ಶುಕ್ರವಾರ, ಏಪ್ರಿಲ್ 10, 2026

ಬಾನು ಬೆಳಗಿತು ಕಾದಂಬರಿಯ ಕಲ್ಯಾಣಿ ಹಾಗೂ ಬೇವು-ಬೆಲ್ಲ ಕಾದಂಬರಿಯ ಹರಿದ್ರಾ





ತ್ರಿವೇಣಿಯವರ ಬಾನು ಬೆಳಗಿತು ಕಾದಂಬರಿಯ ಕಲ್ಯಾಣಿ ಹಾಗೂ ಅನುಸೂಯ ಸಂಪತ್ ರವರ ಬೇವು-ಬೆಲ್ಲ ಕಾದಂಬರಿಯ ಹರಿದ್ರಾ


ಕಲ್ಯಾಣಿ ಮನೆಯ ಮುದ್ದಿನ ಮಗಳು. ಆಕೆಯ ಅತ್ತಿಗೆ ವತ್ಸಲಾಳ ಅಣ್ಣನ ಮದುವೆಯ ಸಂಧರ್ಭದಲ್ಲಿ ಪರಿಚಯವಾದ ರಾಮನಾಥನ ಜೊತೆ ಸ್ನೇಹ ಬೆಳೆಯಿತು. ಮನೆಯರಿಗೆ.. ಅದರಲ್ಲೂ ಆಕೆಯ ಅಣ್ಣ ಅನಂತನಿಗೆ ರಾಮನಾಥನ ಮೇಲೆ ಭರವಸೆ ಮೂಡಿ ಆಕೆಯದ್ದೂ.. ರಾಮನಾಥನದ್ದೂ.. ವಿವಾಹವಾಯಿತು. 


ಮೂರು ಮಕ್ಕಳಲ್ಲಿ ಚಿಕ್ಕವಳಾದ ಕಲ್ಯಾಣಿ ಮನೆಯ ಮುದ್ದಿನ ಮಗಳಾಗಿ ಬೆಳೆದವಳು. ಆಕೆಗೆ ಸಂಸಾರದ ಜಂಜಾಟದ ಪರಿವೆಯಿರಲಿಲ್ಲ. ಅಲ್ಲದೇ.. ಜವಾಬ್ದಾರಿಗಳ ಹೊರೆಯೂ ಇರಲಿಲ್ಲ. ಅತ್ತೆ ಸಾತಮ್ಮನವರದ್ದು ತಾಳ್ಮೆಯ ಸ್ವಭಾವವಾದುದರಿಂದ.. ಆಕೆ ಮಗ-ಸೊಸೆಯರ ಜೊತೆ ಹೊಂದಿಕೊಳ್ಳುತ್ತಾ.. ಸೊಸೆಯನ್ನು ಸ್ವಂತ ಮಗಳಂತೆ ನೋಡಿಕೊಳ್ಳುತ್ತಾ.. ಆಕೆಗೆ ಚಿಕ್ಕ-ಪುಟ್ಟದನ್ನೂ ಸಹಾ ಕಲಿಸುತ್ತಾ.. ತಿದ್ದುತ್ತಾ ಕೊಂಕು ತೆಗೆಯದಂತೆ, ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುತ್ತಿರುತ್ತಾರೆ. ಆದರೆ, ಕಲ್ಯಾಣಿ ಮನೆಯಲ್ಲಿಯ ಜವಾಬ್ದಾರಿ ತೆಗೆದುಕೊಳ್ಳುವ ಗೋಜಿಗೆ ಹೋಗದೆ.. ಅತ್ತೆಯೇ ಹೆಚ್ಚಿನ ಕೆಲಸವಲ್ಲವನ್ನು ನೋಡಿಕೊಳ್ಳುತ್ತಿದ್ದರಿಂದ.. ತನಗೆ ಹೆಚ್ಚು ಸಮಯವಿದೆ. ಅದನ್ನು ಹೇಗೆ ಕಳೆಯುವುದು..? ಎಂಬ ಚಿಂತೆಯಲ್ಲಿದ್ದಾಗ ಬಿ.ಎಸ್.ಸಿ ಓದಿದವಳಾದುದರಿಂದ.. ಆಕೆ ತನಗೆ ಸರಿಹೊಂದುವಂತಹ ಉದ್ಯೋಗ ಯಾವುದಾದರೂ ಇದ್ದರೆ..?? ಎಂಬ ಆಲೋಚನೆಯಿಂದ ಹೀಗೆ ಸುಮ್ಮನೆ ಪೇಪರ್ ನಲ್ಲಿ ಬಂದ ಜಾಹೀರಾತಿಗೆ ಅರ್ಜಿ ಸಲ್ಲಿಸುತ್ತಾಳೆ. ಮುಂದೆ ಆಯ್ಕೆಯೂ ಆಗುತ್ತಾಳೆ.


