ಪುಸ್ತಕದ ಶೀರ್ಷಿಕೆ : ಹರಿದತ್ತ ಹರಿವ ಚಿತ್ತ
ಲೇಖಕರು : ಡಾ|| ವಿಜಯಾ ಸುಬ್ಬರಾಜ್
ಪ್ರಕಾಶಕರು : ಅಕ್ಷಯ ಪಬ್ಲಿಷರ್ಸ್
ಪ್ರಥಮ ಮುದ್ರಣ : 2003
ಪುಟಗಳು : 140
ಬೆಲೆ : 95 ರೂ.
ಈ ಕಾದಂಬರಿ ನಾನು ಓದಿದ ಡಾ|| ವಿಜಯಾ ಸುಬ್ಬರಾಜ್ ಅವರ ಮೊದಲ ಪುಸ್ತಕ. ಶೈಲಿ ಹಾಗೂ ಕಥಾವಸ್ತು ಇಷ್ಟವಾಗಿ ಅವರ ಬಗ್ಗೆ ಹುಡುಕಿದಾಗ ತಿಳಿದ ಕೆಲ ಮಾಹಿತಿಗಳು ಅವರ ಇನ್ನುಳಿದ ಪುಸ್ತಕಗಳನ್ನು ಓದುವಂತೆ ಮಾಡಿವೆ.
1947 ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ ಇವರು ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಸಾಹಿತ್ಯಾಸಕ್ತರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ., ಎಲ್.ಎಲ್.ಬಿ. ಮತ್ತು ಫ್ರೆಂಚ್ ಭಾಷೆಯ ಡಿಪ್ಲೊಮ ಪದವಿ. ಜೊತೆಗೆ ಹಿಂದಿ ಸಾಹಿತ್ಯರತ್ನ ಪದವೀಧರೆ.
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
ಕವನ ಸಂಕಲನಗಳು : ತ್ರಿಶಂಕು, ಏನು ಹೇಳಲಿ ಗೆಳೆಯ, ಹಾಡೇನ ಪಾಡೇನ, ಈ ತೆರದ ನಿರೀಕ್ಷೆಯಲ್ಲಿ, ವಸುಂಧರೆಯ ಪ್ರಾಯ.
ನಾಟಕಗಳು : ಪಾಂಚಾಲಿ, ಪಾದ್ರಿಯೊಬ್ಬನ ಕಥೆ, ನಗರ ವಧು ಸಾಲವತಿ, ಪ್ರೇಮ ಸಮಾ, ಮಿಲನ, ಮತ್ತೊಂದು ಮಹಾಭಾರತ, ದಂಗೆ ಎದ್ದವಳು.
ಕಾದಂಬರಿಗಳು : ತಪ್ಪಿದ ಹೆಜ್ಜೆಗಳು, ಬುವಿಯಿಂದ ಬಾನಿಗೆ, ಹರಿದತ್ತ ಹರಿವ ಚಿತ್ತ, ನಡು ವಯಸ್ಸಿನಲ್ಲಿ (ಚೀನಿ ಭಾಷಾಂತರ) ಶಾಲ್ಮಲಿ (ಹಿಂದಿ ಭಾಷಾಂತರ).
ಕಥಾ ಸಂಕಲನಗಳು : ಮಾನಿಷಾದ, ಕಾಣದ ದಿಕ್ಕಿನತ್ತ, ಅದೇ ಮುಖ, ಒಳದನಿ, ಚೀನಿ ಭಾಷೆಯಿಂದ-ಲುಷುನರ್ ಎರಡು ನೀಳ್ಗತೆ ಮತ್ತು ಹುಚ್ಚನ ದಿನಚರಿ ಭಾಷಾಂತರ.
ಪ್ರವಾಸ ಕಥನ: ಸ್ವರ್ಗ ದ್ವೀಪದ ಕನಸಿನ ಬೆನ್ನೇರಿ. ವಿಮರ್ಶೆ- ಸ್ಪಂದನ, ಸಮಾಲೋಚನ ಮುಂತಾದುವು ಪ್ರಕಟಿತ ಕೃತಿಗಳು.
ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಹರಿದತ್ತ ಹರಿವ ಚಿತ್ತ :
ಮದುವೆಯಾದ 5 ವರ್ಷಗಳ ನಂತರ ಪಾರ್ವತಿ ಹಾಗೂ ಚಂದ್ರಣ್ಣನಿಗೆ ಹುಟ್ಟಿದ್ದ ಮುದ್ದಾದ ಮಗು 'ವಿಶ್ವ'. ಪಾರ್ವತಿಯ ತವರಲ್ಲೂ.. ಅತ್ತೆಯ ಮನೆಯಲ್ಲೂ ಸಂಭ್ರಮವೋ ಸಂಭ್ರಮ. ಪಾರ್ವತಿಯ ತಾಯಿ ಸೀತಮ್ಮನವರಿಗೆ, ಮಗಳಿಗೆ ಮಗುವಿನ ಆರೈಕೆಯ ವಿಚಾರದಲ್ಲಿ ಹೇಳಿದಷ್ಟೂ ವಿಚಾರಗಳಿದ್ದವು. ರಾಜಪ್ಪನವರ ಸಂಭ್ರಮ ಊರವರನ್ನೆಲ್ಲಾ ಕರೆದರೂ ಮುಗಿಯುತ್ತಿಲ್ಲ. ಪಾರ್ವತಿ ಎಷ್ಟು ಪ್ರೌಢವಾಗಿ ಯೋಚಿಸುತ್ತಾಳೆ ಎಂಬುದು ಅವರಿಗೆ ಮನದಟ್ಟಾಗುತ್ತಿತ್ತು.
ಮಗು 'ವಿಶ್ವ'ನನ್ನೇ ತನ್ನ ಪ್ರಪಂಚವನ್ನಾಗಿಸಿಕೊಂಡ ಪಾರ್ವತಿ ಅತ್ತೆ ಮನೆಗೆ ಬಂದಾಗ ಅಲ್ಲಿಯೂ ವಿಶ್ವ ಎಲ್ಲರ ಕಣ್ಮಣಿಯಾದ. ಪಾರ್ವತಿಯ ಅತ್ತೆ ಸಾವಿತ್ರಮ್ಮ ವರ್ಷ ಅರವತ್ತೈದಾದರೂ ಗಟ್ಟಿಮುಟ್ಟಾಗಿ ಕೆಲಸ ಮಾಡಿಕೊಂಡು ಪ್ರೇಮಮಯಿಯಾಗಿ ಬಾಳುತ್ತಿದ್ದವರು. ಅವರ ಪತಿ ಕೃಷ್ಣಪ್ಪನವರು ಈಗೀಗ ದುರ್ಬಲರಾಗಿದ್ದರು. ಹೆತ್ತ ಹತ್ತು ಮಕ್ಕಳಲ್ಲಿ ಉಳಿದದ್ದು ಎರಡು ಹೆಣ್ಣು ಹಾಗೂ ಒಂದು ಗಂಡು. ಇಬ್ಬರು ಹೆಣ್ಣುಮಕ್ಕಳಿಗೂ ಮದುವೆಯಾಗಿತ್ತು. ಚಂದ್ರಣ್ಣನಿಗೂ ಪಾರ್ವತಿಯನ್ನು ತಂದು ವಿವಾಹ ಮಾಡಿದ್ದರು. ಸಾಧು ಸ್ವಭಾವದ ಮಗ-ಸೊಸೆಯ ಚೆಂದದ ಸಂಸಾರದಲ್ಲಿ ಕೊರತೆಯೇನೋ ಎಂಬಂತೆ ಮಕ್ಕಳ ಫಲವಿರಲಿಲ್ಲ. ಐದು ವರ್ಷದ ನಂತರ ಇನ್ನೇನು ವೈದ್ಯರ ಮೊರೆ ಹೋಗಬೇಕೆಂದುಕೊಂಡಾಗ ಹುಟ್ಟಿದ್ದೇ ವಿಶ್ವ.
'ವಿಶ್ವ' ಎಲ್ಲರ ಕಣ್ಣಗೊಂಬೆಯಂತೆ ಬೆಳೆಯುತ್ತಿದ್ದಾಗಲೇ ಮೂರು ವರ್ಷ ಕಣ್ಮುಚ್ಚಿ ಕಣ್ಣು ಬಿಡುವಂತೆ ಕಳೆದಿತ್ತು. ಎಲ್ಲವೂ ಚೆನ್ನಾಗಿದ್ದರೆ, ಎಲ್ಲರೂ ಸಂತಸದಿಂದ ಇದ್ದರೆ ಆ ದೇವರಿಗೂ ಹೊಟ್ಟೆಕಿಚ್ಚು. ಆಡುತ್ತಿದ್ದ ಮಗು ವಿಶ್ವ ಜ್ವರ ಬಂದು ಮಲಗಿದ್ದೊಂದೇ ನೆಪವಾಗಿತ್ತು. ವಿಶ್ವನನ್ನು ಸಾವು ತನ್ನ ತೆಕ್ಕೆಗೆಳೆದುಕೊಂಡಿತ್ತು.
