ಭಾನುವಾರ, ಆಗಸ್ಟ್ 23, 2020

ಸಿರಿಗೌರಿಯ ಸದಾಶಿವ-೩


 ನಂದನ್ ಡೈರಿಯನ್ನು ಮುಚ್ಚಿಟ್ಟು ನಿರಾಳನಾದ. ಆದರೂ, ಏಕೋ ರೂಮ್ ನ ಒಳಗೆ ಇರಲಾಗದೆ, ರೂಮ್ ಹೊರಗೆ ಅಂಟಿಕೊಂಡಂತಿದ್ದ ಬಾಲ್ಕನಿಗೆ ಬಂದು ನಿಂತ. ಬಾಲ್ಕನಿಯಲ್ಲಿ ಪುಟ್ಟ ಪುಟ್ಟ ಹೂ ಕುಂಡದಲ್ಲಿ ಹೂಗಳು ಅರಳಿ ನಗುತ್ತಿದ್ದವು. ಅಲ್ಲಿ ಇದ್ದದ್ದು ಬೆತ್ತದ ತೂಗುಮಂಚ. ಅಪರ್ಣಾಳೆ ಅಲ್ಲಿ ಕುಳಿತಂತೆ ಭಾಸ. ಅಲ್ಲಿ ಕುಳಿತು ಪುಸ್ತಕ ಓದುವುದು ಅವಳ ಮೆಚ್ಚಿನ ಹವ್ಯಾಸದಲ್ಲಿ ಒಂದು. ಅವಳ ಬೇಜಾರನ್ನು ಹೋಗಲಾಡಿಸಿಕೊಳ್ಳುವ ಸ್ಥಳ ಕೂಡಾ ಅದೇ. ಅಲ್ಲಿಯೇ ಕುಳಿತು ಅವಳು ಅವಳ ಡೈರಿ ಬರೆಯುತ್ತಿದ್ದದ್ದು. ಒಂದು ದಿನವೂ ಅಶುತೋಷ್ ಅದನ್ನು ಓದಿರಲಿಲ್ಲ.ಅಷ್ಟಕ್ಕೂ, ಅಶುತೋಷ್ ಗೆ ಡೈರಿ ಬರೆಯುವ ಹವ್ಯಾಸವನ್ನು ರೂಢಿ ಮಾಡಿಸಿದ್ದು ಸಹಾ ಅವಳೇ. ಇಬ್ಬರೂ ಸಹಾ ಒಬ್ಬರ ಬದುಕಲ್ಲಿ ಮತ್ತೊಬ್ಬರು ಮೂಗು ತೂರಿಸುವ ರೂಢಿಯನ್ನಿಟ್ಟುಕೊಂಡಿರಲಿಲ್ಲ.


ಒಬ್ಬರ ಗುಟ್ಟುಗಳು ಮತ್ತೊಬ್ಬರಿಗೆ ಗೊತ್ತಿದ್ದರೂ ಸಹಾ ರಟ್ಟಾಗದಂತೆ ಗೌಪ್ಯ ವಹಿಸುತ್ತಾ ಕಾಪಾಡುವುದು ಡೈರಿ ಮಾತ್ರವೇ. ದಾಂಪತ್ಯದಲ್ಲಿ ಗುಟ್ಟುಗಳೇ ಇರಬಾರದೆನ್ನುತ್ತಾರೆ. ಗುಟ್ಟುಗಳೇ ಇಲ್ಲದ ಬದುಕಲ್ಲಿ ಸ್ವಾರಸ್ಯವಿರಲಾರದು. ದಾಂಪತ್ಯದಲ್ಲಿ ಗುಟ್ಟುಗಳಿದ್ದರೂ, ಅಂತರವಿರಬಾರದು. ಆಂತರ್ಯದ ಅಂತರಗಳು ಅನುರಾಗವನ್ನು ಕೊಲ್ಲುತ್ತವೆ. ಅಪರ್ಣಾ ಕೇಳಬೇಕೆಂದುಕೊಂಡ ಎಷ್ಟೋ ಪ್ರಶ್ನೆಗಳಿಗೆ ಅವಳು ಕೇಳುವ ಮೊದಲೇ ಉತ್ತರಿಸಿದ್ದೇನೆ. ನನ್ನ ಎಷ್ಟೋ ಗೊಂದಲಗಳಿಗೂ ಅವಳು ನನ್ನ ಮನಸ್ಸಿನ ಮಾತನ್ನು ಅರ್ಥ ಮಾಡಿಕೊಂಡಂತೆ ಉತ್ತರಿಸಿದ್ದಾಳೆ. ಅನುರೂಪದ ದಾಂಪತ್ಯ ನಮ್ಮದು ಎಂದು ಎಷ್ಟೋ ಸಲ ಅನ್ನಿಸಿದ್ದಿದೆ. ಎಲ್ಲಾ ದಾಂಪತ್ಯದಲ್ಲಿಯೂ ಈ ಅನುರಾಗದ ಅಪಸ್ವರ ಮೂಡಿರಬಹುದೇ..? ಎಲ್ಲಾ ಅಪಸ್ವರವನ್ನು ಸುಸ್ವರ ಮಾಡಿಕೊಳ್ಳುವ ಕಲೆ ನಮಗೆ ತಿಳಿದಿರಬೇಕು. ಅಲ್ಲವೇ..? ಅಪರ್ಣಾಳನ್ನೇ ನೆನಪಿಸಿಕೊಂಡು ಬೆತ್ತದ ತೂಗುಯ್ಯಾಲೆಯಲ್ಲಿ ಕುಳಿತು ಮನಸ್ಸಿನಲ್ಲೇ ಮಂಥನ ಮಾಡಿಕೊಳ್ಳುತ್ತಿದ್ದ ಅಶುತೋಷ್. ಯಾವುದೋ ಆಲೋಚನೆಯಲ್ಲಿ ಪಕ್ಕದಲ್ಲೇ ಕೈಯಿಟ್ಟರೆ ಐದಾರು ಪುಸ್ತಕಗಳ ರಾಶಿ ಅಲ್ಲಿತ್ತು.

