ಶುಕ್ರವಾರ, ಏಪ್ರಿಲ್ 10, 2026

ಇಳಾ (ಪುಸ್ತಕ ಯಾನ - 121)


ಪುಸ್ತಕದ ಶೀರ್ಷಿಕೆ : ಇಳಾ

ಲೇಖಕರು : ಶೈಲಜ ಹಾಸನ

ಪ್ರಕಾಶಕರು : ವಾಣಿ ಪ್ರಕಾಶನ

ಪ್ರಥಮ ಮುದ್ರಣ : 2010

ಪುಟಗಳು : 196

ಬೆಲೆ : 120 ರೂ.


ಹಾಸನ ಜಿಲ್ಲೆಯ ಜನಪ್ರಿಯ ಲೇಖಕರು ಹಾಗೂ  ಶಿಕ್ಷಕಿಯಾಗಿರುವ ಶೈಲಜ ಹಾಸನ ಅವರ ಸಾಹಿತ್ಯ ಕೃಷಿ ಬಹಳ ಫಲವತ್ತಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಅವರ ಬಿಡಿ ಬರಹಗಳನ್ನಷ್ಟೇ ಓದುತ್ತಿದ್ದ ನಾನು, ಓದಿದ ಅವರ ಮೊದಲ ಪುಸ್ತಕ ಅವರ ಕಾದಂಬರಿ ಇಳಾ. ಇದು ಅವರ ಒಂಬತ್ತನೆಯ ಕೃತಿ ಹಾಗೂ ಮೂರನೇ ಕಾದಂಬರಿ. ಚಿಲ್ಲರೆ ಪುರಾಣ (ಹಾಸ್ಯ), ಮತ್ತೊಂದು ಅಂಗಳ (ಕಥಾ ಸಂಕಲನ), ಬೊಗಸೆಯೊಳಗಿನ ಬಿಂದು (ಕಾವ್ಯ), ಮಂಥನ (ಕಾದಂಬರಿ), ಮುಸ್ಸಂಜೆಯ ಮಿಂಚು (ಕಾದಂಬರಿ), ದರ್ಪಣ (ಕಥಾಸಂಕಲನ), ಮಕ್ಕಳ ಕಥಾಗುಚ್ಚ (ಸಂಪಾದಿತ), ಶಿಕ್ಷಣದತ್ತ ಒಂದು ನೋಟ (ಲೇಖನ) ಮುಂತಾದವು ಇವರ ಇನ್ನುಳಿದ ಕೃತಿಗಳು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರಹದಿಂದ ಓದುಗರನ್ನು ಸೆಳೆಯುತ್ತಾ ಯಶಸ್ವಿಯಾಗಿ ಸಾಗುತ್ತಿದ್ದಾರೆ.


ಕೃಷಿ ಸಂಬಂಧಿತ ಕಾದಂಬರಿಗಳನ್ನು ನಾನು ಓದಿದ್ದು ತೀರಾ ಕಡಿಮೆ. ಅಂತಹ ಕೃಷಿ ಸಂಬಂಧಿತ ಹಾಗೂ ಕೃಷಿರಂಗದ ಕುರಿತು ಆತ್ಮವಿಶ್ವಾಸ ತುಂಬುವ, ರೈತರ ಆತ್ಮಹತ್ಯೆಯ ಕುರಿತು ಬೆಳಕು ಚೆಲ್ಲುತ್ತಾ ಅವರ ಕುಟುಂಬದ ಬಗೆಗೂ ಹೇಳುತ್ತಾ, ಅದನ್ನು ಮುಂದುವರಿಸುವ ಹಾಗೂ ಅವರು ಅದನ್ನು ಮೀರಿ ಬೆಳೆಯುವುದನ್ನು ಹೇಳುತ್ತಾ.. ಎಲ್ಲಿಯೂ ಓದುಗನಿಗೆ ಬೇಸರ ಆವರಿಸಿದಂತೆ, ಕಥಾರೂದಲ್ಲಿ ತೆರೆದಿಟ್ಟ ಕಾದಂಬರಿ ಇಳಾ. ಈ ಕಾದಂಬರಿ ಕೇವಲ ಕೃಷಿ ಸಂಬಂಧಿತವಾಗಿ ಮಾತ್ರವಲ್ಲದೆ.. ಕುಟುಂಬ, ಮನುಷ್ಯ ಸಂಬಂಧ ಹಾಗೂ ಪ್ರೀತಿ-ಪ್ರೇಮಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡು ಫಲವತ್ತಾಗಿ ಮೂಡಿಬಂದಿದೆ.ಈ ಕಾದಂಬರಿಯನ್ನು ಓದುವಾಗ ಅವರು ಇದಕ್ಕಾಗಿ ಮಾಡಿರುವ ಅಧ್ಯಯನವೂ ಗೋಚರವಾಗುತ್ತದೆ.


