ಭಾನುವಾರ, ಆಗಸ್ಟ್ 25, 2019

ಜೀವನ್ಮುಖಿ

ಕಡಲಿನ ದಂಡೆಯ ಮೇಲೆ ಕುಳಿತು ನಂದಿನಿ ಯೋಚಿಸುತ್ತಲೇ ಇದ್ದಾಳೆ. ಗತ ನೆನಪುಗಳು ದಡಕ್ಕಪ್ಪಳಿಸಿ ತೆರಳುವ ಅಲೆಗಳಂತೆ ಭಾಸವಾಗುತ್ತಿದೆ. ಕಡಲ ತೀರದಲ್ಲಿ ಕೊಟ್ಟ ಭಾಷೆಯೂ ಮರಳಿನ ಮನೆಯಂತೆ ಕ್ಷಣಿಕವಾಗಿರಬಹುದಾ? ಇದೇ ಮರಳಿನ ಮೇಲೆ ಹೆಜ್ಜೆಗೆ ಹೆಜ್ಜೆ ಜೋಡಿಸಿ ನಡೆದ ದಿನಗಳು ಅವಳನ್ನು ಕಾಡುತ್ತಲಿವೆ. ಆಗೆಲ್ಲಾ ಎಷ್ಟು ಉತ್ಸಾಹವಿತ್ತು. ಕಡಲ ಅಲೆಗಳು ಹೆಜ್ಜೆಗೆಳನ್ನು ಅಳಿಸಿದಂತೆಲ್ಲಾ ಮತ್ತೆ ಮತ್ತೆ ಹೆಜ್ಜೆ ಮೂಡಿಸುವ ಹುಮ್ಮಸ್ಸಿತ್ತು. ಕೊನೆಗೆ ಸೋತು ಹೊರಟರೂ, ಜಗವನ್ನೇ ಗೆದ್ದ ಭಾವ. ಏಕೆಂದರೆ, ಎದೆಯಲ್ಲಿ ನವೀನನೊಟ್ಟಿಗೆ ಹಾಕಿದ ಹೆಜ್ಜೆ ಗುರುತುಗಳು ಅಚ್ಚಳಿಯದಂತೆ ಮೂಡಿರುತ್ತಿದ್ದವು. ವಾರಾಂತ್ಯದಲ್ಲಿ ಒಟ್ಟಿಗಿದ್ದ ನೆನಪುಗಳೇ ಸಾಕಿತ್ತು ವಾರವನ್ನೆಲ್ಲಾ ಕಳೆಯಲು.

ನವೀನ ನಂದಿನಿಯರ ಪ್ರೀತಿ ಎಲ್ಲರಂತಲ್ಲ. ಏಕೆಂದರೆ, ಎಲ್ಲರ ಮನೆಗಳಲ್ಲಿಯೂ ಅವರ ಪ್ರೀತಿಗೆ ಅಡ್ಡಿ, ಆತಂಕಗಳು ಇದ್ದೇ ಇರುತ್ತಿದ್ದವು. ಆದರೆ, ಇವರಿಬ್ಬರ ಪ್ರೀತಿಗೆ ಇವರಿಬ್ಬರ ಮನೆಯಲ್ಲಿ ಅಡ್ಡಗಾಲು ಹಾಕುವವರು ಯಾರೂ ಇರಲಿಲ್ಲ. ಏಕೆಂದರೆ, ಮನೆಯವರೆಂದು ಹೇಳಿಕೊಳ್ಳಲು ಇಬ್ಬರಿಗೂ ಯಾರೂ ಇರಲಿಲ್ಲ. ನಂದಿನಿ ಮತ್ತು ನವೀನ ಇಬ್ಬರೂ ಬೆಳೆದದ್ದು ಅನಾಥಾಶ್ರಮದಲ್ಲಿ. ಇಬ್ಬರಿಗೂ ಬದುಕಿನ ತುಂಬೆಲ್ಲಾ ಬಣ್ಣ ಬಣ್ಣದ ಕನಸುಗಳಿದ್ದವು. ತಾವು ಅನಾಥರೆಂಬ ಭಾವನೆಯನ್ನು ಹೊಡೆದೋಡಿಸಿಕೊಂಡು ಬೆಚ್ಚನೆಯ ಪ್ರೀತಿಯಲ್ಲಿ ಮೈಮರೆಯಬೇಕೆಂಬ ಆಸೆ ಇಬ್ಬರಿಗೂ ಅದಮ್ಯವಾಗಿತ್ತು. ತಂದೆ-ತಾಯಿಯರಿಂದ ತಾವು ವಂಚಿತರಾದ ಪ್ರೀತಿಯನ್ನು ಅನುಭವಿಸಲು ಹಾತೊರೆಯುವ ಮಕ್ಕಳಿಗೆ ನೀಡಬೇಕು ಎಂಬ ನಿರ್ಮಲ ಮನಸ್ಸಿನ ಆಸೆಯಿತ್ತು. ಕೆಲವೊಮ್ಮೆ ಕೆಲವು ಆಸೆಗಳು, ಆಸೆಗಳಾಗಿಯೇ ಉಳಿದು ಹೋಗಿಬಿಡುತ್ತವೆ ಎನ್ನುವುದೇ ವಿಪರ್ಯಾಸ.

