ಭಾನುವಾರ, ಆಗಸ್ಟ್ 16, 2020

ಸಿರಿಗೌರಿಯ ಸದಾಶಿವ (ಅಧ್ಯಾಯ-೨)

 


ಬಂದ ಕರೆಯನ್ನು ಸ್ವೀಕರಿಸುವ ಮನಸ್ಸಿಲ್ಲದಿದ್ದರೂ ಸ್ವೀಕರಿಸಲೇಬೇಕಿತ್ತು. ಇದು ಅಪರ್ಣಾಳಿಂದ ಕಲಿತ ಪಾಠ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಚರ್ಯೆಗೂ ಕೆಲಸದ ಸಮಯವೆಂದೇ ಮೀಸಲಾಗಿ ಇಡಲಾಗದು. ಹಾಗೆಂದು, ನಮ್ಮ ವೈಯಕ್ತಿಕ ಬದುಕನ್ನು ಬಿಟ್ಟು ಕೆಲಸವೇ ಮುಖ್ಯ ಎಂದು ಕುಳಿತುಕೊಳ್ಳಲು ಸಹಾ ಆಗದು. ವೈಯಕ್ತಿಕ ಬದುಕು ಮತ್ತು ಕೆಲಸ ಎರಡನ್ನೂ ಸಮತೋಲನಗೊಳಿಸಲು ಕಲಿಯಬೇಕು. ಆಗಷ್ಟೇ, ಯಾವುದೂ ಹೊರೆ ಎನಿಸದು. ಅಕಸ್ಮಾತ್, ಆ ಕ್ಷಣಕ್ಕೆ ನಮಗೆ ಆ ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಕರೆ ಸ್ವೀಕರಿಸಿ ಹೇಳಿದರೆ ಮತ್ತೊಬ್ಬರಿಗೂ ಅದರಿಂದ ತೊಂದರೆಯಾಗದು. ಇಲ್ಲವಾದಲ್ಲಿ ನಮ್ಮ ತೀರ್ಮಾನವನ್ನು ಕಾಯುತ್ತಾ ಕುಳಿತೋ ಅಥವಾ ಅವರದ್ದೇ ಸ್ವಂತ ನಿರ್ಧಾರವನ್ನು ತೆಗೆದುಕೊಂಡೋ ಕೆಲಸವನ್ನು ಎಡವಟ್ಟು ಮಾಡಿ ಬಿಡಬಹುದು.


ಒಂದೊಂದು ಕೆಲಸದ ಹಿಂದೆಯೂ ಅಶುತೋಷ್ ಗೆ ಅಪರ್ಣಾ ನೆನಪಾಗುತ್ತಿದ್ದಳು. ಕರೆ ಸ್ವೀಕರಿಸಿದ ಅಶುತೋಷ್. "ಸರ್, ಅಪರ್ಣಾ ಮೇಡಂ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲು ನಿಮಗಾಗಿ ಕಾಯುತ್ತಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಏನು ಮಾಡುವುದು?" ಕೇಳಿದರು ನಂದನ್. 

ನಂದನ್ ವರ್ಮಾ "ಕರ್ಮಭೂಮಿ ಪ್ರೈವೇಟ್ ಲಿಮಿಟೆಡ್" ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್. ಅಶುತೋಷ್ ಮುಖರ್ಜಿಯ ನಂತರದ ಸ್ಥಾನದಲ್ಲಿದ್ದದ್ದು ನಂದನ್ ವರ್ಮಾ. ನಂದನ್ ಬರೀ ಕಂಪನಿಯಲ್ಲಿ ಮಾತ್ರವಲ್ಲ ಅಶುತೋಷ್ ನ ಬದುಕಿನ ಬಹು ಮುಖ್ಯ ಸ್ನೇಹಿತ. ಅಪರ್ಣಾ ಅಶುತೋಷ್ ನ ಬದುಕಿನಲ್ಲಿ ಬಂದಾಗ ಎಲ್ಲರಿಗಿಂತ ಹೆಚ್ಚು ಸಂತಸಪಟ್ಟದ್ದು ನಂದನ್. 

