ಪುಸ್ತಕದ ಶೀರ್ಷಿಕೆ : ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ..
ಲೇಖಕರು : ಎನ್ ಸಂಧ್ಯಾರಾಣಿ, ಭಾರತಿ ಬಿ ವಿ
ಪ್ರಕಾಶಕರು : ಆಲಂಪು ಪ್ರಕಾಶನ
ಪ್ರಥಮ ಮುದ್ರಣ : 2019
ಪುಟಗಳು : 160
ಬೆಲೆ : 150 ರೂ.
"ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ.." ಎಂಬ ಕವನ ಸಂಕಲನ ವಿಶಿಷ್ಟವಾದುದು. ಇದು ಇಬ್ಬರು ಕವಯತ್ರಿಯರ ಪುಸ್ತಕ. ಹಾಗೆಂದು.. ಒಂದೇ ದೃಷ್ಟಿಕೋನದಲ್ಲಿ ಬರೆದವೂ ಅಲ್ಲ. ಎನ್. ಸಂಧ್ಯಾರಾಣಿ ಹಾಗೂ ಭಾರತಿ ಬಿ.ವಿ ಒಟ್ಟಾಗಿ ರೂಪಿಸಿರುವ ಕವನ ಸಂಕಲನ. ಅಪ್ಪಟ ಜೀವನಪ್ರೀತಿಯ, ಅಕ್ಕನ, ನೀಲಕಂಠನ, ವಿವಿಧ ವಿಷಯಗಳ ಕವನಗಳಿವೆ ಇಲ್ಲಿ.
ಹಾಡಿನೊಡಲಲಿ ತೇಲಿಸುವ ಸಂಧ್ಯಾರಾಣಿಯವರದ್ದೂ.. ಭಾವಗಡಲಲಿ ಮುಳುಗಿಸುವ ಭಾರತಿಯವರದ್ದು ವಿಶಿಷ್ಟ ಪ್ರಯೋಗಗಳು. ಜೀವದ ಗೆಳತಿಯರ ಕವಿತೆಗಳು ಸಹಾ ಅಷ್ಟೇ ಜೀವನಪ್ರೀತಿಯ ಹೊಂದಾಣಿಕೆಯ ಕವಿತೆಗಳು. ಈ ಸಂಯುಕ್ತ ಕವನ ಸಂಕಲನದಲ್ಲಿ ಕವಿತೆಯೊಳಗಿನ ಒಳ ಸಂವಾದಗಳಷ್ಟೇ ಪರಸ್ಪರರ ಒಳ ಸಂವಾದಗಳೂ ಹೊಂದಿಕೆಯಾಗಿವೆ. 'ಕವಿಗೆ ಕಿವಿ ಪ್ರಮಾಣಮಲ್ತೆ' ಎಂದ ಕುವೆಂಪು ಅವರ ಅಣತಿಯಂತೆ ಕವಿತೆ ಹಾಡಾಗಿರುವುದೂ ಸತ್ಯ.
ಕಾಯಿ ಬಿಡಿಸುವ ನಯವೆಂದರೆ, ತಲೆ ನೇವರಿಸಿದಂತೆ
ಗಿಡ ಕಣ್ಮುಚ್ಚಿ ತೂಗಬೇಕು
ಎನ್ನುವ ಅಜ್ಜಿಗೂ
ಒತ್ತಾಯಕ್ಕೆ ಉಸಿರಾಡುವ ಕ್ರೋಟನ್ ಗಿಡ
ಹೂ ಬಿಡುವುದಿಲ್ಲ, ಗಿಡ ಬಾಡುವುದಿಲ್ಲ
ಬೇರು ನೆಲಕ್ಕಿಳಿಯುವುದಿಲ್ಲ...