ವಿಶ್ವನ ಸಾವಿನಿಂದ ಪಾರ್ವತಿ ಅರೆಹುಚ್ಚಿಯಾದಂತಾಗಿದ್ದಳು. ಯಾವುದರಲ್ಲಿಯೂ ಅವಳಿಗೆ ಆಸಕ್ತಿಯೇ ಇಲ್ಲದಂತಾಗಿತ್ತು. ಸಾವಿತ್ರಮ್ಮನವರೇ ಇದ್ದುದ್ದರಲ್ಲಿ ಸಾವರಿಸಿಕೊಂಡು ಎಲ್ಲಾ ಕೆಲಸಗಳನ್ನು ಮಾಡುತ್ತಾ.. ಪಾರ್ವತಿಯನ್ನೂ ಮತ್ತೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತಿದ್ದರೂ.. ಆಕೆ ಎಲ್ಲದರಿಂದ ವಿಮನಸ್ಕಳಾಗಿದ್ದಳು. ಆಪ್ತರ ಸಾವಿನಿಂದ ಚೇತರಿಸಿಕೊಳ್ಳಲು ಮತ್ತೊಬ್ಬರ ಸಹಾಯದ ಅಥವಾ ಹೊರಗಿನ ಚೈತನ್ಯದ ಬದಲಾಗಿ ಒಳಗಿನಿಂದ ಸಮಾಧಾನ ದೊರೆಯಬೇಕು. ಪಾರ್ವತಿಯೇ ತನ್ನಿಂತಾನೇ ಚೇತರಿಸಿಕೊಂಡು ಎಲ್ಲವನ್ನೂ ನಿಭಾಯಿಸುವ ಹೊತ್ತಿಗೆ ಮಾವನವರ ಆರೋಗ್ಯ ಹದಗೆಟ್ಟು ಬುದ್ಧಿ ಭ್ರಮಣೆಯಾಗಿತ್ತು.
ಇದೇ ಸಂಧರ್ಭದಲ್ಲಿ ಅಚಾನಕ್ಕಾಗಿ ಬಂದ ಆಕೆಯ ತಂದೆ ಆಕೆಯನ್ನು ತವರಿಗೆ ಕರೆದೊಯ್ದರು. ಅಲ್ಲಿ ಎದುರಾಗಿದ್ದು ಮಾನಸಿಕವಾಗಿ ಹಣ್ಣಾದ ತಾಯಿಯ ಸಾವು. ಅಲ್ಲಿಂದ ಸಾವಿನ ಸರಣಿ ಮುಂದುವರೆಯಿತು. ಮಾವ ಕೃಷ್ಣಪ್ಪನವರಿಗಿಂತ ಮೊದಲೇ ಅತ್ತೆ ಸಾವಿತ್ರಮ್ಮ ಮುತ್ತೈದೆಯಾಗಿ ಕೆಲಸ ಮಾಡುತ್ತಲೇ ತೀರಿಕೊಂಡರು. ನಂತರ ಮಾವನ ಸಾವು. ಬದುಕೇ ಬರಡಾದಂತಹಾ ಪರಿಸ್ಥಿತಿ ಅವಳದ್ದು.
ಇನ್ನೇನು ತನ್ನ ಜೀವನದಲ್ಲಿ ಯಾವ ಅಪೇಕ್ಷೆಯೂ ಇಲ್ಲವೆಂದು ಸುಮ್ಮನೆ ಬಾಳುತ್ತಿದ್ದವಳಿಗೆ, ಚಂದ್ರಣ್ಣನಿಗೆ ಮತ್ತೆ ಬದುಕಿನಲ್ಲಿ ಆಶಾಕಿರಣವೊಂದು ಗೋಚರಿಸಿತು. ಪಾರ್ವತಿಯ ಗರ್ಭದಲ್ಲಿ ಮತ್ತೆ ಮಗುವೊಂದು ಜನಿಸಿತ್ತು. ಈ ಸಂದರ್ಭದಲ್ಲಿ ಚಂದ್ರಣ್ಣನ ಅಕ್ಕ ಜಾನಕಿ ನೆರವಾದಳು. ಜೊತೆಗೆ, ನೆರವಾದದ್ದು ಕೆಲಸ ಮಾಡುತ್ತಿದ್ದ ಈರ-ಚಿಕ್ಕಿ.
