ಮತ್ತವಳದ್ದೇ ತೀರದ ಋಣದಲಿ ಬಂಧಿ
ನವಮಾಸ ಹೆತ್ತು, ಹೊತ್ತು, ತುತ್ತಿಟ್ಟಳು
ಬೆಚ್ಚಗೆ ಕಾಪಿಟ್ಟು, ನವೆಯದಂತೆ, ನೋಯದಂತೆ
ಕಷ್ಟಗಳಿಗೆಲ್ಲಾ ತಾನೇ ಗುರಾಣಿಯಂತಾದವಳು
ಒಳಗಿನ ಕತ್ತಿಯಿಂದ ಇಂಚಿಂಚೇ ತಿವಿಸಿಕೊಂಡಳು
ಅವಳ ನೆತ್ತರ ಹೀರುತ್ತಲೇ ನಿಂತವಗೆ
ಅವಳ ಕಸುವನೆಲ್ಲಾ ಬಸಿದ ಮೇಲೆ
ಅವಳ ಪ್ರೀತಿಯ ಅಗಾಧತೆ ಅರಿವಾಗಿತ್ತು
ಪ್ರೀತಿಯ ಸಾಲ ಆಗಲೇ ಆಗಸಕ್ಕೇರಿತ್ತು
ಪ್ರೀತಿಯ ಅಸಲು ತೀರಿಸುವೆನೆಂದು ಹೊರಟರೆ
ಅದಕ್ಕೀಗ ಬಡ್ಡಿ, ಚಕ್ರಬಡ್ಡಿಗಳೂ ಸೇರುತ್ತಿವೆ..
ಯಾವಾಗ ಇಷ್ಟೆಲ್ಲಾ ಪ್ರೀತಿಯ ಸಾಲವಾಯಿತೋ
ಅವಳ ಪ್ರೀತಿಯ ಸಾಲ ತೀರುವುದೇ ಎಂದಾದರೂ
ಅವಳ ಪ್ರೀತಿಯ ಅಳೆಯಲು ಹೊರಟರೆ
ಸಿಗುತ್ತಿಲ್ಲ ಯಾವುದೇ ಮಾಪಕಗಳೂ ಈಗ
ಆಳ, ಉದ್ದ, ಅಗಲ ಯಾವುದೂ ದಕ್ಕುತ್ತಿಲ್ಲ
ಅವಳ ಪ್ರೀತಿಯ ಅಳೆಯ ಹೊರಟ ಹುಚ್ಚ ನಾನು..
ಅವಳ ಪ್ರೀತಿಯ ದೊಡ್ಡ ಸಾಗರದೊಳಗೆ
ನನ್ನ ಪ್ರೀತಿಯು ಚಿಕ್ಕ ಹನಿಗೂ ಸಮವಿಲ್ಲವಲ್ಲ
ಹೀಗೇ ಹಪಾಹಪಿಸುವಾಗ ಅವಳಂದಳು
"ಅಯ್ಯೋ, ಹುಚ್ಚಪ್ಪಾ" ಪ್ರೀತಿಗೆ ಮಾಪನವುಂಟೇ?
ನಾನು ರಕ್ಕಸನಾದಾಗ ಮರುಗುತ್ತಲಿದ್ದವಳು
ಮನುಷ್ಯನಾದಾಗ ಅಂದದ್ದು ಒಂದೇ ಮಾತು
ನನ್ನ ಪ್ರೀತಿ ವಿಷಬೀಜ ಬಿತ್ತಿತೆಂದುಕೊಂಡಿದ್ದೆ
ಸದ್ಯ ಫಲವೀಯದಿದ್ದರೂ ವಿಷವಾಗಲಿಲ್ಲ
ಪ್ರೀತಿಯ ಋಣ ಎಂದೆಂದೂ ತೀರದೆಂದು
ಅರಿವು ಮೂಡುವಾಗ, ಪ್ರೀತಿಯಿಂದ ಮೈದಡವುತ್ತಲೇ
ಅವಳು ಕಣ್ಮುಚ್ಚಿದ್ದಳು, ನಾನು ಕಣ್ಬಿಟ್ಟಿದ್ದೆ
ಇತ್ತ ಅವಳ ಪ್ರೀತಿಯ ಸಾಲ ಅನಂತವಾಗುತಲಿತ್ತು
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