ಮಣ್ಣಿನ ಪಸೆಯಿಲ್ಲದ ಊರಿನಲ್ಲಿ
ಹಸಿಮಣ್ಣಿನ ತೇವಕ್ಕೆ ಕಾಯುವ ಮೊಮ್ಮಗಳು ನಾನು
ಎನ್ನುವ ಮೊಮ್ಮಗಳಿಗೂ ಬರೀ ಸಂಬಂಧದಲ್ಲಿ ಮಾತ್ರವಲ್ಲ.. ಪರಿಸರದೊಡನೆಯೂ ಸಾಂಗತ್ಯವೇ.. 'ಅವರೆ ಹೂ ಮತ್ತು ಕ್ರೋಟನ್ ಗಿಡ'ಕ್ಕೂ ಇರುವ ನಂಟಿನಂತೆ ಮಿಡಿತಗಳ ತಂತು ಬೆಸೆದಿವೆ.
'ಆಯ್ಕೆ' ಎಲ್ಲರಿಗೂ ಯಾವಾಗಲೂ ದಕ್ಕುವುದಿಲ್ಲ ಎನ್ನುತ್ತಲೇ ಹೀಗನ್ನುತ್ತಾರೆ. ಆದರೆ, ಗದ್ದಲದಲ್ಲಿ ಅದು ಕೇಳಿದೆಯೋ.. ಕೇಳುವಷ್ಟರಲ್ಲಿ ಏನಾಗುತ್ತದೆ ಎಂಬುದನ್ನು ಹೇಳುತ್ತಾರೆ.
ಆಯ್ಕೆ ಕೇಳುತ್ತಿದ್ದಾರೆ ಹುಡುಗಿ,
ನಿನ್ನದೆಂಥ ಅದೃಷ್ಟ,
ಆರಿಸಿಕೊಂಡು ಬಿಡು ನಿರ್ಲಕ್ಷಿಸದೆ
'ಸಂಗಾತ' ಹಾಗೂ 'ಪ್ರೀತಿ ಅನಿವಾರ್ಯತೆ ಇತ್ಯಾದಿ..' ಗಳಲ್ಲಿ ಸರಳವಲ್ಲದ ಸಲೀಸಲ್ಲದ ಗೋಜಲು ಅಥವಾ ಜಟಿಲವೂ ಅಲ್ಲದ ಪ್ರೀತಿಯ ಪರಿಯನ್ನು ಹೇಳುತ್ತಾರೆ.
ಪುಣ್ಯಕೋಟಿ ಕತೆಯ 'ಹುಳಿಗೂಸಿನ ಕಣ್ಣುಗಳ'ನ್ನೂ ಹಾಗೂ ಮಕ್ಕಳು ಹೆದರುವ 'ಗೊಗ್ಗಯ್ಯ'ನ ಹೆದರಿಕೆಗಳನ್ನೂ ತೆರೆದಿಟ್ಟಿದ್ದಾರೆ.
'ಬೋನ್ಸಾಯ್ ಎನ್ನುವ ಮೊರೆ'ಯು ನೆಲದಲ್ಲಿ ಬೇರು ಬಿಟ್ಟು ನಿಂತ ಮರಗಳನ್ನು ಕಂಡ ಬೋನ್ಸಾಯ್ ಮೊರೆಯಿಡುವ ದನಿಯನ್ನು ಹಾಗೂ ಮರಗಳನ್ನು, ಎಲೆಗಳನ್ನು, ಹೂಗಳನ್ನೂ ಪ್ರತಿಮೆಯಾಗಿರಿಸಿಕೊಂಡು 'ವಿದಾಯ'ದ ಕಣ್ಣೀರನ್ನು ಸೋಕಿಸಿದ್ದಾರೆ.
"ಪ್ರಶ್ನೆಗಳಿಗೆಲ್ಲ ಉತ್ತರ ಬರೆಯುವ ದರ್ದು
ಪರೀಕ್ಷೆಯಲ್ಲಿ ಮಾತ್ರವಲ್ಲ, ಬದುಕಿನಲ್ಲಲ್ಲ.. " ಎಂಬ ಸಾಲುಗಳು ಆತ್ಮವಿಶ್ವಾಸ ತುಂಬುವ ಹಾಗೆ ಯೋಚನೆಗೂ ಹಚ್ಚುತ್ತವೆ.