ತುಂಬಾ ಮುದ್ದಿನಿಂದ ನಾಜೂಕಿನಿಂದ ಬೆಳೆದಿದ್ದ ಆಕೆ, ಉದ್ಯೋಗಕ್ಕೆ ಸೇರಿ ಮುಂದೆ ಉದ್ಯೋಗಸ್ಥೆ ಆಗುತ್ತಾಳೆ. ರಾಮನಾಥ ಹಾಗೂ ಕಲ್ಯಾಣಿ ಅವರ ನಡುವೆ ಇದ್ದ ಹೊಂದಾಣಿಕೆ, ಆಕೆ ಕೆಲಸಕ್ಕೆ ಹೋಗುತ್ತಾ ಇದ್ದಂತೆ.. ದಿನ ಕಳೆದಂತೆ ಕ್ಷೀಣಿಸುತ್ತಾ ಹೋಗುತ್ತದೆ. ಮನೆಯಲ್ಲಿ ಆಕೆ ಉದ್ಯೋಗಕ್ಕೆ ಹೋಗಬೇಕೆಂಬ ಒತ್ತಾಯವೇನೂ ಇರಲಿಲ್ಲ. ರಾಮನಾಥನ ದೃಷ್ಟಿಯಲ್ಲಿ ಅದು ಬೇಕಾಗಿಯೂ ಇರಲಿಲ್ಲ. ಆದರೂ, ಕಲ್ಯಾಣಿ ಕೆಲಸವನ್ನು ಬಿಡಲಿಲ್ಲ. ನವ ದಂಪತಿಗಳಲ್ಲಿ ಉದ್ಯೋಗಸ್ಥ ದಂಪತಿಗಳ ನಡುವಿನ ಹೊಂದಾಣಿಕೆಯಲ್ಲಿ.. ಕಲ್ಯಾಣಿ ಹಾಗೂ ರಾಮನಾಥರನ್ನು ಹೋಲಿಸಬಹುದಾಗಿದೆ. 


ಹೀಗೆ ಕಲ್ಯಾಣಿ ಅಂತಲ್ಲದಿದ್ದರೂ.. ಅದೇ ಗುಣ, ಕಷ್ಟ ಪಟ್ಟ ಪರಿ ಕಂಡದ್ದು ಹೆಚ್.ಕೆ ಅನುಸೂಯಾ ಸಂಪತ್ ಅವರ ಮಧು ತುಂತುರು ಕಾದಂಬರಿಯಲ್ಲಿ. ಅದರಲ್ಲಿ ಬರುವ ಎರಡು ಕಾದಂಬರಿಗಳಲ್ಲಿ ಒಂದಾದ ಬೇವು- ಬೆಲ್ಲದ ಹರಿದ್ರಾಳಲ್ಲಿ.


ಹರಿದ್ರಾ ಹಾಗೂ ಹರೀಶ್ ಇಬ್ಬರು ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದ ದಂಪತಿಗಳು. ಹರೀಶ ತನಗೆ ಉದ್ಯೋಗದಲ್ಲಿರುವ, ದುಡಿಯುವ ಜೊತೆಗೆ ರೂಪವಂತೆಯಾಗಿರುವ ಹೆಣ್ಣೇ ಬೇಕು ಎನ್ನುವಾಗ ಆತನ ಸೋದರತ್ತೆ ಹರಿದ್ರಾಳನ್ನು ತೋರಿಸಿರುತ್ತಾರೆ. ಮುಂದೆ ಒಪ್ಪಿ ಮದುವೆಯೂ ಆಗುತ್ತದೆ. ಎಲ್ಲವೂ ಸುಗಮವಾಗಿಯೇ ನಡೆಯುತ್ತಿರುತ್ತದೆ ಎನ್ನುವಾಗ ತಾವಿದ್ದ ಊರಿನಿಂದ ಇಬ್ಬರಿಗೂ ಬೆಂಗಳೂರಿಗೆ ವರ್ಗಾವಣೆಯಾಗುತ್ತದೆ. ಇಬ್ಬರೂ ತಮ್ಮ ತಮ್ಮ ತಂದೆ-ತಾಯಿಯರನ್ನು ಬಿಟ್ಟು ಹೊರಡಲೇಬೇಕಾಗುತ್ತದೆ.


