ಶುಕ್ರವಾರ, ಏಪ್ರಿಲ್ 10, 2026

ಮಿಹಿರಾಕುಲ (ಪುಸ್ತಕ ಯಾನ - 119)


ಪುಸ್ತಕದ ಶೀರ್ಷಿಕೆ : ಮಿಹಿರಾಕುಲ

ಲೇಖಕರು : ಡಾ. ಕೆ. ಎನ್. ಗಣೇಶಯ್ಯ

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2015

ಮೂರನೇ ಮುದ್ರಣ : 2020 ( ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 128

ಬೆಲೆ : 95 ರೂ. 


ಮಿಹಿರಾಕುಲ ಡಾ|| ಕೆ.ಎನ್ ಗಣೇಶಯ್ಯನವರ ಕಥಾ ಸಂಕಲನ. ಇತಿಹಾಸದ ತಿರುಚಲಾದ ಎಷ್ಟೋ ಕಥಾನಕಗಳನ್ನು ಸಾಕ್ಷಿ ಹಾಗೂ ಆಧಾರದ ಮೇಲೆ ಕಥಾ ರೂಪದಲ್ಲಿ ನೀಡುತ್ತಾರೆ. ಈ ಕಥೆಗಳನ್ನು ನಂಬದೇ ಇರಲಾಗುವುದಿಲ್ಲ ಆದರೂ ಜನಜನಿತವಾಗಿರುವ ಕಥೆಗಳನ್ನು ಅಲ್ಲಗಳೆದು ಈ ವಿಚಾರಗಳನ್ನು ಅಲ್ಲೆಲ್ಲಾ ಉಲ್ಲೇಖಿಸಲೂ ಆಗದು. ಆದರೆ, ಅದರ ಜೀವನಪಾಠಗಳನ್ನು ನಾವು ಕಲಿಯಬೇಕು. ಎಂದಿನಂತೆ ವಿಭಿನ್ನ ಕಥಾವಸ್ತುವಿನ ಜೊತೆಗೆ ನಿರೂಪಣಾ ಶೈಲಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ. ಜೊತೆಗೆ ಛಾಯಾಚಿತ್ರಗಳು ಹಾಗೂ ಸಂಬಂಧಿತ ರೇಖಾ ಚಿತ್ರಗಳು ನಮ್ಮನ್ನು ಕಥೆಯ ಒಳಗೆ ಕರೆದುಕೊಂಡು ಹೋಗಿ ನಮ್ಮನ್ನು ಪ್ರತ್ಯಕ್ಷದರ್ಶಿಗಳಾಗುವಂತೆ ಮಾಡಿಬಿಡುತ್ತವೆ. 


ಮಿಹಿರಾಕುಲ ನಾಲ್ಕು ಕಥೆಗಳ ಕಥಾ ಸಂಕಲನ. ಮೂರು ಕಥೆಗಳು ಇತಿಹಾಸಕ್ಕೆ ಸಂಬಂಧಿಸಿದವು. ಮಿಹಿರಾಕುಲ, ಗಂಡೀ ಕೋಟೆ, ಮಲಿನಾಲಿಂಗನ. ಇನ್ನೊಂದು ಪ್ರಸ್ತುತಕ್ಕೂ ಪ್ರಸ್ತುತವೆನಿಸುವ ಕಥೆ ಆದಿನೆಲೆ. 


ಮಿಹಿರಾಕುಲ :

ಶೀರ್ಷಿಕೆಯಾಗಿ ಮನಸೆಳೆಯುವ ಹೆಸರು "ಮಿಹಿರಾಕುಲ". ಇದು ಹೂಣರ ರಾಜನೊಬ್ಬ ಕಾಶ್ಮೀರದಲ್ಲಿ ಶಿವಾಲಯ ನಿರ್ಮಾಣ ಮಾಡಿದ ಕಥೆ. ಮಿಹಿರಾಕುಲನ ಕುರಿತು ಮತ್ತೊಂದು ಮಾತು ಸಹಾ ಇದೆ.. "ಕರುಣೆಯನ್ನೇ ಆಯುಧವನ್ನಾಗಿ ಉಪಯೋಗಿಸಿ ಒಂದು ಸಹೃದಯ ಜೀವಿಯನ್ನು ನಿಷ್ಕರುಣಿಯನ್ನಾಗಿಸಿದ ದುರಂತ ಸತ್ಯಕ್ಕೆ ಒಂದು ದೃಷ್ಟಾಂತ ಆತನ ಜೀವನ". ಮಿಹಿರಾಕುಲನ ಬಗ್ಗೆ ಚರಿತೆಯಲ್ಲಿಯೂ ವಿರೋಧ ನಿಲುವುಗಳಿವೆ. ತಮ್ಮ ಧಾರ್ಮಿಕ ವಿಹಾರಗಳನ್ನು ನಾಶ ಮಾಡಿದ್ದಕಾಗಿ ಬೌದ್ಧ ಧರ್ಮದ ಚರಿತ್ರಕಾರರು ಅವನನ್ನು ಕ್ರೂರ ಎಂದರೆ, ರಜಪೂತರ ವಂಶಗಾಥೆಗಳಲ್ಲಿ ಅವನ್ನು ವೈಭವಿಕರಿಸಲಾಗಿದೆ. ಅವರವರ ಭಾವಕ್ಕೆ ತಕ್ಕಂತೆ ನಿರ್ಮಾಣವಾಗುವ ಚರಿತ್ರೆಗಳಲ್ಲಿ ಸತ್ಯ ಎಲ್ಲೋ ಮರೆಯಾಗಿರುವಂತನಿಸಿತು. 