ಪ್ರತಿಬಾರಿಯಂತೆ ಈ ಬಾರಿಯೂ ಮಳೆ ಬಂದರೆ ಸಾಕು ಎಂದು ಮಳೆಯನ್ನೇ ನೋಡುತ್ತಾ ಕುಳಿತಿದ್ದ ಮೋಹನನಿಗೆ ಆತನ ಪತ್ನಿ ನೀಲಾ ತಿಂಡಿ ತಂದಿಟ್ಟದ್ದು, ಮಾತನಾಡಿಸಿದ್ದು ಸಹಾ ಗಮನಕ್ಕೆ ಬಂದಿರಲಿಲ್ಲ. ಆತನ ಅನ್ಯಮನಸ್ಕತೆಯನ್ನು ಆಕೆ ತಪ್ಪಾಗಿ ಅರ್ಥೈಸಿಕೊಂಡು ಮಳೆಯನ್ನೇ ಧ್ಯಾನಿಸುತ್ತಿದ್ದಾನೆ ಎಂದು ತಿಳಿದುಕೊಂಡಿದ್ದಳು. ಆದರೆ, ವಿಚಾರ ಬೇರೆ ಇದ್ದದ್ದು ಆಕೆಗೆ ತಿಳಿದಿರಲಿಲ್ಲ. ಮೋಹನನು ಅಸಲಿ ವಿಚಾರವನ್ನು ಆಕೆಯಿಂದ ಮುಚ್ಚಿಟ್ಟಿದ್ದ. ಶುಂಠಿ ಬೆಳೆಗೆ ಹಣ ಹಾಕಿ ಆತ ಸಾಕಷ್ಟು ಸಾಲ ಮಾಡಿ, ಬೆಳೆ ಕೈಗೆ ಬರದೇ ಸೋತು.. ಸಾಲದ ಭಾದೆಯಿಂದ ಹೇಡಿಯಂತೆ ಆತ್ಮಹತ್ಯೆ ಮಾಡಿಕೊಂಡ. ಇದು ಪರಿಣಾಮ ಬೀರಿದ್ದು ಆತನ ಪತ್ನಿ ನೀಲಾ ಹಾಗೂ ಅವರ ಏಕೈಕ ಪುತ್ರಿಯಾಗಿದ್ದ ಇಳಾಳ ಮೇಲೆ. ಆಕೆ ವೈದ್ಯಕೀಯ ಓದುವ ಆಸೆ ಇಟ್ಟುಕೊಂದಿದ್ದರೂ.. ಇನ್ನೂ ಪಿ.ಯು.ಸಿ ಓದುತ್ತಿದ್ದ ಹುಡುಗಿ.


