ಶುಕ್ರವಾರ, ಏಪ್ರಿಲ್ 10, 2026

ತೂಗುಮಂಚದಲ್ಲಿ ಕೂತು... (ಪುಸ್ತಕ ಯಾನ - 125)


ಪುಸ್ತಕದ ಶೀರ್ಷಿಕೆ : ತೂಗುಮಂಚದಲ್ಲಿ ಕೂತು...

ಲೇಖಕರು : ಶ್ರೀನಿಧಿ ಡಿ.ಎಸ್

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2019

ಪುಟಗಳು : 96

ಬೆಲೆ : 95 ರೂ.


ಬದುಕಿನ ಅನೇಕ ಲಹರಿಗಳು ಕಥೆಗಳಾಗದೆ, ಒಂದು ಚಂದದ ಭಾವವನ್ನು ಹುಟ್ಟಿಸಿ ನೆನಪುಗಳನ್ನು ಕೆದಕುತ್ತ ಸಣ್ಣ-ಸಣ್ಣ ಲಹರಿಗಳ ಝರಿಯಾಗಿ ಹರಿಯುತ್ತಾ.. ಬರಿಕಣ್ಣಿಗೆ ಕಾಣದ ಎಷ್ಟೋ ಭಾವಗಳನ್ನು ಬಡಿದೆಬ್ಬಿಸುತ್ತದೆ. ತೂಗುಮಂಚದ ಮೇಲೆ ಕೂತು ತೂಗಿಕೊಳ್ಳುತ್ತಾ ಇರುವಾಗ.. ಗುನುಗುನಿಸುವ ಹಾಡಿನಂತೆ, ಅಲ್ಲಿನ ಧ್ಯಾನದಂತೆ, ಯಾವುದೋ ನೆನಪಿನಂತೆ.. ಒಟ್ಟಿನಲ್ಲಿ ವಾಸ್ತವದ ಹಲವು ಭಾವಗಳಿಂದ ಮುಕ್ತರಾಗಿ ಯಾವುದೋ ಲೋಕದಲ್ಲಿ ಕಳೆದುಹೋಗುವ ಒಂದು ರೀತಿಯ ಧ್ಯಾನದಂತೆ ಭಾಸವಾಗಿದ್ದು ಈ ಪುಸ್ತಕದ ಓದು. ಈ ಸುಲಲಿತ ಪ್ರಬಂಧಗಳು ಸುಲಲಿತವಾಗಿ ನಮ್ಮನ್ನು ತಮ್ಮೊಳಗೆ ಮುಳುಗಿಸಿಕೊಳ್ಳುತ್ತಾ ಸಾಗುತ್ತವೆ.


ಲೇಖಕರಾದ ಶ್ರೀನಿಧಿ ಡಿ.ಎಸ್ 1983 ರಲ್ಲಿ ದಕ್ಷಿಣ ಕನ್ನಡದ ಕಿನ್ನಿಗೋಳಿಯ ಸಾಹಿತ್ಯಾಸಕ್ತ ಕುಟುಂಬದಲ್ಲಿ ಜನಿಸಿ ಅಪ್ಪನ ಒಡನಾಟದಿಂದ, ಎಳವೆಯಿಂದಲೇ ಬರವಣಿಗೆಯತ್ತ ವಾಲಿದವರು. ವಿವಿಧ ಟಿ.ವಿ ವಾಹಿನಿಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿ, ಧಾರಾವಾಹಿಗಳ ಚಿತ್ರಕಥೆ ಹಾಗೂ ಸಂಭಾಷಣೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. 'ಹೂ ಹೆಕ್ಕುವ ಸಮಯ' ಎಂಬ ಕವನ ಸಂಕಲನ ಹಾಗೂ 'ಚಿತ್ರ ಚಾಪ' ಎಂಬ ಪರಿಸರ ಕಾಳಜಿಯ ಬರಹ ಸಂಕಲನದ ಸಹಲೇಖಕ ಇವರು. 