ಆ ಪುಸ್ತಕಗಳ ರಾಶಿಯಲ್ಲೇ ಬೆಚ್ಚಗೆ ಮಲಗಿತ್ತು ಅಪರ್ಣಾಳ ಡೈರಿ. ಒಮ್ಮೆ ಅಶುತೋಷ್ ಮನಸ್ಸಲ್ಲಿ ಸಂತೋಷದ ಅಲೆ ಎದ್ದಿತು. ಆದರೆ, ಮರುಕ್ಷಣವೇ ಮನಸ್ಸಿನಲ್ಲಿ ಗೊಂದಲದ ಭಾವ. ಮತ್ತೊಬ್ಬರ ಡೈರಿಯನ್ನು ಓದುವುದೋ, ಬೇಡವೋ ಎಂಬ ಸಂದಿಗ್ಧತೆ. ತನ್ನ ಕುರಿತು ಅವಳು ಏನು ಬರೆದಿರಬಹುದು ಎಂಬ ಕುತೂಹಲ. ಕುತೂಹಲ ಮತ್ತು ಸಂಧಿಗ್ಧತೆಯ ನಡುವಿನ ಯುದ್ಧದಲ್ಲಿ ಗೆದ್ದದ್ದು ಕುತೂಹಲ. ಮೊದಲ ಪುಟ ತೆರೆದ. ಮುದ್ದಾದ ಬರಹ

"ಬದುಕು ಮತ್ತು ಮನಸ್ಸಿನ ಪರಿಶುದ್ಧತೆ ಪಕ್ವವಾಗಿರುವುದು ಪರಿಸರದಲ್ಲಿ. ಪರಿಸರ ಎಂದರೆ ನನಗೆ ನೆನಪಾಗುವುದು ನನ್ನ "ವಸುಂಧರಾ ಎಸ್ಟೇಟ್". ವಸುಂಧರೆಯ ಮೋಹ ಬಿಡದೆ ಕಾಡುವುದು ಸೀತೆಯನ್ನು ಮಿಥಿಲೆಯ ಮಣ್ಣು ಕಾಡಿದಂತೆ... ಎಷ್ಟಾದರೂ ತವರು ಜಗತ್ತಿನ ಎಲ್ಲಾ ಸ್ಥಳಗಳಿಗಿಂತ ನೆಮ್ಮದಿ ನೀಡುತ್ತದೆ ಹಾಗೂ ಕಾಡುತ್ತದೆ. ಬೆಂಗಳೂರಿನ ಪರಿಸರಕ್ಕೆ ಹೊಂದಿಕೊಳ್ಳಲು ಆಗುತ್ತದೋ ಇಲ್ಲವೋ ಎಂಬ ಆಲೋಚನೆಯಲ್ಲಿಯೇ ಬಂದವಳನ್ನು ಬೆಂಗಳೂರು ತೆರೆದ ಮನಸ್ಸಿನಿಂದ ಸ್ವಾಗತಿಸಿತು. "ಕರ್ಮಭೂಮಿ ಪ್ರೈವೇಟ್ ಲಿಮಿಟೆಡ್" ಗೂ ಅಂತಹಾ ವ್ಯತ್ಯಾಸವೇನೂ ನನಗೆ ಕಾಣಲಿಲ್ಲ. ಸಾಫ್ಟ್ ವೇರ್ ಕಂಪನಿಯಲ್ಲಿ ವಸುಂಧರೆ ನಳನಳಿಸುತ್ತಿದ್ದಳು. "ಪ್ರಾಜೆಕ್ಟ್ ಗ್ರೀನ್(Project Green)" ಗಾಗಿ ನಾನು ಹಾಸನದ ಬ್ರಾಂಚ್ ನಿಂದ ಇಲ್ಲಿಗೆ ವರ್ಗಾಯಿಸಲ್ಪಟ್ಟಿದ್ದೆ. "ಪ್ರಾಜೆಕ್ಟ್ ಗ್ರೀನ್" ನನ್ನ ಕನಸಿನ ಕೂಸು. ಅದರ ಸಾಕಾರಕ್ಕೆ ಇದೇ ಸರಿಯಾದ ಸ್ಥಳ ಎಂದು ನಿರ್ಧರಿಸಿಬಿಟ್ಟೆ. ಅಲ್ಲಿ ಬಂದ ಮೊದಲ ದಿನ ನನಗೆ ಪರಿಚಯವಾದದ್ದು "ಕಾತ್ಯಾಯಿನಿ".

