ಪುಸ್ತಕದ ಶೀರ್ಷಿಕೆ : ಕಯ್ಯಾರ ಕಿಞ್ಞಣ್ಣ ರೈ
ಲೇಖಕರು : ಕೆ. ಎಸ್. ಶರ್ಮಾ
ಪ್ರಥಮ ಮುದ್ರಣ : 1971
ಪುಟಗಳು : 74
ಉಚ್ಚರಿಸಲು ಹಾಗೂ ಬರೆಯಲು ಕಷ್ಟ ಪಡುತ್ತಿದ್ದ ಈ ಹೆಸರು ಕನ್ನಡದ ಪಠ್ಯಪುಸ್ತಕಗಳಲ್ಲಿ ಕಂಡುಬರುತ್ತಿದ್ದುದರಿಂದ ಸೆಳೆಯುತ್ತಿದ್ದ ಹೆಸರು ಕಯ್ಯಾರ ಕಿಞ್ಞಣ್ಣ ರೈ. ಆದರೆ, ಅವರ ಬಗ್ಗೆ ತಿಳಿಯುತ್ತಾ ಹೋದಂತೆ ಅವರ ಹೆಸರಿನ ಹಿಂದಿನ ಅಗಾಧತೆ ಹಾಗೂ ವ್ಯಕ್ತಿತ್ವ ಅನಾವರಣವಾಯಿತು.
ಲೇಖಕರು ಇವರನ್ನು ಸಂದರ್ಶನ ಮಾಡಲು ಹೋದಾಗ ಅವರು ಮಾಡುವ ಆತಿಥ್ಯದಿಂದ ಶುರುವಾದ ಈ ಪುಸ್ತಕ ಅವರ ಜೀವನಕ್ರಮವನ್ನು ಲೇಖಕರೇ ಹೇಳುತ್ತಾ ಹೋಗುತ್ತಾರೆ.
ಕಯ್ಯಾರ ಕಿಞ್ಞಣ್ಣ ರೈ ಈಗಿನ ಕೇರಳ ರಾಜ್ಯಕ್ಕೆ ಸೇರಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ 1915 ಜೂನ್ 8 ರಂದು ಜನಿಸಿದರು. ತಂದೆ ದುಗ್ಗಪ್ಪ ರೈ ಮತ್ತು ತಾಯಿ ದೈಯಕ್ಕು. ಆಗಿನ ಕಾಲದಲ್ಲಿ ಅವರ ತಂದೆಯ 'ಮನೆಗೆ ಮಾರಿ ಊರಿಗೆ ಉಪಕಾರಿ' ಎಂಬ ಗುಣದಿಂದ ತಂದೆಯಿಂದ ಯಾವುದೇ ರೀತಿಯ ಸುಖ ಕಾಣಲಿಲ್ಲ. ಮಂಗಲಪಾಡಿಯ ಕಯ್ಯಾರದಲ್ಲಿ ತನ್ನ ಹಕ್ಕಿನ ಆಸ್ತಿಯಲ್ಲಿ ಪ್ರಾಯವನ್ನು ಕಳೆದರು. ಅವರದ್ದು ಅಳಿಯಕಟ್ಟು ಪದ್ಧತಿಯಾದ್ದರಿಂದ ಅವರ ಸೋದರಮಾವನವರು ಹಾಗೂ ಅಜ್ಜ ಶಂಕರಾಳ್ವರಿಂದ ರೈ ಅವರ ಬಾಳಿನ ನಂದಾದೀಪ ಬೆಳಗಿತೆಂದರೆ ತಪ್ಪಾಗಲಾರದು.
ಅಜ್ಜನ ಹಿರಿಮೆಯನ್ನು, ಪಾಂಡಿತ್ಯವನ್ನು ವರ್ಣಿಸಲು ಅವರು ಹೀಗೆ ಬರೆಯುತ್ತಾರೆ.
