ಶುಕ್ರವಾರ, ಏಪ್ರಿಲ್ 10, 2026

ದಮಯಂತಿಯ ಮಗಳು (ಪುಸ್ತಕ ಯಾನ - 110)


ಪುಸ್ತಕದ ಶೀರ್ಷಿಕೆ : ದಮಯಂತಿಯ ಮಗಳು

ಲೇಖಕರು : ಪಿ. ಸತ್ಯವತಿ (ಮೂಲ : ತೆಲುಗು)

ಕನ್ನಡಕ್ಕೆ : ಅಜಯ್ ವರ್ಮಾ ಅಲ್ಲೂರಿ

ಪ್ರಕಾಶಕರು : ಅಹರ್ನಿಶಿ ಪ್ರಕಾಶನ

ಪ್ರಥಮ ಮುದ್ರಣ : 2022

ಪುಟಗಳು : 84

ಬೆಲೆ : 100 ರೂ. 


2021 ರ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆಯಾಗಿರುವ ಪಿ.ಸತ್ಯವತಿಯವರು ತೆಲುಗಿನ ಮುಖ್ಯ ಲೇಖಕಿಯರಲ್ಲಿ ಒಬ್ಬರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲಕಲೂರಿನಲ್ಲಿ ಜನಿಸಿರುವ ಇವರು ಇಂಗ್ಲಿಷ್ ಉಪನ್ಯಾಸಕಿಯಾಗಿ ದೀರ್ಘಕಾಲದ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಕತೆಗಾರ್ತಿಯಾಗಿ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ. 'ಗೊಡುಗು', 'ಇಲ್ಲಲಕಗಾನೇ..', 'ಮಂತ್ರ ನಗರಿ', 'ಸತ್ಯವತಿ ಕಥಲು' ಇವರ ಪ್ರಮುಖ ಕೃತಿಗಳು. 


ಕನ್ನಡಕ್ಕೆ ಭಾಷಾಂತರ ಮಾಡಿರುವ ಅಜಯ್ ವರ್ಮಾ ಅಲ್ಲೂರಿಯವರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು. ಹೈದರಾಬಾದಿನ ಆಂಗ್ಲ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ಅಧ್ಯಯನದಲ್ಲಿ ಸಂಶೋಧನಾರ್ಥಿಯಾಗಿದ್ದಾರೆ. 'ಗಗನ ಸಿಂಧು', 'ಡಯಾನಾ ಮರ', 'ಕಲಲ ಕನ್ನೀಟಿ ಪಾಟ', 'ವಿಮುಕ್ತೆ', 'ನಾಲ್ಕನೇ ಎಕರೆ', 'ನಳನ ದಮಯಂತಿ' , 'ಆರ್.ಎಸ್.ಎಸ್ ಲೋತುಪಾತುಲು' ಇದುವರೆಗಿನ ಪ್ರಕಟಿತ ಕೃತಿಗಳು.


ಈ ಕಥಾ ಸಂಕಲನದಲ್ಲಿ ಇರುವುದು ಏಳೇ ಕಥೆಗಳಾದರೂ.. ಓದಿದ ನಂತರವೂ ಮನಸ್ಸಿನಲ್ಲಿ ಉಳಿಯುವಂತಹಾ ಕಥೆಗಳು. ಈ ಹೆಣ್ಣುಮಕ್ಕಳು ನಮ್ಮ ಪ್ರತಿಬಿಂಬವೂ ಆಗಿವೆ ಎನ್ನಿಸುತ್ತದೆ. ಕಥೆ ಹೆಣೆದಿರುವ ರೀತಿ ವಿಭಿನ್ನವಾಗಿದೆ. ಮೊದಮೊದಲಿಗೆ ಭಾಷಾಂತರವೆನಿಸುವ ಭಾವ ಹುಟ್ಟಿಸಿದರೂ.. ಓದುತ್ತಾ ಕೊಂಚ ಮುಂದುವರೆದಂತೆ.. ಇದು ಭಾಷಾಂತರಿಸಿದ ಕಥೆಗಳು ಎನಿಸಿಕೊಳ್ಳದೆ ಸರಾಗವಾಗಿ ಓದಿಸಿಕೊಂಡು ಹೋಗುವ ಕಥೆಗಳಂತೆನಿಸಿದವು.


