ಶುಕ್ರವಾರ, ಏಪ್ರಿಲ್ 10, 2026

ತೇಜಸ್ವಿಯವರ ತಬರನ ಕಥೆ


ಪೂಚಂತೇ ಎಂದೇ ಖ್ಯಾತರಾದ ಪೂರ್ಣಚಂದ್ರ ತೇಜಸ್ವಿಯವರು "ಹಾಗೆ ಬದುಕಿ, ಹೀಗೆ ಬದುಕಿ" ಎಂದಿಗೂ ಹೇಳದೆ "ಬದುಕನ್ನು ಬದುಕುವುದು ಹೀಗೆ" ಎಂದು ತೋರಿಸಿಕೊಟ್ಟವರು. ಬರೀ ಬರಹದಿಂದ ಅಷ್ಟೇ ಅಲ್ಲದ ಪರಿಸರ ಕಾಳಜಿ, ವ್ಯಕ್ತಿತ್ವ, ಛಾಯಾಗ್ರಹಣ, ಕಾಡಿನ ಬದುಕು, ಹೋರಾಟ ಇವೆಲ್ಲದರಿಂದಲೂ ಎಲ್ಲರಲ್ಲೂ ಸ್ಫೂರ್ತಿ ಮೂಡಿಸಿದ ಅದ್ಭುತ ಶಕ್ತಿ. ಅವರ ಆಸಕ್ತಿಯಲ್ಲದ ಕ್ಷೇತ್ರ ಯಾವುದಾದರೂ ಇದೆಯಾ ಎಂದು ಹುಡುಕಬೇಕಷ್ಟೇ..


ಕೆಲವರು ಬದುಕಿದ್ದಾಗ ಜನರಿಗೆ ಅಷ್ಟು ಹತ್ತಿರವಾಗಲಾರರು. ಆದರೆ, ಅವರ ವಿಚಾರಧಾರೆಗಳಿಂದ ಜನರಿಗೆ ಹತ್ತಿರವಾಗುತ್ತಾರೆ. ತೇಜಸ್ವಿಯವರು ಈ ಗುಂಪಿಗೆ ಸೇರಿದವರು. ತೇಜಸ್ವಿಯವರನ್ನು, ಅವರ ವಿಚಾರಗಳನ್ನು ಇಷ್ಟು ಹೊಗಳುತ್ತಿರುವ ನಾವು ಅವರಿದ್ದಾಗ ಇದನ್ನೆಲ್ಲಾ ಹೇಳಿದ್ದರೆ ಬೈಯ್ದು ಆಚೆಗಟ್ಟುತ್ತಿದ್ದರು. ಹೀಗೆ ಬೈಯ್ದು ಆಚೆಗಟ್ಟಿಸಿಕೊಂಡಿರುವವರೂ ಇಲ್ಲದಿಲ್ಲ. ಅವರ ಸಿಟ್ಟಿನ ವಿಚಾರವನ್ನು ಪಾಕಕ್ರಾಂತಿ ಪುಸ್ತಕದಲ್ಲಿ ಅವರೇ ಬಿಚ್ಚಿಟ್ಟಿದ್ದಾರೆ. ಅವರು ಬರಹಗಾರರೆನ್ನುವ ಕಾರಣಕ್ಕೆ ಯಾರೋ ಅಡ್ಡಗಟ್ಟಿ ಅವರ ಮಗುವಿಗೆ ಹೆಸರು ಸೂಚಿಸಲು ಹೇಳುತ್ತಾರೆ. ಆದರೆ, ಹಾಗೆ ಸೂಚಿಸಿದ ಹೆಸರನ್ನು ಅವರ ಮಗುವಿಗೆ ಇಡುತ್ತಿದ್ದದ್ದೂ ಅನುಮಾನವಿತ್ತು. ಏಕೆಂದರೆ, ಮಗುವಿನ ಹುಟ್ಟಿದ ದಿನ, ಗಳಿಗೆ ನೋಡಿ ಜಾತಕದನುಸಾರ ಬೇಕಿರುತ್ತದಲ್ಲ. ತೇಜಸ್ವಿಯವರನ್ನು ಸಂಪೂರ್ಣವಾಗಿ ಅರಿಯದವರು ಅವರನ್ನೂ ಪೇಚಿಗೆ ಸಿಲುಕಿಸಿ, ತಾವೂ ಪೇಚಿಗೆ ಸಿಲುಕಿದ ಪ್ರಸಂಗಗಳೂ ಇಲ್ಲದಿಲ್ಲ. 


