ಶುಕ್ರವಾರ, ಏಪ್ರಿಲ್ 10, 2026

ಶ್ರೀ ಕೃಷ್ಣಮೂರ್ತಿ ಪುರಾಣಿಕರ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀ ಪಾತ್ರಗಳ ವೈಶಿಷ್ಟ್ಯ


ಕಾದಂಬರಿಗಳಲ್ಲಿ ಬರುವ ಸ್ತ್ರೀ ಪಾತ್ರಗಳು ಎಂದಾಕ್ಷಣ ಕೇವಲ ತ್ಯಾಗದ ಮನೋಭಾವವನ್ನು ತೋರುತ್ತಾ ಅಥವಾ ಒಪ್ಪಿಕೊಂಡು ಬಾಳುವ ಅನಿವಾರ್ಯತೆಯನ್ನು ಸೂಚಿಸುತ್ತವೆ ಎಂಬುದರಾಚೆಗೂ ಸ್ತ್ರೀ ಪಾತ್ರಗಳನ್ನು ಕಟ್ಟಿಕೊಟ್ಟ  ಶ್ರೀ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಗಳಲ್ಲಿ ಹೆಚ್ಚಿನ ವಾಸ್ತವತೆ ಕಂಡುಬರುತ್ತದೆ. ಆಗಿನ ಕಾಲಘಟ್ಟಕ್ಕೆ ಮಾದರಿ ಎನ್ನಿಸಬಹುದಾದ ಹಾಗೂ ವಿಭಿನ್ನವಾಗಿರುವ ಸ್ತ್ರೀ ಪಾತ್ರಗಳು ಕೆಲವು ಮಹಿಳೆಯರನ್ನು ಹೀಗಿರುವಂತೆಯೂ ಪ್ರೇರೇಪಿಸುತ್ತವೆ. 


ಒಂದೇ ಸ್ತ್ರೀಯಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಗುಣಗಳಿರುವಂತೆ.. ಎಂದರೆ, ಮೊದಲಿಗೆ ಕೆಟ್ಟವರಾಗಿದ್ದು ಆನಂತರ ಒಳ್ಳೆಯವರಾಗಿ ಕಾಣುವಂತೆ ಅಥವಾ ವೈರುಧ್ಯದ ಮನೋಭಾವದ ಹೆಣ್ಣುಮಕ್ಕಳಲ್ಲಿ ತಾಯ್ತನವೂ ಬಿಂಬಿತವಾಗಿರುವಂತೆ ಕೆಲವು ಪಾತ್ರಗಳು, ಇನ್ನು ಕೆಲವು ಕಾದಂಬರಿಗಳಲ್ಲಿ ಒಂದೇ ಮನೆಯಲ್ಲಿನ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬರಲ್ಲಿ ತ್ಯಾಗದ ಮನೋಭಾವ, ಸಹಿಸಿಕೊಂಡು ಹೋಗುವ ಮನೋಭಾವವೂ.. ಇನ್ನೊಬ್ಬರಲ್ಲಿ ಕಿಚ್ಚು ಹಚ್ಚುವ, ಹೊಟ್ಟೆ ಉರಿಯ, ಅಸೂಯಾಪರ ಮನೋಭಾವವೂ ಇರುವಂತೆ ಅಥವಾ ದಬ್ಬಾಳಿಕೆಯ ಮನೋಭಾವವಿರುವಂತೆಯೂ ಚಿತ್ರಿಸಲಾಗಿದೆ. ಇದರಿಂದ ಎರಡು ಮನೋಭಾವದ ಹೆಣ್ಣು ಮಕ್ಕಳ ಚಿತ್ರಣವೂ ದೊರಕಿದಂತಾಗುತ್ತದೆ. ಹೆಣ್ಣು ಎಂದರೆ ಕೇವಲ ದೇವತೆಯಲ್ಲ ಅಥವಾ ಅವಳು ರಕ್ಕಸಿಯೂ ಅಲ್ಲ.. ಆಕೆಯೂ ಮನುಷ್ಯ ಮಾತ್ರಳು. ಕೋಪ, ತಾಪ, ದ್ವೇಷ, ಅಸೂಯೆಗೆ ಅತೀತಳಲ್ಲ ಎನ್ನುವ ಚಿತ್ರಣವಿದೆ.


