"ದಡ ದಾಟದೆ, ಇತ್ತ ನಿಂತು
ಸೇರಲಾಗದು ಎಂದೊಡನೆ..
ಮಾತ ನೆಚ್ಚಿ ಸುಮ್ಮನೆ ಕೂತು
ಕಾಲ ಕಳೆವವ ನಾನಲ್ಲ"
ಸಂಕೇತ್ ನ ಮೊಬೈಲ್ ಸಂದೇಶ ನೋಡಿದ ಸರಯೂ ಕೇಳಿದಳು. ಸಂದೇಶಕ್ಕಿಂತ ಹೀಗೇ ಮಾತನಾಡೋಣ ಅದೇ ಒಳಿತು. "ದಡದಲ್ಲಿರುವ ಪ್ರಯಾಣಿಕರು ಸೇರಬಹುದೇನೋ ಆದರೆ ದಡಗಳೆರಡೂ ಒಂದಾಗಲು ಸಾಧ್ಯವಿಲ್ಲ. ದಡಗಳೆರಡೂ ಒಂದಾಗಲು ಪ್ರವಾಹ ಬಂದಾಗ ಮಾತ್ರ ಸಾಧ್ಯ. ಅಲ್ಲವೇ?"
"ಮೂಲ ಒಂದೇ ಆದರೂ, ಹರಿವ ಕಾಲದ ಸೆಳೆತಕ್ಕೆ ಸಿಕ್ಕು ಬೇರೆಯಾಗುತ್ತವೆ. ಆದರೆ, ಅವುಗಳಿಂದಲೇ ಅಲ್ಲವೇ ನದಿಯ ಅಸ್ತಿತ್ವ??" ಎಂದನು ಸಂಕೇತ್.
"ಹೌದು, ನದಿಯ ಅಸ್ತಿತ್ವಕ್ಕೆ ಬೆಲೆ ಇರಬೇಕೆಂದರೆ ಅವು ಬೇರೆಯಾಗಿಯೇ ಬದುಕು ಸಾಗಿಸಬೇಕಲ್ಲವೇ..??" ಎಂದಳು ಸರಯೂ.
"ನೀರಿನ ಹರಿತ ದಡಗಳೆರಡನ್ನೂ ಹಿಡಿದಿಟ್ಟಿದೆ. ಹಾಗೇ ಪ್ರೀತಿ ಕೂಡಾ ವಿರುದ್ಧ ಮನಸ್ಥಿತಿಯವರನ್ನು ಅಥವಾ ಹಾಗೆಂದುಕೊಂಡಿರುವವರನ್ನು ಒಗ್ಗೂಡಿಸಬಲ್ಲದು. ಅಲ್ಲವೇ..?" ಎಂದನು ಸಾಕೇತ್
ಅದಕ್ಕುತ್ತರವಾಗಿ ಸರಯೂ "ಪ್ರೀತಿ ಎಂಬ ಭಾವವಿದ್ದರೆ ಮಾತ್ರ ಅಲ್ಲಿ ಎರಡು ದಡಗಳು ಒಂದಾಗಬಹುದು. ಆದರೆ, ಅಲ್ಲಿ ಆ ಭಾವಗಳೇ ಇಲ್ಲದಿದ್ದಲ್ಲಿ..??" ಎಂದಳು.
