ಎಷ್ಟೇ ಆಪ್ತರಿದ್ದರೂ ಹೇಳಿಕೊಳ್ಳದ್ದು ಏನೋ ಒಂದು ಉಳಿದೇ ಇರುತ್ತದೆ. ನಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರೊಡನೆ ಹಂಚಿಕೊಳ್ಳಲು ಅಥವಾ ಅವರಿಂದ ಸಲಹೆ ಪಡೆದುಕೊಳ್ಳಲು ಕಾತುರದಿಂದ ಕಾಯುತ್ತೇವೆ. ಪರಿಚಿತರೊಡನೆ ಹಂಚಿಕೊಂಡಷ್ಟೂ ಅದು ಮತ್ತೆಲ್ಲೋ, ಮತ್ತಾರಿಗೋ, ಮತ್ತೆ ಎಂದಾದರೂ ಯಾವುದೋ ರೂಪದಲ್ಲಿ ತೊಡಕಾದರೆ ಎಂಬ ಅಳುಕು ಮನಸ್ಸಲ್ಲಿ ಇದ್ದೇ ಇರುತ್ತದೆ. ಹಲವು ವಿಚಾರಗಳನ್ನು ಹೇಳಿಕೊಳ್ಳದಿದ್ದಾಗಲೂ ಮತ್ತೆ ಯಾರದ್ದೋ ಸಮಸ್ಯೆಯೋ, ಮತ್ತೆ ಯಾರಿಗೋ ನೀಡಿದ ಸಲಹೆಯೋ ನಮ್ಮಲ್ಲಿ ಭರವಸೆ ಹೊತ್ತಿಸುತ್ತದೆ.
ಬರಹದ ಗೆಳತಿ 'ಸಖಿ' ನಿಮ್ಮೆಲ್ಲಾ ಸಂಧರ್ಭದಲ್ಲಿ ಆಸರೆಯಾಗುತ್ತಾಳೆ. ಹೇಳಿಕೊಳ್ಳದ ನಿಮ್ಮ ಎಷ್ಟೋ ಭಾವನೆಗಳಿಗೆ ಕಿವಿಯಾಗುತ್ತಾಳೆ. ನಿಮ್ಮ ಅಮ್ಮನ, ಮಗಳ, ಗೆಳತಿಯ, ಸೋದರಿಯ, ಪ್ರೇಯಸಿಯ, ಹೆಂಡತಿಯ ಹೀಗೆ ಹಲವಾರು ಮನಸ್ಸಿನ ಮಾತನ್ನು ತೆರೆದಿಡುತ್ತಾಳೆ. ಭರವಸೆ ತುಂಬುತ್ತಾಳೆ. ಮನಸ್ಸಿನ ಭಾರವನ್ನು ಕಡಿಮೆ ಮಾಡುತ್ತಾಳೆ. ಸಲಹೆ ನೀಡುತ್ತಾಳೆ. ಇದು ಯಾರೋ ಒಬ್ಬರ ಮನದ ಭಾವವಲ್ಲ, ಇದೇ ಭಾವಗಳು ರಂಗನ್ನು ಹೊತ್ತು ಹಲವಾರು ವಿಧದಲ್ಲಿ ಸುಳಿದಾಡುತ್ತಿರುತ್ತವೆ. ಆದರೆ, ನಾವು ಅದಕ್ಕೆ ಹೆಚ್ಚಿನ ಗಮನ ನೀಡಿರುವುದಿಲ್ಲ. ಆದರೆ, ಸಮಸ್ಯೆ ನಮಗೆ ಬಂದಾಗ .. ?
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುತ್ತದೆ. ಮತ್ತೊಬ್ಬರ ಸಮಸ್ಯೆಯೂ ಚಿಕ್ಕದಾಗಿಯೇ ಕಾಣುವುದಲ್ಲವೇ.. ? ಮತ್ತೊಬ್ಬರಿಗೆ ಪ್ರೇರಣೆ ನೀಡುವುದು ಬಹು ಸುಲಭ. ಆದರೆ, ನಮಗೆ ನಾವೇ ಪ್ರೇರಣೆಯಾಗಬೇಕು. ಆ ನಿಟ್ಟಿನಲ್ಲಿ ಸಖಿ ನಿಮ್ಮ ಜೊತೆ ನಿಲ್ಲುತ್ತಾಳೆ. ನಗುವಾಗ ಊರೆಲ್ಲಾ ನೆಂಟರು, ಸಮಸ್ಯೆ ಬಂದಾಗಲೇ ಅಲ್ಲವೇ ನಮ್ಮವರು ಯಾರು ಎಂಬ ಅರಿವಾಗುವುದು.
ಸಖಿಯ ಮಾತುಗಳು ಎಲ್ಲರಿಗೂ ಉಪಯೋಗಕ್ಕೆ ಬರುತ್ತದೆ ಎಂದೆ. ಅದನ್ನು ಅರ್ಥೈಸಿಕೊಂಡು ಅಳವಡಿಸಿಕೊಂಡು ಹೋಗುವುದು ನಿಮಗೆ ಬಿಟ್ಟದ್ದು.
