ಶುಕ್ರವಾರ, ಏಪ್ರಿಲ್ 10, 2026

ಬೆಳದಿಂಗಳ ಬೇಗೆ (ಪುಸ್ತಕ ಯಾನ - 122)


ಪುಸ್ತಕದ ಶೀರ್ಷಿಕೆ : ಬೆಳದಿಂಗಳ ಬೇಗೆ

ಲೇಖಕರು : ಹೆಚ್. ಜಿ ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ :1994

ತೃತೀಯ ಮುದ್ರಣ : 2021 (ನನ್ನ ಓದಿಗೆ ಸಿಕ್ಕಿದ್ದು)

ಬೆಲೆ : 140 ರೂ.


ಶ್ರೀಮತಿ ಹೆಚ್. ಜಿ. ರಾಧಾದೇವಿಯವರ 'ಬೆಳದಿಂಗಳ ಬೇಗೆ' ಕಾದಂಬರಿ 1994 ರಲ್ಲಿ ಬರೆದದ್ದಾದರೂ ಕಥಾ ವಸ್ತು ಇಂದಿಗೂ ಪ್ರಸ್ತುತವೇ.


ಯೌವ್ವನದ ಏರಿಳಿತಗಳು ಹಾಗೆಯೇ ಇರುತ್ತವಾ ಅಥವಾ ಬದಲಾಗುತ್ತವಾ? ಬದಲಾವಣೆ ಕಂಡರೂ ಆ ಆಕರ್ಷಣೆ, ಪ್ರೇಮ, ಪ್ರೀತಿ, ಹರೆಯದ ತುಮುಲಗಳು ಎಲ್ಲವೂ ನೆನಪಿನಲ್ಲಿ ಇಂದಿಗೂ ನೆನಪನ್ನು ರಂಗೇರಿಸುತ್ತಾ ಇರುತ್ತವೇನೋ ಅಲ್ಲವಾ? ಮೊದಲ ಪ್ರೇಮ ಎಂಬುದು ಎಲ್ಲರಿಗೂ ವಿಭಿನ್ನ ಅನುಭವವನ್ನು ಕೊಟ್ಟರೂ ಆ ಪ್ರೇಮ ಸಫಲವಾಗಿ ವಿವಾಹವಾಗುವುದು ಆ ಕಾಲದಲ್ಲಿ ಅಪರೂಪ. ವಿವಾಹವಾದರೂ ನಂತರ ಹೊಂದಿ ಬಾಳುತ್ತಾ ಜಾರಿ ಬೀಳದಂತೆ ಜೀವನ ನಡೆಸುವುದು ಮತ್ತಷ್ಟು ಜಾಣ್ಮೆ ಅಲ್ಲವಾ.. ಆದರೆ, ವಿಫಲ ಪ್ರೇಮವಾದರೆ.. ಪ್ರೇಮವೇನೋ ವಿಫಲವಾದರೂ ಪ್ರೇಮಿಸಿದ ವ್ಯಕ್ತಿಗಳು ಅಲ್ಲಲ್ಲಿ ಹತ್ತಿರ ಸುಳಿಯುತ್ತಿದ್ದರೆ.. ಅಥವಾ ತೀರಾ ವೈಯಕ್ತಿಕವಾಗಿ ಬಂದರೆ ಅಥವಾ ಹೇಳದೇ ಉಳಿದ, ಮುಚ್ಚಿಟ್ಟಿದ್ದ ಪ್ರೇಮ ಕತೆಯೊಂದು ಗಂಡ-ಹೆಂಡಿರ ಸಂಸಾರದ ನಡುವೆ ಧುತ್ತನೆ ಪ್ರತ್ಯಕ್ಷವಾಗಿ ಅವರ ಅನ್ಯೋನ್ಯತೆಗೆ ಬೆಂಕಿ ಹಚ್ಚಲು ಕಾರಣವಾದರೆ ಅಥವಾ ಅವರ ನಂಬಿಕೆಯ ತಳವನ್ನೇ ಅಲುಗಾಡಿಸಿ ಮುಂದಿನ ಬದುಕನ್ನೇ ಬುಡಮೇಲು ಮಾಡಿಬಿಟ್ಟರೆ.. ಆ ಕತೆ ಸತ್ಯವಾಗಿದ್ದರೆ, ಇನ್ನೂ ಆ ಸಂಬಂಧ ಬದುಕಿದ್ದರೆ ಸರಿ. ಆದರೆ, ಅದೆಲ್ಲವೂ ನಿಜವಾಗದೆ ಈಗ ಪ್ರಾಮಾಣಿಕತೆಯಿಂದ ಬದುಕುತ್ತಿದ್ದು ಆ ಪ್ರಾಮಾಣಿಕತೆಯನ್ನೇ ಅನುಮಾನಿಸಿದರೆ.. ಮಕ್ಕಳಿದ್ದಾಗ ಅದು ಇನ್ನೂ ವಿಪರೀತಕ್ಕೆ ಹೋದರೆ..


