ಪುಸ್ತಕದ ಶೀರ್ಷಿಕೆ : ಪದುಮ ಪುರುಷ
ಲೇಖಕರು : ಹೆಚ್. ಆರ್. ಸುಜಾತ
ಪ್ರಕಾಶಕರು : ಕೌದಿ ಪ್ರಕಾಶನ
ಪ್ರಥಮ ಮುದ್ರಣ : 2023
ಪುಟಗಳು : 140
ಬೆಲೆ : 140 ರೂ.
"ಅಹಲ್ಯೆಯನ್ನು ಶಪಿಸಿ ಕಲ್ಲಾಗಿಸಿದ ಗೌತಮ ಮುನಿ ನೆನಪಾದ. ಕೋಳಿ ಕೂಗಿನಲ್ಲಿ ಮೋಸದಿಂದ ಆ ಕರೆದ ಇಂದ್ರನೂ... 'ಮಾಡೊ ಕೆಲಸ ಬಿಟ್ಟು ಆಡೊ ದಾಸಯ್ಯನ ಜೊತೆಗೆ ಹೋಗುವ ಹೆಣ್ಣುಗಳು' ಹಳ್ಳಿಯ ಗಾದೆ. ಯಾಕೆ ಹೋಗುತ್ತಾರೆ? ಎಲ್ಲವನ್ನೂ ಬಿಟ್ಟು... ಹೆಣ್ಣುಗಳು ಯಾರದ್ದೋ ಹಿಂದೆ! ಮನೆ ಒಳಗಿನ ಬೇಗುದಿಗಳನ್ನು ನೀಸಲಾರದೆ... ಇರಬಹುದೆ ? ಇಂಥ ನೀತಿ ಪಾಠಗಳು ಹೆಣ್ಣಿಗೆ ಮಾತ್ರ ! ಯಾರಿಗೋಸ್ಕರವೋ ಮನೆ ತೊರೆದ ನೂರಾರು ಗಂಡುಗಳು! ಇದ್ದಾರೆ, ಇದ್ದಾರೆ."
ಈ ಈ ಸಾಲುಗಳು ಎಚ್ ಆರ್ ಸುಜಾತ ಮೇಡಂ ಅವರು ಬರೆದಿರುವ ಪದುಮ ಪುರುಷ ಕಥಾ ಸಂಕಲನದ 'ಮಾವಿನ ಮರದ ನೆರಳಲ್ಲಿ' ಎಂಬ ಕತೆಯಿಂದ ಆಯ್ದುಕೊಂಡದ್ದು. ಈ ಸಾಲುಗಳನ್ನು ಮೊದಲೇ ಏಕೆ ಉಲ್ಲೇಖಿಸಿದೆ ಎಂದರೆ.. ನನಗೆ ಈ ಕಥಾ ಸಂಕಲನವನ್ನು ಓದಿದಾಗ.. ಇಲ್ಲಿನ ಕತೆಗಳ ಮೂಲ ಯೋಚನೆ ಇದೇ ಆಗಿರಬಹುದಾ..? ಎನ್ನಿಸಿತು. ನೈತಿಕ ಅಥವಾ ಅನೈತಿಕ ಎಂಬ ಪ್ರಶ್ನೆಯನ್ನು ಬದಿಗೊತ್ತಿ ಓದುತ್ತಾ ಹೋದಂತೆ.. ಅದೆಷ್ಟು ಹೆಣ್ಣುಗಳ ತಲ್ಲಣಗಳು ಸಿಕ್ಕವು..! ಹೆಣ್ಮನಸ್ಸಿನ ಗಂಡುಗಳ ಬೇಗುದಿಗಳು ಸಿಕ್ಕವು. ಇಲ್ಲಿನ ತಲ್ಲಣಗಳು ಕೇವಲ ಕಥೆಗಳಾಗಿರಲಾರವು. ಇವು ಎಷ್ಟೋ ಮನೆಗಳ ದಿನನಿತ್ಯದ ಬದುಕೂ ಆಗಿರಬಹುದು. ವಿವಾಹದ ಆಚೆಗಿನ ಸಂಬಂಧ ಅಥವಾ ಕಾನೂನುಬಾಹಿರ ಸಂಬಂಧಗಳು