ಭಾನುವಾರ, ಸೆಪ್ಟೆಂಬರ್ 27, 2026

ಸಾಮರ್ಥ್ಯ (ಬೆಳಕಿಂಡಿಯ ಕತೆಗಳು - 86)


"ಇಷ್ಟು ಕಷ್ಟದ ಜವಾಬ್ದಾರಿಯನ್ನು ನಿಭಾಯಿಸಬಲ್ಲೆನಾ..??" ಎಂಬ ಆತಂಕದಲ್ಲಿದ್ದಳು. "ನಿಭಾಯಿಸಲು ಸಾಮರ್ಥ್ಯ ಇರುವವರಿಗೆ ಮಾತ್ರವೇ ಅಷ್ಟರ ಮಟ್ಟಿನ ಜವಾಬ್ದಾರಿಗಳು ಹೆಗಲೇರುವುದು" ಎನ್ನುತ್ತಾ ಆತ್ಮವಿಶ್ವಾಸ ತುಂಬಿದೆ. ನಂಬಿಕೆ ಹಾಗೂ ಆತ್ಮವಿಶ್ವಾಸಗಳ ಫಲದಿಂದ ಅವಳು ಈಗ ಅದೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ.


~ವಿಭಾ ವಿಶ್ವನಾಥ್

ತಪ್ಪದ ಆಶ್ವಾಸನೆ (ಬೆಳಕಿಂಡಿಯ ಕತೆಗಳು - 85)

 


ನಾನು ಯಾವಾಗಲೂ ನಿನ್ನ ಜೊತೆ ಜೊತೆಗೇ ಇರುವೆನೆಂದು ಆಶ್ವಾಸನೆ ನೀಡಿದ್ದ ಅಪ್ಪ ಸತ್ತ ನಂತರವೂ ಅವಳ ಮಡಿಲಲ್ಲಿ ಆಡಲು ಮತ್ತೆ ಮಗುವಾಗಿ ಪಡಿ ಮೂಡಿ ಬಂದಿದ್ದ.


~ವಿಭಾ ವಿಶ್ವನಾಥ್

ಆಕೆಯ ದುರ್ಬಲತೆಯೇ ಶಕ್ತಿಯಾದಾಗ..

 


"ಅಯ್ಯೋ.. ಈ ಮನೆಯಲ್ಲಿ ಈ ಹುಡುಗಿ ಅದೇನು ಅಂತಾ ಹುಟ್ಟಿ ಬಿಟ್ಟಿತೋ ಏನೋ.. ಆಸ್ಪತ್ರೆಯಲ್ಲಿ ಹುಟ್ಟಿದ್ದರೆ ಬೇರೆಯವರ ಮಗು ಮತ್ತು ಈ ಮಗು ಬದಲಾಗಿರಬಹುದು ಅಂತಾ ಅಂದುಕೊಳ್ಳಬಹುದಿತ್ತು. ಆದರೆ.. "


"ಇದು ಕಲಾವಿದರ ಕುಟುಂಬ. ಇಲ್ಲಿ ಒಬ್ಬರಿಗಿಂತ ಒಬ್ಬರು ಸ್ಪುರದ್ರೂಪಿಗಳೇ.. ಒಬ್ಬರಿಗಿಂತ ಒಬ್ಬರು ಸುಂದರವಾಗಿರುವವರೇ.. ಒಬ್ಬರಿಗಿಂತ ಒಬ್ಬರು ಪ್ರತಿಭಾವಂತರೇ.. ಈ ಹುಡುಗಿ ಈ ಕುಟುಂಬಕ್ಕೆ ಶಾಪ. ಅಪ್ಪಿತಪ್ಪಿ ಹುಟ್ಟಿರಬಹುದೋ ಏನೋ.. "


"ಬರಿ ಕಪ್ಪು ಅಂದರೆ ಏನೋ ಒಪ್ಪಿಕೊಳ್ಳಬಹುದಿತ್ತು. ಕೆಲವರು ಲಕ್ಷಣವಾಗಿಯಾದರೂ ಇರುತ್ತಾರೆ. ಸರಿಯಾಗಿ ಮಾತನಾಡುವುದಕ್ಕೇ ಉಗ್ಗುತ್ತಾಳೆ.. ಇನ್ನು ಹಾಡುವುದು ದೂರದ ಮಾತೇ ಸರಿ. ದೇವರೇ ಯಾರ ಪಾಪಕ್ಕೆ ಈ ಶಾಪವನ್ನು ನಮ್ಮ ಮನೆಯಲ್ಲಿ ಹುಟ್ಟಿಸಿದೆ "


ಹೀಗೆ ಹೊರಗಿನವರದ್ದು, ಮನೆಯ ಒಳಗಿನವರದ್ದು ಬೇರೆ ಬೇರೆ ಮಾತುಗಳಲ್ಲಿ ಅವಳ ಕುರಿತ ಮಾತುಗಳು. ಮನೆಯವರೇ ಹಂಗಿಸುವುದಕ್ಕೆ ತೊಡಗಿದಾಗ ಹೊರಗಿನವರು ಸುಮ್ಮನಿರುವರಾ..?? ಸಾಧ್ಯವೇ ಇಲ್ಲ. ಮನೆಯಿಂದ ಹೊರಗೆ ಬಂದರೆ ಈ ರೀತಿಯ ಮಾತುಗಳನ್ನು ಕೇಳಬೇಕಾಗುತ್ತದೆ ಎನ್ನುತ್ತಾ ಹೆಚ್ಚು ಹೆಚ್ಚು ಅಂತರ್ಮುಖಿಯಾಗುತ್ತಾ ಮನೆಯಲ್ಲಿಯೇ ಉಳಿಯುತ್ತಾ ಹೋದಳು. ಮನೆಯವರ ಚುಚ್ಚುವಿಕೆ, ಹಂಗಿಸುವಿಕೆಯನ್ನು ಅರಗಿಸಿಕೊಳ್ಳಲು ಶುರು ಮಾಡಿದಳು.


ಯಾರೆಷ್ಟೇ ಜರಿದರೂ ಹೊರಗಿನವರು ಹೊರಗಿನವರೇ.. ಒಳಗಿನವರು ನಮ್ಮವರೇ.. ಎಷ್ಟೇ ನೋವು ನೀಡಿದರೂ ನಮ್ಮವರನ್ನು ಕ್ಷಮಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಆದರೆ, ಹೊರಗಿನವರಿಗೆ ಮನಸ್ಸಿನಾಳದಿಂದ ಕ್ಷಮೆ ನೀಡಲಾಗದು.


ಮನೆಯವರು ತಾನೇ ಎಷ್ಟು ದಿನ ಜರಿಯಬಹುದು ? ಎಷ್ಟು ಹಂಗಿಸಿದರೂ ಸತ್ಯ ಬದಲಾಗದು. ಕೀಳಿರಿಮೆಯಿಂದ ಅವಳು ಈಗ ಮನೆಯಲ್ಲಿಯೇ ಕುಳಿತುಕೊಳ್ಳುತ್ತಾ ಮಾತನಾಡುವುದನ್ನು ಕ್ರಮೇಣ ಕಡಿಮೆ ಮಾಡಿದಳು. ಎಲ್ಲರ ಕುಹಕವನ್ನು ಅರಗಿಸಿಕೊಳ್ಳುವಂತೆ ತಿಂದದ್ದನ್ನು ಹೆಚ್ಚೆಚ್ಚು ಅರಗಿಸಿಕೊಂಡಳು. ಅದರ ಪರಿಣಾಮವಾಗಿ ಮತ್ತಷ್ಟು ದಪ್ಪವಾದಳು. ಮೊದಲೇ ಕುಬ್ಜ ದೇಹ, ಕಪ್ಪು, ಉಬ್ಬು ಹಲ್ಲು ಜೊತೆಗೆ ಈಗ ಸ್ಥೂಲಕಾಯ. ಅವಳನ್ನು ಮನೆಯಲ್ಲಿ ಎಷ್ಟು ನಿರ್ಲಕ್ಷ್ಯ ಮಾಡಿದ್ದರೆಂದರೆ ಅವಳಿಗೊಂದು ಸರಿಯಾದ ಹೆಸರೇ ಇರಲಿಲ್ಲ. ಮನೆಗೆ ಯಾರಾದರೂ ಪ್ರಸಿದ್ದರು ಬಂದರೆ ಅವಳನ್ನು ಒಂದು ಕೊಠಡಿಗೆ ಕಳುಹಿಸಿ ಬಾಗಿಲು ಹಾಕಿಕೊಳ್ಳುತ್ತಿದ್ದರು.


ತೀರಾ ಒಬ್ಬಂಟಿತನ ಕಾಡಿದಾಗಲೆಲ್ಲಾ ತನ್ನ ದುರ್ಬಲತೆಗೆ ಶಪಿಸಿಕೊಳ್ಳುತ್ತಾ ಅಳುತ್ತಿದ್ದಳು. ಹೆತ್ತವಳಿಗೆ ಹೆಗ್ಗಣವೂ ಮುದ್ದು.. ಹಾಗಾಗಿ, ಯಾರೂ ಇಲ್ಲದಾಗ, ಯಾರೂ ಕಾಣದಾಗ ಅಮ್ಮ ಬಂದು ಸಂತೈಸುತ್ತಿದ್ದಳು. ಆಗ ಅವಳಮ್ಮ ಅವಳ ಕೈಯ್ಯಲ್ಲಿ ಪುಸ್ತಕ ನೀಡಿದಳು. ಈಗ ಅವಳಿಗೊಂದು ಹೊಸ ಲೋಕವೇ ಸೃಷ್ಟಿಯಾಯಿತು. ಅಲ್ಲಲ್ಲ, ಅದು ಸೃಷ್ಟಿಯಾಗಿದ್ದಲ್ಲ. ಅವಳೇ ಸೃಷ್ಟಿಸಿಕೊಂಡದ್ದು. ಆ ಅಕ್ಷರಗಳಿಂದ ಕನಸಿನ ಲೋಕದಲ್ಲಿ ಕಳೆದು ಹೋಗುತ್ತಿದ್ದಳು. ಓದುತ್ತಾ ಓದುತ್ತಾ ತನ್ನದೇ ಭಾವಲೋಕದಲ್ಲಿ ವಿಹರಿಸುತ್ತಿದ್ದಳು. ಕ್ರಮೇಣ ಇದು ಹಾಗಿರಬೇಕಿತ್ತು.. ಇದು ಹೀಗೆ ಬದಲಾಗಬೇಕಿತ್ತು ಎನ್ನುತ್ತಾ ಕೈಯ್ಯಲ್ಲಿ ಪೆನ್ನು ಹಿಡಿದಳು. ಈಗ ಅವಳಿಗೆ ಎಷ್ಟು ಸಮಯವಿದ್ದರೂ ಸಾಲದಾಯಿತು. ಭಾವನೆಗಳು ಪದಗಳಾದವು. ಅಕ್ಷರಗಳು ಅವಳ ಮತ್ತೊಂದು ಛಾಯೆ ಸೃಷ್ಟಿಸಿದವು. ಬರೆಯುತ್ತಾ ಹೋದಂತೆ ಆಕೆ ಪ್ರಬುದ್ಧಳಾಗುತ್ತಾ ಹೋದಳು. ಬಾಲಿಶತನದ ವಿಚಾರಗಳಿಂದ ಹಿಡಿದು ತನ್ನ ಕೀಳಿರಿಮೆ, ತನ್ನ ಕುರಿತು ಹಾಸ್ಯ ಎಲ್ಲವನ್ನೂ ಬರೆದಳು. ಒಂಟಿತನ ಈಗ ಏಕಾಂತವಾಯಿತು. ಅನುಭವಿಸುತ್ತಾ ಬರೆದಳು.


ಅವಳಮ್ಮ ಅವಳಿಗೆ ಪ್ರಶಸ್ತಿ ಬಂದ ವಿಚಾರ ಹೇಳಿದಾಗಲೇ ಅವಳಿಗೆ ಗೊತ್ತಾಗಿದ್ದು.. ಅವಳ ಎಲ್ಲಾ ಬರಹಗಳು ಅಮ್ಮನ ಮೂಲಕ ಹೊರ ಜಗತ್ತನ್ನು ತಲುಪಿದ್ದು. ಜನ ಈಗ ಆಕೆಯನ್ನು ಆಕೆಯ ಬರಹದ ಸಾಮರ್ಥ್ಯವನ್ನು, ಪ್ರತಿಭೆಯನ್ನೂ ಮೆಚ್ಚಿ ಆಕೆಯನ್ನು ಇದ್ದ ಹಾಗೆಯೇ ಸ್ವೀಕರಿಸಲು ಶುರು ಮಾಡಿದ್ದರು. ಈಗ ಆಕೆ ದುರ್ಬಲೆಯಾಗಿರಲಿಲ್ಲ. ಆಕೆಯ ಅನುಭವಗಳೇ ಅವಳ ಶಕ್ತಿಯಾಗಿ ಪರಿವರ್ತನೆಯಾಗಿದ್ದವು.


ಆಕೆ ತನ್ನ ದೌರ್ಬಲ್ಯಗಳನ್ನು ಶಕ್ತಿಯಾಗಿ ಮಾರ್ಪಡಿಸಿಕೊಂಡಿದ್ದಳು. ಶಾಪವನ್ನು ವರವನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದಳು.


~ವಿಭಾ ವಿಶ್ವನಾಥ್

ಅವನ ನೆನಪು ನನ್ನ ಜನುಮಕ್ಕಂಟಿದ ಶಾಪ

 


"ಎಲ್ಲಿ ಹೋದರೂ ನೆನಪಾಗುತ್ತೀಯಲ್ಲ.. ನೀನಂತೂ ನನ್ನ ಬೆನ್ನು ಬಿಡುವುದೇ ಇಲ್ಲವಲ್ಲ. " ಎನ್ನುತ್ತಾ ಸ್ವಗತವಾಡಿಕೊಂಡಳು ಬಬಿತಾ.


"ಅರೆ..! ಮೇಡಂ ಒಬ್ಬರೇ ಮಾತನಾಡುತ್ತಿದ್ದೀರಾ..?? ಅಥವಾ ಬ್ಲೂಟೂಥ್ ಹೆಡ್ ಸೆಟ್ ಏನಾದರೂ ಹಾಕಿಕೊಂಡಿದ್ದೀರಾ ಹೇಗೆ ? " ಎನ್ನುತ್ತಾ ಮಾತನಾಡಿಸಿದಳು ಪಕ್ಕದಲ್ಲೇ ಇದ್ದ ಹರಿಣಿ.


"ಇಲ್ಲ ಹರಿಣಿ. ಬ್ಲ್ಯೂ ಟೂಥ್ ಏನೂ ಹಾಕಿಲ್ಲ. ಆದರೆ, ಒಬ್ಬಳೇ ಅಂತೂ ಮಾತನಾಡುತ್ತಿಲ್ಲ" ಎಂದ ಬಬಿತಾ ಮಾತು ಯಾಕೋ ಒಗಟಿನ ಹಾಗೆ ಭಾಸವಾಯಿತು ಹರಿಣಿಗೆ.


"ಮತ್ತೆ ಈ ಫಿಲ್ಮ್ ಗಳಲ್ಲೆಲ್ಲಾ ತೋರಿಸುತ್ತಾರಲ್ಲಾ ಹಾಗೆ ಸತ್ತು ಹೋಗಿರುವವರ ಜೊತೆಗೆ ಮಾತನಾಡುತ್ತಿದ್ದೇನೆ ಅಂತಾ ಮಾತ್ರ ಹೇಳಬೇಡಿ ಮೇಡಂ. ಮೊದಲೇ ಭೂತ ಪ್ರೇತ ಕಂಡರೆ ಭಯ ನನಗೆ " ಎಂದಳು ಹರಿಣಿ.


"ಹರಿಣಿ, ತುಂಬಾ ಚೆನ್ನಾಗಿ ಮಾತನಾಡುತ್ತೀರಿ ಪಾ ನೀವು. ಭೂತ - ಪ್ರೇತ ಅಲ್ಲ. ನಾನು ನನ್ನವನ ಜೊತೆ ಮಾತನಾಡುತ್ತಾ ಇದ್ದೀನಿ. ಅವನೀಗ ನನ್ನ ಜೊತೆಗಿಲ್ಲ. ಆದರೆ, ಅವನು ನನ್ನ ಪ್ರತಿ ಉಸಿರಲ್ಲಿಯೂ ಬೆರೆತು ಹೋಗಿದ್ದಾನೆ. ಅವನ ಜೊತೆಗೆ ಮಾತನಾಡುತ್ತಿದ್ದೇನೆ ಅಷ್ಟೇ.. " ಎಂದಳು ಬಬಿತಾ.


"ಇದೇ ನೋಡಿ ಮೇಡಂ ನಿಮ್ಮ ರೂಮ್. ಇಲ್ಲೇ ಪಕ್ಕದ ಕೋಣೆಯಲ್ಲಿಯೇ ನಾನಿರುತ್ತೇನೆ. ಏನಾದರೂ ಬೇಕು ಅಂದರೆ ನನ್ನನ್ನು ಕರೆಯಿರಿ" ಎನ್ನುತ್ತಾ ಹೊಸದಾಗಿ ಶಾಲಾ ಶಿಕ್ಷಕಿಯಾಗಿ ಸೇರಿದ್ದ ಬಬಿತಾಳಿಗೆ ಹಾಸ್ಟೆಲ್ ವಾಸ್ತವ್ಯಕ್ಕೆ ರೂಮ್ ತೋರಿಸಿ ತನ್ನ ರೂಮಿಗೆ ನಡೆಯುತ್ತಿದ್ದ ವಾರ್ಡನ್ ಹರಿಣಿಯನ್ನು ಕರೆದು


"ಹರಿಣಿ ಪ್ಲೀಸ್ ಈ ರೂಮಿಗೆ ಮತ್ತೆ ಇನ್ಯಾರನ್ನೂ ಹಾಕಬೇಡಿ ಆಯ್ತಾ.. ಸರ್ ಹತ್ತಿರ ಕೂಡಾ ಪರ್ಮಿಶನ್ ತೆಗೆದುಕೊಂಡಿದ್ದೇನೆ" ಎಂದಾಗ "ಓ.ಕೆ ಮೇಡಂ. ಆದರೆ ಒಂದೇ ಒಂದು ಪ್ರಶ್ನೆ. ನಿಮಗೆ ಒಂಟಿಯಾಗಿರುವುದಕ್ಕೆ ಇಷ್ಟವಾ ? ಕಷ್ಟ ಎನ್ನಿಸುವುದಿಲ್ಲವಾ ? " ಎಂದಳು.


"ಇಲ್ಲಾ ಹರಿಣಿ. ನಾನೆಲ್ಲಿ ಒಂಟಿ.. ಈ ರೀತಿಯ ಬದುಕು ನನಗೆ ಅಭ್ಯಾಸವಾಗಿ ಹೋಗಿದೆ

ನಾನು ಕಳೆದ ಬಾರಿ ಉಳಿದುಕೊಂಡಿದ್ದ ರೂಮಿನಲ್ಲಿ ಮತ್ತೊಬ್ಬರು ಸಹೋದ್ಯೋಗಿ ಕೂಡಾ ಉಳಿದುಕೊಂಡಿದ್ದರು. ಆದರೆ, ನನ್ನ ಈ ರೀತಿಯ ಮಾತನ್ನು ತಪ್ಪು ತಿಳಿದುಕೊಂಡು ತಪ್ಪು ಭಾವನೆಯನ್ನು ಹಂಚಿ ಎಲ್ಲರಿಗೂ ನಾನೊಬ್ಬಳು ಹುಚ್ಚಿ ಎನ್ನಿಸುವಂತೆ ಮಾಡಿಬಿಟ್ಟರು. ಹಾಗಾಗಿ, ಮತ್ತೊಮ್ಮೆ ನಾನು ಆ ರೀತಿಯ ರಿಸ್ಕ್ ತೆಗೆದುಕೊಳ್ಳಲಾರೆ. " ಎಂದ ಬಬಿತಾಳನ್ನು ಕಂಡು ಹರಿಣಿ


"ಮ್ಯಾಮ್, ಸರ್.. " ಎಂದಾಗ "ನಿಮಗೆ ಬೇಸರವಿಲ್ಲದಿದ್ದರೆ ನಾನು ಹೇಳುತ್ತೇನೆ " ಎನ್ನುತ್ತಾ ಹೇಳತೊಡಗಿದಳು.


"ಅವನು ನಾನು ಬಾಲ್ಯದಿಂದ ಒಟ್ಟಿಗೆ ಬೆಳೆದದ್ದು. ಅಕ್ಕ-ಪಕ್ಕದ ಮನೆಯೇ.. ಪ್ರತಿಯೊಂದಕ್ಕೂ ನಾನು ಅವನನ್ನು ಮತ್ತು ಅವನು ನನ್ನನ್ನು ಕೇಳಿ ಮಾಡುವುದು ಹಾಗೂ ಹಂಚಿಕೊಳ್ಳುವ ರೂಢಿ. ಹಾಗೆಯೇ, ಒಟ್ಟಿಗೆ ಓಡಾಟ. ಯಾರಾದರೂ ನೋಡಿದರೆ ನಾವು ಪ್ರೇಮಿಗಳು ಎಂದುಕೊಳ್ಳುತ್ತಿದ್ದರು. ಸ್ನೇಹ ಪ್ರೇಮವಾಗಿತ್ತು. ಇಬ್ಬರೂ ಪರಸ್ಪರ ಹೇಳಿಕೊಂಡಿರಲಿಲ್ಲ. ಅದೇ ಸಮಯಕ್ಕೆ ಮನೆಯಲ್ಲಿಯೂ ನಮ್ಮಿಬ್ಬರಿಗೂ ಮದುವೆ ಎಂದು ಎಲ್ಲರೂ ಖುಷಿಯಿಂದ ಒಪ್ಪಿದ್ದರು. ಅವನು ಇಲ್ಲಿಯೇ ಇದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ. ಎಷ್ಟೋ ಬಾರಿ ಅವನ ಜೊತೆಗೆ ನಾನು ಇಲ್ಲಿಗೆ ಬಂದಿದ್ದೇನೆ.


ಮದುವೆಯ ಎರಡು ದಿನ ಮುಂಚೆ ನಾನೇ ಕರೆ ಮಾಡಿ ನಮ್ಮಿಬ್ಬರ ಪ್ರೇಮವನ್ನು ಹೇಳಿಕೊಳ್ಳುವ ಸಲುವಾಗಿ ಅವನನ್ನು ತಕ್ಷಣಕ್ಕೆ ಬರಹೇಳಿದ್ದೆ. ತಕ್ಷಣವೇ.. ಅವನು ಇಲ್ಲಿಂದ ಖುಷಿಯಲ್ಲಿ ಮನೆಗೆ ಹೊರಟಿದ್ದನಂತೆ. ಆದರೆ, ಯಾರ ಶಾಪವೋ ಅವನು ಮನೆಗೆ ಬಂದದ್ದು ಹೆಣವಾಗಿ. ಅರಿಶಿನ ಹಚ್ಚಿರಲಿಲ್ಲ, ಮದರಂಗಿಯ ಬದಲು ಕೈ ಅವನ ರಕ್ತದಿಂದ ಕೆಂಪಾಗಿತ್ತು.  ತಾಳಿ ಕಟ್ಟಿರಲಿಲ್ಲ ಅಷ್ಟೇ.. ಅವನು ನನ್ನ ಏಳೇಳು ಜನ್ಮದ ಸಖ. ಅದಾದ ನಂತರ ಮದುವೆ ನಡೆಯಲಿಲ್ಲ. ನನ್ನ ಬದುಕು ಪೂರ್ತಿ ಅವನೇ ಇದ್ದಾನೆ.


ನಾನು ಅವತ್ತು ಅವನನ್ನು ಬೇಗ ಬಾ ಎಂದೆ. ಆದರೆ, ಅವನನ್ನು ಯಮರಾಜ ಕರೆದುಕೊಂಡ. ಅವನ ನೆನಪುಗಳು ಕಾಡುತ್ತವೆ. ಸದಾ ಅವನ ಗುಂಗಿನಲ್ಲಿಯೇ ಬದುಕುತ್ತಿದ್ದೇನೆ. ಕೊನೆಗೂ, ಅವನು ಪಾಠ ಮಾಡುತ್ತಿದ್ದ ಕಾಲೇಜಿಗೆ ನಾನೂ ಬಂದಿದ್ದೇನೆ. ಅವನು ನೆನಪಾಗುತ್ತಾನೆ. ಕಾಡುತ್ತಾನೆ.. ಒಲವಿನಿಂದ.


ಬದುಕಿಡೀ ಪಾಪಪ್ರಜ್ಞೆ ಕಾಡುತ್ತದೆ. ಅವನ ನೆನಪು ಮಾತ್ರ ಅದನ್ನು ಕಡಿಮೆ ಮಾಡಬಲ್ಲದು. ಆದರೂ.. ಅವನ ನೆನಪು ನನ್ನ ಜನುಮಕ್ಕಂಟಿದ ಶಾಪ." ಎನ್ನುತ್ತಾ ಬಿಕ್ಕಳಿಸುತ್ತಿದ್ದ ಬಬಿತಾಳನ್ನು ಸಮಾಧಾನ ಪಡಿಸಲೂ ಸಾಧ್ಯವಾಗದಂತೆ ಅಳುತ್ತಿದ್ದಳು ಹರಿಣಿ.

~ವಿಭಾ ವಿಶ್ವನಾಥ್

ಶುಗರ್ ಲೆಸ್ (ಪುಸ್ತಕ ಯಾನ - 490)


ಪುಸ್ತಕದ ಶೀರ್ಷಿಕೆ : ಶುಗರ್ ಲೆಸ್

ಲೇಖಕರು : ದರ್ಶನ್ ಜಯಣ್ಣ 

ಪ್ರಕಾಶಕರು : ಅವ್ವ ಪುಸ್ತಕಾಲಯ 

ಪ್ರಥಮ ಮುದ್ರಣ : ಜೂನ್ 2025

ಪುಟಗಳು : 108

ಬೆಲೆ : 130 ರೂ.


'ಪದ್ಯ ಸಿಕ್ಕಿತು', 'ನಾನೊಬ್ಬ ನಾವಿಕ' ದರ್ಶನ್ ಜಯಣ್ಣ ಅವರ ಕವನ ಸಂಕಲನಗಳು. 'ಅಪ್ಪನ ರಾಲೀಸ್ ಸೈಕಲ್' ಪ್ರಬಂಧಗಳು. ಬಿಡಿ ಕಥೆಗಳು ಪ್ರಕಟವಾಗಿದ್ದರೂ.. ಮೊದಲ ಪ್ರಕಟಿತ ಕಥಾ ಸಂಕಲನ ಶುಗರ್ ಲೆಸ್. 


ಸಣ್ಣ ಕಥೆಗಳು ಬರಹಗಾರನ 

ಆತ್ಮದ ತೂಕಡಿಗಳು 

ಬವಣೆ ಬಿಂದಿಗೆ ಅವನದ್ದು 

ತಂಬಿಗೆ ಪ್ರೀತಿ ಇವನದ್ದು 

'ದಾರ' ಕಥೆ ಪುಸ್ತಕ!

'ನನ್ನ ಮಾತು' ಎಂದ ಲೇಖಕರ ಮಾತಿನಲ್ಲಿ ಸೆಳೆದ ಸಾಲುಗಳಿವು.


ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ.


ಅಬೀಬಾ : 'ಸಾಬಾಪಾಶಾ' ಎಂದು ಕರೆಯುತ್ತಿದ್ದ ಸರ್ಕಾರಿ ಬಾಲಕರ ಪಾಠಶಾಲೆಯನ್ನು ತೋರಿಸುತ್ತಲೇ ಗೆಳೆಯರನ್ನು ಕ್ರಿಕೆಟ್ ಆಟಕ್ಕೆ ಕರೆಯಲು ಉಪಯೋಗಿಸುತ್ತಿದ್ದ ಕೋಡ್ ವರ್ಡ್ ಇದೇ ಎಂದು ಅಲ್ಲಿನ ಪರಿಸರವನ್ನು ತೋರುತ್ತಾರೆ. ಅಲ್ಲಿನ ಕ್ರಿಕೆಟ್ ಆಟದ ಜೊತೆಗೆ ಕಾಸಿಮ್ ಸಾಬರ ಮಗ ಅಬೀಬಾನನ್ನು ಪರಿಚಯಿಸುತ್ತಾರೆ. ಜೊತೆಗೆ ಅಬೀಬನ ಪೆಟ್ಟಿಗೆಯ ಗೂಡಂಗಡಿಯನ್ನು ಸಹ. ಬಾಲ್ಯದ ತುಂಟಾಟ, ಸಾಹಸಗಳು ನೆನಪಿನ ಬುತ್ತಿಗಳಾಗಿದ್ದವು. ಅಭಿನ ತಂದೆಯ ಸಾವಿನ ನಂತರ ಜವಾಬ್ದಾರಿಗಳನ್ನು ವಹಿಸಿಕೊಂಡ ಅಬೀಬಾ ಎಷ್ಟು ಬದಲಾದ..? ಅಬೀಬನ ಬೆಳವಣಿಗೆಗೆ ಇಲ್ಲಿ ನಾವೂ ಸಾಕ್ಷಿಯಾಗುವ ಸಂದರ್ಭಗಳಿವೆ. 


ಮೂರ್ತಣ್ಣ : ರುದ್ರಪ್ಪನವರಿಗೆ ಕೆಲವು ತಿಂಗಳ ಹಿಂದಷ್ಟೇ ರಿಟೈರ್ಮೆಂಟ್ ಆಗಿತ್ತು. ಇಬ್ಬರು ಹೆಣ್ಣುಮಕ್ಕಳ ವಿವಾಹವೂ ಆಗಿತ್ತು. ಈಗ ತಮ್ಮ ಮೂಲಸ್ಥಾನಕ್ಕೆ ಹೋಗುವ ಅವರ ಆಸೆಗೆ ಪತ್ನಿ ಸೀತಾರಿಂದಲೂ ಅಸ್ತು ಇಂದಾಗಿತ್ತು. ಸೀತಾರವರು ಅದರೊಟ್ಟಿಗೆ ತಮ್ಮೊಡನೆ ಮೂರ್ತಣ್ಣನನ್ನು ಕರೆದುಕೊಂಡು ಹೋಗೋಣ ಎನ್ನುವ ಪ್ರಸ್ತಾಪವಿಟ್ಟಿದ್ದರು. ಆತ ಬಂದರೆ ನನಗೂ ಸಂತೋಷ ಎನ್ನುವ ರುದ್ರಪ್ಪ ಮಾಸ್ತರರಿಗೆ ಹಾಗೂ ಸೀತಾರವರಿಗೆ ಮೂರ್ತಣ್ಣ ರಕ್ತ ಸಂಬಂಧಿಕನಲ್ಲ. ಹಾಗೆಂದು ಮೂರ್ತಣ್ಣ ಅನಾಥನೂ ಅಲ್ಲ. ಮೂರ್ತಣ್ಣನ ಕಥೆ ಏನು ನೀವೇ ಓಡಿ ನೋಡಿ. ಮೂರ್ತಣ್ಣ ರುದ್ರಪ್ಪನವರ ಜೊತೆಗೆ ಹೋದನೇ..? ಓದಿ ಅರಿಯಿರಿ.


ಕುತೂಹಲ : ಮದುವೆ ನಿಶ್ಚಯವಾದ ದಿನದಿಂದಲೂ ಎಲ್ಲರಿಗೂ ಆಹ್ವಾನ ಪತ್ರಿಕೆ ನೀಡುವ ಸಂಭ್ರಮ. ಮೂವರೂ ಹೋಗಿ ಕರೆಯುವ ಕೆಲವೆಡೆಗಳೂ ಇದ್ದವು. ಅಂತಹವರಲ್ಲಿ ಸುರೇಶ್ ಅಂಕಲ್ ಒಬ್ಬರು. ಬದಲಾದ ಬೆಂಗಳೂರಿನಲ್ಲಿ ಕರಾರುವಕ್ಕಾಗಿ ವಿಳಾಸ ತೋರುವ ಅಪ್ಪನ ಕುರಿತು ಆಶ್ಚರ್ಯ ಹಾಗೂ ಕುತೂಹಲಗಳೆರಡೂ.. ಅದಕ್ಕೆ ಉತ್ತರವಾಗಿ ಅಪ್ಪ "ನಾನು ಈ ಜಾಗಗಳಲ್ಲಿ ತುಂಬಾ ಓಡಾಡಿದ್ದೇನೆ" ಎಂದು ಹೇಳುವುದರ ಜೊತೆಗೆ ಯಾಕೆ ಯಾವಾಗ ಏನು ಎಂಬುದು ಬೇಕಿಲ್ಲದ ವಿಚಾರ, ಕೆಟ್ಟ ಕುತೂಹಲ ಒಳ್ಳೆಯದಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಅದರ ಹಿಂದಿನ ಸತ್ಯವನ್ನು ಹುಡುಕಿ ಹೊರಟಾಗ ಕುತೂಹಲ ತಣಿಯಿತೇ..? ಅಪ್ಪನ ಬದುಕು ಮಗನಿಗೆ ಕಂಡದ್ದು ಹೇಗೆ..?


ಒಂಟಿ ಮನೆ ಕಥೆ : ವಿಶಾಲಮ್ಮನವರು ಮದುವೆಯಾಗಿ ಬಂದು 50 ವರ್ಷಗಳ ಕಾಲ ಸಂಸಾರ ಮಾಡಿದ್ದ ಮನೆಯದು. ಹಣಕ್ಕೆಂದು ಮಾರುವ ಮನೆಯಾಗಿರಲಿಲ್ಲ. ಕಷ್ಟಪಟ್ಟು ಜಾಗ ಕೊಂಡು, ಮನೆ ಕಟ್ಟಿಸಿ, ಸಾಲ ತೀರಿಸಿ ಸ್ವಾಭಿಮಾನದಿಂದ ಬದುಕಿದವರಿಗೆ ಆ ಮನೆ ಬಿಟ್ಟು ಹೊರಡುವ ಪ್ರಸಂಗ ಬಂದದ್ದು ಹೇಗೆ..? 

ಮನುಷ್ಯನ ಅಸಹಾಯಕತೆಯನ್ನು ಬಿಂಬಿಸುವ, ಅಪ್ಪ ಹೇಳುವ ಮಾತೊಂದು ಕಥೆಯ ಕೊನೆಯಲ್ಲಿ ಉಲ್ಲೇಖವಾಗಿದೆ. ಸೆಳೆಯುವ ಸಾಲುಗಳು ಅವು.


ಪೇಪರ್ ದೊರೆ... : ಮಕ್ಕಳಿಗೆ ಅಜ್ಜಿಯ ಕಥೆ ಕೇಳಲೇ ಚೆಂದ. ಅಜ್ಜಿ ಕಟ್ಟಿ ಹೇಳುವ ಕಥೆಗಳಲ್ಲಿ ಕಲ್ಪನೆಗಳು ಜೊತೆಗೆ ನೀತಿಯೂ ಬೆರೆತಿರುತ್ತದೆ. ಇಲ್ಲಿಯೂ ಹಾಗೆಯೇ ಒಂದು ಚೆಂದದ ಕಥೆ ಇದೆ. ಪೇಪರ್ ದೊರೆಯ ಕಥೆಯನ್ನು ಅಜ್ಜಿ ಹೇಳುವಾಗ ಮಧ್ಯ ಮಧ್ಯದಲ್ಲಿ ಮೊಮ್ಮಕ್ಕಳ ಮಾತುಗಳು ಮಜಾ ಕೊಡುತ್ತವೆ.