"ಪ್ರೀತಿ ಎಂಬುದು ಮೇಲೆ ಕಾಣುವ ಭಾವವಲ್ಲ. ಅಂತರಂಗದ ಸುಪ್ತ ಭಾವ. ದ್ವೇಷವನ್ನು ಮುಚ್ಚಿಟ್ಟು ಬದುಕಬಹುದು ಆದರೆ ಪ್ರೀತಿಯನ್ನಲ್ಲ. ಮುಚ್ಚಿಟ್ಟಷ್ಟೂ ಪ್ರೀತಿ ಹೆಚ್ಚಾಗುತ್ತದೆ, ಹೆಮ್ಮರವಾಗುತ್ತದೆ. ಅಷ್ಟಕ್ಕೂ ಪ್ರೀತಿ ಒಂದು ದಿನದಲ್ಲಿ ಹುಟ್ಟುವುದೂ ಇಲ್ಲ, ಕ್ಷಣ ಮಾತ್ರದಲ್ಲಿ ಸಾಯುವುದೂ ಇಲ್ಲ. ಪ್ರೀತಿಗೆ ಮರು ಪ್ರೀತಿ ದಕ್ಕದಿದ್ದರೂ, ಯಾವ ನಿರೀಕ್ಷೆಯೂ ಇಲ್ಲದೆ ಪ್ರೀತಿಸುವುದೇ ಪ್ರೀತಿ. ಬಚ್ಚಿಟ್ಟು ನಿನ್ನನ್ನು ನೀನು ಸಮರ್ಥಿಸಿಕೊಳ್ಳುತ್ತಾ ನನ್ನನ್ನು ಮೋಸಗೊಳಿಸಬಹುದು ಎಂದುಕೊಂಡಿದ್ದರೆ ಅದು ನಿನ್ನ ಭ್ರಮೆ" ಎಂದ ಸಂಕೇತ್.
"ಹೌದಲ್ಲವಾ..? ಪ್ರೀತಿ ಒಂದು ದಿನದಲ್ಲಿ ಹುಟ್ಟದು. ಆದರೆ, ಒಬ್ಬರನ್ನು ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾಗಿ, ನಂತರ ಹೆಂಡತಿಯನ್ನು ಪ್ರೀತಿಸುವೆ ಎನ್ನುವುದು ಮೊದಲ ಪ್ರೀತಿಗೆ ಮಾಡುವ ಮೋಸವಲ್ಲವೇ..??" ಎಂಬ ಸರಯುವಿನ ಪ್ರಶ್ನೆ ಇವನಿಗೆ ಹರಿತವಾಗಿಯೇ ತಾಗಿತ್ತು.
"ಮೊದಲ ಪ್ರೀತಿ ಬರೀ ಆಕರ್ಷಣೆಯಾಗಿದ್ದರೆ..?? ಅದು ಪ್ರೀತಿ ಎಂಬ ಭಾವ ಹುಟ್ಟಿಸಿ ಮೋಸ ಮಾಡಿದ್ದರೆ ಅದಕ್ಕೆ ಹೊಣೆ ಯಾರು..?" ಎಂದ ಸಂಕೇತ್ ಕ್ಷೀಣ ಧ್ವನಿಯಲ್ಲಿ.
"ಪ್ರೀತಿಯ ಭಾವ ಹುಟ್ಟಿಸಿ ಮೋಸ ಮಾಡಿದ್ದವಳು ಅವಳಾದರೆ, ಪ್ರೀತಿಗೆ ಮರು ಪ್ರೀತಿ ಎಂದು ಹೇಳಿ ನೀವೂ ಪ್ರೀತಿಸಿದ್ಧಿರಿ ಅಲ್ಲವೇ..? ಅವಳು ಮಾಡಿದ್ದು ಮೋಸವೆಂದಾದರೆ, ನೀವು ಮಾಡಿದ್ದು ಸಹಾ ಮೋಸವೇ ಅಲ್ಲವೇ..?" ಎಂಬ ಪ್ರಶ್ನೆ ಕೇಳಿದ್ದಳು ಸರಯೂ.
" ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸಮ್ಮತವಲ್ಲವೇ..? ಹಿಂದೆ ನೀನೇ ಯಾವಾಗಲೋ ಪುಸ್ತಕ ಓದುವಾಗ ಹೇಳಿದ್ದ ನೆನಪು. ಒಮ್ಮೆ ಪ್ರೀತಿಯಾದರೆ ಮತ್ತೊಮ್ಮೆ ಪ್ರೀತಿಯಾಗಬಾರದು ಎಂದೇನೂ ಇಲ್ಲವಲ್ಲಾ.. ಪ್ರೀತಿ ಹಂಚಿದಷ್ಟೂ ಹೆಚ್ಚುತ್ತಾ ಹೋಗುತ್ತದೋ ಹೊರತು ಕಡಿಮೆಯಾಗಲಾರದು" ಎಂದನು ಸಂಕೇತ್.