ಎಂದು ನೈತಿಕತೆಯ ನೆಲಗಟ್ಟಿನಲ್ಲಿ ನೋಡಿದಾಗ ಇಲ್ಲಿನ ಪರಿಸ್ಥಿತಿ ಅರ್ಥವಾಗದು ಅಥವಾ ತಪ್ಪಾಗಿ ಕಾಣಬಹುದು ಇಡೀ ಕಥಾ ಸಂಕಲನದಲ್ಲಿ ಇದು ನೈತಿಕತೆ ಅಥವಾ ಅನೈತಿಕತೆ ಎಂದು ಎಲ್ಲಿಯೂ ಉಲ್ಲೇಖಿಸದೆ ಸರಿ-ತಪ್ಪುಗಳಾಚೆಗಿನ ಚಿತ್ರಣವನ್ನು ಬಿಡಿಸಿಟ್ಟಿದ್ದಾರೆ.
ಹಾಗೆಂದು, ಇಲ್ಲಿನ ಸಂಬಂಧಗಳನ್ನು ಕಣ್ಮುಚ್ಚಿ ಒಪ್ಪಿಕೊಳ್ಳಲು ಸಾಧ್ಯವಾಗುವುದಾ..?? ಎಂದರೆ ಖಂಡಿತವಾಗಿಯೂ ಇಲ್ಲ. ಆದರೆ, ನೊಂದ ಮನಗಳೆಡೆಗೆ ಒಂದು ಸಾಂತ್ವನವಂತೂ ಮೂಡುತ್ತದೆ.ಗೊತ್ತಿದ್ದೋ.. ಗೊತ್ತಿಲ್ಲದೆಯೋ ಇಟ್ಟ ಹೆಜ್ಜೆಗಳು ಅವರನ್ನು ಕೊಂಡೊಯ್ದ ಬದುಕಿನ ಘಟ್ಟಗಳನ್ನು ಕಾಣುವಾಗ.. ಬದುಕು ಅದೆಷ್ಟು ಸಂಕೀರ್ಣ ಎನ್ನಿಸಿತು. ಸರಳವಾಗಿರಬಹುದಾಗಿದ್ದ ಬದುಕನ್ನು ಸಂಕೀರ್ಣ ಮಾಡಿಕೊಂಡವರು ಅವರೇ ಅಲ್ಲವೇ..?? ಅವರೇ ಅನುಭವಿಸಲಿ.. ಎಂಬ ಭಾವವೂ ಮೂಡಲಿಲ್ಲ. ಯಾರಾದರೂ ಎಚ್ಚರಿಸಿದ್ದರೆ..! ಎನ್ನುವ ಪ್ರಶ್ನೆಯು ಮೂಡುತ್ತದಾದರೂ.. ಆ ಎಚ್ಚರದಾಚೆಯೂ ಇದ್ದಿರಬಹುದಾದ ಜರೂರತೆಯೂ ಕಾಣುತ್ತದೆ.
ಪದುಮ ಪುರುಷ :
ಕಥಾ ಸಂಕಲನದ ಹೆಸರೇ ಕಥೆಯಾಗಿ ಕುತೂಹಲ ಮೂಡಿಸಿದ ಕಥೆ ಪದುಮ ಪುರುಷ. ಪದುಮ, ಆಕೆಯ ಕುಡುಕ ಗಂಡ ಜೊತೆಗೆ ಸೆಲ್ವನೆಂಬ ಸಖ. ಹೀಗೆ ಮುಂದುವರೆಯುತ್ತಿದ್ದ ಅವಳ ಬದುಕಲ್ಲಿ ಮಕ್ಕಳು ಸೆಲ್ವನನ್ನು ಒಪ್ಪಿಕೊಂಡಿದ್ದರು. ಈ ಸಂಬಂಧದ ಕುರಿತಾಗಿ ಆಕೆಯ ಗಂಡನಿಗೆ ತಿಳಿದಿರಲಿಲ್ಲವಾ..?? ಯಾಕೆ ತಿಳಿದಿರಲಿಲ್ಲ..! ಮುಂದೆ..? ಆಕೆಯ ಮಕ್ಕಳ ಸ್ಥಿತಿ..? ಪದುಮ ಪುರುಷ ಎಂಬ ಸರಳ-ಸಂಕೀರ್ಣ ಕತೆ ಇದು.