ಈಗಲೂ ಕೆಲವೊಮ್ಮೆ ನನ್ನನ್ನು ಒಂದು ಪ್ರಶ್ನೆ ಕಾಡುತ್ತದೆ. ಪ್ರೀತಿಸಿದ ನಂತರ ಯಾವ್ಯಾವುದೋ ಕಾರಣಗಳಿಂದ ಮದುವೆಯಾಗಲು ಸಾಧ್ಯವಾಗದೆ ನಂತರ ಮತ್ತೊಬ್ಬರನ್ನು ವಿವಾಹವಾಗಿ ಸುಖ ಸಂಸಾರ ನಡೆಸುವಾಗ ಆ ಹಳೆಯ ಪ್ರೇಮಿ ಎದುರಾದರೆ ಇವರ ಪ್ರತಿಕ್ರಿಯೆ ಹೇಗಿರಬಹುದು.. 


ಇದು ಕಾದಂಬರಿಯ ಒಂದು ಮಜಲಾದರೆ ಉಳಿದದ್ದು ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರ ಕೌಟುಂಬಿಕ ಕಥನ. 


ಶ್ರೀಧರ ಬ್ಯಾಂಕ್ ನೌಕರ. ಆತನಿಗೆ ಇಬ್ಬರು ತಂಗಿಯಂದಿರು. ಸುಜಾತ ದೊಡ್ಡವಳು, ಚಿಕ್ಕವಳು ನಂದಿನಿ. ಸುಜಾತಳಿಗೆ ಇಪ್ಪತ್ತೆಂಟು ವರ್ಷವಾದರೆ, ನಂದಿನಿಗೆ ಇಪ್ಪತ್ನಾಲ್ಕು. ಶ್ರೀಧರನಿಗೆ ಮೂವತ್ತೆರಡು. ಮೂವರೂ ದುಡಿಯುತ್ತಿದ್ದರೂ ಮೂವರಿಗೂ ಕಂಕಣ ಬಲ ಕೂಡಿ ಬಂದಿರಲಿಲ್ಲ. ತಾಯಿ ಅಂಬಮ್ಮ, ತಂದೆ ತೀರಿ ಹೋಗಿ ಎಂಟು ವರ್ಷಗಳಾಗಿತ್ತು. ತಂದೆ ಅವರೆಲ್ಲರ ಭವಿಷ್ಯವನ್ನು ಒಪ್ಪ ಮಾಡುವಂತೆ ಸಾಕಷ್ಟು ಕೂಡಿಟ್ಟು ಹೋಗಿದ್ದರಿಂದ ಅಂಬಮ್ಮನವರಿಗೆ ಮಕ್ಕಳ ಮದುವೆಯ ಖರ್ಚಿನ ಚಿಂತೆ ಇರಲಿಲ್ಲ. ಇದ್ದದ್ದು ಸ್ವಂತ ಮನೆ. ಜೊತೆಗೆ ಬಾಡಿಗೆ ಕೂಡಾ ಬರುತ್ತಿತ್ತು. ಹೆಣ್ಣು ಮಕ್ಕಳ ಹಣ ಅವರವರ ಖರ್ಚಿಗಾದರೆ ಮಗನ ಹಣ ಉಳಿತಾಯವಾಗುತ್ತಿತ್ತು. ಹೆಣ್ಣು ಮಕ್ಕಳ ಬಣ್ಣ ಕಪ್ಪು ಜೊತೆಗೆ ಅವರ ನಿರೀಕ್ಷೆಗಳಿಂದ ಬಂದ ಗಂಡುಗಳೆಲ್ಲವೂ ತಪ್ಪಿ ಹೋಗುತ್ತಿರುತ್ತಾರೆ. ಇವರು ಒಪ್ಪಿದರೆ ಅವರಿಂದ ನಕಾರ, ಅವರು ಒಪ್ಪಿದರೆ ಇವರಿಂದ ನಕಾರ. 


ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗದಿರುವಾಗ ತಾನು ಮದುವೆಯಾಗುವುದೇ ಎಂಬ ಆಲೋಚನೆಯಲ್ಲಿ ಮದುವೆ ಮುಂದೂಡುತ್ತಾ ಬಂದಿದ್ದ ಶ್ರೀಧರನಿಗೆ ಅಮ್ಮ ವಧುಪರೀಕ್ಷೆಗೆ ಎಂದು ಕರೆಸಿದ ಹೆಣ್ಣು ಚಂದ್ರಿಕಾ ತನ್ನ ರೂಪಿನಿಂದ ಮನಸೂರೆಗೊಳ್ಳುತ್ತಾಳೆ. ಅವಳ ತಂದೆ ರಿಟೈರ್ಡ್ ಹೆಡ್ ಮಾಸ್ಟರ್ ಶ್ಯಾಮರಾಯರು, ತಾಯಿ ಕಮಲಮ್ಮ. ಇದ್ದ ಒಬ್ಬ ಅಣ್ಣ ದೂರದ ಊರಿನಲ್ಲಿ ಇಂಜಿನಿಯರ್. ಹೇಳಿಕೊಳ್ಳುವಂತಹಾ ಆಸ್ತಿ-ಪಾಸ್ತಿ ಇಲ್ಲದಿದ್ದರೂ ಹೊಟ್ಟೆ-ಬಟ್ಟೆಗೆ ಕೊರತೆ ಇಲ್ಲ. 


ಅವಳ ಕಾಲ್ಗುಣವೋ ಅಥವಾ ಕಂಕಣ ಬಲ ಕೂಡಿಬಂದೋ ಶಾಮರಾಯರು ತನ್ನ ಅಣ್ಣನ ಮಗ ಡಾಕ್ಟರ್ ಆಗಿದ್ದು ಅವನಿಗೆ ಕನ್ಯೆ ನೋಡುತ್ತಿರುವ ಪ್ರಸ್ತಾಪ ಮಾಡಿದರು. ಸುಜಾತ ಕುರಿತು ಹೇಳಿ ಕಳುಹಿಸಿದ್ದವರು ನಂತರ ಸುಜಾತಳ ಗೆಳತಿಯ ಕಡೆಯಿಂದ ಆಕೆಯ ಅತ್ತೆಯ ಮಗನ ಪ್ರಸ್ತಾಪ ಬಂದು ಆ ಸಂಬಂಧ ಕುದುರಿದ್ದರಿಂದ ನಂದಿನಿಗಾಗಿ ಆ ವರನನ್ನು ನೋಡುತ್ತಾರೆ. 


ಸುಜಾತ ಮುಂಬಯಿಯ ಬ್ಯುಸಿನೆಸ್ ಮನ್ ನವೀನನ ಕೈ ಹಿಡಿದರೆ, ನಂದಿನಿ ವೈದ್ಯನಾಥರ ಸೊಸೆಯಾಗಿ ಡಾಕ್ಟರ್ ಸತೀಶನ ಕೈ ಹಿಡಿಯುತ್ತಾಳೆ. ಮೊದಲ ಮದುವೆಗೆ ಅಷ್ಟು ಖರ್ಚಾಗದೆ, ವರದಕ್ಷಿಣೆ ನೀಡದಿದ್ದರೂ ವೈದ್ಯನಾಥರು ಚೆನ್ನಾಗಿಯೇ ಸುಲಿಗೆ ಮಾಡುತ್ತಾರೆ. ಹೆಣ್ಣು ಮಕ್ಕಳ ಮದುವೆಗಾಗಿ ಇಟ್ಟಿದ್ದ ಹಣ ಖಾಲಿಯಾಗಿ ಎರಡು ಮನೆಗಳನ್ನು ಮಾರಿಯಾಗಿರುತ್ತದೆ. ಈಗ ಶ್ರೀಧರನ ಮದುವೆಗೆ ವಿಘ್ನ. ಅಂಬಮ್ಮನವರಿಗೆ ಈಗ ಆ ಸಂಬಂಧಕ್ಕಿಂತ ಒಳ್ಳೆ ಸಂಬಂಧ ಹುಡುಕಬಹುದು ಎಂದೆನ್ನಿಸಿ ಮೀನಾ-ಮೇಷ ಎಣಿಸುತ್ತಿದ್ದರೆ ಶ್ರೀಧರ ಆಗಲೇ ಚಂದ್ರಿಕಾಳ ಬೆಳದಿಂಗಳ ರೂಪಿಗೆ ಮನಸೋತು ವಿರಹದ ಬೇಗೆಯಲ್ಲಿರುತ್ತಾನೆ. ಜೊತೆಗೆ ಅವಳ ಪ್ರೇಮ ಸಲ್ಲಾಪದಿಂದ ಅವಳಿಗಾಗಿ ಹಾತೊರೆಯುತ್ತಾ ಕಾದು ಕಾದು ತಡವಾದರೂ ಅಮ್ಮನ ವಿರೋಧ, ರಸಕಸಿಯ ನಡುವೆ ಅಂತೂ ಚಂದ್ರಿಕಾಳನ್ನೇ ವರಿಸುತ್ತಾನೆ.


