ಭಾನುವಾರ, ಆಗಸ್ಟ್ 18, 2019

ಅಪಶೃತಿಯ ಹಾಡು

ಇಷ್ಟು ದಿನ ನಾನೇ ಅವನನ್ನು ಅವಾಯ್ಡ್ ಮಾಡ್ತಾ ಇದ್ದೆ, ಕಾರಣ ನನಗೆ ಅವನನ್ನು ಎದುರಿಸುವ ಸ್ಥೈರ್ಯ ಇಲ್ಲಾ ಎಂದಲ್ಲ ಅಥವಾ ನನಗೆ ಭಯ ಅಂತಲೂ ಅಲ್ಲ. ಮತ್ತೆ ಆ ಬೆಣ್ಣೆಯಂತಹಾ ನಯವಂಚಕ ಮಾತುಗಳಿಗೆ ಮತ್ತೆಲ್ಲಿ ಮರುಳಾಗಿ ಮತ್ತೆ ಅಲ್ಲಿಗೇ ಹೋಗಿ ಬಿಡುತ್ತೇನೋ ಎಂಬ ಭಯದಿಂದ.. ಮತ್ತೆ ಆ ನರಕಕ್ಕೆ ಹೋಗಿ ಬಾಳ್ವೆ ಮಾಡಬೇಕಲ್ಲ ಎಂಬ ಯೋಚನೆಯಿಂದಲೇ ನನಗೆ ಮೈಮೇಲೆ ಮುಳ್ಳೆದ್ದಂತಾಗುತ್ತಿತ್ತು. 20 ವರ್ಷ ಜೊತೆಯಲ್ಲಿಯೇ ಬದುಕಿದ್ದೆವು. ಅದು ಪ್ರೇಮದಿಂದಲ್ಲ ಬದಲಿಗೆ ಗುರು-ಹಿರಿಯರು ನಿಶ್ಚಯಿಸಿ ಮಾಡಿದ ಮದುವೆಯ ಬಂಧದಿಂದಾಗಿ.. ಮದುವೆ ಎಂಬ ಪದಕ್ಕೆ ಬೆಲೆ ಕೊಟ್ಟು ಗೋಮುಖ ವ್ಯಾಘ್ರನ ಜೊತೆ ಬದುಕಬೇಕಾಯಿತು. ಇದೆಲ್ಲವನ್ನೂ ನೆನಪಿಸಿಕೊಂಡರೆ ನನಗೇ ಅಸಹ್ಯ ಎನ್ನಿಸುತ್ತಿದೆ.

