ಅವನು ನನಗೆ ಅಗಾಧವಾಗಿ ಹೇಳಿಕೊಟ್ಟ ಪಾಠವೇ ಬದುಕನ್ನು ಪ್ರೀತಿಸುವುದನ್ನು, ಪ್ರೀತಿಸುವ ಪಾಠವನ್ನು. ಅವನನ್ನು ಮಾತ್ರ ಪ್ರೀತಿಸಿದ್ದೆ ಎಂದುಕೊಂಡಿದ್ದೆ ಆದರೆ ಬದುಕಿನ ಗತಿ, ತೀರ್ಮಾನ ಮತ್ತು ಜೀವನದ ಬಗೆ ಬೇರೆಯೇ ಇದ್ದಿತು ಎಂಬುದು ನನಗಾಗ ತಿಳಿದಿರಲಿಲ್ಲ. ನನಗಷ್ಟೇ ಅಲ್ಲ. ಬದುಕಿನ ಆ ಕಾಲಘಟ್ಟದಲ್ಲಿ ಮತ್ತಾರಿಗೂ ಅದರ ಕುರಿತು ತಿಳಿದಿರಲಾರದು. ನಮ್ಮದೇ ಪುಟ್ಟ ಪ್ರಪಂಚವನ್ನು ಸೃಷ್ಟಿ ಮಾಡಿಕೊಂಡು ಅದರಲ್ಲೇ ಕಳೆದುಹೋಗಿರುತ್ತೇವೆ. ಅದರಲ್ಲಿ ನಾವು ಮತ್ತು ನಮ್ಮವರಿಗೆ ಅದರಲ್ಲೂ ನಮ್ಮ ಅತ್ಯಾಪ್ತರಿಗಷ್ಟೇ ಜಾಗ. ನಮ್ಮದೇ ಪುಟ್ಟ ಪ್ರಪಂಚದಲ್ಲಿ ಕೆಲವೊಮ್ಮೆ ಬೇರಾರಿಗೂ ಜಾಗವಿಲ್ಲ. ಬರೀ ನಾವಷ್ಟೇ. ಕೆಲವರು ಹಣದ ವ್ಯಾಮೋಹದ ಹಿಂದೆ ಬೀಳುತ್ತಾ ಅದನ್ನೆಲ್ಲಾ ಮರೆತೇ ಬಿಟ್ಟಿರುತ್ತಾರೆ. ಆದರೆ ಅವನು ನನಗೆ ಕಲಿಸಿದ್ದು ಪ್ರೀತಿಸುವುದನ್ನು.. ಎಲ್ಲರನ್ನೂ, ಎಲ್ಲವನ್ನೂ ಅಗಾಧವಾಗಿ ಮತ್ತು ಗಾಢವಾಗಿ ಅನುಭವಿಸುವುದನ್ನು. ದ್ವೇಷ, ಅಸೂಯೆಗಳನ್ನು ಪ್ರೀತಿಯಿಂದ ಅಳಿಸಬಹುದೆಂಬ ದೊಡ್ಡ ಸತ್ಯವನ್ನು ಮತ್ತಾವ ಕಾಲರಾಯನೂ ಅಳಿಸದಂತೆ ಅಚ್ಚಳಿಯದಂತೆ ಉಳಿಸಿ ಹೋದ. ಅವನ ಮೇಲಿನ ಪ್ರೀತಿ, ಗೌರವ ಮತ್ತು ಅವನು ಹೇಳಿಕೊಟ್ಟ ಪಾಠ ಉಸಿರಿನೊಡನೆ ಎಷ್ಟು ಬೆರೆತಿತ್ತೆಂದರೆ ಅವನನ್ನು ಕರೆದೊಯ್ದ ಜವರಾಯನನ್ನು ಸಹಾ ದ್ವೇಷಿಸಲಾಗಲಿಲ್ಲ, ಶಪಿಸಲಾಗಲಿಲ್ಲ. ಅದಲ್ಲದೇ ಅವನು ಪ್ರತಿಕ್ಷಣ ನನ್ನೊಡನೆ ಇರುವನೆಂಬ ಭಾವ ಕಾಡುತ್ತಿದೆ.