"ಪ್ರೀತಿಸುವವರಿಗೆ ಮಾತ್ರ ಈ ಸೂತ್ರ ಅನ್ವಯವಾಗುತ್ತದೆ ನಿಮ್ಮ ತರಹದ ಮೋಸಗಾರರಿಗಲ್ಲ. ನಿಮಗೀಗ ಬೇಕಿರುವುದು ಪ್ರೀತಿಯಲ್ಲ, ಹಾಸಿಗೆಯ ಸುಖಕ್ಕೆ ಒಂದು ಹೆಣ್ಣು ಅಷ್ಟೇ.." ಎಂಬ ಮಾತು ಸರಯೂ ಬಾಯಿಯಿಂದ ಬಂದೊಡನೆ ಕಪಾಳಮೋಕ್ಷವಾಗಿತ್ತು.
"ಹೊಡೆದಾಕ್ಷಣ ಸತ್ಯ ಬದಲಾಗದು ಮಿಸ್ಟರ್ ಸಂಕೇತ್" ಎಂದಳು ಸರಯೂ ತಡವರಿಸದೆ.
"ಸತ್ಯವಲ್ಲದ್ದನ್ನು ಸತ್ಯವೆಂದು ಬಿಂಬಿಸಲು ಕಟು ಮಾತುಗಳ ಅವಶ್ಯಕತೆ ಇಲ್ಲ ಸರಯೂ. ಹಾಸಿಗೆಯ ಸುಖಕ್ಕೆ ಹೆಣ್ಣು ಬೇಕಿದ್ದಲ್ಲಿ ನಿನ್ನನ್ನು ಬೇಡುವುದು ಬೇಕಾಗಿರಲಿಲ್ಲ ಅಲ್ಲದೇ ನಿನ್ನನ್ನು ಒಲಿಸಿಕೊಂಡು ಪ್ರೀತಿಯ ಭಿಕ್ಷೆಯನ್ನು ಬೇಡುವುದೂ ಸಹಾ ಬೇಕಿರಲಿಲ್ಲ. ದೈಹಿಕವಾಗಿ ನಿನ್ನನ್ನು ಸೋಲಿಸಲು ಎಷ್ಟೊತ್ತು?? ಸಂಯಮದ ಕಟ್ಟೆ ಮೀರಿದಿದ್ದರೆ ಎಂದಿಗೋ ನಿನ್ನನ್ನು ಆ ರೀತಿ ಬಳಸಿಕೊಂಡಿರುತ್ತಿದ್ದೆ.
ಪ್ರೀತಿಯೇ ಬೇರೆ, ವಾಂಛೆಯೇ ಬೇರೆ. ಎರಡರ ನಡವಳಿಕೆಗೂ ಬಹಳಷ್ಟು ವ್ಯತ್ಯಾಸವಿದೆ. ಇದೆಲ್ಲವೂ ನಿನಗೂ ಗೊತ್ತಿದೆ. ಆದರೂ ಈ ರೀತಿಯ ನಾಟಕದ ಹೊದಿಕೆ ಏತಕೆ?"
"ನಿನಗೆ ನನ್ನ ಪ್ರೀತಿ ಅರ್ಥಾತ್ ಮೋಸದ ಬಗ್ಗೆ ಗೊತ್ತಿದ್ದೂ ಸಹಾ ನನ್ನ ಜೊತೆ ಇರುವುದೇತಕೆ? ಮದುವೆ ಎಂಬ ಬಂಧನಕ್ಕೆ ಬೆಲೆ ಕೊಡುತ್ತೇನೆ ಎಂಬ ಮಾತನ್ನು ಬಿಟ್ಟು ಬಿಡು.