ಸಂಗೀತದ ಗಂಧವನ್ನೇ ಕಣಕಣದಲ್ಲೂ ಉಸಿರಾಡಿಕೊಂಡಿದ್ದ ಕುಟುಂಬ ನನ್ನದು. ಅಂತಹಾ ಕುಟುಂಬದ ಮಗಳಾಗಿ ಹುಟ್ಟಿದ್ದು ನನ್ನ ಪೂರ್ವಜನ್ಮದ ಸುಕೃತ. ವಿದ್ವಾನ್ ವೆಂಕಟೇಶ ಅಡಿಗರು ನನ್ನ ತಂದೆ. ದೂರ-ದೂರದ ಊರುಗಳಿಂದೆಲ್ಲಾ ಬಂದು ನನ್ನ ತಂದೆಯ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದರು. ಸ್ವಂತ ಮಗಳಾದರೂ ನನ್ನನ್ನು ಅವರ ಶಿಷ್ಯಂದಿರಳೊಬ್ಬಳಾಗಿಯೇ ಪರಿಗಣಿಸಿ ಸಂಗೀತ ಪಾಠ ಹೇಳಿಕೊಟ್ಟರು ನನ್ನ ತಂದೆ. ತಾಯಿ ಪ್ರಸಿದ್ಧ ವೀಣಾವಾದಕಿ ವಿದೂಷಿ ಸುಮತಿ ವೆಂಕಟೇಶ ಅಡಿಗ. ನನ್ನ ತಾಯಿ ವಿದೂಷಿಯಾಗಿದ್ದರೂ ಬೇರಾರಿಗೂ ವೀಣೆಯ ಪಾಠ ಹೇಳಿಕೊಡುವ ಕಾಯಕದಲ್ಲಿ ತೊಡಗಿರಲಿಲ್ಲ. ಕಾರಣವೇನೋ ನಾನು ತಿಳಿಯೆ. ಆದರೆ, ನಾನು ಮಾತ್ರ ಆಕೆಯ ವೀಣಾವಾದನ ತರಗತಿಯ ಏಕಮಾತ್ರ ಶಿಷ್ಯೆ. ತಂದೆಯ ಸಂಗೀತ, ತಾಯಿಯ ವೀಣೆಯ ಸಾಧನೆ ಎರಡೂ ಮಿಳಿತವಾಗಿ ರೂಪುಗೊಂಡ ನಾನು ಅವರಿಬ್ಬರನ್ನೂ ಮೀರಿಸುವಂತೆ ಬೆಳೆದು ನಿಂತೆ. ನಿಮಗೆ ಈ ಹೋಲಿಕೆ ಅತಿಶಯೋಕ್ತಿಯೆನಿಸಿದರೆ ಅದಕ್ಕೆ ನಾನೇನೂ ಮಾಡಲಾರೆ. ಏಕೆಂದರೆ ಜನರಾಡಿದ್ದ, ಜನರಾಡುತ್ತಿದ್ದ ಮಾತಿದು. ನನ್ನ ಸಾರ್ವಜನಿಕ ಸಂಗೀತ ಕಾರ್ಯಕ್ರಮಗಳಿಗೆ ಜನ ಕಿಕ್ಕಿರಿದು ಸೇರುತ್ತಿದ್ದರು. ನನ್ನನ್ನು ಶಾರದೆಯ ಅಪರಾವತಾರ ಎಂದು ಹೆಮ್ಮೆಯಿಂದ ಹೊಗಳುತ್ತಿದ್ದರು. ಇಷ್ಟೆಲ್ಲಾ ಹೊಗಳಿಕೆಗಳು ಬಂದರೂ ನನಗೆ ಅಹಂಕಾರವಿರಲಿಲ್ಲ, ಹೆಮ್ಮೆಯಿತ್ತು ಬದಲಿಗೆ ಗರ್ವದಿಂದ ಬೀಗುವ ಗುಣವಿರಲಿಲ್ಲ. ಏಕೆಂದರೆ ನನಗೆ ತಂದೆ-ತಾಯಿ ನೀಡಿದ್ದ ಸಂಸ್ಕಾರದ ಅರಿವಿತ್ತು ಅದರೊಟ್ಟಿಗೆ ವರ್ತಮಾನದ ಅರಿವೂ ಇತ್ತು. ಕಂಠವಿದ್ದರಷ್ಟೇ ನನ್ನನ್ನಿವರು ಹೊಗಳಲು ಸಾಧ್ಯ. ಹಿತವಾಗಿ ವೀಣೆ ನನ್ನನ್ನು ಒಪ್ಪಿಕೊಳ್ಳುತ್ತಾರಿವರು. ಬರಿಯ ಹೊಗಳಿಕೆಯ ಮಾತಿಗೆ ಉಬ್ಬಿ ಅಭ್ಯಾಸ ಮಾಡದೆ ಅಹಂಕಾರದಿಂದ ನಿಂತವರು ಇಂದು ಕಾಲಚಕ್ರದ ಸುಳಿಗೆ ಸಿಲುಕಿ ಹೋಗಿದ್ದಾರೆ. ಇದು ಬರೀ ಸಂಗೀತ ಕ್ಷೇತ್ರಕ್ಕಷ್ಟೇ ಅಲ್ಲದೆ ಸಿನಿಮಾ, ನೃತ್ಯ, ಬರಹ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುವಂತಹದ್ದು. ಹೀಗೇ ಮಣ್ಣಲ್ಲಿ ಮಣ್ಣಾಗಿ ಹೋಗದೆ ಅಜರಾಮರವಾಗಿ ನಿಲ್ಲಲು ಪ್ರಯತ್ನಿಸುತ್ತಿದ್ದೆ.

ಸಾಧನೆಯ ಹಾದಿಯಲ್ಲಿ ಉತ್ತುಂಗದಲ್ಲಿದ್ದ ಕಾಲದಲ್ಲಿಯೇ ನನಗೆ ಇವನ ಜೊತೆ ವಿವಾಹವಾದದ್ದು. ಅಪ್ಪನ ಬಾಲ್ಯಸ್ನೇಹಿತ ಸುಂದರಕೃಷ್ಣ ಅಡಿಗರ ಮಗ ವಿನಾಯಕನೊಂದಿಗೆ ನನ್ನ ವಿವಾಹವಾಯಿತು. ಇಬ್ಬರ ಬಾಲ್ಯದ ಸ್ನೇಹವು ಮಕ್ಕಳ ವಿವಾಹದೊಂದಿಗೆ ಮಿಳಿತವಾಗಿ ನೆಂಟಸ್ತಿಕೆಯಿಂದ ಬೆಸೆದಿತ್ತು. ಅತ್ತೆ ಇರಲಿಲ್ಲ. ಅಮ್ಮನಿಲ್ಲದ ಮಗು ಎಂದು ಮಾವ ಇವನನ್ನು ಬಹಳ ಮುದ್ದಿನಿಂದ ಬೆಳೆಸುತ್ತಿದ್ದರು. ಅವನ ಬಹುಪಾಲು ಸಮಯ ಕಳೆದದ್ದು ಹಾಸ್ಟೆಲ್ ನಲ್ಲಿಯೇ..ಅವನಿಗೆ ಅವನು ಮತ್ತು ಹಣ ಮಾತ್ರವೇ ಮುಖ್ಯವೆಂಬ ಭಾವನೆ ಬೆಳೆದುಬಿಟ್ಟಿತ್ತು.

