ಸೀತೆಯ ಸ್ವಗತ
............................
ಮುಗಿಯದ ಮೌನ,ಎಣೆಯಿಲ್ಲದ ಧ್ಯಾನ
ಎಡೆಬಿಡದ ಕಾರ್ಯದೊಳಗೂ ಏಕಾಂತ
ಕಾಯುತ್ತಿರುವೆ ನಿನ್ನ ಒಂದೇ ಮಾತಿಗೆ
ಹಂಬಲಿಸುತ್ತಿರುವೆ ನಿನ್ನ ಒಂದು ನುಡಿಗೆ
ನಿನ್ನ ಬದುಕಿನ ಒಂದು ಕ್ಷಣ ನೀಡು ನನಗಾಗಿ
ಮುಕ್ತವಾಗಿ ಮಾತನಾಡೆಯಾ ನೀನು ನನ್ನೊಡನೆ?
ಮುಕ್ತಿ ನೀಡು ನನ್ನೆಲ್ಲಾ ಪ್ರಶ್ನೆಗಳಿಗೆ
ರಾಮ, ನಿನಗಾಗಿ ಕಾದು-ಕಾದು ಬಳಲಿ ನಾನು ಬರೆಯುತ್ತಿರುವ ಕಾಗದ ಎಷ್ಟನೆಯದೋ, ಬರೆದು ಹರಿದುದೆಷ್ಟೋ... ಕಾಗದ ಬರೆಯುತ್ತೇನೆ ಅಷ್ಟೇ, ನಿನಗಾಗಿ ಕೊಡಲು ಅಥವಾ ತೋರಿಸಲೆಂದೇನೂ ಅಲ್ಲ, ನನ್ನೊಳಗಿನ ನೋವನ್ನು ಹಗುರ ಮಾಡಿಕೊಳ್ಳಲು ಇದೊಂದು ವಿಧಾನ ಅಷ್ಟೇ..
ಶಬರಿಯೂ ನಿನಗಾಗಿ ಕಾದಳು.ನೀ ಸಿಕ್ಕಿದ ನಂತರ ಮುಕ್ತಿ ಹೊಂದಿದಳು, ವನವಾಸದಲ್ಲಿ ರಾವಣನ ಬಂಧನದಿಂದ ಬಿಡಿಸಿಕೊಂಡು ಹೋಗಲು ಬರುವೆಯೆಂದು ನಾನೂ ಕಾದೆ. ಕೌಸಲ್ಯೆ, ಸುಮಿತ್ರೆ, ಕೈಕೇಯಿ, ಭರತ-ಶತ್ರುಘ್ನರು ಅಷ್ಟೇ ಏಕೆ? ಇಡೀ ನಗರವಾಸಿಗಳೇ ನಿನಗಾಗಿ ಕಾದರು. ಈ ಕಾಯುವಿಕೆಯಲ್ಲೂ ಒಂದು ತೆರನಾದ ಸುಖವಿದೆ. ಆದರೆ ಆ ಕಾಯುವಿಕೆಯಲ್ಲಿ ವರ್ಷಗಳ ನಿರೀಕ್ಷೆಯಿತ್ತು, ನೀನು ಬಂದೇ ಬರುವೆಯೆಂಬ ನಂಬಿಕೆಯಿತ್ತು. ಆದರೆ ಈಗ..?
ಯಾರೋ ಆಡಿದ ಮಾತಿನ ಸತ್ಯಾಸತ್ಯತೆಯನ್ನೂ ಪರೀಕ್ಷೆ ಮಾಡದಷ್ಟು ನಿರ್ದಯಿ ನೀನೇಕಾದೆ? ಕಾಡಿಗಟ್ಟುವ ನಿರ್ಧಾರವನ್ನು ನೀನೇ ತಿಳಿಸದಷ್ಟು ಪಲಾಯನವಾದಿ ನೀನೇಕಾದೆ?