ಮಗು ಶಂಕರನದ್ದು ಹುಟ್ಟಿನಿಂದಲೂ ವಿಭಿನ್ನ ಸ್ವಭಾವ. ಹೆಚ್ಚು ಅಳದ ಮಗು ಹೆಚ್ಚು ನಕ್ಕಿರಲೂ ಇಲ್ಲ. ಚಿಕ್ಕಿಯೇ ತಾಯಿಯಂತೆ ಬೆಳೆಸಿದಳು ಎಂದರೂ ತಪ್ಪಾಗಲಾರದು. ಶಂಕರನ ವಿಚಿತ್ರ ಸ್ವಭಾವದಿಂದ ಆತ ವಿಭಿನ್ನ ರೀತಿಯಲ್ಲಿ ಕಾಣುತ್ತಿದ್ದ. ಆತ ಮೇಧಾವಿಯಾದರೂ.. ಶಾಲೆಯಲ್ಲಿ ಸಾಧಾರಣ ಬುದ್ಧಿಮತ್ತೆ, ಸಾಧು ಸ್ವಭಾವ, ಯಾರಿಗೂ ಸುಲಭಕ್ಕೆ ಅರ್ಥವಾಗದಂತಹಾ ಒಗಟಿನಂತಹಾ ಮಾತುಗಳು, ಎಲ್ಲರೊಡನೆಯೂ ಬೆರೆಯದ ಏಕಾಂತವಾಸಿ, ಕ್ಷಮಾ ಗುಣ.. ಎಲ್ಲದರಲ್ಲಿಯೂ ವಿಭಿನ್ನವಾಗಿದ್ದ ಅವನು ಮನೆಯವರ ಪಾಲಿಗೆ ಸಮಸ್ಯೆಯಂತೆಯೇ ಆಗಿ ಹೋಗಿದ್ದ.
ಶಂಕರನಿಗೂ.. ವಿಶ್ವನಿಗೂ ಎಲ್ಲಿಯೂ ಹೋಲಿಕೆಯೇ ಇರಲಿಲ್ಲ. ಹಾಗೆ ನೋಡಿದರೆ ವಿಶ್ವ ಇದ್ದ ಅಲ್ಪಕಾಲದಲ್ಲಿಯೇ ಸಂತಸ ತಂದಿದ್ದ. ಶಂಕರ ದೀರ್ಘಕಾಲವಿದ್ದರೂ ಸಮಸ್ಯೆಯಾಗಿದ್ದ. ಶಂಕರನ ನಂತರ ಇಬ್ಬರು ಹೆಣ್ಣುಮಕ್ಕಳು. ಅವರೇ ಶಾಂತ ಹಾಗೂ ಪರಿಮಳ. ಶಾಂತ ಕೊಂಚ ವಿಶ್ವನಂತೆಯೇ.. ಪರಿಮಳ ಕೆಲಸಕ್ಕಿಂತಲೂ ಹೆಚ್ಚು ಮಾತುಗಾತಿ. ಅಲಂಕಾರಪ್ರಿಯೆ. ವಿಭಿನ್ನ ಸ್ವಭಾವದ ಮೂರು ಮಕ್ಕಳು ವಯಸ್ಸಿಗೆ ಬಂದಾಗ ಸಮಸ್ಯೆ ಹೆಚ್ಚಾಗುತ್ತಿತ್ತು.
ಚಿಕ್ಕಿ ಹಾಗೂ ಈರನ ದಾಂಪತ್ಯವೆಂದರೆ ಎಲ್ಲರಿಗೂ ಮಾದರಿಯಾಗಿತ್ತು. ಅಂತಹಾ ಮಾದರಿ ದಾಂಪತ್ಯವನ್ನೂ ಆ ದೇವರು ಸಹಿಸಲಿಲ್ಲವೇನೋ.. ಐದನೇ ಮಗುವಿನ ಹೆರಿಗೆಯಲ್ಲಿ ಚಿಕ್ಕಿ ತೀರಿಕೊಂಡಳು. ರಂಗಿಯನ್ನು ಈರ ಮಕ್ಕಳನ್ನು ನೋಡಿಕೊಳ್ಳಲು ಕೂಡಿಕೆ ಮಾಡಿಕೊಂಡ. ಗಂಡ ತೀರಿ ಹೋಗಿ ಅತ್ತಿಗೆ ಕೈಯ್ಯಲ್ಲಿ ನರಳುತ್ತಿದ್ದವಳಿಗೂ ದಿಕ್ಕಾಗಿತ್ತು. ಆಕೆಯೂ ಚಿಕ್ಕಿಯಂತೆಯೇ ಹೊಂದಿಕೊಂಡಳು. ಆಕೆಗೂ ಎರಡು ಮಕ್ಕಳಾದವು. ಚಿಕ್ಕಿ-ಈರನ ಮಗನಾದ ಪುಟ್ಟನಂತೂ ಚಿಕ್ಕಮ್ಮನನ್ನು, ಚಂದ್ರಣ್ಣನ ಪರಿವಾರವನ್ನೂ ಬಹಳ ಚೆನ್ನಾಗಿ ನೋಡಿಕೊಂಡು ಸ್ವಂತ ಮಗನ ಸ್ಥಾನದಲ್ಲಿ ನಿಂತಿದ್ದ. ಇದ್ದರೆ ಪುಟ್ಟನಂತಹಾ ಮಗನಿರಬೇಕು ಎಂಬಂತಹಾ ಆಳವಾದ ಆಸೆಯಂತೂ ಮೂಡದೇ ಇರದು.