ಮಾವ ಮೃದಂಗ ವಾದಕರು. ಅಪ್ಪನ ಕೆಲವು ಸಂಗೀತ ಕಛೇರಿಗಳಿಗೆ ಪಕ್ಕವಾದ್ಯದಲ್ಲಿ ಸಹಕರಿಸುತ್ತಿದ್ದರು. ಅದು ಕೇವಲ ಅವರ ಹವ್ಯಾಸವಷ್ಟೇ ಆಗಿತ್ತು. ಅವರಿಗೆ ಅವರ ಕುಟುಂಬದ ತಲತಲಾಂತರದಿಂದ ಬಂದ ಅಪಾರ ಆಸ್ತಿಯಿತ್ತು. ಮಾವನಿಗೆ ಸಂಗೀತದಲ್ಲಿ ಅಪಾರ ಆಸಕ್ತಿ ಇತ್ತು. ಆದರೆ, ವಿನಾಯಕನಿಗೆ ಸಂಗೀತದಲ್ಲಿ ಕೊಂಚವೂ ಆಸಕ್ತಿ ಇರಲಿಲ್ಲ. ಇವನ ಮನಸ್ಸು ವ್ಯವಹಾರಕ್ಕಷ್ಟೇ ಸೀಮಿತವಾಗಿತ್ತು. ಸಂಗೀತ ನೀಡುವ ಅಲೌಕಿಕ ಆನಂದದ ಕುರಿತು ಅವನಿಗೆ ಅಸ್ಥೆ ಇರಲಿಲ್ಲ. ಮದುವೆಯಾದ ಹೊಸದರಲ್ಲಿ ಸಂಗೀತಕ್ಕೆ ಗೌರವ ನೀಡದಿದ್ದರೂ, ನನ್ನ ಸಂಗೀತಾಭ್ಯಾಸಕ್ಕೆ ಅಡ್ಡಿಯನ್ನೂ ಮಾಡುತ್ತಿರಲಿಲ್ಲ. ಇವನು ಶುರು ಮಾಡಿದ್ದ ಸ್ಟಾರ್ಟ್ ಅಪ್ ಕೊಂಚ ಹೆಸರು ಮಾಡುತ್ತಿತ್ತು. ವೈಯಕ್ತಿಕವಾಗಿ ನನಗೆ ಗಂಡನೆಂಬ ಗೌರವ, ಮೆಚ್ಚುಗೆ ಇರದಿದ್ದರೂ ಅವನು ಕೆಲಸದಲ್ಲಿ ತೋರುತ್ತಿದ್ದ ಶ್ರದ್ಧೆ ಮತ್ತು ಅಸ್ಥೆಯನ್ನು ಮೆಚ್ಚುತ್ತಿದ್ದೆ. ಹೀಗೇ ಸಂಸಾರದ ಬಂಡಿ ಸಾಗುತ್ತಿದ್ದಾಗಲೇ ವಿಶು ಹುಟ್ಟಿದ್ದು.

