ಸೋಮವಾರ, ಏಪ್ರಿಲ್ 27, 2026

ಕಲೆಯೇ ಕಾಯಕ (ಪುಸ್ತಕ ಯಾನ - 443)


ಪುಸ್ತಕದ ಶೀರ್ಷಿಕೆ : ಕಲೆಯೇ ಕಾಯಕ 

ಲೇಖಕರು : ಜಿ. ಹೆಚ್. ವೀರಣ್ಣ

ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು

ಮರು ಮುದ್ರಣ : 2010

ಪುಟಗಳು : 206

ಬೆಲೆ : 80 ರೂ. 


ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದ ವೀರಣ್ಣನವರು ನಟ, ರಂಗಕರ್ಮಿ, ನಿರ್ಮಾಪಕ, ನಿರ್ದೇಶಕ, ನಾಟಕ ಮಂಡಳಿಯ ವ್ಯವಸ್ಥಾಪಕರು. ಪ್ರಸಿದ್ಧ 'ಗುಬ್ಬಿ ಶ್ರೀ ಚನ್ನಬಸವೇಶ್ವರ ನಾಟಕ ಕಂಪನಿ'ಯನ್ನು ಕಟ್ಟಿ ಬೆಳೆಸಿ, ಕರುನಾಡ ನಾಟಕರಂಗಕ್ಕೆ ಹೊಸ ಕಳೆ ತಂದರು. ಡಾ. ರಾಜ್‌ಕುಮಾರ್, ನರಸಿಂಹರಾಜು, ಉದಯಕುಮಾರ್ ಹೀಗೆ ಹಲವಾರು ದಿಗ್ಗಜರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಬಿ. ವಿ ಕಾರಂತರು, ಗಿರೀಶ್ ಕಾರ್ನಾಡರ ಪ್ರತಿಭೆಯನ್ನು ಉಜ್ವಲಗೊಳಿಸಿದವರು. 


ಈ ಆತ್ಮಕಥೆಯಲ್ಲಿ ಚದುರಿದ ಚಿತ್ರಗಳಂತೆ ತುಂಡು ತುಂಡಾದ ಅವರ ಜೀವನ ಹಾಗೂ ಕೆಲವು ಘಟನೆಗಳು ಕಂಡುಬರುತ್ತವೆ. ಒಂದಕ್ಕೊಂದರ ಕೊಂಡಿಯನ್ನು ಹಲವಾರು ಘಟನೆಗಳು ಜೋಡಿಸುತ್ತವಾದರೂ.. ಕೆಲವನ್ನು ನಾವೇ ಊಹಿಸಿಕೊಳ್ಳಬೇಕು. ವಿಸ್ತಾರವಾದ ಇಂತಹ ದಿಗ್ಗಜರ ಜೀವನದ ಘಟನೆಗಳ ಏಳುಬೀಳಿನ ಪಯಣ ಇಲ್ಲಿದೆ. ಹುಟ್ಟು, ತಂದೆ-ತಾಯಿ, ಊರಿನ ಚಿತ್ರಣಗಳು, ಹಿನ್ನೆಲೆ ಇಲ್ಲಿಲ್ಲ. ಕಲೆಯ ಬದುಕಿಗೆ ಹೊಂದಿಕೆಯಾಗುವ ಅವರ ಕಲಾ ಪಯಣದ ಶುರುವಿನಿಂದ ನಾಟಕ ರಂಗದಿಂದ ಹಿಂದೆ ಸರಿಯುವವರೆಗೂ ವೀರಣ್ಣನವರನ್ನು ಕಾಣಬಹುದು. ಕೊನೆಯಲ್ಲಿ ಅವರ ಸಾಂಸಾರಿಕ ಜೀವನದಲ್ಲಿ ಕಂಡ ದುರಂತ ಸರಮಾಲೆಗಳಿವೆ. ಅದಕ್ಕೆ ಮುನ್ನುಡಿಯೋ ಎಂಬಂತಿದೆ ಅವರ ಬದುಕಿನ ಪಯಣ. ತಮ್ಮ ಕಷ್ಟದ ನಡುವಲ್ಲೂ ಮತ್ತೊಬ್ಬರಿಗೆ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುವ ದಿನಗಳು, ಬಂದ ಬಿರುದುಗಳು, ಏಳಿಗೆ ಅದರ ಜೊತೆಯಲ್ಲಿಯೇ ಕಷ್ಟಕ್ಕೆ ಎದೆಯೊಡ್ಡಿ ನಿಂತ ಧೀರತೆ ಎಲ್ಲವೂ ಅಚ್ಚರಿಗೊಳಿಸುತ್ತವೆ. ಕೆಲ ಭಾವಚಿತ್ರಗಳನ್ನು ಇಲ್ಲಿ ಕಾಣಬಹುದು. ಅವರ ಕಷ್ಟ-ಕೋಟಲೆಗಳು ಹಾಗೂ ನಾಟಕ ರಂಗದಿಂದ ನಿರ್ಗಮಿಸಿದ ಮನಸ್ಥಿತಿಯ ಕುರಿತು ನೀವೇ ಓದಿ ಅರಿಯಿರಿ.


1955ರ ಜೂನ್ ನಲ್ಲಿ ವೀರಣ್ಣನವರು 'ದಶಾವತಾರ' ನಾಟಕವನ್ನು ಪ್ರದರ್ಶಿಸಿದ ನಂತರ 'ಅಣ್ಣ-ತಮ್ಮ' ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಿದಾಗ ಆತ್ಮಕತೆ ದಾಖಲಿಸುವ ಹಂಬಲ ಹೆಚ್ಚಾಗಿ ಇದನ್ನು ಬರೆದಿದ್ದಾರೆ. 


ಮೊದಮೊದಲು ಇವರು ಕಾಲಿಟ್ಟದ್ದು ನಟನಾಗಿ ಅಲ್ಲ. ಏನೂ ಅರಿಯದ ಹುಡುಗನೊಬ್ಬ ನಾಟಕ ಮಾಡಲು ನಾಟಕ ಶಾಲೆ ತಯಾರು ಮಾಡುವ ಕೆಲಸ, ಸೀನರಿಯ ತಯಾರಿಯಿಂದ ಹಿಡಿದು ತಮಟೆಯವನ ಜೊತೆಗೆ ಸಾರಿಸುವುದರ ಪ್ರಚಾರ ಕಾರ್ಯ, ನಂತರ ದೀಪದ ವ್ಯವಸ್ಥೆ, ಗ್ರೀನ್ ರೂಂನಲ್ಲಿ ಕಸಗುಡಿಸಿ ನಟರಿಗೆ ಮುಖಕ್ಕೆ ಬಣ್ಣ ಹಾಕುವ, ನಾಟಕದ ಡ್ರೆಸ್ ಕೀಪರ್ ಕೆಲಸ, ನಂತರ ಸ್ಟೋರ್ ಕೀಪರ್ ಕೆಲಸ, ಅಡುಗೆಯವರು ಕಾಯಿಲೆ ಬಿದ್ದಾಗ ಅಡುಗೆ ಕೆಲಸ, ಗೇಟ್ ಕೀಪರ್, ಬುಕ್ಕಿಂಗ್ ಕ್ಲರ್ಕ್, ವ್ಯವಸ್ಥಾಪಕ ಕೆಲಸಗಳನ್ನು ಸಂಧರ್ಬಾನುಸಾರ ಮಾಡಿರುವುದಲ್ಲದೆ.. ವಾದ್ಯದವರ ಗೈರು ಹಾಜರಿಯಿದ್ದಾಗ ತಬಲಾ, ಹಾರ್ಮೋನಿಯಂ, ಪಿಟೀಲುಗಳನ್ನು ನುಡಿಸಿದ್ದಾರೆ. ಮೊದಮೊದಲಿಗೆ ಯಾವ ಪಾತ್ರವಾದರೂ ಗೈರುಹಾಜರಾಗಿದ್ದಾಗ ಅಂತಹ ಪಾತ್ರವನ್ನು ಮಾಡುತ್ತಿದ್ದವರು, ಖಜಾಂಚಿ ಆಗಿದ್ದವರು.. 


ಈ ಎಲ್ಲಾ ಹಂತಗಳನ್ನು ಒಂದೊಂದಾಗಿ ಮೇಲೇರಿ ಆ ಎಲ್ಲಾ ಅನುಭವಗಳ ಮೊತ್ತದಿಂದ ಗುಬ್ಬಿ ಕಂಪನಿಯ ಮಾಲೀಕರು ಚಂದಣ್ಣ ನವರು ಹುಷಾರು ತಪ್ಪಿ ಸ್ವರ್ಗಸ್ಥರದಾಗ 'ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ'ಗೆ ಇಬ್ಬರು ಮಾಲೀಕರಲ್ಲಿ ಒಬ್ಬರಾಗುತ್ತಾರೆ. ನಂತರ ಅಲ್ಲಿಯ ಮೋಸವನ್ನು ಹಿತೈಷಿಗಳ ಸಹಾಯದಿಂದ ಗೆದ್ದು ಸಂಘದ ಒಡೆಯನಾಗುತ್ತಾರೆ. 


ಚಂದಣ್ಣನವರು ಹಾಗೂ ವಿದ್ವಾನ್ ದಾನಪ್ಪಯ್ಯನವರು ಪಿಟೀಲು ವಾದಕರಾಗಿಯೂ ಹಾಗೂ ಇವರ ಗುರುಗಳಾಗಿಯೂ ದಾರಿದೀಪವಾಗಿರುವ ಪ್ರಮುಖ ವ್ಯಕ್ತಿಗಳು.


ಮೊದಮೊದಲು ಪಿಟೀಲು, ತಬಲಾ ಮಾತ್ರ ಇದ್ದದ್ದು ನಂತರ ಶ್ರುತಿಗೋಸ್ಕರ ಸೋಟಾ ಎಂಬ ತಂಬೂರಿಯ ತರಹದ ವಾದ್ಯನ ತಯಾರಿಕೆಯ ಕುರಿತ ವಿಚಾರವೂ ಇಲ್ಲಿದೆ.


ನಾಟಕದಲ್ಲಿ ಆಗ ಹೆಣ್ಣು ಪಾತ್ರಗಳನ್ನು ಗಂಡಸರೇ ಹಾಕುತ್ತಿದ್ದರು. ತಲೆಗೆ ಟೋಫನ್ ಹಾಕಿಕೊಂಡು ಪಾತ್ರಕ್ಕೆ ತಕ್ಕ ಬಟ್ಟೆ ಹಾಕಿಕೊಳ್ಳುತ್ತಿದ್ದರು. ಲ್ಯಾಂಪಿನ ಬೆಳಕಿಗೆ ಪತಂಗದ ಹುಳುಗಳು ಸ್ವಾಭಾವಿಕವಾಗಿ ಮುತ್ತಿ ಅವರನ್ನು ತೊಂದರೆಗೊಳಪಡಿಸಿದ ಸಂದರ್ಭದಲ್ಲಿ ಪಾತ್ರಧಾರಿಯ ಮುಖದ ಅಭಿನಯ, ಜನರ ನಗುವಿಗೆ ಕಾರಣವಾದ ಸಂದರ್ಭಗಳನ್ನು ಹೇಳುತ್ತಾರೆ. 


ಅಷ್ಟಾಗಿ ಆಭರಣಗಳಿಲ್ಲದ ಸಂದರ್ಭದಲ್ಲಿ ನಾಟಕ ನೋಡಲು ಬಂದಿದ್ದ ಹೆಣ್ಣುಮಕ್ಕಳಿಂದ ಆಭರಣಗಳನ್ನು ಎರವಲು ಪಡೆದು ಹಾಕಿಕೊಂಡದ್ದು.. ನಂತರ ಅದನ್ನು ಆ ಹೆಣ್ಣು ಮಕ್ಕಳು ಹೆಮ್ಮೆಯಿಂದ ಹಂಚಿಕೊಳ್ಳುತ್ತಿದ್ದನ್ನು ಹೇಳುತ್ತಾರೆ.


ಗುಬ್ಬಿ ಕಂಪನಿಯಲ್ಲಿ 'ಸದಾರಮೆ' ನಾಟಕವೇ ಅತ್ಯುತ್ತಮ ನಾಟಕ ಎಂದು ಪಡೆದ ಪ್ರಸಿದ್ಧಿ ಹಾಗೂ ಅದರಲ್ಲಿ ಇವರು ವಹಿಸುತ್ತಿದ್ದ ಕಳ್ಳನ ಪಾತ್ರದ ಪ್ರಖ್ಯಾತಿ ಇವರನ್ನು ಮತ್ತಷ್ಟು ಜನರಿಗೆ ಹತ್ತಿರವಾಗಿಸುತ್ತಾ ಹೋಗಿಸುತ್ತದೆ. ಈ ನಾಟಕದಲ್ಲಿ ಆದಿಮೂರ್ತಿ, ಸಾಬಿ ಮತ್ತು ಕಳ್ಳ ಈ ಮೂರು ಪಾತ್ರಗಳನ್ನು ಇವರೇ ನಿರ್ವಹಿಸುತ್ತಿದ್ದರು. ಜಯಮ್ಮನವರು ಹಾಗೂ ವೀರಣ್ಣನವರ ಗುಲೇಬಕಾವಲಿ ನಾಟಕದ ಪಾತ್ರವೂ ಬಹಳ ಪ್ರಸಿದ್ಧಿ ಪಡೆದಿತ್ತು. ಎಷ್ಟೋ ನಾಟಕಗಳಲ್ಲಿ ಒಬ್ಬರೇ ಮೂರು ನಾಲ್ಕು ಪಾತ್ರಗಳನ್ನು ನಿರ್ವಹಿಸುತ್ತಿದ್ದರು.


ತಮಿಳುನಾಡಿಗೆ ಹೋದ ಸಂದರ್ಭದಲ್ಲಿ ಅಲ್ಲಿನವರಿಗೆ ಕನ್ನಡ ಅರ್ಥವಾಗದಿದ್ದರೂ.. ಮೊದಲು ಸೀನರಿಗಳಿಗಾಗಿ ನಾಟಕ ನೋಡಲು ಬರುತ್ತಿದ್ದ ಪ್ರಸಂಗಗಳು, ಜೊತೆಗೆ ಅಲ್ಲಿನ ನಾಟಕ ಕಂಪನಿಯೊಂದು ಸದಾರಮೆ ನಾಟಕದಲ್ಲಿ ಹೇಳುತ್ತಿದ್ದ ಅಶ್ಲೀಲ ಸಂಭಾಷಣೆಗಳಿಂದ ಮೊದಮೊದಲಿಗೆ ಈ ನಾಟಕವನ್ನು ನೋಡದೆ ವಿರೋಧಿಸಿದರೂ ಎರಡರ ವ್ಯತ್ಯಾಸ ತಿಳಿದು ಇವರಿಗೆ ಪ್ರೋತ್ಸಾಹಿಸಿದ ರೀತಿಯೂ ಇಲ್ಲಿದೆ. 


ಪ್ರತಿಭಾ ಪ್ರದರ್ಶನಕ್ಕೆ ಎಲ್ಲಾ ವೇದಿಕೆಗಳೂ ಒಂದೇ ರೀತಿ ಇರುತ್ತಿರಲಿಲ್ಲ. ಕಲ್ಲು ತೂರಾಟವನ್ನು ನಿರ್ವಹಿಸಿದ ಪ್ರಸಂಗಗಳೂ ಇವೆ. ಮಾಲೀಕರ ನಡತೆ, ಊಟದ ಭೇದ-ಭಾವ, ತಮ್ಮದಲ್ಲದ ಸಂಭಾಷಣೆಯನ್ನು ಪ್ರಸ್ತುತಪಡಿಸಿದಾಗ ಬಂದ ವಿರೋಧಗಳು ಎಲ್ಲವನ್ನೂ ಕಟ್ಟಿಕೊಟ್ಟಿದ್ದಾರೆ.


ನಾಟಕಗಳಲ್ಲಿ ನಟರ ಆಯ್ಕೆ ಬಹಳ ಕಷ್ಟ. ನಾಟಕವೆಂದರೆ ಜನರು ಬಹಳ ಹೀನವಾಗಿ ಕಾಣುತ್ತಿದ್ದ ಸಂದರ್ಭದಲ್ಲಿ ಮದಿರಾಪಾನ ಮಾಡುವವರನ್ನು, ವಿಷಯಾಸಕ್ತ ಜನರನ್ನು ದುರ್ಗುಣಿಗಳನ್ನು ಸಾಧ್ಯವಾದಷ್ಟು ದೂರವಿಡುತ್ತಿದ್ದರು. ಅಕಸ್ಮಾತ್ ಅವರು ಅತ್ಯುತ್ತಮ ನಟರಾಗಿದ್ದರೆ ಕೆಲವೊಮ್ಮೆ ಅನುಸರಿಸಿಕೊಂಡು ಹೋಗುತ್ತಿದ್ದದ್ದೂ ಇದೆ. ತಮ್ಮದೇ ಆದ ನಟ ವರ್ಗವನ್ನು ಸೇರಿಸಿಕೊಳ್ಳುತ್ತಾ ಬಂದರು ವೀರಣ್ಣನವರು.


1917ರಿಂದ 1924 ರ ಒಳಗೆ ಮದರಾಸು, ಮಹಾರಾಷ್ಟ್ರಗಳಲ್ಲಿ ಮೂರು ಬಾರಿ ಸಂಚಾರ ಮಾಡಿ ನಾಟಕವಾಡಿದ್ದಾರೆ. ಇದಷ್ಟೇ ಅಲ್ಲದೆ ಆಂಧ್ರಪ್ರದೇಶದಲ್ಲಿಯೂ ನಾಟಕ ಪ್ರದರ್ಶಿಸಿದ್ದಾರೆ. ಬೊಂಬಾಯಿ, ಹೈದ್ರಾಬಾದ್ ಗಳಲ್ಲಿಯೂ ನಾಟಕ ಪ್ರದರ್ಶಿಸಿದ್ದಾರೆ. ಕಲ್ಕತ್ತೆಯೊಂದು ಬಾಕಿ ಇತ್ತೆಂದು ಹೇಳಿದ್ದಾರೆ. 'ಧರ್ಮವೀರ' ಮತ್ತು 'ಕರ್ನಾಟಕಾಂಧ್ರ ನಾಟಕ ಸಾರ್ವಭೌಮ' ಎಂಬ ಬಿರುದುಗಳು ಸಿಕ್ಕಿವೆ.


ಗುಂಟೂರಿನಲ್ಲಿ ಸದಾರಮೆ ನಾಟಕ ಆಡಬಾರದೆಂದು ವೈಶ್ಯ ಮಹಾಜನರು ಒತ್ತಡ ತಂದದ್ದೇಕೆ..? ಅದೇ ನಾಟಕವನ್ನು ಆಡಲಿ ಎಂದು ಜಿಲ್ಲಾಧಿಕಾರಿಗಳು ಬಲವಾದ ಕಾವಲು ಏರ್ಪಡಿಸಿ ಆ ನಾಟಕ ಪ್ರದರ್ಶನವನ್ನು ನೋಡಲು ಹಾತೊರದದ್ದೇಕೆ..? ಓದಿ ನೋಡಿ.


1923 ರಿಂದ 1943ರ ವರೆಗೆ ನಾಟಕ ಸಂಘದ ಸುವರ್ಣ ಯುಗ ಎಂದು ಉಲ್ಲೇಖಿಸುತ್ತಾರೆ. ಮೈಸೂರಿನ ಮಹಾರಾಜರಾದ ಶ್ರೀ ಕೃಷ್ಣರಾಜ ಒಡೆಯರ್ ಅವರ ಅರಮನೆಯಲ್ಲಿ ಅನೇಕ ನಾಟಕಗಳನ್ನ ಆಡಿಸಿ 'ವರ್ಸಟೈಲ್ ಕಾಮೆಡಿಯನ್' ಎಂಬ ಬಿರುದನ್ನು ಬಂಗಾರದ ಪದಕದೊಂದಿಗೆ ಪಡೆದಿದ್ದಾರೆ.  ಮಹಾರಾಜರಿಗೆ ಇವರ ನಾಟಕ ಎಷ್ಟು ಇಷ್ಟವಾಯಿತೆಂದರೆ ಚೌ-ಚೌ ನಾಟಕ ಎಂದು ಹಲವು ನಾಟಕಗಳ ಮಿಶ್ರ ಸೀನ್ ಗಳೊಂದಿಗೆ ಪ್ರತಿ ಸೀನ್ ನಲ್ಲಿಯೂ ಇವರ ಅಭಿನಯವಿರಬೇಕೆಂಬ ಬೇಡಿಕೆ ಇಟ್ಟಿದ್ದರು. 

ಶ್ರೀ ಜಯಚಾಮರಾಜ ಒಡೆಯರ್ ಅವರು ರತ್ನ ಖಚಿತ ತೋಡಾದೊಂದಿಗೆ ನಾಟಕ ರತ್ನಂ ಎಂಬ ಬಿರುದು ಕೊಟ್ಟಿದ್ದಾರೆ. ಮೈಸೂರಿನಲ್ಲಿಯೇ ಇದ್ದು ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಿದರೂ.. ಸಂಬಳ ಕೊಡುತ್ತೇವೆಂದರೂ ಇವರು ಖಾಯಂ ಆಗಿ ಮೈಸೂರಿನಲ್ಲಿ ನೆಲೆಸಲು ಒಪ್ಪುವುದಿಲ್ಲ. ಇದಕ್ಕೆ ಕಾರಣವೇನು ಓದಿ ನೋಡಿ.


ಸ್ವಂತಕ್ಕೆ ಜಟಕಾ ಗಾಡಿ ಬೇಕೆಂದು ಕೊಂಡಾಗ ಆಗಿನ ವಿಶೇಷ ಗಾಡಿ ಎಂದು 'ಗವರ್ನರ್ ಕಾರ್ಟ್' ಗಾಡಿಯನ್ನು ಸಾಹುಕಾರರೊಬ್ಬರು ಬಹುಮಾನವಾಗಿ ಕೊಟ್ಟಿದ್ದರು.


ಹತ್ತು-ಹದಿನೈದು ವರ್ಷದ ಕಿಶೋರ ನಾಟಕ ಸಂಘ ಸ್ಥಾಪಿಸಲು 1925ರಲ್ಲಿ 'ಬಾಲಕಲಾವಿವರ್ಧಿನಿ' ಎಂಬ ಹೆಸರಿನಲ್ಲಿ ದೊಡ್ಡ ಕಂಪನಿಯಂತೆಯೇ ಅದ್ದೂರಿಯಿಂದ ನಾಟಕ ಸಂಘವನ್ನು ಕಟ್ಟಿ ನಡೆಸಿದ್ದಾರೆ.


ನಾಟಕರಂಗ ಮಾತ್ರವಲ್ಲದೆ ಮೂಕಿ ಚಿತ್ರರಂಗಕ್ಕೆ ಕಾಲಿಟ್ಟು ಫಿಲಂ ಸ್ಟುಡಿಯೋ ಮಾಡ ಬಯಸಿ 'ಹಿಸ್ ಲವ್ ಅಫೇರ್' ಮತ್ತು 'ಹರಿಮಾಯಾ' ಎಂಬ ಮೂಕ ಚಿತ್ರಗಳನ್ನು ತೆಗೆದಿದ್ದಾರೆ. ಈ ಮೂಕ ಚಿತ್ರ ಪ್ರಪಂಚದಲ್ಲಿ ಇವರಿಗೆ ಆಗಿರುವುದು ಕಹಿ ಅನುಭವಗಳೇ ಹೆಚ್ಚು. ಅದರಲ್ಲಿಯೂ ಒಳಿತನ್ನು ಎತ್ತಿ ಹೇಳಿದ್ದಾರೆ.


ಬಿ . ಪುಟ್ಟಸ್ವಾಮಿಯವರಿಂದ ಬರೆಸಿಕೊಂಡ ನಾಟಕ, ಕುರುಕ್ಷೇತ್ರ ನಾಟಕ, ಲವ-ಕುಶ, ದಶಾವತಾರ ಹೀಗೆ ಹಲವಾರು ನಾಟಕಗಳು ಅದರ ಹಿನ್ನೆಲೆಗಳು, ನಟ ವರ್ಗದ ಆಯ್ಕೆ ಅಲ್ಲೆಲ್ಲಾ ಅನುಭವಿಸಿದ ಚಾಲೆಂಜ್ ಗಳು ಮತ್ತು ಅದನ್ನು ಮೀರಿ ನಿಂತ ಬಗೆ ಎಲ್ಲವನ್ನೂ ಹೇಳಿದ್ದಾರೆ.


ತಮ್ಮ ವಿವಾಹಗಳ ಕುರಿತು ಹೇಳಿಕೊಳ್ಳುವ ಸಂದರ್ಭದಲ್ಲಿ ತಮ್ಮ ಇಬ್ಬರು ಉಪಪಪತ್ನಿಯರು ಜಿ. ಸುಂದರಮ್ಮ ಮತ್ತು ಬಿ. ಜಯಮ್ಮ ಇವರುಗಳ ಕುರಿತು ಹಾಗೂ ಇವರುಗಳ ಮಕ್ಕಳಾದ ಸ್ವರ್ಣಮ್ಮ, ಮಾಲತಮ್ಮನವರ ಬಗೆಗೂ ಪ್ರೀತ್ಯಾದರಗಳಿಂದ ಹೇಳಿಕೊಳ್ಳುತ್ತಾರೆ. ಮಾಲತಮ್ಮನವರ ಮಗಳೇ ಬಿ. ಜಯಶ್ರೀ. ಗುಬ್ಬಿ ವೀರಣ್ಣನವರ ಮೂರನೇ ತಲೆಮಾರು. ಇವರ ಪ್ರತಿಭೆಯ ಕುರಿತೂ ಉಲ್ಲೇಖವಿದೆ.


ಒಂದು ರೂಪಾಯಿಯ ಕಾಲದಿಂದ ಹಾಗೂ ಗ್ಯಾಸ್ ಲೈಟ್ ದೊಂದಿಗಳಲ್ಲಿ ನಾಟಕ ಪ್ರದರ್ಶಿಸುತ್ತಿದ್ದ ಕಾಲದಿಂದ ಲಕ್ಷಾಂತರ ರೂಪಾಯಿ ಆದಾಯ ಹಾಗೂ ಅಷ್ಟೇ ಮಟ್ಟದ ಖರ್ಚಿನ ಬದುಕಿನ ಪಯಣವನ್ನು ಇಲ್ಲಿ ಹೇಳಿದ್ದಾರೆ. ಬಂದ ಬಿರುದುಗಳು, ಬಂಗಾರ, ಮಾಡಿದ ದಾನ ಧರ್ಮಗಳು, ಅದರ ಸಂದರ್ಭಗಳು ನಾಟಕ ಮಂದಿರ ಹಾಗೂ ಥಿಯೇಟರ್ ಗಳನ್ನು ಕಟ್ಟಿಸಲು ಹೊರಟದ್ದು ಹಾಗೂ ಹಲವಾರು ಬಾರಿ ಅದನ್ನು ಮತ್ತೊಬ್ಬರ ಸುಪರ್ದಿಗೆ ಒಪ್ಪಿಸಬೇಕಾಗಿ ಬಂದ ಸಂದರ್ಭ, ಅದರಿಂದ ಉಂಟಾದ ಪರಿಣಾಮಗಳು ಎಲ್ಲವೂ ಇಲ್ಲಿವೆ.


ಒಬ್ಬ ವ್ಯಕ್ತಿ ತನ್ನ ಹೆಂಡತಿ-ಮಕ್ಕಳು, ತಂದೆ-ತಾಯಿಯ ಪುಟ್ಟ ಸಂಸಾರವನ್ನೇ ಸರಿದೂಗಿಸಲು ತಿಣುಕಾಡುವಾಗ.. ಎಷ್ಟೋ ಪ್ರತಿಭೆಗಳ ದಾರಿದೀಪವಾಗಿ, ಅಸಮಾಧಾನ ಪಟ್ಟುಕೊಂಡು ಹೋದವರು ಮರಳಿ ಬಂದಾಗ.. ಮೋಸ ಮಾಡಿದವರು ಮತ್ತೆ ಬಂದಾಗ ಅದೇ ಅಕ್ಕರೆಯಿಂದ ಸ್ವಾಗತಿಸಿ ಅವರನ್ನು ತಮ್ಮೊಳಗೆ ಒಂದಾಗಿಸಿಕೊಂಡ ಪರಿಯೂ ಇಲ್ಲಿದೆ.


ತಪ್ಪುಗಳು ಹಾಗೂ ತಮ್ಮ ಬದುಕನ್ನು ತಿರುಗಿ ನೋಡಿದಾಗ ತಮ್ಮನ್ನು ತಾವು ವಿಮರ್ಶಿಸಿಕೊಂಡ ಬಗೆಯನ್ನೂ ಕಾಣಬಹುದು. ಕಲಾ ಜೀವನದ ಹಲವಾರು ಅಂಶಗಳನ್ನು ಕಟ್ಟಿಕೊಟ್ಟಿದ್ದಾರೆ. ವೈಯಕ್ತಿಕ ಬದುಕಿನ ಕುತೂಹಲಕ್ಕಿಂತ ಕಲೆಯ ಕುರಿತ ಕುತೂಹಲವನ್ನು ಮಾತ್ರವೇ ಉಳಿಸಿಕೊಂಡು ಇವರ ಬದುಕನ್ನು ಕಲಾವಿದನಾಗಿ ಮಾತ್ರ ಕಂಡರೆ ನಮಗೆ 'ನಾಟಕರಂಗದ ಭೀಷ್ಮ' ನಿಚ್ಚಳವಾಗಿ ಕಾಣಿಸಿಗುತ್ತಾರೆ.


~ವಿಭಾ ವಿಶ್ವನಾಥ್

ಬದಲಾದರೆ ಯೋಚನೆ ನಿಮ್ಮದೇ ಗೆಲುವು (ಪುಸ್ತಕ ಯಾನ - 442)


ಪುಸ್ತಕದ ಶೀರ್ಷಿಕೆ : ಬದಲಾದರೆ ಯೋಚನೆ ನಿಮ್ಮದೇ ಗೆಲುವು

ಲೇಖಕರು : ಡಾ. ನಾಗ ಎಚ್. ಹುಬ್ಳಿ 

ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2021

ಪುಟಗಳು : 146

ಬೆಲೆ : 150 ರೂ.


ಈ ಕೃತಿಯಲ್ಲಿನ ಹೆಚ್ಚಿನ ಬರಹಗಳು ಮಂಗಳ ವಾರಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿವೆ. ವ್ಯಕ್ತಿತ್ವ ವಿಕಸನದ ಕುರಿತಾಗಿ ಹಲವು ಪುಸ್ತಕಗಳಿದ್ದರೂ.. ಎಷ್ಟೆಲ್ಲಾ ವಿಚಾರಗಳು ಪ್ರಸ್ತಾಪವಾಗಿದ್ದರೂ.. ಪ್ರಸ್ತಾಪವಾಗುವ ವಿಚಾರಗಳು ಇನ್ನೂ ಹಲವಾರು ಇರುತ್ತವೆ. ಹಾಗೆಯೇ ಅದನ್ನು ದಾಟಿಸುವ ಶೈಲಿಯೂ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಹೀಗೆ ವ್ಯಕ್ತಿತ್ವ ವಿಕಸನಕ್ಕೆ ಸ್ಪೂರ್ತಿದಾಯಕವಾಗಿರುವ ಕಥೆಗಳನ್ನು ಇಲ್ಲಿ ಓದಬಹುದು. ಈ ಕೃತಿಯಲ್ಲಿ ಇಂತಹ 47 ಸ್ಪೂರ್ತಿದಾಯಕ ಕಥೆಗಳನ್ನು ಕಾಣಬಹುದು. ನನಗೆ ಇಷ್ಟವಾದ, ವಿಶೇಷವೆನಿಸಿದ ಕೆಲವು ವಿಚಾರಗಳ ಮೇಲೆ ಬೆಳಕು ಚೆಲುವ ಪ್ರಯತ್ನ ಮಾಡುವೆ.


"ಗೆಲುವು ಇರುವುದು ಕೇವಲ ನಮ್ಮ ನಡೆಯಲ್ಲಿ ಅಲ್ಲ; ಬದಲಿಗೆ ನಮ್ಮ ಯೋಚನಾ ವಿಧಾನದಲ್ಲಿ ಎನ್ನುವುದನ್ನು ನಾವು ಅರಿತುಕೊಳ್ಳಲೇಬೇಕು. ಹಾಗಿದ್ದಾಗ ಮಾತ್ರ ಗೆಲುವು ನಮ್ಮದಾಗಬಹುದು." ಎನ್ನುತ್ತಾರೆ ಲೇಖಕರು.


* "ಯಾವುದೇ ಘಟನೆ ಅಥವಾ ಅದರ ಪರಿಣಾಮ ನಮ್ಮ ಕೈನಲ್ಲಿ ಇಲ್ಲ; ಆದರೆ, ಅದನ್ನು ಯಾವ ರೀತಿಯಲ್ಲಿ ನಿಭಾಯಿಸಬಹುದು ಎನ್ನುವುದು ನಮ್ಮ ಕೈನಲ್ಲಿ ಇರುತ್ತದೆ" ಎಂದು ಹೇಳುತ್ತಾ 'ಚಿಂತೆ ಮತ್ತು ಒತ್ತಡಕ್ಕೆ ಮನಸ್ಸಿನಲ್ಲಿ ಜಾಗ ನೀಡಬೇಡಿ' ಎನ್ನುತ್ತಾರೆ.  

ಮನೋವೈಜ್ಞಾನಿಕ ವಿಷಯದ ಪ್ರಾಧ್ಯಾಪಕರು ಮಾನಸಿಕ ಒತ್ತಡವನ್ನು ನಿಭಾಯಿಸುವ ಉಪಾಯಗಳನ್ನು ಬೋಧಿಸುವಾಗ ಒಂದು ಗ್ಲಾಸ್ ನಲ್ಲಿರುವ ನೀರನ್ನು ಇದು ಎಷ್ಟು ಭಾರವಾಗಿರಬಹುದು ಎಂದು ವಿದ್ಯಾರ್ಥಿಗಳನ್ನು ಕೇಳುತ್ತಾರೆ. ಅದಕ್ಕೆ ಬಂದ ವಿವಿಧ ಉತ್ತರಗಳು ಹಾಗೂ ನಮ್ಮ ಜೀವನದ ಚಿಂತೆ ಮತ್ತು ಒತ್ತಡಗಳನ್ನು ನೀರಿನ ಗ್ಲಾಸಿಗೆ ಹೋಲಿಸುತ್ತಾ.. ಸ್ವಲ್ಪ ಸಮಯದವರೆಗೆ ಮನಸ್ಸಿನಲ್ಲಿಟ್ಟುಕೊಂಡ ವಿಚಾರಗಳು ಹಗುರವೆನಿಸುತ್ತವೆ. ಅದೇ ಅವುಗಳನ್ನು ಹೆಚ್ಚು ಕಾಲ ಮನಸ್ಸಿಗೆ ತೆಗೆದುಕೊಂಡರೆ ನಿಭಾಯಿಸುವುದು ಯಾವ ರೀತಿಯಲ್ಲಿ ಕಷ್ಟ ಎಂಬುದನ್ನೂ ಹೇಳುತ್ತಾರೆ.


