ಶುಕ್ರವಾರ, ಏಪ್ರಿಲ್ 10, 2026

ದಹನ (ಪುಸ್ತಕ ಯಾನ - 114)


ಪುಸ್ತಕದ ಶೀರ್ಷಿಕೆ : ದಹನ

ಲೇಖಕರು : ಎಸ್. ಎನ್. ಸೇತುರಾಮ್ 

ಪ್ರಥಮ ಮುದ್ರಣ : 2018

ಪುಟಗಳು : 148

ಬೆಲೆ : 150 ರೂ.


ನಾನು ಹೇಳಲು ಹೊರಟಿರುವ ಪುಸ್ತಕದ ಕತೆಗಳೇ ಹೀಗೆ. ಧಗಧಗಿಸುತ್ತಾ ತಮ್ಮ ಸಂಭಾಷಣೆಯ ಮೊನಚಲ್ಲಿಯೇ ಎಲ್ಲವನ್ನೂ ಪ್ರಖರವಾಗಿ ತೆರೆದಿಡುತ್ತಾ ಜ್ವಲಿಸುತ್ತದೆ. ಈ ಕಥಾ ಸಂಕಲನದಲ್ಲಿ ಇರುವುದು ಮೂರೇ ಕತೆಗಳಾದರೂ ಅವುಗಳ ಗುಂಗಿನಿಂದ ಒಮ್ಮೆಲೇ ಹೊರಬರುವುದು ಅಸಾಧ್ಯ. ಹಾಗೆಯೇ, ಒಮ್ಮೆಗೆ ಓದಿ ದಕ್ಕಿಸಿಕೊಳ್ಳುವುದೂ ಅಸಾಧ್ಯವೇ.. 


ಇದು ಎಸ್. ಎನ್. ಸೇತುರಾಂ ಅವರ ಮೂರನೇ ಪುಸ್ತಕ. ಗತಿ-ನಿಮಿತ್ತ ಎಂಬ ನಾಟಕ ಬರೆದಿದ್ದಾರೆ. ಎರಡನೇ ಪುಸ್ತಕ 'ನಾವಲ್ಲ' ಕಥಾ ಸಂಕಲನ. ಗತಿ, ನಿಮಿತ್ತ, ಅತೀತ, ಉಚ್ಚಿಷ್ಟ ನಾಟಕಗಳನ್ನು ಬರೆದು ನಿರ್ದೇಶಿಸಿ ನಟಿಸಿದ್ದಾರೆ. ಈ ಕಥಾ ಸಂಕಲನವೂ ಅಷ್ಟೇ.. ರಂಗ ಪ್ರಯೋಗಕ್ಕೆ ಒಳಪಟ್ಟರೆ ಚೆನ್ನಾಗಿರುತ್ತದೆ.. ದಹನ ಕತೆ ಮಾತ್ರ ಕೆಲವು ಕಡೆ ರಂಗ ಪ್ರದರ್ಶನ ಕಂಡಿದೆ. ಇಲ್ಲಿನ ಸಂಭಾಷಣೆಗಳಲ್ಲಿ ಬದಲಾವಣೆಯನ್ನೇ ಮಾಡದೆ ರಂಗ ಪ್ರಯೋಗಕ್ಕೆ ತರಬಹುದು. 


ಇವರ ಬರಹದ ವೈಶಿಷ್ಟ್ಯವೇ ಚುಟುಕಾಗಿದ್ದರೂ ಮೊನಚಾಗಿರುವ ಸಂಭಾಷಣೆಗಳು. ಈ ರೀತಿಯ ಸಂಭಾಷಣೆಗಳಿಂದಲೇ ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಗಳನ್ನು ಕಟ್ಟಿಕೊಡುತ್ತಾರೆ. ಈ ಪುಸ್ತಕದಲ್ಲಿ ಮೂರು ಕಥೆಗಳಿವೆ. ನಂಗೇಲಿ, ಒಂದೆಲಗ ಹಾಗೂ ದಹನ


ನಂಗೇಲಿ : ನನ್ನಿಷ್ಟದ ಕತೆ. ನಂಗೇಲಿ ಕೇರಳದ ಹೆಣ್ಣು.. ಆಗಿನ ದಿನಗಳಲ್ಲಿ ಮೇಲ್ವಸ್ತ್ರ ಧರಿಸಲು ಕರ ಕಟ್ಟಬೇಕಿತ್ತು. ಮೊಲೆ ಕರ ಕಟ್ಟುವುದನ್ನು ವಿರೋಧಿಸಿ ತನ್ನ ಮೊಲೆಗಳನ್ನೇ ಕತ್ತರಿಸಿ ಬಂದ ಅಧಿಕಾರಿಗಳ ಮುಂದಿಟ್ಟು ಧಿಕ್ಕರಿಸಿ ನಿಂತ ಹೆಣ್ಣು. 


