ಮಂಗಳವಾರ, ಮೇ 30, 2017

ಅಮ್ಮನ ಅಕ್ಕರೆಯ ಸವಿಯಲ್ಲಿ ಜೀವನ

''ಅಮ್ಮ" ಎಂಬ ಎರಡಕ್ಷರದಲ್ಲಿಯೇ ನಮ್ಮ ಬದುಕಿನ ಎಲ್ಲಾ ಭಾವನೆಗಳು ಅಡಗಿವೆ.ಹೆರಿಗೆ ಎಂಬ ಸಾವಿನ ಬಾಯಿಗೆ ಹೋಗಿ ಬರುವ ಪ್ರಕ್ರಿಯೆಯಿಂದ ನಮ್ಮನ್ನು ಭೂಮಿಗೆ ಕರೆತಂದ ದೇವತೆ ನೀನು.ಎಲ್ಲ ನೋವನ್ನು ನುಂಗಿ ನಗುವಿನಿಂದ ಬರಮಾಡಿಕೊಂಡ ನಂತರ ನೀನು ಲಾಲಿ ಹಾಡಿ ಪೋಷಿಸುವ ಪರಿಯೇ ಸುಂದರ.ಮಗು ಮೊದಲು ಅತ್ತಾಗಲೇ ನಿನ್ನ ಪ್ರೀತಿ ಶುರುವಾಗುತ್ತದೆ. ಎಷ್ಟಾದರೂ ಕರುಳ ಸಂಬಂಧವಲ್ಲವೇ?,ಕಣ್ಣು ಅರಿಯದಿದ್ದರೂ ಕರುಳರಿಯದೆ?,ಯಾರಿಗೂ ಹೇಳಲಾಗದ ಭಾವನೆಗಳನ್ನು ನೀನು ಅರ್ಥೈಸಿಕೊಳ್ಳುವೆ.
              "ಮನೆಯೆ ಮೊದಲ ಪಾಠಶಾಲೆ,ತಾಯಿಯೆ ಮೊದಲ ಗುರು" ಎಂಬ ಮಾತು ಅಕ್ಶರಶಃ ಸತ್ಯ.ಯಾವುದೇ ಕುತೂಹಲವಿದ್ದರೂ ಅದಕ್ಕೆ ಪ್ರೇರಣೆ ನೀಡಿ,ಎಷ್ಟೇ ಬಾರಿ ಕೇಳಿದರೂ ಬೇಸರಿಸದೆ ನೀನು ಉತ್ತರ ನೀಡುವ ಪರಿಯೇ ಚಂದ.ನಿನ್ನ ಮಡಿಲ ಸುಖಕ್ಕೆ ಬೆಲೆಕಟ್ಟಲಾಗದು. ಸ್ನೇಹಿತೆಯಾಗಿ, ಶಿಕ್ಷಕಿಯಾಗಿ,ಹಿತೈಷಿಯಾಗಿ ಯಾವುದೇ ಕೆಲಸಕ್ಕಾದರೂ ಜೊತೆಯಾಗಿ ನಿಂತು ಪ್ರೇರಕ ಶಕ್ತಿಯಾಗಿರುವೆ.ನಿನ್ನ ದಯೆ, ಕ್ಷಮಾಗುಣ,ಮುಗುಳ್ನಗು ಇವುಗಳನ್ನು ನಾನೂ ಅಳವಡಿಸಿಕೊಳ್ಳುತ್ತಿರುವೆ. ಇಷ್ಟೆಲ್ಲಾ ಪ್ರೇರಣೆ ನೀಡುವ ತಾಯಿಯ ಮನಸ್ಸಿನಲ್ಲಿ ಮಗುವಿಗೆ ವಿಶೇಷ ಸ್ಥಾನ.ಮಗ ಅಥವಾ ಮಗಳು ಎಂಬ ಭೇದ ತೋರಿಸದೆ ನೀನು ತೋರಿಸುವ ಪ್ರೀತಿ ಅಸದೃಶ.ಅದಕ್ಕೆ ಹೇಳುವುದು "ಜಗತ್ತಿನಲ್ಲಿ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ".ಆದರೆ ಇಂದು ತಾಯಿಯ ಬೆಲೆಯನ್ನು ಅರಿಯದೆ ಎಷ್ಟೋ ಜನರು ಆಕೆಯನ್ನು ವೃದ್ಧಾಶ್ರಮದ  ಅಥವಾ ಬೀದಿಪಾಲು ಮಾಡಿದ ಉದಾಹರಣೆಗಳು ನಮ್ಮ ಕಣ್ಮುಂದಿದೆ. ಇನ್ನಾದರೂ ಈ ರೀತಿ ಮಾಡದೆ ತಮ್ಮ ತಪ್ಪುಗಳನ್ನು ಸರಿಮಾಡಿಕೊಂಡು ಎಚ್ಚೆತ್ತುಕೊಂಡರೆ ಉತ್ತಮ."