ನಂದಿನಿ ಮತ್ತು ನವೀನರದ್ದು ಚಿಕ್ಕಂದಿನಿಂದಲೇ ಬೆಸೆದುಕೊಂಡ ಪ್ರೇಮವೇನೂ ಅಲ್ಲ ಅಥವಾ ಹದಿಹರೆಯದ ಆಕರ್ಷಣೆಯೂ ಆಗಿರಲಿಲ್ಲ. ಅಲ್ಲಿದ್ದದ್ದು ನಿರ್ಮಲ ಪ್ರೀತಿ. ನಿಷ್ಕಲ್ಮಶವಾದ ನಿರೀಕ್ಷೆಯಿಲ್ಲದ ಪ್ರೀತಿ. ಇಬ್ಬರೂ ಕೆಲಸ ಮಾಡುತ್ತಿದ್ದದ್ದು ಒಂದೇ ಆಫೀಸಿನಲ್ಲಿ. ಮೊದಲು ಪರಿಚಯ, ನಂತರದಲ್ಲಿ ಪ್ರೀತಿಯಾಗಿ ಬದಲಾಯಿತು. ಒಂದೇ ದೋಣಿಯಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ಜೋಡಿಯಾಗಿ ಯಾನದಲ್ಲಿ ಪಯಣಿಸುವ ಇಚ್ಛೆ ಹೊಂದಿದ್ದರು. ಇಬ್ಬರಿಗೂ ಕಡಲ ತಡಿ ಒಂದರ್ಥದಲ್ಲಿ ತವರು ಮನೆಯಿದ್ದಂತೆ. ಮುಂದಿನ ಅಗಾಧ ಕಡಲನ್ನು ನೋಡುತ್ತಾ ತಮ್ಮ ವಿಶಾಲ ಬದುಕಿನ ಕನಸು ಕಟ್ಟುತ್ತಿದ್ದರು. ಅದರಲ್ಲಿರುತ್ತಿದ್ದದ್ದು ತಮ್ಮ ಜೀವನ ಮತ್ತು ಅಸಹಾಯಕರಿಗೆ, ಅನಾಥರಿಗೆ, ವೃದ್ದರಿಗೆ ನೆರವಾಗಿ ನೆರವಾಗುವುದು. ಇಬ್ಬರೂ ಅದಕ್ಕಾಗಿ ಈಗಿನಿಂದಲೇ ಹಣವನ್ನು ಒಟ್ಟು ಮಾಡುತ್ತಿದ್ದರು. ತಾವು ಅನುಭವಿಸಿದ ಬವಣೆಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ಅವರಿಗೆ ದೊರಕಬೇಕಾದ ಸೌಕರ್ಯಗಳ ಬಗ್ಗೆ ಚರ್ಚಿಸುತ್ತಿದ್ದರು.

