ಮನೋವೈಜ್ಞಾನಿಕ ಕಥೆ ಎಂದಾಗ ತಕ್ಷಣಕ್ಕೆ ನೆನಪಾಗುವುದು ತ್ರಿವೇಣಿಯವರ ಖ್ಯಾತ ಕಾದಂಬರಿ ಶರಪಂಜರ ಹಾಗೂ ಸಮಸ್ಯೆಯ ಮಗು ಎನ್ನುವ ಕಥೆ.
ಸಮಸ್ಯೆಯ ಮಗು ಕಥಾ ಸಂಕಲನದ ಮೊದಲ ಕಥೆಯೇ 'ಸಮಸ್ಯೆಯ ಮಗು'. ಮಕ್ಕಳು ತುಂಬಾ ಮುದ್ದಿನಿಂದ ಬೆಳೆದಾಗ ಅಥವಾ ಮನೆಗೆ ಮತ್ತೊಂದು ಮಗು ಬಂದಾಗ ಆ ಮಗುವಿನ ಮನಸ್ಸಲ್ಲಿ, ತನಗೆ ಯಾರೂ ಗಮನ ನೀಡುತ್ತಿಲ್ಲ ಎಂಬ ಭಾವನೆ ಸುಳಿಯಬಹುದು. ಅದಕ್ಕಾಗಿ ಮೊದಲಿನಂತೆ ತನ್ನ ಕಡೆಗೆ ಹಿರಿಯರ ಗಮನ ಸೆಳೆಯಲು ಏನೆಲ್ಲಾ ಪ್ರಯತ್ನಗಳನ್ನೂ ಮಾಡಬಹುದು. ಕೆಲವರು ಇದನ್ನು ಕಂಡು ಹಿಡಿಯಬಹುದು. ಇಲ್ಲವೇ ಕಡೆಗಣಿಸಿ ಹುಚ್ಚು ಎನ್ನಲೂಬಹುದು. ಮಕ್ಕಳ ಬೆಳವಣಿಗೆ ಕುಂಠಿತವಾಗಬಹುದು. ದೊಡ್ಡವರಿಗೆ ಇದು ಸಮಸ್ಯೆಯೇ ಅಲ್ಲ ಎನ್ನಿಸಬಹುದು ಅಥವಾ ನೋಡುವವರ ಕಣ್ಣಿಗೆ ಚಿಕ್ಕ ಸಮಸ್ಯೆಯಂತೆಯೋ ಅಥವಾ ಮಕ್ಕಳಾಟದಂತೆಯೋ ಕಾಣಬಹುದು. ಮಗುವಿನ ಮನಸ್ಸಿನ ಮೇಲೆ ಏನೆಲ್ಲಾ ಪರಿಣಾಮಗಳಾಗಬಹುದು ಇದರಿಂದ ಎಂಬುದನ್ನು ಹೇಳುವ ಕಥೆ "ಸಮಸ್ಯೆಯ ಮಗು". ಸಮಸ್ಯೆಯ ಮಗುವಾದ ನಾಗೇಂದ್ರ ಗುಣವಾದ ಕಥೆಯ ಜೊತೆಗೆ ಪೋಷಕರಿಗೂ ಎಚ್ಚರಿಕೆಯಂತೆ ಇದೆ ಈ ಕತೆ.
ಈ ಕತೆಯಲ್ಲಿ ನಾಗೇಂದ್ರ ಮುದ್ದಿನಿಂದ ಬೆಳೆಯುತ್ತಿರುವಾಗ ಆತನಿಗಿಂತ ಪುಟ್ಟ ಮಗು ತಾಯಿ-ತಂದೆಯರ ಕಣ್ಮಣಿಯಾದಾಗ ಆತನಿಗೆ ಸಹಜವಾಗಿಯೇ ಪ್ರೀತಿ ಕಡಿಮೆಯಾದಂತೆ ತೋರುತ್ತದೆ. ಅಲ್ಲದೆ, ಕೊಂಚ ದೊಡ್ಡವನೆಂದೇ.. ಅರ್ಥ ಮಾಡಿಕೊಳ್ಳುತ್ತಾನೆಂದೇ ಭಾವಿಸಿದ ತಾಯಿ-ತಂದೆಯರು ಸೂಕ್ಷ್ಮವನ್ನು ಕಂಡುಕೊಳ್ಳಲು ಅಸಮರ್ಥರಾಗುತ್ತಾರೆ.