"ಕುಲವಧು" ಕಾದಂಬರಿಯಲ್ಲಿ ಬರುವ ಗೋಪಾಲರಾಯರ ಇಬ್ಬರು ಹೆಣ್ಣು ಮಕ್ಕಳಲ್ಲಿ ಹಿರಿಮಗಳ ಸ್ವಭಾವ ದಬ್ಬಾಳಿಕೆಯದ್ದಾದರೆ.. ಇನ್ನೊಬ್ಬಳು ಇನ್ನೂ ಕಿರಿಯಳು. ಅವರಿಬ್ಬರ ತಾಯಿಯದ್ದು ಸೌಮ್ಯ ಹಾಗೂ ಸಾಧುಸ್ವಭಾವ. ಒಂದೇ ಮನೆಯಲ್ಲಿ, ಒಂದೇ ಪರಿಸರದಲ್ಲಿ ಇಷ್ಟು ವ್ಯತಿರಿಕ್ತವಾದ ಸ್ವಭಾವಗಳ ಸ್ತ್ರೀ ಪಾತ್ರಗಳ ಚಿತ್ರಣ ಕಂಡುಬರುತ್ತದೆ.


ಇದೇ ಕಾದಂಬರಿಯ ನಾಯಕಿ ಸೀತಾ ಚಿಕ್ಕಂದಿನಲ್ಲಿಯೇ ಶಾಲೆ ಬಿಟ್ಟು ಮದುವೆಯ ಕಟ್ಟುಪಾಡಿಗೆ ಒಳಗಾಗಬೇಕಾಗುವ ಅನಿವಾರ್ಯತೆ ಕಂಡುಬರುತ್ತದೆ. ವರದಕ್ಷಿಣೆಯ ಕಾರಣದಿಂದ ಆಕೆ ಮತ್ತೆ ತವರು ಸೇರುವಂತಾದಾಗ.. ಆಕೆ ಕುಗ್ಗದೆಯೇ.. ತನ್ನ ಓದನ್ನು ಮುಂದುವರೆಸಿ, ಶಿಕ್ಷಕಿಯಾಗಿ ಹೆಣ್ಣುಮಕ್ಕಳಿಗೆ ಯಾವ ಕಷ್ಟಕ್ಕೂ ಕುಗ್ಗದೆ ಭವಿಷ್ಯವನ್ನು ರೂಪಿಸಿಕೊಳ್ಳುವ ಪರಿಯಿಂದ ಮಾದರಿಯಾಗುತ್ತಾಳೆ. ತನ್ನ ಸಂಪಾದನೆಯನ್ನು ಕೂಡಿಡುತ್ತಾ.. ನಂತರ, ಅದನ್ನು ಬಳಸುವ ರೀತಿಯಲ್ಲಿಯೂ ಆಕೆ ಮಾದರಿಯೇ. ಸೀತಾ ಅವಳ ಮಾವನ ಹಣದ ಅತಿಯಾಸೆಯಿಂದ ಬಳಲುವಂತಾದರೂ.. ಸಂಸಾರಕ್ಕಿಂತಲೂ, ಸಮಾಜಕ್ಕೆ ಹೆಮ್ಮೆಯ ಮಗಳಾಗಿ.. ಶಿಕ್ಷಕಿಯಾಗಿ ನಿಂತು ದೃಢವಾಗುವ ಪಾತ್ರ ಹೆಚ್ಚಿನ ತೂಕವುಳ್ಳದ್ದು ಎನಿಸುತ್ತದೆ. ಹಾಗೆಂದು, ಆಕೆ ಸಂಸಾರವನ್ನು ಕಡೆಗಣಿಸಲೂ ಇಲ್ಲ. ಆಕೆ ಕುಲವಧುವಾಗಿಯೂ ಈ ಕಾದಂಬರಿಯ ಆಶಯವನ್ನು ಪೂರ್ತಿಗೊಳಿಸುತ್ತಾಳೆ. 