'ನೀರವತೆ'ಗೂ.. 'ಪರಾಗಸ್ಪರ್ಶದ ಆ ಘಳಿಗೆ!'ಗೂ ಇಲ್ಲಿ ಕತ್ತಲಿನ ನಂಟು ಬೆಸೆಯುತ್ತಾ ಬಿಟ್ಟು ಹೋದ 'ಕುರುಹು' 'ಅದೊಂದು ಮಾಂತ್ರಿಕ ಮಧ್ಯಾಹ್ನ!' ಪರಿಮಳವನ್ನು ಉಳಿಸಿ ಹೋಗುತ್ತದೆ.
ಹೇಗೆ ತುಂಬಲಿ ಈ ಪುಟ್ಟ
ಸೂಟ್ ಕೇಸಿನಲ್ಲಿ ನನ್ನ
ಇಪ್ಪತ್ತೊಂಬತ್ತು ವರ್ಷಗಳ ಜಗತ್ತನ್ನು...?
ಎಂದು ಒಬ್ಬರು 'ಅಪ್ಪ'ನನ್ನು ನೆನೆಯುತ್ತಾ ಭಾವುಕರಾಗುತ್ತಿದ್ದರೆ 'ಸಾವು' ತನ್ನ ಛಾಪು ಮೂಡಿಸಿದ ಕತ್ತಲು - ಬೆಳಕಿನಾಟದ ಕುರಿತು ಹೇಳುತ್ತಾರೆ.
'ಮನೆ ಎಂದರೆ ಒಂದು ಕವಿತೆ' ಎನ್ನುತ್ತಾ ಮನೆಯ ಕುರಿತು , ಅವನ ಕುರಿತು ಹೇಳುತ್ತಲೇ 'ರಂಗೋಲಿ ಎನ್ನುವ ದೀಪದ ಕುಡಿ'ಗೆ ಮಾತ್ರ ಮನಸೋಲುವುದಾ ಎಂದು ಕೇಳುತ್ತಿದ್ದರೆ
'ರಂಗೋಲಿ ಎಂದರೆ
ಚುಕ್ಕಿ ಗೆರೆಯ ಚಿತ್ರ ಮಾತ್ರ ಅಲ್ಲ' ಎಂದು ಉಳಿಯುತ್ತದೆ.
'ಅವನೆಂಬ ಅಸಾಂಪ್ರದಾಯಿಕ ಪದ್ಯ' ಅವನ ಅಂತ್ಯದ ಕುರಿತು ಮಾತನಾಡುತ್ತದೆ. ಆಗಲೇ 'ಅಸ್ಪಷ್ಟ ಚುಕ್ಕೆಗಳು' ತಮ್ಮ ತಮ್ಮ ಕುರಿತ ಸ್ಪಷ್ಟತೆಯ ನಿಲುವನ್ನು ಬಿಂಬಿಸುತ್ತಾ ಮಿನುಗುತ್ತವೆ.
ಸೃಷ್ಟಿ, ಸ್ಥಿತಿ, ಲಯಕರ್ತನಾದ ಬೈರಾಗಿಯ ಬಗ್ಗೆ 'ನೀಲಕಂಠದವನೊಡನೆ ನನ್ನ ನೀಲೀಗ್ಯಾನ'ವೆನ್ನುವಾಗ ಅಕ್ಕ ಮಹಾದೇವಿಯ ಛಾಯೆ ಸ್ಥಾಪಿತವಾಗಿದೆ. 'ನಿರ್ಮೋಹಿಯೇ..' ಎನ್ನುವಾಗ ಅದು ನಿರ್ಮೋಹತ್ವದ ತತ್ವಕ್ಕೆ ನೂತನ ಅರ್ಥದೊಡನೆ ಹೊಸ ಛಾಯೆಯನ್ನು ಕಲ್ಪಿಸಿದೆ.
