ಶುಕ್ರವಾರ, ಏಪ್ರಿಲ್ 10, 2026

ಸಿಗೀರಿಯ (ಪುಸ್ತಕ ಯಾನ - 118)


ಪುಸ್ತಕದ ಶೀರ್ಷಿಕೆ : ಸಿಗೀರಿಯ

ಲೇಖಕರು : ಡಾ. ಕೆ ಎನ್ ಗಣೇಶಯ್ಯ

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2011

ನಾಲ್ಕನೇ ಮುದ್ರಣ : 2020 ( ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 104

ಬೆಲೆ : 70 ರೂ.


"ಸಿಗೀರಿಯ" ಎಂಬ ವಿಭಿನ್ನ ಶೀರ್ಷಿಕೆಯಿಂದ ಮನಸೆಳೆಯುವ ಈ ಪುಸ್ತಕದಲ್ಲಿ ಮೂರು ಆಸಕ್ತಿಕರ ನೀಳ್ಗತೆಗಳಿವೆ. ಮೂರೇ ಮೂರು ಎಂದು ಮೂಗು ಮುರಿಯದಿರಿ. ಏಕೆಂದರೆ, ಇವುಗಳನ್ನು ಓದಿ ಅರಗಿಸಿಕೊಳ್ಳಲು ಮೂರು ದಿನಗಳೇ ಬೇಕು ಎಂದರೂ ಅದು ಅತಿಶಯೋಕ್ತಿಯಾಗದು.


ಸಿಗೀರಿಯ, ಹೊನ್ನಹುಟ್ಟು, ಮಮಕಾರದ ಚರಮರಾಗ ಎಂಬ ಮೂರು ನೀಳ್ಗತೆಗಳು ಒಂದಕ್ಕಿಂತ ಒಂದು ಆಸಕ್ತಿದಾಯಕವಾಗಿವೆ.


ಸಿಗೀರಿಯ :

"ಸಿಗೀರಿಯ" ಎಂಬುದು ಪ್ರಪಂಚದ ಪ್ರಮುಖ " ಪರಂಪರೆಯ ತಾಣ"ಗಳಲ್ಲಿ ಒಂದು ಎಂದು ಗುರುತಿಸಲಾಗುವ ಶ್ರೀಲಂಕಾದ ಇತಿಹಾಸದ ಒಂದು ಅಪೂರ್ವ ಘಟ್ಟದ ಪಳೆಯುಳಿಕೆ. ಇದನ್ನು "ಸಿಂಹಗಿರಿ" ಎಂದು ಸಹಾ ಕರೆಯುತ್ತಾರೆ. ಕೆಲವು ಚಾರಿತ್ರಿಕ ಸ್ಥಳಗಳ ಹಾಗೂ ಅದರ ಚರಿತ್ರೆಯಲ್ಲಿ ಕಂಡೂ ಕಾಣದಂತಹಾ ಕೆಲವು ಸತ್ಯಗಳು ಅಡಗಿರುತ್ತವೆ. ಅಂತಹಾ ಅಪರಿಚಿತ ವಿವರಗಳನ್ನು, ಪರಿಚಿತ ಚರಿತ್ರೆಗೆ ಬೆರೆಸಿದಾಗ ಅಂತಹಾ ಕಾಣದ ಚುಕ್ಕಿಗಳ ನಡುವಿನ ಗೆರೆ ಸಿಗುತ್ತದೆ. ಸುಮಾರು 1500 ವರ್ಷಗಳ ಹಿಂದಿನ ಚರಿತ್ರೆಯಲ್ಲಿಯೇ ಈಗಲೂ ಪ್ರಸ್ತುತ ಎನ್ನಿಸುವ ತಮಿಳು ಹಾಗೂ ಶ್ರೀಲಂಕಾ ಜನರ ದ್ವೇಷದ ಕಾರಣದ ಮೂಲ ಸಿಗುತ್ತದೆ. ನಿಕಟವಾಗಿದ್ದ ಭಾರತ ಮತ್ತು ಶ್ರೀಲಂಕಾದ ನಡುವಿನ ಬಿರುಕಿನ ಹಿಂದಿನ ರಾಜವಂಶದ ಕಥೆ ಸಿಗುತ್ತದೆ. ಇತಿಹಾಸದಲ್ಲಿ ಕ್ರೂರಿ ಎಂದು ಚಿತ್ರಿತವಾಗಿರುವ ರಾಜ "ಕಸ್ಯಪ"ನ ದುರಂತ ಕಥೆಯೊಂದು ಕಣ್ಮುಂದೆ ಬಂದಂತಾಗುತ್ತದೆ. ಮಾನವೀಯತೆಯೇ ಮುಳುವಾದ ಕಥನ ಇಲ್ಲಿದೆ. 