"ಸನಾದಿ ಅಪ್ಪಣ್ಣ" ಕಾದಂಬರಿಯ ಪುಷ್ಪಲತಾ ಹನುಮಂತನ ಹೆಂಡತಿಯಾಗಿದವಳು. ಅಪ್ಪಣ್ಣ ತನ್ನ ಮಾವನೆಂಬ ಪರಿಚಯವಿಲ್ಲದೆ.. ತನ್ನ ಗಂಡ ಆತನನ್ನು ಮನೆ ಕೆಲಸದವನೆಂದು ಪರಿಚಯಿಸಿದಾಗ, ಆಕೆ ಅವನನ್ನು ಹಾಗೆ ನಡೆಸಿಕೊಂಡಿರುತ್ತಾಳಾದರೂ.. ಆತನೇ ತನ್ನ ಗಂಡನ ತಂದೆಯೆಂದು ತಿಳಿದು ಬಂದಾಗ, ಆಕೆಯಲ್ಲಿ ಮೂಡುವ ಪರಿವರ್ತನೆ.. ಆಕೆಯ ಗಂಡನಿಗೆ ಹೇಳುವ ಮಾತುಗಳು ಇವೆಲ್ಲವೂ.. ತಿಳಿಯದೇ ಆದ ತಪ್ಪನ್ನು ಮತ್ತೆ ಸರಿಪಡಿಸಿಕೊಳ್ಳುವ ಪರಿಯನ್ನು ತೋರಿಸುತ್ತವೆ. ಅಷ್ಟೇ ಅಲ್ಲದೆ, ಒಬ್ಬಳು ಸೊಸೆಯಾಗಿ ಮಾವನಿಗೆ ನೀಡುವ ಗೌರವವನ್ನಷ್ಟೇ ಅಲ್ಲದೆ, ಮಗಳಂತೆ ಅಪ್ಪನಿಗೆ ತೋರಬೇಕಾದ ಗೌರವವನ್ನು ಎತ್ತಿ ಹಿಡಿಯುತ್ತಾಳೆ. 


"ಹೊಸ ಬಾಳು" ಕಾದಂಬರಿಯಲ್ಲಿ ಓರಗಿತ್ತಿಯರಾದ ತುಂಗಮ್ಮ ಹಾಗೂ ತಾರ ಒಂದೇ ಮನೆಯಲ್ಲಿರುವಾಗ, ತುಂಗಮ್ಮ ತಾರಾಳ ಬಗೆಗೆ ತಾತ್ಸರ ಹೊಂದಿದವಳಂತೆ, ದಬ್ಬಾಳಿಕೆ ನಡೆಸುತ್ತಿರುತ್ತಾಳೆ. ತಾರಾ ಎಲ್ಲವನ್ನು ಸಹಿಸಿಕೊಂಡೇ ಹೋಗುತ್ತಾಳೆ. ಆದರೆ, ತುಂಗಮ್ಮನಲ್ಲಿಯೂ ತಾಯ್ತನದ ಭಾವವಿರುತ್ತದೆ. ಏಕೆಂದರೆ, ತನ್ನ ಮಾವನವರಿಗೆ ಮಾತು ಕೊಟ್ಟಂತೆಯೇ ತನ್ನ ಮೈದುನನಾದ ವಿಶ್ವಾಸನನ್ನು ಮಗನಂತೆ ನೋಡಿಕೊಳ್ಳುತ್ತಿರುತ್ತಾಳೆ. ಆದರೆ, ಆತ ತನ್ನ ನೆಂಟರ ಹುಡುಗಿಯಾದ ಮನೋರಮಾಳನ್ನು ವಿವಾಹವಾಗದೆ.. ತಾರಾಳನ್ನು ವಿವಾಹವಾದ್ದದ್ದೇ ಆಕೆಯ ಧುಸುಮುಸುವಿಗೆ ಕಾರಣವಾಗಿರುತ್ತದೆ. ಹಾಗಾಗಿಯೇ ತಾರಾಳಿಗೆ ಕಷ್ಟವೊಡ್ಡಿ, ಕೋಪವನ್ನು ತೋರಿಸಿಕೊಳ್ಳುತ್ತಿರುತ್ತಾಳೆ. ಆದರೆ, ವಿಶ್ವಾಸನಿಗೆ ಗೋವಿನಪುರವೆಂಬ ದೂರದ ಊರಿನಲ್ಲಿ ಕೆಲಸ ಸಿಕ್ಕು ಹೊರಟು ನಿಂತಾಗ, ಅವರಿಬ್ಬರ ಮೇಲೆ ತೋರುವ ಕಾಳಜಿ ,ಮಮತೆ ಎಲ್ಲವೂ ಸಹಜ ಮಾತೃವಾತ್ಸಲ್ಯದಂತಹದ್ದು. ಅಷ್ಟು ಕರುಗುತ್ತಾಳೆ ಅವಳು.