ಹರಕಲು ಬಟ್ಟೆ ಉಟ್ಟಿದ್ದಾಳೆಂದು ನಮ್ಮ ತಾಯಿಯನ್ನು ದೂರ ಮಾಡಿ ರೇಷ್ಮೆ ಬಟ್ಟೆ ಉಟ್ಟಿರುವವರನ್ನು ನಮ್ಮ ತಾಯಿ ಎಂದು ಹೇಳಲು ಸಾಧ್ಯವೇ?",ಹೇಗಿದ್ದರೂ ನಮ್ಮ ತಾಯಿ ನಮ್ಮ ತಾಯಿಯೇ ಅಲ್ಲವೇ?
          ಹೆತ್ತ ತಾಯಿಯ ಪ್ರೀತಿಯ ಪರಿ ಹೀಗಾದರೆ,ನಮ್ಮನ್ನು ಪೋಷಿಸುವ ಮಾತೃ ಸಮಾನ ಹೆಣ್ಣು ಮಕ್ಕಳ ಪ್ರೀತಿಯ ಪರಿಯೇ ಇನ್ನೊಂದು ಚಂದ. ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ, ಸಹೋದರಿ, ಶಿಕ್ಷಕಿ, ಸ್ನೇಹಿತೆ, ಮಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರ ಕಾಳಜಿ, ಪ್ರೀತಿಯೂ ಅಪಾರ. ತಾಯಿಯ ರೀತಿ ಅಕ್ಕರೆ ತೋರುವ ಇನ್ನೊಬ್ಬರು ಪ್ರತಿಯೊಬ್ಬರ ಜೀವನದಲ್ಲಿಯೂ ಇದ್ದೇ ಇರುತ್ತಾರೆ. ನಮ್ಮ ಆರೋಗ್ಯ, ಜೀವನ, ಆಹಾರದ ಬಗ್ಗೆ ನಮಗಿಂತ ಕಾಳಜಿ ತೋರಿಸುವ ಆ ಮಾತೃ ಮನಸ್ಸಿನ ಎಲ್ಲರಿಗೂ ಒಂದು ಸಲಾಂ.
         ಗೊತ್ತೋ,ಗೊತ್ತಿಲ್ಲದೆಯೋ ಯಾರಿಗಾದರೂ ನೋವಾಗಿದ್ದರೆ ಇಂದು ಕ್ಷಮೆ ಬೇಡೋಣ. ನಮ್ಮಿಂದ ಆಗುವ ಸಹಾಯ ಮಾಡೋಣ. ಅಮ್ಮಂದಿರ ದಿನದ ಆಚರಣೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ಅವರನ್ನು ಪ್ರೀತಿಸೋಣ, ಗೌರವಿಸೋಣ.ಹೆತ್ತ ತಾಯಿಗೆ, ತಾಯಿಯಂತೆಯೇ ಪ್ರೀತಿ ತೋರಿ ಕಾಳಜಿ ಮಾಡಿ ಮನದ ಮಬ್ಬನ್ನು ದೂರ ಮಾಡಿ ಹಣತೆಯ ಬೆಳಕು ನೀಡಿ ದಾರಿದೀಪವಾಗಿರುವ ತಾಯಿ ಮನಸ್ಸಿನ ಎಲ್ಲಾ ಹೆಣ್ಮಕ್ಕಳಿಗೂ ಅಮ್ಮಂದಿರ ದಿನದ ಶುಭಾಶಯಗಳು.
                                                                                                                                    -vಭಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