ಈ ಪಾತ್ರಕ್ಕೆ ಸಾಮ್ಯತೆ ಕಂಡದ್ದು ಎ.ಪಿ.ಮಾಲತಿಯವರ ಅಲೋಕ ಕಾದಂಬರಿಯ ಅಲೋಕನಲ್ಲಿ.
ಅಲೋಕನ ತಂದೆ ಶೇಖರ ಹಾಗೂ ತಾಯಿ ಸ್ಮಿತಾ. ಶೇಖರನಿಗೆ ವಿದೇಶದಲ್ಲಿ ಕೆಲಸ ಸಿಕ್ಕಾಗ.. ಸ್ಮಿತಾ ಕೂಡ ಆತನ ಜೊತೆಗಿರುವ ಸಂಧರ್ಭದಲ್ಲಿ.. ಮೂರು ತಿಂಗಳ ಆಲೋಕನನ್ನು ಆಕೆ ತನ್ನ ತಾಯಿ-ತಂದೆಯ ಮನೆಯಲ್ಲಿ ಅವರ ಜೊತೆಯಲ್ಲಿ ಬಿಟ್ಟು ಹೊರಟಿದ್ದಳು. ಅಲೋಕ ಆತನ ಅಜ್ಜ-ಅಜ್ಜಿಯನ್ನೇ ತಂದೆ-ತಾಯಿ ಎಂದು ತಿಳಿಯಲು ಶುರು ಮಾಡಿದ್ದ. ಐದು ವರ್ಷದ ನಂತರ ಅವರು ಮರಳಿ ಬಂದು ಮಗುವನ್ನು ತಮ್ಮೊಡನೆ ಮುಂಬೈಗೆ ಕರೆದುಕೊಂಡು ಹೊರಟಾಗ.. ಅವರನ್ನು ಮನಸ್ಫೂರ್ತಿಯಾಗಿ ಒಪ್ಪಿಕೊಳ್ಳದೇ.. ಆತ ಪ್ರತಿಯೊಂದಕ್ಕೂ ಹಠ ಮಾಡುತ್ತಾ ಸಮಸ್ಯೆಯ ಮಗುವಾಗುತ್ತಾನೆ. ನಂತರ, ಇದು ವಿಕೋಪಕ್ಕೆ ಹೋಗಿ ಆತ ಅಂತರ್ಮುಖಿಯಾಗುವುದು, ಶಾಲೆ ತಪ್ಪಿಸುವುದು. ಹೀಗೆ.. ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡುವ ಮೂಲಕ ತಾನು ಸಮಸ್ಯೆಯ ಮಗುವೆಂದೇ ಬಿಂಬಿತವಾಗುತ್ತಾನೆ.
ಇದಕ್ಕೂ ಕಾರಣ ಪ್ರೀತಿಯ ಕೊರತೆ. ಅಜ್ಜ-ಅಜ್ಜಿಯರ ಕಣ್ಮಣಿಯಾಗಿ ಬೆಳೆದಿದ್ದ ಆಲೋಕನಿಗೆ.. ತಾಯಿ-ತಂದೆ ಸ್ವತಂತ್ರ್ಯ ವ್ಯಕ್ತಿತ್ವವನ್ನು ರೂಪಿಸಲು ಹೊರಡುವುದು, ಹಳ್ಳಿಯ ಪರಿಸರದಿಂದ ದೂರದ ಶಹರದ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುವುದು ಹಿಡಿಸುವುದಿಲ್ಲ.