"ತುಂಬಿದ ಮನೆ" ಕಾದಂಬರಿಯಲ್ಲಿ ಭಾವೂರಾಯರ ಮೊದಲಿಬ್ಬರು ಸೊಸೆಯಂದಿರಾದ ಕಾಶೀಬಾಯಿ ಹಾಗೂ ಕಾಂತಾಬಾಯಿಯವರದ್ದು ಮಾಮೂಲು ಓರಗಿತ್ತಿಯರ ಜಗಳ. ಆದರೆ, ಮೈದುನ ಹಾಗೂ ನಾದಿನಿಯರ ಮೇಲೆ ತೋರುವ ಪ್ರೀತಿಯಂತೂ ಮಾತೃವಾತ್ಸಲ್ಯವೇ ಸರಿ. ಹೆಣ್ಣು ತಾನು ಮನೆಯ ಒಡತಿಯಾದಾಗ ತನಗೇ ಎಲ್ಲರೂ ಗೌರವ ಕೊಡಬೇಕು ಎಂದು ಅಪೇಕ್ಷಿಸುತ್ತಾಳೆ. ಅದು ಸಹಜವೂ ಹೌದು. ಇಂತಹಾ ಅಪೇಕ್ಷೆ ಕಾಶೀಬಾಯಿಯಲ್ಲಿ ಕಂಡು ಬರುತ್ತದೆ. ಅಷ್ಟೇ ಅಲ್ಲದೆ, ಆಕೆಯನ್ನು ಉಪೇಕ್ಷಿಸಿದಾಗ ಆಕೆ ತೆಗೆದುಕೊಳ್ಳುವ ನಿರ್ಧಾರವೆಂದರೆ ಸಂಭ್ರಮಗಳಿಂದೆಲ್ಲಾ ಆಚೆ ಉಳಿಯುವುದು. ಕಾಂತಾಬಾಯಿಯೂ ಮುಂದೊಮ್ಮೆ ತನಗೆ ದುಃಖ ಉಂಟಾದಾಗ ಎಲ್ಲದರಿಂದ ದೂರ ಉಳಿಯುತ್ತಾಳೆ. ಹೆಣ್ಣು ತನಗೆ ನೋವಾದಾಗ ಬಯಸುವ ಏಕಾಂಗಿತನದ ಚಿತ್ರಣ ಇಲ್ಲಿದ್ದರೂ.. ಆ ನೋವನ್ನು ಅನುಭವಿಸುವವಳು ಅವಳೇ. ಏಕೆಂದರೆ, ಕುಟುಂಬದ ಕೆಲವರಿಗೆ ಈ ಕುರಿತ ಅರಿವಿದ್ದರೂ.. ಹೆಚ್ಚಾಗಿ ಯಾರೂ ತಲೆಕೆಡಿಸಿಕೊಳ್ಳಲಾರರು. ಆ ಮನೆಯ ಮಗಳಾದ ಸುಧಾ ವಯಸ್ಸಿನಲ್ಲಿ ಕಿರಿಯವಳಾಗಿದ್ದರೂ.. ಅತ್ತಿಗೆಯರ ವಿಮನಸ್ಕತೆಯನ್ನು ಗಮನಿಸಿ, ತಾನು ವಿವಾಹವಾಗಿ ಹೋಗುವ ಸಂದರ್ಭದಲ್ಲಿ ಮಾರ್ಮಿಕವಾಗಿ ಬುದ್ಧಿ ಹೇಳುತ್ತಾಳೆ ಸಹಾ.


ಹೆಣ್ಣು ಮಕ್ಕಳಿಗೆ ಬುದ್ಧಿ ಹೇಳಲು ಕೇವಲ ವಿದ್ಯೆ ಇರಬೇಕು ಎಂದಿಲ್ಲ. ಕೆಲವೊಮ್ಮೆ ಕಿರಿಯರಾದರೂ.. ಅನುಭವದ ಪಾಠ ಅವರಿಂದ ಈ ರೀತಿಯ ಮಾತುಗಳನ್ನಾಡಿಸುತ್ತದೆ. ಇದರ ಉದಾಹರಣೆಯನ್ನು ಸುಧಾಳ ಮೂಲಕ ತೆರೆದಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಅಣ್ಣ ರಾಜಣ್ಣನ ಜೊತೆ ಮಾತನಾಡುವಾಗಲೂ.. ಸುಧಾಳ ಈ ಗುಣ ತೋರುತ್ತದೆ.


ಕಾಶೀಬಾಯಿ ತನ್ನ ಗಂಡ ಮನೆಯ ಯಜಮಾನನಾದಾಗ ಆತ ವ್ಯವಹಾರದಲ್ಲಿ ಅಷ್ಟು ಬಿಗಿ ಇಲ್ಲದಿದ್ದಾಗಲೂ.. ತಾನು ತೋರುವ ವ್ಯವಹಾರ ನಿಪುಣತೆ, ಹೆಣ್ಣು ಗಂಡಿಗಿಂತಲೂ ವಿದ್ಯಾವಂತೆಯಾದಾಗ ತೋರುವ ಚತುರತೆಯನ್ನು ತೋರುತ್ತದೆ. ಅದು ಹಾಗೆಯೇ ಮುಂದುವರಿದಿದ್ದರೆ ಚೆನ್ನಾಗಿತ್ತೇನೋ.. ಆದರೆ, ದೊಡ್ಡಸ್ತಿಕೆ ತೋರುವ ಅತಿಯಾಸೆಯಿಂದ ಆಕೆ ತನ್ನ ಬೆಲೆಯನ್ನು ಕ್ರಮೇಣ ಕಳೆದುಕೊಳ್ಳುತ್ತಾಳೆ. 