ಶೀಲವೇ ದೊಡ್ಡದೆಂಬ ಪಾಠ ಚಿಕ್ಕಂದಿನಿಂದಲೂ ಹೇಳಿಕೊಂಡು ಬಂದರು. ಹಾಗೇ ನಡೆದುಕೊಂಡ ನನಗೆ ಬೆಲೆಯೇ ಇಲ್ಲವೇ? ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದು ನೀನೂ ನಿರ್ಧಾರ ಮಾಡಿದೆಯಾ..?ಅದಕ್ಕೆ ನನ್ನನ್ನು ಮಿಥಿಲೆಗೆ ಕಳುಹಿಸಲಿಲ್ಲವೇ? ನನಗೆ ಅತ್ತ ತಂದೆಯ ಮನೆಯೂ ಇಲ್ಲ, ಇತ್ತ ಗಂಡನ ಮನೆಯೂ ಇಲ್ಲದಂತೆ ಮಾಡಿ ನಡುನೀರಿನಲ್ಲೇ ಕೈ ಬಿಟ್ಟೆಯಾ..? ಜೀವನ ಮಾಡಲು ಬೇಕಾದಷ್ಟು ಸಂಪಾದಿಸಲು ಅರಿವಿರಬೇಕಿದ್ದ ವಿದ್ಯೆಯೂ ಇಲ್ಲ, ಮನೆಗೆಲಸ ಮಾಡುವೆನೆಂದರೂ ಕೆಲಸ ಕೊಡುವವರು ಯಾರು? ಕೆಲಸ ಸಿಕ್ಕಿದರೂ ಮಾಡುವುದಾದರೂ ಹೇಗೆ, ತುಂಬಿದ ಆ ಗರ್ಭವನ್ನೊತ್ತು..!
ಅರಮನೆಯಲ್ಲಿ ಕಣ್ಗಾವಲಿನಲ್ಲಿಯೇ ಇದ್ದ ನನಗೆ ಸ್ವಾತಂತ್ರ್ಯ ಬೇಕಾಗಿತ್ತು, ಅದನ್ನು ನಿನ್ನೊಡನೆ ಹೇಳುತ್ತಲೂ ಇದ್ದೆ. ಅದಕ್ಕೆಂದೇ ಇಷ್ಟು ಸ್ವತಂತ್ರ್ಯ ನೀಡಿದೆಯಾ..?
ಕಾಡಿಗೆ ಬಂದ ಕೆಲವು ದಿನಗಳಲ್ಲೇ ನನ್ನ ಕಣ್ಣೀರು ಬತ್ತಿ ಹೋಗಿದೆ. ಅಳಲು ಹೊರಟರೆ ಕಣ್ಣೀರು ಬರುವುದಿಲ್ಲ, ನಗಲು ಕಾರಣಗಳಿಲ್ಲ. ನಿರ್ಲಿಪ್ತ ಸೀತೆಯಿಂದ ನಿನಗಾವ ಆಶೋತ್ತರಗಳೂ ಸಿಗುವುದಿಲ್ಲ. ನಾಡಿನೊಡೆಯನಿಗೆ ಕಾಡ ಮಲ್ಲಿಗೆಯೇಕೆ ಅಲ್ಲವೇ? ನಾಡಿನ ದೇವರಿಗೆ ಪೂಜೆಗೆ ಅರ್ಪಿತವಾಗದಿದ್ದರೂ, ಕಾಡ ಮಲ್ಲಿಗೆ ಅರಳುವದನ್ನು ಬಿಡುವುದಿಲ್ಲ, ಹಾಗೆಯೇ ನಾನೂ ನೀ ಬರದಿದ್ದರೂ ಜೀವ ಕಳೆದುಕೊಳ್ಳಲಾರೆ..
ನೀನು ಬಂದರೂ ನಿನ್ನೊಡನೆ ಸಂತಸದಿಂದ ಅರಮನೆಗೆ ಮರಳಲಾರೆ. ಏಕೆಂದರೆ ಇಷ್ಟು ವರ್ಷಗಳೇ ಕಾಡಿನಲ್ಲಿದ್ದವಳಿಗೆ ಅರಮನೆಯ ಆಸೆಯೆಂದೋ ಬತ್ತಿ ಹೋಗಿದೆ. ಭೂಮಿಯಲ್ಲಿ ಹುಟ್ಟಿ, ಬೆಳೆದವಳಿಗೆ ಕಡೆ ಘಳಿಗೆಯಲ್ಲಿ ಭೂಮಿಯ ಮಡಿಲು ದೊರೆಯದೇ?ಆದರೂ ನೀನೊಮ್ಮೆ ಇಲ್ಲಿಗೆ ಬರುವೆಯಾ? ಶಬರಿಯಷ್ಟು ಪುಣ್ಯವಂತೆ ನಾನಾಗಿದ್ದರೆ ನೀನು ಬರುವವರೆಗೂ ಜೀವ ಹಿಡಿದು ಕಾದಿರುವೆ. ನಿನ್ನೊಡನೆ ಬದುಕುವುದಕ್ಕೇನೂ ಅಲ್ಲ, ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು...