ಅಪ್ಪನಾಗುವ ಕಷ್ಟ-ಸುಖ :

ಎಷ್ಟೋ ಸಿನಿಮಾಗಳಲ್ಲಿ ಹೆಂಡತಿಯ ಹೆರಿಗೆಯ ಸಂದರ್ಭದಲ್ಲಿ ತೋರಿಸಿರುವ ದೃಶ್ಯಗಳನ್ನು ಕಂಡು ಇದೇಕೆ ಇಷ್ಟು ಚಡಪಡಿಕೆ ಎಂದು ಭಾವಿಸಿರುವವರು, ನಿಜವಾಗಿಯೂ ತಾವೇ ಆ ಸಂದರ್ಭದಲ್ಲಿ ಹೇಗೆ ವರ್ತಿಸುತ್ತಾರೆ ಎನ್ನುವುದರಿಂದ ಹಿಡಿದು.. ಅಪ್ಪನಾಗಿ, ಮಗುವಿನ ಕುರಿತ ತಮ್ಮ ಜೀವನದ ಚೆಂದದ ಚಿತ್ರಣಗಳನ್ನು ತೆರೆದಿಟ್ಟಿದ್ದಾರೆ. 


ಮೆಟ್ರೋ ಎಂಬ ಚಲಿಸುವ ಪುಟ್ಟ ಪಟ್ಟಣ :

ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಒದ್ದಾಡುತ್ತಿದ್ದವರಿಗೆ, ಬೆಂಗಳೂರಿಗೆ ಮೆಟ್ರೋ ಬಂದಾಗ ಇದ್ದ ಭಾವನೆ ಹಾಗೂ ಈಗಲೂ ಚಲಿಸುವ ಮೆಟ್ರೋದಲ್ಲಿನ ಪ್ರಯಾಣ ಎಲ್ಲದರ ವಿಹಂಗಮ ನೋಟ ಇಲ್ಲಿದೆ. ತಾವು ಪ್ರಯಾಣದಲ್ಲಿ ಕಂಡ ಎಷ್ಟೋ ಸ್ವಾರಸ್ಯಕರ ಸಂಗತಿಗಳನ್ನು ನೀತಿ ಪಾಠದಂತೆ ಬಿಡಿಸಿಟ್ಟಿದ್ದಾರೆ.


ತೂಗುಮಂಚದಲ್ಲಿ ಕೂತು :

ಎಚ್.ಎಸ್.ವೆಂಕಟೇಶಮೂರ್ತಿಯವರ ಈ ಭಾವಗೀತೆ ಕೇಳಿದ್ದರಂತೂ ತೂಗು ಮಂಚ ಆಪ್ತವಾಗಿರುತ್ತದೆ. ಮನೆಯೊಳಗಿದ್ದ ತೂಗುಮಂಚ ನಿಧಾನವಾಗಿ ತನ್ನ ಸ್ಥಾನ ಬಿಟ್ಟುಕೊಟ್ಟು, ಅಜ್ಞಾತವಾಸ ಆರಂಭಿಸಿದ ನಿಟ್ಟುಸಿರೊಂದು ಇಲ್ಲಿ ಕೇಳಿ ಬರುತ್ತದೆ. ಓದುತ್ತಾ ಚಂದನೆಯ ಭಾವ ಆವರಿಸುತ್ತಿದ್ದ ಹಾಗೆ ವಿಷಾದ ಭಾವವೂ ಕಾಡುತ್ತದೆ.


ಬಯಲೊಳಗೆ ಬಯಲಾಗಿ :

ಚಿಕ್ಕಂದಿನಲ್ಲಿ ಮೈದಾನದಲ್ಲಿ ನಡೆಯುತ್ತಿದ್ದ ಸಂತಮೇರಿಯ ಹಬ್ಬ, ಜಾತ್ರೆಯ ವ್ರತ, ಅವುಗಳನ್ನು ವರ್ಣಿಸುತ್ತಲೇ.. ಮನುಷ್ಯನ ಮಹತ್ವಾಕಾಂಕ್ಷೆಗೆ ಸಿಕ್ಕು ನರಳುತ್ತಿರುವ ಮೈದಾನಗಳು ಹಾಗೂ ಕುಗ್ಗುತ್ತಿರುವ ಬಯಲುಗಳು ಇಲ್ಲಿ ವಿಸ್ತಾರವಾಗಿಯೂ ಹಾಗೂ ಸಂಕುಚಿತವಾಗಿಯೂ ಕಂಡುಬಂದವು.