'ಅಶ್ವಧಾಟಿಯ ಹಿಡಿದು ನಮ್ಮಜ್ಜ ಜೈಮಿನಿಯ
ಓದುತಿರೆ, ಸರಸತಿಯೆ ಕುಣಿಯಬೇಕು'
ಎನ್ನುವ ಮಾತು ಅಜ್ಜನ ಕುರಿತ ಹೊಗಳಿಕೆಯನ್ನು ಹಾಗೂ ಪದ್ಯ ಕಟ್ಟಿದ ಶೈಲಿಯನ್ನೂ ತೋರುತ್ತದೆ.
ಬಾಲ್ಯದ ಓದು ಪೆರಡಾಲದಲ್ಲಾದರೆ.. ನಂತರ, ಸಂಸ್ಕ್ರತ ನವೋದಯಕ್ಕೆ ಪ್ರವೇಶ ದೊರೆಯಿತು. ಒಂದೆರಡು ವರ್ಷ ಅಲ್ಲಿ ಕಳೆದ ನಂತರ, ಸೋದರಮಾವ ಹಾಗೂ ತಾತ ಆಸೆ ಪಟ್ಟಂತೆ ಶ್ರೀಮಂತರಿಗಷ್ಟೇ ಪ್ರವೇಶ ಎನ್ನಿಸಿದ್ದ ಇಂಗ್ಲೀಷ್ ಓದಿನ ಶಿಕ್ಷಣಕ್ಕೆ ಮುಂದಡಿಯಿಟ್ಟರು. ಆದರೆ, ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣದಿಂದ ಮುಂದಿನ ಓದು ಸಾಧ್ಯವಾಗದೇ.. ಮತ್ತೆ ಸಂಸ್ಕ್ರತ ಓದನ್ನು ಮುಂದುವರಿಸುವಂತಾಯಿತು. 'ಈ ಭಾಷೆ ಕೈಗೆಟುಕದು' ಎಂದು ಕೈಬಿಡಲು ಹೊರಟಿದ್ದರೂ.. ನಂತರದಲ್ಲಿ.. "ಎಡವಿ ಬಿದ್ದರೇನೊಮ್ಮೆ ಅಡಗದಂದು ನಡೆವ ಹೆಮ್ಮೆ" ಎನ್ನುತ್ತಾ ಧೈರ್ಯ ಮಾಡಿ ಮುನ್ನಡಿಯಿಟ್ಟು ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿಯಾಗಿ, ತರಗತಿಗೇ ಮೊದಲಿಗರಾದರು.
ಓದಿನ ಜೊತೆಜೊತೆಗೇ ದುರ್ಗಾದಾಸನೆಂಬ ಹೆಸರಿನಲ್ಲಿ ಜಯ ಕರ್ನಾಟಕ, ದೇಶಾಭಿಮಾನಿ, ರಾಷ್ಟಬಂಧು ಎಂಬ ಪತ್ರಿಕೆಗಳಿಗೆ ಬರೆದರು.
ಓದು ಮುಗಿಸಿ 'ವಿದ್ವಾನ'ರಾಗಿ ಪತ್ರಿಕೋದ್ಯಮದಲ್ಲಿಯೂ ಕೆಲ ವರ್ಷ ಕೆಲಸ ಮಾಡಿದರು. ಈ ನಡುವೆ 'ನಿರಂಜನ'ರೂ ರೈ ಗಳ ಜೊತೆಗಾರರಾದರು. ಇನ್ನು ಹಲವಾರು ಖ್ಯಾತನಾಮರು ಜೊತೆಯಾಗಿ ಮಂಗಳೂರಿನ ಮಿತ್ರಮಂಡಳಿ ಸೇರಿ ಅವರ ಸಾಹಿತ್ಯ ಸೇವೆಯಲ್ಲಿ ಜೊತೆಯಾದರು.