ಕಾತ್ಯಾಯಿನಿಯ ಹೆಸರನ್ನು ನೋಡಿದ ಮರುಕ್ಷಣವೇ ಅಶುತೋಷ್ ಗೆ ಮರೆತಂತಿದ್ದದ್ದೆಲ್ಲಾ ನೆನೆಪಾಯಿತು. ಸುಮ್ಮನೆ ಡೈರಿ ಮುಚ್ಚಿಟ್ಟು ಕುಳಿತ. ನಭದ ನಕ್ಷತ್ರವಾಗಿದ್ದ ಕಾತ್ಯಾಯಿನಿಯನ್ನು ಒಮ್ಮೆ ನಿಟ್ಟುಸಿರಿಟ್ಟು ನೆನೆದು ಆಗಸದತ್ತ ನೋಡಿದ. ಗಟ್ಟಿಯಾಗಿ ಒಮ್ಮೆ ಕಿರುಚಬೇಕೆನಿಸಿತ್ತು "ಕಾತ್ಯಾಯಿನಿ...." ಎಂದು. ಮನಸ್ಸಿನಲ್ಲಿ ಮತ್ತೆ ಮತ್ತೆ ಅವಳ ಹೆಸರನ್ನು ಕನವರಿಸಿದ. ಆಗಸದಲ್ಲಿನ ತಾರೆಯೊಂದು ಅವನ ಮನಸ್ಸಿನ ಕೂಗಿಗೆ ಸ್ಪಂದಿಸಿತೇನೋ ಎಂಬಂತೆ ಮಿನುಗಿತು. ಆಗ ಅಂದಿನ ತಾರೀಖನ್ನು ತಟ್ಟನೆ ನೆನಪಿಸಿಕೊಂಡ. "ಅಯ್ಯೋ, ಇಂದಿನ ದಿನವನ್ನು ನಾನು ಮರೆತದ್ದಾದರೂ ಹೇಗೆ..? ಅವಳು ನಮ್ಮನ್ನೆಲ್ಲಾ ಆಗಲಿ ಇಂದಿಗೆ ಐದು ವರ್ಷ. ಅಲ್ಲವೇ.. ?" ಎಂದು ಅವನ ಮೊಬೈಲ್ ಅನ್ನು ಹುಡುಕುತ್ತಾ ಒಳ ಬಂದ.

ಯಾಕೋ ಮನಸ್ಸಿನ್ನಲ್ಲಿ ದುಗುಡವನ್ನೆಲ್ಲಾ ಹೊತ್ತು ಒಳ ಬಂದವನಿಗೆ ಕಂಡದ್ದು ಗೋಡೆಯ ಮೇಲೆ ತೂಗು ಹಾಕಿದ್ದ "ಕಾತ್ಯಾಯಿನಿ"ಯ ದೊಡ್ಡ ಭಾವಚಿತ್ರ. ಅಪರ್ಣಾ ಹೋಗುವ ಮುನ್ನ ಹೊಸದೊಂದು ಹೂ ತಂದಿಟ್ಟಿದ್ದಳು. ಅಪರ್ಣಾ ಹಾಗೆಯೇ ಅಲ್ಲವೇ..? ಎಂತದ್ದೇ ಕೋಪವಿದ್ದರೂ, ಮುನಿಸಿದ್ದರೂ ತನ್ನ ಕೆಲಸವನ್ನು ಮರೆಯಲಾರಳು. ಯಾಕೋ ಕಾತ್ಯಾಯಿನಿ ಅಣಕಿಸಿ ನಕ್ಕಂತಾಯಿತು.