ನಂದಿನಿ ಒಮ್ಮೆ ಕೇಳಿದ್ದಳು "ನೀನು ಯಾವಾಗಲೂ ನನ್ನೊಟ್ಟಿಗೆಯೇ ಇರುವಿಯಲ್ಲವೇ?" ಅದಕ್ಕೆ ನವೀನ ಅವಳ ಕೈ ಮೇಲೆ ಕೈ ಇಟ್ಟು "ನಿನ್ನ ಕೊನೆಯ ಹೆಜ್ಜೆಯವರೆಗೂ ನಾನು ಜೊತೆಯಾಗಿಯೇ ಹೆಜ್ಜೆ ಹಾಕುವೆ" ಎಂದು ಭಾಷೆ ನೀಡಿದ್ದ.

ನಂದಿನಿಯ ಯೋಚನಾಲಹರಿ ಮುಂದುವರಿದಿತ್ತು. ಅಂದು ಭಾಷೆ ಕೊಟ್ಟು ಮುನ್ನಡೆಯುತ್ತಾ ಹೋಗುವಾಗ ಕಾಲಿಗೆ ಕಪ್ಪೆ ಚಿಪ್ಪೊಂದು ದೊರಕಿತ್ತು. ಅಮೂಲ್ಯವಾದ ಮುತ್ತಿದ್ದ ಕಪ್ಪೆ ಚಿಪ್ಪು. ಅದನ್ನು ಜತನದಿಂದ ಕೈಯ್ಯಲ್ಲಿಡಿದು ನಡೆಯುತ್ತಿದ್ದೆ, ಅವನ ಮಾತನ್ನು ನನ್ನ ಎದೆಯಲ್ಲಿ ಜತನವಾಗಿಟ್ಟುಕೊಂಡಷ್ಟೇ ಜತನದಿಂದ.

ಅಂದು ಕಡಲ ತಡಿಯಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅದೇಕೋ ಹೇಳಲಾರದ ತಳಮಳದ ಭಾವ. ಯಾಕೋ ಇಲ್ಲಿಂದ ಆದಷ್ಟು ಬೇಗ ಹೊರಟು ಬಿಡೋಣ ಎನ್ನುವ ಮನಸ್ಸು.. ಯಾವುದಾದರೂ ದೇವಸ್ಥಾನಕ್ಕೆ ಹೋಗೋಣ ಎಂದುಕೊಂಡು ಅದನ್ನು ನವೀನನೊಟ್ಟಿಗೆ ಹೇಳೋಣ ಎನ್ನುವಷ್ಟರಲ್ಲಿ ಅಪ್ಪಳಿಸಿತ್ತು ಒಂದು ದೈತ್ಯ ಅಲೆ. ನಾನು ದಡದಲ್ಲಿಯೇ ಬಿದ್ದೆ. ನವೀನ ಎದ್ದು ನನ್ನ ಹತ್ತಿರ ಬರುತ್ತಿದ್ದ. ನಮ್ಮಿಬ್ಬರ ಬೇರ್ಪಡಿಸುವಿಕೆಗೆ ಇದೊಂದು ಸುಳಿವಾಗಿತ್ತೋ ಏನೋ?

ನವೀನನಿಂದ ಸ್ವಲ್ಪ ದೂರದಲ್ಲಿ ಮಗುವೊಂದು ಕಿರುಚಿಕೊಳ್ಳುತ್ತಿತ್ತು. ಮುಳುಗೇಳುತ್ತಿದ್ದ ಆ ಮಗುವಿನ ಸಮೀಪ ಯಾರೂ ಕಾಣಲಿಲ್ಲ. ಸ್ವಲ್ಪ ದೂರದಲ್ಲಿ ಯಾರೋ ಓಡುತ್ತಾ ಬರುತ್ತಿದ್ದರು. ನನ್ನ ಮಗು, ನನ್ನ ಕಂದ ಎಂದು ಕಿರುಚುತ್ತಾ ಬರುತ್ತಿದ್ದರು. ಆ ಕಡೆ ತಿರುಗಿ ನವೀನನನ್ನು ನೋಡುವಷ್ಟರಲ್ಲಿ ಆತ ಆಗಲೇ ಮಗುವಿನ ಬಳಿಗೆ ಸಾಗಿದ್ದ. ಅಲೆಗಳ ಹೊಡೆತದಲ್ಲಿ ಇಬ್ಬರೂ ಸಿಕ್ಕಿ ಬಿದ್ದಿದ್ದರು. ಯಾರೆಂದೇ ಗೊತ್ತಿರದ ಆ ಮಗುವನ್ನು ರಕ್ಷಿಸಲು ಹೋಗಿ ತಾನೂ ಕಷ್ಟಕ್ಕೆ ಸಿಲುಕಿದ್ದ. ಇದೇ ರೀತಿ ಅದೆಷ್ಟು ಹೊತ್ತು ಕಳೆಯಿತೋ.. ನಾನು ಎಚ್ಚರವಾಗುವಷ್ಟರಲ್ಲಿ ನವೀನ ಮತ್ತೆಂದೂ ಕಣ್ತೆರೆಯದಂತೆ ಕಣ್ಮುಚ್ಚಿ ಮಲಗಿದ್ದ.