"ನಂದಿ, ನನ್ನ ಮೇಲೆ ಕೋಪ ಬಂದಿರುವ ಹಾಗಿದೆ ನಿನಗೆ" ಎಂದು ಕೇಳಿದ ಅಶುತೋಷ್. "ಅಯ್ಯೋ ಸರ್, ನಿಮ್ಮ ಮೇಲೆ ಕೋಪ ಮಾಡಿಕೊಳ್ಳಲು ನಾನು ಯಾರು? ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಒಬ್ಬ ಸಾಮಾನ್ಯ ನೌಕರ ನಾನು. ಅದನ್ನೆಲ್ಲಾ ಬಿಡಿ ಸರ್. ಈಗ, ರಾಜೀನಾಮೆ ಪತ್ರವನ್ನು ಏನು ಮಾಡುವುದು ಹೇಳಿ" ಎಂದನು ನಂದನ್. "ಎಲ್ಲರೂ ಯಾಕೆ ಹೀಗೆ ಮಾತಲ್ಲೇ ನನ್ನನ್ನು ಕೊಲ್ಲುತ್ತಿದ್ದೀರಾ? ಇದಕ್ಕಿಂತ ಒಮ್ಮೆಲೆ ನಮ್ಮನ್ನು ಕೊಂದುಬಿಡಿ. ಅದೇ ಕ್ಷೇಮ" ಎಂದನು ಅಶುತೋಷ್. ನಂದನ್ ಅಶುತೋಷ್ ಮಾತಿಗೆ ಬೇಸರ ಪಟ್ಟುಕೊಂಡರೂ ತೋರ್ಪಡಿಸಿಕೊಳ್ಳದೆ, "ಸರ್,  ಆ ವಿಚಾರವಾಗಿ ಆಮೇಲೆ ಚರ್ಚೆ ಮಾಡಬಹುದು. ಹೆಣ್ಣು ಮಕ್ಕಳನ್ನು ಹೆಚ್ಚು ಹೊತ್ತು ಕಾಯಿಸುವುದು ಸರಿ ಇರುವುದಿಲ್ಲ. ಈಗ ನಾನು ಅವರಿಗೆ ಏನೆಂದು ಉತ್ತರಿಸಲಿ ? ಅದನ್ನು ಹೇಳಿ" ಎಂದನು ನಂದನ್.

ಕ್ಷಣ ಕಾಲ ಯೋಚಿಸಿದ ಅಶುತೋಷ್ " ಅವರ ರಾಜೀನಾಮೆಯನ್ನು ಸ್ವೀಕರಿಸಬೇಕಾದವನು ನಾನು ಮಾತ್ರ. ಅವರು ಕೆಲಸಕ್ಕೆ ಸೇರುವಾಗ ಬರೆದುಕೊಟ್ಟಿರುವ ಪತ್ರದಲ್ಲಿ ಸಹಾ ಹಾಗೆಯೇ ನಮೂದಿಸಲಾಗಿದೆ. ಅವರಿಗೆ ತಿಳಿಸಿ ನಾಳೆ ನಾನು ಬಂದಾಗ ನನ್ನ ಬಳಿಯೇ ಬಂದು ಅವರ ರಾಜೀನಾಮೆಯನ್ನು ಸಲ್ಲಿಸಲು. ಹಾಗೆಯೇ, ಮತ್ತೊಂದು ವಿಷಯವನ್ನು ಸಹಾ ಸ್ಪಷ್ಟ ಪಡಿಸಿಬಿಡಿ ಅವರ ನೋಟಿಸ್ ಪಿರಿಯೆಡ್ ಮೂರು ತಿಂಗಳ ಕಾಲ. ಅದೂ ಸಹಾ ಆ ಪತ್ರದಲ್ಲಿಯೇ ಸ್ಪಷ್ಟವಾಗಿ ನಮೂದಾಗಿದೆ. ಆವರು ಕೆಲಸವನ್ನು ಸ್ವ ಇಚ್ಛೆಯಿಂದ ಬಿಡುವ ಹಾಗಿದ್ದರೆ ಮೂರು ತಿಂಗಳ ಮೊದಲೇ ತಿಳಿಸಿ ತಮ್ಮ ಎಲ್ಲಾ ಕೆಲಸವನ್ನೂ ಆ ಸಮಯದಲ್ಲಿ ಪೂರೈಸಬೇಕು. ಅದು, ಸಾಧ್ಯವಾಗದಿದ್ದಲ್ಲಿ 25 ಲಕ್ಷ ಹಣವನ್ನು ಪಾವತಿಸಿ ಆ ಕ್ಷಣವೇ ಕೆಲಸವನ್ನು ಬಿಡಬಹುದು." ಅಶುತೋಷ್ ನ ಮನದಲ್ಲಿ ಸ್ಪಷ್ಟ ತೀರ್ಮಾನವೊಂದು ರೂಪುಗೊಂಡಿತ್ತು. 