'ನಾ ಬರುತ್ತೇನೆ ಕೇಳು..' ಸಖನ ಜೊತೆಗೆ ನದಿಯ ಆಚೆ ದಡಕ್ಕೆ ಪಯಣಿಸುವ ಸಖಿಯೊಬ್ಬಳು.. ಉತ್ಸುಕತೆಯಿಂದ, ಕುಣಿದಾಡುತ್ತಾ ಹಡಗನ್ನೇರುತ್ತಾಳೆ. ತುಂಬು ಜೀವನೋತ್ಸಾಹದ ಮನಸ್ಸು. ಆದರೆ, ಹೋಗುತ್ತಾ, ಹೋಗುತ್ತಾ.. ಸಾಗುತ್ತಾ, ಸಾಗುತ್ತಾ ಅವಳಿಗೇ ಅರಿಯದಂತೆ ಅವಳಲ್ಲಿ ಉಂಟಾಗುವ ಬದಲಾವಣೆಗಳು ಕೊನೆಗೊಂದಿನ ಅವಳಿಗೇ ಅಚ್ಚರಿ ತರುತ್ತವೆ. ಈ ಬದಲಾವಣೆಯ ನಂತರ ಏನಾಯ್ತು..?? ಸಖನ ಜೊತೆಯ ಬದುಕು ಹೇಗಿತ್ತು..?? ರೂಪಕಗಳನ್ನು ಬಳಸಿ ನಿರೂಪಿಸಿರುವ ಸೂಕ್ಷ್ಮ ಕತೆ. 


'ದಮಯಂತಿಯ ಮಗಳು' : ಇಂತಹವರ ಮಗಳು/ಸೊಸೆ/ಪತ್ನಿ/ಅಮ್ಮ ಎಂದು ಗುರುತಿಸಿಕೊಳ್ಳುವುದು ನಮಗೆ ಬೇಕೋ..ಬೇಡವೋ..! ಆದರೆ, ಸಿಕ್ಕೇ ಸಿಗುವ ಐಡೆಂಟಿಟಿ. 

ಅತ್ತೆಯ ಮಾತಿಗೆ ಕಟ್ಟುಬಿದ್ದು ತನ್ನನ್ನು ನೋಡಲು ಬಂದ ಹುಡುಗನನ್ನು ಭೇಟಿಯಾದಾಗ ತಾನು 'ದಮಯಂತಮ್ಮನ ಮಗಳು' ಎಂದೇ ಮೊದಲಿಗೆ ಪರಿಚಯಿಸಿಕೊಂಡಿದ್ದಳು. ಅದನ್ನು ತಿಳಿದ ನಂತರವೂ ಆತ ಮುನ್ನಡೆಯುತ್ತಾನೆ ಎಂಬ ಭರವಸೆಯಿರಲಿಲ್ಲ ಅವಳಿಗೆ. ಅಚ್ಚರಿಯೆನ್ನುವಂತೆ ಆತ ಅವಳನ್ನು ಒಪ್ಪಿಕೊಂಡಿದ್ದಲ್ಲದ್ದೇ.. ತನ್ನ ಮನೆಯವರನ್ನೂ ಒಪ್ಪಿಸುತ್ತೇನೆಂದಿದ್ದ. ಅಣ್ಣನೊಡನೆ ಇದನ್ನು ಹೇಳಿದಾಗ ಆತ ಬೇರೆಯದ್ದೇ ಭಾವದಲ್ಲಿ.. "ಆತ ದಯೆ ತೋರಿದನಲ್ಲ.. ಒಳಿತಾಯಿತು..!" ಎಂದು ಪ್ರತಿಕ್ರಿಯಿಸಿದ್ದ.