ಸಣ್ಣ ಪುಟ್ಟ ಬಿರುಕುಗಳಿದ್ದ ಸಂಸಾರದಲ್ಲಿ ಬಿರುಕು ದೊಡ್ಡದಾಗಿದ್ದು ವಿಶುವಿಗೆ ಹೆಸರಿಡುವ ಸಂಧರ್ಭದಲ್ಲೇ.. ನನಗಿದ್ದ ಸಂಗೀತದ ಮೇಲಿನ ಅಭಿಮಾನಕ್ಕೆ ಮಗನಿಗೆ 'ಆಲಾಪ್' ಎನ್ನುವ ಹೆಸರಿಡಬೇಕು ಎನ್ನುವಾಸೆ. ವಿನಾಯಕನಿಗೆ 'ಪ್ರಾಜ್ಙ' ಎಂದು ಹೆಸರಿಡುವಾಸೆ. ಸಾಫ್ಟ್ ವೇರ್ ಉದ್ಯಮದಲ್ಲಿ ಮಗ ಪ್ರಾಜ್ಙವಾಗಿ ಮಿಂಚಬೇಕೆನ್ನುವ ಆಸೆ. ಕೊನೆಗೆ ಜಗಳ ದೊಡ್ಡದಾದಾಗ ಮಾವ ಇದನ್ನು ಸುಲಭವಾಗಿ ಬಗೆಹರಿಸಿದ್ದರು. 'ವಿನಾಯಕ' ಮತ್ತು 'ಶುಭಾ' ಎಂಬ ಹೆಸರಿನ ನಮ್ಮಿಬ್ಬರ ಮೊದಲ ಅಕ್ಷರಗಳನ್ನು ತೆಗೆದು ಮಗನನ್ನು 'ವಿಶು' ಎಂದು ಕರೆದರು. ಮಗನ ಮೂಲಕ ನಮ್ಮಿಬ್ಬರನ್ನು ಒಂದಾಗಿಸಿದೆ ಎಂಬ ತೃಪ್ತಿಯಲ್ಲಿಯೇ ಮಾವ ಕಣ್ಮುಚ್ಚಿದರು. ಮಾವನ ಕಾಲಾನಂತರ ಎಲ್ಲವೂ ಬದಲಾಗುತ್ತಾ ಹೋಯಿತು. ವಿಶು ಬೆಳೆಯುತ್ತಿದ್ದಂತೆ ವಿನಾಯಕನ ಅಹಂಕಾರವೂ ಬೆಳೆಯುತ್ತಾ ಹೋಯಿತು. ನನ್ನ ಸಂಗೀತ ಕಛೇರಿಗಳಿಗೆಲ್ಲಾ ಅವನ ಅನುಮತಿ ಇರಲೇಬೇಕಿತ್ತು. ಅಲ್ಲದೇ ನನ್ನ ಸಂಗೀತ ಕಛೇರಿಯಿಂದ ಬಂದ ಹಣದಲ್ಲಿ ನಾನು ಅನಾಥಾಶ್ರಮಕ್ಕೆ ನೀಡುತ್ತಿದ್ದ ಹಣವನ್ನೂ ನೀಡದಂತೆ ನಿರ್ಬಂಧಿಸಿದ. ಹಣ, ಅಧಿಕಾರ, ಸ್ವಾತಂತ್ರ್ಯ ಎಲ್ಲವೂ ಒಂದೊಂದಾಗಿ ನಿರ್ಬಂಧಿಸಲ್ಪಟ್ಟವು.

ಮಾವ ಬದುಕಿದ್ದಷ್ಟು ಕಾಲ ಅವರಿಗಾಗಿ ಸಹಿಸಿಕೊಂಡೆ, ನಂತರ ಮಗನಿಗೋಸ್ಕರ ಬದುಕಿದೆ. ಸದ್ಯಕ್ಕೆ ನನ್ನ ಜೀವಾಮೃತವೆಂದರೆ ನನ್ನ ಸಂಗೀತ ಅಷ್ಟೇ. ವಿನಾಯಕನ ದರ್ಪ ಬರುಬರುತ್ತಾ ಮೇರೆ ಮೀರುತ್ತಿತ್ತು. ಅವನು ಹಾಡೆಂದರೆ ಹಾಡಬೇಕಿತ್ತು.. ನಿಲ್ಲಿಸೆಂದರೆ ನಿಲ್ಲಿಸಬೇಕಿತ್ತು. ಅವನು ಹಾಡಬೇಕು ಎಂದವರ ಎದುರಲ್ಲಿ ಮಾತ್ರ ಹಾಡಬೇಕಿತ್ತು. ನನ್ನ ಪ್ರಾಣವಾದ ಸಂಗೀತ ಅವನಿಗೆ ಹಣ ಅಷ್ಟೇ.