ಸಮುದ್ರ ತೀರದಲ್ಲಿ ತುಳಿದ ಸಪ್ತಪದಿಯನು ಸಾಗರವೇ ರದ್ದು ಮಾಡಿತ್ತು. ಇದಾಗಿ ಅದೆಷ್ಟು ಬಾರಿ ಇಲ್ಲಿಗೆ ಬಂದಿದ್ದೆನೋ ಲೆಕ್ಕವಿಲ್ಲ. ಸಾಯಬೇಕೆಂದು ಹೊರಟಾಗಲೆಲ್ಲಾ ಯಾರೋ ರಕ್ಷಿಸುತ್ತಾರೆ. ನವೀನನೇ ನನ್ನನ್ನು ಬದುಕಿಸಿರಬಹುದೆಂಬ ಆಸೆಯಿಂದ ಮರಳುತ್ತೇನೆ. ವಾರ ಕಳೆಯುವಷ್ಟರಲ್ಲಿ ಮತ್ತದೇ ನೆನಪುಗಳು. ಆ ಅಲೆಗಳನ್ನು ಸೀಳಿಕೊಂಡು ನವೀನ ಬರಬಹುದೇನೋ ಎಂಬ ಆಸೆಯಿಂದ ಇನ್ನೂ ಬರುತ್ತಲೇ ಇದ್ದೇನೆ. ಇಂದಿಗೆ ಇದೆಲ್ಲಾ ನಡೆದು ಒಂದು ವರ್ಷ.

ನವೀನ ನನ್ನನ್ನು ಬಿಟ್ಟು ಹೋಗಿರುವುದು ಅವನ ಮತ್ತು ನನ್ನ ಕನಸುಗಳನ್ನು ಸಾಕಾರಗೊಳಿಸುವುದಕ್ಕೇ ಇರಬೇಕು. ಆವತ್ತು ಅವನು ಭಾಷೆ ನೀಡುವಾಗ ನನ್ನ ಕೊನೆಯ ಹೆಜ್ಜೆಯವರೆಗೂ ನನ್ನ ಜೊತೆಗೇ ಇರುವೆನೆಂದು ಭಾಷೆ ನೀಡಿದ್ದ. ಇನ್ನಾದರೂ ಅವನನ್ನು ಬದುಕಿಸಿಕೊಳ್ಳಬೇಕು, ಜೀವಂತಗೊಳಿಸಬೇಕು. ನಮ್ಮಿಬ್ಬರ ಕನಸುಗಳೊಂದಿಗೆ ನಾನು "ಜೀವನ್ಮುಖಿ"ಯಾಗಿ ಪ್ರೀತಿಗೆ ಹೊಸ ಭಾಷ್ಯ ಬರೆಯುವೆ ಎನ್ನುತ್ತಾ ಕೆಟ್ಟ ಆಲೋಚನೆಗಳನ್ನು ಬಟ್ಟೆಗಂಟಿದ ಮರಳಿನಂತೆ ಕೊಡವುತ್ತಾ ಧೃಡ ಮನಸ್ಸಿನಿಂದ ಹೆಜ್ಜೆ ಹಾಕಿದಳು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