ಶುಕ್ರವಾರ, ಏಪ್ರಿಲ್ 10, 2026

ಮಂಡೋದರಿ (ಪುಸ್ತಕ ಯಾನ - 120)


ಪುಸ್ತಕದ ಶೀರ್ಷಿಕೆ : ಮಂಡೋದರಿ

ಲೇಖಕರು : ಸಿ.ಕೆ ವೆಂಕಟರಾಮಯ್ಯ

ಪ್ರಥಮ ಮುದ್ರಣ : 1931

ಮೂರನೇ ಮುದ್ರಣ : 1951

ಪುಟಗಳು : 120


ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ

ಪಂಚ ಕನ್ಯಾಃ ಸ್ಮರೇನ್ನಿತ್ಯಂ ಸರ್ವ ಪಾತಕನಾಶನಂ ||


ಎಂಬುದನ್ನು ಕೇಳಿದ್ದೇವೆ. ಇದರಲ್ಲಿ ಬರುವ ಮುಖ್ಯ ಪಾತ್ರವಾದ ಮಂಡೋದರಿಯ ಕುರಿತು ರಾಮಾಯಣದಲ್ಲಿ ಕೇಳಿದ್ದಷ್ಟೇ.. ಮಂಡೋದರಿಯೇ ಮುಖ್ಯ ಪಾತ್ರವಾಗಿ ಬಂದ ಪುಸ್ತಕ ಓದಿದ್ದು ಇದೇ ಮೊದಲು. ಅದರಲ್ಲಿಯೂ ಇದು ನಾಟಕದ ಪುಸ್ತಕವಾಗಿರುವುದರಿಂದ ದೃಶ್ಯಗಳು ಕಣ್ಮುಂದೆ ಬಂದಂತೆ ಪರಿಣಾಮಕಾರಿಯಾಗಿದೆ.


ಸಾಮಾನ್ಯವಾಗಿ ರಾಮಾಯಣದಲ್ಲಿ ಸೀತೆಯನ್ನೇ ಪ್ರಮುಖ ಪಾತ್ರವನ್ನಾಗಿ ಕಂಡಿರುವ ನಮಗೆ ಇಲ್ಲಿ ಮಂಡೋದರಿಯದ್ದೇ ಪ್ರಮುಖ ಪಾತ್ರವಾದರೂ ಸೀತೆಯಷ್ಟೇ ಸಾತ್ವಿಕತೆಯಿಂದ ಎಲ್ಲವನ್ನೂ ನಿಭಾಯಿಸುವ ಹೆಣ್ಣಾಗಿ ಕಾಣುತ್ತಾಳೆ. ಮೂರು ಅಂಕದ ಈ ನಾಟಕದಲ್ಲಿ ರಾಮಾಯಣದ ಪ್ರಮುಖ ದೃಶ್ಯಗಳಷ್ಟೇ ಕಾಣಸಿಕ್ಕರೂ.. ಕೆಲವು ದೃಶ್ಯಗಳು ಕಲ್ಪಿತವೆನಿಸಿದರೂ.. ರಾಮಾಯಣದ ಕತೆಗೆ ಧಕ್ಕೆಯಾಗದಂತೆ ಪೂರಕವಾಗಿ ಚಿತ್ರಿತವಾಗಿದೆ. 


ಇಲ್ಲಿನ ರಾವಣ ಪ್ರತಿನಾಯಕನಾಗಿದ್ದರೂ ಆತ ದುಷ್ಕೃತ್ಯಗಳನ್ನು ಎಸಗುತ್ತಿದ್ದ ಎಂಬ ಬದಲಾಗಿ ಜನಾನುರಾಗಿಯಂತೆ ಚಿತ್ರಿಸಿ, ಮಂಡೋದರಿಗೆ ತಕ್ಕ ಪತಿಯನ್ನಾಗಿಸಿದ್ದಾರೆ. ರಾವಣ ನಿಶಾಚರಿಯಲ್ಲ, ಬದಲಾಗಿ ಯಾವುದೇ ಕಳಂಕವಿಲ್ಲದ ಮಾನವ.  ಇಲ್ಲಿನ ರಾವಣನಿಗೆ ಯುದ್ಧ ಮಾಡುವಾಗ ಮಾತ್ರ ಹತ್ತು ತಲೆ ಹಾಗೂ ಇಪ್ಪತ್ತು ಭುಜಗಳು ಬರುತ್ತವೆ. ಈ ಅಂಶ ನಾಟಕದ ಅಭಿನಯಕ್ಕೆ ಪೂರಕವಾಗಿಯೂ ಇದೆ. 