ವಿಶುವನ್ನು ಸಂಗೀತದ ಗಂಧವೂ ಸೋಕದಂತೆ ಬೆಳೆಸುತ್ತಿದ್ದ.ಆದರೆ, ವಿಶು ವಿನಾಯಕನಿಗೆ ಗೊತ್ತಿಲ್ಲದಂತೆ ಸಂಗೀತಾಭ್ಯಾಸ ಮಾಡುತ್ತಿದ್ದ. ರಕ್ತಗತವಾಗಿ ಬಂದ ರೂಢಿಯನ್ನು ತಡೆಯಲು ಸಾಧ್ಯವೇ..? ಇಷ್ಟೆಲ್ಲವನ್ನೂ ವಿನಾಯಕ ಮಾಡುತ್ತಿದ್ದುದ್ದು ಅವನ ಸ್ಟೇಟಸ್ ಗಾಗಿ. ಅವನ ಬೆಣ್ಣೆ ಮಾತುಗಳಿಂದ ಎಲ್ಲರನ್ನೂ, ಎಲ್ಲವನ್ನೂ ತನಗೆ ಬೇಕಾದಂತೆ ತಿರುಗಿಸಿಕೊಳ್ಳುತ್ತಿದ್ದ. ಅಕ್ಷರಶಃ ಪಂಜರದ ಪಕ್ಷಿಯಂತೆಯೇ ಬದುಕುತ್ತಿದ್ದೆ.

ವಿಶು ಸಂಗೀತ ಸಾಧನೆಯ ಒಂದೊಂದೇ ಮೆಟ್ಟಿಲೇರುತ್ತಿದ್ದ. ವಿನಾಯಕನಿಗೆ ಅದೇಗೋ ವಿಶುವಿನ ಸಂಗೀತಾಭ್ಯಾಸದ ಸುಳಿವು ಹತ್ತಿತ್ತು ಅನ್ನಿಸುತ್ತದೆ. ಬಿಸಿನೆಸ್ ಟೂರ್ ಗೆ ಹೋಗುತ್ತಿದ್ದೇನೆ ಬರುವುದು ಒಂದು ವಾರವಾಗಬಹುದು ಎಂದು ಹೇಳಿ ಹೊರಟಿದ್ದ ವಿನಾಯಕ. ವಿಶುವಿಗೂ, ನನಗೂ ಸಂಭ್ರಮವೋ ಸಂಭ್ರಮ. ಪಂಜರದ ಪಕ್ಷಿಗಳನ್ನು ಗೂಡಿನಲ್ಲಾದರೂ ಸ್ವಚ್ಛಂದವಾಗಿ ಹಾರಾಡಬಹುದು ಎಂಬ ಭ್ರಮೆಯಲ್ಲಿದ್ದೆವು. ನಮ್ಮ ಭ್ರಮೆಯ ಸಾಮ್ರಾಜ್ಯ ನುಚ್ಚುನೂರಾಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಅಂದಿನ ಸಂಜೆ 'ಶಂಕರಾಭರಣ'ದ ಹಾಡೊಂದನ್ನು ಹಾಡುತ್ತಾ ಮೈ ಮರೆಯುತ್ತಿರುವಾಗ ವಿನಾಯಕ ಬಂದು ಎದುರು ನಿಂತಿದ್ದ. ಗಾಬರಿಯಲ್ಲಿದ್ದಾಗಲೇ ವಿಶುವಿನ ಕೆನ್ನೆಗೆ ಬಿದ್ದ ಏಟು ಅವನ ಪ್ರಾಣಕ್ಕೇ ಎರವಾಗಿತ್ತು.

ವಿನಾಯಕ ಗಾಬರಿಗೊಂಡ. ಎದೆಯೆತ್ತರಕ್ಕೆ ಬೆಳೆದ ಮಗನ ಸಾವನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿತ್ತು ನನಗೆ ಅಷ್ಟರಲ್ಲಿ ತನ್ನ ನಯವಾದ ಮಾತುಗಳಿಂದ ನನ್ನನ್ನು ವಂಚಿಸಲು ಇವನು ಆಗಲೇ ಸಿದ್ದವಾಗಿದ್ದ. "ನನ್ನ ಬಿಸಿನೆಸ್ ಉತ್ತುಂಗದಲ್ಲಿರುವಾಗ, ನಾನು ಪ್ರಸಿದ್ಧಿಯ ಶಿಖರದಲ್ಲಿರುವಾಗ ನಾನು ಈ ಸಾವಿನ ಹೊಣೆ ಹೊರಲು ಸಿದ್ಧನಿಲ್ಲ"  ಎಂದು ಮಗನ ಸಾವನ್ನು ಮುಚ್ಚಿಹಾಕಲು ಸಿದ್ಧವಾಗಿದ್ದ. ನನ್ನನ್ನೂ ಹೇಳಬೇಡವೆಂದು ಗೋಗರೆದ. ನನ್ನ ಮಗನ ಮರಣದಿಂದ ಅಷ್ಟೂ ದಿನ ತಡೆದುಕೊಂಡಿದ್ದ ನನ್ನ ಕ್ರೋಧವೆಲ್ಲಾ ಹೊರಬಂದಿತ್ತು. ರೋಷದಲ್ಲಿ ಪೋಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ನನ್ನ ಮಗನ ಸಾವಿಗೆ ಪ್ರತೀಕಾರ ತೀರಿಸಿಕೊಂಡೆ ಎಂದುಕೊಂಡೆ ಆದರೆ ಹಾಗಾಗಲಿಲ್ಲ. ಇವನ ಕುತಂತ್ರ, ಹಣಬಲದಿಂದ ನಾನೇ ದೋಷಿಯ ಸ್ಥಾನದಲ್ಲಿ ನಿಂತಿದ್ದೆ. ಕೊನೆಗೂ ನ್ಯಾಯದೇವತೆಯ ಕಣ್ಣು ಕುರುಡಾಗಿಯೇ ಉಳಿಯಿತು.

