ಪುಸ್ತಕದ ಶೀರ್ಷಿಕೆ : ಇಲ್ಲೇ ಸ್ವರ್ಗ
ಲೇಖಕರು : ಉಷಾ ನವರತ್ನರಾಮ್
ಪ್ರಕಾಶಕರು : ಓಂ ಶಕ್ತಿ ಪ್ರಕಾಶನ
ತೃತೀಯ ಮುದ್ರಣ : 2013
ಪುಟಗಳು : 160
ಬೆಲೆ : 75 ರೂ.
"ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂಬ ಮಾತು "ತಾಯಿನಾಡಿಗಿಂತ ಬೇರೆ ಸ್ವರ್ಗವಿಲ್ಲ" ಎನ್ನುವುದನ್ನು ಧ್ವನಿಸುತ್ತದೆ ಇಂದಿನ ಯುವ ಪೀಳಿಗೆ ಇರುವ ಜಾಗವನ್ನು ತೊರೆದು ಹೊಸ-ಹೊಸ ಅವಕಾಶಗಳನ್ನರಸಿ ಹೊಸ-ಹೊಸ ಜಾಗಗಳತ್ತ ಮುಖ ಮಾಡುತ್ತಾರೆ. ಅದರಲ್ಲಿಯೂ ವಿದೇಶಕ್ಕೆ ಹಾರುವುದಂತೂ ಈಗ ಸರ್ವೇಸಾಮಾನ್ಯ. ನಮ್ಮ ದೇಶದಲ್ಲಿರುವ ನಿಸರ್ಗ ಸಂಪತ್ತು, ಬದುಕು, ಸುಖ, ತಾಯಿ-ತಂದೆ ಎಲ್ಲರನ್ನೂ ತೊರೆದು ಪರದೇಶಕ್ಕೆ ಹೋಗಿ ಬದುಕು ಕಟ್ಟಿಕೊಳ್ಳುವುದು ಸುಲಭವೇನಲ್ಲ. ಆದರೆ, ಹಣ ಗಳಿಸುವುದು ಮಾತ್ರ ಗುರಿಯಾಗಿ ದೇಶ ಹಿನ್ನೆಲೆಗೆ ಸರಿಯುತ್ತದೆ. ಸ್ವಾರ್ಥ ಮುನ್ನೆಲೆಗೆ ಬರುತ್ತದೆ. ಆಗ ಅಲ್ಲಿಯೇ ಉಳಿದು ಹೋಗುತ್ತಾರೆ. ಅಂತಹಾ ಮನಸ್ಥಿತಿಯವರು ಹಾಗೂ ದೇಶವೇ ಮುಖ್ಯವೆನ್ನುವವರನ್ನಿಟ್ಟುಕೊಂಡು ರಚನೆಯಾದ ಕಾದಂಬರಿ ಉಷಾ ನವರತ್ನರಾಮ್ ಅವರ "ಇಲ್ಲೇ ಸ್ವರ್ಗ".
ಕೆಲವರಿಗೆ ವಿದೇಶಕ್ಕೆ ಹಾರುವ ಅವಕಾಶವಿಲ್ಲದೆ, ಇಲ್ಲಿಯೇ ಉಳಿದರೆ ಇನ್ನೂ ಕೆಲವರು ತಾಯ್ನಾಡು, ತಾಯ್ನೆಲ ಹಾಗೂ ತಾಯಿನುಡಿಯ ಹಿರಿಮೆ-ಗರಿಮೆಯನ್ನು ಅರಿತು ಆ ಅವಕಾಶವನ್ನು ನಿರಾಕರಿಸಿ ಇಲ್ಲಿಯೇ ಉಳಿಯುತ್ತಾರೆ. ಅಂತಹಾ ಉದಾತ್ತ ಮನೋಭಾವದ ವ್ಯಕ್ತಿತ್ವವಿದ್ದ ಅಪರೂಪದ ವ್ಯಕ್ತಿ ಇತಿಹಾಸದ ಪ್ರೊಫೆಸರ್ ಆಗಿದ್ದ ಸಚ್ಚಿದಾನಂದ ಗೌತಮ್. ಗೌತಮನಿಗೆ ಕೇವಲ ಇತಿಹಾಸ ಮಾತ್ರವಲ್ಲದೆ ಆಧ್ಯಾತ್ಮದ ಕುರಿತು ಬಹಳಷ್ಟು ಆಸಕ್ತಿ ಇತ್ತು. ಹಾಗೆ ಉಪನ್ಯಾಸಕ್ಕೆಂದು ಬಂದಿದ್ದಾಗ ಆತನಿಗೆ ಪರಿಚಯವಾದವರೇ ಗುರುರಾಜರಾವ್. ಅವರು ಸಹಾ ಪ್ರೊಫೆಸರ್ ಆಗಿ ಈಗ ನಿವೃತ್ತ ಜೀವನವನ್ನು ನಡೆಸುತ್ತಿದ್ದವರು.
