ಶುಕ್ರವಾರ, ಏಪ್ರಿಲ್ 10, 2026

ವಸಂತ ಚಂದ್ರಿಕಾ (ಪುಸ್ತಕ ಯಾನ - 111)


ಪುಸ್ತಕದ ಶೀರ್ಷಿಕೆ : ವಸಂತ ಚಂದ್ರಿಕಾ

ಲೇಖಕರು : ಹೆಚ್. ಜಿ ರಾಧಾದೇವಿ

ಪ್ರಕಾಶಕರು : ಹೇಮಂತ ಸಾಹಿತ್ಯ

ಪ್ರಥಮ ಮುದ್ರಣ : 1997

ದ್ವಿತೀಯ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)


ದಾಂಪತ್ಯವೆಂದರೆ ಬದುಕಿನಲ್ಲಿ ವಸಂತದ ಮಧುರತೆ ಹಾಗೂ ಚಂದ್ರಿಕೆಯ ಬೆಳಕು. ಇವೆರಡೂ ಇದ್ದಾಗ ದಾಂಪತ್ಯ ಸಂತಸಮಯವಾಗಿರುತ್ತದೆ. ಆದರೆ, ಹಲವಾರು ದಂಪತಿಗಳು ಇತ್ತ ವಸಂತದ ಮಾಧುರ್ಯವಿಲ್ಲದೆ.. ಚಂದ್ರಿಕೆಯ ಬೆಳಕೂ ಇಲ್ಲದೆ ಒದ್ದಾಡುತ್ತಿರುತ್ತಾರೆ ಲ್. ಇದಕ್ಕೆ ಮತ್ತೇನೂ ಕಾರಣವಲ್ಲ. ಅದು ಅವರವರ ಸ್ವಯಂಕೃತ ಅಪರಾಧವಾಗಿರುತ್ತದೆ. ಒಂದೋ ಗಂಡ ಹೆಂಡತಿಯನ್ನು ಮೂಲೆಗುಂಪು ಮಾಡುವುದು ಅಥವಾ ಹೆಂಡತಿ ಗಂಡನನ್ನು ನಿರ್ಲಕ್ಷಿಸುವುದು. ಹೀಗೆ ಯಾವುದಾದರೊಂದು ಕಾರಣಕ್ಕೆ ಇಂತಹಾ ಘಟನೆಗಳು ಸಂಭವಿಸುತ್ತಿರಬಹುದು. ಇಂತಹಾ ದಾಂಪತ್ಯಕ್ಕೆ ಕೈಕನ್ನಡಿಯಂತಿರುವ ಕಾದಂಬರಿ ವಸಂತ ಚಂದ್ರಿಕಾ.


