ಶುಕ್ರವಾರ, ಏಪ್ರಿಲ್ 10, 2026

ಸಣ್ಣ ಕತೆಗಳು (ಪುಸ್ತಕ ಯಾನ - 123)


ಪುಸ್ತಕದ ಶೀರ್ಷಿಕೆ : ಸಣ್ಣ ಕತೆಗಳು

ಲೇಖಕರು : ಶ್ರೀನಿವಾಸ

ಪ್ರಕಾಶಕರು : ಬೆಂಗಳೂರು ಪ್ರೆಸ್

ಪ್ರಥಮ ಮುದ್ರಣ : 1940

ಪುಟಗಳು : 89


ಶ್ರೀನಿವಾಸ ಎಂಬ ಹೆಸರಿನಲ್ಲಿ ಬರೆಯುವ ಮಾಸ್ತಿಯವರ ಸಣ್ಣ ಕಥೆಗಳು ಬಹಳವೇ ಪ್ರಸಿದ್ಧಿ ಪಡೆದಿವೆ. ನಾಲ್ಕು ಸಣ್ಣ ಕಥೆಗಳು ಎನ್ನುವ ಕಥಾಸಂಕಲನವನ್ನು ಇದಾಗಲೇ ನಾನು ಇದೇ ಗುಂಪಿನಲ್ಲಿ ಓದಿ ಪರಿಚಯಿಸಿದ್ದು ಮತ್ತೆ ಮಾಸ್ತಿಯವರ ನಾಲ್ಕು ಕಥೆಗಳ ಕಥಾಸಂಕಲನ ಸಣ್ಣ ಕತೆಗಳು ಎಂಬ ಪುಸ್ತಕವನ್ನು ಪರಿಚಯಿಸಲಿದ್ದೇನೆ 


ಇಲ್ಲಿನ ಈ ನಾಲ್ಕು ಕಥೆಗಳು ಧಾರವಾಡದ ಜೀವನ ಎಂಬ ಪತ್ರಿಕೆಯಲ್ಲಿ ಆರು ತಿಂಗಳ ಕಾಲ ಪ್ರಕಟವಾಗಿದೆ ಈಗ ಮಾಸ್ತಿಯವರ ಸಣ್ಣ ಕಥೆಗಳ ಸಮಗ್ರ ಸಂಕಲನದಲ್ಲಿಯೂ ಈ ಕಥೆಗಳು ಲಭ್ಯವಿವೆ.


ಕಲ್ಮಾಡಿಯ ಕೋಣ :

ಮೊದಲಿಗೆ ಕಲ್ಮಾಡಿ ಎಂಬ ಊರಿನ ಪ್ರಸಿದ್ಧಿ ಹಾಗೂ ಅದರ ಹೆಸರಿನ ಕುರಿತ ಇತಿಹಾಸವನ್ನು ವಿವರವಾಗಿ ಬಿಚ್ಚಿಡುತ್ತಾ.. ನಂತರ ಅಲ್ಲಿನ ಮಾರಿ ಜಾತ್ರೆಯಲ್ಲಿ ನಡೆಯುವ ಬಲಿಯ ಕುರಿತು ವಿವರಿಸುವಾಗ ತೆರೆದುಕೊಳ್ಳುವುದೇ ಕಲ್ಮಾಡಿಯ ಕೋಣನ ಕಥೆ. ಸುತ್ತಮುತ್ತಲಿನ ಊರಿನಲ್ಲಿ ನಡೆಯುವ ಕುರಿ-ಕೋಳಿಗಳ ಬಲಿಯಂತಲ್ಲದೇ.. ಕಲ್ಮಾಡಿಯ ಮಾರಿ ಜಾತ್ರೆ ಪ್ರಸಿದ್ಧವಾಗಿದ್ದು ಆ ಊರಿನಲ್ಲಿ ಬಲಿಕೊಡುವ ಕೋಣಗಳಿಂದ. 


