ಶುಕ್ರವಾರ, ಏಪ್ರಿಲ್ 10, 2026

ಮಾಯಾ ಕಿನ್ನರಿ (ಪುಸ್ತಕ ಯಾನ - 115)


ಪುಸ್ತಕದ ಶೀರ್ಷಿಕೆ : ಮಾಯಾ ಕಿನ್ನರಿ

ಲೇಖಕರು : ಜೋಗಿ

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2011

ಪುಟಗಳು : 116

ಬೆಲೆ : 70 ರೂ.


ಪುಸ್ತಕದ ಹೆಸರು 'ಮಾಯಾ ಕಿನ್ನರಿ'. ಭೈರಮಂಗಲ ರಾಮೇಗೌಡರದ್ದು ಸಹಾ ಇದೇ ಹೆಸರಿನ ಪುಸ್ತಕವಿದೆ. ಆದರೆ, ನಾನು ಹೇಳಹೊರಟಿರುವ ಪುಸ್ತಕದ ಲೇಖಕರು ಜೋಗಿ. ಜೋಗಿ ಎಂದೇ ಪ್ರಖ್ಯಾತರಾಗಿರುವ ಇವರ ಹೆಸರು ಗಿರೀಶ್ ರಾವ್ ಹತ್ವಾರ್. 


ಮಾಯಾ ಕಿನ್ನರಿ ಎಂದಾಕ್ಷಣ ಇದು Fantasy ವಿಭಾಗಕ್ಕೆ ಸಂಬಂಧಿಸಿದ ಪುಸ್ತಕವಲ್ಲ. ವಾಸ್ತವವೋ.. ಮಾಯೆಯೋ.. ಸತ್ಯವೋ.. ಮಿಥ್ಯವೋ.. ಓದಿದ ನಂತರ ನೀವೇ ಹೇಳಬೇಕು. ಈ ಕಾದಂಬರಿಯು ನೀಳ್ಗತೆಯನ್ನು ಮತ್ತಷ್ಟು ವಿಸ್ತರಿಸಿದಂತೆ ಹರವನ್ನು ಹಾಗೂ ಸರಾಗತೆಯನ್ನು ಹೊಂದಿದೆ. 


ಪುಸ್ತಕದ ಶೀರ್ಷಿಕೆಯ ಕೆಳಗೆ "ಯಾರಿಲ್ಲಿಗೆ ಬಂದರು ಕಳೆದಿರುಳು!  ಏ ಗಾಳೀ...". ಇದು ಯರ್ಮುಂಜ ರಾಮಚಂದ್ರ ಅವರ ತೀರಾ ಕಾಡುವ ಕವಿತೆಯೊಂದರ ಸಾಲು. ಅವರು ಕೇವಲ 22ನೇ ವಯಸ್ಸಿನಲ್ಲೇ ತೀರಿಕೊಂಡರು. ಅಷ್ಟರೊಳಗೇ ‘ವಿದಾಯ’ ಎಂಬ ಕವನಸಂಕಲನ ಪ್ರಕಟಿಸಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿದ್ದವರು. ಅಂತಹಾ ಕಾಡುವ ಕವಿತೆಯ ಈ ಸಾಲು ಈ ಪುಸ್ತಕವನ್ನು ಮತ್ತಷ್ಟು ಪ್ರಶ್ನೆಗಳೊಂದಿಗೆ ಓದುವಂತೆ ಮಾಡುತ್ತದೆ. 


ಶೋಭಾರಾಣಿ ಎಂಬ ದೈವಭಕ್ತೆ ಹಾಗೂ ಪರೋಪಕಾರ ಪ್ರಿಯೆಯ ಬಾಳ ಸಂಗಾತಿ ನರಹರಿ ಶುದ್ಧ ನಾಸ್ತಿಕ. ಅಷ್ಟೇ ಆಗಿದ್ದರೆ ಈ ವಿಚಾರದಲ್ಲಿ ಮಾತ್ರ ವೈರುಧ್ಯವೆಂದು ಸುಮ್ಮನಾಗಬಹುದಿತ್ತು. ಅಲ್ಲ, ಇಬ್ಬರ ಯೋಚನಾ ಲಹರಿ, ನಡವಳಿಕೆ ಪರಸ್ಪರ ವೈರುಧ್ಯವೆಂದರೂ ತಪ್ಪಾಗಲಾರದು. ಆದರೆ, ವಿಚಿತ್ರವೆಂದರೆ ಏಳು ವರ್ಷದ ಇಬ್ಬರ ದಾಂಪತ್ಯದಲ್ಲಿ ಎಲ್ಲರ ಮನೆಯಲ್ಲಿದ್ದ ಹಾಗೆ ಗಂಡ-ಹೆಂಡತಿ ಜಗಳವಾಡಿದ್ದ ದಿನದ ಉದಾಹರಣೆಯೇ ಇರಲಿಲ್ಲ.