* ಉತ್ತಮ ಕಾರ್ಯಕ್ಕೆ ಪ್ರೋತ್ಸಾಹವೇ ಪ್ರೇರಣೆ :

19ನೇ ಶತಮಾನದ ಖ್ಯಾತ ಚಿತ್ರ ಕಲಾವಿದ ಗ್ಯಾಬ್ರಿಯಲ್ ರೊಜೆಟಿಯವರ ಉದಾಹರಣೆಯನ್ನು ನೀಡುತ್ತಾರೆ. ಒಬ್ಬ ವ್ಯಕ್ತಿ ಬಂದು ಕೆಲವು ಚಿತ್ರಗಳನ್ನು ತೋರಿಸಿದಾಗ ಅವುಗಳನ್ನು ದಿಟ್ಟಿಸಿ, ಗಮನವಿಟ್ಟು ನೋಡಿದವರು ಅವುಗಳನ್ನು ಬಿಡಿಸಿದವನಲ್ಲಿ ಯಾವುದೇ ಪ್ರತಿಭೆ ಇಲ್ಲ ಎಂಬ ನಿಲುವಿಗೆ ಬರುತ್ತಾರೆ. ಹಾಗೆಂದು, ಆ ವ್ಯಕ್ತಿಯ ಮನಸ್ಸಿಗೆ ನೋವನ್ನುಂಟು ಮಾಡಲು ಇಷ್ಟವಿರಲಿಲ್ಲ ಅಥವಾ ಸುಳ್ಳು ಹೇಳಲು ಇಷ್ಟವಿರಲಿಲ್ಲ. ಕೊನೆಗೆ ಈ ಚಿತ್ರಗಳಲ್ಲಿ ಹೇಳಿಕೊಳ್ಳುವಂತಹ ವಿಶೇಷವೇನೂ ಕಾಣಿಸುವುದಿಲ್ಲ ಎನ್ನುತ್ತಾರೆ.  ಆ ವ್ಯಕ್ತಿ ಅದನ್ನು ನಿರೀಕ್ಷಿಸಿದವಂತೆ ಮತ್ತಷ್ಟು ಬೇರೆ ಚಿತ್ರಗಳನ್ನು ಕೊಟ್ಟು ಯುವ ಕಲಾವಿದ ಬಿಡಿಸಿದ ಹಳೆಯ ಚಿತ್ರಗಳು. ಇವು ಹೇಗಿವೆ..? ಎನ್ನುತ್ತಾರೆ. . ಅವುಗಳನ್ನು ಗಮನಿಸಿ ಇದು ಬಹಳ ಪ್ರತಿಭಾವಂತನ ಚಿತ್ರಗಳು ಆತ ಇನ್ನಷ್ಟು ಶ್ರಮ ವಹಿಸಿದರೆ ಹಾಗೂ ನೀವು ಪ್ರೋತ್ಸಾಹಿಸಿದರೆ ಮಹಾನ್ ಕಲಾವಿದನಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ. ವಿಪರ್ಯಾಸವೆಂದರೆ, ಆತನೇ 30 ವರ್ಷಗಳ ಹಿಂದೆ ಬಿಡಿಸಿದ್ದ ಚಿತ್ರಗಳು ಆ ಸಮಯದಲ್ಲಿ ರೊಜೆಟಿಯವರು ಪ್ರೋತ್ಸಾಹದ ಮಾತುಗಳನ್ನಾಡದೆ ಅವಹೇಳನ ಮಾಡಿ ತಿರಸ್ಕರಿಸಿದ್ದರು. ಈ ವಿಚಾರ ತಿಳಿದಾಗ ಅನ್ಯಾಯವಾಗಿ ಒಬ್ಬ ಕಲಾವಿದನ ಭವಿಷ್ಯವನ್ನು ಹಾಳು ಮಾಡಿದಕ್ಕಾಗಿ ಪಶ್ಚಾತ್ತಾಪ ಪಟ್ಟರು. ಒಂದು ಪ್ರೋತ್ಸಾಹ ಮತ್ತೊಬ್ಬರ ಭವಿಷ್ಯದ ಮೇಲೆ ಅದೆಷ್ಟು ಪರಿಣಾಮ ಬೀರುತ್ತದೆ ಅಲ್ಲವಾ..?


* 'ಇನ್ನೊಬ್ಬರ ಕೆಲಸದಲ್ಲಿನ ಕೊರತೆಯನ್ನು ಹುಡುಕುವುದು ಅಥವಾ ಅದನ್ನು ನಿಂದಿಸುವುದು ಬಹಳ ಸುಲಭ ಆದರೆ ಆ ಕೊರತೆಯನ್ನು ಸ್ವತಃ ದೂರ ಮಾಡುವುದು ಬಹಳ ಕಠಿಣ.' ಇಂತಹ ವಿಚಾರಗಳಲ್ಲಿ 'ಯೋಗ್ಯ ವ್ಯಕ್ತಿಯ ಸಲಹೆಯಿಂದ ಮಾತ್ರ ಸಮಸ್ಯೆಗೆ ಪರಿಹಾರ' ದೊರೆಯುತ್ತದೆ.

ಹೆಸರಾಂತ ಕಲಾವಿದ ತನ್ನ ಸುಂದರ ಕಲಾಕೃತಿಯನ್ನು ಮಾರ್ಗದ ಪಕ್ಕದಲ್ಲಿಟ್ಟು ಈ ಚಿತ್ರದಲ್ಲಿ ಯಾವುದಾದರೂ ಲೋಪ ಕಂಡು ಬಂದರೆ ಅಲ್ಲಿ ಸಣ್ಣ ಗುರುತನ್ನು ಮಾಡಿ ಎಂದು ವಿನಂತಿಸಿಕೊಳ್ಳುತ್ತಾನೆ. ತನ್ನ ಚಿತ್ರಗಳಲ್ಲಿರುವ ಕೊರತೆಗಳನ್ನು ತಿಳಿದುಕೊಂಡು ಇನ್ನಷ್ಟು ಉತ್ತಮ ಕಲಾಕೃತಿಯನ್ನು ರೂಪಿಸಬಹುದು ಎನ್ನುವುದು ಆತನ ದೂರಲೋಚನೆ. ಆದರೆ, ಆ ಕಲಾಕೃತಿ ಅದರ ಮೇಲೆ ಹಾಕಿದ ಅನೇಕ ಗುರುತುಗಳಿಂದ ಸೌಂದರ್ಯವನ್ನೇ ಕಳೆದುಕೊಂಡಿರುತ್ತದೆ. ಆತ ದುಃಖಿತನಾದ ಸಂದರ್ಭದಲ್ಲಿ ಗೆಳೆಯ ಮತ್ತೊಂದು ಸಲಹೆ ಸೂಚಿಸುತ್ತಾನೆ. ಆ ಸೂಚನೆ ಏನು ಹಾಗೂ ಅದರಿಂದ ಈ ಸಮಸ್ಯೆ ಬಗೆಹರಿದದ್ದು ಹೇಗೆ? ಓದಿ ನೋಡಿ ಇಂತಹ ಅತ್ಯಮೂಲ್ಯವಾದ ಸಲಹೆಗಳು ಯೋಗ್ಯ ವ್ಯಕ್ತಿಯಿಂದ ಮಾತ್ರ ಸಿಗುತ್ತದೆ. 


* "ಒಂದು ವೇಳೆ ನಾವು ಸೂಕ್ತ ಸಮಯದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳದೇ ಹೋದರೆ, ವಿವಿಧ ವಿಷಮ ಪರಿಸ್ಥಿತಿಗಳಿಂದ ಹಾಗೂ ಜನರಿಂದ ಆರ್ಥಿಕ, ಶಾರೀರಿಕ ಅಥವಾ ಭಾವನಾತ್ಮಕ ಬಿಕ್ಕಟ್ಟುಗಳನ್ನು ಎದುರಿಸ ಬೇಕಾಗಬಹುದು..."

ಇದಕ್ಕೆ ಒಂದು ಕಪ್ಪೆಯನ್ನು ನೀರಿನ ಒಳಗೆ ಹಾಕಿ ಅದನ್ನು ಕುದಿಸುತ್ತಾ ಹೋದಾಗ ಅದರ ಪರಿಣಾಮವೇನು..? ಕಪ್ಪೆ ಏನು ಮಾಡುತ್ತದೆ..? ಎನ್ನುವ ನಿದರ್ಶನವನ್ನು ನೀಡುತ್ತಾ 'ನಮ್ಮೊಳಗೇ ಅಡಗಿದೆ ಪರಿಸ್ಥಿತಿಗಳನ್ನು ಬದಲಿಸುವ ಸಾಮರ್ಥ್ಯ' ಎಂದು ಹೇಳುತ್ತಾರೆ.


* "ನಮ್ಮ ಜೀವನದಲ್ಲಿ ಹಲವಾರು ಬಾರಿ ಬೀಳುತ್ತೇವೆ, ಸೋಲುತ್ತೇವೆ. ಆದರೆ ಒಂದು ವಿಷಯವನ್ನು ನೆನಪಿಡಿ, ನಮ್ಮ ಜೀವನದಲ್ಲಿ ಏನೇ ನಡೆದಿರಲಿ ಅಥವಾ ಭವಿಷ್ಯದಲ್ಲಿ ಏನೇ ನಡೆಯುವುದಿರಲಿ, ನಮ್ಮ ಮೌಲ್ಯವು ಎಂದಿಗೂ ಕಡಿಮೆಯಾಗುವುದಿಲ್ಲ..." ಎಂದು ಹೇಳುತ್ತಾ

"ಕಳೆದು ಹೋದ ನಿನ್ನೆಯ ನಿರಾಸೆಗಳು, ಮುಂಬರುವ ನಾಳೆಯ ಸ್ವಪ್ನಗಳನ್ನು ನಾಶ ಮಾಡುವುದಕ್ಕೆ ಎಂದಿಗೂ ಬಿಡಬಾರದು. ಯಾವತ್ತೂ ನಾವು ನೆನಪಿನಲ್ಲಿ ಇಡಬೇಕಾದ ವಿಷಯವೇನೆಂದರೆ, ನಮ್ಮ ಜೀವನ ಹಾಗೂ ನಮ್ಮಲ್ಲಿ ಅಡಗಿರುವ ಪ್ರತಿಭೆಗಳೇ ಈ ಜಗತ್ತಿನಲ್ಲಿ ಅತ್ಯಂತ ಮೌಲ್ಯಯುತ ವಸ್ತುಗಳಾಗಿರುತ್ತವೆ." ಅದರ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾ ಪ್ರತಿಭೆಯ ಮೌಲ್ಯವನ್ನು ನೋಟಿನ ಮೌಲ್ಯದ ನಿದರ್ಶನದೊಂದಿಗೆ ತೋರಿಸುತ್ತಾರೆ. 


* ಒಬ್ಬ ಮಹಿಳೆಯು ಪ್ರತಿದಿನ ಕೆರೆಯೊಂದರ ದಡದಲ್ಲಿ ಕುಳಿತು ಆಮೆಯ ಬೆನ್ನನ್ನು ಸ್ವಚ್ಛಗೊಳಿಸುತ್ತಿರುತ್ತಾಳೆ. ಒಬ್ಬ ಹುಡುಗ ಅವಳನ್ನು ಪ್ರತಿದಿನವೂ ಗಮನಿಸುತ್ತಾ ಅವಳ ಈ ಕಾರ್ಯಕ್ಕೆ ಕಾರಣವನ್ನು ಕೇಳಿದಾಗ ಅಚ್ಚರಿಗೊಳ್ಳುತ್ತಾನೆ. ನೀವು ಮಾಡುತ್ತಿರುವ ಕೆಲಸದಿಂದ ಕಡಿಮೆ ಆಮೆಗಳು ಈ ಸೌಲಭ್ಯ ಪಡೆದುಕೊಳ್ಳುತ್ತವೆ. ಆದರೆ, ಹೆಚ್ಚಿನ ಆಮೆಗಳ ಗತಿಯೇನು..? ಎಂದು ಕೇಳಿದಾಗ.. ಅವಳು "ನನ್ನ ಈ ಸಣ್ಣದಾದ ಕಾರ್ಯದಿಂದ ದೊಡ್ಡ ಬದಲಾವಣೆಯೇನೂ ಆಗುವುದಿಲ್ಲ ನಿಜ. ಆದರೆ, ಈ ಆಮೆಯ ಜೀವನವಂತೂ ಬದಲಾಗುತ್ತದೆಯಲ್ಲವೇ? ಸಣ್ಣ ಬದಲಾವಣೆಗಾಗಿಯೇ ನಾವೇಕೆ ಕೆಲಸವನ್ನು ಆರಂಭಿಸಬಾರದು? ಎಂದು ಹೇಳಿದಾಗ ಮನ ಪರಿವರ್ತನೆಯಾದ ಆ ಹುಡುಗನೂ ಅವಳ ಕಾರ್ಯಕ್ಕೆ ಕೈಜೋಡಿಸುತ್ತಾನೆ. 'ಸದುದ್ದೇಶದ ಯಾವ ಕಾರ್ಯವೂ ವ್ಯರ್ಥವಾಗುವುದಿಲ್ಲ' ಎನ್ನುವ ಸಂದೇಶ ನೀಡುವ ಕಥೆ.


* "ನಾವು ಯೋಚಿಸುವ ವಿಧಾನದ ಮೂಲಕವೇ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ನಮ್ಮ ಯೋಚನೆ ಬದಲಾದರೆ ಮಾತ್ರ ನಮ್ಮ ಜಗತ್ತು ಬದಲಾಗುತ್ತದೆ. ಆದ್ದರಿಂದ ನಾವು ಸದಾ ಸಕಾರಾತ್ಮಕವಾಗಿಯೇ ಯೋಚಿಸಬೇಕು.." ಎಂದು ಹೇಳುತ್ತಾ ಇಬ್ಬರು ಸಾಧುಗಳ ಉದಾಹರಣೆಯನ್ನು ಕೊಡುತ್ತಾರೆ ಒಬ್ಬ ಸಾಧು ನಕಾರಾತ್ಮಕ ಆಲೋಚನೆಯಿಂದ ಕೂಡಿದ್ದರೆ, ಇನ್ನೊಬ್ಬ ಸಾಧು ಸಕಾರಾತ್ಮಕ ಆಲೋಚನೆಯಿಂದ ಕೂಡಿರುತ್ತಾನೆ. ಇಬ್ಬರಲ್ಲಿ ಯಾರ ಆಲೋಚನೆ ಬದಲಾಯಿತು ಮತ್ತು ಅವರ ಮೇಲೆ ಯಾವ ಪರಿಣಾಮವಾಯಿತು ಓದಿ ನೋಡಿ.


" 'ಕಠಿಣ ದುಡಿಮೆಗಿಂತ ಕೌಶಲ್ಯಪೂರ್ಣ ದುಡಿಮೆ ಹೆಚ್ಚು ಮಹತ್ವಪೂರ್ಣ' ಎನ್ನುವುದಕ್ಕೆ ಉದಾಹರಣೆಯಾಗಿ ಒಬ್ಬ ಮರ ಕಡಿಯುವ ಕೆಲಸವನ್ನು ಶುರು ಮಾಡಿದವನು ಅತಿ ಹುರುಪಿನಿಂದ ಕೆಲಸ ಮಾಡಿದರೂ ದಿನೇ ದಿನೇ ಕಡಿಯುವ ಮರಗಳು ಕಡಿಮೆಯಾಗುತ್ತಿರುತ್ತವೆ. ಅದಕ್ಕೆ ಕಾರಣ ಕೊಡಲಿಯನ್ನು ಹರಿತಗೊಳಿಸಿಕೊಳ್ಳದೆ ಇರುವುದು. ನಂತರ ಅವನಿಗೆ ತನ್ನ ತಪ್ಪಿನ ಅರಿವಾಗಿ ಅದನ್ನು ತಿದ್ದಿಕೊಳ್ಳುತ್ತಾನೆ. ಹೀಗೆ "ಯಾವುದೇ ಕೆಲಸದಲ್ಲಿ ಯಾದರೂ ಸತತವಾದ ಪರಿಶ್ರಮ ಬೇಕೇಬೇಕು. ಆದರೆ ಅದರ ಜೊತೆಯಲ್ಲಿಯೇ ಕೌಶಲ್ಯ ಪ್ರದರ್ಶನಕ್ಕೂ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಗಾಣದ ಎತ್ತಿನ ದುಡಿಮೆಯಾಗುತ್ತದೆ" ಎನ್ನುವ ಸಂದೇಶವೂ ಇಲ್ಲಿದೆ.


ಈ ಪುಸ್ತಕದಲ್ಲಿ ಇಂತಹ ಹಲವಾರು ವ್ಯಕ್ತಿತ್ವ ವಿಕಸನದ ಪಾಠಗಳು ಬದುಕಿನ ರೀತಿಯನ್ನು ಬದಲಿಸಿಕೊಳ್ಳುವ ಆಲೋಚನೆಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ ಲೇಖಕರು. ಇವುಗಳನ್ನು ಅರಿತು ತಿದ್ದಿಕೊಳ್ಳುವ ವಿಚಾರವನ್ನು ತಿದ್ದಿಕೊಂಡರೆ ಬದುಕು ಮತ್ತಷ್ಟು ಸಹನೀಯವಾಗುತ್ತದೆ. ಅಲ್ಲದೆ, ನಮ್ಮ ವ್ಯಕ್ತಿತ್ವ ಮತ್ತಷ್ಟು ಚಂದವಾಗಿ ರೂಪಗೊಳ್ಳುತ್ತವೆ. ನಕಾರಾತ್ಮಕ ಆಲೋಚನೆಗಳು ಬಂದಾಗಲೂ ಮತ್ತೆ ಮತ್ತೆ ಓದಬಹುದಾದಂತಹ ಪುಸ್ತಕ. 


~ ವಿಭಾ ವಿಶ್ವನಾಥ್

ಲಂಚ್ ಬಾಕ್ಸ್ (ಪುಸ್ತಕ ಯಾನ - 441)


ಪುಸ್ತಕದ ಶೀರ್ಷಿಕೆ : ಲಂಚ್ ಬಾಕ್ಸ್

ಲೇಖಕರು : ರಾಜು ಪುಸ್ತಕಗ್ರಾಮ್ 

ಪ್ರಕಾಶಕರು : ಅವ್ವ ಪುಸ್ತಕಾಲಯ 

ಪ್ರಥಮ ಮುದ್ರಣ : ಜನವರಿ 2026

ಪುಟಗಳು : 136

ಬೆಲೆ : 150 ರೂ. 


ಓದಿನ ಹವ್ಯಾಸಿಯಾಗಿರುವ ಇವರು ಇನ್ಸ್ಟಾಗ್ರಾಮ್ ನಲ್ಲಿ ಪುಸ್ತಕಗ್ರಾಮ್ ಎನ್ನುವ ಪುಟವನ್ನ ನಿರ್ವಹಿಸುತ್ತಿದ್ದಾರೆ. ಪುಸ್ತಕಗಳ ಓದಿನ ರುಚಿಯೇ ಇವರನ್ನು ಬರಹಕ್ಕೂ ಹಚ್ಚಿರುವುದು ನಿಜಕ್ಕೂ ಖುಷಿಯ ಸಂಗತಿ. ಇವರ ಸಾಹಿತ್ಯ ಕೃತಿಯನ್ನು ಗುರುತಿಸಿ ಹರಿವು ಪ್ರಕಾಶನದವರು ನೀಡಿರುವ 'ಗಳಗನಾಥ ' ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಂಗಭೂಮಿಯ ಚಟುವಟಿಕೆ, ಚಿತ್ರಕಲೆ, ಫೋಟೋಗ್ರಫಿಯನ್ನು ಹವ್ಯಾಸ ಮಾಡಿಕೊಂಡಿರುವವರು ರಂಗವರ್ಸ್ ಎಂಬ ಇನ್ಸ್ಟಾಗ್ರಾಮ್ ಪೇಜ್ ಅನ್ನೂ ನಿರ್ವಹಿಸುತ್ತಿದ್ದಾರೆ. 'ಲಂಚ್ ಬಾಕ್ಸ್' ಇವರ ಚೊಚ್ಚಲ ಕೃತಿ. 


ಈ ಕಥಾಸಂಕಲನದಲ್ಲಿ 7 ಕಥೆಗಳಿವೆ. 


ಲಂಚ್ ಬಾಕ್ಸ್ : ಅಮ್ಮನ ಕೈ ರುಚಿ ಹಾಗೂ ಲಂಚ್ ಬಾಕ್ಸ್ ಜೊತೆಗೆ ತೆರೆದುಕೊಳ್ಳುವ ಈ ಕಥೆ ಅಪಾರ್ಟ್ಮೆಂಟ್ ಪಕ್ಕದ ಅಣತಿ ದೂರದ ಮೋರಿಯ ಪಕ್ಕದಲ್ಲಿದ್ದ ಸ್ಲಮ್ಮಿನ ಬದುಕನ್ನು ಸಹ ತೋರಿಸುತ್ತದೆ. ಜೊತೆಗೆ ಮನೆಯಲ್ಲಿ ಕಷ್ಟಪಟ್ಟು ತಯಾರು ಮಾಡಿರುವ ಲಂಚ್ ಬಾಕ್ಸ್ ಅನ್ನು ಇಟ್ಟುಕೊಂಡು ಉದಾಸೀನದಿಂದ ಇರುವಂತೆ ಕಾಣುವ ಬೈಕ್ ಓಡಿಸುವವನ ಮನಸ್ಥಿತಿ ಅವರ ಪ್ರೊಫೆಷನಲ್ ಸಮಸ್ಯೆಗಳ ಜೊತೆಗೆ ಕೊರೊನಾ ದಿನಗಳ ದರ್ಶನವನ್ನು ಮಾಡಿಸುತ್ತದೆ. ಸ್ಲಂನಲ್ಲಿರುವ ನಿರ್ಗತಿಕರಿಗೆ ಅನ್ನದ ಪೊಟ್ಟಣಗಳನ್ನು ಹಂಚುವ ಕೆಲಸಕ್ಕೆ ಇಳಿದಿದ್ದ ಸಿದ್ದು ವಿಗೆ ಆಪ್ತ ಬಂಧವೊಂದು ಸಿಕ್ಕಿತ್ತು. ಅದೇ ಮುಖದಲ್ಲಿ ಮುಗ್ಧತೆ ತುಂಬಿಕೊಂಡಿದ್ದ ಆ ಮಗು. ಕೋವಿಡ್ ದಿನಗಳ ಲಂಚ್ ಬಾಕ್ಸ್ ಹಾಗೂ ಆ ಮಗುವಿನ ಹಸಿವು ಎರಡನ್ನೂ ತೆರೆದಿಟ್ಟಿರುವ ಕರುಣಾಚಲಕ ಕಥೆ ಇಲ್ಲಿದೆ. ಅನ್ನದ ಮಹತ್ವವನ್ನು ಹೀಗೆ ತೆರೆದಿಟ್ಟಿದ್ದಾರೆ.


ಮೃತ್ಯುಂಜಯ : ಸಾವನ್ನು ಗೆದ್ದವನು ಎಂಬರ್ಥದ ಹೆಸರು ಇದು. ಅಪ್ಪ, ಅಮ್ಮ, ತಂಗಿ ಮೂವರೂ ತಿರುಪತಿಗೆ ಹೊರಟ ಸಂದರ್ಭದಲ್ಲಿ ಅವರೊಡನೆ ಹೋಗದೆ ಉಳಿದುಕೊಂಡಿದ್ದವನು ತಾನೇ ಸಾವನ್ನು ಆಹ್ವಾನಿಸುವ ಹುಚ್ಚು ಧೈರ್ಯ ಮಾಡುತ್ತಾನೆ. ಅಷ್ಟಕ್ಕೂ ಆತನಿಗಿದ್ದ ಸಮಸ್ಯೆ ಏನು? ಹದಿಹರೆಯದ ವಯಸ್ಸಿನವರು ಇಂತಹ ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆಯ ಮೊರೆ ಹೊಕ್ಕರೆ ಹೇಗಿರುತ್ತದೆ..? ಸೋಲುಗಳನ್ನು ಸಹಿಸಿಕೊಳ್ಳುವ ಮನೋಭಾವ ಹಾಗೂ ಸಹನೆಯ ಪಾಠ ಹದಿಹರೆಯದವರಿಗೆ ಬಹಳ ಅವಶ್ಯಕ. ಇಲ್ಲಿ ನಮ್ಮ ಕಥೆಯ ನಾಯಕ ಸಾವನ್ನು ಗೆದ್ದು ಬರುತ್ತಾನಾ ಓದಿ ನೋಡಿ.


ಅಪ್ಪನ ನೆರಳು :

"ಮನಸಲ್ಲಿ ನಡೆಯೋ ಸಮರಕ್ಕೂ ಹೊರವಲಯದ ಮೌನಕ್ಕೂ ಅದೆಷ್ಟು ಅಂತರ."

ಕೌಟುಂಬಿಕ ವಾತಾವರಣ ಹಾಗೂ ಮನಸ್ಸಿನ ಸಂಘರ್ಷಗಳ ಚಿತ್ರಣವನ್ನು ಇಲ್ಲಿ ಕಾಣಬಹುದು. ಇದು ಸಹ ಕೊರೊನಾ ಕಾಲಘಟ್ಟದ ಕಥೆ. ಊರಿನ ಪದ್ಧತಿಯಂತೆ ಒಂದೇ ಚಪ್ಪರದಲ್ಲಿ, ಒಂದೇ ವೇದಿಕೆಯಲ್ಲಿ ಅಣ್ಣ ತಮ್ಮನ ಮದುವೆ ಮಾಡಿಬಿಡುತ್ತಿದ್ದರು. ಅಣ್ಣನ ಮದುವೆಯ ಸಂದರ್ಭದಲ್ಲಿ ತನಗಿನ್ನೂ ಮದುವೆಯ ಯೋಚನೆ ಇಲ್ಲ ಎಂದು ಹೇಳಿಬಿಟ್ಟಿದ್ದವನು ಪ್ರೀತಿಸಿದ ಹುಡುಗಿಯನ್ನು ಮುಂದಿನ ದಿನಗಳಲ್ಲಿ ಪರಿಚಯಿಸಿದ. ಮೊದಮೊದಲು ಮನೆಯಲ್ಲಿ ವಿರೋಧ ವ್ಯಕ್ತವಾದರೂ ನಂತರ ಮದುವೆ ನಿಶ್ಚಯವಾಗಿತ್ತು. ಹೀಗೆ ನಿಶ್ಚಯವಾದ ನಿರಂಜನ ಹಾಗೂ ಜಾನಕಿಯ ಮದುವೆಯ ಸಂದರ್ಭದಲ್ಲಿಯೇ ಅಪ್ಪನ ಆರೋಗ್ಯ ಹದಗೆಟ್ಟಿತ್ತು. ನಿರಂಜನನ ಮನಸ್ಸಿನ ತುಡಿತ ಯಾವ ಕಡೆಗಿತ್ತು..? ಈ ವಿವಾಹದ ತೀರ್ಮಾನ ಅವನ ಬದುಕಿನ ಯಾವೆಲ್ಲ ಬದಲಾವಣೆಗಳಿಗೆ ಸಾಕ್ಷಿಯಾಗಿತ್ತು..? 'ಅಪ್ಪನ ನೆರಳು' ನಿರಂಜನನ ಭವಿಷ್ಯದಲ್ಲಿ ಯಾವ ರೂಪ ಪಡೆಯುತ್ತದೆ ಓದಿ ನೋಡಿ.


ಮರೆಯಲಾಗದ ಮದುವೆ : ತಮ್ಮ ಆಫೀಸಿನ ಸಹೋದ್ಯೋಗಿಯಾಗಿದ್ದ ಸುರೇಶ ನ ಮದುವೆ ರಾಯಚೂರಿನ ಒಂದು ಹಳ್ಳಿಯಲ್ಲಿತ್ತು. ಇದ್ದ 8-10 ಉದ್ಯೋಗಿಗಳಲ್ಲಿ ಐವರು ತಮ್ಮ ಬಾಸ್ ಕೊಟ್ಟ ಕಾರಿನಲ್ಲಿ ಹೊರಟಿದ್ದರು. ಇಲ್ಲಿಂದ ಹೊರಡುವಾಗ ಮದುವೆಯಲ್ಲಿ ಹೇಗೆಲ್ಲಾ ಮಜಾ ಮಾಡಬಹುದು ಎಂದು ಮದುವೆ ಮನೆಗೆ ತಲುಪುವ ಮುನ್ನವೇ ಪ್ಲಾನ್ ಮಾಡಿಕೊಂಡಿದ್ದರು. ಅತ್ತ ಸುರೇಶನೂ ಇವರ ಬರುವಿಕೆಗಾಗಿ ಕಾಯುತ್ತಿದ್ದ. ಆದರೆ, ದಾರಿಯಲ್ಲಿ ಆದ ಎಡವಟ್ಟೊಂದು ಇವರ ಬದುಕಿನಲ್ಲಿ ಸುರೇಶನ ಮದುವೆಯನ್ನು ಮರೆಯಲಾಗದ ಮದುವೆಯನ್ನಾಗಿಸಿತು. ಸಂಭಾಷಣೆಗಳು ನೈಜವಾಗಿ ಮೂಡಿಬಂದಿವೆ. 


ಕನಸಿನಾಳ : ಕನಸಿನ ಕಲ್ಪನೆಗೂ ವಾಸ್ತವದ ನಿರಸನಕ್ಕೂ ಮಧ್ಯದಲ್ಲೊಂದು ಸಣ್ಣ ಎಳೆಯಿದೆ. ಎಳೆಯನ್ನು ದಾಟಿ ಮತ್ಯಾವುದೋ ಆಯಾಮದಲ್ಲಿ ನಾನೀಗ ನಿಂತಿರಬಹುದು ಎಂಬ ಸಣ್ಣ ಅನುಮಾನದಿಂದ ಎಂದು ಹೇಳುತ್ತಲೇ ಕಥೆಯ ಪ್ರವೇಶಿಕೆಗೆ ಅಡಿ ಇಟ್ಟರೂ ಕಥೆ ವಿಭಿನ್ನವಾಗಿ ಸಾಗುತ್ತದೆ. ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿದ್ದ 366 ಜನರಲ್ಲಿ 364 ಜನರ ಆಯ್ಕೆ ಪ್ರಕ್ರಿಯೆ ಮುಗಿದಿತ್ತು. ಉಳಿದಿರುವುದು ಇಬ್ಬರೇ. ಆ ಎರಡು ಜಾಗ ಯಾರದ್ದಿರಬಹುದು ಎಂಬ ಕುತೂಹಲದಿಂದಲೇ ಮೊದಲಿಡುವ ರೈಲಿನ ಪ್ರಯಾಣ ಎಲ್ಲರಿಗೂ ಮುಖ್ಯವಾಗಿತ್ತು. ಅದೇನೆಂದರೆ ಆ ರೈಲು ಪ್ರಪಂಚ ಪರ್ಯಟನೆಗೆಂದೇ ನಿಂತಿತ್ತು. ರೈಲಿನ ಪ್ರಪಂಚ ಪರ್ಯಟನೆ, ನವಿಲುಗರಿ ಟೋಪಿಯವನು, ರೈಲಿನ ಒಳ ಹೊಕ್ಕ ನಂತರ ಬದಲಾಗುವ ಪರಿಸ್ಥಿತಿ ಹೀಗೆ ಹಲವಾರು ಕಲ್ಪನೆಗಳಿಂದ ಕಟ್ಟಿಕೊಟ್ಟಿರುವ ಕಥೆ ಇದು. ಈ ಕಥಾ ಸಂಕಲನದಲ್ಲಿ ನನಗೆ ಇಷ್ಟವಾದ ಹಾಗೂ ವಿಭಿನ್ನವಾದ ಕಥೆ.


ರಾಜಾಯಣ : ಪ್ರೀತಿಯಲ್ಲಿ ಯಾವುದು ಬಹು ಮುಖ್ಯಪಾತ್ರ ವಹಿಸುತ್ತದೆ ಎನ್ನುವುದಕ್ಕೆ ಉತ್ತರ ಬಹಳ ಕಷ್ಟ. ಅದು ಪ್ರತಿಯೊಬ್ಬರ ವೈಯಕ್ತಿಕ ನಿರ್ಧಾರದ ಮೇಲೆ ಅವಲಂಬಿತ. ಏಳು ವರ್ಷಗಳಿಂದ ತಿಳಿದಿದ್ದ, ಸ್ನೇಹದಿಂದ ಪ್ರೀತಿಗೆ ತಿರುಗಿತ್ತ ಪ್ರೇಮವೊಂದು ಧ್ವನಿಯ ಕಾರಣಕ್ಕಾಗಿ ಕಳಚಿ ಬಿಡಬಹುದಾ..? ಹಾಗಾದಾಗ ಮೂಡುವ ಅಭದ್ರತೆಯ ಭಾವ, ಕಡಿಮೆಯಾಗುವ ಆತ್ಮವಿಶ್ವಾಸ ಬದುಕನ್ನು ಬೇರೆಯದ್ದೇ ದಿಕ್ಕಿಗೆ ಕೊಂಡೊಯ್ಯಬಹುದು . ಪ್ರಪಂಚ ಯಾವುದನ್ನು ದೋಷವೆಂದು ಹೀಯಾಳಿಸಿತ್ತೋ ಅಂತಹ ದೋಷವೇ ಮತ್ತೊಬ್ಬರಿಗೆ ಇಷ್ಟವಾಗಿ ಪ್ರೀತಿಯಾದರೆ..?! ಇಲ್ಲಿ ಮತ್ತೆ ಪ್ರೀತಿಯಾಗಿದ್ದು ಯಾರಿಗೆ ಓದಿ ನೋಡಿ.


ಫಲ್ಗುಣಿ :  "ಈ ಜಗತ್ತಿನಲ್ಲಿ ಯಾರ ಜೀವನವು ಒಂದೇ ರೀತಿ ಸಮತೋಲನದಿಂದಿರಲು ಸಾಧ್ಯವಿಲ್ಲ ಅಂತಯೇ ಮನಸ್ಥಿತಿ ಕೂಡ ಎಲ್ಲರ ಜೀವನದಲ್ಲೂ ಎಲ್ಲದರಲ್ಲೂ ಏರಿಳಿತಗಳು ಇರುತ್ತವೆ." ಅಂತಹ ಏರಿಳಿತಗಳಿದ್ದಾಗ ಮನುಷ್ಯನ ವರ್ತನೆಯು ಬದಲಾಗುತ್ತದೆ. ಇಲ್ಲಿ ಫಲ್ಗುಣಿಯ ಬದುಕು ಸಹ ಅಂತೆಯೇ ಇತ್ತು. ಮುಂದೇನು ಮಾಡಬೇಕು ಎಂದು ಬುದ್ಧಿಯ ಮಾತು ಕೇಳುವುದೋ ಅಥವಾ ಮನಸ್ಸಿನ ಮಾತು ಕೇಳುವುದೋ ಎಂಬುದು ಆಯಾ ವ್ಯಕ್ತಿಯ ಮೇಲೆ ಹಾಗೂ ಪರಿಸ್ಥಿತಿಯ ಮೇಲೆ ಅವಲಂಬಿತ. ಕೊನೆಯ ಕ್ಷಣದಲ್ಲಿ ಅಣ್ಣನಿಗೆ ತಾನು ಮಾತ್ರೆಗಳನ್ನು ತೆಗೆದುಕೊಂಡ ವಿಚಾರ ತಿಳಿಸಿದ ಫಲ್ಗುಣಿಯ ನಿರ್ಧಾರ ಏನಿತ್ತು..? ಫಲ್ಗುಣಿ ತೆಗೆದುಕೊಂಡ ಆ ನಿರ್ಧಾರಕ್ಕೆ ಕಾರಣವೇನಿತ್ತು..? ಮುಂದೇನಾಗುತ್ತದೆ ಎಂದು ಕಾತುರದಿಂದಲೇ ಓದುವಂತೆ ಕಟ್ಟಿಕೊಟ್ಟಿರುವ ಕಥೆ ಇದು. 