ಶಂಕರ ಮನೆಯ ಜವಾಬ್ದಾರಿಯನ್ನೆಲ್ಲಾ ಹೊತ್ತು ತನಗೆ ಬಿಡುಗಡೆ ನೀಡುತ್ತಾನೆಂದು ಬಯಸಿದ್ದ ಚಂದ್ರಣ್ಣನಿಗೆ ನಿರಾಶೆ ಮಾಡಿ ಎಲ್ಲವನ್ನೂ ತೊರೆದು ನಡೆದ ಶಂಕರ. ಹೆಣ್ಣುಮಕ್ಕಳ ಮದುವೆಯ ವಿಚಾರವೇನಾಯಿತು..?? ಶಂಕರನಿಗೆ ಆತನ ಸೋದರಮಾವನ ಗುಣವೇ ಬಂದಿತ್ತಾ..?? ಚಂದ್ರಣ್ಣ ತನ್ನ ಅಕ್ಕನನ್ನು ಮಕ್ಕಳ ಮದುವೆ ವಿಚಾರದಿಂದ ದೂರವಿಟ್ಟದ್ದೇಕೆ..?? ಚಂದ್ರಣ್ಣನ ಆರೋಗ್ಯ ಸುಧಾರಿಸಿತೇ..?? ಶಂಕರ ಮತ್ತೆ ಬಂದನೇ..?? ಈ ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ಹರಿದತ್ತ ಹರಿವ ಚಿತ್ತ'.
ಆಧ್ಯಾತ್ಮಿಕ ಸಾಧನೆ ಮಾಡಲು ಹೊರಟ ಮಕ್ಕಳ ಪೋಷಕರ ಸ್ಥಿತಿ ಪಾರ್ವತಿ ಹಾಗೂ ಚಂದ್ರಣ್ಣನಂತೆಯೇ ಇರಬಹುದಾ..?? ಎಂಬ ಆಲೋಚನೆ ಮೂಡಿತು. ಮಕ್ಕಳ ಆಸೆ, ಆಕಾಂಕ್ಷೆ ಹಾಗೂ ಪೋಷಕರ ಮನಸ್ಥಿತಿಗಳಿಗೆ ಹಿಡಿದ ಕೈಗನ್ನಡಿಯಂತೆಯೂ ತೋರಿತು.
ಈ ಕಾದಂಬರಿಯ ಹರವು ವಿಸ್ತಾರವಾಗಿದ್ದು.. ಆಸಕ್ತಿಕರವಾಗಿ ಓದಿಸಿಕೊಂಡು ಹೋಗುತ್ತದೆ. ಕೆಲವು ಕಡೆ ವಿಸ್ತರಿಸಿ ಹೇಳಬಹುದಾದದ್ದನ್ನು ಚುಟುಕಾಗಿ ಹೇಳಿ ಬುದ್ದಿಗೆ ಕೆಲಸ ಕೊಡುತ್ತಾ.. ಉಪಮೆಗಳನ್ನು ಬಿಡಿಸುವಂತೆಯೂ ಇದೆ. ಬೇರೆ ಕಡೆ ನಮ್ಮ ಚಿತ್ತ ಹರಿಯದಂತೆ, ಕತೆಯತ್ತಲೇ ನಮ್ಮ ಚಿತ್ತವಿರುವಂತೆ ಹೆಣೆಯಲಾಗಿದೆ ಈ ಕಾದಂಬರಿಯನ್ನು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