ಅವನು ಮತ್ತಾರೂ ಅಲ್ಲ ಹೆತ್ತವರೇ ಆರಿಸಿ, ಅಕ್ಷತೆ ಹಾಕಿ ನನ್ನೊಡನೆ ಗಂಟು ಹಾಕಿದ್ದ ಸಂಗಾತಿ ನಕುಲ್. ಅವನಿಗೂ ನನಗೂ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸ. ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುವವಳು ನಾನಾದರೆ, ನನಗೆ ವಿರುದ್ಧ ಅವನು. ಎಲ್ಲಾ ಭಾವನೆಗಳನ್ನು ಅಳೆದು ತೂಗಿ ಕೊಡುವವಳು ನಾನಾದರೆ, ತನಗೆ ದಕ್ಕುವ ಭಾವನೆಗಳನ್ನು ಇಡಿಯಾಗಿ ಹಂಚುವವನು ಅವನು. ಬದುಕಿನ ನಂಟು ಬೆಸೆದುಕೊಳ್ಳುವುದೇ ಹೀಗೆ ಎನ್ನಿಸುತ್ತದೆ. ವಿರುದ್ಧ ಧ್ರುವಗಳು ಒಂದಾಗುವ ಪರಿ ಹೀಗೆಯೇ ಇರಬಹುದೇ.. ಆದರೆ, ವಿರುದ್ಧ ಧ್ರುವಗಳು ಒಂದಾದ ಮೇಲೂ ದೂರವಾಗುವ ಮಾತೇ ಇಲ್ಲದೆ ಬೆಸೆದುಕೊಳ್ಳುವುದು, ವಿರುದ್ಧ ಧ್ರುವಗಳು ಒಂದೇ ಎಂಬಷ್ಟು ಲೀನವಾಗಿ ಇರುವ ಬಂಧಕ್ಕೆ ದಾಂಪತ್ಯ ಎನ್ನಬಹುದೇ..??
ಜೀವನದ ಕುರಿತು, ಪ್ರೀತಿಯ ಕುರಿತು ಅನುಭವಿಸುವುದನ್ನು ನಾನು ಕಲಿತದ್ದೇ ಅವನಿಂದ.
ಬೆಳಗಿನ ಸೂರ್ಯೋದಯದ ವಾಕ್, ತೊರೆಯಲ್ಲಿ ಕಾಲು ಇಳಿ ಬಿಟ್ಟು ಕೂತಾಗ ಮರಿ ಮೀನುಗಳು ಕಾಲಿಗೆ ಕಚಗುಳಿ ಇಡುವ ಪರಿ, ಮಳೆ ಬಿದ್ದಾಗಿನ ಮಣ್ಣಿನ ಗಮದ ಆಸ್ವಾದನೆ, ಪರಿಸರದ ಮಧ್ಯದ ಮೌನದ ತನ್ಮಯತೆ, ಜಾತ್ರೆಯಲ್ಲಿನ ರಾಟೆ, ಬಲೂನು, ಮಳೆಯ ಇರುಚಲು ಹೀಗೇ ಮುಂತಾದ ಎಲ್ಲವನ್ನೂ ಅನುಭವಿಸಲು ಕಲಿಸಿದ್ದು ಅವನೇ. ಬರೀ ಸಿಟಿಯಲ್ಲಿನ ಮಾಲ್, ಜನಜಂಗುಳಿಯ ಮಧ್ಯೆ ಬೆಳೆದವಳಿಗೆ ಇದೆಲ್ಲವೂ ಹೊಚ್ಚಹೊಸತು ಆದರೆ ಅವೆಲ್ಲದರಿಂದ ದೂರ ಓಡಬೇಕು ಎನ್ನಿಸಲಿಲ್ಲ. ಅದರೊಟ್ಟಿಗೇ ಬೆರೆತೆ. ಅವನ ಸಾಂಗತ್ಯವೇ ಅದೆಲ್ಲದಕ್ಕೂ ಕಾರಣ ಎನ್ನಿಸುತ್ತದೆ. ಅವನಿಲ್ಲದಿದ್ದರೆ, ಬಹುಶಃ ನಾನು ಬದುಕಿನ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೆನೇನೋ..