ಪ್ರತಿ ಕತೆಗೂ ಮುನ್ನ ಇರುವ ಕತೆಗೆ ಸಂಬಂಧಿಸಿದ ಚಿತ್ರಗಳು ಅರ್ಥಪೂರ್ಣವಾಗಿವೆ. 

ಈ ಕಥಾಸಂಕಲನದಲ್ಲಿ ಹೆಚ್ಚು ಇಷ್ಟವಾಗಿದ್ದು ಸಂಭಾಷಣೆಗಳನ್ನು ಆಪ್ತವಾಗಿ ಕಟ್ಟಿಕೊಟ್ಟಿರುವ ಪರಿ. ಲೇಖಕರ ಮುಂದಿನ ಸಾಹಿತ್ಯ ಕೃಷಿಗೆ ಶುಭವಾಗಲಿ ಎಂದು ಹಾರೈಸುವೆ. 


~ವಿಭಾ ವಿಶ್ವನಾಥ್

ಕೀಮೋ (ಪುಸ್ತಕ ಯಾನ - 440)


ಪುಸ್ತಕದ ಶೀರ್ಷಿಕೆ : ಕೀಮೋ 

ಲೇಖಕರು : ಫಾತಿಮಾ ರಲಿಯಾ

ಪ್ರಕಾಶಕರು : ಜೀರುಂಡೆ ಪುಸ್ತಕ 

ಪ್ರಥಮ ಮುದ್ರಣ : 2025

ಪುಟಗಳು : 120

ಬೆಲೆ : 160 ರೂ. 


ಕಡಲು ನೋಡಲು ಹೋದವಳು (ಲಲಿತ ಪ್ರಬಂಧ ಸಂಕಲನ), ಒಡೆಯಲಾರದ ಒಡಪು (ಕಥಾ ಸಂಕಲನ), ಅವಳ ಕಾಲು ಸೋಲದಿರಲಿ (ಕವನ ಸಂಕಲನ) ಇದುವರೆಗೆ ಫಾತಿಮಾ ರಲಿಯಾ ಅವರ ಪ್ರಕಟಿತ ಕೃತಿಗಳು. ಅನುಭವ ಕಥನ ಕೀಮೋ ಇವರ ನಾಲ್ಕನೆಯ ಕೃತಿ. 


"ಆತಂಕ ಮತ್ತು ಅಳು ಎನ್ನುವುದು ಮನುಷ್ಯ ಬದುಕಿನ ದೌರ್ಬಲ್ಯವಲ್ಲ, ಅವನ್ನು ಜೊತೆಗಿಟ್ಟುಕೊಂಡೇ ಧೈರ್ಯದಿಂದ ಮುನ್ನಡೆಯುವುದು ಮತ್ತು ಬದುಕಿನ ಸೌಂದರ್ಯ ಇರುವುದೇ, ಅದು ಬಂದಂತೆ ಎದುರಿಸುವುದರಲ್ಲಿ ಅನ್ನುವ ಸತ್ಯ"ವನ್ನು ಲೇಖಕಿಗೆ ಮನಗಾಣಿಸಿದ ಆಸ್ಪತ್ರೆಯ ವಾಸ ಹಾಗೂ ಅವರನ್ನು ಕಾಡಿದ ಹಲವಾರು ಘಟನೆಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.


 ಅಮ್ಮನಿಗೆ ಕ್ಯಾನ್ಸರ್ ಬಂದಾಗ ರಲಿಯಾಗೆ 16ನೇ ವರ್ಷ. ಆ ದಿನದ ತಲ್ಲಣ-ತಳಮಳಗಳು, ಅದನ್ನು ಎದುರಿಸಿದ ಬಗೆ ಎಲ್ಲವನ್ನೂ ಹಲವಾರು ವರ್ಷಗಳ ನಂತರ ತೆರೆದಿಟ್ಟಿದ್ದಾರೆ.


 ಕ್ಯಾನ್ಸರ್ ರೋಗಿಗಳನ್ನು ದೈಹಿಕವಾಗಿ ಕಂಗೆಡಿಸಿದರೆ ಅವರ ಹತ್ತಿರದವರನ್ನು ಮಾನಸಿಕವಾಗಿಯೂ ಕಂಗಡಿಸುತ್ತದೆ. ರೋಗಿಯ ಮುಂದೆ ತನ್ನ ಮನವನ್ನು ಅಷ್ಟು ಸುಲಭವಾಗಿ ತೆರೆದಿಡುವುದು ಸಾಧ್ಯವಿಲ್ಲ. ಅಲ್ಲದೇ 16ನೇ ವರ್ಷದಲ್ಲಿ ಈ ಸಂದರ್ಭವನ್ನು ನಿಭಾಯಿಸುವುದು ಸುಲಭವೂ ಅಲ್ಲ. ಎಷ್ಟೋ ಜನಕ್ಕೆ ಈ ಅನುಭವ ಸ್ಪೂರ್ತಿಯಾಗುವುದೂ ಹೌದು. ಅದೇ ಕಾರಣಕ್ಕೆ ಲೇಖಕಿ ಸಾಧ್ಯವಾದಷ್ಟನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.


ಪಿ.ಯು.ಸಿಯ ಮೊದಮೊದಲ ದಿನಗಳ ಓದಿನ ಸಂದರ್ಭದಲ್ಲಿಯೇ ಅಮ್ಮ ಅನುಮಾನದೊಂದಿಗೆ ಮಗಳ ಬಳಿ ಬಂದಿದ್ದರು. ಜೀವಕೋಶಗಳ ಪಾಠ ಕೇಳಿ ಬಂದಿದ್ದರೂ.. ಇದು ಕ್ಯಾನ್ಸರ್ ಇರಬಹುದಾ? ಎಂದು ಸಣ್ಣ ಅನುಮಾನ ಮೂಡಿದ್ದರೂ ಅಮ್ಮನಂತಹ ಒಳ್ಳೆಯವರಿಗೆ ಇಷ್ಟು ದೊಡ್ಡ ರೋಗ ಬರಲಿಕ್ಕಿಲ್ಲ ಎನ್ನುವ ವಿಚಿತ್ರ ಲಾಜಿಕ್. ಆದರೆ, ಅಮ್ಮ ಮಗಳ ಅಮಾಯಕ ನಂಬಿಕೆಯಾಚೆಗೂ ವೈದ್ಯರನ್ನು ಭೇಟಿಯಾಗುತ್ತಾರೆ. ಸ್ತ್ರೀರೋಗ ತಜ್ಞೆಯನ್ನು ಭೇಟಿಯಾದವರಿಗೆ ರೋಗ ಪತ್ತೆಯಾಗುವುದಿಲ್ಲ. ಆದರೆ, ಫ್ಯಾಮಿಲಿ ಡಾಕ್ಟರ್ ಬಯಾಪ್ಸಿ ಮಾಡಿಸಿದ ನಂತರ ಪತ್ತೆಯಾದದ್ದು ಸ್ತನ ಕ್ಯಾನ್ಸರ್. ಅಮ್ಮನ ಆಪರೇಷನ್ ಸಂದರ್ಭದಲ್ಲಿ ಎಲ್ಲರಿಗೂ ರಲಿಯಾ ಅಮ್ಮನ ಜವಾಬ್ದಾರಿಯನ್ನು ನಿಭಾಯಿಸಬಲ್ಲಳಾ ಎಂಬ ಅನುಮಾನ.. "ಅವಳು ನಿಭಾಯಿಸುತ್ತಾಳೆ. ನಿಭಾಯಿಸಲು ಬಾರದಿದ್ದರೆ ಕಲಿತುಕೊಳ್ಳುತ್ತಾಳೆ." ಎಂದ ಅಮ್ಮನ ಸ್ಪಷ್ಟ ನಿರ್ಧಾರ ಮಗಳನ್ನು ಮುನ್ನಡೆಸಿತು. 


ಕುಟುಂಬದ ಹಿರಿಯ ಮಹಿಳೆಯೊಬ್ಬರು ಕಾಳಜಿಯ ನೆಪದಲ್ಲಿ ಆಡಿದ ಅಸೂಕ್ಷ್ಮ ಮಾತುಗಳನ್ನು ಅಮ್ಮ ತೆಗೆದುಕೊಂಡ ಬಗೆ ಜೊತೆಗೆ "ಬದುಕಲ್ಲಿ ಕೆಲವೊಂದನ್ನು ನಿರ್ಲಕ್ಷಿಸಿ ಮುಂದೆ ಹೋಗೋದನ್ನು ಇನ್ನು ಮುಂದಾದರೂ ನೀನು ಕಲೀಲೇಬೇಕು" ಎಂದ ಸಂದರ್ಭವಿದೆ. 


"ಜೀವನ್ಮರಣದ ಹೋರಾಟದಲ್ಲೂ ಬದುಕಿನಡೆಗೆ ಒಂದು ಹೆಜ್ಜೆ ಮುಂದಿಟ್ಟ ಅಮ್ಮ ಆಸ್ಪತ್ರೆಯ ಬೆಡ್ ಮೇಲೆ ನೋವು ತಿನ್ನುತ್ತಾ ಮಲಗಿರಬೇಕಾದರೆ, ಆ ಮಹಿಳೆಗೆ ಅಪ್ಪನ ಬಯಕೆಗಳ ಬಗ್ಗೆ ಚಿಂತೆ ಮಾಡಲಾದರು ಹೇಗೆ ಸಾಧ್ಯ ?" ಎನ್ನುವ ಲೇಖಕಿ ಸೂಕ್ಷ್ಮವಾದ ನಡವಳಿಕೆಗಳು ಹೇಗಿರಬೇಕು ಎನ್ನುವುದನ್ನು ರೋಗಿಗಳನ್ನು ನೋಡಲು ಹೋಗುವವರಿಗೆ ಅರಿವಿರಲೇಬೇಕು ಎನ್ನುವ ಹಲವಾರು ಸಂದರ್ಭಗಳನ್ನು ಹೇಳುತ್ತಾರೆ. ಸಾಂತ್ವನ ನೀಡುವುದು ಮೊದಲ ಆದ್ಯತೆ. ಆದರೆ, ಸಾಂತ್ವನದ ನೆಪದಲ್ಲಿ ಭಯ ಅಥವಾ ಆತಂಕ ಸೃಷ್ಟಿಸುವ ಪ್ರಯತ್ನವನ್ನು ಮಾಡಲೇಬಾರದೆಂಬುದು ಗೊತ್ತಿರಲೇಬೇಕು. ಅಲ್ಲವೇ..?!


ಶಸ್ತ್ರಚಿಕಿತ್ಸೆಯ ನಂತರ ಡ್ರೈನ್ ಕ್ಯಾನ್ ಬಳಸಿ ದ್ರವವನ್ನು ಹೊರತೆಗೆಯುವಾಗ ಇರುತ್ತಿದ್ದ ಸಂಕಟ, ಅಮ್ಮನ ಕೈ ಸರಿಯಾಗಿ ಕೆಲಸ ಮಾಡಬೇಕೆಂದರೆ ವ್ಯಾಯಾಮ ಮಾಡಬೇಕಿದ್ದದ್ದು, ನೋವು ನಿವಾರಕ ಇಂಜೆಕ್ಷನ್ ಗಳಿಲ್ಲದೆ ನೋವಿನ ತೀವ್ರತೆಯನ್ನು ಸಹಿಸುತ್ತಾ ಅಮ್ಮ ಬದುಕುತ್ತಿದ್ದರೆ . . ಸಂಕಟಕ್ಕೆ ಮಡಿಲಾಗಬೇಕಿದ್ದ ಅಮ್ಮನ ಜಾಗವನ್ನು ತುಂಬುವವರು ಯಾರಿದ್ದರು..?


ರಲಿಯಾರಿಗಿದ್ದ ಅರಿವಿನ ಮಿತಿಯಲ್ಲಿ ಕೆಟ್ಟ ಅಮ್ಮನು ಇರಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಅಂತಹ ಒಂದು ಜಗತ್ತು ಅಲ್ಲಿನ ಒಬ್ಬರಿಂದ ತೆರೆದುಕೊಂಡಿತ್ತು. ಅವರ ಜೀವನಗಾಥೆ ಏನಿತ್ತು..?


ಸರ್ಜರಿ ವಾರ್ಡಿನ ರೋಗಿಗಳ ಡ್ರೆಸ್ಸಿಂಗ್ ಮಾಡುವ ಮಿನಿ ಆಪರೇಷನ್ ಥಿಯೇಟರ್ ನಲ್ಲಿ ದಾದಿಯರು, ಜೂನಿಯರ್ ವೈದ್ಯರ ನಡುವೆ ಇವರಿಗೆ ಬೆಳೆದ ಸ್ನೇಹ, ಕಮ್ಯುನಿಕೇಷನ್ ಜೊತೆಗೆ ವೈದ್ಯರ ಕಾಳಜಿ ಎಲ್ಲವೂ ಇಲ್ಲಿದೆ. ಸ್ಟಾಫ್ ಮಾತುಗಳು, ಡಾಕ್ಟರ್ ನ ನಡೆ ಮತ್ತು ಅಮ್ಮನ ಸೂಕ್ಷ್ಮ ಗಮನಿಸುವಿಕೆ, ಎಲ್ಲವನ್ನೂ ಅಮ್ಮ ಗಮನಿಸಿದ್ದರೂ ಮೌನವಾಗಿದ್ದ ಕ್ಷಣಗಳು ನಂತರ ತೆರೆದುಕೊಂಡದ್ದು ಹೇಗೆ..?


ಕಣ್ಣೆದುರಿಗಿದ್ದ ಹದಿನಾರರ ಮಗಳ ಕಣ್ಣಲ್ಲಿನ ಕನಸು ಮತ್ತು ಅವಳಾಡುತ್ತಿದ್ದ ಅತಿ ಮೆಚ್ಯೂರ್ಡ್ ಮಾತುಗಳು ಅಮ್ಮನಿಗೆ ಹೇಗನಿಸುತ್ತಿತ್ತು..? ಅಮ್ಮ ನಿರ್ಲಿಪ್ತತೆ ನಟಿಸದೆ ಇದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು..?


ಸರ್ಜರಿಯ ನಂತರ ಆರು ತಿಂಗಳುಗಳಲ್ಲಿ ಆರು ಸೈಕಲ್ ನಂತೆ ಕೀಮೋ ಕೊಡಿಸಬೇಕಿತ್ತು. ಕೊನೆಯ ಕೀಮೋ ಆದ ಆರು ತಿಂಗಳ ಬಳಿಕ ಮತ್ತೆ ಕ್ಯಾನ್ಸರ್ ಸೆಲ್ ಹುಟ್ಟಿವೆಯ ಎಂದು ಚೆಕಪ್ ಮಾಡಿಸಿಕೊಳ್ಳಬೇಕಿರುತ್ತದೆ.


ಆಪರೇಷನ್ ಆದಮೇಲೆ ಗೆಲುವಾಗಿಯೇ ಇದ್ದ, ನೋವಲ್ಲಿಯೂ ಗಟ್ಟಿಯಾಗಿದ್ದ ಅಮ್ಮ ಕೀಮೋ ಥೆರಪಿಯಲ್ಲಿ ಇಳಿದು ಹೋಗಿದ್ದರು. ಈ ಕೀಮೋ ಥೆರಪಿಯ ಅನುಭವಗಳ ಜೊತೆ ನಾವೂ ಸಾಗುವಾಗ ಸಂಕಟ ಎದೆಯಾಳದಿಂದ ಉದ್ಭವಿಸುತ್ತದೆ.


ಕುಟುಂಬದವರೇ ಸೂಕ್ಷ್ಮವಿಲ್ಲದೆ ನಡೆದುಕೊಳ್ಳುತ್ತಿದ್ದರೆ, ಪರಸ್ಪರರನ್ನು ಸಂತೈಸುತ್ತಿದ್ದದ್ದು ಧೈರ್ಯ ತುಂಬುತ್ತಿದ್ದದ್ದು ಭರವಸೆ ತೋರುತ್ತಿದ್ದದ್ದು ಆಸ್ಪತ್ರೆಯಲ್ಲಿನ ಮಾನವೀಯ ಸಂಬಂಧಗಳೇ.. ಅವುಗಳೇ ಬದುಕನ್ನು ಸಹ್ಯವಾಗಿಸುವುದೇನೋ..?


ಕೀಮೋಥೆರಪಿ, ರೇಡಿಯೋಥೆರಪಿ ಯಾವುದೂ ಕೂಡ ಅವರ ಕ್ಯಾನ್ಸರ್ ಅನ್ನು ಗುಣಪಡಿಸಲಾಗದು ಎಂದು ಅರಿವಾದ ನಂತರ "ನಿಮ್ಮ ರೋಗ ಗುಣವಾಗಿದೆ" ಎಂದು ಹೇಳಿ ಆಸ್ಪತ್ರೆಯವರು ಧೈರ್ಯ ತುಂಬಿ ಡಿಸ್ಚಾರ್ಜ್ ಮಾಡಿದ ಸೋಜಿಯವರ ತಾಯಿ, ಗೀತಕ್ಕನ ವಿಭಿನ್ನ ಕಥೆ, ವಿಷಾದ ಗೀತೆಯಂತೆ ಕಂಡುಬಂದ ಚಾಂದಜ್ಜಿ ಇಲ್ಲಿ ಸಿಗುತ್ತಾರೆ.


ಅಮ್ಮ ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಅವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವ ಹಾಗೂ ಮನೆಯ ಜವಾಬ್ದಾರಿಯನ್ನು ನಿಭಾಯಿಸುವ ಸಂದರ್ಭದಲ್ಲಿ ನೆರವಾದ ಅಣ್ಣ ಹಾಗೂ ಅಂದಿನ ಸಂದರ್ಭಗಳು ಹೇಗಿದ್ದವು..?


ಕೆಲವೊಂದು ಕನಸುಗಳನ್ನು ಕೈ ಬಿಡಬೇಕಾದ ಅನಿವಾರ್ಯತೆ, ಈಗಿನಂತೆ ಮಾಹಿತಿಯ ಮಹಾಪೂರ ಸಿಕ್ಕಿದ್ದರೆ ಕನಸಿನ ಪಕ್ಷಿ ಹೇಗೆ ಹಾರಬಹುದಿತ್ತು ಎಂದು ನೆನಪಿಸಿಕೊಳ್ಳುತ್ತಾರೆ.


ಕೀಮೋನಿಂದ ಸುಸ್ತಾಗುತ್ತಿದ್ದ ಅಮ್ಮನನ್ನು ಅದರ ವಿರುದ್ಧ ಹೋರಾಡಿಸುವಂತೆ ಪಣತೊಟ್ಟು ಕೀಮೋವನ್ನೇ ಎದುರಿಸಲು ಅಮ್ಮನಿಗೆ ಮಾಡುತ್ತಿದ್ದ ಕಾಳಜಿ ಅವರನ್ನು ಸುಸ್ತು ಮಾಡಿದ ಪರಿ ಅಂದು ಅರ್ಥವಾಗದ ಸಂದರ್ಭ, ಅಸಹಾಯಕತೆ, ಸುಮ್ಮನಿರುವುದೇ ಏಕೈಕ ಆಯ್ಕೆ ಎಂದು ಅರಿವಾದ ಕ್ಷಣಗಳು, "ಹಠ ತೊಟ್ಟರೆ ಏನನ್ನೂ ಸಾಧಿಸಿಬಹುದು, ಏನನ್ನೂ ದಕ್ಕಿಸಿಕೊಳ್ಳಬಹುದು ಎನ್ನುವ ಭ್ರಮೆ ಹರಿದು ಹೋದ ಕ್ಷಣಗಳು" ಇಲ್ಲಿವೆ.


ರಲಿಯಾನ ಅಮ್ಮನಿಗೆ ಕ್ಯಾನ್ಸರ್ ಎಂದು ಗೊತ್ತಾದಾಗ ಗೆಳತಿಯರು ಪ್ರತಿಕ್ರಿಯಿಸಿದ ಬಗೆ ಹೇಗಿತ್ತು.?


ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದುಕೊಂಡು ಅಮ್ಮನಿಗೆ 17 ವರ್ಷಗಳೇ ಕಳೆದರೂ.. ಪ್ರತಿ ವರ್ಷದ ಪರೀಕ್ಷೆಯಲ್ಲಿಯೂ ಅಮ್ಮ ಕ್ಯಾನ್ಸರ್ ಕಣಗಳಿಲ್ಲ ಎಂಬ ಫಲಿತಾಂಶಕ್ಕಾಗಿ ಕಾಯುವ ಕ್ಷಣಗಳು, ಅದರ ಹಿಂದಿನ ಆತಂಕಗಳು, ಮುಂದೆ ಧೈರ್ಯವಾಗಿದ್ದರೂ ಹಿಂದೆ ಪರಸ್ಪರರಿಗೆ ಇರುವ ಭಾವಗಳು ಇಲ್ಲಿವೆ.


17 ವರ್ಷಗಳ ನಂತರ ಮತ್ತೆ ಆ ದಿನಗಳನ್ನು, ಕ್ಷಣಗಳನ್ನು, ಅದುವರಿಗಿನ ಬದುಕಲ್ಲಿನ ಸೂಕ್ಷ್ಮ ವಿಚಾರಗಳನ್ನು ಬಹಳಷ್ಟು ಪ್ರಸ್ತಾಪಿಸಿದ್ದಾರೆ. "ಜೀವನ್ಮರಣದ ಹೋರಾಟದಿಂದ ಎದ್ದು ಬಂದವರಿಗೆ ನಾವು ಮಾಡಬೇಕಾದ ದೊಡ್ಡ ಉಪಕಾರವೆಂದರೆ ಹಿತವಾದ ಮೌನ ಹಾಗೂ ಅವರ ಖಾಸಗಿ ಕ್ಷಣಗಳಿಗೆ ಧಕ್ಕೆಯಾಗದಂತಹ ಒಂದು ಸಣ್ಣ ಸ್ಪೇಸ್ ಉಳಿಸಿಕೊಳ್ಳುವುದು" ಎನ್ನುತ್ತಾರೆ.


"ಕಣ್ಣಿಗೆ ಕಾಣಸಿದ ಕ್ಯಾನ್ಸರ್ ಕಣಗಳೊಂದಿಗೆ ಅಷ್ಟು ಬಡಿದಾಡಿದವರಿಗೆ ಉಳಿದಿರುವ ಬದುಕನ್ನು ಕಟ್ಟಿಕೊಳ್ಳುವುದೇನೂ ದೊಡ್ಡ ಸಂಗತಿಯಲ್ಲ. ಹಾಗೆ ಕಟ್ಟಿಕೊಳ್ಳಲು ಅನುವು ಮಾಡಿಕೊಡುವ ಕನಿಷ್ಠ ಮನುಷ್ಯತ್ವವನ್ನು ನಾವು ಉಳಿಸಿಕೊಳ್ಳಬೇಕು ಅಷ್ಟೇ." ಎನ್ನುವ ಅವರ ಮಾತು ಎಷ್ಟು ನಿಜವಲ್ಲವಾ ಎನ್ನಿಸಿತು.


ಕ್ಯಾನ್ಸರ್ ಪೀಡಿತರನ್ನು ನೋಡಲು ಹೋದಾಗ ಸಾಂತ್ವನವನ್ನು ಹೇಳೋಣ. ಅದಾಗದಿದ್ದರೆ ಅಧೈರ್ಯವನ್ನು ಮೂಡಿಸದಿರೋಣ. ಜೊತೆಗೆ ಅಸೂಕ್ಷ್ಮತೆಯಿಂದ ನಡೆದುಕೊಳ್ಳುವುದಂತೂ ಬಿಲ್ಕುಲ್ ಬೇಡವೇ ಬೇಡ. ಇಷ್ಟನ್ನು ಪಾಲಿಸಿದರಾದರೂ ಎಷ್ಟೋ ಮನಗಳಿಗೆ ನೆಮ್ಮದಿ.


ಈ ಅನುಭವ ಕಥನ ಕ್ಯಾನ್ಸರ್ ಜೊತೆಜೊತೆಗೆ ಸಾವಿನ ಸಮ್ಮುಖದಲ್ಲಿ ಕಲಿತ ಹುಡುಗಿಯೊಬ್ಬಳ ಜೀವನಪಾಠವನ್ನು ತೆರೆದಿಡುತ್ತಾ ಸಾಗುತ್ತದೆ. ಅವರು ಅನುಭವಿಸಿದ ತಲ್ಲಣ, ಸಂಕಟಗಳನ್ನು ಓದುವಾಗ ನಾವೂ ಸಂಕಟಪಡುವಂತಾಗುತ್ತದೆ. ಆದರೆ, ಪ್ರಮುಖವಾಗಿ ಪಾಸಿಟಿವಿಟಿಯನ್ನು ಹಾಗೂ ಧೈರ್ಯವನ್ನಂತೂ ಕಂಡುಕೊಳ್ಳುತ್ತೇವೆ. ಪ್ರತಿಯೊಬ್ಬರ ಅನುಭವ ಬೇರೆಯೇ ಆಗಬಹುದಾದರೂ.. ಸೂಕ್ಷ್ಮತೆಯ ಪಾಠವನ್ನುಂಟು ಕಲಿತುಕೊಳ್ಳಲೇಬೇಕು. ಓದಿ ಮುಗಿದ ನಂತರವೂ ಆವರಿಸಿಕೊಳ್ಳುವ ಓದು ಇದು.

~ವಿಭಾ ವಿಶ್ವನಾಥ್

ಕ್ಯಾಡ್ಬರೀಸ್ ನ ಕ್ಯಾಬ್ - ಡೈರೀಸ್ (ಪುಸ್ತಕ ಯಾನ - 439)


ಪುಸ್ತಕದ ಶೀರ್ಷಿಕೆ : ಕ್ಯಾಡ್ಬರೀಸ್ ನ ಕ್ಯಾಬ್ - ಡೈರೀಸ್

ಲೇಖಕರು : ಪೂರ್ಣೇಶ್

ಪ್ರಕಾಶಕರು : ಪೂರ್ಣೇಶ್

ಪ್ರಥಮ ಮುದ್ರಣ : 2025

ಪುಟಗಳು : 94

ಬೆಲೆ : 120 ರೂ.


ಈ ಕಿರು ಕಾದಂಬರಿಯನ್ನು 

"ಕನಸುಗಳ ಒತ್ತೆ ಇಟ್ಟು ಬೆವರು ಸುರಿಸದಿದ್ದರೂ ಕಣ್ಣೀರು ಒರೆಸಿಕೊಂಡು ದುಡಿಯುವ ಎಲ್ಲಾ ಮಗುಮನಸ್ಸಿನ ಶ್ರಮಿಕರಿಗೆ, ಮತ್ತು ನಗರದ ಕ್ಯಾಬ್ ಚಾಲಕರಿಗೆ" ಅರ್ಪಿಸಿದ್ದಾರೆ. 


ಪೂರ್ವಕತೆಯಲ್ಲಿ ಕ್ಯಾಡ್ಬರೀಸ್ ಚಾಕ್ಲೇಟ್ ತಿನ್ನುವ ಪುಟ್ಟ ಹುಡುಗ ತನ್ನ ಕನಸಿನೊಂದಿಗೆ ನಮಗೆ ಪರಿಚಯವಾಗುತ್ತಾನೆ. ಅದರ ಜೊತೆಗೆ ಅಣ್ಣಾವ್ರ ಅಭಿಮಾನವೂ ಪರಿಚಯವಾಗುತ್ತದೆ. ವಾಸ್ತವದ ಅರಿವು ಮೂಡಿಸುವ ಅಣ್ಣಾವ್ರ ಹಾಡುಗಳು ಮತ್ತು ಪಾತ್ರಗಳು ಕನಸಿನ ಬೆನ್ನೇರಿ ಹೋಗುವಂತೆ ಮಾಡುವ ಪರಿಯನ್ನು ವಿವರಿಸುವ ಸಾಲುಗಳು ಚೆನ್ನಾಗಿವೆ. 


ಪ್ರತಿಯೊಬ್ಬ ಮಗುವಿಗೂ ತಾನು ಮುಂದೇನಾಗಬೇಕು ಎನ್ನುವ ಕನಸಿರುತ್ತದೆ. ತನ್ನ ಭವಿಷ್ಯದ ಕನಸೊಂದನ್ನು ಮಗು ಹೇಳಿದಾಗ ಅಪ್ಪನ ಕಣ್ಣು ಕೆಂಪಾಗುತ್ತಿದ್ದರೆ, ಅಮ್ಮನ ಬೆಂಬಲ ಜೊತೆಗೆ ನಿನಗಿಷ್ಟವಾಗಿರುವುದನ್ನು ಆಯ್ಕೆ ಮಾಡಿಕೋ ಎಂಬ ಹುರಿದುಂಬಿಸುವಿಕೆ ಮಗುವಿಗೆ ಹುಮ್ಮಸ್ಸು ತುಂಬುವುದನ್ನು ಕಾಣಬಹುದು. ಮಗುವಿನ ಆ ಕನಸಿಗೆ ಕಾರಣ ಡ್ರೈವರ್ ಆಗಿದ್ದ ತಂದೆಯೇ.. ಈ ಮಗುವೇ ಪ್ರಶಾಂತ. ಮುಂದೆ ಪ್ರಶಾಂತನ ಜೀವನಗಾಥೆ ನಮ್ಮ ಕಣ್ಮುಂದೆ ಬರುತ್ತಾ ಹೋಗುತ್ತದೆ. 


ಮೇಲಿನ ಈ ಪ್ರಸಂಗ ಓದಿದಾಗ ವಿವೇಕಾನಂದರ ಬಾಲ್ಯದ ಘಟನೆಯೊಂದು ನೆನಪಾಯಿತು. ಸಾರೋಟಿನ ಸಾರಥಿಯಾಗುವುದೇ ತನ್ನ ಗುರಿ ಎಂದು ಹೇಳುವ ಬಾಲಕ ನರೇಂದ್ರನಿಗೆ ತಂದೆ ಹೊಡೆದಾಗ, ತಾಯಿ ಅರ್ಜುನನ ರಥದ ಸಾರಥಿ ಶ್ರೀ ಕೃಷ್ಣನನ್ನು ತೋರಿಸಿ ಹುರಿದುಂಬಿಸುವ ಪರಿ ನೆನಪಾಯಿತು. ಮುಂದೆ ನರೇಂದ್ರ ಯುವಶಕ್ತಿಯನ್ನು ಮುನ್ನಡೆಸುವ ಸಾರಥಿಯಾದ ವಿವೇಕಾನಂದರಾದದ್ದು ತಿಳಿದೇ ಇದೆ. 


ಕೆಲವೊಮ್ಮೆ ನಾವು ಕಂಡ ಕನಸುಗಳನ್ನು ಬೆನ್ನಟ್ಟಿ ಹೋಗದೆ ಬೇರೆ ಕನಸಿನ ಹಿಂದೆ ಹೋಗುವುದೇ ಬದುಕಿನ ದೊಡ್ಡ ತಿರುವಾಗಿರುತ್ತದೆ. ಪ್ರಶಾಂತನ ಜೀವನದಲ್ಲಿಯೂ ಅಂತಹ ತಿರುವು ಬಂದಿತ್ತು. ಆತ ಡ್ರೈವರ್ ಆಗುವ ಕನಸನ್ನು ಬಿಟ್ಟು ಯಾವ ಕನಸಿನ ಬೆನ್ನು ಬಿದ್ದಿದ್ದ..?


ಪ್ರಶಾಂತನ ಬಾಲ್ಯದಿಂದ ಅವನ ಗೆಳೆಯ ಆತಂಕ ಕೆಲಸದ ಜಾಗದಲ್ಲಿಯೂ ಸಹೋದ್ಯೋಗಿ. ಇವರಿಬ್ಬರ ಸಂಭಾಷಣೆ ಚೇತೋಹಾರಿಯಾಗಿ ಸಾಗುತ್ತದೆ. 


ಇಲ್ಲಿ ನರೇಶನ ಪಾತ್ರದ ಮೂಲಕ ಲೇಖಕರು "ಎಲ್ಲಾ ಕನಸಿನ ಹಿಂದೆ ಹೋದರೆ ಕೊನೆಗೆ ನಾವು ಬರೀ ಕೈಯಲ್ಲಿ ಬರಬೇಕಾಗುತ್ತೆ. ಅದೇ ಕಾಡೋ ಕನಸಿನ ಹಿಂದೆ ಹೋದರೆ ನೂರಾರು ಜನಕ್ಕೆ ಅನ್ನ ಹಾಕೋ ಧಣಿ ಆಗ್ತೀಯ. ನಿನ್ನ ಕೈ ಫಸಲಾಗುತ್ತೆ. ಆಗ ನಿನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬಹುದು" ಎಂದು ಹೇಳಿಸುತ್ತಾರೆ. 

ಅಂದ ಹಾಗೆ ಇಲ್ಲಿ ನರೇಶನಿಗೆ ವೆಬ್ ಡೆವಲಪರ್ ಆಗುವ ಕನಸಿತ್ತು. ಆದರೆ, ಪರಿಸ್ಥಿತಿಯೊಂದು ಡ್ರೈವಿಂಗ್ ಕ್ಲಾಸ್ ನಡೆಸುವ ಕನಸನ್ನು ಕೊಟ್ಟಿತು. ಈತ ಹೋದದ್ದು ಯಾವ ಕನಸಿನ ಹಿಂದೆ..? ಓದಿ ನೋಡಿ. ಪ್ರಶಾಂತನಿಗೆ ನರೇಶ ಭೇಟಿಯಾಗುವುದು ಹೇಗೆ..?


ಸಾಮಾನ್ಯವಾಗಿ ಜನರು ಡ್ರೈವಿಂಗ್ ಮಾಡುವಾಗ ಮಾಡುವ ತಪ್ಪುಗಳು ಬೇರೆಯವರ ಜೀವನವನ್ನೇ ಬಲಿ ಪಡೆಯಬಹುದು. ಅಂತಹ ತಪ್ಪುಗಳ ಕುರಿತಾಗಿ ಎಷ್ಟು ಎಚ್ಚರಿಕೆ ವಹಿಸಬೇಕು ಎನ್ನುವುದನ್ನು ಬೆಳಕು ಚೆಲ್ಲಿದ್ದಾರೆ. ಡ್ರೈವಿಂಗ್ ಮಾಡುವವರಿಗೆ ಪರಾನುಭೂತಿ ಎಷ್ಟು ಮುಖ್ಯ ಎಂಬುದನ್ನು ಹಾಗೂ ಅದು ಜವಾಬ್ದಾರಿಯಾದಾಗ ಯಾವೆಲ್ಲಾ ಅವಘಡಗಳನ್ನು ತಪ್ಪಿಸಬಹುದು ಎನ್ನುವುದನ್ನು ಹೇಳುತ್ತಾರೆ. 


