ಶುಕ್ರವಾರ, ಏಪ್ರಿಲ್ 10, 2026

ಗಿಳಿಯು ಬಾರದೇ ಇರದು ( ಪುಸ್ತಕ ಯಾನ - 112)


ಪುಸ್ತಕದ ಶೀರ್ಷಿಕೆ : ಗಿಳಿಯು ಬಾರದೇ ಇರದು

ಮೂಲ ಲೇಖಕರು : ಪಿ.ಎಸ್.ಶ್ರೀಧರನ್ ಪಿಳ್ಳ

ಅನುವಾದಕರು : ಮೇರಿ ಜೋಸೆಫ್

ಪ್ರಕಾಶಕರು : ವೀರಲೋಕ ಬುಕ್ಸ್ ಪ್ರೈವೇಟ್ ಲಿಮಿಟೆಡ್

ಪ್ರಥಮ ಮುದ್ರಣ : 2023

ಪುಟಗಳು : 72


'ಗಿಳಿಯು ಬಾರದೇ ಇರದು' ಇದು ಗೋವಾ ರಾಜ್ಯಪಾಲ ಪಿ.ಎಸ್ ಶ್ರೀಧರನ್ ಪಿಳ್ಳ ಅವರ 150ನೇ ಪುಸ್ತಕ 'ತತ್ತ ವರಾತಿರಿಕ್ಕಿಲ್ಲ' ಎಂಬ ಕಥಾ ಸಂಕಲನದ ಮೊದಲ ಕಥೆಯೂ ಹೌದು, ಶೀರ್ಷಿಕೆಯು ಹೌದು. ಅದನ್ನೇ ಕನ್ನಡದಲ್ಲಿ 'ಗಿಳಿಯು ಬಾರದೇ ಇರದು' ಎಂಬ ಹೆಸರಿನಲ್ಲಿ ಮೇರಿ ಜೋಸೆಫ್ ಅವರು ಅನುವಾದಿಸಿದ್ದಾರೆ.


 ಈ ಕಥಾಸಂಕಲನವನ್ನು ಓದಿದ ನಂತರ ನನಗನಿಸಿದ್ದು.. ಅನುಭವದ ಮೂಸೆಯಿಂದ ಅದ್ದಿ ತೆಗೆದ, ನೈಪುಣ್ಯತೆಯಿಂದ ಹೆಣೆದ ಕಥೆಗಳೆಂದು. ಕಥೆ ಹೇಳುವ ಶೈಲಿ ವಿಭಿನ್ನವಾಗಿದೆ. ಅಲ್ಲದೇ, ಇಲ್ಲಿ ಪ್ರಾದೇಶಿಕ ಶಬ್ದಗಳನ್ನು, ಆಚರಣೆಯನ್ನು ಬಳಸಿಕೊಂಡಿರುವುದರಿಂದ ಮಲಯಾಳದ ಕೆಲವು ಪದಗಳು ನಮಗೂ ಪರಿಚಿತವಾಗುತ್ತವೆ. ಇವು ನಮ್ಮ ನೆಲದ ಕಥೆಯೂ ಆಗಬಹುದು. ಕಥೆ ಹೆಣೆದಿರುವ ವಿಶೇಷ ರೀತಿ, ಅಲ್ಲಲ್ಲಿ ಬಳಕೆಯಾಗಿರುವ ಫ್ಯಾಂಟಸಿ, ಮಾಂತ್ರಿಕ ಸ್ಪರ್ಶದಿಂದ ಇಲ್ಲಿನ ಕಥೆಗಳು ಈ ಕಥಾಸಂಕಲನವನ್ನು ಹಸುರಾಗಿಸಿವೆ. ಇಲ್ಲಿರುವುದು ಐದೇ ಕಥೆಗಳಾದರೂ.. ಒಂದು ಅದ್ಭುತ ಕಥಾ ಲೋಕವನ್ನು ದರ್ಶಿಸಿ ಬರುವಂತೆ ಮಾಡುತ್ತವೆ.


