ಶುಕ್ರವಾರ, ಜೂನ್ 23, 2017

ದಿಗಂತದ ಮರೀಚಿಕೆ

ದಿಗಂತದಲ್ಲೆಲ್ಲೋ ಬೆಳಕು ಮೂಡಿದೆ
ಸೂಜಿಗಲ್ಲಿನ ಸೆಳೆತಕೆ,
ಮನಸಿನ ಮಿಡಿತಕೆ...
ಹಣದಾಸೆಯ ಲೋಭವ ಮೀರಿ,
ಅಪ್ರಾಮಾಣಿಕತೆಯನ್ನು ಮೆಟ್ಟಿ ನಿಂತು
ಸುಸಂಧರ್ಭದಿ ಮೊದಲ ಹೆಜ್ಜೆ ಮೂಡಿದೆ.
ಆ ಕಿರಣದ ಬೆಳಕ ಅರಸಿ
ಒಂದರಿಂದ ಹೆಜ್ಜೆ ಆರಂಭವೇ ಆಗಿದೆ
ಆ ಬೆಳಕ ಪುಳಕಕೆ ಮನ ಹಾತೊರೆದಿದೆ
ಮನಸ್ಸು ತುಂಬಿ ಬಂದಿದೆ.
ಕೈಗೆ ಸಿಕ್ಕಿಯೇಬಿಟ್ಟಿತೆನ್ನುವಷ್ಟರಲ್ಲಿ...
ಮರೀಚಿಕೆಗೆ ಓಗೊಡುತ್ತಾ,
ಕತ್ತಲ ತೊರೆಯುತಾ...
ಬೆಳಕ ಹಾದಿಯ ಹಿಡಿಯುತಾ...
ಸಾಗುವ, ಸಾಗುವ ನಿಲ್ಲದೆಯೇ ಸಾಗುವ...
                                       -vಭಾ

ಬುಧವಾರ, ಜೂನ್ 21, 2017

ಅಪ್ಪನ ಮಾಂತ್ರಿಕತೆಯ ಮೋಡಿಯಲಿ

ನೀಲಾಕಾಶದ ನೀರವತೆಯಲಿ,
ಕಾಣದ ಕನಸುಗಳಿಗೂ ಬಣ್ಣತುಂಬುತ,
ನೀ ಹೇಳಿದ ಅದೆಷ್ಟೋ ಕತೆಗಳು
ಪಾತ್ರಗಳಾಗಿ ಇಂದು ಎದುರು ನಿಂತಿವೆ.
ನಿಮ್ಮ ಆ ಮಾತಿನ ಮಾಂತ್ರಿಕತೆಯಲಿ,
ಮೋಡಿ ಹಾಕಿದಂತೆ ಕಳೆದು ಹೋಗುವೆನು.
ನಿಮ್ಮನ್ನು ನೀವು ಕಳೆದುಕೊಳ್ಳದಂತೆ
ನಮ್ಮೊಂದಿಗೆ ಬೆರೆಯುವ ಪರಿಯೇ ಚಂದ.
ಅಪ್ಪ, ನಿಮ್ಮ ಸುಂದರ ಒಡನಾಟದಲ್ಲಿ
ಕಲಿತ ಪಾಠಗಳು ಇಂದಿಗೂ ಪ್ರಸ್ತುತ.
ಮಾತಿಗಿಂತ ಕೆಲಸ ಮುಖ್ಯ ಎಂಬಂತೆ
ಆಡದೆಯೇ ಮಾಡಿ ತೋರಿಸುವ ಛಲ,
ನಿಷ್ಕಲ್ಮಷ ನಗುವೇ ನನಗೆ ಸ್ಪೂರ್ತಿ
ಅಪ್ಪ, ನನ್ನದೇ ಆದ ಪುಟ್ಟ ವಿಶ್ವದಲ್ಲಿ
ಎಂದೆಂದಿಗೂ ನನಗೆ ನೀವೇ ಎಲ್ಲ...
                                   -vಭಾ

ಹಿತ್ತಲ ಗಿಡ ಮದ್ದಲ್ಲವೇ?