ಮಗಳ ಈ ಪರಿಸ್ಥಿತಿ ಹಾಗೂ ಸಂಗೀತ ಲೋಕದ ರಾಣಿಯಾಗಿ ಮೆರೆದಿದ್ದವಳ ಈ ಪರಿಸ್ಥಿತಿಯನ್ನು ನೋಡಲಾಗದೆ ಹಾಗು ನನ್ನ ಜೊತೆ ಸಂಗೀತಕ್ಕೂ ಆಗುತ್ತಿದ್ದ ಅವಮರ್ಯಾದೆಯನ್ನು ಕಂಡು ನನ್ನ ತಂದೆ-ತಾಯಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡರು. ಅವರ ಅಂತಿಮ ಮುಖದರ್ಶನ ಕೂಡಾ ನನಗಾಗಲಿಲ್ಲ.

ಒಂದಾನೊಂದು ಕಾಲದಲ್ಲಿ ಸಂಗೀತದ ಅನಭಿಷಿಕ್ತ ದೇವತೆಯಾಗಿದ್ದ ನಾನು ಇಂದು ಸೆರೆಮನೆಯ ಖೈದಿಯಾಗಿ ಒಂದು ನಂಬರಿನಿಂದ ಗುರುತಿಸಲ್ಪಟ್ಟೆ. ಸಂಗೀತವನ್ನು ಹಾಗು ನನ್ನತನವನ್ನು ಕಳೆದುಕೊಂಡು ಇಲ್ಲಿಯೇ ಕಳೆದುಹೋಗುತ್ತೇನೆ, ನನ್ನ ಸಂಗೀತ ಪಯಣ ಕೊನೆಯಾಯಿತು ಎಂದುಕೊಂಡೆ. ಇಲ್ಲ, ಹಾಗಾಗಲಿಲ್ಲ.. ಅವತ್ತು ಜೈಲಿನಲ್ಲಿ ರಿಮ್ಯಾಂಡ್ ಹೋಮ್ ನ ಮಗುವೊಂದು ಹಾಡು ಹಾಡುವುದನ್ನು ಕೇಳಿದೆ. ತಪ್ಪಾದ ಶೃತಿಯಲ್ಲಿ ಹಾಡುತ್ತಿದ್ದ ಮಗುವನ್ನು ತಿದ್ದಲು ಹಾಡಲಾರಂಭಿಸಿದೆ. ಅದೆಷ್ಟು ಹೊತ್ತು ಮೈಮರೆತು ಹಾಡುತ್ತಿದ್ದೆನೋ ತಿಳಿಯದು. ಹಾಡು ಮುಗಿಸಿದಾಗ ಚಪ್ಪಾಳೆಗಳ ಸದ್ದು ಕೈಗಡಚಿಕ್ಕುವಂತೆ ಕೇಳುತ್ತಿತ್ತು. ಅಂದಿನಿಂದ ಮಹಿಳಾ ಖೈದಿಗಳು ಮತ್ತು ಮಕ್ಕಳಿಗೆ ಸಂಗೀತ ಶಿಕ್ಷಕಿಯಾದೆ. ಸಂಗೀತ ನನ್ನ ಬದುಕಲ್ಲಿ ಮತ್ತೆ ಜೀವಕಳೆ ತುಂಬಿತ್ತು.

