ಶುಕ್ರವಾರ, ಏಪ್ರಿಲ್ 10, 2026

ದುಂಬಿ ಮುಟ್ಟದ ಹೂವು (ಪುಸ್ತಕ ಯಾನ - 127)


ಪುಸ್ತಕದ ಶೀರ್ಷಿಕೆ : ದುಂಬಿ ಮುಟ್ಟದ ಹೂವು

ಲೇಖಕಿ : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಪೂರ್ಣಿಮಾ ಪ್ರಿಂಟರ್ಸ್

ಮೊದಲ ಮುದ್ರಣ : 1983 

ನಾಲ್ಕನೇ ಮುದ್ರಣ : 2020 ( ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 176

ಬೆಲೆ : 105 ರೂ. 


'ದುಂಬಿ ಮುಟ್ಟದ ಹೂವು' ಕಾದಂಬರಿ ನನಗನ್ನಿಸಿದಂತೆ ದುಂಬಿ ಬೇಕೆಂದ ಹಾಗೆ ಎಲ್ಲಾ ಹೂವುಗಳಿಗೂ ಲಗ್ಗೆ ಇಕ್ಕಲಾರದು. ಇಷ್ಟು ದಿನ ನಾವು ಗಮನಿಸಿದಂತೆ ಅಥವಾ ನಮಗನ್ನಿಸಿದಂತೆ ಕಾಣುವ ಮಾಮೂಲು ನೋಟ ಎಂದರೆ ದುಂಬಿಗೆ ಬೇಕೆಂದ ಹೂವಿಗೆ ಲಗ್ಗೆ ಇಕ್ಕುತ್ತದಲ್ಲದೇ, ಹೂವಿಂದ ಹೂವಿಗೆ ಹಾರುವ ದುಂಬಿಯ ನೋಟವೇ ಕಾಣುವುದು. ದುಂಬಿಗೆ ಒಂದೇ ಹೂವಿನ ಆಸೆ ಇರಲಾರದು ಎಂಬ ಚಿತ್ರಣವೇ ಇರುವಾಗ ಶೀರ್ಷಿಕೆ ವಿಭಿನ್ನವಾಗಿ ಮನಸೆಳೆಯುತ್ತದೆ. ಅಷ್ಟೇ ಅಲ್ಲ.. ಮನಸ್ಸಿನಲ್ಲಿ ಮತ್ತೆ ಕೆಲವು ಪ್ರಶ್ನೆ ಸಹಾ ಮೂಡುತ್ತದೆ. ದುಂಬಿ ಮುಟ್ಟದ ಹೂವಿಗೆ ಆ ಅರ್ಹತೆ ಇರುವುದಿಲ್ಲವೇ ಅಥವಾ ಒಂದು ದುಂಬಿಗೆ ಆ ಆಕರ್ಷಣೆ ಆ ಹೂವಿನಿಂದ ಸಿಗಲಿಲ್ಲವೆಂದ ಮಾತ್ರಕ್ಕೆ ಆ ಹೂವು ಮತ್ತೊಂದು ದುಂಬಿಯಿಂದ ತಿರಸ್ಕೃತವಾಯಿತು ಎಂದೇ ?? ಈ ಕಾದಂಬರಿಯಲ್ಲಿ ದುಂಬಿ ಎಂದು ಭಾವಿಸಬಹುದಾದದ್ದು ರಾಜೇಶನನ್ನು. ಆದರೆ, ಆತನ ಸ್ವಭಾವ ಚಂಚಲವಾಗಿಲ್ಲ. ಇಲ್ಲಿನ ಹೂವುಗಳು ಒಂದೇ ಬಳ್ಳಿಯ ಹೂಗಳಂತೆ. ಒಂದೇ ತಾಯಿಯ ಮಕ್ಕಳಾದ ವಿಜಯ ಹಾಗೂ ಕುಸುಮ. 