ಎಮ್ಮ ಮನೆಯಂಗಳದಿ :

ಕರಾವಳಿಯ ಮನೆಯಂಗಳದ ಸೊಗಸು, ಆಟಿ ಕಳೆಂಜದ ಸೊಗಸು, ನೇಜಿ ನೆಡುವ ಹೆಂಗಸರ ಚಹಾದ ಕಿಲ-ಕಿಲ, ಕೆಸುವಿನ ಎಲೆಗಳ ಹಾಗೂ ಅಣಬೆಗಳ ದೃಶ್ಯಾವಳಿಗಳು ಕಣ್ಮುಂದೆ ಬರುತ್ತಲೇ.. ಅಂಗಳದ ತುಳಸಿ ಕಟ್ಟೆ, ರಾತ್ರಿ ಅಲ್ಲಿ ಮಿನುಗುವ ದೀಪ ಹಾಗೂ ಅಲ್ಲಿನ ಅಡಿಕೆ ಕೊಯ್ಲು ಎಲ್ಲವೂ ಕಾಣುತ್ತಿದ್ದಂತೆಯೇ.. ಬದಲಾವಣೆ ಜಗದ ನಿಯಮ ಎನ್ನುತ್ತಾ ಇಂದಿನ ಬದಲಾವಣೆಗಳನ್ನು ಕಾಣಬಹುದು. ಸಗಣಿಯಂಗಳ ಮರೆಯಾದ ಬಗೆ, ಮಣ್ಣಿನ ಪಾಗಾರವನ್ನು ಇಟ್ಟಿಗೆ ಸಿಮೆಂಟುಗಳು ಆವರಿಸಿರುವ ಬಗೆ ಹೀಗೆ ಎಲ್ಲವೂ ಚಿತ್ರಿತವಾಗಿದೆ. 


ಹೆದ್ದಾರಿಯ ವೇಗದೂತಗಳು :

ಮಂಗಳೂರು ಹಾಗೂ ಉಡುಪಿಯ ದಾರಿ ಗೊತ್ತಿದ್ದವರಿಗೆ ಹಾಗೂ ಗೊತ್ತಿಲ್ಲದವರಿಗೆ ಇಬ್ಬರಿಗೂ ಅಲ್ಲಿನ ಓಡಾಟದ ಬಗ್ಗೆ ತಿಳಿಸುತ್ತಲೇ.. ಜಗತ್ತಿನ ಬೇರಾವ ಭಾಗದಲ್ಲಿಯೂ ಕಾಣಲು ಅಶಕ್ತವಾಗಿರುವ ವೇಗ ಪ್ರಧಾನವಾದ ಎಕ್ಸ್ ಪ್ರೆಸ್ ಬಸ್ಸುಗಳ ಪ್ರಪಂಚವನ್ನು ತೋರುತ್ತಾ.. ಇತ್ತ ಚಾಲಕ, ನಿರ್ವಾಹಕರು ಹಾಗೂ ಅತ್ತ ಪ್ರಯಾಣಿಕರ ಮನಸ್ಸಿನ ಮಾತುಗಳನ್ನೂ ಹೇಳುತ್ತಿದ್ದಾರೆ.


ಸೇತುಬಂಧ :

ಪುಟ್ಟ ಸೇತುವೆಯೊಂದು ನೆನಪುಗಳನ್ನು ಬೆಸೆವ ಪರಿ, ಸೇತುವೆಯ ಒಡನಾಟ, ಸಂಕ, ಕಾಳಿ ನದಿ ಸೇತುವೆಯ ಮೇಲೆ ರಾತ್ರಿ ಕಳೆದ ಸಂಧರ್ಭ, ತೂಗು ಸೇತುವೆ ಹೀಗೆ ಹಲವಾರು ವಿಚಾರಗಳಿಂದ ಸೇತುಬಂಧ ಹತ್ತಿರವಾಗುತ್ತದೆ.