ಆಕೆಯ ತಂದೆ ಸತ್ತಾಗ ಪಿ.ಯು.ಸಿ ಪರೀಕ್ಷೆ ಬರೆಯಬೇಕಿತ್ತಷ್ಟೇ.. ವೈದ್ಯಕೀಯ ಶಿಕ್ಷಣವೇ ಮೇಲು ಎಂದು ಭಾವಿಸದೆ, ಬಂದ ಸಂಕಷ್ಟಕ್ಕೆ ಧೃತಿಗೆಡದೆ, ವಿದ್ಯಾಭ್ಯಾಸಕ್ಕಿಂತ ಮೊದಲು ಬದುಕಿನ ಬಂಡಿ ಸಾಗಿಸಲು, ಅಪ್ಪನ ಕನಸು ನನಸಾಗಿಸಲು ಹಾಗೂ ತೋಟವನ್ನು ನೋಡಿಕೊಳ್ಳಲು ಕೃಷಿಯತ್ತ ಗಮನಹರಿಸುತ್ತಾಳೆ ಇಳಾ. 


ಮೋಹನನ ಅಣ್ಣನಾಗಿದ್ದ ಸುಂದರೇಶ್ ಅವರು ಅವಳ ಈ ನಿರ್ಧಾರವನ್ನು ಬೆಂಬಲಿಸದೆ, ತಾನು ಅವಳನ್ನು ಓದಿಸುತ್ತೇನೆಂದರೂ ಒಪ್ಪದೇ ಸ್ವಾಭಿಮಾನದಿಂದ ಹೆಜ್ಜೆ ಇಡಲು ನಿರ್ಧರಿಸಿದ್ದಳು. ಹೆಣ್ಣು ಮಕ್ಕಳಿಗೆ ಕೃಷಿಯ ಬದುಕು ಕಷ್ಟ, ಅಷ್ಟು ಪರಿಣಿತನಾಗಿದ್ದ ಮೋಹನನಿಗೆ ಅದು ಕಷ್ಟವೆನಿಸಿದ್ದು, ಯಾವುದೇ ಹಿನ್ನೆಲೆ ಇಲ್ಲದ ಇಳಾ ಅದರಲ್ಲಿ ಸೋತು ಹೋಗುತ್ತಾಳೆ ಎಂದು ಭಾವಿಸಿದ್ದರು ಸುಂದರೇಶ್. ಅವರ ಭಾವನೆಯನ್ನು ಬೆಂಬಲಿಸಿದವರು ಇಳಾ ತಾಯಿ ನೀಲಾ. ಅಲ್ಲದೆ, ಸುಂದರೇಶ್ ಅವರು ಮೋಹನನಿಗೆ ಬೆಳೆಗೆಂದು ಬಹಳಷ್ಟು ಸಾಲ ಕೊಡಿಸಿ ಅಲ್ಲಿಯೂ ಸಿಕ್ಕಿಹಾಕಿಕೊಂಡಿದ್ದರು. ಬ್ಯಾಂಕ್ ನಲ್ಲಿಯೂ ಸಾಕಷ್ಟು ಸಾಲವಿತ್ತು. ವಿಮೆಯ ಹಣ ಬಂದರೂ.. ಇನ್ನಷ್ಟು ಸಾಲ ಬಾಕಿಯೇ ಉಳಿಯುತ್ತಿತ್ತು. 