ಮುಂದೆ.. 

ಎಲ್ಲವೂ ಬದಲಾಗುತ್ತದೆ.


ಚಂದ್ರಿಕಾ ಮೊದಮೊದಲು ಅತ್ತೆಯಿಂದ ಕಾಟ ಅನುಭವಿಸಿದ್ದರೂ ನಂತರ ಎಲ್ಲವೂ ಅವಳ ಆಯ್ಕೆಯಂತೆ, ಅವಳಿಗೆ ಅನುಕೂಲವಾಗುವಂತೆಯೇ ನಡೆಯುತ್ತದೆ. ಗಂಡನ ಮನಸ್ಸು ಗೆದ್ದು, ಅತ್ತೆಯ ಜೊತೆಗೆ ಅನುಕೂಲವಾಗಿರುವಾಗ ಅವಳು ಗರ್ಭಿಣಿಯಾಗುತ್ತಾಳೆ. ಆದರೆ, ಅಚಾನಕ್ಕಾಗಿ ಆಕೆಯ ಹಳೆಯ ಪ್ರೇಮಿ ನಾಗರಾಜನ ವಿಚಾರ ಶ್ರೀಧರನಿಗೆ ತಿಳಿಯುತ್ತದೆ.


ಇತ್ತ ನಂದಿನಿ ಮಾವನ ಜಿಪುಣತನ, ಕಾಟ, ಸಣ್ಣ ಬುದ್ದಿಗಳಿಗೆ ರೋಸಿ ಗಂಡನ ಸಹಕಾರವೂ ಸಿಗದಿದ್ದಾಗ ತವರು ಮನೆಗೆ ವಾಪಾಸ್ ಬರುತ್ತಾಳೆ.


ಅತ್ತ ಸುಜಾತಳದ್ದು ಬಂಗಾರದ ಪಂಜರದಂತಹಾ ಬದುಕು. ಆತನಿಗೆ ಬೇರೆ ಸಂಸಾರವಿದ್ದು ತೋರಿಕೆಗಷ್ಟೇ ಈ ಮದುವೆ.


ಸುಜಾತ, ನಂದಿನಿಯರ ಬದುಕು ಏನಾಗುತ್ತದೆ ? ಅಂಬಮ್ಮನವರ ಬದಲಾದ ವರ್ತನೆಗೆ ಕಾರಣವೇನು ? ಶ್ರೀಧರ, ಚಂದ್ರಿಕೆಯರ ಸಂಸಾರದ ಕತೆ ಏನು..? ಹರೆಯದಲ್ಲಿ ಅರಿಯದೆ ಮಾಡಿದ ತಪ್ಪಿಗೆ ಸಿಕ್ಕ ಶಿಕ್ಷೆ ಏನು? ಎಲ್ಲವನ್ನೂ ತಿಳಿಯಲು ಈ ಪುಸ್ತಕ ಓದಬೇಕು.


ಚಂದ್ರಿಕಾಳ ಚೆಲ್ಲುತನ, ಹುಡುಗಾಟಿಕೆಯ ಪ್ರವೃತ್ತಿ ಮಾಗುವುದನ್ನು, ಅವಳ ಅಣ್ಣ ವೆಂಕಟೇಶ ಸ್ವಾರ್ಥಕ್ಕಾಗಿ ಅಪ್ಪ-ಅಮ್ಮನನ್ನು ಕರೆಸಿಕೊಳ್ಳುವುದು, ಅತ್ತೆ ಮನೆಯಲ್ಲಿ ಸೊಸೆ ಅನುಭವಿಸುವ ಸವಾಲು, ಗಂಡ-ಹೆಂಡತಿಯರ ನಡುವಿನ ಅರ್ಥೈಸಿಕೊಳ್ಳುವಿಕೆ, ಅವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಪರಸ್ಪರ ಸಹಕಾರ ನೀಡಿದರೆ ಸಂಸಾರ ಸುಖವಾಗಿ ರೂಪುಗೊಳ್ಳುವ ಪರಿ ಎಲ್ಲವನ್ನೂ ಯಥಾವತ್ತಾಗಿ ಕಣ್ಣಿಗೆ ಕಟ್ಟುವಂತೆ ರೂಪಿಸಿದ್ದಾರೆ ಹೆಚ್.ಜಿ. ರಾಧಾದೇವಿಯವರು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