ಭಾನುವಾರ, ಆಗಸ್ಟ್ 9, 2020

ಸಿರಿಗೌರಿಯ ಸದಾಶಿವ (ಅಧ್ಯಾಯ-೧)

"ಒಲುಮೆಯನ್ನು ಬೆಳೆಸುವುದರಲ್ಲಿ ಅಥವಾ ಕತ್ತರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುವುದು ಮೌನ. ಮಾತು ಆಡಿ ಮನಸ್ಸನ್ನು ಛಿದ್ರ-ಛಿದ್ರ ಮಾಡಿದರೆ, ಮೌನ ಏನನ್ನೂ ಮಾಡದೆ ಮನಷ್ಯನ ಮನಸ್ಸನ್ನೇ ಕೊಂದು ಬಿಡುತ್ತದೆ. ನನ್ನ ಮೇಲೆ ನಿಮಗೆ ಯಾಕೆ ಈ ಉಪೇಕ್ಷೆ ? ನಿಮ್ಮ ಸಿಟ್ಟಿನಿಂದ ಮನಸ್ಸು ಘಾಸಿಯಾಗಿಲ್ಲ, ನಿರ್ಲಕ್ಷ್ಯ, ಮೌನ ನನ್ನನ್ನು ಇಂಚು ಇಂಚಾಗಿ ಕೊಲ್ಲುತ್ತಿದೆ. ಒಮ್ಮೆಯಾದರೂ ನನ್ನ ಈ ಒಂದು ಪ್ರಶ್ನೆಗೆ ಉತ್ತರ ನೀಡಿ. "
ಅಶುತೋಷ್ ನನ್ನು ಎಲ್ಲಾ ರೀತಿಯಲ್ಲಿಯೂ ಕಾಡಿ ಬೇಡಿದರೂ ಅವನು ಅಪರ್ಣಾಳ ಆ ಒಂದು ಪ್ರಶ್ನೆಗೆ ಉತ್ತರ ನೀಡಲೊಲ್ಲ.

"ನನ್ನನ್ನು ನೋಯಿಸುವುದೇ ನಿಮ್ಮ ಉದ್ದೇಶವೇ ? ನನ್ನ ಬದುಕನ್ನೇ ನಿಮಗಾಗಿ ಮೀಸಲಿಟ್ಟಿದ್ದೇನೆ. ನನ್ನ ಮೇಲೆ ಇನ್ನೂ ಕರುಣೆ ಬಾರದೇ..?  ನಿಮ್ಮ ಉದ್ದೇಶ ಏನು ಎಂಬುದನ್ನು ಬಾಯಿ ಬಿಟ್ಟು ತಿಳಿಸಿಬಿಡಿ. ಆಗಲಾದರು ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಸಿದರೆಯಾದರೂ ಮುಂದೆ ಎಂದೂ ನಿಮ್ಮನ್ನು ಪ್ರಶ್ನಿಸಲಾರೆ. ನನ್ನ ಎಷ್ಟೋ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರೆತಿಲ್ಲ, ಈ ಪ್ರಶ್ನೆಯೂ ಅದೇ ಪಟ್ಟಿಗೆ ಸೇರಿ ಬಿಡಲಿ." 
ಅಪರ್ಣಾಳ ಪ್ರತಿ ಮಾತೂ ಸಿಡಿಗುಂಡಿನಂತೆ ಅವನ ಎದೆ ಸೀಳುತ್ತಿದ್ದರೂ ಅವನು ಅವನ ನಿರ್ಧಾರದಲ್ಲಿ ಅಚಲ. ಕಲ್ಲು ಕೂಡಾ ಕರಾಗಿಬಿಡುತ್ತಿತ್ತೇನೋ ಅಪರ್ಣಾಳ ಕಣ್ಣೀರಿಗೆ, ಅವಳ ಮನದ ನೋವಿಗೆ.. ಆದರೆ, ಹಿಮದ ಬಂಡೆಯಂತೆ ತಣ್ಣಗೆ ನಿಂತಿದ್ದ ಅಶುತೋಷ್ ಮುಖರ್ಜಿ. 