ಅಂತಹಾ ನಂಗೇಲಿ ಸೌಮ್ಯಳಿಗೆ ರೂಪಕವಾಗುತ್ತಾಳೆ. 

ಸೌಮ್ಯಳ ರೂಪ ದಪ್ಪ, ಬಣ್ಣ ಕಪ್ಪು. ಆದರೆ, ಓದಿನಲ್ಲಿ ಗೋಲ್ಡ್ ಮೆಡಲಿಸ್ಟ್.. ಒಳ್ಳೆಯ ಸಂಬಳದ ಉದ್ಯೋಗ. ಇಂತಹವಳ ಮದುವೆಗೆ ಒಪ್ಪಂದ.. ಅಸಹ್ಯವೆನಿಸಿ ವಿದೇಶಕ್ಕೆ ಹಾರುವಾಗ ಹೇಳುತ್ತಾಳೆ... ಇಂತಹಾ ಅವಕಾಶ ನಂಗೇಲಿಗೂ ಇದ್ದಿದ್ದರೆ.. 


ಇವಳ ಅಣ್ಣನ ಹೆಂಡತಿ ಇವಳಿಗಿಂತ ಭಿನ್ನ. ಅವಳದ್ದೇ ದಾರಿ ಬೇರೆ, ಆಯ್ಕೆ ಬೇರೆ. ಅವಳು ಹೇಳುತ್ತಾಳೆ.. "ನಾನೇನು ನಂಗೇಲಿ ಅಲ್ಲ. ಮೊಲೆ ಕೊಯ್ದು ಸಹಾನುಭೂತಿಯ ಅಡಿಯಲ್ಲಿ ಬಗ್ಗಿಸೋಕೆ! ಬಡಿದು ಸರಿ ಮಾಡ್ತೀನಿ."


ಇಲ್ಲಿ ಎಲ್ಲರಿಗೂ ಅವರವರದ್ದೇ ಬದುಕು. ಒಂದು ಮಾತು ಉಲ್ಲೇಖಿಸುವಂತಹದ್ದು.. "ದುರ್ಯೋಧನನ ರಾಜ್ಯಬಾರದಲ್ಲಿ ದುಶ್ಯಾಸನದ್ದೇ ಆಡಳಿತ. ಸಂತರು, ಪ್ರಜ್ಞಾವಂತರು ಕೈ ಕಟ್ಟಿ, ತಲೆ ಕೆಳಗೆ ಹಾಕಿ ಕುರ್ತಾರೆ. ಕೀಚಕರು ಪಾರುಪತ್ತೆದಾರರು" 

ಹೌದಲ್ವಾ..??


ಇಲ್ಲಿನ ಸಂಸ್ಕೃತಿ ಬರೀ ನೆಲಕ್ಕೆ ಅಥವಾ ಮನುಷ್ಯರಿಗೆ ಸಂಬಂಧಿಸಿದ್ದಲ್ಲ. ಸುಸಂಸ್ಕೃತರು ವಲಸೆ ಹೊರಟಾಗ ಇಲ್ಲಿ ಉಳಿಯುವುದು ಕಸವಾ..?? ಕಸವನ್ನು ಸುಡುವುದು ಯಾರು..?? 


ಇಲ್ಲಿ ಸೌಮ್ಯಳಷ್ಟೇ ಕಾಡಿದ ಪಾತ್ರವಲ್ಲ. ಸೌಮ್ಯ ಮನೆ ಮಗಳ ಹಾಗೆ ಅನ್ನಿಸಿದರೆ.. ಅವಳ ಅತ್ತಿಗೆಯ ಪಾತ್ರವೂ ಕಾಡುತ್ತೆ. ಆದರೆ, ಆಕೆ ಹಿಡಿದ ದಾರಿ ಸರಿಯಿತ್ತೆ..?? ಆಕೆ ಹಾಗಾಗುವಂತೆ ಮಾಡಿದ್ದು ಯಾರು..?? ಅಕ್ರಮಗಳ ಹಾದಿಯಲ್ಲಿನ ಶಾಪಗಳು ಸೋಮಸುಂದರನನ್ನು ತಟ್ಟಿದವೇ..?? 