ಮಳೆಯ ಧ್ಯಾನ:
'ಪ್ರೇಮ ಹೆಣ್ಣಿಗೆ ನಶೆ. ಗಂಡಿಗೆ ಅದೊಂದು ಕಡು ಎಚ್ಚರ' ಎಂಬ ಹರೀಶನ ಮಾತುಗಳನ್ನು ನೆನಪಿಸಿಕೊಂಡ ಸಂಭ್ರಮಳ ಮನಸ್ಸು ಪ್ರೇಮ, ವಿರಹದ ನಡುವಲ್ಲಿ ತೊಯ್ದಾಡುತ್ತಿತ್ತು. ಅವಳಿದ್ದ ಚೆಂದಕ್ಕೆ ಯಾರಾದರೂ ಮದುವೆಯಾಗುತ್ತಿದ್ದರಾದರೂ.. ಒಂದು ಮಾಯದ ಒಲವಿಗೆ ಅಡಿಇಟ್ಟದ್ದಾಗಿತ್ತು. ಗೆಳತಿ ಸಂಭ್ರಮ ಹಾಗೂ ಹರೀಶರ ಜೀವನದ ತಲ್ಲಣಗಳ ಜೊತೆಗೆ ಇಲ್ಲಿ ಹೇಮ ಸಿಗುತ್ತಾಳೆ.
ಮೂರು ಮನೆಗಳು:
ಸುಮಾರು 15 ವರ್ಷಗಳ ಘಟನೆಯನ್ನು ಕಟ್ಟಿಕೊಡುವ ಈ ಮೂರು ಮನೆಗಳು ಮೂರು ರೀತಿಯ ಬದುಕನ್ನು ತೋರಿಸುತ್ತವೆ. ಎಡ ಬಲ ಹಾಗೂ ನಡುಮನೆಗಳಲ್ಲಿ ಮಕ್ಕಳು ಹಾಗೂ ಸಂಸಾರದ ರೀತಿ-ನೀತಿಗಳು ಬೇರೆ. ಹರೆಯದ ಆಟ ಮುಗಿಸಿದ ಮನಸ್ಸುಗಳು ಈಗ ವಿಶ್ರಾಂತಿಗಾಗಿ ನೆಮ್ಮದಿಗಾಗಿ ಅರಸುತ್ತಿದ್ದಾರೆ. ಆದರೆ, ಹರೆಯದಲ್ಲಿ ತಾವಾಗಿಯೇ ದೂರ ಮಾಡಿಕೊಂಡಿದ್ದ ಮನೆಯ ನೆಮ್ಮದಿ ಅವರಿಗೆ ದೊರಕುತ್ತದೆಯಾ..?? ಹೆಣ್ಣು ಹಾಗೂ ಗಂಡಿನ ವಿಭಿನ್ನ ಮನಸ್ಥಿತಿಗಳು ಕಂಡು ಬರುತ್ತವೆ.
