ಬುಧವಾರ, ಜೂನ್ 21, 2017

ಹಿತ್ತಲ ಗಿಡ ಮದ್ದಲ್ಲವೇ?

ಹಿತ್ತಲ ಗಿಡ ಮದ್ದಲ್ಲ ಎಂಬ ಮಾತನ್ನು ಒಂದಲ್ಲಾ ಒಂದು ಬಾರಿ ಕೇಳಿಯೇ ಇರುತ್ತೇವೆ. ಹೌದಲ್ಲವೇ?
           ನಾವು ಇಂದು ಆಧುನಿಕತೆಯತ್ತ ಸಾಗುತ್ತಾ, ಸಾಗುತ್ತಾ ನಮ್ಮ ಸುತ್ತಮುತ್ತಲ ಸೌಲಭ್ಯಗಳನ್ನು ಮರೆಯುತ್ತಿರುವುದಂತೂ ನಿಜ. ಇಂದು ಯಾವುದೇ ರೀತಿಯ ಖಾಯಿಲೆಗಳು ಬಂದರೂ ಆಸ್ಫತ್ರೆಯ ಮೊರೆ ಹೋಗುತ್ತಿದ್ದೇವೆ. ಆದರೆ ಶೀತದಂತಹ ಸಣ್ಣ ಖಾಯಿಲೆಗೂ ನಾವು ಆಸ್ಫತ್ರೆಯನ್ನೇ ಅವಲಂಬಿಸಿರುವುದು, ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತಿದೆ ನಮ್ಮ ಮನಸ್ಥಿತಿ. ಮನೆಯಲ್ಲೇ ಸಿಗುವ ಚಿಕಿತ್ಸೆಯನ್ನು ಬಿಟ್ಟು ಸೂಪರ್ ಸ್ಪೆಶಾಲಿಟಿ ಅಸ್ಫತ್ರೆಗಳ ಮೆಟ್ಟಿಲು ಹತ್ತುತ್ತಿದ್ದೇವೆ. ಮನೆಯಲ್ಲಿ ಅಮ್ಮನೋ, ಅಜ್ಜಿಯೋ ಸಲಹೆ ನೀಡಿದರೆ ಅದು ತಾತ್ಸಾರ, ಆದರೆ ಅದೇ ಸಲಹೆಯನ್ನು ವೈದ್ಯರಿಗೆ ಸಾವಿರಾರು ರೂಪಾಯಿಗಳನ್ನು ನೀಡಿ ಪಡೆಯುತ್ತೇವೆ.ಶಂಖದಿಂದ ಬಂದರೇ ತೀರ್ಥವೇ?ಏಕೆ ಹೀಗೆ?
             ಇನ್ನು ವಿದ್ಯಾರ್ಥಿಗಳ ವಿಷಯಕ್ಕೆ ಬಂದರೆ ಮನೆಯಲ್ಲಿ ಅಪ್ಪ-ಅಮ್ಮ ಕೂರಿಸಿ ಶಾಲೆಯಲ್ಲಿ ಹೇಳಿಕೊಟ್ಟ ವಿಷಯಗಳನ್ನು ಭೋಧಿಸಿದರೆ ಮಕ್ಕಳಿಗೆ ಬೇಡವಾಗಿರುತ್ತದೆ. ಅದೇ ಮನೆಪಾಠ(ಟ್ಯೂಷನ್)ದಿಂದ ಕಲಿತರೆ ಅವರಿಗೆ ನೆಮ್ಮದಿ. ಇದನ್ನೇ ಬಂಡವಾಳ ಮಾಡಿಕೊಂಡ ಎಷ್ಟೋ ಟ್ಯೂಷನ್ ಸೆಂಟರುಗಳು ಇಂದು ಜ್ಞಾನಾರ್ಜನೆಯ ಕೇಂದ್ರವಾಗಿರದೆ, ವ್ಯಾಪಾರೀ ಕೇಂದ್ರಗಳಾಗಿ ಬದಲಾಗುತ್ತಿವೆ. ಏಕೆ ಹೀಗೆ?
              ನಮ್ಮ ಮನೆಯಲ್ಲಿರುವ ಮಕ್ಕಳ ಕಲೆಗಳನ್ನು ನಾವು ಗುರುತಿಸುವುದೇ ಇಲ್ಲ. ಅದೇ ಪಕ್ಕದ ಮನೆಯ ಮಗುವಿಗೆ ಪ್ರೋತ್ಸಾಹ ನೀಡುತ್ತೇವೆ.ನಮ್ಮ ಮಕ್ಕಳು ತಮ್ಮ ಗುರಿ ಹಾಗು ಕನಸುಗಳ ಬಗ್ಗೆ ಮಾತನಾಡುತ್ತಿರುವಾಗ ಸುಮ್ಮನೇ ಓದು ಹೋಗು, ನಿನ್ನಿಂದ ಇದು ಅಸಾಧ್ಯ ಎಂದು ನಿರುತ್ಸಾಹದ ಮಾತುಗಳನ್ನಾಡಿ ಬಿಡುತ್ತೇವೆ.ಏಕೆ ಹೀಗೆ?
               ಹಿತ್ತಲ ಗಿಡ ಮದ್ದಲ್ಲ ಎಂದು ನಮ್ಮ ಭಾವನೆಯೇ? ಒಮ್ಮೆ ವಿದ್ಯಾರ್ಥಿಗಳು, ಯುವಜನತೆ ತಮ್ಮ ಪೋಷಕರ ಮಾತನ್ನು ಆಲಿಸಿ ಅದರಂತೆ ನಡೆದುಕೊಂಡರೆ, ಪೋಷಕರು ತಮ್ಮ ಮಕ್ಕಳ ಕನಸಿಗೆ ಒಮ್ಮೆ ಸಹಕಾರ ನೀಡಿದರೆ ಎಲ್ಲ ಬದಲಾವಣೆಗಳು ಸಾಧ್ಯವಾಗುತ್ತವೆ. ಮಕ್ಕಳ ಆಸೆ, ಕನಸುಗಳಿಗೆ ಒಮ್ಮೆ ಬೆನ್ನೆಲುಬಾಗಿ ನಿಲ್ಲಿ. ಅವರ ಪ್ರಯತ್ನದಲ್ಲಿ ಗೆದ್ದರೆ ಉತ್ತಮ ಭವಿಷ್ಯ ಅವರದ್ದಾಗುತ್ತದೆ. ಸೋತರೆ ಅನುಭವದಿಂದ ಪಾಠ ಕಲಿತು ಎಚ್ಚರಿಕೆಯಿಂದ ಮುನ್ನಡೆಯತ್ತಾರೆ.
                               "ಹಿತ್ತಲ ಗಿಡವೂ ಮದ್ದಾಗುತ್ತದೆ".
                                                                                                                       -vಭಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