ನಾನು ನನ್ನ ಪ್ರೀತಿಯ ವಿಚಾರವನ್ನು ನಾನೇನು ನಿನ್ನ ಹತ್ತಿರ ಮುಚ್ಚಿಟ್ಟು ಮದುವೆಯಾಗಿರಲಿಲ್ಲ. ಮೋಸ ಮಾಡಬೇಕೆಂದಿದ್ದರೆ ನಿನ್ನ ಹತ್ತಿರ ನಾನು ಈ ವಿಚಾರವನ್ನು ಹೇಳದೆಯೇ ಇರಬಹುದಿತ್ತು. ಆದರೆ, ಮದುವೆಯಾದ ನಂತರ ನನ್ನ ತಿರಸ್ಕಾರದ ನಡುವಲ್ಲಿಯೂ ಸಹಾ ನೀನು ನಿನ್ನ ಪ್ರೀತಿ ಹಂಚಿದೆ. ನಾನು ಬದಲಾದ ಸಂಧರ್ಭದಲ್ಲಿ ನೀನು ಹೇಗೆ ವರ್ತಿಸುತ್ತಿರುವುದಕ್ಕೆ ಕಾರಣವೇನು?" ಎಂಬ ಸಂಕೇತ್ ನ ಪ್ರಶ್ನೆಗೆ ಸರಯೂ
"ನಾನು ನನ್ನ ಸ್ವಾರ್ಥಕ್ಕೆ ನಿಮ್ಮನ್ನು ಮದುವೆಯಾದೆ. ನಿಮ್ಮ ಮೇಲಿದ್ದದ್ದು ಕಾಳಜಿ ಅಷ್ಟೇ.. ಅದು ಪ್ರೀತಿ ಎಂಬ ತಪ್ಪು ಕಲ್ಪನೆ ನಿಮ್ಮಲ್ಲಿ ಮೂಡಿದ್ದರೆ ಅದಕ್ಕೆ ನಾನು ಭಾದ್ಯಳಲ್ಲ" ಎಂದಳು ಸರಯೂ.
"ಪ್ರೀತಿಗೂ, ಕಾಳಜಿಗೂ ಬಹಳಷ್ಟು ವ್ಯತ್ಯಾಸವಿದೆ. ಪ್ರೀತಿ ಇರುವಲ್ಲಿ ಮಾತ್ರ ಕಾಳಜಿ ಇರುತ್ತದೆ. ಹಾಗೇ, ಒಂದು ವಿಷಯ ನೆನಪಿಟ್ಟುಕೋ ನಿನ್ನ ಈ ಒರಟು ಮಾತುಗಳಿಗೆ ಸೋತು ಹಿಂದೆ ಸರಿಯುವವ ನಾನಲ್ಲ. ಒರಟು ಮಾತುಗಳ ಹಿಂದೆ ಪ್ರೀತಿಯನ್ನು ಬಚ್ಚಿಡುವ ಹುನ್ನಾರವಿರುತ್ತದೆ. ನಿನ್ನ ಪ್ರೀತಿ,ಕಾಳಜಿ ನನ್ನನ್ನು ನಿನ್ನೆಡೆಗೆ ವಾಲುವಂತೆ ಮಾಡಿರುವುದು ಸತ್ಯ. ಅದನ್ನು ಯಾರೇ ಬಂದರೂ ಬದಲಿಸಲಾಗದು. ನೀನು ನನ್ನನ್ನು ಪ್ರೀತಿಸಲಾರೆ ಎಂದರೆ ನೀನು ಇಲ್ಲಿ ಇರುವ ಅವಶ್ಯಕತೆಯಾದರೂ ಏನು? ನಾಳೆಯೇ ನೀನು ಇಲ್ಲಿಂದ ಹೊರಡಬಹುದು" ಎಂದು ಹೇಳಿ ಹೊರಟ ಸಂಕೇತ್.