ಹೊನ್ನ ಹುಟ್ಟು :

"ಹೊನ್ನ ಹುಟ್ಟ"  ಚಿನ್ನದ ಜೊತೆಗೆ ಬೆಸುಗೆ ಹಾಕಿಕೊಂಡ ಕಥೆ ಎನ್ನಿಸಿದರೂ ಕೆ.ಜಿ.ಎಫ್ ಕುರಿತ ಉಲ್ಲೇಖಗಳು ದೊರೆತರೂ ಮಾನವೀಯತೆಯ ಹಿಂದಿನ ಕಾಣದ ಕಥೆಯೊಂದಿದೆ. ಇದು ನಮ್ಮ-ಸುತ್ತಮುತ್ತಲಿನ ಪರಿಸರದ ಕಥೆಯಂತಾಗಿ ಬಿಡುತ್ತದೆ. ಮೂಲವನ್ನು ಹುಡುಕಿಕೊಂಡು ಬಂದಾಗ ಗೋಚರವಾಗುವ ವಿಚಾರಗಳು ಎರಡನೇ ಮಹಾಯುದ್ಧದ ಸಮಯದಲ್ಲಿ ಬೀಡು ಬಿಟ್ಟಿದ್ದ ಮಿಲಿಟರಿ ಕ್ಯಾಂಪ್ ಗೆ ಹಾಲು ಹಾಗೂ ತುಪ್ಪ ಮಾರಿದ ಹಣದಿಂದ ಬಂದ ಹಣದಿಂದ ಆ ಅಜ್ಜಿ ಕಟ್ಟಿಸಿದ ಕೆರೆ ಹಾಗೂ ಆ ಊರಿನಲ್ಲಿದ್ದ ಒಬ್ಬ ಬ್ರಿಟಿಷ್ ಅಧಿಕಾರಿಯ ಸಮಾಧಿಯ ಜೊತೆಗೆ ಒಂದು ಅಗೋಚರವಾಗುವ ಸಂಬಂಧ ಹೊಂದಿರುತ್ತದೆ. ಅದೆಲ್ಲವನ್ನೂ ಜೋಡಿಸುವ ಬಿಂದುವಾಗುವ ಹೊನ್ನಿನ ಮೂಲ ಹುಟ್ಟಿದುದರ ಕಥೆ ಇದು. 


ಮಮಕಾರದ ಚರಮರಾಗ :

"ಮಮಕಾರದ ಚರಮರಾಗ" ಒಂದು Biological Warfare ನ ಜೀವಂತ ಸಾಕ್ಷ್ಯದಂತೆ ಭಾಸವಾಗುತ್ತದೆ. ಮಮಕಾರವನ್ನೇ ಮರೆತ ಮನುಷ್ಯನನ್ನು ಅಳಿವಾಗುವಂತೆ ಮಾಡುವ ಒಂದು ಸಂಶೋಧನೆಯ ಪರಿಣಾಮ ಇಡೀ ಹಳ್ಳಿಯನ್ನೇ ನಾಮಾವಶೇಷ ಮಾಡಿಬಿಡುತ್ತದೆ. ಇಡೀ ಹಳ್ಳಿಯ ಗತದ ನಾಶಕ್ಕೆ ಸಾಕ್ಷಿಯಾದ ಘಟನೆಗಳು ತೆರೆಮರೆಯಲ್ಲಿಯೇ ಉಳಿದು ಹೋಗುವುದು ವಿಪರ್ಯಾಸ. ಜೀವ ವಿಕಾಸವಾದದ ಹಲವು ಅದ್ಭುತ ಆವಿಷ್ಕಾರಗಳನ್ನು ಕತೆಗಳ ಮೂಲಕ ಹೊರತರುವ ಕಲೆ ಲೇಖಕರಿಗೆ ಸಿದ್ಧಿಸಿದೆ. ಈ ಕಥೆಗೆ ಪೂರಕವಲ್ಲದಿದ್ದರೂ ರೀಹಮ್ ಎಂಬ ಸಸ್ಯದ ಕುರಿತ ಅದ್ಭುತ ವಿಚಾರಗಳನ್ನು ಸಹಾ ತಿಳಿಸಿದ್ದಾರೆ.


ಈ ಎಲ್ಲಾ ನಿಗೂಢ ಹಾಗೂ ಕಣ್ಮರೆಯಾಗಿರುವ ವಿಚಾರಗಳನ್ನು ತಿಳಿಯಲು 'ಸಿಗೀರಿಯ'ವನ್ನು ಓದಿ ನೋಡಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