ಆಚಲತೆ ಮುಖದಲ್ಲಿ ಮನೆ ಮಾಡಿತ್ತು, ಕರಗದಂತಹಾ ಕಲ್ಲೆದೆಯ ಹಿಂದೆ ಮನಸ್ಸು ಮಮ್ಮಲ ಮರುಗುತ್ತಿತ್ತು, "ಇದೊಂದು ವಾರ ಸುಮ್ಮನಿದ್ದರೆ ಎಲ್ಲವನ್ನೂ ಸರಿ ಮಾಡಿಬಿಡುವೆ, ಕ್ಷಮಿಸಿಬಿಡು ಅಪ್ಪು" ಎಂದು ಮನಸ್ಸಿನಲ್ಲಿಯೇ ಅವಳ ಕ್ಷಮೆ ಕೇಳಿ ತಿರುಗಿಯೂ ನೋಡದಂತೆ ಮನೆಯಿಂದ ಹೊರ ನಡೆದುಬಿಟ್ಟ.

ಸಣ್ಣ ಉಪೇಕ್ಷೆ ಕೂಡಾ ಕೆಲವೊಮ್ಮೆ ಬದುಕಿನ ದೊಡ್ಡ ದುರಂತಗಳಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಆದರೆ, ಅದು ಆ ಕ್ಷಣಕ್ಕೆ ಅರಿವಿಗೆ ಬರುವುದಿಲ್ಲ ಅಷ್ಟೇ. 

ಅಶುತೋಷ್ ಮತ್ತೆ ತಿರುಗಿ ಮನೆಗೆ ಬಂದಾಗ ನಿತ್ಯದಂತೆ ಸ್ವಾಗತಿಸಲು, ಸಂತೈಸಲು ಅವಳು ಬರಲಿಲ್ಲ. ಅವನ ಮನಸ್ಸಿನಲ್ಲಿ ಕಸಿವಿಸಿ ಮೂಡುತ್ತಿತ್ತು. ಅಷ್ಟು ದೊಡ್ಡ ಮನೆಯಲ್ಲಿ ತಾನು ಒಂಟಿ ಎಂಬ ಭಾವನೆ ಬಹಳಷ್ಟು ವರ್ಷಗಳ ನಂತರ ಮೂಡಿತು. 

ಆಮೆ ತನ್ನ ಚಿಪ್ಪಿನಲ್ಲಿ ಹುದುಗುವಂತೆ ತನ್ನ ಕೆಲಸ, ಗಾಂಭೀರ್ಯ, ಸಿಟ್ಟಿನಿಂದ ತನ್ನನ್ನು ತನ್ನೊಳಗೇ ಬಚ್ಚಿಟ್ಟುಕೊಂಡಿದ್ದರ ಫಲ ಎದ್ದು ಕಾಣುತ್ತಿತ್ತು. ಅಪರ್ಣಾ ತನ್ನ ಜೊತೆಯಿರುವಾಗ ಎಲ್ಲರೂ, ಎಲ್ಲವೂ ಸಹಜವಾಗಿಯೇ ಕಾಣುತ್ತಿತ್ತು ಆದರೆ ಈಗ ಅವಳ ಅನುಪಸ್ಥಿತಿಯಲ್ಲಿ ಎಲ್ಲವೂ ಶೂನ್ಯವಾಗಿಯೇ ಕಾಣುತ್ತಲಿದೆ. ಸುಮ್ಮನೆ ತನ್ನಷ್ಟಕ್ಕೆ ನಡೆದು ರೂಮಿನ ಒಳ ಸೇರಿ ಬಿಟ್ಟ ಅಶುತೋಷ್. ಮತ್ತೆ, ಕೆಲಕ್ಷಣದಲ್ಲಿಯೇ ಅವನ ಎದೆ ನಡುಗಿಸುವ ಸತ್ಯ ಅವನಿಗೆ ತಿಳಿಯಲಿತ್ತು. 