ಕಾಶಿ ಟೀ ಮತ್ತು ಪ್ಯಾರೇಲಾಲ್ : ಊರಿನ ಚಿನ್ನದ ಅಂಗಡಿಯ ಮಾಲಿಕ ಪ್ಯಾರೇಲಾಲ್. ಅವನನ್ನು ಪ್ಯಾರೀಲಾಲ್ ಎಂದೂ ಕರೆಯುತ್ತಾರೆ. ಈತನ ಚಿನ್ನದ ಅಂಗಡಿಯಷ್ಟೇ ಫೇಮಸ್ ಆದ ಮತ್ತೊಂದು ಅಂಗಡಿ ಕಾಶಿಯ ಟೀ ಅಂಗಡಿ ಮ ಅದು ಪ್ಯಾರೇಲಾಲನ ಅಂಗಡಿಯ ಎದುರಿಗೇ ಇದೆ. ಹೆಸರಿಗೆ ಟೀ ಅಂಗಡಿಯಾದರೂ ತಿಂಡಿ-ತಿನಿಸುಗಳು, ಕರೆನ್ಸಿ ಬೀಡಿ-ಸಿಗರೇಟು, ಅಡಿಕೆ ಪೊಟ್ಟಣ ಹೀಗೆ ಎಲ್ಲವೂ ಸಿಗುವ ಸ್ಥಾನವದು. ಇವರಿಬ್ಬರ ಬಾಂಧವ್ಯವನ್ನು ಹೇಳುತ್ತಲೇ ಅದೆಷ್ಟು ಅಗಾಧ ಬಾಂಧವ್ಯವಾಗಿತ್ತು ಎಂಬುದನ್ನು ಹೊಸ ರೂಪದ ಘಟನೆ ಹಾಗೂ ಅದರ ಪ್ರತಿಕ್ರಿಯೆಯ ಮೂಲಕ ತೋರುತ್ತಾರೆ.


ಶುಗರ್ ಲೆಸ್ : ಮಡದಿ ಸುನಂದಮ್ಮ ತೀರಿ ಹೋದ ಮೇಲೆ ಮಗ-ಸೊಸೆಯರೊಟ್ಟಿಗೆ ಅಪಾರ್ಟ್ಮೆಂಟ್ ಗೆ ಸ್ಥಳಾಂತರವಾಗಿದ್ದರು ಆನಂದಯ್ಯ. ಸುನಂದಮ್ಮನವರು ಅಪರಿಮಿತ ದೈವಭಕ್ತ. ಅವರ ಕಾಲಕ್ಕೂ.. ಮಗ-ಸೊಸೆಯ ಕಾಲಕ್ಕೂ ಇರುವ ವ್ಯತ್ಯಾಸ ಚೆಂದವಾಗಿ ತೋರುವ ಪ್ರಸಂಗವೊಂದು ಇಲ್ಲಿದೆ. ಪತ್ನಿ ಸುನಂದಮ್ಮನವರು ತೀರಿ ಹೋಗಿದ್ದ ಹಿಂದಿನ ದಿನವೇ ಆನಂದಯ್ಯನವರು ಮರುದಿನದ ನೆನಪು ಮಾಡಿದ್ದರು. ಕೇಸರಿಬಾತು ಮಾಡಲು ಸೊಸೆಗೆ ಹೇಳಲು ಹೊರಟವರು ಹಿಂದೇಟು ಹಾಕಿದ್ದರು. ಅದನ್ನು ತಾವೇ ತಯಾರಿಸಲು ಹೊರಟಿದ್ದರು. ಅದಕ್ಕೂ ಶುಗರ್ ಲೆಸ್ ಗೂ ಸಂಬಂಧವೇನು ಓದಿ ನೋಡಿ. ಊಹಿಸಲು ಅಸಾಧ್ಯವಾದ ಕಥೆಯ ಟ್ವಿಸ್ಟ್ ಭಾವುಕರಾಗಿಸುತ್ತದೆ.


ಮಾತುಗಾರ ರಾಮಣ್ಣ : ಸಿನಿಮಾಗೆಂದು ಗೆಳೆಯರ ಜೊತೆ ಹೋದಾಗ ಕ್ಯೂನಲ್ಲಿ ನಿಂತಿದ್ದಾಗ ಸಿಕ್ಕ ವೃದ್ಧರೊಬ್ಬರು ಆಗಾಗ ಮಾತಿಗೆಳೆಯುತ್ತಿದ್ದರು. ಆ ಮಾತುಗಾರ ರಾಮಣ್ಣ ಮಾತು ಮುಂದುವರಿಸಿದಂತೆ ಯಾವಾಗ ನಮ್ಮನ್ನು ನಮ್ಮ ಪಾಡಿಗೆ ಬಿಡುತ್ತಾರೋ ಎಂದೆನಿಸಲು ಶುರುವಾದರೂ.. ಆನಂತರ ಅವರನ್ನು ಹುಡುಕದೆ ಇರಲಿಲ್ಲ. ಮಾತುಗಾರ ರಾಮಣ್ಣನ ಮಾತು ಸಿನಿಮಾ ಮುಗಿದ ನಂತರ ಮತ್ತೆ ಕೇಳಿದ್ದೆಲ್ಲಿ... ಅದು ಉಳಿಸಿದ ವಿಚಾರ ಏನು..? ಓದಿ ನೋಡಿ.


ಕೈಯ್ಯ ಕಾಣಿಕೆ : ಹತ್ತುವಾಗಿನ ತರಾತುರಿ ಇಲ್ಲದ ಆ ಹುಡುಗ ನುಡಿಸಿದ್ದು ತೆಂಗಿನ ಚಿಪ್ಪಿನಿಂದ ಮಾಡಿದ ಚಿಕ್ಕ ಪಿಟೀಲನ್ನು. ಅದಕ್ಕೂ.. ಸಂಗೀತ ಕಾರ್ಯಕ್ರಮದಲ್ಲಿ ಕೇಳಿದ ಸರೋದ್ ವಾದನಕ್ಕೂ ಮನಸ್ಸು ತುಲನೆ ಮಾಡಿದ್ದೇಕೆ..? ನಮಗೂ ಇಂತಹ ಅನುಭವಗಳಾಗಿದ್ದಿರಬಹುದು. ಅಲ್ಲವೇ..? ಅಪ್ರಯತ್ನಪೂರ್ವಕವಾಗಿ ಕಾಡುವ ಇಂತಹ ಘಟನೆಗಳನ್ನು ಚೆಂದವಾಗಿ ನೆನಪಿಸುವ ಕಥೆ ಇಲ್ಲಿದೆ.


ಸಮಾಧಿ : ನಿಜವಾಗಿ ಸಾಯುವುದು ದೇಹ ಮಣ್ಣಾಗಲಲ್ಲ. ಯಾವಾಗ ನಮ್ಮವರು ನಮ್ಮನ್ನು ಮರೆಯುತ್ತಾ ಬರುತ್ತಾರೋ ಅಥವಾ ಬಿಡುತ್ತಾ ಬರುತ್ತಾರೋ ಆಗ ಮಾತ್ರವೇ ಸಂಪೂರ್ಣ ಮುಕ್ತಿ ಎನ್ನುವ ಮಾತಿನ ತುಣುಕು ಗೋರಿಗಳ ಮೇಲೆ ಕುಳಿತು ಮಾತನಾಡುತ್ತಿದ್ದವರ ಮಾತುಕತೆಗೊಂದು ಸಾಕ್ಷಿ. ಅವರವರ ಬದುಕು ಹಾಗೂ ಆಲೋಚನೆಗಳನ್ನು ಬಿಚ್ಚಿಡುವ ವಿಭಿನ್ನ ಕಥೆ ಇದು. 


ವೈವಿಧ್ಯಮಯ ಕಥೆಗಳು ಆಯಾ ಕಥೆಗೆ ತಕ್ಕ ಭಾಷೆ ಹಾಗೂ ಭಾವದಿಂದ ಸೆಳೆಯುತ್ತವೆ. ಅತಿಭಾವುಕತೆ ಇಲ್ಲದ ವಾಸ್ತವದ ಚಿತ್ರಣವನ್ನು ಕಟ್ಟಿಕೊಡುತ್ತಾ, ಅಷ್ಟೇ ಕಟುಸತ್ಯಗಳನ್ನು ತೋರುತ್ತಾ ತಣ್ಣಗೆ ಉಳಿಯುತ್ತವೆ. 

~ ವಿಭಾ ವಿಶ್ವನಾಥ್

ಪುಣ್ಯ ಫಲಿಸಿತು (ಪುಸ್ತಕ ಯಾನ - 489)


ಪುಸ್ತಕದ ಶೀರ್ಷಿಕೆ : ಪುಣ್ಯ ಫಲಿಸಿತು 

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 2003

ಮರು ಮುದ್ರಣ : 2024


ರಂಜಿತ ಹುಟ್ಟಿದ ಎರಡನೇ ವರ್ಷಕ್ಕೆ ತಾಯಿಯನ್ನು ಕಳೆದುಕೊಂಡಳು. ಮಲತಾಯಿ ಬಂದರಾದರೂ ಅವರಿಂದ ಇವಳಿಗೆ ತೊಂದರೆಯಾಗುವ ಪ್ರಮೇಯವಿಲ್ಲದಕ್ಕೆ ಕಾರಣ ತಂದೆಯ ತಾಯಿ ಅಂದರೆ ಅಜ್ಜಿ ಗೋದಮ್ಮ. ಅವರಿಗೆ ಮೊಮ್ಮಗಳೆಂದರೆ ಪಂಚಪ್ರಾಣ. ಮಲಮಗು ಎಂದೆಲ್ಲಿ ಇವಳನ್ನು ಕಡೆಗಣಿಸುತ್ತಾರೆ ಎಂಬ ಭಯಕ್ಕೆ ಅತಿಯನ್ನಿಸುವಷ್ಟೇ ಪ್ರೀತಿ ಹಾಗೂ ಕಾಳಜಿ ಮಾಡಿ ಸಾಕಿದ ಅವರು ತಮ್ಮ ಎರಡನೆಯ ಸೊಸೆಯಿಂದ ಇದ್ದ ಇಬ್ಬರು ಮೊಮ್ಮಕ್ಕಳಿಗೆ ಯಾವುದೇ ಸೌಕರ್ಯವನ್ನು ಮಾಡಿಕೊಡಲಿಲ್ಲ. ಹಾಗೆಂದು ಪ್ರೀತಿ ಇರಲಿಲ್ಲವೆಂದಲ್ಲ. ಬದುಕು ಇದ್ದದ್ದೇ ಮೊಮ್ಮಗಳು ರಂಜಿತಾಳಿಗೆ ಎಂಬಂತೆ ಬದುಕಿದವರು. ಆಕೆಯೂ ಓದು ಬಿಟ್ಟು ಮತ್ತೇನನ್ನೂ ಆಶಿಸದೆ ಓದಿನ ಗಮನ ಹರಿಸಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿ ಒಳ್ಳೆಯ ಸಂಬಳ ತೆಗೆದುಕೊಂಡಳು. ತನ್ನ ವಿವಾಹಕ್ಕಿಂತ ಮೊದಲೇ ಮಲತಂಗಿಯ ವಿವಾಹವಾದಾಗಲು ರಂಜಿತ ದೃತಿಗೆಡಲಿಲ್ಲ. ತಂದೆ ಈ ಇವಳತ್ತ ಗಮನ ಹರಿಸದಾಗಲೂ ಧೃತಿಗೆಡಲಿಲ್ಲ.


ಗೋದಮ್ಮನವರು ಪಾರ್ಶ್ವವಾಯು ಪೀಡಿತರಾದಾಗ, ಮಗ-ಸೊಸೆಯಿಂದ ಯಾವುದೇ ಆಸರೆ ಸಿಗದಾಗ, ಕೊಂಚ ಚೇತರಿಸಿಕೊಂಡು ಮೊಮ್ಮಗಳ ಜೊತೆಯಲ್ಲಿ ಇರಲು ಹೊರಟರು. ಆಗ ಅವರ ನೆರವಿಗೆ ಬಂದಿದ್ದು ತಮ್ಮನ ಹೆಂಡತಿ ವತ್ಸಲಳ ತಮ್ಮಂದಿರಾದ ಸುಹಾಸ್ ಹಾಗೂ ವಿಶ್ವಾಸ್.


ಅಜ್ಜಿಗೆ ಆಸರೆಯಾಗಿದ್ದು, ರಂಜಿತಳಿಗೂ ಅಡಿಗೆ-ತಿಂಡಿ ಮಾಡಿಕೊಡುತ್ತಾ.. ಮನೆ ನಿಭಾಯಿಸುತ್ತಾ ಇದ್ದವರಿಗೆ ರಂಜಿತ ಮೊದಲ ತಿಂಗಳಿನಲ್ಲಿಯೇ ಹತ್ತು ಸಾವಿರ ನೀಡಿ ಅವರಿಗೆ ಅನುಭವ ಇದ್ದ ಅಡುಗೆ ಉದ್ಯಮದಲ್ಲಿ ಮುಂದುವರಿಯಲು ಅನುವು ಮಾಡಿಕೊಟ್ಟು ಹೊಸ ಉದ್ಯಮ ಆರಂಭಿಸಲು ಬಂಡವಾಳ ನೀಡಿದಳು. 


ಮೂರು ತಿಂಗಳ ಹೊತ್ತಿಗೆ ಮನೆಯಲ್ಲಿ ಪುಟ್ಟ ಕಾರ್ಯಗಾರ ಶುರುವಾಗಿ ರಘುರಾಮ, ಸುಭದ್ರಮ್ಮ ದಂಪತಿಗಳು ಜೊತೆಯಾದರು. ಸುಹಾಸ್ ನೇತೃತ್ವ, ಸುಭದ್ರಮ್ಮನ ನಿರ್ವಹಣೆ ಅದನ್ನು ಇನ್ನಷ್ಟು ಗಟ್ಟಿಗೊಳಿಸಿತು. ಅವರ ಇಬ್ಬರು ಹೆಣ್ಣುಮಕ್ಕಳು ರಾಗಿಣಿ, ಪದ್ಮಿನಿ. 


ಮನೆ ಬಾಡಿಗೆಗೆ ನೀಡಿದ್ದ ಓನರ್ ಇಂದಿರಮ್ಮನಿಗೆ ತಮ್ಮ ಡಿಪ್ಲೋಮೋ ಇಂಜಿನಿಯರ್ ಮಗ ರಾಜಾರಾಮ್ ನನ್ನು ರಂಜಿತ ವಿವಾಹವಾಗಲೆಂಬ ಆಸೆ. ಅದಕ್ಕಾಗಿ ಗೋದಮ್ಮನವರ ಬಳಿ ಸಾಕಷ್ಟು ಸಲುಗೆ ತೆಗೆದುಕೊಳ್ಳುತ್ತಿದ್ದರಾದರೂ.. ಅಜ್ಜಿಗೆ ತನ್ನ ಮೊಮ್ಮಗಳಿಗೆ ತಕ್ಕ ವರನನ್ನೇ ಹುಡುಕುವ ಆಸೆ. ಅದಕ್ಕೆ ತಕ್ಕಂತೆ ಮೋಹನನ ಪ್ರಸ್ತಾಪ ಬಂದರೂ.. ಇಷ್ಟವಾದರೂ.. ಬಂದಷ್ಟೇ ವೇಗವಾಗಿ ಮರೆಗೆ ಸರಿದಿತ್ತು. ಅದಕ್ಕೆ ಕಾರಣವೇನು..?


ಇದಾದ ನಂತರ ಮೋಹನನ ದೆಸೆಯಿಂದಲೇ ಮುಂದೆ ರಂಜಿತಳಿಗೆ ತನ್ನ ಉದ್ಯೋಗದಲ್ಲಿ ಬದಲಾವಣೆ ಸಿಕ್ಕಿ, ಸಂಬಳವೂ ಹೆಚ್ಚಿತು. ಮೋಹನ್ ಅವಳನ್ನು ಮೆಚ್ಚಿದ್ದರೂ.. ಮೊದಲಿಗೆ ವಿವಾಹಕ್ಕೆ ಒಪ್ಪದೇ ನಂತರ ಒಪ್ಪಿದ್ದು ಏಕೆ..?


ಇಂದಿರಮ್ಮನ ಧನದ ದಾಹದಿಂದ ಬಾಡಿಗೆಗಿದ್ದ ರಂಜಿತ ಹಾಗೂ ಮನೆಯವರಿಗೆ ತೊಂದರೆಯಾದದ್ದು ಹೇಗೆ...?


ಸುಹಾಸ್ ರಾಗಿಣಿಯನ್ನು ವಿವಾಹವಾಗಲು ಇಷ್ಟಪಟ್ಟಿದ್ದ . ಪದ್ಮಿನಿಯನ್ನು ವಿಶ್ವಾಸ್ ಗೆ ವಿವಾಹ ಮಾಡಿಸಲು ನಿರ್ಧರಿಸಿದ್ದ ಜೊತೆಗೆ ಅವರ ತಂದೆ-ತಾಯಿಯನ್ನು ತಮ್ಮ ಜೊತೆಗೇ ಇಟ್ಟುಕೊಂಡು ತಮ್ಮ ಉದ್ಯಮವನ್ನು ಬೆಳೆಸುವ ಕುರಿತಾಗಿಯೂ.. ರಂಜಿತ ವಿವಾಹವಾಗಿ ಹೋದ ನಂತರ ಅಜ್ಜಿಯನ್ನು ತಾವೇ ಚೆನ್ನಾಗಿ ನೋಡಿಕೊಳ್ಳುವುದಾಗಿಯೂ.. ಇದು ಅವಳಿಗೆ ತವರು ಮನೆಯಂತೆ ಎಂದು ಭರವಸೆ ನೀಡಿದ್ದ. 


ಅಣ್ಣನಂತೆ ಅವಳ ಬೆಂಬಲಕ್ಕೆ ನಿಂತಿದ್ದ ಸುಹಾಸ್ ಕುರಿತಾಗಿ ರಂಜಿತ ಅನುಮಾನ ಪಟ್ಟದ್ದಕ್ಕೆ ಕಾರಣವೇನಿತ್ತು..?


ರಂಜಿತ ಮತ್ತು ಮೋಹನರ ವಿವಾಹದ ಸಿದ್ಧತೆಯಾಗುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮನೆಯಲ್ಲಿ ಅಡುಗೆ ಉದ್ಯಮಕ್ಕೆ ತಯಾರಿಸುತ್ತಿದ್ದ ಪುಡಿಗಳೆಲ್ಲವೂ ಹಾಳಾಗಿದ್ದು ಹೇಗೆ..? ತೊಂದರೆ ಹೊರಗಿನಿಂದ ಎಂದು ಭಾವಿಸಿದಾಗ ಮನೆಯೊಳಗೆ ಹುಟ್ಟಿದ್ದ ಶತ್ರು ಯಾರು..?


ಇಷ್ಟೆಲ್ಲ ಸಂಚು ನಡೆಸಿದರೂ ರಂಜಿತ ಮತ್ತು ಮೋಹನರ ವಿವಾಹ ಸಾಂಗವಾಗಿ ನೆರವೇರಿದ್ದರ ಹಿಂದಿನ ಶಕ್ತಿ ಯಾರು..?


ಮೋಹನ್ ಹಾಗೂ ಸುಹಾಸ್ ರಿಗೆ ವಿಶ್ವಾಸ್ ಮೇಲೆ ಅನುಮಾನ ಬಂದದ್ದಕ್ಕೆ ಕಾರಣವೇನಿತ್ತು..? ಆ ಅನುಮಾನ ಬಗೆಹರಿದದ್ದು ಹೇಗೆ..?


ವಿಶ್ವಾಸ್ ಹಾಗೂ ಪದ್ಮಿನಿಯರ ವಿವಾಹ ಕೂಡಿ ಬರದೆ ಹೋದದ್ದಕ್ಕೆ ಏನೆಲ್ಲ ಕಾರಣವಾಯಿತು..? ವಿಶ್ವಾಸ್ ಬದುಕನ್ನು ಬದಲಿಸಿದ ಸಂದರ್ಭವೇನು..? ಅಣ್ಣನ ಯಾವ ಗುಣ ವಿಶ್ವಾಸ್ ನನ್ನು ಪ್ರೇರೇಪಿಸಿತು ಓದಿ ನೋಡಿ.


ಕಾದಂಬರಿಯ ಅಂತ್ಯ ವಾಸ್ತವದಂತೆಯೂ.. ಕೊಂಚ ಸಿನಿಮೀಯವಾಗಿಯೂ ಇದೆ.


ಕೆಟ್ಟತನ ಎಷ್ಟೇ ವಿಜೃಂಭಿಸಿದರೂ ಅದನ್ನು ಮೆಟ್ಟಿ ನಿಲ್ಲುವ ಒಳ್ಳೆಯತನ ಇದ್ದೇ ಇದೆ. ಒಳಿತಿಗೆ ಜಯ ಎಂಬ ತತ್ವ ಜೊತೆಗೆ ಕಾದಂಬರಿಯ ಶೀರ್ಷಿಕೆಗೆ ಬಹಳವಾಗಿ ಹೊಂದುವ ಕಾದಂಬರಿ.


ಶಾಂತವಾಗಿ ಬಂದದ್ದೆಲ್ಲ ಬರಲಿ ಎಂದು, ಹೆಚ್ಚು ಹಿಗ್ಗದೆ, ಹೆಚ್ಚು ಕುಗ್ಗದೆ ಎಲ್ಲವನ್ನೂ ಸಮಚಿತ್ತದಿಂದ ನಿಭಾಯಿಸಿಕೊಂಡು ಹೋಗುವ ಶಾಂತತೆಯ ಸಂಸ್ಕಾರವಂತೆ ರಂಜಿತ ಇಷ್ಟವಾಗುತ್ತಾಳೆ. ಇದುವರೆಗೂ ರಾಧಾದೇವಿಯವರ ಕಾದಂಬರಿಗಳ ನಾಯಕಿಯರಿಗಿಂತ ವಿಭಿನ್ನವಾಗಿ ಕಂಡವಳು ಇವಳು.


ಸಾಮಾನ್ಯವಾಗಿ ರಾಧಾದೇವಿಯವರ ಕಾದಂಬರಿಗಳಲ್ಲಿ ನಾಯಕನ ಪಾತ್ರ ಎಂದು ಮುನ್ನಡೆಯಲ್ಲಿ ಹೆಚ್ಚು ಗುರುತಿಸಿಕೊಳ್ಳುವ ನಾಯಕ ಪ್ರಧಾನ ಪಾತ್ರಗಳು ಬೆರಳಿಣಿಕೆಯಷ್ಟು. ಆದರೆ, ಇಲ್ಲಿ ಸುಹಾಸ್ ಕಷ್ಟಜೀವಿಯಾಗಿ, ಮಮತಾಮಯಿಯಾಗಿ, ಹೊಂದಿಕೊಳ್ಳುವವನಾಗಿ, ಭವಿಷ್ಯದ ಆಲೋಚನೆ ಉಳ್ಳವನಾಗಿ, ಸದ್ಗುಣವಂತನಾಗಿ ಒಟ್ಟಿನಲ್ಲಿ ಮನೆಯ ಹಿರಿಯಣ್ಣ ಹೀಗಿದ್ದರೆ ಸೂಕ್ತ ಎಂಬಂತಹ ಭಾವ ಹುಟ್ಟಿಸುವಂತಹ ಪಾತ್ರವಿದು. 


ಬದುಕಿನಲ್ಲಿ ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಬಾರದು ಎನ್ನುವ.. ತನ್ನ ತಪ್ಪಿನ ಅರಿವಾದಾಗ ಸಂದರ್ಭವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ ಜೊತೆಗೆ ಸೂಕ್ಷ್ಮವಾಗಿ ಆಲೋಚಿಸುವ ಮೋಹನ್ ಪಾತ್ರ ಸಹ ಮನಸ್ಸಿನಲ್ಲುಳಿಯುತ್ತದೆ.


ಬುದ್ಧಿವಂತಿಕೆ, ಶ್ರಮ ಎರಡರ ಜೊತೆಗೆ ಅದೃಷ್ಟವೂ ಸೇರಿದಾಗ ಫಲಿಸುವ ಪುಣ್ಯ ಹೇಗಿರುತ್ತದೆ ಎಂಬ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುತ್ತದೆ ಈ ಕಾದಂಬರಿ. ಸರಾಗವಾದ ಸುಂದರ ಕಾದಂಬರಿಯ ಓದು.


~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 20, 2026

ಸಾವನ್ನು ಕಾದು ಕುಳಿತಿದ್ದವರು

 


"ಎಲ್ಲರೂ ಮಗುವಿನ ಜನನಕ್ಕಾಗಿ ಕಾದು ಕುಳಿತಿದ್ದರೆ.. ನಾನೂ ಇದ್ದೇನೆ ಮಗುವಿನ ಸಾವಿಗೆ ಕಾದು ಕುಳಿತಿರುವವಳು.


ಪ್ರಭು, ಯಾವತ್ತೂ ಯಾವ ಶತ್ರುವಿಗೂ ಇಂತಹಾ ಪರಿಸ್ಥಿತಿ ಬಾರದಿರಲಿ. ಮಕ್ಕಳ ಹಿತ ಬಯಸುವವಳು ಮಾತ್ರ ತಾಯಿ. ನಾನ್ಯಾವ ಸೀಮೆಯ ತಾಯಿ" ಎನ್ನುತ್ತಾ ಬೇಸರದಿಂದ ತನ್ನ ಕುರಿತು ತಾನೇ ಜಿಗುಪ್ಸೆಯ ಮಾತನ್ನಾಡಿಕೊಳ್ಳುತ್ತಿದ್ದಳು ಸಂಕೀರ್ತಿ.


"ಕೀರ್ತಿ, ಯಾಕಿಷ್ಟು ಬೇಸರ ಮಾಡಿಕೊಳ್ಳುತ್ತಿದ್ದೀಯ. ಈ ಮಗು ಹುಟ್ಟುವ ಮುನ್ನವೇ ನಾವು ಈ ದಿನಕ್ಕೆ ಮನಸ್ಸನ್ನು ಸಿದ್ದ ಮಾಡಿಕೊಳ್ಳುತ್ತಿದ್ದೆವು. ಅಲ್ಲವಾ ? ಮಗುವಿನ ಇಷ್ಟು ದಿನದ ಬೆಳವಣಿಗೆ ಕಂಡು ಹರ್ಷಿಸುತ್ತಿದ್ದೆವು. ಅಷ್ಟು ಸಾಕು ಅಲ್ಲವಾ ??  ನಾವು ಪಾಪುವಿಗೆ ಎಂದೂ ಯಾವುದನ್ನೂ ಕೊರತೆ ಮಾಡಲಿಲ್ಲ ಅಲ್ಲವಾ ?? ಮುಂದೆಯೂ ಅವನು ಬದುಕಿದ್ದರೆ ಅವನನ್ನು ಅಷ್ಟೇ ಜೋಪಾನವಾಗಿ ನೋಡಿಕೊಳ್ಳೋಣ. ಆದರೆ, ಅವನು ಬದುಕದಿರಲಿ ಎಂದೇ ಆಶಿಸೋಣ" ಎಂದನು ಪ್ರಭು.


"ಪ್ರಭು, ನಾನು ಪಾಪು ಹುಟ್ಟುವ ಮುನ್ನವೇ ಒಂದು ಮಾತು ಹೇಳುತ್ತಿದ್ದೆ. ಗೊತ್ತಾ..??

ನಾನು ಗರ್ಭಿಣಿಯಾಗಿದ್ದಾಗ ಪುರಾಣದ ಕತೆಗಳನ್ನು ಓದಿದರೆ ಒಳ್ಳೆಯದು ಎಂದು ಆ ಪುಸ್ತಕಗಳನ್ನು ತಂದು ಕೊಟ್ಟಾಗ ಮಾರ್ಕಾಂಡೇಯನ ಕತೆ ಓದಿದಾಗ ಹೆಚ್ಚು ಆಯುಷ್ಯ ಇರುವ ದಡ್ಡ ಮಗ ಬೇಕೋ ಅಥವಾ ಕಡಿಮೆ ಆಯುಷ್ಯ ಇರುವ ಬುದ್ಧಿವಂತ ಮಗ ಬೇಕೋ ಎಂಬ ಆಯ್ಕೆ ಎದುರಾದಾಗ ಆಕೆ ಕಡಿಮೆ ಆಯುಷ್ಯದ ಬುದ್ಧಿವಂತ ಮಗನನ್ನು ಬೇಡುತ್ತಾಳೆ.

ಆಗೆಲ್ಲಾ ನಾನಾಗಿದ್ದರೆ ಹೆಚ್ಚು ಆಯುಷ್ಯದ ದಡ್ಡ ಮಗನನ್ನೇ ಬೇಡುತ್ತಿದ್ದೆ ಎನ್ನುತ್ತಿದ್ದೆ.


ಬಹುಶಃ, ದೇವರೇ ಪರೀಕ್ಷೆ ಮಾಡಲು ನಮಗೆ ಅಂತಹಾ ಮಗನನ್ನು ಕರುಣಿಸಿದನೋ ಏನೋ.. ಮಕ್ಕಳ ಆರೋಗ್ಯ, ಬುದ್ಧಿವಂತಿಕೆ ಎಲ್ಲವೂ ಇದ್ದಾಗಲೇ ಅಲ್ಲವೇ ತಂದೆ-ತಾಯಿಯರಿಗೂ ಸಂತೃಪ್ತಿ. ಆದರೆ, ಇವನು ಹುಟ್ಟುವ ಮೊದಲೇ ನಮಗೆ ತಿಳಿದಿತ್ತಲ್ಲ. ಮಗು ಹೀಗಾಗುತ್ತದೆ ಎಂದು.


ನಾವೂ ಸಿದ್ದರಾಗಿಯೇ ಇದ್ದೆವು. ದೇವರ ಮಗು ಎನ್ನುತ್ತಲೇ ಆಟಿಸಂ ಇರುವ ಮಗುವನ್ನು ತೆಕ್ಕೆಗೆಳೆದುಕೊಂಡು ಸಾಕಿದೆವು ಸಹಾ. ಆದರೆ, ಅವನು ಹಿಂಸೆ ಪಡುವಾಗ.. ಅವನು ನರಳುವಾಗ ಅವನಿಗಿಂತ ಹೆಚ್ಚು ಹಿಂಸೆ ಪಟ್ಟದ್ದು ನಾವೇ ಅಲ್ಲವಾ..

ಆಗ ಅನ್ನಿಸುತ್ತಿತ್ತು. ಮಾರ್ಕಂಡೇಯನ ತಾಯಿ ಸರಿಯಾದ ವರವನ್ನೇ ಕೇಳಿದ್ದಾಳೆ ಎಂದು. ಅವಳು ಸರಿಯಾದ ಆಯ್ಕೆ ಮಾಡಿದ್ದು.. ಕೇವಲ ಅವಳ ದೃಷ್ಟಿಯಿಂದ ಮಾತ್ರವಲ್ಲ.. ಮಗುವಿನ ದೃಷ್ಟಿಯಿಂದ ಕೂಡಾ. ಅವಳು ಬುದ್ದಿವಂತಳು. ಹಾಗಾಗಿಯೇ.. ಬುದ್ಧಿವಂತ ಮಗನನ್ನೂ ಪಡೆದದ್ದು.


ನಾನು ದಡ್ಡಿ. ನನ್ನ ಆಯ್ಕೆ ಇಲ್ಲದಿದ್ದರೂ ನನ್ನ ಪಾಪದ ಫಲ ಎಂಬಂತೆ ಆ ಮಗು ದಕ್ಕಿತ್ತು.


ಛೇ, ಅದು ಪಾಪದ ಕೂಸು.. ಏನೂ ಅರಿಯದ ಕೂಸು. " ಎನ್ನುತ್ತಾ ಮಾತನಾಡುತ್ತಲೇ ಪ್ರಜ್ಞೆ ತಪ್ಪಿದ್ದಳು. ಏನೋ ಒಂದು ರೀತಿಯ ವಿಚಿತ್ರ ನಗುವಿನಲ್ಲಿ ಪ್ರಜ್ಞೆ ತಪ್ಪಿದ್ದನ್ನು ಕಂಡು ಪ್ರಭುವಿಗೆ ಭಯವಾಯಿತು.


ಪ್ರಜ್ಞೆ ತಿಳಿದು ಎದ್ದಾಗ "ನಾನಿನ್ನೂ ಬದುಕಿದ್ದೇನಾ..?? " ಎಂದು ಕೇಳಿದ ಸಂಕೀರ್ತಿಗೆ "ನಿನ್ನನ್ನು ಸಾಯಲು ಬಿಟ್ಟು ಬಿಡುತ್ತೇನಾ..?? ನೀನು ಯಾಕೆ ಸಾಯಲು ಹೊರಟೆ ? " ಎಂದನು ಪ್ರಭು.


"ಪಾಪುವನ್ನು ಸಾಯಿಸಿದ್ದು ನಾನೇ.. ನಾನೇ

ಅದಕ್ಕೆ ನನಗೆ ನಾನೇ ಶಿಕ್ಷೆ ಕೊಟ್ಟುಕೊಳ್ಳಬೇಕು. " ಎಂದವಳನ್ನು  ಕಂಡು ಅರ್ಥವಾಗದವನಂತೆ ನೋಡಿದ.


"ಬುದ್ಧಿ ಬೆಳೆಯದ ಮಗುವನ್ನು ನಾನು ಸರಿಯಾಗಿ ನೋಡಿಕೊಳ್ಳಬೇಕಿತ್ತು. ನನ್ನ ನಿರ್ಲಕ್ಷ್ಯದಿಂದ ತಾನೇ ಅವನು ಮಹಡಿಯಿಂದ ಬಿದ್ದದ್ದು. ಅವನು ಸತ್ತರೆ ಅವನ ಸಾವಿಗೆ ನಾನು ತಾನೇ ಹೊಣೆ. " ಎಂದವಳ ಮಾತಿಗೆ "ಅಲ್ಲಮ್ಮ, ಅವನ ಮೋಕ್ಷಕ್ಕೆ ನೀನು ಹೊಣೆ. ಅವನ ಮುಕ್ತಿಗೆ ನೀನು ಹೊಣೆ. ಇಷ್ಟು ದಿನ ನೀನು ಅವನನ್ನು ಪ್ರೀತಿಯಿಂದ ನೋಡಿಕೊಂಡಿದ್ದೀಯ. ಅವನು ಮುಂದೆ ನರಳಿ ನರಳಿ ಸಾಯುವುದನ್ನು ನೋಡುವುದಕ್ಕಿಂತ ಇದೇ ಮೇಲು ಬಿಡು" ಎಂದನು.


ಅವಳಿಗೂ ತಿಳಿಯದ ಸಂಗತಿ ಎಂದರೆ ಪಾಪುವಿನ ಕಷ್ಟ ಅರಿತಿದ್ದ ಪ್ರಭು ಮಗುವನ್ನು ತಡೆಯಬಹುದಾಗಿದ್ದರೂ ತಡೆದಿರಲಿಲ್ಲ.


"ಸ್ಸಾರಿ ಸರ್, ಸ್ಸಾರಿ ಮ್ಯಾಮ್ ಹೀ ಈಸ್ ನೋ ಮೋರ್" ಎಂದ ವೈದ್ಯರ ಕಡೆ ತಿರುಗಿದ ಇಬ್ಬರೂ ಕೈ ಮುಗಿದಿದ್ದರು.


ಪಾಪುವಿನ ಕಷ್ಟ, ನೋವು, ನರಳುವಿಕೆಗೆ ಕೊನೆ ಬಂದಿತ್ತು

ಸಾವು ಪಾಪುವಿಗೆ ಮುಕ್ತಿ ನೀಡಿತ್ತು.


~ವಿಭಾ ವಿಶ್ವನಾಥ್

ಹರಡಿತು ಕಂಪು (ಬೆಳಕಿಂಡಿಯ ಕತೆಗಳು - 84)


 "ಮಲ್ಲಿಗೆ ಮಾಲೆ ಯಾರಿಗೋ..?? ಯಾಕೆ ತೆಗೆದುಕೊಂಡೆ..??" ಎಂದು ಕೇಳಿದ ಗೆಳೆಯನಿಗೆ

"ಮಲ್ಲಿಗೆ ಮುಡಿಯಲು ನನ್ನ ಹೆಂಡತಿ ಇಲ್ಲ. ಇನ್ನು ದೇವಾಲಯಕ್ಕೆ ಹೋಗುವುದಿಲ್ಲ. ಪರಮ ನಾಸ್ತಿಕ ನಾನು.. ಇನ್ನು ಯಾರ ಶವಕ್ಕೂ ಇದನ್ನು ಹಾಕುವುದಿಲ್ಲ.