ಇಬ್ಬರದ್ದೂ ಪ್ರೇಮ ವಿವಾಹವಲ್ಲದಿದ್ದರೂ ಹೊಂದಾಣಿಕೆ ಚೆನ್ನಾಗಿಯೇ ಇತ್ತು. ಅತ್ತೆ ಮನೆಯಲ್ಲಿದ್ದಾಗ, ಸೊಸೆ ಉದ್ಯೋಗಕ್ಕೆ ಹೋಗುತ್ತಿರುವಾಗ, ಅಲ್ಲಿ ಅತ್ತೆ ಎಲ್ಲವನ್ನು ನಿಭಾಯಿಸುತ್ತಿದ್ದರು. ಆದರೆ, ಬೆಂಗಳೂರಿಗೆ ವರ್ಗವಾದ ಮೇಲೆ.. ಒಬ್ಬಳೇ ಮಗಳಾಗಿ ಬೆಳದಿದ್ದ ಹರಿದ್ರಾ ಎಲ್ಲವನ್ನು ಸಂಭಾಳಿಸಿಕೊಂಡು ಹೋಗಲು ಕಷ್ಟ ಪಡುತ್ತಾಳೆ. ಹರೀಶ ಸಹಾಯ ಮಾಡುತ್ತೇನೆ ಎಂದು ಬಾಯಿ ಮಾತಲ್ಲಿಯಷ್ಟೇ ಸಹಾಯ ಮಾಡುತ್ತಿರುತ್ತಾನೆ. ಇದರಿಂದ ಸಂಸಾರದಲ್ಲಿ ಬಿರುಕು ಹೆಚ್ಚಾಗಲು ಕಾರಣವಾಗುತ್ತದೆ. ಕೆಲಸ ಬಿಡುವಂತಿಲ್ಲ, ಸಂಸಾರವನ್ನೂ ನಿಭಾಯಿಸಬೇಕು.


ನವ ವಿವಾಹಿತೆಯರು ಹಾಗೂ ಉದ್ಯೋಗದಲ್ಲಿರುವ ಮಹಿಳೆಯರು ಅದರಲ್ಲೂ ಮುದ್ದಿನಿಂದ ಬೆಳೆದ ಹೆಣ್ಣು ಮಕ್ಕಳು.. ದಾಂಪತ್ಯಕ್ಕೆ ಕಾಲಿಟ್ಟಾಗ ಉಂಟಾಗುವ ಸಮಸ್ಯೆಗಳು ಹಾಗೂ ಅದರಿಂದ ಉಂಟಾಗಬಹುದಾದ ಮನಸ್ತಾಪಗಳಲ್ಲಿ ಈ ಇಬ್ಬರು ನಾಯಕಿಯರನ್ನು ಸಮೀಕರಿಸಬಹುದು. ನನಗೆ.. ಇವರಿಬ್ಬರೂ ಹಾಗೆ ಕಷ್ಟಪಟ್ಟು ಹೊಂದಿಕೊಂಡ ಪರಿಸ್ಥಿತಿಗಳಲ್ಲಿ ಸಾಮ್ಯತೆ ಎನಿಸಿದರು. 


ಎರಡೂ ಕಾದಂಬರಿಗಳೂ ಸುಖಾಂತ್ಯವಾದರೂ.. ಎರಡೂ ಕಾದಂಬರಿಗಳ ಕಥಾವಸ್ತುಗಳು ಭಿನ್ನ-ಭಿನ್ನವೇ ಆಗಿದ್ದರೂ.. ನವವಿವಾಹಿತರು.. ಉದ್ಯೋಗ ಹಾಗೂ ದಾಂಪತ್ಯ ಎರಡನ್ನೂ ತೂಗಿಸಿಕೊಂಡು ಹೋಗುವ ಸಂದರ್ಭದಲ್ಲಿ.. ನಾಯಕರ ಸ್ವಭಾವ ವಿಭಿನ್ನವಾಗಿದ್ದರೂ.. ನಾಯಕಿಯರು ಬಹಳಷ್ಟು ಸಾಮ್ಯತೆ ಹೊಂದಿದ್ದಾರೆ ಎಂಬುದು ನನಗೆ ಕಂಡ ನೋಟ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