ನಿಮಗೊಂದು ಪುಟ್ಟ ಕಥೆ ಹೇಳುವೆ. ಕೇಳಿ..
ಪುಟ್ಟದೊಂದು ತೋಟದ ಮನೆಯಲ್ಲಿ ನೆಮ್ಮದಿಯಿಂದ ರೈತಪ್ಪ, ರೈತಮ್ಮ ವಾಸವಾಗಿರುತ್ತಾರೆ. ನೆಮ್ಮದಿಯಾಗಿರುವಾಗ ನೆಮ್ಮದಿ ಕೆಡಿಸಲು ಯಾರೋ ಒಬ್ಬರು ಇದ್ದೇ ಇರುತ್ತಾರೆ. ಅಲ್ಲವೇ..? ಎಲ್ಲವೂ ಸರಿಯಿದ್ದರೆ ಕಥೆಗೆ ಬೆಲೆಯೆಲ್ಲಿ ? ಇಲ್ಲಿ ಇವರ ನೆಮ್ಮದಿ ಕೆಡಿಸಿದ್ದು ಒಂದು ಸುಂಡಿಲಿ. ಈ ಇಲಿ ಕಾಟ ತಡೆಯುವುದಕ್ಕಾಗದೆ ರೈತಪ್ಪ, ರೈತಮ್ಮ ಎಷ್ಟೋ ಉಪಾಯ ಮಾಡಿದರೂ ಇಲಿ ಸಿಗದೆ ನುಣಿಚಿಕೊಂಡು ಹೋಗುತ್ತಲೇ ಇತ್ತು.. ಕಡೆಗೆ ರೈತಮ್ಮನ ತಲೆಗೊಂದು ಉಪಾಯ ಹೊಳೆದೇ ಬಿಟ್ಟಿತು. ಅದನ್ನು ರೈತಪ್ಪನಿಗೆ ಹೇಳುವಾಗ ಈ ಇಲಿ ಕೂಡಾ ಅದನ್ನು ಕೇಳಿಸಿಕೊಂಡಿತು. ಈ ಇಲಿಗೆ ಆಹಾರದಲ್ಲಿ ವಿಷ ಬೆರೆಸಿ ಇಟ್ಟು ಅದನ್ನು ಸಾಯಿಸಿ ಬಿಡೋಣ ಎಂದು.
ಈ ಉಪಾಯ ಕೇಳಿಸಿಕೊಂಡ ಇಲಿಗೆ ರಾತ್ರಿ ಇಡೀ ನಿದ್ದೆ ಬರಲಿಲ್ಲ, ಪ್ರಾಣಭಯ ಎಲ್ಲರಿಗೂ ಇರುವುದೇ ಅಲ್ಲವಾ? ಅದು ಇಲಿಯಾದರೂ ಅಷ್ಟೇ, ಹುಲಿಯಾದರೂ ಅಷ್ಟೇ.. ಬೆಳಿಗ್ಗೆಯಾಗುತ್ತಿದ್ದಂತೆ ಕೋಳಿ ಕೂಗುವ ಧ್ವನಿ ಕೇಳಿಸಿತು. ಕೋಳಿ ಹತ್ತಿರ ಕೇಳಿದರೆ ಇದಕ್ಕೇನಾದರೂ ಸಲಹೆ ದೊರೆಯಬಹುದು ಎಂದು ಕೋಳಿಯ ಬಳಿ ಕೇಳಿದರೆ "ನಿನಗೆ ತೊಂದರೆ ಬಂದರೆ ನಾನ್ಯಾಕೆ ಉಪಾಯ ಯೋಚಿಸಬೇಕು? ನನಗಂತೂ ಏನೂ ತೊಂದರೆ ಇಲ್ಲಪ್ಪಾ" ಎನ್ನುತ್ತಾ ಇಲಿಯನ್ನು ನಿರ್ಲಕ್ಷಿಸಿ ಆಹಾರ ಹುಡುಕುತ್ತಾ ಹೊರಟಿತು.
ಇಲಿಗೆ ಬೇಜಾರಾಗಿ ಅದು ಹಾಗೇ ಮುಂದುವರಿಯುತ್ತಿರುವಾಗ ಕುರಿ ಕಾಣಿಸಿತು. "ಕುರಿಯಣ್ಣಾ, ನನ್ನನ್ನು ಕಾಪಾಡು. ನನ್ನ ತೊಂದರೆಗೆ ಸಲಹೆ ನೀಡು" ಎನ್ನುತ್ತಾ ತನ್ನ ತೊಂದರೆಯನ್ನು ವಿವರವಾಗಿ ಹೇಳಿದರೆ, ದಿವ್ಯ ನಿರ್ಲಕ್ಷ್ಯದಿಂದ ಕುರಿ "ನಿನ್ನ ತೊಂದರೆ ನಿನ್ನದು, ನಾನಂತೂ ಆರಾಮವಾಗಿ ಇದ್ದೇನೆ. ರೈತಪ್ಪ ನನ್ನನ್ನಂತೂ ಏನೂ ಮಾಡಲ್ಲ, ನನಗಷ್ಟು ಸಾಕು" ಎನ್ನುತ್ತಾ ಮೇವು ಮೆಲುಕು ಹಾಕುವ ಕಾರ್ಯವನ್ನು ಮುಂದುವರಿಸಿತು.