ಇದನ್ನು ತೆಗೆದುಕೊಂಡದ್ದು ಆ ಪುಟ್ಟ ಹುಡುಗಿಗೋಸ್ಕರ.. ಆ ಹುಡುಗಿ ಆ ಮಲ್ಲಿಗೆ ಮಾರಿಯೇ ಇಲ್ಲಿಂದ ಹೋಗುವುದು. ಇಲ್ಲಿಂದ ಅವಳು ಲೇಟಾಗಿ ಹೊರಟರೆ ಅವಳು ಶಾಲೆಗೆ ಹೋಗುವುದು ಲೇಟಾಗುತ್ತದೆ. ಆ ಮಲ್ಲಿಗೆ ಮಾಲೆ ಮಾರಾಟವಾಗುವುದು ಲೇಟಾಗುವುದನ್ನು ಕಂಡಾಗ ಅದನ್ನು ಕೊಳ್ಳುತ್ತೇನೆ. " ಎಂದವರೇ ಕೊಂಡಿದ್ದ ಮಲ್ಲಿಗೆ ಮಾಲೆಯನ್ನು ಅಲ್ಲಿಯೇ ಸೊಪ್ಪು ಮಾರುತ್ತಿದ್ದ ಅಜ್ಜಿಯೊಬ್ಬರಿಗೆ "ತೆಗೆದುಕೊಳ್ಳಿ" ಎಂದು ಕೊಟ್ಟರು. ಮಲ್ಲಿಗೆ ತನ್ನ ಕಂಪನ್ನು ಬೀರುವಂತೆಯೇ.. ಈತನೂ ತನ್ನ ಪರೋಪಕಾರದ ಕಂಪನ್ನು ಹರಡುತ್ತಿದ್ದನು.


~ವಿಭಾ ವಿಶ್ವನಾಥ್

ಒಗ್ಗರಣೆಗೆ ಮಾತ್ರ (ಬೆಳಕಿಂಡಿಯ ಕತೆಗಳು - 83)

 


ಸರಿಯಾಗಿ ಒಗ್ಗರಣೆ ಹಾಕಲು ಬರುತ್ತದೆಯೇ..?? 

ಪಕ್ಕದ ಮನೆಯ ಆಂಟಿಯ ಈ ಪ್ರಶ್ನೆಗೆ

"ಹೌದು, ಅಡುಗೆಗೆ ಮಾತ್ರ...

ನಿಮ್ಮಂತೆ ಮತ್ತೊಬ್ಬರ ಜೀವನಕ್ಕಲ್ಲ" ಎಂದುತ್ತರಿಸಿದೆ.


ಬಹುಶಃ ಸಿಡಿಯುವ ಕಡೆ ಸರಿಯಾಗಿಯೇ ಸಿಡಿದಿತ್ತು


~ವಿಭಾ ವಿಶ್ವನಾಥ್

ಕವಲುದಾರಿ


ನಿಂತಿದ್ದೇವೆ ದಾರಿ ಕವಲೊಡೆಯುವಲ್ಲಿ

ಮುಂದೆರಡು ಮುಗಿಯದ ದಾರಿಗಳು

ಹಿಂದೊಂದು ದೊಡ್ಡ ಸವೆಸಿದ ಹಾದಿ

ಹಿಂದಿರುಗಿ ನಡೆಯಲಾಗದೆಂಬ ಷರತ್ತಿದೆ

ಕುಸಿದು ಕುಳಿತು ಯೋಚಿಸಿದರೆ

ಭವಿಷ್ಯದ ಕಾರ್ಮೋಡದ ದಿಗಿಲು

ಹಿಂದೆಯೇ.. ಬೆಳಕಿರಬಹುದೆಂಬ ಆಶಾಕಿರಣ

ಕವಲೊಡೆದ ದಾರಿಗಳು ಜೊತೆಯಾಗವು

ಹಾಗೆಯೇ.. ನಡೆಯುವ ಪಯಣಿಗರು..

ನಿನ್ನ ಹಾದಿಯ ನಾ ಕ್ರಮಿಸಲಾರೆ

ನೀನೂ ಅಷ್ಟೇ, ನನ್ನ ಹಾದಿಯ ಜೊತೆಗೂಡಲಾರೆ


ಬದುಕಿನ ಎರಡೂ ತೀರಗಳೂ

ಎಂದಾದರೊಮ್ಮೆ ಒಂದುಗೂಡಲೆಂದು ಆಶಿಸುತ್ತಾ

ಒಳಿತಾಗಲೆಂಬ ಶುಭಾಶಯ ಕೋರುತ್ತಾ

ಹೋರಾಡುವುದಷ್ಟೇ ಬಾಕಿ ಈಗ

ದಿಗಂತ ಕಾಯುತಲಿದೆ ನಮಗಾಗಿ

ಕವಲೊಡೆದ ದಾರಿ ಒಂದಾದರೂ

ಬೇರಾದರೂ ಆರಂಭ ಕವಲುದಾರಿಯೇ

ಸತ್ಯ ಜೀರ್ಣಿಸಿಕೊಳ್ಳಲೇಬೇಕಿದೆ

ಕವಲು ದಾರಿಯ ಯಾವುದೋ ಒಂದನು

ಆಯ್ಕೆ ಮಾಡಿಕೊಳ್ಳಲೇಬೇಕಿದೆ

ನಿರಂತರ ಪಯಣಕೆ


ಕವಲಾಗಿರುವುದು ಹಾದಿಯಷ್ಟೇ

ಬದುಕಿನ್ನೂ ಹಾಗೇ ಉಳಿದಿದೆ


~ವಿಭಾ ವಿಶ್ವನಾಥ್

ಸಾಕ್ಷಿ (ಪುಸ್ತಕ ಯಾನ - 488)


 ಕಿರು ಕಾದಂಬರಿಯ ಶೀರ್ಷಿಕೆ : ಸಾಕ್ಷಿ

ಲೇಖಕರು : ಗಂಗಾ ಪಾದೇಕಲ್

ಮುದ್ರಿತ ವರ್ಷ : 1995 ಏಪ್ರಿಲ್ 


ಕಾದಂಬರಿ ಆರಂಭವಾಗುವುದು ಕಮಲಮ್ಮನ ಅಂತ್ಯಸಂಸ್ಕಾರದೊಂದಿಗೆ. ಕಮಲಮ್ಮನಗಿದ್ದದ್ದು ಒಬ್ಬನೇ ಮಗ ಸುಧಾಕರ. ಆತನ ಓದು ಮುಗಿದು ಕೆಲಸಕ್ಕೆ ಸೇರಲು ಇನ್ನೂ ಒಂದು ವರ್ಷವಿತ್ತು. ತನ್ನ ಕಷ್ಟ ಕಳೆದು ಮಗ ಕೈಗೆ ಬರುವ ಹೊತ್ತಿಗೆ ಕಮಲಮ್ಮ ಹಠಾತ್ ಹೃದಯಾಘಾತದಿಂದ ಮರಣ ಹೊಂದಿದರು. ವಾಸ್ತೇವ ಅವರ ಮನೆಯಲ್ಲಿ ಖಾಯಂ ಅಡುಗೆಯವಳಾಗಿ ಕೆಲಸ ಮಾಡುತ್ತಿದ್ದರು ಕಮಲಮ್ಮ. 


ನಗರದಲ್ಲಿ ಓದುತ್ತಿದ್ದ ಸುಧಾಕರನಿಗೆ ತಂತಿ ನೀಡಿ ಕರಿಸಿದ್ದು ಜನ್ನಯ್ಯ. ಜನ್ನಯ್ಯನ ತಾಯಿ ಇದ್ದಾಗಲೇ ಆಕೆಯ ದೂರದ ಸಂಬಂಧಿಯಾಗಿದ್ದ ಕಮಲಮ್ಮ 15 ವರ್ಷಕ್ಕೂ ಮುನ್ನವೇ ಇಲ್ಲಿ ಬಂದು ಸೇರಿದ್ದಳು. ಆಗ ಸುಧಾಕರನಿಗಿನ್ನೂ ನಾಲ್ಕು ವರ್ಷ. ತಂದೆ-ತಾಯಿ ಇಲ್ಲದ ಕಮಲಮ್ಮನಿಗೆ ಅಪಾಪೋಲಿಯಾಗಿದ್ದ ಗಂಡನ ಆಸರೆಯೂ ಇರಲಿಲ್ಲ. ಜನ್ನಯ್ಯ ನ ತಾಯಿ ಮಾನವೀಯತೆಯ ದೃಷ್ಟಿಯಿಂದ ಕೊಟ್ಟಿಗೆಯಲ್ಲಿ ಸೌದೆ ಹಾಕುತ್ತಿದ್ದ ಕೋಣೆಯನ್ನು ಅವರಿಗೆ ನೀಡಿದ್ದರು. ಆದರೆ, ಅವರ ಅನ್ನವನ್ನು ಅವರೇ ದುಡಿದುಕೊಳ್ಳುವ ಷರತ್ತಿನೊಂದಿಗೆ. ಅಷ್ಟೇ ಸಾಕಾಗಿತ್ತು ಕಮಲಮ್ಮನಿಗೆ. ಮೊಟ್ಟಮೊದಲಿಗೆ ಅಡುಗೆ, ತಿಂಡಿ ಕೆಲಸ ಮಾಡಿಕೊಟ್ಟು ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಹಾಕುತ್ತಿದ್ದವಳು ವಾಸ್ತೇವ ಅವರ ಮನೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿದಳು. 


ಕಮಲಮ್ಮನ ಸಂಸ್ಕಾರದ ನಂತರ 11ನೇ ದಿನದ ಕರ್ಮಕ್ಕೆಂದು ಸುಧಾಕರ ಆಲೋಚಿಸುತ್ತಿದ್ದಾಗ ಜನ್ನಯ್ಯ ಕಮಲಮ್ಮ ತನ್ನ ಬಳಿ ಕೊಟ್ಟ ಹಣದ ವಿಚಾರ ಹೇಳಿದ್ದರು. ಪ್ರತಿಯೊಂದಕ್ಕೂ ಆಕೆ ಕೇಳಿದಿದ್ದರೂ ರಶೀತಿ ಇಟ್ಟು ಈಗ ಸುಧಾಕರನಿಗೆ ಒಂದು ರೂಪಾಯಿಯನ್ನೂ ಕಡಿಮೆ ಮಾಡದಂತೆ ಹಣ ಕೊಟ್ಟು.. ಮುಂದೆಯೂ ಕಷ್ಟಪಟ್ಟು ಓದುವಂತೆ ತಿಳಿಸಿದರು. ಕಮಲಮ್ಮ ಕೊಟ್ಟ ಮತ್ತೊಂದು ಗಂಟಿತ್ತು. ಆದರೆ, ಅದನ್ನು ಮಾತ್ರ ಜನ್ನಯ್ಯ ಕೊಡಲಿಲ್ಲ. ಅದರಲ್ಲೇನಿತ್ತು ..?


ಇದಾದ ನಂತರ ಜನ್ನಯ್ಯ ತನ್ನ ಒಬ್ಬಳೇ ಮಗಳು ಸರೋಜಳ ವಿವಾಹವನ್ನು ಅದ್ದೂರಿಯಾಗಿ ಮಾಡಿದರು. ಅವರಿಗೆ ಮೂವರು ಗಂಡು ಮಕ್ಕಳು. ಮೊದಲನೇ ಮಗ ಸೀತಾರಾಮನಿಗೆ ಜಲಜಳೊಂದಿಗೆ ವಿವಾಹವಾಗಿದ್ದು.. ಹೆಚ್ಚು ಓದದ ಆತನೇ ತಂದೆಯ ಬಲಗೈಯಂತೆ ತೋಟದ ಕೆಲಸ ನೋಡಿಕೊಳ್ಳುತ್ತಿದ್ದದ್ದು. ಎರಡನೇ ಮಗ ಶ್ರೀಧರ ಕಾಲೇಜು ಉದ್ಯೋಗಿಯಾಗಿ ಸಿಟಿಯಲ್ಲಿದ್ದ. ವೈದ್ಯಕೀಯ ಓದುತ್ತಿದ್ದ ಮೂರನೆಯವನ ಪ್ರಸ್ತಾಪ ಹೆಚ್ಚಿಲ್ಲ. 


ಕೆಲಸಕ್ಕಾಗಿ ಎಲ್ಲೆಡೆ ಪ್ರಯತ್ನಿಸಿ ನಿರಾಶನಾಗಿ ವಾಸ್ತವದ ಕಠೋರ ಸತ್ಯಗಳನ್ನು ಅರಗಿಸಿಕೊಂಡು ಸುಧಾಕರ ಜನ್ನಯ್ಯನವರ ಬಳಿ ದೂರದಾಸೆ ಹೊತ್ತು ಬಂದಿದ್ದ. 15 ಸಾವಿರ ಸಾಲಕ್ಕಾಗಿ ಬೇಡಿಕೆ ಇಟ್ಟಿದ್ದ. 


ಅಷ್ಟರಲ್ಲಾಗಲೇ ಜನ್ನಯ್ಯನ ಮನೆಯಲ್ಲಿ ಸೊಸೆ ಜಲಜಳಿಗೆ ತನ್ನ ವಿವಾಹಕ್ಕಿಂತಲೂ ಸರೋಜಳ ವಿವಾಹ ಅದ್ದೂರಿಯಾಗಿ ಆಗಿದ್ದು ಹಾಗೂ ಹೆಚ್ಚಿನ ಒಡವೆ ಹಾಕಿದ್ದು ಕಣ್ಣುಕುಕ್ಕಿ ಮನೆಯಲ್ಲಿ ಅತೃಪ್ತಿ ತಾಂಡವ ಮಾಡುತ್ತಿತ್ತು. ಅದು ಸೀತಾರಾಮನಿಂದ ಹೊರ ಬರುತ್ತಿತ್ತು. 


ಸುಧಾಕರ ಮಾಡಿದ ಪ್ರಸ್ತಾಪದಿಂದ ಜಲಜಳ ದುಸುಮುಸು ಹೆಚ್ಚಾಗಿ, ಸೀತಾರಾಮನ ನೇರ ಮಾತುಗಳ ನಿರಾಕರಣೆಯ ಜೊತೆಗೆ ಪಾರ್ವತಮ್ಮನವರ ಸಂತೈಸುವ ಮಾತುಗಳ ನಯವಾದ ನಿರಾಕರಣೆಯೂ ಸೇರಿತ್ತು. ಜನ್ನಯ್ಯನವರ ನಿರ್ಣಯ ಏನಿತ್ತು..?


ಇದಾದ ನಂತರ ಜನ್ನಯ್ಯನವರ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಯಿತು. ಮಗ-ಸೊಸೆಯರ ಅತೃಪ್ತಿ, ಅಸಮಾಧಾನಗಳ ಜೊತೆಗೆ ಜನ್ನಯ್ಯ ನವರ ವ್ಯಗ್ರತೆಯೂ ಹೆಚ್ಚಾಗುತ್ತಾ ಸಾಗಿತು. ಅಡಿಕೆ ತೋಟದ ಕೊಳೆರೋಗದಿಂದ ಉಂಟಾದ ನಷ್ಟದಿಂದ ಶುರುವಾದ ಸಮಸ್ಯೆಗಳು ಬೆಳೆಯುತ್ತಾ ಸಾಗಿದವು. 


ಇದೆಲ್ಲದರ ನಡುವಲ್ಲಿ ಸಂತಸದ ಸಂಗತಿ ಎಂದರೆ ಮಗಳು ಸರೋಜಳಿಗೆ ಹೆಣ್ಣು ಮಗುವಾಗಿತ್ತು. ಆಕೆಯದ್ದೇ ನೂ ತೊಂದರೆ ಇರಲಿಲ್ಲ. ಅಪ್ಪನ ಮೆಚ್ಚಿನ ಮಗಳು ಸಹ ಅಪ್ಪನ ಪ್ರತಿದಿನದ ಬದಲಾವಣೆಯನ್ನು ಗಮನಿಸುತ್ತಲೇ ಇದ್ದಳು. ಶ್ರೀಧರನಿಗೆ ಆತನ ತಾಯಿಯಿಂದ ತಂದೆಯ ಬದಲಾವಣೆಗಳೆಲ್ಲವೂ ತಿಳಿದಿತ್ತು.


ಒಮ್ಮೆ ಚೆನ್ನಯ್ಯನವರಿಗೆ ಹೋಟೆಲಿನಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದ ಸುಧಾಕರ ಕಂಡಾಗಿನಿಂದ ಮತ್ತಷ್ಟು ನವೆದಿದ್ದರು. ಜಲಜಳ ತಂದೆ ಬಂದಾಗ ಸುಧಾಕರ ಮೂರು ತಿಂಗಳಿನಲ್ಲಿಯೇ ನಾಲ್ಕು ಹೋಟೆಲ್ನಲ್ಲಿ ಕೆಲಸ ಬದಲಿಸಿದ್ದು ಹಾಗೂ ಯಾವುದರಲ್ಲಿಯೂ ಮನಸ್ಸಿಲ್ಲದಂತೆ ಇದ್ದದ್ದನ್ನು ಹೇಳಿದ್ದು ಕೇಳಿ ಜನ್ನಯ್ಯನವರಿಗೆ ಪಾಪಪ್ರಜ್ಞೆ ಹೆಚ್ಚಾಗಿದ್ದರ ಜೊತೆಗೆ ಮತ್ತಷ್ಟು ಬದಲಾಗುತ್ತಾ ಸಾಗಿದ್ದರು.


ಮನುಷ್ಯನ ಕೆಟ್ಟ ಕೆಲಸಕ್ಕೆ ಪ್ರತ್ಯಕ್ಷ ಸಾಕ್ಷಿ ಯಾರಿಲ್ಲದಿದ್ದರೂ.. ಅವನ ಮನಸ್ಸಿಗಿಂತ ಹೆಚ್ಚಿನ ಸಾಕ್ಷಿ ಬೇಕೇ..?


ಪಾರ್ವತಮ್ಮನವರು ಗಂಡನ ಮನಸ್ಥಿತಿಯ ಬದಲಾವಣೆಯನ್ನು ಗಮನಿಸಿದರೆ ಮನೆಯಲ್ಲಿ ಮಗುವನ್ನು ಸುಧಾರಿಸುತ್ತಾ.. ಮನೆವಾಳ್ತೆಯನ್ನು ಸುಧಾರಿಸುತ್ತಾ ತಾಳ್ಮೆಯಿಂದ ಅವರ ಮಾತು ಕೇಳುವಲ್ಲಿ ಸೋತರೇ..?


ಸೀತಾರಾಮ ಅಂದು ಸುಧಾಕರನ ವಿಷಯದಲ್ಲಿ ಮೂಗು ತೂರಿಸದಿದ್ದಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತೇ..?


ಜನ್ನಯ್ಯನವರನ್ನು ಅಷ್ಟು ಕಾಡಿದ ವಿಚಾರವಾದರೂ ಏನು..? ಅವರು ನಿಷ್ಠೆಯಿಂದ ಪ್ರತಿ ಪೈಸೆಯ ಲೆಕ್ಕವನ್ನು ಕೊಟ್ಟರೂ ಅವರಿಗೆ ಮುಳುವಾಗಿದ್ದೇನು..?


ಸ್ವಾಭಿಮಾನದಲ್ಲಿ ಅಮ್ಮನ ಮಗನೇ ಆಗಿದ್ದ ಸುಧಾಕರ ಯಾವ ದಾರಿ ಹಿಡಿದ..?


ವಾಸ್ತೇವರು ತಂದ ಯಾವ ಸುದ್ದಿ ಜನ್ನಯ್ಯನವರನ್ನು ಮತ್ತಷ್ಟು ಕುಗ್ಗಿಸಿತು..? ಅದು ಪಾರ್ವತಮ್ಮನವರ ಗಮನಕ್ಕೆ ಬರದೇ ಹೋಗಿದ್ದೇಕೆ..?


ಅಮ್ಮನ ಮುದ್ದಿನ ಮಗನಾಗಿ ತನ್ನನ್ನು ತಾನು ಸಂಬಾಳಿಸಿಕೊಳ್ಳುವಲ್ಲಿ ಸೋತನೇ ಸುಧಾಕರ..? ಕುಟುಂಬದ ಪ್ರೀತಿ ಇಲ್ಲದೆ ಬೆಳೆದುದ್ದಕ್ಕೋ ಅಥವಾ ತನ್ನವರೆಂದು ತಿದ್ದಿ ನಡೆಸುವವರಿಲ್ಲದೆ ಯೌವ್ವನದಲ್ಲಿನ ಡಿಪ್ರೆಶನ್ ಗೆ ಬಲಿಯಾದನೇ ಸುಧಾಕರ..?


ಕಥೆ ಸಾಗುತ್ತಾ ಹೋದಂತೆ ಊಹಿಸುತ್ತಾ ಹೋಗಬಹುದಾದರೂ ಕಥೆಯ ಜಾಡು ಮುಂದೆಂದಾದರೂ ಬದಲಾಗಬಹುದೇನೋ ಎಂಬ ನಿರೀಕ್ಷೆಯಲ್ಲಿಯೇ ಕೊನೆಯವರೆಗೂ ಓದಿಸಿಕೊಳ್ಳುತ್ತಲೇ ಹೋದ ಕಥಾಹಂದರ. 


ಸಾಮಾಜಿಕ ಪಾತ್ರ ಚಿತ್ರಣದ ಜೊತೆಗೆ ಮನೋವೈಜ್ಞಾನಿಕ ಕಾದಂಬರಿಯಂತೆ ಭಾಸವಾದ ಕಿರುಕಾದಂಬರಿಯಿದು. ಇಲ್ಲಿ ಮನಸ್ಸಿನ ಭಾವನೆಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ ಲೇಖಕಿ. ಕಾಡುವ ಕಿರುಕಾದಂಬರಿ 1995ರ ಏಪ್ರಿಲ್ ತಿಂಗಳ ಕಸ್ತೂರಿಯಲ್ಲಿ ಪ್ರಕಟಿತ.


~ ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 13, 2026

ಒಂದೊಮ್ಮೆ ಕರುಣಾಮಯಿಯಾಗಿದ್ದವಳು (ಬೆಳಕಿಂಡಿಯ ಕತೆಗಳು - 82)


 ಎಲ್ಲರ ಕಷ್ಟಕ್ಕೆ ಕರಗುವ ಕರುಣಾಮಯಿಯಾಗಿದ್ದವಳನ್ನು, ಸಹಾಯಕ್ಕೆ ನಿಂತು ಸುಧಾರಿಸುವವಳನ್ನು ಮೋಸದಿಂದ  ಯಾಮಾರಿಸಿದವರೇ ಹೆಚ್ಚು. ವಾಸ್ತವದ ಕಟುಸತ್ಯ ಅವಳನ್ನು ಬುದ್ಧಿವಂತೆಯಾಗಿಸಿತು. 

ಕರುಣಾಮಯಿಯನ್ನು ಕಟು ಹೃದಯಿಯಾಗಿಸಿದವರೇ ಈಗ ಅವಳು ಕಲ್ಲೆಂದು ದೂರುತ್ತಿರುವುದು ವಿಪರ್ಯಾಸ. 

~ವಿಭಾ ವಿಶ್ವನಾಥ್

ಪುಸ್ತಕಪ್ರೇಮಿಯ ಆಸೆಗಣ್ಣು (ಬೆಳಕಿಂಡಿಯ ಕತೆಗಳು - 81)


ಹಲವು ತಿಂಗಳುಗಳಿಂದ ಪುಸ್ತಕ ಕೊಳ್ಳಲು ಹೋದಾಗಲೆಲ್ಲಾ ಆಸೆಗಣ್ಣುಗಳಿಂದ ತನ್ನಿಷ್ಟದ ಪುಸ್ತಕವನ್ನು ನೋಡುತ್ತಿದ್ದರೂ.. ದುಬಾರಿಯಾದ ಆ ಬೃಹತ್ ಕಾದಂಬರಿಯ ಕೊಳ್ಳುವಿಕೆಯನ್ನು ಮುಂದೂಡುತ್ತಲೇ ಇದ್ದಳು. ಅವಳ ಪ್ರತಿಭೆಗೆ ಪ್ರತಿಫಲವೆಂಬಂತೆ.. ಮನದಾಸೆಯನ್ನು ಅರಿತಂತೆ ಅದೇ ಪುಸ್ತಕ ಬಹುಮಾನವಾಗಿ ಸಿಕ್ಕಾಗ ಅವಳ ಸಂತೋಷವಂತೂ ವರ್ಣಿಸಲಸದಳ.

~ವಿಭಾ ವಿಶ್ವನಾಥ್

ಎಲ್ಲಾ ಅಂತ್ಯವೂ ಅಂದುಕೊಂಡಂತೆಯೇ ಇರಬೇಕಿಲ್ಲ

 


"ತಗೊಳ್ಳಿ ನಿಮ್ಮ ಬ್ಯಾಗ್. ನೀವು ನಿಮ್ಮ ಅಪ್ಪ - ಅಮ್ಮ ಇಬ್ಬರನ್ನೂ ಕರೆದುಕೊಂಡು ಮನೆ ಬಿಟ್ಟು ಹೋಗಬಹುದು. ನಿಮಗೆ ಹೋಗುವುದಕ್ಕೆ ಇಷ್ಟ ಇಲ್ಲ ಅಂತಾ ಇದ್ದರೆ ನೀವು ಬೇಕಾದರೆ ಇಲ್ಲಿಯೇ ಉಳಿದುಕೊಳ್ಳಬಹುದು." ಎಂದು ಕಲ್ಲು ಮನಸ್ಸಿನಿಂದ ಹೇಳಿ ಅಲ್ಲೇ ಇದ್ದ ಸೋಫಾದ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕುಳಿತಳು ಸೀತಾ.


"ಏನೋ ರಾಮ್ ಇದು..

ಇವಳು ಹೀಗೆಲ್ಲಾ ಹೀನಾಯವಾಗಿ ನಮ್ಮನ್ನು ಮನೆಯಿಂದ ಹೊರಗಡೆ ಹಾಕಲು ನೋಡಿದರೂ ನೋಡಿಕೊಂಡು ಸುಮ್ಮನೆ ಇದ್ದೀಯಲ್ಲ. ನಾವೇನೂ ಏನೂ ಇಲ್ಲದವರಲ್ಲ. ಕೋಟಿ ರೂಪಾಯಿ ಆಸ್ತಿ ಇದೆ. ಗೊತ್ತಲ್ವಾ ಅವಳಿಗೆ.

ಅದೆಲ್ಲಾ ಸರಿ. ಇದು ನಿನ್ನ ಮನೆ ತಾನೇ ? ಅವಳು ಯಾಕೆ ನಿನ್ನನ್ನು, ನಮ್ಮನ್ನು ಎಲ್ಲರನ್ನೂ ಹೊರಗಡೆ ಹಾಕಬೇಕು ಅಂತಾ ಹೇಳುತ್ತಾ ಇದ್ದಾಳೆ ? " ಎಂದಾಗ ರಾಮ್


"ಅಪ್ಪಾ, ನೀವು ತಪ್ಪು ತಿಳಿದುಕೊಂಡಿದ್ದೀರಿ. ಇದು ನನ್ನ ಮನೆಯಲ್ಲ. ಅವಳ ಮನೆ. ಮನೆ ಇರುವುದು ಅವಳ ಹೆಸರಲ್ಲೇ.. ನನ್ನ ಸಂಬಳದ ಹಣ ಈ ಮನೆ ಲೋನ್ ಗೆ ಹೋಗುತ್ತಾ ಇದೆ. ಮನೆ ನಡೆಯುತ್ತಾ ಇರುವುದು ಅವಳ ಸಂಬಳದಲ್ಲೇ. ಒಂದು ವಾರದಿಂದ ನೀವು ಜೀವನ ಮಾಡುತ್ತಾ ಇದ್ದದ್ದು.. ನಾನು ಆವತ್ತಿನಿಂದ ಬದುಕುತ್ತಿರುವುದು ಅವಳ ಸಂಬಳದಲ್ಲೇ.. " ಎಂದನು ರಾಮ್.


"ಅಯ್ಯೋ.. ಅಯ್ಯೋ.. ಮನೆಹಾಳಿ.

ನನ್ನ ಮಗನ ಹತ್ತಿರ ಎಲ್ಲವನ್ನೂ ಕಿತ್ತುಕೊಂಡು ಅವನನ್ನೇ ಹೊರಗಡೆ ಹಾಕುವುದಕ್ಕೆ ನೋಡುತ್ತಿದ್ದೀಯಲ್ಲ. ನಿನಗೆ ಮನಸ್ಸಾದರೂ ಹೇಗೆ ಬಂತು ? " ಎಂದ ಅತ್ತೆಯ ಮಾತಿಗೆ ಸೀತಾ


"ಅತ್ತೆ, ಆ ಮಾತನ್ನು ನಿಮಗೆ ನೀವೇ ಕೇಳಿಕೊಳ್ಳಿ. ಬಹುಶಃ ಉತ್ತರ ಸಿಗಬಹುದು. ಇಲ್ಲಾ ಅಂದರೆ ಮನೆಹಾಳಿ ಯಾರು ಅಂತಲಾದರು ಗೊತ್ತಾಗಬಹುದು. " ಎಂದು ತಣ್ಣಗೆ ನುಡಿದಾಗ ಅವಳ ಅತ್ತೆಯ ಮೈ ಮೇಲೆ ಕಾದ ಬಿಸಿ ನೀರು ಹೊಯ್ದ ಹಾಗಾಯಿತು.


ಸೀತಾ ಮಾತು ಶುರು ಮಾಡಿದ್ದಳು. "ಅತ್ತೆ, ಮಾವ ಮತ್ತೆ ನೀವು ಎಲ್ಲರೂ ಸರಿಯಾಗಿ ಕೇಳಿಸಿಕೊಳ್ಳಿ. ಮನೆಹಾಳಿ ಅಂತಾ ಅಂದಿರಲ್ಲ.. ನನ್ನ ನೆಮ್ಮದಿ ಹಾಗೂ ನನ್ನ ಗಂಡನ ಒಳಿತಿಗಾಗಿ ನಾನು ಹಾಗೆಯೇ ಇರುವುದು.


ನಿಮ್ಮ ಕೋಟಿ ರೂಪಾಯಿ ಆಸ್ತಿ ಇದ್ದರೆ ಹೋಗಿ ಅಲ್ಲಿ ಮಾತನಾಡಿ. ಇದು ನನ್ನ ನೆಲ , ನನ್ನ ಮನೆ. ಇಲ್ಲಿ ನಾನು ಹೇಳಿದ ಹಾಗೆಯೇ ಕೇಳಬೇಕು. ನನ್ನ ಗಂಡನ ಸಂಬಳದ ಹಣವನ್ನೆಲ್ಲಾ ನಿಮ್ಮ ಆಸ್ತಿ ವೃದ್ಧಿಸಿಕೊಳ್ಳುವುದಕ್ಕೆ , ನಿಮ್ಮ ಮತ್ತೊಬ್ಬ ಮಗನ ಸಂಸಾರ ನೆಟ್ಟಗೆ ಮಾಡುವುದಕ್ಕೆ ಬಳಸಿ ಬಿಡಿಗಾಸು ಸಹಾ ಇಲ್ಲದಂತೆ ಕಿತ್ತುಕೊಂಡು ನಾಯಿ ಸಾಕಿದ ಹಾಗೆ.. ಬೇಕಾದಷ್ಟೇ ಊಟ ಕೊಡುತ್ತಾ ಇದ್ದಾಗ ಅದು ನಿಮಗೆ ಅನ್ಯಾಯ ಅಂತಾ ಅನ್ನಿಸಲಿಲ್ಲವಾ..


ಕೊನೆಗೆ ಇವರು ನನ್ನನ್ನು ಮದುವೆ ಮಾಡಿಕೊಂಡು ಬಂದಾಗ ಮನೆಗೂ ಸೇರಿಸದೆ ಉಟ್ಟ ಬಟ್ಟೆಯಲ್ಲೇ, ನಿಂತ ನೆಲೆಯಿಲ್ಲದ ಹಾಕಿ ಬೀದಿಗೆ ತಳ್ಳಿದ್ದಿರಿ. ಅಲ್ಲವಾ..?? ಆಗ ಅದು ನಿಮಗೆ ಅನ್ಯಾಯ ಅನ್ನಿಸಿರಲಿಲ್ಲ.


ಈಗ ಮತ್ತೊಬ್ಬ ಮಗ ನಿಮ್ಮ ಹತ್ತಿರ ಎಲ್ಲವನ್ನೂ ಕಿತ್ತುಕೊಂಡು ಕಳುಹಿಸಿರುವಾಗ ನಾವು ಕರೆದುಕೊಂಡು ಬಂದು ಆಶ್ರಯ ಕೊಟ್ಟೆವು. ಆದರೆ, ನೀವು ಮಾಡಿದ್ದೇನು ? ಈಗಲಾದರೂ ನನ್ನನ್ನು ಮತ್ತು ಇವರನ್ನು ಕಾಡಿಸಿದ್ದೇ ಆಯಿತು. ನಾನು ಹೊರಗಡೆ ಹೋಗಿ ಅಷ್ಟೆಲ್ಲಾ ದುಡಿದುಕೊಂಡು ಬಂದರೂ ಮನೆಯಲ್ಲಿ ಕೂತು ತಿಂದಿರಿ. ಕೇಳಿ ಕೇಳಿದ್ದನ್ನು ಮಾಡಿ ಹಾಕಿದೆ. ಮರ್ಯಾದೆ ನೀಡಿದೆ. ಆದರೆ, ನೀವುಗಳು ಹಂಗಿಸುವುದನ್ನು ಹಾಗೂ ಬೈಯ್ಯುವುದನ್ನು ಬಿಡಲೇ ಇಲ್ಲವಲ್ಲ. ನೆನ್ನೆಯಂತೂ ಅದು ಇನ್ನೂ ವಿಪರೀತಕ್ಕೆ ಹೋಯಿತಲ್ಲ. ಊಟಕ್ಕೆ ಉಪ್ಪು ಕಡಿಮೆ ಇತ್ತು. ಉಪ್ಪು ಹಾಕಿಕೊಂಡು ಊಟ ಮಾಡಬಹುದಾಗಿತ್ತು. ಅಲ್ಲವಾ..??


ನೀವು ಮಾಡಿದ್ದೇನು ? ನನ್ನ ವಂಶಾವಳಿಯನ್ನೇ ಜಾಲಾಡಿದಿರಿ. ನಾನು ಮನಸ್ಸು ಮಾಡಿದ್ದರೆ ನೆನ್ನೆಯೇ ರಾತ್ರಿಯೇ ಮನೆಯಿಂದ ಹೊರಗೆ ಓಡಿಸುತ್ತಿದ್ದೆ. ಬೆಳಗಿನವರೆಗೂ ಇರಲಿ.. ವಯಸ್ಸಾದವರು ಎಂದು ಬಿಟ್ಟಿದ್ದೆ. ಅಷ್ಟೇ..


ಈಗಲೂ ನಿಮಗೆ ಈ ಮನೆ ಅಧಿಕಾರ, ಮಗನ ಹಣ, ಸೊಸೆಯ ಬಾಗುವಿಕೆ ಅಷ್ಟೇ ಬೇಕಾಗಿರುವುದು. ಅಲ್ಲವಾ..?? ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ.


ಇಲ್ಲೇ ಹತ್ತಿರದಲ್ಲಿ ಒಂದು ಮನೆ ಮಾಡಿದ್ದೇನೆ. ನೀವಿಬ್ಬರೂ ಅಲ್ಲೇ ಇರಿ. ಇವರ ಅಪ್ಪ- ಅಮ್ಮ ಅನ್ನುವ ಒಂದೇ ಕಾರಣಕ್ಕೆ ಬಾಡಿಗೆ ಕಟ್ಟಿ, ಸಾಮಾನು ತಂದು ಹಾಕುತ್ತೇನೆ. ಇವರು ಆಗಾಗ ಬಂದು ವಿಚಾರಿಸುತ್ತಾರೆ. ಅದಕ್ಕಿಂತ ಹೆಚ್ಚಿನ ಹಣ ಬೇಕಾದಲ್ಲಿ ನಿಮ್ಮ ಕೋಟ್ಯಾಂತರ ರೂಪಾಯಿ ಆಸ್ತಿಯಿಂದ ನೀವೇ ಉಪಯೋಗಿಸಿಕೊಳ್ಳಿ.


ಒಂದು ವಿಷಯ ನೆನಪಿಟ್ಟುಕೊಳ್ಳಿ. ಆಗ ರಾಮ ವಿಧೇಯನಾಗಿದ್ದ. ಸೀತೆ ಮುಗ್ಧೆಯಾಗಿದ್ದಳು.


ಆದರೆ, ಈಗ ರಾಮ ವಿಧೇಯ. ಆದರೆ, ಈ ಸೀತಾ ದಡ್ಡಿಯಲ್ಲ. ಕಣ್ಣು ಮುಚ್ಚಿ ಎಲ್ಲರನ್ನು ನಂಬುವುದೂ ಇಲ್ಲ. ಅಹಂಕಾರ, ಅಧಿಕಾರಕ್ಕೆ ಬಾಗುವುದೂ ಇಲ್ಲ. " ಎಂದು ನುಡಿದು ಒಳ ಹೋದಳು.