ಮನೆಯಲ್ಲಿ ಇಬ್ಬರೇ ಹೆಣ್ಣುಮಕ್ಕಳು ಎಂದಾದಾಗ, ಇಳಾ ಹಾಗೂ ನೀಲಾ ಬದುಕಿಗೆ ಮನೆಗೆ ಆಸರೆಯಾಗಿ ಬಂದವರು ನೀಲಾಳ ದೊಡ್ಡಮ್ಮ ಅಂಬುಜಮ್ಮ. ಮಗ, ಸೊಸೆಯ ಬಳಿಯೂ ಆಕೆಗೆ ನೆಮ್ಮದಿ ಇರದ ಕಾರಣ, ಆಕೆ ವೃದ್ದಾಶ್ರಮಕ್ಕೆ ಹೋಗುವ ನಿರ್ಧಾರ ಮಾಡಿದ್ದಳು. ಆದರೆ, ತನ್ನ ತಂಗಿಯ ಮಗಳ ಬದುಕಿಗೆ ಆಸರೆಯಾಗುವ ನಿರ್ಧಾರ ಮಾಡಿ ಜೊತೆಯಾದರು. ತೋಟದ ಕೆಲಸಕ್ಕೆ ಬಂದ ಆಳುಗಳು ಮೋಹನ ಬದುಕಿದ್ದಾಗ ನೋಡಿಕೊಂಡ ಒಳ್ಳೆಯ ರೀತಿಗೆ ಬೆಲೆಕೊಟ್ಟು, ಒಂದು ವರ್ಷ ಸಂಬಲವಿಲ್ಲದೆ ದುಡಿಯಲು ಸಹಾ ಸಿದ್ಧವಿದ್ದರು. ಆದರೆ, ಇಳಾ ಅದಕ್ಕೊಪ್ಪದೇ ಅವರಿಗೆ ಅವರಿಗೆ ಸಂಬಳ ನೀಡಿ ತಂದೆಯಂತೆಯೇ ವಿಶ್ವಾಸದಿಂದ ನಡೆಸಿಕೊಂಡಳು.


ತಂದೆಯ ತೋಟವನ್ನು ಮಾರಲು ಇಚ್ಛಿಸದೆ ಮೋಹನ ಖಾಲಿ ಬಿಟ್ಟಿದ್ದ ಜಾಗವಿದ್ದು ಅದನ್ನು ಮಾರಲು ನಿರ್ಧರಿಸಿದ್ದಳು ಇಳಾ. ಮೋಹನ ಬದುಕಿದ್ದಾಗ ಆತನಿಗೊಂದು ಕನಸಿತ್ತು. ತಾನು ತನ್ನ ಮಗಳನ್ನು ಬೋರ್ಡಿಂಗ್ ನಲ್ಲಿ ಓದಿಸುತ್ತಿರುವಂತೆ, ಬೇರೆ ತಂದೆ-ತಾಯಿ ನೋಯಬಾರದೆಂದು ಅಲ್ಲಿ ಅತ್ಯುತ್ತಮ ಶಾಲೆ ಶುರು ಮಾಡಬೇಕೆಂಬ ಕನಸಿತ್ತು. ಆದರೆ, ಅದಾವುದನ್ನೂ ನನಸಾಗಿಸದೇ ಆತ ಕೊನೆಯುಸಿರೆಳೆದಿದ್ದ. ಸದ್ಯದ ತನ್ನ ಕಷ್ಟದಿಂದ ಹೊರಬರಲು.. ಅದೇ ಊರಿನ ವಿನಾಯಕ ಕರೆತಂದಿದ್ದ ವಿಸ್ಮಯನಿಗೆ ಆ ಜಾಗವನ್ನು ಮಾರಿ ದೊಡ್ಡಪ್ಪ ಜಾಮೀನಾಗಿದ್ದ ಸಾಲವನ್ನು ತೀರಿಸಿದಳಾದರೂ.. ಬ್ಯಾಂಕ್ ನಲ್ಲಿನ ಸಾಲ ಇನ್ನಷ್ಟು ಬಾಕಿ ಉಳಿದಿತ್ತು.