ಸ್ನೇಹಕ್ಕೆ ಹಾಗೂ ಜ್ಞಾನಕ್ಕೆ ವಯಸ್ಸಿನ ಮಿತಿ ಎಲ್ಲಿಯದು..? ಕೇವಲ ಇಬ್ಬರ ಆಸಕ್ತಿಯ ಕೇಂದ್ರಗಳು ಇಬ್ಬರನ್ನೂ ಮತ್ತಷ್ಟು ಹತ್ತಿರಕ್ಕೆ ಸೆಳೆಯಬಲ್ಲರು. ಹೀಗೆ ತಮ್ಮ ಆಸಕ್ತಿಯ ಕೇಂದ್ರವಾಗಿದ್ದ ಆಧ್ಯಾತ್ಮದ ಉಪನ್ಯಾಸದಿಂದ ಹತ್ತಿರವಾಗಿದ್ದು ಗೌತಮ್ ಹಾಗೂ ಗುರುರಾಜರಾವ್. ಗುರುರಾಜರಾವ್ ಅವರಿಗೆ ಗೌತಮನನ್ನು ಕಂಡರೆ ತಮ್ಮ ಮಗ ಸುಧೀಂದ್ರನ ನೆನಪಾಗುತ್ತಿತ್ತು. ಸುಧೀಂದ್ರ ಈಗ ನಾಲ್ಕು ವರ್ಷದ ಹಿಂದೆ ವಿದೇಶಿ ವ್ಯಾಮೋಹಕ್ಕೆ ಬಿದ್ದು.. ಅಲ್ಲಿ ಗೆಹೋದ ನಂತರ ಅಲ್ಲಿಯ ಮಹಿಳೆಯನ್ನೇ ವಿವಾಹವಾಗಿದ್ದನು. ಈಗ ಮಗಳು ಚಂದ್ರಿಕಾ ಕೂಡಾ ಅಣ್ಣನ ಹಾದಿಯಲ್ಲಿ ನಡೆಯಲು ಹೊರಟಿದ್ದಳು. ಅಂದಿನ ಉಪನ್ಯಾಸ ಮುಗಿಸಿ ಬಂದವರೇ ತಮ್ಮ ಪತ್ನಿ ತುಳಸಿಬಾಯಿಯವರ ಜೊತೆ ಗೌತಮನನ್ನು ಬಾಯಿ ತುಂಬಾ ಹೊಗಳಿದ್ದರು.
ಗೌತಮ್ ಜೀವನದಲ್ಲಿ ಬಹಳ ಕಷ್ಟಪಟ್ಟು ಮುಂದೆ ಬಂದಿದ್ದ ಹುಡುಗ. ಆತ ಚಿಕ್ಕವನಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದ. ತಂದೆ ಸತ್ತ ಹುಡುಗನನ್ನು ಬೆಳೆಸಲು ತಾಯಿ ಲಲಿತಮ್ಮ ಬಹಳಷ್ಟು ಕಷ್ಟಪಟ್ಟಿದ್ದರು. ಅವರ ಅಣ್ಣ ಮಾತ್ರ ಇದರ ಲಾಭ ಪಡೆದು ತಂಗಿಯ ಆಸ್ತಿಯನ್ನೆಲ್ಲ ದುರುಪಯೋಗಪಡಿಸಿಕೊಂಡದ್ದು ತಿಳಿದಿದ್ದರೂ ಸಹ ಗೌತಮ ಅಮ್ಮನ ಮುಖ ನೋಡಿಕೊಂಡು ಸುಮ್ಮನಿರಬೇಕಾಗಿತ್ತು. ಕಷ್ಟಕಾಲ ಕಳೆದು ಸುಖ ಪಡುವ ಕಾಲ ಬಂದಿದ್ದರೂ ಸಹ ಅಣ್ಣನ ಮಾತಿನ ಚತುರತೆಯಿಂದ.. ಮನೆ ಮಾರಲು ಹಾಗೂ ಗೌತಮನಿಗಾಗಿ ಹುಡುಗಿಯನ್ನು ಹುಡುಕಲು ಅವರು ಮತ್ತೆ ತವರಿನ ಹಾದಿ ಹಿಡಿದರು.