ಅಷ್ಟಕ್ಕೂ.. ದಮಯಂತಿಯ ಮಗಳಾದ ಅವಳು ಅಮ್ಮ ಇಲ್ಲದ ದಿನಗಳಲ್ಲಿ ಅನುಭವಿಸಿದ ಪಾಡು, ಅತ್ತೆಯ ಮಡಿಲಲ್ಲಿ ಬೆಳೆದರೂ.. ಅಮ್ಮನನ್ನು ಮಿಸ್ ಮಾಡಿಕೊಂಡ ಪರಿ, ಅಮ್ಮನ ನಂತರ ಅಪ್ಪನೂ ದೂರಾದ ಸನ್ನಿವೇಶ ಎಲ್ಲವನ್ನೂ ಎದುರಿಸಿದ್ದಳು. ಅಷ್ಟಕ್ಕೂ ದಮಯಂತಿಯನ್ನು ಸಮಾಜ ಅರ್ಥೈಸಿಕೊಂಡದ್ದಕ್ಕೂ.. ಮಕ್ಕಳು  ಅರ್ಥೈಸಿಕೊಂಡದಕ್ಕೂ ವಿಭಿನ್ನತೆ ಇದೆ. ದಮಯಂತಿಯ ಮಗಳು ಎಂದು ಒಪ್ಪಿಕೊಳ್ಳುವುದಕ್ಕೆ ಕೆಚ್ಚೆದೆ ಬೇಕು. ಅಮ್ಮ ಮಕ್ಕಳನ್ನು ಹೀಗೂ ಬಿಟ್ಟು ನಡೆಯಬಹುದೇ..? ಎಂದು ಒಂದೆಡೆ ಅಚ್ಚರಿಯಾದರೂ.. ವಾಸ್ತವದಲ್ಲಿ ಅಸಾಧ್ಯವೇನಲ್ಲ. ಆದರೆ, ಇಲ್ಲಿ ಮಕ್ಕಳು ತನ್ನ ದಮಯಂತಮ್ಮನನ್ನು ಅರ್ಥ ಮಾಡಿಕೊಂಡ ಪರಿ ಮೆಚ್ಚುಗೆ ಎನ್ನಿಸಿತು.


ಒಬ್ಬ ವಸುಂಧರೆ : ಅತ್ತೆ ವಸುಂಧರೆ ಮನೆ ಬಿಟ್ಟು ಹೋದಾಗಿನಿಂದ ಸೊಸೆಗೆ ದಿಗಿಲು. ಅತ್ತೆ ಮಾಡುತ್ತಿದ್ದ ಕೆಲಸಗಳೆಲ್ಲವೂ ಉದ್ಯೋಗಸ್ಥಳಾಗಿದ್ದ ಸೊಸೆಯ ಪಾಲಿಗೆ ದೊಡ್ಡ ಹೊರೆಯಂತಾಗಿತ್ತು. ಕೆಲಸದ ರಾಮುಲಮ್ಮನೂ ಬರಲಿಲ್ಲ. ತಾನು ಮಾಡಿರದ ಕೆಲಸಗಳನ್ನು ರಾಮರಾವ್ ಹೆಂಡತಿಯ ಅನುಪಸ್ಥಿತಿಯಲ್ಲಿ ರೂಢಿಸಿಕೊಂಡಿದ್ದರು. ಮಗ ರಮೇಶನಿಗೆ ದಿಗಿಲಿಗಿಂತ ಬೇಸರವೇ ಹೆಚ್ಚಿತ್ತು. ತಾನು ಕೆಲಸದಿಂದ ಬರುವಷ್ಟರಲ್ಲಿ.. ತಾಯಿಯಂತೆ ಬಿಸಿಬಿಸಿ ಚಹಾ ಕಪ್ಪಿನಿಂದ ತನ್ನನ್ನು ಬರ ಮಾಡಿಕೊಳ್ಳುತ್ತಿದ್ದ ಅತ್ತೆ ಹಾಗೆ ಮನೆ ಬಿಟ್ಟು ಹೊರಡಲು ಕಾರಣವೇನು..?? ಆಕೆ ಎಲ್ಲಿ ಹೋಗಿದ್ದರು..?? ಎಂಬುದು ಲಲಿತೆಗೆ ತಿಳಿಯಬೇಕಾಗಿತ್ತು. ಆಕೆ ಮನೆಯಲ್ಲಿದ್ದಾಗ ಅವಳನ್ನು ಕೆಲಸದವಳಂತೆ ನೋಡಿ ನೋಡಿದ್ದ ರಾಮರಾವ್ ಅವರಿಗೂ ಈಗ ತಪ್ಪಿನ ಅರಿವಾಗುತ್ತಿತ್ತು. ಅಷ್ಟು ವರ್ಷ ಬಾಳಿದ ಗಂಡನನ್ನು, ಬೆಳೆಸಿದ್ದ ಮಗನನ್ನು ಬಿಟ್ಟು ಲಲಿತೆಗೆ ಗುಟ್ಟು ಬಿಟ್ಟುಕೊಟ್ಟಳೇಕೆ ವಸುಂಧರೆ..??