ಇಲ್ಲಿ ಇದಲ್ಲದೇ ಮತ್ತೊಂದು ಕುಟುಂಬದ ಕತೆ ಇದೆ. ಬದಲಾವಣೆ ಅಲ್ಲಿಯಾದರು ಪ್ರತಿಫಲನವಾಯಿತೇ..?? 


ಓದಿ ನೋಡಿ ನಂಗೇಲಿ


ಒಂದೆಲಗ : ಒಂದೆಲಗದಲ್ಲಿ ಒಂದೆಲಗ ಸೌಮ್ಯವಾಗಿ ಕಾಡಿದರೆ ತಾಯಿಯಾಗಿ, ದುರ್ಗೆಯ ಅಪರಾವತಾರವೇ ಆಗಿ ಕಾಡಿದವಳು ಸರಸ್ವತಿ. 


"ಮಲಗಿದ್ದಾಯ್ತು ಇನ್ನು ಮದುವೆ ಆಗದೇ ನಿರ್ವಾಹವಿಲ್ಲ ಅನ್ನೋ ಭಾವದಲ್ಲಿ ಈ ಮದುವೆ ಅನ್ನೋದಾದ್ರೆ ಬೇಡ. ಒಂದು ಪ್ರಕೃತಿದತ್ತವಾದ ದೈಹಿಕ ಕ್ರಿಯೆಯಿಂದ ಯಾವ ಹೆಣ್ಣು ಕೆಡೋದು ಇಲ್ಲ., ಅದಾಗಲಿಲ್ಲ ಅಂದಾಕ್ಷಣ ಸ್ವಚ್ಚವೂ ಅಲ್ಲ. ಅನಿವಾರ್ಯದ ಭಾವದಲ್ಲಿ ದಯವಿಟ್ಟು ಮದುವೆ ಬೇಡ. ನಾನು ಮಾಡಿದ ತಪ್ಪನ್ನೇ ನೀನು ಮಾಡಬೇಡ! " ಎನ್ನುವ ಮಾನಸಿಕ ಸಮತೋಲನ ಕಳೆದುಕೊಂಡ ಹೆಣ್ಣುಗಳ ಚಿಕಿತ್ಸಾ ಕೇಂದ್ರದಲ್ಲಿದ್ದ ಸರಸ್ವತಿಯ ಗತ ಏನಿತ್ತು..??


ಆಕೆ ಅಲ್ಲಿ ದಾಖಲಾಗಲು ಕಾರಣವೇನು..??

ಮಗಳಿಗೆ ಇಷ್ಟು ಹೇಳಿದ ತಾಯಿ ನಿಜಕ್ಕೂ ಮಾನಸಿಕ ಅಸ್ವಸ್ಥಳಾಗಿದ್ದಳೇ..??

ಮಗಳ ಬದುಕು ಹೇಗಿತ್ತು..??

ಮಗಳ ಮದುವೆಯಾಯಿತಾ..??

ಒಂದೆಲಗ ಎಂದರೆ ಯಾರು..?? ಒಂದೆಲಗಳ ಇತಿಹಾಸವೇನು..?? 

ಸರಸ್ವತಿಯ ಶಾಪ ಫಲಿಸಿತೇ..??

ಸತ್ತದ್ದು ಸರಸ್ವತಿಯ ಮಗನೋ ಅಥವಾ ಹೀನ ತಳಿಯೊಂದು ಅಂತ್ಯವಾಯಿತೇ..??


ಓದಿ ನೋಡಿ ಒಂದೆಲಗ.

ಸರಸ್ವತಿಯ ಅಂತರಂಗದ ಆಲಾಪ, ಬಹಿರಂಗದ ಮಾತುಗಳು ದಹಿಸದಿದ್ದರೆ ಕೇಳಿ. 