 "ಓದುಗರನ್ನು ಗೆಲ್ಲಬೇಕು,ಪ್ರಶಸ್ತಿಗಳನ್ನಲ್ಲ" ಎಂಬ ಧ್ಯೇಯಕ್ಕೆ ನಿಷ್ಠರಾಗಿ ಬರೆದ ತೇಜಸ್ವಿಯವರು ತಮ್ಮ ಬರಹಗಳಿಂದ ಕೋಟ್ಯಾಂತರ ಓದುಗರನ್ನು ಗೆದ್ದಿದ್ದಾರೆ, ಗೆಲ್ಲುತ್ತಲೂ ಇದ್ದಾರೆ. ಇವರ ಬರಹಗಳಲ್ಲಿ  ಅದ್ಭುತ ಕಲಾಸೃಷ್ಠಿ ಇದೆ, ಜೀವನದೃಷ್ಟಿ ಇದೆ, ತತ್ವ ಚಿಂತನೆಗಳಿವೆ. ತಮ್ಮದೇ ಬದುಕಿನ ಅಪೂರ್ವ ವ್ಯಾಖ್ಯಾನವಿದೆ, ದೂರದೃಷ್ಟಿತ್ವವಿದೆ. ಒಮ್ಮೆ ತೇಜಸ್ವಿಯವರ ಪುಸ್ತಕಗಳನ್ನು ಓದಲು ಶುರು ಮಾಡಿದರೆ, ಓದಿಸಿಕೊಂಡು ಹೋಗುವ ಓದಿನ ಓಘದ ಮಧ್ಯೆ ಓದುಗ ಕಳೆದು ಹೋಗುತ್ತಿದ್ದಾನೆ. "ಮುಖ್ಯ ವಿಚಾರವನ್ನು ಬಿಟ್ಟು ಅಡ್ಡದಾರಿ ಹಿಡಿಯಬೇಡಿ" ಎಂದು ಜನತೆಗೆ ಸಂದೇಶ ನೀಡುತ್ತಾ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯಿಂದ ದೂರವಿದ್ದರೂ ತಮ್ಮ ಬರವಣಿಗೆಯ ಮೂಲಕ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.


