ಮಂಗಳವಾರ, ಜೂನ್ 6, 2017

ಜೀವದಾಯಿನಿ

  
ಎಲ್ಲರ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ನನ್ನ ಪ್ರವೇಶ ಇದ್ದೇ ಇರುತ್ತದೆ.ಬೇಕೆಂದರೂ, ಬೇಡವೆಂದರೂ ಬರುವವಳು ನಾನು.ಭಾವನೆಗಳ ವ್ಯಕ್ತಪಡಿಸುವಿಕೆಗೆ ಜೀವಂತ ಸಾಕ್ಷಿ ನಾನು. ಮನುಷ್ಯ ಹುಟ್ಟಿದಾಗ ಅವನ ಜೀವನ ಚಕ್ರದ ಆರಂಭ, ಆ ಆರಂಭದ ಧ್ವನಿಯ ಒಡಹುಟ್ಟಿದವಳು. ಮನುಷ್ಯನ ಅಂತ್ಯದ ಕಾಲದ ಜ್ವಲಂತ ಸಾಕ್ಷಿ ನಾನು.
            
                ತುಂಬ ದುಃಖವಾದಾಗ, ಬಹಳ ಖುಷಿಯಾದಾಗಲೂ ಬರುವವಳು ನಾನೇ. ಹಟಮಾರಿ ಮಕ್ಕಳ ಹಠದ ಬೇಡಿಕೆಗೆ ಬೆಲೆ ಬರುವುದು ನಾ ಬಂದಾಗಲೇ,ಭಾವ ಜೀವಿಗಳ ಚಲನಚಿತ್ರದಲ್ಲೂ ನನ್ನ ಪಾತ್ರವೇ ಹೆಚ್ಚು.ಸ್ವಾಭಾವಿಕವಾಗಿ ನಾ ಬರದಿದ್ದರೂ,ಕೃತಕತೆಯಿಂದ ಕರೆಸುವರು.ಬಲವಂತದಿಂದ ಕರೆದಾಗಲೂ ನಾ ಅವರ ಕರೆಗೆ ಓಗೊಟ್ಟು ಬರುವೆ. ಹೆಣ್ಣುಮಕ್ಕಳ ಅತಿ ಆಪ್ತಳು ನಾನು.ವಿರಹಿಗಳ ಮನಸ್ಸಿಗೂ ಹತ್ತಿರವಾಗಿರುವೆ. ನಾನು ಯಾರೆಂಬ ಕುತೂಹಲ ಉಂಟಾಗಿರಬೇಕಲ್ಲವೇ?

                ನಾನು ನಿಮ್ಮ ಮನಸಿನ ಜೀವದಾಯಿನಿ "ಕಂಬನಿ". ಮಾನವನ ಹೆದೆಯಾಳದ ನೋವುಗಳಿಗೆ ಜೀವಂತ ಸ್ಪಂದನ ನನ್ನಿಂದಲೇ. ಜೀವದ ಒಂದು ಭಾಗವೇ ಆಗಿರುವ ಕಣ್ಣಿನ ಅವಿಭಾಜ್ಯ ಅಂಗ ನಾನು. ಆಕಾಶಕ್ಕೂ ದುಃಖವಾದಾಗ ಮಳೆಯ ರೂಪದಲ್ಲಿ ಕಂಬನಿ ಸುರಿಸುತ್ತದೆ. ಕೆಲವರು ಸ್ವಾರ್ಥಕ್ಕೂ ನನ್ನನ್ನು ಉಪಯೋಗಿಸಿಕೊಳ್ಳುವುದೇ ನನ್ನ ಬೇಜಾರು. ಕಂಬನಿದುಂಬಿ ಹಸಿದು ಕೂತಿರುವ ಅನಾಥ ಮಕ್ಕಳೆಷ್ಟೋ, ಆ ಮಕ್ಕಳ ನೋವಿನ ಫಲವಾಗಿ ನಾನು ಅವರ ಮನಸ್ಸನ್ನು ಹಗುರ ಮಾಡಬಹುದಷ್ಟೇ, ಊಟ ಕೊಡಲಾದೀತೇ?

               ನಾನು ನನ್ನ ನೋವಿಗೆ ಹೊಸ ಅರ್ಥ ನೀಡುತ್ತಿಲ್ಲ.ಕಂಬನಿಗೂ ನೋವಿದೆ. ಎಲ್ಲರ ನೋವನ್ನು ಹೊರದೂಡಿ, ಮನ ಹಗುರ ಮಾಡಿಕೊಳ್ಳಲು ದಾರಿಯಾದರೆ, ಕಂಬನಿಯ ನೋವನ್ನು ನೋಡುವವರಾರು?
  -ಇಂತಿ
ನಿಮ್ಮ ಮನಸ್ಸಿನ ಜೀವದಾಯಿನಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