ಶನಿವಾರ, ಮೇ 30, 2026

ಮನಸ್ಸಿನಂತೆ ಮಹಾದೇವ (ಬೆಳಕಿಂಡಿಯ ಕತೆಗಳು - 27)


 "ಶುಭ ಶುಕ್ರವಾರ ಎಂದು ಸ್ಪೆಷಲ್ ಏನಿಲ್ಲ, ಎಲ್ಲಾ ವಾರದಂತೆ ಇದೂ ಒಂದು ದಿನ ಅಷ್ಟೇ.. ಈ ಇಂಟರ್ವ್ಯೂ ಕೂಡಾ ಆಗಲಿಲ್ಲ ಅಮ್ಮ" ಎಂದು ಒಬ್ಬ ಮಗ ಬಂದರೆ


"ಶುಭ ಶುಕ್ರವಾರ ಎಂದುಕೊಂಡಿದ್ದೆ, ಶುಭವೇ ಆಗಿ ಇಂಟರ್ವ್ಯೂ ಪಾಸ್ ಆಯ್ತು. ಆಶೀರ್ವಾದ ಮಾಡಮ್ಮ" ಎಂದು ಬಂದ ಇನ್ನೊಬ್ಬ ಮಗ.


ಅವಳಿಗಳಾದರೂ ಯೋಚನೆಯಲ್ಲಿ ತದ್ವಿರುದ್ಧದ ಮಕ್ಕಳಿಗೆ

"ಶುಭ- ಅಶುಭ ವಾರದ ದಿನಗಳಲ್ಲಿಲ್ಲ. ನಿಮ್ಮ ಮನಸ್ಸಿನ ಆಲೋಚನೆಯಲ್ಲಿದೆ. ಮನಸ್ಸಿನಂತೆ ಮಹಾದೇವ. ಇಬ್ಬರಿಗೂ ಒಳ್ಳೆಯದಾಗಲಿ" ಎಂದು ಹರಸಿದರು. ಇಬ್ಬರೂ ಮತ್ತಷ್ಟು ಪಾಸಿಟಿವ್ ಆಲೋಚನೆ ಜೊತೆಗೆ ಮ್ಯಾನಿಫೆಸ್ಟೇಷನ್ ಕುರಿತು ಚರ್ಚಿಸುತ್ತಿದ್ದಾರೆ ಈಗ.

~ವಿಭಾ ವಿಶ್ವನಾಥ್

ಕಾಮನಬಿಲ್ಲಿನಂತಹ ದಿನ (ಬೆಳಕಿಂಡಿಯ ಕತೆಗಳು - 26)

 


ಅವಳ ಬದುಕಲ್ಲಿ ಅಂಥದೊಂದು ದಿನವಿತ್ತು. ಮತ್ತದು ಮೆಲುಕು ಹಾಕುವಂತಹ ಕಾಮನಬಿಲ್ಲಿನಂತಹ ದಿನ. ತಾನು ಸಾಕಷ್ಟು ನೋವುಂಡು ಅತ್ತ ದಿನ ಅಂತೆಯೇ ಸಾಕಷ್ಟು ಸಂಭ್ರಮಿಸಿದ ದಿನ. 

ತನ್ನಿಷ್ಟದಂತೆಯೇ ಮಗಳು ಮಡಿಲು ತುಂಬಿ ನೋವನ್ನು ಕ್ಷಣಮಾತ್ರದಲ್ಲಿ ಮರೆಸಿದ ದಿನ. ಅಮ್ಮನಾಗಿ ಅವಳು ಮರುಜನ್ಮ ಪಡೆದ ದಿನ.

~ವಿಭಾ ವಿಶ್ವನಾಥ್

ಗ್ರೋಥ್ (ಬೆಳಕಿಂಡಿಯ ಕತೆಗಳು - 25)


ಬೇಕು ಬೇಡಗಳ ನಡುವೆ ಹೈರಾಣಾಗಿದ್ದ ನನ್ನನ್ನು ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದು ಹಿಂದಿನಿಂದ ಬಳಸಿದ ಪುಟ್ಟ ಕೈಗಳ ಒಡತಿಯೇ..! ಸಂಬಳ, ಮಗುವಿನ ಖರ್ಚಿನ ಚಿಂತೆಯಿಲ್ಲದಿದ್ದರೂ.. ಕೆರಿಯರ್ ಗ್ರೋಥ್ ಬೇಕೋ ಬೇಡವೋ ಎಂದು ಪದೇ ಪದೇ ಎಚ್ಚರಿಸುತ್ತಿದ್ದ ಮೇಲ್, ಮೆಸೇಜ್ ಗಳನ್ನು ಮಂಕಾಗಿಸುವಂತೆ ಮಾಡಿದ್ದು ಮುದ್ದು ಮಗಳ ಮಂದಹಾಸಭರಿತ ನೆಮ್ಮದಿಯ ನಿದ್ರೆ. ಈಗ ಅವಳ ನೆಮ್ಮದಿಯನ್ನು ದುಪ್ಪಟ್ಟಾಗಿಸಿ ಮಗಳ ಗ್ರೋಥ್ ಜೊತೆಗೆ ಅಮ್ಮನ ಗ್ರೋಥ್ ಸಹ ಆಗುತ್ತಲಿದೆ. ಕೆರಿಯರ್ ಗ್ರೋಥ್ ತಡವಾಗಬಹುದು. ಆದರೆ, ಮಗಳ ಬಾಲಲೀಲೆಗಳು, ಬೆಳವಣಿಗೆ ಕಾಯುವುದಿಲ್ಲ. ಅಂತೆಯೇ ಕಾಲವೂ..!


~ವಿಭಾ ವಿಶ್ವನಾಥ್

ನಿಗೂಢ ನಡೆ (ಬೆಳಕಿಂಡಿಯ ಕತೆಗಳು - 24)


ವಾರದಿಂದ ಕೃತಿಗೆ ತನ್ನ ಗಂಡನ ನಡೆಯ ಮೇಲೆ ಅನುಮಾನ ಮೂಡಿತ್ತು. ತಾನು ಮಲಗಿದ ನಂತರ ಪಿಸುದನಿಯಲ್ಲಿ ಫೋನ್ ನಲ್ಲಿ ಮಾತನಾಡುವುದು, ತಾನು ಹೋದಾಗ ಸುಮ್ಮನಾಗುವುದು, ಆಫೀಸ್ ಅವಧಿಗಿಂತ ಮುನ್ನವೇ ಮನೆ ಬಿಡುವುದು, ಮನೆ ಸೇರುವುದು ಲೇಟಾದ ಸಂಧರ್ಭದಲ್ಲಿ ಮಾತು ತಪ್ಪಿಸುವುದು ಹೀಗೆ.. ತನ್ನ ಹುಟ್ಟುಹಬ್ಬದ ದಿನ ಹಾರೈಸುವುದಿರಲಿ.. ಮಾತೂ ಆಡದಂತೆ ಹೊರಟಾಗ ಅವನಿಗೆ ಗೊತ್ತಾಗದಂತೆ ಹಿಂಬಾಲಿಸಿ ಹೋಗಿ ನೋಡಿದಾಗ ತನ್ನ ಆಪ್ತ ಗೆಳತಿ ಪ್ರಿಯಾ ಜೊತೆಗೆ ಮಾತಿನಲ್ಲಿ ತೊಡಗಿದ್ದು ಕಂಡಿತು. ತನ್ನ ಅನುಮಾನಕ್ಕೆ ಪುಷ್ಠಿ ದೊರೆತಂತಾಗಿತ್ತು. ಬೇಡವೆಂದುಕೊಂಡರೂ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳ ಸರಮಾಲೆಯೇ..!


ತಂದೆ - ತಾಯಿ ನೋಡಿ ಮಾಡಿದ ವಿವಾಹಕ್ಕೆ ಆಯಸ್ಸು ಇಷ್ಟೆಯೇ..?! ಎಂದು ಆಲೋಚಿಸಿ ದುಃಖ ಪಟ್ಟಳಾದರೂ.. ಆತುರದಲ್ಲಿ ಹೋಗಿ ಪ್ರಶ್ನಿಸಲಿಲ್ಲ. ಯಾರ ಬಳಿಯೂ ಈ ವಿಚಾರ ಹಂಚಿಕೊಳ್ಳಲಿಲ್ಲ. ಅವನ ಒಳ್ಳೆಯತನ ನಾಟಕವೇ ಎಂದು ಯೋಚಿಸಿದಳಾದರೂ.. ಅಂತಹ ಯಾವುದೇ ಕಪ್ಪು ಚುಕ್ಕಿಯೂ ಕಾಣಲಿಲ್ಲ. ತಾನೇ ಮಾತನಾಡಿ ಬಗೆಹರಿಸಿಕೊಳ್ಳಲು ತೀರ್ಮಾನಿಸಿಕೊಂಡು ತಳಮಳದಿಂದಲೇ ಹೊರಟಳಾದರೂ.. ಅವಳಿಗೆ ಅಂತಹ ಪ್ರಮೇಯವೇ ಬರಲಿಲ್ಲ.


ಸಂಜೆ ಕುಟುಂಬ, ಸ್ನೇಹಿತರೊಂದಿಗೆ ಸಿಕ್ಕ ಹುಟ್ಟುಹಬ್ಬದ ವಿಶೇಷ ಪಾರ್ಟಿ ಅವನ ನಿಗೂಢ ನಡೆಗೆ ಉತ್ತರ ಕೊಟ್ಟಿತ್ತು. ಆತುರಪಟ್ಟು ಆತನ ಕಣ್ಣಲ್ಲಿ ಸಣ್ಣವಳಾಗಲಿಲ್ಲವಲ್ಲ ಎಂದು ಖುಷಿ ಪಟ್ಟಳು. ಅವನ ಮೇಲಿನ ಗೌರವ, ಪ್ರೀತಿಗಳು ದುಪ್ಪಟ್ಟಾಗಿದ್ದವು. ದಾಂಪತ್ಯದಲ್ಲಿ ನಂಬಿಕೆ, ತಾಳ್ಮೆಯ ಅಗತ್ಯ ಮನದಟ್ಟಾಗಿತ್ತು.


~ವಿಭಾ ವಿಶ್ವನಾಥ್

ಹೊಸದೊಂದು ಸಂಕಲ್ಪ (ಬೆಳಕಿಂಡಿಯ ಕತೆಗಳು - 23)


"ಇಂದಿನಿಂದ ನಾನು ನಿತ್ಯವೂ ತಪ್ಪದೇ ವಾಕಿಂಗ್ ಹೋಗುವ ಸಂಕಲ್ಪ ಮಾಡುತ್ತೇನೆ" ಎಂದವನ ಮಾತಿಗೆ

"ಈ ರೀತಿಯ ಸಂಕಲ್ಪ ವಾರಕ್ಕೊಂದಾದರೂ ಇರುತ್ತಲ್ಲಾ ನಿಮ್ಮದು" ಎಂದು ಛೇಡಿಸುತ್ತಾ ಬೊಟ್ಟು ಮಾಡಿದವಳಿಗೆ

"ನೀನು ಯಾವತ್ತಾದರೂ ಹೀಗೆ ಸಂಕಲ್ಪ ಮಾಡಿ ಏನಾದರೊಂದನ್ನು ಶುರು ಮಾಡು. ಆಗ ನಿನಗೆ ಇದರ ಕಷ್ಟದ ಅರಿವಾಗುತ್ತದೆ." ಎಂದ ಹುಸಿಮುನಿಸಿನಲ್ಲಿಯೇ..


"ಒಳ್ಳೆಯದನ್ನು ಆರಂಭಿಸಲು ಶುಭ ಕಾಲಕ್ಕಾಗಿ ಕಾಯುವವಳಲ್ಲ. ಸಂಕಲ್ಪ ಮಾಡಿಯೇ ಆರಂಭಿಸುವುದಿಲ್ಲ. ಶಿಸ್ತು, ಧೃಡ ನಿಶ್ಚಯ ಮಾತಿನಿಂದಲ್ಲ.. ಮನಸ್ಸಿನಿಂದ ಬರಬೇಕು." ಎಂದವಳ ಮಾತಿನ ಜೊತೆಗೆ ದಿನವೂ ಬಿಡದೆ ಕೆಲಸದ ಜೊತೆಗೆ ಮಾಡುವ ಎಷ್ಟೋ ಅಭ್ಯಾಸಗಳನ್ನು ನೆನಪಿಸಿಕೊಂಡ. ಮನೆಯ ಹೊರಗೆ ಹಾಗೂ ಒಳಗೆ ದುಡಿಯುವುದರ ಜೊತೆಗೆ ವ್ಯಾಯಾಮ, ವಾಕಿಂಗ್, ಪುಸ್ತಕ ಓದುವುದು, ಸಂಬಂಧಗಳನ್ನು ನಿಭಾಯಿಸುವ ಪರಿ ಎಲ್ಲವನ್ನೂ ಹೇಳದೆಯೇ ಅಚ್ಚುಕಟ್ಟಾಗಿ ಮಾಡುತ್ತಿರುವ ಅವಳ ದೈನಂದಿನ ಬದುಕಿನೆದುರಿಗೆ ತನ್ನ ಸೋಮಾರಿತನದ ಹಾಗೂ ಬಾಯಿ ಮಾತಿನ ಸಂಕಲ್ಪಕ್ಕೆ ನಾಚಿಕೆಯಾಯಿತು. ಹೆಚ್ಚಿನ ಮಾತು ಬೆಳೆಸದೆ ವಾಕಿಂಗ್ ಗೆ ತಯಾರಾದ.


~ವಿಭಾ ವಿಶ್ವನಾಥ್

ಬಾಳ ಮುಂಜಾವು (ಪುಸ್ತಕ ಯಾನ - 454)



ಪುಸ್ತಕದ ಶೀರ್ಷಿಕೆ : ಬಾಳ ಮುಂಜಾವು 

ಲೇಖಕರು : ಎಂ. ಕೆ. ಜಯಲಕ್ಷ್ಮಿ 

ಪ್ರಕಾಶಕರು : ಓಂ ಶಕ್ತಿ ಪ್ರಕಾಶನ

ಪ್ರಥಮ ಮುದ್ರಣ : 1963

ನಾಲ್ಕನೇ ಮುದ್ರಣ : 2008

ಪುಟಗಳು : 144

ಬೆಲೆ : 60 ರೂ. 


ಇದು ಮನೋವೈಜ್ಞಾನಿಕ ಕಾದಂಬರಿಯ ಸಾಲಿಗೆ ಸೇರುವ ಕಾದಂಬರಿ. ಶಾಂತ ಹಾಗೂ ಶ್ರೀರಂಗ ಎಂಬ ಇಬ್ಬರು ಹೆಣ್ಣು ಮಕ್ಕಳ ವಯಸ್ಸು ಒಂದೇ ಆದರೂ ಮನೆಯಲ್ಲಿನ ವಾತಾವರಣ ಅವರನ್ನು ಯಾವ ರೀತಿ ರೂಪಿಸುತ್ತದೆ ಎಂಬುದನ್ನು ಕಾಣಬಹುದು. ಶ್ರೀಕಂಠ ಹಾಗೂ ವರದರಾಜರ ಪಾತ್ರಗಳಲ್ಲಿಯೂ ಅದನ್ನು ಕಾಣಬಹುದಾದರೂ ಹೆಣ್ಣು ಮಕ್ಕಳ ಸೂಕ್ಷ್ಮತೆಯನ್ನು ಹೆಚ್ಚಾಗಿ ಗಮನಿಸಬಹುದು.


ಪಾರ್ವತಮ್ಮ ಹಾಗೂ ಶ್ರೀಪಾದರಾಯರ ಮಗಳು ಶಾಂತ. ಏಳು ವರ್ಷದ ಶಾಂತಳಿಂದ ಕಥೆ ಶುರುವಾಗುತ್ತದೆ. ಲವಲವಿಕೆಯ ಶಾಂತ ಪ್ರತಿಯೊಂದರಲ್ಲೂ ಮುಂದು. ಪಾದರಸಮಂತಿರುವ ಅವನನ್ನು ಕಂಡರೆ ತಂದೆ ತಾಯಿಗೆ ಹೆಮ್ಮೆ. 


ಶಾಂತ, ಪದ್ಮಾ, ಜಾನಕಿ ಹಾಗೂ ಶ್ರೀರಂಗ ಕೂಡಿ ಆಟವಾಡುತ್ತಿದ್ದರು. ಇವರಿಷ್ಟೂ ಜನರ ಸ್ನೇಹಕ್ಕೆ ಭಂಗ ತಂದದ್ದು ಮೀನಾಕ್ಷಿ. ಶ್ರೀಮಂತಿಕೆಯ ಪ್ರದರ್ಶನ ಮಾಡಿಕೊಂಡು ಜಂಬ ಪಡುತ್ತಾ, ಶಾಂತಳ ಮೇಲೆ ಪೈಪೋಟಿ ಮಾಡುತ್ತಾ, ಶ್ರೀರಂಗಳನ್ನು ತನ್ನ ಜೊತೆಗೆ ಹಾಕಿಕೊಂಡು ಶಾಂತನನ್ನು ಕುಗ್ಗಿಸುವುದರಲ್ಲಿ ಮುಂದಾಗುವ ಮೀನಾಕ್ಷಿಗೆ ಶಿಕ್ಷಕಿ ಶಾರದಮ್ಮನವರಿಂದ ಒಳ್ಳೆಯ ಪಾಠವೇ ಸಿಗುತ್ತದೆ. ಶಾರದಮ್ಮನಂತಹ ಶಿಕ್ಷಕಿಯರಿದ್ದರೆ ಮಕ್ಕಳ ಮನಸ್ಸು ವೈಮನಸ್ಸಿನಿಂದ ಕೂಡಿರಲಾರದು. 


ಇಂತಹ ಯಾವ ಕೆಟ್ಟತನಗಳೂ ಶಾಂತ ಹಾಗೂ ಶ್ರೀರಂಗರನ್ನು ಬೇರ್ಪಡಿಸಲಾಗದಂತೆ ಅವರ ಸ್ನೇಹ ಸಾಗುತ್ತಿತ್ತು. ಆದರೆ, ಮೀನಾಕ್ಷಿ ಬದಲಾಗುವಂತಿರಲಿಲ್ಲ. 


ಶಾಂತಳ ಅಣ್ಣ ಶ್ರೀಕಂಠ. ಇವರಿಬ್ಬರ ಬಾಂಧವ್ಯವನ್ನು ಓದುತ್ತಿದ್ದರೆ ಆಹ್ಲಾದಮಯ. ಮನೆಯಲ್ಲಿ ಗಂಡು-ಹೆಣ್ಣು ಎಂದು ಭೇದ ಮಾಡದೆ, ಇಬ್ಬರಿಗೂ ಸಮಾನವಾದ ಪ್ರೀತಿ ಕೊಟ್ಟು ಮೇಲು-ಕೀಳುಗಳನ್ನು ತೊಡೆದು ಹಾಕಿದವರು ತಂದೆ-ತಾಯಿ. ಶಾಂತಳನ್ನು ಕಂಡರೆ ಒಂದು ಕೈ ಹೆಚ್ಚು ಪ್ರೀತಿಯೆಂದರೂ ತಪ್ಪಾಗಲಾರದು. ಶ್ರೀಕಂಠ ಹಾಗೂ ರಾಮಕೃಷ್ಣರ ಸ್ನೇಹವೂ ಸೊಗಸಾಗಿದೆ. 


ಆದರೆ, ಇಲ್ಲಿ ಶ್ರೀರಂಗಳ ಅಣ್ಣ ವರದರಾಜ್ ನ ಮುಂಗೋಪಿತನ, ಹೆಣ್ಣುಮಕ್ಕಳ ಕುರಿತ ಅಸಡ್ಡೆ, ಶ್ರೀರಂಗಳನ್ನು ಗೋಳು ಹುಯ್ದುಕೊಳ್ಳುವುದು ಎಲ್ಲವೂ ಅವನನ್ನು ಸೈಂಧವ ಎಂದು ಕರೆಸಿಕೊಳ್ಳುವಂತೆ ಮಾಡಿದ್ದವು. 


ವರದರಾಜನ ವರ್ತನೆ ಶ್ರೀರಂಗಳ ಮೇಲೆ ನೇರವಾಗಿ ಪರಿಣಾಮ ಬೀರಿತ್ತು. ಮನೆಯ ಪರಿಸರವೂ ಅದಕ್ಕೆ ಕಾರಣವಾಗಿತ್ತು. ಶ್ರೀರಂಗಳ ತಂದೆ ನಾರಾಯಣಾಚಾರ್ ಈಗಾಗಲೇ ಐದು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಹಣ್ಣಾಗಿದ್ದರು. ಶ್ರೀರಂಗಳ ನಂತರ ಇನ್ನೂ ಮೂರು ಹೆಣ್ಣಿದ್ದವು. ಮಗನಾದ್ದರಿಂದ ಅವನ ಮೇಲೆ ಅತಿ ಎನ್ನಿಸುವಷ್ಟೇ ಅಸ್ಥೆ. ಅವಳ ತಾಯಿ ಲಕ್ಷ್ಮಮ್ಮನವರು ಸಹ ಕಟುವಾಗಿ ನಡೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಈಕೆ ತನ್ನ ತಾಯಿಯೇ ಎಂದು ಅನುಮಾನ ಬರುತ್ತಿತ್ತು ಶ್ರೀರಂಗಳಿಗೆ. ಅದು ಅವಳ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತಿತ್ತು ಸಹ. 


ಸೂಕ್ಷ್ಮ ಮನಸ್ಸಿನ ಶ್ರೀರಂಗ ಮನೆಯಲ್ಲಿ ಅನಾದರ ಹೆಚ್ಚಾದಷ್ಟು ಮೊಂಡಿಯಾಗುತ್ತಾ, ಕಟುವಾಗುತ್ತಾ ಹೋಗುತ್ತಿದ್ದಳು. ಅವಳ ಮನಸ್ಸಿನ ಮೇಲೆ ಘಾಸಿಯಾಗುತ್ತಿದ್ದದ್ದು ಮನೆಯಲ್ಲಿ ಯಾರಿಗೂ ಅರಿವಾಗಲೇ ಇಲ್ಲ. ಅದರ ಬದಲಾಗಿ ಶ್ರೀರಂಗಳನ್ನು ದೂರವಿಟ್ಟು, ಶಿಕ್ಷೆ ಕೊಟ್ಟು ಸರಿ ಮಾಡಲು ನೋಡುತ್ತಿದ್ದದ್ದೇ ಹೆಚ್ಚು. 


ಶಾಂತಳ ತಾಯಿ ಶ್ರೀರಂಗಳನ್ನು ಪ್ರೀತಿಯಿಂದ ನೋಡಿ, ಆಕೆಯ ಕುರಿತು ಅಸ್ಥೆ ತೋರಿದ್ದೇ ತಪ್ಪಾಯ್ತು ಎನ್ನುವಂತೆ ಮಾಡಿಬಿಟ್ಟರು ಲಕ್ಷ್ಮಮ್ಮ. ಇದಕ್ಕೆ ಮೀನಾಕ್ಷಿಯ ಮನೆಯವರ ಪಾಲು ಸಹ ಇತ್ತು. ಆ ಪ್ರಸಂಗವಾದರೂ ಏನು..? ಓದಿ ನೋಡಿ. 


ಶ್ರೀರಂಗಳ ಹದಗೆಟ್ಟ ಮನಸ್ಥಿತಿಯ ಪರಿಣಾಮ ಆಕೆಯ ವರ್ತನೆಯ ಮೇಲಾಯಿತು. ಅದನ್ನು ಶಾಂತ ಗಮನಿಸಿದಳು ಸಹ. ಯಾರಿಗಾದರೂ ತೊಂದರೆಯಾದರೆ ಸಂತಸ ಪಡುವಷ್ಟು ಬದಲಾದಳೇ ಶ್ರೀರಂಗ..?


ಶ್ರೀರಂಗಳ ಚಿಕ್ಕಮ್ಮ ಬಂದಾಗ ಅವಳ ವರ್ತನೆ ಸೂಕ್ಷ್ಮವಾಗಿ ಅವರ ಗಮನಕ್ಕೆ ಬಂದಿತು. ಜೊತೆಗೆ ಲಕ್ಷ್ಮಮ್ಮನವರ ಬಳಿಯಲ್ಲಿ ಅವಳ ವರ್ತನೆಯನ್ನು ಹೇಳಿದರು ಸಹ, ಜೊತೆಗೆ ಸೂಕ್ಷ್ಮದ ಹುಡುಗಿಯನ್ನು ಕಾಡದಂತಿರಲು ಹೇಳಿ ಅವಳ ಮನಸ್ಸನ್ನು ಸಾಧ್ಯವಾದಷ್ಟು ಪರಿವರ್ತನೆ ಮಾಡಿ ಇನ್ನು ಮೂರು ತಿಂಗಳಲ್ಲಿ ತನ್ನ ಊರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದಳು. ಶ್ರೀರಂಗ ೪ ನಂತರದ ದಿನಗಳು ಹೇಗಿದ್ದವು..? ವರದ ಬದಲಾದನೇ..?


ಇತ್ತ ಶಾಂತಳ ಮನಸ್ಥಿತಿ ಈಗ ಪ್ರಬುದ್ಧವಾಗಿ ಬದಲಾಗುತ್ತಿತ್ತು. ಶಾಂತಳ ತಾಯಿ ಪಾರ್ವತಮ್ಮನವರು ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಊರಿನ ಶಾನುಭೋಗರಾಗಿದ್ದ ತಮ್ಮ ಅಣ್ಣ ಮಹಾಬಲಯ್ಯನವರ ಮನೆಗೆ ಹೊರಟರು. ಶಾಂತ ಅಲ್ಲಿ ಹೋದಾಗ ಅಲ್ಲಿನ ಪರಿಸ್ಥಿತಿ ಹೇಗಿತ್ತು..? ಶಾಂತಳ ಅತ್ತೆಗೆ ಶಾಂತಳನ್ನು ಕಂಡರೆ ಸಿಡಿಮಿಡಿಯಾಗುತ್ತಿದ್ದುದ್ದೇಕೆ..?


ಶ್ರೀಪಾದರಾಯರು ಮಹಾಬಲಯ್ಯನವರ ಟೆಲಿಗ್ರಾಂ ಅನ್ನು ಕಂಡು ಧಾವಿಸುವಷ್ಟರಲ್ಲಿ ಅವರಿಗಾಗಿ ಕಾಯುತ್ತಿದ್ದ ವಾರ್ತೆಯಾದರೂ ಏನು..?


ಶಾಂತ ಮತ್ತಷ್ಟು ತಾಳ್ಮೆ ಹಾಗೂ ಶಾಂತಿಯಿಂದ ವರ್ತಿಸಲು ಶುರು ಮಾಡಿದಕ್ಕೆ ಹಾಗೂ ಅವಳ ಬದುಕಿನ ದೊಡ್ಡ ಬದಲಾವಣೆಯಾದದಕ್ಕೆ ಅವಳ ಪ್ರತಿಕ್ರಿಯೆ ಹೇಗಿತ್ತು..?


"ಬಾಲ್ಯ ಮುಂಜಾವು, ಯೌವ್ವನ ಮಧ್ಯಾಹ್ನ, ಮುಪ್ಪು ಸಂಜೆ. 

ಎದ್ದೊಡನೆ ಒಳ್ಳೆಯ ವಿಷಯ ಕೇಳಿ, ಒಳ್ಳೆಯ ಭಾವನೆಗಳು ಮನಸ್ಸಿನಲ್ಲಿ ಉದ್ಭವಿಸಿದರೆ ಆ ದಿನವೆಲ್ಲ ಹಿತವಾಗಿರುತ್ತೆ. ದಿನಪೂರ್ತಿ ಹರ್ಷ ಉತ್ಸಾಹ ತುಂಬಿರುತ್ತೆ. ಎದ್ದ ಕೂಡಲೇ ಕಿರಿಕಿರಿ ಅಂತ ಮನಸ್ಸಿಗೆ ಅನ್ನಿಸಿದರೆ ಆ ದಿನವೆಲ್ಲ ಸಮಾಧಾನವಿರುವುದಿಲ್ಲ ಜೀವನದಲ್ಲೂ ಹಾಗೇನೆ. ಬಾಲ್ಯದಲ್ಲಿ ನಾವು ಮಕ್ಕಳಿಗೆ ಎಂತಹ ವಾತಾವರಣ ಕಲ್ಪಿಸಿ ಕೊಡುತ್ತೇವೋ ಹಾಗೆಯೇ ಅವರ ಜೀವನವೂ ರೂಪಿತವಾಗುತ್ತೆ."


ಮಕ್ಕಳ ಅನುಭವವನ್ನು ತಿದ್ದುವುದರ ಜೊತೆಗೆ ತಂದೆ ತಾಯಿಯರ ಸ್ವಭಾವ, ವರ್ತನೆಯಲ್ಲಿಯೂ ಬದಲಾವಣೆ ಬೇಕಿರುತ್ತದೆ. ಅಂತಹ ಬದಲಾವಣೆಗೆ ಅವರೂ ಸಿದ್ದರಿರಬೇಕು. ಇಲ್ಲವಾದಲ್ಲಿ ಯಾವುದೂ ಬದಲಾಗದು. 


ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಒಂದೊಂದು ನಡೆಯೂ ಅವರ ಮನಸ್ಸನ್ನು ಯಾವ ರೀತಿಯಲ್ಲಿ ಫಾಸಿಗೊಳಿಸಬಹುದು ಎಂಬ ಅರಿವು ಅತ್ಯಗತ್ಯ. ಇಲ್ಲಿನ ಪರಿಸ್ಥಿತಿಯಲ್ಲಿ ಇಬ್ಬರು ಮಕ್ಕಳು ಹಾಗೂ ಹತ್ತು ಮಕ್ಕಳ ದೊಡ್ಡ ಕುಟುಂಬದ ವ್ಯತ್ಯಾಸವಿದೆಯಾದರೂ... ಪ್ರತಿ ಮಕ್ಕಳೂ ವಿಭಿನ್ನ ಹಾಗೂ ಪ್ರತಿ ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮ ಎಂಬುದನ್ನು ಗಮನಿಸಬಹುದು. ವರ್ತಮಾನದ ದಿನಗಳಲ್ಲಂತೂ ಇದು ಮತ್ತಷ್ಟು ಸೂಕ್ಷ್ಮವಾಗಿದೆ ಎಂಬುದು ಗಮನೀಯ.


ಮಕ್ಕಳನ್ನು ತಿದ್ದಲು ಪ್ರತಿ ಸಂದರ್ಭದಲ್ಲಿಯೂ ಶಿಕ್ಷೆ ಅನಗತ್ಯ . ಎಷ್ಟೋ ಬಾರಿ ಶಿಕ್ಷೆ ಭಯ ಹುಟ್ಟಿಸುತ್ತದೆ. ಮಾತ್ರವಲ್ಲದೆ.. ಮೊಂಡುತನದ ವರ್ತನೆಗೂ ಕಾರಣವಾಗುತ್ತದೆ. ಅವರನ್ನು ತಿದ್ದುವ ನಾನಾ ವಿಧಗಳನ್ನು ನಾವು ಶಾಂತಳ ತಂದೆ-ತಾಯಿಯ ರೂಪದಲ್ಲಿ ಕಾಣಬಹುದು. ಮಕ್ಕಳಿಗೆ ಕಥೆ ಹೇಳುವ ಚಿತ್ರಣ  ಹಾಗೂ ಸ್ನೇಹಿತರೊಂದಿಗೆ ಬೆರೆತು ಆಟ ಆಡುವ ಚಿತ್ರಣಗಳು ಅವರ ಬೆಳವಣಿಗೆಗೆ ಎಷ್ಟು ಅಗತ್ಯ ಎಂಬುದನ್ನು ಮನಗಾಣಿಸುತ್ತವೆ.


1963 ರಲ್ಲಿ ಬರೆದ ಕಾದಂಬರಿಯಾದರೂ.. ಇಂದಿನ ಸಮಸ್ಯೆಗೂ ಪ್ರಸ್ತುತ.. ಪುಟ್ಟ ಮಕ್ಕಳ ತಂದೆ-ತಾಯಿಯಂದಿರು ಓದಿದರೆ ಅವರಿಗೆ ಮಾರ್ಗದರ್ಶಿಯಂತಿದೆ ಹಾಗೂ ಹೆಚ್ಚು ಕನೆಕ್ಟ್ ಆಗುತ್ತದೆ. 


~ ವಿಭಾ ವಿಶ್ವನಾಥ್

ಋಷ್ಯಶೃಂಗ (ಪುಸ್ತಕ ಯಾನ - 453)


ಪುಸ್ತಕದ ಶೀರ್ಷಿಕೆ : ಋಷ್ಯಶೃಂಗ

ಲೇಖಕರು : ಡಾ. ಲಕ್ಷ್ಮಣ ಕೌಂಟೆ 

ಪ್ರಕಾಶಕರು : ಭರತ್ ಬುಕ್ಸ್

ಪ್ರಥಮ ಮುದ್ರಣ : 2019

ಪುಟಗಳು : 326

ಬೆಲೆ : 325 ರೂ. 


ಋಷ್ಯಶೃಂಗ ಮುನಿಯ ಹೆಸರು ಮಳೆಯ ಮುನಿ ಎಂದೇ ಖ್ಯಾತಿಯಾಗಿರುವ ಹೆಸರು. ಇದು ವೇದಕಾಲಕ್ಕೆ ಸಂಬಂಧಿಸಿದ ಕಥಾವಸ್ತು. ಆದರೆ, ಪಾತ್ರಗಳು ಹಾಗೂ ಅದನ್ನು ಮರು ಸೃಷ್ಟಿಸಿರುವ ಬಗೆ ವಿಭಿನ್ನವಾಗಿದೆ. 


ಸಮಾಜದ ಜೀವನಾಡಿ ಮಳೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡರ ಸಂದರ್ಭದಲ್ಲಿಯೂ ಮಳೆಯ ಮಹತ್ವ ಹೆಚ್ಚು. ವೇದ ಕಾಲದಲ್ಲಿ ಎಲ್ಲದಕ್ಕೂ ಮಾರ್ಗ ತೋರಲು ಮಾರ್ಗದರ್ಶಕರಾಗಿ ಋಷಿ-ಮುನಿಗಳು ಕಾಣುತ್ತಾರೆ. ಇಲ್ಲಿಯೂ ಅಂತಹ ಮುನಿಗಳಿಂದಲೇ ಕಥೆಯ ಆರಂಭವಾಗುತ್ತದೆ. 


ಮಹಾಪಿತೃ ಕಶ್ಯಪನ ಸಂಸಾರವನ್ನು ಹಾಗೂ 13 ಜನ ವಿಭಿನ್ನ ಮನಸ್ಥಿತಿಯ ಹೆಂಡತಿಯರ, ಮಕ್ಕಳ ಪರಿಚಯ ಮಾಡಿಕೊಡುವುದು ಆತನ ಮಗ ವಿಭಾಂಡಕ. ಅಪ್ಪನ ಸಂಸಾರವನ್ನು ನೋಡಿ ಅಂತಹ ಸಹವಾಸವೇ ಬೇಡ ಎಂದು ತಪಸ್ಸಿನ ಋಜುಮಾರ್ಗವನ್ನು ಆಯ್ಕೆ ಮಾಡಿಕೊಂಡರೂ.. ಮೋಹ, ಕಾಮಗಳು ಬಿಡದೆ ಆತನಿಗೆ ಮಗ ಋಷ್ಯಶೃಂಗ ಜೊತೆಯಾಗುವಂತಾಯಿತು. ಅಪ್ಪ-ಮಗ ವಾಸಿಸುತ್ತಿದ್ದ ಈ ಕಾಡಿಗೆ ಯಾವ ನರಪಿಳ್ಳೆಯೂ ನುಸುಳುವ ಧೈರ್ಯ ಮಾಡಿರಲಿಲ್ಲ. ಮಗ ಬಂದ ಮೇಲಂತೂ ಅವರಿಬ್ಬರೂ ಕೌಶಿಕಿ ನದಿ ದಾಟಿ ಆಚೆ ದಡಕ್ಕೆ ಹೋದವರಲ್ಲ. ದುರ್ಗಮ ಕಾಡಿನಲ್ಲಿದ್ದ ಅವರ ಕುರಿತಾಗಿ ಹಲವು ದಂತಕಥೆಗಳಿದ್ದವು. ವಿಭಾಂಡಕನನ್ನು ತನ್ನ ಮೋಹಪಾಷಕ್ಕೆ ಸಿಲುಕಿಸಿದ ಹರಿಣ ಸುಂದರಿಯ ಆಲೋಚನೆ ಏನಿತ್ತು..? ಆ ಮಾಯಾಜಾಲಕ್ಕೆ ಆತ ಸಿಲುಕಿದ್ದೇಗೆ..? ಓದಿ ನೋಡಿ. 