ಅವಧಿಗೆ ಮುಂಚೆಯೇ ನನ್ನ ಸನ್ನಡತೆಯಿಂದ ಬೇಗನೆ ಬಿಡುಗಡೆ ಹೊಂದಿದ್ದೆ. ಮುಂದೇನು ಎಂಬ ಪ್ರಶ್ನೆ ಕಾಡದೆ ಬಿಡಲಿಲ್ಲ. ತವರನಲ್ಲಿ ಅಪ್ಪ-ಅಮ್ಮನ ಆಸರೆಯಿಲ್ಲ. ತಂದೆಯ ಸ್ಥಾನದಲ್ಲಿದ್ದ ಮಾವನಿಲ್ಲ. ಬದುಕಲ್ಲಿ ಬೆಳಕಾಗಬೇಕಾಗಿದ್ದ ಮಗನೂ ಬದುಕಿಲ್ಲ. ಗಂಡ ನನ್ನ ಪಾಲಿಗೆ ಇದ್ದರೂ ಸತ್ತಂತೆ.. ಹೊರ ಜಗತ್ತಿಗೆ ಮಗನನ್ನೇ ಕೊಂದ ಕೊಲೆಗಾತಿ ನಾನು. ಜಗತ್ತಿನಲ್ಲಿ ನನ್ನವರು ಎಂಬುವವರೇ ಇಲ್ಲದೆ ಒಬ್ಬಂಟಿಯಾಗಿದ್ದೆ. ಮುಂದೇನು ಎಂದು ಯೋಚಿಸುತ್ತಿರುವಾಗ ಜೈಲಿನಿಂದ ಸಂಗೀತ ಶಿಕ್ಷಕಿಯಾಗಿ ಮುಂದುವರಿಯಿರಿ ಎಂಬ ಕೋರಿಕೆ ಬಂದದ್ದು ಗುರಿಯಿಲ್ಲದೆ ಅಂಡಲೆಯುತ್ತಿದ್ದ ದೋಣಿಗೆ ಗಮ್ಯ ಕಾಣಿಸಿದಂತಾಗಿತ್ತು.

10-15 ವರ್ಷಗಳ ನಂತರ ನನ್ನ ಸಂಗೀತದ ಪಯಣದಲ್ಲಿ ಯಾವುದೂ ಹೊಸ ಕಲಿಕೆ ಮತ್ತು ಹೊಸ ಪ್ರಯೋಗಗಳಿಲ್ಲದೇ ಏಕತಾನತೆ ಎನ್ನಿಸತೊಡಗಿತು. ನನ್ನ ಅಷ್ಟು ವರ್ಷದ ದುಡಿಮೆಯಿಂದ ಕೂಡಿಸಿಟ್ಟ ಹಣದಲ್ಲಿ 'ಅನುಕ್ಷಣ ಆಲಾಪ' ಎಂಬ ಸಂಗೀತಶಾಲೆ ಆರಂಭಿಸಿದೆ. ಆಸಕ್ತ ಬಡ ವಿದ್ಯಾರ್ಥಿಗಳಿಗೆ ಹಣ ತೆಗೆದುಕೊಳ್ಳದೆ ಸಂಗೀತವನ್ನು ಧಾರೆ ಎರೆದೆ. ನನ್ನಿಂದ ಸಂಗೀತ ಕಲಿತ ವಿದ್ಯಾರ್ಥಿಗಳು ಇಂದು ದಿಕ್ಕುದಿಕ್ಕಿನಲ್ಲಿಯೂ ನನ್ನ ಮತ್ತು ಸಂಗೀತದ ಹಾಗೂ ಸಂಗೀತಶಾಲೆಯ ಕೀರ್ತಿಯನ್ನು ಪಸರಿಸಿದರು. ಇಷ್ಟೆಲ್ಲಾ ನಡೆಯುವಾಗ ಬರದಿದ್ದ ವಿನಾಯಕ ಈಗ ನನ್ನ ಬಾಳಲ್ಲಿ ಬಂದಿದ್ದ.

ಹತ್ತು ನಿಮಿಷದ ಭೇಟಿಯಲ್ಲಿ "ನಡೆದಿದ್ದನ್ನು ಮರೆತುಬಿಡು. ನನ್ನ ಜೊತೆ ಬಾ. ಯಾಕೋ ನನ್ನ ಕಂಪೆನಿ ಈಗ ಲಾಸ್ ನಲ್ಲಿದೆ. ಅದನ್ನು ಮಾರಿ ನಿನ್ನ ಜೊತೆ ನಿಲ್ಲುತ್ತೇನೆ. ವಿದೇಶದಲ್ಲಿ ನಿನ್ನ ಸಂಗೀತ ಕಛೇರಿ ನಡೆಸೋಣ, ನಿನ್ನ ಸಂಗೀತದಿಂದ ಹಣದ ಹೊಳೆಯನ್ನೇ ಹರಿಸಬಹುದು."ಎಂದೆಲ್ಲಾ ಮಾತನಾಡಿದ್ದ. ಅವನ ಮಾತುಗಳಲ್ಲಿ ಕಪಟವಿತ್ತಾ..? ಗೊತ್ತಿಲ್ಲ. ಆದರೆ, ನಯವಂಚಕತೆಯ ಎಲ್ಲಾ ಲಕ್ಷಣಗಳೂ ಇದ್ದವು.