ದಹನ : ಇದು ಈ ಸಂಕಲನದ ಕೊನೆಯ ಹಾಗೂ ಪ್ರಮುಖ ಕತೆ. 


"ಕಲ್ಲು ಎಸೆಯೋದು. ಹಣ್ಣು ಬಿದ್ರೆ ಸೈ. ಇಲ್ಲದಿದ್ರೆ ರಸ್ತೇಲಿ ಕಾಲು ಕಲ್ಲಿಗೆ ತಾಗತ್ತೆ ಹಾಗಾಗಿ ಎಸೆಸದ್ದು ಅಂದ್ರಾಯ್ತು. ದಕ್ಕಿದ್ರೆ ರಾವಣ ದಕ್ಕದಿದ್ರೆ ರಾಮ. " 

ಎಷ್ಟೋ ಜನ ಪ್ರಸಿದ್ಧತೆಯ ಮುಖವಾಡ ಧರಿಸಿಕೊಂಡಿರುವಾಗ ಅಂದುಕೊಳ್ಳುವ ಮನದ ಮಾತು ಇದು. ಅವರೆಲ್ಲರ ಪ್ರತಿನಿಧಿಯಾಗಿ ಇಲ್ಲಿರುವುದು ಎಚ್.ಬಿ.ಆರ್. 

ಸಭ್ಯ, ಸುಸಂಸ್ಕೃತ ಮನುಷ್ಯ.


ಈತ ವಿದುರ. ಪ್ರಸಿದ್ಧ ನಟ, ಕತೆಗಾರ. ಆತನ ಅಭಿಮಾನಿಯಾಗಿದ್ದ ಅಕ್ಷತಾ ತನ್ನ ಬದುಕಿನ ಸಮಸ್ಯೆ ಒಂದನ್ನು ಇವರ ಎದುರಲ್ಲಿ ತೆರೆದಿಟ್ಟು ಅವರಿಂದ ಸಾಂತ್ವನ ದಕ್ಕಿಸಿಕೊಳ್ಳುವ ಪ್ರಯತ್ನದಲ್ಲಿರುತ್ತಾಳೆ.


ಆದರೆ, ಆತನ ಮನಸ್ಸಿನ ಆಲೋಚನೆಗಳೇ ಬೇರೆ..

ಅಕ್ಷತಾ ತನ್ನ ಸಮಸ್ಯೆಗಳಿಗೆ ಆತನಿಂದ ಪರಿಹಾರ ಪಡೆದುಕೊಂಡಳೆ..? 

ಹೆಣ್ಣಿನ ಹೆಣ್ತನ ದಹನವಾಯಿತೆ ಅಥವಾ ಹೆಣ್ಣನ್ನು ದುರುಪಯೋಗ ಪಡಿಸಿಕೊಳ್ಳುವ ಗಂಡಿನ ಅಹಂಕಾರ ದಹನವಾಯಿತೆ..??


ಓದಿ ದಹನ ಕತೆಯನ್ನು


****


ಮುನ್ನುಡಿಯಲ್ಲಿ ರಾಘವೇಂದ್ರ ಪಾಟೀಲ್ ಅವರು ಹೇಳುವಂತೆ ಈ ಕಥೆಗಳು ಸಮಾಜವು ತನ್ನ ಮನದಲ್ಲಿಟ್ಟುಕೊಂಡಿರುವ ಅನಾರೋಗ್ಯವನ್ನು ನಿವಾರಿಸಿಕೊಳ್ಳುವ ಕೆಥಾರ್ಸಿಸ್ ( ಮಾನಸಿಕ ಕ್ಲೇಶ ನಿವಾರಣೆ) ಚಿಕಿತ್ಸೆಯಂತೆ ಕಾರ್ಯ ನಿರ್ವಹಿಸುತ್ತವೆ ಎಂಬುದು ಸುಳ್ಳಲ್ಲ.