ಹಿತ್ತಲ ಗಿಡ ಮದ್ದಲ್ಲ ಎಂಬ ಮಾತನ್ನು ಒಂದಲ್ಲಾ ಒಂದು ಬಾರಿ ಕೇಳಿಯೇ ಇರುತ್ತೇವೆ. ಹೌದಲ್ಲವೇ?
           ನಾವು ಇಂದು ಆಧುನಿಕತೆಯತ್ತ ಸಾಗುತ್ತಾ, ಸಾಗುತ್ತಾ ನಮ್ಮ ಸುತ್ತಮುತ್ತಲ ಸೌಲಭ್ಯಗಳನ್ನು ಮರೆಯುತ್ತಿರುವುದಂತೂ ನಿಜ. ಇಂದು ಯಾವುದೇ ರೀತಿಯ ಖಾಯಿಲೆಗಳು ಬಂದರೂ ಆಸ್ಫತ್ರೆಯ ಮೊರೆ ಹೋಗುತ್ತಿದ್ದೇವೆ. ಆದರೆ ಶೀತದಂತಹ ಸಣ್ಣ ಖಾಯಿಲೆಗೂ ನಾವು ಆಸ್ಫತ್ರೆಯನ್ನೇ ಅವಲಂಬಿಸಿರುವುದು, ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತಿದೆ ನಮ್ಮ ಮನಸ್ಥಿತಿ. ಮನೆಯಲ್ಲೇ ಸಿಗುವ ಚಿಕಿತ್ಸೆಯನ್ನು ಬಿಟ್ಟು ಸೂಪರ್ ಸ್ಪೆಶಾಲಿಟಿ ಅಸ್ಫತ್ರೆಗಳ ಮೆಟ್ಟಿಲು ಹತ್ತುತ್ತಿದ್ದೇವೆ. ಮನೆಯಲ್ಲಿ ಅಮ್ಮನೋ, ಅಜ್ಜಿಯೋ ಸಲಹೆ ನೀಡಿದರೆ ಅದು ತಾತ್ಸಾರ, ಆದರೆ ಅದೇ ಸಲಹೆಯನ್ನು ವೈದ್ಯರಿಗೆ ಸಾವಿರಾರು ರೂಪಾಯಿಗಳನ್ನು ನೀಡಿ ಪಡೆಯುತ್ತೇವೆ.ಶಂಖದಿಂದ ಬಂದರೇ ತೀರ್ಥವೇ?ಏಕೆ ಹೀಗೆ?
             ಇನ್ನು ವಿದ್ಯಾರ್ಥಿಗಳ ವಿಷಯಕ್ಕೆ ಬಂದರೆ ಮನೆಯಲ್ಲಿ ಅಪ್ಪ-ಅಮ್ಮ ಕೂರಿಸಿ ಶಾಲೆಯಲ್ಲಿ ಹೇಳಿಕೊಟ್ಟ ವಿಷಯಗಳನ್ನು ಭೋಧಿಸಿದರೆ ಮಕ್ಕಳಿಗೆ ಬೇಡವಾಗಿರುತ್ತದೆ. ಅದೇ ಮನೆಪಾಠ(ಟ್ಯೂಷನ್)ದಿಂದ ಕಲಿತರೆ ಅವರಿಗೆ ನೆಮ್ಮದಿ. ಇದನ್ನೇ ಬಂಡವಾಳ ಮಾಡಿಕೊಂಡ ಎಷ್ಟೋ ಟ್ಯೂಷನ್ ಸೆಂಟರುಗಳು ಇಂದು ಜ್ಞಾನಾರ್ಜನೆಯ ಕೇಂದ್ರವಾಗಿರದೆ, ವ್ಯಾಪಾರೀ ಕೇಂದ್ರಗಳಾಗಿ ಬದಲಾಗುತ್ತಿವೆ. ಏಕೆ ಹೀಗೆ?
              ನಮ್ಮ ಮನೆಯಲ್ಲಿರುವ ಮಕ್ಕಳ ಕಲೆಗಳನ್ನು ನಾವು ಗುರುತಿಸುವುದೇ ಇಲ್ಲ. ಅದೇ ಪಕ್ಕದ ಮನೆಯ ಮಗುವಿಗೆ ಪ್ರೋತ್ಸಾಹ ನೀಡುತ್ತೇವೆ.ನಮ್ಮ ಮಕ್ಕಳು ತಮ್ಮ ಗುರಿ ಹಾಗು ಕನಸುಗಳ ಬಗ್ಗೆ ಮಾತನಾಡುತ್ತಿರುವಾಗ ಸುಮ್ಮನೇ ಓದು ಹೋಗು, ನಿನ್ನಿಂದ ಇದು ಅಸಾಧ್ಯ ಎಂದು ನಿರುತ್ಸಾಹದ ಮಾತುಗಳನ್ನಾಡಿ ಬಿಡುತ್ತೇವೆ.ಏಕೆ ಹೀಗೆ?
               ಹಿತ್ತಲ ಗಿಡ ಮದ್ದಲ್ಲ ಎಂದು ನಮ್ಮ ಭಾವನೆಯೇ? ಒಮ್ಮೆ ವಿದ್ಯಾರ್ಥಿಗಳು, ಯುವಜನತೆ ತಮ್ಮ ಪೋಷಕರ ಮಾತನ್ನು ಆಲಿಸಿ ಅದರಂತೆ ನಡೆದುಕೊಂಡರೆ, ಪೋಷಕರು ತಮ್ಮ ಮಕ್ಕಳ ಕನಸಿಗೆ ಒಮ್ಮೆ ಸಹಕಾರ ನೀಡಿದರೆ ಎಲ್ಲ ಬದಲಾವಣೆಗಳು ಸಾಧ್ಯವಾಗುತ್ತವೆ. ಮಕ್ಕಳ ಆಸೆ, ಕನಸುಗಳಿಗೆ ಒಮ್ಮೆ ಬೆನ್ನೆಲುಬಾಗಿ ನಿಲ್ಲಿ. ಅವರ ಪ್ರಯತ್ನದಲ್ಲಿ ಗೆದ್ದರೆ ಉತ್ತಮ ಭವಿಷ್ಯ ಅವರದ್ದಾಗುತ್ತದೆ. ಸೋತರೆ ಅನುಭವದಿಂದ ಪಾಠ ಕಲಿತು ಎಚ್ಚರಿಕೆಯಿಂದ ಮುನ್ನಡೆಯತ್ತಾರೆ.
                               "ಹಿತ್ತಲ ಗಿಡವೂ ಮದ್ದಾಗುತ್ತದೆ".
                                                                                                                       -vಭಾ

