ಮಂಗಳವಾರ, ಸೆಪ್ಟೆಂಬರ್ 5, 2017

ಗುರುನಮನ

"ಗುರು ಬ್ರಹ್ಮ,ಗುರು ವಿಷ್ಣು, ಗುರು ದೇವೋ ಮಹೇಶ್ವರಃ,
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ".
ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿ ರೂಪವೇ ಆಗಿರುವ ಗುರುವಿಗೆ ವಂದನೆಗಳು. ಹೌದು, ಗುರುಗಳು ಯಾವ ದೇವರಿಗೂ ಕಡಿಮೆ ಇಲ್ಲ. ಏನೂ ಗೊತ್ತಿಲ್ಲದೆ ಇರುವ ಎಳೆಯ ಮುಗ್ಧ ಜೀವವನ್ನು ಸಮಾಜದ ಅತ್ಯುನ್ನತ ನಾಗರೀಕನನ್ನಾಗಿ ರೂಪಿಸಲು ತನ್ನ ಜೀವನವನ್ನೇ ಮುಡುಪಾಗಿಡುವ ಗುರುಗಳು ಅತ್ಯುನ್ನತ ಸ್ಥಾನದಲ್ಲಿಯೇ ಸ್ಥಾಪಿತರಾಗಿರುತ್ತಾರೆ.
         ಗುರು ಅಥವಾ ಶಿಕ್ಷಕರು ಶಿಕ್ಷಣವನ್ನಷ್ಟೇ ಅಲ್ಲದೇ, ಜೀವನಕ್ಕೆ ಬೇಕಾದ ಮೌಲ್ಯಗಳು, ಉತ್ತಮ ನಡತೆಗಳನ್ನೂ ಭೋಧಿಸುತ್ತಾರೆ. ತಾಯಿಯೇ ನಮ್ಮ ಜೀವನದ ಮೊದಲ ಗುರು. ನಂತರ ಆ ಸಾಲಿನಲ್ಲಿ ತಂದೆ,ಸಹೋದರ-ಸಹೋದರಿಯರು, ಶಿಕ್ಷಕರು, ಬಂಧು-ಮಿತ್ರರೂ ಸೇರುತ್ತಾರೆ. ಜೀವನದಲ್ಲಿ ಒಂದಕ್ಷರ ಕಲಿಸಿದವರೂ ಸಹ ಗುರುಗಳೇ. ಪರಿಸರವೂ ಒಂದರ್ಥದಲ್ಲಿ ಮನುಷ್ಯನ ಗುರು.
ಆದರೆ, ಶಾಲೆಯಲ್ಲಿ ಕಲಿಯುವ ಪಾಠ ಇದೆಲ್ಲಕ್ಕೂ ಭಿನ್ನವಾದುದು. ಶಿಕ್ಷಿಸಿ,ಕ್ಷಮಿಸಿ,ಕಲಿಸುವವರು (ಶಿಕ್ಷಕರು) ಇದಕ್ಕೆ ಕಾರಣೀಕರ್ತರು. ಶಿಕ್ಷೆ ಕೂಡಾ ಶಿಕ್ಷಣದ ಒಂದು ಭಾಗವೇ ಆಗಿದೆ. "ಹರ ಮುನಿದರೆ ಗುರು ಕಾಯ್ವನು, ಆದರೆ ಗುರು ಮುನಿದರೆ..?"
ಗುರು ಮುನಿದ ಉದಾಹರಣೆಗಳು ಅತಿ ವಿರಳವೇ ಆಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಗುರುಗಳು ಶಿಕ್ಷೆ ನೀಡುತ್ತಾರೆಯೇ ಹೊರತು ಯಾವುದೇ ದ್ವೇಷದಿಂದಲ್ಲ. ಆದರೆ ಇಂದಿನ ಶಿಕ್ಷಣದ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗುತ್ತಿರುವುದು ಶೋಚನೀಯ.
"ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು
ಸಾಗುತ್ತಿತ್ತು ರಣವೀರರ ದಂಡು"
ಎಂಬುದು ಹಿಂದಿನ ನುಡಿಯಾದರೆ
"ಹಿಂದೆ ಗುರುವೂ ಇಲ್ಲ, ಮುಂದೆ ಗುರಿಯೂ ಇಲ್ಲ
ಸಾಗುತ್ತಿದೆ ರಣ ಹೇಡಿಗಳ ಹಿಂಡು"
ಎಂಬುದು ಇಂದಿನ ನುಡಿಯಾಗುತ್ತಿದೆ.
ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿದರೆ, ಶಿಕ್ಷಕರ ಶ್ರಮಕ್ಕೆ ತಕ್ಕ ಪ್ರತಿವಂದನೆಗಳನ್ನು ಸಲ್ಲಿಸಬಹುದು.ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಋಣವನ್ನು ಅಲ್ಪಮಟ್ಟಿಗೆ ತೀರಿಸಿದ ತೃಪ್ತಿ ಸಿಗುತ್ತದೆ.
     ಶಿಕ್ಷಕರ ಸ್ಥಾನವನ್ನು ನಿರೂಪಿಸುವ ದೃಷ್ಟಾಂತ ಹೀಗಿದೆ. ಒಮ್ಮೆ ಒಂದು ರಾಜ್ಯದ ರಾಜನಿಗೆ ವಿದ್ಯೆ ಕಲಿಯುವ ಆಸೆಯಾಯಿತು.ಆದ್ದರಿಂದ ರಾಜ ಒಬ್ಬರು ಗುರುಗಳನ್ನು ನೇಮಿಸಿಕೊಂಡ. ಪಾಠ ಕಲಿಯುವಾಗಲೂ ರಾಜ ತನ್ನ ಸಿಂಹಾಸನವನ್ನು ಬಿಡದೆ ಅಲ್ಲಿಯೇ ಕುಳಿತು ಪಾಠ ಹೇಳಿಸಿಕೊಳ್ಳುತ್ತಿದ್ದ. ಎಷ್ಟೇ ಪ್ರಯತ್ನಪಟ್ಟರೂ, ರಾಜನಿಗೆ ವಿದ್ಯೆ ಕಲಿಯಲು ಆಗಲೇ ಇಲ್ಲ. ನಂತರ ವಿಶ್ಲೇಷಿಸಿ ನೋಡಿದಾಗ ರಾಜನಿಗೆ ಅದರ ಕಾರಣ ದೊರೆಯಿತು. ಅದರ ಕಾರಣವೇನೆಂದರೆ , ರಾಜ ಕುಳಿತುಕೊಳ್ಳುವ ಜಾಗ ಆತನ ಗುರು ಕುಳಿತುಕೊಳ್ಳುವ ಜಾಗದಿಂದ ಎತ್ತರದಲ್ಲಿದ್ದಿತು. ಶಿಷ್ಯನ ತನ್ನ ಸ್ಥಾನ ಎಂದೆಂದಿಗೂ ಗುರುವಿಗಿಂತ ಕೆಳಗೆ ಎಂದರಿತು ಅಹಂಕಾರವನ್ನು ತೊರೆದಾಗ ವಿದ್ಯೆ ಒಲಿಯುತ್ತದೆ. ಅದಕ್ಕಾಗಿಯೇ ಹಿರಿಯರು ಹೇಳಿರುವುದು "ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ."
ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಪಾಠ ಕಲಿಸಿದ ಎಲ್ಲಾ ಗುರುಗಳಿಗೂ ಧನ್ಯವಾದಗಳು.
                                                                                                -vಭಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