ಈ ಕಾದಂಬರಿಯ ಮುಖ್ಯ ಪಾತ್ರಗಳು ಸರಸ್ವತಿ ಹಾಗೂ ಶ್ರೀನಿವಾಸ. ಶ್ರೀನಿವಾಸನಿಗೆ ಇಬ್ಬರು ತಮ್ಮಂದಿರು ಮಾಧವ ಹಾಗೂ ಕೇಶವ. ಮತ್ತಿಬ್ಬರು ತಂಗಿಯರು. ಮಾಧವ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹೋದ್ಯೋಗಿಯನ್ನೇ ಪ್ರೇಮಿಸಿ ವಿವಾಹವಾಗಲು ನಿಶ್ಚಯಿಸಿದ್ದ. ತಮ್ಮನಿಗೆ ವಿವಾಹವಾಗಿ ತಾನಿನ್ನೂ ಅವಿವಾಹಿತನಾಗಿದ್ದಾಗ.. ಸರಸ್ವತಿಯನ್ನು ಯಾವುದೋ ಮದುವೆಯಲ್ಲಿ ನೋಡಿ, ಮೆಚ್ಚಿ ಯಾವ ವರದಕ್ಷಿಣೆಯೂ ಇಲ್ಲದೆ ವಿವಾಹವಾಗಲು ತೀರ್ಮಾನಿಸಿದ. ಅವನ ಮದುವೆಯಿಂದ ಬಂದ ವರದಕ್ಷಿಣೆ ಹಣದಲ್ಲಿ ತನ್ನ ಹೆಣ್ಣುಮಕ್ಕಳ ಮದುವೆ ಮಾಡಲು ಯೋಚಿಸಿದ್ದ ತಾಯಿಗೆ ಆಶಾಭಂಗವಾಗಿತ್ತು. ಕೂಡು ಕುಟುಂಬದಲ್ಲಿ ಸರಸ್ವತಿ ಕೆಲಸದ ಹೊರೆಯಿಂದ ಹಾಗೂ ತನ್ನ ಮನೆಯಿಂದ ಬರಿಗೈಯಲ್ಲಿ ಬಂದವಳೆಂಬ ಕೊಂಕು ನುಡಿಗಳಿಂದ ಕುಗ್ಗಿ ಹೋಗಿದ್ದಳು. ಜೊತೆಗೆ ತಾತ್ಸಾರವು ಸೇರಿತ್ತು. ಹೆಣ್ಣುಮಕ್ಕಳ ಮದುವೆಯಾಗಲು ಆ ಮನೆಯನ್ನು ಬರೆದುಕೊಡುವ ಸಂದರ್ಭ ಬಂದಾಗ.. ಶ್ರೀನಿವಾಸ ಅನಿವಾರ್ಯವಾಗಿ ಬೇರೆಡೆ ಸಂಸಾರ ಹೂಡಬೇಕಾಯಿತು. ಆದರೆ, ಬಡತನವಿನ್ನೂ ಮುಗಿದಿರಲಿಲ್ಲ.


ಸರಸ್ವತಿಗೆ ಕೆಲಸದ ಹೊರೆಯಂತೂ ಇದ್ದೇ ಇತ್ತು, ಶ್ರೀನಿವಾಸನಿಂದ ಆಗಾಗ ಪೆಟ್ಟುಗಳು ಬೀಳುತ್ತಿದ್ದವು. ಕಾರಣ, ಆತನ ಸಂಬಳದಿಂದ ತಿಂಗಳ 20 ದಿನವನ್ನಷ್ಟೇ ದೂಡಬಹುದಾಗಿತ್ತು. ಈ ಸಂದರ್ಭದಲ್ಲಿ ಅವಳ ಪಾಲಿಗೆ ಆಶಾದೀಪದಂತೆ ಬಂದದ್ದು ಆಕೆಯ ಚಿಕ್ಕಮ್ಮನ ಮಗಳು ಸಂಧ್ಯಾ. ಆ ಮನೆಗೆ ಹೊಂದಿಕೊಂಡಂತಿದ್ದ ಜೋಡಿ ಕೋಣೆಗಳಲ್ಲಿ ಸಂಧ್ಯಾಳಿಗೆ ವ್ಯವಸ್ಥೆ ಮಾಡಿಕೊಟ್ಟು.. ಅವಳು ಕೊಡುತ್ತಿದ್ದ ಹಣದಿಂದ ತಿಂಡಿ, ಊಟ, ಬಟ್ಟೆ ಎಲ್ಲವನ್ನು ಸರಿದೂಗಿಸುತ್ತಿದ್ದಳು. ಪೇಯಿಂಗ್ ಗೆಸ್ಟ್ ಆದ ಸಂಧ್ಯಾ ಜೊತೆಗೆ ಅವಳ ಗೆಳತಿ ರತ್ನಾಳ ಸಹಾಯದಿಂದ ವಸಂತ ಲಾಲ್ ಅಂಗಡಿಗೆ ವ್ಯಾಪಾರಕ್ಕಾಗಿ ಹೋದಳು. ಸೀರೆಗಳನ್ನು ಕೊಂಡು ವ್ಯಾಪಾರ ಮಾಡಿದರೆ ಕಮಿಷನ್ ನಿಂದ ಹಣ ಗಳಿಸಬಹುದು ಎಂಬ ದೂರಲೋಚನೆಯೂ ಇತ್ತಾದರೂ.. ಅದು ಕಾರ್ಯರೂಪಕ್ಕೆ ಬಂದಾಗಲೇ ಅದರ ಕಷ್ಟ ತಿಳಿದದ್ದು.