ಮೂರು ವರ್ಷದ ಮೊದಲೇ ಆ ಊರಿನಲ್ಲಿ ಇಂತಹಾ ವರ್ಷಕ್ಕೆ ಈ ಕೋಣ ಎಂಬ ಗುರುತಿಟ್ಟಿರುತ್ತಾರೆ. ಕೊಂಚ ತುಂಬಿಕೊಂಡಿರುವ ಕೋಣವನ್ನೇ ಗುರುತಿಸುತ್ತಾರೆ. ನಂತರ, ಆ ಕೋಣವನ್ನು ಮೀಸಲಾಗಿರುವ ವರ್ಷವೇ ಬಲಿಕೊಡುತ್ತಾರೆ. ಅಕಸ್ಮಾತ್, ಮೂರು ವರ್ಷ ಬಲಿಗೆ ಗುರುತಾಗಿರುವ ಕೋಣ ಮೊದಲೇ ಮೃತಪಟ್ಟರೆ.. ಅದರ ಮರುವರ್ಷಕ್ಕೆಂದು ಗುರುತಾಗಿದ್ದ ಕೋಣವನ್ನು ಅದೇ ವರ್ಷ ಬಲಿಕೊಡುವ ಪ್ರತೀತಿ ನಡೆದುಕೊಂಡು ಬರುತ್ತಿದೆ. ಗುರುತಾಗಿರುವ ಕೋಣವನ್ನು ಗುರುತಿಸಿದ ದಿನದಿಂದಲೇ ಮಾರಿಯ ಆಸ್ತಿಯಲ್ಲಿ ಇಂತಿಷ್ಟು ಎಂದು ಆಹಾರಕ್ಕಾಗಿ ರಾಗಿ ಕೊಟ್ಟುಬಿಡುತ್ತಾರೆ. ಬಲಿಯಾಗುವ ಸಮಯಕ್ಕೆ ಅದರ ಯಜಮಾನನಿಗೆ ಮತ್ತೆ 5 ಕೊಳಗ ರಾಗಿಯನ್ನೂ ಕೊಡುತ್ತಾರೆ. 


ಕೋಣಗಳನ್ನು ಗುರುತಿಸಿರುವಂತೆಯೇ ಅದಕ್ಕೆ ಬಲಿಕೊಡುವ ಜನರನ್ನು ಗುರುತಿಸಿರುತ್ತಾರೆ. ಕಲ್ಮಾಡಿಯಲ್ಲಿ ಮೂರು ಜನ ತೋಟಿಗಳಿದ್ದರು. ತೋಟಿಗಳೆಂದರೆ ಸಾಮಾನ್ಯರಲ್ಲ.. ಅವರು ಬಲಾಢ್ಯರಾಗಿದ್ದು ಒಂದೇ ಏಟಿಗೆ ಕೋಣವನ್ನು ಬಲಿಕೊಡಲು ಸಿದ್ದರಿರುತ್ತಾರೆ. ಆ ಊರಿನಲ್ಲಿ ತೋಟಿಯಾಗಿದ್ದ ಮುನಿಯನಿಗೆ ಒಂದು ವಿಚಿತ್ರ ಸಂದರ್ಭ ಒದಗಿತ್ತು. ಆತ ಬಹಳ ಇಷ್ಟಪಟ್ಟು ಸಾಕಿದ್ದ ಆತನ ಕೋಣವನ್ನೇ ಬಲಿಯ ಕೋಣವೆಂದು ಗುರುತಿಸಿಬಿಡುತ್ತಾರೆ. ಮನಸ್ಸಿಲ್ಲವಿದ್ದರೂ ವಿರೋಧಿಸಲಾಗದೆ, ಇನ್ನೂ ಸಮಯವಿದೆಯಲ್ಲಾ ಎಂದುಕೊಂಡು ತನ್ನನ್ನು ತಾನು ಸಮಾಧಾನ ಮಾಡುತ್ತಿರುವಷ್ಟರಲ್ಲಿಯೇ.. ಆ ವರ್ಷಕ್ಕೆಂದು ಮೀಸಲಾಗಿದ್ದ ಕೋಣ ತೀರಿಕೊಂಡು ಇನ್ನೂ ಒಂದು ವರ್ಷ ಮುಂಚಿತವಾಗಿಯೇ ಆತನ ಕೋಣ ಬಲಿಪೀಠಕ್ಕೆ ಬರುವಂತಾಗುತ್ತದೆ. ತಾನೇ ಆ ವರ್ಷ ಬಲಿ ಕೊಡಬೇಕಾಗಿದ್ದರಿಂದ ಹಿರಿಯರಿಗೆ ಹೋಗಿ ಬೇರೆಯವರನ್ನು ನೇಮಿಸುವಂತೆ ಕೇಳಿಕೊಂಡರೂ.. ಅವರು ಒಪ್ಪದೇ ಅವನ ಕೋಣವನ್ನು, ಅವನೇ.. ಅದೇ ವರ್ಷ ಬಲಿಕೊಡಬೇಕು ಎಂದು ನಿಶ್ಚಯವಾಗುತ್ತದೆ. 