ಪ್ರಶಾಂತ ಚಿಕ್ಕಂದಿನಲ್ಲಿ ಬಹಳ ಇಷ್ಟಪಟ್ಟಿದ್ದ ಕನಸು ಆತನ ಕ್ಲಾಸ್ ನಲ್ಲಿಯೇ ಓದುತ್ತಿದ್ದ ಸೇಠು ಮಗ, ದೊಡ್ಡ ಬಿಲ್ಡಿಂಗನ ಮನೆಯ ಶೇಖರ ಹೇಳಿದ್ದ ಕನಸು. ದೊಡ್ಡವನಾದ ಮೇಲೆ ಅವನು ಪ್ರಪಂಚ ಟೂರು ಹೊಡೆಯಬೇಕೆಂದು. ಚಿಕ್ಕಂದಿನಲ್ಲಿ ದೂರಾಗಿದ್ದ ಗೆಳೆಯರಿಬ್ಬರು ಮತ್ತೆ ಭೇಟಿಯಾದಾಗ ಶೇಖರ ಯಾವ ಕನಸಿನ ಹಿಂದೆ ಬಿದ್ದಿದ್ದ..? ತನ್ನ ಕನಸಿನ ಬೆನ್ನತ್ತಿದವನಿಗೆ ಯಾವ ಅನುಭವವಾಗಿತ್ತು..?


ಎಲ್ಲರೂ ಕನಸುಗಳು ಒಳ್ಳೆಯದು ಎನ್ನುವಾಗ "ಈ ಕನಸುಗಳು ತುಂಬಾ ಕೆಟ್ಟದು ಪ್ರಶಾಂತ" ಎಂದ ರಾಜಶೇಖರನ ಮಾತಿನ ಮರ್ಮವೆನಿತ್ತು..?


ಡ್ರೈವಿಂಗ್ ಕಲಿಯುವ ಕನಸಿರುವವರು, ಡ್ರೈವಿಂಗ್ ಕಲಿತಿರುವವರು ಹಾಗೂ ಡ್ರೈವಿಂಗ್ ಕಲಿಯದವರು ಹೀಗೆ ಎಲ್ಲರಿಗೂ ಕನೆಕ್ಟ್ ಆಗುವಂತಹ ಕಾದಂಬರಿ ಇದು. ಇಲ್ಲಿ ಕನಸಿನೊಳಗೆ ಕಥೆ ಇದೆಯೋ ಅಥವಾ ಕಥೆಯೊಳಗೆ ಕನಸಿದೆಯೋ ನೀವೇ ಓದಬೇಕು.


ಈ ಕಿರು ಕಾದಂಬರಿಯಲ್ಲಿ ಮನುಷ್ಯನ ಜೀವನ ಪ್ರೀತಿ, ಕನಸಿನ ಹಿಂದೆ ಹೋಗುವ ಆತ್ಮವಿಶ್ವಾಸ, ಬದುಕು ತೋರುವ ಭಯ, ಇದೆಲ್ಲದರ ಜೊತೆಗೆ ಆತ್ಮೀಯವಾದ ಸ್ನೇಹ, ಪ್ರೀತಿ, ವಿರಹ, ಅಮ್ಮನ ಕನೆಕ್ಟಿವಿಟಿ ಎಲ್ಲವೂ ಕಾಣಸಿಗುತ್ತದೆ. ಸಮಾಜಕ್ಕೊಂದು ಸಂದೇಶವೂ ಇದೆ. ಚೇತೋಹರಿ ಸಂಭಾಷಣೆಗಳಿಂದ ನನಗೆ ಈ ಕಿರು ಕಾದಂಬರಿ ತುಂಬಾ ಇಷ್ಟವಾಯಿತು. ಆಡು ಮಾತಿನಂತಹ ಸಂಭಾಷಣೆಗಳನ್ನು ತುಟಿಯಲ್ಲಿ ಮುಗುಳ್ನಗೆ ಇಟ್ಟುಕೊಂಡೇ ಓದಬಹುದಾಗಿದೆ. ಇಲ್ಲಿ ಪ್ರಶಾಂತನ ಜೊತೆಗೆ ನಾವು ಟ್ರಾವೆಲ್ ಮಾಡುತ್ತಾ ಸಾಗುತ್ತೇವೆ. 


"ಕಾಡುತ್ತೆ, ಆದರೆ ಹಿಂಸೆ ಕೊಡಲ್ಲ,

ಕೊಲ್ಲುತ್ತೆ, ಆದರೆ ಉಸಿರು ನಿಲ್ಸಲ್ಲ,

ಕಣ್ಣಿದುರೆ ಇರುವಂತಾಗುತ್ತೆ, ಆದರೆ ನೆನಪಿಗೆ ಬರಲ್ಲ, 

ಅದು ಗೆದ್ದಾಗ ಅಳು ಬರುತ್ತೆ, 

ಕೆಲವೊಮ್ಮೆ ಆನಂದದಿಂದ, 

ಕೆಲವೊಮ್ಮೆ ದುಃಖದಿಂದ,

ಅದು ಏನು?"


ಬೆನ್ನುಡಿಯಲ್ಲಿ ಲೇಖಕರು ಈ ಒಗಟನ್ನು ಪ್ರಸ್ತಾಪಿಸಿದ್ದಾರೆ ಈ ಒಗಟಿಗೆ ಉತ್ತರ ಕಥೆಯಲ್ಲಿದೆ. ಬಹುಶಃ ಈ ಒಗಟಿಗೆ ಉತ್ತರ ತಿಳಿದರೂ.. ಸರಿಯೋ ತಪ್ಪೋ ಎಂದು ಪರಿಶೀಲಿಸುವುದಕ್ಕಾದರೂ ಈ ಕಿರು ಕಾದಂಬರಿಯನ್ನು ಓದಬೇಕು.


ಝೋನ್ ಔಟ್ ಆಗಿರುವ ನಮ್ಮ ಓದನ್ನು ಮತ್ತೆ ಹಳಿಗೆ ತರಬಹುದಾದಂತಹ ಪುಟ್ಟ ಚಂದದ ಹಾಗೂ ರಿಫ್ರೆಶಿಂಗ್ ಓದಿನ ಕಿರು ಕಾದಂಬರಿ ಬಹಳ ಇಷ್ಟವಾಯಿತು. ಬರವಣಿಗೆಯ ಶೈಲಿಯಿಂದಾದ ಉದಯೋನ್ಮುಖ ಬರಹಗಾರರಲ್ಲಿ ಭರವಸೆಯ ಬರಹಗಾರ ಎನ್ನಿಸಿದರು ಇವರು. ಪೂರ್ಣೇಶ್ ಅವರ ಮುಂದಿನ ಸಾಹಿತ್ಯ ಪಯಣಕ್ಕೆ ಶುಭವಾಗಲಿ.


~ ವಿಭಾ ವಿಶ್ವನಾಥ್

ನನ್ನದಲ್ಲದ್ದು (ಪುಸ್ತಕ ಯಾನ - 438)


ಪುಸ್ತಕದ ಶೀರ್ಷಿಕೆ : ನನ್ನದಲ್ಲದ್ದು 

ಲೇಖಕರು : ಡಾ|| ನಾ. ಮೊಗಸಾಲೆ

ಪ್ರಕಾಶಕರು : ಸಾಹಿತ್ಯ ಪ್ರಕಾಶನ

ಪ್ರಥಮ ಮುದ್ರಣ :1977

ಮರು ಮುದ್ರಣ : 2023

ಪುಟಗಳು : 128

ಬೆಲೆ : 150 ರೂ. 


 ಸಾಮಾನ್ಯವಾಗಿ ಕಾದಂಬರಿಗಳಲ್ಲಿ ಹೆಣ್ಣಿನ ಭಾವಗಳನ್ನು ಹೆಚ್ಚಾಗಿ ಓದುತ್ತೇವೆ. ಗಂಡಿನ ಬದುಕನ್ನು ಹಾಗೂ ಭಾವಗಳನ್ನು ಬಿಚ್ಚಿಡುವ ಕಾದಂಬರಿಗಳನ್ನು ನೋಡುವುದು ತೀರಾ ಕಡಿಮೆ. ಇಲ್ಲಿ ಅಪರೂಪದ ಕಥಾ ವಸ್ತುವನ್ನು ಕಾಣಬಹುದು ಜೊತೆಗೆ ಕಾದಂಬರಿಯ ನಿರೂಪಣೆ ವಿಭಿನ್ನವಾಗಿದೆ. 


ಈ ಕಾದಂಬರಿಯಲ್ಲಿ ಭೈರಪ್ಪನವರ 'ಜಲಪಾತ' ಕಾದಂಬರಿಯ ಪ್ರಸ್ತಾಪವಿದೆ. ಲೇಖಕರು ಈ ಕಾದಂಬರಿ ಕರ್ಮವೀರದಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಸಂದರ್ಭದಲ್ಲಿ ಪ್ರಭಾವಿತರಾಗಿದ್ದನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಕಾರಂತರ 'ಅಳಿದ ಮೇಲೆ' ಕಾದಂಬರಿಯ ಪ್ರಭಾವವೂ ಅವರ ಮೇಲಾಗಿದೆ. ಆದರೆ, ಕಥಾವಸ್ತು ಅವೆರಡಕ್ಕಿಂತಲೂ ಭಿನ್ನ. 


ಈ ಕಾದಂಬರಿಗೆ 1977ರ ಶ್ರೇಷ್ಠ ಕಾದಂಬರಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ ಬಂದಿದೆ. 


ಕಾದಂಬರಿ ಶೇಖರ ಹಾಗೂ ಗೀತಾರ ದಾಂಪತ್ಯದ ಬದುಕು ಹಾಗೂ ಅವರ ಮಾತುಕತೆ, ಅರ್ಥೈಸುವಿಕೆಯಿಂದ ಶುರುವಾಗುತ್ತದಾದರೂ.. ಇಲ್ಲಿ ಶ್ರೀನಿವಾಸರ ಬದುಕು ತೆರೆದುಕೊಳ್ಳುತ್ತಾ ಹೋಗುತ್ತದೆ. ಶ್ರೀನಿವಾಸರ ಆತ್ಮಹತ್ಯೆಯ ನಂತರ ಶೇಖರ ಅವರ ಡೈರಿ, ಅವರೊಂದಿಗಿದ್ದ ಆತನ ಒಡನಾಟ ಜೊತೆಗೆ ವಾಮನ ಕಾಮತರ ಮೂಲಕ ಅವರನ್ನು ನೋಡಿ ಚದುರಿದ ಚಿತ್ರಗಳನ್ನು ಜೋಡಿಸುತ್ತಾ ಸಾಗುವ ಚಿತ್ರಣ ಇಲ್ಲಿದೆ.


ಶ್ರೀನಿವಾಸರು ಶೇಖರನ ಜೊತೆಗಿನ ಕೊನೆಯ ಭೇಟಿಯಲ್ಲಿಯೂ ತಮ್ಮ ಮನದ ಮಾತುಗಳನ್ನು ನೇರವಾಗಿ ತೆರೆದಿಟ್ಟಿರಲಿಲ್ಲ. ಇಬ್ಬರಲ್ಲಿಯೂ ಒಂದು ರೀತಿಯ ನಿಗೂಢತೆ, ಕಂದಕ ದೊಡ್ಡದಾಗುತ್ತಿರುವಂತಹ ಸಂದರ್ಭವೇ ಅಲ್ಲಿತ್ತು. ಆದರೆ, ಶೇಖರನಿಗೆ ಬಂದ ಪತ್ರ ಶ್ರೀನಿವಾಸರ ಕೊನೆಯ ದಿನಗಳ ಮನಸ್ಥಿತಿಯನ್ನು ತೆರೆದಿಡುತ್ತಿತ್ತಾದರೂ.. ಅವರ ಪೂರ್ಣ ವಿವರಗಳು ಬೇಕಾದರೆ ಅವರೇ ಸೂಚಿಸಿದಂತೆ ಹಾಗೂ ಅವರು ಅನುಮತಿಸಿದ್ದಂತೆ ಅವರ ಡೈರಿಗಳು, ಅವರ ಪತ್ನಿ, ಶ್ರೀಮತಿ ಶಾಂತ ಎಸ್. ವಡ್ಕೆ, ಶ್ರೀಮತಿ ಡಾ|| ಸೂಕ್ಷ್ಮ ಆರ್. ಮಿಶ್ರ ಹಾಗೂ ವಾಮನ ಕಾಮತ್ ಅವರನ್ನು ಭೇಟಿಯಾಗಿ ಅವರಿಂದ ಹೆಚ್ಚಿನ ಮಾಹಿತಿ ಪಡೆಯಬಹುದಾಗಿತ್ತು.


ತಮ್ಮ ಕಾದಂಬರಿ ಬಿಡುಗಡೆ ಸಮಾರಂಭಕ್ಕೆ ಬೆಂಗಳೂರಿಗೆ ಹೋಗಿ ವಾಪಸ್ಸು ಮಂಗಳೂರಿಗೆ ಬರುತ್ತಿರುವಾಗ ಆದ ಅಪಘಾತ ಆರ್ಥೋಪೆಡಿಕ್ ಪ್ರೊಫೆಸರ್ ಆಗಿದ್ದ ಡಾಕ್ಟರ್ ಶ್ರೀನಿವಾಸರನ್ನು ಹಾಗೂ ಪತ್ರಿಕೋದ್ಯಮಿ, ಬರಹಗಾರನಾಗಿದ್ದ ಶೇಖರ್ ಇಬ್ಬರನ್ನೂ ಹತ್ತಿರಕ್ಕೆ ತಂದಿತ್ತು. ಮಾನವೀಯ ದೃಷ್ಟಿಯಿಂದ ಶ್ರೀನಿವಾಸರು ಸಹಾಯ ಮಾಡಿ, ಚಿಕಿತ್ಸೆ ಮಾಡಿದರಾದರೂ.. ಮುಂದೆ ಇಬ್ಬರ ಸಾಹಿತ್ಯಪ್ರೇಮ, ಯೋಚನಾಲಹರಿ, ದೃಷ್ಟಿಕೋನಗಳು ಕಲೆತು ಸ್ನೇಹಕ್ಕೆ ತಿರುಗಿತು. 


ಅಚ್ಚುಕಟ್ಟು, ಶಿಸ್ತು, ಸಂಯಮದ ಶ್ರೀನಿವಾಸರನ್ನು ಶೇಖರ್ ಗಮನಿಸಿದ ಪರಿ, ಅವರ ಓದಿನ ವೇಗ, ವಿಮರ್ಶೆ, ವಾಡ ಮಂಡಿಸುವಿಕೆ ಹೀಗೆ ಹಲವಾರು ವಿಷಯಗಳನ್ನು ಕಾಣಬಹುದು.


ಶ್ರೀನಿವಾಸರಂತೆ ಅವರ ಶ್ರೀಮತಿ ವತ್ಸಲ ಕೂಡ ಸ್ನೇಹಮಯಿ. ಮುಂದೆ ಶೇಖರ್ ಆ ಮನೆಗೆ ಹೋಗಿ ಬರುತ್ತಿದ್ದಾಗ ಗಮನಿಸಿದಂತೆ.. ಶ್ರೀನಿವಾಸರಿಗೂ ಅವರ ಪತ್ನಿಗೂ ನಡುವೆ ಇರುವ ಬಿರುಕು ಹಾಗೂ ಅದು ಕಂದಕವಾಗುತ್ತಾ ಹೋಗುತ್ತಿದ್ದ ನಡೆಗಳನ್ನು ಗಮನಿಸುತ್ತಾರೆ. ಶ್ರೀನಿವಾಸ್ ದಂಪತಿಗಳಿಗೆ ಮಕ್ಕಳಿಲ್ಲದಿರುವುದೇ ಇದಕ್ಕೆ ಕಾರಣರಾಗಿರಬಹುದು ಎಂದು ಶೇಖರ್ ಪತ್ನಿ ಗೀತಾ ಕೂಡ ಅಭಿಪ್ರಾಯಪಟ್ಟಾಗ ಶ್ರೀನಿವಾಸ್ ಅವರ ಬಳಿ ಈ ವಿಚಾರ ಮಾತನಾಡಬೇಕೇ ಬೇಡವೇ ಎಂದೇ ಯೋಚಿಸಿ ಪ್ರಸ್ತಾಪಿಸಿದರಾದರೂ.. ಶ್ರೀನಿವಾಸ್ ಸ್ನೇಹಮಯಿಯಾಗಿ ಅವರು ತಮ್ಮ ವೈಯಕ್ತಿಕ ಬದುಕನ್ನು ತೆರೆದಿರುತ್ತಾರೆ.


ಮಕ್ಕಳಿಲ್ಲದಕ್ಕೆ ಕಾರಣ ಸ್ವತಃ ತಾನೇ ಎಂದೂ.. ಅವರು ವ್ಯಾಸೆಕ್ಟಮಿ ಮಾಡಿಸಿಕೊಂಡಿರುವ ವಿಚಾರವನ್ನು ತೆರೆದಿಟ್ಟಾಗ ಆಘಾತವಾಗುತ್ತದೆ. ಶ್ರೀನಿವಾಸರ ತಂದೆ-ತಾಯಿಯ ದಾಂಪತ್ಯ, ಅವರ ಬದುಕು, ಚಿಕ್ಕಪ್ಪನ ಸಾವು.. ಅದೇ ಅವರನ್ನು ಆರ್ಥೋಪೆಡಿಕ್ ಡಾಕ್ಟರ್ ಆಗುವಂತೆ ಪ್ರೇರೇಪಿಸಿತು. ಅದಕ್ಕೆ ವಾಮನ ಕಾಮತರ ಸಹಕಾರ ಎಲ್ಲವೂ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.


ಚಿಕ್ಕಪ್ಪನ ಸಾವು ಅವರನ್ನು ಡಾಕ್ಟರ್ ಆಗುವಂತೆ ಪ್ರೇರೇಪಿಸಿದರೂ.. ವೈದ್ಯ ಶಿಕ್ಷಣದ ಓದು ಮುಗಿಸಿ ಬಂದವರಿಗೆ ತಮ್ಮ ತಂದೆಯನ್ನು ಉಳಿಸಿಕೊಳ್ಳಲಾಗದ್ದು ಮತ್ತಷ್ಟು ಪ್ರಭಾವಿಸುತ್ತದೆ. 


ಮಕ್ಕಳಾಗಡ್ದರಲ್ಲಿ ತಮ್ಮ ಮನದ ಮಾತು, ಜೊತೆಗೆ ತಾವು ಕೈಗೊಂಡ ನಿರ್ಧಾರವನ್ನು ತೆರೆದಿಟ್ಟಾಗ ವತ್ಸಲಾ ಮನಸ್ಸಿಗೆ ಆಗುವ ಆಘಾತಕ್ಕಿಂತಲೂ ದೊಡ್ಡ ಆಘಾತವಾಗುವುದು ಅವಳು ಕೃತಕದ ಗರ್ಭದಾನ ಮಾಡಿಸಿಕೊಂಡು ತಾಯಿಯಾಗಬಹುದು ಎಂದು ಹೇಳಿದಾಗ. ಅವಳು ವಿಜ್ಞಾನದ ವಿದ್ಯಾರ್ಥಿನಿಯೇ ಆಗಿದ್ದರೂ ಆ ಕಾಲಘಟ್ಟದಲ್ಲಿ ಅದನ್ನು ಒಪ್ಪುವುದು ಹಾಗೂ ಒಪ್ಪಿಸುವುದು ಒಂದು ರೀತಿಯ ಕ್ರಾಂತಿಕಾರಿ ಹೆಜ್ಜೆಯೇ..


ಇದಾದ ನಂತರವೂ ಅವರ ದಾಂಪತ್ಯ ಸಾಗುತ್ತಿದ್ದರೂ ಮೊದಲಿನ ಅರ್ಥೈಸಿಕೊಳ್ಳುವಿಕೆ ಇರುವುದಿಲ್ಲ. ಇಬ್ಬರ ನಡುವಿನ ಕಂದಕ ಹೆಚ್ಚಾಗುತ್ತಲೇ ಹೋಗುತ್ತದೆ.


ವತ್ಸಲಾರನ್ನು ಭೇಟಿಯಾಗಿ ಶ್ರೀನಿವಾಸರ ಡೈರಿ ಪಡೆಯಬೇಕೆಂದುಕೊಂಡು ಹೋದರೂ ಮತ್ತೊಬ್ಬರ ಡೈರಿ ಪಡೆಯುವುದು ಓದುವುದು ಸರಿಯೋ..?ತಪ್ಪೋ? ಅವರು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೋ ಎನ್ನುವ ಆಲೋಚನೆಯಲ್ಲಿದ್ದವರಿಗೆ ವತ್ಸಲಾಳಿಗೆ ಬರೆದ ಪತ್ರದಲ್ಲಿ ಅವರು ಶೇಖರರಿಗೆ ಏನು ಕೇಳಿದರೂ ಕೊಡಬೇಕೆಂಬ ಆದೇಶವಿತ್ತು. 


ಮುಂದೆ ಡೈರಿ ಸಾಗುತ್ತಾ ಹೋಗುತ್ತದೆ. ಇಲ್ಲಿ ಡೈರಿಯ ಬರವಣಿಗೆಯಲ್ಲಿ ಕೆಲವು ಸಂಕೇತಗಳು, ಚಿತ್ರಣಗಳನ್ನು ಅರ್ಥೈಸಿರುವ ರೀತಿ ಹಾಗೂ ವಿಭಿನ್ನತೆ ಸೂಕ್ಷ್ಮವಾಗಿ ಚಿತ್ರಿತವಾಗಿದೆ.


ಶಾಂತ, ಸೂಕ್ಷ್ಮ ಹಾಗೂ ವಾಮನ ಕಾಮತ್ ಇವರು ಮೂವರೂ ಶ್ರೀನಿವಾಸರ ಬದುಕಿನಲ್ಲಿ ಯಾವ ಪಾತ್ರ ವಹಿಸಿದ್ದರು ಇವರ ವೈಶಿಷ್ಟ್ಯವೇನು ? ಇವರನ್ನು ಶೇಖರ್ ಮುಖಾಮುಖಿಯಾದರೆ..?


ವೈದ್ಯರಾಗುವಾಗ ತಂದೆ-ತಾಯಿಯನ್ನು ಒಪ್ಪಿಸಿ ಓದಲು ಕಳುಹಿಸಿದ ವಾಮನ ಕಾಮತರ ಕುರಿತು ಗೊತ್ತಿತ್ತಾದರೂ ಶಾಂತ ಹಾಗೂ ಸೂಕ್ಷ್ಮ ಇವರ ಕುರಿತಾಗಿ ಒಮ್ಮೆಯೂ ಶೇಖರ್ ಅವರ ಬಳಿ ಹೇಳದೆ ಇರಲು ಕಾರಣವೇನಿತ್ತು..?


ಒಬ್ಬ ವ್ಯಕ್ತಿ ಸಾರ್ವಜನಿಕವಾಗಿ ಹೇಗಿದ್ದನೋ ಅಂತರಂಗದಲ್ಲಿಯೂ ಹಾಗೆಯೇ ಇದ್ದ ನೇ..? ಅಷ್ಟೂ ದಿನ ಇಟ್ಟುಕೊಂಡಿದ್ದ ಗೌರವಕ್ಕೆ ಮುಕ್ಕಾಗುವಂತಹ ಏನಾದರೂ ವಿಚಾರವಿದ್ದರೆ ಶೇಖರ್ ಅದನ್ನು ಹೇಗೆ ತೆಗೆದುಕೊಳ್ಳಬಹುದು ಎನ್ನುವ ಕುತೂಹಲದಲ್ಲಿಯೇ ಕಾದಂಬರಿ ಸಾಗುತ್ತದೆ.


ವ್ಯಾಸೆಕ್ಟಮಿ ಮಾಡಿಕೊಂಡ ವಿಷಯವನ್ನು ಶ್ರೀನಿವಾಸರು ತಮ್ಮ ಪತ್ನಿ ವತ್ಸಲ ಳ ಬಳಿ ಹಂಚಿಕೊಳ್ಳದೆ ತಮಗೆ ಮಕ್ಕಳಾಗದಕ್ಕೆ ಬೇರೆಯ ಕಾರಣವನ್ನು ನೀಡಿದ್ದರೆ..!?

ಶೇಖರ್ ಕೂಡ ಇದನ್ನೇ ಸೂಚಿಸುತ್ತಾ ರಾದರೂ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳಲು ಇಚ್ಛಿಸದ ಶ್ರೀನಿವಾಸರ ನಡೆ ಅಲ್ಲಿ ಒಪ್ಪಬಹುದಾದರೂ .. ಮುಂದೆ ತಮ್ಮ ಬದುಕನ್ನು ಅ-ಸಹ್ಯವಾಗಿಸಿಕೊಳ್ಳುವ ಪರಿ ಮನುಷ್ಯನ ಬದುಕಿನಲ್ಲಿ ಕಾಮ ಹಾಗೂ ದಾಂಪತ್ಯ ಜೀವನದ ಹಲವು ಮುಖಗಳನ್ನು ತೆರೆದಿಡುತ್ತದೆ. 


ಶ್ರೀನಿವಾಸರು ತಮ್ಮ ಪತ್ನಿ ಕೃತಕ ಗರ್ಭಧಾರಣೆಗೆ ಒಪ್ಪಿದರೆ ಯಾರನ್ನು ವೀರ್ಯದಾನಕ್ಕೆ ಆಯುತ್ತಿದ್ದರು ಎಂಬುದನ್ನು ಹೇಳಿದಾಗ ಅಚ್ಚರಿಯ ಜೊತೆಗೆ ಹೀಗೂ ಯೋಚಿಸುತ್ತಾರಾ ಎನ್ನಿಸುತ್ತದೆ.


ವತ್ಸಲಾರ ತಂದೆಗೆ ಈ ವಿಚಾರ ಗೊತ್ತಾದಾಗ ಅವರು ಪ್ರತಿಕ್ರಿಸುವ ಪರಿ, ತಾಳ್ಮೆ ಹಾಗೂ ವ್ಯವಧಾನದಿಂದ ಉತ್ತರಿಸುವ ರೀತಿ ಒಂದು ಸಂಸಾರವನ್ನು ಒಡೆಯಬಾರದು ಎನ್ನುವ ಅವರ ದೂರಾಲೋಚನೆಗೆ ಕನ್ನಡಿ ಹಿಡಿದಂತಿದೆ.


ಬಾಲವಿಧವೆಯಾದವರು, ಕಿರಿಯ ವಯಸ್ಸಿನಲ್ಲಿಯೇ ವಿಧವೆಯಾದವರೆಲ್ಲರೂ ಕೊನೆಯ ತನಕ ತಾ ಪರಪುರುಷ ಸಂಘ ಬಯಸದೆ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವುದರ ವಿಚಾರ ಹಾಗೂ ಶ್ರೀನಿವಾಸರಲ್ಲಿ ಕಾಣುವ ಬಯೋಲಾಜಿಕಲ್ ನೆಸಿಸಿಟಿಯಾದ ಕಾಮ ಇವೆರಡನ್ನು ಕಂಡಾಗ ಮನಸ್ಸು ಎಷ್ಟು ಸೂಕ್ಷ್ಮ ಮತ್ತು ಎಷ್ಟು ಬಲಿಷ್ಠ ಎಂಬುದರ ಅರಿವಾಗುತ್ತದೆ.


ಈ ಕಾದಂಬರಿಯಲ್ಲಿ 

ಖಾಲಿ...

ಎನ್ನುವುದಕ್ಕೆ ಬಹಳಷ್ಟು ಅರ್ಥ ಕಾಣುತ್ತದೆ. 


ವಾಮನ ಕಾಮತರ ಜೊತೆಗೆ ಮಾತನಾಡಿದ ಶ್ರೀನಿವಾಸ್ ಅವರಿಗೆ ಹೊಳೆದ ಸೂಕ್ಷ್ಮ ಏನಿತ್ತು ? ಶ್ರೀನಿವಾಸರ ಚರಾಸ್ತಿ ವಾಮನ ಕಾಮತರ ಹೆಸರಿಗೆ ಬರೆದಿದ್ದರಾದರೂ.. ಅದು 'ನನ್ನದಲ್ಲದು' ಎನ್ನುವ ಭಾವದಲ್ಲಿ ಅದನ್ನು ಏನು ಮಾಡಲು ಯೋಚಿಸಿದರು..?


ಎಷ್ಟೋ ಬಾರಿ ನಮ್ಮದಲ್ಲದ ಯೋಚನೆಗಳನ್ನು ನಮ್ಮ ಬದುಕಲ್ಲಿ ಅಂಟಿಸಿಕೊಂಡು, ನಮ್ಮದೇ ಎಂಬಂತೆ ಬದುಕುತ್ತಾ.. ಇಲ್ಲದ ಸಮಸ್ಯೆಗಳನ್ನು ಪರಿಹಾರವೆಂಬಂತೆ ಮನಸ್ಸಿಗೆ ತೆಗೆದುಕೊಳ್ಳುತ್ತೇವೆ. ಅದರ ಸರಿ-ತಪ್ಪುಗಳ ದಾರಿ ನಮ್ಮನ್ನು ಬೇರೆಯದ್ದೇ ಬದುಕಿಗೆ ಕೊಂಡೊಯ್ಯುತ್ತದೆ. ಶ್ರೀನಿವಾಸರ ಮೂಲಕ ವ್ಯಕ್ತಿಯೊಬ್ಬನ ಜೀವನದ ಹಲವು ಆಯಾಮಗಳನ್ನು ತೆರೆದಿಟ್ಟಿದ್ದಾರೆ. 


ಇಂದಿನ ದಿನಗಳಲ್ಲಿ ಕೌನ್ಸಲಿಂಗ್, ಮಾನಸಿಕ ಚಿಕಿತ್ಸೆ ಜೊತೆಗೆ ಮಕ್ಕಳ ವಿಚಾರಕ್ಕೆ ಹಲವಾರು ದಾರಿಗಳು ದಕ್ಕುತ್ತವೆ. ಈ ಕಾದಂಬರಿಯನ್ನು ಇಂದಿನ ದಿನಮಾನಕ್ಕೆ ಹೋಲಿಸಿ ನೋಡುವುದಕ್ಕಿಂತ ಲೇಖಕರು ಬರೆದಿರುವ 1974-75ರ ಕಾಲಘಟ್ಟದಲ್ಲಿಯೇ ನಿಂತು ನೋಡುವುದು ಸೂಕ್ತ. 


ಘನವಾದ ಕಥಾವಸ್ತು ಹಾಗೂ ವಿಭಿನ್ನ ನಿರೂಪಣೆಯ ಕಾದಂಬರಿ. 

~ವಿಭಾ ವಿಶ್ವನಾಥ್

ಹ್ಯಾಷ್ ಟ್ಯಾಗ್ codeಗನ ಸೈನ್ಸ್ ಫಿಕ್ಷನ್ (ಪುಸ್ತಕ ಯಾನ - 437)


ಪುಸ್ತಕದ ಶೀರ್ಷಿಕೆ : ಹ್ಯಾಷ್ ಟ್ಯಾಗ್ codeಗನ ಸೈನ್ಸ್ ಫಿಕ್ಷನ್

ಲೇಖಕರು : ಗುರುರಾಜ ಕುಲಕರ್ಣಿ 

ಪ್ರಕಾಶಕರು : ಛಂದ ಪುಸ್ತಕ

ಪ್ರಥಮ ಮುದ್ರಣ : 2025

ಪುಟಗಳು : 116

ಬೆಲೆ : 135 ರೂ. 


ಇತ್ತೀಚಿನ ಓದಿನಲ್ಲಿ ನನಗೆ ಇಷ್ಟವಾದ ಕಥಾಸಂಕಲನ ಇದು. ಗುರುರಾಜ ಕುಲಕರ್ಣಿಯವರು ಹಳೆಯ ಧಾರವಾಡ ಜಿಲ್ಲೆಯ, ಈಗಿನ ಗದಗ ಜಿಲ್ಲೆಗೆ ಸೇರಿದ ನರಗುಂದ ತಾಲೂಕಿನ ಶಿರೋಳದಲ್ಲಿ ಜನಿಸಿದವರು. ಇವರ ಕೆಲವು ಲಲಿತ ಪ್ರಬಂಧಗಳು ಹಾಗೂ ಸಣ್ಣ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಊರು-ನಾಡುಗಳ ಇತಿಹಾಸವನ್ನು ತಿಳಿಸುವ ' ದನಿಪಯಣ ' ಎನ್ನುವ ಪಾಡ್ಕಾಸ್ಟ್ ನಡೆಸುತ್ತಿದ್ದಾರೆ. 


ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಥಾ ಸಂಕಲನಗಳಿದ್ದರೂ ಬೆರಣಿಕೆಯಷ್ಟು ಮಾತ್ರವೇ ನನ್ನ ಓದಿಗೆ ಸಿಕ್ಕಿರುವುದು. ಹೊಸ ತಂತ್ರಜ್ಞಾನಗಳ ಕುರಿತು ಸರಳವಾಗಿ ತಿಳಿಯುವಂತೆ, ಎಲ್ಲಿಯೂ ಬೋರಾಗದಂತೆ ಸರಾಗವಾಗಿ ಕಥೆಗಳನ್ನು ಹೆಣೆದಿದ್ದಾರೆ. 


2025ರ ಛಂದ ಪುಸ್ತಕ ಬಹುಮಾನ ಪಡೆದ ಕೃತಿ ಇದು. ಕಥಾಸಂಕಲನದ, ಕಥೆಗಳ ಶೀರ್ಷಿಕೆಯಂತೆಯೇ ನಿಧಿ ಬಿ. ಆರ್ ರಚನೆಯ ಮುಖಪುಟವೂ ವಿಭಿನ್ನವಾಗಿ ಸೆಳೆಯಿತು. ಕಂಪ್ಯೂಟರ್ ಗೆ ಅರ್ಥವಾಗುವ ಭಾಷೆ 0 ಮತ್ತು 1. 0 ಮತ್ತು 1 ಬಳಸಿಯೇ codeಗ ಅಲ್ಲಲ್ಲ 'ಕೋಡಗ'ನ ಮುಖ, ಶೀರ್ಷಿಕೆ, ಲೇಖಕರ ಹೆಸರು ಹೀಗೆ ಮುಖಪುಟದ ಅಕ್ಷರಗಳು LCD ಡಿಸ್ಪ್ಲೇನಂತೆ ಚಿತ್ರಿತವಾಗಿವೆ. 


ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ.


ಪ್ರಾಜೆಕ್ಟ್ ನೆನಪಿಕೆ :  ನ್ಯೂಯಾರ್ಕ್ ನಲ್ಲಿದ್ದ ಕ್ಷಿತಿಜ್ ಈಗ ತನ್ನ ಪ್ರೊಫೆಸರ್ ಪೋಲಸ್ಕಿ ಅವರೊಂದಿಗೆ ಚರ್ಚಿಸಿ ತಾನು ದಾಸ್ತಾನು ಡಾಟ್ ಕಾಂ ಗೆ ಸೇರಿಕೊಳ್ಳುವುದೋ ಬೇಡವೋ ಎಂದು ನಿರ್ಧರಿಸಬೇಕಿತ್ತು. ಹಾಗೆ ನೋಡಿದರೆ 'ದಾಸ್ತಾನು' ಕ್ಷಿತಿಜನದ್ದೇ ಕನಸಿನ ಕೂಸು. ನ್ಯೂಯಾರ್ಕ್ ಗೆ ಬಂದ ಹೊಸತರಲ್ಲಿ ವಾರಾಂತ್ಯದಲ್ಲಿ ಹೈಕಿಂಗ್ ಗೆಂದು ಗಗನನ ಜೊತೆ ಹೊರಟಾಗ ಆತ ತನ್ನ ಹೈಕಿಂಗ್ ಸಾಮಾಗ್ರಿಗಳನ್ನು ಸೇಫ್ ಸ್ಟೋರೇಜ್ ನಿಂದ ಕೊಂಡೊಯ್ಯುವುದನ್ನು ಕಂಡು ಅದರ ಮೇಲೆ ಆಸಕ್ತಿ ಹುಟ್ಟಿತ್ತು. ಇಂತಹದ್ದೇ ಸ್ಟೋರೇಜ್ ಉದ್ಯಮಕ್ಕೆ ಭಾರತದಲ್ಲಿಯೂ ಭವಿಷ್ಯವಿದೆ ಎಂದು ಕ್ಷಿತಿಜ ಲೆಕ್ಕಾಚಾರ ಹಾಕಿದ್ದ. ಈಗ ಇದು ಸ್ಟಾರ್ಟಪ್ ಹಂತದಲ್ಲಿತ್ತು.