ನೆಲೆ ಹುಡುಕುತ್ತಾ:
ಪರಿಚಯವಿದ್ದ ಆಶ್ರಮವೊಂದಕ್ಕೆ ಹೋಗಿದ್ದಾಗ ಅಲ್ಲಿನ ಅಬಲೆಯನ್ನು ಕಂಡು ತನ್ನ ಅಣ್ಣನ ಮನೆಗೆ ಕೆಲಸದವರ ಅವಶ್ಯಕತೆ ಇದೆ ಎಂದು ನೆನಪಾಗಿ ಅಲ್ಲಿಂದ ಒಬ್ಬಳು ಹುಡುಗಿಯನ್ನು ಕರೆತಂದಿದ್ದರು. ಲವಲವಿಕೆಯ ಸೌಮ್ಯನ ನಡವಳಿಕೆ ಮೊದಮೊದಲಿಗೆ ಏನೂ ಅನಿಸದಿದ್ದರೂ ನಂತರ ತೀಕ್ಷ್ಣವಾಗಿ ಗಮನಿಸಿದಾಗ ಬೇರೆಯೇ ಆಗಿತ್ತು. ಸೌಮ್ಯ ಮತ್ತೆ ಮೂರನೆಯ ಬಾರಿಗೆ ತಿರುಗಿ ಆಶ್ರಮ ಸೇರಿದ್ದಾಗಿತ್ತು . ಸೌಮ್ಯಳ ಕಥೆಯ ಮೂಲಕ ಸಮಸ್ಯೆಯ ನೆಲೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ.
ಪ್ರಾಣ ಪದಕ:
ಕೇರಳದ ಹೆಣ್ಣು ಮಗಳಾದ ಕನಿ ಸರ್ಕಾರಿ ಕ್ವಾಟ್ರಸ್ ಸೇರಿ ವರ್ಷವಾಗಿತ್ತಷ್ಟೇ.. ಮಲಯಾಳದ ಕನ್ನಡದಲ್ಲಿ.. ಆಕೆ ಎಲ್ಲದಕ್ಕೂ ಕೇಳುತ್ತಿದ್ದದ್ದು ವಚನಾಳನ್ನು. ರಾತ್ರಿ ಸಿಕ್ಕ ಮೂಕಿ ಹುಡುಗಿಯನ್ನು ಆಕೆಯ ಪತಿಯೂ.. ಆಕೆಯೂ ಕರೆತಂದಿದ್ದರಾದರೂ.. ಒಂದು ರೀತಿಯ ಭಯವಂತೂ ಇದ್ದೇ ಇತ್ತು. ಮೂಕಿ ಹುಡುಗಿ ಹರಿಣಿ ಅಲ್ಲೇ ಹತ್ತಿರದಲ್ಲಿಯೇ ಒಬ್ಬರ ಮನೆಯಲ್ಲಿ ಕೆಲಸದಲ್ಲಿದ್ದವಳು. ಆಕೆಯ ಗೆಳತಿ ಮಾಲಾಳ ಮೂಲಕ ಬಿಚ್ಚಿಕೊಳ್ಳುವ ಕಥೆ. ಮದುವೆಯೇ ಆಗದೆ ಗರ್ಭಿಣಿಯಾಗಿದ್ದ ಆ ಹುಡುಗಿಯ ಬದುಕಿಯನ ಅಸಲಿಯತ್ತೇನು..? ಈ ಕಥೆಯ ಅಂತ್ಯ ಬಹಳ ಇಷ್ಟವಾಯಿತು.
ಮಗ್ಗದ ಲಾಳಿ :
ಮಗ್ಗದ ಲಾಳಿಯನ್ನು ಮೀಟುತ್ತಲೇ ಬದುಕಿನ ಲಯ ಕಂಡುಕೊಂಡಿದ್ದ ಹೆಣ್ಣು ಮಗಳೊಬ್ಬಳ ಮುಗ್ಧತೆಯ, ಆರಾಧನೆಯ, ಅಭಿಮಾನದ ಕಥೆ ಇಲ್ಲಿದೆ. ವರನಟ ಡಾ|| ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಈ ಕಥೆ ಆಪ್ತವಾಗುತ್ತವೆ.
ಬಿಡಿ-ಇಡಿ ಕತೆಗಳು
ಇಲ್ಲಿರಲಾರೆ ಅಲ್ಲಿಗೆ....