****


ಇಲ್ಲಿನ ಕತೆಗಳು ಸತ್ಯ ಹೇಳುವ ಬಗೆಯನ್ನು ಅರಗಿಸಿಕೊಳ್ಳುವ ಧೈರ್ಯ ಬೇಕು. ಈ ಕಥೆಗಳು ಎಲ್ಲಿಂದಲೋ ಹೆಕ್ಕಿ ತಂಡ ಹೊರಗಿನ ಕತೆಗಳಲ್ಲ. ಇವು ಅಂತರಂಗದ ಸತ್ಯದ ತುಣುಕುಗಳು. ಇಲ್ಲಿನ ಕತೆಗಳ ಪಾತ್ರಗಳ ಗೋಳಾಟ.. ನೋವು ಎನ್ನಿಸದೆ ಇರಿವ ಚೂರಿಯಂತೆ ಭಾಸವಾಗುತ್ತದೆ. ಒಬ್ಬ ಲೇಖಕ ಹೆಣ್ಮನದ ಭಾವಗಳನ್ನು, ತುಮುಲಗಳನ್ನು ಇಷ್ಟರ ಮಟ್ಟಿಗೆ ಅನಾವರಣಗೊಳಿಸಬಲ್ಲನೇ ಎನ್ನಿಸುತ್ತದೆ. ಈ ಮಾತು ಅತಿಶಯೋಕ್ತಿಯಲ್ಲ. 


"ಸಭ್ಯ ಸಮಾಜದ ಅವಶ್ಯಕತೆ ಇದೆ. ಸಭ್ಯತೆಯ ಸೋಗಿನದ್ದಲ್ಲ" ಎನ್ನುವ ಸೇತುರಾಮ್ ಸರ್ ನುಡಿಗಳು ನೇರವಾಗಿಯೇ ತಟ್ಟಿದ ಹಾಗನ್ನಿಸುತ್ತದೆ. ಬಹುಶಃ, ಇಲ್ಲಿನ ಮುಕ್ಕಾಲಂಶ ಮಾತುಕತೆಗಳು ಹೀಗೆಯೇ ಇವೆ. ನುಡಿಗಟ್ಟುಗಳ ಹಾಗೆ ಗಟ್ಟಿಯಾಗಿ ನುಡಿದ ಮಾತುಗಳು. ಯಾವುದನ್ನು ಉಲ್ಲೇಖಿಸಲಿ, ಯಾವುದನ್ನು ಹಾಗೆಯೇ ಉಳಿಸಲಿ..?? ಯಾವ ಮಾತನ್ನು ಆಯ್ದುಕೊಳ್ಳಲಿ ಎಂಬ ಗೊಂದಲ ಉಂಟಾಗಿದ್ದು ಸತ್ಯವೇ. ಇಷ್ಟು ನೇರ, ದಿಟ್ಟ ನಿಲುವಿನ ಕಥೆಗಳು ಓದಿದವರ ಮನಸ್ಸಿನ ಅಹಂಕಾರವನ್ನು ದಹಿಸುತ್ತವೆ. ಮನಸ್ಸನ್ನು ಪರಿಶುದ್ಧಗೊಳಿಸುತ್ತವೆ. 


ಸೇತುರಾಂ ಸರ್ ಅವರ ಮತ್ತೊಂದು ಸಂಕಲನ ಕೂಡಾ ಹೀಗೆಯೇ ಇದ್ದರೂ.. ಇದರಲ್ಲಿ ಇನ್ನೂ ಬಿಡುಬೀಸಾಗಿ ತಲುಪಿಸಿರುವ ವಿಚಾರಗಳಿವೆ. ಹಾಗೆಯೇ ಮಾತಿನಲ್ಲಿಯೋ, ಭಾಷಣದಲ್ಲಿಯೋ ತೆರೆದಿಟ್ಟರೆ ಬೋರಾಗಬಹುದಾದ ಅಥವಾ ಸೂಕ್ಷ್ಮವಾಗಿ ತೆರೆದಿಡಲಾಗದ ವಿಚಾರಗಳನ್ನು ಇಲ್ಲಿನ ಕತೆಗಳ ಮೂಲಕ ತಲುಪಿಸಿದ್ದಾರೆ. 


ಈ ಧಗಧಗಿಸುವ ಪ್ರಖರ ಜ್ವಾಲೆಯ ಬೆಳಕನ್ನು ಯಾವುದಕ್ಕಾದರೂ ಬಳಸಬಹುದು. ಬೆಳಕು ಚೆಲ್ಲಲು ಅಥವಾ ಭಸ್ಮ ಮಾಡಲು.. ಆಯ್ಕೆ ಓದಿದವರದ್ದೇ..


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