ಅಮ್ಮ ಊರಿಗೆ ಹೊರಟ ನಂತರ ಉಪನ್ಯಾಸಕ್ಕೆ ಹೊರಟ ಗೌತಮನಿಗೆ ಅಂದಿನ ಉಪನ್ಯಾಸ ಸಿಗಲಿಲ್ಲ. ಕಾರಣ ಸ್ವಾಮೀಜಿಗೆ ದೇಹಾಲಸ್ಯ. ಇದರ ಅವಕಾಶ ಪಡೆದ ಗುರುರಾಜರಾವ್ ಅವರು ಗೌತಮನನ್ನು ತಮ್ಮ ಮನೆ 'ಪರ್ಣಕುಟಿ'ಗೆ ಕರೆತಂದರು. ಹಾಗೆ ಮನೆಗೆ ಬಂದವನನ್ನು ಮೊದಲ ನೋಟದಲ್ಲಿಯೇ ಸೆಳೆದಿದ್ದಳು ಚಂದ್ರಿಕಾ. ಮಧುರ ಭಾವನೆ ಮನಸ್ಸಿನಲ್ಲಿ ಮೂಡಿದರೂ ಸಹಾ ಬಹಳ ಸಂಯಮದಿಂದಲೇ ವರ್ತಿಸಿದ್ದ ಗೌತಮ್.
ಒಂದಿಷ್ಟು ಮಾತುಕತೆ ನಡೆದ ನಂತರ ಚಂದ್ರಿಕಾಳಿಗೆ ಆತ ಅರ್ಧ ಇಷ್ಟವಾಗಿಯೂ, ಅರ್ಧ ಅಧಿಕಪ್ರಸಂಗಿಯಂತೆಯೂ ಕಂಡಿದ್ದ. ಆದರೆ, ಗೌತಮನಿಗೆ ಇದ್ಯಾವುದರ ಅರಿವೂ ಇರಲಿಲ್ಲ. ಇತ್ತ ಚಂದ್ರಿಕಾ ವಿದೇಶಕ್ಕೆ ಹೋಗಬೇಕೆಂದರೆ.. ಇಲ್ಲಿ ಯಾವುದಾದರೂ ಉದ್ಯೋಗ ಹಿಡಿದು ಕೊಂಚ ಅನುಭವ ಪಡೆದಿದ್ದರೆ ಒಳಿತೆಂದು ಕೆಲಸಕ್ಕೆ ಪ್ರಯತ್ನಿಸಿದ್ದಳು. ಗೆಳತಿ ವೈಜಯಂತಿ ಮೆಟರ್ನಿಟಿ ಲೀವ್ ತೆಗೆದುಕೊಂಡು ಹೋಗುತ್ತಿರುವ ವಿಷಯ ತಿಳಿದು ಟೆಂಪರರಿಯಾಗಿ ಆ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಳು. ಎಲ್ಲಿಯ ನ್ಯೂಟ್ರಿಷನ್ ಹಾಗೂ ಎಲ್ಲಿಯ ಇನ್ಫರ್ಮೇಷನ್ ಅಂಡ್ ಟೂರಿಸಂನ ಕೆಲಸ..! ಆದರೂ.. ಉತ್ಸಾಹದಿಂದಲೇ ಚಂದ್ರಿಕಾ ಅದಕ್ಕೆ ತಯಾರಾಗಿದ್ದಳು. ಆದರೆ, ಅವಳಿಗೆ ಅನುಭವ ಇಲ್ಲದ ಇತಿಹಾಸದ ಕುರಿತಾದ ಕೆಲಸ ಅದಾಗಿತ್ತು ಅದಕ್ಕಾಗಿ ಗೌತಮನ ಬಳಿ ಪಾಠ ಹೇಳಿಸಿಕೊಳ್ಳುವ ಸಂಧರ್ಭ ಬಂದಿತ್ತು.