ಪೋಲಸ್ಕಿ ಅವರೊಡನೆ ಮಾತನಾಡಲು ಹೋದಾಗ ಕೆಲ ಪುಸ್ತಕಗಳನ್ನು ಸೇಫ್ ಸ್ಟೋರೇಜ್ ನಿಂದ ತಂದುದನ್ನು ಕಂಡು ಮನೆಯಲ್ಲಿ ಎಷ್ಟೊಂದು ಜಾಗವಿದ್ದರೂ ಪುಸ್ತಕಗಳನ್ನು ದುಡ್ಡು ಕೊಟ್ಟು ಸೇಫ್ ಸ್ಟೋರೇಜ್ ನಲ್ಲಿಟ್ಟದ್ದೇತಕೆ ಎಂದು ಕೇಳಿದಾಗ 

"ಮೈ ಯಂಗ್ ಫ್ರೆಂಡ್, ಏನನ್ನಾದರೂ ಇಟ್ಟುಕೊಳ್ಳಲು ಮನೆಯಲ್ಲಿ ಜಾಗವಷ್ಟೇ ಅಲ್ಲ, ಮನಸ್ಸಿನಲ್ಲಿ ಜಾಗವೂ ಬೇಕಾಗುತ್ತದೆ ಎನ್ನುತ್ತಾರೆ."

ಹೀಗೆ ಚರ್ಚೆ ಎರಡೂ ದಿಕ್ಕಿನಿಂದಲೂ ಸಾಗುತ್ತಾ ಹೋಗುತ್ತದೆ. ಭಾರತದ ಮಾರುಕಟ್ಟೆ, ಗ್ರಾಹಕರು, ತಂತ್ರಜ್ಞಾನವನ್ನು ಬಿಟ್ಟು ಸ್ಟೋರೇಜ್ ಕಡೆಗೆ ಮುಖ ಮಾಡಿದ ಕ್ಷಿತಿಜನ ಪ್ರತಿಭೆ ಎಲ್ಲದರ ಸಕಾರಾತ್ಮಕ-ನಕಾರಾತ್ಮಕ ಸಾಧ್ಯತೆಗಳನ್ನು ಚರ್ಚಿಸುತ್ತಾರೆ. ಇದಾದ ನಂತರ ಪ್ರೊಫೆಸರ್ ಪ್ರಾಜೆಕ್ಟ್ ನೆನಪಿಕೆಯನ್ನು ನಿಲ್ಲಿಸಲು ಹೊರಡುತ್ತಾರೆ. ಫಂಡಿಂಗ್ ತೊಂದರೆ ಇಲ್ಲದೆ, ಪ್ರಾಯೋಜಕರ ಕಿರಿಕಿರಿ ಇಲ್ಲದೆ, ಪೇಟೆಂಟ್ ಗಲಾಟೆಯೂ ಇಲ್ಲದೆ ಪ್ರೊಫೆಸರ್ ಅದನ್ನು ನಿಲ್ಲಿಸಲು ಹೊರಟದ್ದೇಕೆ..? ಅಷ್ಟಕ್ಕೂ ಪ್ರಾಜೆಕ್ಟ್ ನೆನಪಿಕೆ ಏನಿತ್ತು ..? ಪ್ರೊಫೆಸರ್ರ ವೈಯಕ್ತಿಕ ಬದುಕಿಗೂ ಇದಕ್ಕೂ ಇರುವ ನಂಟೇನು..?


ಕಬ್ಬಿಗ. ai : ದೊಡ್ಡ ಕಂಪನಿಯಲ್ಲಿ ಸಣ್ಣ ಇಂಜಿನಿಯರಿಂಗ್ ಮ್ಯಾನೇಜರ್ ಆಗಿರುವ ಕುಲಕರ್ಣಿ ಹಾಗೂ ನಿವೃತ್ತ ಕನ್ನಡ ಮೇಷ್ಟ್ರು ಪುಟ್ಟಲಿಂಗಯ್ಯನವರು ಇಬ್ಬರ ಸ್ನೇಹದ ಸಾಂಗತ್ಯ ಎಲ್ಲಿಂದಲ್ಲಿಯ ಸ್ನೇಹ ಎನಿಸಿದರೂ ಬೆಳೆಯುತ್ತಾ ಹೋದ ಸ್ನೇಹದಲ್ಲಿ ತಂತ್ರಾಂಶದ ಕುರಿತು ಗುರುಗಳು ತಿಳಿದುಕೊಳ್ಳತೊಡಗಿದ್ದರೆ, ಕೃತಕ ಬುದ್ಧಿಮತ್ತೆ (ಕೃಬು)/ ಯಂತ್ರ ಜಾಣ್ಮೆ (ಯಂಜಾ) ಉಪಯೋಗಿಸಿ ಕುಲಕರ್ಣಿ ಅವರು ಕಬ್ಬಿಗ. ai  ತಂತ್ರಾಂಶವನ್ನು ಗುರುಗಳ ಜ್ಞಾನ ಹಾಗೂ ತಮ್ಮ ತಂತ್ರಜ್ಞಾನದ ಜ್ಞಾನದಿಂದ ಬೆಳೆಸುತ್ತಾ ಹೋದರು. ಈ ತಂತ್ರಜ್ಞಾನದ ಉದ್ದೇಶ ಏನಿತ್ತು..? ಮುಂದೆ ಪುಟ್ಟಲಿಂಗಯ್ಯನವರು ಯಂಜಾಚಾರ್ಯರ ಕಾವ್ಯದ ಕುರಿತು ಹೇಳಿದ ಮಾತುಗಳಲ್ಲಿ ಎಷ್ಟು ನಿಜವಿತ್ತು..? ಕುಲಕರ್ಣಿಯವರು ನಿಜ ತೆರೆದಿಡಲು ಹಿಂತೆಗೆದದ್ದೇಕೆ..? ತಂತ್ರಜ್ಞಾನದ ಜೊತೆಗೆ ಸಾಹಿತ್ಯವನ್ನು ಮಿಳಿತಗೊಳಿಸಿರುವ ಕತೆ. 


ಕೋವಿಡ್ ಹಬ್ಬ : 'ಸೆನ್ಸೋ ಸ್ಟಾರ್' ಎನ್ನುವ ಚಿಕ್ಕ ಸ್ಟಾರ್ಟಪ್ ಹುಬ್ಬಳ್ಳಿಯಲ್ಲಿತ್ತು. ಕಾಲೇಜಿನ ಜೂನಿಯರ್ ಆಗಿದ್ದ ಬಸವರಾಜ ಸಂಗೊಳ್ಳಿ ಅದರ ಸ್ಥಾಪಕ-ಮುಖ್ಯಸ್ಥ. ಒಂದು ಸಂದರ್ಭದಲ್ಲಿ ಅದೇ ಕಂಪನಿಯಲ್ಲಿ ಕೆಲಸಕ್ಕೆ ಅವಕಾಶ ಸಿಕ್ಕು ಸೆನ್ಸಾರ್ ಗಳ ಹಾಗೂ ಇಂಟರ್ನೆಟ್ ಆಫ್ ಥಿಂಗ್ಸ್ ಗಳ ಕುರಿತು ಕೆಲಸ ಮಾಡುತ್ತಿರುವಾಗ, ಕಂಪನಿಯ ಆರ್ಥಿಕ ಸ್ಥಿತಿಯೂ ಚೆನ್ನಾಗಿಯೇ ಇದ್ದಿರುವಾಗ 21 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿದರು. ಎಲ್ಲ ಕಂಪನಿಗಳಂತೆ ವರ್ಕ್ ಫ್ರಮ್ ಶುರುವಾಯಿತು ಎಂದುಕೊಂಡರೆ.. ಅಂತಹ ಕಠಿಣ ಪರಿಸ್ಥಿತಿಯಲ್ಲೂ ಬಸವರಾಜ ಹೊಸ ಅವಕಾಶವನ್ನು ಕಂಡುಕೊಂಡಿದ್ದ. ಆ ಅವಕಾಶವೇನು ಹಾಗೂ ಅದರ ಪರಿಣಾಮ ಏನಾಯ್ತು..? ತಂತ್ರಜ್ಞಾನದ ಜೊತೆಗೆ ರಾಜಕೀಯವೂ ಬೆರೆತಿರುವ ಕತೆ. 


ಹೊಲವೇ ಜೀವನ ಸಾಕ್ಷಾತ್ಕಾರ... : ದೇಶದ ಖ್ಯಾತ ಪತ್ರಿಕೆಯ ವರದಿಗಾರ್ತಿಯಾಗಿ ಹೆಸರು ಮಾಡಿದ್ದವಳಿಗೆ 25 ವರ್ಷಗಳ ಹಿಂದೆ ತೀರಿ ಹೋಗಿದ್ದ ಅಜ್ಜಿ ಕನಸಿನಲ್ಲಿ ಬಂದು "ಹೊಲ ತಗೋ" ಎಂದು ಗಂಟು ಬಿದ್ದಿದ್ದರು. ಭಾರತೀ ಅಕ್ಕೋರು ಎಂದೇ ಖ್ಯಾತರಾಗಿದ್ದ ಅಜ್ಜಿಯ ಕಷ್ಟಗಳು, ಅಪ್ಪನನ್ನು ಬೆಳೆಸಿದ ಕಷ್ಟ, ಅಕ್ಷರವನ್ನು ಕಲಿಸಿದ್ದು, ವಿನೋಭಾ ಭಾವೆಯವರ ಭೂದಾನ ಚಳುವಳಿಯ ಮಹಿಳಾ ಕಾರ್ಯಕರ್ತೆಯಾಗಿ ಭಾಗವಹಿಸಿದ್ದು, ಅಜ್ಜಿಯ ಬದುಕಿನಲ್ಲಿ ಬಂದ ಹಠಾತ್ ತಿರುವು, ಮಾಯಿ ಸ್ಥಾಪಿಸಿದ ವನಿತಾ ಸೇವಾ ಸಮಾಜ ಇದೆಲ್ಲದರ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅಜ್ಜಿ ಹೊಲ ತೆಗೆದುಕೊಳ್ಳಲು ಗಂಟು ಬಿದ್ದದ್ದೇಕೆ..? ಅಜ್ಜಿ ಹೇಳಿದ ವಿಚಾರಗಳು ಎಷ್ಟರಮಟ್ಟಿಗೆ ಆಲೋಚನೆಗೆ ಹಚ್ಚಿದವು..? ಇದೆಲ್ಲವನ್ನೂ ತಾನು ಮದುವೆಯಾಗುವ ಹುಡುಗ ಸಂದೀಪನೊಡನೆ ಹೇಳಿಕೊಂಡಾಗ ಆತ ಕೊಟ್ಟ ತಾರ್ಕಿಕ ಉತ್ತರವೇನು..? 


ಮರಕೋತಿ ಭಾರತಿ : ಮಕ್ಕಳು ಆಟವೆಂದರೆ ಪಬ್ಜಿ ಎಂಬ ಕಂಪ್ಯೂಟರ್ ಗೇಮು ಎಂದುಕೊಳ್ಳುತ್ತಿರುವ ಸಂದರ್ಭದಲ್ಲಿಯೇ.. ಅಖಿಲ ಭಾರತ ಮರಕೋತಿ ಉತ್ಸವ ನಡೆಯುತ್ತಿರುವುದು ಹಾಗೂ ಅದಕ್ಕೆ ಭಾಗವಹಿಸಲು ದೇಶದ ವಿವಿದೆಡೆಯಿಂದ ಮರಕೋತಿ ಪ್ರಚಾರಕರು, ಅಭಿಮಾನಿಗಳು ಬರುತ್ತಿದ್ದಾರೆಂದು ತಿಳಿದು ಬಂದಿತ್ತು. ಮರಕೋತಿ ಜ್ಯೋತಿ ಎಂಬ ಮೊಬೈಲ್ ಅಪ್ಲಿಕೇಶನ್ ಕೂಡಾ ಸಿಕ್ಕಿತು. ಇದೆಲ್ಲವನ್ನೂ ನಡೆಸುತ್ತಿರುವ ಸಂಸ್ಥೆ ಮರಕೋತಿ ಭಾರತಿ. ಆ ಸಂಸ್ಥೆಯ ಯಶೋಗಾಥೆಯ ಹಿಂದಿನ ಕಥೆ ಮಾತ್ರವಲ್ಲದೆ, ಆ ಸಂಸ್ಥೆಯ ಮೂರ್ಖತನದ ಪರಿಣಾಮ ವೈಯಕ್ತಿಕವಾಗಿ ತಟ್ಟಿದ ಕಥೆಯೂ ಇಲ್ಲಿದೆ. 


ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲ ಅದು ಹೌದು! : ಈ ಕಥೆಯ ಶೀರ್ಷಿಕೆಯ ಸಾಲು ಕೋಡಿಕೊಪ್ಪದ ಹುಚ್ಚೀರಪಜ್ಜ ಎಂಬ ಸಂತನ 'ಜಗತ್ ಮಿಥ್ಯ' ಅರ್ಥದ ಖ್ಯಾತ ನುಡಿಯೆಂಬ ಉಲ್ಲೇಖವಿದೆ. ತನ್ನ ಬಾಸ್ ಸತೀಶನ ಜೊತೆ ಬೆಂಗಳೂರಿನ ಹೊರವಲಯದ ಸರ್ಜಾಪುರ ರಸ್ತೆಯ ಜಮೀನಿನ ಬಳಿ ಬಂದದ್ದಕ್ಕೆ ಕಾರಣ ಅಲ್ಲಿ ಕಟ್ಟುತ್ತಿರುವ ದೊಡ್ಡ ಟೆಕ್ ಪಾರ್ಕ್. ಅಲ್ಲಿ ಅವರ ಕಂಪನಿಗೂ ಜಾಗ ನೋಡಿಕೊಂಡು ಅದು ಸರಿ ಎನ್ನಿಸಿದರೆ, ಬಾಡಿಗೆ ಕಮ್ಮಿ ಇದ್ದರೆ, ಹೆಡ್ ಆಫೀಸ್ ಗೆ ತಿಳಿಸುವ ಉದ್ದೇಶದಿಂದ. ಈಗಿದ್ದ ಆಫೀಸನ್ನು ಹೊರವಲಯಕ್ಕೆ ಸ್ಥಳಾಂತರ ಮಾಡಲು ಹೊರಟಿದ್ದೇಕೆ..? ಗೋಲ್ಡನ್ ಟೆಕ್ ಪಾರ್ಕ್ ನೋಡಿದ ಮೇಲೆ ಆ ಜಾಗವನ್ನೇ ಶಿಫಾರಸ್ಸು ಮಾಡಿದ ಭಾವಜೀವಿ ಸತೀಶನ ನಿರ್ಧಾರದ ಹಿಂದೆ ಯಾವ ಭಾವ ವಿತ್ತು..? ವರ್ಚುಯಲ್ ರಿಯಾಲಿಟಿ ಕನ್ನಡಕ ಹಾಕಿಕೊಂಡು ಹಲವಾರು ಸೌಲಭ್ಯಗಳನ್ನು ಕೂಡಾ ಕಂಡಿದ್ದರು. ಆಫೀಸ್ ಸ್ಥಳಾಂತರವಾದ ನಂತರ ವಿಕ್ಷಿಪ್ತ ರೀತಿಯಲ್ಲಿ ಸತೀಶ ರಾಜೀನಾಮೆ ಕೊಟ್ಟು ಹೋದ ಸಂದರ್ಭಕ್ಕೆ ಕಾರಣವೇನು..?


ಮೊಲೆವಾಲು ನಂಜಾಗಿ ಕೊಲುವಡೆ... : ಸಂತೋಷ ಮಹತ್ವಾಕಾಂಕ್ಷಿ. ಕೆಲವೊಮ್ಮೆ ಅವನದ್ದು ದುಡುಕು ಸ್ವಭಾವ, ಚಂಚಲ ಸ್ವಭಾವ ಎನ್ನಿಸಿದರೂ ಇದರ ವಿರುದ್ಧವಾದ ಅಭಿಪ್ರಾಯ ಸಂತೋಷನಿಗೆ ಈತನ ಕುರಿತು ಇತ್ತು. ಅಮೆರಿಕಾದಿಂದ ಮಗಳು ಭಾರತೀಯ ಸಂಸ್ಕೃತಿ ಕಲಿಯಲಿ ಎಂದು ಬಂದು ಇಂಟರ್ನ್ಯಾಷನಲ್ ಸ್ಕೂಲ್ ಗೆ ಸೇರಿಸಿದ್ದಾಗಿತ್ತು. ಆದರೆ, ಶಾಲೆಯಲ್ಲಿ ಆದ ಒಂದು ಅವಗಢ ಪೋಷಕರ ಮನಸ್ಸನ್ನೇ ತಳಮಳಗೊಳಿಸುವಂತಹದ್ದು. ಆ ಘಟನೆ ಏನು ಓದಿ ನೋಡಿ.


ನಿಶಾಚರ ಸಾಫ್ಟ್ವೇರ್ ಡಾಟ್ ಕಾಂ : ಕ್ರೈಮ್ಸ್ ಆಫ್ ಇಂಡಿಯಾ ಪತ್ರಿಕೆಗಾಗಿ ನಿಶಾಚರ ಸಾಫ್ಟ್ವೇರ್ ಡಾಟ್ ಕಾಂ ಕಂಪೆನಿಯ ಮುಖ್ಯಾಧಿಕಾರಿಯನ್ನು ಅವರದ್ದೇ ಆಹ್ವಾನದ ಮೇಲೆ ಸಂದರ್ಶನ ಮಾಡಲು ಹೋಗಿದ್ದು ರಾತ್ರಿ 11:50ಕ್ಕೆ. ರಾತ್ರಿಯ ಅಪವೇಳೆಯಲ್ಲಿ ಸಂದರ್ಶನಕ್ಕೆ ಬಾ ಎಂದದ್ದು ಬೇಜಾರು ತಂದಿತ್ತಾದರೂ ಚಾನ್ ಬಂದ ಮೇಲೆ ಸಂದರ್ಶನವನ್ನು ಶುರು ಮಾಡಿ ಆಗಿತ್ತು. ಹೀಗೆ ಆಸಕ್ತಿಕರವಾಗಿಯೇ ಸಾಗುತ್ತಿದ್ದ ಕಥೆ ಹಾರರ್ ರೂಪ ತಳೆಯುವುದನ್ನು ಓದಿ ನೋಡಿ.


ಅಳಗಪ್ಪನ ಅಲ್ಗಾರಿದಮ್ : ಕಂಪನಿಯಲ್ಲಿ ಕೆಲಸ ಮಾಡುವ ಅಳಗಪ್ಪನ ಪೂರ್ತಿ ಹೆಸರು ಅಳಗಪ್ಪನ್ ಪಳನಿಯಪ್ಪನ್. ಜಾಣನಾಗಿದ್ದಾತ ಕಷ್ಟಪಟ್ಟು ದುಡಿಯುತ್ತಿದ್ದ. ಒಂದೇ ತರಹದ ಕೆಲಸಗಳನ್ನು ಎರಡು ಸಲ ಮಾಡಿದ್ದೇ ಇಲ್ಲ. ಮೊದಲನೇ ಸಲ ಕೆಲಸ ಮಾಡಿ ಅದನ್ನು ಇನ್ನೊಮ್ಮೆ ಮಾಡಬೇಕಾಗಿ ಬಂದರೆ ಎಂದು ಮುಂದಾಲೋಚನೆಯಿಂದ ಕಂಪ್ಯೂಟರ್ ಪ್ರೋಗ್ರಾಮ್ ಬರೆದು ಅದೇ ತರಹದ ಸಮಸ್ಯೆಗೆ ಕಂಪ್ಯೂಟರ್ ನಿಂದ ಕೆಲಸ ಮಾಡಿಸಲು ಪ್ರಯತ್ನಿಸುತ್ತಿದ್ದ. ಹೀಗೆ ಆಟೋಮೇ ಶನ್ ಮಾಡುತ್ತಾ ಇದ್ದವನ ಪ್ರತಿಭೆಗೆ ಇದ್ದ ಒಂದೇ ಸಮಸ್ಯೆ ಎಂದರೆ 'ಹತಗೊಂಡು ಹಲೇ' ಸಿಂಡ್ರೋಮ್. ಮುಂದೆ ಶೇರ್ ಟ್ರೇಡಿಂಗ್ ಅನ್ನು ಮಾಡಲು ಅಲ್ಗೊರಿದಮ್ ಅನ್ನು ಬಳಸಲು ಹೋದ ಅಳಗಪ್ಪನ ಕಥೆ ಏನಾಯ್ತು ಓದಿ ನೋಡಿ.


ಮಲ್ಲೇಶಿಯ ಮೈನೆ ಪ್ಯಾರ್ ಕಿಯಾ ಕಥಾನಕವು : ತನ್ನೂರಿನಲ್ಲಿಯೇ ಬಿ.ಎಸ್ಸಿ ಮುಗಿಸಿದ್ದ ಮಲ್ಲೇಶಿ. ಅವನಿಗೆ ಪ್ರೀತಿ, ಪ್ರೇಮ ಇತ್ಯಾದಿ ಶಬ್ದಗಳೆಲ್ಲ ಫ್ರೆಂಚ್, ಗ್ರೀಕ್ ಭಾಷೆಯಂತಿದ್ದವು. ಹೀಗಿದ್ದವನು ಬೆಂಗಳೂರಿಗೆ ಹೊರಟದ್ದೇ ವಿಭಿನ್ನ ಕಥೆ. ಸಣ್ಣ ಕಂಪನಿಯಲ್ಲಿಯೂ ಕೆಲಸ ಗಿಟ್ಟಿಸಲು ಕಷ್ಟವಾಗಿತ್ತು. ರೆಸ್ಯೂಮ್ ಹಿಡಿದುಕೊಂಡು ಚಪ್ಪಲಿ ಸವೆಸುತ್ತಿದವನಿಗೆ ಒಮ್ಮೆ ಸೆಕ್ಯೂರಿಟಿ ಆಫೀಸರ್ ಇಂಟರ್ ವ್ಯೂ ತೆಗೆದುಕೊಂಡ. ಅಲ್ಲಿಯೂ ಫೇಲ್ ಆಗಿ ಮುಂದೆ ಕಾಲ್ ಸೆಂಟರ್ ನಲ್ಲಿಯೂ ಪ್ರಯತ್ನಿಸಿಯಾಯಿತು. ಆದರೆ, ಎಲ್ಲೋ ಒಂದು ಕಡೆ ಕೆಲಸ ಸಿಗುತ್ತದೆ ಎಂಬಂತೆ.. ಮಲ್ಲೇಶನಿಗೂ ಕೆಲಸ ಸಿಕ್ಕಿತು. ಅವನ ಮೈನೆ ಪ್ಯಾರ್ ಕಿಯಾ ಕಥನ ಏನು? ಊಹೆಗೆ ಸಿಗದ ಕಥೆ ಓದಿ ನೋಡಿ. 


ಎಂದಿನಂತೆ ಛಂದ ಪುಸ್ತಕದ ಚಂದದ ವಿಭಿನ್ನ ಕಥೆಗಳ ಕಥಾಗುಚ್ಛವಿದು. ಲಘು ಹಾಸ್ಯ, ವಿಡಂಬನೆ ಭಾವಪೂರ್ಣತೆ, ಸಾಹಿತ್ಯ, ಹಾರರ್, ಟೆಕ್ನಾಲಜಿ ಹೀಗೆ ತರಹೇವಾರಿ ಕಥೆಗಳನ್ನು ತಂತ್ರಜ್ಞಾನದ ಹೆಚ್ಚಿನ ಅರಿವಿಲ್ಲದವರೂ ಓದಬಹುದು. 


~ ವಿಭಾ ವಿಶ್ವನಾಥ್

ಫಾಲ್ಗುಣೀ ಪರ್ವ (ಪುಸ್ತಕ ಯಾನ - 436)



ಪುಸ್ತಕದ ಶೀರ್ಷಿಕೆ : ಫಾಲ್ಗುಣೀ ಪರ್ವ

ಲೇಖಕರು : ಮಲ್ಲಿಕಾ ಕಡಿದಾಳ್

ಪ್ರಕಾಶಕರು : ಲಕ್ಷ್ಮೀ ಪ್ರಕಾಶನ

ಪ್ರಥಮ ಮುದ್ರಣ : 1997

ಪುಟಗಳು : 128


ಮಲ್ಲಿಕಾ ಕಡಿದಾಳ್ ಅವರ ಈ ಕಥಾ ಸಂಕಲನದಲ್ಲಿ ಒಟ್ಟು ನಾಲ್ಕು ಕಥೆಗಳಿವೆ. ರಸವತ್ತಾದ ಭಾಷೆಯ ಜೊತೆಗೆ ಭಾವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪ್ರತಿ ಕಥೆಯ ಶುರುವಿನಲ್ಲಿಯೂ ಸೂಕ್ತಿಗಳ ಉಲ್ಲೇಖ ಮಾಡಿದ್ದಾರೆ. 


ತಿರುವಿದ ಪುಟ : ಫ್ರಾನ್ಸಿನ ಜನ್ನೆ ಜಗನ್ ಅನುಯಾಯಿಗಳಾದ ಒಬ್ಬರು ವೃದ್ಧ ಜನರ ಮಹಾಶಿಬಿರವನ್ನು ಸ್ಥಾಪಿಸಿದ್ದರು. ಇದರ ಮೇಲ್ವಿಚಾರಕರು ಕ್ರಿಶ್ಚಿಯನ್ 'ನನ್'ಗಳು. 68 ವರ್ಷದ ಲೀಲಾ ಈ ವೃದ್ಧಗಣಕ್ಕೆ ಹೊಸದಾಗಿ ಬಂದು ಸೇರುತ್ತಾರೆ. ಮನಸ್ಸಿನಲ್ಲಿ ಬಾಲ್ಯ, ಕೌಮಾರ್ಯ, ಯೌವ್ವನ, ಪ್ರೌಢ ಜೀವನಗಳ ಅವಳ ದಿನಗಳನ್ನು ನೆನೆದು ನಿಟ್ಟುಸಿರು ಬಿಡುವ ಸಂದರ್ಭಗಳು. ಹಿಂದಿನದೆಲ್ಲವನ್ನೂ ಮರೆಯುವುದು ಸುಲಭವಲ್ಲ. ಹೀಗಾಗಿ ದಿನಚರಿ ಬರೆಯುವ ರೂಢಿಯನ್ನು ಮಾಡಿಕೊಂಡಿದ್ದಾರೆ ಲೀಲಾ.

ಶಿಬಿರಕ್ಕೆ ಹೊಸದಾಗಿ ಬಂದವರು ಎಂದಾಗ ಅವರ ಕಷ್ಟಗಳ ಕೋಟಲೆಗಳನ್ನು ತಿಳಿಯುವುದರಲ್ಲಿ ಹಳಬರಿಗಿರುವ ತೀವ್ರ ಆಸಕ್ತಿಯನ್ನು ತೋರುತ್ತಲೇ.. ಅವರ ಮೂಲಕ ಲೀಲಾಳ ಬದುಕಿನ ಮತ್ತಷ್ಟು ವಿಚಾರಗಳನ್ನು ತೆರೆದಿಡುತ್ತಾರೆ. 


ವೃದ್ಧಾಶ್ರಮದಲ್ಲಿ ಕಳೆದ ಮೊದಲ ರಾತ್ರಿ ಲೀಲಾಳಿಗೆ ಯಾವ ಅಭಿಪ್ರಾಯವನ್ನು ಮೂಡಿಸಿತು.? ವೃದ್ಧಾಶ್ರಮದ ದಿನಚರಿಗಳನ್ನು ಲೀಲಾ ತನ್ನ ಡೈರಿಯಲ್ಲಿ ಸೆರೆಹಿಡಿಯುವ ಮೂಲಕ ನಮಗೂ ದರ್ಶನ ಮಾಡಿಸುತ್ತಾರೆ. ಸಿಸ್ಟರ್ ಗಳು ಆತ್ಮೀಯತೆ, ಹದವಾಗುತ್ತಿರುವ ವೃದ್ಧರು ಹಾಗೂ ಅಲ್ಲಿನ ಜೀವನ ಎಲ್ಲದರ ಜೊತೆಗೆ ಲವಲವಿಕೆಯಿಂದ ಲೀಲಾ ಚಟುವಟಿಕೆಯಿಂದ ಎಲ್ಲರಿಗೂ ಪ್ರಿಯರಾದ ವಿಚಾರವೂ ಅರಿವಾಗುತ್ತದೆ.


ಅಸ್ವಸ್ಥೆಯಾದ ವೃದ್ಧೆಯೊಬ್ಬಳ ಸಾವಿನ ಸಂಗತಿಯನ್ನು ತೆರೆದಿಡುತ್ತಾರೆ. ಅದು ಲೀಲಾಳ ಮೇಲೆ ಮಾಡಿದ ಪರಿಣಾಮವೇನು ? ಲೀಲಾ ತನ್ನ ಮಗನ ಭಾವಚಿತ್ರವನ್ನು ಪತ್ರಿಕೆಯಲ್ಲಿ ನೋಡಿದಾಗ ಅವಳು ಯಾವ ಭಾವವನ್ನು ತಳೆದಳು ಓದಿ ನೋಡಿ ವೃದ್ಧೆಯೊಬ್ಬರ ಬದುಕಿನ ಮತ್ತೊಂದು ಘಟ್ಟದ ಕತೆಯನ್ನು.


ಕೆಂಪು ಗುಲಾಬಿ : ರಾಜೇಶ್ವರಿ ತನ್ನ ಬಾಳಿನ ಬವಣೆಗಳನ್ನು ಲೆಕ್ಕಿಸದೆ ಮಗ ಇಂದುಧರನನ್ನು ಓದಿಸಿದಳು. ಕಷ್ಟಕ್ಕೆ, ಪರಿಶ್ರಮಕ್ಕೆ ಫಲವೆಂಬಂತೆ ಯುನಿವರ್ಸಿಟಿಗೆ ಮೊದಲು ಬಂದಿದ್ದ. ಪತಿ ಕ್ಯಾಪ್ಟನ್ ಗಿರೀಶ್ ಯುದ್ಧರಂಗದಲ್ಲಿ ಮಡಿದಾಗ ರಾಜೇಶ್ವರಿ ಪಟ್ಟ ಪಾಡು ಅವರ್ಣನೀಯ. ಶಾಲೆಯಲ್ಲಿ ಶಿಕ್ಷಕಿಯಾಗಿದ್ದವರು ಮಗನ ಶ್ರೇಯಸ್ಸೇ ಮುಖ್ಯ ಎಂದು ಭಾವಿಸಿ ಆತನಿಗಾಗಿಯೇ ಬದುಕನ್ನು ಮುಡಿಪಿಟ್ಟಿದ್ದರು. ಪಿ . ಎಚ್. ಡಿ ಗಾಗಿ ಅಮೆರಿಕೆಯ ಯೂನಿವರ್ಸಿಟಿಗೆ ಪ್ರವೇಶ ಕೋರಿ ಬರೆದಿದ್ದ ಬೇಡಿಕೆಗೆ ಅಸ್ತು ಎಂದಿತ್ತು.


ಗೆಳೆಯ ರಾಜೇಶನಿಗೆ ತಾಯಿಯ ಯೋಗಕ್ಷೇಮದ ಹೊಣೆ ಹೊರಿಸಿ ಹೋಗಿ ಐದು ವರ್ಷ ಅಮೆರಿಕೆಯಲ್ಲಿದ್ದವನು ಈಗ ವಾಪಸ್ ಬಂದಿದ್ದ. ಎಲ್ಲಾ ಸಂದರ್ಭಗಳಲ್ಲಿಯೂ ಮನೆಯಲ್ಲಿದ್ದ ಒಂದು ಕೆಂಪು ಗುಲಾಬಿ ಗಿಡದ ಜೊತೆಯಲ್ಲಿ ಇಂದುಧರನ ಬದುಕನ್ನು ಸಮೀಕರಿಸಲಾಗಿದೆ. 


ಇಂದುಧರ ಕೆಲಸಕ್ಕಾಗಿ ನಾನಾ ಕಡೆ ಅಲೆದರೂ ಆತನ ವಿದ್ಯೆ-ಬುದ್ಧಿ, ಬಹುಮಾನಗಳಿಗೆ, ಯೋಗ್ಯತೆಗಳಿಗೆ ಬೆಲೆ ಸಿಗದಾದಾಗ ದಿನೇದಿನೇ ಕುಗ್ಗುತ್ತಾ ಹೋದ. ತಾಯಿ ಎಷ್ಟೇ ಆತ್ಮವಿಶ್ವಾಸ ತುಂಬಲು ಹೊರಟರ ರೂ ಆತನ ಮನಸ್ಸು ವಿಫಲತೆಯನ್ನೇ ಕಾಣುತ್ತಿತ್ತು. ಇಂದುಧರನ ಕೆಟ್ಟ ಮಾನಸಿಕ ಪರಿಸ್ಥಿತಿ ಜೊತೆಗೆ ಗುಲಾಬಿ ಗಿಡದ ಪರಿಸ್ಥಿತಿ ಎರಡಕ್ಕೂ ಥಳಕು ಹಾಕಿಕೊಂಡಿರುವ ಚಿತ್ರಣ ಇಲ್ಲಿದೆ. 


"ಇಂದುಧರ ಹೂ ಗೊಂಚಲನ್ನು ಕ್ಷೀಣಿತ ಕೈಯಿಂದ ತೆಗೆದುಕೊಂಡು ಆಘ್ರಾಣಿಸಿದ. ಹೂಗಂಪು ಅಂತರಂಗವನ್ನು ಮುಟ್ಟಿತು. ತನ್ನ ಒಲವಿನ ಕೆಂಪು ಗುಲಾಬಿ ಮಾತ್ರ ಅದರಲ್ಲಿರಲಿಲ್ಲ. ಅದರ ವೈಶಿಷ್ಟ್ಯವೇ ಬೇರೆ, ಅದರ ಸುಗಂಧವೇ ಬೇರೆ. ಆನಂದವನ್ನೂ ಆನಂದಿತಗೊಳಿಸುವಂತಹ ಸೌಂದರ್ಯ ಅದರಲ್ಲಿ ..!"


ಇಂದುಧರ ಚೇತರಿಸಿಕೊಂಡನೇ ಓದಿ ನೋಡಿ.


ಜಾಗೃತಿ :

"ನಾರಿ ಸಕಲರಿಗೆ ಹಿತಕಾರಿ 

ನಾರಿ ಮುನಿದರೆ ಮಾರಿ ಸರ್ವಜ್ಞ"


ಎನ್ನುವ ಮಾತುಗಳಿಂದ ಶುರುವಾಗುವ ಈ ಕಥೆಯಲ್ಲಿ ಉಪಾಧ್ಯಾಯ ವೃತ್ತಿಯನ್ನು ಮಾಡಿಕೊಂಡು, ವಂಶಪಾರಂಪರ್ಯವಾಗಿ ಬಂದ ಮೋಚಿ ವೃತ್ತಿಯಲ್ಲಿಯೂ ಮುಂದುವರೆಯುತ್ತಿದ್ದರು. ಒಂದು ದಿನ ವೃತ್ತಪತ್ರಿಕೆಯನ್ನು ತೆಗೆದುಕೊಂಡು ಬಂದಾಗ ಅಲ್ಲಿ ಪ್ರಕಟವಾಗಿದ್ದ ಒಂದು ಸ್ತ್ರೀಯ ಚಿತ್ರ ಆತನ ಗಮನ ಸೆಳೆದಿತ್ತು. ಆಕೆಯನ್ನು ಕಂಡವರು ಹಿಡಿದುಕೊಟ್ಟರೆ ಅಥವಾ ಸುಳಿವು ಕೊಟ್ಟರೆ 5000 ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು. ಆ   ವಿಷಯ ಅವನಿಗೆ ಅಚ್ಚರಿ ತಂದಿತ್ತು.