ಅವನು ಅತ್ತ ಹೋಗುತ್ತಿದ್ದಂತೆಯೇ ಇತ್ತ ಸರಯೂ ಕಣ್ಣಲ್ಲಿ ಕಣ್ಣೀರಿನ ಕೋಡಿ ಹರಿಯಲಾರಂಭಿಸಿತು. ಸಾಯಿಬಾಬಾ ಮುಂದೆ ಮನದ ದುಗುಡವನ್ನೆಲ್ಲಾ ಹೊರಹಾಕಲಾರಂಭಿಸಿದಳು. "ಈ ಪ್ರೀತಿಯ ನಿವೇದನೆಗಾಗಿ ನಾನು ಕಾಯುತ್ತಿದ್ದೆ. ಆದರೆ, ಆ ಕ್ಷಣ ಬಂದಾಗ ಅದನ್ನು ಮನತುಂಬಿ ಅನುಭವಿಸಲಾಗುತ್ತಿಲ್ಲ. ನಾನು ಈ ಪ್ರೀತಿಯನ್ನು ಒಪ್ಪಿದರೆ ಅಲ್ಲಿ ನನ್ನ ಅಮ್ಮನ ಪ್ರಾಣ ಅವಳಿಂದ ಹೋಗುತ್ತದೆ. ಆಡುವಂತಿಲ್ಲ, ಅನುಭವಿಸುವಂತಿಲ್ಲ.
ಒಂದೆಡೆ ಜನ್ಮ ನೀಡಿದ ಭವಿಷ್ಯಕ್ಕೆ ನನ್ನನ್ನು ಸಜ್ಜು ಮಾಡಿದ ಅಮ್ಮ, ಇತ್ತ ಭವಿಷ್ಯದಲ್ಲಿ ಜೊತೆಯಾಗಬೇಕಾದ ಗಂಡ. ಎರಡು ಕಣ್ಣಲ್ಲಿ ಒಂದನ್ನು ಆಯ್ಕೆ ಮಾಡಿಕೋ ಎಂದರೆ ಯಾವುದೆನ್ನಲಿ?? ನನ್ನ ಪ್ರೀತಿಯೇ ಸುಳ್ಳು ಎನ್ನಲೇ..?? ಕಟು ಮಾತಿನಿಂದ ದೂರ ತಳ್ಳಿದರೂ ಸನಿಹವಾಗುತ್ತಿರುವ ಗಂಡ, ದೂರದಲ್ಲಿದ್ದರೂ ಮನಸ್ಸಿನಲ್ಲಿ ಯಾವಾಗಲೂ ಹತ್ತಿರದಲ್ಲೇ ಇರುವ ನನ್ನ ಏಕೈಕ ಬಂಧು ಅಮ್ಮ.
ದೂರದಲ್ಲಿದ್ದರೂ ಇವರನ್ನು ನೋಡಿ ಖುಷಿ ಪಡುವೆ. ನಾನಿವರನ್ನು ಬಿಟ್ಟು ಹೊರಡದಿದ್ದರೆ ಅವರ ಕೆಲಸ, ಅಮ್ಮನ ಪ್ರಾಣ ಎರಡಕ್ಕೂ ಕುತ್ತು. ಬದಲಿಗೆ ನಾನೇ ಎಲ್ಲರಿಂದ ನಾನೇ ದೂರ ಹೋಗಿಬಿಡುತ್ತೇನೆ. ಪ್ರೀತಿಯ ಮರು ನಿರೀಕ್ಷೆ ಇಲ್ಲದೆಯೇ ಬದುಕುವೆ." ಎಂಬ ಮಾತು ಬಾಬಾ ಕಿವಿಗೆ ತಲುಪಿತೋ ಇಲ್ಲವೋ ಸಂಕೇತ್ ಕಿವಿಗೆ ತಲುಪಿತ್ತು.
ಸರಯೂ ಹಿಮ್ಮೆಟ್ಟುವಿಕೆಯ ಕಾರಣ ತಿಳಿದಿತ್ತು. ಪ್ರೀತಿಯ ನಾಟಕ ಮಾಡಿ ಮೋಸ ಮಾಡಿದ್ದ ಲಾವಣ್ಯ ಕ್ಷಮೆ ಕೇಳಲು ಬಂದಿದ್ದ ಹಿಂದಿನ ಮರ್ಮ ತಿಳಿದಿತ್ತು.
