ಕಲಿ, ಅವರು ಕೆಲಸದವರಾದರೂ ಸರಿಯೇ" ಎಂದರು. ಕೋಪ ಬಂದು ಹೊಡೆದದ್ದೇ ತಪ್ಪಾ?

ಮನೆಯಲ್ಲಿ ಎಲ್ಲರೂ ಅಂದು ಕೋಪ ಮಾಡಿಕೊಂಡು ನನ್ನನ್ನೇ ದೂಷಿಸಿದರು. ನನ್ನ ಕೋಪವೂ ಮೇರೆ ಮೀರಿ ಮಾತಿಗೆ ಮಾತು ಬೆಳೆಯಿತು. ಒಳ್ಳೆಯತನದ ಮತ್ತೊಂದು ಮುಖದ ಪರಿಚಯವಾಗಿತ್ತು.

ಸೋಲಲು ನನಗಿಷ್ಟವಿಲ್ಲ ಆದರೆ ಸೋಲದೆ ವಿಧಿಯಿಲ್ಲ. ಸೋಲದೆ ಸಂಬಂಧದಲ್ಲಿ ಗೆಲ್ಲಲ್ಲೂ ಸಾಧ್ಯವಿಲ್ಲ. ಹಾಗೆಂದು ಮನೆಯವರೆಲ್ಲರನ್ನೂ ಎದುರುಹಾಕಿಕೊಂಡು ಬದುಕಲು ಸಾಧ್ಯವೇ..?

ಇದಕ್ಕೆಲ್ಲಾ ಒಂದೇ ಪರಿಹಾರ 'ನಾನು' ಸಾಯಬೇಕು. ಹೌದು ಇದಕ್ಕೆ ಇದನ್ನು ಬಿಟ್ಟು ಬೇರೆ ಪರಿಹಾರವಿಲ್ಲ.

ಇದೆಲ್ಲದಕ್ಕೂ ಪರಿಹಾರ ಸಿಕ್ಕಿತ್ತು. ಅಪ್ಪನನ್ನು ಸಲಹೆ ಕೇಳಿದಾಗ 'ವಸುದೈವ ಕುಟುಂಬಕಂ' ಎಂದರಷ್ಟೇ.

'ನಾನು' ಸತ್ತಾಗಿತ್ತು. ಸುನಿಧಿ ಸಾಯಲಿಲ್ಲ, ಸುನಿಧಿಯೊಳಗಿನ 'ನಾನು' ಎಂಬ ಅಹಂಕಾರ ಸತ್ತಿತ್ತು. ಮನೆಯೊಳಗೆ ಪಂಕ್ತಿ ಭೋಜನ ಸುನಿಧಿಯ ಮುಂದಾಳತ್ವದಲ್ಲಿ ನಡೆದಿತ್ತು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