ಕೇವಲ ಕಾಫಿ ಬೆಳೆಗೆ ಮಾತ್ರ ಪ್ರಾಧಾನ್ಯತೆ ನೀಡದೆ, ಜೊತೆ-ಜೊತೆಗೇ ಕಿತ್ತಲೆ, ಇತರ ಹಣ್ಣಿನ ಬೆಳೆಗಳು, ಗೋಡಂಬಿ ಹಾಗೂ ಇನ್ನಿತರ ಬೆಳೆಗಳ ಕುರಿತು ಗಮನ ಹರಿಸಿದಳು. ಸಾವಯವ ಕೃಷಿಯತ್ತ ಗಮನಹರಿಸುತ್ತಾ ಎರೆಹುಳದ ಗೊಬ್ಬರದ ಕುರಿತು ತೆಗೆದುಕೊಂಡು ಅದನ್ನು ಅಳವಡಿಸಿಕೊಂಡಳು. ದೇಶಿಯ ತಳಿಗಳ ಹಸುಗಳನ್ನು ಕೊಂಡು ಹಾಲು ಮಾರಾಟವನ್ನು ಮಾಡುತ್ತಾ ಲಾಭ ಪಡೆದಳು. ಆಕೆ ಕೃಷಿ ಕುರಿತು ತಂದೆ ಸಂಗ್ರಹಿಸಿದ್ದ ಪುಸ್ತಕಗಳಿಂದಲೂ ತಿಳಿದುಕೊಳ್ಳುತ್ತಾ.. ರೇಡಿಯೋದಲ್ಲಿ ಕೃಷಿಲೋಕದಲ್ಲಿ ಸಂದರ್ಶನ ನಡೆಯುತ್ತಿದ್ದನ್ನು ಕೇಳಿಸಿಕೊಂಡಳು. ಆ ವಿಚಾರ ಇಳಾ ಮನಸ್ಸಿನಲ್ಲಿ ಕೊರೆಯುತ್ತಿದ್ದುದೇ ಆಗಿತ್ತು. ರೈತರ ಬಗೆಗಿನ ಕಳಕಳಿ ಹಾಗೂ ಆತ್ಮಹತ್ಯೆಯ ಪರಿಹಾರದ ಕುರಿತು ಮಾತನಾಡುತ್ತಿದ್ದವರ ವಿಳಾಸ ಪಡೆದು ಫೋನ್ ಮಾಡಿದಳು. ಆಗ ಆಕೆಗೆ ಭೇಟಿಯಾದವರೇ ನಿವಾಸ್.


ನಿವಾಸ್ ಕೂಡಾ ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಆತನೂ ರೈತನ ಮಗನೇ. ಪ್ರಗತಿಪರ ರೈತನಾಗಿದ್ದ ನಿವಾಸ್  ಬದುಕು ಕೂಡಾ ಒಂದು ದುರಂತ ಅಧ್ಯಾಯದ ಮುಂದುವರಿದ ಭಾಗವಾಗಿತ್ತು. ಚನ್ನರಾಯಪಟ್ಟಣದ ಸ್ಪೂರ್ತಿ ಕೂಡ ಆಕೆಗೆ ಜೊತೆಯಾದಳು. ಆಕೆಯೂ ನಿವಾಸನ ಊರಿನವಳೇ. ಅವರ ತಂಡಕ್ಕೆ ಜೊತೆಯಾದಳು ಇಳಾ.