ಇಲಿಗೆ ಆ ತೋಟದ ಮನೆಯಲ್ಲಿ ಇದ್ದದ್ದು ಮೂರೇ ಗೆಳೆಯರು. ಇಬ್ಬರಂತೂ ಆಗಲೇ ಕೈ ಕೊಟ್ಟು ಆಗಿತ್ತು. ಉಳಿದದ್ದು ಹಂದಿರಾಯ ಮಾತ್ರ. ಕೊನೆಯ ಭರವಸೆಯ ಆಶಾ ಕಿರಣದೊಂದಿಗೆ ಅಲ್ಲಿಗೆ ಹೋದರೆ ಹಂದಿರಾಯ ಕೂಡಾ ಏನೂ ಸಹಾಯ ಮಾಡದೆ. ತೊಂದರೆ ನನಗಲ್ಲ ಎಂದು ಕಳುಹಿಸಿ ಬಿಟ್ಟ.
ಎಲ್ಲರೂ ಕೈ ಚೆಲ್ಲಿ ಕುಳಿತಾಗ ಇಲಿ ತನ್ನ ಹುಷಾರಲ್ಲಿ ತಾನಿರಬೇಕು ಎಂದು ತೀರ್ಮಾನ ಮಾಡಿಕೊಂಡು ರೈತಮ್ಮ ಇಟ್ಟ ಊಟವನ್ನು ಮಾಡದೆ ಸುಮ್ಮನಿರಬೇಕೆಂದು ತೀರ್ಮಾನಿಸಿತು. ಇತ್ತ ರೈತಮ್ಮ ಇಲಿಗೆ ವಿಷ ಹಾಕಿ ಕೈಯನ್ನು ಸರಿಯಾಗಿ ತೊಳೆದುಕೊಳ್ಳದೆ ಊಟ ಮಾಡಿದ್ದರಿಂದ ವಿಷ ಅವಳ ಹೊಟ್ಟೆ ಸೇರಿತು. ರೈತಪ್ಪ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಅವಳಿಗೆ ಚಿಕಿತ್ಸೆ ನೀಡಿಸಿ ಮನೆಗೆ ಕರೆದುಕೊಂಡು ಬಂದ.
ಅವಳು ಮನೆಗೆ ಬಂದ ಮೇಲೆ ಅವಳನ್ನು ನೋಡಲು ಅವಳ ತಂದೆ-ತಾಯಿ ಬರದಿದ್ದರೆ ಹೇಗೆ? ಅವರು ಬಂದ ಮೇಲೆ ಕೋಳಿ ಕೊಯ್ದು ಔತಣ ನೀಡದಿದ್ದರೆ ಹೇಗೆ ? ಹಾಗಾಗಿ ಮನೆಯಲ್ಲಿದ್ದ ಕೋಳಿ ಬಲಿಯಾಯ್ತು.
ಆನಂತರ ಬಹಳ ಹತ್ತಿರದ ಸಂಬಂಧಿಕರು ಬಂದರು ಅವರ ಊಟಕ್ಕೆ ಕುರಿ ಬಲಿಯಾಯ್ತು. ಬಾಯಿಂದ ಬಾಯಿಗೆ ರೈತಮ್ಮನ ಕತೆ ಹಬ್ಬಿ ಉರವರೆಲ್ಲಾ ನೋಡಲು ಬಂದರು. ಅವರ ಊಟಕ್ಕೆ ಹಂದಿಯೂ ಬಲಿಯಾಯ್ತು.
ಇಷ್ಟೆಲ್ಲಕ್ಕೂ ಕಾರಣವಾದ ಇಲಿ ಇದನ್ನೆಲ್ಲಾ ನೋಡುತ್ತಾ ನಿಟ್ಟುಸಿರು ಬಿಟ್ಟು ಸುಮ್ಮನಾಯಿತು.
ಸಮಸ್ಯೆ ನಮ್ಮದಲ್ಲಾ ಎಂದುಕೊಂಡವರೆಲ್ಲಾ ಸಮಸ್ಯೆಗೆ ಬಲಿಯಾದರು. ಸಮಸ್ಯೆ ಬಂದಾಗ ಕೊಂಚ ಜಾಗರೂಕತೆಯಿಂದ ನಡೆದುಕೊಂಡವರು ಬಚಾವಾದರು.
ಎಲ್ಲವೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ.
ಸಖಿಯ ಮೂಲಕ ಇನ್ನು ಮುಂದೆ ಈ ರೀತಿಯ ಬರಹಗಳನ್ನು ನಿರೀಕ್ಷಿಸಬಹುದು.
(ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಿ.)
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