ಮುಂದೆ ಸಾಗಿದರೆ ಅವರ ಕಣ್ಣಲ್ಲಿ 'ಅಂಗುಲಿಮಾಲ' ಕಾಣತೊಡಗುತ್ತಾನೆ.
ನೋಡನೋಡುತ್ತಿದ್ದ ಹಾಗೆ ವಿರುದ್ಧ ದಿಕ್ಕಿನಲ್ಲೇನಾದರೂ ಸಾಗುತ್ತಿರುವಾಗಿನ ಅನುಭವವಾಗುವಷ್ಟರಲ್ಲಿ 'ಎಸ್ಕಲೇಟರ್' ಏರಿಯಾಗಿರುತ್ತದೆ.
'ಮಿಂಚುಹುಳ'ದ ಕೊಂಚ ಬೆಳಕು ಮಿಣಿಕ್ ಎನ್ನುವಾಗಲೇ.. 'ಕತೆ ಹೀಗೆ ಮುಗಿದು ಬಿಡುತ್ತದೆ' ಎನ್ನುತ್ತಾರೆ. ಸಾಧ್ಯವೇ..?? ಗಟ್ಟಿ ನೆಲವಷ್ಟೇ ಮುಗಿದದ್ದು ಎನ್ನುತ್ತಲೇ 'ಹಾಯಿದೋಣಿ' ಏರಿ ಸಾಗುತ್ತಲೇ ಚೌಕಟ್ಟನ್ನು ದಾಟಿಬಿಟ್ಟಿರುತ್ತೇವೆ.
'ಪಾತಾಳಕ್ಕಿಳಿದವನು' ದಕ್ಕಿಸಿಕೊಟ್ಟ ಸಾಲುಗಳಿವು..
ಹಿಂತಿರುಗಿ ನೋಡಿದೆ,
ಹಾದಿ ಸಮತಟ್ಟಾಗಿಯೇ ಇತ್ತು!
ಅಂದರೆ ನಾ ಏರಿರಲಿಲ್ಲ, ನೀನು ಪಾತಾಳಕ್ಕಿಳಿದಿದ್ದೆ ಅಷ್ಟೇ...
'ಶ್ರಾವಣ'ದ ನಗು, ಆ ಕೇಕೆ ಕೇಳಿಸುತ್ತಲೇ ಇತ್ತು.. ಆದರೆ 'ಒಂದು ಪ್ರೀತಿಯ ನಂತರ'ದ ವಿಚಿತ್ರ ಘಳಿಗೆಗಳು ಬೀಳ್ಕೊಡುಗೆ ನೀಡಿದಾಗಿನ ಭಾವಗಳೇ ವಿಚಿತ್ರ. ಬದುಕಿನ 'ಪಾಠ'ಗಳೇ ಹಾಗೆ.. ಬದುಕು ಪಾಠ ಕಲಿಸುತ್ತೇನೆಂದು ಪಟ್ಟು ಹಿಡಿದು ಕುಳಿತಾಗಿನ ಸಂಧರ್ಭಕ್ಕೂ ನಾವು ಕಲಿತ ಪಾಠಕ್ಕೂ ತಾಳೆ ಹಾಕಿದರೆ ಅದು ಸರಿಯಾಗುವುದೇ..?? 'ಹೆಪ್ಪುಗಟ್ಟಿದ ಬದುಕು' ದ್ರವಿಸುವ ಬಿಸುಪು ಸಾಧ್ಯವೇ..??
'ದಾಖಲೆಗಳು' ಎದುರಿಗಿರುವಾಗ ಕಳೆದ ಕ್ಷಣಗಳನ್ನು ಕನವರಿಸುವಾಗ ನೀರಲ್ಲಿ ತೇಲಿಟ್ಟ ಹಣತೆಗಳಿಂದ 'ಬೆಳಕು ಕಾಯದವರ' ನೆನಪಾಗುತ್ತದೆ.
'ಗೀಟುಗಳ'ನ್ನು ಅಳಿಸದೆ ಇದ್ದರೆ 'ಕವಲುದಾರಿ' ಜೀವಂತಿಕೆಯ ಸಂಕೇತವಾಗುತ್ತದೆಯೇ..??