ಸಂಧ್ಯಾ ನೀಡುತ್ತಿದ್ದ ಹಣದಿಂದ ಮನೆಯ ಪರಿಸ್ಥಿತಿ ಸುಧಾರಿಸಿತ್ತು. ಮಕ್ಕಳು ಮೈ-ಕೈ ತುಂಬಿಕೊಂಡಿದ್ದರು ಮಕ್ಕಳನ್ನು ಕಾನ್ವೆಂಟಿಗೆ ಸೇರಿಸಲು, ತಾನು ಒಡವೆ ಮಾಡಿಸಿಕೊಳ್ಳಲು.. ಸೀರೆಯ ವ್ಯಾಪಾರಕ್ಕಿಳಿಯಲು ತೀರ್ಮಾನಿಸಿ, ಸೀರೆಗಳನ್ನು ತಂದರೆ.. ಮಧ್ಯಮ ವರ್ಗದ ಯಾರೂ ಕಾರಣವಿಲ್ಲದೆ, ಸೀರೆಯನ್ನು ಕೊಂಡುಕೊಳ್ಳಲು ಮುಂದೆ ಬರದೆ ಮೀನ-ಮೇಷ ಎಣಿಸುತ್ತಿದ್ದರು. ಆದರೆ, ಶ್ರೀನಿವಾಸ ಪತ್ನಿಯ ಸೀರೆ ವ್ಯಾಪಾರಕ್ಕೆ ಪ್ರೋತ್ಸಾಹಿಸುತ್ತಾ.. ತಾನೇ ಮುಂದಾಗಿ ತನ್ನ ಆಫೀಸಿನಲ್ಲಿ ಅವುಗಳನ್ನು ಮಾರುವುದಾಗಿ ಹೇಳಿ ತೆಗೆದುಕೊಂಡು ಹೊರಟನು. ಅವನ ಬದಲಾವಣೆ ಕಂಡು ಖುಷಿ ಪಟ್ಟಳಾದರೂ.. ದುಃಖ ಪಡುವ ಸಂದರ್ಭವೂ ಹತ್ತಿರದಲ್ಲಿತ್ತು.


ತನ್ನ ತಮ್ಮ ಕೇಶವನ ಬಳಿ ವಾರಾಂತ್ಯದಲ್ಲಿ ಟೈಪಿಂಗ್ ಕೆಲಸ ಮಾಡಲು ಶುರುವಿಟ್ಟ ಶ್ರೀನಿವಾಸ. ಅಲ್ಲಿಗೆ ಬರುತ್ತಿದ್ದ ಕೇಶವನ ಹೆಂಡತಿಯ ಗೆಳತಿ ಚಂದ್ರಿಕಾ ಸ್ನೇಹ ಬೆಳೆದಿತ್ತು. ಚಂದ್ರಿಕಾಳ ಜೊತೆ ಒಪ್ಪಂದ ಮಾಡಿಕೊಂಡು.. ಸೀರೆ ವ್ಯಾಪಾರದಿಂದ ತನಗೆ ಹಾಗೂ ಅವಳಿಗೆ ಅರ್ಧರ್ಧ ಲಾಭ ಎಂದು ಹೆಂಡತಿಗೆ ತಿಳಿಯದಂತೆ ವ್ಯವಹಾರ ನಡೆಸಿದ. ಸರಸ್ವತಿಗೆ ಸಂಬಂಧದಲ್ಲಿ ಹಾಗೂ ವ್ಯಾಪಾರದಲ್ಲಿ ಎರಡರಲ್ಲೂ ಮೋಸ ಮಾಡುತ್ತಿದ್ದ. ತಾನು ಶ್ರೀಮಂತಿಕೆಯ ಗತ್ತಿನ ಜೀವನ ನಡೆಸಲು ಶುರುವಿಟ್ಟ. ಇದ್ದ ಇಬ್ಬರು ಗಂಡು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ, ಹೆಂಡತಿಗೆ ಬಡತನವೇ ಗತಿಯಾಗಿತ್ತು. 