ಈಗಿನ ಕಾಲದಲ್ಲಿಯಾದರೆ ಪೋಷಣೆಯ ಜವಾಬ್ದಾರಿ ಎಲ್ಲವೂ ತಾಯಿಯದ್ದೇ ಆಗಿರುತ್ತದೆ. ಆದರೆ, ಋಷ್ಯಶೃಂಗನ ಪೋಷಣೆಯ ಜವಾಬ್ದಾರಿ ವಿಭಾಂಡಕನ ಹೆಗಲೇರುತ್ತದೆ. ವಿಭಾಂಡಕ ಆತನನ್ನು ಹೇಗೆ ಬೆಳೆಸುತ್ತಾನೆಂದರೆ.. ಸ್ತ್ರೀ ಕುರಿತ ಆಲೋಚನೆಯೂ ಅವನಿಗೆ ಹುಟ್ಟದಂತೆ.. ತನ್ನನ್ನು ಹೆತ್ತವಳು ಸ್ತ್ರೀ ಎಂಬುದೂ ಆತನ ಅರಿವಿಗೆ ಬಾರದಂತೆ..! ಹಾಗೆಂದು, ಋಷ್ಯಶೃಂಗನೇನೂ ದಡ್ಡನಲ್ಲ. ತಪಸ್ಸು, ಜ್ಞಾನಸಿದ್ಧಿ, ಮಂತ್ರ ಎಲ್ಲದರಲ್ಲಿಯೂ ಕಠಿಣ ಪರಿಶ್ರಮ ತೋರಿ ಬುದ್ಧಿವಂತನಾದವನು. ಋಷ್ಯಶೃಂಗನಿಗೆ ಲೌಕಿಕದ ಆಲೋಚನೆಗಳು ಬಂದರೂ ಅದಕ್ಕೆ ಉತ್ತರ ವಿಭಾಂಡಕನಿಂದ ಸಿಗುವಂತಿರಲಿಲ್ಲ. ಅಪ್ಪನ ಅಣತಿಯನ್ನು ಮೀರದ ಮಗ, ಅಂತರ್ಮುಖಿಯಾದ ಋಷ್ಯಶೃಂಗನನ್ನು ಕಾಣಬಹುದು. 


ಬಾಲಕನಿಂದ ಯುವಕನಾಗುವ ಹಂತದವರೆಗೂ ಋಷ್ಯಶೃಂಗ ಯಾವೆಲ್ಲ ರೀತಿಯ ಭಾವನೆಗಳನ್ನು, ಜೊತೆಗೆ ಶಿಕ್ಷೆಗಳನ್ನು ಅನುಭವಿಸಿದ ಓದಿ ನೋಡಿ. ಶ್ಲೋಕಗಳು ಜೊತೆಗೆ ವ್ಯಾಖ್ಯಾನಗಳ ಮೂಲಕ ಮಗನ ಸಂದೇಹಗಳಿಗೆ ಉತ್ತರಿಸುವ ತಂದೆಯ ಉತ್ತರಗಳು ತನಗೆ ಯಾವ ರೀತಿಯ ಉತ್ತರಗಳನ್ನು ನೀಡಬೇಕೋ ಅಂತಹ ಸಮರ್ಥನೆಗಳನ್ನು ನೀಡುವುದನ್ನು ಕಾಣಬಹುದು. ಹೊರಗಿನ ಲೋಕದ ಕುರಿತು ವಿಭಾಂಡಕ ಏನು ಹೇಳಿ ಋಷ್ಯಶೃಂಗನನ್ನು ತಡೆಹಿಡಿದಿದ್ದ ಓದಿ ನೋಡಿ.


ಚಂಪಾಪುರದ ಮಹಾರಾಜ ರೋಮಪಾದ ತನ್ನ ದೇಶದಲ್ಲಿ ದಶಕದಿಂದ ಮುನಿದ ವರುಣದೇವನ ನಡೆಗೆ ಉತ್ತರ ಹುಡುಕುತ್ತಿದ್ದ. ಮಳೆ ಕೇವಲ ಬೆಳೆಯ ಹಾಗೂ ಕುಡಿಯುವ ನೀರಿನ, ಆಹಾರದ ವಿಚಾರವಲ್ಲ. ಇದರಿಂದಾಗಿ ಉಂಟಾದ ಕಳ್ಳರ ಹಾವಳಿ, ಮೈಗಳ್ಳರು, ಹೆಚ್ಚುತ್ತಿರುವ ಅರಾಜಕತೆ.. ಇದರಿಂದ ರಾಜ್ಯದಲ್ಲಿ ಉಂಟಾಗುವ ಉತ್ಪಾತಗಳನ್ನು ಕಾಣಬಹುದು. ರೋಮಪಾದನ ಆಸ್ಥಾನದಲ್ಲಿ ಜ್ಞಾನವೃದ್ದ ಮತಿವಂತ, ಸುಹರ್ಷ, ಮಹತ್ತ, ಸುಚೇತನರ ಜೊತೆಗೆ ಸಭೆ ನಡೆದರೂ ತೃಪ್ತಿ ತರುವ ಉತ್ತರಗಳು ಸಿಗಲಿಲ್ಲ. 


ರೋಮಪಾದನ ಮಹಾರಾಣಿ ವರ್ಷಿಣಿ ಆತನ ಚಿಂತೆಯ ಕಾರಣ ತಿಳಿಯುತ್ತಾಳೆ. ಮಹಾರಾಣಿ ವರ್ಷಿಣಿ ಅಯೋಧ್ಯೆಯ ಮಹಾರಾಜ ದಶರಥನ ಮೊದಲ ಪತ್ನಿ ಕೌಸಲ್ಯಳ ತಂಗಿ. ಮಕ್ಕಳನ್ನು ಪಡೆಯುವ ಭಾಗ್ಯವಿಲ್ಲದಾದಾಗ ದಶರಥ ಹಾಗೂ ಕೌಸಲ್ಯರ ಏಕೈಕ ಸಂತಾನ ಶಾಂತೆಯನ್ನು ದತ್ತು ಪಡೆದಿದ್ದರು. ಅವರಿಗೂ ಮಕ್ಕಳಾದದ್ದು ಇವರಲ್ಲಿ ಚಿಂತೆಯನ್ನು ತಂದಿತ್ತು. ಶಾಂತೆಗೆ ಈಗ ವಿವಾಹದ ವಯಸ್ಸು. ಅಳಿಯನ ರೂಪದಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ದೊಡ್ಡ ಜವಾಬ್ದಾರಿ ಹೆಗಲೇರಿತ್ತು.


ಅಂಗ ದೇಶಕ್ಕೆ ಸಂಬಂಧಿಸಿದಂತೆ ಶಾಂತೆಯ ದಾಸಿಯರಾದ ವೃದ್ಧದಾಸಿ ಸುಪರ್ಣಿಕ ಒಂದು ಕಥೆ ಹೇಳಿದರೆ, ಮಾಗಿದ ಹರೆಯದ ದಾಸಿ ಅಂಗವತಿ ಪೂರಕವಾದ ಮತ್ತೊಂದು ಕಥೆಯನ್ನು ರಸವತ್ತಾಗಿ ಹೇಳುತ್ತಾಳೆ. ಅವರಿಬ್ಬರೂ ಹೇಳಿದ ಕಥೆಗಳಲ್ಲಿ ಶಾಂತೆ ಹಲವು ದೊರೆಗಳ ಕಥೆಯನ್ನು ಕಾಣುತ್ತಾಳೆ. ರಾಜಕುಮಾರನಿಗಿಂತ ಋಷಿಕುಮಾರನನ್ನು ವಿವಾಹವಾಗಲು ಇಚ್ಚಿಸುತ್ತಾಳೆ. ಇದಕ್ಕೆ ದಶರಥ ಮಹಾರಾಜ ಹಾಗೂ ರೋಮಪಾದರ ಬದುಕಿನ ರೀತಿಯೂ ಪರೋಕ್ಷವಾಗಿ ಪ್ರಭಾವಿಸಿರುತ್ತದೆ. ಋಷಿಕುಮಾರನನ್ನು ಮದುವೆಯಾಗುವುದಾದರೆ ಮಳೆಯ ದೇವತೆಯನ್ನು ವಶವರ್ತಿಯನ್ನಾಗಿಸಿಕೊಂಡಿರುವ ಋಷ್ಯಶೃಂಗನನ್ನೇ ವಿವಾಹವಾಗು ಇದರಿಂದ ರಾಜ್ಯದ ಬರವೂ ನೀಗುತ್ತದೆ. ನಿನ್ನ ಆಸೆಯೂ ಈಡೇರುತ್ತದೆ ಎಂದು ಹೇಳಿದ ಸುಪರ್ಣಿಕೆಯ ಮಾತುಗಳಿಗೆ ಆಕೆಯ ಮನಸ್ಸು ಕಟ್ಟುಬಿದ್ದಂತೆ.. ಕನಸಲ್ಲಿಯೂ ಋಷ್ಯಶೃಂಗನನ್ನೇ ಕೈಹಿಡಿದಂತೆ ರಾಜ್ಯದ ಸಮಸ್ಯೆಯನ್ನು ಬಗೆಹರಿಸಿದಂತೆ ಕನಸು ಕಾಣುತ್ತಾಳೆ ಶಾಂತೆ.


ಆದರೆ, ಅದು ಅಷ್ಟು ಸುಲಭವಿರಲಿಲ್ಲ. ಒಂದೊಮ್ಮೆ ಶಾಂತೆಯೇ ಅದಕ್ಕೆ ಒಪ್ಪಿದರೂ ಮಹಾರಾಣಿ ವರ್ಷಿಣಿ ಒಪ್ಪುವ ಪ್ರಮೇಯವೇ ಇರಲಿಲ್ಲ.


ತ್ರಿಕಾಲಜ್ಞಾನಿ ಎಂದು ಖ್ಯಾತಿ ಹೊಂದಿದ್ದ ಜ್ಯೋತಿಷ್ಯ ರತ್ನಾಕರ ವಿದ್ವಾನ್ ವಿಷ್ಣುಶರ್ಮ ಶಾಸ್ತ್ರಿಗಳಿಂದ ರಾಜ್ಯದ ಬರಗಾಲಕ್ಕೆ ಹಿನ್ನೆಲೆ ತಿಳಿಯುತ್ತದೆ. ಅದು ಅರಮನೆಯಿಂದ ಆದ ಅಪಚಾರ. ಅದಕ್ಕಿಂತಲೂ ಮುಖ್ಯವಾಗಿ ಸಿಕ್ಕಿದ್ದು ಪರಿಹಾರ. ಅದೇ ಋಷ್ಯಶೃಂಗರನ್ನು ಕರೆತರುವುದು. ರೋಮಪಾದನ ರಕ್ತದಿಂದ ಜನಿಸಿದ ಓರ್ವರನ್ನು, ರಾಜಕುಮಾರಿಯನ್ನು ಕಳುಹಿಸಿ ಋಷಿಕುಮಾರನನ್ನು ಮೋಹದ ಕಾಲದಲ್ಲಿ ಬೀಳಿಸಿ ಕರೆತರುವ ಉಪಾಯವನ್ನು ಹೇಳಿದರಾದರೂ ಆ ಉಪಾಯವನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಿತ್ತು. ವರ್ಷಿಣಿ ಶಾಂತೆಯನ್ನು ಕಳುಹಿಸಲು ಒಪ್ಪಲೇ ಇಲ್ಲ.


ಸುಮಾರು ವರ್ಷಗಳ ಹಿಂದೆ ಕೌಶಾಂಬಿಯ ವಣಿಕನನ್ನು ವಂಚನೆಯ ಆರೋಪದ ಮೇಲೆ ಬಂಧಿಸಿ ಅವನ ಸಮಸ್ತ ಆಸ್ತಿಯಲ್ಲಿ ಹತ್ತರಷ್ಟು ಮಾತ್ರ ಸಂಸಾರ ನಿರ್ವಹಣೆಗೆ ನೀಡಿ ಉಳಿದದ್ದೆಲ್ಲವನ್ನು ರಾಜ್ಯಶಾಸನ ವ್ಯಾಪ್ತಿಗೆ ಪಡೆದುಕೊಂಡಿದ್ದರು. ಬಂಧಮುಕ್ತನಾಗಿದ್ದ ಆತ, ಮುನಿವರ್ಯರೊಂದಿಗೆ ಬಂದಿದ್ದರು. ಮುನಿಯ ಮನವಿಯನ್ನು ತಿರಸ್ಕರಿಸಿ ಕಳುಹಿಸಿದಾಗ ಅವನು ಶಪಿಸುತ್ತಾ ಹೊರಟಿದ್ದ. ಅದೇ ಇದಕ್ಕೆ ಕಾರಣವೆಂದು ಅರಿವಾಗಿತ್ತು. ಈ ಎಲ್ಲಾ ನೆನಪಿನ ಜೊತೆಗೆ ತಾಮ್ರಲಿಪ್ತಿಯ ಅರ್ಥಗುಪ್ತನ ಮಗಳು ಹೇಮಪ್ರಭೆಯ ನೆನಪು ತಳುಕು ಹಾಕಿಕೊಂಡಿತು. ನೆನಪು ಮಾತ್ರವಲ್ಲ, ಪರೋಕ್ಷವಾಗಿ ಈ ಪ್ರಸಂಗ ಅವಳ ಸುತ್ತಲೇ ಸುತ್ತುತ್ತಾ ಸಾಗುತ್ತದೆ. ರೋಮಪಾದ ನಿಗೂ ಹೇಮಪ್ರಭೆಗೂ ಇದ್ದ ಸಂಬಂಧವೇನಿತ್ತು ..?


ಹೇಮಪ್ರಭೆಯ ಗುಣಲಕ್ಷಣಗಳನ್ನು ಅರಿಯಲೆಂದು ಕಳುಹಿಸಿದ ಬ್ರಾಹ್ಮಣರು ಅಂದು ಅಸತ್ಯವನ್ನು ನುಡಿದಿದ್ದರ ಪರಿಣಾಮ ಯಾವ ರೀತಿಯಾಗಿತ್ತು.?


ಕಾಲಚಕ್ರ ಬಹಳ ಮುಂದಕ್ಕೋಡಿತ್ತು. ಈಗ ಹೇಮಪ್ರಭೆ ತನ್ನ ವೃದ್ಧದಾಸಿ ಮಕರಂದಿಕೆ ಹಾಗೂ ಮಗಳು ಓಜಸ್ವತಿಯ ಜೊತೆಯಲ್ಲಿ ಅವಳದೇ ಸಂಸಾರದಲ್ಲಿ ಮುಳುಗಿದ್ದಳು. ತಾರುಣ್ಯದ ಹೇಮಪ್ರಭೆಯ ಪ್ರತಿರೂಪದಂತಿದ್ದಳು ಓಜಸ್ವತಿ. ಅಂಗ ದೇಶದ ರಾಜಧಾನಿ ಚಂಪಾಪುರದಲ್ಲಿ ಪ್ರತಿವರ್ಷದಂತೆ ನಡೆಯುತ್ತಿದ್ದ ನಗರೋತ್ಸವದಲ್ಲಿ ನೃತ್ಯ, ಶಾಸ್ತ್ರೀಯ ಸಂಗೀತ ಸ್ಪರ್ಧೆಗಳಲ್ಲಿ ಹಾಗೂ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಓಜಸ್ವತಿ ನಾಡಸುಂದರಿ ಎಂದು ಆಯ್ಕೆಯಾದಳು. ರೋಮಪಾದರ ಕೃಪಾದೃಷ್ಟಿಗೆ ಬಿದ್ದಳು. ಜೊತೆಗೆ ಶಾಂತೆ ಆಕೆಯ ಗೆಳತಿಯಂತೆ ಮಾತ್ರವಲ್ಲದೆ, ಆಕೆಯನ್ನು ಅಕ್ಕನಂತೆ ಭಾವಿಸಿ ಬಾಂಧವ್ಯ ಹೆಚ್ಚು ಮಾಡಿಕೊಂಡಳು. ಆದರೆ, ಹೇಮಪ್ರಭೆ ಮಾತ್ರ ಮಹಾರಾಜರು ಎಷ್ಟೇ ಹೇಳಿದರೂ ಅವರ ಭೇಟಿಗೆ ಸಿದ್ಧವಿರಲಿಲ್ಲ.


ಈ ನಡುವೆ ಮಳೆಗಾಗಿ ವಿಶ್ವಾಮಿತ್ರರ ಉಸ್ತುವಾರಿಯಲ್ಲಿ ಯಾಗ ನಡೆದರೂ ಮಳೆ ಬರಲಿಲ್ಲ. ವಿಶ್ವಾಮಿತ್ರರು ಹಾಗೂ ವಿಭಾಂಡಕರ ಭೇಟಿಯಾದರೂ ಅದು ಫಲಿಸಲಿಲ್ಲ. ಉಳಿದ ದಾರಿ ಎಂದರೆ ಋಷ್ಯಶೃಂಗನನ್ನು ಕರೆತರುವುದು.


ಋಷ್ಯಶೃಂಗನನ್ನು ಕರೆತರಲು ನೇಮಕವಾದದ್ದು ಓಜಸ್ವತಿ, ಇದು ಸುಲಭದ ಹಾದಿಯಾಗಿರಲಿಲ್ಲ. ಇದಕ್ಕೆ ಮಹಾರಾಣಿ ವರ್ಷಿಣಿ ಒಪ್ಪಿಗೆ ಕೊಟ್ಟದ್ದೇಕೆ..? ಹೇಮಪ್ರಭೆ ಹಾಗೂ ರೋಮಪಾದರ ನಡುವಿನ ಸಂಬಂಧ ಹೇಗಿದ್ದಿತ್ತು..? ಓಜಸ್ವತಿಯ ಜೊತೆಗೆ ಹೇಮಪ್ರಭೆ ಹಾಗೂ ಮಕರಂದಿಕೆಯರು ಅವಳಿಗಿಂದೇ ಕಟ್ಟಿಸಲಾದ ದೋಣಿಮನೆಯಲ್ಲಿ ನೆಲೆಸಲು ಹೊರಟರು. ಅಲ್ಲಿಯ ಸ್ಥಳೀಯತೆಯ ಅರಿವಿದ್ದ ಮೃಗಾಂಕಲೇಖೆ ಜೊತೆಯಾಗಿದ್ದಳು. ವಾಚಾಳಿಯಾಗಿದ್ದ ಅವಳಿಂದ ಯಾವೆಲ್ಲ ವಿಚಾರಗಳು ಹೊರಬರುತ್ತವೆ. ವಾಚಾಳಿಯಾದ ಅವುಗಳಲ್ಲಿ ಸತ್ಯವೆಷ್ಟು.. ಸುಳ್ಳೆಷ್ಟು..? ಎಂಬುದನ್ನು ಸೋಸಿ ತೆಗೆದ ಬಗೆ ಹೇಗೆ..? ಓಜಸ್ವತಿಯ ಈ ಪ್ರಯತ್ನಕ್ಕೆ ಶಾಂತೆ ಒಪ್ಪಿದಳೇ..? ಓಜಸ್ವತಿ ಶಾಂತೆಗೆ ಕೊಟ್ಟ ಮಾತೇನು..? ಓಜಸ್ವತಿಯ ಈ ಪ್ರಯತ್ನದಲ್ಲಿ ಪ್ರಕೃತಿ ಎಷ್ಟು ಸಹಕರಿಸಿತು..? 


ಹೆಣ್ಣನ್ನೇ ಕಾಣದ, ಹೆಂಗಸು ಎಂದರೆ ನಕಾರಾತ್ಮಕ ಆಲೋಚನೆಗಳನ್ನೇ ತುಂಬಿಕೊಂಡಿದ್ದ ಋಷ್ಯಶೃಂಗನ ಮನಸ್ಸನ್ನು ಪರಿವರ್ತಿಸಲು ಓಜಸ್ವತಿ ಪೂರ್ವಜನ್ಮದ ಯಾವ ಕಥೆಯನ್ನು ಹೇಳಿದಳು..?  ಆತನನ್ನು ತನ್ನಡೆ ಸೆಳೆಯಲು ಯಾವೆಲ್ಲ ತಂತ್ರ ಹೂಡಿದಳು..? ವಿಭಾಂಡಕನ ಕಣ್ಣಿಗೆ ಮಣ್ಣೆರಚ್ಚುವ ಪ್ರಯತ್ನದಲ್ಲಿ ಯಾವೆಲ್ಲ ಅಡೆತಡೆಗಳನ್ನು ಮೀರಬೇಕಾಗಿ ಬಂದಿತು..?


ನಮಗೆಲ್ಲ ಗೊತ್ತಿರುವ ಪುರಾಣದ ಕಥೆಯಂತೆ ಶಾಂತೆ ಹಾಗೂ ಋಷ್ಯಶೃಂಗರ ವಿವಾಹವಾಗುತ್ತದೆ. ಹಾಗಿದ್ದರೆ ಓಜಸ್ವತಿಯ ಗತಿ ಏನು..? ಅರಮನೆಯ ಒಳ ರಾಜಕೀಯಗಳ ಹುನ್ನಾರವನ್ನು ಇಲ್ಲಿ ತೆರೆದಿಡುತ್ತಾರೆ. ಕೌಸಲ್ಯೆಯನ್ನು ಮಾತೃರೂಪಿಯನ್ನಾಗಿ ಮಾತ್ರ ಚಿತ್ರಿಸಿಕೊಂಡಿದ್ದ ನನಗೆ ಇಲ್ಲಿನ ಕೌಸಲ್ಯೆ ಬೇರೆಯದ್ದೇ ರೂಪವಾಗಿ ಕಂಡಳು. ರಾಣಿಯರ ರಾಜಕೀಯದಲ್ಲಿ ಯಾವೆಲ್ಲ ರೀತಿಯ ಕುಟಿಲತೆಗಳು ಹಾಗೂ ಹುನ್ನಾರಗಳು ಕಾಣಬಹುದು..? ಸ್ವಾರ್ಥದ ಚಿಂತನೆಗಿಂತಲೂ ರಾಜ್ಯದ ಹಿತಾಸಕ್ತಿಯನ್ನು ಇಲ್ಲಿ ನಿಜಕ್ಕೂ ಆಲೋಚಿಸಿದವರು ಯಾರು..?


ಹುಟ್ಟಿನಿಂದ ವಿಭಾಂಡಕನನ್ನು ಹೊರತುಪಡಿಸಿ ಬೇರೆಯ ಲೋಕವೇ ಗೊತ್ತಿರದ ಋಷ್ಯಶೃಂಗ ಶಾಂತೆಯನ್ನು ಒಪ್ಪುತ್ತಾನಾ..?


ಕೆದಕಿದರೆ ಹಲವಾರು ಕಥೆಗಳ ಹಲವು ಸ್ವರೂಪಗಳು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ಸ್ವಹಿತಾಸಕ್ತಿ, ಕಾಮ.. ಆ ಕ್ಷಣಕ್ಕೆ ತಮ್ಮ ರೂಪವನ್ನು ತೋರದಿದ್ದರೂ ಮುಂದೆ ಯಾವೆಲ್ಲಾ ದೊಡ್ಡ ಬದಲಾವಣೆಗೆ ಮೂಲವಾಗಿರುತ್ತವೆ ಎಂಬುದನ್ನು ಇಲ್ಲಿ ಕಾಣಬಹುದು.


ಋಷ್ಯಶೃಂಗನಿಂದ ಮಳೆ ಬಂದಿತ್ತು. ಬದಲಾವಣೆ ಬಂದಿತು. ಅಂತಯೇ ಕೆಲವು ನಾಶವೂ ಉಂಟಾಯಿತು. ಕೆಲವು ಒಳ್ಳೆಯ ಬದಲಾವಣೆಗಾಗಿ ಅದರಿಂದ ಉಂಟಾಗುವ ಕೆಟ್ಟದ್ದನ್ನು ಸಹಿಸಿಕೊಳ್ಳಲು ಸಿದ್ಧವಿರಬೇಕು ಎನ್ನುವ ಅಂಶವನ್ನು ಇಲ್ಲಿ ಕಾಣಬಹುದು.


ಕಲ್ಪನೆ, ನಂಬಿಕೆ, ಪೌರಾಣಿಕತೆ ಎಲ್ಲವೂ ಹದವಾಗಿ ಬೆರೆತಿರುವ ಕಾದಂಬರಿಯ ಓದು ಇದು. 

~ವಿಭಾ ವಿಶ್ವನಾಥ್

ಮಿಂಚು ಮತ್ತು ಮಳೆ (ಪುಸ್ತಕ ಯಾನ - 452)


ಪುಸ್ತಕದ ಶೀರ್ಷಿಕೆ : ಮಿಂಚು ಮತ್ತು ಮಳೆ

ಲೇಖಕರು ಮತ್ತು ಪ್ರಕಾಶಕರು : ದಿವ್ಯಾ ಕಾರಂತ್ 

ಪ್ರಥಮ ಮುದ್ರಣ : 2021

ಪುಟಗಳು : 108

ಬೆಲೆ : 120 ರೂ. 


ಲೇಖಕಿ ದಿವ್ಯಾ ಕಾರಂತ್ ಅವರು ಮೂಲತಃ ಚಿಕ್ಕಮಗಳೂರು ಕೊಪ್ಪದ ಹತ್ತಿರದ ಬಸರೀಕಟ್ಟೆಯವರು. 'ಮಲೆನಾಡ ಗರ್ಭ ಹಾಗಾಗಿ ಮಿಂಚು ಮತ್ತು ಮಳೆ ಸ್ವಾಭಾವಿಕ' ಎನ್ನುತ್ತಾರೆ ಪ್ರೀತಿಯಿಂದ ಮುನ್ನುಡಿ ಬರೆದಿರುವ ಸೇತುರಾಮ್ ಅವರು. ಲೇಖಕಿಯವರ ಮಲೆನಾಡಿನ ಪರಿಸರವನ್ನು ಇಲ್ಲಿನ ಕಥೆಗಳುದ್ದಕ್ಕೂ ನಾವು ಕಾಣಬಹುದಾಗಿದೆ.


ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ. 


ವಿಜಯಲಕ್ಷ್ಮಿಯ ಜಡೆ : ಮಲೆನಾಡಿನ ಮಳೆಯ ಚಿತ್ರಣದ ದೃಶ್ಯಾವಳಿ ಕಾಣುತ್ತದೆ. ಆರು ದಿನಗಳ ನಿರಂತರ ಮಳೆಯಿಂದ ಅಸ್ತವ್ಯಸ್ತವಾದ ಅವರ ಬದುಕು, ಹಳ್ಳ-ಕೊಳ್ಳಗಳೆಲ್ಲ ತುಂಬಿ ಅವುಗಳನ್ನು ದಾಟಲು ಹಾಕಿರುವ ಸಂಕಗಳು ಮುಚ್ಚಿ ಹೋಗುವಂತೆ ಹರಿಯುತ್ತಿದ್ದ ಮಳೆ ನೀರು. ಇಂತಹ ದಿನಗಳಲ್ಲಿ ಮಳೆಯಲ್ಲಿಯೇ ಶಾಲೆಗೆ ಹೋಗುವ ಮಕ್ಕಳು. ಇಲ್ಲಿ ಮುಖ್ಯವಾಗಿ ಇಬ್ಬರು ಅಣ್ಣ-ತಂಗಿಯರ ಬಾಂಧವ್ಯ, ಕಿತ್ತಾಟ, ಕೋಳಿ ಜಗಳ ಎಲ್ಲವೂ ಆಪ್ತವಾಗುತ್ತದೆ. ಅಣ್ಣನ ತರಗತಿಯವಳೇ ಆದ ವಿಜಯಲಕ್ಷ್ಮಿಯಿಂದ ಅಣ್ಣನ ಕುರಿತು ತಿಳಿದುಕೊಳ್ಳುತ್ತಿದ್ದವಳಿಗೆ ವಿಜಯಲಕ್ಷ್ಮಿಯ ಜಡೆಯೂ ಅಷ್ಟೇ ಕಣ್ಣಿಗೆ ಕಟ್ಟಿದಂತಿತ್ತು. ಕಥೆಯ ಕೊನೆಯಲ್ಲಿ ಬರುವ ವಿಜಯಲಕ್ಷ್ಮಿಯ ಜಡೆ ಮಳೆಯ ಅಬ್ಬರದಲ್ಲಿ ಮರೆಯಲು ಆಗದಂತೆ ಮಾಡುವುದೇಕೆ ಓದಿ ನೋಡಿ.


ಭಾಗೀರಥಿ : ಅಜ್ಜಿ ಮನೆಗೆ ಹೋದಾಗಲೆಲ್ಲ ಅಜ್ಜಿಯೊಡನೆ ಜಗಳವಾಡಿ, ಅಪ್ಪ-ಅಮ್ಮನಿಂದ ಬಯ್ಯಿಸಿಕೊಳ್ಳದಿದ್ದರೆ ಬೇಸಿಗೆ ರಜೆ ಪರಿಪೂರ್ಣವಾಗುತ್ತಿರಲಿಲ್ಲವಂತೆ. ಹೀಗಿದ್ದ ಅಜ್ಜಿಯ ಹೆಸರು ಭಾಗೀರಥಿ. ಅಜ್ಜಿಗೆ ಗಂಡು ಮಕ್ಕಳ ಮೇಲೆ ಪ್ರೀತಿ ಜಾಸ್ತಿ. ಅದನ್ನು ಪ್ರಶ್ನಿಸಿ ಅವರಿಗೆ ಕೋಪ ತರಿಸಿ ಜಗಳವಾಡುತ್ತಿದ್ದರ ಜೊತೆಗೆ ಅಜ್ಜಿಯ ರಾಜ್ಯಭಾರ ಹಾಗೂ ಆ ರಾಜ್ಯಭಾರದಲ್ಲಿ ಇಡೀ ಮನೆಯ ಚಿತ್ರಣ ಕಾಣುತ್ತದೆ.

'ಗಟ್ಟಿ ಇರಬೇಕು, ಒಳಗೂ ಹೊರಗೂ, ಯಾರೇ ಬಂದ್ರೂ, ಬಾರಿಸಿ ವಾಪಸ್ ಕಳಿಸೋ ಹಂಗಿರ್ಬೇಕ್' ಎನ್ನುವ ಅಜ್ಜಿಯ ಮಾತಿನ ಹಿಂದಿದ್ದ ಮರ್ಮವೇನು..?

'ಇಷ್ಟೊತ್ತು ದೇವಿಯಾಗಿದ್ದ ಅಜ್ಜಿ, ಮತ್ತೆ ಮಾಮೂಲಿನಂತೆ ಚೌಡಿಯಾಗುವ ಲಕ್ಷಣಗಳು ಕಾಣಿಸತೊಡಗಿದವು' ಎಂಬ ಈ ಮಾತುಗಳೇ ಕಥೆಯ ಸಾರವನ್ನು ಹಿಡಿದಿಟ್ಟಿವೆ.


ಭೋಜರಾಜ : ಪ್ರೀತಿಯ ಕರು ಭೋಜರಾಜನ ಲೀಲೆಗಳು ಮಾತ್ರ ಸಾಲದು ಎಂಬಂತೆ... ಅದು ಕಲಾತ್ಮಕವಾಗಿ ಕಟ್ಟಿಸಿದ 12 ಅಡಿ ಆಳದ ಟ್ಯಾಂಕಿನ ಒಳಗೆ ಬಿದ್ದು ನೀರಿನಲ್ಲಿ ತೇಲುತ್ತಿರುವಾಗ ಭೋಜನನ್ನು ಎತ್ತಲು ಬಂದ ನಾಗೇಂದ್ರನ ಕಥೆ, ಅಲ್ಲಲ್ಲ ಅವರಿಬ್ಬರ ದೊಂಬರಾಟದ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ.


ಗಣಿತ ಸುಲಭ! : ಮೇರಿ ಟೀಚರ್ ಬಹಳ ಶಿಸ್ತಿನ, ಬಹಳ ಕೋಪದ ಟೀಚರ್. ಎಂತಹ ದಡ್ಡರ ತಲೆಗೂ ಪಾಠ ತೂರಿಸುತ್ತಾರೆಂದು ಪ್ರಸಿದ್ಧಿ ಪಡೆದಿದ್ದವರು. ಗಣಿತದ ಟೀಚರ್ ಆಗಿದ್ದವರ ಕುರಿತು ಅಣ್ಣ ಹೇಳಿದ ಮೇಲಂತೂ ಇನ್ನೂ ಭಯ ಆವರಿಸಿತ್ತು. ಹೀಗಾಗಿ ಗಣಿತದ ಪಲಾಯನ ಆರಂಭವಾಗಿತ್ತು. ಪ್ರೀತಿಯಿಂದ ಹೇಳಿಕೊಟ್ಟಾಗ ಏನನ್ನು ಬೇಕಾದರೂ ವಿದ್ಯಾರ್ಥಿಗಳು ಕಲಿಯುತ್ತಾರೆ. ಹಾಗೆ ಮೇರಿ ಟೀಚರ್ ಹೇಳಿಕೊಟ್ಟ ಮಂತ್ರ ಒಂದು ಗಣಿತವನ್ನು ಸುಲಭವಾಗಿಸಿತೇ..? ಮಂತ್ರಕ್ಕೆ ಧನ್ಯವಾದ ಅರ್ಪಿಸಲು ಹೋದವಳಿಗೆ ಮೇರಿ ಟೀಚರ್ ಏನೆಂದರು..?


ರಾವಣಾಯಣ : ಅಪ್ಪನ ಹಳೆಯ ವಿದ್ಯಾರ್ಥಿಗಳು ಖುದ್ದಾಗಿ ಬಂದು, ತಾವೇ ರಾಮಾಯಣ ಪ್ರದರ್ಶಿಸುತ್ತಿರುವುದರಿಂದ ಜೊತೆಗೆ ಬಹಳ ತಾಲೀಮು ಮಾಡಿಕೊಂಡಿರುವುದರಿಂದ ತಪ್ಪದೇ ಬರಬೇಕೆಂದು ಕೇಳಿಕೊಂಡಿದ್ದಕ್ಕೆ ಮನೆಯವರೆಲ್ಲರೂ ದೇವಸ್ಥಾನದ ರಂಗಮಂದಿರಕ್ಕೆ ಹೋದರು. ರಾಮಾಯಣವನ್ನು ತಲೆಕೆಳಕು ಮಾಡಿದವರ ಆಟಕ್ಕೆ ಯಾರ್ಯಾರ ಪ್ರತಿಕ್ರಿಯೆ ಹೇಗಿತ್ತು..? ಅಮ್ಮಿಗೆ ರಾವಣ ಗೆದ್ದಿದ್ದರಲ್ಲಿ ಯಾವ ತಪ್ಪೂ ಕಾಣಲಿಲ್ಲವೇಕೆ..? ರಾಮಾಯಣ ಹೋಗಿ ರಾವಣಾಯಣ ಆದದ್ದನ್ನು ಓದಿ ನೋಡಿ.


ಕೆರೆಯ ನೀರನು ಕೆರೆಗೆ ಚೆಲ್ಲಿ : ಅಮ್ಮನ ಪ್ರಾಣಿ ಪ್ರೀತಿಯ ಜೊತೆಗೆ ಪ್ರತಿಯೊಂದಕ್ಕೂ ಪ್ರೀತಿಯಿಂದ ಹೆಸರಿಟ್ಟು ಮನೆಯವರಂತೆಯೇ ಅವುಗಳನ್ನು ಮಾತನಾಡಿಸುವ ಅಮ್ಮನ ಪರಿ ಹಾಗೂ ಕೆರೆ ಹಾವು ಬಂದಾಗ ಅಮ್ಮನ ಶಾಂತತೆ ಜೊತೆಗೆ ಇವರಿಗೆ ಹಾವಿನ ಭಯ.. ರಸವತ್ತಾಗಿ ಸಾಗುವ ಪ್ರಸಂಗವಿದು. ಅಣ್ಣ-ತಂಗಿಯ ಮಾತುಕತೆಗಳು ನೈಜವಾಗಿವೆ.


ಪೊರಕೆ ಪ್ರೀತಿ : ಪೊರಕೆ ಪ್ರೀತಿ ಎಂದ ಕ್ಷಣ ಕಸಗುಡಿಸುವ ಪೊರಕೆಯ ಕುರಿತ ಪ್ರೀತಿ ಇದಿರಬಹುದೇ ಎಂದೆನಿಸಿದರೂ ಇದು ಹಾಗಲ್ಲ. ಇದ್ದ ಬೆರಳೆಣಿಕೆಯ ಗೆಳತಿಯರ ನಡುವಲ್ಲಿ ಆಪ್ತವಾಗಿದ್ದ, ಪ್ರೀತಿಯ ಮನೆಗೆ ಹೋದ ಪ್ರಸಂಗ ಜೊತೆಗೆ ಅಲ್ಲಿ ಎಲ್ಲರೊಡನೆ ಬೆರೆತಾಗ ಪ್ರೀತಿಯನ್ನು ಛೇಡಿಸುವ ಪರಿ.. ಹಾಸ್ಯದಿಂದ ಗಂಭೀರತೆಗೆ ಹೊರಳುವ ಪ್ರಸಂಗಕ್ಕೆ ಪ್ರೀತಿಯ ತಂದೆಯಿಂದ ಸಿಕ್ಕ ಉತ್ತರವೇನು..? ಅಷ್ಟಕ್ಕೂ ಪ್ರೀತಿ ಪೊರಕೆ ಪ್ರೀತಿ ಆದದ್ದು ಏಕೆ..?