ಹಾಡುವಾಗ ಅಪಶೃತಿ ಉಂಟಾದರೆ ಮತ್ತೆ ಮತ್ತೆ ಅಪಶೃತಿ ಬರುತ್ತದೇನೋ ಎಂದು ನಿರೀಕ್ಷಿಸುತ್ತದೆ ಮನಸ್ಸು. ಪಂಜರದ ಪಕ್ಷಿಯಂತೆ ಬಂಧಿತವಾಗಿದ್ದ ನನಗೆ ನಾನು ನಿರೀಕ್ಷಿಸಿದ ಬದುಕು ಈಗಷ್ಟೇ ದಕ್ಕಿದೆ. ಸಂಗೀತ ಬದುಕು ಕಟ್ಟಿಕೊಟ್ಟಿದೆ. ವಿದೇಶದ ಆಸೆಗಾಗಿ ಹಾತೊರೆದು ನಿಂತ ನೆಲವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾದರೆ..? ಅಲ್ಲದೆ ಹತ್ತು ನಿಮಿಷದ ಭೇಟಿಯಲ್ಲಿ ನನ್ನ ಯೋಗಕ್ಷೇಮವನ್ನು ಒಮ್ಮೆಯೂ ವಿಚಾರಿಸಲಿಲ್ಲ. ಅವನ ಸ್ವಾರ್ಥ, ಹಣಕ್ಕಾಗಿ ಈಗ ನನ್ನ ಬಳಿ ಬಂದಿದ್ದಾನೆ ಅಷ್ಟೆ.. ಅವನ ಕಂಪನಿ ಲಾಭದಲ್ಲಿದ್ದಿದ್ದರೆ ನನ್ನನ್ನು ತಿರುಗಿಯೂ ನೋಡುತ್ತಿರಲಿಲ್ಲ.

ಸನ್ಮಾನ ಸ್ವೀಕರಿಸಲು ಕರೆದ ಎಷ್ಟೋ ಸಂಧರ್ಭದಲ್ಲಿ ಇವನೂ ಅತಿಥಿಯಾಗಿರುತ್ತಿದ್ದ. ಎಷ್ಟೋ ಸಂಧರ್ಭಗಳಲ್ಲಿ ಇವನಿಗೆ ಎದುರಾಗಬಾರದು ಎಂಬ ಕಾರಣಕ್ಕೆ ಹೋಗಲಿಲ್ಲ. ಜನಪ್ರಿಯತೆಯಿಂದ ದೂರವೇ ಉಳಿದೆ. ಇಂದು ಎಷ್ಟೇ ಉನ್ನತಿಗೇರಿದರೂ ನನ್ನ ಭೂತದ ಸಂಧರ್ಭ ನನ್ನ ಭವಿಷ್ಯದಲ್ಲಿ ಕಪ್ಪುಚುಕ್ಕಿಯಾಗಿ ಉಳಿದುಬಿಟ್ಟಿದೆ. ಅಪಶೃತಿಯ ಹಾಡಾಗಿರುವ ನನ್ನ ಬದುಕು ಸರಿಯಾಗುವುದೇ?

ಎಷ್ಟೋ ಹೊತ್ತಿನ ಯೋಚನೆಯ ನಂತರ ನನ್ನಲ್ಲೊಂದು ಗಟ್ಟಿ ನಿರ್ಧಾರ ರೂಪುಗೊಂಡಿತು. ಸಂಗೀತದ ಅಧಿದೇವತೆ ಶಾರದೆಯ ಅಸ್ತಿತ್ವ ಗಂಡಿನ ಅಧೀನದಲ್ಲಿಲ್ಲ, ಬದಲಾಗಿ ಸಂಗೀತದ ಅಧೀನದಲ್ಲಿದೆ. 'ಅನುಕ್ಷಣ ಆಲಾಪ' ಅಮರವಾಗಲು ಅಪಶೃತಿಯ ಹಾಡು ಕೊನೆಯಾಗಬೇಕು. ಸವಿಶೃತಿಯ ಗಾನದಲ್ಲಿ ಮತ್ತೆಂದೂ ಅಪಶೃತಿಯ ಸೆಳಕೂ ಬರಬಾರದು. ಈ ನಿರ್ಧಾರ ನಿಮಗೆ ಸಮ್ಮತವಲ್ಲವೇ..?

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