             ನಮ್ಮ ಸುತ್ತ-ಮುತ್ತಲಿನ ಜನರೇ ತಮ್ಮ ಜೀವನವನ್ನು ತೋರಿಸುವಂತೆ ತೇಜಸ್ವಿಯವರ ಕಥಾ ಪಾತ್ರಗಳು ಭಾಸವಾಗುತ್ತವೆ. ಇಂತಹ ಒಂದು ಪಾತ್ರವೇ ತಬರಸೆಟ್ಟಿ. ತಬರನ ಕಥೆಯಲ್ಲಿ ಬರುವ ತಬರ ಇಂದಿನ ಪರಿಸ್ಥಿತಿಗೂ ಹಿಡಿದ ಕೈಗನ್ನಡಿಯಾಗಿದ್ದಾನೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿಯೂ ಸೇವೆ ಸಲ್ಲಿಸಿದ್ದ ತಬರ  ಸ್ವಾತಂತ್ರ್ಯಾ ನಂತರ ಅನೇಕ ಕಡೆ ವರ್ಗಾವಣೆಯ ಕಷ್ಟಕ್ಕೆ ಸಿಲುಕಿ ಪಡುಗೆರೆಯ ಮುನಿಸಿಪಾಲಿಟಿ ನೌಕರನಾಗುವ ಹೊತ್ತಿಗೆ ನಿವೃತ್ತಿಯ ವಯಸ್ಸಿಗೆ ಬಂದಿದ್ದ. ತಬರನ ಮನಸ್ಸಿನ ಆತಂಕಗಳು ಉನ್ಮಾದ ಅಥವಾ ಅಸಂಬದ್ಧವಾಗಿರದೆ ಪಡುಗೆರೆಯ ಆಡಳಿತ ವೈಖರಿಯಿಂದ ಉದ್ಭವವಾದುದಾಗಿತ್ತು. ಒಂದೊಮ್ಮೆ ತಬರ ಬರೆದ ರಸೀತಿಗೆ ಇನ್ನೂ ವಸೂಲಾಗದೆ ಅವನ ಸಂಬಳಕ್ಕೆ ಕತ್ತರಿ ಬೀಳುವ ಪರಿಸ್ಥಿತಿಯಲ್ಲಿ ಪಡಿಪಾಟಲು ಪಡುತ್ತಿರುವಾಗಲೇ, "ದುರ್ಭಿಕ್ಷದಲ್ಲಿ ಅಧಿಕ ಮಾಸ" ಎಂಬಂತೆ ಅವನ ಹೆಂಡತಿಗೆ ಮಧುಮೇಹ ಆವರಿಸಿತ್ತು. ಈ ಮಧುಮೇಹದ ಚಿಕಿತ್ಸೆಗಾಗಿ ಹಣ ಹೊಂದಿಸಲು ತಬರ ಪಡಿಪಾಟಲು ಪಡುತ್ತಿದ್ದಾಗ, ಯಾರೋ ಹೇಳಿದಂತೆ ಫ್ರಾವಿಡೆಂಟ್ ಫಂಡನ್ನು ಪಡೆಯಲು ಕಛೇರಿಯಿಂದ,ಕಛೇರಿಗೆ ತಿರುಗಿ ಸಂಬಳವನ್ನು ಪಡೆದುಕೊಂಡನೇ..?? ಗ್ಯಾಂಗ್ರೀನ್ ಆದ ಹೆಂಡತಿಯನ್ನೂ ಉಳಿಸಿಕೊಂಡನೇ..??. ತನ್ನ ಪೆನ್ಶನ್ ಹಣವನ್ನು ಪಡೆದನೇ..?? ತಬರ ಸ್ವಾತಂತ್ರ್ಯ ದಿನಾಚರಣೆಯ ಬೆಳ್ಳಿಹಬ್ಬದ ಆಚರಣೆಯಂದೇ ಏನಾದ ?? ದುರಂತ ನಾಯಕನಾದನೇ..?? ಅಥವಾ ವ್ಯವಸ್ಥೆಗೆ ಒಗ್ಗಿ ಹೋದನೇ..?? ಅಥವಾ ಬದಲಾವಣೆ ತಂದನೇ..??


ಎಲ್ಲೋ ಕೆಲವರಿಗೆ ಮಾತ್ರ ಅವನನ್ನು ಕಂಡಾಗ ನಮ್ಮ ಭೀಕರ ವ್ಯವಸ್ಥೆಯ ವಿರಾಡ್ರೂಪ ಮಿಂಚಬಹುದು. ಯಾವುದೋ ಅರಿಯದ ಭೀತಿಯಲ್ಲಿ ಕ್ಷಣಕಾಲ ಕಂಪಿಸಬಹುದು.


ಇಂದು ನಾವೂ ಸಹ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡು ಒದ್ದಾಡುತ್ತಿದ್ದೇವೆ. ತೇಜಸ್ವಿಯವರು ಅಂದಿನ ದಿನಗಳಲ್ಲಿಯೇ ಬಿಚ್ಚಿಟ್ಟಿರುವ ಈ ಲಂಚಾವತಾರಿ ಸಮಸ್ಯೆಗೆ ಇಂದಿನ ಜನಾಂಗದಲ್ಲಿಯಾದರೂ ಪರಿಹಾರ ನೀಡಬೇಕಾಗಿದೆ. ಇಂತಹ ದಿನಗಳಲ್ಲಿ ಪ್ರಜಾಕಾರಣ, ಪ್ರಜಾಕೀಯ ಪರಿಹಾರವನ್ನು ನೀಡಲು ಹೊರಟಿರುವ ಸಲಹೆಗೆ ಕೈ ಜೋಡಿಸಿದರೆ ಅಡ್ಡದಾರಿಯನ್ನು ಹಿಡಿಯದೆ, ರಾಜಮಾರ್ಗದಲ್ಲಿಯೇ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ. ನಮ್ಮ ಆತ್ಮಶಕ್ತಿಯನ್ನು ಹೆಚ್ಚಿಸಿಕೊಂಡು ಈ ನಿಟ್ಟಿನಲ್ಲಿ ದುಡಿದರೆ ತಬರನ ಕಥೆಯ ಅಂತ್ಯವನ್ನು ಬದಲಾಯಿಸಿ ತೇಜಸ್ವಿಯವರ ಅಚ್ಚಳಿಯದ ತೇಜಸ್ಸನ್ನು ಕಂಡುಕೊಳ್ಳಬಹುದಾಗಿದೆ.