ವಾಂಛೆ! : ಆ ಮನೆ ಬಗ್ಗೆ ಇದ್ದ ವಾಂಛೆಯ ಜೊತೆಗೆ ಆ ಹೆಂಗಸಿನ ಬಗ್ಗೆಯೂ ಕುತೂಹಲ. ಯಾರೆಂಬುದೇ ಗೊತ್ತಿಲ್ಲದಿದ್ದರೂ.. ಶಾಲೆಯಲ್ಲಿ ಸ್ನೇಹಿತರು, ನೆಂಟರು ಮಾತಾಡಿದ್ದನ್ನು ಕೇಳಿ ಕುತೂಹಲವಂತೂ ಇತ್ತು. ಕುತೂಹಲಗಳೇನು ಎಂಬುದನ್ನು ಆಕೆಯನ್ನು ವರ್ಣಿಸುವುದರ ಜೊತೆಗೆ ಆ ಮನೆಯನ್ನು ವರ್ಣಿಸುತ್ತಾ ಸಾಗುತ್ತಾರೆ. ಕಾಲ ಕಳೆದಂತೆ ಎಲ್ಲವೂ ಬದಲಾಗುತ್ತದೆ. ಹಾಗೆ ಆ ಮನೆಯ ಆಕರ್ಷಣೆಯೂ ಬದಲಾಗಿತ್ತು. ಬಾಲ್ಯ ಕರಗಿತಲ್ಲ ಅನ್ನೋ ಸಾಕ್ಷಾತ್ಕಾರ ಆದ ಘಳಿಗೆಗಳ ಚಿತ್ರಣವಿಲ್ಲಿದೆ.


ಆಶಾ : ಮೂವರು ಗೆಳತಿಯರ ಆಪ್ತತೆಯ ಚಿತ್ರಣದಲ್ಲಿ ಇವರು ಝೀಮಾ ಮತ್ತು ಆಶಾ ಕಾಣಿಸಿತ್ತಾರೆ. ಅಂಗನವಾಡಿಯಿಂದ ಗೆಳತಿಯರಾಗಿದ್ದವರ ಸ್ನೇಹ ಗಾಢವಾದ ಬಗೆ, ಮೂವರ ವಿಭಿನ್ನ ಸ್ವಭಾವಗಳು ಹೊಂದಿಕೊಂಡು ಒಬ್ಬರಿಗೊಬ್ಬರು ಹೆಗಲಾಗುವ ಪರಿ ಕಾಣುತ್ತದೆ. ಇವರಿಬ್ಬರ ಕುರಿತಾಗಿ ಆಶಾ ತೋರಿಸುತ್ತಿದ್ದ ಅವ್ಯಕ್ತವಾದ ಒಲವು.. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯ ದಿನಗಳು, ಕಾಲೇಜಿನ ಸಂದರ್ಭದಲ್ಲಿ ಮೂವರು ಮೂರು ದಿಕ್ಕಾದ ನಂತರ ಆಶಾಳ ಮನೆಯಲ್ಲಿ ದೂರವಾಣಿ ವ್ಯವಸ್ಥೆ ಇಲ್ಲದ್ದರಿಂದ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗದ್ದು... ಆಶಾ ಕಾಲೇಜಿಗೆ ಹೋಗದೆ ಕೆಲಸಕ್ಕೆ ಸೇರಿದ್ದು, ಇದೆಲ್ಲವೂ ಮಾಮೂಲು ಎಂದುಕೊಳ್ಳುವಷ್ಟರಲ್ಲಿ ಆಶಾಳ ಕುರಿತು ತಿಳಿಯುವ ಸತ್ಯ ಬೆಚ್ಚಿ ಬೀಳಿಸಿ, ನಮ್ಮಲ್ಲೂ ಆಶಾಳನ್ನು ಪಡಿಮೂಡಿಸುತ್ತದೆ.


ಮಿಂಚು ಮತ್ತು ಮಳೆ : ಮನವನ್ನು ಹಚ್ಚ ಹಸುರಾಗಿಸುವ ಪ್ರೇಮ ಕಥೆಯೊಂದು ಇಲ್ಲಿದೆ. ಮೌನವೇ ಪ್ರೇಮವೇ ಅಥವಾ ಪ್ರೇಮವೇ ಅಷ್ಟು ಮೌನವಾಗಿತ್ತೇ...? ಹೇಳದೆಯೇ ಕೇವಲ ಮನದ ಮಾತುಗಳ ವಿನಿಮಯವಾಗಿ ಪ್ರೇಮ ಇಷ್ಟು ಗಾಢವಾಗಬಹುದಾ..? ಮಳೆಯ ಆಪ್ತತೆಯಲ್ಲಿ ಮನಸ್ಸಿನ ಭಾವಗಳು ಹಾಗೂ ಮನಸ್ಸಿನ ಮಾತುಗಳನ್ನು ತೆರೆಯುತ್ತಾ ಹೋಗುವ ಪರಿ ಪ್ರೇಮ ಕಥೆಯೊಂದನ್ನು ನಮ್ಮ ಮನದಲ್ಲಿ ಬಿತ್ತಿ ಹೋಗುತ್ತದೆ. ಮಳೆ ಹಾಗೂ ಮಳೆಯ ಸಂಕೇತಗಳಿಂದಲೇ ಪ್ರೇಮ ಕಥೆಯೊಂದನ್ನು ಹೀಗೂ ಹೆಣೆಯಬಹುದಾ ಎನ್ನಿಸಿತು.


ಈ ಕಥಾ ಸಂಕಲನದ ಅರ್ಪಣೆಯನ್ನು ಬಾಲ್ಯದ ಅವಿನಾಭಾವ ಭಾಗವಾದ ನನ್ನ ಅಣ್ಣ ರಾಕೇಶನಿಗೆ ಎಂದು ಅರ್ಪಿಸಿದ್ದಾರೆ. ಇಲ್ಲಿನ ಕತೆಗಳಲ್ಲಿ ಅಣ್ಣ-ತಂಗಿಯರ ಆಪ್ತತೆ, ಗಾಢ ಬಾಂಧವ್ಯ, ಕೋಳಿ ಜಗಳ, ಒಂದಾಗುವಿಕೆ ಎಲ್ಲವೂ ಬಹಳ ನೈಜವಾಗಿ ಮೂಡಿಬಂದಿದೆ.


ಇಲ್ಲಿ ಬರುವ ಪಾತ್ರ ಮತ್ತು ಸನ್ನಿವೇಶಗಳು ಕಾಲ್ಪನಿಕ ಎಂದಿದ್ದಾರಾದರೂ.. ಮುಖ್ಯ ಪಾತ್ರಗಳಿಗೆ ಹೆಸರನ್ನು ನೀಡಿದೆ ಬಾಂಧವ್ಯಗಳ ಕರೆಯನ್ನು ಬಳಸಿರುವುದು ನೈಜ ಘಟನೆ ಎನ್ನುವಂತೆಯೂ.. ಇದು ನಮ್ಮದೇ ಕತೆ ಎನ್ನುವಂತೆಯೂ ಅನ್ನಿಸುವಂತೆ ಮಾಡುತ್ತದೆ. ಗೆಳೆತನದ, ಬಾಲ್ಯದ, ಮಲೆನಾಡಿನ ಪರಿಸರದ ಚಿತ್ರಣಗಳು ಯಾವುದೋ ಸಹಜವಾದ ಘಟನೆಯ ತುಣುಕನ್ನು ಕಣ್ಮುಚ್ಚಿ ಆಸ್ವಾದಿಸುವಂತೆ ಮಾಡುತ್ತದೆ. ಸಹಜವಾದ ಹಾಗೂ ನೈಜವಾದ ಸನ್ನಿವೇಶಗಳು ಈ ಓದನ್ನು ಬಹಳ ಆಪ್ತವಾಗಿಸಿತು. ವಿಭಿನ್ನ ಓದಿನ ಹುಡುಕಾಟದಲ್ಲಿರುವವರು ಓದಿ ನೋಡಿ.


~ ವಿಭಾ ವಿಶ್ವನಾಥ್

ನಭದ ನಕ್ಷತ್ರ (ಪುಸ್ತಕ ಯಾನ - 451)



ಪುಸ್ತಕದ ಶೀರ್ಷಿಕೆ : ನಭದ ನಕ್ಷತ್ರ

ಲೇಖಕರು : ಹೆಚ್. ಕೆ ಅನುಸೂಯ ಸಂಪತ್

ಪ್ರಕಾಶಕರು : ವಿಕ್ರಂ ಪ್ರಕಾಶನ

ಪ್ರಥಮ ಮುದ್ರಣ : 1994


ಇದು ವಸಂತದ ಚಿಗುರು ಮತ್ತು ನಭದ ನಕ್ಷತ್ರ ಎಂಬ ಎರಡು ಕಾದಂಬರಿಗಳ ಸಂಯುಕ್ತ ಸಂಪುಟ. ನಾನೀಗ ಆಯ್ಕೆ ಮಾಡಿಕೊಂಡಿರುವ ಕಾದಂಬರಿ ನಭದ ನಕ್ಷತ್ರ.


ಇಂದಿರಾ ರಾವ್ ಅವರು 'ವಿವಾಹ ಸದನ' ಸ್ಥಾಪಿಸಿದಾಗಿನಿಂದ ಹಲವಾರು ಯುವಕ ಯುವತಿಯರನ್ನು ನೋಡಿದ್ದರೂ.. "ವಿಧವೆಯನ್ನು ಮದುವೆಯಾಗಲು ಇಚ್ಚಿಸುತ್ತೇನೆ" ಎಂದು ಬರೆದಿದ್ದ ವಿಭಿನ್ನ ವ್ಯಕ್ತಿಯನ್ನು ಭೇಟಿಯಾಗಿ ಅವನ ಮನದ ಮಾತನ್ನು ತಿಳಿದುಕೊಳ್ಳುತ್ತಿದ್ದರು. ಹಾಗೆ ಆಶಿಸಿದ್ದ ವ್ಯಕ್ತಿ ಪ್ರಸಾದ್. ತಂದೆ-ತಾಯಿ ಇಲ್ಲದ, 35 ವರ್ಷ ವಯಸ್ಸಿನ ಪದವೀಧರನಾಗಿದ್ದ ಆತನಿಗೆ ಆಸ್ತಿಯೂ ಇರಲಿಲ್ಲ. ಖಾಸಗಿ ಕಂಪನಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. 


ಇಂದಿರಾ ರಾವ್ ಅವರಿಗೆ ಪ್ರಸಾದ್ ನೋಡಲು ಸ್ಪುರದ್ರೂಪಿಯಾಗಿ ಹಾಗೂ ಸದ್ಗುಣವಂತನಾಗಿ ಕಂಡು ಅವರ ಮನಸ್ಸಿನಲ್ಲಿ ಆತನಿಗೆ ತಕ್ಕ ಹುಡುಗಿ ಪ್ರಭಾ ಎಂದೆನಿಸಿತು. ಅವರ ನೆರೆಮನೆಯವರೇ ಆಗಿದ್ದ ಪ್ರಭಾಳನ್ನು 10 ವರ್ಷದವಳಾಗಿದ್ದಾಗಿನಿಂದಲೂ ಕಂಡಿದ್ದರು. ವಿದ್ಯಾವಂತ, ಶ್ರೀಮಂತ, ಸ್ಫುರದ್ರೂಪಿ ಗಂಡನನ್ನು ಪಡೆದ ಪ್ರಭಾಳ ಪುಣ್ಯ ಅವಳ ಬಾಳಿನಲ್ಲಿ ಉಳಿದದ್ದು ಕೇವಲ ಐದು ವರ್ಷವಷ್ಟೇ.. ಎರಡು ವರ್ಷದ ಗಂಡು ಮಗು ನವೀನ್ ತಾಯಿಯಾಗಿದ್ದ ಅವಳು ಈಗ ನೋವನ್ನು ನುಂಗಿ ಮಗನಿಗಾಗಿ ಬದುಕುತ್ತಿದ್ದಳು. ಅವಳ ಬದಲಾದ ಬದುಕನ್ನು ನೋಡಿ ಮರುಗುತ್ತಿದ್ದವರಲ್ಲಿ ಇವರೂ ಒಬ್ಬರು. 


ಈಗ ಪ್ರಸಾದನ ಮಾತಿನಿಂದ, ಪ್ರಭಾಳ ಮರು ವಿವಾಹವಾದರೆ ಎಂಬ ಆಶಾಕಿರಣದಿಂದ ಅವಳ ಜೊತೆ ಮಾತನಾಡಿದರು. ಆದರೆ, ಅವಳು ಆಸಕ್ತಿ ತೋರಲಿಲ್ಲ. ಬಿ.ಎಸ್ಸಿ ಆಗಿದೆ. ಹೇಗಾದರೂ ಕೆಲಸ ಹುಡುಕಿಕೊಂಡು ಜೀವನ ರೂಪಿಸಿಕೊಳ್ಳುವೆ ಎಂದೇ ಹೇಳಿದ್ದಳು. ಮೊದಲ ಪತಿ ರಾಜುವನ್ನು ಮರೆಯಲು ಅವಳಿಗೆ ಸಾಧ್ಯವಾಗಿರಲಿಲ್ಲ. ಅಲ್ಲದೆ, ಅಪಾರ ಪ್ರೇಮ ಕೊಟ್ಟಿದ್ದ ಗಂಡನ ಜಾಗದಲ್ಲಿ ಹಾಗೂ ಮಗನ ತಂದೆಯಾಗಿ ಬೇರೆಯವರನ್ನು ಊಹಿಸಿಕೊಳ್ಳಲು ಅವಳಿಗೆ ಇಷ್ಟವಿರಲಿಲ್ಲ. 


ಆದರೆ, ಪ್ರಭಾಳ ತಂದೆ ಅವಳ ಮರು ವಿವಾಹಕ್ಕೆ ಒಪ್ಪಿಗೆ ಕೊಡುತ್ತಾರೆ. ಈಗ ವಾತ್ಸಲ್ಯ ತೋರುವ ಅಣ್ಣ-ಅತ್ತಿಗೆಯರು ಈಗಿನಂತೆಯೇ ಮುಂದೆಯೂ ನೋಡಿಕೊಳ್ಳುತ್ತಾರಾ..? ತಂದೆ ಹೋದ ನಂತರ ಭವಿಷ್ಯ ಯಾವ ರೀತಿ ಇರುತ್ತದೆ ಎಂಬೆಲ್ಲಾ ಆಲೋಚನೆಗಳು ಬಂದರೂ ಕೊನೆಗೆ ಅಳೆದು ತೂಗಿ ಪ್ರಸಾದ್ ನನ್ನು ಭೇಟಿಯಾಗಲು ಒಪ್ಪಿದ್ದಳು. ಮಾತುಕತೆಯ ನಂತರ ತನ್ನ ನಿರ್ಧಾರವನ್ನು ತಂದೆಗೆ ಬಿಟ್ಟಾಗ ಪ್ರಭಾಳ ತಂದೆ ಮತ್ತು ಅಣ್ಣ ಈ ವಿವಾಹಕ್ಕೆ ಒಪ್ಪಿಗೆ ಕೊಟ್ಟರು. 


ಇಂತಹ ಮರು ವಿವಾಹಗಳು ನಡೆದಾಗ ಭೂತದ ನೆನಪುಗಳನ್ನು ಇಷ್ಟವಿಲ್ಲದಿದ್ದರೂ ಮರೆಯಬೇಕಾಗಿ ಬರುತ್ತದೆ. ಭವಿಷ್ಯದ ಸುಖ ಕಾಣುವ ಆಸೆಯಿಂದ.. ಧೈರ್ಯ ಮಾಡಿ ಹೊಸ ಬದುಕಿಗೆ ಹೆಜ್ಜೆ ಇರಿಸಿದ್ದ ಪ್ರಭಾ ಈಗ ಇಬ್ಬಂದಿತನದಲ್ಲಿ ನಲುಗಬೇಕಾಗಿತ್ತು. 


ತಂದೆಯ ಪ್ರೀತಿಯನ್ನೇ ಅರಿಯದ ನವೀನ್ ಪಾಲಿಗೆ ಈಗ ಪ್ರಸಾದ್ ಬಂದದ್ದು ಹೆಚ್ಚಿನ ಖುಷಿ ಕೊಟ್ಟಿತ್ತು. ಹಾಗಾಗಿ ಆತನ ಬೇಡಿಕೆಗಳು ಪ್ರಸಾದ್ ಬಳಿಯಲ್ಲಿ ಹೆಚ್ಚೇ ಇದ್ದವೋ. ಆದರೆ, ಪ್ರಸಾದ್ ನ ಸ್ವಭಾವ ವಿಭಿನ್ನವಾಗಿತ್ತು. ತಾನು ಹೇಳಿದ ಹಾಗೆ ಕೇಳಿಕೊಂಡು ವಿಧೇಯತೆಯಿಂದ ಇರಬೇಕಾಗಿತ್ತು. ಇಲ್ಲದಿದ್ದರೆ ರೌದ್ರಾವತಾರ ತೋರುತ್ತಿದ್ದ. ಮಗುವಿನ ಹಠ ಹಾಗೂ ಗಂಡನ ಮುನಿಸು ಇವೆರಡನ್ನು ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದಳು ಪ್ರಭಾ.


ಚಿಕ್ಕ ಮಗುವಾದ್ದರಿಂದ ಹಾಗೂ ಪ್ರಭಾಳ ಪೂರ್ತಿ ಗಮನ ಇಷ್ಟು ದಿನವೂ ತನ್ನದೇ ಇದ್ದುದರಿಂದ ನವೀನ್ ಅವಳನ್ನು ಹೆಚ್ಚಾಗಿ ಅಂಟಿಕೊಳ್ಳುತ್ತಿದ್ದ. ಪ್ರಸಾದ್ ಅರ್ಥಮಾಡಿಕೊಳ್ಳದೆ, ಬೇರೆಯದ್ದೇ ರೀತಿಯ ವ್ಯಂಗ್ಯದ ಚಾವಟಿಗಳನ್ನು ಪ್ರಭಾಳಗೆ ಬೀಸುತ್ತಿದ್ದ. 


ಪ್ರಸಾದ್ ಪ್ರೀತಿ ಬೇರೆಯದ್ದೇ ತರಹ. ಚೆನ್ನಾಗಿದ್ದರೆ ಅತಿ ಪ್ರೀತಿ. ಇಲ್ಲವಾದಲ್ಲಿ ಕೊಂಕು ಮಾತುಗಳಿಂದಲೇ ಹಿಂಸಿಸುತ್ತಿದ್ದ. ಮೊದಮೊದಲಿಗೆ ಚೆನ್ನಾಗಿಯೇ ಸಾಗುತ್ತಿದ್ದ ಸಂಸಾರವನ್ನು ಕಂಡು ಪ್ರಭಾಳ ತಂದೆ ಹಾಗೂ ಇಂದಿರಾ ರಾವ್ ಅವರಿಗೆ ತಮ್ಮ ನಿರ್ಧಾರ ಕಂಡು ಸಮಾಧಾನವಾಗಿತ್ತು. ಮೊದಲ  ಶ್ರೀಮಂತಿಕೆಯನ್ನೇನೂ ಅಪೇಕ್ಷಿಸದೆ.. ಇದ್ದುದರಲ್ಲಿಯೇ ಎಲ್ಲವನ್ನೂ ಅಣಿ ಮಾಡಿಕೊಂಡು, ಬರುವ ಸಂಬಳದಲ್ಲಿಯೇ ಮನೆ ತೂಗಿಸಲು ಪ್ರಭಾ ಹೊಂದಿಕೊಂಡಳು. 


ನವೀನ್ ಖರ್ಚನ್ನು ಪ್ರಸಾದ್ ನಿಭಾಯಿಸಿದ ಅವಶ್ಯಕತೆ ಇರಲಿಲ್ಲ. ಆತನಿಗೆ ಅವನ ತಂದೆ ಭವಿಷ್ಯಕ್ಕೆ ಬೇಕಾದಷ್ಟು ಹಣವನ್ನು ಬಿಟ್ಟು ಹೋಗಿದ್ದರು. ಹೀಗಾಗಿ ಮಗುವಿಗೆ ಖರ್ಚುಗಳಿಗೆ ಪ್ರಸಾದನನ್ನು ಅವಲಂಬಿಸುವಂತಿರಲಿಲ್ಲ. ಪ್ರಭಾ ಆ ಕುರಿತು ಆತನಿಗೆ ಸ್ಪಷ್ಟಪಡಿಸಿದ್ದಳು ಸಹ. ಕೆಲವು ದಿನ ಸುಮ್ಮನಿದ್ದ ಪ್ರಸಾದ್ ತಾನೊಂದು ಸೈಟ್ ಕೊಳ್ಳಲು ರಾಜು ಇಟ್ಟಿದ್ದ ಹಣದಲ್ಲಿ 10,000 ರೂ. ಸಾಲದಂತೆ ಕೊಟ್ಟರೆ, ಬಡ್ಡಿ ಸಮೇತ ವಾಪಸ್ ಮಾಡುತ್ತೇನೆ ಎನ್ನುವ ಬೇಡಿಕೆ ಇಟ್ಟಾಗ ಪ್ರಭಾಳ ಮನಸ್ಸು ಡೋಲಾಯಮಾನವಾಗಿತ್ತು. 


ಆಸೆ ಸಂಧರ್ಭದಲ್ಲಿ ಪ್ರಭಾ ರಾಜುವಿನ ತಮ್ಮನ ಕುರಿತು ಹೇಳುತ್ತಾಳೆ. ಆಗ ಪ್ರಸಾದನ ಪ್ರತಿಕ್ರಿಯೆ ಹೇಗಿತ್ತು..?


ಹಣದ ಅವಶ್ಯಕತೆ ಮನುಷ್ಯನನ್ನು ಯಾವ ರೀತಿ ಬೇಕಾದರೂ ಬದಲಾಯಿಸಬಲ್ಲದು. ಹಣ ಕೊಡಲು ಸ್ಪಷ್ಟವಾಗಿ ನಿರಾಕರಿಸಿದ ಪ್ರಭಾಳ ನಡೆಯಿಂದಾಗಿ ಪ್ರಸಾದ್ ಸಂಪೂರ್ಣವಾಗಿ ಬದಲಾದ. ತನ್ನ ಸ್ವಾರ್ಥವನ್ನು ತ್ಯಾಗ ಮಾಡಿ ವಿಧವೆಯನ್ನು ಕಟ್ಟಿಕೊಂಡು ಈಕೆಯನ್ನು ಉದ್ದಾರ ಮಾಡಲು ಹೊರಟರೆ, ಇವಳು ಕೊಡುವ ಬೆಲೆ ಇಷ್ಟೆಯಾ..? ಎಂದೆಲ್ಲಾ ಮಾತನಾಡಿದ. ಅಷ್ಟಕ್ಕೂ ಆತ ವಿಧವಾ ವಿವಾಹಕ್ಕೆ ಬೇಡಿಕೆ ಇಟ್ಟದ್ದರ ಹಿನ್ನೆಲೆ ಏನಿತ್ತು..?


ಪ್ರಭಾ ತನ್ನ ಖರ್ಚಿಗಾಗಿ ಪ್ರಸಾದನ ಬಳಿ ಬೇಡುವುದನ್ನು ಬಿಟ್ಟಿದ್ದಳು. ರಾಜುವಿನ ಹಣದಲ್ಲಿಯೂ ಆಕೆ ಸ್ವಂತಕ್ಕಾಗಿ ಖರ್ಚು ಮಾಡಿಕೊಳ್ಳುತ್ತಿರಲಿಲ್ಲ. ಇನ್ನು ತಂದೆಯ ಬಳಿಯೂ ಕೇಳುತ್ತಿರಲಿಲ್ಲ. ಹೀಗಿದ್ದಾಗ ಪ್ರಭಾ ತನ್ನ ಖರ್ಚಿಗೆ ಯಾವ ದಾರಿಯನ್ನು ಆಯ್ದುಕೊಂಡಿದ್ದಳು..?


ಮನೆಯಲ್ಲಿ ಮಾತಿನ ಚಕಮಕಿ ಮಾತ್ರವಲ್ಲದೆ, ಈಗ ದ್ವೇಷವು ಮೊಳೆಯಲು ಶುರುವಾಗಿತ್ತು. ಮನೆಯ ಖರ್ಚಿನಿಂದ ಸಂಪೂರ್ಣವಾಗಿ ವಿಮುಖನಾದ ಪ್ರಸಾದ್..


ಪ್ರಭಾಳ ಅಣ್ಣ-ಅತ್ತಿಗೆ ಮನೆಗೆ ಬಂದಾಗ ಹಾಗೂ ಪ್ರಸಾದ್ ತನ್ನ ಸ್ನೇಹಿತರನ್ನು ಮನೆಗೆ ಕರೆ ತಂದಾಗ ಅವನ ಎರಡು ರೀತಿಯ ವರ್ತನೆಗಳು ಹೇಗಿದ್ದವು..?


ದಿನ ದಿನವೂ ಚಿತ್ರ-ವಿಚಿತ್ರ ಹಿಂಸೆ, ನೋವುಗಳಿಂದ ಪ್ರಭಾ ಮಾತ್ರ ಬಳಲಲಿಲ್ಲ. ನವೀನನ ಪುಟ್ಟ ಮನಸ್ಸು ಸಹ ಘಾಸಿಗೊಳಾಗುತ್ತಾ ಹೋಯಿತು. 


ಪ್ರಭಾ ತಾನಾಗಿಯೇ ಏನನ್ನೂ ಹೇಳದಿದ್ದರೂ.. ಇಂದಿರಾ ಅವರಿಗೆ ಪ್ರಭಾಳ ಸಂಸಾರದ ಗುಟ್ಟು ತಿಳಿದದ್ದು ಹೇಗೆ..? ಪ್ರಸಾದ್ ಬಳಿ ಇಂದಿರಾ ಅವರು ಈ ಕುರಿತು ಚರ್ಚಿಸಿದರೇ..?


ಪ್ರಸಾದ್ ಪ್ರಭಾಳ ಗರ್ಭಪಾತ ಮಾಡಿಸಿದ್ದು ನೋಡುವವರ ಕಣ್ಣಿಗೆ ನವೀನ ನ ಮೇಲಿನ ಪ್ರೀತಿ ಕಡಿಮೆಯಾಗಬಾರದು ಎಂಬಂತೆ ತೋರುತ್ತಿದ್ದಾದರೂ.. ನಿಜವಾದ ಕಾರಣ ಏನಿತ್ತು..? 


ಪ್ರಭಾಳ ಪಾಲಿಗೆ ಸುಖ ಎನ್ನುವುದು ನಭದ ನಕ್ಷತ್ರವಾಯಿತೇ..? ಪ್ರಭಾ ಕಾದಂಬರಿಯ ಅಂತ್ಯಕ್ಕೆ ಆಯ್ದುಕೊಂಡ ದಾರಿ ಯಾವುದು..?


ಮಗುವಿದ್ದಾಗ ತಾಯೊಬ್ಬಳು ಮರುವಿವಾಹವಾಗಲು ಏನೆಲ್ಲಾ ಅಡಚಣೆಗಳು..! ಅವೆಲ್ಲವನ್ನು ಮೀರಿ ಒಳ್ಳೆಯ ಭವಿಷ್ಯ ಸಿಕ್ಕಿತು ಎನ್ನುವಾಗ ಸಿಕ್ಕ ಸುಖವು ಮರೀಚಿಕೆಯಾದರೆ..? ಹೆಣ್ಣು ಮಕ್ಕಳ ಸಾಂಸಾರಿಕ ಬದುಕಿನ ಕಷ್ಟದ ಮತ್ತೊಂದು ರೂಪವನ್ನು ಈ ಕಾದಂಬರಿಯಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಹೆಚ್. ಕೆ ಅನುಸೂಯ ಸಂಪತ್ ಅವರು.


~ವಿಭಾ ವಿಶ್ವನಾಥ್

ಭಾನುವಾರ, ಮೇ 24, 2026

ನಲಿಯುತಾ... (ಬೆಳಕಿಂಡಿಯ ಕತೆಗಳು - 22)

ನಲಿವನ್ನು ಹಂಚಲು ಶ್ರಮಿಸುತ್ತಿದ್ದವಳಿಗೆ ಹೆಚ್ಚಾಗಿ ಸಿಕ್ಕಿದ್ದು ನೋವುಣಿಸುವ ಕುಹಕವೇ..! 

"ಹಣ್ಣಿರುವ ಮರಕ್ಕೆ ಮಾತ್ರವೇ ಹೆಚ್ಚಿನ ಕಲ್ಲೇಟು ಬೀಳುವುದು" ಎನ್ನುವ ಅಪ್ಪನ ಮಾತು ಆಗಾಗ ನೆನಪಾಗುತ್ತದೆ. ತಾನು ನಡೆಯುವ ಹಾದಿ ಸರಿಯಾಗಿದೆಯೆಂಬ ನೆಮ್ಮದಿಯಾಗುತ್ತದೆ. ಸಣ್ಣ-ಪುಟ್ಟ ಸಂಭ್ರಮಕ್ಕೆ ನಲಿಯುತ್ತಾ.. ನಲಿವನ್ನಷ್ಟೇ ಹಂಚುತ್ತಾ ಮತ್ತಷ್ಟು ನಳನಳಿಸುತ್ತಾಳೆ.

~ವಿಭಾ ವಿಶ್ವನಾಥ್


ಅರ್ಥಹೀನ ಹತಾಶೆ (ಬೆಳಕಿಂಡಿಯ ಕತೆಗಳು - 21)

ಹಾಸ್ಟೆಲ್ ಗೆ ಹೋದ ಸುಮುಖನಿಗೆ ಮೊಬೈಲ್ ಇರದಿದ್ದಕ್ಕೆ ಹತಾಶೆಯಾಗಿತ್ತು. ಸೋಶಿಯಲ್ ಮೀಡಿಯಾ, ಚಾಟಿಂಗ್ ಎಲ್ಲವನ್ನೂ ಮಿಸ್ ಮಾಡಿಕೊಂಡನಾದರೂ.. ಕ್ರಮೇಣ ಓದಿನತ್ತ ಗಮನ ಹರಿಸಿದ. ಮೊದಲ ಸೆಮಿಸ್ಟರ್ ಪರೀಕ್ಷೆಯ ಅಂಕಗಳು ಆತನ ಸಾಮರ್ಥ್ಯವನ್ನು ಆತನಿಗೆ ಅರಿವಾಗಿಸಿ, ಪೋಷಕರಿಗೂ ಖುಷಿ ತಂದಿತ್ತು. ಎಲ್ಲರಿಂದ ಪಡೆದ ಪ್ರಶಂಸೆಯ ಮುಂದೆ ಮೊಬೈಲ್ ಸಿಗದ ತನ್ನ ಹತಾಶೆ ಎಷ್ಟು ಅರ್ಥಹೀನ ಎನ್ನಿಸಿತ್ತು. ಅಂದು ತನ್ನ ಮನಸನ್ನು ಬದಲಾಯಿಸಿದ ವಾರ್ಡನ್ ಗೆ ಧನ್ಯವಾದಗಳನ್ನು ಹೇಳಲು ಮರೆಯಲಿಲ್ಲ.

~ವಿಭಾ ವಿಶ್ವನಾಥ್


ಅವಳು ಹೇಳುತ್ತಲೇ ಇರುತ್ತಾಳೆ (ಅವಳ ಕವಿತೆಗಳು - 25)


 ಅವಳು ಹೇಳುತ್ತಲೇ ಇರುತ್ತಾಳೆ

ತನ್ನ ನಲಿವುಗಳನ್ನು, ನೋವುಗಳನ್ನು

ಅವಳು ಬಿದ್ದರೂ ಎದ್ದದ್ದನ್ನು

ಸುತ್ತಲಿನವರ ಸತ್ಯಗಳನ್ನು

ಅವಳಿಗಾದ ನಂಬಿಕೆ ದ್ರೋಹಗಳನ್ನು

ಅವಳು ಪಟ್ಟ ಪಾಡನ್ನು

ಪ್ರಾಮಾಣಿಕತೆಗೆ ಸಿಕ್ಕ ಬಹುಮಾನವನ್ನು

ಬಯಲಿಗೆಳೆದ ಅಸತ್ಯಗಳನ್ನು

ಹೀಗೆ ಪ್ರತಿಯೊಂದನ್ನೂ..


ಅವಳು ಹೇಳುತ್ತಲೇ ಇರುತ್ತಾಳೆ

ಪ್ರತಿಯೊಂದನ್ನೂ ಕತೆಯಾಗಿಸಿ

ಕೇಳುವವರ ಆಸಕ್ತಿಗೇನಲ್ಲ

ಓದುವವರ ತಾಳ್ಮೆ ಪರೀಕ್ಷಿಸಲಲ್ಲ

ತನ್ನನ್ನು ನಿರೂಪಿಸಿಕೊಳ್ಳುವುದಕ್ಕಲ್ಲ 

ತಾಳ್ಮೆ ಕಳೆದುಕೊಂಡದ್ದಕ್ಕೇನಲ್ಲ

ತನ್ನೊಳಗನ್ನು ಬರಿದಾಗಿಸಲೂ ಅಲ್ಲ

ಅದು ಕೇವಲ ಅವಳ ಕತೆ ಎಂದಲ್ಲ

ಅವಳಂತಹವರ ಕತೆಯಾಗಿರುವುದಕ್ಕೆ


ಅವಳು ಹೇಳುತ್ತಲೇ ಇರುತ್ತಾಳೆ

ತಾನು ಹೇಳಿದ ಮಾತ್ರಕ್ಕೆ

ಏನೋ ಸರಿಯಾಗುತ್ತದೆಂದಲ್ಲ

ಎಲ್ಲರ ಗಮನ ಸೆಳೆಯಲಲ್ಲ

ಕೇವಲ ಒಂದೆರಡು ದಿನವಲ್ಲ

ಯಾವುದೋ ಒಂದೆರಡು ಕತೆಯಲ್ಲ

ಉಸಿರು ನಿಂತು ಬದುಕು ಮುಗಿದರೂ

ಅವಳಿಗೆ ಹೇಳುವುದು ಉಳಿದಿದೆ

ಮತ್ತವಳು ಹೇಳುತ್ತಲೇ ಇರುತ್ತಾಳೆ


~ವಿಭಾ ವಿಶ್ವನಾಥ್

ಚದುರಿದ ಕತೆಗಳು (ಪುಸ್ತಕ ಯಾನ - 450)


ಪುಸ್ತಕದ ಶೀರ್ಷಿಕೆ : ಚದುರಿದ ಕತೆಗಳು

ಲೇಖಕರು : ಕೊಡಗು ಗಣೇಶ್

ಪ್ರಕಾಶಕರು : ಗಾಯತ್ರೀ ಪ್ರಕಾಶನ

ಪರಿಷ್ಕೃತ ಮರು ಮುದ್ರಣ : 2022

ಪುಟಗಳು : 96

ಬೆಲೆ : 100 ರೂ.


ಕೊಡಗು ಗಣೇಶ್ (ಎ. ಕೆ ಗಣೇಶ್) ಅವರು ಒಂದು ಕುಟುಂಬದ ಕಥೆ, ಒಡಹುಟ್ಟಿದವಳು, ಶೋಷಿತ ಹೆಣ್ಣು ಎಂಬ ಮೂರು ಕಾದಂಬರಿಗಳನ್ನು ಬರೆದಿದ್ದಾರೆ. ಕೊಡಗು ಭಾಷೆಯಲ್ಲಿ ಮಳೆ ನಿಕ್ಕಣೆ ಎಂಬ ಕಥಾಸಂಕಲನ ಪ್ರಕಟಿಸಿದ್ದಾರೆ. ನಾ ಕಂಡ ಅಮೆರಿಕಾ ಎಂಬ ಪ್ರವಾಸ ಕಥನ ಬರೆದಿದ್ದಾರೆ. ಮಿನುಗುತಾರೆ ಇವರ ಮೊದಲ ಕಥಾ ಸಂಕಲನ. 1998ರಲ್ಲಿ ಪ್ರಥಮ ಮುದ್ರಣವಾಗಿತ್ತು. ಅದೇ ಕಥಾ ಸಂಕಲನ ಈಗ ಕೆಲ ಬದಲಾವಣೆಗಳೊಂದಿಗೆ ಮತ್ತೆ ಮರುಮುದ್ರಣಗೊಂಡು ನಮ್ಮ ಓದಿಗೆ ಚದುರಿದ ಕತೆಗಳು ಎಂಬ ಹೆಸರಿನಿಂದ ಲಭ್ಯವಾಗಿದೆ. ಈ ಕಥಾ ಸಂಕಲನದಲ್ಲಿ ಒಟ್ಟು 6 ಕತೆಗಳಿವೆ. 