ಗಿಳಿಯು ಬಾರದೇ ಇರದು : 

ರಾಜ್ಯಪಾಲರಾಗಿದ್ದ ಲೇಖಕರೇ ಕಥೆಯ ನಾಯಕರಾಗಿ ತಮ್ಮ ಬಾಲ್ಯದ, ಅಜ್ಜಿಯ ಜೊತೆಗಿನ ಬಾಲ್ಯದ ನೆನಪೊಂದನ್ನು ಬೆಸೆಯುತ್ತಾರೆ. ಗಿಳಿ ಬಂದ ರೀತಿಯ ವರ್ಣನೆ ಬಹಳ ಇಷ್ಟವಾಯಿತು. ವಾಸ್ತವವಾಗಿ ಅವರು ಪ್ರವಾಸಕ್ಕೆ ಹೊರಟಾಗ ಬಂದ ಗಿಳಿಯೊಂದು ಅವರು ಹೊರಟ ಬೆನ್ನಲ್ಲೇ, ರಾಜಭವನದಿಂದ ಹಾರಿ ಹೋದ ಪುಟ್ಟ ಘಟನೆಯೊಂದು ಆಧರಿಸಿ ಬರೆದ ಕಥೆಯಾಗಿದೆ.

"ಗಿಳಿ ಇನ್ನೂ ಬರುತ್ತದೆ. ಉದಾಸೀನವಾಗಿರುವಾಗ, ವಿಷಾದದಲ್ಲಿ ಮುಳುಗಿರುವಾಗ, ಸ್ನಿಗ್ಧವಾದ ನೇವರಿಕೆಯೊಂದಿಗೆ ಗಿಳಿ ಬಾರದೇ ಇರದು" ಎನ್ನುವ ಈ ಸಾಲು.. ಗಿಳಿ ಅವರು ಹೊರಟ ಬೆನ್ನಲ್ಲೇ ಹಾರಿ ಹೋಯಿತು ಎನ್ನುವ ನೋವು, ವಿಷಾದಕ್ಕಿಂತಲೂ.. ಮತ್ತೆ ಬಂದೇ ಬರುತ್ತದೆ ಎಂದು ಭರವಸೆ ತುಂಬುವ ರೀತಿ ಕಥೆಗೆ ವಿಭಿನ್ನವಾದ ಮೇರುಗೆ ನೀಡುವುದರೊಂದಿಗೆ ಮಾಂತ್ರಿಕತೆ, ವಾಸ್ತವ ಹಾಗೂ ಭರವಸೆಗಳನ್ನು ಚಿತ್ರಿಸುತ್ತದೆ.


ಸಂಧ್ಯಾಕಾಲ :

ಗಂಡ ಮೊದಲು ಸತ್ತರೆ ಒಳ್ಳೆಯದು ಎಂದು ಹೇಳುವ ಹೆಂಡತಿಯಲ್ಲೋ ಅಥವಾ ಹೆಂಡತಿ ಮೊದಲು ಸತ್ತರೆ ಒಳ್ಳೆಯದು ಎಂದು ಹೇಳುವ ಗಂಡಂದಿರಲ್ಲೋ ಇರುವ ಒಂದು ಕಾಳಜಿಯ ಎಳೆ ಕಂಡಿತು. ಗಂಡನ ಪ್ರೇಯಸಿಯೊಬ್ಬಳ ಹೆಸರನ್ನೇ ತಾನು ಸಾಕಿದ ಮುದ್ದು ಹಸುವೊಂದಕ್ಕಿಟ್ಟು ಅದನ್ನು ಮಗುವಿನಷ್ಟೇ ಜತನ ಮಾಡುತ್ತಿದ್ದ ಅಮ್ಮನಂತಹಾ ಅಂತಃಕರಣದ ಬದುಕಲ್ಲಿ ಗಂಡ ಇಲ್ಲವಾದ ನಂತರದ ಬದುಕಿನ ಚಿತ್ರಣವಿದೆ. ಅಮೆರಿಕಾ ಹಾಗೂ ಕೆನಡಾದಲ್ಲಿರುವ ಮಕ್ಕಳಿಬ್ಬರೂ ಸೇರಿ ಅಮ್ಮನಿಗೆ ಬಂಗಾಳಿ ಕೆಲಸದವರನ್ನು ನೇಮಿಸುತ್ತಾರೆ. ನಂತರ ಆ ಹಸು ತನ್ನಿಂದ ಬೇರೆಯಾಗಿ, ಬಾಳಿ ಬದುಕಿದ್ದ ಮನೆಯಿಂದಲೂ ಬೇರೆಯಾಗಿ ಆಕೆಯ ಸಂಧ್ಯಾಕಾಲ ಹೇಗೆ ಕಳೆಯಿತು ಎಂಬ ಕಥೆಯಿದು. 

