ಒಲವಿನ ಅರಮನೆಯೊಡತಿಗೆ,
ಯಾಕೋ, ಕೆಲವೊಮ್ಮೆ ಮಾತಿಗಿಂತ ಅಕ್ಷರಗಳೇ ಪ್ರಿಯವಾಗುತ್ತವೆ ಭಾವನೆಗಳನ್ನು ಬಿಚ್ಚಿಡಲು. ಮಾತುಗಳಲ್ಲಿ ಭಾವ ಇರಬಹುದೇನೋ ಆದರೆ ನನಗೆ ಪ್ರಿಯವಾದದ್ದು ಅಕ್ಷರವೇ.. ಇದು ನಿನಗೂ ತಿಳಿದ ವಿಚಾರವೇ. ಹೀಗೇ ಅಲ್ಲವೇ ನನ್ನ ನಿನ್ನ ಪರಿಚಯವಾದದ್ದು, ಪರಿಚಯ ಸ್ನೇಹವಾಗಿ ನಂತರ ಪ್ರೀತಿಯೆಡೆಗೆ ತಿರುಗಿದ್ದು. ಆನಂತರ ವಿವಾಹವೂ ಆಯಿತು ಆದರೆ ಈಗ ನಿನಗೆ ಪ್ರೀತಿ ಕಡಿಮೆಯಾಗಿದೆ ಎಂದೆನಿಸುತ್ತಿದೆ. ಹೌದಲ್ಲವೇ..? ನೀನು ಮಾತಲ್ಲಿ ಎಲ್ಲವನ್ನೂ ಹೇಳಿ ನಿರಾಳವಾಗಿ ಬಿಡುತ್ತೀಯ. ಆದರೆ, ನಾನು..? ಆಡಲೂ ಆಗದೆ, ಸುಮ್ಮನೆ ಇರಲೂ ಆಗದೆ ತಳಮಳಿಸುತ್ತೇನೆ.
ಮೊದಲಿಗೆ ನಿನಗೆ ಪ್ರೀತಿ ಹುಟ್ಟಿದ್ದು ನನ್ನ ಮೇಲಲ್ಲ, ನನ್ನ ಬರಹಗಳ ಮೇಲೆ. ಆ ಭಾವಗಳು, ಅಕ್ಷರಗಳ ಮೇಲೆ. ಪ್ರೇಮ, ಪ್ರೀತಿಗಳು ಕಥೆ, ಕವನಗಳಲ್ಲಿ ಹಿಡಿಯಾಗಿ ಸಿಗುತ್ತವೆ. ಆದರೆ, ಅವುಗಳನ್ನು ಬಂಧಿಸಿ ಬದುಕಲ್ಲಿಯೂ ಹಿಡಿದಿಟ್ಟುಕೊಳ್ಳಲು ನಂಬಿಕೆ ಎಂಬ ತಳಹದಿ ಬಹಳವೇ ಮುಖ್ಯ.
"ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು" ಎಂಬ ಕವಿವಾಣಿ ಕೇಳಿಯೇ ಇರುತ್ತೀಯ. ಬದುಕಿನಲ್ಲಿ ನೆಮ್ಮದಿಯಾಗಿರಲು ಒಲವು, ನಂಬಿಕೆ ಎರಡೂ ಬಹಳವೇ ಪ್ರಮುಖ ಪಾತ್ರ ವಹಿಸುತ್ತವೆ. ಒಬ್ಬ ಲೇಖಕ ಅಥವಾ ಕವಿ ಭಾವಗಳಲ್ಲಿ ಜೀವಿಸುತ್ತಾನೆ. ಆ ಭಾವಗಳು ಅವನವೇ ಆಗಿರಬೇಕೆಂಬ ನಿಯಮವಿಲ್ಲ. ಬರವಣಿಗೆಯಲ್ಲಿ ಒಮ್ಮೆ ಬಿಚ್ಚಿಟ್ಟಲ್ಲಿ ಆಗ ಅವನು ನಿರಾಳ. ಈ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ ಎಂದಲ್ಲ. ಆದರೆ, ನನಗೆ ಇದು ಹೆಚ್ಚು ಅನ್ವಯವಾಗುತ್ತದೆ.