ತೇಜಸ್ವಿಯವರ ಈ ತಬರನ ಕಥೆ ಚಲನಚಿತ್ರವೂ ಆಗಿದೆ. 1987 ರಲ್ಲಿ ಗಿರೀಶ್ ಕಾಸರವಳ್ಳಿಯವರು ಇದನ್ನು ನಿರ್ದೇಶಿಸಿದ್ದಾರೆ. ಚಲನಚಿತ್ರ ಇತಿಹಾಸಕಾರ ಎಸ್. ಥಿಯೋಡರ್ ಬಾಸ್ಕರನ್ ಅವರು Rediff.com ನ ಸಾರ್ವಕಾಲಿಕ ಹತ್ತು ಅತ್ಯುತ್ತಮ ಭಾರತೀಯ ಚಲನಚಿತ್ರಗಳಲ್ಲಿ ತಬರನ ಕಥೆಯನ್ನು ಆಯ್ಕೆ ಮಾಡಿದ್ದಾರೆ ಕೂಡಾ. ಇದರಲ್ಲಿ ನಟಿಸಿರುವ ಚಾರುಹಾಸನ್ (ಕಮಲ್ ಹಾಸನ್ ಅವರ ಹಿರಿಯ ಸಹೋದರ ಹಾಗೂ ನಟಿ ಸುಹಾಸಿನಿಯವರ ತಂದೆ) ಅವರಿಗೆ ಇದಕ್ಕಾಗಿ 1987 ರಲ್ಲಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು  ಕರ್ನಾಟಕ ರಾಜ್ಯ ಚಲನಚಿತ್ರ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. 


ಆದರೆ ತಬರನ ಕಥೆ ಈಗಲೂ ಕೇವಲ ಚಲನಚಿತ್ರವಾಗಿಯಲ್ಲದೆ.. ಜನರ ಮನಸ್ಸಿನಲ್ಲಿ ಹೇಗೆ ಜೀವಂತವಾಗಿ ಉಳಿದಿದೆಯೆಂದರೆ.. ಮೂಲಕಥೆಯಲ್ಲಿ ತಬರ ತನ್ನ ಪೆನ್ಷನ್ ಹಣಕ್ಕಾಗಿ ಸರ್ಕಾರಿ ಕಛೇರಿಗಳನ್ನು ಸುತ್ತುತ್ತಾ ನಮ್ಮ ವ್ಯವಸ್ಥೆಯ ಕ್ರೌರ್ಯದಿಂದ ನಲುಗಿದರೆ.. ಮೂಡಿಗೆರೆ-ಸಕಲೇಶಪುರ ತಾಲ್ಲೂಕುಗಳಲ್ಲಿ ಯಾವುದೇ ಕೆಲಸಕ್ಕಾಗಿ ಪ್ರತಿನಿತ್ಯ ಸರ್ಕಾರಿ ಕಛೇರಿಗಳ ಮುಂದೆ ಸುತ್ತುತ್ತಿರುವವರಿಗೆ ‘ತಬರ’ ಎಂಬ ಅಡ್ಡ ಹೆಸರು ಅಂಟಿಕೊಳ್ಳುತ್ತದೆ. (ರಂಗನಿರ್ದೇಶಕ ಪ್ರಸಾದ್ ರಕ್ಷಿದಿಯವರು ಅವಧಿಗೆ ಬರೆದಿದ್ದ ಲೇಖನದಲ್ಲಿ ಈ ರೀತಿಯ ಉಲ್ಲೇಖವಿದೆ).