ಯಾರ ಮೇಲೆ ಎಷ್ಟೇ ಕೋಪವಿದ್ದರೂ, ತಾನೆಷ್ಟೇ ಕೂಗಾಟ, ಹಾರಾಟ ನಡೆಸಿದ್ದರೂ ಮತ್ತೆ ಅವರ ಕ್ಷಮೆ ಕೇಳಲು ಅವರ ಮುಂದೆ ತನ್ನೆಲ್ಲಾ ದೊಡ್ಡಸ್ತಿಕೆಯನ್ನೂ ಮೂಟೆಕಟ್ಟಿ ಪಕ್ಕಕ್ಕಿಟ್ಟು ಸಣ್ಣ ಮಗುವಿನಂತಾಗಿ ಬಿಡುತ್ತಿದ್ದ. ಅವನ ಈ ಗುಣವೇ ಅಪರ್ಣಾಳಿಗೆ ಅಚ್ಚುಮೆಚ್ಚು. ಆದರೆ, ಅವಳ ವಿಚಾರದಲ್ಲಿ ಮಾತ್ರ ಅಶುತೋಷ್ ಕಲ್ಲಿನಂತಾಗಿದ್ದ. 

ಸಣ್ಣ-ಪುಟ್ಟ ಖುಷಿಯ ವಿಚಾರಗಳನ್ನು ಹಂಚಿಕೊಂಡಾಗ ಖುಷಿಪಡುವವರಿರಬೇಕು. ಸೋಲಿನಿಂದ ಮೇಲೆತ್ತಲು, ಆತ್ಮಸ್ಥೈರ್ಯ ತುಂಬಲು ನಮ್ಮವರೆನಿಸಿಕೊಂಡವರಿರಬೇಕು. ಸಣ್ಣ ಗೆಲುವನ್ನೂ ಸಂಭ್ರಮಿಸಲು ಹೇಳಿಕೊಟ್ಟ ನಿನಗೇ ಮೊದಲು ನಾನು ಈ ನನ್ನ ದೊಡ್ಡ ಗೆಲುವಿನ ವಿಚಾರವನ್ನು ತಿಳಿಸಬೇಕು, ಅದಕ್ಕೂ ಮೊದಲು ನಾನು ನಿನ್ನ ಕ್ಷಮೆ ಕೇಳಬೇಕು, ಇದೊಂದು ವಾರ ಸುಮ್ಮನಿರಲು ಹೇಳಬೇಕು ಎಂದು ಮನಸ್ಸಿನಲ್ಲಿಯೇ ತಿಳಿಸಬೇಕು ಎಂದು ಅಪರ್ಣಾಳನ್ನು ಹುಡುಕಿ ಮತ್ತೆ ರೂಮಿನಿಂದ ಹೊರ ನಡೆದ.

ಅವಳ ಮೆಚ್ಚಿನ ಸ್ಥಳ, ಮನೆಯ ಪುಟ್ಟ ಲೈಬ್ರರಿಯಲ್ಲಿ ಅವಳು ಕಾಣಲಿಲ್ಲ, ಬಾಲ್ಕನಿಯ ಪುಟ್ಟ ತೂಗುಮಂಚದಲ್ಲಿಯೂ ಅವಳ ಅನುಪಸ್ಥಿತಿ. ಅಪ್ಪ-ಅಮ್ಮನ ಕೋಣೆಯಲ್ಲಿರಬಹುದು ಎಂದುಕೊಂಡು ನಡೆದರೆ ಅಲ್ಲಿಯೂ ಶೂನ್ಯ. ಅವಳಿಗೆ ನನ್ನ ಮೇಲೆ ಅದೆಷ್ಟೇ ಕೋಪವಿದ್ದರೂ ನನ್ನ ಊಟ-ತಿಂಡಿಯ ವ್ಯವಸ್ಥೆಯನ್ನು ತಪ್ಪಿಸಲಾರಳು, ಅಡುಗೆ ಕೋಣೆಯಲ್ಲಿ ಇರಬಹುದು ಎಂದುಕೊಂಡರೆ ಅಲ್ಲಿಯೂ ಅವಳಿಲ್ಲ, ಅಥರ್ವನ ರೂಮ್ ಅನ್ನು ಹೇಗೆ ಮರೆತೆ? ಎಂದುಕೊಂಡು ಅವನ ರೂಮ್ ತೆರೆದರೆ ಅಲ್ಲಿಯೂ ಅವಳಿಲ್ಲ, ಅವಳು ಮಾತ್ರವಲ್ಲ ಅಥರ್ವ ಕೂಡಾ ಇಲ್ಲ. 
ಬೇಸರ ಕಳೆಯಲು ಇಬ್ಬರೂ ಎಲ್ಲಿಗೋ ಹೊರಗೆ ಹೋಗಿರಬಹುದು ಎಂದುಕೊಂಡು ತನ್ನಗೆ ತಾನೇ ಸಮಜಾಯಿಷಿ ಕೊಟ್ಟುಕೊಂಡು ಸುಮ್ಮನಾದ. 