ಅವಳ ಭಾವಚಿತ್ರದ ಪಕ್ಕದಲ್ಲಿದ್ದ ಸಾಲುಗಳನ್ನೊಮ್ಮೆ ಓದಿದ. 
ದೇಹ ಮರೆಯಾಗಿರಬಹುದು
ಚೇತನವಿನ್ನೂ ಹಾಗೇ ಉಳಿದಿದೆ
ಭಾವಗಳ ಉಸಿರು ಅಲೆಅಲೆಯಾಗಿ
ಎದೆಯಂಗಳದ ಒಲವ ಸೇರಿದೆ
ಒಲವ ಲಾಲಿಯ ಹಾಡುತ್ತಲೇ ಇರುವೆ
ನಿನ್ನ ಎದೆಯ ಮಾತನ್ನೊಮ್ಮೆ ಆಲಿಸು
ಕಣ್ಮುಚ್ಚಿ ಮಲಗಿರಬಹುದು
ಭೂ ತಾಯಿಯ ಮಡಿಲಲ್ಲಿ
ಪ್ರತಿ ಕ್ಷಣವೂ ಜೀವದಂತಿರುವೆ
ನಿನ್ನೆದೆಯ ಒಲವಲ್ಲಿ, ಭಾವದೋಕುಳಿಯಲ್ಲಿ

ಅಪರ್ಣಾಳೇ ಬರೆದು, ಕಾತ್ಯಾಯಿನಿಯ ಭಾವಚಿತ್ರದ ಜೊತೆ ಅಚ್ಚು ಮಾಡಿಸಿದ್ದ ಸಾಲುಗಳು. ಒಬ್ಬಳು ಜೀವಂತ ಸ್ಫೂರ್ತಿ, ಮತ್ತೊಬ್ಬಳು ಒಲುಮೆಯ ಚಿಲುಮೆ. 

ಮೊಬೈಲ್ ಸದ್ದಾದಂತಾಗಿ ನೋಡಿದರೆ, 20 ಮಿಸ್ ಕಾಲ್ ಗಳಿದ್ದವು. ಮೈನಾ ಅಮ್ಮನ ಕಾಲ್ ಗಳು 19. ಮತ್ತೊಂದು ನಂದನ್ ನದ್ದು. ಮೊದಲು ಯಾರಿಗೆ ಮಾಡಲಿ ಎಂದು ಆಲೋಚಿಸುತ್ತಿರುವಾಗಲೇ ಕಾತ್ಯಾಯಿನಿಯ ನೆನಪಾಗಿ ಮೈನಾ ಅಮ್ಮನ ಮೊಬೈಲ್ಗೆ ಕರೆ ಮಾಡಲು ನಿರ್ಧರಿಸಿ ಮೈನಾವತಿಯ ಮೊಬೈಲ್ ಗೆ ಕರೆ ಮಾಡಿದ. ಐದಾರು ಬಾರಿ ರಿಂಗಣಿಸಿದರೂ ಕರೆ ಸ್ವೀಕರಿಸದಿದ್ದಕ್ಕೆ ಲ್ಯಾಂಡ್ ಲೈನ್ ಗೆ ಕರೆ ಮಾಡಿದ. ಕರೆ ಸ್ವೀಕರಿಸಿದ್ದು ಕುಡಿದ ಮತ್ತಿನಲ್ಲಿದ್ದ "ವಿರಾಜ್". ಧ್ವನಿ ಕೇಳಿಯೇ ಅಶುತೋಷ್ ಗೆ ಮೈಯೆಲ್ಲಾ ನಖಶಿಕಾಂತ ಉರಿದಂತಾಯಿತು. ಕರೆ ತುಂಡರಿಸಿದವನಿಗೆ ನೆನಪಾದದ್ದು ಅದೇ ಮನೆಯಲ್ಲಿ ವಾಚ್ ಮ್ಯಾನ್ ಆಗಿದ್ದ "ಸುಂದ್ರಪ್ಪ". ತಕ್ಷಣವೇ ಡಯಲ್ ಮಾಡಿದ. ಸುಂದ್ರಪ್ಪ ಹೇಳಿದ ಮಾತು ಕೇಳಿ ಅಶುತೋಷ್ ಗೆ ಗಾಬರಿಯಾಯಿತು. "ಅಮ್ಮಾವ್ರು ನಿಮ್ಮ ಮನೆಗೇ ಹೋಗುತ್ತೇನೆ ಎಂದು ಹೊರಟು ಒಂದು ಗಂಟೆಯಾಯಿತು. ಇನ್ನೂ ಬಂದಿಲ್ಲವಾ..? ಇನ್ನೇನು ಬರಬಹುದು" ಎಂದೇಳಿ ಕರೆ ತುಂಡರಿಸಿದ. 


