ಹಸಿವಿನಿಂದ ಅತ್ತು ಸತ್ತೇ ಹೋಯಿತಂತೆ..
ಸುಖಕ್ಕೆ, ಹಾಸಿಗೆಗೆ ಬೇಕಾಗಿತ್ತು ಹೆಣ್ಣು
ಮಗಳಾದಾಗ ಹೊರೆ ಎನ್ನಿಸಿ ಬಿಸಾಡಿದ್ದಂತೆ
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?
ಅವಳ ಮೇಲೆ ಅತ್ಯಾಚಾರವೆಸಗಿದರಂತೆ
ಯಾರೋ ಪಾಪಿಗಳ ಗುಂಪು ಮಾಡಿದ್ದಂತೆ
ಮಾಂಸದ ಮುದ್ದೆಯಂತೆ ನಡುರಸ್ತೆಯಲ್ಲಿ
ನರಳಾಡುತ್ತಾ ಬಿದ್ದಿದ್ದವಳು, ಸತ್ತೇ ಹೋದಳಂತೆ
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?
ಅವಳನ್ನು ಬೆಂಕಿ ಹಚ್ಚಿ ಸುಟ್ಟುಬಿಟ್ಟರಂತೆ
ಕಾರಣ ವರದಕ್ಷಿಣೆ ಕಿರುಕುಳವಂತೆ..
ಹಣ-ಆಸ್ತಿ, ಬಣ್ಣ ನೋಡಿ ಕಟ್ಟಿಕೊಂಡವನಿಗೆ
ಅವಳವಶ್ಯಕತೆ ಮುಗಿದ ಮೇಲೆ ಸಾಯಿಸಿದ್ದಂತೆ
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?
ಬೀದಿಯಲ್ಲೇ ಆ ಮುದುಕಿ ಸತ್ತಳಂತೆ
ಕಡೆಗಾಲದಲ್ಲಿ ಗುಟುಕು ನೀರಿಗೂ ತತ್ವಾರವಂತೆ
ಸಾಕಲು ಆಕೆ ನನಗೆ ಹೊರೆ ಎಂದ ಮಗ
ನಡುಬೀದಿಯಲ್ಲಿ ಬಿಟ್ಟು ಹೋಗಿದ್ದನಂತೆ..
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?
ಹಾಗ ಹಾಗೆಂದವರು, ಈಗ ಹೀಗನ್ನುತ್ತಿದ್ದಾರೆ
ಮನೆಮಗಳ ಮೇಲೆ ಅತ್ಯಾಚಾರವಾಗಿದೆ
ಮನೆಮಗಳು ಸುಟ್ಟು ಕರಕಲಾಗಿದ್ದಾಳೆ
ಆಗಲೇ ಇದಕ್ಕೆ ಅಂತ್ಯ ಹಾಡಿದ್ದಿದ್ದರೆ..!
ನಮಗೇನಂತೆ ಎಂದು ಬಿಟ್ಟದ್ದೇ ತಪ್ಪಾಯಿತು
ಮಗನ ಮದುವೆಗೆ ಹೆಣ್ಣೇ ಸಿಗುತ್ತಿಲ್ಲ
ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿದೆಯಂತೆ..
ತವರಿನಲ್ಲಿ ತಾಯಿ ಬೀದಿಗೆ ಬಿದ್ದು ಸತ್ತಳಂತೆ
ನಮಗೇನಂತೆ ಎಂದು ಬಿಟ್ಟದ್ದರ ಕರ್ಮ
ಮತ್ತೆ ನಮಗೇ ಬಂದು ಸುತ್ತಿಕೊಳ್ಳುತ್ತಲಿದೆ..!
ಅಂದಿನ ನಮಗೇನಂತೆ, ನಮಗೇಕಂತೆ
ಭೂತ ಕಾಲದ ತುಣುಕುಗಳಾಗಿ ಕಾಡುತ
ವರ್ತಮಾನದ ನಮ್ಮ ಸ್ಥಿತಿಯ ಕನ್ನಡಿಯಾಗಿ
ಪ್ರತಿಫಲಿಸುವ ಮುನ್ನವೇ ಎಚ್ಚೆತ್ತುಕೊಂಡು
ಬದಲಾವಣೆಯ ಹಾದಿಯತ್ತ ಮುನ್ನಡೆಯೋಣ.
~ವಿಭಾ ವಿಶ್ವನಾಥ್
ನಿಜ, ''ಅಂದು ಹೆಣ್ಣು ಭ್ರೂಣ ಹತ್ಯೆ ಮಾಡಿದರು, ಇಂದು ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಗೋಳಾಡುತ್ತಿರುವರು'' ನನ್ನಜ್ಜ ಅಂತು ಈ ಮಾತನ್ನು ಆಗಾಗ ಹೇಳುತ್ತಿದ್ದರು. ದೈಹಿಕವಾಗಿ ಕೊಡುವ ಹಿಂಸೆಯಂತೆಯೇ ಮಾನಸಿಕ ಹಿಂಸೆಯೂ ಆಕೆಯನ್ನು ಕೊಲ್ಲುತ್ತದೆ. ಆಕೆ ಹೆತ್ತದ್ದು ಹೆಣ್ಣು ಮಗು ಎಂದು ಎಷ್ಟು ಜನ ವ್ಯಂಗವಾಡಿಲ್ಲ? ಸತ್ತ ನಂತರ ಪಿಂಡ ಹಾಕಲು ಗಂಡು ಬೇಕೇ ಬೇಕೆಂದು ಹಠ ಹಿಡಿದ ಮಂದಿ ಕಮ್ಮಿಯೆ? ತಾಯಿ, ಮನೆ ಇಂದ ಹೊರ ಹೋಗುವಾಗ ತಲೆ ತಗ್ಗಿಸಿ ಅತ್ತಿತ್ತ ಎಲ್ಲೂ ನೋಡದೇ ಯಾವ ಹುಡುಗನ ಕಡೆಗೂ ಕಣ್ಣಾಡಿಸದೇ ಹೋಗಿ ಬಾ ಅಂತ ಹೆಣ್ಣಿಗೆ ಬುದ್ದಿ ಹೇಳುವವರು, ಗಂಡನ್ನು 'ಅವನು ಹುಡುಗ' ಅಂತ ಹೇಳುತ್ತಲೇ ಬೆಳೆಸಿದರಲ್ಲದೇ ಹೆಣ್ಣಿನ ಬಗ್ಗೆ ಗೌರವ ಮೂಡುವಂತ ಮಾತನಾಡುತ್ತಾ ಎಷ್ಟು ಜನ ಬೆಳೆಸಿದ್ದಾರೆ? ನಮಗೊಬ್ಬ ವಂಶೋದ್ಧಾರಾಕನನ್ನು ಹೆತ್ತು ಕೊಡು ಎಂದು ಹೇಳುವವರು ಈ ಕಾಲದಲ್ಲು ಎಷ್ಟು ಜನ ಇಲ್ಲ? ಜನರ ಈ ಮನಸ್ಥಿತಿ ಮೊದಲು ಸರಿಯಾಗಬೇಕು...
ಪ್ರತ್ಯುತ್ತರಅಳಿಸಿಖಂಡಿತ. ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ
ಅಳಿಸಿ