ನಂದನ್ ಗೆ ಅಶುತೋಷ್ ನ ನಿರ್ಧಾರ ಕೇಳಿ ಅವನ ಉಪಾಯದ ಸುಳಿವು ಹತ್ತಿತ್ತು. ಮುಖದಲ್ಲಿ ಕಿರುನಗೆಯೊಂದು ಮೂಡಿ ನೆಮ್ಮದಿಯ ಭಾವ ನೆಲೆಸಿತು. "ಹಾಗೇ ಹೇಳುವೆ ಸರ್, ನನ್ನ ಕೆಲಸವನ್ನೆಲ್ಲಾ ಮುಗಿಸಿ ನಂತರ ಕರೆ ಮಾಡುವೆ ಸರ್" ಎಂದ. "ಈಡಿಯೆಟ್, ಇನ್ನೂ ಕೋಪ ಹೋಗಿಲ್ವಾ? ಸರ್ ಅಂತಾನೇ ಕರೆಯುತ್ತಿದ್ದೀಯಲ್ಲಾ?" ಎಂಬ ಪ್ರಶ್ನೆಗೆ "ಅಪರ್ಣಾ ಮೇಡಂ ಇಲ್ಲೇ ಕುಳಿತ್ತಿದ್ದಾರೆ ಸರ್, ಅವರನ್ನು ಹೆಚ್ಚು ಕಾಯಿಸುವುದಿಲ್ಲ. ನೀವು ಹೇಳಿದ ಹಾಗೆಯೇ ಮಾಡುವೆ " ಎಂದು ಗಂಭೀರವಾಗಿ ಮಾತನಾಡುತ್ತಿದ್ದ ನಂದನ್ ನನ್ನು ನೋಡಿದ ಅಪರ್ಣಾ ನಿಟ್ಟುಸಿರಿಟ್ಟಳು.