ಬಿಡದ ಮಾಯೆ...
ಮಾವಿನ ಮರದ ನೆರಳಲ್ಲಿ...
ಸಮೀನಾಳ ಪ್ರತಿಜ್ಞೆ
ಈ ನಾಲ್ಕು ಕಥೆಗಳನ್ನು ಬಿಡಿಬಿಡಿಯಾಗಿಯೂ ಓದಬಹುದು. ಹಿಂದಿನದ್ದನ್ನು ಓದಿಯೇ ಮುಂದಿನದ್ದನ್ನು ಓದಬೇಕೆಂದೇನಿಲ್ಲ. ಸ್ವತಂತ್ರ ಕಥೆಗಳು. ಹಾಗೆಯೇ.. ಈ ಕಥೆಗಳನ್ನು ಇಡಿಯಾಗಿ ಓದಿದರೆ ಒಂದು ಮಿನಿ ಕಾದಂಬರಿಯನ್ನೇ ಓದಿದಂತೆನಿಸುತ್ತದೆ.
ಗೀತಳ ಮನೆಯಲ್ಲಿ ಕೆಲಸಕ್ಕಿದ್ದ ರಾಜಲಕ್ಷ್ಮಿ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾ.. ಆಗೀಗ ಗೀತಾಳಿಂದ ಹಣವನ್ನು ಸಾಲವಾಗಿ ಪಡೆದುಕೊಳ್ಳುತ್ತಾ.. ತನಗೆ ಸರಿಯಲ್ಲದ ಜೋಡಿಯಂತಹಾ ದೊಡ್ಡಯ್ಯನ ಜೊತೆಗೆ ಬಾಳುತ್ತಿದ್ದ ಆಕೆ ಮಗಳೊಂದಿಗೆ ಇದ್ದಕ್ಕಿದ್ದಂತೆ ಕಾಣೆಯಾಗುತ್ತಾಳೆ. ದೊಡ್ಡಯ್ಯನದ್ದು ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎನ್ನುವ ಪರಿಸ್ಥಿತಿ. ಕೆಲಸದವರ ಸಹವಾಸವೇ ಸಾಕು ಎನ್ನುತ್ತಿದ್ದ ಗೀತಾ ಮನೆಯ ಕೆಲಸಕ್ಕೆ ಹೊಸದಾಗಿ ಸೇರಿದ್ದು ಸಂಯುಕ್ತ. ಪುಟ್ಟ ಮಗುವಿನೊಂದಿಗೆ ಕೆಲಸಕ್ಕೆ ಹೇಗೆ ಹೊಂದಿಕೊಳ್ಳುತ್ತಾಳೋ.. ಎನ್ನುವಷ್ಟರಲ್ಲಿ ರಾಜಲಕ್ಷ್ಮಿಯೇ ಕಳಿಸಿದ್ದು ಎಂಬುದು ಗೊತ್ತಾಗುತ್ತದೆ. ಬಿಡದ ಮಾಯೆಯಂತೆ ಈಕೆಯೂ ಗೀತಾಳಿಗೆ ಹತ್ತಿರವಾಗುತ್ತಾಳೆ. ಆದರೆ, ಆಕೆಯ ಗಂಡನಿಗೆ ಅದು ಎರಡನೇ ಸಂಸಾರ. ಒಳ ಸಿಕ್ಕುಗಳಿಂದ ಸಮೀನಾ ಸಂಯುಕ್ತಳಾಗಿದ್ದು. ಎಲ್ಲದರೊಡನೆಯೂ ಗುದ್ದಾಡುತ್ತಾ ಬಾಳುವ ಸಂಯುಕ್ತ/ಸಮೀನಾ.. ಎಲ್ಲದಕ್ಕೂ ಒಂದು ಅಂತ್ಯ ಇರಲೇಬೇಕಲ್ಲವಾ..?? ಈ ಎಲ್ಲಾ ಕಥೆಗಳ ಅಂತ್ಯ ಮತ್ತೊಂದು ಕಥೆಯ ಮುನ್ನುಡಿಯೇ.