'ಮನಸ್ಸಿನಲ್ಲಿ ಸಾವಿಗೀಡಾದವರಿಗೆ ಹಗಲು, ರಾತ್ರಿ ಎಂದೇನಿಲ್ಲವಲ್ಲ" ಎನ್ನುವ ಸಾಲು ನೋವಿನ, ವಿಷಾದದ ಎಳೆಯೊಂದನ್ನು ಮೀಟುತ್ತದೆ.


ಆತ್ಮದ ನೆರಳು :

ಮಿಜೋರಾಂ ರಾಜ್ಯಪಾಲರಾಗಿದ್ದ ಸಮಯದಲ್ಲಿ ರಾಜಭವನದ ತೋಟದ ವಿಶೇಷವಾದ ಮಾವಿನಕಾಯಿ ಕಾಣೆಯಾದರ ಬಗ್ಗೆ ಸೃಜನಶೀಲವಾಗಿ ಬರೆದ ಕಥೆ ಇಲ್ಲಿದೆ. ಈ ಕಥೆಯನ್ನು ಓದಿದಾಗ ಕೃಷ್ಣದೇವರಾಯನ ತೋಟದಲ್ಲಿದ್ದ ಬದನೆಕಾಯಿ ಮತ್ತು ಹೂ ಕಾಣೆಯಾದ ಸಂಧರ್ಭದಲ್ಲಿ ತೆನಾಲಿ ರಾಮ ಹಾಗೂ ಆತನ ಮಗನ ಕಥೆಯೊಂದು ನೆನಪಾಯಿತು. ಇಲ್ಲಿ ವಾಸ್ತವತೆ ಹಾಗೂ ಮಾಂತ್ರಿಕತೆಯ ಛಾಯೆಯ ಜೊತೆಗೆ ಮಕ್ಕಳಿಗೆ ತಿಳಿ ಹೇಳಬೇಕಾದ ರೀತಿಯೂ ಕಂಡಿತು. ಮುಗ್ಧ ಮನಸ್ಸಿನ ಆಸೆಯ ಜೊತೆಗೆ ಅವರಲ್ಲಿ ಬೆಳೆಸಬೇಕಾದ ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯನ್ನು ನೆನಪು ಮಾಡಿತು.


ಹೆಣ್ತನ :

ಹೆಣ್ಣು ಮಗು ಬಾಲಕಿಯಿಂದ ಋತುಮತಿಯಾದಾಗ ಅದೆಷ್ಟು ಬೇಗ ಹೆಣ್ತನವನ್ನು ತುಂಬಿಕೊಂಡು ತಾಯಾಗುತ್ತಾಳೆ..! ಹಾಗೆ ಋತುಮತಿಯಾದ ಆದಿವಾಸಿ ಬಾಲಕಿ ಬೊಮ್ಮಿ ತನ್ನ ಆದಿವಾಸಿ ಸಂಪ್ರದಾಯದಂತೆ ತಾನೊಬ್ಬಳೇ ರಾತ್ರಿಯನ್ನು ಹಸಿರು ಗುಡ್ಲಿನಲ್ಲಿ ಕಳೆಯಬೇಕಾಗಿ ಬಂದಾಗ.. ರಾತ್ರಿಯ ಏಕಾಂತದಲ್ಲಿ ಅವಳ ಆಲೋಚನೆಗಳು ಅವಳ ಗ್ರಹಿಕೆ, ಮಾರಿಯಮ್ಮನ ಹಾಗೂ ಕರಿಂತಂಡನ್ ಆತ್ಮಗಳ ನೋವಿನ ಅನುಭವ.. ಇದೆಲ್ಲದರ ಜೊತೆಗೆ ಪ್ರಕೃತಿಯ ಜೊತೆಗೆ ಆಕೆ ಬೆಸೆದುಕೊಂಡ ಸಂಬಂಧ ಎಲ್ಲವೂ ಚಂದವಾಗಿ ವ್ಯಕ್ತವಾಗಿದೆ. ಹಸಿರು ಗುಡ್ಲುವನ್ನು ಸುಟ್ಟು ಹಾಕಲು ಯುವಕರಿಗೆ ನಿರ್ದೇಶನ ನೀಡುವುದನ್ನು ಅವಳು ಕೇಳಿಸಿಕೊಂಡಾಗ ಅವಳ ನೋವು ಹೇಗಿತ್ತು ಎಂಬುದನ್ನು ಹೇಳುವ ಮಾತು ಹೆಣ್ತನದ ಹಾಗೂ ಪ್ರಕೃತಿಯ ನಡುವಿನ ಸಂಬಂಧದ ಅರಿವು ಮೂಡಿಸುತ್ತದೆ. "ತನ್ನ ಪ್ರೀತಿ ಪಾತ್ರವಾದ ಗರ್ಭಪಾತ್ರವನ್ನು ಛಿದ್ರಗೊಳಿಸುವ ನೋವು ಆಗ ಅವಳಿಗೆ ಭಾಸವಾಯಿತು."