ಸೊಸೆಯನ್ನು ಮನೆಯ ಅಡಿಯಾಳಾಗಿರಿಸಿ ವೈಭವದಿಂದ ಮೆರೆಯಲು ಹವಣಿಸಿದ್ದ ಅತ್ತೆ - ಮಾವ ಈಗ ಇಂಗು ತಿಂದ ಮಂಗನಂತಾಗಿದ್ದರು.


ರಾಮ್ ಅಷ್ಟರವರೆಗೂ ಸುಮ್ಮನಿದ್ದವನು ಈಗ ಮಾತನಾಡಿದ್ದ. "ಎಲ್ಲಾ ಅಂತ್ಯವೂ ನೀವೆಂದುಕೊಂಡ ಹಾಗೆಯೇ ಇರುವುದಿಲ್ಲ. ಅಂತ್ಯಗಳು ಬದಲಾಗುತ್ತವೆ. ನಿಮಗಿಂತ ಬುದ್ಧಿವಂತರು ಕೊಡುವ ಅಂತ್ಯ ಬುದ್ಧಿವಂತಿಕೆಯಿಂದಲೇ ಇರಬೇಕಲ್ಲವಾ.." ಎಂದವನೇ ಒಳ ನಡೆದ.


~ವಿಭಾ ವಿಶ್ವನಾಥ್

ಬಡವರಾದರೆ ಏನು ಪ್ರಿಯೆ


 "ನಿನ್ನ ಮನೆಯಲ್ಲಿ ಅಷ್ಟೆಲ್ಲಾ ಇದ್ದರೂ ನೀನು ನನಗಾಗಿ, ನಮ್ಮ ಪ್ರೀತಿಗಾಗಿ ಎಷ್ಟೆಲ್ಲಾ ಮಾಡಿದೆ ಹೃದಯ್. ನೀನು ನಿನ್ನ ಅಪ್ಪ - ಅಮ್ಮ, ಆಸ್ತಿ - ಪಾಸ್ತಿ ಎಲ್ಲವನ್ನೂ ಬಿಟ್ಟು ಬಂದೆಯಲ್ಲಾ.. ಯೂ ಆರ್ ಗ್ರೇಟ್. ರಿಯಲಿ ಗ್ರೇಟ್" ಎಂದವಳನ್ನು ತೋಳಲ್ಲಿ ಬಳಸುತ್ತಾ


"ಬದುಕಲ್ಲಿ ಒಂದು ಮೌಲ್ಯಯುತವಾದದ್ದನ್ನು ಪಡೆದುಕೊಳ್ಳಬೇಕಿದ್ದರೆ ಮತ್ತೊಂದನ್ನು ಕಳೆದುಕೊಳ್ಳಬೇಕಂತೆ. ನೋಡು, ಆ ಆಸ್ತಿ ನನಗೆ ಸಿಗದಿರಬಹುದು. ಅದೇನೂ ನನ್ನ ಕಷ್ಟಾರ್ಜಿತವಲ್ಲ. ನೀನು ನನ್ನ ಅಮೂಲ್ಯ ಆಸ್ತಿ ಕಣೇ ಮಾ.


ಎಷ್ಟೋ ಜನ ಹುಡುಗಿಯರು ಪ್ರೀತಿಯನ್ನು ನಿವೇದಿಸಿಕೊಂಡರು. ಆದರೆ, ಅವರೆಲ್ಲರಿಗೂ ನಾನು ನಾನಾಗಿ ಇಷ್ಟವಾಗಲಿಲ್ಲ. ಅವರು ನನ್ನನ್ನು ಪ್ರೀತಿಸಲಿಲ್ಲ. ಅವರು ಪ್ರೀತಿಸಿದ್ದು ನನ್ನ ಆಸ್ತಿಯನ್ನು ಕಂಡು. ಅವರು ನನ್ನ ಆಸ್ತಿಯನ್ನು ಪ್ರೀತಿಸಿದರು ಅಷ್ಟೇ.. ಆಸ್ತಿಯನ್ನು ಬಿಟ್ಟು ಬಂದರೆ ಓಡಿ ಹೋಗಿ ಮದುವೆಯಾಗೋಣ ಎಂದರೆ ಹೆದರಿ ಓಡುತ್ತಿದ್ದರು. ಆದರೆ, ನೀನು ನೀನಾಗಿ ಬಂದು ನನ್ನನ್ನು ಪ್ರೀತಿಸಲಿಲ್ಲ. ನಾನೇ ಬಂದು ನಿನಗೆ ಮನಸೋತ ವಿಚಾರ ತಿಳಿಸಿದಾಗ ನಮ್ಮ ಶ್ರೀಮಂತಿಕೆ ಕಂಡು ನಿರಾಕರಿಸಿದ್ದೆಯಲ್ಲ. ಆಗಲೇ ಅನ್ನಿಸಿತ್ತು ನೀನೇ ನನ್ನ ಜೋಡಿ ಎಂದು. ಆಸ್ತಿ ಇವತ್ತು ಇರುತ್ತದೆ. ನಾಳೆ ಹೋಗುತ್ತದೆ. ಆದರೆ, ಪ್ರೀತಿ ಯಾವಾಗಲೂ ಇರಬೇಕು. ಅಲ್ಲವಾ..??


ಇನ್ನೊಂದು ವಿಚಾರ ಶಿವಾನಿ.. ನೀನು ನನ್ನನ್ನು ಮದುವೆಯಾಗಿದ್ದರೆ ನೀನು ನಿನ್ನ ತಂದೆ ತಾಯಿಯನ್ನು ಬಿಟ್ಟು ನನ್ನ ಬಳಿ ಬರಬೇಕಿತ್ತು. ಅಲ್ಲವಾ..?? ಐ ಮೀನ್ ಮದುವೆಯಾದ ನಂತರ ಹೆಣ್ಣು ಮಕ್ಕಳು ತವರನ್ನು ತೊರೆದು ಗಂಡನ ಬಳಿಗೆ ಬರುತ್ತಾರೆ. ಇಲ್ಲಿ ಸ್ವಲ್ಪ ಬದಲಾವಣೆ ಆಗಿದೆ. ಅಷ್ಟೇ.. ಹಿಂದೆ ದಕ್ಷಿಣ ಕನ್ನಡದಲ್ಲಿ ಅಳಿಯ ಬಂದು ಅತ್ತೆಯ ಮನೆಯಲ್ಲಿ ಇರುವ ಪರಿಸ್ಥಿತಿ ಇತ್ತಂತೆ. ಇದೂ ಹಾಗೆಯೇ ಅಂದುಕೊಂಡರೆ ಆಯ್ತು.




ಇನ್ ಫ್ಯಾಕ್ಟ್.. ನನ್ನಿಂದ ನಿನ್ನ ಕೆಲಸ ಹೋಯ್ತು. ನನ್ನನ್ನು ಮದುವೆಯಾದೆ ಅಂತಾ ನನ್ನ ತಂದೆ ಫ್ಯಾಕ್ಟರಿಯಿಂದ ನಿನ್ನನ್ನು ತೆಗೆದು ಹಾಕಿದ್ದಾರೆ. ಅಲ್ಲದೆ, ನೀನು ಮದುವೆಯಾಗಿದ್ದರೆ ಇಂದಿನ ಈ ಪರಿಸ್ಥಿತಿಯಿಂದ ಸ್ವಲ್ಪ ಸುಖವಾಗಿರುತ್ತಿದ್ದೆ. ನಿನ್ನ ತಂದೆ-ತಾಯಿಗೂ ಕಷ್ಟ ಇರುತ್ತಿರಲಿಲ್ಲ. ಅಲ್ಲವಾ ? "ಎಂದಾಗ ಶಿವಾನಿ


"ಕಷ್ಟ ಯಾರಿಗೆ ಇರುವುದಿಲ್ಲ ಹೇಳಿ. ನಿಮ್ಮ ಕಷ್ಟ, ನೋವನ್ನು ಮರೆಮಾಚಿ ನನ್ನನ್ನು ನಮ್ಮ ಮನೆಯವರನ್ನು ಇಷ್ಟು ಚೆಂದ ನೋಡಿಕೊಳ್ಳುತ್ತಿದ್ದೀರಿ.


ನೀವು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದ್ದವರು. ಈಗ ಬೀದಿ ಬದಿಯ ಅಂಗಡಿಯಲ್ಲಿ ತಟ್ಟೆ ತೊಳೆಯುತ್ತೀರಿ. ರಸ್ತೆ ಬದಿಯಲ್ಲಿ ಪೇಪರ್ ಮಾರುತ್ತೀರಿ. ದಿನಗೂಲಿಯನ್ನು ಸಹಾ ಮಾಡುತ್ತೀರಿ. ನಿಮಗೆ ಓದು, ಯೋಗ್ಯತೆ ಎಲ್ಲವೂ ಇದ್ದರೂ ನಿಮ್ಮಪ್ಪನ ಹಠ ಮತ್ತು ದ್ವೇಷದಿಂದ ನಿಮಗೊಂದು ಸರಿಯಾದ ಕೆಲಸವೂ ಇಲ್ಲ. ಜೊತೆಗೆ ನಮ್ಮನ್ನೆಲ್ಲಾ ನೋಡಿಕೊಳ್ಳಬೇಕು" ಎಂದಾಗ


"ನೋಡು ಶಿವಾನಿ..

ಶ್ರೀಮಂತ ಆಗಿದ್ದಾಗ ನನಗೊಂದು ಆಸೆ ಇತ್ತು. ಹೀಗೆ, ಬೀದಿ ಬದಿ ಹೋಟೆಲ್ ಅಲ್ಲಿ ತಿನ್ನಬೇಕು. ಚಹಾ ಕುಡಿಯಬೇಕು. ದುಡಿದು ಬಂದು ನೆಮ್ಮದಿಯ ನಿದ್ದೆ ಮಾಡಬೇಕು. ಮನೆಯಲ್ಲಿ ಕಾಯುವ ಹೆಂಡತಿಯನ್ನು ಸಾಧ್ಯವಾದಷ್ಟು ಪ್ರೀತಿ ಮಾಡಬೇಕು ಅಂತಾ.


ನಿಜಕ್ಕೂ ಮೊದಲಿದ್ದ ಜೀವನದಲ್ಲಿ ಅದು ಯಾವುದು ಸಹಾ ಸಾಧ್ಯವಾಗುತ್ತಾ ಇರಲಿಲ್ಲ. ಈಗ ನೋಡು.. ಎಲ್ಲವೂ ಸಾಧ್ಯ.


ಯಾಕೋ ಬೇಂದ್ರೆಯವರು ಹೇಳಿದ್ದು ನೆನಪಾಗುತ್ತಿದೆ ನೋಡು


ಬಡವನಾದರೆ ಏನು ಪ್ರಿಯೆ

ಕೈ ತುತ್ತು ತಿನಿಸುವೆ

ಎದೆಯ ತುಂಬಾ ಒತ್ತಿಕೊಂಡು

ಮುತ್ತು ಮಳೆಯಾ ಸುರಿಸುವೆ  "


ಎನ್ನುತ್ತಾ ಹಾಡತೊಡಗಿದ್ದನು ಹೃದಯ್. ಅವನ ಅಪ್ಪುಗೆಯ ಸುಖದಲ್ಲಿ ಮೈಮರೆತು ತನ್ನನ್ನು ತಾನೇ ಕಳೆದುಕೊಂಡಿದ್ದಳು ಶಿವಾನಿ. ಬಡತನದಲ್ಲಿಯೂ ಸುಖವಿದೆ ಎಂಬುದನ್ನು ಇಬ್ಬರೂ ಒಪ್ಪಿ ಅಪ್ಪಿ ನಡೆಯುತ್ತಿದ್ದರು


~ವಿಭಾ ವಿಶ್ವನಾಥ್

ರಾಜ ಕಲಾವಿದ ರವಿವರ್ಮ (ಪುಸ್ತಕ ಯಾನ - 487)


ಪುಸ್ತಕದ ಶೀರ್ಷಿಕೆ : ರಾಜ ಕಲಾವಿದ ರವಿವರ್ಮ

ಲೇಖಕರು : ಡಾ. ಗೀತಾ ಸೀತಾರಾಮ್

ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಷನ್ಸ್

ಪ್ರಥಮ ಮುದ್ರಣ : 2022

ಪುಟಗಳು : 152

ಬೆಲೆ : 200 ರೂ.


ರಾಜಾ ರವಿವರ್ಮರ ಚಿತ್ರವೆಂದು ತಿಳುವಳಿಕೆಯಿಲ್ಲದ ಹಲವಾರು ಜನ ಅವರ ಕಲೆಯನ್ನು ಮೆಚ್ಚಿ ಆರಾಧಿಸುತ್ತಿದ್ದಾರೆ. ಮೈಸೂರು ಅರಸರ ಆಶ್ರಯದಲ್ಲಿಯೂ ಇವರ ಕಲೆ ಪ್ರವರ್ಧಮಾನಕ್ಕೆ ಬಂದದ್ದನ್ನು ನೋಡಬಹುದು. ಇವರ ಚಿತ್ರಗಳು ಮೈಸೂರಿನ ಅರಮನೆಯಲ್ಲಿ ಹಾಗೂ ಜಗನ್ಮೋಹನ ಆರ್ಟ್ ಗ್ಯಾಲರಿಯಲ್ಲಿವೆ. ಈ ಕಾದಂಬರಿಯ ಕೊನೆಯಲ್ಲಿ 40 ವರ್ಣ ಚಿತ್ರಗಳು ಮನಸೆಳೆಯುವಂತಿವೆ. ಈ ಕಾದಂಬರಿ ಸುಧಾದಲ್ಲಿ ಪ್ರಕಟವಾಗಿತ್ತು.


ಚಿತ್ರಕಲೆಯನ್ನೇ ತನ್ನ ಉಸಿರಾಗಿಸಿಕೊಂಡ ರವಿವರ್ಮರು ಕೇರಳ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಬದುಕಿದರೂ.. ಹುಟ್ಟಿದ್ದು ಕೇರಳದ ಕಿಳಿಮಾನೂರಿನಲ್ಲಿ. ಒಡೆಯರಾದ ರಾಜರಾಜವರ್ಮರಿಗೆ ಮನೆಯಾಳು ಪಾಚನ್ ಹೆದರುತ್ತಲೇ ಮನೆತನದ ಗುಡಿಯ ಗೋಡೆಗಳು, ಮನೆಯೊಳಗಿನ ಬಿಳಿ ಗೋಡೆಗಳ ಮೇಲೆ ಬರೆಯಲಾಗಿದ್ದ ಇದ್ದಲಿನ ಚಿತ್ರಗಳನ್ನು ತೋರಿಸುವುದರಿಂದ ಕಾದಂಬರಿ ಆರಂಭವಾಗುತ್ತದೆ. 


ಆ ಘಟನೆ ನಡೆದಾಗ ರವಿಗಿನ್ನೂ ಏಳು ವರ್ಷ. ಅವರ ಸೋದರಮಾವ ರಾಜರಾಜವರ್ಮರು ಅಳಗಿರಿ ನಾಯ್ಡು ಆಸ್ಥಾನದಲ್ಲಿ ನೀರಿನ ಬಣ್ಣಗಳ ಚಿತ್ರಕಲೆಯನ್ನು ಅಭ್ಯಸಿಸಿದ್ದರು. ವಂಶಪಾರಂಪರ್ಯವಾಗಿ ಅದು ರವಿಗೂ ಬಂದಿರಬಹುದು. ರವಿಯ ತಾಯಿ ಉಮಾಂಬ ನೃತ್ಯ ಹಾಗೂ ಚಿತ್ರ ಕಲಾವಿದೆ, ತಂದೆ ಏಳುಮಾವಿಲ್ ಸಂಸ್ಕೃತ ಪಂಡಿತರು.


ಎಲ್ಲರೂ ರಾಜರಾಜವರ್ಮರ ಕೋಪಕ್ಕೆ ಹೆದರಿದ್ದರು. ಆದರೆ, ವ್ಯತಿರಿಕ್ತವೆಂಬಂತೆ ಅವರು ರವಿಯ ಪ್ರತಿಭೆಯನ್ನು ಗುರುತಿಸಿ, ಪರಿಷ್ಕರಿಸಿ, ಉತ್ತೇಜಿಸಿದರು. ರವಿಗೆ ಮಾವನ ಚಿತ್ರಕಲಾ ಕೊಠಡಿಗೆ ಪ್ರವೇಶ ದೊರೆಯಿತು.


ಅಳಿಲಿನ ಬಾಲದಿಂದ ತಯಾರಿಸಿದ ಅನೇಕ ರೀತಿಯ ಕುಂಚಗಳು, ಮಣ್ಣಿನ ಕುಡಿಕೆಯಲ್ಲಿನ ಬಣ್ಣಗಳು, ಮಾವನ ಹಳೆಯ ಕ್ಯಾನ್ವಾಸ್ಗಳು ಆತನದ್ದಾಯಿತು. 

"ಪ್ರತಿಯೊಬ್ಬ ಚಿತ್ರಕಾರನು ತನ್ನದೇ ಬಣ್ಣಗಳನ್ನು ಸೃಷ್ಟಿಸಬೇಕು ಅವನಿಗೆ ಕಣ್ಣುಗಳಿದ್ದರೆ ಮಾತ್ರ ಸಾಲದು. ಅಂತರ್ ದೃಷ್ಟಿ ಇರಬೇಕು ನೋಡಿದ್ದು ಗ್ರಹಿಸುವ ಶಕ್ತಿ ಇರಬೇಕು" ಎನ್ನುವ ಮಾವನ ಮಾತಿನ ಜೊತೆಗೆ ಬಣ್ಣಗಳನ್ನು ಎಲೆ, ಹೂವು, ಬೇರು, ಮಣ್ಣು ಮತ್ತು ರಾಸಾಯನಿಕ ವಸ್ತುಗಳಿಂದ ತಯಾರಿಸುವ ಪ್ರಾಥಮಿಕ ಪಾಠದಲ್ಲಿ ನಾಲ್ಕು ವರ್ಷಗಳ ಅಭ್ಯಾಸವಾಯಿತು.


ಅಧಿಕೃತವಾಗಿ ರವಿವರ್ಮ ಚಿತ್ರಿಸಿದ ಮೊದಲ ಚಿತ್ರ ಯಾವುದು ಗೊತ್ತೇ..?!

ಕೇಸರಿ ಬಣ್ಣದ ಎಲೆ.


ಆತನ ಪ್ರತಿಭೆಗೆ ಮತ್ತಷ್ಟು ಮೆರುಗು ನೀಡಲು ಎಲ್ಲರನ್ನೊಪ್ಪಿಸಿ ರಾಜರಾಜವರ್ಮರು ತನ್ನ ಪ್ರೀತಿಯ ಕೊಚ್ಚ್(ಕಂದಾ)ನನ್ನು ತಿರುವನಂತಪುರದ ಮಹಾರಾಜ ಆಯಿಲ್ಯ ತಿರುನಾಳರ ಆಶ್ರಯಕ್ಕೆ ಬಿಡುತ್ತಾರೆ. ಇವರು ರವಿವರ್ಮರ ಚಿತ್ರಕಲಾ ಹಾಗೂ ವೈಯಕ್ತಿಕ ಬದುಕಿನಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ.


ಮೊದಲಿಗೆ ಆತನನ್ನು ಮದುವೆಯ ಪ್ರಸ್ತಾಪಕ್ಕೆಂದು ಭಾವಿಸಿದ್ದರಾದರೂ.. ಕಲೆಯ ವಿಚಾರ ತಿಳಿದು, ಅವನ ಮೂರು ವರ್ಣಚಿತ್ರಗಳನ್ನು ನೋಡಿ ಆಸ್ಥಾನ ಚಿತ್ರಕಾರರಾದ ರಾಮಸ್ವಾಮಿ ನಾಯಕರ್ ರಿಂದ ಪಾಠ ಹೇಳಿಸಲು ಒಪ್ಪುತ್ತಾರೆ. 


ರಾಮಸ್ವಾಮಿ ನಾಯಕರ್ ಪಾಠವನ್ನು ಆರಂಭಿಸಿದರಾದರೂ.. ಬಣ್ಣವನ್ನು ಕಲಸುವಾಗ ಕೋಣೆಯೊಳಗೆ ಬಿಡುತ್ತಿರಲಿಲ್ಲ. ಆದರೆ, ರವಿವರ್ಮ ತಾನೇ ಮಿಶ್ರ ಮಾಡಿದ ಬಣ್ಣಗಳನ್ನು ತೆಗೆದುಕೊಂಡು ಹೋದಾಗ ಅವರಿಗೆ ಸಿಟ್ಟು ಬಂದು ಪ್ಯಾಲೆಟ್ ಅನ್ನು ಎಸೆದು ರಾದ್ದಾಂತವಾದಾಗ.. ಅದು ಶಮನವಾದುದೇಗೆ..?


ಪಾಶ್ಚಾತ್ಯ ಕಲಾವಿದರಾದ ಬ್ರೂಕ್ಸ್ ಅವರನ್ನು ನೇಮಿಸಲು ಮಹಾರಾಜರು ಒಪ್ಪುತ್ತಾರಾದರೂ.. ಆತನೇ ಇವರಿಗೆ ಪಾಠ ಹೇಳಲು ಒಪ್ಪುವುದಿಲ್ಲ ಮದರಾಸಿನಿಂದ ತೈಲವರ್ಣಗಳನ್ನು ತರಿಸಿಕೊಡುತ್ತಾರೆ. 15-16 ವಯೋಮಾನದಲ್ಲಿದ್ದಾಗ ಬ್ರೂಕ್ಸ್ ಬಣ್ಣ ಮಿಶ್ರ ಮಾಡುವುದನ್ನು ಗಮನಿಸುತ್ತಿರುತ್ತಾರೆ. ಆತನಿಗೆ ಅದು ತಿಳಿದು ಕೋಣೆಗೆ ಅನುಮತಿಸುವುದಿಲ್ಲ. ಗ್ರಂಥಾಲಯದ ಸಹಾಯದಿಂದಲೇ ಚಿತ್ರಕಲೆ ಅಭ್ಯಾಸಿಸಿ ರಾಜಮಾತೆಯ ಚಿತ್ರವನ್ನು ಅವರದ್ದೇ ತದ್ರೂಪಿನಂತೆ ಬರೆದು ಎಲ್ಲರ ಮನ ಸೆಳೆದರು.


ಕಲೆಗೆ ಮೆಚ್ಚಿ ಮಹಾರಾಣಿಯ ತಂಗಿ ಪುರತಾರ್ಥಿಯೊಡನೆ ವಿವಾಹವಾಗುತ್ತದೆ. ಮಾತೃಪ್ರಧಾನ ಸಮಾಜದ ನಡೆಯಂತೆ ಪತ್ನಿಯ ಊರು ಮಾನೆಲ್ಲಿಕರಾಗೆ ಹೋಗಿ ನೆಲೆಸಬೇಕಾಗುತ್ತದೆ. ಪತ್ನಿಯಿಂದ ಕಲೆಗೆ ಯಾವ ರೀತಿಯ ಪ್ರೋತ್ಸಾಹ ಸಿಗುತ್ತದೆ ಹಾಗೂ ಅವರ ಸಾಂಸಾರಿಕ ಬದುಕು ಹೇಗಿತ್ತು ಓದಿ ನೋಡಿ.


ರವಿವರ್ಮ ನಾಯರ್ ಸ್ತ್ರೀ ಕಾಮಿನಿ ಅನ್ನು ರೂಪದರ್ಶಿಯನ್ನಾಗಿಸಿಕೊಂಡು ಬರೆದ ಚಿತ್ರ ಸಾಕಷ್ಟು ಪ್ರಶಂಸೆ, ಬಹುಮಾನಗಳಿಗೆ ಪಾತ್ರವಾಗುತ್ತದಾದರೂ.. ತನ್ನವರಿಂದ ದೂರಾಗಿಸುತ್ತದೇಕೆ..?


ರವಿವರ್ಮನಷ್ಟೇ ಅವರ ತಂಗಿ ಮಂಗಳ ಸಹ ಪ್ರತಿಭಾವಂತ ಳು. ನೈಜವೆಂಬಂತ ಸುಂದರ ಪುಷ್ಪವೊಂದನ್ನು ರವಿವರ್ಮ ಚಿತ್ರಿಸಿರುತ್ತಾರೆ. ಊಟಕ್ಕೆ ಕರೆಯಲು ಬಂದ ಮಂಗಳ ಅದನ್ನು ನೋಡಿ ತನ್ಮಯಳಾಗುತ್ತಾಳೆ. ಊಟ ಮುಗಿಸಿ ಬರುವಷ್ಟರಲ್ಲಿ ಚಿತ್ರದ ಮೇಲಿದ್ದ ದುಂಬಿಯನ್ನು ಓಡಿಸಲು ಹೋದವರು ಬೇಸ್ತು ಬೀಳುತ್ತಾರೆ. ಏಕೆಂದರೆ, ಅದು ಮಂಗಳ ಚಿತ್ರಿಸಿದ್ದು. ಇದು ಇಬ್ಬರ ಕಲಾ ಪ್ರತಿಭೆಗೂ ಸಾಕ್ಷಿಯಾಗಿದೆ.


"ರಾಜಕುಮಾರ ರಾಜ ಮನೆತನದಲ್ಲಿ ಹುಟ್ಟುವುದರಿಂದ ರಾಜನಾಗಬಲ್ಲ. ಆದರೆ, ಜನರ ಮನಸ್ಸನ್ನು ಗೆದ್ದು ರಾಜಕಲಾವಿದನಾಗುವುದು ಸಣ್ಣ ಮಾತಲ್ಲ." ಎನ್ನುವ ಮಾವನ ಮಾತು ರವಿವರ್ಮನ ಮನಸ್ಸಿನಲ್ಲಿ ಅಚ್ಚಳಿಯದಂತಿತ್ತು. ಮುಂದೆ ಆಯಿಲ್ಯ ತಿರುನಾಳರಿಂದ 'ರಾಜ ರವಿವರ್ಮ' ಎಂಬ ಬಿರುದು ದೊರೆಯುತ್ತದೆ. ಗೌರವ ಬಿರುದು ದಯಪಾಲಿಸಲೆಂದೇ ದರ್ಬಾರ್ ಏರ್ಪಡಿಸಲಾಗಿರುತ್ತದೆ. 

ಮುಂದೆ ಅವರ ತಮ್ಮ ವಿಶಾಖಂ ತಿರುನಾಳ್ ರಾಜರಾದಾಗ ಬಿರುದನ್ನು ಹಿಂಪಡೆಯಲಾಗುತ್ತದೆ. ಮತ್ತೆ ಮುಂದಿನ ರಾಜರಾದ ಗುಲಂತಿರುನಾಳ್ ರು ಗೌರವದಿಂದ ಅದೇ ಬಿರುದನ್ನು ಹಿಂತಿರುಗಿಸುತ್ತಾರೆ.


"ಬಣ್ಣಗಳನ್ನು, ಕುಂಚಗಳನ್ನು ಹಿಡಿದು ಬಿಟ್ಟರೆ ಶ್ರೇಷ್ಠ ಕಲಾವಿದನಾಗುವುದಿಲ್ಲ. ಭಗವಂತನೆಂಬ ದೊಡ್ಡ ಚಿತ್ರ ಕಲಾವಿದ ಪ್ರತಿ ಹೃದಯದಲ್ಲಿಯೂ ದೈವತ್ವವನ್ನು ತುಂಬುತ್ತಾನೆ. ಅದನ್ನು ಕೆಲವರು ಮಾತ್ರ ಕಂಡುಕೊಳ್ಳುತ್ತಾರೆ." ಎನ್ನುವ ಮಾವನ ಮಾತು ಸತ್ಯ. ಅದರಲ್ಲಿ ರವಿವರ್ಮ ಮುಂಚೂಣಿಯಲ್ಲಿದ್ದರು.


ತಮ್ಮ ಚಿತ್ರಕಲೆಯ ಸ್ಪೂರ್ತಿಗಾಗಿ ದೇವಾಲಯದ ಶಿಲ್ಪ ಸೌಂದರ್ಯ, ನೈಜ ಸೌಂದರ್ಯವನ್ನು ಅರಸುತ್ತಾ ನೃತ್ಯ ಹಾಗೂ ಸಂಗೀತ ಕಚೇರಿಗೆ ಹೋಗುವುದನ್ನು ಇಲ್ಲಿ ಗಮನಿಸಬಹುದು.


ಮದರಾಸಿನಲ್ಲಿ ದಿವಾನ್ ರಘುರಾಯರಿಂದ ಏರ್ಪಾಡಾದ ಚಿತ್ರ ಪ್ರದರ್ಶನಕ್ಕೆ ಹೋದಾಗ ಪಾಶ್ಚಾತ್ಯರ ಬಣ್ಣದ ಛಾಯೆಗಳನ್ನು ಗಮನಿಸುವುದನ್ನು ಇಲ್ಲಿ ಹೇಳಿದ್ದಾರೆ.

ಕಂದು ಬಣ್ಣವೆಂದರೆ ಬ್ರೌನ್, ಟೊಬಾಕೊ ಬ್ರೌನ್, ಮಮ್ಮಿ ಬ್ರೌನ್ ಹೀಗೆ.. ಬಣ್ಣದ ಹಲವಾರು ಶೇಡ್ ಗಳ ಕುರಿತು ತಿಳಿಯುತ್ತಾರೆ. ಅಲ್ಲಿ ಹೆಚ್ಚು ಕಲಿಯುವ ಸಲುವಾಗಿ ಪ್ರವಾಸಕ್ಕೂ ಹೋಗುವುದಿಲ್ಲ. ಹಲವಾರು ಪಾಶ್ಚಾತ್ಯ ಕಲಾವಿದರನ್ನು ಭೇಟಿಯಾದರೂ ಇವರ ಚಿತ್ರವನ್ನು ಹೊಗಳಿದರೇ ವಿನಃ ಅವರ ಚಿತ್ರಕಲೆಯ ಗುಟ್ಟು ಬಿಟ್ಟುಕೊಡುವುದಿಲ್ಲ.


ಶಕುಂತಲೆಯ ಪತ್ರಲೇಖನ ಚಿತ್ರಕ್ಕೆ ಮದರಾಸಿನ ಮತ್ತೊಂದು ಪ್ರದರ್ಶನದಲ್ಲಿ ಪದಕವು ದೊರೆಯುತ್ತದೆ. ಅದಕ್ಕೆ ಅಗತ್ಯವಾಗಿದ್ದ ರೂಪದರ್ಶಿಗಳನ್ನು ಆಯಿಲ್ಯಂ ತಿರುನಾಳರೇ ಒದಗಿಸುತ್ತಿದ್ದರು. 


ರವಿವರ್ಮನ ಚಿತ್ರಕಲೆಯಲ್ಲಿ ಅವರ ತಮ್ಮ ರಾಜವರ್ಮನದ್ದೂ ಪಾಲಿತ್ತು. ಆತನು ಒಳ್ಳೆಯ ಚಿತ್ರಕಾರ. ಹೆಚ್ಚಿನ ಚಿತ್ರಗಳನ್ನು ಎರಡು ಕಾಪಿ ಮಾಡುತ್ತಿದ್ದರು. ರಾಜಕುಟುಂಬದವರ ವರ್ಣಚಿತ್ರಗಳಲ್ಲಿ ಮುಖ್ಯವ್ಯಕ್ತಿಯ ಚಿತ್ರವನ್ನು ರವಿವರ್ಮ ರಚಿಸಿದರೆ ಹಿನ್ನೆಲೆಯ ಬಣ್ಣವನ್ನು ರಾಜವರ್ಮ ತುಂಬುತ್ತಿದ್ದ ಉಲ್ಲೇಖವಿದೆ.


ರವಿವರ್ಮರ ಹೆಚ್ಚಿನ ಚಿತ್ರಗಳಿಗೆ ರೂಪದರ್ಶಿಯಾದ ಸುಗಂಧಳ ಅಧ್ಯಾಯ ಶುರುವಾದದ್ದು ಹೇಗೆ..? 

ಉಷಾಳ ಸ್ವಪ್ನದಲ್ಲಿ ಅನಿರುದ್ಧ ಬರುವ ಚಿತ್ರವನ್ನು ಬರೆಯುವ ಸಂದರ್ಭದಲ್ಲಿ ಹಾಡು ಕೇಳಿ ಸ್ಪೂರ್ತಿಗೊಳ್ಳಲು ತಮ್ಮ ಗೋದವರ್ಮರನ್ನು ವೀಣೆಯೊಂದಿಗೆ ಬರಲು ಹೇಳುತ್ತಾರೆ.


ಬರೋಡಾದ ರಾಜಮನೆತನದ, ಭಾವನಗರ್ ಸಂಸ್ಥಾನದ ರಾಜ ಕುಟುಂಬದ ತೈಲಚಿತ್ರಗಳನ್ನು ರಚಿಸುತ್ತಾರೆ. ಹಲವಾರು ಪುರಾಣ ಪ್ರಸಂಗಗಳ ಪ್ರಸಿದ್ಧ ಚಿತ್ರಣಗಳನ್ನು ರಚಿಸುತ್ತಾರೆ. ಅದಕ್ಕೆ ಸುಗಂಧ ಹಾಗೂ ಆಕೆಯ ತಂಗಿ ಕಮಲ ರೂಪದರ್ಶಿಗಳು.


ಪುರೂರವ ಹಾಗೂ ಊರ್ವಶಿಯರ ಚಿತ್ರಕ್ಕೆ.. ಅರೆನಗ್ನ ಚಿತ್ರದ ರೂಪದರ್ಶಿಯಾಗಿದ್ದು ಸುಗಂಧ.

"ರವಿವರ್ಮರ ಪಾಲಿಗೆ ಜಡವಸ್ತುವಾಗಿದ್ದ ಸುಗಂಧ..!

ಬರಿಯ ಭಾವನೆಗಳಿಲ್ಲದ ರೂಪದರ್ಶಿಯಂತೆ.. ಒಂದು ಹೂವನ್ನು, ಹಣ್ಣನ್ನು ಚಿತ್ರಿಸುವಂತೆ ನನ್ನನ್ನು ಚಿತ್ರಿಸಿದ" ಎನ್ನುವ ಆತನ ನಿರ್ಲಿಪ್ತ ಮನಸ್ಥಿತಿಯನ್ನು ಕಲಾಲೋಕದ ಔನ್ನತ್ಯಕ್ಕೆ ಸಾಕ್ಷಿಯಂತೆ ಕಾಣಬಹುದು.


ಮೈಸೂರಿನ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಆಹ್ವಾನದ ಮೇಲೆ ರಾಜಮನೆತನದವರ ಚಿತ್ರಗಳನ್ನು ಬಿಡಿಸುತ್ತಾರೆ.


"ನಿನ್ನ ಬಣ್ಣದ ತಟ್ಟೆಯ ತುಂಬಾ ಅನೇಕ ಬಣ್ಣಗಳಿವೆ. ಅವೆಲ್ಲ ನೀನೇ ಸೃಷ್ಟಿಸಿರುವ ಬಣ್ಣಗಳು. ಒಬ್ಬ ಕಲಾಕಾರನಿಗೆ ಯಾವ ಬಣ್ಣಗಳನ್ನು ಉಪಯೋಗಿಸಬಾರದು ಎಂದು ತಿಳಿದಿರಬೇಕು. 

ಚಿತ್ರದ ಕಣ್ಗಳಲ್ಲಿ ಜೀವಕಳೆ ಮೂಡಿಸುವುದು ತುಂಬಾ ಕ್ಲಿಷ್ಟ. ಅದರಲ್ಲಿ ನೀನು ಪರಿಣಿತ. ಕಲೆಯನ್ನು ಹಣಕ್ಕಾಗಿ ಮಾರಬೇಡ" ಎಂಬ ಕಿವಿಮಾತನ್ನು ಮಾವ ಹೇಳುತ್ತಾರೆ.


ಮಹಾರಾಜ ಸಯ್ಯಾಜಿ ರಾವ್ ಅವರ ಲಕ್ಷ್ಮಿವಿಲಾಸ ಅರಮನೆಗೆ ಸಂಸ್ಕೃತಿ, ಪುರಾಣ, ಇತಿಹಾಸಗಳ ಕಥೆಯನ್ನು ಬಣ್ಣಿಸುವ ಚಿತ್ರಗಳು ಬೇಕಾದಾಗ ಅವರ ಏಕೈಕ ಹಾಗೂ ಉತ್ಕೃಷ್ಟ ಆಯ್ಕೆಯಾಗಿದ್ದು ರವಿವರ್ಮರೇ. ಇದಕ್ಕಾಗಿ ಅವರು ಉತ್ತರ ಭಾರತದ ಪ್ರವಾಸವನ್ನು ಮಾಡಿ ಬರುತ್ತಾರೆ.