ಕನಸಿನ ಒಳಗೊಂದು ಮನಸ್ಸು :
ಕವನ ಹಾಗೂ ಕಥನದ ರೂಪದಲ್ಲಿ ಹೊರಹೊಮ್ಮಿದ ಭಾವಪೂರ್ಣ ಬರಹ ಇಲ್ಲಿದೆ.
ಪ್ರಾಣದ ಗೆಳೆಯ :
ಕರ್ಣ-ದುರ್ಯೋಧನ ಹಾಗೂ ಭಾನುಮತಿಯರ ಮುಟ್ಟಿನಹಾರದ ಮೂಲಕ ಭಾವನೆಗಳ ತಾಕಲಾಟಗಳ ಪ್ರಸಂಗ ಇಲ್ಲಿದೆ.
ಇಲ್ಲಿ ಹರೆಯದ ಪ್ರೀತಿಯೊಡನೆ, ಮಾಗಿದ ಮನಸ್ಸುಗಳು ರೀತಿಯಿದೆ. ಬದುಕಿನಲ್ಲಿ ನೊಂದವರು ಮಾಡಿದ ಪ್ರತಿಜ್ಞೆಗಳು, ಹೇಳಿಕೊಳ್ಳಲಾಗದ ತುಮುಲಗಳು, ಸಾಂತ್ವನಿಸಲು ಹೋಗಿ ಬೇಡದ ಜಂಜಾಟದಲ್ಲಿ ಸಿಕ್ಕಿಕೊಂಡ ಜೀವಗಳು, ಅಲ್ಲಿಯೋ-ಇಲ್ಲಿಯೋ.. ಎನ್ನುವವರು ಕೆಲವರಾದರೆ.. ಅಲ್ಲಿಯೂ-ಇಲ್ಲಿಯೂ ಎನ್ನುವವರು ಹಲವರು. ಕೆಲವರಿಗೆ ಅವಕಾಶ ಮತ್ತೆ ಕೆಲವರಿಗೆ ನಿರ್ಮಲ ಪ್ರೀತಿ.. ಇನ್ನು ಕೆಲವರಿಗೆ ಅಸಹಾಯಕತೆಯ ದುರುಪಯೋಗ. ಈ ಎಲ್ಲಾ ಜೀವನದ ತುಣುಕುಗಳನ್ನು ಒಟ್ಟುಗೂಡಿಸಿ ಕೌದಿಯಂತೆ ಒಟ್ಟಾಗಿಸಿ ಶಾಶ್ವತಕ್ಕೋ.. ತಾತ್ಕಾಲಿಕಕ್ಕೋ.. ಅಂತೂ ಬೆಚ್ಚನೆಯ ಭಾವ ತುಂಬಿದ ಕಥೆಗಳು.
ಈ ಕಥಾ ಸಂಕಲನವನ್ನು ಎರಡು ರೀತಿಯಲ್ಲಿ ನೋಡಬಹುದಾದರೂ.. ನಾನು ನೋಡಿದ ರೀತಿ ನೈತಿಕ ಅಥವಾ ಅನೈತಿಕ ಎನ್ನುವ ತಕ್ಕಡಿಯಲ್ಲಿ ತೂಗದೆ, ಕೇವಲ ಆ ಕ್ಷಣದ ಅವರ ಬದುಕನ್ನು ಸುಮ್ಮನೆ ನೋಡಿದ್ದು. ಹಾಗೆಂದು, ಈ ಸಂಬಂಧಗಳೆಲ್ಲವೂ ಸರಿ ಎಂದು ಹೇಳಲಾರೆ ಅಥವಾ ತಪ್ಪು ಎಂದೂ ಹೇಳಲಾಗದು. ಓದಿ ನೀವೇ ನಿರ್ಧರಿಸಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