ಈ ಕಾದಂಬರಿಯಲ್ಲಿ ಹೆಣ್ಣು ಮಕ್ಕಳ ಕೃತ್ರಿಮ ಪ್ರೇಮ ಭಾವವು ತೋರುವಂತೆಯೇ.. ಅವರು ಎಷ್ಟೇ ಜಗಳವಾಡಿದರೂ.. ಮತ್ತೆ ಮರುದಿನ ಬೆಳಗ್ಗೆ ಒಂದಾಗಿ ಒಂದೇ ಪಂಕ್ತಿಯಲ್ಲಿ ಅಕ್ಕ-ಪಕ್ಕದಲ್ಲಿ ಕುಳಿತು ಊಟ ಮಾಡುವ ಸಂದರ್ಭವೂ ಕಾಣುತ್ತದೆ. ಕಾಶೀಬಾಯಿ ಹಾಗೂ ಸರಳ ಇಬ್ಬರ ಜೊತೆಗೂ ಚೆನ್ನಾಗಿರುತ್ತಾ ಸಂಚು ಮಾಡುವ ಕಾಂತಾಬಾಯಿ ಕೆಲವೊಮ್ಮೆ ಕೆಟ್ಟವಳಾಗಿ ಕಂಡರೂ.. ಅವಳ ದೃಷ್ಟಿಯಿಂದ ನೋಡಲು ಹೊರಟರೆ, ಸಮರ್ಥನೆಗಳಂತೂ ಕಾಣುತ್ತವೆ. ಈ ಕಾದಂಬರಿಯಲ್ಲಿ ಹೆಣ್ಣು ಹೀಗೆಯೇ ಎಂಬ ಭಾವಗಳಿಲ್ಲ. ಒಂದೊಮ್ಮೆ ಒಳ್ಳೆಯವಳಾಗಿ ಕಂಡರೆ, ಮತ್ತೊಮ್ಮೆ ನೆಗೆಟಿವ್ ಆಗಿ ಗೋಚರವಾಗುತ್ತಾಳೆ. ಹೆಣ್ಣಿನ ಮನಸ್ಸನ್ನು ತಿಳಿಯಲು ಸಾಧ್ಯವಿಲ್ಲ ಎನ್ನುವ ಮಾತು ಇಲ್ಲಿ ನೆನಪಾಗುತ್ತದೆ.


ಸ್ತ್ರೀ ಅದೆಷ್ಟೋ ಭಾವಗಳ ಆಗರ. ಅದೆಷ್ಟೋ ತರಹದ ನಡವಳಿಕೆಗಳು.. ಒಮ್ಮೆ ತಾಯಿಯಾಗಬಲ್ಲಳು, ಒಮ್ಮೆ ಸ್ನೇಹಿತೆಯಾಗಬಲ್ಲಳು, ಕೆರಳಿದರೆ ಕಾಳಿಯಾಗಬಲ್ಲಳು.. ಜಗಳಕ್ಕೂ ಸೈ, ಸ್ನೇಹಕ್ಕೂ ಸೈ. ಮಾತೃ ರೂಪಿಯೂ ಹೌದು, ಮುನಿದರೆ ಮಾರಿಯೂ ಹೌದು. ತನ್ನ ತಪ್ಪಿದ್ದಾಗ ತಿದ್ದಿಕೊಳ್ಳುವ ಮಮತಾಮಯಿಯೂ ಹೌದು. ಮತ್ತೊಬ್ಬರ ತಪ್ಪಿದ್ದಾಗ ತನ್ನ ಕಟು ಮಾತಿನಿಂದ ಶಿಕ್ಷೆಯನ್ನು ಕೊಡುತ್ತಾಳೆ ಅಥವಾ ತನ್ನ ನಡೆಯಿಂದಲೇ ಅವರನ್ನು ಪರಿವರ್ತನೆ ಮಾಡುತ್ತಾಳೆ. ಹೀಗೆ ಹಲವಾರು ರೀತಿಯ ಸ್ತ್ರೀ ಪಾತ್ರಗಳು ಶ್ರೀ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಗಳಲ್ಲಿ ಕಂಡು ಬರುತ್ತವೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