ಅವನು ಶತಪತ ತಿರುಗುವುದನ್ನು ನೋಡಲೂ ಆಗದೆ, ಸುಮ್ಮನಿರಲೂ ಆಗದೆ, ಏನು ಮಾಡಬೇಕೆಂದು ತಿಳಿಯದೆ ಸುಮ್ಮನಿದ್ದ ಗಿರಿಜಮ್ಮ ಈಗ ಬಾಯ್ಬಿಟ್ಟರು. "ಅಮ್ಮವ್ರು ಮತ್ತೆ ಅಥರ್ವ ಬ್ಯಾಗ್ ತಗೊಂಡು ಎಲ್ಲೋ ಹೋದ್ರು. ಅವರು ನಿಮ್ಮ ಜೊತೆಗೇ ಎಲ್ಲೋ ಹೊರಟಿರಬೇಕು ಅಂತಾ ಸುಮ್ಮನಾದೆ." ಎಂದು ಹೇಳಿ ಸುಮ್ಮನೆ ಒಳ ಹೋದರು ಗಿರಿಜಮ್ಮ.

ಅಶುತೋಷ್ ನಿಗೆ ಏನು ಮಾಡಬೇಕು, ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ಸುಮ್ಮನೆ ಕುಸಿದು ಕುಳಿತ. ಮನಸ್ಸಿನಲ್ಲಿ ಏನೇನೋ ಬೇಡದ ಆಲೋಚನೆಗಳು ಸುಳಿದು ಮರೆಯಾಗುತ್ತಿದ್ದವು. ಹಾಗೆಲ್ಲಾ ಏನೂ ಆಗಿರಲಾರದು ಎಂಬ ಸಣ್ಣ ಭರವಸೆಯ ಕಿಡಿ ಹೊತ್ತಿಸಿಕೊಂಡು ಡೈರಿ ತೆರೆದು ಕುಳಿತ.

ಮನಸ್ಸಿನ ಆಲೋಚನೆಗಳು ಮಾತಾಗುತ್ತಿದ್ದದ್ದು ಡೈರಿಯ ಪುಟಗಳಲ್ಲಿ. ಅವನ ಬದುಕಿನ ಮಹಾರಹಸ್ಯಗಳು, ಅಳು-ನಗು, ಸೋಲು-ಗೆಲುವು, ಕಷ್ಟ-ಸುಖ ಎಲ್ಲದಕ್ಕೂ ಸಾಕ್ಷಿಯಾಗಿದ್ದು, ಅವನ ಮೆಚ್ಚಿನ ಗೆಳೆಯ ಅವನ ಡೈರಿ. 

"ಮಹಾ ಕೋಪದ ಉರಿಯನ್ನು
ತಡೆದುಕೊಂಡವಳಿಗೆ 
ಶೀತಲತೆ ಕಷ್ಟವಾಯಿತೇ..?
ಬಂದುಬಿಡೆ ಸಿರಿಗೌರಿ
ನನ್ನ ಬದುಕಿನ 
ಪ್ರತಿ ಉಸಿರಿನ ಸ್ವರವಾಗಿ
ಸಿರಿಗೌರಿಯಿಲ್ಲದ ಶಿವ
ಆತ್ಮವಿಲ್ಲದ ಪ್ರಾಣದಂತೆ"