ಬಿಟ್ಟಿ ಕೂಳು : ಶೇಷಗಿರಿ ರಾವ್ ಅವರು ಖಾಸಗಿ ಶಾಲೆಯ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಅವರ ತಂದೆ ಇಂಗ್ಲೀಷರ ಕಾಲದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದವರು. ಇಂಗ್ಲಿಷ್ ಅಧಿಕಾರಿಗಳು ಸಹ ಗೌರವ ನೀಡುತ್ತಿದ್ದವರು. ಅಂತಹವರ ಮಗನಾಗಿ ಕನ್ನಡದ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದರು ಶೇಷಗಿರಿರಾಯರು ನ ಸಾಹಿತಿಗಳು ಆಗಿದ್ದವರು ನಾಲ್ಕೈದು ಕಥಾ ಸಂಕಲನ ಬರೆದು ಜನಪ್ರಿಯರೂ ಆಗಿದ್ದರು. ಕನ್ನಡದ ಮೇಲಿನ ಅಭಿಮಾನದಿಂದ ಮನೆಯೆಲ್ಲವೂ ಕನ್ನಡಮಯವಾಗಿಯೇ ಬೆಳಗಿತ್ತು. ಮಕ್ಕಳಿಗೂ ಇದೆ ಸ್ವಭಾವ ಬಂದಿತ್ತು. ಇಬ್ಬರು ಗಂಡು ಮಕ್ಕಳಿಗೆ ಶಿವರಾಜ್, ರಾಘವೇಂದ್ರ ಎಂದು ಹೆಸರಿಟ್ಟರು. ಹೆಣ್ಣು ಮಗುವಿಗೆ ಪಾರ್ವತಿ ಎಂದು ಹೆಸರಿಟ್ಟರು. ಇದೆಲ್ಲದಕ್ಕೂ ಮುಖ್ಯ ಕಾರಣ ಡಾ. ರಾಜ್‌ಕುಮಾರ್ ಅವರ ಮೇಲಿರುವ ಅಭಿಮಾನ. ಕಥೆಯುದ್ದಕ್ಕೂ ಇದು ಕಾಣುತ್ತದೆ. ಈ ಕಾಲಕ್ಕೆ ಸರಿಹೊಂದುವ ಕೆಲಸಕ್ಕೆ ಇಂಗ್ಲಿಷ್ ನ ಅಗತ್ಯವಿತ್ತು. ಆದರೆ, ಗಂಡು ಮಕ್ಕಳಿಬ್ಬರೂ ಕನ್ನಡದಲ್ಲಿಯೇ ಬಿ.ಎ ಹಾಗೂ ಎಂ .ಎ ಮಾಡಿದ್ದವರು. ಕೆಲಸ ಸಿಗದ ಕಾರಣಕ್ಕೆ ಅವರನ್ನು 'ಬಿಟ್ಟಿಕೂಳು' ಎಂದು ಹಂಗಿಸುತ್ತಿದ್ದ ಶೇಷಗಿರಿ ರಾವ್ ಅವರ ಮಕ್ಕಳ ಭವಿಷ್ಯ ಬದಲಾಗುವ ಸಂದರ್ಭ ಬರುತ್ತದೆ. ಅವರು ಹಂಗಿಸುತ್ತಿದ್ದ ಪದವೇ ಮುಂದೆ ಅವರನ್ನು ದೈತ್ಯಾಕಾರವಾಗಿ ಕಾಡುವ ಕಥೆ ಇಲ್ಲಿದೆ. ಮೂವರು ಮಕ್ಕಳ ಮೂರು ಭವಿಷ್ಯದ ಚಿತ್ರಣ ಇಲ್ಲಿದೆ.


ಅನಾಥ ಹೆಣ್ಣು : ವಸುಂಧರಾಳಿಗೆ ಬುದ್ಧಿ ಬಂದಾಗಿನಿಂದಲೂ ಪ್ರಪಂಚದಲ್ಲಿ ತನಗೆ ಯಾರೂ ಇಲ್ಲವೆಂಬುದು ಗೊತ್ತಿತ್ತು. ಹೇಗೆ ಬೆಳೆದೆ ? ಹೇಗೆ ದೊಡ್ಡವಳಾದೆ ? ಎಂಬ ಆಲೋಚನೆ ಮೂಡುವ ಹೊತ್ತಿಗೆ ಮನೆಯೂ ಇಲ್ಲದೆ, ತನ್ನವರೆನ್ನುವವರಿಲ್ಲದೆ ಬದುಕಿದ್ದಳು. ಈಗ ಅವಳ ಯೌವ್ವನದ ದಿನಗಳಲ್ಲಿ ತನ್ನ ಮಾನ ರಕ್ಷಿಸಿಕೊಳ್ಳಬೇಕು ಎಂಬುವ ಕನಿಷ್ಟ ಪ್ರಜ್ಞೆ ಮೂಡಿತ್ತು. ನಗರಕ್ಕೆ ಬಂದ ವಸುಂಧರಾಳ ಭವಿಷ್ಯ ಯಾವ ರೀತಿ ರೂಪುಗೊಂಡಿತು..? ಯಾರೂ ಇಲ್ಲದ ಅನಾಥ ಹೆಣ್ಣೊಬ್ಬಳು ಯಾವ ಹಾದಿ ಹಿಡಿದಳು..? ಅವಳ ಮಗಳು ಈಗ ದೊಡ್ಡವಳಾಗಿ ಅನಾಥೆಯಾಗಿ ಮತ್ತೆ ಅದೇ ಜಾಗದಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದ್ದೇಕೆ ಓದಿ ನೋಡಿ.


ಮಿನುಗು ತಾರೆ : ಹೆಸರಿಗೆ ತಕ್ಕ ಚೆಲುವೆಯಾಗಿದ್ದ ಶ್ವೇತ ಊರಿನ ಶ್ರೀಮಂತರ ಸಾಲಿನಲ್ಲಿ ನಿಲ್ಲುವ ಜಗಪತಿರಾಯರ ಒಬ್ಬಳೇ ಮುದ್ದಿನ ಮಗಳು. ಕಾಲೇಜಿನಲ್ಲಿ ಎಲ್ಲರ ಕನಸಿನ ಕನ್ಯೆ. ಹಾಗೆಂದು ದರ್ಪ ತೋರಿದವಳಲ್ಲ. ಸರಳ ನಡೆ, ಸ್ನೇಹ ಮನೋಭಾವದಿಂದ ಎಲ್ಲರ ಮನೆಗೆದ್ದವಳು. ಕರ್ನಾಟಕದ ಸೌಂದರ್ಯ ಸ್ಪರ್ಧೆ ಮಿನುಗು ತಾರೆ ಸ್ಪರ್ಧೆಗೆ ಕಾಲೇಜಿನಿಂದಲೇ ಆಯ್ಕೆಯಾಗಿದ್ದಳು. ತಂದೆ-ತಾಯಿಯರ ಸಂಭ್ರಮ ಮುಗಿಲ ಮುಟ್ಟಿತ್ತು. ಶ್ವೇತ ಆ ಸ್ಪರ್ಧೆಯಲ್ಲಿ ಗೆದ್ದ ಮೇಲಂತೂ ಅವರ ಸಂಭ್ರಮ ಹೇಳತೀರದು. ಅದಾದ ನಂತರ ಪರಿಸ್ಥಿತಿ ಬದಲಾಗಿತ್ತು. ಶ್ವೇತ ಕಾಲೇಜಿಗೆ ಹೋಗದೆ ಅವಳದೇ ನೋವಿನಲ್ಲಿ ಉಳಿದಾಗ ಅವಳ ಪಾಲಿನ ಪ್ರೇಮವಾಗಿ ಸಿಕ್ಕಿದ್ದು ಆಕಾಶ್. ಆಕಾಶ್ ವಿವಾಹದ ನಂತರ ಶ್ವೇತಳ ಪರಿಸ್ಥಿತಿ ಗೊತ್ತಾಯಿತಾದರೂ.. ಆಕಾಶ್ ಅವಳ ಹೃದಯವಂತಿಕೆಗೆ ಬೆಲೆ ಕೊಡುತ್ತಾನೆ. ಮುಂದೆ ಶ್ವೇತಳ ಮನಸ್ಥಿತಿ ಮಾತ್ರವಲ್ಲ ಅವಳ ಬದುಕು ಬದಲಾಗುತ್ತದೆ. ಶ್ವೇತಳ ಬದುಕು ಬದಲಾಗಿದ್ದಾದರೂ ಹೇಗೆ..? ಆಕಾಶನ ಬದುಕು ಏನಾಯ್ತು ಓದಿ ನೋಡಿ.


ನನ್ನ ಮದುವೆ : ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದ ತಂದೆಗೆ ಒಬ್ಬನೇ ಮಗನಾಗಿದ್ದವನಿಗೆ.. ಹಲವಾರು ಸಂಬಂಧಗಳು ಬರುತ್ತಿದ್ದಾದರೂ .. ಅವನಿಷ್ಟ ಪಟ್ಟ ರೂಪವಂತೆಯೇ ಒಪ್ಪಿದ್ದರ ಜೊತೆಗೆ ಮಗಳನ್ನೂ ಕೊಟ್ಟು ಪ್ರೈವೇಟ್ ಕಂಪನಿಯಲ್ಲಿ ಕೆಲಸವನ್ನು ಕೊಡಿಸಿದ್ದರು. ಅದಕ್ಕೆ ಕಾರಣವೂ ಇತ್ತು. ಮಗಳ ಐಬನ್ನು ಗಂಡಿನ ತಂದೆ-ತಾಯಿಯ ಬಳಿ ಹೇಳಿದ್ದರಾದರೂ ಹುಡುಗನಿಗೆ ಆ ವಿಚಾರ ತಿಳಿದದ್ದು ವಿವಾಹದ ನಂತರವೇ.. ಹಾಗೆಂದು, ಅವಳ ಮೇಲಿನ ಪ್ರೀತಿ ಕಡಿಮೆಯಾಗಲಿಲ್ಲ. ಅವರ ವಿವಾಹದಿಂದ ಶುರುವಾದ ಕಥೆ ಅವಳಿ ಹೆಣ್ಣು ಮಕ್ಕಳ ವಿವಾಹದ ಆಲೋಚನೆಯವರೆಗೂ ಹೋದ ಸಂದರ್ಭವನ್ನು ಇಲ್ಲಿ ಕಾಣಬಹುದು.


ಮಾಲತಿ : ಇದು ಮಾಲತಿ ಎಂಬ ಹೆಣ್ಣಿನ ಬದುಕಿನ ಜೀವನಗಾಥೆ. ಸುಂದರಿಯಾಗಿದ್ದ ಮಾಲತಿ ಹಾಗೂ ಅವಳ ಚಾರಿತ್ರ್ಯದ ಕುರಿತ ವಿಚಾರಗಳನ್ನು ಕಥೆಯ ಶುರುವಿನಲ್ಲಿ ತೆರೆದಿಡುತ್ತಾರೆ. ಮುಂದೆ ಮಾಲತಿಗೆ ಮನೆಯ ಪರಿಸ್ಥಿತಿಯಿಂದ ಓದಲಾಗದೆ, ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಗರ್ಲ್ಸ್ ಕೆಲಸಕ್ಕೆ ಸೇರುವ ಅನಿವಾರ್ಯತೆ ಬರುತ್ತದೆ. ಕಾಲೇಜಿನ ಗೆಳೆಯನಾಗಿದ್ದ ಪ್ರಕಾಶ್ ನಿಂದ ಅವಳ ಬದುಕಿನ ಗತಿಯೇ ಬದಲಾಗುತ್ತದೆ. ತಂದೆ ತಾಯಿ ವಿವಾಹಕ್ಕೆ ವಯಸ್ಸಾಗಿದ್ದ ವರನನ್ನು ಗೊತ್ತು ಮಾಡಿದಾಗ ಪ್ರಕಾಶನ ಸಹಾಯದಿಂದ ಮದ್ರಾಸಿಗೆ ಹೊರಡುತ್ತಾಳಾದರೂ.. ಅಲ್ಲಿ ಪ್ರಕಾಶ ಹೇಳಿದಂತೆ ಕೇಳಲು ಒಪ್ಪುವುದಿಲ್ಲ. ಚಿತ್ರರಂಗಕ್ಕೆ ಸೇರಲು ಹೊರಟವಳಿಗೆ ಎದುರಾದ ತಪ್ಪು ದಾರಿ ಹಿಡಿಯುವ ಅನಿವಾರ್ಯತೆಯನ್ನು ನಿರಾಕರಿಸಿ ತನ್ನದೇ ಬದುಕು ಕಟ್ಟಿಕೊಳ್ಳುವ ಮಾಲತಿಯ ಕಥೆ ಇಲ್ಲಿದೆ. ಅಷ್ಟೆಲ್ಲಾ ಬವಣೆ ಅನುಭವಿಸಿದ ಮಾಲತಿಯ ಬದುಕಿನ ಅಂತ್ಯವನ್ನು ಬೇರೆ ರೀತಿಯಲ್ಲಿ ಮಾಡಿದರೆ ಈ ಕಥೆ ಸ್ಪೂರ್ತಿದಾಯಕವಾಗಿರುತ್ತಿತ್ತು ಎನ್ನುವುದು ನನ್ನ ಅನಿಸಿಕೆ.


ಹೃದಯದ ಕಣ್ಗಳಿಂದ : ಬೀದಿ ಬದಿಯಲ್ಲಿ ವಾಸಿಸುತ್ತಿದ್ದವನು ಆದಾಯಕ್ಕಾಗಿ ನೆಚ್ಚಿದ್ದು ತನ್ನ ಹಾರ್ಮೋನಿಯಂ ಅನ್ನು. ರೈಲಿನಲ್ಲಿ ಪ್ರತಿದಿನ ಹಾಡುತ್ತಾ ಕಾಸು ಸಂಪಾದಿಸುತ್ತಿದ್ದನು. ದಷ್ಟಪುಷ್ಟವಾದ ದೇಹ, ಒಳ್ಳೆಯ ಕಂಠವಿದ್ದರೂ... ಚರ್ಮ ಕಾಣಿಸದಷ್ಟು ದೊಡ್ಡ ಗುಳ್ಳೆಯ ಗಂಟುಗಳಿದ್ದ ಮುಖ. ಆದರೆ, ಮಾನವೀಯತೆ ಎಲ್ಲರಿಗಿಂತಲೂ ಹೆಚ್ಚೇ ಇದ್ದಿತು. ಈಗ ಅವನಿಗೊಂದು ಸಂಸಾರವಿತ್ತು. ಗೂನು ಬೆನ್ನಿನ, ಮೂಕ ಹಾಗೂ ಕಿವುಡು ಹೆಣ್ಣೊಬ್ಬಳು ಮನೆಯ ಯಜಮಾನಿಯಂತೆ ಮನೆಯನ್ನು ನಿರ್ವಹಿಸುತ್ತಿದ್ದಳು. ಜ್ಯೋತಿ ಎಂಬ ಕಣ್ಣು ಕಾಣದ ಹುಡುಗಿಯ ದುರಂತಗಾಥೆ ಕೇಳಿ ಆಕೆಗೆ ಬೆಳಕಾಗಲು ಶ್ರಮಿಸುತ್ತಾನೆ. ಮಗಳಂತೆ ಸಲಹುತ್ತಾನೆ. ಈ ಮೂವರ ಬಾಂಧವ್ಯದ ಕಥೆಯನ್ನು ನಾವೂ ಹೃದಯದ ಕಣ್ಣುಗಳಿಂದ ನೋಡಿದಾಗ ಹೆಚ್ಚೇ ತಾಕುತ್ತದೆ.


ಕಥೆಯಲ್ಲಿ ಕಟ್ಟಿಕೊಟ್ಟಿರುವ ಚಿತ್ರಣಗಳು ವಾಸ್ತವವನ್ನು ಕಣ್ಮುಂದೆ ತರುತ್ತವೆ. ಎಲ್ಲಾ ಕಥೆಗಳಲ್ಲಿಯೂ ದುರಂತದ ಪ್ರಮಾಣ ಹೆಚ್ಚೇ ಇದೆ ಎನಿಸಿತು. ಕಥೆಗೆ ತಕ್ಕ ಭಾಷೆ, ಸಂಭಾಷಣೆ, ನಿರೂಪಣೆ ಆಸಕ್ತಿಯಿಂದ ಓದಿಸುತ್ತದೆ. 

~ವಿಭಾ ವಿಶ್ವನಾಥ್

ನಕ್ಷತ್ರ ಮಲ್ಲಿಗೆ (ಪುಸ್ತಕ ಯಾನ - 449)


ಪುಸ್ತಕದ ಶೀರ್ಷಿಕೆ : ನಕ್ಷತ್ರ ಮಲ್ಲಿಗೆ

ಲೇಖಕರು : ಹೆಚ್. ಜಿ. ರಾಧಾದೇವಿ 

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 1999

ಮರು ಮುದ್ರಣ: 2020


'ನಕ್ಷತ್ರ ಮಲ್ಲಿಗೆ' ಎಂಬ ಕಾದಂಬರಿಯ ಶೀರ್ಷಿಕೆ ಕುತೂಹಲ ಮೂಡಿಸಿತು. ನಿತ್ಯ ಮಲ್ಲಿಗೆ, ದುಂಡು ಮಲ್ಲಿಗೆಗಿಂತ ಸೊಬಗು ಜೊತೆಗೆ ಸುವಾಸನೆಯೂ ಅವಕ್ಕಿಂತ ಮಾದಕ. ಜೊತೆಗೆ ನಕ್ಷತ್ರಗಳಂತೆ ಎಂಟು ದಳ ಚಾಚಿದ್ದ ನಕ್ಷತ್ರ ಮಲ್ಲಿಗೆಯ ಕುರಿತು ಮೊದಲಿಗೆ ಪರಿಚಯ ಮಾಡಿಸುತ್ತಾರೆ. 


ರಂಗಣ್ಣನವರ ಮನೆಯಲ್ಲಿಯೇ ನಕ್ಷತ್ರ ಮಲ್ಲಿಗೆ ಗಿಡ ಬೆಳೆದಿದ್ದರೂ.. ಹೂಗಳು ಹಾರಿ ಪಕ್ಕದ ಮನೆಯ ಭೀಮರಾಯರ ಕಾಂಪೌಂಡ್ ನಲ್ಲಿ ಬೀಳುತ್ತಿತ್ತು. ಗಿಡ ಹಾಕಿ, ಪಾತಿ ಮಾಡಿ, ಗೊಬ್ಬರ ಹಾಕಿ, ಆರೈಕೆ ಮಾಡಿದವರಿಗಿಂತ ಹೆಚ್ಚಿನ ಹೂಗಳ ರಾಶಿ ಅವರಿಗೆ ಶ್ರಮವಿಲ್ಲದೆ ಸಿಗುತ್ತಿತ್ತು. ಇದಕ್ಕೆ ರಂಗಣ್ಣನವರದ್ದು ನಿರ್ಲಿಪ್ತತೆಯ ಉತ್ತರ. "ಯಾರ್ಯಾರಿಗೆ ಎಷ್ಟು ಪ್ರಾಪ್ತಿಯೋ ಅಷ್ಟೇ ಪ್ರಾಪ್ತಿ, ಪಾರಿಜಾತ ಆದರೆ ಗಿಡದ ಕೆಳಗೆ ಉದುರುತ್ತೆ. ಗಿಡ ಹಾಕಿದವರ ಮನೆಗೆ ಸಿಗುತ್ತೆ. ಈ ಹೂವು ಹಾಗಲ್ಲ ಹಾರಿ ಹಾರಿ ದೂರ ಬೀಳುತ್ತೆ" ಎನ್ನುವ ಮಾತು ಹೇಳುತ್ತಿದ್ದರು. ಹೀಗೆ ರಾಮಬಾಣ ಮಲ್ಲಿಗೆ, ಆಕಾಶ ಮಲ್ಲಿಗೆ, ನಕ್ಷತ್ರ ಮಲ್ಲಿಗೆ ಎಂಬ ಹೂವಿನ ಪರಿಚಯ ಮಾಡಿಸುತ್ತಲೇ ರಂಗಣ್ಣನವರ ಮನೆಯ ಪರಿಸ್ಥಿತಿಯನ್ನು ಪರಿಚಯಿಸುತ್ತಾರೆ. 


ರಂಗಣ್ಣನವರು ತಾವು ಕಷ್ಟಪಟ್ಟು ಬೆಳೆಸಿ, ಉನ್ನತ ವಿದ್ಯಾಭ್ಯಾಸ ಮಾಡಿಸಿದ ಮಗ ಒಳ್ಳೆ ಸಂಬಳ ತೆಗೆಯುವ ಅಧಿಕಾರಿಯಾದಾಗ ಶ್ರೀಮಂತ ಯುವತಿಯನ್ನು ವಿವಾಹವಾದ ನಂತರ ಹೆತ್ತ ತಂದೆ-ತಾಯಿಯ ಋಣ ತೀರಿಸುವ ಬದಲು ಮಾವನ ಮನೆಗೆ ನಿಷ್ಠೆಯಿಂದಿರುವ ಚಿತ್ರಣವಿದೆ. 


ನಕ್ಷತ್ರ ಮಲ್ಲಿಗೆಯ ಹಾಗಿದ್ದ ಮಗನನ್ನು ಸಹಿಸುತ್ತಿದ್ದ ರಂಗಣ್ಣನವರಿಗೆ ನಕ್ಷತ್ರ ಮಲ್ಲಿಗೆಯನ್ನು ಸಹಿಸುವುದರಲ್ಲೇನೂ ವಿಪರೀತವಿರಲಿಲ್ಲವೆಂದು ಅನ್ನಿಸುತ್ತದಾದರೂ ಆ ಮನಸ್ಥಿತಿ ಅಷ್ಟು ಸುಲಭವಾಗಿ ಬರಲಾರದು. ರಂಗಣ್ಣನವರು ಗಿಡಗಳಿಗೆ ಆರೈಕೆ ಮಾಡಲು ಎಂದಿಗೂ ಹಿಂದೇಟು ಹಾಕದೆ, ಅಷ್ಟೇ ಶ್ರಮಪಟ್ಟು ಅದನ್ನು ಬೆಳೆಸುತ್ತಿದ್ದರು. ಒಂದೆರಡು ಹಿಡಿ ಹೂ ಮಾತ್ರ ತಮಗೆ ಸಿಕ್ಕರೂ ಅಷ್ಟರಲ್ಲಿಯೇ ತೃಪ್ತಿ ಪಡುತ್ತಿದ್ದ ರಂಗಣ್ಣನವರಿಗೆ ಮಗನ ಕುರಿತು ಅಷ್ಟೇ ತೃಪ್ತಿಯಿತ್ತೇ..?


ರಂಗಣ್ಣ ಹಾಗೂ ಪಾರ್ವತಮ್ಮ ದಂಪತಿಗಳಿಗೆ ರಾಜೇಂದ್ರ ಮಗನಾದರೆ.. ಅವನ ನಂತರ ಮೂವರು ಹೆಣ್ಣುಮಕ್ಕಳಿದ್ದರು. ಮಗನನ್ನು ಚೆನ್ನಾಗಿಯೇ ಓದಿಸಿದರಾದರೂ.. ಅದೃಷ್ಟ ಇರದೇ ಸರಿಯಾದ ಕೆಲಸ ಸಿಕ್ಕಿರದ ಸಂದರ್ಭದಲ್ಲಿ ಇಂಜಿನಿಯರ್ ಶ್ರೀಪಾದರಾಯರ ಒಬ್ಬಳೇ ಪುತ್ರಿ ಮಾಲಿನಿ ಆತನನ್ನು ಪ್ರೀತಿಸಿದಳು. ಮಗಳನ್ನು ಕಷ್ಟಕ್ಕೆ ದೂಡಲು ಇಚ್ಛಿಸಿದ ತಂದೆ ರಾಜೇಂದ್ರನಿಗೆ ಹಲವಾರು ಶರತ್ತುಗಳನ್ನು ವಿಧಿಸಿ ತಮ್ಮ ಮಗಳನ್ನು ವಿವಾಹ ಮಾಡಿಕೊಡಲು ಒಪ್ಪಿದರು. 


ರಾಜೇಂದ್ರನ ಮನೆಯ ಪರಿಸ್ಥಿತಿಯನ್ನೆಲ್ಲ ಅವನಿಂದಲೇ ತಿಳಿದುಕೊಂಡವರು ಪಾಟ್ನಾದಲ್ಲಿ ಇಂಜಿನಿಯರ್ ಕೆಲಸ ಕೊಡಿಸಿ, ಮುಂದೆ ಕಾಂಟ್ರಾಕ್ಟರ್ ಆಗಿರುವ ತಮ್ಮನ ಜೊತೆಗೆ ವ್ಯವಹಾರ ಮಾಡಲು, ಅಂಗಡಿ ಮಾಲೀಕನಾಗಲು, ತಮ್ಮ ಹೊಸಮನೆಯ ರೂಪು-ರೇಷೆಗಳನ್ನೆಲ್ಲ ತಿಳಿಸಿ ಮಗಳ ಮುಂದಿನ ಭವಿಷ್ಯವನ್ನು ಗಟ್ಟಿಗೊಳಿಸಿದರು. 


ಸೋದರತ್ತೆಯ ಕುರೂಪಿ ಹಾಗೂ ಓದದ ಮಗಳನ್ನು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ವಿವಾಹವಾಗುವ ಒತ್ತಡ ಮನೆಯಿಂದ ಬಂದಾಗ ರಾಜೇಂದ್ರ ಅದನ್ನು ನಿರಾಕರಿಸಿ ಮಾಲಿನಿಯನ್ನು ಮದುವೆಯಾಗುವ ವಿಚಾರ ತಿಳಿಸುತ್ತಾನೆ. ಪಾರ್ವತಮ್ಮನವರು ಒಪ್ಪಿದರೂ.. ರಂಗಣ್ಣನವರು ಬೀಗರ ಕಪಟ ನಾಟಕವನ್ನು ಕಂಡು ತಳಮಳಿಸುತ್ತಾರೆ. ಆದರೆ ಆ ಕಪಟ ನಾಟಕದ ಸಂಚಿನಲ್ಲಿ ಮಗನದ್ದೂ ಪಾಲಿದೆ ಎಂದು ಅವರಿಗೆ ಅರ್ಥವಾಗಿರಲಿಲ್ಲ. ಆ ಸಂಚೇನು..?


ಮಾಲಿನಿ ಈ ಮನೆಗೆ ಹೊಂದಿಕೊಳ್ಳಲಿಲ್ಲ ಜೊತೆಗೆ ರಾಜೇಂದ್ರ ತನ್ನ ತಂದೆ ತಾಯಿಗೆ ಮನೆಯ ರಿಪೇರಿಗಾಗಿ ಹಣ ಕಳುಹಿಸಲಿಲ್ಲ. ಜೊತೆಗೆ, ತಂದೆ ಹಣ ಕೇಳಿದಾಗಲೆಲ್ಲ ಅದನ್ನು ನೇರವಾಗಿ ನಿರಾಕರಿಸುತ್ತಿದ್ದ. ಮನೆಯಲ್ಲಿ ಹೆಣ್ಣುಮಕ್ಕಳ ವಿವಾಹವಾಗಿದ್ದು ಇಬ್ಬರ ಖರ್ಚಿಗೆ ಅಷ್ಟು ಅವಶ್ಯಕತೆ ಇಲ್ಲವೆಂದು ನಿಷ್ಕರುಣೆಯಿಂದಲೇ ಹೇಳುತ್ತಿದ್ದ. ಮಾಲಿನಿಯ ತವರಿಗೆ ಬಂದು ಹೋದದ್ದು ಮತ್ತೊಬ್ಬರ ಕಡೆಯಿಂದ ಗೊತ್ತಾಗುತ್ತಿತ್ತು. ಮಗ ಚಿಂಟು ಹುಟ್ಟಿದನ್ನು ಪತ್ರ ಬರೆದು ತಿಳಿಸಿದ್ದನಷ್ಟೇ.. ಆದರೆ, ಕೆಲವೊಮ್ಮೆ ರಂಗಣ್ಣನವರ ಹಣದ ಹಪಾಹಪಿ ವಿಪರೀತವೆಂದೂ ಭಾಸವಾಗುವಂತಹ ಸಂಧರ್ಭಗಳೂ ಇಲ್ಲದಿಲ್ಲ. 


ಅತ್ತೆ-ಮಾವನ ಮನೆಯ ಗೃಹಪ್ರವೇಶಕ್ಕೆಂದು ಕರೆಯಲು ರಾಜೇಂದ್ರ ಅವರಿಗೆ ತಕ್ಕದಾದ ಉಡುಗೊರೆಯನ್ನು ತಂದೆ-ತಾಯಿಗೆ ತಂದು ತಾವೇ ತಂದಂತೆ ಅವರಿಗೆ ಕೊಡಲು ಸೂಚಿಸಿದ್ದ. ಅಷ್ಟೇ ಅಲ್ಲದೆ ತಾವು ಇದೇ ಊರಿನಲ್ಲಿ ನೆಲೆಸಲು ಬಂದದ್ದನ್ನು ಆಗ ಹೇಳಿದನಷ್ಟೇ,.


ಬೀಗರ ಶ್ರೀಮಂತಿಕೆ, ಮಗನ ನಿರ್ಲಕ್ಷದ ನಡುವೆಯೂ ಮೊಮ್ಮಗನಿಗಾಗಿ ಹೋಗಿದ್ದರು. ಆಗ ಸಿಕ್ಕದ್ದು ರಾಜೇಂದ್ರನ ಗೆಳೆಯ ವಿಶ್ವನಾಥ. ವಿಶ್ವನಾಥನಿಂದ ರಾಜೇಂದ್ರನ ಪ್ರತಿಯೊಂದು ವಿಚಾರವೂ ಕೂಲಂಕಶವಾಗಿ ರಂಗಣ್ಣ ಹಾಗೂ ಪಾರ್ವತಮ್ಮನವರಿಗೆ ತಿಳಿದಿತ್ತು. ಮತ್ತೊಬ್ಬ ಮಗನಂತೆಯೇ ನಡೆದುಕೊಂಡು ರಾಜೇಂದ್ರನ ಹಣದಿಂದಲೇ ಅವನಿಗೆ ತಿಳಿಯದಂತೆ ಈ ದಂಪತಿಗಳಿಗೆ ಸಹಾಯ ಮಾಡಿದ್ದ ವಿಶ್ವನಾಥ. ಅಷ್ಟಕ್ಕೂ ವಿಶ್ವನಾಥ ಹಾಗೂ ರಂಗಣ್ಣ-ಪಾರ್ವತಮ್ಮ ದಂಪತಿಗಳಿಗೆ ಅಷ್ಟು ವಿಶ್ವಾಸ ಬೆಳೆದದ್ದು ಹೇಗೆ..?


ಈಗ ರಂಗಣ್ಣನವರು ಮಗನಿಗೆ ಕಟುವಾಗಿ ಹಾಗೂ ನಿಷ್ಠುರವಾಗಿ ಮಾತನಾಡುವಷ್ಟು ಸಿದ್ದರಾದರು. ಅದರಿಂದ ರಾಜೇಂದ್ರನಿಗೆ ರೋಷ, ಅಪಮಾನಗಳಾದರೂ ಸಹಿಸಿಕೊಳ್ಳಬೇಕಿತ್ತು. ಆದರೆ, ಅದು ವಿಶ್ವನಾಥನ ಕುಮ್ಮಕ್ಕು ಎಂದು ತಿಳಿಯದೆ ಆತ ತಪ್ಪು ತಿಳಿದನಾದರೂ.. ಅದು ಯಾರ ಮೇಲೆ..?


ರಂಗಣ್ಣನವರಿಗೆ ಸಹಾಯ ಮಾಡಿದ ವಿಶ್ವನಾಥ ಅವರಿಂದ ಪ್ರತಿಯಾಗಿ ಯಾವ ಸಹಾಯದ ನಿರೀಕ್ಷೆ ಇಟ್ಟಿದ್ದ..? ಅದು ಆತನಿಗೆ ದಕ್ಕಿತೇ..?


ರಂಗಣ್ಣನವರ ಮೂವರು ಹೆಣ್ಣುಮಕ್ಕಳಲ್ಲಿ ಯಾರು ಯಾರ ಸಂಸಾರ ಹೇಗಿದ್ದಿತ್ತು..? ಅದರಲ್ಲಿ ಸ್ವಲ್ಪ ಅತಿಯಾಸೆಯವಳು ಎನ್ನಬಹುದಾದ ಗಾಯತ್ರಿಯನ್ನು ಕೊಂಚ ಒಳಗೆ ಬಿಟ್ಟುಕೊಂಡರು. ಯಾವ ಮನಸ್ಥಿತಿ ಹಾಗೂ ಪರಿಸ್ಥಿತಿಯಿಂದ ಆಕೆಯನ್ನು ಹಾಗೂ ಆಕೆಯ ಕುಟುಂಬವನ್ನು ಸಲಹಲು ಒಪ್ಪಿದರು ರಂಗಣ್ಣ ದಂಪತಿಗಳು..?


ನಕ್ಷತ್ರ ಮಲ್ಲಿಗೆಯಂತಿದ್ದ ಮಗ ರಾಜೇಂದ್ರ ಸಂಪೂರ್ಣವಾಗಿ ಅಲ್ಲದಿದ್ದರೂ.. ಒಂದು ಸಹಾಯ ಕೋರಿ ತಂದೆ-ತಾಯಿಯ ಬಳಿಗೆ ಬರುವ ಸಂದರ್ಭ ಬಂದಾಗ ಆತನ ಮನಸ್ಥಿತಿ ಹೇಗಿತ್ತು..? ಮಾಲಿನಿ ಅದನ್ನು ಒಪ್ಪಿದಳೇ...? ತಂದೆ - ತಾಯಿ ಹೇಗೆ ನಡೆದುಕೊಂಡರು..?


ಮಕ್ಕಳೆದುರಿಗೆ ಪರಾಧೀನರಾಗದ ಜೊತೆಗೆ, ಮಕ್ಕಳೆದುರು ಅನ್ನಕ್ಕೆ ಅಂಗಲಾಚದಂತೆ ಬಾಳಿದ ದಂಪತಿಗಳ ಬದುಕು ತಹಬದಿಕೆ ಬಂದದ್ದಕ್ಕೆ ನಿಜವಾಗಿಯೂ ಕಾರಣವೇನು..? 


ಏನೇ ಆದರೂ.. ಮಕ್ಕಳು ಎಷ್ಟೇ ಚೆನ್ನಾಗಿದ್ದರೂ ತಮ್ಮ ವೃದ್ಧಾಪ್ಯದ ದಿನಗಳಿಗೆ ಯಾರನ್ನೂ ಅಂಗಲಾಚುವ ಪರಿಸ್ಥಿತಿ ಬರಬಾರದೆಂದರೆ ತಮ್ಮದಾದ ಆಸ್ತಿ, ಹಣ ಹಾಗೂ ಸ್ವಾಭಿಮಾನ, ಧೈರ್ಯ ಎಷ್ಟು ಮುಖ್ಯ ಎಂಬುದನ್ನು ತೋರುವ ಕಥಾಹಂದರ ಇಲ್ಲಿದೆ. ಅಕಸ್ಮಾತ್ ವಿಶ್ವನಾಥ ಅವರ ಸಹಾಯಕ್ಕೆ ಬರದಿದ್ದರೆ ಅವರ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನೂ ಯೋಚಿಸಬೇಕಿದೆ.


ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಹಾಗೂ ಪರೋಪಕಾರದಿಂದ ಎಂದಿಗೂ ಕೇಡಾಗುವುದಿಲ್ಲ ಎಂಬ ಸಂದೇಶವನ್ನೂ ನೀಡುವ ಕಾದಂಬರಿಯ ಸುಲಲಿತ ಓದು.


~ ವಿಭಾ ವಿಶ್ವನಾಥ್

ಒಡೆಯಲಾರದ ಒಡಪು (ಪುಸ್ತಕ ಯಾನ -448)

ಪುಸ್ತಕದ ಶೀರ್ಷಿಕೆ : ಒಡೆಯಲಾರದ ಒಡಪು 

ಲೇಖಕರು : ಫಾತಿಮಾ ರಲಿಯಾ 

ಪ್ರಕಾಶಕರು : ಸಂಕಥನ

ಪ್ರಥಮ ಮುದ್ರಣ : 2023

ಪುಟಗಳು : 99

ಬೆಲೆ : 150 ರೂ. 


ಫಾತಿಮಾ ರಲಿಯಾ ಅವರ ಮೊದಲ ಕಥಾಸಂಕಲನ ಇದು. ಈ ಕಥಾ ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. ಸಾಮಾನ್ಯವಾಗಿ ಕಥಾ ಸಂಕಲನದ ಹೆಸರಿನ ಕಥೆಯೊಂದನ್ನು ಕಾಣುತ್ತೇವೆ. ಆದರೆ, ಈ ಕಥಾಸಂಕಲನದ ಶೀರ್ಷಿಕೆ ಈ ಎಲ್ಲಾ ಕಥೆಗಳಿಗೆ ಅನ್ವರ್ಥದಂತಿದೆ. 


ನವಿಲು ಬಣ್ಣದ ಸೀರೆ : ಅಜ್ಜಿ ಹೇಳಿದ ಮಾತೇ ಸುಚಿತ್ರಾ ತಲೆಯಲ್ಲಿ ಬಲವಾಗಿ ಬೇರೂರಿತ್ತು. 'ಅಪ್ಪ ದೇವರಂತಹ ಮನುಷ್ಯ. ಅವನ ಜೊತೆಗಿರುವ ಯೋಗ್ಯತೆ ಅಮ್ಮನಿಗಿಲ್ಲ' ಎನ್ನುವ ಮಾತು ಅವಳ ತಲೆಯಲ್ಲಿ ಗಟ್ಟಿಯಾಗಿ ಕೂತಿದ್ದರಿಂದಲೋ ಅಥವಾ ಅಮ್ಮನ ಚಾರಿತ್ರ್ಯದ ಕುರಿತ ಒಡಕು ಮಾತುಗಳಿಂದ ಅವಳು ಅವಮಾನ ಅನುಭವಿಸುತ್ತಿದ್ದರಿಂದಲೋ ಅಮ್ಮ ಹಾಗೂ ಅವಳ ನಡುವೆ ಕಂದಕವೇ ಸೃಷ್ಟಿಯಾಗುತ್ತಾ ಸಾಗಿತ್ತು. ಅಪ್ಪ ಕಣ್ಮರೆಯಾದ ದಿನದಿಂದ ಹುಟ್ಟಿದ ಪರಿಚಿತ ಮೌನ ಕಳಚುವ ಸಮಯ ಬಂದಿತೇ..? ಸುಚಿತ್ರಾಳಿಗೆ ಅಮ್ಮ ಮಾತ್ರವಲ್ಲದೆ ಅಪ್ಪನು ಬೇರೆಯದ್ದೆ ಬಗೆಯಲ್ಲಿ ಕಂಡ ಕಥೆ ಇದೆ. ಇಲ್ಲಿ ನವಿಲು ಬಣ್ಣದ ಸೀರೆಯ ನಂಟೇನು ಓದಿ ನೋಡಿ. ಸಮಾಜದ ನೋಟಕ್ಕೂ.. ಸತ್ಯಕ್ಕೂ.. ಎಷ್ಟು ಅಂತರವಲ್ಲವಾ..?