ಶಾಲಾ ದಿನಗಳಿಂದಲೂ ಒಳ್ಳೆಯ ಭಾಷಣಕಾರನಾಗಿದ್ದ. ಅವನ ಭಾಷಣವನ್ನು ಕೇಳಿದ ಒಬ್ಬಳು ಸ್ತ್ರೀ ಆತನ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಕುರಿತು ಆರ್ಯ ಸಮಾಜದಲ್ಲಿ ಮಾಡಿದ ಭಾಷಣವನ್ನು ಕೇಳಿ ಆತನ ಭೇಟಿಗೆಂದು ಬಿರುಮಳೆಯಲ್ಲಿಯೇ ಬಂದಿದ್ದಳು. ಸಮಾಜದಲ್ಲಿ ಕ್ರಾಂತಿಯನ್ನು ಸುಧಾರಣೆಯನ್ನು ತರಲು ಆಶಿಸುತ್ತಿದ್ದ ಅವಳ ಮಾರ್ಗ ಹೇಗಿತ್ತು..? ಅದನ್ನು ಕೇಳಿ ಈತನ ವಾಗ್ಜರಿ ಹಾಗೂ ವಾದ ಸರಣಿ ಯಾವುದಾದರೂ ಬದಲಾವಣೆಯನ್ನು ಮಾಡಿತೇ..?


ಆತನನ್ನು ಮಾತ್ರವಲ್ಲದೆ ಆತನ ವಿದ್ಯಾರ್ಥಿಗಳನ್ನೂ ಕ್ರಾಂತಿಯ ಹಾದಿಗೆಳೆಯಲು ಆಕೆ ಮಾಡಿದ ಪ್ರಯತ್ನ ಎಷ್ಟು ಸಫಲವಾಯಿತು? ಆಕೆ ಕೊಲೆ ಮಾಡಿದ್ದಾಳೆಂದು ತಿಳಿದ ನಂತರ ಇವನ ಮನಸ್ಥಿತಿ ಹೇಗಿತ್ತು? ಇಲ್ಲಿ ಜಾಗೃತವಾದವರು ಯಾರು? ಅಷ್ಟಕ್ಕೂ ಪೇಪರ್ ನಲ್ಲಿ ಕಂಡ ಹಾಗೂ ಮನೆಗೆ ಬಂದ ಸ್ತ್ರೀ ಇಬ್ಬರು ಒಬ್ಬರೇ ಅಥವಾ ಬೇರೆ ಬೇರೆಯೇ ಓದಿ ನೋಡಿ.


ಫಾಲ್ಗುಣೀ ಪರ್ವ :  ವಿಶ್ವವಿದ್ಯಾಲಯದಲ್ಲಿ ಪ್ರಯೋಗಶಾಲೆ ಹಾಗೂ ಅದಕ್ಕೆ ಹೊಂದಿಕೊಂಡಂತಿದ್ದ ಗ್ರಂಥಾಲಯದಲ್ಲಿ ಈ ಕಥೆಯ ಹೆಚ್ಚಿನ ಭಾಗ ಸಾಗುತ್ತಾ ಹೋಗುತ್ತದೆ. ಹರೀಶ್, ವಸಿಷ್ಠ, ಕಾತ್ಯಾಯಿನಿ ಹಾಗೂ ಜಗನ್ಮಾತಾ ಈ ನಾಲ್ವರಲ್ಲಿ ಪ್ರಯೋಗ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಗಳ ಚರ್ಚೆಯಾಗುತ್ತಿರುತ್ತದೆ.

ಅಣು ಬಾಂಬ್, ನ್ಯೂಟ್ರಾನ್ ಬಾಂಬ್ ಹೀಗೆ ಎಲ್ಲದರ ಕುರಿತು ಹರೀಶನ ವಾದ ಸರಣಿ ಇರುತ್ತದೆ. ವಿಜ್ಞಾನವನ್ನು ಬಳಸಿಕೊಳ್ಳುವ ಹಾಗೂ ಮತ್ತಷ್ಟು ಪ್ರಯೋಗಕ್ಕೆ ಹಚ್ಚುವ ಹರೀಶನಿಗೆ ಭಾವನಾತ್ಮಕತೆ ಕಡಿಮೆ. ಕಾತ್ಯಾಯಿನಿಯ ಮೇಲೆ ಆತ ಇಟ್ಟಿದ್ದ ಪ್ರೇಮ ಭಾವಕ್ಕೆ ಕಾತ್ಯಾಯಿನಿಯ ಪ್ರತಿಕ್ರಿಯೆ ಹೇಗಿತ್ತು..?


ಪ್ರಯೋಗಾಲಯದ ಬಾಗಿಲು ಕಾಯುತ್ತಿದ್ದ ಲಕ್ಷ್ಮಣನ ಸಮಸ್ಯೆಯನ್ನು ನಾಲ್ವರು ಸೇರಿ ಪರಿಹರಿಸಿದ್ದೇಗೆ?

ಅಷ್ಟು ಸುಲಭವಾಗಿ ಇನ್ನೊಬ್ಬರ ಮಾತನ್ನು ಕೇಳದ ಹರೀಶ್ ಸಾಮೂಹಿಕವಾದ ಅಣುಕೃಷಿಗೆ ಉಳಿದವರನ್ನು ಒಪ್ಪಿಸಲು ಎಷ್ಟು ಸಫಲನಾದ..?


"ಶಿಶಿರ ಬಂದಮೇಲೆ ವಸಂತವೇನೂ ದೂರವಲ್ಲ..." ಎನ್ನುವ ಹರೀಶನ ಆಲೋಚನೆಯ ಹಿಂದಿನ ಮರ್ಮವೇನು..?

ಹರೀಶ ಹಾಗೂ ಕಾತ್ಯಾಯಿನಿಯರ ನಡುವೆ ನಡೆದ ವಾದದಲ್ಲಿ ಅಣುಶಕ್ತಿಯನ್ನು ಬಳಸುವ ಸಂದರ್ಭ, ಆಗ ಉಂಟಾಗುವ ದುಷ್ಪರಿಣಾಮ ಇದೆಲ್ಲದರ ಜೊತೆಗೆ ದೂರ ದೃಷ್ಟಿಯುಳ್ಳ ಡಾ. ಹೋಮಿ ಬಾಬಾರ ವಿಚಾರವೂ ಬಂದು ಹೋಯಿತು.


ಇದಾದ ನಂತರ ಬಂದ ರಜೆಯಲ್ಲಿ ಬಂದ ಒಂದು ಸುದ್ದಿ.. ರಾಜಸ್ತಾನದ ಮರುಭೂಮಿಯಲ್ಲಿ ನ್ಯೂಟ್ರಾನ್ ಬಾಂಬ್ ಸಿಡಿದಿರುವುದಾಗಿ ಹೇಳಿತ್ತು.  ಅನಿರೀಕ್ಷಿತವಾದ, ಆಶ್ಚರ್ಯಕರವಾದ ಈ ವರದಿಗೆ ಎಲ್ಲರಿಗೂ ಅಚ್ಚರಿಯಾಗಿತ್ತು. ಹಾಗೂ ಇದರ ಪರಿಣಾಮಗಳು ಏನಾಯ್ತು..? ಇದಕ್ಕೂ ಹರೀಶನಿಗೂ ಏನಾದರೂ ಸಂಬಂಧವಿತ್ತೇ... ಓದಿ ನೋಡಿ.


ಇಲ್ಲಿನ ಕಥಾವಸ್ತುಗಳ ವಿಶೇಷತೆಯ ಜೊತೆ ಜೊತೆಗೆ ಕಥೆಯ ನಿರೂಪಣೆಯಲ್ಲಿ ಲೇಖಕಿ ಬಳಸಿರುವ ಗಹನವಾದ ವಿಚಾರಗಳು, ಸಂಭಾಷಣೆ ಹಾಗೂ ರಸವತ್ತಾದ ಭಾಷಾಶೈಲಿ ವಿಭಿನ್ನವಾದ ಓದಿನ ಅನುಭವವನ್ನು ನೀಡಿತು.


~ ವಿಭಾ ವಿಶ್ವನಾಥ್

ಕಡಲು (ಪುಸ್ತಕ ಯಾನ - 435)



ಪುಸ್ತಕದ ಶೀರ್ಷಿಕೆ : ಕಡಲು

ಲೇಖಕರು : ಹೆಚ್. ನಾಗವೇಣಿ

ಪ್ರಕಾಶಕರು : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಪ್ರಥಮ ಮುದ್ರಣ : 1994

ಪುಟಗಳು : 28


ಹೆಚ್. ನಾಗವೇಣಿಯವರು ಇಲ್ಲಿ ನಮಗೆ ಕಡಲಿನ ಸಂಪೂರ್ಣ ದರ್ಶನವನ್ನು ತನಿಯ ಹಾಗೂ ಕೆಲ ಪಾತ್ರಗಳ ಮೂಲಕ ಮಾಡಿಸುತ್ತಾರೆ. ಅಲೆಗಳ ಆಟವನ್ನು ಆನಂದಿಸುವ ನಮಗೆ ಕಡಲಿನ ಬೇರೆ ಮುಖದ ದರ್ಶನವೂ ಆಗುತ್ತದೆ. 


ತನಿಯನಂತಹ ಹಲವು ಮೀನುಗಾರರು ಮತ್ತು ಅವರ ಬದುಕು ಹೇಗಿರುತ್ತದೆ ಎಂದು ನೋಡುವುದಾದರೆ ಕಡಲಿನ ಶಾಂತತೆಯಲ್ಲಿ ಅವರ ದುಡಿಮೆ. ಇಲ್ಲದಿದ್ದರೆ ಇಲ್ಲ.. ಕಡಲು ಅಬ್ಬರಿಸಿದರೆ ತನಿಯ ಹಾಗೂ ಅವನಂತಹವರಿಗೆ ಉಪವಾಸ. ಅದಕ್ಕಾಗಿ ಆತ ಬುದ್ಧಿವಂತಿಕೆಯಿಂದ ಬೇರೆ ಬೆಸ್ತರಿಗೂ ಆದರ್ಶಪ್ರಾಯನಾಗಿದ್ದಾನೆ. ದುಡಿಯಲು ಹೋದಾಗ ತರುವ ಮೀನುಗಳನ್ನು ಉಪ್ಪು ನೀರಿನಲ್ಲಿ ಅದ್ದಿ ಬಿಸಿಲಲ್ಲಿ ಒಣಗಿಸುವ ಆತನ ಉಪಾಯ ಕಡಲಿಗೆ ಹೋಗದ ದಿನಗಳಲ್ಲಿ ಅವರಿಗೆ ಉಪಯುಕ್ತವಾಗುತ್ತದೆ. 


ತನಿಯನಿಗೆ ಒಬ್ಬ ಗೆಳೆಯನಿದ್ದ ಅವನೇ ಕರಿಯ. ತನಿಯ ಹಾಗೂ ಕರಿಯ ಇಬ್ಬರು ಒಂದೇ ದೋಣಿಯಲ್ಲಿ ಹೋಗುವವರಿದ್ದರು. ಏಕೆಂದರೆ, ಕರಿಯನ ದೋಣಿ ಅಳಿವೆ ಬಾಗಿಲಲ್ಲಿ ಮರಳ ದಿಣ್ಣೆಗೆ ಡಿಕ್ಕಿ ಹೊಡೆದು ಚೂರಾಗಿತ್ತು. ನದಿ ಕಡಲಿಗೆ ಸೇರುವ ಜಾಗವೇ ಅಳಿವೆ. ಅಳಿವೆಯ ಬಾಗಿಲ ಹೂಳೆತ್ತದಿದ್ದಾಗ ಬೆಸ್ತರ ಬದುಕು ಎಷ್ಟು ಗೋಳಾಗುತ್ತದೆ ಹಾಗೂ ಅವರು ಇದಕ್ಕಾಗಿ ಸರ್ಕಾರವನ್ನೇ ಅವಲಂಬಿಸಬೇಕು. ತಾವೇ ಹೂಳು ತೆಗೆಯುವಂತಿಲ್ಲ. ಇದೇಕೆ ಓದಿ ಅರಿಯಿರಿ.


ಅಂದು ಕರಿಯ ಬರಲಿಲ್ಲವೆಂದು ಅವನ ಹೆಂಡತಿ ಕಮಲು ಸುದ್ದಿ ಕೊಡಲು ಬಂದಿದ್ದಳು. ಅದಕ್ಕೆ ಕಾರಣ ಆಕೆಯ ತಾಯಿಯ ಮನೆ ಕಡಲ ಪಾಲಾದದ್ದು. ತಮಗೆ ಸೇರಿದ್ದು, ಪರಿಚಿತವಾದದ್ದು ಕಡಲ ಒಡಲಿಗೆ ಸೇರಿದಾಗ ಅದೆಷ್ಟು ನೋವಲ್ಲವೇ..?


ಇದಿಷ್ಟೇ ಅಲ್ಲ, ಮೀನುಗಾರರಿಗೆ ಕಡಲ ಕೊರೆತದ ಸಮಸ್ಯೆಯೂ ಇರುತ್ತದೆ. ಕಡಲು ಒಂದೆಡೆ ಶಾಂತವಾಗಿದೆ ಎಂದರೆ ಎಲ್ಲಾ ಕಡೆಯಲ್ಲಿಯೂ ಶಾಂತವಾಗಿರುವುದಿಲ್ಲ. ಕಡಲಿನ ಚಲನವಲನವನ್ನು ಮೀನುಗಾರರು ನೀರಿಗಿಳಿಯುವ ಸಮಯ, ಸಂದರ್ಭದ ಮೂಲಕ ತನಿಯನ ಮೂಲಕ ತೆರೆದಿಡುತ್ತಾರೆ. 


ತನಿಯನ ದೋಣಿಗಿಂತ ಸುಮಾರು 40 ಪಟ್ಟು ದೊಡ್ಡ ದೋಣಿ ಪಡವು. ಅವುಗಳ ರೀತಿ-ನೀತಿಯನ್ನು ಇಲ್ಲಿ ಹೇಳುತ್ತಾರೆ. ಇವುಗಳ ಜೊತೆಜೊತೆಗೆ ದೊಡ್ಡ ಹಡಗುಗಳು, ಮೋಟಾರ್ ಜೋಡಿಸಿದ ಪರ್ಸಿನ್ ದೋಣಿ, ಟ್ರಾಲಿ ದೋಣಿಗಳು ಇವೆಲ್ಲವೂ ಮೀನುಗಳಿಗೆ ಮಾಡುವ ಕಿರಿಕಿರಿ.. ಹೀಗೆ ಸಿರಿವಂತರ ಯಂತ್ರದ ದೋಣಿಗಳು ಬಡ ಮೀನುಗಾರರ ಹೊಟ್ಟೆಗೆ ಹೊಡೆಯುವ ಚಿತ್ರಣವೂ ಇಲ್ಲಿದೆ. 


ಇನ್ನು ನೀರಿಗಿಳಿದರೆ ಕಡಲ ನೀರಿನ ಮೇಲೆ ತೇಲುವ ಎಣ್ಣೆಯ ಪದರ ಹಾಗೂ ಅದಕ್ಕೆ ಕಾರಣ ಜೊತೆಗೆ ಕಡಲಜೀವಿಗಳಿಗೆ ಅವು ಉಂಟು ಮಾಡುವ ಹಾನಿ ಕಣ್ಣಿಗೆ ಕಟ್ಟುವಂತಿದೆ. 


ಕಡಲ ಸ್ವಭಾವದ ಬಗ್ಗೆ ತಿಳಿಯುವುದು ಅತಿ ಅವಶ್ಯಕ. ಎಷ್ಟೋ ಬಾರಿ ತೂಫಾನಿಗೆ ಸಿಲುಕಿದವರು ಅದರಿಂದ ಪಾರಾಗಿ ಬಂದರೂ ಅದರ ಕುರಿತು ಭಯವೊಂದು ಇದ್ದೇ ಇರುತ್ತದೆ. ಆದರೆ, ಕಡಲ ತೆರೆಗಳ ಅಬ್ಬರದ ನಡುವೆಯೂ ಕಡಲ ಒಳಗಿನ ಶಾಂತತೆ ಅವರನ್ನು ಕಾಪಾಡುವ ರಹಸ್ಯ. ಇದು ಅವರಿಗೆ ಅರಿವಿರುತ್ತದೆ. ಭರತ, ಇಳಿತ ದಿನಕ್ಕೆರಡು ಬಾರಿ ಏಕಿರುತ್ತದೆ..? ಅಮಾವಾಸ್ಯೆ ಹುಣ್ಣಿಮೆಗೆ ಕಡಲು ಏರಿಳಿತಗಳಲ್ಲಿ ಬದಲಾವಣೆ ಕಾಣುವುದೇಕೆ..? ಯಾವ ಸಮಯದಲ್ಲಿ ಇದು ಹೆಚ್ಚು..? ಸಮುದ್ರದಲ್ಲಿ ವಾಯುಭಾರ ಕುಸಿತವಾದರೆ ಏನಾಗುತ್ತದೆ, ಅಲೆಗಳು ಹುಟ್ಟುವ ಪರಿ ಇದೆಲ್ಲದರ ಕುರಿತು ತನಿಯನ ಮೂಲಕ ತೆರೆದಿಡುತ್ತಲೇ... ಯಾವ ಬಲೆ ಬೀಸಿದರೆ ಯಾವ ಮೀನು ಸಿಗುತ್ತದೆ ಹಾಗೂ ಯಾವ ಸಂದರ್ಭದಲ್ಲಿ ಯಾವ ಮೀನನ್ನು ಹಿಡಿಯಬಾರದು ಎಂದು ಮೀನುಗಾರರಿಗೆ ಗೊತ್ತಿರುವ ರಹಸ್ಯ ಹಾಗೂ ಅದಕ್ಕೆ ಕಾರಣವನ್ನು ಹೇಳುತ್ತಾರೆ.


ತನಿಯನ ಹೆಂಡತಿ ಸರಸು ಹಾಗೂ ಆಕೆಯ ಮಗಳು ವಾರಿಜಾ ಕಡಲ ತೀರಕ್ಕೆ ಬಂದಿರುವುದು ಬಾರಿ ಜಲ ಕಡಲ ಸ್ನಾನಕ್ಕೆ. ಮಗಳಿಗೆ ಸೀತಾಳೆ ಸಿಡುಬು ಎದ್ದು 13 ದಿನವಾಗಿತ್ತು. ಹಣ್ಣಾಗಿ ಉದುರುವಾಗ ಕಡಲಲ್ಲಿ ಮೀಸಿದರೆ ಒಳ್ಳೆಯದೆಂಬ ಕಡಲ ತೀರದವರ ನಂಬಿಕೆಯ ಫಲವಾಗಿ ಅವರಿಬ್ಬರೂ ಅಲ್ಲಿದ್ದರು. ಅದೆಷ್ಟು ಸಫಲವಾಗುತ್ತದೆ..? ವಾರಿಜಾಳ ಮೂಲಕ ಅವಳ ಪುಟ್ಟ ಕುತೂಹಲದ ಪ್ರಶ್ನೆಗಳು ಹಾಗೂ ಅವುಗಳಿಗೆ ಉತ್ತರಗಳು ನಮಗೆ ದೊರಕುತ್ತಾ ಹೋಗುತ್ತವೆ. ಕಡಲ ಮೀನುಗಳು ಹಾಗೂ ಅವುಗಳ ತರಹೇವಾರಿ ಸಂಗತಿಗಳು ಇಷ್ಟೇ ಅಲ್ಲದೆ ಕಡಲ ದ್ವೀಪ ಹಾಗೂ ಭೂಕಂಪದ ಕುರಿತು ಹಲವಾರು ವಿಶೇಷ ಸಂಗತಿಗಳನ್ನು ಇಲ್ಲಿ ಕಾಣಬಹುದು.


ಕಡಲ ಸಂಪತ್ತು ಎಷ್ಟಿದೆ ಹಾಗೂ ಕಡಲಿನ ಆಳದಲ್ಲಿನ ಪ್ರಾಣಿ ಜಗತ್ತು ಹಾಗೂ ಸಲಕರಣೆಗಳನ್ನು ಬಳಸಿ ಸಂಪತ್ತನ್ನು ಪತ್ತೆ ಹಚ್ಚುವ ಪರಿ ಎಲ್ಲದರ ಕುರಿತು ಗಣಪಯ್ಯನವರು ಹೇಳಿದ ಮಾತುಗಳನ್ನು ತನಿಯ ನೆನಪಿಸಿಕೊಳ್ಳುವ ಮೂಲಕ ನಮಗೂ ಪರಿಚಯಿಸುತ್ತಾರೆ. 


ಪ್ರವಾಸಿ ಸ್ಥಳವಾಗಿರುವ ಕಿನಾರೆ ಹಾಗೂ ಪ್ರವಾಸಿಗಳ ಗುಂಪು ಸೇರುವ ಕೆಲ ಕಡಲ ದಂಡೆಗಳನ್ನು ಸಿರಿವಂತರಿಗೆ ಗುತ್ತಿಗೆ ಕೊಟ್ಟಿರುವ ವಿಚಾರ, ಇದರ ಜೊತೆಗೆ ಕಡಲ ತಳದಿಂದ ಮರಳು ಒಯ್ಯಲು ಬರುವ ಲಾರಿಗಳು ಹಾಗೂ ಅದರಿಂದ ಉಂಟಾಗುವ ದುಷ್ಪರಿಣಾಮಗಳು, ಕಡಲ ಕೊರೆತ ಹೆಚ್ಚಾಗುವ ಪರಿ ಎಲ್ಲವೂ ಕಳಕಳಿಯಿಂದ ಚಿತ್ರಿತವಾಗಿದೆ. 


ತನಿಯನ ಪರಿವಾರ ಹಾಗೂ ಕಮಲುವಿನ ಮೂಲಕ ಕಡಲಿನ ಇನ್ನೂ ಹಲವಾರು ಆಸಕ್ತಿದಾಯಕ ವಿಚಾರಗಳು ಜೊತೆಗೆ ಯೋಚಿಸಬೇಕಾದ ಅಂಶಗಳನ್ನು ಲೇಖಕಿ ಕಟ್ಟಿಕೊಡುತ್ತಾರೆ. ಈ ಪುಸ್ತಕ ಸರಳವಾಗಿದ್ದು, ಮಾಹಿತಿಪೂರ್ಣವಾಗಿಯೂ ಇದೆ. ಮಕ್ಕಳಿಗೂ ಆರಾಮವಾಗಿ ಓದಿಸಬಹುದಾದ ಪುಸ್ತಕ. ಕಥಾರೂಪದಲ್ಲಿ ಮಾಹಿತಿಯುಕ್ತವಾಗಿ ಕಟ್ಟಿಕೊಟ್ಟಿರುವ ಚಿತ್ರಣಗಳು ಇಷ್ಟವಾಗುತ್ತವೆ. 


~ವಿಭಾ ವಿಶ್ವನಾಥ್

ಅಗ್ನಿ ಪುಷ್ಪ (ಪುಸ್ತಕ ಯಾನ - 434)


ಪುಸ್ತಕದ ಶೀರ್ಷಿಕೆ : ಅಗ್ನಿ ಪುಷ್ಪ

ಮೂಲ ಲೇಖಕರು : ಮಹಾಶ್ವೇತಾದೇವಿ

ಅನುವಾದಕರು : ಡಾ. ನಿರುಪಮಾ

ಪ್ರಕಾಶಕರು : ವಿಕ್ರಮ್ ಪ್ರಕಾಶನ

ಮರು ಮುದ್ರಣ : 2023

ಪುಟಗಳು : 148

ಬೆಲೆ : 140 ರೂ.


ಅಗ್ನಿ ಪುಷ್ಪ ಇದು ಮಹಾ ಶ್ವೇತಾದೇವಿಯವರ '1084ರ ತಾಯಿ ?' ಎಂಬ ಬಂಗಾಲಿ ಕಾದಂಬರಿಯ ಅನುವಾದ. 


ಇದು ಸುಜಾತ ಎಂಬ ತಾಯಿಯ ನೋವನ್ನು ಹಾಗೂ ಆಕೆಯ ಭಾವಗಳನ್ನು ಸ್ಪಷ್ಟವಾಗಿ ಕಟ್ಟಿಕೊಡುವ ಕೃತಿ. 'ಹತ್ತು ಮಕ್ಕಳ ತಾಯಿಯಾದರೂ ಸತ್ತ ಮಗನನ್ನು ಮರೆಯುವುದಿಲ್ಲ.' ಎಂಬ ಗಾದೆ ಮಾತೇ ಇದೆ. ತನ್ನ ನಾಲ್ವರು ಮಕ್ಕಳಲ್ಲಿ ಆಪ್ತನಾಗಿದ್ದ, ಪ್ರೀತಿಯ ಕಿರಿ ಮಗ ವ್ರತಿ ಚಟರ್ಜಿಯ ಗತವನ್ನು, ಜೊತೆಜೊತೆಗೆ ತನ್ನ ಬದುಕನ್ನು ಸುಜಾತ ತೆರೆದಿಡುತ್ತಾರೆ. 


ಜನವರಿ 17 ಸುಜಾತಾಳ ಬದುಕಿನಲ್ಲಿ ಬಹಳ ಬದಲಾವಣೆಯನ್ನು ಮೂಡಿಸಿದ ದಿನಾಂಕ. ಮಗ ವ್ರತಿ ಚಟರ್ಜಿ ಹುಟ್ಟಿದ್ದು ಜನವರಿ 17, ಸತ್ತದ್ದು ಕೂಡ ಜನವರಿ 17ರಂದೇ... ಆದರೆ, 2೦ ವರ್ಷಗಳ ವ್ಯತ್ಯಾಸವಿದೆ. ಆತ ಹುಟ್ಟಿದ ದಿನವೂ ಆಕೆ ಒಂಟಿಯಾಗಿಯೇ ನರ್ಸಿಂಗ್ ಹೋಂಗೆ ಹೋಗಿ ಹೆರಿಗೆ ಮಾಡಿಸಿಕೊಂಡಿದ್ದಳು. ಮೊದಲ ಮಗ ಜ್ಯೋತಿ, ಎರಡನೆಯವಳು ನೀಪಾ, ಮೂರನೆಯ ಮಗಳಾದ ತುಲೀ ಹುಟ್ಟಿದ ಆರು ವರ್ಷದ ನಂತರ ಹುಟ್ಟಿದವನೇ ವ್ರತಿ. ಅತ್ತೆಯ ಅಸಡ್ಡೆ ಜೊತೆಗೆ ಗಂಡನ ನೆರವೂ ಸಿಕ್ಕಿರಲಿಲ್ಲ. 


ಜನವರಿ 17ರಂದು ಕರೆ ಮಾಡಿದ ಆಫೀಸರ್ 'ಕಾಂಟಾ ಪುಷ್ಕರ್'ಗೆ ಬರಲು ಹೇಳಿಡಿದರು. ಆಗಲೂ ಸುಜಾತ ಒಂಟಿಯೇ. ಗಂಡ ದಿವ್ಯನಾಥ ಮಗ ಸತ್ತು ಹೋಗಿದ್ದಾನೆಂದು ತಿಳಿದೊಡನೆ ಆ ಸಮಾಚಾರವನ್ನು ಹೇಗೆ ಅಡಗಿಸಬೇಕೆಂದು ಯೋಚಿಸುತ್ತಿದ್ದ. ದೊಡ್ಡ ಮಗನೂ ತಂದೆಯ ದಾರಿಯನ್ನೇ ಹಿಡಿದಿದ್ದ. ವ್ರತಿಯ ಸಾವಿನೊಂದಿಗೆ ಸುಜಾತಾಳ ಮನದಲ್ಲಿ ಅವಳ ಗಂಡನೂ ಸತ್ತಿದ್ದ. ದಿವ್ಯನಾಥನಂತೂ ಯಾರ್ಯಾರನ್ನೋ ಹಿಡಿದು ಮಾರನೇ ದಿನದ ವರ್ತಮಾನ ಪತ್ರಿಕೆಯಲ್ಲಿ ನಾಲ್ಕು ಜನ ತರುಣರು ಸತ್ತ ಸುದ್ದಿ ಪ್ರಕಟವಾಗಿದ್ದರೂ  ತನ್ನ ಮಗ ವ್ರತಿ ಚಟರ್ಜಿಯ ಹೆಸರನ್ನು ಮರೆಮಾಚುವುದರಲ್ಲಿ ಸಫಲವಾಗಿದ್ದ. ಅದಾದ ಮೂರು ತಿಂಗಳು ಮಂಕು ಕವಿದಂತೆ ಹಾಸಿಗೆ ಹಿಡಿದಿದ್ದ ಸುಜಾತ ಮೂರು ತಿಂಗಳ ನಂತರ ಹೇಗೋ ಚೇತರಿಸಿಕೊಂಡು ಬ್ಯಾಂಕಿನಲ್ಲಿನ ತನ್ನ ಉದ್ಯೋಗಕ್ಕೆ ಹಾಜರಾಗಿದ್ದಳು. ಅವಳು ಉದ್ಯೋಗ ಪಡೆದದ್ದು ಹಾಗೂ ದುಡಿಯಲು ಹೋದ ದಿನಗಳ ಪಡಿಪಾಟಲು ಬೇರೆಯೇ ಇದೆ. 


ದೇಶಕ್ಕೆ ಸ್ವಾತಂತ್ರ್ಯ ಬಂದ ಎರಡು ದಶಕಗಳಲ್ಲಿ 1083 ಜನ ಹತರಾಗಿದ್ದಾಗ 1084 ಯವನೇ ವ್ರತಿ. ಸತ್ತ ತರುಣರ ಪಟ್ಟಿ ಬರೆದರೆ ಅದರ ವ್ರತಿಯ ಹೆಸರು ಕಾಣಿಸುತ್ತದೆಯೇ ಹೊರತು ವರ್ತಮಾನ ಪತ್ರಿಕೆಗಳಲ್ಲಿ ಆ ಹೆಸರೇ ಕಾಣಸಿಗುವುದಿಲ್ಲ. ಹಾಗೆ ಮಾಡಿದ್ದು ಆತನ ತಂದೆ. 


ವುತಿಯ ಸಾವು ಎಷ್ಟು ಕ್ರೂರವಾಗಿತ್ತೆಂದರೆ "ಯಾವುದೋ ಕತ್ತಿಯಿಂದಲೋ ಅಥವಾ ಬೇರೆ ಆಯುಧದಿಂದಲೋ ಬಲವಾದ ಹಿಡಿಯಿಂದ ಕೊಚ್ಚಿ ಹಾಕಿದ ಹಾಗೆ ಮುಖ, ಮೂಗು, ಕಣ್ಣು ಆಕಾರ ತಿಳಿಯದ, ಹಿಟ್ಟಿನ ಮುದ್ದೆಯಂತೆ ಜಜ್ಜಿ ಹಾಕಿರುವ ಮುಖ. ಮುಖವನ್ನು ಸರಿಯಾಗಿ ಬೆರಳಿನಿಂದ ಸ್ಪರ್ಶಿಸೋಣವೆಂದರೆ ಒಂದು ಅಂಗುಲದಷ್ಟಾದರೂ ನುಣುಪಾದ ಚರ್ಮ ಉಳಿದಿರಲಿಲ್ಲ. ಎಲ್ಲಾ ಮಾಂಸದ ಮುದ್ದೆಯಂತೆ" ಆಗಿತ್ತು. ಮುಖವೇ ಹೀಗಿದ್ದರೆ.. ಇನ್ನು ದೇಹದ ಕಥೆ ಕೇಳುವುದು ಬೇಡ.


ಮನೆಯಲ್ಲಿ ವ್ರತಿಯ ಫೋಟೋ ತೆಗೆದು ಹಾಕಲಾಗಿತ್ತು. ಮೂರನೇ ಮಹಡಿಯ ಆತನ ಕೊನೆಗೆ ಬೀಗ ಹಾಕಲಾಗಿತ್ತು. ಅವನಿಗೆ ಸಂಬಂಧಿಸಿದ ಪ್ರತಿಯೊಂದನ್ನೂ ಅಲ್ಲಿಡಲಾಗಿತ್ತು. ಆದರೆ, ಶೆಲ್ಫ್ ನಲ್ಲಿದ್ದ ಅವನ ಪುಸ್ತಕಗಳು, ಸೂಟ್ಕೇಸ್ ಅನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದರು. 


ವ್ರತಿ ಅಂತಹ ಸಾವನ್ನು ಅನುಭವಿಸುವುದನ್ನು ತಡೆಯಲು ತಾನೇನು ಮಾಡಬೇಕಾಗಿತ್ತು.. ತನ್ನ ಕರ್ತವ್ಯದಲ್ಲಿ ಏನು ಲೋಪವಾಗಿತ್ತು ಎಂದು ಯೋಚಿಸುತ್ತಲೇ ಸುಜಾತ ಎಲ್ಲವನ್ನೂ ತಿರುಗಿ ಪರಾಮರ್ಶಿಸುತ್ತಿದ್ದಳು. 


ದಿವ್ಯನಾಥನಿಗೆ ವ್ರತಿಯನ್ನು ಕಂಡರೆ ಅಸಹ್ಯ. 'ಮದರ್ಸ್ ಚೈಲ್ಡ್' ಎನ್ನುತ್ತಿದ್ದ. ನನ್ನ ಮೇಲೆ ದ್ವೇಷ ಹುಟ್ಟಿಸಿದ್ದು ನೀನೇ ಎಂದು ಸುಜಾತಳಿಗೆ ಹೇಳುತ್ತಿದ್ದ. ಅಮ್ಮನ ಮಗ ತನ್ನ ತಾಯಿಯೂ ಗುರುತಿಸಲಾಗದಷ್ಟು ಬದಲಾಗುತ್ತಿದ್ದ. ಆ ಬದಲಾವಣೆಯ ಮೇಲೆ ಬಲವಾದ ಸಂದೇಹ ಸುಜಾತಾಳಿಗೆ ಏಕೆ ಬರಲಿಲ್ಲ..?


ಜ್ಯೋತಿಗೆ ಈಗಾಗಲೇ ಮದುವೆಯಾಗಿ ಸೊಸೆ ಬಿ ನೀ ಮನೆ ತುಂಬಿದ್ದಳು ಹಾಗೂ ಮೊಮ್ಮಗ ಸುಮನ್ ಇದ್ದನು. ನೀಪಾಳಿಗೂ ವಿವಾಹವಾಗಿತ್ತು. ತುಲೀಯ ನಿಶ್ಚಿತಾರ್ಥ ಜನವರಿ 17ರಂದೇ ನಿಶ್ಚಯವಾಗಿದ್ದು ವಿಪರ್ಯಾಸ. 