ನಾಗಂದಿಗೆಯೆಂಬ ಗೋಡೆ ಮೇಲಿನ ಖಜಾನೆ :

ಮಲೆನಾಡಿನ ಮನೆಗಳ ಪರಿಚಯವಿದ್ದವರಿಗೆ ನಾಗಂದಿಗೆಯ ಪರಿಚಯವಿರುತ್ತದೆ. ಮಲೆನಾಡಿನ ಒಳಮನೆಗಳಲ್ಲಿನ ಅವಿಭಾಜ್ಯ ಅಂಗವೇ ಆಗಿರುವ ಇದು ದೇವರ ಮನೆಯಲ್ಲಿ, ಪಡಸಾಲೆಯಲ್ಲಿ, ಗಟ್ಟಿಗೂಡುಗಳಿರುವ ನೆಲ ಅಂತಸ್ತಿನಲ್ಲಿ, ಮೇಲು ಅಂತಸ್ತಿನಲ್ಲಿ ತೆಳು ಮರದ ಹಗುರ ಹಲಗೆ ಮಾತ್ರವಾಗದೇ.. ಪ್ರಾಚೀನ ನೆನಪುಗಳನ್ನೂ ಹೊತ್ತು ನಿಂತಿದೆ. ಮನೆಯದುರಿನ ದೊಡ್ಡದಾದ ಗೊಡ್ಡು ಮಾವಿನ ಮರದಿಂದ ನಾಗಂದಿಗೆ ಮಾಡಿಸಿದ ಅಮ್ಮ ಹಾಗೂ ಅವರನ್ನು ಅದು ಸೆಳೆದ ಪರಿ ಹಾಗೂ ಎಲ್ಲ ಭಾರವನ್ನು ಹೊತ್ತ ನಾಗಂದಿಗೆ ಸ್ಥಿರವಾಗಿ ನಿಂತದ್ದನ್ನು ಹೇಳುತ್ತಲೇ.. ಅದಕ್ಕೆ ಪಲ್ಲಟದ ಪರಿವೇ ಇರಲಿಲ್ಲವೆಂಬುದನ್ನೂ ಹೇಳುತ್ತಾರೆ. 


ನೆನಪಿನಲಿ ತೇಲುವ ಹಡಗು :

ಹಡಗು ಎಂದಾಗ ಮೊದಲಿಗೆ ನೆನಪಾಗುವುದು 'ಟೈಟಾನಿಕ್'. ಅದರಲ್ಲಿಯೂ ಟೈಟಾನಿಕ್ ಸಿನಿಮಾ ಹಾಗೂ ಅದರ ಕುರಿತು ತಿಳಿಯದವರು ಇಲ್ಲವೇ ಇಲ್ಲವೇನೋ ಎಂದು ಹೇಳಬಹುದು. ಟೈಟಾನಿಕ್ ನ ಥ್ರಿ-ಡಿ ಸಿನಿಮಾ ಬಂದಾಗ ಅದನ್ನು ನೋಡದೆ ಉಳಿದ ಲೇಖಕರ ಮುಖ್ಯ ನಿರ್ಧಾರಕ್ಕೆ ಮುಖ್ಯ ಕಾರಣ ಇಲ್ಲಿದೆ. ಮುಳುಗಿಡ ಹಡಗೊಂದು ಇನ್ನೂ ನೆನಪಿನಲ್ಲಿ ತೇಲುತ್ತಲೇ ಜೀವಂತವಾಗಿರುವ ಪರಿ ಕಾಣುತ್ತದೆ. 


ಬಿಟ್ಟೆನೆಂದರೂ ಬಿಡದೀ ಮಾಯೆ ! :

ಲೇಖಕರು ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹಾಗೂ ಮಹಿಳೆಯರ ಅವಿಭಾಜ್ಯ ಅಂಗದಂತೆಯೇ ಆಗಿ ಹೋಗಿರುವ ಸೀರಿಯಲ್ ಪ್ರಪಂಚವನ್ನು, ಬಿಟ್ಟರೂ ಬಿಡದೀ ಮಾಯೆ ! ಎನ್ನುತ್ತಾ ವರ್ಣಿಸುವ ಪರಿ ಸ್ವಾರಸ್ಯಕರವಾಗಿ ಮೂಡಿ ಬಂದಿದೆ.