ನೀನು ಎಲ್ಲರಿಂದಲೂ ಪುರಸ್ಕೃತನಾದರೂ, ಈ ಸೀತೆಯಿಂದ ಪರಿತ್ಯಕ್ತ.
-ಇಂತಿ
ನಿರ್ಲಿಪ್ತಳಾಗುತ್ತಿರುವ ಸೀತೆ
ರಾಮನ ಸ್ವಗತ
.............................
ಬಯಕೆಯನು ಚಿಗುರಲೇ ಚಿವುಟಿ
ಮನಸು ಅರಳುವ ಮುನ್ನವೇ,
ಅದನು ನರಳುವಂತೆ ಮಾಡಿ
ನನ್ನ ಬಾಳಿನ ನೀಲಾಂಜನೆಯನೇ
ದೂರ ಮಾಡಿಕೊಂಡು ನರಳುತಲಿರುವೆ
ನೀ ಒಮ್ಮೆಯಾದರೂ ಕ್ಷಮಿಸುವೆಯಾ?
ನೀ ನನ್ನನು ಕ್ಷಮಿಸಿದರೂ...
ನಾನೇ ನನ್ನನು ಕ್ಷಮಿಸಿಕೊಳ್ಳಲಾರೆ
ನೀನು ನನ್ನನ್ನು ಕ್ಷಮಿಸುವೆಯೆಂಬ ಭರವಸೆ ನನ್ನಲ್ಲಿ ಎಳ್ಳಷ್ಟೂ ಉಳಿದಿಲ್ಲ. ಲೋಕ ನನ್ನನ್ನು ನಿರ್ದಯಿಯೆಂದು ಜರಿದರೂ ನಾನು ಅಳುಕಲಾರೆ, ಆದರೆ ನೀನು ನನ್ನನ್ನು ನಿರ್ದಯಿಯೆಂದು ಜರಿದರೆ ಅದನ್ನು ತಾಳುವ ಚೈತನ್ಯ ನನ್ನಲ್ಲಿ ಉಳಿದಿಲ್ಲ. ನಾಡಿನ ರಾಣಿಯಾಗಿ ಮೆರೆಯಬೇಕಾಗಿದ್ದವಳನ್ನು, ಕಾಡಿಗೆ ಅಟ್ಟಿ ನಾನಿಲ್ಲಿ ಮೆರೆಯುತ್ತಿಲ್ಲ. ಯಾವ ತಪ್ಪನ್ನೂ ಮಾಡದೆ ಶಿಕ್ಷೆಗೆ ಒಳಪಟ್ಟಾಗ ಅನುಭವಿಸುವ ನೋವಿನ ಅರಿವು ನನಗಿದೆ. ಕೈಕೇಯಿ ಚಿಕ್ಕಮ್ಮನಿಂದ ನನಗಾಗಿದ್ದೂ ಅದೇ, ಆದರೆ ನನಗಾಗ ಪ್ರತಿಭಟಿಸುವ ಅವಕಾಶವಿತ್ತು ಆದರೆ ನಿನಗೆ ಆ ಅವಕಾಶವನ್ನೂ ನೀಡದಂತಾ ನಿರ್ದಯಿ ನಾನೇಕಾದೆನೆಂದು ನನಗೇ ಗೊತ್ತಿಲ್ಲ.ಸಮಯ ಎಲ್ಲವನ್ನೂ ಮರೆಸುತ್ತದೆಂದರೂ ಮನದಲ್ಲಿನ ಕಹಿ ನೆನಪುಗಳನ್ನು ಮರೆಸುವುದಿಲ್ಲ, ನಾನು ಬರೀ ನಿನಗೆ ಶಿಕ್ಷೆ ನೀಡಲಿಲ್ಲ,
ನನಗೆ ನಾನೇ ಶಿಕ್ಷೆ ವಿಧಿಸಿಕೊಂಡಿದ್ದೇನೆ. ಕಾಣದ ಪ್ರಜೆಯ ಒಂದು ಮಾತಿಗೆ ಹೆದರಿ ನಾನು ನಿನ್ನನ್ನು ಕಾಡಿಗೆ ಅಟ್ಟಿದ ಮೇಲೆ ನನಗನ್ನಿಸುತ್ತಿರುವುದು ಹೀಗೆ:
ರಾಮರಾಜ್ಯದ ಪ್ರಜೆಗಳಿಗೆ ರಾಮನ ಸ್ವಂತ ಜೀವನದ ಕುರಿತ ಅಕ್ಕರೆಯಿಲ್ಲ, ನಿನ್ನನ್ನು ಮತ್ತೆ ನನ್ನಲ್ಲಿಗೆ ಕರೆಸಿಕೋ ಎಂದು ಯಾರೂ ಹೇಳಲಿಲ್ಲ. ಬಹುಶಃ ಅವರಿಗೂ ಭಯವೇನೋ...? ಸೀತೆಯನ್ನೇ ಕಾಡಿಗೆ ಕಳುಹಿಸಿದವನು ನಾಳೆ ನಮ್ಮನ್ನೂ ಕಾಡಿಗಟ್ಟುವನೆಂದು..
ಸೀತೆಯಿಲ್ಲದ ರಾಮ ಎಂದಿಗೂ ಅಪೂರ್ಣನೇ, ನಿನ್ನನ್ನು ಕಾಡಿಗೆ ಕಳುಹಿಸಿದ ಮೇಲೆ ನೀ ಮರಳಿ ಬರುವುದಿಲ್ಲವೇ ಎಂದು.., ಮರಳಿ ಬಂದರೆ ಮುಂದೇನು ಮಾಡುವುದೋ ಎಂದು ಯೋಚಿಸಿದ್ದೇನೆ.ಆದರೆ ನಿನ್ನ ದಾರಿ ಕಾಯ್ದು ನಾನು ಹಣ್ಣಾದೆನೇ ಹೊರತು, ನೀನೆಂದು ಮರಳಿ ಬರಲೇ ಇಲ್ಲ.
ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು ಎನ್ನುತ್ತಾರೆ. ನನ್ನಲ್ಲಿ ಚಟವಿಲ್ಲ ಆದರೆ ನಿನ್ನಲ್ಲಿ ಹಟವಿದೆ, ನಮ್ಮ ಸಂಸಾರ ಒಂದುಗೂಡಲು ನೀನೂ ಪ್ರಯತ್ನಿಸಬಹುದಾಗಿತ್ತು.ನೀನು ಸ್ವಲ್ಪ ನಿನ್ನ ಹಟ ಬಿಟ್ಟು ನನ್ನನ್ನು ಕೇಳಿದ್ದರೆ,ಇಬ್ಬರ ಗೋಳು ಕೊನೆಯಾಗುತ್ತಿತ್ತೇನೋ?ಆದರೆ, ನನಗೀಗ ಅನ್ನಿಸುತ್ತಿದೆ, ಸೀತೆ ರಾಮನಿಂದ ಪರಿತ್ಯಕ್ತಳಲ್ಲವೆಂದು, ರಾಮನೇ ಸೀತೆಯನ್ನು ಹೊಂದದ ದುರದುಷ್ಟವಂತನೆಂದು. ನೀನು ಬರದಿದ್ದರೂ, ನಾನೇ ಬರಬಹುದಿತ್ತಲ್ಲವೇ?ನಾನು ಬರೆದ ಪತ್ರವನ್ನೇ ನಿನಗೆ ಕಳುಹಿಸಿದರೆ ತಿರಸ್ಕರಿಸುತ್ತೀಯೆಂದು ಅವುಗಳನ್ನೇ ಕಳುಹಿಸದ ನಾನು, ಬಂದು ನಿನ್ನಿಂದ ತಿರಸ್ಕೃತನಾಗಿದ್ದರೆ....
ಬದುಕಿಯೂ ಸತ್ತಂತೆಯೇ ಅಲ್ಲವೇ..?
ಇಂತಿ
-ಸೀತೆಯ ಜೊತೆಯಿರಲಾಗದ ದುರದೃಷ್ಟ ರಾಮ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