ವಿಸ್ಮಯ ತಾನು ಕೊಂಡ ಜಾಗದಲ್ಲಿ ರೆಸಾರ್ಟ್ ಶುರು ಮಾಡಲು ಪ್ಲಾನ್ ಮಾಡಿದ್ದರೂ.. ಅದರ ಜೊತೆಜೊತೆಗೆ ಮೋಹನನ ಕನಸಿನಂತೆಯೇ ಅಲ್ಲಿ ಒಂದು ಶಾಲೆಯನ್ನು ಕೂಡ ಶುರು ಮಾಡಿಬಿಟ್ಟ. ಅಷ್ಟೇ ಅಲ್ಲದೆ ಗುದ್ದಲಿ ಪೂಜೆಗೆ ಇಳಾ ಹಾಗೂ ನೀಲಾಳನ್ನೇ ಆಹ್ವಾನಿಸಿದ್ದ. ನಂತರ ಅವರನ್ನೇ ಅಚ್ಚರಿಗೊಳಿಸುವಂತೆ ಆ ಶಾಲೆಯ ಉಸ್ತುವಾರಿಯನ್ನು ನೋಡಿಕೊಳ್ಳುವಂತೆ ನೀಲಾಳನ್ನೇ ಕೇಳಿಕೊಂಡ. ಕೆಲಸವಿಲ್ಲದೆ ಸುಮ್ಮನೆ ಮನೆಯಲ್ಲಿ ಕೂರುವುದಕ್ಕಿಂತ ಹಾಗೂ ಚಟುವಟಿಕೆಯಿಂದಿರಲು ಇದು ಒಳ್ಳೆಯ ಅವಕಾಶವೆನಿಸಿತ್ತು. ಮಕ್ಕಳ ಜೊತೆಗೆ ಆರು ತಿಂಗಳು ಕಳೆಯುವಷ್ಟರಲ್ಲಿ ಇಳಾ ತನ್ನ ಜೊತೆಗೆ ತನ್ನ ತಾಯಿಯೂ ಓಪನ್ ಮಾಡಿ ಡಿಗ್ರಿ ಮಾಡಿಕೊಳ್ಳಲಿ ಎಂದುಕೊಂಡಳು.


ನೀಲಾಳ ಮೂಲಕ ಇಳಾ ಬದುಕಲ್ಲಿ ಪ್ರವೇಶಿಸಿದ ವಿಸ್ಮಯ ಹಾಗೂ ಕೃಷಿಯಿಂದ ಹತ್ತಿರವಾದ ನಿವಾಸ್ ಇಬ್ಬರೂ ಆಕೆಯ ಬದುಕಿನಲ್ಲಿ ಪ್ರಮುಖ ವ್ಯಕ್ತಿಗಳು ಎನಿಸಿಕೊಂಡರು. ವಿಸ್ಮಯನ ಬದುಕು ಕೂಡಾ ದುಃಖದಿಂದ ಕೂಡಿದ್ದು, ಆತನು ತನ್ನ ನೋವು ಮರೆಯಲು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದ.


ಇಳಾ ಕೃಷಿಯಲ್ಲಿ ಪ್ರಗತಿ ಸಾಧಿಸಿ, ಮಾದರಿ ರೈತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಳು. ಆದರೆ, ಹೆಣ್ಣುಮಕ್ಕಳು ಏನೇ ಸಾಧನೆ ಮಾಡಿದ್ದರೂ ಸಹಾ.. ಮದುವೆ ಎಂಬ ಆಯ್ಕೆಯಿಂದ ಅವರು ದೂರ ನಿಲ್ಲಲಂತೂ ಸಾಧ್ಯವಿಲ್ಲ. ಈಗ ಇಳಾ ಬದುಕಿನಲ್ಲಿ ಎರಡು ಆಯ್ಕೆಗಳಿದ್ದು ನಿವಾಸ್ ಹಾಗೂ ವಿಸ್ಮಯ ಇಬ್ಬರ ಬದುಕಿನ ಕುರಿತೂ ಆಕೆಗೆ ತಿಳಿದಿತ್ತು.


ಸ್ಪೂರ್ತಿ ಮನಸಾರೆ ನಿವಾಸನನ್ನು ಪ್ರೇಮಿಸಿದ್ದರೂ.. ಆತ ಆಕೆಯನ್ನು ಆ ಭಾವನೆಯಿಂದ ನೋಡಿರಲಿಲ್ಲ. ಬದಲಾಗಿ, ಇಳಾಳ ಕುರಿತು ಆತನಿಗೆ ಆರಾಧನೆಯ ಭಾವನೆಯಿತ್ತು. ಆದರೆ, ಸ್ಪೂರ್ತಿಗೆ ಸುದರ್ಶನನನ್ನು ಜೋಡಿ ಮಾಡಿದ್ದ ನಿವಾಸ್. ಆಕೆಯ ಸರಳವಾದ ಸುಂದರ ವಿವಾಹ ಕೂಡ ಇಳಾಳನ್ನು ಆವರಿಸಿ, ತಾನೂ ಈ ರೀತಿ ಮದುವೆಯಾಗಬೇಕೆಂಬ ಆಸೆಯೂ ಮೂಡಿತ್ತು. ಹಾಗೆಂದು ಆಕೆ ಕೃಷಿಯನ್ನು ಬಿಡಲು ಸಹ ಸಿದ್ಧಳಿರಲಿಲ್ಲ.