ಮಂಡೋದರಿಯ ದೇಶಾಭಿಮಾನ ಹಾಗೂ ಪತಿಯ ಕುರಿತಾದ ಪ್ರೇಮ ಇಲ್ಲಿ ಎಷ್ಟು ಅಭಿಮಾನಪೂರ್ವಕವಾಗಿ ಚಿತ್ರಿತವಾಗಿದೆಯೆಂದರೆ.. ಕಡೆ ಘಳಿಗೆಯಲ್ಲಿಯೂ.. ರಾವಣ ಸೀತಾಪಹರಣ ಮಾಡಿ ಯುದ್ಧದಲ್ಲಿ ಸೋತು ಸಾಯುವ ಸಂಧರ್ಭದಲ್ಲಿಯೂ.. ವಿಭೀಷಣನ ಬಳಿ "ಜನ್ಮಜನ್ಮಾಂತರದಲ್ಲಿಯೂ ಆರ್ಯಪುತ್ರನೇ ನನ್ನ ಪತಿಯಾಗಲಿ ! ಪುಣ್ಯವಿದ್ದರೆ ಲಂಕೆಯಲ್ಲೇ ನಮ್ಮ ಜನ್ಮವಾಗಲಿ !" ಎನ್ನುತ್ತಾಳೆ.


ಹಾಗೆಂದು, ರಾವಣ ಸೀತೆಯನ್ನು ಹೊತ್ತು ತಂದಾಗ ಮಂಡೋದರಿ ಮೌನವಾಗಿಯೂ ಇರಲಿಲ್ಲ. ಆಕೆಯ ಪ್ರತಿಭಟನೆ ಆಕೆಯನ್ನು ಕೇವಲ ಆಕೆಯನ್ನು ಪತಿಯ ಆಜ್ಞೆಯನ್ನು ಪಾಲಿಸುವ ಹೆಂಡತಿಯಂತೆ ಮಾತ್ರ ಕಾಣದೆ, ಪತ್ನಿಯಾಗಿ ಆಕೆಯ ಸ್ವತಂತ್ರ ವ್ಯಕ್ತಿತ್ವವನ್ನೂ ತೋರಿಸುತ್ತದೆ. ಹಾಗೆಂದ ಮಾತ್ರಕ್ಕೆ ಆಕೆ ರಾವಣನನ್ನು ಬೆಂಬಲಿಸದೇ ಸುಮ್ಮನೆ ಉಳಿಯಲೂ ಇಲ್ಲ. ವಿಭೀಷಣ ರಾವಣನನ್ನು ತೊರೆದು ರಾವಣನ ಪಾಳಯಕ್ಕೆ ನಡೆಯುವಾಗ ಆಕೆ ವಿಭೀಷಣನಿಗೆ ಆತನ ದೇಶಪ್ರೇಮದ ಕುರಿತು ಪ್ರಶ್ನಿಸುವಾಗ ವಿಭೀಷಣನ ಧರ್ಮದ ಕುರಿತ ಒಲವನ್ನು ಬೆಂಬಲಿಸುವ ನಮಗೆ ಒಂದರೆಕ್ಷಣ ಮಂಡೋದರಿಯ ನಿಲುವನ್ನೂ ಮೆಚ್ಚದೇ ಇರಲಾಗದು.


ಸೀತೆಯನ್ನು ಸಹೋದರಿಯಂತೆ ಬೆಂಬಲಿಸುವ, ಆಕೆಯ ನೈತಿಕ ಸ್ಥೈರ್ಯ ಬೆಂಬಲ ನೀಡುವ ಮಂಡೋದರಿಯ ನಿಲುವು ರಾವಣನ ಮನಃಪರಿವರ್ತನೆಗೆ ಕಾರಣವಾದರೂ ವೀರಾಧಿವೀರ ಎನ್ನುವ ಹಮ್ಮು ಸೀತೆಯನ್ನು ರಾಮನಿಗೆ ಹಾಗೆಯೇ ನೇರವಾಗಿ ಒಪ್ಪಿಸಲು ಒಪ್ಪದೇ ರಾಮನನ್ನು ಯುದ್ಧದಲ್ಲಿ ಮುಖಾಮುಖಿಯಾಗಿ ಸೋಲಿಸಿ ನಂತರ ಒಪ್ಪಿಸುವ ಆಲೋಚನೆ ಮಾಡುತ್ತಾನೆ.