ಗೌತಮ್ ಆಕೆಗೆ ಪಾಠ ಹೇಳಲು ಶುರು ಮಾಡಿದ. ಇತ್ತ ಚಂದ್ರಿಕಾಳ ಮನಸ್ಸು ಇತಿಹಾಸದತ್ತ ಹಾಗೂ ದೇಶದ ಹಿರಿಮೆಯತ್ತ ಜೊತೆಗೆ ಗೌತಮನತ್ತಲೂ ವಾಲುತ್ತಿತ್ತು. ಅಷ್ಟರಲ್ಲಿ ಗೌತಮನಿಗೆ ಬಂದ ಅನಾರೋಗ್ಯದಿಂದ ಆತನ ಪಾಠ ಚಂದ್ರಿಕಾಳಿಗೆ ತಪ್ಪಿತು. ಆತನ ಗೆಳೆಯ ಹಾಗೂ ಲೆಕ್ಚರರ್ ಆಗಿದ್ದ ಮೂರ್ತಿ ಹಾಗೂ ಆತನ ಹೆಂಡತಿ ಸರಳಾ ಇಬ್ಬರೂ ಸೇರಿ ಗೌತಮ್ ನನ್ನು ತನ್ನ ಮನೆಯವನಂತೆ ನೋಡಿಕೊಂಡರು.
ಅರ್ಧಂಬರ್ಧ ತಿಳಿದುಕೊಂಡ ಚಂದ್ರಿಕಾ ಸಂದರ್ಶನವನ್ನು ಎದುರಿಸಿದಳಾದರೂ ಕೆಲಸ ಸಿಗಲಿಲ್ಲ. ಜೊತೆಗೆ ಅವಳ ಆತ್ಮೀಯ ಗೆಳತಿ ರಂಜನಿ ಹೇಳಿದ ಬುದ್ಧಿಮಾತಿನಿಂದ ಗೌತಮನ ಮೇಲಿನ ಪ್ರೇಮವನ್ನು ಮರೆಮಾಚಿದಳು. ವಿದೇಶಕ್ಕೆ ಹೋಗುವ ಮುಂಚಿನ ತನ್ನ ಹಾಗೂ ಆಕೆಯ ಅಣ್ಣ ಸುಧೀಂದ್ರನ ಪ್ರೇಮ ಪ್ರಕರಣವನ್ನು ಬಿಚ್ಚಿಟ್ಟಳು. ಗೌತಮನಿಗೂ ಹಾಗೆಯೇ ಭ್ರಮನಿರಸನ ಮಾಡದಂತೆ ಎಚ್ಚರಿಸಿದ್ದಳು.
ಚಂದ್ರಿಕಾ ಹಾಗೂ ಗೌತಮ ಇನ್ನೇನು ದೂರ ದೂರವಾದರು ಎನ್ನುವಷ್ಟರಲ್ಲಿಯೇ ರಾಯರು ಬಿಡದೆ, ಆತನನ್ನು ಚಂದ್ರಿಕಾಳನ್ನೂ ಒಟ್ಟು ಮಾಡಲು ಪ್ರಸಂಗವನ್ನು ಸೃಷ್ಟಿಸಿದ್ದರು. ಅಷ್ಟರಲ್ಲಿ, ಚಂದ್ರಿಕಾಳನ್ನು ತಮ್ಮ ಜೊತೆಗೆ ಕರೆದೊಯ್ಯಲು ಬಂದದ್ದು ಸುಧೀಂದ್ರ. ಸುಧೀಂದ್ರನಿಗೆ ಅದಾಗಲೇ ಕೇಟಿಯ ಜೊತೆ ವಿವಾಹವಾಗಿತ್ತು. ಸುಧೀಂದ್ರ ತನಗಿಂತ ವಯಸ್ಸಿನಲ್ಲಿ ಬಹಳಷ್ಟು ಹಿರಿಯಳನ್ನು ಮದುವೆಯಾಗಿದ್ದರೂ ಕೇಟಿ ಹಾಗೆ ಕಾಣುತ್ತಿರಲಿಲ್ಲ. ಕೇಟಿಗೆ ಅದಾಗಲೇ 14-15 ವರ್ಷದ ಮಗಳಿದ್ದಳು. ಅವಳೇ ಜೂಡಿ. ಅವರ ಜೊತೆಗೆ ಬಂದದ್ದು ಕೇಟಿಯ ಕಸಿನ್ ನೀಲ್ ಬ್ರುಕ್.