"ಅಶು, ನಿನಗಾಗಿ ನಾನು ಬಹಳಷ್ಟು ಬದಲಾದೆ. ಆದರೆ, ನೀನು..? ಬದಲಾಗಿದ್ದೆ ಎಂದುಕೊಂದಿದ್ದೆ. ಇಲ್ಲ, ನಿನ್ನ ಬದುಕಿನಲ್ಲಿ ನಾನಿಲ್ಲ. ನಿನ್ನ ಬದುಕಿನ ಒಂದು ಭಾಗವಷ್ಟೇ ನಾನು. ನಾನಿಲ್ಲದೆಯೂ ನೀನು ಬದುಕಬಲ್ಲೆ. ಇಲ್ಲವಾದಲ್ಲಿ ನನ್ನನ್ನು ಇಷ್ಟು ಸುಲಭವಾಗಿ ಹೋಗಲು ಬಿಡುತ್ತಿದ್ದೆಯಾ ? ಹಿಮದಬಂಡೆ ಕರಗಿ ನೀರಾದರೆ ಕಲ್ಲು ಕರಗಿತು ಎಂಬ ಭ್ರಮೆಗೆ ಬಿದ್ದು ಬಿಡುತ್ತೇವೆ. ಆದರೆ, ವಾಸ್ತವವಾಗಿ ಕೂಡಾ ಯೋಚಿಸಬೇಕಲ್ಲವೇ..? ಕರಗಿದ ನೀರಿನ ಪ್ರತಿ ಬಿಂದುವು ಸಹಾ ಮತ್ತೆ ಹಿಮದ ಗಡ್ಡೆಯಾಗಿ ಮತ್ತಷ್ಟು ಕಾಠಿಣ್ಯವನ್ನೇ ನೆನಪಿಸುತ್ತದೆ. ಬದುಕಿನ ಯಾವುದಾದರೂ ಭಾಗಕ್ಕೆ ಹಾನಿಯಾದರೆ ಅದನ್ನು ಕತ್ತರಿಸಿ ಎಸೆದು ಬಿಡುತ್ತಾರೆ. ಅದಕ್ಕೆ ಪರ್ಯಾಯವಾಗಿ ಮತ್ತೊಂದು ಭಾಗವನ್ನು ಜೋಡಿಸುತ್ತಾರೆ. ಆದರೆ, ಉಸಿರಿಗೆ ಧಕ್ಕೆಯಾದರೆ..? ನನ್ನ ಉಸಿರು ನೀನು. ನಿನ್ನ ಸಂತೋಷ ನೆಮ್ಮದಿಗೆ ನಾನು ಏನನ್ನಾದರೂ ಮಾಡಬಲ್ಲೆ. ಈಗ ನನ್ನೊಡನೆ ಅಥರ್ವ ಇದ್ದಾನೆ. ಹೆರಲಿಲ್ಲ, ಹೊರಲಿಲ್ಲ ಆದರೂ ಅವನು ನನ್ನ ಮಗ, ನಾನು ಅವನಮ್ಮ. ಈ ಸತ್ಯ ಎಂದಿಗೂ ಬದಲಾಗದು. ಅವನಲ್ಲಿಯೇ ನಿನ್ನನ್ನು ಕಾಣುವೆ. ಅವನು ನಿನ್ನ ಮಗನೂ ಅಲ್ಲ, ಅವನು ನಿನ್ನ ಮಗನಾಗಿದ್ದರೆ ಇಷ್ಟು ಸುಲಭವಾಗಿ ನೀನು ಅವನನ್ನು ಬಿಟ್ಟು ಬಿಡುತ್ತಿದ್ದೆಯಾ ?" ಅಪರ್ಣಾಳ ಮನಸ್ಸಿನಲ್ಲಿ ಎಷ್ಟೋ ಪ್ರಶ್ನೆಗಳು ಮೂಡುತ್ತಿದ್ದವು. ಆದರೆ, ಅವಳ ಎಷ್ಟೋ ತಿಳುವಳಿಕೆಗಳು ತಪ್ಪಾಗಿದ್ದವು. ಕೆಲವೊಮ್ಮೆ ನಾವು ನಮ್ಮದೇ ಮೂಗಿನ ನೇರಕ್ಕೆ ಯೋಚಿಸುತ್ತೇವೆ. ಮತ್ತೊಬ್ಬರ ಸ್ಥಾನದಲ್ಲಿ ನಿಂತು ಒಂದು ಕ್ಷಣ ಯೋಚಿಸಿದ್ದರೂ ಎಷ್ಟೋ ತಪ್ಪು ತಿಳುವಳಿಕೆಗಳು ದೂರವಾಗುತ್ತವೆ. ಅಪರ್ಣಾಳ ಯೋಚನೆಯ ತಂತುವನ್ನು ಕಡಿದ್ದದ್ದು ನಂದನ್ ನ ಧ್ವನಿ.

"ಮೇಡಂ, ದಯವಿಟ್ಟು ಕ್ಷಮಿಸಿ. ಈ ರಾಜೀನಾಮೆ ಪತ್ರವನ್ನು ಸ್ವೀಕರಿಸುವ ಅಧಿಕಾರ ನನಗಿಲ್ಲ. ಅಶುತೋಷ್ ಸರ್ ಅಥವಾ ಮಹಾಂತೇಶ್ ಸರ್ ಗೆ ಮಾತ್ರ ಈ ಅಧಿಕಾರ ಇರುವುದು. ನಾಳೆ ಆಫೀಸ್ ಸಮಯದಲ್ಲಿ ಬಂದರೆ ಯಾರಾದರೂ ಒಬ್ಬರಿಗೆ ನಿಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಬಹುದು. ಈ ನಿಯಮಗಳು ನೀವು ಕೆಲಸಕ್ಕೆ ಸೇರಿದಾಗಿನ ಕರಾರು ಪತ್ರದಲ್ಲಿ ನಮುದಾಗಿವೆ" ಎಂದು ಹೇಳಿದ. ಬೇಕೆಂದೇ ನೋಟಿಸ್ ಪಿರಿಯೆಡ್ ವಿಚಾರವನ್ನು ತಿಳಿಸಲಿಲ್ಲ. ಅಪರ್ಣಾಳಿಗೆ ಮಿಶ್ರ ಭಾವ. "ಸರಿ ಸರ್, ಹಾಗಾದರೆ ನಾಳೆ ಬಂದು ಭೇಟಿಯಾಗುವೆ" ಎಂದು ಹೊರಟಳು. ನಂದನ್ ಗೆ ಅವಳ ಗಾಂಭೀರ್ಯ ಎಂದರೆ ಗೌರವ. ವೈಯಕ್ತಿಕ ವಿಚಾರವನ್ನು ಕೇಳುವ ಧೈರ್ಯವಾಗಲಿಲ್ಲ. "ಮೇಡಂ, ಮನೆಗೆ ಹೋಗುವ ವ್ಯವಸ್ಥೆ ಮಾಡಿಸಲೇ..? ಈಗಾಗಲೇ ಕತ್ತಲಾಗಿದೆ" ಎಂದು ಕೇಳಿದ್ದಕ್ಕೆ "ಬದುಕೇ ಕತ್ತಲಲ್ಲಿದ್ದೆ. ಅದರ ಎದುರು ಇದು ಏನೇನೂ ಅಲ್ಲ. ನಿಮ್ಮ ಕಾಳಜಿಗೆ ಥ್ಯಾಂಕ್ಯೂ ಸರ್" ಎಂದು ಹೇಳಿ ಅಲ್ಲಿಂದ ಹೊರಹೋದಳು ಅಪರ್ಣಾ.