ಗಂಡೀ ಕೋಟೆ :

'ಭಾರತದ ಗ್ರ್ಯಾಂಡ್ ಕ್ಯಾನನ್' ಎಂದೇ ಪ್ರಸಿದ್ಧಿಯಾಗಿರುವ ಗಂಡೀ ಕೋಟೆಯ ದುರ್ಗಮ ಕಣಿವೆ, ಸುತ್ತಲಿನ ಪೆನ್ನಾರ್ ನದಿ, ಅಭೇದ್ಯವೆಂದೇ ಹೆಸರಾಗಿದ್ದ ಗಂಡೀ ಕೋಟೆಯ ಹಿನ್ನೆಲೆಯಾಗಿ ಫ್ರೆಂಚ್ ಯಾತ್ರಿಕ ಟ್ರಾವರ್ನಿಯರ್ ದಕ್ಷಿಣದಿಂದ ವಜ್ರವೊಂದನ್ನು ಕೊಂಡೊಯ್ದ ಕಥೆ ಇದೆ. ನಂಬಿಕೆದ್ರೋಹ, ಒಳಸಂಚಿನ ಜೊತೆಗೆ ಧೈರ್ಯ- ಶೌರ್ಯವೂ ತುಂಬಿದೆ. 


ಆದಿನೆಲೆ :

ಚರಿತ್ರೆಯ ಎಳೆ ಹಿಡಿದು ಈ ದಿನಮಾನಕ್ಕೂ ಪ್ರಸ್ತುತವೆನ್ನಿಸುವಂತೆ ಬರೆದ ಕಥೆ 'ಆದಿನೆಲೆ'. ಸಂಸ್ಕೃತಿ- ಪರಂಪರೆಯನ್ನು ರಕ್ಷಿಸುವ ಸಲುವಾಗಿ ನಾವು ಆ ಕಲೆಗಳನ್ನು ಸಿಂಗಾರಗೊಳಿಸಿದ ಶವಗಳಂತೆ ಕಾಣುತ್ತಿದ್ದೇವೆ ಎಂಬ ಭಾವ ಮೂಡುವುದಂತೂ ಸುಳ್ಳಲ್ಲ. ಜೀವ ಸಂಕುಲದ ಉದಾಹರಣೆಯಂತೂ ಮನೋಜ್ಞವಾಗಿದೆ. ಎಲ್ಲಿಯೂ ಸಲ್ಲದೆ ಅಥವಾ ಎಲ್ಲೆಡೆಯೂ ಸಲ್ಲುವ ಜನರ ಧ್ವನಿಯಂತಿದೆ ಇದು.


ಮಲಿನಾಲಿಂಗನ :

ಮಲಿನಾಲಿಂಗನ ಕಥೆ ಸಲೀಮ್ ಹಾಗೂ ಅನಾರ್ಕಲಿಯರದ್ದು. ಕಥಾ ಶೀರ್ಷಿಕೆ ವಿಭಿನ್ನವಾಗಿದ್ದು ಯಾಕೆ ಎಂಬುದರ ಉತ್ತರ ಕಥೆಯ ಕಡೆಯ ಭಾಗದಲ್ಲಿ ತಿಳಿದಾಗ ಆಗುವ ಅಚ್ಚರಿ ಓದಿಯೇ ಅನುಭವಿಸಬೇಕು. ಕಾಣದ ಸತ್ಯದ ಅನಾವರಣ ಹೀಗೂ ಇರಬಹುದಾ ಎಂಬ ಪ್ರಶ್ನೆ ಮೂಡುತ್ತದೆ. ಶತಮಾನಗಳಿಂದ ಅಮರ ಎನ್ನಿಸಿಕೊಂಡಿದ್ದ ಪ್ರೇಮಗಾಥೆ ನಿಗೂಢ ವಿಭಿನ್ನವಾಗಿ ಹಾಗೂ ವಿಚಿತ್ರವಾಗಿ ಕಂಡದ್ದಂತೂ ಸುಳ್ಳಲ್ಲ.


ವಿಭಿನ್ನ ಕಥಾಸಂಕಲನ ಅಚ್ಚರಿಯ ಜೊತೆಗೆ ಆಲೋಚಿಸುವಂತೆ ಮಾಡುತ್ತಾ ನೂರಾರು ಪ್ರಶ್ನೆಗಳನ್ನು ಮೂಡಿಸಿದ್ದಂತೂ ಸುಳ್ಳಲ್ಲ. ಇನ್ನೂ ಈ ಕತೆಗಳನ್ನು ಓದಡಿದ್ದವರು ಓದಿ ನೋಡಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