ಕವಿಶೈಲ : ತನ್ನ ಸಂಗಾತಿ ತನ್ನ ಹವ್ಯಾಸ, ಆಸಕ್ತಿಯನ್ನು ಪ್ರೋತ್ಸಾಹಿಸಲಿ ಹಾಗೂ ಸಮಾನ ಅಭಿರುಚಿಗಳಿರಲಿ ಎಂದೇ ಭಾವಿಸುವ ಹುಡುಗಿಗೆ ಸಿಕ್ಕ ಭಾವೀ ಪತಿ ತನ್ನ ಕವಿತೆಗಳ ಕುರಿತಾಗಿ ಆಸಕ್ತಿ ತೋರಿಸುತ್ತಿರುವುದಿಲ್ಲ. ಜೊತೆಗೆ ಪ್ರಾಕ್ಟಿಕಲ್ ಮನಸ್ಥಿತಿಯ ಅವನ ಭಾವಗಳು ಇಷ್ಟವಾಗದೆ ಅಪ್ಪನ ಬಳಿಯಲ್ಲಿಯೂ ಹಂಚಿಕೊಂಡಿದ್ದಳು. ಆದರೆ, ಕವಿಶೈಲದಲ್ಲಿ ನಡೆದ ಒಂದು ಘಟನೆ ಅವಳ ಆಲೋಚನೆಯ ದಿಕ್ಕನ್ನು ತಿರುಗಿಸಿದ ಕಥೆ ಇಲ್ಲಿದೆ.


ಸಂಕರನ ಹಸು ಕರು ಹಾಕಿತು : ಶಂಕರಣ್ಣನ ಮನೆಯ ಹಸು ಗೌರಿ ಕರು ಹಾಕಿದ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದ ಖತೀಜಮ್ಮ ಹಾಗೂ ಸರಸು ಗೌರಿಯ ಕರುವಿನ ದೇಖಿರೇಖಿ ನೋಡಿಕೊಂಡಿದ್ದರು. ಮೊದಲ ಬಾರಿಗೆ ಹಾಲು ಕರೆದು ಅದನ್ನು ಅರ್ಧರ್ಧ ಪಾಲು ಮಾಡಿ ಒಂದು ಪಾಲನ್ನು ಊರ ಭಜನಾ ಮಂದಿರಕ್ಕೂ, ಮತ್ತೊಂದು ಪಾಲನ್ನು ಮಸೀದಿಗೆಂದು ಇಟ್ಟಿದ್ದಾಗ ಸರಸು ಮಾಡಿದ್ದೇನು..? ಇದಕ್ಕೆ ಮೂಕ ಸಾಕ್ಷಿಯಾದ ಖತೀಜಮ್ಮ ಹೇಗೆ ಪ್ರತಿಕ್ರಿಯಿಸುತ್ತಾರೆ..? ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದ ಮೂರು ಕುಟುಂಬಗಳ ನಡುವಿನ ಭಾಂದವ್ಯದ ಕಥೆ ಇಲ್ಲಿದೆ. ಶಂಕರಣ್ಣ ಸಂಕರ ಆದ ಕಥೆ ಓದಿ ನೋಡಿ.


ತಾಯಿಬೇರು : ತಾನು ನೋಡಿದ ವರನಿಗಾಗಿ ತನ್ನ ದೇಹದಲ್ಲಿ ಒಂದು ಬದಲಾವಣೆ ಮಾಡಿಸಿಕೊಳ್ಳಲು ಹೊರಟಿದ್ದ ಸಮಿಯ್ಯಾ ಅದನ್ನು ನಿರೀಕ್ಷಿಸಿರಲಿಲ್ಲ. ಡಿಗ್ರಿ ಪರೀಕ್ಷೆ ರಿಸಲ್ಟ್ ಬಂದ ತಕ್ಷಣ ಶಿಕ್ಷಕಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿ ಬಂದಿದ್ದಳು. ಅದೇ ಸಮಯದಲ್ಲಿ ಬ್ರೋಕರ್ ಅಬ್ಬು ಕಾಕಾ ಒಂದು ಸಂಬಂಧವನ್ನು ತಂದಿದ್ದ . ಇದ್ದೊಬ್ಬ ಅಕ್ಕ ಸುರಯ್ಯಾಳ ಗಂಡ ತನ್ನ ದೊಡ್ಡಸ್ತಿಕೆ ತೋರಲು ಬಂದ ಸಂದರ್ಭದಲ್ಲಿ ಆತನನ್ನು ಎದುರಿಸಲು ಹೋದಾಗ ಆಗಿದ್ದೇನು..? ತಾಯಿಯ ಮುನ್ನೆಚ್ಚರಿಕೆಯ ಕ್ರಮ ಸಮಿಯ್ಯಾ, ಸುರಯ್ಯಾರ ಬದುಕನ್ನು ಯಾವ ದಿಕ್ಕಿಗೆ ಕರೆದೊಯ್ಯಿತು..? ಶಿಕ್ಷಣ ಹಾಗೂ ಸ್ವಾತಂತ್ರ್ಯ ಎಷ್ಟು ಮುಖ್ಯವಾಗುತ್ತದೆ ಎಂದು ಹೇಳುವ ಕತೆ.


ಬೇಲಿಯಾಚೆಗೂ ಬೆಳೆದ ನೆರಳು : ಶ್ರೀಧರನ ಅಮ್ಮ ಸಾವಿತ್ರಮ್ಮ ಹಾಗೂ ಪಾತುಞ ಯ ಗಳಸ್ಯ-ಕಂಠಸ್ಯದ ಸ್ನೇಹದೊಂದಿಗೆ ತೆರೆದುಕೊಳ್ಳುವ ಕಥೆ ಅವರಿಬ್ಬರ ಮಕ್ಕಳು ಶ್ರೀಧರ ಹಾಗೂ ಜೈನಬಾಳ ಬದುಕನ್ನು ತೆರೆದಿಡುತ್ತಾ ಎರಡು ದಿಕ್ಕಿನೆಡೆಗೆ ಸಾಗುತ್ತಾ ಅವರವರ ಸಂಸಾರ ಕಟ್ಟಿಕೊಂಡಿದ್ದರು. ಕೊರೊನಾ ಸಮಯದಲ್ಲಿ ಸಾವಿತ್ರಮ್ಮನ ಸಾವಿನ ನಂತರ ಯಾವ ರೀತಿ ಬದುಕಿದರು..? ಶ್ರೀಧರನ ಪತ್ನಿ ಯಮುನಾ ಪಾತುಞ ಮನೆಯವರನ್ನು ಯಾವ ರೀತಿ ಕಂಡಳು ಹಾಗೂ ಯಾರು ಯಾರ ಸಹಾಯಕ್ಕೊದಗಿದರು..? ಬೇಲಿಯಾಚೆಗೆ ಬೆಳೆದ ನೆರಳು ತಂಪು ಕೊಟ್ಟಿತೇ ಅಥವಾ ತಡೆಯಾಯಿತೇ..?


ಲೆಕ್ಕ ಪುಸ್ತಕ : ಮಸೀದಿಯ ಮಾಸಿಕ ವಂತಿಗೆಯನ್ನು ಕಡ್ಡಾಯವಾಗಿ ಹೆಚ್ಚಳ ಮಾಡುವ ಯೋಜನೆ ಅಧ್ಯಕ್ಷರಾದ ಅಬ್ಬೋನು ಹಾಜಿಯವರಿಗೆ ಇಷ್ಟವಾಗಿರಲಿಲ್ಲ. ಆದರೆ, ಊರಿಗೆ ಹೊಸ ಶ್ರೀಮಂತನಾಗಿದ್ದ ರಫೀಕ್ ನನ್ನು ಮೆಚ್ಚಿಸುವ ಉಮೇದಿನಲ್ಲಿದ್ದ ಹಲವರಿಗೆ ಅದು ಲೆಕ್ಕಕ್ಕಿರಲಿಲ್ಲ. ಹೀಗೆ ವಂತಿಗೆಯ ಲೆಕ್ಕಕ್ಕೊಂದು ಕಾನೂನು ಬಂದು ವಂತಿಕೆ ಬಾಕಿ ಇಟ್ಟು, ಕಾನೂನು ಮುರಿದವರಿಗೆ ಶಿಕ್ಷೆಯೊಂದು ಜಾರಿಯಾಗಿತ್ತು. ಆದರೆ, ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದು ರಫೀಕನ ತಂದೆ ಅದ್ರಾಮ. ಹಾಜಿಯವರ ಲೆಕ್ಕ ಪುಸ್ತಕದ ಲೆಕ್ಕ ಯಾವ ರೀತಿ ಇತ್ತು..?


ಶಕುಂತಲೆ : ಕೆಲವೇ ತಿಂಗಳುಗಳ ಸ್ನೇಹ ಹುಟ್ಟಿಕೊಂಡ ಪ್ರೀತಿ ಇಬ್ಬರನ್ನೂ ಜೊತೆಯಾಗಿಸದೆ ಬೇರೆ-ಬೇರೆಯ ಸಂಸಾರವನ್ನೇ ಕಟ್ಟಿಕೊಟ್ಟಿತ್ತು. ಇಲ್ಲಿ ಯಾರು ಇಷ್ಟು ಸುಖಿ ಎನ್ನುವುದಕ್ಕಿಂತಲೂ.. ಅವನ ಮಗು ತೀರಿಕೊಂಡ ಸುದ್ದಿ ಕೇಳಿದಾಗ ಇವಳಲ್ಲಿ ಹುಟ್ಟಿದ ಭಾವಗಳೇನು..? ತೀರಿಕೊಂಡ ಮಗುವಿನ ಮನೆಗೆ ಹೋಗುವ ಮುನ್ನಿನ ಭಾವುಕತೆ, ಚರ್ಚೆ, ತುಮುಲ, ತೊಳಲಾಟಗಳು ಇದಲ್ಲದರ ಜೊತೆಗೆ ಕಥೆಯ ಕೊನೆಯಲ್ಲೊಂದು ತಿರುವಿದೆ.


ಉಮ್ಮನ ಆಲಿಕತ್ತ್ : ಯಾರ ಬಳಿಯೂ ಕೈಚಾಚದ ಖತೀಜಾ ತನ್ನ ದೊಡ್ಡ ಮಗಳು ಹಸೀನಾ ಹೈಸ್ಕೂಲ್ ಸೇರಲು 2,000 ದುಡ್ಡಿಗಾಗಿ ತನ್ನ ಮೈದುನನ ಬಳಿ ಕೈಯೊಡ್ಡಿದ್ದಳು. ಕುಡುಕ ಗಂಡ ಮನೆಯಲ್ಲಿದ್ದ ಹಣವನ್ನು ಬಿಡದವನು. ಉಮ್ಮನ ಆಲಿಕತ್ತ್ ಅವಳ ಹಣದ ನೆರವಿಗೆ ಬಂದಿತಾದರೂ ಊಹಿಸದ ಘಟನೆಯೊಂದು ನಡೆದು ಹಣ ಹಸೀನಾಳ ನೆರವಿಗೆ ಬಾರದೆ ಹೋಯಿತು. ಹಣದ ಅಸಹಾಯಕತೆ ಅವಳಿಂದ ಯಾವ ಕೆಲಸ ಮಾಡಿಸಿತು..? ಅವಳು ತನ್ನ ಪಾಪಪ್ರಜ್ಞೆಯನ್ನು ಕಳೆದುಕೊಂಡದ್ದು ಹೇಗೆ..? ಹಣಕ್ಕಾಗಿ ಮಾಡಿದ ತಪ್ಪು ಅವಳ ಕುರಿತ ಅಭಿಪ್ರಾಯವನ್ನು ಬದಲಾಯಿಸದೆ ಅವಳನ್ನು ಬೇರೆಯದ್ದೇ ರೂಪದಲ್ಲಿ ತೋರಿರುವ ಕಥೆ ಇಲ್ಲಿದೆ.


ನೆಳಲು-ಬೆಳಕು : ಅಪರ್ಣ ಕೊನೆಯ ಟ್ರೈನಿಗೆ ಹೊರಡುವ ಗಡಿಬಿಡಿ, ಧಾವಂತ. ನಂತರ ನಿದ್ದೆಯ ಮಂಪರಿನಲ್ಲಿ ಮುಂದಿನ ಸ್ಟಾಪ್ ನಲ್ಲಿ ಇಳಿದಾಗ ಮಧ್ಯರಾತ್ರಿಯ ಆ ರೈಲ್ವೆ ಸ್ಟೇಷನ್ ನಲ್ಲಿ ನಡೆದ ಘಟನೆ ಏನು..? ನಾವು ನೋಡುವವರು ಎಷ್ಟೋ ಬಾರಿ ನಾವಂದುಕೊಂಡಂತೆ ಒಳ್ಳೆಯವರೂ ಆಗಿರುವುದಿಲ್ಲ ಅಂದುಕೊಂಡಷ್ಟು ಕೆಟ್ಟವರಾಗಿರುವುದಿಲ್ಲ. ಮಾನವೀಯತೆ ಇನ್ನೂ ಇದೆ ಎಂಬುದನ್ನು ತೋರುವ ಕಥೆ ಇಲ್ಲಿದೆ.


ಅವನ ಬಿಟ್ಟು ಅವಳು ಯಾರು ? : ಮೊದಮೊದಲು ಹವ್ಯಾಸದಂತೆ, ಬಿಡುವು ಕಳೆಯುವ ಸಾಧನದಂತೆ ನಯನಾಳಿಗೆ ಅಂಟಿಕೊಂಡ ಕ್ಲಬ್ ಹೌಸ್ ನ ಸಾಂಗತ್ಯ ಇತ್ತೀಚೆಗೆ ಹೆಚ್ಚಾಗಿತ್ತು. ಅವಳು ಒಳ್ಳೆಯ ಮಾತುಗಾತಿಯಾಗಿದ್ದಳು. ಅದಕ್ಕಾಗಿಯೇ ಬಿಡುವು ಮಾಡಿಕೊಂಡಂತೆ ಅದರೊಳಗೆ ಕಳೆದು ಹೋದಂತಿದ್ದಳು. ಭ್ರಮರ ಎನ್ನುವ ಹೆಸರಲ್ಲಿ ಲಾಗಿನ್ ಆಗಿದ್ದವಳ ಚರ್ಚೆಗಳು ಹೇಗಿದ್ದವು..? ಸ್ಲಿಮ್ ಎಂಬ ಮೋಡಿಗಾರ ಕವಿಯ ಮೋಡಿಗೆ ಸಿಕ್ಕವಳು ಆತನನ್ನು ಭೇಟಿಯಾಗಲು ಹೊರಟ ಕ್ಷಣಗಳು ಭೇಟಿಯಾದ ಸಂದರ್ಭದ ಅವಳ ಅನಿರೀಕ್ಷಿತ ಬದುಕಿನ ತಿರುವು ಇಲ್ಲಿದೆ. ಶೀರ್ಷಿಕೆ ಅದನ್ನು ಸೂಚಿಸದಿದ್ದರೆ ಈ ಕಥೆಯ ಅಂತ್ಯ ಊಹಿಸುವುದು ಕಷ್ಟ. 


ಖಬರ್ ಸ್ತಾನ : ಖಾಸಿಮನ ಬದುಕಿನ 5 ದಶಕಗಳಲ್ಲಿ ಆತ ಮಾಡದೆ ಇರುವ, ಕಲಿಯದೆ ಇರುವ ಕೆಲಸಗಳೇ ಇಲ್ಲವೇನೋ ಎಂಬಂತಾಗಿತ್ತು. 30 ಚಿಲ್ಲರೆ ವರ್ಷಗಳಲ್ಲಿ ಖಬರಸ್ತಾನವೆಂದಾಗಲಿ, ಸ್ಮಶಾನವೆಂದಾಗಲಿ ಭೇದವೆಣಿಸದೆ ಗುಂಡಿ ತೋಡುತ್ತಿದ್ದವನು ಬ ತನ್ನ ಖಾಸ ಗೆಳೆಯನಂತಿದ್ದ ಬಸಯ್ಯನ ತಾತ ತೀರಿಕೊಂಡಿದ್ದಾಗ ಅಲ್ಲಿ ಗುಂಡಿ ತೆಗೆಯಲು ಹೋಗಿದ್ದವನ ಫೋನಿಗೆ ಬಂದ ಫೋನು ಆತನಿಗೆ ಮಸೀದಿಯಿಂದ ಪತ್ರವೊಂದು ಬರುವಂತೆ ಮಾಡಿತು. ಆ ನೋಟಿಸ್ ನಲ್ಲಿ ಇದ್ದದ್ದೇನು..? ಬಸಯ್ಯ ಆತನಿಗೆ ಹೇಳದ ಸತ್ಯವೂ ಮತ್ತೊಂದಿತ್ತು. ಆ ಸತ್ಯ ನೋಟಿಸಿನ ಮತ್ತೊಂದು ಮುಖದಂತಿದೆ.


ಆವರ್ತ : ಆತ ಕಳಕಳಿಯ ಗೆಳೆಯ ಅಭಿ. ನೋಡಿದವರೆಲ್ಲರೂ ಅಸೂಯೆ ಪಡುವಂತಹ ಸ್ನೇಹ ಅವಳು ಮತ್ತು ಅಭಿಯದ್ದು. ಅವಳ ಪ್ರೇಮಿಯಾಗಿ ಬಂದ ಆಕಾಶ್ ಅವಳಿಗೆ ತಕ್ಕವನಲ್ಲವೆಂದು ಹೇಳಲು ಹೊರಟ ಅಭಿಗೆ ಅವಳಿಂದ ಸಿಕ್ಕ ಉತ್ತರ ಅವರಿಬ್ಬರ ಸ್ನೇಹವನ್ನು ಬಹಳ ಕಾಲ ದೂರವಿರಿಸಿತ್ತು. ಸ್ನೇಹ ಮಾತ್ರವಲ್ಲ.. ಪ್ರೀತಿಯೂ ದೂರವಾದ ದಿನಗಳನ್ನು ಎದುರಿಸಿದವಳಿಗೆ ಸ್ನೇಹ ಹಾಗೂ ಪ್ರೀತಿ ಎರಡೂ ಎದುರಿನಲ್ಲಿದ್ದವು. ಒಂದು ಆವರ್ತದ ಘಟನಾವಳಿಗಳ ಕತೆ ಇದು.


ಈ ಕಥಾ ಸಂಕಲನದಲ್ಲಿ ತರಹೇವಾರಿ ಸೂಕ್ಷ್ಮ ಸಂಬಂಧಗಳನ್ನು ಕಾಣಬಹುದು. ಅದು ಅಮ್ಮ-ಮಗಳದ್ದಾಗಿರಬಹುದು. ವಿವಾಹದ ಆಚೆಗಿನ ಸಂಬಂಧ, ಸಂಗಾತಿಯ ಆಯ್ಕೆ, ಮದುವೆ, ಪ್ರೀತಿ ಗೆಳೆತನ ಹೀಗೆ.. ಅದನ್ನು ನವಿರಾಗಿಯೇ ಪ್ರಬುದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ಚೆಂದದ ಕಥೆಗಳ ಓದು.

~ ವಿಭಾ ವಿಶ್ವನಾಥ್

ತಿರುಗಿ ನಿಂತ ಪ್ರಶ್ನೆ


ಕವಿತೆಯ ಶೀರ್ಷಿಕೆ : ತಿರುಗಿ ನಿಂತ ಪ್ರಶ್ನೆ 

ಲೇಖಕರು : ಡಾ|| ವಿಜಯಾ ದಬ್ಬೆ


ಅಪ್ಪ, ಜನಕ ಕಲಿಸಿದ ಅಕ್ಷರವಿತ್ತು 

ಸಾಕವ್ವೆಯರು ಹೇಳಿಕೊಟ್ಟ ಹಾಡುಮಟ್ಟಿತ್ತು

ಸುತ್ತಮುತ್ತ ತಾಡಪತ್ರ ಚೆಲ್ಲಿತ್ತು 

ಯಾಕೆ ಸುಮ್ಮನೆ ಕುಳಿತ ಸೀತೆ ನೀನು ?


ಅಶೋಕದ ನೆರಳಿತ್ತು 

ನಿನ್ನ ತುಂಬಾ ಶೋಕವಿತ್ತು 

ಕೈತುಂಬ ಬಿಡುವಿತ್ತು 

ಇನ್ನೇನು ಬೇಕಿತ್ತು ?

ಯಾಕೆ ಸುಮ್ಮನೆ ಕುಳಿತ ಸೀತೆ ನೀನು ?


ಆಮೇಲೂ ಬಿಡುವಿತ್ತು 

ಲವಕುಶರು ಬೆಳೆದು 

ಆಶ್ರಮ ಪ್ರಶಾಂತವಿತ್ತು 

ನಿನ್ನೆದುರು ಹರಿದು ಹೋದ 

ಇಡೀ ಜೀವನವಿತ್ತು 

ಯಾಕೆ ಸುಮ್ಮನೆ ಕುಳಿತ ಸೀತೆ ನೀನು ?


ನನ್ನ ಪ್ರಶ್ನೆಗಳಿಗೆಲ್ಲ 

ಅವಳ ಭೂಮಿ ತೂಕದ ಮೌನ 

ಕತ್ತತ್ತಿ ನೋಡಿದರೂ 

ಅವಳ ಕಣ್ಣ ಭಾವಗಳು 

ಶಬ್ದವಾಗದೆ ನನ್ನ ಕಣ್ಣಿಗಿಳಿದು 

ತಿರುಗಿ ನಿಂತವು ಕೇಳಿದ್ದ ಪ್ರಶ್ನೆಗಳು


ಸೀತೆಯನ್ನು ಪ್ರಶ್ನಿಸುವ ಹಾಗೂ ಅವಳ ಆಂತರ್ಯವನ್ನು ಕೆದಕುವ ಪ್ರಯತ್ನದಲ್ಲಿ ಸಿಕ್ಕ ಉತ್ತರ ಅವಳ ಭೂಮಿ ತೂಕದ ಮೌನ ಎನ್ನುತ್ತಾರೆ. 

ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಇರಬೇಕಿಲ್ಲ. ಉತ್ತರ ನೀಡಬೇಕಿಲ್ಲ. ಮೌನ ಎಲ್ಲಕ್ಕಿಂತಲೂ ಪ್ರಬಲವಾದ ಉತ್ತರ. ಅದರಲ್ಲೂ ಕಣ್ಣ ಭಾವನೆಗಳು ಕೊಡುವ ಉತ್ತರ, ಶಬ್ದದ ಮೂಲಕ ಕೊಡುವ ಉತ್ತರಕ್ಕಿಂತಲೂ ಹೆಚ್ಚಿನ ಅರ್ಥದ ಉತ್ತರವನ್ನು ದೊರಕಿಸಿಕೊಡುತ್ತದೆ.


ಜನಕ ಮಹಾರಾಜನ ಮಗಳಾದ ಸೀತೆಗೆ ವಿದ್ಯೆಯಿತ್ತು. ಹಾಡುವುದು ಗೊತ್ತಿತ್ತು. ಹಾಡು ಕಟ್ಟುವ ಸಾಮರ್ಥ್ಯವೂ ಇತ್ತು. ಹಾಗೂ ಓಲೆಗರಿಗಳೂ ಬೇಕಾದಷ್ಟಿದ್ದವು. ಆದರೂ.. ಯಾವುದರಲ್ಲಿಯೂ ತೊಡಗಿಸಿಕೊಳ್ಳದ ಸೀತೆಯ ಆಂತರ್ಯ ಏನಿರಬಹುದು..?


ಇನ್ನು ರಾವಣನ ಸೆರೆಯಲ್ಲಿದ್ದಾಗ ಸಮಯವಿತ್ತು. ಶೋಕವೂ ಇತ್ತು. ಮನಸ್ಸಿನ ನೋವನ್ನು ಹೊರಹಾಕಲು ಬಹಳಷ್ಟು ಅವಕಾಶ, ಸಮಯವಿತ್ತಾದರೂ .. ಸೀತೆ ಸುಮ್ಮನೆ ಕುಳಿತದ್ದೇಕಿರಬಹುದು..?


ಮಕ್ಕಳಾದ ಲವ-ಕುಶರು ಬೆಳೆದು ದೊಡ್ಡವರಾದ ನಂತರ ಕೈತುಂಬ ಬಿಡುವಿದ್ದರೂ.. ಪ್ರಶಾಂತವಾದ ವಾತಾವರಣವಿದ್ದರೂ.. ಸೀತೆ ಸುಮ್ಮನೆ ಕುಳಿತದ್ದೇಕೆ..? ಅದರಲ್ಲಿಯೂ ಅವಳ ಇಡೀ ಜೀವನಗಾಥೆ ಬೇರೊಂದು ರೂಪ ತಡೆಯಬಹುದಾದ ಸಾಧ್ಯತೆ ಇದ್ದಾಗಲೂ ಸೀತೆ ಸುಮ್ಮನಿದ್ದದ್ದೇಕೆ..?


ಇಂದಿನ ದಿನಮಾನಗಳಲ್ಲಿ ಇರುವ ವಿದ್ಯೆ ಹಾಗೂ ಹವ್ಯಾಸವನ್ನು.. ಬರಹ, ಹಾಡು, ಕಸೂತಿ ಕಲೆಯ ರೂಪ ಹೀಗೆ ಯಾವುದಾದರೂ ಒಂದರ ಮೂಲಕ ವ್ಯಕ್ತಪಡಿಸಲು ತೊಡಗುತ್ತಾರೆ. ಶೋಕ, ಮನದ ನೋವುಗಳು.. ಬಿಡುವಿನ ಸಮಯದಲ್ಲಿ ಕಥೆ, ಕಾವ್ಯದ ರೂಪ ತಳೆಯುತ್ತವೆ. ಮಕ್ಕಳು ಬೆಳೆದು ದೊಡ್ಡವರಾದರಂತೂ ಮನೆಯಲ್ಲಿ ಹೆಚ್ಚಿನ ಜವಾಬ್ದಾರಿಗಳಿಲ್ಲದಿದ್ದಾಗ ತಮ್ಮನ್ನು ತಾವು ಪುನರ್ ಅವಲೋಕಿಸಿಕೊಳ್ಳಲು ಹಾಗೂ ಯಾವುದಾದರೂ ಒಂದು ರೂಪದಲ್ಲಿ ಕಂಡುಕೊಳ್ಳಲು ಬಯಸುತ್ತಾರೆ. ಇಂದಿನ ಹೆಚ್ಚಿನ ಮಹಿಳೆಯರು ಹೀಗೆ ಯಾವುದೋ ಒಂದು ಘಟ್ಟದಲ್ಲಿ ತಮ್ಮ ಬದುಕಿನ ತಿರುವನ್ನು ಕಂಡುಕೊಳ್ಳುತ್ತಾರೆ. ಸಿಕ್ಕ ಅವಕಾಶವನ್ನು ಬಿಡದೆ ತಮ್ಮ ಸಾಮರ್ಥ್ಯವನ್ನು ಒರೆ ಹಚ್ಚುತ್ತಾರೆ. ನೋವನ್ನು, ಕಷ್ಟವನ್ನು ದಾಟಿಸದಿದ್ದರೂ ಅನುಭವವನ್ನಾದರೂ ದಾಟಿಸುವವರಿರುತ್ತಾರೆ.


ಇಂತಹ ಆಧುನಿಕ ದಿನಮಾನಗಳಲ್ಲಿ ಆಲೋಚನೆಗಳಲ್ಲಿ ಸೀತೆಯ ಈ ನಡೆ ಪ್ರಶ್ನಿಸುವಂತೆ ಮಾಡುತ್ತದೆ. ಆದರೆ, ಸೀತೆಯ ಮೌನವೇ ಎಲ್ಲಕ್ಕೂ ಉತ್ತರವಾದಾಗ.. ಅದು ಪೂರ್ಣವಿರಾಮವಾಗದೆ ತಿರುಗಿ ನಿಂತ ಪ್ರಶ್ನೆಗಳು ನಮ್ಮಲ್ಲಿ ಇನ್ನೂ ಹಲವು ಆಲೋಚನೆಗಳನ್ನು ಮೂಡಿಸುವುದಂತು ಹೌದು.


ನನಗೆ ದಕ್ಕಿದಂತೆ ಕವಿತೆಯ ಆಂತರ್ಯವನ್ನು ತೆರೆದಿರುವ ಪ್ರಯತ್ನ ಮಾಡಿದ್ದೇನೆ. 


ಡಾ|| ವಿಜಯಾ ದಬ್ಬೆಯವರ ಈ ಕವಿತೆ 1996ರ ಜನವರಿ-ಮಾರ್ಚ್ ಅಚಲ ದಶಮಾನೋತ್ಸವ ಸಂಚಿಕೆಯಲ್ಲಿ ಪ್ರಕಟಿತ.


~ವಿಭಾ ವಿಶ್ವನಾಥ್

ಶನಿವಾರ, ಮೇ 16, 2026

ಗೆಲುವಿನ ಮುನ್ನಡೆ (ಬೆಳಕಿಂಡಿಯ ಕತೆಗಳು - 20)


"ಕಂದಾ, ನೀನು ಆಡುವಾಗ ನಿನ್ನ ಆಟದ ಮೇಲೆ ಮಾತ್ರ ಗಮನ ಹರಿಸು. ಆಗಷ್ಟೇ ನೀನು ಗೆಲುವಿನ ಹಾದಿಯತ್ತ ಸಾಗಬಹುದು. " ಎಂದು ಹೇಳಿದ್ದ ತಾಯಿಯ ಮಾತು ನವೋದಯ ಬಾಲ್ ಬ್ಯಾಡ್ಮಿಂಟನ್ ತಾರೆ ಶಿಖಾಳಿಗೆ ನೆನಪಾಗತೊಡಗಿತು. 


ಆದರೂ, ಅವಳ ಮುಂದಿದ್ದದ್ದು ಈಗಾಗಲೇ ಗೆಲುವು ಸಾಧಿಸಿ ಗೆಲುವಿನ ಉತ್ತುಂಗದಲ್ಲಿ ತೇಲುತ್ತಿದ್ದ ಬ್ಯಾಡ್ಮಿಂಟನ್ ತಾರೆ ದಿಯಾ. ಇಬ್ಬರ ಆಟವೂ ಶುರುವಾಯಿತು. ಶಿಖಾ ಮೊದಲು ನರ್ವಸ್ ಆದುದರಿಂದ ದಿಯಾ ಆ ಸೆಟ್ ನಲ್ಲಿ ಮುನ್ನಡೆದಳು. ದಿಯಾಳಿಗೆ ಆ ಸೆಟ್ ಸರಾಗವಾದರೂ ಮುಂದಿನ ಸೆಟ್ ನಲ್ಲಿ ಗೆದ್ದದ್ದು ಶಿಖಾ. 3-7 ರಿಂದ ಮುನ್ನಡೆ ಸಾಧಿಸಿದ್ದಳು. ಕಡೆಯ ಸೆಟ್ ನಲ್ಲಿಯೂ ಕೂದಲೆಳೆಯ ಅಂತರದಲ್ಲಿ 5-6 ರಿಂದ ಗೆಲುವು ಸಾಧಿಸಿ ಗೆದ್ದಿದ್ದಳು ಶಿಖಾ.


ಅವಳ ಈ ಗೆಲುವಿನ ಗುಟ್ಟಿನ ಕುರಿತು ಎಲ್ಲರಿಗೂ ಹೇಳುವಾಗ ಹೇಳಿದ್ದು "ಎದುರಾಳಿಯ ಕುರಿತು ಗಮನ ನೀಡುವುದಕ್ಕಿಂತ ನಮ್ಮ ಕುರಿತು ಗಮನ ನೀಡಿದರೆ ಗೆಲುವಿನತ್ತ ಮುನ್ನಡೆಯಬಹುದು. ಆಟದಲ್ಲಿಯೂ.. ಬದುಕಲ್ಲಿಯೂ" ಎಂದಾಗ ಸಿಕ್ಕ ಚಪ್ಪಾಳೆ ಮುಗಿಲು ಮುಟ್ಟಿತ್ತು.


~ವಿಭಾ ವಿಶ್ವನಾಥ್

ಹೊಸ ಪ್ರಪಂಚ (ಬೆಳಕಿಂಡಿಯ ಕತೆಗಳು - 19)


ಶಾಲೆ ಎಂಬುದು ವಿದ್ಯಾಲಯವಾದರೂ ಸರಸ್ವತಿ ಕೊಠಡಿಗಳಲ್ಲಿ ಮಾತ್ರ ನೆಲೆಸಿರುವುದಿಲ್ಲ. ವಿದ್ಯೆ ಕೂಡಾ ಬರೀ ನಾಲ್ಕು ಕೊಠಡಿಗಳ ಮಧ್ಯದಲ್ಲಿ ಮಾತ್ರ ದೊರೆಯುವುದಿಲ್ಲ ಎಂಬುದು ಅರಿವಾಗಲು ಆ ದಿನವೇ ಬರಬೇಕಾಯ್ತು.


ಅವತ್ತು ಬಂಗಾರಿ ಶಾಲೆಗೆ ಹೊರಟ ಮೊದಲ ದಿನ. ಆಕೆಯನ್ನು ಬಿಡಲು ಹೊರಡುವ ಹಿಂದಿನ ದಿನದಿಂದಲೇ ತಳಮಳ. ಹೇಗೋ ಏನೋ ಎಂಬ ಅಳುಕು.. ಹೊಂದಿಕೊಳ್ಳುವಳೋ ಇಲ್ಲವೋ ಎಂಬ ಆತಂಕ. ಅದನ್ನೆಲ್ಲಾ ಸುಳ್ಳು ಮಾಡುವ ಹಾಗೆ ಅವಳು ಶಾಲೆಗೆ ಹೋಗತೊಡಗಿದಳು. ಒಂದೆರಡು ದಿನ ಮೊದಮೊದಲಿಗೆ ಅತ್ತರೂ ನಂತರದಲ್ಲಿ ಇಷ್ಟಪಟ್ಟೆ ಹೋಗತೊಡಗಿದಳು.


ನಾನೇ ಪ್ರಪಂಚವಾಗಿದ್ದ ಅವಳಿಗೆ ಹೊಸ ಪ್ರಪಂಚ ದೊರೆತಿತ್ತು. ನನ್ನ ಕೈ ಬಿಡಿಸಿಕೊಂಡು ಸ್ನೇಹಿತರೊಡನೆ ಸೇರಲು ತವಕದಿಂದ ತಿರುಗಿಯೂ ನೋಡದೆ ಆಕೆ ಅತ್ತ ಹೋಗುತ್ತಿದ್ದರೆ ನನಗೆ ಜ್ಞಾನೋದಯವಾಗತೊಡಗಿತ್ತು. ಮಕ್ಕಳಿಗೆ ಪೋಷಕರೇ ಪ್ರಪಂಚವಲ್ಲ.. ಹೊಸ ಪ್ರಪಂಚವೇ ಅವರಿಗಾಗಿ ಕಾಯುತ್ತಿದೆ. ಅವರೂ ಅದನ್ನು ಸೃಷ್ಟಿಸಿಕೊಳ್ಳಲು ಕಾತುರರಾಗಿದ್ದಾರೆ ಎಂದು.


~ವಿಭಾ ವಿಶ್ವನಾಥ್

ಆತ್ಮಹತ್ಯೆ ಅನಿವಾರ್ಯವಾಗಬಾರದು (ಬೆಳಕಿಂಡಿಯ ಕತೆಗಳು - 18)


ಆ ದಾರಿಯಲ್ಲೆಲ್ಲಾ ನಾನು ಓಡಾಡುವಾಗ ಅದ್ಯಾಕೋ ಅಪ್ರಯತ್ನವಾಗಿ ಕಣ್ಣು ಆ ಕಡೆ ಸೆಳೆದುಬಿಡುತ್ತದೆ. ಅದು ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳ. ಅದೇ ಸೇತುವೆಯ ಮೇಲೆ ನಿಂತಿದ್ದನ್ನು ಕಂಡಿದ್ದವರು ಯಾರೋ ಹೇಳಿದ್ದರು.. ಮಾಣಿ ಅಲ್ಲಿ ನಿಂತಿದ್ದ ಎಂದು. ಸಾಕ್ಷಿಗಾಗಿ ಅವನ ಚಪ್ಪಲಿ, ಮೊಬೈಲ್ , ಪತ್ರ ಎಲ್ಲವೂ ಸಿಕ್ಕಿದ್ದವು. 