ಇಲಾಳ ಕೈ ಹಿಡಿದವರು ಯಾರು..?? ನಿವಾಸನ ಬದುಕಿನ ಹಿಂದಿನ ದುರಂತ ಅಧ್ಯಾಯವೇನಿತ್ತು..?? ಆತನಿಗೂ ಅಂಬುಜಮ್ಮನಿಗೂ ಇದ್ದ ಸಂಬಂಧವೇನು..?? ಸುದರ್ಶನ ಹಾಗೂ ಸ್ಪೂರ್ತಿ ಜೋಡಿ ಆದ ಬಗೆ ಹೇಗೆ..?? ವಿಸ್ಮಯನಿಗೆ ಮನೆಯವರಿಂದ ದೂರವಾಗುವಂತಹಾ ನೋವು ಏನಿತ್ತು..?? ಈ ಎಲ್ಲ ಕುತೂಹಲಗಳಿಗೂ ಉತ್ತರ ತಿಳಿದುಕೊಳ್ಳಲು ಓದಿ ಕಾದಂಬರಿ ಇಳಾ.


ಕಾದಂಬರಿಯ ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಳ್ಳುತ್ತಾ.. ಕೃಷಿಯ ಲವಲೇಶವೂ ಗೊತ್ತಿರದ ಹುಡುಗಿ, ಕೃಷಿಯಲ್ಲಿ ಗೆದ್ದ ಬಗೆ ಹೇಳುತ್ತಾ.. ಓದಿಸಿಕೊಂಡು ಹೋದ ಇಳಾ ನನ್ನಲ್ಲಿಯೂ ಆಶಾಭಾವನೆಯನ್ನು ತುಂಬಿತು. ನಮ್ಮ ನೋವಿಗಿಂತಲೂ ಇತ್ತೊಬ್ಬರ ನೋವು ದೊಡ್ಡದಾಗಿ ಕಂಡಾಗ, ನಮ್ಮ ನೋವು ಅಲ್ಪವಾದರೂ ಕಡಿಮೆಯಾಗುತ್ತದೇನೋ.. ಅಲ್ಲದೆ, ಬಹಳಷ್ಟು ಸಾಮ್ಯತೆಗಳಿಂದ, ನನ್ನ ಸಮಸ್ಯೆಗಳಿಗೂ ಉತ್ತರ ಹುಡುಕಿಕೊಟ್ಟ ಈ ಪುಸ್ತಕ ಮನಸ್ಸಿಗೆ ಆತ್ಮೀಯವಾಗಿದ್ದು ಹೌದು. ಅಲ್ಲದೆ, ಕಥಾ ಪರಿಸರ ಹಾಸನವೇ ಆದುದರಿಂದ ಕಾದಂಬರಿ ಮನಸ್ಸಿಗೆ ಹತ್ತಿರವಾಗಿತ್ತು ಎಂದರೆ ತಪ್ಪಾಗಲಾರದು. ನನ್ನೊಳಗೆ ಸ್ಪೂರ್ತಿ ತುಂಬಿ, ದೈರ್ಯ ನೀಡಿದ ಹಾಗೂ ಹೊಸ ಬೆಳಕನ್ನು ತೋರಿಸಿದ ಕಾದಂಬರಿ ಇಳಾ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