ಸಮಸ್ಯೆಯ ಮಗು ಕಥೆಯಾಗಿ ಹಾಗೂ ಅಲೋಕ ಕಾದಂಬರಿಯಾಗಿ ಓದುಗರಿಗೆ ಸೂಕ್ಷ್ಮವಾಗಿ ಮಗುವಿನ ಸಮಸ್ಯೆಯನ್ನು ಪೇರೆಂಟಿಂಗ್ ನಲ್ಲಿ ಅವರು ತೆಗೆದುಕೊಳ್ಳುವ ಪೇರೆಂಟಿಂಗ್ ನ ನಿರ್ಧಾರ, ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೋರಿಸುತ್ತವೆ. ಅಲೋಕ ಕಾದಂಬರಿಯಾಗಿ ಕೊಂಚ ವಿಸ್ಕೃತವಾಗಿ, ವಿಸ್ತಾರವಾಗಿ ಕಾಲಾನುಕ್ರಮದಲ್ಲಿ ಮಗುವೊಂದು ಸಮಸ್ಯೆಯ ಮಗುವಾಗುವುದರ ಹಾಗೂ ಅದರ ಪರಿಹಾರವನ್ನು ತಿಳಿಸುತ್ತದೆ. ಎರಡು ವಿಭಿನ್ನ ರೀತಿಯ ಬರಹ (ಕಥೆ, ಕಾದಂಬರಿ). ಆದರೂ.. ಮಕ್ಕಳ ಮನಸ್ಥಿತಿಗಳು ಅವರ ಕೊರತೆಗಳು, ಮಕ್ಕಳಿಗೆ ಬೇಕಾದ ಕಾಳಜಿ, ನೀಡಬೇಕಾದ ಪ್ರಾಮುಖ್ಯತೆ.. ಮಕ್ಕಳು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಅಸಾಧ್ಯವಾದಾಗ ಅಥವಾ ಪೋಷಕರಿಂದ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವಾದಾಗ ಅದು ಹೇಗೆ ಮನೋರೋಗಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಮನೋವೈಜ್ಞಾನಿಕ ಕಥೆ, ಕಾದಂಬರಿಯ ಮೂಲಕ ಓದುವಂತಿದೆ.
ಸೂಕ್ಷ್ಮತೆಗಳ ಮೂಲಕ ಮಕ್ಕಳ ಸಮಸ್ಯೆಗಳನ್ನು ಹೇಳುವಾಗ.. ನಾಗೇಂದ್ರ, ಆಲೋಕನ ವರ್ತನೆಗೂ ಸಾಮ್ಯತೆ ಕಂಡುಬಂದಿತು. ಅಲೋಕ ಇನ್ನೂ ಮುಂದುವರಿದು.. ಆಂತರ್ಮುಖಿಯಾಗುತ್ತಾನೆ. ಸಮಸ್ಯೆಯ ಮಗು ಕಥೆಯಲ್ಲಿ ಇದಕ್ಕೆ ಪರಿಹಾರ ಹೊರಗಿನ ಅತಿಥಿಯೊಬ್ಬರ ಮೂಲಕ ಮನೆಯವರಿಗೆ ಸಿಕ್ಕರೆ.. ಇಲ್ಲಿ ಮನೆಯವರೇ ಅದನ್ನು ವಿಶ್ಲೇಷಿಸುವ ಪ್ರಸಂಗ ಬರುತ್ತದೆ. ಇದರ ಕುರಿತು ಶೇಖರನ, ಸ್ಮಿತಾಳ ತಂದೆ-ತಾಯಿಗಳು ಮುಂಚೆ ಹೇಳಿದ್ದರೂ.. ಅದನ್ನು ನಿರ್ಲಕ್ಷ ಮಾಡಿ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡದ್ದು ಕಂಡು ಬರುತ್ತದೆ.
ಇಬ್ಬರೂ ಲೇಖಕಿಯರ ಕಥಾವಸ್ತು ಬೇರೆಯಾದರೂ.. ಸಮಸ್ಯೆಯ ಮಕ್ಕಳಾಗಿ ನಾಗೇಂದ್ರ ಹಾಗೂ ಅಲೋಕ ನನಗೆ ಕಂಡ ಪರಿ ಹೀಗೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