ಮೀನು ಬರುವಾಗ : 

ರಾಜಭವನಕ್ಕೆ ಮೊಮ್ಮಗ ಮೊದಲ ಬಾರಿಗೆ ಬಂದಾಗ ಇದ್ದದ್ದಕ್ಕೂ.. ಆನಂತರ ಬದಲಾದದ್ದಕ್ಕೂ.. ಸ್ಪಷ್ಟ ವ್ಯತ್ಯಾಸದ ಮೂಲಕ ಇಂದಿನ ಯುವ ಪೀಳಿಗೆ ಬದಲಾಗಬೇಕಾದ ರೀತಿಯನ್ನು ಹೇಳುವ, ಸಮರ್ಥ ಬದಲಾವಣೆಯನ್ನು ಗುರುತಿಸುವ ಕಥೆ ಇಲ್ಲಿದೆ. ಮೊಮ್ಮಗನ ವರ್ಚುಯಲ್ ಲೋಕ ಹಾಗೂ ಅಜ್ಜನ ಈ ಕುರಿತ ತಿಳಿವಳಿಕೆಯ ಕೊರತೆಯ ಮೂಲಕ ಹಿರಿಯರಿಗೂ ಅದು ಪರಿಚಿತವಾದ ಬಗೆ, ವರ್ಚುವಲ್ ಲೋಕದ ಮಾಯೆಯಿಂದ ಹೊರಬಂದ ಮೊಮ್ಮಗ ಎರಡೂ ಪೀಳಿಗೆಯ ಸಮರ್ಥ ಚಿತ್ರಣವಿದೆ. 


ಇಲ್ಲಿನ ಕಥೆಗಳಲ್ಲಿ ಒಂದು ಮಾಂತ್ರಿಕತೆ ಇದೆ. ಬಾಲ್ಯದ ನೆನಪುಗಳಿವೆ. ಬದಲಾಗಬೇಕಾದ ರೀತಿಯನ್ನು ನಿರೀಕ್ಷಿಸುತ್ತಾ.. ಬದಲಾದದ್ದನ್ನು ಕಂಡು ಸಂತಸ ಪಡುವ ಸಾರ್ಥಕ ಮನಸ್ಸಿದೆ. ವಯಸ್ಸಿನ ಮಾಗುವಿಕೆಯ ಜೊತೆಗೆ ಕಥೆ ಹೆಣೆಯುವುದರಲ್ಲೂ ಮಾಗಿರುವ ಲೇಖಕರ ಕೌಶಲ್ಯವಿದೆ. ನೋವಿನ ಎಳೆಗಳಷ್ಟೇ ಸಮರ್ಥವಾಗಿ ಸಮಾಧಾನವೂ ಮನಸ್ಸಿಗೆ ತಟ್ಟುತ್ತದೆ. ಈ ಎಲ್ಲಾ ಅನುಭವಗಳನ್ನು ನಿಮ್ಮದಾಗಿಸಿಕೊಳ್ಳಲು ಈ ಅನುವಾದಿತ ಕಥಾಸಂಕಲನವನ್ನೊಮ್ಮೆ ಓದಿ ನೋಡಿ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