ಬಾಲ್ಯವಿವಾಹದ ಕುಣಿಕೆಗೆ ದೂಡದಿರಿ ಎಂದಿಗೂ
ಕಲಿಕೆಯ ತೊರೆಸಿ ಸೆರೆಯಾಳಾಗಿಸದಿರಿ ಎಂದಿಗೂ
ಪೆನ್ನು ಪುಸ್ತಕ ಹಿಡಿವ ಪುಟ್ಟ ಕೈಗಳನು
ಅನ್ಯಾಯವಾಗಿ ದೂರ ಸರಿಸದಿರಿ ಎಂದಿಗೂ
ಮುಗ್ದ ಮನಗಳು ಕಟ್ಟಿದ ಕಲಿಯುವ ಕನಸ
ಚಿವುಟಿ ಹಾಕಿ ಘಾಸಿಗೊಳಿಸದಿರಿ ಎಂದಿಗೂ
ಚಿನ್ನದ ಮಾಂಗಲ್ಯದ ಸಂಕೋಲೆ ತೊಡಿಸಿ
ಬಾಳನೇ ಹೊನ್ನ ಶೂಲಕ್ಕೇರಿಸದಿರಿ ಎಂದಿಗೂ
ಗೋರಂಟಿಯಿಂದ ಕೈ ಕೆಂಪು ಮಾಡಲು ಹೋಗಿ
ಬಾಲ್ಯಹರಣ ಮಾಡಿ ನರಳಿಸದಿರಿ ಎಂದಿಗೂ
ಓಡುವ-ಓದುವ ಮನದಾಸೆಯನು ಕಟ್ಟಿ ಹಾಕಿ
ಹೆಣ್ಣು ಮಕ್ಕಳ ಖೈದಿಗಳನಾಗಿಸದಿರಿ ಎಂದಿಗೂ
ಮಣ್ಣಲಿ ಆಡುವ ಮಗಳ ಹಸೆಮಣೆಗೇರಿಸಿ
ಶಿಕ್ಷಣದ ಬಾಳಿಗೆ ಮಣ್ಣು ಹಾಕದಿರಿ ಎಂದಿಗೂ
ವಿಭಾಳ ಈ ಮನವಿಗೆ ಬೆಂಬಲಿಸುವಿರಾದರೆ
ಬಾಲ್ಯವಿವಾಹಕೆ ಪ್ರೋತ್ಸಾಹಿಸದಿರಿ ಎಂದಿಗೂ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