ತೊರೆದರೂ ತೊರೆಯದೆ...

ಭಾವ ತೊರೆದಂತ ಹಾಡು,
ಹೊಸ ಲಯದೊಂದಿಗೆ ಬೆರೆಯಿತು.

ಕನಸ ತೊರೆದ ಜೀವಕೆ,
ಹೊಸ ಬದುಕು  ದೊರೆಯಿತು.

ದೇಹ ತೊರೆದ ಆತ್ಮಕೆ,
ಹೊಸ ಜೀವ ಸಿಕ್ಕಿತು.

ಗೂಡು ತೊರೆದ ಪಕ್ಷಿಗೆ,
ಹೊಸ ದಿಗಂತವೇ ತೆರೆಯಿತು.

ಗಗನ ತೊರೆದ ಜಲಕೆ,
ಭೂಮಿ ಸಂಭ್ರಮದಿ ಹಾತೊರೆಯಿತು.
                                    
ಮನಸು ತೊರೆದ ಪದಗಳು,
ಅಕ್ಷರದ ರೂಪದಿ ಹಾಡಾದವು

~ವಿಭಾ ವಿಶ್ವನಾಥ್

ಮಂಗಳವಾರ, ಜೂನ್ 6, 2017

ಜೀವನ ಚಕ್ರ

ಬಾಳಿನ ಪಥದಲ್ಲಿ ನಿಲ್ಲದೆಯೇ
ಸಾಗುತಲಿದೆ ಜೀವನ ಚಕ್ರ

ನೋವೆಂಬ ಮುಳ್ಳುಗಳ
ಬೇಲಿಯ ಹಾಯುತ,
ನಲಿವೆಂಬ ಹೂವಿನ 
ಮಕರಂದ ಸವಿಯುತ

ಕಾಣದ ಗುರಿಯೆಡೆಗೆ,
ಕಾಣುವ ದಾರಿಯಲಿ...
ಕಾಡುವ ಕನಸಿಗೆ
ಉತ್ತರವ ಹುಡುಕುತ...