ಅಕ್ಕ ಕುಸುಮಳನ್ನು ನೋಡಿ ಹೋಗಿದ್ದ ಗಂಡು ವಧು ಪರೀಕ್ಷೆಯಲ್ಲಿ ತಾನು ವಧುವನ್ನು ಮೆಚ್ಚಿರುವುದಾಗಿ ಶ್ರೀಧರನ ಮೂಲಕ ಆತನ ತಾಯಿ ರತ್ನಮ್ಮನವರಿಗೆ ಬರೆದ ಪತ್ರವನ್ನು ಕಂಡು  ಆಕೆ ಖುಷಿಯಿಂದ ವಧುವಿನ ತಾಯಿ ಸಾವಿತ್ರಮ್ಮನವರಿಗೆ ತಿಳಿಸುತ್ತಾರೆ. ನೋಡಿದ ಮೊದಲನೇ ವರವೇ ಮೆಚ್ಚಿದ ಸಂತಸ ಎಲ್ಲರ ಮನದಲ್ಲೂ.. ತಂಗಿ ವಿಜಯಳಿಗೂ ಈ ಕುರಿತು ಖುಷಿಯೋ ಖುಷಿ. ರತ್ನಮ್ಮನೇ ಈ ಎಲ್ಲದಕ್ಕೂ ಕಾರಣ ಎನ್ನುವ  ಸಾವಿತ್ರಮ್ಮನ ಹೊಗಳಿಕೆಗೆ ರತ್ನಮ್ಮ ಒಪ್ಪದಿದ್ದರೂ ಅದರಲ್ಲಿ ಉತ್ಪ್ರೇಕ್ಷೆ ಏನೂ ಇರಲಿಲ್ಲ. 


ನಾಲ್ಕು ವರ್ಷದ ಕುಸುಮ, ಮೂರು ವರ್ಷದ ವಿಜಯಾಳ ತಂದೆ ಮಕ್ಕಳನ್ನೂ, ಹೆಂಡತಿಯನ್ನೂ ಬಡತನ ಹಾಗೂ ಜೀವನದ ನಡು ನೀರಿನಲ್ಲಿ ಕೈ ಬಿಟ್ಟು ನಡೆದಾಗ ಸಾವಿತ್ರಮ್ಮನವರಿಗೆ ಹೊರಗೆ ಹೋಗಿ ರೂಢಿಯೇ ಇಲ್ಲದಾಗ, ಕಷ್ಟ ಕೋಟಲೆಗಳಲ್ಲಿ ಸಿಲುಕಿದಾಗ ಆಕೆಯ ಬಾಳಿಗೆ ಬೆಳಕಾಗಿದ್ದೇ ರತ್ನಮ್ಮ. ಮನೆಯಿಂದ ಹೊರಗೆ ಬಾರದೆಯೂ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿದ್ದು ರತ್ನಮ್ಮನವರು ನೀಡಿದ ಚರಕಾದ ದೆಸೆಯಿಂದ. ಆಕೆಯ ಆಶ್ರಯದಲ್ಲಿ ಹಾಗೂ ಆಕೆಯ ತಂಗಿ ರಜನಿಯ ಸಹಾಯದಿಂದ ಮಕ್ಕಳನ್ನು ಮುಚ್ಚಟ್ಟೆಯಾಗಿ ಬೆಳೆಸುತ್ತಾ ತಾವೂ ಸ್ವಾವಲಂಬಿಯಾಗಿ ಬೆಳೆದಿದ್ದರು. ಕೇವಲ ಸಾವಿತ್ರಮ್ಮನವರ ಬದುಕಲ್ಲಿ ಮಾತ್ರವಲ್ಲ ಹೀಗೆಯೇ ಎಷ್ಟೋ ಜನರ ಬದುಕಿಗೆ ಬೆಳಕಾಗಿದ್ದವರು ರತ್ನಮ್ಮ. ರತ್ನಮ್ಮವರು ಬಡವರಿಗೆ ಸಹಾಯ ಮಾಡುವುದರಲ್ಲಿ ಮಾತ್ರವಲ್ಲ.. ದೇವರನ್ನು ನೆನಯುವಲ್ಲಿಯೂ ಎತ್ತಿದ ಕೈ. ಆಕೆಯ ದೈವಭಕ್ತಿ ವಿಜಯ, ಕುಸುಮಾರಿಗೆ ಶ್ಲೋಕ ಹೇಳಿಕೊಟ್ಟು ಪ್ರತಿ ನಿತ್ಯದ ಪೂಜೆಗೆ ಅಣಿ ಮಾಡುವುದರಿಂದ ವಾರ ವಾರ ನಡೆಸುವ ಶುಕ್ರವಾರದ ಶ್ರೀ ಲಕ್ಷ್ಮಿ ಪೂಜೆಗೆ ವಾಲಗ ಗೊತ್ತು ಮಾಡುವವರೆಗೂ ಕಾಣುತ್ತದೆ. ದೇವರಿಗೆ ಭಕ್ತಿಯ ಜೊತೆಗೆ ಅರ್ಪಣಾ ಭಾವದಿಂದ ಪೂಜಿಸಿದ ವ್ಯಕ್ತಿಗೆ ಮನೆಯಲ್ಲಿ ಹಾಗೆಯೇ ಸಮೃದ್ಧಿ, ಸೌಭಾಗ್ಯಗಳೂ ವೃದ್ಧಿಯಾಗುತ್ತಿದ್ದವು. ಇಂತಹಾ ರತ್ನಮ್ಮನ ಮಗನ ಪರಿಚಯದಿಂದ ಕೂಡಿ ಬಂದ ವರನೇ ರಾಜೇಶ.