ಸಂಧ್ಯಾರಾಗ : ಇಬ್ಬರೂ ಗಂಡು ಮಕ್ಕಳನ್ನು ಬಿಟ್ಟು ಮಗಳ ಮನೆಯಲ್ಲಿರಲು ಅರುಂಧತಿ ಒಪ್ಪಿದರೂ.. ಅವಳ ಗಂಡ ಸೂರ್ಯನಾರಾಯಣ 'ಮಗಳ ಮನೆ' ಎಂಬ ಕಾರಣ ನೀಡಿ ಅಲ್ಲಿ ಹೋಗಲು ಒಪ್ಪಲಿಲ್ಲ. ಅರುಂಧತಿಯ ಸ್ವಭಾವವೇ ಬಹಳ ವಿಚಿತ್ರವಾಗಿ ಕಾಣುತ್ತಿತ್ತು. ಎಲ್ಲವನ್ನು ಸಹಿಸಿಕೊಂಡು, ನಿರ್ಲಿಪ್ತವಾಗಿ.. ಕೊಂಕು ನುಡಿದರೂ.. ತುಟಿ ಬಿಚ್ಚದೆ, ಬಹಳ ಡಿಟಾಚ್ಡ್ ನಂತಿರುವ ಅರುಂಧತಿಯ ಮನಸ್ಸಿನಲ್ಲಿ ಏನಿತ್ತು..? ಇತ್ತೀಚಿಗೆ ಬಂದ ಸೊಸೆ ಲತಾ ತನ್ನ ತಾಯಿಗೂ ತನ್ನ ಅತ್ತೆಗೂ ಹೋಲಿಸುವಾಗ ಇಂತಹಾ ಅರುಂಧತಿಯರು ಅದೆಷ್ಟಿರಬಹುದಲ್ಲವಾ..! ಎನಿಸುತ್ತದೆ. ಸಂಧ್ಯಾರಾಗ ರಂಗಾಯಿತೇ..?? ಅಥವಾ ಬಣ್ಣ ಕಳೆದುಕೊಂಡಿತೇ..?? ಓದಿ ನೋಡಿ.


ನನ್ನ ಹೆಸರೇನು ? : ಯುವತಿಯಾಗಿದ್ದಾಗ ಓದು-ಬರಹ, ಬುದ್ಧಿ, ಚಾಕಚಕ್ಯತೆ, ಸಮಯಸ್ಪೂರ್ತಿ, ಹಾಸ್ಯ-ಲಾಸ್ಯ ಎಲ್ಲವನ್ನೂ ಮೈಗೂಡಿಸಿಕೊಂಡು ಬೆಳೆದಿದ್ದ ಹುಡುಗಿ ಗೃಹಿಣಿಯಾಗುತ್ತಾಳೆ. ಮಕ್ಕಳ ತಾಯಿಯಾಗುತ್ತಾಳೆ. ಆದರೆ, ಅಚಾನಕ್ಕಾಗಿ ಒಂದು ದಿನ ಅವಳಿಗೊಂದು ಪ್ರಶ್ನೆ ಕಾಡುತ್ತದೆ. ಮರೆತು ಹೋಗಿರುವ ತನ್ನ ಹೆಸರಿನ ತನ್ನ ಅಸ್ತಿತ್ವದ ಹುಡುಕಾಟದಲ್ಲಿ ಇರುವ ಕಥೆ ಇದು.