ಒಂದು ದಿನ ಅವನೊಡನೆ ಪ್ರಶ್ನಿಸಿದೆ. "ಬದುಕಿನಲ್ಲಿ ನಮಗೆ ಬಹಳ ಮುಖ್ಯವಾದುದು ಏನು?". ತಿಳಿ ಹಾಸ್ಯದ ಅವನ ಮಾತು ಆಗ ಗಂಭೀರವಾಗಿತ್ತು. "ಪ್ರೀತಿ ಬದುಕಿನಲ್ಲಿ ಬಹಳ ಮುಖ್ಯ. ಅದು ವ್ಯಕ್ತಿ ವ್ಯಕ್ತಿಯ ನಡುವಿನ ಪ್ರೀತಿಯಲ್ಲ, ಜೀವನಪ್ರೀತಿ. ಬದುಕಿನಲ್ಲಿ ಯಾರಿಲ್ಲದಿದ್ದರೂ ಬದುಕಬಲ್ಲೆವು ಆದರೆ ಒಮ್ಮೆ ಯೋಚಿಸಿ ನೋಡು. ಜೀವನಪ್ರೀತಿ ಇಲ್ಲದಿದ್ದರೆ ಬದುಕಿರಬಲ್ಲೆವಾ? ಹೇಳು. ಮನೆಯವರಿಗೋಸ್ಕರ ದುಡಿಯುತ್ತಿದ್ದೇವೆ ಎಂದು ಹೇಳುವವರೆಲ್ಲರೂ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ, ಆ ಕೆಲಸವನ್ನು ಅವರು ಪ್ರೀತಿಸದಿದ್ದರೆ ಅವರು ಯಾರಿಗೋಸ್ಕರವೋ ದುಡಿಯಬಲ್ಲರಾ? ಆತ್ಮಹತ್ಯೆಯ ಕಾರಣಗಳಲ್ಲಿ ಒಂದು ಜೀವನಪ್ರೀತಿಯನ್ನು ಕಳೆದುಕೊಳ್ಳುವುದು. ಹಣಕ್ಕಾಗಿ, ಪ್ರತಿಷ್ಠೆಗಾಗಿ ಎಂದು ಹೇಳುವವರದೆಲ್ಲರದ್ದೂ ನಾಲಿಗೆಯ ಮೇಲ್ತುದಿಯ ಮಾತಾಗಿರಬಹುದು ಆದರೆ ಕೆಲಸದ ಬಗ್ಗೆ, ಜೀವನದ ಬಗ್ಗೆ ಕೊಂಚವೂ ಪ್ರೀತಿಯಿಲ್ಲದಿದ್ದರೆ ಅದು ನರಕದಂತೆ ಭಾಸವಾಗುತ್ತದೆ. ಅರೆಕ್ಷಣವೂ ಅಲ್ಲಿರಲಾರರು. ಅನಿವಾರ್ಯ ಎನ್ನಬಹುದು ಆದರೆ ಅವರಿಗೇ ಅರಿವಿಲ್ಲದಂತೆ ಅಲ್ಲೊಂದು ಮಮತೆಯ ಬಂಧ ಬೆಸೆದುಕೊಂಡಿರುತ್ತದೆ. ಎಷ್ಟೇ ಕಲ್ಲು ಮನಸ್ಸಿನವನಾದರೂ ಆಳದಲ್ಲಿ ಎಲ್ಲೋ ಜೀವನಪ್ರೀತಿ ಸೆಳೆಯೊಡೆದಿರುತ್ತದೆ.