ಶೋಭಾರಾಣಿ ಹಾಗೂ ನರಹರಿಯ ಮದುವೆಯ ಕತೆಯೂ ಒಂದು ರೀತಿಯ ವಿಭಿನ್ನವೇ. ಆದರೆ, ಮಾಯೆಯ ಅಥವಾ ಸುತ್ತಮುತ್ತ ನಡೆಯದಂತೇನಲ್ಲ.


ಶೋಭಾರಾಣಿಗೆ ಎರಡು ವಿಭಿನ್ನ ಅಭ್ಯಾಸಗಳಿದ್ದವು. ಯಾವುದೇ ಕರೆ ಬಂದರೂ ಆಕೆ ಅದನ್ನು ಉತ್ತರಿಸಿ ಮಾತನಾಡಲೇ ಬೇಕು. ಅಕಸ್ಮಾತ್ ತಪ್ಪಿ ಹೋದರೆ ಆತಂಕದಲ್ಲಿಯೇ ಅವರಿಗೆ ಕರೆ ಮಾಡಿ ವಿಚಾರಿಸುವ ಚಾಳಿ. 

ಮತ್ತೊಂದು ವಿಚಿತ್ರ ಅಭ್ಯಾಸವೆಂದರೆ, ಆಕೆ ಭಿಕ್ಷೆ ಬೇಡುವರಿಗೆ ಏನಾದರೂ ಕೊಡಲೇ ಬೇಕಿತ್ತು. ಆದರೆ, ನರಹರಿ ಅವರನ್ನು ಬೈದು ಕಳುಹಿಸುತ್ತಿದ್ದ. ಆಕೆಗೆ ತಳಮಳ.. ತಾನು ಸ್ನಾನಕ್ಕೆ ಹೋದಾಗ ಯಾರಾದರೂ ಬಂದು ಬೇಡಿದರೆ ಕೊಡಲಾಗಲಿಲ್ಲವಲ್ಲ ಎಂಬ ಪಶ್ಚಾತ್ತಾಪದ ಭಾವ.


ಅವಳ ಎಲ್ಲಾ ಗುಣಗಳು ಬೆಳೆದದ್ದು ಸಹಾ ತಂದೆಯ ಪ್ರಭಾವದಿಂದ. ಅವಳ ಪ್ರತಿ ಬೆಲೆಬಾಳುವ ಗುಣಗಳನ್ನು ಯಾರಾದರೂ ಮೆಚ್ಚಿಕೊಂಡರೆ ಆಕೆಗೆ ನೆನಪಾಗುವುದು ಆಕೆಯ ತಂದೆಯೇ.. 


ನರಹರಿ ಮೊದಲು ಸರ್ಕಾರಿ ಕೆಲಸದಲ್ಲಿದ್ದವನು ಕ್ರಮೇಣ ತನ್ನದೇ ಸ್ವಂತ ಬಿಸಿನೆಸ್ ಮಾಡಲು ತೊಡಗುತ್ತಾನೆ. ಎಲ್ಲವೂ ಸರಿಯಾಗಿ ನಡೆಯುತ್ತಿತ್ತು ಎನ್ನುವಾಗಲೇ ಆ ಸರಣಿ ಘಟನೆಗಳು ನಡೆಯಲು ಶುರುವಾಗಿದ್ದು.


ಭಿಕ್ಷುಕನಿಗೆ ಭಿಕ್ಷೆ ನೀಡಲು ಹೋಗುವಷ್ಟರಲ್ಲಿ ಆತ ಬೀದಿಯ ತಿರುವಲ್ಲಿದ್ದದ್ದು, ಯಾವುದೋ ಅಪರಿಚಿತ ನಂಬರ್ ನಿಂದ ಮೆಸೇಜ್ ಬರತೊಡಗಿದ್ದು.. ಮನೆಯಲ್ಲೊಂದು ಅಪರಿಚಿತ ಸುಗಂಧ ಹರಡಿದ್ದು..

ಇದ್ದಕ್ಕಿದ್ದ ಹಾಗೆ ಅಷ್ಟು ವರ್ಷಗಳಲ್ಲಿ ಮೊದಲ ಬಾರಿ ನರಹರಿ ಮನೆಗೆ ಬರದೇ ಹೋಗುತ್ತಾನೆ. ಅಪ್ಪನಿಗೆ ಇದನ್ನು ಹೇಳಲೇ ಎಂದು ಯೋಚಿಸುವಾಗಲೇ ನರಹರಿ ತಾನು ಬೇಗ ಬರುವುದಾಗಿ ತಿಳಿಸುತ್ತಾನೆ. 