ಕೆಲ ಸಂಧರ್ಭದಲ್ಲಿ ಮಂಡೋದರಿ ರಾವಣನನ್ನು ರಕ್ಷಿಸಲು ಪ್ರಯತ್ನಿಸಿ ವಿಫಲಳಾಗುವ ಸಂಧರ್ಭವಿದ್ದರೂ.. ರಾವಣ ಅದಕ್ಕೆ ಕೊಡುವ ವ್ಯಾಖ್ಯಾನವೆಂದರೆ.. ತಾನು ಆಕೆಯನ್ನು ರಕ್ಷಿಸು ಎಂದು ಮೊರೆ ಹೋಗದೇ ಆತ ಸುಮ್ಮನುಳಿದದ್ದು.


ರಾವಣನ ಅಂತ್ಯ ಇಲ್ಲಿ ಬಹಳ ವಿಭಿನ್ನವಾಗಿ ಚಿತ್ರಿತವಾಗಿದೆ. ಆತ ಹತನಾಗುವಾಗ ಅಲ್ಲಿ ಮಂಡೋದರಿ, ಸೀತೆ ಹಾಗೂ ವಿಭೀಷಣ, ಆಂಜನೇಯನ ಉಪಸ್ಥಿತಿ ಇದ್ದು.. ರಾವಣ ಹತನಾಗುವ ಮುನ್ನ ಮಂಡೋದರಿಯ ಅಂತ್ಯವೂ ಆಗುವುದು ದುರಂತವೆನ್ನಿಸುತ್ತದೆ. ಮಂಡೋದರಿ ರಾಮ ದರ್ಶನಕ್ಕೆ ಕಾಯುವ ಬಗೆ ಹಾಗೂ ರಾಮನು ರಾವಣ ಹಾಗೂ ಮಂಡೋದರಿಯ ಕುರಿತು ತೋರುವ ಭಾವವೂ ಓದುಗರ ಹೃದಯವನ್ನು ಆರ್ದ್ರಗೊಳಿಸುತ್ತದೆ.


ನಾಟಕದ ಕಡೆಯ ಭಾಗದ ಕೊನೆಯ ಸಂಭಾಷಣೆಯಲ್ಲಿ ರಾವಣ ವಿಭೀಷಣನಿಗೆ "ಧರ್ಮ.. ನಾನು ನಂಬಲಿಲ್ಲ. ನೀನು ನಂಬು.." ಎನ್ನುವ ಮಾತಂತೂ ಪರಿಣಾಮಕಾರಿಯಾಗಿದೆ. 


ಶೂರ್ಪನಖಿಯ ಕಾರಣದಿಂದ ಸೀತೆಯ ಅಪಹರಣವಾಗದಿದ್ದರೆ.. ರಾವಣ ಹಾಗೂ ಮಂಡೋದರಿಯ ಸಂಸಾರವೂ ಎಷ್ಟು ಚೆನ್ನಾಗಿರುತ್ತಿತ್ತಲ್ಲವೇ.. ಎಂಬ ಭಾವವೂ ಮೂಡಿ ಮೊದಲ ಅಂಕದಲ್ಲಿ ಬರುವ ಅವರಿಬ್ಬರ ಸಾಮರಸ್ಯ ಕಣ್ಮುಂದೆ ಬಂದಂತಾಗುತ್ತದೆ.


ಈ ನಾಟಕವನ್ನು ಓದಿದ ನಂತರ ಲೇಖಕರ ಕಥಾ ಕೌಶಲ್ಯ, ರಚನೆಯ ಸ್ವಾತಂತ್ರ್ಯ.. ಚೆಂದನೆಯ ಭಾವದಿಂದ ವಿಷಾದದ ಅಂತ್ಯಕ್ಕೆ ತಳ್ಳಿ ನಿಲ್ಲಿಸಿ 'ಮಂಡೋದರಿ'ಯನ್ನು ಹಾಗೆಯೇ ಮನಸ್ಸಿನಲ್ಲುಳಿಯುವಂತೆ ಮಾಡಿದವು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