ರಾಜಕೀಯ, ಸಾಮಾಜಿಕ ಹಾಗೂ ಸಾಹಿತ್ಯದ ವಾತಾವರಣ ರೈಯವರನ್ನು ಮತ್ತಷ್ಟು ಪ್ರಬುದ್ಧರನ್ನಾಗಿಸಿತು. 1944 ರಿಂದ ಅವರ ಬದುಕಿನ ಹೊಸ ಅಧ್ಯಾಯ ಶುರುವಾಯಿತು. ಅವರು ಶಿಕ್ಷಕರಾಗಿ ಕಾರ್ಯ ನಿರ್ವಹಿಸಲು ಶುರು ಮಾಡಿದರು. ಅಧ್ಯಾಪಕ ವೃತ್ತಿಯ ಜೊತೆಗೆ ಓದುತ್ತಲೇ ಬಿ.ಎ ಹಾಗೂ ಎಂ.ಎ ಪದವಿಯನ್ನು ಪಡೆದರು. ಆದರೂ, ಅವರು ಪೆರಡಾಲವನ್ನು ಬಿಟ್ಟು ಮತ್ತೆಲ್ಲಿಗೂ ಹೋಗಲಿಲ್ಲ.
ಕಯ್ಯಾರರು ಉಞ್ಞಕ್ಕ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ ಆರು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳ ತುಂಬು ಸಂಸಾರದೊಂದಿಗೆ ಬದಿಯಡ್ಕ ಪೆರಡಾಲ "ಕವಿತಾ ಕುಟೀರ"ದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದರು.
ಕಾಸರಗೋಡು ಕರ್ನಾಟಕದ ಕೈತಪ್ಪಿ ಕೇರಳಕ್ಕೆ ಸೇರಿಕೊಂಡುದರ ಬಗೆಗೆ ನಿರಂತರ ಅತೃಪ್ತರಾಗಿದ್ದವರು. ಆದರೆ ಆ ಅತೃಪ್ತಿ ಕೇವಲ ನೀರಸವಾಗದೆ ಹತ್ತು ಹಲವು ಮುಖಗಳಲ್ಲಿ ಕನ್ನಡದ ಪ್ರೀತಿಯಾಗಿ, ಕನ್ನಡಿಗರನ್ನು ಎಚ್ಚರಿಸುವ ಧ್ವನಿಯಾಗಿ, ಕಾಯಕದಲ್ಲಿ ನಿರಂತರ ಸೃಜನಶೀಲವಾಗಿ ನಡೆಯಿತು.
ಲೇಖಕರು ಅವರನ್ನು ಸಂದರ್ಶಿಸುವ ಸಂಧರ್ಭದಲ್ಲಿ ಅವರಿಗಿನ್ನೂ 56 ವರ್ಷ. ಶಿಕ್ಷಕರಾಗಿ ದಣಿವರಿಯದ ಸೇವೆ ಮಾಡುತ್ತಿದ್ದರು. ಕೇರಳದ ಈ ಪ್ರದೇಶದಲ್ಲಿ ಕನ್ನಡ ತಾಯಿಯ ಸೇವೆ ಮಾಡುವುದು ಸುಲಭದ ಮಾತಲ್ಲ. ಅಧ್ಯಾಪಕರಾಗಿರುವಂತೆ ತನ್ನ ಮನೆತನದ ಕಸುಬಾದ ರೈತ ವೃತ್ತಿಯನ್ನೂ ಮಾಡುತ್ತಿದ್ದರು. 'ನೇಗಿಲ' ಸಹವಾಸ ಅವರನ್ನು ಮಣ್ಣಿನ ಮಗನನ್ನಾಗಿಯೂ ಬೆಳೆಸಿತು. ತನ್ನೂರಿನ ಪಂಚಾಯ್ತಿ ಸದಸ್ಯರೂ ಆಗಿದ್ದವರು.