ತನ್ನ ಹೆಸರನ್ನು ಯಾರೂ ಮರೆತಿರುವುದಿಲ್ಲವಾದರೂ.. ತಾವೇನಾಗಿದ್ದೆವು..?? ತಾವು ಏನು ಮಾಡಬೇಕಾಗಿತ್ತು..?? ತಮ್ಮ ಇಷ್ಟ-ಕಷ್ಟಗಳೇನು..?? ಎಂಬುದನ್ನು ಮತ್ತೆ ನೆನೆಸಿಕೊಂಡು ಹುಡುಕಾಟಕ್ಕಿಳಿಯುವ ಪರಿಯನ್ನು ನೆನಪಿಸುತ್ತದೆ ಈ ಕತೆ.


ಹೆಸರಿಲ್ಲದ ಹುಡುಗಿ : "ಯಾರೊಡನೆಯೂ ಓಡಿ ಹೋಗದೆ, ಕಾಲುವೆಗೆ ಬಿದ್ದು ಸಾಯದೆ, ಮನೆಗೂ ಬಾರದೆ ಏನಾದರೆಂದು ಗೊತ್ತಿಲ್ಲದ.. ಮಾಯವಾಗುವ ಹಳ್ಳಿಯ ಮಕ್ಕಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಾರರು. ಆದರೆ, ಪಟ್ಟಣದ ಮಕ್ಕಳು ಹೀಗೆ ಕಳೆದುಹೋದರೆ ಸುದ್ದಿ ಮಾಡುತ್ತಾರೆ" ಎನ್ನುತ್ತಾ ಮಗಳಿಗಾಗಿ ಹೊಸ್ತಿಲಾಚೆ 17 ಮೊಂಬತ್ತಿ ಹಚ್ಚಿದ ಮಾಲಚ್ಮಿಯ ಕಥೆ ಹಾಗೂ ವ್ಯಥೆಗಳ ತೆರೆದ ಬದುಕಿನ ಪುಟ ಇಲ್ಲಿದೆ.


ಸೂಪರ್ ಮಾಮ್ ಸಿಂಡ್ರೋಮ್ : ಈ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾದ ಕಥೆ ಇದು.

ಮನೆ ಹಾಗೂ ಕೆಲಸ ಎರಡನ್ನೂ ಚಾಚೂ ತಪ್ಪದೇ ನಿಭಾಯಿಸುತ್ತಾ.. ಹಾಲು ತರುವುದರಿಂದ ಹಿಡಿದು.. ಹಣ ಉಳಿತಾಯ ಮಾಡುವವರೆಗೂ.. ಎಲ್ಲದರಲ್ಲೂ ಅನುರಾಧಾಳದ್ದು ಎತ್ತಿದ ಕೈ. ಆಕೆ 9 ಗಂಟೆಯವರೆಗೂ ಮೈತುಂಬಾ ಹೊದ್ದುಕೊಂಡು ಮಲಗಿದ್ದಾಳೆಂದರೆ.. ಮೈ ಹುಷಾರಿಲ್ಲದಾಗ ಮಾತ್ರ. ಸೂರ್ಯಾರಾವ್ ಗೆ ಮಡದಿಯಾದ ಅನುರಾಧ ಇನ್ನಿಲ್ಲ ಎಂಬ ಸತ್ಯ ಆಘಾತದೊಂದಿಗೆ ತಿಳಿದಿತ್ತು. ಆಕೆಯ ಮೈ ಮಾಮೂಲಿನಂತಿರದೆ.. ವಿಭಿನ್ನ ರೀತಿಯಲ್ಲಿತ್ತು. ಆಕೆಗೆ ಆಗಿದ್ದ ಜಡ್ಡು ಏನು ಎಂದು ತಿಳಿಯುವುದಕ್ಕಿಂತಲೂ.. ಆಕೆಗೆ ಹಾಗಾಗುವುದಕ್ಕೆ ಕಾರಣವನ್ನು ತಿಳಿದಾಗ.. ನಮ್ಮ ಸಮಾಜದಲ್ಲಿರುವ, ನಮ್ಮ ಮನೆಯಲ್ಲಿರುವ ಅಥವಾ ನಮ್ಮೊಳಗಿನ ಸೂಪರ್ ಮಾಮ್ ಸಿಂಡ್ರೋಮ್ ಕೂಡಾ ನಮಗೆ ಗೋಚರವಾಗುತ್ತದೆ. ಕಾಳಜಿ ಮಾಡುವ ಪ್ರತಿ ಹೆಣ್ಣಿನಲ್ಲಿಯೂ ಇರುವ ಸೂಪರ್ ಮಾಮ್ ಅನ್ನು ನೋಡುವಾಗ.. ಈಕೆಯೂ ಸೂಪರ್ ಮಾಮ್ ಸಿಂಡ್ರೋಮ್ ಗೆ ಒಳಗಾಗಿರಬಹುದಾ..?? ಎಂಬ ಆಲೋಚನೆಯೂ ಮೂಡದೆ ಬಿಡದು.