ಸಂಧ್ಯಾ ಆ ಮನೆಯನ್ನು ತೊರೆದು ಮದುವೆಯಾಗುವ ಸಂದರ್ಭ ಬಂದಿತು. ವಸಂತಲಾಲ್ ಸರಸ್ವತಿಯ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿದ್ದ. ಅದನ್ನು ಒಂದೆರಡು ಸಂದರ್ಭದಲ್ಲಿ ವ್ಯಕ್ತಪಡಿಸಿದ್ದ ಸಹಾ. ಆದರೆ, ಆತನಿಗೆ ಸಹಕರಿಸಿದರೆ ಮಾತ್ರ ಸೀರೆಯ ವ್ಯಾಪಾರ ಮುಂದುವರಿಸುವುದಾಗಿ ಒತ್ತಡ ಹಾಕಿದಾಗ ಸರಸ್ವತಿಗೆ ಬರುವ ಹಣದ ಮೂಲವೆಲ್ಲಾ ನಿಂತು ಬಡತನ ಬರುವುದಾಗಿ ಚಿಂತೆಯಾಯಿತು. ಅದೇ ಸಂಧರ್ಭದಲ್ಲಿ ಚಂದ್ರಿಕಾ ಹಾಗೂ ಶ್ರೀನಿವಾಸನ ಸಂಬಂಧ ತಿಳಿದು, ಬಾಣಂತಿಯಾಗಿದ್ದಾಗ ಮಾನಸಿಕ ಅಸ್ವಸ್ಥೆಯಾಗಿದ್ದಂತೆ.. ಮನಸ್ಸು ಕೆಟ್ಟು ವಸಂತಲಾಲ್ ಹೇಳಿದ್ದಕ್ಕೆ ಒಪ್ಪಿ ಹೋದಳಾದರೂ.. ಆಕೆಯಲ್ಲಿದ್ದ ನೈತಿಕತೆಯಿಂದ ಹಿಂದೆ ಸರಿದಳು.


ಸರಸ್ವತಿ ಚಿಂತೆಯಲ್ಲಿದ್ದಾಗ ವಸಂತ್ ಲಾಲ್ ಅಂಗಡಿಯಲ್ಲಿದ್ದ  ಮಂಗಲ್ ತನ್ನ ಮನೆಯ ಹೆಣ್ಣು ಮಗಳಿಗೂ ಅದೇ ರೀತಿಯ ಸಂದರ್ಭ ಬಂದಿದ್ದನ್ನು ನೆನೆಸಿಕೊಂಡು.. ಆಕೆಗೆ ಒಂದು ಉದ್ಯೋಗದ ದಾರಿ ಮಾಡಿಕೊಟ್ಟ. ಆ ಮನೆ ತೊರೆದು ಗಂಡನನ್ನು ಒಬ್ಬನನ್ನೇ ಬಿಟ್ಟು.. ತನ್ನವೆಂದಿದ್ದ ಸಾಮಾನುಗಳನ್ನು ಹಾಗೂ ಮಕ್ಕಳನ್ನು ಜೊತೆ ಮಾಡಿಕೊಂಡು ಹೊರಬಂದಳು. ಬ್ರಾಹ್ಮಣರಾದ್ದರಿಂದ ಅಡುಗೆ-ತಿಂಡಿಯ ಕೆಲಸಕ್ಕೆ ಸರಸ್ವತಿ ಒಪ್ಪಿಕೊಂಡಳು. ಹೊರಗಿನ ದುಡಿತವೇನೂ ಇಲ್ಲದೆ ಬರೀ ತಿಂಡಿ ಮಾಡುವ ಕೆಲಸದಿಂದ ಆರ್ಥಿಕವಾಗಿ ಸಬಲಳಾದಳು. 