ಕಯ್ಯಾರ ಕಿಞ್ಞಣ್ಣ ರೈ ಅವರು ಸಾಹಿತ್ಯಕವಾಗಿ ಹಲವಾರು ಸಾಧನೆಗಳನ್ನು ಮಾಡಿದ್ದು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮುಂತಾದ ಕವನ ಸಂಕಲನಗಳನ್ನು ಕನ್ನಡದಲ್ಲಿಯೂ ಹಾಗೂ ಒಂದು ತುಳು ಕವನ ಸಂಕಲನವನ್ನೂ ಪ್ರಕಟಿಸಿದ್ದಾರೆ. ಕಾರ್ನಾಡ ಸದಾಶಿವರಾವ್, ರತ್ನರಾಜಿ, ಎ. ಬಿ. ಶೆಟ್ಟಿ ಮುಂತಾದವರ ಜೀವನಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈಯವರ ಕುರಿತು ಮೂರು ಗ್ರಂಥಗಳನ್ನು ಬರೆದಿದ್ದಾರೆ.
ಪಂಚಮಿ ಮತ್ತು ಆಶಾನ್ರೂ ಖಂಡಕಾವ್ಯಗಳು ಎನ್ನುವ ಎರಡು ಅನುವಾದ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯದೃಷ್ಟಿ ಎನ್ನುವ ಲೇಖನ ಸಂಕಲನ ಪ್ರಕಟಿಸಿದ್ದಾರೆ. ಮಕ್ಕಳ ಪದ್ಯಮಂಜರಿ ಎನ್ನುವ ಮಕ್ಕಳ ಕವನ ಸಂಕಲನ ರಚಿಸಿದ್ದಾರೆ. ಭಾರತ-ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಮಕ್ಕಳಿಗಾಗಿ 'ಪರಶುರಾಮ'ವನ್ನು ಬರೆದುಕೊಟ್ಟಿದ್ದಾರೆ.
ನವೋದಯ ವಾಚನಮಾಲೆ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಎಂಟು ಪಠ್ಯಪುಸ್ತಕಗಳನ್ನು, ವ್ಯಾಕರಣ ಮತ್ತು ಪ್ರಬಂಧ ಎನ್ನುವ ನಾಲ್ಕು ಕೃತಿಗಳನ್ನು ಹೊರತಂದಿದ್ದಾರೆ. 'ವಿರಾಗಿಣಿ' ಎನ್ನುವದು ರೈ ಅವರು ಬರೆದ ಏಕೈಕ ನಾಟಕ. 'ದುಡಿತವೆ ನನ್ನ ದೇವರು' ರೈಯವರ ಅತ್ಮಕಥನ. ಇದಲ್ಲದೆ ವಿವಿಧ ಪತ್ರಿಕೆಗಳಿಗೆ ಇವರು ಬರೆದ ಲೇಖನಗಳ ಸಂಖ್ಯೆ ಐದುಸಾವಿರದ ಗಡಿ ಮುಟ್ಟುತ್ತದೆ.
ಕಯ್ಯಾರ ಕಿಞ್ಞಣ್ಣ ರೈ ಅವರಿಗೆ 1969ರ ಲ್ಲಿ ಶ್ರೇಷ್ಠ ಅಧ್ಯಾಪಕ ಎಂದು ರಾಷ್ಟ್ರ ಪ್ರಶಸ್ತಿ ಲಭಿಸಿತು. ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಅದೇ ವರ್ಷ ಪ್ರಶಸ್ತಿ ನೀಡಿ ಸನ್ಮಾನಿಸಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1997ರಲ್ಲಿ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್, ನಾಡೋಜ ಪ್ರಶಸ್ತಿ, ಕರ್ನಾಟಕ ಸರ್ಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ಇನ್ನೂ ಮುಂತಾದವು ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಸಂದ ಪ್ರಮುಖ ಗೌರವಗಳು.
ಈ ಕನ್ನಡ ಪ್ರಿಯ ವಿದ್ವಾಂಸರಾದ ಕಯ್ಯಾರ ಕಿಞ್ಞಣ್ಣ ರೈ ತಮ್ಮ ಶತಾಯುಷ್ಯವನ್ನು ಪೂರೈಸಿದ ಎರಡು ತಿಂಗಳಲ್ಲಿ 2015ರ ಆಗಸ್ಟ್ 9ರಂದು ಈ ಲೋಕದ ತಮ್ಮ ಬದುಕಿಗೆ ವಿದಾಯ ಹೇಳಿದರು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