ಪಡಸಾಲೆಯ ಚಿತ್ರಗಳು :

ಹಳ್ಳಿಯ ಮನೆಗಳಲ್ಲಿ ಅಥವಾ ಹಳೆಯ ಮನೆಗಳ ಪಡಸಾಲೆಗಳಲ್ಲಿ ಎಷ್ಟೊಂದು ಮಸುಕಾದ ಚಿತ್ರಗಳು ಕಂಡುಬರುತ್ತವೆ. ಅಲ್ಲಿ ಹಳೆಯ ಫ್ಯಾಮಿಲಿ ಫೋಟೋಗಳು, ದೇವರ ಫೋಟೋಗಳು, ಒಂದಿಷ್ಟು ನೆನಪಿನ ಫೋಟೋಗಳು ಇದ್ದೇ ಇರುತ್ತವೆ. ಅವೆಲ್ಲವನ್ನೂ ನೆನಪಿಸುವಂತೆ ಅವರ ಜೀವನದ ಅನುಭವವೊಂದು ಕಂಡುಬರುತ್ತದೆ ಇಲ್ಲಿ. 


ಫಲಕ ಪ್ರಪಂಚ :

ಬಸ್ಸಿನಲ್ಲಿ ಹೋಗುತ್ತಿರುವಾಗ ಮೊದಲೆಲ್ಲ ಊರಿನ ಹೆಸರುಗಳನ್ನು ಯಾವುದೋ ಅಂಗಡಿಯ ಬೋರ್ಡುಗಳಲ್ಲಿ ನೋಡುವಾಗ.. ಇದು ಇಂತಹಾ ಊರು, ಇಂತಹಾ ರಸ್ತೆ ಎನ್ನುತ್ತಾ ಗ್ರಾಹಕರಿಗೆ ಹಾಗೂ ಪ್ರಯಾಣಿಕರಿಗೆ ತಿಳಿಯುತ್ತಿತ್ತು. ಬದಲಾದ ಫಲಕಗಳು, ಫಲಕದಲ್ಲಿ ಬದಲಾದ ಗುರುತುಗಳ ಜೊತೆಗೆ ಬದಲಾದ ಆಲೋಚನೆಯೂ ಕಾಡುತ್ತದೆ.

"ನಾನು ಕೊಡುವ ಬೀಡದ ರುಚಿಗೆ ಬರುವುದು ಬೋರ್ಡಿನಲ್ಲಿ.. ಎಂಥ ಸಂಕಪಾಶಾಣ ಬರೆದಾದರೂ ಸಾಯ್ಲಿ ಅವರು.." ಎನ್ನುವ ದಾಸಣ್ಣನು ಹಾಗೂ "ಕಾಲ ಬದಲಾಗಿದೆ ಮಾರ್ರೆ.. ಒಳಗೆ ಗೋಳಿ ಸೊಪ್ಪಿದ್ರೂ ತೊಂದರೆ ಇಲ್ಲ.. ಹೊರಗೆ ಶೃಂಗಾರ ಬೇಕಲ್ಲ" ಎನ್ನುವ ಸಂಜೀವಣ್ಣನೂ

ವಿಭಿನ್ನವಾಗಿ ಕಾಣತೊಡಗುತ್ತಾರೆ. 


ಮದುವೆ ಕರೆಯ :

ಮದುವೆ ಕರೆಯೋಲೆಯನ್ನು ನೀಡಲು ಸಿದ್ಧವಾಗುವಾಗ, ನೀಡಬೇಕಾದ ಬಂಧುಗಳ ಲಿಸ್ಟು ಹಾಗೂ ಅಲ್ಲಿಗೆ ಹೋದಾಗ ಉಂಟಾಗುವ ಪೇಚಿನ ಪ್ರಸಂಗಗಳು ಇಲ್ಲಿ ಮೋಜಿನ ಪ್ರಸಂಗಗಳಾಗಿ ಕಂಡು ರಂಜಿಸುತ್ತವೆ.