ಕುಸುಮಾ ಹಾಗೂ ವಿಜಯಾ ಇಬ್ಬರೂ ಒಂದೇ ತಾಯಿಯ ಮಕ್ಕಳಾದರೂ ಸ್ವಭಾವದಲ್ಲಿ ವಿಭಿನ್ನ. ದೈವವನ್ನು ಮೆಚ್ಚಿಸುವಂತೆ ಒಳ್ಳೆಯ ವರನಿಗಾಗಿ ಕಾಯುವ ಕುಸುಮಾಳಿಗೂ ಪಾಪಭೀತಿ ಇದ್ದವರಿಗೆ ಪೂಜೆ ಪುನಸ್ಕಾರ ಹೆಚ್ಚು ಎನ್ನುವ ಗೊಂದಲ ವಿಜಯಾ ಇಬ್ಬರೂ ವ್ಯತಿರಿಕ್ತವೇ.. ಮುಂದಿನ ಸಾಂಸಾರಿಕ ಜೀವನಕ್ಕೆ ತುಳಸಿ ಪೂಜೆಯ ಮೊರೆ ಹೊಕ್ಕ ಕುಸುಮಾ ಹಾಗೂ ದೈವಭಕ್ತಿಯ ಗೊಡವೆ ಇಲ್ಲದೇ ನನಗೆ ಸಿಗುವ ಉದ್ಯೋಗಕ್ಕೆ ಶ್ರದ್ಧೆಯ ದುಡಿಮೆ ಮಾಡುತ್ತಾ.. ತಾಯಿಗೆ ಒಳ್ಳೆಯ ಮಗಳಾಗಿ, ಸತ್ಪ್ರಜೆಯಾಗುವ ಕನಸು ಕಾಣುವ ವಿಜಯಾ ಇಬ್ಬರಿಗೂ ಬದುಕು ಬೇರೆಯದ್ದೇ ಬದುಕು ನೀಡಿದರೆ..??


ಅಸಲಿಗೆ ರಾಜೇಶನ ನಿರೀಕ್ಷೆಯಲ್ಲಿ ಇದ್ದು ಒಪ್ಪಿದ್ದ ಹುಡುಗಿ ಕುಸುಮಾ ಎಂದು ಮನೆಯವರೆಲ್ಲಾ ಭಾವಿಸಿದರೆ ಆತ ನಿಜಕ್ಕೂ ಒಪ್ಪಿದ್ದು ವಿಜಯಾಳನ್ನು.


ಮದುವೆಯ ವಿಚಾರದಲ್ಲಿ ರಾಜೇಶನ ನಿರೀಕ್ಷೆ ಏನಿತ್ತು ? ಹೀಗೆ ವಧುವಿನ ಬದಲೀ ವಿಚಾರಕ್ಕೆ ಅದರಲ್ಲೂ ಮುಖ್ಯವಾಗಿ ಅಕ್ಕ - ತಂಗಿಯರು ಒಪ್ಪಿಕೊಂಡರೇ ? ವಿಜಯಾಳ ಗೆಳತಿ ರಂಜನಿ ಕಡೆಯಿಂದ ಬಂದಿದ್ದ ಸ್ಪುರದ್ರೂಪಿ ಹಾಗೂ ಶ್ರೀಮಂತ ಹುಡುಗನನ್ನೇ ನಿರಾಕರಿಸಿದ್ದ ವಿಜಯಾ , ತಾಯಿ ಎಷ್ಟೆಲ್ಲಾ ಹೇಳಿದರೂ ಒಪ್ಪದ ವಿಜಯಾ ಮದುವೆಗೆ ಒಪ್ಪಿದಳೇ..?? ಇಲ್ಲಿ ದುಂಬಿ ಮುಟ್ಟದ ಹೂ ಯಾರಾದರು ? ಅವರ ಮುಂದಿನ ಬದುಕು ಏನಾಗಿರಬಹುದು ? ಎಲ್ಲಕ್ಕೂ ಉತ್ತರ ತಿಳಿಯಲು ಓದಿ "ದುಂಬಿ ಮುಟ್ಟದ ಹೂವು".