ಇಲ್ಲಿನ ಕತೆಗಳಲ್ಲಿನ ಸ್ತ್ರೀ ಸಂವೇದನೆಗಳು ವಿಭಿನ್ನ ಒಳನೋಟದಿಂದ ಕಟ್ಟಿಕೊಟ್ಟಿರುವಂತಹವು. ಹಾಗೆಂದು, ಎಲ್ಲವನ್ನೂ ಬಿಟ್ಟು ನಡೆದವರ ಅಥವಾ ಕ್ರಾಂತಿ ಮಾಡಿದವರ ಕಥೆಗಳಲ್ಲ. ಬದಲಾಗಿ ಎಲ್ಲವನ್ನು ಪಾಸಿಟಿವ್ ಆಗಿ ಬದಲಾಯಿಸಲು, ಬದಲಾವಣೆಗಾಗಿ ತೊಳಲುವ ಹೆಣ್ಣುಗಳು. ಎಲ್ಲವನ್ನೂ ತಣ್ಣಗೆ ಹಾಗೆಯೇ ವಿಡಂಬನೆಯ ರೀತಿಯಲ್ಲಿ ನಿರೂಪಿಸುತ್ತಾ ಹೋಗುವಾಗ.. ನಲುಗುವ ಹೆಣ್ಣು ಹೇಗೆ ಹೆಜ್ಜೆಹೆಜ್ಜೆಗೂ ತೊಳಲುತ್ತಲೇ ಹೋರಾಡುತ್ತಾಳೆ ಎಂಬ ಸೂಕ್ಷ್ಮದಿಂದ ಹಿಡಿದು, ಆ ಹೆಣ್ಣನ್ನು ಗಮನಿಸುವ ಮತ್ತೊಬ್ಬ ಹೆಣ್ಣು ಅಲ್ಲಿಯವರೆಗೂ ಹೇಗಿದ್ದಳು ಹಾಗೂ ಅದರ ನಂತರ ಹೇಗೆ ಬದಲಾಗುತ್ತಾಳೆ ಎನ್ನುವ ಸಣ್ಣ-ಸಣ್ಣ ಸೂಕ್ಷ್ಮತೆಗಳನ್ನು ತೆರೆದಿಟ್ಟಿದ್ದಾರೆ. ಈ ಕಥೆಗಳನ್ನೆಲ್ಲಾ ಓದುವಾಗ ಕೆಲವು ಕತೆಗಳು ರೂಪಕಗಳ ರೀತಿ ಎನಿಸಿದರೆ.. ಮತ್ತೆ ಕೆಲವು ವಾಸ್ತವವೆನಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಓದಿದ ಒಂದು ಆಪ್ತವಾದ.. ಕಾಡುವ ಕಥಾಸಂಕಲನ ಇದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