ಅದಾಗಲೇ ಮಾರಿಯ ಯಾವುದೋ ಸಿಟ್ಟಿಗೆ ಆ ವರ್ಷ ಮೀಸಲಾಗಿದ್ದ ಕೋಣ ಬಲಿಯಾಗಿದೆ. ಇನ್ನೂ ಬದಲಾವಣೆ ಮಾಡಿದರೆ ಮಾರಿ ಮತ್ತಷ್ಟು ಕೋಪಗೊಳ್ಳಬಹುದೆಂದು ಹೆದರಿ ಈ ತೀರ್ಮಾನ ಮಾಡಿರುತ್ತಾರೆ. ಆದರೆ, ಮುನಿಯನ ಕೋಣವನ್ನು ಬಲಿ ಕೊಡಬೇಕಾದ ದಿನ ನಡೆದ ಘಟನೆ ಊರಿನ ಮಹತ್ತರ ಬದಲಾವಣೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಅಂತಹ ಪ್ರಸಂಗವೇನೆಂದು ತಿಳಿದುಕೊಳ್ಳಲು ಓದಿ ಕಲ್ಮಾಡಿಯ ಕೋಣ.


ಆಚಾರ್ಯರ ಪತ್ನಿ :

ಮೈಸೂರು ಪ್ರಾಂತ್ಯದ, ಮಿರ್ಲೆ, ಬೇರ್ಯದ ಬಳಿ ಸಾಲಿಗ್ರಾಮ ಎಂಬ ಗ್ರಾಮವಿದೆ. ಆ ಗ್ರಾಮ ಅಂದು ಹೊಯ್ಸಳ ರಾಜರ ಆಳ್ವಿಕೆಯಲ್ಲಿತ್ತು. ಆ ಸಂದರ್ಭದಲ್ಲಿ ಸಾಲಿಗ್ರಾಮ ವೈಭವೋಪೇತವಾಗಿತ್ತು. ವಿಶಿಷ್ಟಾದ್ವೈತದ ಮತ ಸಂಸ್ಥಾಪಕರಾಗಿದ್ದ ರಾಮಾನುಜಾಚಾರ್ಯರು ಇಲ್ಲಿ ಬಂದು ಅಜ್ಞಾತರಾಗಿ ವಾಸವಿದ್ದರೆಂಬ ಪ್ರತೀತಿ ಇದೆ. ಆಚಾರ್ಯರು ಹುಟ್ಟಿದ್ದು ಪೆರುಂಬುದೂರಿನಲ್ಲಿ. ಬೆಳೆದದ್ದು ಕಾಂಚಿಪುರದಲ್ಲಿ. ಯತಿಯಾಗಿ ವೈಷ್ಣವ ಧರ್ಮದ ಪ್ರತಿಪಾದಕರಾಗಿದ್ದು ಶ್ರೀರಂಗದಲ್ಲಿ. ಶಿಷ್ಯರ ಆಗ್ರಹಕ್ಕೆ ಮಣಿದು, ಯಾರಾದರೂ ತಮ್ಮ ಜೀವಕ್ಕೆ ಹಾನಿ ಮಾಡಿಯಾರು ಎಂದು ಅಜ್ಞಾತವಾಸ ನಡೆಸಿದ್ದು ಹೊಯ್ಸಳ ಆಳ್ವಿಕೆಯಲ್ಲಿದ್ದ ಸಾಲಿಗ್ರಾಮದಲ್ಲಿ.