ರವಿವರ್ಮರ ಚಿತ್ರಕಲೆಯ ಹಿರಿಮೆಯ ಕುರಿತು ಹೇಳುತ್ತಾ ಸಾಗಿದಷ್ಟೂ ಇದೆ.


ಮುಂದೆ ಚಿತ್ರಗಳನ್ನು ಮುದ್ರಿಸಲು ನಿರ್ಧರಿಸಿ ಜರ್ಮನಿಯಿಂದ ಮುದ್ರಣ ಯಂತ್ರಗಳನ್ನು ತರಿಸಿ ಕ್ಯಾಲೆಂಡರ್ ಆರ್ಟ್ ಶುರು ಮಾಡುತ್ತಾರೆ. ಆದರೆ ಅಲ್ಲಿಂದ ಬಂದ ಯಂತ್ರಜ್ಞರು ಚಿತ್ರಗಳನ್ನು ಪ್ರಶಂಸಿಸುತ್ತಾರಾದರೂ.. ಮುದ್ರಣದ ದೃಷ್ಟಿಯಿಂದ ಕಡಿಮೆ ಬಣ್ಣಗಳನ್ನು ಉಪಯೋಗಿಸಿ ರಚಿಸುವ ಸಲಹೆ ನೀಡುತ್ತಾರೆ. ಲಿತೋಗ್ರಾಫ್ ತಟ್ಟೆಗಳ ಮೇಲೆ ಅಂತಹ ಚಿತ್ರವನ್ನು ರಚಿಸಿಯೇ ಬಿಡುತ್ತಾರೆ ರವಿವರ್ಮ. ಹಾಗೆ ರಚಿಸಿದ ಮೊದಲ ಚಿತ್ರ ಶಕುಂತಲೆಯ ಜನನ.


ಹಿಂದೂ ದೇವಕೆಗಳ ಚಿತ್ರಗಳನ್ನು ಮನೆಮನೆಗಳಲ್ಲೂ, ಬೀದಿಬೀದಿಗಳಲ್ಲೂ ಹರಡಿ ಪವಿತ್ರತೆಗೆ ಕುಂದು ತಂದಿರುವ ಕುರಿತಾಗಿಯೂ ಹಾಗೂ ಅವರನ್ನು ಅರೆನನ್ನವಾಗಿ ಚಿತ್ರಿಸಿ ಆಗೌರವಿಸಿರುವ ಕುರಿತಾಗಿಯೂ ಕೋರ್ಟ್ ನಿಂದ ಸಮನ್ಸ್ ಬರುತ್ತದೆ. ಅಲ್ಲಿ ವಾದ ಮಾಡಿ ಎಲ್ಲರಿಗೂ ಸ್ಪಷ್ಟನೆ ನೀಡಿ ಮನಸ್ಸು ಹಾಗೂ ಕೇಸ್ ಎರಡನ್ನೂ ಗೆಲ್ಲುವ ರವಿವರ್ಮರ ವಾದದ ವೈಖರಿ ಓದಿಯೇ ತಿಳಿಯಬೇಕು.


ಚಿತ್ರಕಲೆ ಹಾಗೂ ಸಂಗೀತ ಎರಡರಲ್ಲೂ ಸಾಮ್ಯತೆಯಂತೆ ಉದಾಹರಿಸುತ್ತಾರೆ. ಒಂದು ರಾಗದ ಸಂಪೂರ್ಣ ಸ್ವರೂಪಕ್ಕೆ ಆರೋಹಣ ಹಾಗೂ ಅವರೋಹಣ ಮುಖ್ಯವಿರುವಂತೆ.. ಪೂರ್ಣ ಸ್ವರೂಪದ ಚಿತ್ರವನ್ನರಿಯಲು ಒಳಗಣ್ಣು ತೆರೆಯುವ ಪರಿಯನ್ನು ಉದಾಹರಿಸುತ್ತಾರೆ.


ಅಂಜನೀಬಾಯಿ ಎಂಬ ರೂಪದರ್ಶಿಯ ಕುರಿತು ಪ್ರಸ್ತಾಪವಿದೆ.


ಪ್ರಖ್ಯಾತರೊಬ್ಬರು ಇವರಿಗೆ ಹೀಗನ್ನುತ್ತಾರೆ. 

"ಮನುಷ್ಯನಿಗೆ ಸಾವು ಬಂದಂತೆ ನಿನಗೂ ಬಂದು ನೀನು ಸ್ವರ್ಗಕ್ಕೆ ಹೋದರೆ ಅಲ್ಲಿ ರಂಬೆ, ಊರ್ವಶಿ, ಮೇನಕೆ, ತಿಲೋತ್ತಮಯರನ್ನು ನೋಡಿ ನಿನಗೆ ನಿರಾಸೆಯಾಗುವುದು ಖಂಡಿತ. ಏಕೆಂದರೆ, ನೀನು ರಚಿಸಿರುವ ಸ್ತ್ರೀಯರಷ್ಟು ಸುಂದರಿಯಾಗಿರಲು ಸಾಧ್ಯವಿಲ್ಲ"ವೆನ್ನುತ್ತಾರೆ.

ರವಿವರ್ಮರ ಕಲ್ಪನೆ ಹಾಗೂ ಕಲಾ ಸೃಷ್ಟಿಗೆ ಕನ್ನಡಿ ಹಿಡಿದ ಪ್ರಖ್ಯಾತರಾರು ಓದಿ ನೋಡಿ.


ರವಿವರ್ಮರು ತಾವು ಚಿತ್ರರಚನೆ ನಿಲ್ಲಿಸಬೇಕೆಂದು ಸೂಚನೆ ಬಂದಿತು ಎಂದು ಹೇಳುವ ಪ್ರಸಂಗ ಯಾವುದು..? ಅವರ ಮುಂದಿನ ಪೀಳಿಗೆ, ಅವರ ಬದುಕಿನಲ್ಲಿನ ಏಳು-ಬೀಳುಗಳು, ಸಾಂಸಾರಿಕ ಚಿತ್ರಣ, ಕೌಟುಂಬಿಕ ಚಿತ್ರಣ ಎಲ್ಲದರ ಕುರಿತು ನೀವೇ ಓದಿ.


ಕಲೆಯ, ಕಲಾವಿದನ ಅದರಲ್ಲಿಯೂ ಚಿತ್ರಕಲಾಕಾರನ ಸಮಗ್ರ ಬದುಕಿನ ಚಿತ್ರಣವಿದು. ಬಹಳಷ್ಟು ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಪುಸ್ತಕವನ್ನು ಒಮ್ಮೆಯಾದರೂ ಓದಲೇಬೇಕು.


~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 6, 2026

ವಿಶೇಷ ಮುತ್ತು (ಬೆಳಕಿಂಡಿಯ ಕತೆಗಳು - 80)


 ಅವನು ಒರಟೊರಟಾಗಿ ಅವಳನ್ನು ಅಪ್ಪಿ ಹಿಡಿದು ಅವಳ ಕೆನ್ನೆಗೆ ಜೊಲ್ಲನ್ನು ಸಹಾ ಸೇರಿಸಿ ಮುತ್ತು ಕೊಡುತ್ತಿದ್ದರೆ ಅವಳ ಕಣ್ಣಲ್ಲಿ ನೂರು  ಸೂರ್ಯರ ಪ್ರಕಾಶ ಮಿನುಗುತ್ತಿತ್ತು.


ಅಮ್ಮನಿಗೆ ಅದು ತನ್ನ ವಿಶೇಷ ಚೇತನ ಮಗುವಿನ ಮೊದಲ ಮುತ್ತು. ಅದು ಅವಳ ಪಾಲಿನ ವಿಶೇಷ ಮುತ್ತು. 


~ವಿಭಾ ವಿಶ್ವನಾಥ್

ಹಂಬಲದ ತಕ್ಕಡಿಯಲ್ಲಿ... (ಬೆಳಕಿಂಡಿಯ ಕತೆಗಳು - 79)

 


ಅವಳು ಹಂಬಲಿಸಿದ್ದು ಅವನ ಹಣ, ಐಶ್ವರ್ಯಕ್ಕಲ್ಲ ಬದಲಾಗಿ ಅವನ ಹಿಡಿ ಪ್ರೀತಿಗೆ. ಆದರೆ, ಅವನು ಅವಳ ಅಂತರಂಗವನ್ನು ಅರ್ಥ ಮಾಡಿಕೊಳ್ಳದೇ ಚಿನ್ನ, ವಜ್ರಗಳನ್ನು ತಂದು ಅವಳ ಮುಂದೆ ಸುರಿದ. 

ಆದರೂ, ಅವಳ ಹಂಬಲದ ತಕ್ಕಡಿಯಲ್ಲಿ ಸಂಪತ್ತಿಗಿಂತಲೂ, ಪ್ರೀತಿಗೇ ಹೆಚ್ಚು ತೂಕ. 


~ವಿಭಾ ವಿಶ್ವನಾಥ್

ಅಮೃತ (ಬೆಳಕಿಂಡಿಯ ಕತೆಗಳು - 78)

 


ವಿಷದ ತುತ್ತನ್ನೇ ಉಣಿಸಿದರೂ ಅದು ಅಮೃತ ಸಮಾನವಾಗುವುದು ಕಯಾದುವಂತಹಾ ತಾಯಿಯಿಂದ.. ಪ್ರಹ್ಲಾದನಂತಹಾ ನಂಬಿಕೆಯುಳ್ಳ ಮಾತೃಭಕ್ತ ಮಗನಿಂದ. ಅಮ್ಮ ನೀಡಿದ್ದು ಎಂದಿಗೂ ಅಮೃತಸಮಾನವೇ..


~ವಿಭಾ ವಿಶ್ವನಾಥ್

ಸತ್ಯದ ಮುಸುಕು ಹೊದ್ದು

 


"ಏನೋ ಈಗ ನಿನ್ನ ಯೂಟ್ಯೂಬ್ ಚಾನೆಲ್ ತುಂಬಾ ಫೇಮಸ್ ಆಗಿ ಬಿಟ್ಟಿದೆಯಂತೆ" ಎಂದ ಗೆಳೆಯನ ಮಾತಿಗೆ "ಹೌದು ಕಣೋ ಮಚ್ಚಾ.. ಸ್ವಲ್ಪ ಫೇಮಸ್ ಆಗುವವರೆಗೂ ಅಷ್ಟೇ ಇವೆಲ್ಲಾ.. ನೋಡ್ತಾ ಇರು ಇನ್ನೂ ಹೇಗೆಲ್ಲಾ ಫೇಮಸ್ ಆಗುತ್ತೇನೆ ಅಂತಾ.. " ಎಂದನು ಮುರುಳಿ.


ಅಲ್ಲಿಯೇ ಇದ್ದ ಶಶಿಧರ "ಫೇಮಸ್ ಏನೋ ಆಗ್ತಿಯಪ್ಪ. ಆದರೆ, ಒಳ್ಳೆಯ ರೀತಿಯಲ್ಲಿ ಫೇಮಸ್ ಆಗೋ. ಈ ಟ್ರೋಲ್ ಮಾಡಿಸಿಕೊಂಡು ಫೇಮಸ್ ಆಗೋ ತರಹದಲ್ಲೆಲ್ಲಾ ಫೇಮಸ್ ಆಗಬೇಡ. ಸತ್ಯವಾದ ಹಾದಿಯಲ್ಲಿ ನಡೆಯೋ.. ಸತ್ಯವನ್ನು ಮಾತ್ರ ಹೇಳೋ. ಹೆಡ್ಡಿಂಗ್ ಒಂದು ಹಾಕಿರುತ್ತೀಯ. ಒಳಗಡೆ ಕಂಟೆಂಟ್ ಇನ್ನೊಂದು ಇಟ್ಟಿರುತ್ತೀಯ. ಹೀಗಾದ್ರೆ ಕಷ್ಟ ಕಣೋ.. ಇಂತದ್ದೆಲ್ಲಾ ಸ್ವಲ್ಪ ದಿನ ಅಷ್ಟೇ ವರ್ಕ್ ಆಗೋದು. ಇಂತಹಾ ಗಿಮಿಕ್ ಗಳಿಗೆಲ್ಲಾ ಹೆಚ್ಚು ಆಯುಷ್ಯ ಇರಲ್ಲಮ್ಮ. " ಎಂದಾಗ ಮುರಳಿ ರೇಗಿದನು.


"ನಾನು ಫೇಮಸ್ ಆಗುವುದನ್ನು ಸಹಿಸುವುದಿಲ್ಲ ನೀನು. ಅದಕ್ಕೇ ಹೀಗೆಲ್ಲಾ ಮಾತನಾಡುತ್ತಾ ಇದ್ದೀಯ. " ಎಂದವನಿಗೆ "ಬೈಯ್ಯುವವರೇ ಕಣೋ ಬದುಕುವುದಕ್ಕೆ ಹೇಳುವುದು. ಸುಮ್ಮನೆ ಎಲ್ಲರೂ ಹೊಗಳಿದ ಹಾಗೆ ನಾನೂ ಹೊಗಳಿಬಿಟ್ಟರೆ ನೀನು ಹೋಗುತ್ತಿರುವ ಹಾದಿಯೇ ಸರಿ ಅನ್ನೋ ಭ್ರಮಗೆ ಬಿದ್ದು ಬಿಡುತ್ತೀಯ. ಒಬ್ಬ ಒಳ್ಳೆಯ ಸ್ನೇಹಿತನಾಗಿ ನಿನಗೆ ಇದನ್ನ ಹೇಳಬಹುದು ನೋಡಪ್ಪ. " ಎಂದವನೇ ಅಲ್ಲಿಂದ ಹೊರಟನು ಶಶಿಧರ.


ಅಲ್ಲೇ ಇದ್ದ ಮತ್ತೊಬ್ಬ ಗೆಳೆಯ ಮುರಳಿಗೆ "ಇನ್ನೂ ಅವನು ಸತ್ಯ, ನ್ಯಾಯ, ಪ್ರಾಮಾಣಿಕತೆ ಅಂತಾ ಕೂತಿರುವುದಕ್ಕೆ ಅವನಿಗೆ ಟ್ಯಾಲೆಂಟ್ ಇದ್ದರೂ ಅವನು ಫೇಮಸ್ ಆಗದೇ ಇರುವುದು. ಈಗಿನ ಕಾಲಕ್ಕೆ ಯಾವುದು ಸರಿಯೋ ಹಾಗೆಯೇ ಇರಬೇಕು. ಅದು ಬಿಟ್ಟು ಸತ್ಯವನ್ನು ನೇರವಾಗಿಯೇ ಹೇಳ್ತೀನಿ. ನಾನು ನಿಷ್ಠುರವಾಗಿಯೇ ಇರುತ್ತೇನೆ ಅಂತಾ ಅಂದರೆ ಯಾರು ಕೇಳುತ್ತಾರೋ..


ಈಗಿನ ಕಾಲದಲ್ಲಿ ಅರ್ಧ ಸತ್ಯ ಹೇಳಿದರೂ ಅದನ್ನು ಸುಳ್ಳು ಅಂತಾ ಹೇಳುವುದಿಲ್ಲ. ಅದನ್ನೂ ಸತ್ಯ ಅಂತಲೇ ಪರಿಗಣಿಸುವುದು. ಅವನ ಮಾತನ್ನೆಲ್ಲಾ ನೀನು ಸೀರಿಯಸ್ ಆಗಿ ತೆಗೆದುಕೊಳ್ಳುವುದಕ್ಕೆ ಹೋಗಬೇಡ. ನಿನ್ನ ಪಾಡಿಗೆ ನೀನು ಹೇಗೆ ವಿಡಿಯೋ ಹಾಕ್ತಾ ಇದ್ದಿಯೋ ಹಾಗೇ ಹಾಕು. " ಎನ್ನುವ ಬಿಟ್ಟಿ ಸಲಹೆ ಕೊಟ್ಟನು.


ಅದಕ್ಕೆ ಮುರಳಿ " ನೋಡೋಣ ಬಿಡೋ.. ಏನೇನು ಆಗುತ್ತೋ ಏನೋ.. ಯಾಕೋ ಮನಸ್ಸು ಸರಿ ಇಲ್ಲ. ಮನೆಗೆ ಹೋಗುತ್ತೇನೆ" ಎಂದು ಮನೆಗೆ ಹೊರಟನು.


ಅಷ್ಟರಲ್ಲಿ ಅವನ ಮೊಬೈಲಿಗೆ ಅವನ ತಂಗಿಯ ಮೊಬೈಲ್ ನಿಂದ ಒಂದು ಮೆಸೇಜ್ ಬಂತು. "ಅಣ್ಣ, ಅಪ್ಪನಿಗೆ ಆಕ್ಸಿಡೆಂಟ್ ಆಗಿದೆ ಕಣೋ.. " ಎಂದು.


'ಯಾವ ಹಾಸ್ಪಿಟಲ್, ಹೇಗೆ, ಯಾವಾಗ , ಏನಾಗಿದೆ, ಎಲ್ಲಿದ್ದೀರ' ಎಂದೆಲ್ಲಾ ಒಂದರ ಮೇಲೆ ಒಂದು ಮೆಸೇಜ್ ಕಳುಹಿಸಿದನು. ಒಂದಕ್ಕೂ ರಿಪ್ಲೈ ಇಲ್ಲ. ಅವಳ ಮೊಬೈಲ್ ಗೆ ಕರೆ ಮಾಡಿದರೆ ಅದು ಸ್ವಿಚ್ಡ್ ಆಫ್. ಅಪ್ಪ ಹಾಗೂ ಅಮ್ಮನ ಮೊಬೈಲ್ ಕೂಡಾ ಕನೆಕ್ಟ್ ಆಗದಿದ್ದಾಗ ಗಾಬರಿಯಿಂದ ಹುಚ್ಚನಂತೆ ಮನೆಗೆ ಓಡಿದ ಮುರುಳಿ.


ಅಲ್ಲಿ ನೋಡಿದರೆ ಮನೆಯಲ್ಲಿ ಎಲ್ಲರೂ ಸಂತೋಷದಿಂದ ಹರಟೆ ಹೊಡೆಯುತ್ತಾ ಕೂತಿದ್ದರು. ಬಂದವನೇ ತಂಗಿಯ ಕೆನ್ನೆಗೆ ಬಾರಿಸಿ "ಇನ್ನೊಂದು ಸಾರಿ ಸುಳ್ಳು ಹೇಳಿದ್ರೆ ಸರಿ ಇರುವುದಿಲ್ಲ ನೋಡು.." ಎಂದು ವಾರ್ನಿಂಗ್ ಕೊಟ್ಟನು.


"ನಾನೆಲ್ಲಿ ಸುಳ್ಳು ಹೇಳಿದೆ. ಕಳೆದ ವರ್ಷ ಅಪ್ಪನಿಗೆ ಆಕ್ಸಿಡೆಂಟ್ ಆಗಿತ್ತು ತಾನೇ ? " ಎಂದಳು.


"ಅದು ಕಳೆದ ವರ್ಷ ತಾನೇ..?? ಈಗ ಯಾಕೆ ಹೇಳಿದೆ ? ಈಗ ಏನೂ ಆಗಿರಲಿಲ್ಲ ತಾನೇ.. ಪೂರ್ತಿ ಮಾಹಿತಿ ಹೇಳದೆ ಫೋನ್ ಬೇರೆ ಆಫ್ ಮಾಡಿದ್ದೀಯ" ಎಂದ ಮುರಳಿಗೆ


"ನೀನು ನಿನ್ನ ಯೂಟ್ಯೂಬ್ ಗಳಲ್ಲಿ ಈ ರೀತಿ ಯಾವತ್ತೋ ಆಗಿದ್ದಕ್ಕೆ ಬಣ್ಣ ಹಚ್ಚಿ, ಅರ್ಧಂಬರ್ಧ ಮಾಹಿತಿ ನೀಡಿದರೆ ತಪ್ಪಲ್ಲ. ಅದು ಸುಳ್ಳು ಸಹಾ ಅಲ್ಲ. ಆದರೆ , ನಿನ್ನ ತಂಗಿ ಮಾಡಿದ್ದು ತಪ್ಪು ಅಲ್ವಾ..


ಅವರ ಮನೆಯವರಿಗೂ ಹೀಗೆಯೇ ಆಗಿರುತ್ತೆ ಅಲ್ವಾ.. ಎಲ್ಲರ ಬುಡಕ್ಕೆ ಬೆಂಕಿ ಬಿದ್ದಾಗಲೇ ಅವರಿಗೂ ಅರ್ಥ ಆಗುವುದು" ಎಂದ ಶಶಿಧರನನ್ನು ಕಂಡಾಗ ಅದು ಅವನ ಉಪಾಯವೆಂಬುದು ಅರಿವಾಗಿತ್ತು. ಅಲ್ಲದೇ.. ಅವನು ಹೇಳಿದ್ದು ಸಹಾ ಸರಿಯಾಗಿ ಅರ್ಥವಾಗಿ ಜ್ಞಾನೋದಯವಾಗಿತ್ತು.


"ಖ್ಯಾತಿ ನಿಧಾನಕ್ಕೇ ಬರಲಿ ಬಿಡೋ.. ತೊಂದರೆಯಿಲ್ಲ. ಆದರೆ, ಕುಖ್ಯಾತಿ ಅಂತೂ ಬೇಡ. ಇನ್ನು ಮುಂದೆ ಡೈರೆಕ್ಟ್ ಆಗಿರುವ ಹೆಡ್ಡಿಂಗ್ ಹಾಕಿ ಪೂರ್ಣ ಸತ್ಯವನ್ನು ಮಾತ್ರ ತಲುಪಿಸುತ್ತೇನೆ" ಎಂದ ಮುರಳಿಯ ಮಾತು ಕೇಳಿ ಎಲ್ಲರಿಗೂ ಸಂತಸವಾಗಿತ್ತು.


~ವಿಭಾ ವಿಶ್ವನಾಥ್

ನನ್ನ ಬದುಕಿನ ಗುರುಗಳು ಹಾಗೂ ಗುರು ಸಮಾನರಿವರು..


ಜೀವನದ ಹಾದಿಯಲ್ಲಿ ಪ್ರತಿಯೊಬ್ಬರಿಂದಲೂ ಕಲಿಯುವುದು ಇದ್ದೇ ಇದೆ. ಆ ನಿಟ್ಟಿನಲ್ಲಿ ಹಲವಾರು ಬಳಗಗಳು ಮಾಮ್ಸ್ಪ್ರೆಸೊ, ಸಾಹಿತ್ಯ ಸೃಷ್ಟಿ ಬಳಗ, ಎಲ್ಲಕ್ಕಿಂತ ಹೆಚ್ಚಾಗಿ ಪುಸ್ತಕ ಅವಲೋಕನ ಬಳಗದಿಂದ ಕಲಿತದ್ದು ಬಹಳವಿದೆ. ಹಾಗೆಯೇ, ಇಲ್ಲಿ ದಿನನಿತ್ಯವೂ ಕಲಿಯುವಿಕೆ ಇದ್ದೇ ಇದೆ. ಗುರು ಮುಖೇನ ಕಲಿಯುವುದು ಹೆಚ್ಚು ಪರಿಣಾಮಕಾರಿ ಎಂಬುದು ಹೌದಾದರೂ.. ಏಕಲವ್ಯನಿಗೆ ದ್ರೋಣಾಚಾರ್ಯರಿದ್ದಂತೆ, ಪರೋಕ್ಷವಾಗಿಯೂ ಗುರುವಾಗುವ ಪರಿಣಾಮಕಾರಿಯಾಗಿ ನೆನಪಿಸಿಕೊಳ್ಳುವುದು ಹಾಗೂ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವುದು ಸಹಾ ಅವರಿಗೆ ನೀಡುವ ಗೌರವವೆಂಬುದು ನನ್ನ ಅಭಿಪ್ರಾಯ.


ಹಾಗೆ ನಾನು ಇದುವರೆಗೂ ಪ್ರತ್ಯಕ್ಷವಾಗಿ ನೋಡದೆ ಬಹಳ ಗೌರವಿಸುವ  ಹಾಗೂ ಗುರು ಸಮಾನರೆಂದು ಭಾವಿಸುವುದು ವೀಣಾ ನಾಯಕ್ ಮೇಡಂ ಅವರನ್ನು. ಅವರ ಶಿಸ್ತು, ಸಮಯಪಾಲನೆ, ಸಾಹಿತ್ಯಸೇವೆ, ಕನ್ನಡದ ಕುರಿತ ಕಾಳಜಿ, ಪುಸ್ತಕದ ಓದು ಹಾಗೂ ಪುಸ್ತಕವನ್ನು ಬಹುಮಾನವಾಗಿ ಕಳುಹಿಸುವ ನಿಸ್ವಾರ್ಥತೆ ಎಲ್ಲವೂ ಆದರಣೀಯ. 'ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ' ಎಂಬಂತೆ ಅವರ ನಡೆ ಎಲ್ಲವೂ ಗೌರವಪೂರ್ಣವಾಗಿದ್ದು, ಅವರ ನಿಯಮಗಳನ್ನು ನಮಗೇ ಅರಿವಿಲ್ಲದಂತೆ ಪಾಲಿಸುವಂತೆ ಮಾಡುತ್ತದೆ. 


ನಮ್ಮ ಈ ಬಳಗದಲ್ಲಿ ಇರುವ ಹಲವರಿಂದ ಅವರ ಬರಹದಿಂದ ಬಹಳಷ್ಟು ಕಲಿಯುತ್ತಿದ್ದೇನೆ. ಈ ಸಂಧರ್ಭದಲ್ಲಿ ಅಂತಹಾ ಎಲ್ಲರನ್ನೂ ಸ್ಮರಿಸುತ್ತೇನೆ.


ನಾನು ಕನ್ನಡದ ಕುರಿತು, ಸಾಹಿತ್ಯದ ಕುರಿತು, ಓದಿನ ಕುರಿತು ಇಷ್ಟು ಆಸಕ್ತಿ ಬೆಳೆಸಿಕೊಂಡಿರುವುದಕ್ಕೆ ಮುಖ್ಯವಾಗಿ ನನ್ನ ಇಬ್ಬರು ಕನ್ನಡ ಗುರುಗಳು ಕಾರಣ. 


ಪ್ರಾಥಮಿಕ ಶಾಲೆಯಲ್ಲಿ ನಾಗರತ್ನ ಮಿಸ್ ರಾಗವಾಗಿ ಹಾಡುತ್ತಿದ್ದ ಕನ್ನಡದ ಪದ್ಯಗಳು ಹಾಗೂ ಹೇಳಿಕೊಟ್ಟ ವ್ಯಾಕರಣ, ಕೊಡುತ್ತಿದ್ದ ಉಕ್ತಲೇಖನ ಜೊತೆಗೆ ಮಾತಿನಲ್ಲಿಯೇ ನಯವಾಗಿ ತಿದ್ದುತ್ತಿದ್ದ ಪರಿ, ಹೇಳಿಕೊಟ್ಟ ಪಾಠ ಎಲ್ಲವೂ ಮರೆಯಲಾಗದಂತಹದ್ದು. ಇವರು ಸಮಾಜ ವಿಜ್ಞಾನದ ಶಿಕ್ಷಕರೂ ಹೌದು. ಅವರ ಇತಿಹಾಸ, ಭೂಗೋಳವನ್ನು ಭೋಧಿಸುತ್ತಿದ್ದ ಪರಿ ಅಚ್ಚಳಿಯದೇ ನೆನಪಿನಲ್ಲಿರುವಂತಹದ್ದು. ಬಹುಶಃ, ಇದ್ದ ಒಬ್ಬನೇ ಮಗನನ್ನು ದುರಂತದಲ್ಲಿ ಕಳೆದುಕೊಳ್ಳದೇ ಇದ್ದಿದ್ದರೆ ನನ್ನಂತಹಾ ಎಷ್ಟೋ ವಿದ್ಯಾರ್ಥಿಗಳು ಅವರ ಗರಡಿಯಲ್ಲಿ ಪಳಗುತ್ತಿದ್ದರು. ಆದರೆ, ಬಂದದ್ದನ್ನು ಸ್ವೀಕರಿಸಿ ಬದುಕನ್ನು ಸ್ವೀಕರಿಸಿದ ಪರಿಯೂ ಅಚ್ಚರಿಯೇ.. ನಾನು ಅಪ್ಪನನ್ನು ಕಳೆದುಕೊಂಡ ದಿನ ಬೆಂಬಲಕ್ಕೆ ನಿಂತು ಸಾಂತ್ವನಿಸಿದ ಪರಿ, ಇಂದಿಗೂ ನನ್ನನ್ನು ತಮ್ಮ ಮಗಳಂತೆಯೇ ಭಾವಿಸುವ, ಮಾರ್ಗದರ್ಶನ ನೀಡುವ ಅವರ ಪ್ರೀತಿಗೆ ನಾನು ಆಭಾರಿ.


ಮತ್ತೊಬ್ಬರು ಧರ್ಮೇಂದ್ರ ಕುದ್ರೋಳಿ ಸರ್. ಪಿ. ಯು. ಸಿ ಯಲ್ಲಿ ಎರಡು ವರ್ಷ ಕನ್ನಡವನ್ನು ಭೋಧಿಸಿದವರು. ಮುಖ್ಯವಾಗಿ ಕಾವ್ಯದ ಕುರಿತು ಪ್ರೀತಿ ಹುಟ್ಟಿಸಿದವರು. ಅವರ ಕವಿತಾ ವಾಚನ ಹಾಗೂ ಪದ್ಯಗಳನ್ನು ಬಿಡಿಸಿ ಹೇಳಿಕೊಡುತ್ತಿದ್ದ ಪರಿ, ಪಠ್ಯದ ಜೊತೆಗೆ ಪೂರಕ ಸಾಹಿತ್ಯವನ್ನು ತಿಳಿಸಿ ಹೇಳಿಕೊಡುತ್ತಿದ್ದ ರೀತಿ, ಪೌರಾಣಿಕ ಭಾಗಗಳನ್ನು ರಸವತ್ತಾಗಿ ಹೇಳುತ್ತಿದ್ದ ರೀತಿ, ಆಗಾಗ ಆರೋಗ್ಯಕರ ಹಾಸ್ಯ ಎಂಥಹವರಲ್ಲಿಯೂ ಕನ್ನಡ ಪಾಠವನ್ನು ಕೇಳುವ ಆಸಕ್ತಿ ಮೂಡಿಸುತ್ತಿತ್ತು. ಇಷ್ಟೆಲ್ಲಾ ಕನ್ನಡ ಪ್ರೀತಿಯ ಅವರ ಮನೆಭಾಷೆ ಮಲೆಯಾಳಂ ಎಂದರೆ ನೀವು ನಂಬಲಾರಿರಿ. ಅವರ ಮಗಳು ರಚನಾ ಹಾಗೂ ನಾನೂ ಒಂದೇ ತರಗತಿ. ಆದರೆ, ತರಗತಿಯಲ್ಲಿ ಎಂದಿಗೂ ಭೇಧ-ಭಾವ ಮಾಡಿದವರಲ್ಲ. ಪಿ.ಯು.ಸಿ ಯಲ್ಲಿ ನಾನಿದ್ದದ್ದು ಹಾಸ್ಟೆಲ್ ನಲ್ಲಿ. ಆ ಸಂಧರ್ಭದಲ್ಲಿ ಮನೆಗೆ ವಾರಕ್ಕೆರಡು ಬಾರಿಯಷ್ಟೇ ಕರೆ ಮಾಡಲು ಅವಕಾಶ. ಆದರೆ, ಪರೀಕ್ಷೆ ಸಮಯದಲ್ಲಿ ನನ್ನ ಆತಂಕವನ್ನು ಕಡಿಮೆ ಮಾಡಲು ಅಪ್ಪನ ಜೊತೆಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿದ್ದವರು. ಅಪ್ಪನ ಸಾವಿನ ವಿಚಾರ ತಿಳಿದು ನಾನು ನನ್ನ ಸಹೋದರನನ್ನೇ ಕಳೆದುಕೊಂಡೆ ಎಂದು ಬೇಸರಿಸಿಕೊಂಡು ಸಮಾಧಾನಪಡಿಸಿದವರು. ಬಹುಶಃ, ಗುರುವಾದವರು ಮನೆಯವರಂತೆ ಭಾಸವಾಗುವುದು ಬಹಳ ಕಡಿಮೆ. ಮೇಲೆ ಉಲ್ಲೇಖಿಸಿರುವುದು ಒಂದೆರಡು ಸಂಧರ್ಭಗಳಷ್ಟೇ.. ಆದರೆ, ಈ ಅಪರೂಪದ ಗುರುವನ್ನು ನಾನೆಂದಿಗೂ ಮರೆಯಲಾರೆ.


ಈ ಸಂಧರ್ಭದಲ್ಲಿ ನಾನು ನೆನಪಿಸಿಕೊಳ್ಳಲು ಇಚ್ಛಿಸುವ ಮತ್ತೊಬ್ಬರು ಗುರುಗಳು ಕವಿತಾ ಮೇಡಂ. ಬಯಾಲಜಿ ಲೆಕ್ಚರರ್. ಶಿಕ್ಷಕರು ಸ್ಟ್ರಿಕ್ಟ್ ಆಗಿದ್ದಷ್ಟು ವಿದ್ಯಾರ್ಥಿಗಳಿಗೆ ಕನೆಕ್ಟ್ ಆಗುವುದು ಕಡಿಮೆಯೇ ಎಂಬುದು ನನ್ನ ಭಾವನೆ. ಆದರೆ, ಇದನ್ನು ಸುಳ್ಳಾಗಿಸಿದವರು ನನ್ನ ಕವಿತಾ ಮೇಡಂ. ಚುರುಕು ಮಾತು, ಬೇಕಾದಷ್ಟನ್ನು ಕರಾರುವಕ್ಕಾಗಿ ಹೇಳುವವರು. ಪಾಠಕ್ಕೂ.. ಜೀವನಪಾಠಕ್ಕೂ.. 


ಸರಳತೆ, ಸೌಜನ್ಯತೆಯ ಪಾಠವನ್ನು ಕೃತಿಯ ಮೂಲಕ ತೋರಿಸಿಕೊಟ್ಟದ್ದು ನನ್ನ ಪಿ.ಯು.ಸಿ ಪ್ರಿನ್ಸಿಪಾಲ್ ಆಗಿದ್ದ ಸದಾನಂದ ರೈ ಕೂವೆಂಜ ಸರ್. ಇಂಗ್ಲೀಷ್ ಲೆಕ್ಚರರ್ ಸಹಾ ಆಗಿದ್ದವರು. ವಿದ್ಯಾರ್ಥಿಗಳಿಗೆ ಸ್ವಂತ ಮಕ್ಕಳ ಹಾಗೆ ಕಾಳಜಿ ಮಾಡುತ್ತಿದ್ದವರು. ಶ್ರಮದಾನಗಳಲ್ಲಿ ನಮ್ಮೊಡನೆ ಭಾಗಿಯಾಗಿ ನಮ್ಮ ಜೊತೆಗೆ ಕೆಲಸ ಮಾಡುತ್ತಿದ್ದವರು. ಅದೂ ಕೇವಲ ಸ್ವಲ್ಪ ಸಮಯವಲ್ಲ.. ವಿದ್ಯಾರ್ಥಿಗಳು ಶ್ರಮದಾನ ಮಾಡುತ್ತಿದ್ದ ಅಷ್ಟೂ ಹೊತ್ತು. ಅದನ್ನು ನೋಡಿ ಬೇರೆ ಲೆಕ್ಚರರ್ ಗಳು ಬರುವುದಿತ್ತು. ಪ್ರತಿದಿನವೂ ಅವರು ಬರುತ್ತಿದ್ದದ್ದು ಬಸ್ ನಲ್ಲಿಯೇ.. ಆದರೆ, ಸಮಯಪಾಲನೆಯನ್ನು ಅವರನ್ನು ನೋಡಿ ಕಲಿಯಬೇಕಿತ್ತು. ಹಾಸ್ಟೆಲ್ ಗೆ ಪಾರ್ಥನೆಯ ಸಮಯದಲ್ಲಿ ಬಂದಾಗ ಚಕ್ಕಳಮಕ್ಕಳ ಹಾಕಿ ನಮ್ಮೊಡನೆ ಕುಳಿತು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಹೋಗುತ್ತಿದ್ದರು. ನಾನಂತೂ ಇಂತಹಾ ಅಪರೂಪದ ವ್ಯಕ್ತಿತ್ವವನ್ನು ಮತ್ತೆಲ್ಲೂ ಕಾಣಲಿಲ್ಲ. ಅವರ ಪುಸ್ತಕ ಸಂಗ್ರಹದ ಓದಿನ ಪ್ರೀತಿಯನ್ನು ಕಂಡಿದ್ದೇನಾದರೂ.. ಅವರ ಬಳಿ ಕೇಳುವ ಪುಸ್ತಕ ಧೈರ್ಯ ಮಾಡಿರಲಿಲ್ಲ. ಎಷ್ಟು ಸರಳ ಹಾಗೂ ಸ್ನೇಹಮಯಿಯೋ.. ಅಷ್ಟೇ ಶಿಸ್ತಿನ ಪರಿಪಾಲಕರು. ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ತಿದ್ದುವ ಪರಿ, ಅಗತ್ಯಬಿದ್ದಲ್ಲಿ ಮಾತ್ರ ಶಿಕ್ಷೆ. ಓದಿನ ಜೊತೆಗೆ ದೈಹಿಕ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳಿಗೂ ಒತ್ತು ನೀಡುತ್ತಿದ್ದವರು.