ವಿದೇಶ ಹಾಗೂ ದೇಶೀಯ ಸಂಪ್ರದಾಯಗಳ ನಡುವಿನ ಬದಲಾವಣೆಗಳು, ವ್ಯತ್ಯಾಸಗಳು ಜೊತೆಗೆ ತಮ್ಮ ಕೆಲಸಕ್ಕಾಗಿ ಚಂದ್ರಿಕಾಳನ್ನು ಆಶ್ರಯಿಸಬೇಕಾಗಿ ಬಂದ ಪ್ರಸಂಗ ಇದೆಲ್ಲದರಿಂದ ಕೆಲವು ಮಹತ್ತರ ಬದಲಾವಣೆಗಳಾದವು.
ಸಂಪ್ರದಾಯಸ್ಥರಾದ ತುಳಸಿಬಾಯಿ ತನ್ನ ಸೊಸೆ ಹಾಗೂ ಸುಧೀಂದ್ರನ ಮಲಮಗಳನ್ನು ಸ್ವೀಕರಿಸಿದರೇ..?? ಜೂಡಿ ಹಾಗೂ ಸುಧೀಂದ್ರನ ಸಂಬಂಧ ಹೇಗಿತ್ತು..?? ರಾಯರಿಗೆ ಹಾಗೂ ಚಂದ್ರಿಕಾರಿಗೆ ಈ ನಾಲ್ವರ ಒಡನಾಟ ಹೇಗನ್ನಿಸಿತು..?? ರಾಯರಿಗೆ ತನ್ನ ಮಗಳು ಚಂದ್ರಿಕಾಳ ಮನಸ್ಸಿನಲ್ಲಿ ಮೂಡಿದ ಭಾವನೆಗಳ ಸಂಘರ್ಷದ ಸುಳಿವು ಸಿಕ್ಕಿತೇ..?? ಸುಧೀಂದ್ರ ತನ್ನ ಸಂಸಾರ ಸಮೇತ ಬಂದದ್ದು ಏಕೆ..?? ನೀಲ್ ಬಂದ ಉದ್ದೇಶವೇನು..?? ಇವರೆಲ್ಲರ ನಡುವೆ ಗೌತಮ ಮೂಲೆಗುಂಪಾದನೇ..?? ಇಲ್ಲೇ ಸ್ವರ್ಗ ಎನ್ನುತ್ತಿದ್ದ ಗೌತಮನ ಮುಂದಿನ ನಡೆ ಏನಿತ್ತು ?? ಚಂದ್ರಿಕಾ ವಿದೇಶಕ್ಕೆ ಹಾರಿದಳೇ..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ "ಇಲ್ಲೇ ಸ್ವರ್ಗ".
ನಮ್ಮ ಭಾರತದ ಹಿರಿಮೆ-ಗರಿಮೆ, ಇವುಗಳ ಜೊತೆಗೆ ವಿದೇಶದ ಹೋಲಿಕೆ ನೇರವಾಗಿ ಬರದಿದ್ದರೂ.. ನಮ್ಮ ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವಂತಹಾ ಎಷ್ಟೋ ವಿಚಾರಗಳ ಅರಿವಾಗುತ್ತದೆ. ಅಲ್ಲಿಗೂ ಇಲ್ಲಿಗೂ ಇರುವ ವ್ಯತ್ಯಾಸಗಳು ಕೂಡಾ ಕಂಡುಬರುತ್ತವೆ. ಅವು ಯುವಕ-ಯುವತಿಯರ ಹಾಗೂ ವೃದ್ಧರ ಮನೋಭಾವಗಳ ಚಿತ್ರಣ ಒಟ್ಟಾಗಿ ಕಾಣಸಿಗುತ್ತದೆ. ಲೇಖಕಿ ಇಲ್ಲಿ ಭಾವನಾತ್ಮಕ ಸೌಹಾರ್ದತೆ ಹಾಗೂ ಕುಟುಂಬದ ಮೌಲ್ಯಗಳ ಜೊತೆಗೆ ಆಧ್ಯಾತ್ಮದ ಮಿಶ್ರಣವನ್ನು ಮಾಡುತ್ತಾ ಕಾದಂಬರಿಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೇರಿಸಿದ್ದಾರೆ. ಅರ್ಥಪೂರ್ಣ ಕಾದಂಬರಿಯೊಂದರ ಓದು ಅರಿವಿನ ಮಟ್ಟವನ್ನು ಇನ್ನಷ್ಟು ಎತ್ತರಕ್ಕೇರಿಸುವುದೆಂದರೆ ಅತಿಶಯೋಕ್ತಿಯಾಗದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