ಲೇಖಕರು ಸಾಲಿಗ್ರಾಮಕ್ಕೆ ಹೋದಾಗ ಅಲ್ಲಿನ ಕೆಲವು ಸ್ಥಳ ಪುರಾಣದಿಂದ ಆಚಾರ್ಯರು ಸನ್ಯಾಸತ್ವ ತೆಗೆದುಕೊಳ್ಳಲು ಅವರ ಪತ್ನಿ ಹೇಗೆ ಕಾರಣರಾದರು ಎಂಬುದನ್ನು ಕೇಳಿದಾಗ.. ಅವರ ಮನಸ್ಸಿನಲ್ಲಿ 'ಇವರೇ ತಾಳ್ಮೆಯಿಂದ.. ಅರಿಯದ ಆ ಹೆಂಗಸಿಗೆ ಬುದ್ಧಿ ಹೇಳಿದ್ದರೆ..?' ಎಂಬ ಭಾವವು ಮೂಡಿತ್ತು. ಜೊತೆಗೆ, ಗಂಡ ಸನ್ಯಾಸತ್ವ ಪಡೆದ ನಂತರ ಆಕೆಯ ಬದುಕು ಹೇಗೆ ಸಾಗಿತ್ತು..?? ಎಂಬುದನ್ನು ಆಲೋಚಿಸಿದಾಗ ಮನಸ್ಸಿನಲ್ಲಿ ಹುಟ್ಟಿಕೊಂಡಂತಹ ಸಂಗತಿಯೇ ಇಲ್ಲಿ ಕಥಾ ರೂಪ ಪಡೆದುಕೊಂಡಿದೆ. 


ಆಚಾರ್ಯರು ಸಾಲಿಗ್ರಾಮಕ್ಕೆ ಬಂದ ನಂತರ.. ಮಾರುವೇಷದಲ್ಲಿ ಅವರ ಶಿಷ್ಯಂದಿರು ಅಲ್ಲಲ್ಲಿ ವಾಸವಾಗಿದ್ದರು. ಜೊತೆಗೆ ಸಂಸಾರ ವಂದಿಗನಾಗಿದ್ದ ಒಬ್ಬ ಶಿಷ್ಯ ಆತನ ಸೇವೆಗೆ ನಿಂತಿದ್ದನು. ಆತನನ್ನು ವಡಗನಂಬಿ ಎಂದು ಕರೆಯುತ್ತಾರೆ. ಅವರೇ ರಾಮಚಂದ್ರ ಹಾಗೂ ಶ್ಯಾಮಲಾಂಬಾ ದಂಪತಿಗಳು. ಒಮ್ಮೆ ಆಚಾರ್ಯರಿಗೆ ತೀವ್ರ ಜ್ವರ ಬಂದ ಸಂದರ್ಭದಲ್ಲಿ ನಡೆದ ಒಂದು ಘಟನೆ ಹಾಗೂ ಅಜ್ಞಾತವಾಗಿ ಅಲ್ಲಿಗೆ ಬಂದ ಅಪರಿಚಿತ ಹೆಂಗಸಿನ ಮರಣದ ಜೊತೆಗೆ ಈ ಕಥೆ ಹೆಣೆದುಕೊಂಡಿದೆ. ನಂತರ ಶ್ಯಾಮಲಾಂಬೆಯಿಂದ ಆಕೆ ಆಚಾರ್ಯರ ಪೂರ್ವಾಶ್ರಮದ ಪತ್ನಿ ಎಂದು ತಿಳಿದು ಆಚಾರ್ಯರಿಗೆ ಖೇದವಾಯಿತು. ಆದರೆ, ಅಲ್ಲಿ ನಡೆದ ಪ್ರಸಂಗವೇನು ಎಂಬುದನ್ನು ತಿಳಿಯಲು ಈ ಕಥೆ ಓದಿ.


ಕವಿಯ ಬಾಳ ಕೊನೆ ದಿನ :

80ನೇ ವರ್ಷದಲ್ಲಿ ತೀರಿಕೊಂಡ ಕವಿ ಗಯಟೆಯ ಕುರಿತ ಜೀವನ ಚಿತ್ರಣವನ್ನು ಆತ ಅನಾರೋಗ್ಯ ಪೀಡಿತನಾಗಿ ಮಲಗಿದ್ದಾಗ.. ಮಂಪರಿನಲ್ಲಿ ನೆನೆದುಕೊಂಡ ಘಟನಾವಳಿಗಳ ಅನುಸಾರ ಆತನ ಜೀವನವನ್ನು ಮರು ಚಿತ್ರಿಸಿದಂತೆ ಆತನ ದೃಷ್ಟಿಕೋನದಿಂದ ಆತನ ಪುಟ್ಟ ಆತ್ಮಚರಿತ್ರೆಯಂತೆ ಹೆಣೆದಿದ್ದಾರೆ. ಗಯಟೆಯ ಬದುಕಿನ ಕುರಿತು ಗೊತ್ತಿರುವವರಿಗೆ ಇದು ಆತನ ಜೀವನವನ್ನು ಮೆಲುಕು ಹಾಕುವಂತೆ ಮಾಡಿದರೆ, ಗಯಟೆಯ ಕುರಿತು ಗೊತ್ತಿಲ್ಲದಿದ್ದವರಿಗೆ ಆತನ ಕುರಿತು ಕಥಾರೂಪದಲ್ಲಿ ತಿಳಿಸಿರುವಂತಿದೆ.