ಅವನ ಬಿಸಿನೆಸ್ ಅವನ ಕೈ ಹಿಡಿಯದೆ ನಷ್ಟವಾಗಿತ್ತಂತೆ. ಸಾಲ ಕೂಡಾ ಮಾಡಿದ್ದ. ಅಪ್ಪನೂ ಬದಲಿ ಹೇಳದೆ ಧೈರ್ಯ ತುಂಬಿದ್ದರು. ಎಲ್ಲರಿಗೂ ಕಾಲ ಬರುತ್ತದೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು ಎಂದಿದ್ದರು. ಇದ್ದಕ್ಕಿದ್ದ ಹಾಗೆ ಆ ವಾರದ ಕೊನೆಯಲ್ಲಿ ಬಂದು ಎಲ್ಲರೊಡನೆ ಖುಷಿಯಾಗಿದ್ದವನನ್ನು ಕಂಡು ಎಲ್ಲವೂ ಸರಿಯಾಯಿತೆಂದುಕೊಳ್ಳುವಷ್ಟರಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ.


ಪ್ರತಿ ಸೋಲಿಗೂ ಉತ್ತರವಾಗಿ ಗೆಲ್ಲುವ ಛಲ ಅನಿವಾರ್ಯವಾಗಬೇಕೋ ಬದಲಿಗೆ ಹೇಡಿತನವಲ್ಲ. ಬದುಕಿಗೆ ಸವಾಲಾಗಿ ನಿಲ್ಲುವುದು ಅನಿವಾರ್ಯವಾಗಬೇಕೋ ಹೊರತು ಬೆನ್ನು ತೋರಿಸಿ ಓಡುವುದಲ್ಲ. ಸಾಧನೆ ಅನಿವಾರ್ಯವಾಗಬೇಕೋ ಹೊರತು ಆತ್ಮಹತ್ಯೆಯಲ್ಲ. ಇದನ್ನು ಪ್ರತಿ ಬಾರಿ ನಿಂತು ಸಾರಿ ಸಾರಿ ಹೇಳಬೇಕೆನ್ನಿಸುತ್ತದೆ.


~ವಿಭಾ ವಿಶ್ವನಾಥ್

ಕತ್ತಲಲ್ಲಿ ಕಂಡ ಮಿಂಚು (ಪುಸ್ತಕ ಯಾನ - 447)


ಪುಸ್ತಕದ ಶೀರ್ಷಿಕೆ : ಕತ್ತಲಲ್ಲಿ ಕಂಡ ಮಿಂಚು 

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 1978

ಮರು ಮುದ್ರಣ : 2024


ಕತ್ತಲಲ್ಲಿ ಕಂಡ ಮಿಂಚು ಕಾದಂಬರಿಯಲ್ಲಿ ಅಂಗವಿಕಲೆಯಾದ ಹುಡುಗಿಯೊಬ್ಬಳು ತನ್ನ ಮನೆಯವರಿಂದಲೇ ತಾತ್ಸಾರಕ್ಕೊಳಗಾದರೂ.. ಆಕೆ ಅಂಗವಿಕಲೆ ಎಂಬ ಕಾರಣಕ್ಕೆ ಸರಿಯಾದ ಪ್ರೀತಿ ಪಡೆಯದಿದ್ದರೂ.. ತನ್ನವರನ್ನು ಕಡೆಗಣಿಸದೆ, ತಾನೂ ಸೋಲದೆ, ಅವರನ್ನು ಗೆಲ್ಲಿಸಿ ಬದುಕಿನಲ್ಲಿ ಹೀಗಿರಬೇಕು ಎಂದು ಮಾದರಿಯಾದ ಕಾದಂಬರಿಯ ಕಥಾವಸ್ತು ಇಷ್ಟವಾಯಿತು. 


ಸುಭದ್ರಮ್ಮ ಹಾಗೂ ಸುಬ್ಬರಾಯರ ನಾಲ್ವರು ಮಕ್ಕಳಲ್ಲಿ ಹೇಮ ಹಿರಿಯವಳು. ಎರಡನೆಯವಳು ಸೀಮ. ಇನ್ನಿಬ್ಬರು ತಮ್ಮಂದಿರು ಉಮೇಶ ಹಾಗೂ ರಮೇಶ. ಹೇಮ ಕಾಲು ಎಳೆದು ಹಾಕುತ್ತಿದ್ದ ಕುಂಟೆಯಾದರೂ.. ಯಾರಿಗೂ ಹೊರೆಯಾಗದೆ, ಫ್ಯಾಕ್ಟರಿಗೆ ಸೇರಿ ಐದು ವರ್ಷದಿಂದ ದುಡಿಯುತ್ತಾ.. ಅಲ್ಲಿನ ಪರೀಕ್ಷೆಗಳನ್ನು ಪಾಸು ಮಾಡಿಕೊಂಡು ಮುಂದಿನ ಸ್ಥಾನಕ್ಕೇರುತ್ತಾ ತಂದೆಯಷ್ಟೇ ಮನೆಯ ಖರ್ಚನ್ನು ತಾನೂ ಮನೆಗೆ ನೀಡುತ್ತಾ.. ಆರು ಜನರ ಸಂಸಾರವನ್ನು ನಿಭಾಯಿಸುವ ಜವಾಬ್ದಾರಿ ಹೊತ್ತಿದ್ದರೂ ಮನೆಯಲ್ಲಿ ಎಲ್ಲರಿಗೂ ಆಕೆ ಎಂದರೆ ತಾತ್ಸಾರ. 


ಕೆಲವೊಮ್ಮೆ ಮನೆಯವರೇ ತಾತ್ಸಾರ ಮಾಡಿದರೂ ದೇವರಂತಹ ನೆರೆಹೊರೆಯವರು ಸಮಯಕ್ಕೊದಗುತ್ತಾರೆ. ಹೀಗೆ ಪಕ್ಕದ ಮನೆಯ ಕಾಮಾಕ್ಷಿಗೆ ಹೇಮಳೆಂದರೆ ಅಪರಿಮಿತ ವಾತ್ಸಲ್ಯ. ಆರು ಮಕ್ಕಳ ತಾಯಿಯಾದರೂ ಈಕೆಯನ್ನು ಮಗಳಂತೆಯೇ ಭಾವಿಸಿದ್ದರು. ಹಣವಿಲ್ಲದೆ ಟೈಲರಿಂಗ್ ಕಲಿಸಿ, ಟೈಪರೇಟಿಂಗ್ ಗೂ ಸೇರಿಸಿ, ತಾವು ಮನೆ ಬದಲಿಸುವಾಗ ತಮ್ಮ ಬಳಿಯಿದ್ದ ಒಂದು ಹೊಲಿಗೆಯ ಮಷೀನ್ ಅನ್ನು ಸಹ ಕೊಟ್ಟು ಹೋಗಿದ್ದರು. ಹೇಮ ಕೂಡ ಅವರಿಗೆ ಅಷ್ಟೇ ಸಹಕಾರ ನೀಡುತ್ತ ಅವರ ಕೆಲಸದಲ್ಲಿ ಸಹಾಯಕಳಾಗಿದ್ದಳು. ಕಾಮಾಕ್ಷಿಯ ಮನೆಕೆಲಸಕ್ಕೂ ಸಹಕಾರ ನೀಡುತ್ತಾ.. ಆಕೆಯ ಬಲಗೈಯಂತಿದ್ದಳು. ಕಾಮಾಕ್ಷಿಯ ಗಂಡನ ದೆಸೆಯಿಂದಲೇ ಅವರ ಫ್ಯಾಕ್ಟರಿಯಲ್ಲಿಯೇ ಟೈಪರೈಟಿಂಗ್ ಕಲಿತಿದ್ದವಳು ಕೆಲಸಕ್ಕೆ ಸೇರಿ ಮುಂದುವರೆದದ್ದು. ಕಾಮಾಕ್ಷಿಯ ಸಹಾಯವನ್ನು ಹೇಮ ಎಂದಿಗೂ ಮರೆಯುವಂತಿರಲಿಲ್ಲ. 


ಹೇಮಳಿಗೆ ವಿವಾಹ ಕೂಡಿಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಾಲ್ಕು ವರ್ಷದಲ್ಲಿ ನೂರಾದರೂ ವರ ಪರೀಕ್ಷೆ ಎದುರಿಸಿದ್ದಳು. ದಲ್ಲಾಳಿ ಶಾಮಾ ಜೋಯಿಸರಿಗೆ ತಾನೇ ಹಣ ಕೊಟ್ಟು ವಧು ಪರೀಕ್ಷೆ ಎದುರಿಸುತ್ತಿದ್ದಳಾದರೂ .. ಮುಕ್ಕಾಲುವಾಸಿ ನಿರಾಸೆ ತರುವಂತಹ ವರಗಳೇ.. ಇನ್ನುಳಿದವರು ಅವಳನ್ನು ತಿರಸ್ಕರಿಸುತ್ತಿದ್ದವರು. 


ಹೇಮಳ ವಿವಾಹವಾಗದೆ ಸೀಮಳ ವಿವಾಹವಾಗುವಂತಿರಲಿಲ್ಲ. ಹೀಗಾಗಿ ಅವಳಿಗೆ ಅಸಹನೆ. ಮನೆಯ ಎಲ್ಲಾ ಕೆಲಸವನ್ನು ಹೇಮಳೇ ಮಾಡುತ್ತಿದ್ದರೂ ಸೀಮ ರಾಣಿಯಂತೆ ಸುಮ್ಮನಿರುತ್ತಿದ್ದಳು. ಅವಳ ಸೌಂದರ್ಯ ಹಾಗೂ ತಾಯಿಯ ಮುದ್ದು, ಅಹಂಕಾರ ಅವಳನ್ನು ಹಾಗೆ ನಡೆದುಕೊಳ್ಳುವಂತೆ ಮಾಡುತ್ತಿತ್ತು.


ಹೀಗಿದ್ದ ಹೇಮಳ ಬದುಕಲ್ಲಿಯು ಒಂದು ತಿರುವು ಬರುತ್ತವೆ. ಹೇಮ ತನ್ನ ಮನೆ ಬಿಟ್ಟು ತನ್ನ ಸಹೋದ್ಯೋಗಿ ಹಾಗೂ ಆಪ್ತ ಗೆಳತಿಯಾಗಿದ್ದ ಸುಶೀಲಳ ಮನೆಯ ಬಾಡಿಗೆ ಕೋಣೆ ಹಿಡಿಯುತ್ತಾಳೆ. ಸುಶೀಲ ಹಾಗೂ ಚಂದ್ರು ದಂಪತಿಗಳು ಆಕೆಯನ್ನು ಬೇರೆಯವರಂತೆ ಭಾವಿಸದೆ, ಸ್ವಂತ ತಂಗಿಯಂತೆಯೇ ನೋಡಿಕೊಳ್ಳುತ್ತಾರೆ. ಸುಶೀಲಳ ಅಡುಗೆ ಕೆಲಸ ಹಾಗೂ ಮಗುವಿನ ಪೋಷಣೆಯಲ್ಲಿಯೂ ಸಹಾಯ ಮಾಡುತ್ತಾಳೆ ಹೇಮ. ಅಷ್ಟಕ್ಕೂ ಆಕೆ ಮನೆ ಬಿಟ್ಟು ಹೋಗುವಂತಹ ಪ್ರಸಂಗ ಏನಾಗಿತ್ತು..? ಮನಸ್ಸು ಕಹಿಯಾಗಿ ಅಷ್ಟು ಕಠಿಣ ನಿರ್ಧಾರ ತೆಗೆದುಕೊಂಡ ಹೇಮಳ ನಿರ್ಧಾರ ಸರಿಯೇ..? ಓದಿ ನೋಡಿ.


ಚಂದ್ರುವಿನ ಮನೆಗೆ ಬಂದ ರಾಜೇಶ ಹೇಮಳಿಗೆ ಪರಿಚಯವಾದ ಸಂದರ್ಭ ಯಾವುದು..? ಹೇಮ ಕುಂಟಿ ಎಂದು ತಿಳಿಯದೆ.. ಆಕೆಯ ಕೈ ರುಚಿ, ಜೊತೆಗೆ ಕಪ್ಪಿದ್ದರೂ ಲಕ್ಷಣವಾದ ರೂಪಕ್ಕೆ ಮನಸೋತದ್ದು ಮಾತ್ರವಲ್ಲದೆ ಆಕೆಯ ಮನಸ್ಸಿನಲ್ಲಿಯೂ ತನ್ನ ಕುರಿತಾಗಿ ಒಳ್ಳೆಯ ಭಾವನೆ ಬರುವಂತೆ ಮಾಡುವುದರ ಜೊತೆಗೆ ಪ್ರೇಮವನ್ನು ಹುಟ್ಟು ಹಾಕುವುದರಲ್ಲಿಯೂ ಸಫಲವಾದವನು ಅಷ್ಟೇ ಬೇಗ ಅವಳಿಂದ ದೂರವೂ ಆಗುತ್ತಾನೆ. ಆದರೆ, ಈ ಕಥೆ ಅಷ್ಟಕ್ಕೆ ಮುಗಿಯುವುದಿಲ್ಲ. ಮುಂದೊಂದು ದಿನ ಇದೇ ರಾಜೇಶ ಸೀಮಳನ್ನು ಪ್ರೇಮಿಸಿ ಅವರ ಮನೆಗೆ ಬಂದು ಹೇಮಳ ಎದುರಿಗೆ ನಿಂತಾಗ ಹೇಮಳ ಪ್ರತಿಕ್ರಿಯೆ ಏನಿತ್ತು..? ಓದಿ ನೋಡಿ. 


ಎಲ್ಲರೂ ರಾಜೇಶನಂತಿರುವುದಿಲ್ಲ. ಅಂತೆಯೇ ಎಲ್ಲರೂ ಕಾಮಾಕ್ಷಿ ಹಾಗೂ ಸುಶೀಲ ದಂಪತಿಗಳಂತೆಯೂ ಇರುವುದಿಲ್ಲ. ಬದುಕಿನಲ್ಲಿ ಎರಡೂ ರೀತಿಯ ಜನರನ್ನು ನೋಡುವ ಸಂದರ್ಭ ಬರುತ್ತದೆ. 


ಹೇಮಳಿಗೆ ಚಂದ್ರುವಿನ ಬಾಲ್ಯದ ಗೆಳೆಯ ಮಂಜುನಾಥನ ಮುಖಾಮುಖಿಯಾದದ್ದು ಚಂದ್ರು ಹಾಗೂ ಸುಶೀಲ ಮನೆಯಲ್ಲಿ ಇಲ್ಲದಿದ್ದಾಗ. ಅವರಿಬ್ಬರ ಮೊದಲ ಭೇಟಿ ಹಾಗೂ ಮೊದಲ ನೋಟ ಯಾವ ರೀತಿ ಇತ್ತು..?


ಪ್ರೇಮವೆಂದರೆ ಅದು ತಪ್ಪಾಗಬಹುದು. ಏಕೆಂದರೆ, ಅಲ್ಲಿದ್ದದ್ದು ಸರಳತೆ ಹಾಗೂ ಪ್ರಾಮಾಣಿಕತೆ. ಮಂಜುನಾಥನೂ ನೊಂದ ಜೀವ. ತಾನು ಕೆಲಸಕ್ಕಿಂತ ಹೋಟೆಲ್ ಹಾಗೂ ಸ್ವಂತ ತಂದೆಯಿಂದಲೇ ಮೋಸಕ್ಕೊಳಗಾಗಿ ಊರು ಬಿಟ್ಟು ಬಂದಿದ್ದವನು. ಸುಬ್ರಾಯ ಅಡಿಗರ ಎಂಟು ಜನ ಮಕ್ಕಳಲ್ಲಿ ಮೊದಲಿಗನಾಗಿ ಬಡ ಕುಟುಂಬವನ್ನು ತಹಬದಿಗೆ ತಂದವನು, ಓದಿನಲ್ಲಿ ಚಾಣಾಕ್ಷನಾಗಿದ್ದರೂ.. ಮುಂದೆ ಓದಿಸಿರಲಿಲ್ಲ. ಸರ್ಕಾರಿ ಕೆಲಸ ಸಿಗುವಂತಿರಲಿಲ್ಲ. ಹೋಟೆಲ್ ನಲ್ಲಿ ಅಡುಗೆ ಕೆಲಸಕ್ಕೆ ಇದ್ದವನು. ಈಗ ಅಲ್ಲಿಯೂ ಕೆಲಸ ಕಳೆದುಕೊಂಡಿದ್ದ. ಅಷ್ಟಕ್ಕೂ ಅಲ್ಲಿಂದ ಹೊರಟು ಬಂದದ್ದು ಏಕೆ..? 


ಹತ್ತು ಸಾವಿರ ಸಿಕ್ಕರೆ ಇಪ್ಪತ್ತು ಸಾವಿರ ಮಾಡುವ ಚಾಣಾಕ್ಷತನ, ಆತ್ಮವಿಶ್ವಾಸವಿದ್ದರೂ ಹಣ ಆತನ ಬಳಿ ಇರಲಿಲ್ಲ. ಆದರೆ, ಸುಶೀಲ ಇಟ್ಟ ಒಂದು ಪ್ರಸ್ತಾಪಕ್ಕೆ ಆತ ಒಪ್ಪುತ್ತಾನೆ. ಆದರೆ, ಸಂಪೂರ್ಣವಾಗಿ ಅಲ್ಲ. 

ಹೇಮಾಳಿಂದ 10,000 ಹಣ ಪಡೆಯುತ್ತಾನೆ. ಆದರೆ, ನಾಲ್ಕು ವರ್ಷದ ನಂತರ ವಿವಾಹವಾಗುತ್ತೇನೆ ಎಂದು ಹೇಳುತ್ತಾನೆ. ಅದೇಕೆ..?


ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡಿದ್ದ ಹೇಮಾಳಿಗೆ ಇದು ಆಶಾಕಿರಣದಂತೆ ತೋರಿದರೂ ಯಾರನ್ನು ಅಷ್ಟು ಸುಲಭವಾಗಿ ನಂಬಲಾಗುವುದಿಲ್ಲ. ಮಂಜುನಾಥ ಆಕೆ ಕುಂಟಿ ಎಂದು ತಿಳಿದೂ ಮದುವೆಗೆ ಒಪ್ಪಿದರೂ.. ಮುಂದೇನಾಗುತ್ತದೆ..?


ಹೇಮ ಮತ್ತೆ ತನ್ನ ತಾಯಿ, ಸುಭದ್ರಮ್ಮ ಬಂದು ಕರೆದಾಗ ತನ್ನ ಮನೆಗೆ ಹೋಗುತ್ತಾಳಾದರೂ ಆಕೆಗೆ ಮೊದಲಿದ್ದ ಕಷ್ಟ ಇರುವುದಿಲ್ಲ. ಹಾಗೆಂದು ದಬ್ಬಾಳಿಕೆಯೂ ಮುಗಿದಿರುವುದಿಲ್ಲ.


ರೂಪಕ್ಕೆ ಮರುಳಾದ ರಾಜೇಶ ಹಾಗೂ ಸೀಮರ ಬದುಕು ಸಹ ಒಂದು ತಿರುವಿಗೆ ಬಂದು ನಿಲ್ಲುತ್ತದೆ. ಇಬ್ಬರ ಬದುಕನ್ನು ಬದಲಿಸಿದ ಆ ತಿರುವು ಏನು..?


ಹೇಮಳಿಗೆ ಯಾರ ಜೊತೆ ವಿವಾಹವಾಗುತ್ತದೆ..? ಅವಳ ಮುಂದಿನ ಬದುಕು ಹೇಗಿರುತ್ತದೆ..? ಮಂಜುನಾಥ ಪ್ರಾಮಾಣಿಕನೇ..? ಎಲ್ಲದಕ್ಕೂ ಉತ್ತರ ತಿಳಿಯಲು ಕಾದಂಬರಿ ಓದಿ ನೋಡಿ.


ರಾಧಾದೇವಿಯವರ ಹೆಚ್ಚಿನ ಕಾದಂಬರಿಗಳು ಸುಖಾಂತ್ಯ ಕಾಣುತ್ತವೆ. ಈ ಕಾದಂಬರಿಯೂ ಸುಖಾಂತ್ಯದ ಕಾದಂಬರಿ ಎಂದು ಹೇಳಬಹುದಾಗಿದ್ದರೂ ಎಲ್ಲರ ಬದುಕು ತಾವು ಬಯಸಿದ ಸುಖ ಕಾಣುತ್ತದಾ ಓದಿ ನೋಡಿ. 


"ಒಳಿತಿಗೆ ಜಯ" ಎಂಬ ತತ್ವ ಇಲ್ಲಿ ಗೋಚರಿಸುತ್ತದೆ. ಮಾಡಿದುಣ್ಣೋ ಮಹಾರಾಯ ಎಂಬಂತೆ ಎಲ್ಲರೂ ತಮ್ಮ ಕರ್ಮದ ಫಲವನ್ನು ಉಣ್ಣುವುದೂ ಕಾಣುತ್ತದೆ.


ಹೇಮಳ ಬದುಕು ಮೊದಲು ಕಷ್ಟದಿಂದಲೇ ಕೂಡಿದ್ದರೂ.. ಅವಳ ಬದುಕಿನಲ್ಲಿ ಬರುವ ಕಾಮಾಕ್ಷಿ ದಂಪತಿಗಳು, ಸುಶೀಲಾ ದಂಪತಿಗಳು ಹಾಗೂ ಆಕೆಯ ಪತಿಯಂತಹವರು ಎಲ್ಲರಿಗೂ ಸಿಗುವುದು ಕಷ್ಟ. ಆದರೆ, ಅಂತಹ ನಿಷ್ಕಲ್ಮಶ ಪ್ರೀತಿ ಸಿಕ್ಕರೆ ಬದುಕಿನಲ್ಲಿ ಮತ್ತೇನೂ ಬೇಡ ಎನಿಸುವುದಂತೂ ಹೌದು. ರಕ್ತ ಸಂಬಂಧಕ್ಕಿಂತಲೂ ಹೆಚ್ಚು ಆಪ್ತವಾಗುವ ಇಂತಹ ಸಂಬಂಧಗಳೇ ಸಮಾಜದಲ್ಲಿ ಇನ್ನೂ ಒಳ್ಳೆಯದಿದೆ ಎಂಬ ಭರವಸೆಯನ್ನು ಇಟ್ಟುಕೊಳ್ಳುವಂತೆ ಮಾಡುವಂತಹವು. ಅಸೂಯೆ, ದ್ವೇಷ ಕೆಲವೊಮ್ಮೆ ರಕ್ತಸಂಬಂಧಗಳಲ್ಲಿ ಕಂಡರೂ.. ಸ್ನೇಹದಲ್ಲಿ ಇಂತಹವು ಕಾಣುವುದು ವಿರಳ ಎಂಬ ಸಂದರ್ಭಗಳನ್ನು ಕಾಣಬಹುದು. 


ಹಣಕ್ಕಿಂತ ಗುಣ ಮುಖ್ಯ ಜೊತೆಗೆ ಯಾರ ಅಂಗವಿಕಲತೆಯೂ ನಿಜವಾದ ಅಂಗವಿಕಲತೆಯಲ್ಲ ಬದಲಿಗೆ ಮಾನಸಿಕವಾಗಿ ಹಾಗೆ ಯೋಚಿಸುವವರು, ದ್ವೇಷಿಸುವವರು ಹಾಗೂ ತಾತ್ಸಾರದಿಂದ ನೋಡುವವರ ಮನಸ್ಸು ಎಷ್ಟು ಕುರೂಪ ಎಂಬುದನ್ನು ಇಲ್ಲಿ ಕಾಣಬಹುದು. 


ಇನ್ನು ಹಲವಾರು ಪಾತ್ರಗಳ ಹಾಗೂ ಇಷ್ಟವಾಗಬಹುದಾದ ಸಂದರ್ಭಗಳ ಚಿತ್ರಣವೂ ಇಲ್ಲಿದೆ. ಈ ಕಾದಂಬರಿ ಇದೀಗ ಮರು ಮುದ್ರಣವಾಗಿ ಓದುಗರಿಗೆ ಲಭ್ಯವಿದೆ. ಫೀಲ್ ಗುಡ್ ಎನಿಸುವಂತಹ ಈ ಕಾದಂಬರಿ ಸುಲಲಿತವಾಗಿ ಓದಿಸಿಕೊಂಡು ಹೋಯಿತು ಹಾಗೂ ಇಷ್ಟವಾಯಿತು. 


~ ವಿಭಾ ವಿಶ್ವನಾಥ್

ಪ್ರೀತಿಯಿಂದ ಗೆದ್ದ ಕತೆಗಳು (ಪುಸ್ತಕ ಯಾನ - 446)

ಪುಸ್ತಕದ ಶೀರ್ಷಿಕೆ : ಪ್ರೀತಿಯಿಂದ ಗೆದ್ದ ಕತೆಗಳು

ಲೇಖಕರು : ವಿವಿಧ ಲೇಖಕರು

ಪ್ರಕಾಶಕರು : ಸಸಿ ಪ್ರಕಾಶನ

ಪ್ರಥಮ ಮುದ್ರಣ : 2025

ಪುಟಗಳು : 172

ಬೆಲೆ : 160 ರೂ. 


ಪ್ರಜ್ಞಾ ಬುಕ್ ಗ್ಯಾಲರಿ ಮತ್ತು ಸಸಿ ಪ್ರಕಾಶನ ಸಹಯೋಗದಲ್ಲಿ ನಡೆದ ಪ್ರಜ್ಞಾ ಕಥಾ ಸ್ಪರ್ಧೆ 2025ರಲ್ಲಿ ಗೆದ್ದ ಟಾಪ್ 10 ಕಥೆಗಳನ್ನು ನಾವು ಈ ಕಥಾ ಸಂಕಲನದಲ್ಲಿ ಓದಬಹುದು.


ದೇವ(ರ) ದಾಸಿ - ಕಬ್ಬಾಳಪ್ಪ ಮರೂರು : 

ಗಾಳೆಮ್ಮನಿಗೆ ತನ್ನ ಮಗಳು ಮೈ ನೆರೆದದ್ದು ಬಹಳ ಸಂತಸಪಡುವ ವಿಚಾರವಾದದ್ದಕ್ಕೆ ಕಾರಣ ಆಕೆ ದೇವದಾಸಿ. ಮಗಳು ರೋಜಾ ಸ್ಪುರದ್ರೂಪಿ ಹುಡುಗಿ. ಗಾಳೆಮ್ಮನ ಮನೆಗೆ ಬರುತ್ತಿದ್ದ ಎಷ್ಟೋ ಜನರು ಅವಳ ಬಗ್ಗೆ ಕುತೂಹಲದಿಂದ ಕೇಳಿದ್ದುಂಟು. ಅದನ್ನು ಗಮನಿಸುತ್ತಿದ್ದವಳು ಆಕೆ ಮೈ ನೆರೆದರೆ ಮುಂದಿನ ತನ್ನ ಬದುಕು, ಸಂತಸದಿಂದ ಕೂಡಿರುತ್ತದೆ ಎನ್ನುವ ಜೊತೆಗೆ ಅವಳನ್ನು ಕೊಂಚ ಓದಿಸಿದರೆ ದೊಡ್ಡ-ದೊಡ್ಡವರನ್ನು ಅವಳ ಕಾಲಡಿಯಲ್ಲಿ ಬಂದು ಬೀಳುವಂತೆ ಮಾಡಬಹುದು ಎಂಬ ಸಂಚನ್ನೂ ಮಾಡಿದ್ದಳು. ತಾಯಿಯ ಉಪಚಾರ, ಶಾಸ್ತ್ರ-ಸಂಪ್ರದಾಯ ಉಸಿರು ಕಟ್ಟಿಸುವುದರ ಜೊತೆಗೆ ಆಕೆಯ ಉದ್ದೇಶದ ಕುರಿತು ಅನುಮಾನವನ್ನು ಮೂಡಿಸಿತ್ತು. ರೋಜಾಳ ಮುಂದಿನ ಬದುಕು ಹೇಗಿತ್ತು..? ಶಿಕ್ಷಣದ ಮಹತ್ವವೇನು ಹಾಗೂ ದೇವದಾಸಿಯರ ಬದುಕಿನ ಚಿತ್ರಣ ಹೇಗಿರುತ್ತದೆ ಎಲ್ಲವನ್ನು ತೋರುವ ಕಥೆ ಇದು.


ಮುನಾವರ್ ಚಾಯ್ ಸ್ಟಾಲ್ - ವಿನಾಯಕ ಅರಳಸುರಳಿ : 

ಮೃಗಶಿರನ ಚಾಯ್ ಸ್ಟಾಲ್ ಎಷ್ಟು ಫೇಮಸ್ ಆಗಿತ್ತು ಹಾಗೂ ಎಂತಹ ಗ್ರಾಹಕರಿದ್ದರು ಎಂಬುದರಿಂದ ಶುರುವಾಗುವ ಈ ಕಥೆಯಲ್ಲಿ ಆತನ ಬದುಕಿನ ಕಷ್ಟದ ಅಧ್ಯಾಯ ಹಾಗೂ ಆತನ ಮನೆಯಲ್ಲಿ ಆತನಿಗೆ ಸಿಗುತ್ತಿದ್ದ ಗೌರವವೇನು ಎಂಬುದೂ ತೆರೆದುಕೊಳ್ಳುತ್ತಾ ಸಾಗುತ್ತದೆ. ಆದರೆ ಮೃಗಶಿರನಿಗೆ ಹೆಚ್ಚು ಬಾಧಿಸುತ್ತಿದ್ದು ಅವನಲ್ಲಿಯೇ ಹುಟ್ಟುತ್ತಿದ್ದ ಪಶ್ಚಾತ್ತಾಪ. ಹೀಗಿದ್ದ ಮೃಗಶಿರನಿಗೆ ವ್ಯವಹಾರದ ಸ್ಥಳದಲ್ಲಿ ತಾತ ಎಂದು ಕರೆದ ಮುನಾವರ ಪರಿಚಯವಾಗುತ್ತಾನೆ. ಮೃಗಶಿರನ ಚಾಯ್ ಸ್ವಾಲ್ ಮುನಾವರನದ್ದೇ ಎಂಬಂತೆ ನಡೆಯುವವನು, ಆತನ ಬದುಕಲ್ಲಿಯೂ ಆವರಿಸಿಕೊಳ್ಳುವ ಪರಿಯ ಮುನಾವರ್, ಮೃಗಶಿರ ಹಾಗೂ ಚಾಯ್ ಸ್ಟಾಲ್ ಕಥೆ ಓದಿ ನೋಡಿ. ಈ ಕಥೆ ನನಗೆ ಬಹಳ ಇಷ್ಟವಾಯಿತು.


ತಿಕ್ಕಲು ಬುಡ್ಡಿ - ಸುಮಾ ರಮೇಶ್ : 

ಮಾಜಿ ಸಚಿವರಾದ ಶ್ರೀ ಗುರುಸಿದ್ದಪ್ಪನವರ ಮಗ ಸಚಿನ್ ನ ತಲೆಯ ಮೇಲೆ ಆಕ್ರಮಣ ಮಾಡಿದ ಇಳಿ ವಯಸ್ಸಿನ ಮಾನಸಿಕ ಅಸ್ವಸ್ಥೆಯನ್ನು ಪೊಲೀಸರು ಬಂಧಿಸಿ ಕರೆದೊಯ್ಯುವ ಹಾಗೂ ಆಗ ಏನಾಯಿತು ಎಂದು ಬಿತ್ತರಿಸುತ್ತಿದ್ದ ಸುದ್ದಿ ಕೇಳಿದ ವಿಭಾಳಿಗೆ ಆಘಾತ, ನೋವು, ಹತಾಷೆ ಎಲ್ಲವೂ ಹುಟ್ಟಿತ್ತು.

ಅಷ್ಟಕ್ಕೂ ತಿಕ್ಕಲು ಬುಡ್ಡಿ ವಿಭಾಳಿಗೆ ಯಾವ ರೀತಿಯ ಪರಿಚಯ? ತನ್ನ ರೆಸ್ಟ್ ಅನ್ನೋ ಮೀರಿ ವಿಭಾ ತಲೆಕೆಡಿಸಿಕೊಳ್ಳುವಂತಹ ವಿಚಾರವಾದರೂ ಏನಿತ್ತು..?

ಬೇರೆಯವರಿಗೆ ಮಾನಸಿಕ ಅಸ್ವಸ್ಥೆಯಂತೆ ಕಾಣುವ ತಿಕ್ಕಲು ಬುಡ್ಡಿಯ ನಿಜ ಸ್ವರೂಪವಾದರೂ ಏನು..? ಓದಿ ನೋಡಿ.


ಸುಪ್ತ ಶರಧಿಯ ಸೇರುವ ಸಮಯ - ದೇವೇಂದ್ರ ಅಬ್ಬಿಗೇರಿ :

ಮೂರು ಭಾಗದಲ್ಲಿ ಸಾಗುವ ಈ ಕಥೆಯಲ್ಲಿ ಸಿಡ್ ನ ಬದುಕು ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಸಿಡ್ ನ ವೈಯಕ್ತಿಕ ಬದುಕು ಸಾಫ್ಟ್ವೇರ್ ಇಂಜಿನಿಯರ್ ಒಬ್ಬರ ಬದುಕಿಗೆ ಸಾಕಷ್ಟು ಹೊಂದಿಕೆಯಾಗುವ ಚಿತ್ರಣಗಳನ್ನು ಹೊತ್ತುಕೊಂಡಿದೆ. ಅಷ್ಟಕ್ಕೂ ಸಿಡ್ ಈಗ ಡಾ. ಪ್ರಿಯಾ ಬಳಿ ಕೌನ್ಸಿಲಿಂಗ್ ತೆಗೆದುಕೊಳ್ಳುತ್ತಿದ್ದ. ಅಷ್ಟಕ್ಕೂ ಆತನನ್ನು ಬಾಧಿಸುತ್ತಿದ್ದ ಸಮಸ್ಯೆಯೇನು? ಹಾಗೂ ಪ್ರಿಯಾ ಆತನಿಗೆ ಕೊಟ್ಟ ಸಲಹೆ ಏನು? ಓದಿ ನೋಡಿ.


ಕಳಲೆ ಕಮಲಾಕ್ಷ - ಎಂ ಮನೋಹರ ಪೈ :

ಮಳೆಗಾಲ ಆರಂಭವಾಯಿತೆಂದರೆ ಸುತ್ತುರ್ಕಿಯ ಗಂಡಸರು ಪಚ್ಚಮಲೆಗೆ ಹೋಗಿ ಕಳಲೆ ಕತ್ತರಿಸಿ ತಂದು, ಕರಿಯೂರಿಗೆ ಹೋಗಿ ಕಳಲೆ ಮಾರಿ ಸಿಕ್ಕ ಹಣದಲ್ಲಿ ಮಳೆಗಾಲದ ಖರ್ಚು ಕಳೆಯುತ್ತಿದ್ದರು. ಹೀಗೆ ಬಿದಿರು ಬುಟ್ಟಿ ಹಿಡಿದುಕೊಂಡು ಪಚ್ಚಮಲೆಯನ್ನು ಪ್ರವೇಶಿಸುತ್ತಿದ್ದ ಗಂಡಸರಲ್ಲಿ ಕಮಲಾಕ್ಷನೂ ಒಬ್ಬ. ಎಲ್ಲರಂತೆ ಆತನು ಒಬ್ಬನಾಗಿದ್ದರೆ ಈ ಕಥೆ ಹುಟ್ಟುತ್ತಿರಲಿಲ್ಲವೇನೋ..! ಆದರೆ, ಕರಿಯೂರಿನ ಮನೆಗಳಲ್ಲಿ ಕಳಲೆ ಕಮಲಾಕ್ಷ ಎಂದೇ ಗುರುತಿಸಲ್ಪಡುತ್ತಿದ್ದ ಆತ ಆ ಹೆಸರು ಪಡೆದದ್ದಾದರೂ ಹೇಗೆ..? ಇತ್ತೀಚಿನ ದಿನಗಳಲ್ಲಿ ಪಚ್ಚಮಲೆಯ ಕಾಡಿನಿಂದ ಕಳಲೆ ತರುವುದು ಸುಲಭದ ಕೆಲಸವಾಗಿರಲಿಲ್ಲವೇಕೆ..? ಕಮಲಾಕ್ಷನ ಓದು ಹಾಗೂ ಆತನ ಯೌವ್ವನದ ದಿನಗಳು ಹೇಗಿದ್ದವು..? ಕಮಲಾಕ್ಷ ಮುಖ್ಯರಸ್ತೆಗೆ ಹೋಗದೆ ಅಡ್ಡದಾರಿ ಇಳಿದು ಪಚ್ಚಮಲೆಯತ್ತ ಹೋದ ದಿನ ಏನಾಯಿತು..? ಸಾಕಷ್ಟು ಕುತೂಹಲ ಹಾಗೂ ರೋಚಕತೆಯ ಜಾಡಿನಲ್ಲಿ ಸಾಗುವ ಈ ಕಥೆಯ ಅಂತ್ಯ ಊಹಿಸಲು ಸುಲಭವೇನಲ್ಲ. ಆಸಕ್ತಿಕರ ಕಥೆಯನ್ನು ಓದಿ ನೋಡಿ.