ಅತ್ತ ಸೀರೆಗಳ ವ್ಯಾಪಾರ ನಿಂತಾಗ ಚಂದ್ರಿಕಾ ದೂರಗಿದ್ದರೆ.. ಇತ್ತ ಹೆಂಡತಿಯು ದೂರವಾಗಿದ್ದಳು ಎಂಟು ತಿಂಗಳ ಒಂಟಿತನದಿಂದ ಬೇಸತ್ತ ಶ್ರೀನಿವಾಸ ಹೆಂಡತಿಯ ಶರತ್ತುಗಳಿಗೆಲ್ಲಾ ಒಪ್ಪಿದ. ಸಂಸಾರ ಇನ್ನೇನು ಸುಖಸಾಗರವಾಗಬೇಕಾಗಿತ್ತು.. ಆದರೆ, ಸರಸ್ವತಿಗೆ ಅದುವರೆಗೂ ತಾನು ಪಟ್ಟ ಕಷ್ಟಗಳೆಲ್ಲ ನೆನಪಾಗಿ, ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದುದರಿಂದ ಗಂಡನನ್ನು ಹೆಜ್ಜೆ ಹೆಜ್ಜೆಗೂ ಕಾಡಿಸಲು ಶುರುವಿಟ್ಟಳು.


ಈ ಸಂದರ್ಭದಲ್ಲಿ ಸರಸ್ವತಿಯ ಒಬ್ಬ ತಂಗಿ ಪಾರ್ವತಿಯ ವಿವಾಹವಾಗಿ.. ಮತ್ತೊಬ್ಬ ತಂಗಿಗೆ ಕೆಲಸವಾಗಿ ತನ್ನ ಮನೆಯಲ್ಲಿ ಸಂಧ್ಯಾಳಂತೆ ಇರಲು ಅಮ್ಮನೊಡನೆ ಬಂದಳು. ಅಮ್ಮನೂ ತನಗೆ ಕೆಲಸಕ್ಕೆ ಜೊತೆಯಾದಾಗ ಸಂಬಳ ನೀಡಿ, ಎಲ್ಲವನ್ನೂ ವ್ಯಾವಹಾರಿಕವಾಗಿಯೇ ನಿಭಾಯಿಸುತ್ತಿದ್ದಳು. ಸರಸ್ವತಿಯನ್ನು ಬಾಣಂತನಗಳಲ್ಲಿ ಕಾಡಿಸಿದ್ದ ತಂಗಿಗೆ ಅಕ್ಕನೊಡನೆ ಹೊಂದಿಕೊಂಡಿರಲು ಆಗಲಿಲ್ಲ. ಆದರೆ, ಅವಳ ಪಾಲಿಗೆ ಮುಳ್ಳಾಗಲು ಹೊರಟಿದ್ದಳು ತಂಗಿ ವಸಂತ.


ವಸಂತ ಹಾಗೂ ಶ್ರೀನಿವಾಸನ ಸಂಬಂಧ ಏನಾಯಿತು..?? ವಸಂತ ಶ್ರೀನಿವಾಸನ ಪಾಲಿಗೆ ಚಂದ್ರಿಕೆಯಾದಳೇ..?? ಅಥವಾ ವಸಂತ ಚಂದ್ರಿಕೆ ಎರಡೂ ಆಗಿ ಶ್ರೀನಿವಾಸನ ಪಾಲಿಗುಳಿದದ್ದು ಸರಸ್ವತಿ ಮಾತ್ರವೇ..?? ಇಲ್ಲಿ ತಪ್ಪು ಯಾರದ್ದು..??  ತಿಳಿಯಲು ಓದಿ ಎಚ್.‌ಜಿ ರಾಧಾದೇವಿ ಯವರ ಕಾದಂಬರಿ 'ವಸಂತ ಚಂದ್ರಿಕಾ'.


