ಬುಧವಾರ, ಆಗಸ್ಟ್ 23, 2017

ವೇಣುಗಾನದ ಮೋಡಿ...

ನಿನ್ನ ವೇಣುಗಾನದಿ ಎಂಥ ಮೋಡಿಯೋ?
ಮರುಳಾಗಿದೆ ಮನ ಆ ನಿನ್ನ ಗಾನಕೆ
ಎಲ್ಲಾ ಚಿಂತೆಗಳ ಮರೆತು ಕುಳಿತು,
ಎಲ್ಲಾ ಬಿಗುಮಾನಗಳ ಬಿಟ್ಟು ಆಲಿಸೆ...
ಮನದ ನೋವೆಲ್ಲವೂ ಮರೆವುದು.
ಹಿರಿಯ-ಕಿರಿಯರೆಲ್ಲರಿಗೂ ಚೈತನ್ಯದ ಚಿಲುಮೆಯು,
ನಿನ್ನ ಕೊಳಲ ಗಾನದುಲಿಗೆ ಸರಿಸಾಟಿ ಯಾರಿಹರು?
ಬಾಳಿನಲಿ ಹೊಸ ಹರ್ಷ ನೀಡುವ ಗಾನಕೆ,
ಮನಸೋತಿಹೆವು ನಿನ್ನ ಮಾಂತ್ರಿಕ ಸ್ಪರ್ಷಕೆ
ಇಂಪಾದ ದನಿಯಲಿ ಎಲ್ಲರಿಗೂ ಮಾಡಿರುವೆ ಮೋಡಿ
ಹಾತೊರೆಯುತಿದೆ ಮನ ಮತ್ತದೇ ಗಾನಕೆ... 
ಮುಗಿದ ನಿನ್ನ ಮುರಳಿಗಾನ ಕೂಡ ಧ್ವನಿಸುತಿಹುದು ಇಲ್ಲಿಯೇ,
ಮತ್ತೆ,ಮತ್ತೆ  ಭ್ರಮಿಸುತಿರುವೆವು ನೀ ಇಲ್ಲೇ ಇರುವೆಯೆಂದು
ನೀಲ ವರ್ಣ, ನವಿಲುಗರಿ, ಕೈಯ್ಯಲ್ಲೊಂದು ಕೊಳಲು
ನೀಲ ಶ್ಯಾಮನ ಗಾನಕೆ ಸ್ವರ್ಗವೇ ಇಳೆಗಿಳಿದಿದೆ.
ಸುಪ್ತ ಭಾವಗಳೂ ಗರಿಗೆದರಿ ನರ್ತಿಸುತ್ತಲಿವೆ...
ಮನದೆಲ್ಲಾ ಕಾರ್ಮೋಡಗಳು ಕರಗಿ ಕಂಬನಿಯಾಗಿವೆ
ನಿನ್ನ ಗಾನದ ಮೋಡಿಗೆ, ಸಕಲ ಸೃಷ್ಟಿಯೂ ಸಿಲುಕಿದೆ 
                                                        -vಭಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