ಖಂಡವಿದೆಕೋ, ಮಾಂಸವಿದೆಕೋ - ಸಂತೆಬೆನ್ನೂರು ಫೈಜ್ನಟ್ರಾಜ್ :

ಅಲ್ಲಾಭಕ್ಷಿ-ದಿಲ್ಷಾದ್ ದಂಪತಿಗಳ ಒಬ್ಬಳೇ ಮಗಳು ರಜಿಯಾ 7ನೇ ತರಗತಿ ಓದುತ್ತಿದ್ದಳು. ಬಕ್ರೀದ್ ಹಬ್ಬಕ್ಕೆ ಐದಾರು ದಿನ ಉಳಿದಿರುವಾಗ ಸಣ್ಣ ಹುಡುಗಿ ಅಪ್ಪನನ್ನು ಗದರಿಸುತ್ತಿದ್ದಳು. "ಮುನ್ನಿಯನ್ನು ಮಾತ್ರ ಕೊಡುವುದಿಲ್ಲ. ನಮಗೆ ಹಬ್ಬ, ಬಟ್ಟೆ, ಮಾಂಸ ಯಾವುದೂ ಬೇಡ" ಎನ್ನುತ್ತಿದ್ದ ರಜಿಯಾ ಹಾಗೂ ಮುನ್ನಿಯ ಸಂಬಂಧ ಹೇಗಿತ್ತು..? ಪ್ರೀತಿಗೆ ಭಾಷೆ ಇಲ್ಲ ಎಂಬಂತಿದ್ದ ಮುನ್ನಿ ಹಾಗೂ ರಜಿಯಾರ ಸಂಬಂಧ ಹೇಗಿತ್ತು..? ಮುನ್ನಿಯನ್ನು ಇಲ್ಲಿ ಕೇವಲ ಹಸುವಿನಂತೆ ಮಾತ್ರ ಭಾವಿಸದ ರಜಿಯಾಯ ಮನಸಲ್ಲಿ ಪುಣ್ಯಕೋಟಿಯ ಕಥೆ ಹೇಗೆ ಕಾಣುತ್ತಿತ್ತು..? ಮಗಳ ಬೇಡಿಕೆಗೆ ಮಣಿಯದ ಅಲ್ಲಾಭಕ್ಷಿಯ ನಡೆ ಯಾವೆಲ್ಲಾ ಬದಲಾವಣೆಗೆ ಕಾರಣವಾಯಿತು..? ರಜಿಯಾ ಕಂಡದ್ದು ಕನಸೋ, ನನಸೋ, ಭ್ರಮೆಯೋ ಓದಿ ನೋಡಿ.


ಸಾಮಂತ್ರಿ - ದಿವ್ಯಶ್ರೀ ಅದರಂತೆ : 

ಸಾಮಂತ್ರಿಯ ಗಂಡ ವಿಷ ಕುಡಿದು ಸತ್ತು ಮನೆಗೆ ಮುಳುವಾಗಿದ್ದನು. ಆದರೆ, ಯಾವುದಕ್ಕೂ ಜಗ್ಗದೆ ಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಳು ಸಾಮಂತ್ರಿ. ಸಾಮಂತ್ರಿ ತನ್ನ ಗಂಡ ಸತ್ತು ಒಂದು ವರ್ಷದ ನಂತರ ದೊಡ್ಡ ಮಗಳನ್ನು ಮದುವೆ ಮಾಡಿದ್ದಳು. ಜವಾಬ್ದಾರಿಯುತ ಅಳಿಯ ಸಿಕ್ಕಿದ್ದು ಅವಳಿಗೆ ಖುಷಿ. ಅತ್ತೆಯ ಮನೆಯ ಪರಿಸ್ಥಿತಿಗೆ ಹೆಗಲಾಗಿ ನಿಲ್ಲುವುದು ಆತನಿಗೆ ಅನಿವಾರ್ಯವೆಂದರೂ ತಪ್ಪಾಗಲಾರದು. ಆದರೂ.. ಬೆಸರಿಸಿಕೊಳ್ಳದೆ ಹೆಗಲಾಗುತ್ತಿದ್ದ. 

ಒಂದು ಭಾನುವಾರ ಕಾಡಿಗೆ ಹೋಗಿ ಬೆಳಿಗ್ಗೆ 9 ರಿಂದ ಸಂಜೆ 6 ರ ಒಳಗೆ ಕಟ್ಟಿಗೆ ಕಟ್ಟಿಕೊಂಡು ಕಾಡಿನಿಂದ ಹೊರ ಬರಬೇಕು. ಮನೆಗೆ ಇಬ್ಬರು ಮಾತ್ರ ಹೋಗಬೇಕು ಎಂದು ಸಾರಿದ ಮಾತಿಗೆ ಸಾಮಂತ್ರಿಯ ಅಳಿಯನನ್ನು ಜೊತೆ ಮಾಡಿಕೊಂಡು ಹೊರಟಳಾದರೂ ಅವಳಿಗೆ ಎದುರಾದ ಸವಾಲುಗಳೇನು..? ಅವೆಲ್ಲವನ್ನೂ ಯಾವ ರೀತಿ ನಿಭಾಯಿಸಿದಳು..? ಹೆಣ್ಣು ಎಂದರೆ ಕಡಿಮೆ ಎಂದು ಅಂದಾಜಿಸುವಂತೆಯೇ ಇಲ್ಲ. ಇಲ್ಲಿ ಸಾಮಂತ್ರಿಯ ಪ್ರತಿಕ್ರಿಯೆ ಹೇಗಿತ್ತು..?


ವೃತ್ತ - ಟಿ. ಎಂ. ರಮೇಶ್ :

ಒಂದು ವರ್ಷದ ಹಿಂದೆ ಟಿಪ್ ಟಾಪ್ ಆಗಿ ದೊಡ್ಡ ಕಾರೊಂದರಲ್ಲಿ ಬಂದಿಳಿದಿದ್ದ ಗೆಳೆಯ ಅದೃಷ್ಟವಂತನೂ ಆಗಿದ್ದು .. ಆತನ ಮಾತನ್ನು ನಂಬಿಕೊಂಡು ಆತ ಕೊಟ್ಟಿದ್ದ ವಿಳಾಸಕ್ಕೆ ಬಂದಿದ್ದ ಬರಮ ರಿಯಲ್ ಎಸ್ಟೇಟ್ ಮತ್ತು ಕಂಟ್ರಾಕ್ಟ್ ಬ್ಯುಸಿನೆಸ್ ಮನ್ ಆಗಿದ್ದ ಗೆಳೆಯ ಶ್ರೀಕೃಷ್ಣನನ್ನು ಭೇಟಿಯಾಗಿದ್ದ. ಗೆಳೆಯನನ್ನು ಆತ ಬರಮಾಡಿಕೊಂಡದ್ದು ಹೇಗೆ..? ತನ್ನ ಹೆಂಡತಿ ಲಚುಮಿಗೆ ಏನೆಂದು ಭರವಸೆ ಕೊಟ್ಟು ಬಂದಿದ್ದ ಬರಮ..? ಈ ಸ್ನೇಹ ಹಾಗೂ ಸಂದರ್ಭ ಹೇಗಿದ್ದವು ಓದಿ ನೋಡಿ.


ಡೆಡ್ ಲೈನ್ ಮತ್ತು ಡಿನ್ನರ್ - ಶ್ವೇತಾ ನರಗುಂದ :

ಕಾರ್ಪೊರೇಟ್ ಫೀಲ್ಡ್ ನಲ್ಲಿಯೇ ಇದ್ದ ಇಬ್ಬರು ದಂಪತಿಗಳು ಆರತಿ ಹಾಗೂ ಅಭಿಷೇಕ್. ಮೀಟಿಂಗ್, ಟಾಸ್ಕ್ ಅಪ್ಡೇಟ್, ಪರ್ಫಾರ್ಮೆನ್ಸ್, ರಿವ್ಯೂ ಎಂದೆಲ್ಲಾ ಕೆಲಸದಲ್ಲಿಯೇ ಮುಳುಗಿ ಏಳುತ್ತಿದ್ದಾಗ ತಮ್ಮಿಬ್ಬರ ನಡುವೆ ಮೂಡುತ್ತಿದ್ದ ಕಂದಕವನ್ನು ಗಮನಿಸಿದವಳು ಆರತಿ. ಶೇರ್ಡ್ ಸ್ಪೇಸ್ ವರ್ಕರ್ಸ್ ನಂತಾಗಿದ್ದೇವೆ ಎನಿಸಿದಾಗ ಅದನ್ನು ನೇರವಾಗಿಯೇ ಬಿಚ್ಚಿಟ್ಟಳಾದರೂ ಅಭಿಷೇಕ್ ಅದಕ್ಕೆ ಪ್ರತಿಕ್ರಿಸಿದ ಬಗೆಯೇ ಬೇರೆಯಿತ್ತು. ಇಬ್ಬರಲ್ಲಿ ಮೊದಲು ಎಚ್ಚೆತ್ತ ಆರತಿಗೆ ಮನಸ್ಸಿಗೆ ಬಂದ ವಿಚಾರಗಳು ಏನಿದ್ದವು..? ಅಭಿಷೇಕ್ ನನ್ನು ಕನ್ವೆನ್ಸ್ ಮಾಡುವುದರಲ್ಲಿ ಆರತಿ ಎಷ್ಟು ಸಫಲಳಾದಳು..? ಓಡುವ ಬೆಂಗಳೂರಿನ ವೇಗಕ್ಕೆ ಸಮನಾಗಿ ಓಡಲು ಪ್ರಯತ್ನಿಸುವ ಕಾರ್ಪೊರೇಟ್ ದಂಪತಿಗಳ ಕಥೆ ಇದು. ವೇಗ, ಕಾರ್ಯಕ್ಷಮತೆ, ಸಾಧನೆ, ಫಲಿತಾಂಶ ಎಂದೆಲ್ಲಾ ಓಡುವಾಗ ವೈಯಕ್ತಿಕ ಬದುಕಿಗೆ ಎಷ್ಟು ಸ್ಪೇಸ್ ಬೇಕು ಎನ್ನುವುದನ್ನು ಅರ್ಥ ಮಾಡಿಸುವ ಕಥೆ ಇಲ್ಲಿದೆ.


ಬೆಂಕಿ ಮತ್ತು ಬಾವಿ - ಡಾ. ಭದ್ರಪ್ಪ ಶಿ ಹೆನ್ಲಿ

40 ವರ್ಷಗಳ ಹಿಂದೆ ಇದ್ದ ಕಣ್ಣಾ ಪಂಡಿತರ ಮನೆಯನ್ನು ಹುಡುಕಿ ಬಂದವನಿಗೆ ಕೊನೆಗೂ ಜಾನಕಿ ಅಜ್ಜಿ ಸಿಕ್ಕಿದಳು. ಜಾನಕಿ ಅಚ್ಚಿಯಿಂದ ತಿಳಿದದ್ದು ಪಂಡಿತರು ಮೃತರಾಗಿ ಮೂರು ದಿನ ಕಳೆದಿದ್ದವು. ಕಣ್ಣಾ ಪಂಡಿತರ ಸನಾತನ ಧರ್ಮವನ್ನು ಧಿಕ್ಕರಿಸಿ ನಡೆದ ಮಗ ಏನಾದ..? ಕಾಲವೇ ಎಲ್ಲವನ್ನು ಮರೆಸಬಹುದೆಂದು ಅಜ್ಞಾತನಾದವನಿಗೆ.. ಅವರು ಆತನನ್ನು ಮರೆತಾಗ ಸನ್ನಿವೇಶಗಳು ಆತನ ಬದುಕಲ್ಲಿ ಏನೆಲ್ಲಾ ಆಟ ಆಡಿದವು..? ಕಣ್ಣಾ ಪಂಡಿತರ ಸಂಸಾರಸೌಧ ಕುಸಿದ ಬಗೆ ಹೇಗೆ..?

ಸಂಬಂಧಗಳಿಗೆ ಸಾವಿಲ್ಲವೆಂದು ಬರೆದ ತಂದೆಯ ಪತ್ರ ಮಗನಿಗೆ ಸೇರಿತೇ? ಸಾಮಾಜಿಕ ನ್ಯಾಯವೆಂದು ಅಲೆದಾಡಿದ್ದ ಮಗ ಹೇಗಿದ್ದ..? ಈ ದುರಂತಗಾಥೆ ಯಾರದ್ದಾದರೂ ಬದುಕಲ್ಲಿ ಪರಿವರ್ತನೆ ತರಬಹುದು ಓದಿ ನೋಡಿ.


ವಿವಿಧ ಲೇಖಕರ ವಿಭಿನ್ನ ಕತೆಗಳ ಚೆಂದದ ಕಥಾಲೋಕ ಇಲ್ಲಿದೆ. ಸ್ಪರ್ಧಾ ಕತೆಗಳ ಕುರಿತ ಕುತೂಹಲ ಉಳ್ಳವರು ಓದಬಹುದಾದ ಕಥಾ ಸಂಕಲನ ಇದು.


~ವಿಭಾ ವಿಶ್ವನಾಥ್

ಸೃಷ್ಟಿಕರ್ತನಷ್ಟೇ ಶಕ್ತೆ


ಮನುಜ ಕುಲದ ಉದ್ದಾರಕೆ

ತಾನು ಎಲ್ಲೆಡೆ ಇರಲಾರೆನೆಂದು

ಸಮಯಕೆ ಸಿಗಲಾರೆನೆಂದು 

ಮುಂದಾಲೋಚನೆಯಲಿ ಮೂಡಿಸಿದ

ತಾಯಿಯೆಂಬ ಸೃಷ್ಟಿಯ

ಸೃಷ್ಟಿಕರ್ತನಷ್ಟೇ ಶಕ್ತೆ ತಾನೆ ಅಮ್ಮನು


ತನ್ಮೂಲಕ ಜೀವದ ಸೃಷ್ಟಿ ಮಾಡಿ

ಕರುಳ ಕುಡಿಯ ಕರೆಗೆ ಓಗೊಟ್ಟು

ನಿಸ್ವಾರ್ಥದ ಪ್ರೀತಿ ಸವಿಯ ಹಂಚಿ

ಮಡಿಲಲಿ ಪ್ರೀತಿ ತಂಪನ್ನಿಟ್ಟು

ಮುಂದಾಲೋಚನೆಯಲಿ ಹರಸಿ

ಕಾಯುವ ದೇವತೆಯೇ ಅಮ್ಮನು


~ವಿಭಾ ವಿಶ್ವನಾಥ್

ಕಾಲದ ಮಹಿಮೆ (ಬೆಳಕಿಂಡಿಯ ಕತೆಗಳು - 17)


ಯೌವ್ವನದ ಕಾಲದಲ್ಲಿ ತಾನೇ ಸೌಂದರ್ಯವತಿ ಹಮ್ಮಿನಿಂದ ಬೀಗುತ್ತಾ ಸುತ್ತಮುತ್ತಲಿನವರನ್ನು ಮಾತನಾಡಿಸದೆ ತನ್ನದೇ ವಲಯದಲ್ಲಿ ಇದ್ದವಳಿಗೆ ಈಗ ಮುಪ್ಪಿನ ಕಾಲ ಹಾಗೂ ಕೊರೊನಾ ಕಾಲ ಚೆನ್ನಾಗಿಯೇ ಅರಿವು ಮೂಡಿಸಿದೆ. ಸಣ್ಣ-ಪುಟ್ಟ ವಿಚಾರಗಳಿಗೂ ಅಕ್ಕ-ಪಕ್ಕದವರು ಹೊಂದಿಕೊಂಡು ಬಾಳ್ವೆ ಮಾಡುವಾಗ ತಾನೆಷ್ಟು ಸಣ್ಣತನ ತೋರಿಬಿಟ್ಟೆ ಎನ್ನುವ ಅರಿವಾಗುತ್ತಲಿದೆ. 


ಅವಳು ಕಪ್ಪು, ಇವಳು ದಪ್ಪ, ಇವಳು ಹಾಗೆ, ಹೀಗೆ.. ಎನ್ನುತ್ತಾ ದೂರವಿಟ್ಟವರೇ ಇವಳ ಕಷ್ಟ ಕಾಲದಲ್ಲಿ ಆದದ್ದು.. ಅವರೂ ನನ್ನ ಹಾಗೆಯೇ ಬಿಂಕ -ಬಿನ್ನಾಣ ತೋರಿದ್ದರೆ ಎಂದು ನೆನಪಿಸಿಕೊಂಡರೇ ಅವಳಿಗೆ ಭಯವಾಗುತ್ತದೆ. ಸೌಂದರ್ಯ ನಶ್ವರ.. ಹಮ್ಮು-ಬಿಮ್ಮು ತೊರೆದು ಬಾಳ್ವೆ ನಡೆಸಿದರಷ್ಟೇ ಮತ್ತೊಬ್ಬರ ಬದುಕಲ್ಲಿ ಕೊಂಚವಾದರೂ ಸಹಕಾರಿಯಾಗಿ ನಿಂತು ನೆನಪಾಗಿರಬಹುದು ಎಂಬ ಅರಿವಾಗಿದೆ. ಕಾಲದ ಮಹಿಮೆಯೇ ಅಂತಹದ್ದು.. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಹೆಚ್ಚು ಎಂದು ಅರಿವು ಮೂಡಿಸುವಂತಹದ್ದು 


~ವಿಭಾ ವಿಶ್ವನಾಥ್

ಪುಟ್ಟ ಕಲಾವಿದೆ (ಬೆಳಕಿಂಡಿಯ ಕತೆಗಳು - 16)


"ಪುಟ್ಟಿಗೆ ಕರ್ನಾಟಕ ಜ್ಯೂನಿಯರ್ ಡ್ರಾಯಿಂಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಸಿಕ್ಕಿದೆ. ಚಿಕ್ಕ ವಯಸ್ಸಿಗೆ ಈ ಪ್ರಶಸ್ತಿ ಪಡೆದ ಮೊದಲ ಮಗು ಅವಳೇ ಅಂತೆ ರೀ.. " ಎಂದ ಸೌಭಾಗ್ಯ ಮಾತಿಗೆ ಹೂಂಗುಟ್ಟಿ "ನಾನು ನಿನಗೆ ಅವತ್ತೇ ಹೇಳಲಿಲ್ವಾ.. ಮಗುವಿನ ಪ್ರತಿಭೆಯನ್ನು ಪೋಷಿಸಿದರೆ ಅವರಲ್ಲೂ ಅಡಗಿರುವ ಕಲಾವಿದರು ಹೊರ ಬರುತ್ತಾರೆ ಅಂತಾ. 


ಗೋಡೆ ಮೇಲೆ ಅವಳು ಅವತ್ತು ಬಳಿದಿದ್ದ ಕಲರ್ ನೋಡಿ ಅದೆಷ್ಟು ಕೋಪ ಮಾಡಿಕೊಂಡಿದ್ದೆ ನೀನು... ಗೋಡೆಯೆಲ್ಲಾ ಹಾಳಾಯ್ತು ಅಂತಾ ಕೂಗಾಡುತ್ತಾ ಇದ್ದೆ. ಆದರೆ, ನಾನು ಅವಳನ್ನು ಬೈಯದೆ, ಬದಲಾಗಿ ಕರೆದುಕೊಂಡು ಹೋಗಿ ಡ್ರಾಯಿಂಗ್ ಕ್ಲಾಸ್ ಗೆ ಸೇರಿಸಿ ಅವಳನ್ನು ಪ್ರೋತ್ಸಾಹಿಸಿದ್ದಕ್ಕೆ ನೋಡು ಇವತ್ತು ನಾವು ಹೆಮ್ಮೆ ಪಡುವ ಹಾಗೆ ಮಾಡಿದ್ದಾಳೆ" ಎಂದನು ಶ್ರೀಕರ.


" ಹೌದು ಶ್ರೀ, ಮಕ್ಕಳಲ್ಲಿ ಪುಟ್ಟ ಕಲಾವಿದರು ಇರುತ್ತಾರೆ. ಪೋಷಿಸಿ, ಪ್ರೋತ್ಸಾಹ ನೋಡಿದರೆ ಸರಿಯಾದ ಸಮಯದಲ್ಲಿ ಹೊರಬರುತ್ತಾರೆ. " ಎಂದರು ಸೌಭಾಗ್ಯ.


~ ವಿಭಾ ವಿಶ್ವನಾಥ್

ಭಾನುವಾರ, ಮೇ 10, 2026

ಅವಳೀಗ ಅಮ್ಮ (ಅವಳ ಕವಿತೆಗಳು - 24)


ತುಂಟಾಟದ ದಿನಗಳು ಕಳೆದವು

ಮುಖದಲಿ ಪ್ರೌಢ ಕಳೆ ಬೇಕು

ಜವಾಬ್ದಾರಿ ಹೊತ್ತು ನಡೆ ನೀನೀಗ

ನೀನೀಗ ಅಮ್ಮ - ಎಂದವರವರು


ಮುಗ್ಧೆಯಾದರೆ ಮುಳುಗಿಸುತ್ತಾರೆ 

ಜಾಣತನದಿ ತಿದ್ದಿಕೊಂಡು

ನಿನ್ನ ಆಸೆಗಳ ಗಂಟು ಕಟ್ಟಿಡಬೇಕು

ನೀನೀಗ ಅಮ್ಮ - ಎಚ್ಚರಿಸಿದರವರು


ಮಗುವಿನ ಆಟವ ಆನಂದಿಸುವ

ಸದಾ ನಗುಮುಖದಿ ಎದುರಾಗುವ

ಪ್ರೀತಿಯನ್ನೇ ಮೊಗೆದು ಕೊಡುವ

ಅವಳೀಗ ಅಮ್ಮ - ಅವಳಿಷ್ಟದಂತೆ


ಜಗದ ಸಲಹೆಗೆ ಜಾಣ ಕಿವುಡಾಗಿ

ಎಚ್ಚರಿಕೆಯಿಂದ ಆಪ್ತ ವಲಯದಲಿ

ತನ್ನಾಸೆಯ ಮಗುವಿಗೆ ಆಸರೆಯಾಗುವ

ಅವಳೀಗ ಅಮ್ಮ - ಎಚ್ಚರದಿಂದಿದ್ದಾಳೆ


ಜಗದ ಕಣ್ಣಿಗೆ ಬೇಕಾದ ಅಮ್ಮನಿಗಿಂತ

ಮಗುವಿಗೆ ಬೇಕಾದ ಅಮ್ಮನಾಗಿದ್ದಾಳೆ

ಅವಳಿಗೆ ಸಂಪೂರ್ಣ ಅರಿವಿದೆ ಹೇಗಿರಬೇಕೆಂದು

ಏಕೆಂದರೆ, ಅವಳೀಗ ಅಮ್ಮ


~ವಿಭಾ ವಿಶ್ವನಾಥ್

ಮಡಿಲು (ಪುಸ್ತಕ ಯಾನ - 445)


ಪುಸ್ತಕದ ಶೀರ್ಷಿಕೆ : ಮಡಿಲು

ಲೇಖಕರು : ನಾಗರಾಜ ವಸ್ತಾರೆ 

ಪ್ರಕಾಶಕರು : ಛಂದ ಪುಸ್ತಕ 

ಪ್ರಥಮ ಮುದ್ರಣ : 2009

ಪುಟಗಳು : 80

ಬೆಲೆ : 15 ರೂ. 


ಮಡಿಲು ಎಂದಾಕ್ಷಣ ಮೊದಲಿಗೆ ಅಮ್ಮ ನೆನಪಾಗುತ್ತಾಳೆ. ಇದು ಅಮ್ಮನ ಕಥೆಯೇ.. ಆದರೆ, ಅಮ್ಮನ ಮನಸ್ಸಿನ ತುಮುಲಗಳು ಹಾಗೂ ಹರೆಯದ ಮಗುವಿನ ಅಮ್ಮನ ಭಾವನೆಗಳನ್ನು ತೆರೆದಿಟ್ಟಿರುವ ನೀಳ್ಗತೆ ಇದು. ಮಗನ ಅಮ್ಮನಿಗೆ ಮಾತ್ರವಲ್ಲದೆ.. ಕಾಳಜಿ ಮಾಡುವ ಪ್ರತಿ ಅಮ್ಮಂದಿರಿಗೂ ಕನೆಕ್ಟ್ ಆಗುವಂತಹ ಕಥೆ ಇದು.


ನಾಗರಾಜ ವಸ್ತಾರೆ ಅವರ ಈ ಕತೆಯಲ್ಲಿ ಹೆಸರುಗಳು ಬಹಳ ಇಷ್ಟವಾದವು. ಸಾಂಜ್ಞಲಕ್ಷ್ಮಿ, ಗುಣಶೀಲ ಮತ್ತು ಮಾಕಂದ ಎನ್ನುವ ಮೂರು ಪಾತ್ರಗಳೇ ಮುಖ್ಯ ಪಾತ್ರಗಳಾಗಿ ಇಡೀ ಕತೆಯನ್ನು ಆವರಿಸಿಕೊಳ್ಳುತ್ತವೆ. 


ಈ ನೀಳ್ಗತೆಯನ್ನು ಅರ್ಪಿಸಿರುವುದು "ನಮ್ಮ ನಿಮ್ಮ ಒಳ ಮನೆಗಳ ಸಾಂಜ್ಞಲಕ್ಷ್ಮಿಯರಿಗೆ" ಎನ್ನುತ್ತಾರೆ ವಸ್ತಾರೆಯವರು. 


ಅಕ್ಟೋಬರ್ ನಲ್ಲಿ ಒಂದು ಪ್ರವಾಸವನ್ನು ಆಯೋಜಿಸಿದ್ದಳು ಸಾಂಜ್ಞಲಕ್ಷ್ಮಿ. ದಸರೆಯ ನೆವದಲ್ಲಿ ಅವಳು ಕೆಲಸ ಮಾಡುತ್ತಿದ್ದ ಮಾಂಟೆಸರಿಗೆ ರಜೆ ಇರುತ್ತದೆ ಎನ್ನುವ ಕಾರಣಕ್ಕಿಂತಲೂ ಹೆಚ್ಚಾಗಿ ಗುಣಶೀಲನ ಕೆರಿಯರ್ ನಲ್ಲಿ ಸದ್ಯಕ್ಕೆ ಟ್ರಾನ್ಸಿಟ್ ಪಿರಿಯಡ್ ನಡೆಯುತ್ತಿರುವುದು, ಜೊತೆಗೆ ಇದ್ದೊಬ್ಬ ಮಗ ಮಾಕಂದ ಕಳೆದ ಆಗಸ್ಟ್ ನಲ್ಲಿ ಇಂಜಿನಿಯರಿಂಗ್ ಓದು ಮುಗಿಸಿ ಕಾಲೇಜಿನಿಂದಲೇ ಪ್ಲೇಸ್ಮೆಂಟ್ ಆಗಿ ಇನ್ನೇನು ಕೆಲಸಕ್ಕೆ ಸೇರಲಿದ್ದ. ಮಗನ ಇಂಜಿನಿಯರಿಂಗ್ ಸೇರಿದಾಗಿನಿಂದ ಮೂವರ ಬಿಡುವುಗಳೂ ಒಂದಕ್ಕೊಂದು ಹೊಂದಿಕೊಳ್ಳದೆ ಹೊರಗೆ ಬರಲಾಗಿರಲಿಲ್ಲ ಎನ್ನುವುದು ಹೌದಾದರೂ.. ಇದೆಲ್ಲವನ್ನು ಮೀರಿದ್ದು ಸಾಂಜ್ಞಲಕ್ಷ್ಮಿಯ ಮನಸ್ಸಿನಲ್ಲಿ ಭದ್ರವಾಗಿತ್ತು. 


ನೇರವಾಗಿ ಹಂಚಿಕೊಳ್ಳಲಾಗದ ಈ ಚಿಂತಾಕ್ರಾಂತತೆಯನ್ನು ಲೇಖಕರು 'ವರಿ' ಎನ್ನುತ್ತಾರೆ. 

"ಆಧುನಿಕ ನುಡಿಗಟ್ಟಿನಲ್ಲಿ ಹಿಡಿದಿಳುವುದಾದರೆ ಅದನ್ನು ಒಂದು ವರಿ ಅನ್ನಬಹುದೇನೋ ದೇಸಿ ಚಿಂತಾ ಕ್ರಾಂತದಿಂದ ಪ್ರಬಲವಾದ ವರಿಯೇ 'ವರಿ' ಅದು! 


ಗುಣಶೀಲನಿಗೆ ಸಾಂಜ್ಞಲಕ್ಷ್ಮಿಯ ಮನಸ್ಸಿನ ತುಮುಲ ಹಾಗೂ ಚಿಂತಾಕ್ರಾಂತತೆಯ ಅರಿವಿದ್ದರೂ ಆತ ಅವಳಷ್ಟು ತಲೆಬಿಸಿ ಮಾಡಿಕೊಂಡಿರಲಿಲ್ಲ. 


ಅವರು ವಾಸವಿದ್ದ 'ಆಸರೆ'ಯಲ್ಲಿ ಅವರು ನೆಲೆಸಿದ್ದಾಗಿನಿಂದ ಸಾಂಜ್ಞಲಕ್ಷ್ಮಿಯ ದಿನಶರಿ ಬದಲಾಗದಿದ್ದರೂ ಗುಣಶೀಲನ ಕೆಲಸ ಜೊತೆಗೆ ದಿನಚರಿ ಲೈಫ್ ಸ್ಟೈಲ್ ಎಲ್ಲವೂ ಬದಲಾಗುತ್ತಿತ್ತು. ಒಂದು ರೀತಿಯಲ್ಲಿ ಮನೆಯ ಯಾವ ತಲೆಬಿಸಿಯನ್ನೂ ಹಂಚಿಕೊಳ್ಳದ ಗುಣಶೀಲನ ಮನಸ್ಥಿತಿಯೇ ಮಗನಿಗೂ ಬಂದಿತ್ತೆಂದರೂ ತಪ್ಪಾಗಲಾರದು. ಅಥವಾ ಸಾಂಜ್ಞಲಕ್ಷ್ಮಿಯ ಅತಿಯಾದ ಕಾಳಜಿ ಅಪ್ಪ-ಮಕ್ಕಳಿಬ್ಬರನ್ನು ಹಾಗೆ ಮಾಡಿಬಿಟ್ಟಿತ್ತು ಎಂದರೂ ತಪ್ಪಾಗಲಾರದು. 


ಗಂಡು ಮಕ್ಕಳ ವಿಷಯದಲ್ಲಿ ಎಲ್ಲಾ ಅಮ್ಮಂದಿರೂ ಹೀಗೆ ಯೋಚಿಸುತ್ತಾರೋ ಅಥವಾ ತಾನೊಬ್ಬಳು ಮಾತ್ರವೋ ಎಂಬ ಅನುಮಾನ ಸಾಂಜ್ಞಲಕ್ಷ್ಮಿಗೆ ಬರುತ್ತದಾದರೂ.. ಅವಳ ಜಾಗದಲ್ಲಿ ನಾವಿದ್ದರೂ ಹಾಗೆಯೇ ಯೋಚಿಸುತ್ತಿದ್ದೆವಲ್ಲವಾ ಎಂದೂ ಅನ್ನಿಸಿತು. 


ಮಾಕಂದನ ಬದುಕಿನಲ್ಲಿ ಬಂದಿದ್ದ ವಿಶಾಲ ಗೇಂದ ಸಾಂಜ್ಞಲಕ್ಷ್ಮಿಯನ್ನು ಕಾಡುತ್ತಿದ್ದ ವ್ಯಕ್ತಿಯಾಗಿದ್ದರೂ ಅವರಿಬ್ಬರ ನಡುವಿನ ಸಂಬಂಧಕ್ಕೊಂದು ಹೆಸರು ಹಚ್ಚಲು ಗುಣಶೀಲನಾಗಲಿ, ಸಾಂಜ್ಞಲಕ್ಷ್ಮಿಯಾಗಲಿ ಮಾಡಿರಲಿಲ್ಲವಾದರೂ.. ಆ ಹೆಸರು ಸಾಂಜ್ಞಲಕ್ಷ್ಮಿಯ ಮನಸ್ಸಿನಲ್ಲಿದ್ದೇ ಇತ್ತು.


ಗುಣಶೀಲನನ್ನು ಮದುವೆಯಾಗಿ ತಾನು ಈಗ ಅನುಭವಿಸುತ್ತಿರುವ ಪರಿಸ್ಥಿತಿ ಮಾಕಂದನನ್ನು ಮದುವೆಯಾಗುವ ಹುಡುಗಿಯನ್ನು ಕಾಡಿದರೆ..! ಎಂಬುದು ಅವಳ ಮನಸ್ಸನಲ್ಲಿದ್ದ ಮತ್ತೊಂದು ಆಲೋಚನೆಯೂ ಹೌದು. ಏಕೆಂದರೆ, ಅಪ್ಪ-ಮಗನ ಸ್ವಭಾವಗಳಲ್ಲಿ ಹೆಚ್ಚೇನೂ ವ್ಯತ್ಯಾಸಗಳಿರಲಿಲ್ಲ.


ಅಷ್ಟಕ್ಕೂ ಸಾಂಜ್ಞಲಕ್ಷ್ಮಿ ಗುಣಶೀಲನ ಜೊತೆ ತನ್ನ ಹೆಚ್ಚಿನ ಭಾವನೆಗಳನ್ನು ಪೂರ್ತಿ ಚರ್ಚಿಸಿರುವುದಿಲ್ಲ. ಅವನ ಅಭಿಪ್ರಾಯ ತನ್ನ ಜೊತೆಗೆ ತಾಳೆಯಾಗುವುದಿಲ್ಲ ಎನ್ನುವುದು ಅವಳ ಪೂರ್ವಗ್ರಹಪೀಡಿತ ಮನಸ್ಥಿತಿಯೋ ಅಥವಾ ವಾಸ್ತವ ಹಾಗಿತ್ತೋ ಓದಿ ನೋಡಿ.


ಮೂವರೂ ಉದಯಪುರಕ್ಕೆ ಬರುವವರೆಗೂ ಯಾವ ವಿಚಾರವನ್ನು ಚರ್ಚಿಸಿರಲಿಲ್ಲ. 36 ತಾಸುಗಳ ರೈಲು ಮಾರ್ಗದಲ್ಲಿ ಅಪ್ಪ-ಮಗ ಮಲಗಿಕೊಂಡು ಸಮಯ ಹರಿಸಿದ್ದೇ ಹೆಚ್ಚು. ಸಾಂಜ್ಞಲಕ್ಷ್ಮಿ ಮನಸ್ಸಿನ ಅಷ್ಟೂ ಆಲೋಚನೆಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ತನ್ನದೇ ಲೋಕದಲ್ಲಿ ತಾನಿದ್ದು ಬಿಟ್ಟಿದ್ದಳು. 


ಹೋಟೆಲ್ ನ ಆ ಮಾತುಕತೆಯಲ್ಲಿ ಯಾರ ಮನಸ್ಸು ಹಗುರವಾಯಿತು ಮತ್ತು ಯಾರ ಮನಸ್ಸು ಭಾರವಾಯಿತು..?


ಅಪ್ಪಟ ಅಮ್ಮತನವನ್ನು ಮೆರೆಯುವಂತೆ ಮಾಡಿದ ಹೊತ್ತಿನಲ್ಲಿ ಮಾಕಂದ ಅಮ್ಮನ ಕಣ್ಣಿಗೆ ಕಾಣಿಸಿದ್ದು ಹೇಗೆ..?


ಇಲ್ಲಿ ಕೇವಲ ಹರೆಯದ ಮಗನ ಬದುಕಿನಲ್ಲಿ ಬರುವ ಹುಡುಗಿಯ ವಿಚಾರ ಮಾತ್ರವಲ್ಲ.. ಮಗನ ಭವಿಷ್ಯ ಹೇಗಿರಬಹುದು ಹಾಗೂ ಆ ಭವಿಷ್ಯಕ್ಕೆ ಬರುವರ ಪರಿಸ್ಥಿತಿ ತನ್ನಂತೆಯೇ ಇದ್ದರೆ..! ಎಂಬುದು ಮಾತ್ರವಲ್ಲದೆ, ಆ ಹುಡುಗಿಯ ಕುರಿತ ಆಲೋಚನೆ ಅತ್ತೆಯ ಪರಿಧಿಯಿಂದಲ್ಲದೆ ಅಮ್ಮನ ಆಲೋಚನೆಯ ಮೂಲಕ ವ್ಯಕ್ತವಾಗಿದೆ.


ಇಲ್ಲಿ ಅಮ್ಮನ ಮಡಿಲನ್ನು ಮೀರಿ ಬೆಳೆಯುವ ಮಗುವನ್ನು ಅಮ್ಮ ಕಾಣುವ ಬಗೆ, ವಯಸ್ಸಿಗೆ ತಕ್ಕ ಪ್ರೌಢತೆ, ಗಹನವಾದ ವಿಚಾರಗಳು ಎಲ್ಲವೂ ಕಾಣುತ್ತವೆ. ಅದಾಗಿಯೂ ಅಮ್ಮನ ಮಡಿಲು ಯಾಕಷ್ಟು ಮುಖ್ಯವಾಗುತ್ತದೆ ಎಂಬುದನ್ನೂ ಇಲ್ಲಿ ಕಂಡುಕೊಳ್ಳಬಹುದು. 


ಹರೆಯದ ಮಕ್ಕಳ ಅಮ್ಮಂದಿರಾಗಿದ್ದರೆ ಇವು ನಿಮ್ಮನ್ನೂ ಕಾಡಿರಬಹುದು ಅಥವಾ ಆ ಘಟ್ಟದಲ್ಲಿ ನಾವೂ ಹೀಗೆಯೇ ಆಲೋಚಿಸಬಹುದೇನೋ.. ಸಾಂಜ್ಞಲಕ್ಷ್ಮಿ ಕನ್ನಡಿಯಂತೆ ಕಾಣುತ್ತಾಳೆ. 