ಇತ್ತ ನಂದನ್ ನ ಕರೆ ಸತತವಾಗಿ ಬರುತ್ತಲೇ ಇತ್ತು. ತಕ್ಷಣವೇ ಸ್ವೀಕರಿಸಿದ. "ಹಲೋ ಅಶು, ಇಲ್ಲಿ accident.." ಎಂದು ಮಾತನಾಡುತ್ತಿರುವಾಗಲೇ ಕಾಲ್ ಕಟ್ ಆಗಿತ್ತು. ಅಶುತೋಷ್ ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಗಾಬರಿಯಲ್ಲಿ ಮೊಬೈಲ್ ಚಾರ್ಜ್ ಹಾಕಲು ಹೊರಟ. ಅಪರ್ಣಾಳ ಮೇಲೆ ಅವನು ಎಷ್ಟು ಅವಲಂಬಿತನಾಗಿದ್ದ ಎಂದು ಅವನಿಗೆ ಅರಿವಾಗುತ್ತಲಿತ್ತು. ಅವಳಿದ್ದಾಗ ಮೊಬೈಲ್ ಚಾರ್ಜ್ ಹಾಕಲು ಕೂಡಾ ಅವಳೇ ನೆನಪಿಸುತ್ತಿದ್ದಳು. ಆದರೆ, ಈಗ...?

ಅಪ್ಪ, ಅಮ್ಮ ಮನೆಗೆ ಬಂದಿಲ್ಲ, ಅಪರ್ಣಾ, ಅಥರ್ವನಿಗೇನಾದರೂ ಆಯಿತೇ..? ಮೈನಾ ಅಮ್ಮ ಕೂಡಾ ಇನ್ನೂ ತಲುಪಿಲ್ಲ. ವಾಸ್ತವದ ಬಿಸಿ, ಕೆಟ್ಟ ಆಲೋಚನೆಗಳ ಮಧ್ಯೆ ಬಂಧಿಯಾಗಿದ್ದ ಅಶುತೋಷ್

*********

ಇತ್ತ ಮನೆಗೆ ಬಂದಾಗಲೇ ಹೊರ ಹೊರಟಿದ್ದ ಮೈನಾವತಿ, ಅಪರ್ಣಾಳ ಆಳೆತ್ತರದ ಫೋಟೋ, ಕೆಲಸದವರ ಅಸಡ್ಡೆ ಎಲ್ಲವೂ ವಿರಾಜ್ ನ ಕೋಪವನ್ನು ತಾರಕಕ್ಕೇರಿಸಿತ್ತು. ಮೊದಲೇ ಕುಡಿದಿದ್ದ, ಈಗ ಮತ್ತಷ್ಟು ವ್ಯಗ್ರನಾಗಿ ಕುಡಿಯಲು ಕುಳಿತಿದ್ದ. ಬಂದ ಫೋನ್ ಕಾಲ್ ನಲ್ಲಿಯೂ ಯಾರೂ ಮಾತನಾಡದಿರುವುದು ಮತ್ತಷ್ಟು ಸಿಟ್ಟು ತರಿಸಿ ರಂಪ ಮಾಡಲು ಆರಂಭಿಸಿದ್ದ. 

ಆಗಲೇ, ಅವನ ಮೊಬೈಲ್ ಗೆ ಬಂದ ಕರೆಯನ್ನು ಸ್ವೀಕರಿಸಿದವನಿಗೆ ಹೇಳಿದ ವಿಷಯ ಕೇಳಿ ಕುಡಿದ ಮತ್ತೆಲ್ಲಾ ಒಮ್ಮೆಲೇ ಇಳಿದಿತ್ತು.

(ಸಶೇಷ)

(ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಗಳನ್ನು ತಿಳಿಸಿ.ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹದ ಸ್ಫೂರ್ತಿ)


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