ದಾಂಪತ್ಯದಲ್ಲಿ ವಿರಸಗಳು ಸಾಮಾನ್ಯವೇ. ಆದರೂ.. ಒಬ್ಬರನ್ನೂ ಮತ್ತೊಬ್ಬರು ಕಡೆಗಣಿಸಿದಾಗ, ನಿರ್ಲಕ್ಷಿಸಿದಾಗ ಅವರ ಮನಸ್ಸಿನಲ್ಲಿ ಉಂಟಾಗುವ ಕೋಲಾಹಲಗಳು ಮನಸ್ಸಲ್ಲೇ ಉಳಿದು.. ಮುಂದಿನ ದಿನಗಳಲ್ಲಿ ಕಾಡಿಸಲು ಶುರುವಿಡಬಹುದು. ಗಂಡ-ಹೆಂಡತಿಯರಲ್ಲಿ ಜಿದ್ದು ಬೆಳೆಯಬಹುದು. ಹೊರಗಿನ ಸಂಬಂಧಗಳಿಗೂ ಬಲಿಯಾಗಬಹುದು. ಆದರೆ, ಅದೆಲ್ಲವನ್ನು ಮೀರಿ ಉಳಿದ ದಾಂಪತ್ಯ ಸುಮಧುರ ಎಂಬುದು ನಿಸ್ಸಂಶಯ. ಒಬ್ಬರನ್ನು ಒಬ್ಬರು ಅರಿತು.. ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂದರಿತು ನಡೆದಾಗಲಷ್ಟೇ ಸಂಸಾರ ಸುಂದರ.


ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲಳಾಗಲು ಎಷ್ಟೆಲ್ಲಾ ದಾರಿಗಳಿವೆ ಎಂಬುದರ ಜೊತೆಗೆ.. ಆರ್ಥಿಕ ಸಬಲತೆಯ ನಂತರದ ವಿನಮ್ರತೆ, ಅತಿಯಾಸೆ ಪಡದಿರುವುದು ಹಾಗೂ ಅಹಂಕಾರವಿಲ್ಲದ ನಡತೆ ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಸರಸ್ವತಿಯ ತಂಗಿ ವಸಂತ ಭಾವನನ್ನೇ ಮದುವೆಯಾಗಲು ಹೊರಟಾಗ ಸಮಾಜ ಅದಕ್ಕೆ ಪ್ರತಿಕ್ರಿಯಿಸುವ ಪರಿ ಹೇಗಿರುತ್ತದೆ..? ಅಲಗಿನಂತೆ ಹೇಗೆ ಚುಚ್ಚುತ್ತದೆ..? ಎಂಬುದನ್ನು ಮಾತುಗಳಲ್ಲಿ ಹಾಗೂ ಕೇವಲ ನೋಡುವವರ ನೋಟದಿಂದಲೇ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಕಷ್ಟ ಬಂದಾಗ ದೇವರನ್ನು ನೆನೆಸಿಕೊಳ್ಳುವ ಪರಿ ಹಾಗೂ ಆ ಕಷ್ಟದ ಸಂದರ್ಭದಲ್ಲಿಯೂ ವೆಂಕಟೇಶ ಕೈಬಿಡದ ಸನ್ನಿವೇಶಗಳೊಂದಿಗೆ ದೈವ ಭಕ್ತಿಯ ಚಿತ್ರಣವೂ ಸೇರಿ ಒಂದೊಳ್ಳೆಯ ಕಾದಂಬರಿ ಪಾಠವಾಗಿ ಮನಸ್ಸಿಗಿಳಿಯುತ್ತದೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