ನಾಗರಾಜ ವಸ್ತಾರೆ ಅವರ ಯಾವುದಾದರೂ ಪುಸ್ತಕವನ್ನು ಓದಿದ್ದರೆ ನಿಮಗೆ ಅವರ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಅರಿವಂತೂ ಇರುತ್ತದೆ. ಅಂತಹದ್ದೇ ಚೆಂದದ ಓದು ಇದು. ಅಕಸ್ಮಾತ್ ನೀವಿನ್ನೂ ಅವರ ಪುಸ್ತಕಗಳನ್ನು ಓದಿರದಿದ್ದರೆ ಅವರ ಲೇಖ-ಲೋಕಕ್ಕೆ ಕಾಲಿಡಲು ಒಳ್ಳೆಯ ಪ್ರವೇಶಿಕೆ ಇದು.


~ ವಿಭಾ ವಿಶ್ವನಾಥ್

ಶಾಂತಿ ನಿಲಯ (ಬೆಳಕಿಂಡಿಯ ಕತೆಗಳು - 15)


"ಹೊಸ ಮನೆ ಕಟ್ಟಿಸುತ್ತಿದ್ದೇವಲ್ಲಾ..ಆ ಮನೆ ಕಟ್ಟಿಸಿದ ನಂತರ ಆ ಮನೆಗೊಂದು ಸುಂದರವಾದ ಹೆಸರಿಡಬೇಕು. ಶಾಂತಿ ನಿಲಯ ಎಂದು ಇಟ್ಟರೆ ಹೇಗೆ..??" ಎಂಬ ಪ್ರಶ್ನೆಗೆ ಇಡೀ ಮನೆಯಲ್ಲಿ ಗುಸು ಗುಸು ಆರಂಭವಾಗಿ ನಕಾರಾತ್ಮಕ ಉತ್ತರವೇ ದೊರೆತದ್ದು. ಅಪ್ಪನಿಗೆ ಬೇಸರವಾಗುತ್ತದೆ ಎಂಬ ಕಾರಣ ನೀಡಿದ್ದರು.


ಮನೆಯ ಹಿರಿ ಮಗಳ ಹೆಸರು ಅದು. ಅವಳು ಓಡಿ ಹೋಗಿ ಮದುವೆಯಾಗಿ ವರ್ಷಗಳೇ ಕಳೆದಿವೆ. ಆದರೂ, ಯಾರಿಗೂ ಅವಳ ಮೇಲೆ ಕೋಪ ತಣಿದಿಲ್ಲ. ಅಂತಹದರಲ್ಲಿ ಈ ಪ್ರಸ್ತಾಪ ಯಾರಿಗೂ ಸುತಾರಾಂ ಇಷ್ಟವಾಗಲಿಲ್ಲ. ಕೊನೆಗೆ, ಅಪ್ಪನ ಮಾತು ಎಲ್ಲರಿಗೂ ಒಪ್ಪಿಗೆಯಾಯಿತು. "ತಪ್ಪು ಮಾಡಿದವಳಿಗೆ ನಾನು ಶಿಕ್ಷೆ ಕೊಡುತ್ತಿದ್ದೇನೆ ಎಂದುಕೊಂಡು ನಾವೆಲ್ಲರೂ ಶಿಕ್ಷೆ ಅನುಭವಿಸಿದ್ದು ಸಾಕು. ಈ ಮನೆಯಲ್ಲಿ ಶಾಂತಿ ನೆಲಸಲಿ. ಮನೆಗೆ ಶಾಂತಿ ನಿಲಯ ಎಂದೇ ಹೆಸರಿಟ್ಟು ಅವಳನ್ನು ವಾಪಾಸ್ ಕರೆದುಕೊಂಡು ಬರೋಣ" ಎಂದಾಗ ತುಂಬು ಕುಟುಂಬದಲ್ಲಿ ಕಳೆದುಹೋಗಿದ್ದ ಪ್ರಶಾಂತತೆ ವಾಪಾಸ್ ದೊರೆತಿತ್ತು. ಮನೆ ಎಂದರೆ ಜನಗಳ ಒಗ್ಗೂಡುವಿಕೆ ಮಾತ್ರವಲ್ಲ.. ಮನಗಳ ಒಗ್ಗೂಡುವಿಕೆಯೂ..


~ ವಿಭಾ ವಿಶ್ವನಾಥ್

ತಪೋಭಂಗ (ಬೆಳಕಿಂಡಿಯ ಕತೆಗಳು - 14)


"ಓದು ಅಥವಾ ಬರವಣಿಗೆ ತಪಸ್ಸಿನಂತೆ.. ಏಕಾಂತದಲ್ಲಿ ಕುಳಿತು ಬರೆಯಲು ಶುರು ಮಾಡಬೇಕು" ಎಂದುಕೊಂಡು ಬರೆಯಲು ಕುಳಿತಾಗಲೆಲ್ಲಾ ವಿಷಯವೇ ಹೊಳೆಯದೇ ಎದ್ದದ್ದಿದೆ. ಆದರೆ , ಈ ಬಾರಿ ತಲೆಯಲ್ಲಿ ವಿಷಯದ ಹೊಳೆಯೇ ಪ್ರವಾಹದಂತೆ ಮುನ್ನುಗ್ಗಿ ಬರುತ್ತಿತ್ತು. ಸರಿ, ಎಲ್ಲರೂ ಅವರವರ ಪಾಡಿಗೆ ಎಲ್ಲೆಲ್ಲೋ ಹೋಗಿದ್ದಾರೆ ಇದೇ ಸರಿಯಾದ ಸಮಯ.. ಬರೆಯೋಣ, ಎಂದು ತಪಸ್ಸಿಗೆ ಕುಳಿತವಳ ಹಾಗೆ ಬರೆಯಲು ಕುಳಿತರೆ ಒಮ್ಮೆ ಕಸದ ಆಟೋ ಸದ್ದು, ಮತ್ತೊಮ್ಮೆ ಡೋರ್ ಬೆಲ್ ಸದ್ದು, ಮತ್ತೊಮ್ಮೆ ಫೋನ್ ರಿಂಗ್ ಆಗುತ್ತಿತ್ತು ಹೋಗಿ ನೋಡಿದರೆ ಮೊಬೈಲ್ ಕಂಪೆನಿಯವರ ಕರೆ. ಈ ಕರೆಕರೆಗಳಿಂದೆಲ್ಲಾ ತಪ್ಪಿಸಿಕೊಂಡು ಮನೆಗೆಲಸ ಮುಗಿಸಿ ಬರೆಯಲು ಕುಳಿತರೆ ಈ ಬಾರಿ ದೊಡ್ಡ ಕಿಡಿಗೇಡಿ ಇದನ್ನು ತಪ್ಪಿಸಲೆಂದೇ ಬಂದಂತಿತ್ತು.


ಮಗುವಿನ ಬಾಲಲೀಲೆಯನ್ನು ಬದಿಗಿರಿಸಿ ಬರೆಯುವುದಾದರೂ ಹೇಗೆ..?? ಅದರ ನಗುವೇ ಒಂದು ಮಹಾಕಾವ್ಯವಲ್ಲವೇ..


~ ವಿಭಾ ವಿಶ್ವನಾಥ್

ಸಮಯ ನಮ್ಮದು.. (ಬೆಳಕಿಂಡಿಯ ಕತೆಗಳು - 13)


"ಬರವಣಿಗೆ ಇತ್ತೀಚೆಗೆ ಕುಂಟುತ್ತಾ ಸಾಗುತ್ತಿದೆ. ಕೆಲವೊಮ್ಮೆ ಬರೆಯಲು ಸಾಧ್ಯವೇ ಆಗುವುದಿಲ್ಲ" ಎನ್ನುತ್ತಾ ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದಾಗ ಅಮ್ಮ " ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ.. ನಿನ್ನ ಸಮಯವನ್ನು ನೀನೇ ಹೊಂದಿಸಿಕೊಳ್ಳಬೇಕು ಬದಲಾಗಿ ಅದನ್ನು ಮತ್ತಾರೋ ನಿನಗಾಗಿ ಹೊಂದಿಸಿಕೊಡಲು ಸಾಧ್ಯವಿಲ್ಲ.


ಸದಾ ಕೂತೇ ಇರುವವರಿಗೂ, ದುಡಿಮೆ ಮಾಡುವವರಿಗೂ ದಿನದಲ್ಲಿ ಇರುವುದು 24 ಗಂಟೆಯೇ.. ಸಮಯ ಎಲ್ಲರಿಗೂ ಒಂದೇ. ಅದನ್ನು ಹೊಂದಿಸಿಕೊಳ್ಳಬೇಕಾಗಿರುವುದು ನಾವು. ಏಕೆಂದರೆ, ಆ ಸಮಯ ನಮ್ಮದು, ಕೇವಲ ನಮ್ಮದಷ್ಟೇ. ಅದನ್ನು ಜತನವಾಗಿ ಕಾಯ್ದುಕೊಂಡು ಜಾಣ್ಮೆಯಿಂದ ಉಪಯೋಗಿಸಿಕೊಳ್ಳುವುದು ಅಥವಾ ಪೋಲು ಮಾಡುವುದರ ಆಯ್ಕೆ ನಮ್ಮದು" ಎಂದಾಗ ಅಮ್ಮನ ಮಾತನ್ನು ಅಕ್ಷರಕ್ಕಿಳಿಸಲು ನಿರ್ಧರಿಸಿ ವಾಪಾಸ್ ಹೋಗುವಾಗ ಬಸ್ಸಿನಲ್ಲಿ ಟೈಪಿಸುತ್ತಾ ಮತ್ತೊಬ್ಬರಿಗೂ ತಲುಪಿಸಿದಳು.


~ ವಿಭಾ ವಿಶ್ವನಾಥ್

ಪ್ರತಿಭೆಯ ಅನಾವರಣ (ಬೆಳಕಿಂಡಿಯ ಕತೆಗಳು - 12)


" ಇಲ್ಲ ಅಮ್ಮ, ನನ್ನಲ್ಲಿ ಅಷ್ಟು ಧೈರ್ಯವಿಲ್ಲ. ಅದರಲ್ಲೂ ವೇದಿಕೆಯಲ್ಲಿ ಎಲ್ಲರ ಎದುರಿನಲ್ಲಿಯೂ ನಿಂತು ಹಾಡುವಷ್ಟು.. ಪ್ಲೀಸ್ ಅಮ್ಮ ಇದಕ್ಕೆಲ್ಲಾ ಒಪ್ಪಿಕೊಳ್ಳಬೇಡ. ನಾನಂತೂ ಹಾಡುವುದಿಲ್ಲ " ಎಂದು ಗೋಗರೆಯುತ್ತಾ ಹೇಳಿ ಹೇಳಿ ಸಾಕಾಗಿತ್ತು ಶ್ರಾವಣಿಗೆ. ಅಮ್ಮ ದೀಪ್ತಿಯಂತೂ ಅವಳ ಮಾತಿಗೆ ಸೊಪ್ಪು ಹಾಕದೆ "ನೀನು ಹಾಡಲೇ ಬೇಕು, ಹಾಡುತ್ತೀಯ ಅಷ್ಟೇ.. " ಎಂದು ಖಡಾಖಂಡಿತವಾಗಿ ಹೇಳಿದ್ದರು.


"ನೋಡು ಪುಟ್ಟಿ, ಎಷ್ಟೋ ಜನರಿಗೆ ಪ್ರತಿಭೆ ಇರುತ್ತದೆ. ಆದರೆ, ಅನಾವರಣಗೊಳ್ಳಲು ವೇದಿಕೆಯ ಕೊರತೆ. ಮತ್ತೆ ಹಲವರಿಗೆ ವೇದಿಕೆ ಸಿಕ್ಕರೆ ಪ್ರತಿಭೆಯ ಕೊರತೆ. ನಿನಗೆ ಒಳ್ಳೆಯ ವೇದಿಕೆ ಸಿಕ್ಕಿದೆ, ಅದೂ ನಿನ್ನ ಪ್ರತಿಭೆಯ ಫಲವಾಗಿ. ಭಯಪಡದೆ ಅದನ್ನು ಉಪಯೋಗಿಸಿಕೊಂಡು ಬೆಳೆ. ಮೊದಲಿಗೆ ಕಣ್ಮುಚ್ಚಿ ತನ್ಮಯತೆಯಿಂದ ಹಾಡು ನಂತರ ಅದೇ ಅಭ್ಯಾಸವಾಗುತ್ತದೆ. ಕೃಷ್ಣನ ಮುಂದೆ ತನ್ಮಯತೆಯಿಂದ ಹಾಡುವವಳಿಗೆ ಇದು ಲೆಕ್ಕವೇ" ಎಂದು ಧೈರ್ಯ ಹೇಳಿದ ಫಲವಾಗಿ ಉತ್ತಮ ಗಾಯನ ಪ್ರತಿಭೆಯಾಗಿ ಅನಾವರಣವಾಗಿದ್ದಾಳೆ ಶ್ರಾವಣಿ.


~ವಿಭಾ ವಿಶ್ವನಾಥ್

ವಿಧೇಯತೆಗೆ ಸಿಕ್ಕ ಫಲ (ಬೆಳಕಿಂಡಿಯ ಕತೆಗಳು - 11)


'ಈ ಮನೆಯ ಮುಂದಿನ ಒಂದು ಎಕರೆ ಹೊಲ ನನ್ನ ನಂತರ ರಾಮನಿಗೆ ಸೇರಬೇಕು' ಎಂದು ಅಜ್ಜ ಮಾಡಿಟ್ಟ ವಿಲ್ ನೋಡಿ ಎಲ್ಲರಿಗೂ ಕೋಪ ಬಂದಿತ್ತು ಜೊತೆಗೆ ಅಚ್ಚರಿಯಾಗಿತ್ತು. ಅದಕ್ಕಿಂತ ಅಚ್ಚರಿಯಾಗಿದ್ದು ಕೆಲಸದ ರಾಮನ ಪ್ರತಿಕ್ರಿಯೆ ಕಂಡು "ನನಗಿದು ಬ್ಯಾಡ ಅಯ್ಯಾ.. ಅಯ್ಯನವರ ಸೇವೆ ಮಾಡಿದ ಪುಣ್ಯವೇ ಸಾಕು " ಎನ್ನುತ್ತಿದ್ದವನನ್ನು ಕಂಡಾಗ ಅಜ್ಜ ಮಾಡಿದ್ದು ಸರಿಯಾಗಿಯೇ ಇದೆ ಎಂದೆನಿಸಿತು.


ಅಪ್ಪ, ದೊಡ್ಡಪ್ಪ ಎಲ್ಲರಿಗೂ ಅಜ್ಜನ ವಿಲ್ ಖುಷಿ ತಂದಿತ್ತು. ತಾವೆಲ್ಲರೂ ದೂರದ ಊರಿನಲ್ಲಿ ಇದ್ದಾಗ ತಮ್ಮ ಅಪ್ಪನ ಸೇವೆಯನ್ನು ವಿಧೇಯತೆಯಿಂದ ಮಾಡಿದವನಿಗೆ ಹಣ ಕೊಟ್ಟರೂ ಸ್ವೀಕರಿಸಿರಲಿಲ್ಲ. 

ಅಜ್ಜನಿಗೂ ಬಹುಶಃ ಗೊತ್ತಿದ್ದಿರಬೇಕು. ಅಂತೂ ತಮ್ಮ ವಿಧೇಯ ಮಗನಲ್ಲದ ಮಗನಿಗೂ ಆಸ್ತಿಯಲ್ಲಿ ಭಾಗ ಕೊಟ್ಟಿದ್ದರು.

ಪ್ರತಿಫಲ ಬಯಸದೆ ವಿಧೇಯತೆಯಿಂದ ಸೇವೆ ಮಾಡಿದ್ದಕ್ಕೆ ಅಂತೂ ಫಲ ಸಿಕ್ಕಿತ್ತು


~ವಿಭಾ ವಿಶ್ವನಾಥ್

ಮಿಲನ (ಪುಸ್ತಕ ಯಾನ - 444)


ಪುಸ್ತಕದ ಶೀರ್ಷಿಕೆ : ಮಿಲನ

ಲೇಖಕರು : ಚಿತ್ರಲೇಖ

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್ 

ಮರು ಮುದ್ರಣ : 2025

ಪುಟಗಳು : 170

ಬೆಲೆ : 210 ರೂ.


ಎಷ್ಟೋ ಬಾರಿ ಮತ್ತೊಬ್ಬರ ಬದುಕನ್ನು ನೋಡಿ "ನಾವು ಆ ಬದುಕನ್ನು ಅನುಭವಿಸಬೇಕು." "ಆ ಬದುಕು ಎಷ್ಟು ಚಂದವಲ್ಲವೇ..?!" ಎನ್ನುವ ಭಾವನೆ ಹುಟ್ಟಿರುತ್ತದೆ. ನಾವು ಬದುಕುತ್ತಿರುವ ಬದುಕು ಸಹ ಬೇರೊಬ್ಬರ ಕನಸಾಗಿರಬಹುದು. ಮತ್ತೊಬ್ಬರ ಬದುಕು ಚೆಂದ ಎಂದುಕೊಳ್ಳುವ ನಮ್ಮ ಬದುಕು ಸಹ ಮತ್ತೊಬ್ಬರ ಕಣ್ಣಿಗೆ ಚೆಂದವೇ..!


ದುಡಿಯುವ ಹೆಣ್ಣಲ್ಲಿ.. ತಾನು ಮನೆಯಲ್ಲಿದ್ದು ಸುಂದರ ಕುಟುಂಬ, ಉತ್ತಮ ಗೃಹಿಣಿಯಾಗಿ ಬಾಳುವ ಕನಸು ಹುಟ್ಟಿಸಿದರೆ.. ಮನೆಯಲ್ಲಿರುವ ಗೃಹಿಣಿಗೆ ಮನೆಯ ಬಂಧನದಿಂದ ಹೊರಬಂದು ತನ್ನ ಖರ್ಚಿಗೆ ಬೇಕಾಗುವಷ್ಟು ಹಣವನ್ನು ತಾನೇ ದುಡಿದು, ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ತನ್ನ ಆಸೆಗಳನ್ನು ಪೂರೈಸಿಕೊಳ್ಳುವ ಬಯಕೆ. ಇಂತಹ ಇಬ್ಬರು ಹೆಣ್ಣು ಮಕ್ಕಳು ಈ ಕಾದಂಬರಿಯಲ್ಲಿ ಕಾಣುತ್ತಾರೆ. ಅವರೇ ಕ್ಷಮ ಮತ್ತು ವಿಶಾಲಿ. 


ಈ ಕಾದಂಬರಿಯ ಶೀರ್ಷಿಕೆಗೆ ಇದು ಪೂರಕವಾಗಿ ಸಾಗುವ ಕಥೆ. ಪ್ರಣಯ, ಪ್ರೀತಿಯ ಶೀರ್ಷಿಕೆಯನ್ನು ಹೊಂದಿರುವ ಈ ಕಥೆಯಲ್ಲಿ ಪ್ರೇಮವೂ ಇದೆ ಹಾಗೂ ಸಮಾಜದಲ್ಲಿ ಕಾಣುವ ಮುಖವಾಡದ ವಂಚಕ ಪ್ರೇಮಿಗಳ ಬದುಕು ಸಹ ಇದೆ. ಈ ಕಾದಂಬರಿ 1970-80ರ ದಶಕದಲ್ಲಿಯೇ ಎರಡು ಮುದ್ರಣವನ್ನು ಕಂಡು ಈಗ ಸಾಹಿತ್ಯಲೋಕ ಪಬ್ಲಿಕೇಷನ್ ನಿಂದ ಮರುಮುದ್ರಣಗೊಂಡಿದೆ. 


ಚಿತ್ರಲೇಖ ಮೇಡಂ ಈ ಕಥೆ ಹುಟ್ಟಿದ ಹಿನ್ನೆಲೆಯನ್ನು ಹೀಗೆ ಹೇಳುತ್ತಾರೆ. ಅವರ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾಗ 23 ದಿನಗಳ ಆಸ್ಪತ್ರೆ ವಾಸದಲ್ಲಿ ರೂಪುಗೊಂಡ ಏಕೈಕ ಕಾದಂಬರಿ ಇದು. ಆಗ ಅಲ್ಲಿ ಭೇಟಿಯಾದ ತರುಣಿಯೊಬ್ಬಳು ಅಳುತ್ತಿರುವುದನ್ನು ಕಂಡಿದ್ದರು. ಕುತೂಹಲದಿಂದ ವಿಚಾರಿಸಿದಾಗ ಆ ತರುಣಿಯ ಹಿಂದಿನ ಪ್ರೇಮಿ ಅಪಘಾತಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದನು. ಹೌದು, ಹಿಂದಿನ ಪ್ರೇಮಿಯೇ.. ಈಗಾಗಲೇ ಆತನಿಗೆ ಮದುವೆಯಾಗಿತ್ತು. ಈಕೆಗೆ ಮೋಸ ಮಾಡಿ ಮದುವೆಯಾದವನನ್ನು ಕುರಿತು ಆಕೆಗೆ ಕಾಳಜಿ. ಆ ಯುವತಿಯ ಮನಸ್ಥಿತಿ ಲೇಖಕಿಯಲ್ಲಿ ಕೋಪ, ಮರುಕ ಅಸಹ್ಯದ ತಾಕಲಾಟ ಹುಟ್ಟಿಸಿತ್ತು. ಆಗ ರೂಪುಗೊಂಡು ಕಾದಂಬರಿ ಇದು ಎನ್ನುತ್ತಾರೆ.


ಮೊದಲಿಗೆ ಕ್ಷಮಳ ಆಫೀಸಿನಲ್ಲಿ ಸಾವಿತ್ರಿಯ ಸಂಸಾರದ ಚಿತ್ರಣ ಕಾಣುತ್ತದೆ. ಸಂಪಾದಿಸಿದ ಹೆಣ್ಣು ಬೇಕು ಎಂದು ಮದುವೆಯಾಗಿದ್ದ ಸಾವಿತ್ರಿಯ ಗಂಡ ಆಕೆಯ ಕಾಳಜಿ ತೆಗೆದುಕೊಳ್ಳಲು ಸಿದ್ಧವಿರಲಿಲ್ಲ. ಗರ್ಭಿಣಿಯಾಗಿದ್ದ ಅವಳ ಆರೋಗ್ಯದ ಸ್ಥಿತಿಯನ್ನು ಅವಳೇ ನೋಡಿಕೊಳ್ಳಬೇಕಿತ್ತು. ಆಗ ಕ್ಷಮಳ ಬಳಿಯಲ್ಲಿ ಹಣದ ಸಹಾಯ ತೆಗೆದುಕೊಂಡಿದ್ದಳು. ವಿಪರ್ಯಾಸವೆಂದರೆ, ಸಾವಿತ್ರಿ ಉಳಿಯಲಿಲ್ಲ. ಹಾಗೆಂದು ಕ್ಷಮಳ ಹಣವನ್ನು ಋಣವನ್ನು ಆಕೆ ಇಟ್ಟುಕೊಳ್ಳಲಿಲ್ಲ. ಆದರೆ, ಅಸಹ್ಯ ತರಿಸಿದೆಂದರೆ ಸಾವಿತ್ರಿಯ ಸಾವಿನ ಕಂಬನಿ ಆರುವ ಮುನ್ನವೇ ಆಕೆಯ ಗಂಡ ಆಕೆಯ ಇನ್ಸೂರೆನ್ಸ್ ಹಣದ ಕುರಿತಾಗಿ ವಿಚಾರಿಸಿದ್ದು. ಕ್ಷಮಳ ಮನಸ್ಸಿನಲ್ಲಿ ವಿವಾಹಿತರ ಕುರಿತು ಹಾಗೂ ಅವಿವಾಹಿತೆಯಾದ ತನ್ನ ಕುರಿತು ಹುಟ್ಟುವ ಆಲೋಚನೆಗಳ ಕುರಿತು ಓದಿ ನೋಡಿ. 


ವಿಶಾಲಿಯ ವಿವಾಹವಾಗಿತ್ತು. ದೊಡ್ಡ ಮನೆ, ಸೌಕರ್ಯವಾದ ಬಾಳು. ಆದರೂ ಅವಳಿಗೆ ಬದುಕು ಶೂನ್ಯವೆನಿಸುತ್ತಿತ್ತು. ತಾನು ಬಾಡಿಗೆಗಿದ್ದ ಎದುರು ಮನೆಯಿಂದ ಕೆಲಸಕ್ಕೆ ಹೋಗುವ ಹುಡುಗಿಯನ್ನು ವೀಕ್ಷಿಸುತ್ತಿದ್ದಳು ಅವಳು. ಆ ಹುಡುಗಿಯೇ ಕ್ಷಮ. ಶೀಘ್ರ ಲಿಪಿಕಾರಳಾಗಿ ಆಫೀಸಿನಲ್ಲಿ ದುಡಿಯುತ್ತಿದ್ದ ಹೆಣ್ಣು. ತಂಗಿ ಕ್ಷೀರ, ಅಮ್ಮ ಹಾಗೂ ತಮ್ಮನನ್ನು ತನ್ನ ಹಣದಿಂದ ಸಾಕುತ್ತಿದ್ದಳು. ಪುಟ್ಟ ತಮ್ಮ ಹೊಟ್ಟೆಯಲ್ಲಿದ್ದಾಗಲೇ ತೀರಿಹೋಗಿದ್ದ ಅವಳ ಅಪ್ಪನ ಜಾಗದಲ್ಲಿ ನಿಂತು ಅವಳು ಕರ್ತವ್ಯ ನಿರ್ವಹಿಸುತ್ತಿದ್ದಳು. ಹೀಗಾಗಿ ಸೋದರತ್ತೆಯ ಮಗ ಗೋಪುವಿನ ಜೊತೆಗೆ ಆಗಬೇಕಾಗಿದ್ದ ವಿವಾಹವೂ ಆಗಲಿಲ್ಲ. ಕ್ಷಮ ತನ್ನ ಮನೆಯನ್ನು ನಡುನೀರಿನ ಪರಿಸ್ಥಿತಿಯಲ್ಲಿ ಬಿಟ್ಟು ಹೊರಡಲು ಸಿದ್ದಳಿರಲಿಲ್ಲ. ದುಡಿಯುವ ಹೆಣ್ಣು ತವರಿಗೆ ಸಹಾಯ ಮಾಡುವುದನ್ನು ಗಂಡಿನ ಮನೆಯವರು ಒಪ್ಪಲು ಸಿದ್ಧವಿರಲಿಲ್ಲ. ಇದು ಗೋಪು ಒಬ್ಬನ ಕಥೆಯಲ್ಲ. ಹೆಚ್ಚಿನವರ ಕಥೆ ಹಾಗೆಯೇ ಇತ್ತು. ಆದರೆ, ಇದಾವುದಕ್ಕೂ ಕುಗ್ಗದೆ, ಮನಸ್ಸನ್ನು ಚಿಕ್ಕದು ಮಾಡಿಕೊಳ್ಳದೆ ಕೇವಲ ಆಫೀಸಿನಲ್ಲಿ ಮಾತ್ರವಲ್ಲದೆ ಸಂಜೆ ಪಾರ್ಟ್ ಟೈಮ್ ಕೆಲಸವನ್ನೂ ಮಾಡಿ ಸಂಸಾರವನ್ನು ಪೋಷಿಸುತ್ತಿದ್ದ ದಿಟ್ಟ ಹುಡುಗಿ ಕ್ಷಮ. 


ವಿಶಾಲಿಯದ್ದು ಮತ್ತೊಂದು ತರಹದ ಕಥೆ. ವಿಶಾಲಿಯ ತಾಯಿ ಅವಳು ಚಿಕ್ಕಂದಿನಿಂದಾಗಲೇ ತೀರಿಹೋಗಿದ್ದರು. ಅವಳ ತಂದೆ ಎರಡನೇ ಮದುವೆಯಾಗಿದ್ದರು. ಹಾಗೆಂದು ಚಿಕ್ಕಮ್ಮ ಆಕೆಯನ್ನು ಕಡೆಗಣಿಸಿರಲಿಲ್ಲ. ಗಂಡು ಮಕ್ಕಳಿದ್ದ ಆಕೆಗೆ ಮಗಳಾಗಿ ವಿಶಾಲಿ ಇದ್ದಳು. ವಿಶಾಲಿಯ ಸ್ವಂತ ತಾಯಿಯ ತಮ್ಮನ ಮಗ ಭಾಸ್ಕರನಿಗೆ ವಿಶಾಲಿ ಎಂದು ಯಾವಾಗಲೋ ತೀರ್ಮಾನವಾಗಿದ್ದ ಮಾತನ್ನು ತಂಗಿ ಸತ್ತಳೆಂದು ಅವರು ಕಳೆದುಕೊಂಡಿರಲಿಲ್ಲ. ಭಾಸ್ಕರ ಹಾಗೂ ವಿಶಾಲಿಯರ ವಿವಾಹವಾಗಿತ್ತು. ಭಾಸ್ಕರ ಪೂರ್ಣಸಮ್ಮತಿಯಿಂದೇನೂ ಈ ವಿವಾಹಕ್ಕೆ ಒಪ್ಪದಿದ್ದರೂ.. ವಿವಾಹದ ನಂತರ ವಿಶಾಲಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. 


ವಿಶಾಲಿ ಹಾಗೂ ಕ್ಷಮ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಭೇಟಿಯಾಗಿರಲಿಲ್ಲ. ಆದರೂ ಪರಸ್ಪರ ರ ನೋಟ ಇಬ್ಬರಿಗೂ ಪರಿಚಯ. ಎಷ್ಟಾದರೂ ಕುತೂಹಲ ಇದ್ದೇ ಇರುತ್ತದೆ ಅಲ್ಲವೇ..? 


ಭಾಸ್ಕರನ ಕೋಪ, ಸಿಡುಕನ್ನು ಸಹಿಸಿಕೊಂಡು ವಿಶಾಲಿ ಆತನನ್ನು ದಿನೇ ದಿನೇ ಹೆಚ್ಚಾಗಿ ಪ್ರೇಮಿಸುತ್ತಲೇ ಹೋಗುತ್ತಿದ್ದಳು. ಆತನಿಗೆ ಪತ್ನಿ ತಗ್ಗಿ-ಬಗ್ಗಿ ನಡೆದಾಗ, ಸೋತಾಗ ಹೆಚ್ಚು ಖುಷಿ. ಅಂತೆಯೇ ಸಾಗುತ್ತಿದ್ದ ಬದುಕಿನಲ್ಲಿ ವಿಶಾಲಿಗೆ ತಾನು ಕಂಡ ವಿಚಾರಗಳನ್ನು ಬಣ್ಣಿಸುತ್ತಿದ್ದಳು. ಕ್ಷಮಳ ಕುರಿತು ಆತನಿಗೆ ತನ್ನ ಮನದ ಮಾತುಗಳನ್ನು ಹೇಳುತ್ತಿದ್ದಳು. 'ಹುಲ್ಲೆ ಮರಿ' ಎಂದು ಕರೆಯುತ್ತಿದ್ದ ಆತ ಕ್ಷಮಾಳ ವಿಚಾರವನ್ನು ಕೇಳಿಸಿಕೊಳ್ಳಲು ಮನಸ್ಸಿಲ್ಲವೆಂಬಂತೆ ನಟಿಸಿದರೂ.. ಆತನಿಗೂ ಅದು ಇಷ್ಟವೇ ಆಗುತ್ತಿತ್ತು. ಆದರೆ, ಹಾಗೆಂದು ಬಾಯಿಬಿಟ್ಟು ಹೇಳುತ್ತಿರಲಿಲ್ಲ. 


ಭಾಸ್ಕರ ಹಾಗೂ ವಿಶಾಲಿಯರ ಬದುಕಿನ ವಸಂತದ ಸೂಚನೆಯಲ್ಲಿಯೂ ವಿಶಾಲಿ ತವರಿಗೆ ಹೋಗುವ ತವಕ ತೋರಲಿಲ್ಲ. ಅವಳಿಗೆ ಭಾಸ್ಕರನನ್ನು ಬಿಟ್ಟು ಬೇರೆ ಪ್ರಪಂಚವೇ ಇಲ್ಲವೆಂಬಂತೆ ಅವನನ್ನು ಬಹಳವಾಗಿ ಪ್ರೀತಿಸುತ್ತಿದ್ದಳು. 


ಇತ್ತ ಕ್ಷಮ ಬದುಕಲ್ಲಿ ಗೋಪುವಿನ ಮದುವೆಯಾದ ನಂತರ ಒಂದು ರೀತಿಯಲ್ಲಿ ತನ್ನ ಮನೆಗಾಗಿಯೇ ಎಂಬಂತೆ ದುಡಿಯುತ್ತಿದ್ದಳು. ತೀರಾ ಪ್ರೀತಿ-ಪ್ರೇಮ ಎಂದು ಮನಸ್ಸಿಗೆ ಹಚ್ಚಿಕೊಳ್ಳದಿದ್ದರೂ.. ಗೋಪುವಿನ ವಿವಾಹದಲ್ಲಿ ಮನೆಯವಳಂತೆ ಓಡಾಡಿದಳು. ಗೋಪು ಹಾಗೂ ಅವಳ ಒಡನಾಟ ಹೇಗಿತ್ತು ಓದಿ ನೋಡಿ. 


ಕ್ಷಮ ಒಂದು ದಿನ ಅಪಘಾತಕ್ಕೆ ಒಳಗಾದಾಗ ಪರಿಚಯವಾದ ಮಹೇಂದ್ರ ಅವಳ ಬಾಳಲ್ಲಿ ಯಾವೆಲ್ಲ ರಾಗರಂಜಿತ ಕನಸುಗಳನ್ನು ತುಂಬುತ್ತಾನೆ..? ಕ್ಷಮಳ ಮನಸ್ಸು ಜಾರಿ ಪ್ರೀತಿಯಲ್ಲಿ ಬಿದ್ದ ದಿನಗಳು, ಅವಳ ನಡೆ, ಅಲಂಕಾರ ಎಲ್ಲವೂ ಹೇಗಿತ್ತು..? ಅನಾಥನಾಗಿದ್ದ ಮಹೇಂದ್ರ ತನ್ನ ತಾಯಿಗೆ ಕರೆತಂದು ಪರಿಚಯ ಮಾಡಿಸುವುದಕ್ಕೂ ಮುನ್ನವೇ ಕ್ಷಮ ಆತನನ್ನು ತನ್ನವನೆಂದು ಸ್ವೀಕರಿಸಿಯಾಗಿತ್ತು. ಕ್ಷಮ ಅದೊಂದು ನಡೆಯಲ್ಲಿ ಎಡವಿದಳೇ..?


ಇಲ್ಲಿ ಕ್ಷಮ ಅಥವಾ ವಿಶಾಲಿ ಇಬ್ಬರೂ ತನ್ನ ಸಂಗಾತಿ ತನ್ನನ್ನು ಮಾತ್ರ ಪ್ರೀತಿಸಬೇಕು ಜೊತೆಗೆ ಏಕಪತ್ನಿ ವ್ರತಸ್ಥನಾಗಿರಬೇಕು ಎಂಬ ಬಯಕೆಯನ್ನೇ ಇಟ್ಟುಕೊಂಡಿರುವುದು ಎಲ್ಲಾ ಹೆಣ್ಣು ಮಕ್ಕಳ ಮನಸ್ಸಿನ ಮಾತಿನಂತಿದೆ.


ಕ್ಷಮಳ ಪ್ರೀತಿಗೆ ಮಹೇಂದ್ರ ಸರಿಯಾದ ವ್ಯಕ್ತಿಯಾಗಿದ್ದ ನೇ..? ಭಾಸ್ಕರ ಯಾವೆಲ್ಲಾ ನಡೆಗಳನ್ನು ಬದಲಿಸಿಕೊಂಡಿದ್ದರೆ ವಿಶಾಲುವಿನ ಪ್ರೀತಿಗೆ ಅರ್ಹ ವ್ಯಕ್ತಿಯಾಗುತ್ತಿದ್ದ..?


ಕ್ಷಮ ಹಾಗೂ ವಿಶಾಲಿ ಇಬ್ಬರ ಬದುಕು ಒಂದು ಘಟ್ಟದಲ್ಲಿ ಮಿಳಿತವಾಗುವ ಸಂದರ್ಭ ಬರುತ್ತದೆ. ಆ ಸಂದರ್ಭ ಯಾವುದು..? ಓದಿ ನೋಡಿ. 


ಕಥೆಯ ಶೀರ್ಷಿಕೆ ಹಾಗೂ ನಿರೂಪಣೆ ಕಥೆಯನ್ನು ಎಲ್ಲಿಯೂ ಬಿಟ್ಟುಕೊಡದಂತೆ ಸಾಗುತ್ತದೆ. ಅಂತ್ಯದಲ್ಲಿ ಬರುವ ಟ್ವಿಸ್ಟ್ ವಿಶಾಲು ಹಾಗೂ ಕ್ಷಮ ಇಬ್ಬರ ಬದುಕನ್ನು ಬದಲಿಸುವ ಬಗೆ ಹೇಗೆ..? ತಿಳಿಯಲು ಓದಿ ಚಿತ್ರಲೇಖ ಮೇಡಂ ಅವರ ಕಾದಂಬರಿ ಮಿಲನ.


~ವಿಭಾ ವಿಶ್ವನಾಥ್