ಈ ಕಾದಂಬರಿ ಮುಗಿಸಿದ ನಂತರ ನನಗನ್ನಿಸಿದ್ದು ಈಗಲೂ ಪ್ರಸ್ತುತ ಸಮಾಜದಲ್ಲಿ ನಡೆಯುವ ಸಮಸ್ಯೆಯನ್ನೇ ಕಂಡಂತಾಯಿತು. ಎಷ್ಟೋ ಕಡೆ ವರನನ್ನು ಮೆಚ್ಚುವ ಬದಲು ಆತನ ಸಹೋದರ ಅಥವಾ ಗೆಳೆಯನನ್ನೋ ಅಥವಾ ವಧುವಾಗಿ ನೋಡಲು ಬಂದ ಹುಡುಗಿಯ ಬದಲಾಗಿ ಆಕೆಯ ಸಹೋದರಿ ಅಥವಾ ಸ್ನೇಹಿತೆಯನ್ನೋ ಒಪ್ಪಿದ ಉದಾಹರಣೆಗಳೂ ಇಲ್ಲದಿಲ್ಲ. ಆದರೆ, ಒಬ್ಬರು ಒಪ್ಪದ ಮಾತ್ರಕ್ಕೆ ಅವರ ಆ ಬದುಕು ಅಲ್ಲಿಗೇ ನಿಲ್ಲುತ್ತದೆಯೇ ಅಥವಾ ಮತ್ತೊಬ್ಬರು ಒಪ್ಪಿದ ಮಾತ್ರಕ್ಕೆ ವರ/ವಧುವಿನ ಬದುಕು ಸ್ವಂತ ನಿರೀಕ್ಷೆಗಳನ್ನು ಬಿಟ್ಟು ಬದುಕಬೇಕೇ ? ಅಥವಾ ಬದುಕಿನೊಡನೆ ರಾಜಿಯಾದವರೆಲ್ಲರಿಗೂ ಸುಂದರವಾದ ವೈವಾಹಿಕ ಬದುಕು ದೊರೆಯುತ್ತದೆಯೇ..?? ಅಥವಾ ತಾನು ಒಬ್ಬ ಗಂಡು ಅಥವಾ ಒಂದು ಹೆಣ್ಣಿನಿಂದ ತಿರಸ್ಕೃತವಾದ ಮಾತ್ರಕ್ಕೆ ಅದರಲ್ಲೂ ತಾನು ಪ್ರೀತಿಸಿದವರಿಂದ ತಿರಸ್ಕೃತವಾದ ಮಾತ್ರಕ್ಕೆ ಬದುಕೇ ಮುಗಿಯುತ್ತದೆಯೇ ? ಅಥವಾ ಬದುಕಿನ ಗತಿ ಅಷ್ಟು ಕ್ಷಿಪ್ರವಾಗಿ ಬೇರೆಡೆ ತಿರುಗುತ್ತದೆಯೇ ? ಒಂದು ಸುಂದರ ದಾಂಪತ್ಯ ಹೇಗೆ ಇಬ್ಬರ ಮನಸ್ಸುಗಳನ್ನು ಒಂದು ಮಾಡುತ್ತದೆಯೋ ಹಾಗೆಯೇ ಒಂದು ಭಗ್ನ ಪ್ರೀತಿ ಸಾಧನೆಯತ್ತ ತಿರುಗುವಂತೆ ಮಾಡಬಲ್ಲದು. ಅದೆಲ್ಲವೂ ಹೆಣ್ಣಿನ ಮನಸ್ಸಿನ ಮೇಲೆ ಅವಲಂಬಿತ ಎಂಬುದೂ ಸುಳ್ಳಾಗಲಾರದು. ಅಲ್ಲವೇ ?


'ದುಂಬಿ ಮುಟ್ಟದ ಹೂವು' ಅರಳುವುದು ಅಥವಾ ಮುದುಡುವುದು ಎರಡೂ ಹೂವಿನ ಮೇಲೆಯೇ ಅವಲಂಬಿತವಾಗುವುದಲ್ಲವೇ..?? ಎಂಬ ಆಲೋಚನೆಗೆ ಹಚ್ಚಿದ ಕಾದಂಬರಿ ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