ಗುರಿ ಮುಟ್ಟುವ ಆಸೆಯಲಿ
ಮನಸ ಹುರಿದುಂಬಿಸುತ,
ಆಸರೆಯ ಊರುಗೋಲಾಗುತ
ಸಹಾಯಹಸ್ತ ಚಾಚುತ,ಬಯಸುತ

ಎಲ್ಲಿಯ ಪಯಣಕೋ,
ಯಾವುದೋ ಹಾದಿಯಲಿ,
ಏನನ್ನೋ ಹುಡುಕುತಲಿ,
ಸಾಗುತಲಿದೆ ಜೀವನಚಕ್ರ...
                        -vಭಾ

ಬಾಳ ಚದುರಂಗ

ಬಾಳಿನಲಿ ನಡೆಯುತಿದೆ ಚದುರಂಗದಾಟ
ದೇವರು ನಡೆಸಿದಂತೆ ನಮ್ಮ ನಡೆ
ಚದುರಂಗದಲ್ಲಿ ಜೀವವಿಲ್ಲದ ಗೊಂಬೆಗಳು,
ಬಾಳ ಚದುರಂಗದಲ್ಲಿ ಜೀವಂತ ಗೊಂಬೆಗಳು.

ಒಂದೊಮ್ಮೆ ಕಪ್ಪು,ಮತ್ತೊಮ್ಮೆ ಬಿಳುಪು
ಕಾಲಾಳಿನ ಕಾಲ ಸಾಗುತಿದೆ ಹೀಗೆ...
ಒಂದೊಮ್ಮೆ ನೋವು,ಮತ್ತೊಮ್ಮೆ ನಲಿವು
ನಮ್ಮ ಜೀವಿತದ ಕಾಲ ಸಾಗುತಿದೆ ಹೀಗೆ...

ನಮ್ಮ ಕಣ್ಮುಂದೆಯೇ ಹಲವು ಏಳಿಗೆ-ಬೀಳುವಿಕೆ
ನಮ್ಮ ಕಣ್ಮುಂದೆಯೇ ಕೆಲವು ಹುಟ್ಟು-ಸಾವು
ಅವರ ನಡೆ ನಮ್ಮ ಜೀವಿತದಿ ಬೆಸೆದಿದೆ
ಕಾಲದೊಂದಿಗೆ ಸಾಗುತಿದೆ ಜೀವನದ ವೇಗ.
                                         
ಒಬ್ಬರ ಸೋಲು, ಮತ್ತೊಬ್ಬರ ಗೆಲುವು
ಸೋಲು ಗೆಲುವಿನ ಮೆಟ್ಟಿಲೇ?
ಕಾಲದ ಗತಿಯೊಡನೆ ಸೋಲು,ಗೆಲುವು
ಅವನ ಸೂತ್ರಪಟದಲ್ಲಿ ಸಾಗುತಿದೆ ನಡೆಯು
ಬಾಳ ಚದುರಂಗದಲಿ ಸಾಗುತಿದೆ ನಡೆಯು...
                                            -vಭಾ

ಜೀವದಾಯಿನಿ

  
ಎಲ್ಲರ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ನನ್ನ ಪ್ರವೇಶ ಇದ್ದೇ ಇರುತ್ತದೆ.ಬೇಕೆಂದರೂ, ಬೇಡವೆಂದರೂ ಬರುವವಳು ನಾನು.ಭಾವನೆಗಳ ವ್ಯಕ್ತಪಡಿಸುವಿಕೆಗೆ ಜೀವಂತ ಸಾಕ್ಷಿ ನಾನು. ಮನುಷ್ಯ ಹುಟ್ಟಿದಾಗ ಅವನ ಜೀವನ ಚಕ್ರದ ಆರಂಭ, ಆ ಆರಂಭದ ಧ್ವನಿಯ ಒಡಹುಟ್ಟಿದವಳು. ಮನುಷ್ಯನ ಅಂತ್ಯದ ಕಾಲದ ಜ್ವಲಂತ ಸಾಕ್ಷಿ ನಾನು.
            