ವಿರಹ, ಸ್ಪಂದನೆ, ಭೇಟಿ ಹದವಾಗಿ ಮಿಳಿತವಾದ ಕವಿತೆಗಳು 'ಹೌದೇನೆ ಸಖಿ ಹೌದೇನೆ' ಹಾಗೂ 'ನಾವು ಸಂಧಿಸದೇ ಹೋಗಿದ್ದರೆ'
ನಾವು ಸಂಧಿಸಿದ್ದೇ ಒಳ್ಳೆಯದಾಯಿತು,
ಇಲ್ಲದಿದ್ದರೆ ಕಳೆದುಕೊಳ್ಳಲಾದರೂ
ಏನಿರುತ್ತಿತ್ತು..
ಎನ್ನುವಾಗ ಹೌದಲ್ಲವೇ.. ಎನ್ನಿಸಿಬಿಟ್ಟಿತು..
'ಮೆಮರಿ ಕಾರ್ಡ್ ಗೆ ಧಕ್ಕೆಯಾಗಿದೆ..' ಹಾಗೂ 'ಸೆಲ್ಫಿ' ಎನ್ನುತ್ತಾ ಬದುಕು ಹಾಗೂ ಮೊಬೈಲ್ ತಂತ್ರಜ್ಞಾನದ ಕುರಿತು ಮಿಳಿತ ಮಾಡುತ್ತಲೇ 'ನೆನಪಿಗೆ ತಗುಲಬಾರದೇ ಶಾಪ' ಮತ್ತು 'ಒದ್ದೆ ಒದ್ದೆ ನೆನಪು ' ಎನ್ನುತ್ತಾ ನೆನಪುಗಳ ಸಾಮ್ರಾಜ್ಯಕ್ಕೆ 'ಪಯಣ' ಬೆಳೆಸುತ್ತಾರೆ.
ಈ ನೆನಪುಗಳಿಗೂ, ವಿರಹಕ್ಕೂ ಅವಿನಾಭಾವ ಸಂಬಂಧವಿರಬೇಕು ನೋಡಿ 'ಬಿಸುಟೆದ್ದನು ಕೊಳಲನು' ಎಂದು ಕೊಳಲನ್ನು ಕಟಕಟೆಗೆ ನಿಲ್ಲಿಸುತ್ತಾರೆ. 'ಚಿಟ್ಟೆಯಂತಹ ಕಣ್ಣುಗಳಿಗೆ' ಹಗಲನ್ನು ತೋರಿದರೆ 'ಆಕಾಶ ಚುಕ್ಕೆ'ಯಲ್ಲಿ ರಾತ್ರಿಯನ್ನು ಕಾಣಿಸುತ್ತಾರೆ.
ತೇಜಸ್ವಿಯವರ ಕರ್ವಾಲೋನ ಪ್ಯಾರ ಇಲ್ಲಿ ದಾರ್ಶನಿಕನಾಗುತ್ತಾ 'ಕಾಣ್ತ ಐತೆ, ಆದರೆ ಕಾಣಕ್ಕಿಲ್ಲ!' ಎಂದು ಹೇಳಿ ತಳಮಳಗೊಳಿಸುತ್ತಾನೆ.
'ಪ್ರೀತಿಯೆನ್ನುವ ಹೂವು' ಅರಳುವುದು 'ಕಣ್ಣಲ್ಲಿ ಮೋಡ ಒಡಲ ತುಂಬಾ ಮಳೆ' ಬಿದ್ದಾಗಲೇ..?? ಅಥವಾ ಮತ್ತೆ 'ಹಿಂದಿರುಗಿದೆನಾ..?' ಎನ್ನುತ್ತಾ 'ದೀಪಸಾಲಿನ ಕುಡಿ'ಯ ಬೆಳಕು ತಾಕಿದಾಗಲೇ..??