ಬದುಕಿನಲ್ಲಿ ತಂದೆ-ತಾಯಿಯಿಲ್ಲದೆ ಮಕ್ಕಳು, ಮಕ್ಕಳಿಲ್ಲದೆ ತಂದೆ-ತಾಯಿಯರು ಬದುಕುತ್ತಿದ್ದಾರೆ. ಗಂಡನಿಲ್ಲದೆ ಹೆಂಡತಿ, ಹೆಂಡತಿ ಇಲ್ಲದೆ ಗಂಡ ಬದುಕುತ್ತಿದ್ದಾರೆ. ಅವರ ಬದುಕಿನಲ್ಲಿ ಅವರನ್ನು ಜೀವಂತವಾಗಿಡುವುದು ಜೀವನಪ್ರೀತಿ. ಬದುಕಿನಲ್ಲಿ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸು, ಮರು ಪ್ರೀತಿಯನ್ನು ನಿರೀಕ್ಷಿಸದೆ.. ನಿನಗಿಷ್ಟವಾಗದಿದ್ದರೆ ಅಲ್ಲಿಂದ, ಅವರಿಂದ ದೂರ ಇದ್ದುಬಿಡು ಆದರೆ ಯಾರನ್ನೂ ಸಹಾ ದ್ವೇಷ ಮಾಡಬೇಡ.. ಆ ವಿಧಿಯನ್ನೂ ಸಹಾ.."
ಅವನು ಅಂದು ಅಷ್ಟು ಭಾವುಕನಾಗಿದ್ದನ್ನು ನೋಡಿದ್ದು, ಕೇಳಿದ್ದು ಅದೇ ಮೊದಲು ಮತ್ತು ಅದೇ ಕೊನೆ. ಯಾಕೆಂದರೆ, ಅಂದು ಊರಿನಿಂದ ಕಾರಿನಲ್ಲಿ ಸಿಟಿಗೆ ಬರುವಾಗ ಆದ ಅಪಘಾತದಲ್ಲಿ ನಾನು ಅವನನ್ನು ಕಳೆದುಕೊಂಡಿದ್ದೆ. ಆದರೆ, ಯಾಕಷ್ಟು ದೊಡ್ಡ ಮಾತುಕತೆ ನಡೆಯಿತು ಎಂಬುದರ ಅರಿವು ಅವನ ಉಪಸ್ಥಿತಿಯಲ್ಲಿ ನನಗಾಯಿತು. ಅವನ ಜೊತೆ ಇದ್ದಾಗ ಸ್ವಲ್ಪ ಬದಲಾಗಿದ್ದ ನಾನು ಅವನ ಅನುಪಸ್ಥಿತಿಯಲ್ಲಿ ಸಂಪೂರ್ಣ ಬದಲಾದೆ. ಜನರ ಬಾಯಲ್ಲಿ ಮೊದಮೊದಲಿಗೆ ಅದು ಆಡಿಕೊಳ್ಳುವ ವಿಷಯವಾಗಿತ್ತು ಆದರೆ ಈಗ ನಾನು ಅವರ ಮುಂದಿನ ಸಕಾರಾತ್ಮಕ ಉದಾಹರಣೆ.
ಯಾರನ್ನೋ ಕಳೆದುಕೊಂಡ ತಕ್ಷಣ ನಂತರದ ಬದುಕೇ ಇಲ್ಲ ಎಂದು ಭಾವಿಸುವುದು ಏತಕೆ? ಅಂದಾಕ್ಷಣಕ್ಕೆ ಬದುಕಿನಲ್ಲಿ ಅವರನ್ನು ಪ್ರೀತಿಸಿಯೇ ಇಲ್ಲ ಎಂದು ಅರ್ಥವಲ್ಲ ಆದರೆ ಎಲ್ಲವನ್ನೂ ಹೊಂದಿಸಿಕೊಂಡು ಮೊದಲಿನಂತೆಯೇ ಬದುಕಲು ಪ್ರೀತಿ ಬೇಕು ಅದುವೇ ಜೀವನಪ್ರೀತಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