                ತುಂಬ ದುಃಖವಾದಾಗ, ಬಹಳ ಖುಷಿಯಾದಾಗಲೂ ಬರುವವಳು ನಾನೇ. ಹಟಮಾರಿ ಮಕ್ಕಳ ಹಠದ ಬೇಡಿಕೆಗೆ ಬೆಲೆ ಬರುವುದು ನಾ ಬಂದಾಗಲೇ,ಭಾವ ಜೀವಿಗಳ ಚಲನಚಿತ್ರದಲ್ಲೂ ನನ್ನ ಪಾತ್ರವೇ ಹೆಚ್ಚು.ಸ್ವಾಭಾವಿಕವಾಗಿ ನಾ ಬರದಿದ್ದರೂ,ಕೃತಕತೆಯಿಂದ ಕರೆಸುವರು.ಬಲವಂತದಿಂದ ಕರೆದಾಗಲೂ ನಾ ಅವರ ಕರೆಗೆ ಓಗೊಟ್ಟು ಬರುವೆ. ಹೆಣ್ಣುಮಕ್ಕಳ ಅತಿ ಆಪ್ತಳು ನಾನು.ವಿರಹಿಗಳ ಮನಸ್ಸಿಗೂ ಹತ್ತಿರವಾಗಿರುವೆ. ನಾನು ಯಾರೆಂಬ ಕುತೂಹಲ ಉಂಟಾಗಿರಬೇಕಲ್ಲವೇ?

                ನಾನು ನಿಮ್ಮ ಮನಸಿನ ಜೀವದಾಯಿನಿ "ಕಂಬನಿ". ಮಾನವನ ಹೆದೆಯಾಳದ ನೋವುಗಳಿಗೆ ಜೀವಂತ ಸ್ಪಂದನ ನನ್ನಿಂದಲೇ. ಜೀವದ ಒಂದು ಭಾಗವೇ ಆಗಿರುವ ಕಣ್ಣಿನ ಅವಿಭಾಜ್ಯ ಅಂಗ ನಾನು. ಆಕಾಶಕ್ಕೂ ದುಃಖವಾದಾಗ ಮಳೆಯ ರೂಪದಲ್ಲಿ ಕಂಬನಿ ಸುರಿಸುತ್ತದೆ. ಕೆಲವರು ಸ್ವಾರ್ಥಕ್ಕೂ ನನ್ನನ್ನು ಉಪಯೋಗಿಸಿಕೊಳ್ಳುವುದೇ ನನ್ನ ಬೇಜಾರು. ಕಂಬನಿದುಂಬಿ ಹಸಿದು ಕೂತಿರುವ ಅನಾಥ ಮಕ್ಕಳೆಷ್ಟೋ, ಆ ಮಕ್ಕಳ ನೋವಿನ ಫಲವಾಗಿ ನಾನು ಅವರ ಮನಸ್ಸನ್ನು ಹಗುರ ಮಾಡಬಹುದಷ್ಟೇ, ಊಟ ಕೊಡಲಾದೀತೇ?

               ನಾನು ನನ್ನ ನೋವಿಗೆ ಹೊಸ ಅರ್ಥ ನೀಡುತ್ತಿಲ್ಲ.ಕಂಬನಿಗೂ ನೋವಿದೆ. ಎಲ್ಲರ ನೋವನ್ನು ಹೊರದೂಡಿ, ಮನ ಹಗುರ ಮಾಡಿಕೊಳ್ಳಲು ದಾರಿಯಾದರೆ, ಕಂಬನಿಯ ನೋವನ್ನು ನೋಡುವವರಾರು?
  -ಇಂತಿ
ನಿಮ್ಮ ಮನಸ್ಸಿನ ಜೀವದಾಯಿನಿ