ಇದು ಕೇವಲ ಚಲನಚಿತ್ರವಾಗಿ ಮಾತ್ರವಲ್ಲದೆ, ನಾಟಕ ರೂಪದಲ್ಲಿಯೂ ಈಗಲೂ ತೆರೆ ಕಾಣುತ್ತಾ ಜೀವಂತವಾಗಿದೆ. ಆದರೆ, ಅಕ್ಷರ ರೂಪಕ್ಕೂ.. ದೃಶ್ಯ ರೂಪಕ್ಕೂ ಕೆಲವು ವ್ಯತ್ಯಾಸಗಳಿವೆ. ಅದು ಸಹಜವೂ ಹೌದು. ತಬರನಕಥೆ ಪೂಚಂತೇ ಅವರ ಬರಹದಲ್ಲಿ ಆಧುನಿಕ ಬದುಕನ್ನು ಕುರಿತ ವಿಡಂಬನೆಯಾಗಿ ಕಂಡರೆ..  ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ತಬರನಕಥೆ ಅನಕ್ಷರಸ್ಥ ಜಗತ್ತು ಅಕ್ಷರ ಜಗತ್ತಿನಿಂದ ಅನುಭವಿಸುವ ಕ್ರೌರ್ಯವಾಗಿ ತೆರೆದುಕೊಳ್ಳುತ್ತದೆ. ಹಾಗೆಂದು, ಮೂಲ ಕಥೆಗೆ ಧಕ್ಕೆಯಾಗಿದೆ ಎಂದಲ್ಲ. ತೇಜಸ್ವಿಯವರೇ ಒಮ್ಮೆ ಹೇಳಿದ್ದಾರೆ. ಚಲನಚಿತ್ರವಾದ ಕತೆ ನೋಡುಗರ ನೋಟಕ್ಕೆ ಸಿಕ್ಕಂತೆ ಎಂಬುದಾಗಿ. ಅವರು ಬರೆದ ಕತೆಗಳು ಅವರೇ ನಿರೂಪಕನಾಗಿ ಕತೆ ಹೇಳುವಂತಿರುತ್ತವೆ. ಹೀಗಾಗಿ, ದೃಶ್ಯ ಮಾಧ್ಯಮಕ್ಕೆ ಅಳವಡಿಸಲು ಕಷ್ಟವೂ ಇದೆ. ಕುಬಿ ಮತ್ತು ಇಯಾಲ, ಅಬಚೂರಿನ ಪೋಸ್ಟಾಫಿಸು, ಕಿರಗೂರಿನ ಗಯ್ಯಾಳಿಗಳು, ಡೇರ್ ಡೆವಿಲ್ ಮುಸ್ತಫಾಗಳನ್ನೂ ಚಲನಚಿತ್ರಗಳಾಗಿ ಕಾಣಬಹುದು.


"ನನ್ನ ತಲೆಯಲ್ಲಿ ಆಗುತ್ತಿರುವ ಪ್ರಳಯವನ್ನು ನಾನು ಇನ್ನೂ ಹತ್ತರಷ್ಟು ಕೂಡಾ ಹೇಳಿಲ್ಲ" ಎಂದು ಹೇಳುವ ಅವರ ಕುರಿತು ನಾವು ಸಾಗರದ ಒಂದು ಬಿಂದುವಿನಷ್ಟನ್ನು ಮಾತ್ರ ಹೇಳಿರುವುದೂ ಸಾಧ್ಯವಿಲ್ಲ. ಈ ರೀತಿಯ ಕೃತಿಗಳ ಕುರಿತು ಅವರು ಹೆಚ್ಚಿನ ಮಾತುಗಳನ್ನು ಹೇಳಿಲ್ಲವಾದರೂ ಪರಿಸರಕ್ಕೂ ಅವರಿಗೂ ಇರುವ ಅವಿನಾಭಾವ ನಂಟನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ "ನನ್ನ ಕೃತಿಗಳಿಂದ ಕೆಲವಾದರೂ ಜನರಿಗೆ ಪರಿಸರದ ಕುರಿತು ಆಸಕ್ತಿ ಬಂದರೆ ನನ್ನ ಬರವಣಿಗೆ ಸಾರ್ಥಕವೆಂದೇ ತಿಳಿದಿದ್ದೇನೆ" ಎಂದಿದ್ದಾರೆ. ಓದುವುದು, ತಿಳಿಯುವದು ಬಹಳಷ್ಟಿದೆ. ಅವರ ಹಾದಿಯಲ್ಲಿ ಬದುಕಬೇಕಾದರೆ, ಬದುಕಿನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