ಹೇಳಲು ಹೊರಟರೆ ಹಲವಾರು ಗುರುಗಳು, ಗುರು ಸಮಾನರು ಸಿಗುತ್ತಾರೆ. ಗಣಿತದ ಕುರಿತು ಆಸಕ್ತಿ ಮೂಡಿಸಿದ ಶೋಭಾ ಮಿಸ್, ಅದನ್ನು ದಿನನಿತ್ಯದ ಬದುಕಲ್ಲಿ ಅಳವಡಿಸಿಕೊಳ್ಳಲು ಹೇಳಿಕೊಟ್ಟ ಮಾರುತಿ ಸರ್, ಪ್ರತಿಯೊಂದು ವಿಚಾರಕ್ಕೂ ಪ್ರೋತ್ಸಾಹ ನೀಡುತ್ತಿದ್ದ ಕೃಷ್ಣಮೂರ್ತಿ ಸರ್, ಧರ್ಮರಾಜ್ ಸರ್ ಹಾಗೂ ಸೀತಾ ಮಿಸ್ ದಂಪತಿಗಳು, ಹಿಂದಿಯ ಪಠ್ಯದ ಜೊತೆಗೆ ಅಚ್ಚರಿಯ ಹಲವು ವಿಚಾರಗಳನ್ನು ಹೇಳುತ್ತಾ ಕುತೂಹಲ ಮೂಡಿಸುತ್ತಿದ್ದ ಸುಧಾ ಮಿಸ್, ಇಂಜಿನಿಯರಿಂಗ್ ನಲ್ಲಿ ಸರಳವಾಗಿ ವಿಚಾರಗಳನ್ನು ಕಲಿಸಿಕೊಟ್ಟ ಹಾಗೂ ಆಸಕ್ತಿಕರವಾದ ಸಂಗತಿಗಳನ್ನು ಹೇಳಿಕೊಡುತ್ತಿದ್ದ ಭರತ್ ಸರ್, ಪ್ರೋಗ್ರಾಮಿಂಗ್ ಬರೆಯಲು ಆಸಕ್ತಿ ಮೂಡಿಸಿದ ಸತೀಶ್ ಸರ್, ಪ್ರಾಜೆಕ್ಟ್ ಗೈಡೆನ್ಸ್ ಮಾಡಿದ, ಸಾಫ್ಟ್ವೇರ್ ಕಂಪೆನಿ ಸ್ಥಾಪಿಸಿ ಮಾದರಿಯಾದ, ಬೋಧಿಸಲು ಅವಕಾಶ ಕೊಟ್ಟ ನನ್ನ ಸೀನಿಯರ್ ಗಳಾದ ತೇಜೇಜ್ ಹಾಗೂ ಫಣೀಷ್ ರವರು, ಕಾಂಪಿಟೇಟಿವ್ ಎಕ್ಸಾಮ್ ಗಳಿಗೆ ಗೈಡ್ ಆಗಿದ್ದ ನರೇಶ್ ಸರ್ ಹಾಗೂ ಸ್ನೇಹಿತೆ ಪ್ರೀತಿಯ ಧನಲಕ್ಷ್ಮಿ, ನನ್ನ ಬರಹಗಳ ಮೊದಲ ಓದುಗಳಾಗಿ ತಿದ್ದುವ ಗೆಳತಿ ರಂಜಿತ, ತಮಿಳು ಕಲಿಯಲು ಮಾರ್ಗದರ್ಶನ ನೀಡಿದ ವಸಂತಕುಮಾರಿ ಅಜ್ಜಿ, ಗೋವಿಂದನ್ ಕುಟ್ಟಿ ತಾತ.... ಹೀಗೆ ಪಟ್ಟಿ ಸಾಗುತ್ತಾ ಹೋಗುತ್ತದೆ. ಸದ್ಯಕ್ಕೆ ತಾಜಾ ನೆನಪಿನಲ್ಲಿ, ಈ ಕ್ಷಣದ ನೆನಪಿಗೆ ಸಿಕ್ಕಿದವರಿವರು.


ಇದಿಷ್ಟೂ ಹೊರಗಿನವರಾದರೆ.. ನನಗೆ ಮನೆಯೇ ಮೊದಲ ಪಾಠಶಾಲೆ. ಕೂಡು ಕುಟುಂಬದಲ್ಲಿ ಬೆಳೆದವಳು ನಾನು. ಆದರೆ, ಕ್ರಮೇಣ ಅದು ಕರಗಿದೆ. ನನ್ನ ಕುಟುಂಬದಿಂದ ನಾನು ಕಲಿತ ಪಾಠವೆಂದರೆ.. "ಕಷ್ಟದ ದಿನಗಳಲ್ಲಿ ಏನೇ ಪರಿಸ್ಥಿತಿ ಇದ್ದರೂ ಮರೆತು ಒಂದಾಗುವುದು." ಕೆಲವೊಮ್ಮೆ ಚೆನ್ನಾಗಿದ್ದಾಗ ಮುನಿಸಿದ್ದರೂ.. ಯಾರಿಗಾದರೂ ನೋವು, ದುಃಖ ಎಂದಾಗ ಕಷ್ಟ ಎಂದಾಗ ಬಂದು ನಿಲ್ಲುವ ನಡೆಯೇ ನಾನು ಕಲಿತ ಅತಿ ದೊಡ್ಡ ಪಾಠ. ಅದರಲ್ಲೂ ನನ್ನ ಅಣ್ಣಂದಿರ ಶ್ರೀರಕ್ಷೆ, ಮಾರ್ಗದರ್ಶನ ಮರೆಯಲಾಗದ್ದು.


ಈ ಕುಟುಂಬ ನನ್ನದಾಗಲು ಕಾರಣ ಪಪ್ಪ-ಅಮ್ಮ. ಸರಳತೆ, ಶಿಸ್ತು ಪಪ್ಪ ಕಲಿಸಿಕೊಟ್ಟರೆ, ಅಮ್ಮ ಗೆಳತಿಯಂತೆ ಎಲ್ಲದಕ್ಕೂ ಮಾರ್ಗದರ್ಶಿಯಾಗಿದ್ದಾರೆ. ಅಮ್ಮ, ಚಿಕ್ಕಮ್ಮನ ಮಾರ್ಗದರ್ಶನವಿಲ್ಲದೇ ಕೆಲವು ನಡೆಗಳು ಬಹಳವೇ ಕಷ್ಟ.


ನನ್ನ ಬದುಕಿನಲ್ಲಿ ಬಂದ ಸಾವಿರಾರು ಜನದಲ್ಲಿ ಇಂದಿಗೂ ಅಥವಾ ಆಗಾಗ ನೆನಪಿಸಿಕೊಳ್ಳುವುದು ಕೆಲವರನ್ನು ಮಾತ್ರವೇ.. ಇದ್ದರೆ ಹೀಗೆ ಮತ್ತೊಬ್ಬರ ಬದುಕಲ್ಲಿ ನಾವೂ ಇಂತಹಾ ನೆನಪೇ ಆಗಬೇಕು. ಪಾಸಿಟಿವ್ ಎನರ್ಜಿ ತುಂಬಿಕೊಳ್ಳುವ ಕ್ಷಣಗಳು, ಕಲಿತ ಪಾಠಗಳನ್ನು ಮೆಲುಕು ಹಾಕಿಕೊಳ್ಳುವ ಪರಿಯನ್ನು ಸಾಧ್ಯವಾಗಿಸಿದ ಎಲ್ಲಾ ಗುರುಗಳಿಗೂ.. ಗುರು ಸಮಾನರಿಗೂ ಹೃತ್ಪೂರ್ವಕ ನಮನಗಳು.


~ವಿಭಾ ವಿಶ್ವನಾಥ್

ಹಲೋ ಟೀಚರ್ (ಪುಸ್ತಕ ಯಾನ - 486)


ಪುಸ್ತಕದ ಶೀರ್ಷಿಕೆ : ಹಲೋ ಟೀಚರ್

ಲೇಖಕರು : ಅನುಸೂಯ ಯತೀಶ್ 

ಪ್ರಕಾಶಕರು : ಅವ್ವ ಪುಸ್ತಕಾಲಯ 

ಪ್ರಥಮ ಮುದ್ರಣ : 2025 ಜನವರಿ

ದ್ವಿತೀಯ ಮುದ್ರಣ : 2025 ಫೆಬ್ರವರಿ (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 164

ಬೆಲೆ : 200 ರೂ. 


ಅನಸೂಯ ಯತೀಶ್ ಅವರು ಮಮತಾಮಯಿ ಶಿಕ್ಷಕಿ ಹಾಗೂ ಬಹುಮುಖ ಪ್ರತಿಭೆ. ಕಥೆ, ಕವನ, ಪ್ರಬಂಧ, ಲೇಖನ, ಹೈಕು ಹೀಗೆ ಹಲವಾರು ವಿಭಿನ್ನ ಪ್ರಕಾರದಲ್ಲಿ ಬರೆಯುತ್ತಾರೆ. ವಿಮರ್ಶೆ ಇವರ ಆದ್ಯತೆಯ ಪ್ರಕಾರ. ಹಾಗೆಂದು, ಈ ಪುಸ್ತಕದಲ್ಲಿನ ಅನುಭವ ಕಥನದಲ್ಲಿ ಯಾರನ್ನೂ ಒರೆಗೆ ಹಚ್ಚಿ ನೋಡದೆ.. ತಾಯಿಯಂತೆ, ಶಿಕ್ಷಕಿ-ಮಕ್ಕಳ ಒಡನಾಟದ ಬುತ್ತಿಯನ್ನು ಹಂಚಿಕೊಂಡಿದ್ದಾರೆ. 


25 ವರ್ಷಗಳ ಶಿಕ್ಷಣ ಇಲಾಖೆಯಲ್ಲಿನ ವೃತ್ತಿ ಬದುಕನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಲೇಖನಗಳು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿಯೂ ಪ್ರಕಟವಾಗಿವೆ.


ಶಿಕ್ಷಕರೆಂದರೆ ಕೇವಲ ಶಿಕ್ಷೆ ಕೊಡುವವರಲ್ಲ ಅಥವಾ ಕೇವಲ ಕಲಿಸುವವರೂ ಅಲ್ಲ. ಅವರ ವಿಭಿನ್ನ ವ್ಯಕ್ತಿತ್ವ, ಮಕ್ಕಳೊಡನೆಯ ಒಡನಾಟ, ಅವರೊಡನೆ ತೋರುವ ಪ್ರೀತಿ, ಕಾಳಜಿ ಅವರನ್ನು ರೂಪಿಸುವಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಸರ್ಕಾರ ಇದಕ್ಕಾಗಿ ಹಲವಾರು ತರಬೇತಿಗಳನ್ನು ನೀಡಿದರೂ.. ಅದನ್ನು ಕಲಿಸುವಲ್ಲಿ ಅಳವಡಿಸಿಕೊಳ್ಳುವ ಪರಿ ಶಿಕ್ಷಕರ ಮೇಲೆ ಅವಲಂಬಿತ. ತಾವು ಕಲಿತು, ಮಕ್ಕಳಿಗೂ ಹೊಂದಿಸುವ ಪರಿ ಅನುಸೂಯಾ ಮಿಸ್ ಅವರಿಂದಲೇ ಕಲಿಯಬೇಕು.


ಇಂದಿಗೂ ನಾವು ಹಲವಾರು ಶಿಕ್ಷಕರ ಮೂಲಕ ಶಿಕ್ಷಣವನ್ನು ಪಡೆದಿದ್ದರೂ.. ವಿದ್ಯೆ ಕಲಿತಿದ್ದರೂ.. ಬೆರಳೆಣಿಕೆಯಷ್ಟು ಶಿಕ್ಷಕರನ್ನು ಮಾತ್ರವೇ ನೆನಪಿಟ್ಟುಕೊಂಡಿದ್ದೇವೆ ಹಾಗೂ ಸ್ಮರಿಸುತ್ತೇವೆ. ಅನುಸೂಯ ಟೀಚರ್ ಅವರ ವಿದ್ಯಾರ್ಥಿಗಳು ಅವರನ್ನು ಎಷ್ಟೆಲ್ಲಾ ನೆನಪಿಸಿಕೊಂಡಿರಬಹುದು ಎಂದು ವಿಸ್ಮಯವಾಗುತ್ತದೆ. ಅಲ್ಲದೆ, ಅವರ ವೃತ್ತಿ ಬದುಕಿನಲ್ಲಿ ಹಲವಾರು ವಿದ್ಯಾರ್ಥಿಗಳನ್ನು ನೋಡಿದ್ದರೂ.. ಸ್ಪೆಷಲ್ ಎನ್ನಿಸುವಂತಹ ಕೆಲ ವಿದ್ಯಾರ್ಥಿಗಳನ್ನು ನಮಗೂ ಪರಿಚಯಿಸುತ್ತಾರೆ. ಇಲ್ಲಿನ 20 ಅನುಭವದ ಬುತ್ತಿಗಳು ಅಪ್ಯಾಯಮಾನವಾಗಿಸುತ್ತದೆ. 


ಕಾಲೇಜ್ ಸೇರಿದಾಗ ಅವರ ಗುರುಗಳಾದ ಶ್ರೀ ಮಾಗಡಿ ರಂಗಯ್ಯನವರು ನೀನು ಶಿಕ್ಷಕ ವೃತ್ತಿಗೆ ಹೇಳಿ ಮಾಡಿಸಿದಂತಿರುವೆ ಎಂದು ಹೇಳಿದ್ದೇಕೆ..? 

ಅವರ ನೋಟ ನೂರಕ್ಕೆ ನೂರು ಸರಿಯಾಗಿತ್ತು ಎಂದು ಮುಂದೆ ನಮಗೆ ಅರಿವಾಗುತ್ತಾ ಹೋಗುತ್ತದೆ. ವೃತ್ತಿ ಬದುಕಿನ ಮೊದಲ ದಿನ ಹಾಗೂ ಮುಗ್ಧ ಜೀವಗಳನ್ನು ಪರಿಚಯಿಸುತ್ತಲೇ ಲಕ್ಷಕ್ಕೆ ಎಷ್ಟು ಸೊನ್ನೆ ಬರೆಯಬೇಕು ಎನ್ನುವುದೇ ಗೊತ್ತಿಲ್ಲದ ಹುಡುಗಿಯೊಬ್ಬಳ ಉತ್ಸಾಹಕ್ಕೆ ಭಂಗವಾಗದಂತೆ ಹ್ಯಾಂಡಲ್ ಮಾಡಿದ ರೀತಿ ಇಷ್ಟವಾಗುತ್ತದೆ. 


ವಿಶೇಷ ಚೇತನ ಮಗು ಮಂಜನ ಮಂಜಿನಂತಹ ಪ್ರೀತಿಗೆ ಕರಗಿ ಹೋಗುವ ಅವರು ಇತರ ಮಕ್ಕಳನ್ನು ಹಾಗೂ ಸುತ್ತಲಿನ ಪರಿಸರವನ್ನು ತಿದ್ದುವ ರೀತಿಗೆ, ವಿಶೇಷ ವಿದ್ಯಾರ್ಥಿಗಳನ್ನು ವಿಶೇಷವಾಗಿ ಕಾಣುವ ಬಗೆಗೂ ಗೌರವ ಮೂಡುತ್ತದೆ.


ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸದಲ್ಲಿ ಮಕ್ಕಳ ಉತ್ಸಾಹದ ಜೊತೆಗೆ ಶಿಕ್ಷಕರ ಜವಾಬ್ದಾರಿ ಎಷ್ಟಿರುತ್ತದೆ ಎಂಬುದನ್ನು ಹಾಗೂ ಪೋಷಕರು ಅವರಿಗೆ ನೀಡಿರುವ ಜವಾಬ್ದಾರಿಯ ಜೊತೆಗೆ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ನಿರ್ಧಾರ, ಅಲ್ಲಿ ಮಕ್ಕಳನ್ನು ಜಾಗೃತೆಯಿಂದ ಹಾಗೂ ಸೂಕ್ಷ್ಮವಾಗಿ ಪೋಷಿಸುವ ಬಗ್ಗೆ ಇಲ್ಲಿದೆ. ಶೈಕ್ಷಣಿಕ ಪ್ರವಾಸ ಹೋಗಿದ್ದಾಗ ಬೇಸ್ತು ಬಿದ್ದ ಬಗೆ, ಅದು ಗೊತ್ತಾದಾಗ ಪ್ರತಿಕ್ರಿಯಿಸಿದ ರೀತಿ, ತಮ್ಮದಲ್ಲದ ತಪ್ಪಿಗೆ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾದ ಬಗೆಯನ್ನೂ ಇಲ್ಲಿ ಹೇಳಿದ್ದಾರೆ. 


2012-13ನೇ ಸಾಲಿನಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯದ ಅರಿವು, ಲೈಂಗಿಕ ಶೋಷಣೆ ವಿರುದ್ಧ ಜಾಗೃತಿ ಮೂಡಿಸಲು ಕಿಶೋರಿ ತರಬೇತಿಯನ್ನು ಪಡೆದು ಬಂದು ಸಂಪನ್ಮೂಲ ವ್ಯಕ್ತಿಯಾಗಿ ಹೋಗಿದ್ದಾಗ ಅವರು ತಮ್ಮ ವಿದ್ಯಾರ್ಥಿನಿಯರಿಗೆ ಹೇಳಿದ ವಿಚಾರಕ್ಕೆ ಅವರ ತಾಯಂದಿರು ಇವರ ಮೇಲೆ ಕೋಪಗೊಂಡದ್ದೇಕೆ..? ಪೋಷಕರಿಗೆ ಮನದಟ್ಟು ಮಾಡಿಕೊಡುವಾಗ ಶಿಕ್ಷಕರು ತಾಳ್ಮೆ ಕಳೆದುಕೊಳ್ಳಬಾರದು ಎಂಬ ಅಂಶವೂ ಇಲ್ಲಿದೆ.


ಸಮಾಜದಲ್ಲಿ, ಶಾಲೆಯಲ್ಲಿ ಮನೆಯಲ್ಲಿ ಹೆಣ್ಣುಮಕ್ಕಳು ಅತಿ ಹೆಚ್ಚು ಲಿಂಗ ತಾರತಮ್ಯಕ್ಕೆ ಒಳಗುತ್ತಿದ್ದಾಗ ಅದನ್ನು ತಡೆಯಲು ಹಾಗೂ ಜಾಗೃತಿ ಮೂಡಿಸಲು ಯೋಜಿಸಿದ ಯೋಜನೆ.. ಪೋಷಕರಿಗೂ, ವಿದ್ಯಾರ್ಥಿಗಳಿಗೂ ಅರ್ಥ ಮಾಡಿಸಿದ ಬಗೆ ಇಲ್ಲಿದೆ.


ವಿದ್ಯಾರ್ಥಿಗಳು ಸಹಪಾಠಿಗಳಿಗೆ ಮಾತ್ರವಲ್ಲದೆ, ಶಿಕ್ಷಕರಿಗೂ ಅಡ್ಡ ಹೆಸರಿಟ್ಟು ಕರೆದಾಗ ಆ ವಿಚಾರ ಶಿಕ್ಷಕರಿಗೆ ತಿಳಿದು ಮಕ್ಕಳಿಗೆ ಯಾವ ರೀತಿ ಪ್ರತಿಕ್ರಿಯಿಸಿದರು..? ಅಡ್ಡ ಹೆಸರಿನ ಅವಾಂತರಗಳನ್ನು ಹೇಳುತ್ತಲೇ ಯಾರನ್ನೂ ಟಾರ್ಗೆಟ್ ಮಾಡದೆ ಮಕ್ಕಳನ್ನು ತಿದ್ದಿದ ಬಗೆಯನ್ನು ಹೇಳುತ್ತಾರೆ. ಈ ಬುದ್ದಿಯನ್ನು ಮಕ್ಕಳು ಸಕಾರಾತ್ಮಕವಾಗಿ ಬಳಸಿಕೊಂಡರೆ ಎಷ್ಟು ಚೆನ್ನ ಅಲ್ಲವೇ ಎಂದು ನಮಗೂ ಅನ್ನಿಸುವಂತೆ ಮಾಡುತ್ತಾರೆ. 


ಶಾಲೆಯಲ್ಲಿ ಹಲವಾರು ಮಕ್ಕಳನ್ನು ನೋಡುತ್ತಾರೆ. ಮಕ್ಕಳನ್ನು ಅತಿಯಾಗಿ ಮುದ್ದು ಮಾಡಿ ಬೆಳೆಸಿದ ಪೋಷಕರು ತಮ್ಮದೇ ತಪ್ಪಿಗೆ ಪರಿತಪಿಸುವ ಪ್ರಸಂಗ ಹಾಗೂ ಸವಾಲನ್ನು ಮೆಟ್ಟಿ ನಿಲ್ಲಲು ನೆರವಾದ ಘಟನೆ ಇಲ್ಲಿದೆ.


ಮಕ್ಕಳ ವಿದ್ಯಾಭ್ಯಾಸದಲ್ಲಿ ಕೇವಲ ಶಿಕ್ಷಕರ ಪಾತ್ರವಿರುವುದಿಲ್ಲ. ಅವರ ಕುಟುಂಬದ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ಹಳ್ಳಿಗಳಲ್ಲಿ ಅಂದಿನ ದಿನಗಳಲ್ಲಿ ಅದನ್ನು ಅರ್ಥ ಮಾಡಿಸುವುದೇನೂ ಸುಲಭವಲ್ಲ. ಪೋಷಕರು ಜಾಗೃತಿ ವಹಿಸಬೇಕಾದ ವಿಚಾರಗಳನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ.


ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಹ ಪಠ್ಯಗಳ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದು ಮಕ್ಕಳ ವರ್ತನೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಎಷ್ಟು ದೊಡ್ಡಮಟ್ಟದ ಪಾತ್ರ ವಹಿಸುತ್ತದೆ ಎನ್ನುವುದನ್ನು ಹೇಳುತ್ತಲೇ.. ಅದಕ್ಕೆ ತಾವು ಮಾಡಿದ ಪ್ರಯೋಗಗಳು ಹಾಗೂ ಸಿ.ಸಿ.ಇ ಎನ್ನುವ ಶಿಕ್ಷಣ ಕ್ಷೇತ್ರದ ಮಹತ್ವದ ಯೋಜನೆಯ ಕುರಿತು ತಿಳಿಸುತ್ತಾರೆ. 


ಮಕ್ಕಳ ಮನಸ್ಸು ಸೂಕ್ಷ್ಮ ನ ಅವುಗಳಿಗೆ ಘಾಸಿಯಾಗದಂತೆ ಸಹವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಡೆದುಕೊಳ್ಳುವುದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸಂಬಂಧಗಳು ಹಾಗೂ ಬಾಂಧವ್ಯಕ್ಕೆ ಸಂಬಂಧಿಸಿದ ಪಾಠಗಳನ್ನು ಮಾಡುವಾಗ ಅಥವಾ ಅವರನ್ನು ತಿದ್ದುವಾಗ ಅವೆಲ್ಲವನ್ನು ಗಮನಿಸಿ ಬ್ಯಾಲೆನ್ಸ್ ಮಾಡುವ ಶಿಕ್ಷಕರ ಕುರಿತು ತಿಳಿದು ಹೆಮ್ಮೆ ಎನಿಸುತ್ತದೆ. 


ಮಕ್ಕಳಿಗೆ ಬೈದಾಗ ಆ ಕುರಿತು ಭಯ ಮೂಡುತ್ತದೆ. ಆದರೆ, ಮೆಚ್ಚುಗೆಯ ಮಾನದಂಡ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುವ ಬಗೆ ಹಾಗೂ ಅವರಿಗೆ ಆ ಕುರಿತು ಹೆಮ್ಮೆ ಮೂಡುವ ಬಗೆ ಅವರನ್ನು ಯಾವೆಲ್ಲಾ ಬಗೆಯಲ್ಲಿ ತಿದ್ದಬಲ್ಲದು ಹಾಗೂ ಬದಲಾಯಿಸಬಲ್ಲದು ಎನ್ನುವ ವಿಚಾರಗಳಿಲ್ಲಿವೆ. ಶಿಕ್ಷೆ ಇಲ್ಲದೆ ಶಿಕ್ಷಣ ಕೊಡಲು ಸರಳ ಹಾಗೂ ಜಾಣತನದ ತಂತ್ರಗಳನ್ನು ಸೊಗಸಾಗಿ ಹೇಳಿದ್ದಾರೆ. 


ಮಕ್ಕಳು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅದರಲ್ಲಿಯೂ ಶಿಕ್ಷಕರನ್ನು ಹೆಚ್ಚು ಗಮನಿಸುತ್ತಿರುತ್ತಾರೆ. ಕಾರಣಾಂತರದಿಂದ ತಡವಾಗಿ ಶಾಲೆಗೆ ಬಂದ ಸಂದರ್ಭದಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಗಮನಿಸುವಾಗ ಮಕ್ಕಳೇ ಶಿಕ್ಷಕರಾದ ಸುಸಂದರ್ಭ ಅವರಲ್ಲಿ ಮಾತ್ರವಲ್ಲ ನಮ್ಮಲ್ಲಿಯೂ ಹೆಮ್ಮೆ ಮೂಡಿಸುತ್ತದೆ. 


ಬಯ್ಯದೆ, ಹೊಡೆಯದೆಯೇ ನಸುನಗುತ್ತ ತಾಳ್ಮೆಯಿಂದ ತಿದ್ದಿದ ಅನುಸೂಯ ಟೀಚರ್ ಅವರ ಅನುಭವದ ಜೊತೆಗೆ ಶಿಕ್ಷೆ ರಹಿತ ಶಿಕ್ಷಣವನ್ನು ಬೆಂಬಲಿಸುವ ಅವರ ನಿಲುವು ನನಗಂತೂ ಇಷ್ಟವಾಯಿತು. 


ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವಾಗ ಶಿಕ್ಷಕರಿಗೆ ಅದೇ ಊರಿನ ವಿದ್ಯಾರ್ಥಿಗಳಿಂದ ಅವರ ಪೋಷಕರಿಂದ ಸವಾಲುಗಳು ಎದುರಾಗಬಹುದು. ಮಕ್ಕಳೊಡನೆ ಸಾಕುಪ್ರಾಣಿಗಳು ಶಾಲೆಗೆ ಬಂದರೆ..?! ಆ ಸಂದರ್ಭ ನಿಭಾಯಿಸಿದ ಜಾಣತನದ ಪ್ರಸಂಗ ಇಲ್ಲಿದೆ. 


ತಮ್ಮ ಪ್ರೀತಿಯ ಶಿಕ್ಷಕರನ್ನು ಬೆಂಬಲಿಸುವ ಹೊಗಳುವ ಹಾಗೂ ಓಲೈಸುವ ಪ್ರೀತಿಯ ವಿದ್ಯಾರ್ಥಿಗಳನ್ನು ನಾವಿಲ್ಲಿ ಕಾಣಬಹುದು. ಅದೆಲ್ಲವೂ ಆಯಾ ಟೀಚರ್ ಗಳ ಗುಣ-ಸ್ವಭಾವಗಳಿಂದ ಪ್ರೇರಿತವಾಗುತ್ತದೆ ಎಂಬುದಂತೂ ಅಕ್ಷರಶಃ ಸತ್ಯ. 


ಶಿಕ್ಷಣವೆಂದರೆ ಕೇವಲ ಪಠ್ಯದಲ್ಲಿನ ಪಾಠವಲ್ಲ. ನಡೆ-ನುಡಿಗಳನ್ನು ತಿದ್ದುವ ಹಾಗೂ ಬದಲಾಯಿಸುವ, ಮಾನವೀಯತೆಯನ್ನು ಮೂಡಿಸುವ ನಡೆ.. ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ ಎಷ್ಟು ಎಂಬುದರ ಅರಿವಾಗುತ್ತದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಇದು ಅತ್ಯವಶ್ಯಕವೂ ಹೌದು. 


ಸಮುದಾಯದತ್ತ ಶಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ಪೋಷಕರಿಗೆ ತಮ್ಮ ಮಕ್ಕಳ ಶೈಕ್ಷಣಿಕ ಸಾಧನೆಗಳನ್ನು ಶಿಕ್ಷಕರ ಬಾಯಿಂದಲೇ ಕೇಳಿ ತಿಳಿಯುವ ಉತ್ಸಾಹ, ಖುಷಿ. ಇದರ ಜೊತೆಗೆ ಬೇರೆ ಮಕ್ಕಳ ಅಂಕಗಳ ಕುರಿತು ಕೇಳುವ ಕುತೂಹಲವೂ.. ಮಕ್ಕಳ ಬುದ್ಧಿಮತ್ತೆಗನುಗುಣವಾಗಿ ಅವರು ಓದುತ್ತಾರೆ ಎಂಬ ಅರಿವು ಪೋಷಕರಿಗಿರುವುದು ಅತ್ಯಗತ್ಯ ಎಂಬ ಕಿವಿಮಾತನ್ನು ಹೇಳುತ್ತಲೇ ಮಕ್ಕಳಲ್ಲಿ ಪ್ರಾಮಾಣಿಕತೆಯನ್ನು ಉದ್ದೀಪಿಸುವ ಇವರ ಅನುಭವಗಳೂ ಇಲ್ಲಿವೆ.


ಹೋಂವರ್ಕ್ ಎನ್ನುವ ಮಕ್ಕಳ ಕಲಿಕಾ ಅಂಗಳಕ್ಕೆ ಪೋಷಕರು ಹಾಗೂ ಶಿಕ್ಷಕರು ಇಬ್ಬರ ಪ್ರತಿಕ್ರಿಯೆ ಹಾಗೂ ಬದಲಾದ ದಿನಗಳಲ್ಲಿ.. ಈಗ ಶನಿವಾರದಂದು ಪುಸ್ತಕದ ಹೊರೆ ಇರದ 'ಬ್ಯಾಗ್ ಲೆಸ್ ಡೇ' ದಿನಗಳು ಇಲ್ಲಿವೆ.


ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ ಮಾಡುವುದರ ಹಿಂದಿನ ಉದ್ದೇಶ ಜೊತೆಗೆ ಮಕ್ಕಳಲ್ಲಿ ಉತ್ತಮ ನಾಯಕತ್ವದ ಗುಣಗಳನ್ನು ಮೂಡಿಸುತ್ತ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಾ.. ಸವಾಲುಗಳನ್ನು ನಿಭಾಯಿಸುವುದನ್ನು ಕಲಿಯುವುದು, ಧೈರ್ಯ, ಸಾಹಸ ಹೆಚ್ಚಿಸುವ ಸಲುವಾಗಿ ಮಾಡಿರುವ ಈ ಜವಾಬ್ದಾರಿಯ ಕುರಿತು ಮಾತನಾಡಿದ್ದಾರೆ.


ಅತಿ ಹೆಚ್ಚಿನ ಬುದ್ಧಿಮತ್ತೆ ಇರುವ ಮಕ್ಕಳ ಜೊತೆಜೊತೆಗೆ ಹಿಂದುಳಿದ ಮಕ್ಕಳನ್ನು ಕರೆದುಕೊಂಡು ಸಾಗುವ ಶಿಕ್ಷಕರಿಗೆ ಬುದ್ದಿವಂತ ಮಕ್ಕಳಿಂದ ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ಭಾವನೆಯನ್ನು ತೆಗೆದು ಹಾಕುವ ಜವಾಬ್ದಾರಿಯೂ ಇರುತ್ತದೆ. ಯಾವುದೂ ಅಥವಾ ಯಾರು ಮೇಲಲ್ಲ, ಕೀಳಲ್ಲ ಎನ್ನುವುದನ್ನು ಅರಿವಾಗಿಸಿರುವ ಶಿಕ್ಷಕಿಯ ಪ್ರಯತ್ನ ಇಲ್ಲಿ ಸಮರ್ಥವಾಗಿ ಕಾಣುತ್ತದೆ.


ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ಮಕ್ಕಳ ಮನಸನ್ನು ಅರ್ಥ ಮಾಡಿಕೊಂಡು ದಿನದಿನದ ಹೊಸಹೊಸ ಸವಾಲುಗಳನ್ನು ಮೆಟ್ಟಿ ನಿಲ್ಲವ ಇಂತಹ ಶಿಕ್ಷಕರು ನಿಜಕ್ಕೂ ಆದರ್ಶ.


ಹೊಸದಾಗಿ ಶಿಕ್ಷಕ ವೃತ್ತಿಗೆ ಸೇರಿದವರು, ಶಿಕ್ಷಕರ ಅನುಭವದ ಬುತ್ತಿಯನ್ನು ಸವಿಯಲಿಚ್ಚಿಸುವವರು, ಎಲ್ಲಾ ವಯೋಮಾನದ ಮಕ್ಕಳ ಪೋಷಕರು, ಅದರಲ್ಲಿಯೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಎಲ್ಲರೂ ಓದಲೇಬೇಕಾದ ಪುಸ್ತಕ ಎಂದೇ ಹೇಳುವೆ. ಈ ವರ್ಷದ ಓದಿನಲ್ಲಿ ಖಂಡಿತವಾಗಿಯೂ ಮನದಲ್ಲಿ ನಿಲ್ಲುವ ಪುಸ್ತಕ ಇದು. ಒಂದೊಳ್ಳೆ ಓದಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು.


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 30, 2026

ತುತ್ತಿನ ಸವಿ (ಬೆಳಕಿಂಡಿಯ ಕತೆಗಳು - 77)

 


ಚಿಕ್ಕಂದಿನಲ್ಲಿ ಮುದ್ದೆಯನ್ನು ತುಪ್ಪದಲ್ಲಿ ಅದ್ದಿ ತಿನ್ನಿಸುವಾಗ, ಅನ್ನ ಉಪ್ಪು-ತುಪ್ಪ, ಸಾರನ್ನ, ಚಟ್ನಿ ಅನ್ನ, ಒಗ್ಗರಣೆ ಅನ್ನ, ಮೊಸರನ್ನ, ಹಾಲು ಅನ್ನ ಹೀಗೆ ಒಂದೊಂದು ದಿನ ಒಂದೊಂದು ರೀತಿ ತುತ್ತು ಬಾಯಿಗಿಡುತ್ತಾ ಮುದ್ದು ಮಾಡಿ ತಿನ್ನಿಸುತ್ತಾ, ಟಿ.ವಿ ಯ ಸಖ್ಯ ಬೆಳೆಸಲು ಬಿಡದೆ, ಚಂದಮಾಮನನ್ನು ತೋರಿಸುತ್ತಾ ಕತೆ ಹೇಳಿ ತಿನ್ನಿಸುವಾಗಿನ ನಿನ್ನ ಪಾತ್ರ ಈಗ ನನ್ನದಾಗಿದೆ ಅಮ್ಮ. 

ಮೊಬೈಲ್ ತೋರಿಸದೆ, ಕತೆಗಳನ್ನು ಹೇಳುತ್ತಾ ತುತ್ತು ಮಾಡಿ ತಿನ್ನಿಸುವಾಗಿನ ಆ ಸಂತೋಷದ ಸವಿ ಯಾವುದಕ್ಕೂ ಬೆಲೆಕಟ್ಟಲಾದದ್ದು. ಅದು ಸಂಸ್ಕೃತಿಯ ಸವಿಯೂ ಹೌದು.