ಪ್ರೀತಿಸುವವರನ್ನು ನಾವು ಅಂದುಕೊಂಡಂತೆ ಬದುಕಬೇಕು ಎಂದು ಬಯಸಿದಲ್ಲಿ ಅವರು ನಾವು ಇಷ್ಟಪಟ್ಟ ವ್ಯಕ್ತಿಗಳಾಗಿ ಉಳಿಯುವುದೇ ಇಲ್ಲ. ನಮಗೆ ಬೇಕಾದಂತೆ ಅವರನ್ನು ರೂಪಿಸಿಕೊಳ್ಳಬಯಸಿದಲ್ಲಿ ನಾವು ಪ್ರೀತಿಸಿದವರನ್ನೇ ಮದುವೆಯಾಗಬೇಕು ಎಂಬ ನಿಯಮವೇನೂ ಇಲ್ಲವಲ್ಲ. ಅವರು ಇರುವಂತೆಯೇ ಅವರನ್ನು ಒಪ್ಪಿಕೊಂಡು ಬದುಕು ಸಾಗಿಸುವಲ್ಲಿ ಪ್ರೀತಿ ಅಡಗಿದೆ.
ಪ್ರೀತಿ ಎಂಬುದು "ಐ ಲವ್ ಯು" ಎಂದು ಹೇಳುವುದರಲ್ಲಿ ಮಾತ್ರ ಇಲ್ಲ. ನೀನು ಗಮನಿಸಿರುತ್ತೀಯ.. ನಮ್ಮ ಅಜ್ಜ-ಅಜ್ಜಿಯೋ ಅಥವಾ ಅಪ್ಪ-ಅಮ್ಮನೋ ಪ್ರತಿ ದಿನ "ಐ ಲವ್ ಯು" ಎಂದೋ ಅಥವಾ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳುವುದರಲ್ಲಿಯೋ ಅವರ ಪ್ರೀತಿ ತುಂಬಿರುವುದಿಲ್ಲ. ಅವರ ಪ್ರೀತಿ ಅವರ ಬದುಕಿನಲ್ಲಿ, ಬದುಕುವ ರೀತಿಯಲ್ಲಿ, ಪರಸ್ಪರರನ್ನು ಅರ್ಥೈಸಿಕೊಂಡು ಬದುಕುವುದರಲ್ಲಿ ತುಂಬಿದೆ.
ಬದುಕಿನ ಸಣ್ಣ-ಪುಟ್ಟ ವಿಚಾರಗಳಿಗೆ ಕೆಲವೊಮ್ಮೆ ಸಮಯ ಕೊಡಲು ಸಾಧ್ಯವಾಗದಿರಬಹುದು. ಅದಕ್ಕೆ ಕಾರಣ ಕೆಲಸದ ಒತ್ತಡ ಅಷ್ಟೇ.. ನೀನು ಅದನ್ನು ಅರ್ಥೈಸಿಕೊಂಡು ಸಹಕರಿಸುವೆ ಎಂದುಕೊಂಡಿದ್ದೆ. ನಮ್ಮ ಸಣ್ಣ ಮುನಿಸು ಅಥವಾ ಸರಿಯಾಗಿ ಅರ್ಥೈಸಿಕೊಳ್ಳದಿರುವಿಕೆ ಮುಂದೊಂದು ದಿನ ದೊಡ್ಡ ಮುನಿಸಿಗೆ ಕಾರಣವಾಗಬಹುದು. ಇಬ್ಬರೂ ಅದಕ್ಕೆ ದಾರಿ ಮಾಡಿಕೊಡದಿರೋಣ.
ನನಗೆ ಮನಬಿಚ್ಚಿ ಮಾತನಾಡಲು ಸಂಕೋಚ ಆದರೆ ಅದಕ್ಕೆ ತೆರೆ ಎಳೆಯಬೇಕು ಎಂದುಕೊಂಡಿದ್ದೇನೆ. ಸಾಧ್ಯವಾದಷ್ಟು ಪ್ರಯತ್ನಿಸುವೆ ಆಗದಿದ್ದರೆ ದಿನವೂ ಒಂದೊಂದು ಪತ್ರ ಬರೆಯುವೆ.
ಡಿಜಿಟಲ್ ಯುಗದಲ್ಲೂ ಪ್ರೀತಿಯ ಮಡದಿಗೊಂದು ಪ್ರೇಮ ಪತ್ರ. ಜೀವನ ಪ್ರೀತಿಯನ್ನು ಕಾಪಿಟ್ಟುಕೊಳ್ಳೋಣ. ನಮ್ಮ ಹವ್ಯಾಸಗಳನ್ನು ಮುಂದುವರಿಸುತ್ತಾ, ಮುನಿಸುಗಳನ್ನು ಮರೆತು, ಪರಸ್ಪರರನ್ನು ದೂರದೆ ಮುಂದಿನ ಬದುಕನ್ನು ಪ್ರೀತಿಯಿಂದ ಸವಿಯೋಣ.
ಇಂತಿ
ದಿನವೂ ಪತ್ರ ಬರೆಯುವ ನಿನ್ನವ
----------
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