ಬೆಳಿಗ್ಗೆ ಸರಯೂ ಏಳುವಷ್ಟರಲ್ಲಿ ಸರಯೂ ತಾಯಿಯನ್ನು ಮನೆಗೆ ಕರೆ ತಂದಿದ್ದ ಸಂಕೇತ್ "ನಿಮ್ಮ ಜೊತೆಗೇ ಇರುವೆನೆಂದು ನನ್ನ ಜೊತೆ ಜಗಳವಾಡಿ ಮುನಿಸಿಕೊಂಡಿದ್ದಾಳೆ. ನೀವೇ ಸಮಾಧಾನ ಮಾಡಿ" ಎನ್ನುತ್ತಾ ಅತ್ತೆಯನ್ನು ಬಿಟ್ಟಿದ್ದ. ಅಲ್ಲದೇ ಸರಯೂ ಗೆ "ಅಮ್ಮನ ಹತ್ತಿರ ಮಾತನಾಡಿದ ನಂತರ ಎಲ್ಲಾ ಲಗೇಜ್ ಅನ್ನು ಪ್ಯಾಕ್ ಮಾಡು. ನನ್ನ ಕೆಲಸದ ಸ್ಥಳ ಬದಲಾಗಿದೆ. ನಿನ್ನ ಅಮ್ಮ ಕೂಡಾ ನನ್ನ ಅಮ್ಮನಾಗಿ ನನ್ನ ಜೊತೆಯೇ ಇರುವರು. ಇಷ್ಟರ ನಂತರ ನಿನ್ನ ಇಷ್ಟ. ಬಿಟ್ಟು ಹೊರಡುವುದಾದರೆ ಬಾಗಿಲು ತೆರೆದೇ ಇದೆ ಆದರೆ ಅಮ್ಮ ಇಲ್ಲಿರುವ ಹಾಗೂ ಕೆಲಸ ಸಲುವಾಗಿ ಹೋಗುವ ಸ್ಥಳ ಬದಲಾಗದು ಎಂಬುದು ನೆನಪಿರಲಿ. ಹಾಗೆಯೇ ಪ್ರೀತಿ ಕೂಡಾ" ಎಂದವನು ನಡೆದು ಬಿಟ್ಟ.
ಬಿಟ್ಟ ಕಂಗಳಿಂದ ಇದೆಲ್ಲವೂ ಕನಸು ಎಂಬಂತೆ ನೋಡುತ್ತಿದ್ದವಳಿಗೆ ಅವಳ ಅಮ್ಮನೆಂದಿದ್ದರು. "ದೇವರು ಭಕ್ತರ ಪ್ರಾರ್ಥನೆಯನ್ನು ಕೇಳಿಸಿಕೊಂಡರೆ ಸ್ಪಂದಿಸುತ್ತಾನೋ ಇಲ್ಲವೋ ಗೊತ್ತಿಲ್ಲ ಆದರೆ ಮನುಷ್ಯ ಪ್ರೀತಿಗೆ, ಪ್ರಾರ್ಥನೆಗೆ ಸ್ಪಂದಿಸುತ್ತಾನೆ. ಕಾಣದ ದೇವರೆಡೆಗೆ ಮೊರೆಯಿಟ್ಟು ಕಷ್ಟವನ್ನು ನಿವಾರಿಸು ಎನ್ನುವ ಬದಲು ಪ್ರೀತಿಯಿಂದ ಮನುಷ್ಯರೊಡನೆ ಮಾತನಾಡಿದರೆ ಎಲ್ಲಾ ಕಷ್ಟವೂ ನಿವಾರಣೆಯಾಗುತ್ತದೆ" ಎಂದ ಮಾತಿಗೆ ಏನೋ ಹೊಳೆದವಳಂತೆ ಸಂಕೇತ್ ನತ್ತ ಹೊರಟಳು ಸರಯೂ.
"ಹೊರಹೋಗಲಾರೆ ಮನೆಯಿಂದಲೂ,ನಿಮ್ಮ ಮನದ ಮಂದಿರದಿಂದಲೂ" ಎಂದವಳು ತನ್ನಿನಿಯನ ಬಾಹುಗಳಲ್ಲಿ ಬಂಧಿಯಾಗಿದ್ದಳು. ಪ್ರೀತಿಯ, ಅರ್ಥೈಸುವಿಕೆಯ ಹುಚ್ಚು ಪ್ರವಾಹದಲ್ಲಿ ಎರಡೂ ದಡಗಳು ಒಂದಾಗಿದ್ದವು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