ಪದ್ಯ ಬರೆಯುತ್ತಿಲ್ಲವೇಕೆ ಎಂದಾಗ 'ಮುಗಿದು ಹೋದ ಪದ್ಯವೇ..' ನಿನ್ನೆಗಳ ಊರಲ್ಲಿ ಕಳೆದುಕೊಂಡ ನಾಳೆಯನ್ನು ನೆನಪಿಸುತ್ತಾ 'ಅಂಗೈ ಬಿಟ್ಟ ಚಿಟ್ಟೆ'ಯಂತಾಗಿ 'ಬಿರುಕಿನ ನಾಣ್ಯಗಳು' ಸೃಜಿಸುವ ಆಸೆಯ ಹಾಗೆ ಇದ್ದರೂ ಇರದಿರುವ 'ಮಾಯಾ ಕನ್ನಡಿ'ಯ ಹಾಗೆ ಹತ್ತಿರದಲ್ಲಿರುವುದನ್ನು ದೂರಕ್ಕೂ.. ದೂರದಲ್ಲಿರುವುದನ್ನು ಹತ್ತಿರಕ್ಕೂ ಕಾಣುವ ಹಾಗೆ ಮಾಡುತ್ತದೆ.
'ನೀಲಕಂಠ ಬಿಟ್ಟುಹೋದ ನೀಲಿಚಿಟ್ಟೆ' ಉಮೆಗೆ ಅವನನ್ನು ನೆನಪಿಸುತ್ತಿರುವಾಗಲೇ 'ಟೆಕಿಲಾ ಮತ್ತು ಅವನು!' ಕೂಡಾ ಮತ್ತೇರಿಸಿ ನಿಲ್ಲುತ್ತಾರೆ.
'ಊರ್ವಶಿ ಎನ್ನುವ ಶೃಂಗಾರ ವಿಯೋಗ ರಾಗ' ಹಾಗೂ 'ಅಗ್ನಿದಿವ್ಯ' ಬೆಂಕಿಯಲ್ಲಿ ಬೆಂದ ಹಿಂದಿನ ಕಾಲದ ಹೆಣ್ಣುಗಳ ನಿದರ್ಶನ ತೋರುತ್ತವೆ.
ಮಾಯಾ ಏಂಜಲೋ ಕವಿತೆಯೊಂದು ಹಾಗೂ ಮಲೇಷಿಯಾದ ಕವಿ ಎಡ್ವಿನ್ ವೇದಮಣಿಯವರ ಕವಿತೆಯೊಂದು ಅನುವಾದವಾಗಿವೆ.
'ಮಳೆಗಾಲವೇ..' 'ಕವಿತೆ'ಗೆ ವಸಂತ ಋತು ಎಂದು ಹೆಸರಿಟ್ಟಿದ್ದೇನೆನ್ನುವಾಗ 'ಹೀಗೊಂದು ವಿಷಾಧ ಪರ್ವ' ತೆರೆದುಕೊಂಡ ನಿಮಿಷದಲ್ಲೇ 'ಕೈಚೀಲ' ತೆರೆದುಕೊಂಡು 'ಸುಡೊಕು'ವಿನ ಕ್ಲಿಷ್ಟತೆಯನ್ನು ಸರಾಗವಾಗಿಸುತ್ತದೆ.
'ಮುಂಗಾರು' ಹನಿಸಿ ಹೋದ ಹನಿಗಳು 'ಮರಳಿ ಬಾ ಎದೆಯ ಪದ್ಯವೇ...' ಎನ್ನುತ್ತಾ 'ಬದುಕು' 'ಮೋಹಗೊಳಿಸಿದ ಕವಿಯಾ'ಗಿ ಕಂಡುಬಿಡುವಾಗ 'ಹಚ್ಚೆ ಹಾಕುವ ಹುಡುಗಿ' ಹಚ್ಚಗೆ ನಗುತ್ತಾ 'ಅವಳ' ಹಚ್ಚೆಯ ಕುರಿತು ಹೇಳಿಕೊಳ್ಳುತ್ತಾಳೆ.