ಇಬ್ಬರಿಗೂ ವಿಭಿನ್ನ ಅನುಭವಗಳು, ವಿಭಿನ್ನ ದಿನ, ವಿಭಿನ್ನ ಆಲೋಚನೆಗಳು. ಬದುಕಿನ ತಿರುವುಗಳು, ಬದುಕಿನ ದಿಕ್ಕೇ ಬದಲಾದಂತೆ ಅನುಭವ. ಅಷ್ಟು ಅನುಭವಗಳು ಸುಳ್ಳಾಗಿಬಿಡಲಿ ಎಂಬ ಭಾವನೆ ನರಹರಿಯದ್ದಾಗಿರಬಹುದಾ..?? ಅಷ್ಟು ಅನುಭವಗಳು ನಿತ್ಯವೂ ನಿಜವಾಗಲಿ ಎಂಬ ಭಾವನೆ ಶೋಭಾರಾಣಿಯದ್ದಾಗಿರಬಹುದಾ..?? ಓದಿದ ನಂತರ ನೀವೇ ಹೇಳಬೇಕು. 


ಅಡಿ ಬರಹಕ್ಕೂ ಪುಸ್ತಕದ ಕತೆಗೂ ಈ ಅರ್ಥವಿರಬಹುದಾ..??

ಗಾಳಿ ಎಲ್ಲೆಡೆ ಹರದಿರುವಂತಹದ್ದು. ಗಾಳಿ ಎಲ್ಲವನ್ನೂ ಕಾಣುವಂತಹದ್ದು. ಹಾಗಾಗಿ, ಅದಕ್ಕೆ ಈ ಮಾತಿರಬಹುದಾ..?? ಗಾಳಿಯ ಹಾಗೆಯೇ ಮಾಯೆ ಆವರಿಸುತ್ತಿತ್ತಾ..?? ಆ ನಿಗೂಢ ಗಾಳಿಮಾತಿನಂತೆ ಪಸರಿಸಿ ಗೊತ್ತಾಗುತ್ತಿತ್ತಾ..?? ಅಥವಾ ಸುಳಿಸುಳಿಯಾಗಿ ಸುತ್ತುತ್ತಾ ಅಲ್ಲೇ ಬಚ್ಚಿಟ್ಟುಕೊಳ್ಳುತ್ತಿತ್ತಾ..??  ಕಳೆದಿರುಳು ಆದದ್ದೇನು..?? ಬರದಿದ್ದರೂ ಬಂದಂತೆ, ಬಂದರೂ ಬಾರದಂತೆ ಇದ್ದದ್ದು ಯಾರು..?? ಎಲ್ಲಕ್ಕೂ ಉತ್ತರವೇ ಈ ಕಾದಂಬರಿ. 


ನೀ ಮಾಯೆಯೊಳಗೊ, ಮಾಯೆ ನಿನ್ನೊಳಗೊ ಎಂಬಂತೆ ಆವರಿಸಿಕೊಂಡು ಆ ಸುಗಂಧವನ್ನು ಪಸರಿಸುತ್ತಾ ನಮ್ಮದೇ ಪರಿಸರದ ಕತೆಯಂತೆ ಸುಳಿದಾಡುತ್ತದೆ ಇದು. ಇಲ್ಲಿ ಅತಿಶಯೋಕ್ತಿಯಿಲ್ಲ. ಬೆರಗಿನ, ವೈಚಿತ್ರ್ಯದ ಮಾಯಾ ಲೋಕವಲ್ಲದ ಮಾಯಾ ಲೋಕವಿದೆ. ವಾಸ್ತವವಿದೆ.. ಪ್ರತಿ ಅಧ್ಯಾಯಕ್ಕೂ ಸುಂದರ ಹೆಸರುಗಳಿವೆ. ಆ ಹೆಸರುಗಳು ಪ್ರಸಿದ್ಧ ಗೀತೆಯನ್ನೋ, ದಾಸ ವಾಣಿಯನ್ನೋ, ಭಾವಗೀತೆಯನ್ನೋ ನೆನಪಿಸುತ್ತವೆ. ಹಾಗೆಂದು ಕತೆಯ ಸಾರವೆಲ್ಲ ಅದರ ಮೇಲೆ ನಿಂತಿಲ್ಲ. ಕತೆಯ ಹೊಳಪನ್ನು ಮತ್ತಷ್ಟು ಹೆಚ್ಚಿಸಲು ಆ ಶೀರ್ಷಿಕೆಗಳು ಎಂದರೂ ತಪ್ಪಾಗಲಾರದು. 


ಲೇಖಕರದ್ದೇ ಮುನ್ನುಡಿ, ಬೆನ್ನುಡಿಗಳೆರಡು. ಬೆನ್ನುಡಿಯಲ್ಲಿ ಬರೆದಿರುವ ಕಡೆಯ ಎರಡು ಸಾಲುಗಳಂತೆ ಕಾದಂಬರಿ.

ಬೆಟ್ಟ ಬೆಟ್ಟವಲ್ಲ, ನದಿ ನದಿಯಲ್ಲ

ಮುಟ್ಟಿದರೂ ಮುಟ್ಟಲೇ ಇಲ್ಲ.


ಆವರಿಸಿದ್ದು ಗೊತ್ತೇ ಆಗದಂತೆ ಆವರಿಸಿಕೊಳ್ಳುವ ಒಂದೊಳ್ಳೆ ಪುಟ್ಟ ಕಾದಂಬರಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