ಉಗ್ರಪ್ಪನ ಉಗಾದಿ :

ಈ ಕಥೆಯ ಶುರುವಿನಲ್ಲಿ ಈ ಕಥೆ ಹುಟ್ಟಿದ ಬಗೆಯನ್ನು ಬಹಳ ಸ್ವಾರಸ್ಯಕರವಾಗಿ ವರ್ಣಿಸುತ್ತಾರೆ. 

"ಶಾಮಣ್ಣನವರು ಹೇಳಿದ ರಂಗಪ್ಪನ ದೀಪಾವಳಿಯ ಕಥೆಯನ್ನು ನಾನು ಬರೆದಾಗ ಈ ರೀತಿಯ ಹೊಸ ಬರವಣಿಗೆಯಿಂದ ಬೇಸರಗೊಂಡ ಮಿತ್ರರೊಬ್ಬರು.. ಹೀಗೆಯೇ ಮುಂದುವರಿದರೆ ಉಗ್ರಪ್ಪನ ಉಗಾದಿಯ ಕುರಿತು ಬರೆಯಬೇಕಾಗುತ್ತದೆ. ಎಂದು ಹೇಳುತ್ತಾರಂತೆ. ಹಾಗೆಯೇ, ಈ ಉಗ್ರಪ್ಪನ ಉಗಾದಿಯನ್ನು ಇನ್ನೂ ಯಾರೂ ಬರೆಯದುದ್ದರಿಂದ ನಾನೇ ಬರೆದೆ." ಎಂದು ಹೇಳುತ್ತಾರೆ. 


ಮದರಂಗಿ ಎಂಬ ಊರಿನ ಗೌಡನಾಗಿದ್ದ ಉಗ್ರಪ್ಪನ ಬದುಕಿನ ಒಂದೇ ಒಂದು ದಿನದ ಚಿತ್ರಣದ ಮೂಲಕ ಗೌಡಿಕೆ ಅಷ್ಟು ಸುಲಭವಲ್ಲವೆಂದು ಕಾಣಿಸುತ್ತಾ.. ಆತನಿಗೆ ಯುಗಾದಿಯಂದು ಬಂದ ಹಲವಾರು ಬಿಡುವಿಲ್ಲದ ಕೆಲಸ-ಕಾರ್ಯಗಳು ಹಾಗೂ ಸಾಂಸಾರಿಕ ಬದುಕಿನ ಚಿತ್ರಣ, ಅದೆರಡರ ನಡುವೆ ಉಗ್ರಪ್ಪ ಹೇಗೆ ಯುಗಾದಿ ಹಬ್ಬವನ್ನು ಆಚರಿಸಿದ ದಿನಚರಿಯನ್ನು ಹೇಳುತ್ತಲೇ.. ಯುಗಾದಿ ಎಂಬ ಹೊಸ ವರ್ಷ ಕೆಲಸವಂದಿಗರ ಪಾಲಿಗೆ ಹಾಗೂ ಉಳಿದವರ ಪಾಲಿಗೆ ಹೇಗೆ ಎನ್ನುವುದರ ಸೂಕ್ಷ್ಮ ಚಿತ್ರಣ ನೀಡಿದ್ದಾರೆ.


ಈ ನಾಲ್ಕು ಸಣ್ಣ ಕಥೆಗಳು ಬಹಳ ಸ್ವಾರಸ್ಯಕರವಾಗಿ.. ಎಲ್ಲಿಯೂ ತಮ್ಮ ಮುಂದಿನ ಗುಟ್ಟು ಬಿಟ್ಟುಕೊಡದಂತೆ, ಹೊಸ ರೀತಿಯಲ್ಲಿ ಓದಿಸಿಕೊಂಡು ಹೋಗುತ್ತವೆ. ಈ ಕಥೆಗಳನ್ನು ಓದಿದ ನಂತರವಂತೂ ಮಾಸ್ತಿಯವರ ಇನ್ನುಳಿದ ಸಣ್ಣ ಕಥೆಗಳನ್ನು ಓದುವ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