ಅಜ್ಜನಂಗಿ ತೊಟ್ಟ ಮೊಮ್ಮಗು :

'ಶರಧಾರೆ ಜೋರಾದರೆ ಅಜ್ಜನಂಗಿ ತೊಟ್ಟಂತಹಾ ಮೊಮ್ಮಕ್ಕಳ ಸಂಭ್ರಮ ಹಳ್ಳಕ್ಕೆ'  ಎನ್ನುತ್ತಲೇ ಚಿರಂಜೀವಿ ಹಳ್ಳಗಳು ಉಕ್ಕಿ ಹರಿಯುವ ಪರಿಯನ್ನು, ಪರಿಸರದ ಸಿರಿಯನ್ನು ಚಿತ್ರಿಸಿದ್ದಾರೆ.


ಬೇಸಿಗೆಯ ಮದುವೆಯೆಂದರೆ :

ಬಿಸಿಲ ಬೇಗೆಯಲ್ಲಿ ನಡೆಯುವ ಮದುವೆಗಳಲ್ಲಿ ತಲೆಯ ಮೇಲೆ ಸುಡುವ ಬಿಸಿಲು, ಗಾಳಿಯೂ ಕಡಿಮೆಯಿದ್ದಾಗ ಸಿಕ್ಕಾಪಟ್ಟೆ ಜನವಿದ್ದರೂ ಸಹಾ ರೇಜಿಗೆ ಹುಟ್ಟಿಸದೆ, ಅಲ್ಲಿನ ಮದುವೆ ಮನೆಗಳ ವಾತಾವರಣವನ್ನು ಮನಸ್ಸಿನಲ್ಲಿ ಅನುರಣಿಸುವಂತೆ ಮಾಡಿದ್ದಾರೆ. 


ದೇಗುಲ ಬೀದಿಯ ಗಂಧ :

ರಥ ಬೀದಿ ಎಂದು ನಾವು ಸಾಮಾನ್ಯವಾಗಿ ಕರೆಯುವ ದೇಗುಲದ ತೇರುಗಳನ್ನೆಳೆಯುವ ದಾರಿಯನ್ನು ಇಷ್ಟು ಚಂದಕ್ಕೆ ಬಿಡಿಸಿಡಬಹುದಾ ಎಂಬ ಅಚ್ಚರಿಯೂ ಆಯಿತು. ನಾವು ದೇವರುಗಳನ್ನು ನೋಡಲು ದೇವಸ್ಥಾನಕ್ಕೆ ಹೋದರೂ ಸಹಾ ರಥಬೀದಿ ನಮ್ಮನ್ನು ಬೇರೆಯದ್ದೇ ಸೆಳೆತದಿಂದ ಸೆಳೆಯುತ್ತದೆ. ಕಾಶಿಯ ಬೀದಿ, ಭುವನೇಶ್ವರದ ಬೀದಿ, ಮಂಗಳೂರಿನ ರಥ ಬೀದಿ, ಮೇಲುಕೋಟೆಯ ರಥ ಬೀದಿ ಹೀಗೆ ಹಲವಾರು ರಥ ಬೀದಿಗಳು ತಮ್ಮ ದೈವಿಕ ಕಳೆಯಿಂದ ಹೊಳೆಯುತ್ತಿವೆ ಇಲ್ಲಿ. 


ಈ ಸುಲಲಿತ ಪ್ರಬಂಧಗಳನ್ನು ಓದಿ ಮುಗಿದಾಗ.. ಇಷ್ಟು ಚೆಂದವಾಗಿ ಆವರಿಸಿದ್ದ ಭಾವ ಇಷ್ಟು ಬೇಗ ಮುಗಿಯಿತೇ ಎಂದೆನ್ನಿಸಿತು. ಈ ಸಂಗತಿ, ಪ್ರಸಂಗಗಳು ಬರಿಗಣ್ಣಿಗೆ ಕಂಡರೂ.. ಇವುಗಳನ್ನು ಹಿಡಿದಿಡಲು, ಚೆಂದವಾಗಿಸಲು ಒಳಗಣ್ಣು ಅತ್ಯವಶ್ಯಕ. ತೂಗುಮಂಚದಲ್ಲಿ ಕೂತು ತೂಗಿಕೊಂಡ ನಂತರ ನಾನಿನ್ನೂ ಅದೇ ಲಹರಿಯಲ್ಲಿರುವಂತೆನಿಸುತ್ತಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