ನಂದನ್ ನ ಕರೆ ಬಂದ ನಂತರ ಕೊಂಚ ನಿರಾಳನಾಗಿದ್ದ ಅಶುತೋಷ್. ಮತ್ತೆ ಡೈರಿಯನ್ನು ಬರೆಯಲು ಮುಂದುವರಿಸಿದ.
"ಮರಳಿ ಬಂದುಬಿಡೆ ನನ್ನ ಸಿರಿಗೌರಿ
ಎನ್ನ ಎದೆಯಂಗಳದ ದೇವಿ ನೀನು
ಮೌನದ ಕಿಡಿ ಹೊತ್ತಿಸದೆ
ಮಾತಿನ ಸಿಡಿಗುಂಡ ಸಿಡಿಸದೆ
ನನ್ನ ಅರ್ಧವನ್ನೇ ನೀಡಿಬಿಡುವೆ"
ಡೈರಿಯಲ್ಲಿ ಈ ಸಾಲುಗಳನ್ನು ಬರೆದು ಮುಚ್ಚಿಟ್ಟು ಬಿಟ್ಟ. ಕನಸಿನಂಗಳಕ್ಕೆ ಜಾರಿಹೋದ. ಮುಂಬರುವ ಅಪಾಯದ ಸೂಚನೆ ಅವನಿಗೆ ಕೊಂಚವಾದರೂ ಇದ್ದಿದ್ದರೆ ಅವನು ನೆಮ್ಮದಿಯಿಂದಿರಲು ಸಾಧ್ಯವೇ ಇರುತ್ತಿರಲಿಲ್ಲ

****************

"ವಸುಂಧರಾ ನಿವಾಸದಲ್ಲಿ" ಮೈನಾವತಿ ಶತಪಥ ಹೆಜ್ಜೆ ಹಾಕುತ್ತಾ ತಿರುಗುತ್ತಿದ್ದರು. ಯಾಕೋ ಎದೆಯಲ್ಲಿ ಹೇಳಲಾರದ ತಳಮಳ. ನಾಳೆಗೆ ಅವಳು ನನ್ನಿಂದ ದೂರವಾಗಿ ಐದು ವರ್ಷ. ಯಾಕೋ ಆ ದಿನ ತಳಮಳವಾಗುತ್ತಿದ್ದಂತೆ ಈ ದಿನವೂ ನನ್ನೆದೆಯಲ್ಲಿ ತಳಮಳ. ಅವನೊಡನೆ ಮಾತನಾಡಿದರೆ ಕೊಂಚವಾದರೂ ನನ್ನ ತಳಮಳ ಕಡಿಮೆಯಾಗಬಹುದು ಎಂದು ಅವನಿಗೆ ಕರೆ ಮಾಡಿದರು. ಫೋನ್ ನ ಪ್ರತಿಯೊಂದು ರಿಂಗ್ ಗೂ ತಳಮಳ ಹೆಚ್ಚಾಗುತ್ತಿತ್ತು. ಸೆಕೆಂಡ್ ಗಳು   ಗಂಟೆಗಳಂತೆ ಭಾಸವಾಗತೊಡಗಿದವು.

(ಸಶೇಷ)

(ಎಂದಿನಂತೆ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಮುಂದಿನ ಬರಹಕ್ಕೆ ನಿಮ್ಮ ಪ್ರತಿಕ್ರಿಯೆಗಳೇ ಸ್ಫೂರ್ತಿ)

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