ಏನಾದರೂ ಕಳೆದು ಹೋದರೆ ಅದರ ಹಿಂದೆ ಒಂದು ಮಹತ್ತರ ಕಾರಣ ಇರುವುದಂತೆ ಅಥವಾ ಅದಕ್ಕಿಂತ ಬೆಲೆ ಬಾಳುವುದು ನಮಗಾಗಿ ಕಾಯುತ್ತಿರುವುದಂತೆ. ನನ್ನನ್ನು ಹುರಿದುಂಬಿಸಲು ನೀನು ನನಗೆ ಆಗಾಗ ಹೇಳುತ್ತಿದ್ದ ಮಾತು ಇದು. ಆದರೆ, ನಾವಾಗಿಯೇ ಕಳೆದುಕೊಂಡರೆ.. ? ಕೈಯಲ್ಲಿ ರತ್ನವಿದ್ದಾಗ ಅದರ ಬೆಲೆ ತಿಳಿಯದೆ ಹಲವರು ನಂತರ ಅದನ್ನು ಕಳೆದುಕೊಂಡ ಮೇಲೆ ಹುಡುಕುತ್ತಾರೆ. ನನಗೆ ನಿನ್ನ ಬೆಲೆ ತಿಳಿದಿತ್ತು, ಉಳಿಸಿಕೊಳ್ಳಲಾಗದ ಅನಿವಾರ್ಯತೆ ನನ್ನನ್ನು ಕಾಡುತ್ತಿತ್ತು. ನನ್ನ ಮನದ ಮಾತುಗಳನ್ನು ಹೇಳದೆಯೇ ಅರ್ಥೈಸಿಕೊಳ್ಳುತ್ತಿದ್ದೆ, ನನ್ನ ಆಲೋಚನಾ ಲಹರಿಯಲ್ಲಿಯೇ ನಿನ್ನ ಆಲೋಚನಾ ಲಹರಿ ಸಾಗುತ್ತಲಿತ್ತು, ನನ್ನ ಬಲಗೈ, ಬಲ ಮೆದುಳು, ನನ್ನ ಬದುಕಿನರ್ಧವೇ ನೀನಾಗಿದ್ದೆ. ಇದೊಂದು ವಿಚಾರದಲ್ಲಿ ಯಾಕೆ ನನ್ನ ಮನದ ಮಾತನ್ನು ಕೇಳಿಸಿಕೊಳ್ಳದೆ ಹೋದೆ ? 

ಒಮ್ಮೆ ಅನುಭವಿಸಿದ ನೋವನ್ನು ನಾನು ಮತ್ತೊಮ್ಮೆ ಅನುಭವಿಸಲು ಸಿದ್ಧನಿಲ್ಲ, ಯಾಕೆಂದರೆ, ಆಗ ನೋವಿನಿಂದ ಹೊರಬರಲು ನನ್ನೊಡನೆ ನೀನಿದ್ದೆ. ಆದರೆ ಈಗ..?

ನನ್ನ ಗತದ ಅರಿವಿದ್ದೂ ನೀನು ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದೆ. ಆದರೆ, ನೀನು ನನ್ನನ್ನು ಅರ್ಥವೇ ಮಾಡಿಕೊಳ್ಳಲಿಲ್ಲವೇ..?

ಅಶುತೋಷ್ ನ ಬರಹ ಹೀಗೇ ಮುಂದುವರಿಯುತ್ತಿತ್ತು. ಅವನ ಬರಹಕ್ಕೆ, ಭಾವದ ಅಣೆಕಟ್ಟಿಗೆ, ಆಲೋಚನಾ ಲಹರಿಗೆ ತಡೆಯೊಡ್ಡಿದ್ದು ಆ ಫೋನ್ ಕಾಲ್.

(ಸಶೇಷ)

(ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಮುಂದಿನ ಬರಹಕ್ಕೆ ನಿಮ್ಮ ಪತಿಕ್ರಿಯೆಗಳೇ ಸ್ಫೂರ್ತಿ)

~ವಿಭಾ ವಿಶ್ವನಾಥ್


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