~ವಿಭಾ ವಿಶ್ವನಾಥ್

ವಿಧಿಯ ಮಧುರ ಸಂಚು (ಬೆಳಕಿಂಡಿಯ ಕತೆಗಳು - 76)

 


ಆವತ್ತು ನೀನು ನನಗೆ ಸಿಗದಿದ್ದರೆ ಬಹುಶಃ ನಾನೂ, ನೀನೂ ಸತ್ತು ಯಾವ ಕಾಲವಾಗಿರುತ್ತಿತ್ತೋ.. 

ನಿನ್ನನ್ನು ನಿನ್ನಮ್ಮ ಅನಾಥಳನ್ನಾಗಿಸಿದ್ದರೆ, ನನ್ನನ್ನು ನಾನೇ ಅನಾಥಳನ್ನಾಗಿಕೊಂಡಿದ್ದೆ. ಬಹುಶಃ, ನಿನಗೆ ನಾನು ತಾಯಾಗಲು ಹಾಗೂ ನೀನು ನನ್ನ ಮಡಿಲ ಕೂಸಾಗಲು ವಿಧಿಯ ಬೆಸುಗೆಯೇ ಇದಾಗಿರಬಹುದಾ..?? ಅಂದು ನೀನು ನನಗೆ ಸಿಗದಿದ್ದರೆ, ನಮ್ಮಿಬ್ಬರ ಬಂಧ ಬೆಸೆಯದಿದ್ದರೆ ಈ 'ಮಡಿಲು' ಅನಾಥಾಲಯದ ಹುಟ್ಟಾದರೂ ಎಲ್ಲಿರುತ್ತಿತ್ತು ಹೇಳು..?? ನೀನು ಸಿಕ್ಕಿ 25 ವರ್ಷವಾಯಿತು. ಇಂದೂ ಮತ್ತಾವುದೋ ಕಂದ 'ಮಡಿಲು' ತುಂಬಲಿದೆ. ವಿಧಿಯ ಮಧುರ ಸಂಚು ಹೀಗೇ ನಮ್ಮೆಲ್ಲರನ್ನು ಬೆಸೆದುಬಿಡಲಿ.. 


~ವಿಭಾ ವಿಶ್ವನಾಥ್

ಸಿರಿತನಕ್ಕೆ ಸಡ್ಡು ಹೊಡೆದು...

 


"ಅಯ್ಯೋ ಅಮ್ಮ, ನಿಮಗೆಲ್ಲಾ ಏನಾಗಿದೆ. ಏನು ಅವರೇನು ಈ ದೇಶದ ರಾಷ್ಟ್ರಪತಿನಾ.. ಅವರು ಬಂದರೆ ಎದ್ದು ನಿಲ್ಲುವುದೇನು.. ಅತಿ ಗೌರವ ಕೊಡುವುದೇನು..

ಅವರೇನು ಆಕಾಶದಿಂದ ಇಳಿದು ಬಂದಿದ್ದಾರಾ ಹೇಗೆ.. ಅವರು ಕೂಡಾ ನಮ್ಮ ಹಾಗೆಯೇ ಮನುಷ್ಯರು. ಅಲ್ಲವಾ ? ಶ್ರೀಮಂತರಾದರೆ ಅದು ಅವರ ಮನೆಯಲ್ಲಿ ದರ್ಪ ತೋರಿಸಲಿಕ್ಕೆ. ಅಷ್ಟೇ... ನಿಮ್ಮಂತಹವರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ ಅವರು. ನಿಮಗೆಲ್ಲಾ ಎಷ್ಟು ಹೇಳಿದರೂ ಬುದ್ದಿ ಬರುವುದಿಲ್ಲ ಬಿಡಿ" ಎಂದ ಶ್ರೀಕಾಂತನ ಮಾತನ್ನು ಕೇಳಿ


"ನಾಲ್ಕು ಅಕ್ಷರ ಕಲಿತ ಮಾತ್ರಕ್ಕೆ ನೀನು ದೊಡ್ಡ ಮನುಷ್ಯ ಆಗುವುದಿಲ್ಲ. ಅಥವಾ ನೀನು ಹೇಳಿದ್ದೇ ಸರಿ ಅಂತಾ ಇಲ್ಲಿ ಯಾರೂ ಸಹಾ ಕುಣಿಯುವುದಿಲ್ಲ. ನೀನೇನೋ ಹೇಳುತ್ತಿಯ... ಕಳೆದ ಬಾರಿ ನಿನ್ನಂತಹಾ ಮಂದ ಬುದ್ಧಿಯವರು ಅದನ್ನೇ ನಂಬಿಕೊಂಡು ಕುಣಿದರು. ಧಣಿಗಳು ಅವರಿಗೆ ಕೆಲಸಕ್ಕೆ ಕರೆಯುವುದನ್ನೇ ಬಿಟ್ಟರು. ಕೊನೆಗೆ ಅವರೇ ಧಣಿಗಳ ಹತ್ತಿರ ಹೋಗಿ ಕಾಲು ಹಿಡಿದು ಬೇಡಿಕೊಂಡರು. ನೀವುಗಳು ಹಳ್ಳಿಗೆ ಬರುತ್ತೀರ. ನಾಲ್ಕು ದಿನ ಇರುತ್ತೀರಿ.. ಹೋಗಬೇಕಾದರೆ ಏನನ್ನೋ ಹೇಳಿ ಆಸೆ ಹುಟ್ಟಿಸಿ ಹೋಗುತ್ತೀರಿ. ಕೊನೆಗೆ ಅದನ್ನೆಲ್ಲಾ ಅನುಭವಿಸಬೇಕಾಗಿರುವುದು ಇಲ್ಲಿ ಇರುವವರೇ ತಾನೇ.." ಎಂದ ಅಮ್ಮನ ಮಾತಿಗೆ


"ಅಮ್ಮ, ನಾವೇನು ಏನನ್ನೋ ಹೇಳುತ್ತಿಲ್ಲ. ಇಲ್ಲಿನ ನಿಮ್ಮ ಧಣಿಗಳು ನಿಮ್ಮನ್ನು ದಿನಗೂಲಿ ಅಂತಾ ಕರೆಸಿಕೊಳ್ಳುತ್ತಾರೆ. ಆದರೆ , ಕಡಿಮೆ ಸಂಬಳ ಎಣಿಸುತ್ತಾರೆ. ಕೇಳಿದರೆ, ಮುಂದಿನ ಸಲ ಅದಕ್ಕಿಂತ ಕಮ್ಮಿ. ನಿಮಗೆ ಬಗ್ಗಿ ಬಗ್ಗಿ ರೂಢಿಯಾಗಿ ತಲೆ ಎತ್ತಿ ನಿಂತು ಮಾತನಾಡುವುದನ್ನೇ ಮರೆತಿದ್ದೀರಿ. ನಾವು ಕೇಳಿದ ತಕ್ಷಣ ಅವರು ಸಾಲ ಕೊಡುವುದಿಲ್ಲವಾ ಅಂತಾ ನಮಗೇ ಪ್ರಶ್ನೆ ಮಾಡುತ್ತೀರಿ.


ಆ ಯಪ್ಪಾ ಏನು ಸುಮ್ಮನೆ ಸಾಲ ಕೊಡುತ್ತಾನಾ ಹೇಳು. ನೀವು ಅದಕ್ಕೆ ಬಡ್ಡಿ, ಚಕ್ರ ಬಡ್ಡಿ ಎಲ್ಲವನ್ನೂ ಕಟ್ಟುತ್ತೀರಿ. ಅಲ್ಲವಾ ? ಏನೂ ಆಧಾರವಾಗಿ ಇರಿಸಿಕೊಳ್ಳದೆ ಸುಮ್ಮನೆ ಸಾಲ ಕೊಟ್ಟು ಬಿಡುತ್ತಾರಾ ಹೇಳು. ಜಮೀನನ್ನೋ ಇಲ್ಲವೇ ಮನೆಯನ್ನೋ ಅಥವಾ ಪ್ರಾಣಿಗಳನ್ನೋ ಅಡ ಇರಿಸುತ್ತೀರಿ ತಾನೇ.. ನೀವು ಈ ಯಪ್ಪನ ಬಳಿ ಹೀಗೆ ಸಾಲ ತೆಗೆದುಕೊಳ್ಳುವುದರ ಬದಲಾಗಿ ಬ್ಯಾಂಕ್ ಗೆ ಹೋಗಿ ಸಾಲ ಕೇಳಿದರೆ ಸಾಲ ಕೊಡುತ್ತಾರೆ ತಾನೇ ? ನಿಮ್ಮ ಅನಕ್ಷರತೆಯನ್ನು, ಮುಗ್ಧತೆಯನ್ನು ಸರಿಯಾಗಿಯೇ ಉಪಯೋಗಿಸಿಕೊಳ್ಳುತ್ತಾ ಇದ್ದಾನೆ. ಸಿರಿತನ ಯಾವತ್ತಿಗೂ ಶಾಶ್ವತ ಅಲ್ಲ ತಾನೇ..?? " ಎಂದು ಒಂದೇ ಸಮನೆ ಮಾತನಾಡುತ್ತಿದ್ದವನನ್ನು ಕಂಡ ಶ್ರೀಕಾಂತನ ತಾಯಿ


"ನಿಮ್ಮಪ್ಪನೂ ಹೀಗೆ ಮಾಡುವುದಕ್ಕೆ ಹೋಗಿ ಸತ್ತಿದ್ದು. ನೀನೂ ಹಾಗೆ ಆಡಿ ನನ್ನ ಹೊಟ್ಟೆ ಉರಿಸುತ್ತಾ ಇದ್ದೀಯ.


ಅವರತ್ರ ದುಡ್ಡಿದೆ. ಆದರೆ, ನಮ್ಮ ಹತ್ತಿರ ಏನೂ ಇಲ್ಲ. ನಾವೂ ಒಬ್ಬರಿಗೆ ಸಮನಾಗಿ ನಿಂತು ವಿರೋಧಿಸಬೇಕು ಅಂತಾ ಅಂದರೆ ಜನಬಲ ಮತ್ತು ಹಣಬಲ ಇರಬೇಕು. ಜನಬಲವನ್ನು ಹಣದಿಂದ ಕೊಂಡುಕೊಳ್ಳಬಲ್ಲ ಆತ. ಹಣಬಲ ಬೇಕು ಅಂದರೆ ದುಡಿಯಬೇಕು. ಆದರೆ, ನೀನೂ ಅಡ್ಡ ದಾರಿ ಹಿಡಿದು ಸಿರಿವಂತ ಆಗುತ್ತೇನೆ ಅಂತಾ ಹೊರಟರೆ ಅವನಿಗೂ ನಿನಗೂ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ. ನೀನು ನ್ಯಾಯವಾಗಿ ಸಂಪಾದನೆ ಮಾಡಬೇಕು.


ಬಗ್ಗುವುದು ಅವನಿಗೆ ಅಥವಾ ಅವನ ಸಿರಿತನಕ್ಕೆ ಮಣಿದು ಅಲ್ಲ. ನಿಮ್ಮಂತಹಾ ಭವಿಷ್ಯದ ಪೀಳಿಗೆ ಎದ್ದು ನಿಲ್ಲಬೇಕು ಅಂತಾ ಅಂದರೆ ಅದು ನಮಗೆ ಅನಿವಾರ್ಯ. ನಿಮ್ಮ ರೀತಿ ಮಾತನಾಡುತ್ತಾ ಕಾಲಹರಣ ಮಾಡುತ್ತಾ ಕುಳಿತರೆ ಅವನು ಮತ್ತಷ್ಟು ಬೆಳೆಯುತ್ತಾ ಹೋಗುತ್ತಾನೆ. ಅದರ ಬದಲಾಗಿ ಹೋಗಿ ದುಡಿ. ಅದಕ್ಕಿಂತ ಹೆಚ್ಚು ಬಲಶಾಲಿಯಾಗಿ ಬಾ.. ಅದೂ ನ್ಯಾಯವಾದ ರೀತಿಯಲ್ಲಿ.


ಆಗ ಬಾ. ಸಿರಿತನಕ್ಕಲ್ಲ ಆ ಸಿರಿವಂತನ ದರ್ಪಕ್ಕೆ ಸಡ್ಡು ಹೊಡೆದು ನಿಲ್ಲಲು ಎಲ್ಲರೂ ಜೊತೆಯಾಗುತ್ತೇವೆ. " ಎಂದ ಅಮ್ಮನ ಮಾತು ಶ್ರೀಕಾಂತನಿಗೆ ಸಿರಿತನಕ್ಕೆ ಸಡ್ಡು ಹೊಡೆದು ನಿಲ್ಲಲು ಬೇರೆಯದ್ದೇ ಹಾದಿ ತೋರಿತ್ತು.


~ವಿಭಾ ವಿಶ್ವನಾಥ್

ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ


"ಈಗಲೇ ಇಷ್ಟು ಕಟು ವಾಸ್ತವವಾದಿಯಾಗಬೇಡ್ವೆ. ಬರಹದಲ್ಲಿ ಅಷ್ಟು ಕೋಮಲ ಭಾವನೆಗಳನ್ನು ತುಂಬುವ ನೀನೇ ಇಷ್ಟು ಕಟುವಾದರೆ ಹೇಗೆ..?" ಕೇಳಿದ್ದಕ್ಕೆ 


"ಮತ್ತೆ.. ಹೇಗಿರಬೇಕು ನೀನೇ ಹೇಳು..?

ಕಾಗೆ ಹಸಿರು ಬಣ್ಣ ಅಂದರೆ ಹೂಂ ಅನ್ನಬೇಕಾ..?

ವಾಸ್ತವದ ನುಡಿಗಳು, ಸತ್ಯ ಎಲ್ಲವೂ ಕಟುವೇ. ಕಹಿ ಔಷಧಿಯೇ ಅಲ್ಲವಾ ರೋಗವನ್ನು ಗುಣಪಡಿಸೋದು" ಎಂದಳು.


ಅವಳ ಮಾತಿನಲ್ಲಿ ತಪ್ಪು ಕಾಣಲಿಲ್ಲವಾದರೂ.. ಗುಂಪಿನಲ್ಲಿ ಗೋವಿಂದ ಎನ್ನುವವರಿಗಿಂತ ವಿಭಿನ್ನವಾಗಿ ಕಂಡ ಇವಳೇ ಎಲ್ಲರಿಗೂ ಮೊದಲ ಗುರಿಯಾಗುತ್ತಿದ್ದಳಲ್ಲಾ ಎನ್ನಿಸಿತು.


"ಗುಂಪಿನಲ್ಲಿ ಸ್ಥಾನ ಇಲ್ಲ ಎಂದರೆ ಅವರ ಸ್ಥಾನ ವೇದಿಕೆಯ ಮೇಲೆ" ಎನ್ನುವ ಮಾತು ಆ ಕ್ಷಣಕ್ಕೆ ಅವಳಿಗೆ ಹೊಂದುವಂತೆ ಕಂಡಿತು. 

"ನೇರವಾದ ಮರಗಳೇ ಅಲ್ಲವಾ ಮೊದಲು ಕೊಡಲಿಯ ಏಟಿಗೆ ಬಲಿಯಾಗುವುದು.." ಎಂಬ ಮಾತು ನೆನಪಾಗಿ ಆತಂಕವೂ ಆಯಿತು.


ಅವಳ ಬಿಸಿರಕ್ತದ ವಯಸ್ಸು ಹೀಗೆಲ್ಲಾ ಮಾಡಿಸುತ್ತಿದೆ. ಹಾರಾಟ, ಕಟು ವಾಸ್ತವಗಳು ಕಾಲ ಕಳೆದಂತೆ ಮಾಗುತ್ತವೆ. ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಅರಿವಾಗುವ ಸಮಯ ಬರುತ್ತದೆ. ಅದು ಅವಳಿಗೆ ತಾನಾಗಿಯೇ ಅರ್ಥವಾಗುತ್ತದೆ ಎಂದುಕೊಂಡೆನಾದರೂ.. ಕಾಲ ಬಲು ಕಠೋರ. ಯಾವತ್ತಿಗೂ ರಿವರ್ಸ್ ಪ್ರಕ್ರಿಯೆ ಅನ್ನೋದೇ ಅಲ್ಲಿಲ್ಲ. ಅವಳು ಮಾಗುವಷ್ಟರಲ್ಲಿ ಮನಸ್ಸು ಕಲ್ಲಾದರೆ..!


ಹೀಗೆ ಯೋಚನೆಗಳ ಪ್ರವಾಹ ಸಾಗುತ್ತಿತ್ತು. ಅದು ಅವಳ ಮಾತುಗಳಿಂದಲೇ ಕಡಿಯಿತು. 


"ಯೋಚನೆ ಬೇಡ್ವೆ. ಮನಸ್ಸಲ್ಲಿ ಇರೋದನ್ನ ಒದರಿ ಹಗುರಾಗುವೆ. ಕೆಲವೊಮ್ಮೆ ಜನಗಳ ಎದುರಲ್ಲಿ.. ಹಲವೊಮ್ಮೆ ನನ್ನ ಬರಹದಲ್ಲಿ..

'ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ' ಅನ್ನೋ ನುಡಿ ಕೇಳಿಲ್ವಾ ನೀನು..?!

ಸಂಧರ್ಭಕ್ಕೆ ತಕ್ಕಂತೆ ಕಠಿಣವೋ.. ಮೃದುವೋ ನಿರ್ಧರಿಸುತ್ತೇನೆ. 

ತೀರಾ ತಲೆಕೆಡಿಸಿಕೊಳ್ಳಬೇಡ್ವೆ"


ಅವಳು ಹೀಗೆಯೇ ಇರಲಿ ಬದಲಾಗದಿರಲಿ ಎಂದು ಮನ ಹಾರೈಸಿದರೂ.. ಬಾಯಲ್ಲಿ ಬಂದ ಮಾತು..?!


ಈ ಮಾತುಕಥೆ ಒಂದು ಕಾಲದ ನನ್ನನ್ನೇ ನೆನಪಿಸಿತು. ಅಂದ ಹಾಗೆ ಅವಳ ಜೊತೆ ಆದ ಸಂಭಾಷಣೆ..?!


~ವಿಭಾ ವಿಶ್ವನಾಥ್ 

ಶನಿವಾರ, ಆಗಸ್ಟ್ 29, 2026

ಮಂಜು ಮುಸುಕಿದ ಹಾದಿ (ಪುಸ್ತಕ ಯಾನ - 485)


ಪುಸ್ತಕದ ಶೀರ್ಷಿಕೆ : ಮಂಜು ಮುಸುಕಿದ ಹಾದಿ 

ಲೇಖಕರು : ಶೈಲಜಾ ಪ್ರಕಾಶ್ 

ಪ್ರಕಾಶಕರು : ಶ್ರೀ ಕೃಷ್ಣ ಪ್ರಕಾಶನ

ಪ್ರಥಮ ಮುದ್ರಣ : 2022


ಈ ಪುಸ್ತಕ ಮಂಜು ಮುಸುಕಿದ ಹಾದಿ, ಟೀಚರ್ ಹಾಗೂ ಚಿಂಪು ಎನ್ನುವ ಮೂರು ಕಿರುಕಾದಂಬರಿಗಳು ಸಂಪುಟ ಇದು.


ಇಂದು ಮಂಜು ಮುಸುಕಿದ ಹಾದಿ ಕಾದಂಬರಿಯನ್ನು ಮಾತ್ರ ಪರಿಚಯಿಸುತ್ತಿದ್ದೇನೆ.


ಮಂಜು ಮುಸುಕಿದ ಹಾದಿ ಸಾಮಾಜಿಕ ಶೈಲಿಯ ಕಾದಂಬರಿ. ಮುಖ್ಯವಾಗಿ ಕೌಟುಂಬಿಕ ಪರಿಸರವನ್ನು ಕಟ್ಟಿಕೊಡುತ್ತಾ.. ಮನುಷ್ಯನ ಜೀವನ ಸದಾ ಬೆಳಕಿನಲ್ಲಿರದೆ ಮಂಜು ಮುಸುಕಿದ ಹಾದಿಯಲ್ಲಿಯೂ ನಡೆಯಬೇಕಾದ ಸಂದರ್ಭಗಳನ್ನು ತೋರಿಸುತ್ತಾರೆ. ಅಂತಹ ಸಂದರ್ಭದಲ್ಲಿ ದಾರಿ ಸರಿಯಾಗಿ ಕಾಣದೆ.. ಕಲ್ಲು, ಮಣ್ಣು, ಮುಳ್ಳು, ಹಳ್ಳ-ಕೊಳ್ಳಗಳನ್ನು ದಾಟುವ ಸಂದರ್ಭ ಬಂದಾಗ ಅವೆಲ್ಲವನ್ನು ಎದುರಿಸಿ ಹೇಗೆ ಸಾಗುತ್ತಾರೆ ಹಾಗೂ ಅವೆಲ್ಲವೂ ಅವರ ಬದುಕಿನಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ತರುತ್ತದೆ ಎಂಬುದನ್ನು ದಾರಿದೀಪದಂತೆ ತೋರಿದ್ದಾರೆ.


ಕಾದಂಬರಿಯ ನಾಯಕ ವಿಶ್ವನಾಥ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು, ನಂತರ ತಾಯಿಯನ್ನು ಕಳೆದುಕೊಂಡವನು. ಎಸ್. ಎಸ್. ಎಲ್. ಸಿ ಗೆ ಬರುವ ಹೊತ್ತಿಗೆ ಅನಾಥನಾಗಿದ್ದ ಆತನ ಹೊಣೆ ಹೊತ್ತವರು ಅವನ ಸೋದರ ಮಾವ ಸದಾಶಿವರಾವ್. ಸದಾಶಿವರಾವ್ ಅವರ ಮನೆಯಲ್ಲಿಯೇ ತನ್ನ ಮುಂದಿನ ದಿನಗಳನ್ನು ಕಳೆವ ಅವನಿಗೆ ಅಲ್ಲಿ ಸಿಗುತ್ತಿದ್ದದ್ದು ಊಟ ಹಾಗೂ ಉಳಿದುಕೊಳ್ಳುವ ಜಾಗವಷ್ಟೇ ಎಂದರು ತಪ್ಪಾಗಲಾರದು. ಆತ ಅದೆಲ್ಲಾ ಕಷ್ಟಗಳನ್ನು ದಾಟಿ ನಿಂತ ಬಗ್ಗೆ ಸ್ಪೂರ್ತಿದಾಯಕ.


"ಸಾಧನೆಗಳಲ್ಲಿ ನೆಲೆ ನಿಂತವನ ಬುದ್ಧಿಯು ಒಂದೇ ಮುಖವಾಗಿರುವುದು. ನೆಲೆ ಇಲ್ಲದವನ ಬುದ್ಧಿಯು ಮರದ ಅನೇಕ ಕೊಂಬೆಗಳ ತರಹ ಬೇರೆ ಬೇರೆಯಾಗಿರುತ್ತೆ


ಬದುಕುವುದು ಒಂದು ಕಲೆ!"


ಮುಂದೆ ಥಿಯೇಟರ್ ಕೆಲಸಕ್ಕೆ ಸೇರಿದಾಗ ಅಲ್ಲಿನ ಓನರ್ ಮಂಜಯ್ಯನವರ ಪ್ರೋತ್ಸಾಹದಿಂದ ನೈಟ್ ಕಾಲೇಜಿಗೆ ಹೋಗಿ ಓದಿ ಡಿಗ್ರಿ ಮುಗಿಸಿ ಒಳ್ಳೆಯ ಕೆಲಸಕ್ಕೂ ಸೇರುತ್ತಾನೆ. 


ಇತ್ತ ಮತ್ತೊಂದು ಕುಟುಂಬದ ಪರಿಚಯ ಮಾಡಿಸುತ್ತಾರೆ. ಅದು ಅಡ್ವಕೇಟ್ ಆನಂದ ರಾವ್ ಅವರ ಕುಟುಂಬ. ಅವರ ಪತ್ನಿ ಮಂಗಳ. ಮದುವೆಯಾಗಿ 10 ವರ್ಷವಾದರೂ ಅವರಿಗೆ ಮಕ್ಕಳಿರಲಿಲ್ಲ. ಆನಂದರಾವ್ ಅವರ ಬುದ್ಧಿವಂತಿಕೆ ಹಾಗೂ ಗಳಿಸುವ ಕಲೆಯನ್ನು ಸೊಗಸಾಗಿ ಚಿತ್ರಿಸಿದ್ದಾರೆ.


ಆನಂದರಾಯರ ಏಕೈಕ ತಂಗಿ ಸರಸ್ವತಮ್ಮ. ಅವರ ಒಬ್ಬಳೇ ಮುದ್ದಿನ ಮಗಳು ಮಾಲತಿ. ಗಂಡನನ್ನು ಕಳೆದುಕೊಂಡಿದ್ದ ಸರಸ್ವತಮ್ಮನವರ ಆರೋಗ್ಯವು ಅಷ್ಟು ಸರಿ ಇರಲಿಲ್ಲ. ಆನಂದರಾಯರು ತಂಗಿಯ ಕಷ್ಟಕ್ಕಾಗುತ್ತಿದ್ದರು. ತಿಂಗಳಿಗೊಮ್ಮೆ ಬಂದು ಅವರ ಸಂಸಾರದ ನಿಗಾ ನೋಡುತ್ತಿದ್ದರು.


ಮುಂದೆ ವಿಶ್ವನಾಥ ಹಾಗೂ ಮಾಲತಿ ಇಬ್ಬರ ವಿವಾಹವಾಗುತ್ತದೆ. ಇದಕ್ಕೆ ಕಾರಣರು ಯಾರು..? ಅವರ ಬಂಧ ಕೂಡಿಬಂದದ್ದು ಹೇಗೆ..?


ಸೋದರಸೊಸೆ ಮಾಲತಿಯ ಬದುಕಿನಲ್ಲಿ ಮೊದಲಿನಿಂದಲೂ ಕಾಳಜಿ ಮಾಡುತ್ತಿದ್ದ ಆನಂದರಾಯರ ಮನಸ್ಸಿನಲ್ಲಿ ಏನಿತ್ತು ..?


ಆನಂದರಾಯರು ಅವರ ಸಂಸಾರಕ್ಕೆ ನೆರವಾಗುವಾಗ ಮಂಗಳಮ್ಮನವರ ಮನಸ್ಸಿನ ಭಾವಗಳೇನು..?


ಮದುವೆಯಾದ ನಂತರವೂ ಮಾಲತಿ ಓದಿನಲ್ಲಿ ಪ್ರಗತಿ ಸಾಧಿಸುವ ಬಗೆ ಸ್ಪೂರ್ತಿದಾಯಕವೆನಿಸಿತು. ಅಷ್ಟೇ ಅಲ್ಲದೆ ಮಾಲತಿಯ ಗಟ್ಟಿತನದ ವ್ಯಕ್ತಿತ್ವ ಇಲ್ಲಿದೆ. ಗಂಡನನ್ನು ವ್ಯರ್ಥವಾಗಿ ಕಾಲ ಕಳೆಯಲು ಬಿಡದೆ ಡಿಪಾರ್ಟ್ಮೆಂಟ್ ಎಕ್ಸಾಮ್ ಗಳನ್ನು ತೆಗೆದುಕೊಳ್ಳುವಂತೆ ಸ್ಪೂರ್ತಿ ತುಂಬಿ ಆತನ ವೃತ್ತಿ ಬದುಕಿನ ಮುನ್ನಡೆಗೆ ಕಾರಣವಾಗುತ್ತಾಳೆ. ವಿಶ್ವನಾಥ ಪತ್ನಿಯ ಬಗ್ಗೆ ಯಾವ ಭಾವವನ್ನು ಹೊಂದಿದ್ದ..?


ಮನುಷ್ಯನ ಬದುಕಿನಲ್ಲಿ ಸುಖ ಬಂದ ಹಾಗೆಯೇ ದುಃಖಗಳೂ ಹಿಂದೆಯೇ ಬರುತ್ತವೆ. ಸುಖಕ್ಕೆ ಅಣಿಯಾದಂತೆ ಕಷ್ಟಕ್ಕೂ ಅಣಿಯಾಗಿರಬೇಕು. 


ಹಲವು ಸುಖಗಳನ್ನು ಮಾನವನು ಬಯಸಿ, ಬೇಡಿ ಪಡೆದರು ಮುಂದೆ ಅವೇ ಮುಳುವಾಗುತ್ತವೆ. ಮಾಲತಿ ಹಾಗೂ ವಿಶ್ವನಾಥರ ಬದುಕಿನಲ್ಲಿಯೂ ಅಂತಹ ಪ್ರಸಂಗ ಬಂದಿತು. ಅವರ ಬದುಕಿನಲ್ಲಿ ಮೂರು ವರ್ಷದಲ್ಲಿ ಬಹಳ ಬದಲಾವಣೆಗಳಾಗಿದ್ದು.. ಅವರ ಬದುಕಿನಲ್ಲಿ ಮಗಳು ಮೀನಾ ಬಂದಿದ್ದರೆ, ಉಳಿದವರೆಲ್ಲರೂ ಇದ್ದು ಇರದಂತಾಗಿದ್ದೇಕೆ.?


ಇದಾದ ಆರು ವರ್ಷಗಳಲ್ಲಿ ಮತ್ತೆ ಗಂಭೀರವಾದ ಬದಲಾವಣೆಗಳಾದವು. ಸಂಸಾರದಲ್ಲಿ ನಂಬಿಕೆ ಎನ್ನುವುದು ಎಷ್ಟು ಮುಖ್ಯ ಎನ್ನುವುದರ ಅರಿವಾಗುತ್ತದೆ. ಎಷ್ಟೇ ನಂಬಿಕೆ ಇದ್ದರೂ ಅದರ ಬುಡವನ್ನು ಅಲುಗಾಡಿಸುವಂತಹ ಕೆಲವು ಘಟನೆಗಳು, ಬೇರೆಯ ಕೋನದ ನೋಟ ಸುಖ ಸಂಸಾರಕ್ಕೆ ಎರವಾಗಬಲ್ಲವು. ಇದೆಲ್ಲವನ್ನು ಮೀರಿ ವಿಶ್ವನಾಥ ಹಾಗೂ ಮಾಲತಿಯರು ಗಟ್ಟಿಯಾದರೇ..?


ಅಕಸ್ಮಾತ್ ಇದೆಲ್ಲವನ್ನು ಬಗೆಹರಿಸಿಕೊಂಡರೂ.. ವಿಧಿಯ ಆಟ ಬೇರೆಯೇ ಇದ್ದರೆ..?


ವ್ಯಕ್ತಿಗಳ ನಡೆ ಸಮಯ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಇಲ್ಲಿಯೂ ಯಾರೂ ಅದಕ್ಕೆ ಹೊರತಾದವರಲ್ಲ. ಮಾಲತಿಯ ವ್ಯಕ್ತಿತ್ವ ಮಾತ್ರ ಮೊದಲಿನಿಂದ ಕೊನೆಯವರೆಗೂ ಬದಲಾದದ್ದು ಕಂಡುಬರಲಿಲ್ಲ. ಯಾರ ಮನಸ್ಸಿನಲ್ಲಿ ಯಾವ ಭಾವವಿರುತ್ತದೆಯೋ ಯಾರೂ ಅರಿತವರಲ್ಲ. ಆದರೆ, ನಕಾರಾತ್ಮಕ ಗುಣವನ್ನು ಬೆಳೆಯಲು ಬಿಡದೆ ಸಕಾರಾತ್ಮಕವಾಗಿ ಆಲೋಚಿಸುವ ಹಾಗೂ ಅಂತೆಯೇ ನಡೆಯುವ ಗುಣವಷ್ಟೇ ಸಮಾಜದಲ್ಲಿ ಅವರ ವ್ಯಕ್ತಿತ್ವವನ್ನು ಉಳಿಸಿಕೊಡಬಲ್ಲದು.


ವಿಶ್ವನಾಥ ಮಾಲತಿಯರ ಬದುಕಿನ ಮಂಜು ಮುಸುಕಿದ ಹಾದಿಯ ಚಿತ್ರಣ ಇಲ್ಲಿದೆ. 


ಹಲವಾರು ನೋಟ್ ಮಾಡುವಂತಹ ಕೋಟ್ ಗಳಂತಹ ಮೌಲ್ಯಯುತ ಸಾಲುಗಳನ್ನು, ಗೂಡಾರ್ಥ ಉಳ್ಳ ನಿರೂಪಣೆಯನ್ನು ನಾವಿಲ್ಲಿ ಕಾಣಬಹುದಾಗಿದೆ. ಸೊಗಸಾದ ಕಾದಂಬರಿಯ ಓದು.

~ವಿಭಾ ವಿಶ್ವನಾಥ್

ಪುರುಷಸಿಂಹ (ಪುಸ್ತಕ ಯಾನ - 484)


ಪುಸ್ತಕದ ಶೀರ್ಷಿಕೆ : ಪುರುಷಸಿಂಹ

ಲೇಖಕರು : ಜಿ. ಪ್ರಕಾಶ್

ಪ್ರಕಾಶಕರು : ಕ್ರಿಯೇಟಿವ್ ಪುಸ್ತಕಮನೆ 

ಎರಡನೇ ಮುದ್ರಣ : 2026

ಪುಟಗಳು : 104

ಬೆಲೆ : 100 ರೂ. 


1980 ರಿಂದ ಸ್ಪೈ ನಾವೆಲ್ ಗಳನ್ನು ಬರೆಯಲು ಶುರು ಮಾಡಿರುವ ಜಿ. ಪ್ರಕಾಶ್ ಅವರ 100ನೇ ಕಾದಂಬರಿ ಇದು. ಈ ಕಾದಂಬರಿಯ ಮುಖ್ಯ ನಾಯಕ ಪ್ರದೀಪ. 


ಪುಸ್ತಕ ಮನೆ ಪ್ರಕಾಶನದವರ "ಅಪರಂಜಿ ಮಾಲೆ" ಮಾಲಿಕೆಯಡಿ ಈ ಕಾದಂಬರಿ ಮರುಮುದ್ರಣಗೊಂಡಿದೆ.


ಸ್ಪೈ ನಾವೆಲ್ ಆದ್ದರಿಂದ ಈ ಕಾದಂಬರಿಯ ಪೂರ್ಣ ಕಥೆಯನ್ನು, ರೋಚಕ ತಿರುವುಗಳನ್ನು ನಾನು ಬಿಚ್ಚಿಡಲಾರೆ. ಕಾದಂಬರಿಯ ಪ್ರವೇಶಿಕೆ ಹಾಗೂ ಕುತೂಹಲ ಮೂಡಿಸುವಂತಹ ವಿಚಾರಗಳನ್ನು ಹೇಳುವ ಪ್ರಯತ್ನ ಮಾಡುವೆ.


ಕಾದಂಬರಿ ಶುರುವಾಗುವುದು ಸಿ.ಬಿ.ಐ ಡೈರೆಕ್ಟರ್ ಡಿಸೋಜ ಹಾಗೂ 65 ವರ್ಷದ ದಿವಾಕರ್ ಅವರ ಮಾತುಕತೆಯಿಂದ. ದಿವಾಕರ್ ಅವರಿಗೆ ಸಹಾಯ ಬೇಕಿರುತ್ತದೆ. ವಿಜ್ಞಾನಿಯಾಗಿದ್ದವರು ಡಿಫೈನ್ಸ್ ಇನ್ಸ್ಟಿಟ್ಯೂಟ್ ನಲ್ಲಿ ಚೀಫ್ ಸೈಂಟಿಸ್ಟ್ ಆಗಿ ಎರಡು ವರ್ಷದ ಹಿಂದೆ ರಿಟೈರ್ಡ್ ಆಗಿದ್ದವರು. ಇಬ್ಬರೂ ಬಾಲ್ಯದ ಗೆಳೆಯರು. ರಾಷ್ರಾಷ್ಟ್ರಾಧ್ಯಕ್ಷರಿಂದ ಪ್ರಶಸ್ತಿಯನ್ನೂ ಪಡೆದಿದ್ದವರು. ಅವರ ಆವಿಷ್ಕಾರಗಳು, ಸಂಶೋಧನೆಗಳ ವಿಚಾರಗಳನ್ನು ತೆರೆದಿಡುತ್ತಲೇ.. ಬುದ್ಧಿವಂತಿಕೆಯೇ ಅವರ ಬದುಕಿನಲ್ಲಿ ಮುಳುವಾದ ಸಂದರ್ಭದಲ್ಲಿ ಈಗ ಡಿಸೋಜಾ ಅವರ ಸಹಾಯ ಕೋರಿ ಬಂದಿರುತ್ತಾರೆ.