'ತಾಂಡವ'ಕ್ಕೆ ನಲುಗುವ 'ಗೌರಿ ದುಃಖ' ಅವಳ ನೋವಿನ 'ಲೆಕ್ಕ' ದಕ್ಕಿ 'ಕ್ಷಮಿಸು' ಎನ್ನದಿದ್ದರೂ 'ಕಾತ್ಯಾಯಿನಿ ಕಾಯುತ್ತಾಳೆ'. ಅದಕ್ಕೆ 'ಒಣಗಿದ ಎಲೆಯಂತೆ ಕಳಚಿದ ಪ್ರೇಮ'ವನ್ನು 'ತಕ್ಕಡಿ'ಯಲ್ಲಿಟ್ಟು ತೂಗಿ 'ಬರುವನೋ ಬಾರನೋ...' ಎಂದು ಕಾಯಬೇಕಾಗುತ್ತದೆ.
ಉಳಿದಂತೆ ಸ್ವರಗಳ ಆಲಾಪ ಮೀಟುತ್ತದೆ. ಹೂಗುಚ್ಛಗಳ ಪರಿಮಳ ಪಸರಿಸುತ್ತದೆ
ಈ ಹೂಗುಚ್ಛದಿಂದ ಆಯ್ದ ಪುಟ್ಟ ಕವಿತೆ ಹೀಗಿದೆ :
ಹುಡುಕಾಟದ ಪಯಣ ಆರಂಭಿಸಲೇಬಾರದು
ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದ್ದು
ಎದುರಾಗುವ ಅದೃಷ್ಟ
ಒಬ್ಬ ಕೊಲಂಬಸ್ ನದ್ದು ಮಾತ್ರ..
ಈ ಕವಿತೆಗೆ ನನ್ನ ವಿರೋಧವಿದೆ. ಹುಡುಕಿ ಹೊರಡದಿದ್ದರೆ ಇಷ್ಟು ಅದ್ಭುತ ಕವಿತೆಗಳ ಲೋಕವನ್ನು ನಾನು ಕಳೆದುಕೊಂಡು ಬಿಡುತ್ತಿದ್ದೆ.. ಒಬ್ಬ ಕೊಲಂಬಸ್ ನಂತೆ ಒಬ್ಬಳೇ ವಿಭಾ ಆಗಿರಬಹುದಾ ನಾನು..??
ಗೊತ್ತಿಲ್ಲ, ಇಬ್ಬರ ಕವಿತೆಯಲ್ಲಿ ಮಿಂದೇಳುವಾಗ ನೂತನ ಭಾವ ಆವರಿಸಿದೆ.
ಗದ್ಯದಲ್ಲಿ ಆಪ್ತರಾದವರ ಕವಿತೆಗಳು ಇಷ್ಟು ಮೋಡಿ ಹಾಕುತ್ತವೆಂದು ಭಾವಿಸಿರಲಿಲ್ಲ.
ಕೆಲವು ಧೃತರಾಷ್ಟ್ರರು,
ಹುಟ್ಟುಗುರುಡರು
ಕಾಣಲಾಗುವುದಿಲ್ಲ;
ಇನ್ನು ಹಲವರು ಗಾಂಧಾರಿಯರು,
ಕುರುಡಾಗಿಸಿಕೊಳ್ಳುತ್ತಾರೆ
ಕಾಣಲಿಷ್ಟವಿರುವುದಿಲ್ಲ...
ಇದೇ ಪುಸ್ತಕದಲ್ಲಿ ಭಾರತಿ ಮೇಡಂ ಉಲ್ಲೇಖಿಸಿರುವಂತೆ ನಾವು ಇವೆರಡೂ ಆಗುವುದು ಬೇಡ.. ಒಂದೊಳ್ಳೆ ಪುಸ್ತಕ ಸಿಕ್ಕಿರುವಾಗ ಕಣ್ಮುಚ್ಚಿ ಕೂರದೇ ಓದೋಣ.. ಆಸ್ವಾದಿಸೋಣ.
~ ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