ದಿವಾಕರ್ ಅವರ ಮೊಮ್ಮಗಳು ನಿ ತಿಷಾ ಕಾಣೆಯಾಗಿರುತ್ತಾಳೆ. ಅದು ಕೇವಲ ಕಾಣೆಯಾಗಿದ್ದಲ್ಲ. ಅಪಹರಣವಾಗಿರುವುದು. ಹಾಗೆಂದು ಇದು ಊಹಾಪೋಹವೂ ಅಲ್ಲ. ಖಚಿತವಾದ ಮಾಹಿತಿ. ಕಣ್ಮುಂದೆ ನಡೆದ ಘಟನೆಯೇ.. ಆದರೆ, ಅದನ್ನು ತಪ್ಪಿಸಲಾಗಿರಲಿಲ್ಲ.


ಭೈರನ್ ಸಿಂಗ್ ಭೈರಾಗಿ ಎನ್ನುವ ಕುಖ್ಯಾತ ಅಪರಾಧಿಯೊಬ್ಬ ನಿತಿಷಾಳನ್ನು ಅಪಹರಿಸುತ್ತಾನೆ. ಅದೂ.. ತಾತನ ಎದುರುನಲ್ಲಿಯೇ..!


ಗುರುದಾಸಪುರ್ ಜೈಲಿನಲ್ಲಿ ತಮ್ಮ ಹೆಂಡತಿಯ ಪುಣ್ಯತಿಥಿಯ ದಿನದಂದು ಅಲ್ಲಿನ ಖೈದಿಗಳಿಗೆ ಹಾಗೂ ರೋಗಿಗಳಿಗೆ ಹಣ್ಣು, ಔಷಧಿ, ಸಿಹಿ ಹಂಚಲು ಹೋಗಿರುತ್ತಾರೆ. ದಿವಾಕರ್ ಅವರು ಸಾಮಾನ್ಯವಾಗಿ ವಿಸಿಟರ್ಸ್ ಅನ್ನು ಬಿಡದಿದ್ದವರು ಇವರ ಮೇಧಾವಿತನದ ಅರಿವಿದ್ದು ಹಾಗೂ ವಿ.ಐ.ಪಿ ಆದ್ದರಿಂದ ಒಳಬಿಟ್ಟಿರುತ್ತಾರೆ. ಆದರೆ, ಅವರ ಅದೃಷ್ಟ ಕೆಟ್ಟು ಎಲ್ಲರ ಎದುರಿನಲ್ಲಿಯೇ ಬೈರನ್ ಸಿಂಗ್ ಭೈರಾಗಿ ನಿತಿಶಾಳೊಂದಿಗೆ ಮಾಯವಾಗಿರುತ್ತಾನೆ. ತೀವ್ರವಾದಿಗಳ ಪಾಲಾದ ಮೊಮ್ಮಗಳ ಪತ್ತೆ ಮಾಡಲು ಈಗ ದಿವಾಕರ್ ಸಹಾಯ ಕೋರಿ ಬಂದಿರುವುದು. ಅವರಿಗಿದ್ದ ಒಬ್ಬಳೇ ಮಗಳ ಮಗಳ ಮಗಳು ಅವಳ. ಇದು ಕೇವಲ ಸಂಬಂಧದಿಂದ ಮಾತ್ರ ಕನೆಕ್ಟ್ ಆಗುವ ಕಥೆಯಲ್ಲ. ಅವಳನ್ನೇ ಅಪಹರಿಸುವ ಉದ್ದೇಶವಿತ್ತೇ..?! ಅದರ ಹಿಂದಿನ ಮರ್ಮವೇನು..?


ಮುಂದೆ ಈ ಕಥೆ ದೇಶಪ್ರೇಮಕ್ಕೂ ಸಂಬಂಧಿಸಿದಂತೆ ಮುಂದುವರೆಯುತ್ತದೆ.


ದಿವಾಕರ್ ಅವರ ಕುಟುಂಬದ ಪರಿಚಯದ ಜೊತೆಗೆ ತೀವ್ರಗಾಮಿ ಭೈರನ್ ಸಿಂಗ್ ಭೈರಾಗಿ ಎಷ್ಟು ಅಪಾಯಕಾರಿ ಎನ್ನುವುದನ್ನು ಕಟ್ಟಿಕೊಡುತ್ತಾ ಹೋಗುತ್ತಾರೆ.


ಭಯೋತ್ಪಾದನೆ ಜೊತೆಗೆ ಪಾಕಿಸ್ತಾನ ಹಾಗೂ ಭೈರನ್ ಸಿಂಗ್ ಭೈರಾಗಿಗೆ ಆ ದೇಶದ ಜೊತೆಗಿದ್ದ ಸಂಬಂಧ ಎನ್ನುವುದನ್ನು ಹೇಳುತ್ತಲೇ ಆ ಕೃತ್ಯದ ದುಷ್ಪರಿಣಾಮ ಎಷ್ಟಿದೆ ಎಂಬುದರ ಅಂದಾಜನ್ನು ನಾವು ಮಾಡಿಕೊಳ್ಳಬಹುದು.


ಹಾಗೆಂದು.. ಇಲ್ಲಿ ಪ್ರದೀಪ್ ತೀವ್ರವಾದ ಹೊಡೆದಾಟದ ಅಥವಾ ಕಾರ್ಯಾಚರಣೆಯ ಹಾದಿಯ ಬದಲಾಗಿ ಬೇರೆಯ ಹಾದಿಯನ್ನೇ ಹಿಡಿಯಬೇಕಾಗಿ ಬರುತ್ತದೆ. ಅದು ಅವನ ಶೈಲಿಯಲ್ಲಿಯೇ ಎಂದುಕೊಂಡರೆ.. ಅಷ್ಟರೊಳಗೆ ಡಿಸೋಜಾ ಅವರು ಆತನ ಮುಂದಿನ ಹೆಜ್ಜೆಯನ್ನು ಪ್ಲಾನ್ ಮಾಡಿ ಅದರ ಪ್ರಕಾರವೇ ನಡೆಯಬೇಕೆಂದು ನಿರ್ದೇಶಿಸುತ್ತಾರೆ. ಹಾಗಿದ್ದಲ್ಲಿ, ಪ್ರದೀಪನ ಸಾಹಸ ಶುರುವಾಗುವುದು ಎಲ್ಲಿಂದ..?


ಅಲ್ಲಿಂದ ಶುರುವಾಗುವ ಪ್ರದೀಪನ ಸಾಹಸಗಾಥೆಯನ್ನು ನಾವಿಲ್ಲಿ ಕಂಡುಕೊಳ್ಳಬಹುದು.


ಕೆ.ವನ್ ವೇಷ ಮರೆಸಿಕೊಂಡು ಹೋಗುವುದರ ಜೊತೆಗೆ ಮಕನ್ ಸಿಂಗ್ ಎನ್ನುವ ತೀವ್ರಗಾಮಿಯ ನಂಬಿಕೆ ಗಳಿಸುವಲ್ಲಿಂದ ಶುರುವಾಗುವ ಕಥೆ ಹಲವಾರು ರೋಚಕ ತಿರುವುಗಳೊಂದಿಗೆ ನೌಗುತ್ತಾ ಹೋಗುತ್ತದೆ.


ಕ್ರಾಂತಿಕಾರಿಗಳು ಹಾಗೂ ತೀವ್ರಗಾಮಿಗಳು ಇಬ್ಬರಿಗೂ ಇರುವ ವ್ಯತ್ಯಾಸವನ್ನು ನಾವಿಲ್ಲಿ ಕಾಣಬಹುದು.


ಮಿಂಚಿನ ಕಾರ್ಯಚರಣೆಯಂತೆ.. ಮುಂದಿನ ಪ್ರತಿ ಹಂತವು ಸಾಗುತ್ತಾ ಹೋಗುವಂತೆ ಕಥೆಯನ್ನು ವೇಗವಾಗಿ ಹಾಗೂ ರೋಚಕವಾಗಿ ಕಟ್ಟಿಕೊಡುತ್ತಾರೆ.


ಮಕನ್ ಸಿಂಗ್, ಭೈರನ್ ಸಿಂಗ್ ಭೈರಾಗಿ ಹಾಗೂ ಸುಖಿಯಾ ಸಿಂಗ್ ಇವರೆಲ್ಲರಿಗೂ ಶೇರ್ ಸಿಂಗ್ ಮಣ್ಣುಮುಕ್ಕಿಸಿದ್ದು ಹೇಗೆ..?


ಕೆಲವು ಸಿನಿಮಾ ಶೈಲಿಯ ನಡೆಗಳ ಜೊತೆಗೆ ಮುಂದಿನ ಗುಟ್ಟು ಬಿಟ್ಟುಕೊಡದಂತೆ ಈ ಸ್ಟೈ ನಾವೆಲ್ ಸಾಗುತ್ತದೆ.


ಪಾಕಿಸ್ತಾನದ ವಾತಾವರಣ, ಅಲ್ಲಿಯ ಗೂಢಚಾರರು, ಕಾರ್ಯಾಚರಣೆ ಜೊತೆಗೆ ಪ್ರದೀಪನ ಸಾಹಸವನ್ನು ಕಾಣಬಹುದು.


ಉಗ್ರವಾದಿಗಳ ಬಂಧನದಲ್ಲಿದ್ದ ನಿತಿಷಾ ಬಿಡುಗಡೆಯಾಗಿದ್ದು ಯಾವಾಗ..? ಇದಕ್ಕೆ ಪ್ರದೀಪನ ಜೊತೆಯಾದವರು ಯಾರು ಹಾಗೂ ಯಾವೆಲ್ಲ ಸಾಹಸಗಳನ್ನು ಪ್ರದೀಪ ಮಾಡಿದ..? 


ಮುಮ್ತಾಜ್ ಮಾಡಿದ್ದು ಸರಿಯೋ ತಪ್ಪೋ..? ನೀವೇ ಓದಿ ಅರಿಯಿರಿ.


ಇದು ನಾನು ಓದಿದ ಜಿ. ಪ್ರಕಾಶ್ ಅವರ ಮೊದಲ ಕಾದಂಬರಿ. ವಿಭಿನ್ನ ಓದಿನ ಅನುಭವ ಕಟ್ಟಿಕೊಟ್ಟಿತು. 


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 23, 2026

ಹುಚ್ಚಿ ಸತ್ತದಲ್ಲ..

 


"ಅವಳು ಅಡುಗೆಯ ತಯಾರಿಯ ಹಂತದಲ್ಲಿದ್ದಳು. ತನ್ನದೇ ಗುಂಗಿನಲ್ಲಿ ಮುಳುಗಿರುವಾಗ ಅದೇನೋ ಸದ್ದಾಯಿತು! ಅವಳು ಬೆಚ್ಚಿ ಬಿದ್ದಳು!" 


ತಟ್ಟನೆ "ಪಾಪು, ಪಾಪು.. ಪಾಪು, ಪಾಪು" ಎಂದು ಕರೆಯುತ್ತಾ ಇಡೀ ಮನೆ ಹುಡುಕಿದಳು. ಯಾಕೋ ಮನಸ್ಸು ಕೇಡನ್ನೇ ಶಂಕಿಸುತ್ತಿತ್ತು. ದೇವರ ಬಳಿ ಮನಸ್ಸಿನಲ್ಲಿಯೇ ಬೇಡುತ್ತಾ ಮನೆಯ ಮುಂದಿನ ತೊಟ್ಟಿಯ ಬಳಿ ಬಂದಳು. ತೊಟ್ಟಿಯ ಬಳಿ ಯಾರೂ ಕಾಣಲಿಲ್ಲ. ಅಲ್ಲೇ ಕೊಂಚ ಮುಂದೆ ಇದ್ದ ಬಾವಿಯ ಬಳಿ ಬಂದಳು. ಅಲ್ಲಿ ಬಗ್ಗಿ ನೋಡಿದರೆ ಜೀವ ಬಾಯಿಗೆ ಬಂದಿತ್ತು. ಪಾಪುವನ್ನು ಹಿಡಿದುಕೊಂಡು ಸರಳಾ ಬಾವಿಯಿಂದ ಹೊರ ಬರಲು ಸೆಣೆಸಾಡುತ್ತಿದ್ದಳು. ತಕ್ಷಣವೇ ಅಲ್ಲಿ ನಿಂತು ಜೋರು ಬೊಬ್ಬೆ ಹೊಡೆದು ಕೆಲಸದವರನ್ನೆಲ್ಲಾ ಕರೆದಳು. ಮಂಜ ಮಿಂಚಿನಂತೆ ಹಾರಿ ಇಬ್ಬರನ್ನೂ ಮೇಲೆ ತಂದಿದ್ದ. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು.


ಸುಮಿತ್ರಾ ಪ್ರಲಾಪಿಸುತ್ತಿದ್ದಳು. ಹಾಗೆಯೇ, ಅವಳ ಗಮನ ಹಿಂದಕ್ಕೆ ಓಡಿತು. ಪಾಪು ಮತ್ತು ಸರಳಾ ಇಬ್ಬರೂ ಮನೆಯಲ್ಲಿ ಒಂದು ರೀತಿ ಅಬ್ಬೇಪಾರಿಗಳೇ.. ಕೇಳುವವರೇ ದಿಕ್ಕಿಲ್ಲ.


ಸುಮಿತ್ರಾ ಪಾಪುವನ್ನು ಹೆತ್ತಾಗ ಗಂಡನ ಕಡೆಯಿಂದ ಬಂದು ನೋಡಿದ್ದವರು ಮೂಗು ಮುರಿದಿದ್ದರು. "ಹುಟ್ಟಿದ್ದು ಹೆಣ್ಣು" ಎಂದು.. ಮಗುವಿಗೆ ನಾಮಕರಣ ಮಾಡುವ ಸೌಜನ್ಯವನ್ನು ತೋರದೆ ಕಾಳಜಿಯನ್ನೂ ಮಾಡದೆ ಹಾಗೆಯೇ ಬಿಟ್ಟು ಬಿಟ್ಟಿದ್ದರು. ಅದಕ್ಕೆ ಅವಳು ಇನ್ನು "ಪಾಪು". ಜೊತೆಗೆ ದಿನ ಕಳೆದಂತೆ ಅರಿವಾಗಿದ್ದು ಅವಳು ಮೂಕಿ ಮತ್ತು ಕಿವುಡಿ. ಮೇಲೆ ಹೆಣ್ಣು ಬೇರೆ..


ಬಾಣಂತನ ಮುಗಿಯುವ ಮೊದಲೇ ಇಲ್ಲಿನ ಚಾಕರಿ ಕಾಯುತ್ತಿತ್ತು. ಮಗುವನ್ನು ಆಡಿಸಲು ಯಾರೂ ಮುಂದೆ ಬಾರದಿದ್ದಾಗ ಈ ಮನೆಯಲ್ಲಿ ಅವಳ ಜೊತೆಯಾಗಿದ್ದು ಸರಳಾ. ಮನೆಯವರ ಪಾಲಿಗೆ ಅವಳು "ಹುಚ್ಚಿ ಸರಳಾ". ಈ ಮನೆ ಮಗಳು. ಅವಳ ಮದುವೆಯ ದಿನ ಮದುವೆಯ ನಂತರ ಮಂಟಪದಿಂದ ಗಂಡನ ಮನೆಗೆ ಹೋಗುತ್ತಿರುವಾಗ ದೊಡ್ಡ ಅಪಘಾತವಾಗಿ ಗಂಡನನ್ನು ಕಳೆದುಕೊಂಡಳು. ಅದೇ ಆಘಾತಕ್ಕೆ ಹುಚ್ಚಿಯಾದಳು. ಅವಳನ್ನು ಸರಿಪಡಿಸುವ ಕೆಲಸವನ್ನು ಯಾರೂ ಮಾಡಲಿಲ್ಲ. ಗಂಡನ ಮನೆಯವರು ಅವಳನ್ನು ಕೂಡಲಿಲ್ಲವಾದ್ದರಿಂದ ಈ ಮನೆಯಲ್ಲಿ ಹುಟ್ಟಿದ ತಪ್ಪಿಗೆ ಇಲ್ಲಿಯೇ ಉಳಿದುಕೊಂಡಳು. ಅದೂ ಹುಚ್ಚಿಯಾಗಿ...


"ಅವಳಿಗೆ ಹುಚ್ಚು, ಮಗುವನ್ನು ಅವಳ ಬಳಿ ಬಿಡಬೇಡ" ಎಂದ ಅತ್ತೆಗೆ "ಆಯ್ತು ಅತ್ತೆ, ಹಾಗೇ ನೀವೇ ಸ್ವಲ್ಪ ಗಮನ ಕೊಡಿ" ಎಂದಾಗ "ದೇವಸ್ಥಾನಕ್ಕೆ ಹೊತ್ತಾಯ್ತು" ಎನ್ನುತ್ತಾ ನುಣುಚಿಕೊಂಡಿದ್ದರು. ಮಾವ, ಗಂಡ, ಮೈದುನರನ್ನಂತೂ ಮಾತನಾಡಿಸುವ ಹಾಗೆಯೇ ಇಲ್ಲ. ಇದೇ ಹುಚ್ಚಿ ಪಾಪುವನ್ನು ಎದೆಗವಚಿಕೊಂಡು ತನ್ನದೇ ಮಗು ಎಂಬಂತೆ ಬೆಳೆಸತೊಡಗಿದ್ದು.. ಮಗುವಿಗೆ ಇನ್ನೇನು ಒಂದು ವಾರದಲ್ಲಿ ಮೂರು ವರ್ಷ ತುಂಬುವುದರಲ್ಲಿತ್ತು.


ಎಲ್ಲಿದ್ದರೋ ಅತ್ತೆ ಲಬಲಬನೆ ಬಾಯಿ ಬಡಿದುಕೊಂಡು "ಅಯ್ಯೋ ಪಾಪಿ, ಮಗುವನ್ನು ಕೊಂದುಬಿಟ್ಟೆಯಲ್ಲೇ.." ಎನ್ನುತ್ತಾ ಓಡೋಡಿ ಬಂದರು. ಸರಳಾ ಕಾಣಲಿಲ್ಲವಾಗಿ "ಅತ್ತೆ, ಮಗುವಿನ ಮೇಲೆ ಹಾಗೇ ಕಣ್ಣಿಟ್ಟಿರಿ" ಎಂದಿದ್ದಕ್ಕೆ ಹೂಂಗುಟ್ಟಿದ್ದರು. ಆದರೆ, ಅದ್ಯಾವ ಮಾಯದಲ್ಲೋ ಮಾಯವಾಗಿದ್ದರು. ಅತ್ತೆ ಇರುತ್ತಾರೆ ಎಂಬ ಒಂದೇ ಭರವಸೆಯ ಮೇಲಲ್ಲವಾ ಅಡುಗೆ ತಯಾರಿಗೆ ನಿಂತದ್ದು. ಅಷ್ಟರಲ್ಲಿ...


"ಈ ಹುಚ್ಚಿನೇ ಮಗುವನ್ನು ಬಾವಿಗೆ ದೂಡಿದ್ದು.."

"ಹುಚ್ಚು ನೆತ್ತಿಗೇರಿತ್ತೇನೋ.. ಮಗುವನ್ನು ತಳ್ಳಿಯೇ ಬಿಟ್ಟಿದ್ದಾಳೆ. "

"ಮಗುವನ್ನು ಹುಚ್ಚಿ ಜೊತೆ ಬಿಡುತ್ತಾರಾ.. ಇವರಿಗೆ ಸ್ವಲ್ಪವಾದರೂ ಜ್ಞಾನ ಬೇಡವಾ.."


ಆಳಿಗೊಂದೊಂದು ಕಲ್ಲು ಎಸೆಯುತ್ತಿದ್ದರು. ನನಗೇನೋ ನಂಬಲು ಆಗಲಿಲ್ಲ. ಸರಳಾ ಮಗುವನ್ನು ಕಾಪಾಡಿದ್ದು ಎಂದು ಸಾರಿ ಸಾರಿ ಹೇಳಬೇಕೆಂದುಕೊಂಡರೂ ಧ್ವನಿ ಈಚೆಯೇ ಬರಲಿಲ್ಲ. ಅವಳು ಮಗುವನ್ನು ಅವಚಿಕೊಂಡು ರಕ್ಷಿಸುತ್ತಿದ್ದ ಪರಿ ಕಂಡಿದ್ದೆನಲ್ಲಾ.. ಅಲ್ಲದೇ, ಅವಳ ಕಣ್ಣಲ್ಲಿ ಕಾಣುತ್ತಿದ್ದ ಮಾತೃಭಾವ ಸುಳ್ಳೇನು..??


ಪಾಪು ಎಚ್ಚರವಾಗಿದ್ದಳು. ಸರಳಾ ಬಾರದ ಲೋಕಕ್ಕೆ ಪಯಣಿಸಿದ್ದಳು. ಈಗ ಮಾತುಕತೆ ಬೇರೆಯೇ ಆಯಾಮ ಪಡೆದಿತ್ತು. "ಮಗುವಿನಿಂದ ಈ ಮನೆ ಮಗಳ ಪ್ರಾಣ ಹೋಯಿತು.. "


ಯಾರು ಏನು ಕಳೆದುಕೊಂಡರೋ ತಿಳಿಯಲಿಲ್ಲ. ಪಾಪು ಅವಳನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದನ್ನು ಕಂಡು ಅಯ್ಯೋ ಎನ್ನಿಸುತ್ತಿತ್ತು.


ಹುಚ್ಚಿ ಸತ್ತದಲ್ಲ.. ಅಮ್ಮ ಸತ್ತಿದ್ಲು..

ಅತ್ತೆಯಂತಹಾ ಅಮ್ಮ ಪಾಪುವನ್ನು ಬದುಕಿಸಿ ತಾನು ಸತ್ತಿದ್ಲು.

ಮಾನವೀಯತೆ ಕಳೆದುಕೊಂಡ ನಾವೆಲ್ಲರೂ ಬದುಕಿದ್ದೂ ಹೆಣವಾಗಿದ್ವಿ.


~ ವಿಭಾ ವಿಶ್ವನಾಥ್

ಅವಳು ಮತ್ತು ಅಡುಗೆಮನೆ


 'ಇದೊಂದು ಕೆಲಸ ಮುಗಿಯೋದೇ ಇಲ್ಲ, ಸಾಕು, ನಾ ಇವತ್ತಿಂದ ಅಡುಗೆ ಮಾಡೋದೇ ಇಲ್ಲ, ನಂಗೂ ಸಾಕಾಗಿಹೋಗಿದೆ ಜೀವನ, ಅಡುಗೆ ಮಾಡಲು ಆಲಸ್ಯ ಇರೋ ಹೆಣ್ ಮಕ್ಕಳ ಸಂಘ ಕಟ್ಬೇಕು ನಾನು ' ಎಂದು ಅವಳು ಗೊಣಗಿದಳು. 


ಅವಳ ಈ ಗೊಣಗಾಟ ಮನೆಯಲ್ಲಿ ಯಾರಿಗೇನೂ ಹೊಸತಲ್ಲ.  ಆ ಮನೆಯಲ್ಲಿ ಇದ್ದ ಉಳಿದಿಬ್ಬರು ಗಂಡಸರು. ಆಕರ್ಷಳ ಗಂಡ ಪ್ರೇಕ್ಷಿತ್ ಹಾಗೂ ಮಾವ ಸುಂದರ್. ಹಾಗೆಂದು ಗೊಣಗುತ್ತಿದ್ದಾಗ ಮೊದಲೆಲ್ಲಾ ಇಬ್ಬರಲ್ಲಿ ಒಬ್ಬರು ಹೋಗಿ ತರಕಾರಿ ಹೆಚ್ಚುವುದು ಇಲ್ಲವೇ ಪಾತ್ರೆ ತೊಳೆಯುವ ಕೆಲಸಕ್ಕೆ ನಿಂತುಕೊಳ್ಳುತ್ತಿದ್ದರು. ಆದರೆ, ಅವಳನ್ನು ಮೆಚ್ಚಿಸಲು ಯಾರಿಂದಲೂ ಆಗುತ್ತಿರಲಿಲ್ಲ. 'ಇಲ್ಲೊಂಚೂರು ಸೋಪು ಹೋಗಿಲ್ಲ'.. 'ಈ ಜಿಡ್ಡು ಹಾಗೆಯೇ ಇದೆ' ಎಂದೋ ಏನಾದರೊಂದು ಹೇಳುತ್ತಾ ತಾನೇ ಮತ್ತೆ ಆ ಕೆಲಸಕ್ಕೆ ನಿಲ್ಲುತ್ತಿದ್ದಳು. ತರಕಾರಿ ಹೆಚ್ಚಲು ಹೋದರೆ ಉದ್ದ, ಅಡ್ಡ, ದಪ್ಪ, ಸಣ್ಣ ಎಂದು ಏನಾದರೊಂದು ಹೇಳಿ ತಾನೇ ಮಾಡುತ್ತಿದ್ದಳು. ಅವಳ ಈ ಪರಿ ಕಂಡು ಯಾರೂ ಅವಳ ತಂಟೆಗೆ ಹೋಗುತ್ತಿರಲಿಲ್ಲ. ಅಲ್ಲದೇ, ಕೆಲಸದವಳ ಕೆಲಸ ಕೂಡಾ ಮೆಚ್ಚುಗೆಯಾಗುತ್ತಿರಲಿಲ್ಲ. ಹಾಗೆಂದು, ಆಕರ್ಷ ರುಚಿಯಾಗಿ ಅಡುಗೆ ಮಾಡುತ್ತಿದ್ದಳು ಎಂದಲ್ಲ. ಅವಳ ದೃಷ್ಟಿಯಲ್ಲಿ ಶುಚಿಗೆ ಹೆಚ್ಚಿನ ಪ್ರಾಮುಖ್ಯತೆ. ಪ್ರೇಕ್ಷಿತ್ ಕೂಡಾ ಅಡುಗೆ ಮಾಡುತ್ತಿದ್ದ. ಅವಳಿಗಿಂತಲೂ ರುಚಿಯಾಗಿಯೇ ಅಡುಗೆ ಮಾಡುತ್ತಿದ್ದ. ಆದರೆ, ಅವನ ಶುಚಿಯಿಲ್ಲದ ಅಡುಗೆ ಕಂಡು ಅವಳೇ ಬೇಡವೆಂದಿದ್ದಳು.


ಇನ್ ಫ್ಯಾಕ್ಟ್ ಆಕರ್ಷ ಪ್ರೇಕ್ಷಿತ್ ನನ್ನು ಇಷ್ಟಪಟ್ಟದ್ದೇ ಆತನಿಗೆ ಅಡುಗೆ ಮಾಡಲು ಬರುತ್ತದೆ ಎಂದು. ನಂತರ ಅವನ ಕೈ ರುಚಿ ನೋಡಿ ಅದಕ್ಕೆ ಮನಸೋತಿದ್ದಳು. ಮದುವೆಯಾಗಿ ಬಂದ ನಂತರ ಅಡುಗೆ ಮನೆ ನೋಡಿ, ಪ್ರೇಕ್ಷಿತ್ ಮಾಡುವ ಕೊಳಕು ನೋಡಿ ತಲೆ ತಿರುಗಿ ಬೀಳದೆ ಇರುವುದು ಪುಣ್ಯ. ನಂತರ, ಅವಳೂ ಕೆಲಸಕ್ಕೆ ಹೋಗುವಾಗ ಏನೋ ಒಂದು ಬೇಯಿಸಿ ಹಾಕಿಕೊಂಡೋ ಇಲ್ಲವೇ ಏನಾದರೂ ಆರ್ಡರ್ ಮಾಡಿಕೊಂಡು ತಿಂದರೆ ಮುಗಿಯುತ್ತಿತ್ತು.


ಅತ್ತೆ ಅಚಾನಕ್ಕಾಗಿ ತೀರಿ ಹೋಗಿ ಮಾವ ಅಲ್ಲೇ ಬಂದು ಇರುವಂತಾದಾಗ ಅವಳೂ ಮನೆಯಿಂದ ಕೆಲಸ ಮಾಡಲು ಶುರು ಮಾಡಿದ್ದಳು. ಆಗಲೇ, ಅಷ್ಟೋ ಇಷ್ಟೋ ಅಡುಗೆ ಮಾಡಲು ಕಲಿತದ್ದು. ಯಾವ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡುವ ಅವಳಿಗೆ ಅದೇಕೋ ಅಡುಗೆ ಮನೆ ಕೆಲಸ, ಅಡುಗೆ ಎಂದರೆ ಮಾರು ದೂರ. ದಿನವಿಡೀ ಮನೆಯ ಧೂಳು ತೆಗೆದು ಸ್ವಚ್ಛ ಮಾಡಿ ಇಬ್ಬರಿಬ್ಬರ ಕಚೇರಿ ಕೆಲಸ ಒಬ್ಬಳೇ ನಿಭಾಹಿಸುವಳಾದರೂ ಅಡುಗೆ ಕೆಲಸವೆಂದರೆ ಆಲಸ್ಯ. ಮುಕ್ಕಾಲು ಗಂಟೆಗಿಂತ ಹೆಚ್ಚು ಅವಳು ಅಡುಗೆ ಮನೆಯಲ್ಲಿ ಕಾಲ ಕಳೆದದ್ದೇ ಕಡಿಮೆ.


ಮೊದಮೊದಲು ಸುಂದರ್ ಅವಳು ಗೊಣಗುತ್ತಿದುದ್ದನ್ನು ಕಂಡು ತಾನು ಬಂದದ್ದು ಅವಳಿಗೆ ತೊಂದರೆಯಾಯಿತೋ ಏನೋ ಎಂದುಕೊಂಡರೆ ಅವಳು ತನ್ನ ನಡವಳಿಕೆಯಿಂದ ಅದು ತೊಂದರೆಯೇ ಅಲ್ಲ ಎನ್ನುವಂತೆ ತೋರಿಸುತ್ತಿದ್ದಳು. ಹುಡುಕಿದರೂ ಒಂದೇ ಒಂದು ಕೊರತೆ ಕಂಡು ಬರುತ್ತಿರಲಿಲ್ಲ ಅವಳು ಆದರಿಸುವ ರೀತಿಯಲ್ಲಿ. ಕೊನೆಗೆ, ಸುಂದರ್ ರವರು ಇದಕ್ಕೆ ಕಾರಣವೇನೆಂದು ತಿಳಿಯಲು ವಿಚಾರಿಸಿದಾಗ ಅವರಿಗೆ ತಿಳಿದದ್ದು.. ಅವಳು ಬೆಳೆದದ್ದು ಅಜ್ಜಿ ಮನೆಯಲ್ಲಿ.. ಅಲ್ಲಿ ಅಡುಗೆ ಮನೆಯಲ್ಲಿ ತಯಾರಾಗುವ ಅಡುಗೆಗೆ ಶುಚಿ- ರುಚಿ ಎರಡೂ ಮುಖ್ಯವಾಗಿದ್ದವು. ಒಂದು ಚಿಟಿಕೆ ಉಪ್ಪು, ಒಂದು ಹರಳು ಸಕ್ಕರೆ ಆಚೀಚೆಯಾದರೂ ಅವಳ ಅಜ್ಜಿ ಬೈಗುಳ ತಿನ್ನುತ್ತಿದ್ದರು. ಹಾಗೆಯೇ ಅತ್ತೆಗೂ ಅದೇ ಸ್ಥಿತಿ. ಅವರಿಬ್ಬರ ಗೈರು ಹಾಜರಿಯಲ್ಲಿ ಒಮ್ಮೆ ಇವಳು ಬಾರದ ಅಡುಗೆಯನ್ನು ಮಾಡಿದಾಗ ಸಿಕ್ಕಿದ್ದು ಇದೇ ಕಟು ಮಾತುಗಳು. ಅವಳನ್ನು ಅಡುಗೆ ಮನೆಯಿಂದ, ಅಡುಗೆ ಕೆಲಸದಿಂದ ದೂರ ಇರುವಂತೆ, ವಿಮುಖ ಮಾಡುವಂತೆ ಮಾಡುತ್ತಿದ್ದವು. ಎಲ್ಲದರಲ್ಲಿಯೂ ಹೊಗಳಿಸಿಕೊಳ್ಳುವ ಅವಳಿಗೆ ಅಡುಗೆ ಮಾಡಿದರೆ ಎಲ್ಲಿ ಕೊಂಕು ಕೇಳಬೇಕಾದೀತೋ ಎಂಬ ಭಯ.


ಕೊನೆಗೆ, ಅಡುಗೆ ಮನೆಯಲ್ಲಿ ತೀರಾ ಕಡಿಮೆ ಸಮಯ ಇರುವುದು.. ತನಗೆ ಅದು ಆಗಿ ಬರುವುದಿಲ್ಲ ಎಂದು ಹೇಳುವುದನ್ನು ರೂಢಿಸಿಕೊಂಡಳು. ಅದರ ಪ್ರತಿಫಲವೇ ಇದು.


ಈಗ ಅವಳು ತನ್ನದೇ ಕೆಲಸಗಳಲ್ಲಿ, ಹವ್ಯಾಸಗಳಲ್ಲಿ ತೊಡಗಿಕೊಂಡಿದ್ದಾಳೆ. ಮಾವನ ಕೈರುಚಿ, ಶುಚಿ ಎರಡೂ ಹಿಡಿಸುತ್ತದೆ.

ಬಂದ ಹಾಗೆ ಮಾಡಿ ಹಾಕು ಎಂದೋ.. ಅಡುಗೆ ಮಾಡಲೇ ಬೇಕು ನೀನು ಎಂದೋ.. ಹೆಣ್ಣು ಹುಟ್ಟಿದ್ದೇ ಅಡುಗೆ ಕೆಲಸ ಮಾಡಲಿಕ್ಕೆ ಎಂದೋ.. ಭಾವಿಸುವ ಮಾವಂದಿರ ನಡುವೆ ಅಮ್ಮನಂತಹಾ ಮಾವ ದೊರೆತಿದ್ದಾರೆ. ಎಂದೂ ಸವಿಯದ ಅಮ್ಮನ ಕೈರುಚಿ ಹೀಗೆಯೇ ಇದ್ದಿರಬಹುದು ಎನ್ನಿಸುತ್ತದೆ ಅವಳಿಗೆ..


~ವಿಭಾ ವಿಶ್ವನಾಥ್

ಮುಂದಿನ ಹಾದಿ (ಬೆಳಕಿಂಡಿಯ ಕತೆಗಳು - 75)

 


ಇದು ನಾನಾಗೇ ನಾನು ಮಾಡಿಕೊಂಡ ಬಂಧನ ಎನ್ನಲೋ ಅಥವಾ ಮನೆಯವರ ಒತ್ತಡಕ್ಕೆ ಮಣಿದು ಬಂಧಿಸಿಕೊಂಡದ್ದು ಎನ್ನಲೋ.. ಏನೇ ಆದರೂ ವಿವಾಹವೆಂಬ ಬಂಧನದಲ್ಲಿ ಸಿಲುಕಿಕೊಂಡದ್ದಂತೂ ಆಗಿದೆ.


ಎಲ್ಲರಿಗೂ ವಿವಾಹದ ನಂತರದ ಬದುಕು ಸುಲಭದ ಹಾದಿಯಾಗಿರುವುದಿಲ್ಲ. ಅವತ್ತು ನನ್ನ ಮುಂದೆ ಇದ್ದದ್ದು ಎರಡೇ ಆಯ್ಕೆಗಳು ಸಾವು ಇಲ್ಲವೇ ಹೋರಾಟದ ಬದುಕು. ಓದಿದ ನಾನೇ ಹೇಡಿಯಾದರೆ.. ಇಲ್ಲ, ಮುಂದಿನ ದಾರಿ ನಿಚ್ಚಳವಾಗಿತ್ತು. ಬಂಧನದಿಂದ ಹೊರ ಬಂದು ಓದಿದೆ. ಈಗ ಮನಃಶಾಸ್ತ್ರಜ್ಞೆಯಾಗಿದ್ದೇನೆ. ಎಲ್ಲರಿಗೂ ಮುಂದಿನ ಹಾದಿಗೆ ಬೆಳಕು ಬೀರಲು..

ಮುಂದಿನ ಹಾದಿಗೆ ಬೆಳಕು ಬೀರಲು ದೀಪ ತನ್ನನ್ನೇ ಸುಟ್ಟುಕೊಳ್ಳುವ ಕುರಿತು ನನಗೆ ಬೇಸರವಿಲ್ಲ.. ಬದಲಿಗೆ ಸಮರ್ಪಣೆಯ ಸಂತಸವಿದೆ. 

~ವಿಭಾ ವಿಶ್ವನಾಥ್