ನಂದಿನಿ ವ್ರತಿಯನ್ನು ಪ್ರೀತಿಸಿದ ಹುಡುಗಿ. ಸುಜಾತ ಆಕೆಯನ್ನು ನೋಡಿರಲಿಲ್ಲ. ಆದರೆ ಚಿಕ್ಕಂದಿನಿಂದ ವ್ರತಿಯನ್ನು ನೋಡಿಕೊಳ್ಳಲು ಇದ್ದ ಹೇಮಾಳಿಗೆ ಅವಳ ಕುರಿತು ಗೊತ್ತಿತ್ತು. ನಂದಿನಿಯಿಂದ ಬಂದ ಕರೆ ಸುಜಾತಾಳಿಗೆ ನಂದಿನಿಯನ್ನು ಭೇಟಿಯಾಗಲು ಒಂದು ಅವಕಾಶವನ್ನು ಒದಗಿಸಿತ್ತು. 


ಸುಜಾತರಿಗೆ ಈಗ ಅಪೆಂಡಿಸೈಟಿಸ್ ಕಾಡಿಸುತ್ತಿತ್ತು. ಆಪರೇಷನ್ ಗೆ ಇನ್ನೂ ಸರಿಯಾದ ಸಮಯ ಕೂಡಿ ಬಂದಿರಲಿಲ್ಲ. ಅದರಲ್ಲಿ ರಿಸ್ಕ್ ಫ್ಯಾಕ್ಟರ್ ಎಷ್ಟಿತ್ತು ಎಂಬುದನ್ನು ಸುಜಾತ ಈಗಾಗಲೇ ತಿಳಿದುಕೊಂಡಿದ್ದಳು. 


ವ್ರತಿಯ ವಿಚಾರಕ್ಕಾಗಿ ಸುಜಾತ ಗಂಡನನ್ನು, ಅತ್ತೆಯನ್ನು ಧಿಕ್ಕರಿಸಿ ನಡೆಯುತ್ತಿದ್ದಳು. ಉಳಿದ ಮಕ್ಕಳು ತನಗೆ ಇಷ್ಟ ಬಂದಂತೆ ಸ್ವೇಚ್ಛೆಯಾಗಿರುವಾಗ ವ್ರತಿಯನ್ನು ಅವೆಲ್ಲದರಿಂದ ದೂರವಿರಿಸಿ ಕಾಪಾಡಿಕೊಂಡು ಬಂದಿದ್ದಳು. ಎಲ್ಲರಿಗಿಂತ ವ್ರತಿಗೆ ಹಠಮಾರಿತನ, ಛಲ ಹೆಚ್ಚಾಗಿಯೇ ಇತ್ತು. ತಂದೆಯ ಕುರಿತು ಆತನಿಗೆ ಗೊತ್ತಾಗಿದ್ದ ಸತ್ಯ, ಅವೆಲ್ಲವೂ ಗೊತ್ತಿದ್ದರೂ ತಂದೆಯನ್ನು ಬೆಂಬಲಿಸುತ್ತಿರುವ ಉಳಿದವರೊಡನೆ ಆತ ಬೆರೆಯಲು ಇಚ್ಚಿಸುತ್ತಿರಲಿಲ್ಲ. ಅಷ್ಟೇ ಅಲ್ಲದೆ ಮತ್ತೊಂದು ಕಾರಣವೂ ಇತ್ತು. 


ಸುಜಾತ ಅಂದು ನಂದಿನಿಯನ್ನು ಭೇಟಿಯಾಗುವ ಮೊದಲು ಸಮೂವಿನ ಮನೆಗೆ ಹೋಗಿದ್ದಳು. ಒಂದು ವರ್ಷದ ಹಿಂದೆಯೂ ಅಲ್ಲಿಗೆ ಹೋಗಿದ್ದಳು. ಮತ್ತೆ ಮತ್ತೆ ಸಮೂ, ಪಾರ್ಥ, ವ್ರತಿಯರನ್ನು ಸಮೂವಿನ ತಾಯಿಯ ಮಾತಿನಲ್ಲಿ ಕಣ್ತುಂಬಿಸಿಕೊಳ್ಳಲು. ಆದರೆ, ಅದಾದ ನಂತರ ಅವಳಿಗೆ ಅಂತಹ ಕ್ಷಣಗಳು ಮತ್ತೆ ದೊರೆಯಲಿಲ್ಲ. ಅದಕ್ಕೆ ಕಾರಣ ಅಂತಸ್ತು, ಸಾಮಾಜಿಕ ಸ್ಥಿತಿಗತಿಗಳು ಮಾತ್ರವಲ್ಲದೆ ಬೇರೆಯ ಕಾರಣವೂ ಇದ್ದಿತು. ಅದೇನು..?


ಅಷ್ಟಕ್ಕೂ ರಾತ್ರಿ ನಡೆದದ್ದರೂ ಏನು..? ವ್ರತಿ ಹಾಗೂ ಸಹಚರರು ಬಲಿಯಾದದ್ದು ಯಾವ ಕಾರಣಕ್ಕೆ ಹಾಗೂ ಹೇಗೆ..? ಸಮೂನ ತಂದೆ ಆ ಸಂದರ್ಭದಲ್ಲಿ ಏನೆಲ್ಲಾ ಮಾಡಿದರೂ ಅವರನ್ನು ಉಳಿಸಲಾಗಲಿಲ್ಲ. ಘೋರ ಮಾರಣಹೋಮ ಎಷ್ಟು ಜನರ ಬಾಳಲ್ಲಿ ದುರಂತಗಾಥೆಯನ್ನು ಬರೆದಿತ್ತು..? ವ್ರತಿಗೆ ಮೋಸ ಮಾಡಿದ್ದು ಯಾರು?


ನಂದಿನಿಯನ್ನು ಭೇಟಿಯಾದಾಗ... ವ್ರತಿಗೆ ಯಾವೆಲ್ಲಾ ಸತ್ಯಗಳು ಗೊತ್ತಿದ್ದವು ಹಾಗೂ ಆತನ ಮನಸ್ಸು ಯಾವ ರೀತಿ ಇತ್ತು ಎಂಬುದರ ಕೆಲ ಚಿತ್ರಣಗಳು ಸುಜಾತರಿಗೆ ತಿಳಿಯುತ್ತಾದರೂ ಈಗ ಪರಿಸ್ಥಿತಿಯನ್ನು ಬದಲಾಯಿಸುವಂತಿರಲಿಲ್ಲ. ಆದರೆ, ನಂದಿನಿಯಾ ಪರಿಸ್ಥಿತಿಯೂ ಅವಳಿಗೆ ಸಹಾಯಕವಾಗಿರಲಿಲ್ಲ. ನಂದಿನಿ ಹೇಗಿದ್ದಳು..? ಯಾವೆಲ್ಲಾ ವಿಚಾರಗಳನ್ನು ತೆರೆದಿಟ್ಟಳು..? 


ಸುಜಾತ ಮರಳಿ ಬಂದಾಗ ಮಗಳು ತುಲೀ ಹಾಗೂ ಬಿನೀ ನಡುವೆ ಆಗಿದ್ದ ಮಾತಿನ ಚಕಮಕಿಗಳು ಹೇಮಾಳ ಮೂಲಕ ಈಕೆಗೆ ಮುಟ್ಟಿದ್ದು ಹೇಗೆ..? ಸುಜಾತ ಅಂದು ಯಾವ ಕಾರಣಕ್ಕಾಗಿ ನಿಶ್ಚಿತಾರ್ಥದ ತಯಾರಿಗಳಲ್ಲಿ ಪಾಲ್ಗೊಳ್ಳದೆ ಹೊರಗಿದ್ದಳು..?


ತುಲೀಯನ್ನು ವಿವಾಹವಾಗಲಿದ್ದ ಹುಡುಗ ಟೋನಿ ಕಪಾಡಿಯ ಹೇಗಿದ್ದ..? ಅದೇ ತಾರೀಖಿನಂದು ನಿಶ್ಚಿತಾರ್ಥವನ್ನು ನಿಶ್ಚಯಿಸಿದ್ದು ಯಾರು ಹಾಗೂ ಹೇಗೆ..? ಅಂದು ನಡೆದ ಸಮಾರಂಭದಲ್ಲಿ ಸುಜಾತಾಳ ಉಪಸ್ಥಿತಿ ಹೇಗಿತ್ತು..?


ಸುಜಾತಾಳ ನೋವು ಕೇವಲ ಅಪೆಂಡಿಸೈಟಿಸ್ ನದ್ದು ಮಾತ್ರವಲ್ಲ, ಅವಳಿಗೆ ಬಂದ ನೋವು ವ್ರತಿ ಹುಟ್ಟಿದಾಗ ಬಂದ ನೋವಿನ ನೆನಪನ್ನೇ ಮಾಡಿಸುತ್ತಿತ್ತು. 24 ಗಂಟೆಯ ಚಿತ್ರಣದ ಸುಜಾತಾಳ ಪ್ರತಿ ನೋವೂ ನಮಗೂ ಕಾಡುತ್ತಲೇ ಸಾಗುತ್ತದೆ. ಕಾದಂಬರಿ ಓದುವಾಗ ಹಾಗೂ ಓದಿದ ನಂತರ ತಲ್ಲಣ ಹುಟ್ಟಿಸುತ್ತಲೇ ಇರುವ ಕಾದಂಬರಿ ಇದು. 


ಬಂಗಾಳದ ಪರಿಸರ, ಹೆಸರುಗಳನ್ನು ಹೊರತುಪಡಿಸಿದರೆ ಕನ್ನಡದ್ದೇ ಎನ್ನಬಹುದಾದಷ್ಟೇ ಚೆಂದವಾಗಿ ಅನುವಾದ ಮೂಡಿಬಂದಿದೆ. ಅಷ್ಟು ಸುಲಭಕ್ಕೆ ಮರೆಯಲಾಗದ ಓದು ಇದು. 


~ವಿಭಾ ವಿಶ್ವನಾಥ್

ಬಂಗಾರದ ಬಲೆ (ಪುಸ್ತಕ ಯಾನ - 433)



ಪುಸ್ತಕದ ಶೀರ್ಷಿಕೆ : ಬಂಗಾರದ ಬಲೆ 

ಲೇಖಕರು : ಎ. ಪಂಕಜ

ಪ್ರಕಾಶಕರು : ಸಾಹಿತ್ಯ ನಂದನ ಪ್ರಕಾಶನ

ಪ್ರಥಮ ಮುದ್ರಣ : 1979

ಮೂರನೇ ಮುದ್ರಣ : 2009 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 144

ಬೆಲೆ : 70 ರೂ. 


ಹೆಣ್ಣೊಬ್ಬಳ ಆಂತರ್ಯದ ತೊಳಲಾಟ ಜೊತೆಗೆ ಮನೆಯಲ್ಲಿನ ಸಂದರ್ಭ, ಅಸಡ್ಡೆ ಹಾಗೂ ಅತಿ ನಂಬಿಕೆಯ ಜೊತೆಗೆ ಪರಿಪಕ್ವವಿಲ್ಲದ ತೀರ್ಮಾನಗಳಿಂದ ತಾನು ತೋಡಿದ ಹಳ್ಳಕ್ಕೆ ತಾನೇ ಮುಗ್ಗರಿಸಿ ಬಿದ್ದು ಮುಂದಿನ ದಾರಿ ಕಾಣದೆ ಹತಾಶೆ ಹಾಗೂ ನೋವಿನ ತೊಳಲಾಟದಲ್ಲಿ ಬದುಕನ್ನು ಬೇರೆಯದೇ ಹಾದಿಗೆ ಕೊಂಡು ಹೋದ ಇಂದಿರಾಳ ಕಥಾನಕ ಇಲ್ಲಿದೆ. ಕಾದಂಬರಿಯ ಅಂತ್ಯ ಇನ್ನೂ ಕಾಡುತ್ತಲೇ ಇದೆ. 


ಜಾನಕಮ್ಮ ಹಾಗೂ ಶ್ಯಾಮರಾಯರು ದಂಪತಿಗಳಿಗೆ ಮೂವರು ಮಕ್ಕಳು. ರಾಯರು ರೆವೆನ್ಯೂ ಇಲಾಖೆಯಲ್ಲಿ ಗುಮಾಸ್ತರಾಗಿದ್ದವರು. ಮಾಸಿಕ ವೇತನದ ಜೊತೆಗೆ ಮೇಲು ಸಂಪಾದನೆ ಚೆನ್ನಾಗಿಯೇ ಇತ್ತು. ಮನೆಯಲ್ಲಿ ಜಾನಕಮ್ಮನವರ ಸ್ವಭಾವ ವಿಚಿತ್ರ. ಬೇರೆಯವರಿಗೆ ಉಪದೇಶ ನೀಡುವುದನ್ನು ತಾವು ಮಾತ್ರ ಪಾಲಿಸುತ್ತಿರಲಿಲ್ಲ. ಮಕ್ಕಳ ಮೇಲೆ ರೇಗುವುದು, ಗಂಡನನ್ನು ಎದುರಿಸುವುದು, ಸದಾ ಗೊಣಗುವುದು ಹೀಗೆಯೇ.. 


 ಗಂಡು ಮಗುವಿನ ಆಸೆಯಲ್ಲಿದ್ದ ಜಾನಕಮ್ಮನಿಗೆ ಚೊಚ್ಚಲ ಮಗು ಹೆಣ್ಣಾಗಿದ್ದು ನಿರಾಸೆ ತಂದಿತ್ತಾದರೂ ಆ ಮಗು ಪುಷ್ಪಳನ್ನು ಚೆನ್ನಾಗಿಯೇ ನೋಡಿಕೊಂಡರು. ಎರಡನೆಯ ಮಗು ಇಂದಿರಾಳ ಹುಟ್ಟಿನಲ್ಲಿ ಮತ್ತಷ್ಟು ನಿರಾಸೆಯಾಗಿದ್ದು ಮಗುವನ್ನು ಪೋಷಿಸಲು ಆಸಕ್ತಿ ತೋರಲಿಲ್ಲ. ಆದರೆ, ತಂದೆಯ ಪ್ರೀತಿಯಲ್ಲಿ ತಾಯಿಯ ಕಡೆಗಣಿಸುವಿಕೆಯಲ್ಲಿ ಬೆಳೆದ ಇಂದಿರಾಳಿಗೆ ತಮ್ಮ ಲಕ್ಷ್ಮಣ ಬಂದಾಗ ಆತನಿಗೂ, ತನಗೂ ತಾಯಿ ತೋರುತ್ತಿರುವ ಭೇದ-ಭಾವ ಹಾಗೂ ಅಸಡ್ಡೆಯ ಭಾಗಗಳು ಢಾಳಾಗಿಯೇ ಕಾಣತೊಡಗಿದವು. 


ಮೊದಲನೆಯ ಮಗಳು ಪುಷ್ಪಳಿಗೆ ಬೇಗ ವಿವಾಹವಾದರೆ ಇಂದಿರಾಳ ವಿವಾಹದ ಸಂದರ್ಭದಲ್ಲಿಯ ಕಾಲಘಟ್ಟವೂ ಬದಲಾಗಿತ್ತು. ಜಾಣೆಯಾಗಿದ್ದ ಇಂದಿರಾಳನ್ನು ತಂದೆ ಓದಿಸಿದರು. ಓದಿಸಿದಷ್ಟೇ ಅಲ್ಲದೆ ಆಕೆ ಕೆಲಸಕ್ಕೆ ಹೋಗಲು ಸಹ ಒಪ್ಪಿದರು. ರೂಪವಂತೆ ಹಾಗೂ ಜಾಣೆಯಾಗಿದ್ದ ತನ್ನ ಮಗಳನ್ನು ಯಾರಾದರೂ ಕಣ್ಮುಚ್ಚಿ ಮದುವೆಯಾಗುತ್ತಾರೆ ಎಂದು ನಂಬಿದ್ದವರಿಗೆ ವರದಕ್ಷಿಣೆಯ ಭೂತ ಕಾಡತೊಡಗಿತ್ತು. ಕೆಲಸಕ್ಕೆ ಹೋಗುವ ಆಸಕ್ತಿ ತೋರಿದ ಇಂದಿರಾಳಿಗೆ ಹಳೆಯ ಪರಿಚಿತರನ್ನು ಹಿಡಿದು ಸೆಂಟ್ರಲ್ ಕಾಲೇಜಿನ ಲೈಬ್ರರಿಯನ್ ಆಗಿ ಕೆಲಸ ಕೊಡಿಸಿದರು. 


ಓದುವುದರಲ್ಲಿ, ನಡತೆಯಲಿ ಹಾಗೂ ಕೆಲಸಕ್ಕೆ ಸೇರುವಾಗ, ವಿವಾಹ ತಡವಾಗಿದ್ದಕ್ಕೆ ಹೀಗೆ ಪ್ರತಿಯೊಂದರಲ್ಲಿಯೂ ಇಂದಿರಾ ಕುರಿತು ಜಾನಕಮ್ಮ ಕೊಂಕು ತೆಗೆಯುತ್ತಿದ್ದರು. ಅಲ್ಲದೆ, ಅದೇ ಸಮಯಕ್ಕೆ ಲಕ್ಷ್ಮಣನಿಗೆ ಓದಿಗೆ ನೀಡುತ್ತಿದ್ದ ಪ್ರೋತ್ಸಾಹ ಜೊತೆಗೆ ಮಗ ಎಂದು ಆತನನ್ನು ತಲೆಯ ಮೇಲೆ ಕೂರಿಸಿಕೊಳ್ಳುತ್ತಿದ್ದ ವರ್ತನೆಗಳು ಹಿಂದಿರಾಳಿಗೆ ಕ್ರಮೇಣ ತಾನು ತಾಯಿಗೆ ಬೇಡದವಳು ಎನ್ನುವ ಭಾವವನ್ನು ಹುಟ್ಟಿಸಿದಷ್ಟೇ ಅಲ್ಲದೆ ತಾನು ಏನೇ ಸಾಧನೆ ಮಾಡಿದರು ತಾಯಿಯನ್ನು ಒಪ್ಪಿಸಲಾಗದು ಎಂಬ ಅರಿವಾಗಿತ್ತು.


ಮನೆಯಲ್ಲಿ ಸಿಗದ ಆ ಪ್ರೀತಿ ರಾಜಶೇಖರನಿಂದ ಸಿಕ್ಕಾಗ ಅತ್ತ ಆಕರ್ಷಿತಳಾಗಿದ್ದಳು ಇಂದಿರಾ. ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ರಾಜಶೇಖರ ಅವಳು ಹತ್ತುತ್ತಿದ್ದ ಬಸ್ ನಿಲ್ದಾಣದಲ್ಲಿಯೇ ಹತ್ತಿ ಅವಳು ಕೆಲಸಕ್ಕೆ ಹೋಗುತ್ತಿದ್ದ ನಿಲ್ದಾಣದಲ್ಲಿ ಇಳಿಯುತ್ತಿದ್ದ. ಇಬ್ಬರೂ ನೋಡಿ ಪರಿಚಿತರಷ್ಟೇ ಆಗಿದ್ದವರು. ಇಂದಿರಾ ಒಮ್ಮೆ ಬಸ್ ರಷ್ ನಲ್ಲಿ ಪರ್ಸು ಕಳೆದುಕೊಂಡಾಗ ಅದು ಆತನಿಗೆ ಸಿಕ್ಕಿ ಇಬ್ಬರ ಪರಿಚಯ ಕ್ರಮೇಣ ಬಿಟ್ಟಿರಲಾರದ ಪ್ರೇಮಕ್ಕೆ ತಲುಪಿತು. ಇದಕ್ಕೆ ಮುಂದಡಿ ಇಟ್ಟದ್ದು ರಾಜಶೇಖರನೇ..


ಇವರ ಓಡಾಟ ಎಲ್ಲೆ ಮೀರಿರಲಿಲ್ಲ. ಜೊತೆಗೆ ಇಂದಿರಾ ರಾಜಶೇಖರನಿಗೆ ಆ ಸಲುಗೆಯನ್ನು ನೀಡಿರಲಿಲ್ಲ. ಆದರೆ, ಇವರಿಬ್ಬರ ಓಡಾಟದ ಕುರಿತು ಶ್ಯಾಮರಾಯರಿಗೆ ಅನಾಮಧೇಯ ಪತ್ರವೊಂದು ತಲುಪಿತ್ತು. ಅದರಲ್ಲಿ ರಾಜಶೇಖರನ ನಡತೆ ಸರಿಯಿಲ್ಲವೆಂದು ನಮೂದಾಗಿತ್ತು.


ಅಷ್ಟರಲ್ಲಾಗಲೇ ರಾಜಶೇಖರ ಹಳ್ಳಿಯಲ್ಲಿದ ತನ್ನ ತಂದೆ-ತಾಯಿ ರಾಮಾಚಾರರು ಹಾಗೂ ಗೌರಮ್ಮನವರ ಬಳಿ ಇಂದಿರಾಳನ್ನು ಕರೆದುಕೊಂಡು ಹೋಗಿ ಮದುವೆಗೆ ಒಪ್ಪಿಗೆ ಪಡೆದಿದ್ದ. ಇದ್ದೊಬ್ಬ ಮಗ ಈಗಲಾದರೂ ಮದುವೆಗೆ ಒಪ್ಪಿದನಲ್ಲ ಎಂದೂ, ಸುಶಿಕ್ಷಿತ ಹಾಗೂ ಸುಸಂಸ್ಕೃತ ಇಂದಿರಾಳ ನಡತೆಯು ಇಷ್ಟವಾಗಿ ರಾಮಾಚಾರರು ತಾವೇ ಶ್ಯಾಮರಾಯರಿಗೆ ಪತ್ರ ಬರೆದರು.


ಜಾತಿ ಒಂದೇ ಆಗಿದ್ದರೂ.. ಅದರಲ್ಲೂ ಮೇಲು-ಕೀಳೇಂದು ಇಂದಿರಮ್ಮ ಕೊಂಕು ತೆಗೆದು ಇಷ್ಟವಿಲ್ಲದ ಮದುವೆಯನ್ನು ಹೇಗೋ ಮಾಡಿ ಮುಗಿಸಿದರು. ಅದಾದ ನಂತರ ಇಂದಿರಾ ಮತ್ತೆ ಎಂದಿಗೂ ತಾಯಿಯ ಮನೆಗೆ ಹೋಗಲು ಇಷ್ಟಪಡಲಿಲ್ಲ. ಶ್ಯಾಮರಾಯರೇ ಬಂದು ಮಗಳು-ಅಳಿಯನನ್ನು ನೋಡಿ ಹೋಗುತ್ತಿದ್ದರು.


ಮದುವೆಗೆ ಮುನ್ನವೇ ರಾಜಶೇಖರ ತನಗೆ ಹಳೆಯ ಗೆಳತಿಯರ ಸ್ನೇಹವಿತ್ತೆಂದು ಹೇಳಿದ್ದನು. ಇಂದಿರಾ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳದೆ ತಮ್ಮ ವಿವಾಹದ ನಂತರ ಅದಾವುದನ್ನೂ ಮುಂದುವರಿಸಬಾರದೆಂದು ಕಟ್ಟುನಿಟ್ಟಾಗಿಯೇ ಎಚ್ಚರಿಸಿದ್ದಳು. ಬೇರಾವ ಹೆಣ್ಣನ್ನೂ ಮದುವೆಯಾಗಲು ಮುಂದಾಗದ ರಾಜಶೇಖರನ ಬದುಕಿನಲ್ಲಿ ಹೆಂಡತಿಯ ಸ್ಥಾನ ಪಡೆಯಲು ಹೊರಟದ್ದು ಇಂದಿರಾ ಮಾತ್ರ. ಅದು ಅವಳಿಗೆ ಮತ್ತಷ್ಟು ವಿಶ್ವಾಸ ತಂದಿತ್ತು. ಹಿಂದಿನದ್ದಾವುದೂ ಮರುಕಳಿಸಲಾರದೆಂದು ನಂಬಿದ್ದಳು ಅವಳು.


ಮಣಿ ಎಂಬಾಕೆ ಬಂದು ತಾನು ಅವಿವಾಹಿತೆಯೆಂದು, ಜೊತೆಗೆ ತನ್ನ ಹೊಟ್ಟೆಯಲ್ಲಿರುವ ಐದು ತಿಂಗಳ ಮಗುವಿಗೆ ರಾಜಶೇಖರನೇ ತಂದೆ ಎಂದು ಹೇಳಿದಾಗ ಇಂದಿರಾ ಅದನ್ನು ಹೇಗೆ ಸ್ವೀಕರಿಸಿದಳು? ರಾಜಶೇಖರನ ಮೇಲೆ ಇಟ್ಟಿದ್ದ ನಂಬಿಕೆ, ಪ್ರೀತಿ ಅವನನ್ನು ಆ ಕಷ್ಟದಿಂದ ಪಾರು ಮಾಡಲು ಪ್ರೇರೇಪಿಸಿದಾಗ ಇಂದಿರಾ ತೆಗೆದುಕೊಂಡ ನಿರ್ಧಾರವೇನು..? ಮಣಿಯ ಪ್ರಸಂಗ ಅವಳ ಮನಸ್ಸಿನ ಮೇಲೆ ಯಾವ ರೀತಿಯ ಘಾಸಿ ಮಾಡಿತು..?


ಬಸುರು ಹಾಗೂ ಬಾಣಂತನದ ಸಮಯದಲ್ಲಿ ಅತ್ತೆಯೇ ತಾಯಿಗಿಂತ ಹೆಚ್ಚಾಗಿ ನೋಡಿಕೊಂಡು ತಾಯಿ ಜೊತೆಗಿಲ್ಲದ ಭಾವವನ್ನು ಇಂದಿರಾಳಿಗೆ ನೀಗಿಸಿದರು. ಮಗಳು ಲಕ್ಷ್ಮಿ ಇಂದಿರಾ ಹಾಗೂ ರಾಜಶೇಖರನ ಬಾಳಿನಲ್ಲಿ ಹೊಸ ಸಂತಸವನ್ನೇ ತಂದಳಾದರೂ.. ಮತ್ತೆ ಕೆಲಸಕ್ಕೆ ಹೋಗುವ ಇಂದಿರಾಳಿಗೆ ಎಲ್ಲವನ್ನು ನಿಭಾಯಿಸುವುದು ಕಷ್ಟವೇ ಆಯಿತು. ಆಗ ಆಕೆ ತೆಗೆದುಕೊಂಡ ನಿರ್ಧಾರವೇನು..? ಅದೇ ಅವಳಿಗೆ ಮುಳುವಾದದ್ದೇಗೆ..?


ಒಳ್ಳೆಯ ನಡತೆ, ಸಂಸ್ಕೃತಿ, ಗುಣ ಎಲ್ಲವೂ ಇದ್ದ ತಂದೆ-ತಾಯಿಗೆ ವ್ಯತಿರಿಕ್ತವಾಗಿದ್ದ ರಾಜಶೇಖರನ ನಿಜ ರೂಪ ಒಮ್ಮೊಮ್ಮೆ ಇಂದಿರಾಳ ಮುಂದೆ ಬಯಲಾಗುತ್ತಿದ್ದಾದರೂ ಆತನ ಮಾತುಗಳು ಮೋಡಿ ಹಾಕಿದಂತೆ, ಆಕೆ ಮಾಟಗಾರನ ಮಾಯಾಜಾಲಕ್ಕೆ ಸಿಕ್ಕಿ ಮಂತ್ರಮುಗ್ಧಳಾದಂತೆ ಎಲ್ಲಾ ಭಯ-ದುಃಖಗಳನ್ನು ಮರೆತು ಹಿಂದಿನದೆಲ್ಲವನ್ನೂ ಕ್ಷಮಿಸಿ ಆತನ ಜೊತೆ ಪ್ರೀತಿಯಿಂದ ಬದುಕಲು ಅಣಿಯಾಗುತ್ತಿದ್ದಳು.


ಆದರೆ, ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇರುತ್ತದೆ. ಇಂದಿರಾ ಯಾವುದು ತನ್ನ ಜೀವನದಲ್ಲಿ ಬೇಡವೆಂದು ಆಶಿಸಿದ್ದಳೋ, ಅದಷ್ಟೂ ನಡೆಯಿತು. ರಾಜಶೇಖರ ಸಿಗರೇಟು, ಕುಡಿತ, ಹೆಣ್ಣು ಮೂರಕ್ಕೂ ಬಲಿಯಾಗಿದ್ದ. ಯಾವುದು ಅಸಹ್ಯ, ವ್ಯಭಿಚಾರ, ಮಹಾಪಾಪ, ಮಾಡಬಾರದೆಂದು ತಿಳಿದಿದ್ದಳೋ ಅಷ್ಟೂ ತನ್ನ ಮನೆಯಲ್ಲಿಯೇ ನಡೆದಾಗ ಘಾಸಿಯಾದ ಅವಳ ಮನಸ್ಸು ಚೇತರಿಸಿಕೊಳ್ಳಲು ಸಾಧ್ಯವೇ..?


ಚೇತರಿಸಿಕೊಳ್ಳಲು ಒಳ್ಳೆಯ ಆಸರೆಯೋ ಅಥವಾ ಮನ ಬಿಚ್ಚಿ ಮಾತಾಡಲು ಒಳ್ಳೆಯ ಸ್ನೇಹವೋ, ತವರಿನ ಆಸರೆಯೋ ಅವಳಿಗಿದ್ದಿದ್ದರೆ ಇಂದಿರಾಳ ಬದುಕು ಬೇರೆಯದ್ದೇ ಹಾದಿ ಹಿಡಿಯುತ್ತಿತ್ತೇನೋ.. ಆದರೆ, ಅವಳ ಬದುಕಲ್ಲಿ ಅಂತಹದ್ದಾವುದೂ ಘಟಿಸಲಿಲ್ಲ. ಅವಳ ಬಾಳಿನ ಸುಖದ ಕ್ಷಣಗಳೆಂದರೆ ವೈದೇಹಿಯ ಗೆಳೆತನ ಹಾಗೂ ಆಕೆಯ ಸ್ನೇಹ ಸಾಂಗತ್ಯ.


ಪಕ್ವವಾಗದ ಪ್ರೀತಿ, ಅತಿ ನಂಬಿಕೆ, ಮೋಸವನ್ನು ಮರೆತು ಹೊಸ ಬದುಕನ್ನು ಕಟ್ಟಿಕೊಳ್ಳಲು ಅಣಿಯಾಗುತ್ತಿದ್ದರೂ ಬದಲಾಗದ ರಾಜಶೇಖರ ಬಂಗಾರದ ಬಲೆಯಲ್ಲಿ ಆಕೆಯನ್ನು ವಿಲವಿಲನೆ ಒದ್ದಾಡಿಸುತ್ತಾನೆ. 


ಇಂದಿರಾಳ ಬದುಕು ಏನಾಯ್ತು ಓದಿ ನೋಡಿ. ಸಾವಿಗಿಂತಲೂ ಕ್ರೂರವಾದ ಆ ಬದುಕು ಹೇಗಿತ್ತು..?


ಹಿಂದಿನ ತಪ್ಪಿಗೆ ಪಶ್ಚಾತ್ತಾಪಪಟ್ಟು ಬದಲಾದರೆ ಮನುಷ್ಯ ಬದಲಾಗುತ್ತಾನೆ ಎನ್ನಬಹುದು. ಆದರೆ, ರಾಜಶೇಖರನ ಪಶ್ಚಾತ್ತಾಪ ಎಂದಿಗೂ ಪ್ರಾಯಶ್ಚಿತವಾಗಿರಲಿಲ್ಲ. 


ತನಗಿದ್ದ ಓದು, ಉದ್ಯೋಗ ಹಾಗೂ ಮಗು ಜೊತೆಗೆ ತಂದೆಯ ಆಸರೆ ಇವೆಲ್ಲವನ್ನೂ ಇಂದಿರಾ ಸಕಾರಾತ್ಮಕವಾಗಿ ಕಂಡಿದ್ದರೆ ಅಥವಾ ಅವಳ ಮಾನಸಿಕ ಸ್ಥಿತಿ ಅಷ್ಟು ದುರ್ಬಲರಾಗಿರದಿದ್ದರೆ ಅವಳಿಗೆ ಬೇರೆಯದ್ದೇ ಬಾಳು ಸಿಕ್ಕಿರುತ್ತಿತ್ತು ಎನ್ನಿಸಿತು.


~ವಿಭಾ ವಿಶ್ವನಾಥ್

ಎರಡು ರೆಂಬೆಗಳು (ಪುಸ್ತಕ ಯಾನ - 432)



ಪುಸ್ತಕದ ಶೀರ್ಷಿಕೆ : ಎರಡು ರೆಂಬೆಗಳು

ಲೇಖಕರು : ನುಗ್ಗೇಹಳ್ಳಿ ಪಂಕಜ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 1994

ಎರಡನೇ ಮುದ್ರಣ : 2011 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 120

ಬೆಲೆ : 60 ರೂ. 


ನೆಮ್ಮದಿಯಾಗಿದ್ದ ಸಂಸಾರದಲ್ಲಿ ಕವಲೊಡೆದ ಪರಿಸ್ಥಿತಿಯಲ್ಲಿ ಬದಲಾದ ಚಿತ್ರಣದ ಕಥಾಹಂದರ ಹೊಂದಿರುವ ಕಾದಂಬರಿ ಇದು. 


ಮರದ ಬೇರು, ಬುಡ ಒಂದೆಯಾದರೂ ರೆಂಬೆಗಳು ಕವಲೊಡೆದಾಗ ಎರಡು ರೆಂಬೆಗಳಲ್ಲಿಯೂ ಸಿಗುವ ಫಲ, ಎಲೆಗಳ ಪ್ರಮಾಣ ಎಲ್ಲವೂ ವಿಭಿನ್ನ. ಹಾಗೆಯೇ ಒಂದು ಕುಟುಂಬದಲ್ಲಿ ಬೆಳೆಯುವ ಮಕ್ಕಳಲ್ಲಿ, ಅಣ್ಣ-ತಂಗಿಯರ ಅಥವಾ ಅಣ್ಣ-ತಮ್ಮಂದಿರ ಮಕ್ಕಳಲ್ಲಿಯೂ ಈ ವ್ಯತ್ಯಾಸವನ್ನು ಕಾಣಬಹುದಾಗಿದೆ. ಅಂತಹ ಚಿತ್ರಣವನ್ನು ಕಾಣುವುದಕ್ಕೂ ಮುಂಚೆ ರಂಗೋಲಿ ಎಂಬ ಯುವತಿಯ ಪರಿಸ್ಥಿತಿಯನ್ನು ನೋಡಬೇಕಾಗುತ್ತದೆ. 


ರಂಗೋಲಿಯನ್ನು ರೈಲ್ವೆ ಸ್ಟೇಷನ್ ನಲ್ಲಿ ಭೇಟಿಯಾಗಲು ಬಂದದ್ದು ಜಿತೇಂದ್ರನಲ್ಲ. ಬದಲಿಗೆ ಅವನ ಸೋದರತ್ತೆಯ ಮಗ. ಮೊದಲು ಅನುಮಾನಿಸಿದರೂ ಅವನ ಭರವಸೆ ಸೂಸುವ ನಗು ಅವನ ಮುಖದ ಒರಟುತನವನ್ನೆಲ್ಲ ಹೋಗಿಸಿ ಭರವಸೆಯಿಡುವಂತೆ ಮಾಡಿತು. ನೇರ ನಿಲುವು, ದಿಟ್ಟ ಹೆಜ್ಜೆಗಳು, ಜೊತೆಗೆ ಸುತ್ತಲಿನವರು ಅವನಿಗೆ ನೀಡುತ್ತಿದ್ದ ಗೌರವ ಎಲ್ಲವನ್ನೂ ಗಮನಿಸಿದ್ದಳು. 


ಅಲ್ಲಿದ್ದವರಲ್ಲಿ ಹೆಚ್ಚಿನವರು ಗಿರಿಜನರೇ. ಮರುಭೂಮಿಯಂತಹ ಆ ಊರಿನಲ್ಲಿ ಹಬ್ಬಿಕೊಂಡಿರುವ ಎಸ್ಟೇಟು ಹಾಗೂ ಗಣಿಗಾರಿಕೆಗಳ ಕಾರ್ಮಿಕರು. ಜಿತೇಂದ್ರ ತನ್ನ ಟೆಲಿಗ್ರಾಂ ಕಂಡು ಬರಲಿಲ್ಲದಕ್ಕೆ ಬೇಸರವಾಗಿತ್ತು ಜೊತೆಗೆ ಮುನಿಸು, ಕೋಪ ಎಲ್ಲವೂ.


ಶ್ರೀಮಂತ ತಂದೆ-ತಾಯಿಯ ಒಬ್ಬಳೇ ಮಗಳಾಗಿದ್ದ ರಂಗೋಲಿ ಕಷ್ಟವೆಂದರೆ ಏನೆಂದೇ ಅರಿತವಳಲ್ಲ. ಶಿವಸ್ವಾಮಿ ಹಾಗೂ ಗೌರಮ್ಮನೂ ಆಕೆಯನ್ನು ಹಾಗೆಯೇ ಕಾಪಾಡಿಕೊಂಡಿದ್ದರು. ಆದರೆ, ಗೌರಮ್ಮನವರ ಅಕಾಲಿಕ ಸಾವಿನಿಂದ ಹಾಗೂ ನೆನಪಿನಿಂದ ಪಾರಾಗಲು ಸ್ಥಳ ಬದಲಾವಣೆಗೆಂದು ತೀರ್ಥಯಾತ್ರೆಗೆ ಹೋದಾಗ ಶಂತನು ಮಹಾರಾಜನಿಗೆ ಗಂಗೆ ಗಂಟು ಬಿದ್ದಂತೆ ಪೂರ್ವಾಪರ ತಿಳಿಯದ ಹೆಣ್ಣೊಬ್ಬಳು ಗಂಟು ಬಿದ್ದಿದಳು. ವಯಸ್ಸು ಮೀರಿತ್ತು ಜೊತೆಗೆ ಅವಿವಾಹಿತ ಹೆಂಗಸಿಗೆ ನೆಲೆಯಾಗುತ್ತದೆ, ರಂಗೋಲಿಯನ್ನು ಮಗಳಂತೆಯೇ ಕಾಣುತ್ತಾಳೆ ಜೊತೆಗೆ ಇಳಿಗಾಲದಲ್ಲಿ ಸಾಂಗತ್ಯ ದೊರೆಯುತ್ತದೆಂದಿದ್ದವರಿಗೆ ಆಕೆಯ ನಿಜ ಸ್ವಭಾವದ ಅರಿವಾಗ್ವು ಹೊತ್ತಿಗೆ ಮನೆಯ ಸಮಸ್ತವೆಲ್ಲವೂ ಆಕೆಯ ಆಡಳಿತದಲ್ಲಿತ್ತು. ಜೊತೆಗೆ ಏನೂ ಅರಿಯದಂತಹ ತನ್ನ ಕರುಳಿನ ಕುಡಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬಂದಿತ್ತು. ಶಿವಸ್ವಾಮಿ ಬದಲಾಯಿಸಿದ ದಿನಗಳನ್ನು ರಂಗೋಲಿಯ ವರ್ಣನೆಯಲ್ಲಿ ಕೇಳುವಾಗ ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿ ಬೆಳೆದ ಅವಳ ಮೇಲೆ ದಯೆ ಮೂಡುತ್ತದೆ. ಮಲತಾಯಿಯ ದೂರದ ಸಂಬಂಧಿ, ವರಸೆಯಲ್ಲಿ ಆಕೆಗೆ ತಮ್ಮನಾಗುತ್ತಿದ್ದ ರಾಜೇಂದ್ರ ನಡೆದುಕೊಳ್ಳುತ್ತಿದ್ದ ಅನುಚಿತ ವರ್ತನೆಯಿಂದ ಪಾರಾಗಲು ಮನೆ ಬಿಟ್ಟಿದ್ದಳು.


ಜಿತೇಂದ್ರನ ತಾಯಿ ಹಾಗೂ ರಂಗೋಲಿಯ ತಾಯಿ ಇಬ್ಬರೂ ಆಪ್ತ ಸ್ನೇಹಿತೆಯರು. ವಿವಾಹವಾದ ನಂತರ ಅವರ ಸ್ನೇಹ ಹಾಗೆಯೇ ಉಳಿದಿತ್ತು ಹಾಗೂ ಮತ್ತಷ್ಟು ಆಪ್ತವಾಗಿತ್ತು. ಜಿತೇಂದ್ರನಿಗೆ ರಂಗೋಲಿಯನ್ನು ವಿವಾಹ ಮಾಡಬೇಕೆಂದು ಇಬ್ಬರು ತಾಯಿಯರ ಕನಸಾಗಿತ್ತು. ಆದರೆ, ರಂಗೋಲಿಯ ತಂದೆ ಮಾತ್ರ "ಅದು ಸ್ವಪ್ನ ಜೀವಿಯ ಕಣ್ಣುಗಳು.

 ಗಂಡಸು ಸ್ವಪ್ನ ಜೀವಿ ಆದರೆ ಕಷ್ಟ" ಎನ್ನುತ್ತಿದ್ದರು. 


ಜಿತೇಂದ್ರನ ತಂದೆ-ತಾಯಿಗಳಿಬ್ಬರೂ ವಿಮಾನ ಅಪಘಾತದಲ್ಲಿ ಸತ್ತಾಗ ಆತನ ತಂದೆಯ ತಂದೆ ಅವನನ್ನು ತಮ್ಮ ಬಳಿಗೆ ಹಾ

ಸಾಕಿಕೊಳ್ಳಲು ಕರೆದೊಯ್ದಾಗ ಸಂಪರ್ಕ ಒಮ್ಮೆಲೆ ಕಡಿದಿತ್ತಾದರೂ ರಂಗೋಲಿಗೆ ಮಾತ್ರ ಪತ್ರಗಳು ಬರುತ್ತಿದ್ದವು. ಹೀಗೆ ಪತ್ರ ಮಿತೃತ್ವ ಸಾಗುತ್ತಲೇ ಇತ್ತು. ದರ್ಪದ ವ್ಯಕ್ತಿತ್ವದ ತಾತ, ಪರಿಸರದ ಮಾರ್ಪಾಡು, ಅನಾಥ ಪ್ರಜ್ಞೆ ಎಲ್ಲವೂ ಅವಳಿಗೆ ತಿಳಿದಿತ್ತು. ಆದರೆ, ಈಗಿನ ಪರಿಸ್ಥಿತಿ ಅವಳಂದುಕೊಂಡಂತಿರಲಿಲ್ಲ. 


ಕುಡಿತ ಹಾಗೂ ಅಮಲು ಪದಾರ್ಥದ ದಾಸನಾಗಿದ್ದ ಜಿತೇಂದ್ರ ತಾತನ ಮುದ್ದು, ಆಸ್ತಿಯ ಕೊಬ್ಬು, ಕೆಟ್ಟ ಸಹವಾಸ ಎಲ್ಲವೂ ಸೇರಿ ಹಾಳಾದ. ತಾತನೂ ಕಣ್ಣು ಮುಚ್ಚಿದ ನಂತರ ಸಾಲವಾಯಿತು. ಆಗ ಜಿತೇಂದ್ರನ ಸೋದರತ್ತೆಯ ಮಗ ಭೀಷ್ಮ ತಾನು ಕಷ್ಟಪಟ್ಟು ದುಡಿದಿದ್ದ ಹಣದಲ್ಲಿ ಎಲ್ಲವನ್ನೂ ಉಳಿಸಿಕೊಂಡಿದ್ದ. ಭೀಷ್ಮನ ಕಠಿಣತೆ ಹಾಗೂ ಕಟ್ಟುನಿಟ್ಟು, ಶಿಸ್ತು ಯಾವುದರಿಂದಲೂ ಜಿತೇಂದ್ರನನ್ನು ತಿದ್ದಲು ಸಾಧ್ಯವಾಗಲಿಲ್ಲ


ಮನೆಗೆ ಬಂದಾಗ ಅಲ್ಲಿದ್ದದ್ದು ಕೆಲಸದಾಕೆ ಕಾಳಿ. ಗಿರಿಜನರ ಹೆಣ್ಣುಮಗಳು. ಜಿತೇಂದ್ರ ಮನೆಯಲ್ಲಿರಲಿಲ್ಲ. ಆತ ಎಲ್ಲಿದ್ದಾನೆಂದು ಭೀಷ್ಮನಿಗೆ ಗೊತ್ತಿದ್ದರೂ ಆತ ನಿಜವನ್ನು ಬಿಟ್ಟು ಕೊಡಲಿಲ್ಲ. ಅದೇಕೆ..?


ಭೀಷ್ಮ ರಂಗೋಲಿಗೆ ವಿವಾಹದ ಪ್ರಸ್ತಾಪವನ್ನು ಮುಂದಿಡುತ್ತಾನೆ. ಅದಕ್ಕೆ ಕಾರಣ ಹೇಳುವುದು ಅಪರಿಚಿತ ಒಂಟಿ ಹೆಣ್ಣು ತನ್ನೊಡನೆ ಒಂಟಿಯಾಗಿದ್ದರೆ ಇಲ್ಲಿನ ಜನರ ಅಪಾರ್ಥಕ್ಕೂ ಕಾರಣವಾಗುತ್ತದೆ, ತನ್ನ ಗೌರವಕ್ಕೂ ಕುಂದು ಬರುತ್ತದೆ ಎಂದು. ರಂಗೋಲಿಗೆ ಬೇರೆ ದಾರಿ ಇರಲಿಲ್ಲ. ವಾಪಸ್ಸು ಹೋಗಲು ರಾಜೇಂದ್ರನ ಭಯ ಹಾಗೂ ತನ್ನ ಬದುಕಿನ ಅಭದ್ರತೆ. ಜಿತೇಂದ್ರನ ಪರಿಸ್ಥಿತಿ ಗೊತ್ತಿದ್ದೂ ಆತನನ್ನು ಸರಿ ದಾರಿಗೆ ತರಲು ಸಾಧ್ಯವಿಲ್ಲ ಎಂದು ಅರ್ಥ ಮಾಡಿಕೊಂಡಳು ಭೀಷ್ಮನ ಕೈಹಿಡಿಯುತ್ತಾಳೆ. ಆದರೆ, ಭೀಷ್ಮ ಮೊದಲೇ ಹೇಳಿದ್ದ "ನನ್ನನ್ನು ಮದುವೆಯಾಗಿ, ಮನೆಯ ಒಡತಿಯಾಗಿ, ಸ್ನೇಹಿತರಾಗಿಯೇ ಉಳಿಯೋಣ" ಎಂದು. ಮುಂದೆ ಈ ಪ್ರಯತ್ನದಲ್ಲಿ ಇಬ್ಬರೂ ಎಷ್ಟು ಸಫಲರಾಗುತ್ತಾರೆ..?


ರಂಗೋಲಿ ಎಲ್ಲದರ ಕುರಿತು ಅಸ್ಥೆಯಿಂದ ತಿಳಿದುಕೊಳ್ಳುತ್ತಾ.. ಕಾಳಿಯನ್ನು ಆಪ್ತಳನ್ನಾಗಿಸಿಕೊಂಡು, ಹೊಂದಿಕೊಳ್ಳುವ ಪ್ರಯತ್ನದಲ್ಲಿ ಇರುವಾಗ ಪಕ್ಕದ ಎಸ್ಟೇಟಿನ ಚಂದರ್ ದಂಪತಿಗಳು ಬರುತ್ತಾರೆ. ಮಿಸಸ್ ಚಂದರ್ ಗೆ ಪ್ರತಿಯೊಂದು ಒಳ್ಳೆಯದರಲ್ಲಿಯೂ ಕೆಟ್ಟದ್ದನ್ನು ಹುಡುಕುವ ಹಾಗೂ ಪ್ರತಿಯೊಂದರಲ್ಲಿಯೂ ನಿರಾಸೆಯನ್ನು ಕಾಣುವ ಮನಸ್ಸು, ನಕಾರಾತ್ಮಕ ಆಲೋಚನೆಗಳು. ಏನೇನೋ ತರ್ಕ-ವಿತರ್ಕಗಳನ್ನು ಹೇಳ ಬಂದವಳು ರಂಗೋಲಿಯ ಮನಸ್ಸಿನಲ್ಲಿ ಬೇರೇನೋ ಆಲೋಚನೆಗಳು ಮೂಡುವಂತೆ ಮಾಡಿ ಹೋಗಿದ್ದಳು. ಭೀಷ್ಮನ ಕುರಿತು ಬಲು ಕಟ್ಟುನಿಟ್ಟಿನ ಮನುಷ್ಯ ಹಾಗೂ ನಿರ್ದಯಿ ಎಂದು ಬಿತ್ತಿದ್ದ ವಿಷಬೀಜ ಇಷ್ಟು ದಿನ ಭೀಷ್ಮನ ಕುರಿತು ಬೆಳೆಸಿಕೊಂಡಿದ್ದ ಗೌರವವನ್ನು ಬದಲಾಯಿಸಿತೇ ?


ಇಂತಹದ್ದೇ ಒಂದು ಸಂದರ್ಭದಲ್ಲಿ ಜಿತೇಂದ್ರ ಬಂದಾಗ ಆತನಿಗೆ ರಂಗೋಲಿ ಹಾಗೂ ಭೀಷ್ಮನ ವಿವಾಹದ ವಿಚಾರ ತಿಳಿದಿರುತ್ತದೆ. ಅದಕ್ಕೆ ಆತ ಪ್ರತಿಕ್ರಿಯಿಸಿದ್ದು ಹೇಗೆ..? ಮುಂದಾದರೂ ಆತ ಬದಲಾದನೇ..? ಆತನ ಅವನತಿಯಲ್ಲಿ ಡಾ. ಪ್ರಭುವಿನ ಪಾಲು ಎಷ್ಟಿತ್ತು?


ಹಿಂದೆ ಜಿತೇಂದ್ರ ಕೆಲಸ ಮಾಡುತ್ತಿದ್ದ ಗಣಿಯ ಅಧಿಕಾರಿಯಾಗಿದ್ದ ರಂಜನ್ ಭೀಷ್ಮನಿಗೆ ಆಪ್ತ ಸ್ನೇಹಿತ. ರಂಗೋಲಿಗೆ ಅಣ್ಣನ ಸ್ಥಾನ ತುಂಬುವ ರಂಜನ್ ಅವಳಿಗೆ ಯಾವೆಲ್ಲಾ ತೊಂದರೆಗಳಿಂದ ಪಾರಾಗಲು ಸಹಾಯ ಮಾಡುತ್ತಾನೆ ಹಾಗೂ ರಂಜನ್ ಗೆ ಇವರಿಬ್ಬರ ವಿವಾಹದ ವಿಚಾರ ಹಾಗೂ ಜಿತೇಂದ್ರ ಮತ್ತು ರಂಗೋಲಿಯರ ಪ್ರೇಮದ ವಿಚಾರ ತಿಳಿದಾಗ ಆತನ ಮನಸ್ಸಿನಲ್ಲಿ ಮೂಡುವ ಯೋಚನೆಗಳು ಯಾರ ಬದುಕನ್ನು ಬದಲಾಯಿಸುತ್ತವೆ..?


ಪಕ್ಕದ ಎಸ್ಟೇಟ್ ನಲ್ಲಿ ಬೆಂಕಿ ಹತ್ತಿಕೊಂಡಿರುವ ವಿಚಾರ ತಿಳಿದಾಗ ಸಹಾಯಕ್ಕೆ ಹೋಗಿದ್ದ ಭೀಷ್ಮ, ಆತನ ಉನ್ನತ ಓದು, ಉನ್ನತ ವ್ಯಕ್ತಿತ್ವ, ಗಣಿಯಲ್ಲಿ ಭೂಕುಸಿತ ಉಂಟಾಗಿ ಅಲ್ಲಿನ ಕಾರ್ಮಿಕರು ಸಿಲುಕಿಕೊಂಡಾಗ ರಕ್ಷಿಸಲು ಹೊರಟ ಭೀಷ್ಮ ಇವೆಲ್ಲವೂ ಭೀಷ್ಮನ ಮತ್ತೊಂದು ಮುಖವನ್ನು ಪರಿಚಯಿಸುತ್ತವೆ.


ಅಷ್ಟೇ ಅಲ್ಲದೆ ಇದೇ ಸಂದರ್ಭದಲ್ಲಿ ನಡೆದ ಘಟನೆಯೊಂದು ಜಿತೇಂದ್ರನ ನಿಜರೂಪವನ್ನು ರಂಗೋಲಿಗೆ ಪರಿಚಯಿಸುತ್ತದೆ. ಜಿತೇಂದ್ರನನ್ನು ಕೊಂದಾದರೂ ಆ ಹಣವನ್ನು ಹಿಂದೆ ತರಬೇಕು ಎಂದು ಹೊರಟ ರಂಗೋಲಿಯ ರೋಷದ ಹಿಂದೆ ನಡೆದ ಘಟನೆಯ ಹಿನ್ನೆಲೆಯೇನು..? ಜಿತೇಂದ್ರ ಹಾಗೂ ರಂಗೋಲಿಯರ ಬದುಕು ಮಾತ್ರವಲ್ಲದೆ, ಭೀಷ್ಮನ ಬದುಕನ್ನೂ ಬದಲಾಯಿಸಿದ ಕಥೆ ಇಲ್ಲಿದೆ.


ಜಿತೇಂದ್ರನಿಗೆ ಭೀಷ್ಮನ ಮೇಲೆ ಪೈಪೋಟಿಯ ಭಾವ ಬೆಳೆದದ್ದು ಹಾಗೂ ದ್ವೇಷಕ್ಕೆ ಕಾರಣವಾದ ಪ್ರಸಂಗವೇನು..? ಜಿತೇಂದ್ರನನ್ನು ತಿದ್ದಲು ಹೋದ ಭೀಷ್ಮ ಸೋತನೇ..? ಒಂಟಿಯಾಗಿದ್ದು ರೂಢಿಯಾಗಿದ್ದ ಕಾಳಿ ಸ್ನೇಹಕ್ಕೆ ಹಾತೊರೆಯುವ ಹಾಗೂ ನಿಷ್ಕಲ್ಮಶವಾದ ಬಂಧವನ್ನು ಬೆಳೆಸಿಕೊಳ್ಳುವ, ರಂಗೋಲಿಯನ್ನು ಹಚ್ಚಿಕೊಳ್ಳುವ ನಡೆ ಹೇಗಿದೆ ಓದಿ ನೋಡಿ.


ಇಲ್ಲಿ ವೈಯಕ್ತಿಕ ಸಂಬಂಧಗಳಿಗಿಂತಲೂ.. ಸಮಾಜದಲ್ಲಿ ವ್ಯಕ್ತಿಯ ನಡೆಗಳು, ಅವರ ನಡವಳಿಕೆಗಳು ಅದರ ಹಿಂದಿನ ಮಾನಸಿಕ ಸಂಘರ್ಷಗಳು, ಬದಲಾವಣೆಗಳು ಎಲ್ಲವನ್ನೂ ಮನಮುಟ್ಟುವಂತೆ ತೆರೆದಿಟ್ಟಿದ್ದಾರೆ ಲೇಖಕಿ. ವಿಭಿನ್ನವಾದ ನಿರೂಪಣೆ ಸೆಳೆಯುತ್ತದೆ.


~ವಿಭಾ ವಿಶ್ವನಾಥ್

ಬದುಕಿನಲ್ಲಿ ಅರಳಿದ ಹೂವು (ಪುಸ್ತಕ ಯಾನ - 431)


ಕಾದಂಬರಿಯ ಶೀರ್ಷಿಕೆ : ಬದುಕಿನಲ್ಲಿ ಅರಳಿದ ಹೂವು

ಲೇಖಕರು : ವಿಶಾಲಾಕ್ಷಿ ದಕ್ಷಿಣಾಮೂರ್ತಿ


'ಜೀವನ ಚೈತ್ರ' ಚಲನಚಿತ್ರದ ಮೂಲ ಕಾದಂಬರಿ 'ವ್ಯಾಪ್ತಿ-ಪ್ರಾಪ್ತಿ' ಬರೆದ ವಿಶಾಲಾಕ್ಷಿ ದಕ್ಷಿಣಾಮೂರ್ತಿಯವರು 1993ರ ಜನವರಿಯ ತುಷಾರಕ್ಕಾಗಿ ಬರೆದು ಕೊಟ್ಟಿರುವ ವಿಶೇಷ ಕಾದಂಬರಿ ಇದು.


ಕಾದಂಬರಿಯ ಶೀರ್ಷಿಕೆ 'ಬದುಕಿನಲ್ಲಿ ಅರಳಿದ ಹೂವು' ಸೂಚಿಸುವಂತೆ.. ಮಾಗುತ್ತಾ ಹೋಗುವ ಹೆಣ್ಣೊಬ್ಬಳು ತಾಯ್ತನದ ಸವಿಯಲ್ಲಿ ಮಗುವನ್ನು ಕಾಪಾಡುವುದು ತನ್ನ ಮೊದಲ ಆದ್ಯತೆ ಎಂಬಂತೆ ಬದುಕುವ ಚಿತ್ರಣ ಇಲ್ಲಿದೆ. ದ್ವೇಷ, ಅಸೂಯೆ, ಕುಟಿಲತನ ಯಾವುದೂ ಇಲ್ಲದ ಈ ಕಾದಂಬರಿಯ ಓದು ಹಿತ ನೀಡುತ್ತದೆ. ಊರಿನವರ ಹಿತವಾದ, ಪರೋಪಕಾರದ ನಡವಳಿಕೆ ಖುಷಿ ತರುತ್ತದೆ.


'ಗಿರಿಜೆ ಚಿನ್ನದಂಥಾ ಹುಡುಗಿ !' ಎಂದು ಅವಳ ಸೋದರತ್ತೆ ಭವಾನಮ್ಮ ಹೇಳಿದ ಮಾತು ನಿಜವೆನಿಸಿತ್ತು ಭಾಸ್ಕರನಿಗೆ.


"ಬರಿಯ ಚಿನ್ನವಲ್ಲ. ಚೊಕ್ಕ ಚಿನ್ನ, ತುಂಬಾ ಮೃದು. ಯಾವ ಆಕಾರಕ್ಕೆ ಬೇಕಾದರೂ ಸುಲಭವಾಗಿ ಬಗ್ಗಿಸಿಕೊಳ್ಳಬಹುದು." ಎಂದು ನಕ್ಕಿದ್ದ.


ಭಾಸ್ಕರ ಗಿರಿಜೆಯನ್ನು ಮದುವೆಯಾಗಿ ಹೊಸದಾಗಿ ಸಂಸಾರ ಹೂಡುವಾಗ ಅಷ್ಟಿಷ್ಟು ಸಾಮಾನುಗಳನ್ನು ಕೊಂಡು ತಂದಿದ್ದ. ಗಿರಿಜೆಯೇ ಅಣಿಯಾಗಿ ಜೋಡಿಸಬಲ್ಲಳೆಂಬ ನಿರೀಕ್ಷೆ ಸುಳ್ಳಾಗಿತ್ತು. ಆದರೆ, ಅವಳನ್ನು ಅಂದು ಆಡಿ, ಮಾಡಿ ನೋಯಿಸದೆ ನವಿರಾಗಿ ತಿದ್ದುವ ಪ್ರಯತ್ನದಲ್ಲಿ ಆತ ಗೆದ್ದಿದ್ದ.


ಮನೆಗೆ ಬಂದಿದ್ದ ವೆಂಕಮ್ಮನವರಿಗೆ ಮೇಷ್ಟ್ರೇ ಮನೆಯನ್ನು ಅಣಿ ಮಾಡುತ್ತಿರುವುದು, ಗಿರಿಜೆಯನ್ನು ಕಾಳಜಿ ಮಾಡುವುದರ ಜೊತೆಗೆ ಹೊರಡುವಾಗ ವೆಂಕಮ್ಮನವರಿಗೆ ಕುಂಕುಮ ತಂದುಕೊಡಲು ಸೂಚಿಸಿದ್ದು ಎಲ್ಲವೂ ಅಚ್ಚರಿ ಅಷ್ಟೇ ಅಲ್ಲದೆ ಹಿಗ್ಗು ಕೂಡ ತಂದಿತ್ತು.  ಪುಟ್ಟ ಸಂಸಾರದ ಅಕ್ಕರೆಯನ್ನು ತಮ್ಮದೇ ಮಾತಿನಲ್ಲಿ ಅಕ್ಕ-ಪಕ್ಕದವರಿಗೆ, ಮನೆಯವರಿಗೂ ವರ್ಣಿಸಿದ್ದರು. 


ಊರಿನವರು ಸ್ನೇಹಮಯಿಗಳು. ಸಲುಗೆ, ಸರಳತೆಯಿಂದ ಗಿರಿಜೆಯನ್ನು ಕಾಣುತ್ತಿದ್ದರು. ವೆಂಕಟಲಕ್ಷ್ಮಿ ಹಾಗೂ ಶಾಮಣ್ಣ ದಂಪತಿಗಳು ಕಾಶಿ ಸಮಾರಾಧನೆಗೆ ಕರೆಯಲು ಬಂದ ಸಂದರ್ಭ.. ಆಕೆಯನ್ನು ಪ್ರೀತಿಯಿಂದ ಕಂಡದಷ್ಟೇ ಅಲ್ಲದೆ ಅವರ ಮನೆಗೆ ಹೋದಾಗಲೂ ಭಾಸ್ಕರ ಹಾಗೂ ಗಿರಿಜೆಯರನ್ನು ನೋಡಿಕೊಂಡ ರೀತಿ ಆಪ್ತ ಭಾವ ಹುಟ್ಟಿಸುತ್ತದೆ.


ಭಾಸ್ಕರ ಗಿರಿಜೆಯನ್ನು ಕಂಡ ಮೊದಲ ನೋಟದಲ್ಲಿಯೇ ಮರುಳಾಗಿ ಅವಳನ್ನು ಮದುವೆಯಾಗುವೆನೆಂದು ನಿರ್ಧರಿಸಿ ತನ್ನ ತಾಯಿ ಅಚ್ಚಮ್ಮನವರಿಗೆ ಹೇಳಿದಾಗ

"ಗಿರಿಜೆ ಓದಿದವಳಲ್ಲ, ಅವರ ಮನೆಯವರು ಅನುಕೂಲಸ್ಥರೂ ಅಲ್ಲ. ಏಕಾದಶಿ ನನಗೆ ಶಿವರಾತ್ರಿ ಬಂದಂತೆ ಎಂಬ ಹಾಗೆ, ಆ ಮನೆಯಲ್ಲಿಯೂ ಬಡತನ ಈ ಮನೆಯಲ್ಲಿಯೂ ಬಡತನ." ಎಂದು ಪೇಚಾಡಿಕೊಂಡಿದ್ದರು

"ಅಲ್ಲೂ ಬಡತನ, ಇಲ್ಲೂ ಬಡತನ, ಹುಚ್ಚಿಗೆ ಅತ್ತೆ ಮನೆಯೂ ಒಂದೇ ತವರು ಮನೆಯೂ ಒಂದೇ ಅಂತ ಆಗಲ್ವೇನೋ" ಎಂದು ಹೇಳಿದ್ದರು.


ಗಿರಿಜೆ ತಬ್ಬಲಿ, ಈಗ ತಾನು ಮದುವೆಯಾಗದಿದ್ದರೆ ಅನ್ಯಾಯವಾಗಿ ಎರಡನೆಯದ್ದೋ ಮೂರನೆಯದ್ದೋ ಮದುವೆಗೆ ಆಕೆಯನ್ನು ಕೊಟ್ಟು ಅವಳ ಬಾಳನ್ನೇ ಹಾಳು ಮಾಡುತ್ತಾರೆಂದು.. ಅಪ್ಪ-ಅಮ್ಮ ಇಲ್ಲದ ಅವಳನ್ನು ಅಲ್ಲಿಗಿಂತ ಇಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಸಮಾಧಾನಿಸಿದ ಭಾಸ್ಕರನ ಮಾತು ಆತನ ತಂದೆಯ ಪರೋಪಕಾರದ ಗುಣವನ್ನು ನೆನಪಿಸಿತ್ತು ಅಚ್ಚಮ್ಮನವರಿಗೆ.


ಸುಖವಾಗಿ ಸಾಗುತ್ತಿದ್ದ ಗಿರಿಜೆ ಹಾಗೂ ಭಾಸ್ಕರರ ಸಂಸಾರದಲ್ಲಿ ದಿನೇದಿನೇ ಗಿರಿಜೆ ಹೆಚ್ಚು ಪಕ್ವವಾಗುತ್ತಿದ್ದಳು. ಹೀಗೆಯೇ ಒಂದು ದಿನ ಮೆಲ್ಲಗೆ ಕಾಲೆಳೆದುಕೊಂಡು ಹೋಗುತ್ತಿದ್ದ ಪದ್ಮಾವತಿ ಆಕೆಗೆ ದುರ್ಗದ ಬೆಟ್ಟ ನೋಡಲು ಹೋಗಿದ್ದವಳು ಅಲ್ಲಿನ ಬಸವನ ಬುರುಜು, ಬತೇರಿ, ಒನಕೆ ಕಿಂಡಿ, ಅರಮನೆ ಪಾಳು, ಗೋಪಾಲಸ್ವಾಮಿ ಹೊಂಡ, ಎಣ್ಣೆ ಕೊಳ, ತುಪ್ಪದ ಕೊಳ, ಹನುಮನ ದೊಣೆ ಎಲ್ಲದರ ಆಸೆ ಹುಟ್ಟಿಸಿದಳು. ಭಾಸ್ಕರ ಆಕೆಯನ್ನು ಬೆಟ್ಟ ಸುತ್ತಲೂ ಕರೆದುಕೊಂಡು ಹೋದದ್ದೂ ಆಯ್ತು. ಬೆಟ್ಟಕ್ಕೆ ಹೋಗುವ ಸಂದರ್ಭದಲ್ಲಿ ಬಸ್ಸಿಗೆಂದು ನಿಂತಾಗಲೂ ಊರಿನ ಜನರ ಪರೋಪಕಾರದ ಚಿತ್ರಣ ಕಾಣಿಸುತ್ತದೆ. ಕೆಂಚಪ್ಪನವರು ಅವರನ್ನು ಬಸ್ಸಿಗೆ ಹತ್ತಿಸಿ, ಸೀಟು ಮಾಡಿದ್ದು ಮಾತ್ರವಲ್ಲದೆ.. ಟಿಕೆಟ್ ಕೊಂಡು, ಕಿತ್ತಲೆ ಹಣ್ಣು ತಂದುಕೊಡುವ ಸಂದರ್ಭ ಮೇಷ್ಟ್ರ ಮೇಲಿನ ಅಕ್ಕರೆ ಹೇಗಿದೆ ಎಂದು ತೋರುತ್ತದೆ.


ದುರ್ಗಕ್ಕೆ ಹೋಗುವ ದಾರಿಯಲ್ಲಿ ರಂಗಯ್ಯನ ಬಾಗಿಲು, ಸಂಪಿಗೆ ಸಿದ್ದೇಶ್ವರನ ದೇವಸ್ಥಾನ ದರ್ಶನ ಎಲ್ಲಾ ಮುಗಿದ ನಂತರ ಅವಳು ಆಸೆ ಪಟ್ಟ ಕೆಂಡಸಂಪಿಗೆ ಕೊಯ್ದು ಕೊಟ್ಟು ಹಿಡಿಂಬೇಶ್ವರನ ದೇವಾಲಯ, ಗೋಪಾಲಸ್ವಾಮಿ ಹೊಂಡ, ಏಕನಾಥೇಶ್ವರಿ ದೇವಾಲಯ, ಗೋಪಾಲಕೃಷ್ಣನ ದೇವಾಲಯ, ಭೈರವಿ ವೆಂಕಟಸುಬ್ಬಯ್ಯನವರ ಕಲ್ಲುಹಾಸು ಹೀಗೆ ಎಲ್ಲದರ ದರ್ಶನವಾಗುತ್ತದೆ. 


ಭಾಸ್ಕರನ ಗೆಳೆಯ ವಾಸು ಎದುರಾಗಿ ಬಹಳ ಕಾಲದ ನಂತರ ಸಿಕ್ಕ ಭಾಸ್ಕರನನ್ನು ದಂಪತಿ ಸಮೇತವಾಗಿ ಮನೆಗೆ ಕರೆದೊಯ್ಯುತ್ತಾನೆ. ಅಲ್ಲಿ ಶ್ರೀಪಾದಾಚಾರ್ಯರು ಹಾಗೂ ಕಮಲಬಾಯಿಯವರ ಆಪ್ತ ಆತಿಥ್ಯವೂ ಸಿಗುತ್ತದೆ. ವಾಸುವಿನ ಹೆಂಡತಿ ಜಲಜಾಕ್ಷಿ ಗಿರಿಜೆಗೆ ಗೆಳತಿಯಾಗುತ್ತಾಳೆ. ಆಕೆ ತನ್ನ ಬಸಿರಿನ ದಿನಗಳು, ಬಯಕೆಯ ಸಂಕಟ, ಹೆರಿಗೆಯ ವಿಚಾರಗಳು ಎಲ್ಲವನ್ನೂ ಅವಳೊಡನೆ ಹಂಚಿಕೊಂಡಾಗ ಸುಪ್ತವಾಗಿದ್ದ ಆಸೆಗಳು ಗಿರಿಜೆಯಲ್ಲಿ ಒಂದು ರೂಪ ತಳೆಯುತ್ತವೆ. 


ಮುಂದೆ ಗಿರಿಜೆ ಹಾಗೂ ಭಾಸ್ಕರರ ದಾಂಪತ್ಯಕ್ಕೆ ಚೊಚ್ಚಲ ಮಗುವಾಗಿ ಜಯರಾಮ ಜನಿಸುತ್ತಾನೆ. ಇಷ್ಟರಲ್ಲಿ ಮನೆಯ ವಾತಾವರಣದಲ್ಲಿ ಕೊಂಚ ಸಿರಿವಂತಿಕೆ ಸೇರಿರುವುದನ್ನು ಭಾಸ್ಕರ ಗಿರಿಜೆಗೆ ಒಡವೆ ಮಾಡಿಸಿಕೊಡುವ ಚಿತ್ರಣದಿಂದ ಕಾಣಬಹುದು.


ಬೆಳೆಯುತ್ತಿದ್ದ ಜಯರಾಮನ ಬಾಲಲೀಲೆಗಳು ಗಿರಿಜೆಗೆ ಸಂತಸ ತರತಿದ್ದವು. ಆದರೆ, ಆತನಿಗೆ ಕೊಂಚ ಹುಷಾರು ತಪ್ಪಿದರೂ ಆತಂಕ. ಒಮ್ಮೆಯಂತೂ ಜ್ವರದ ತಾಪ ಏರಿ, ಕೈಕಾಲು ಅದುರತೊಡಗಿ, ಕಣ್ಣುಗುಡ್ಡೆಗಳು ಮೇಲಕ್ಕೆ ಸಿಕ್ಕಿಕೊಂಡು ಬಾಯಿಯಿಂದ ಬುರುಗು ಬಂದಿತ್ತು. ಮಗು ಪ್ರಜ್ಞಾಹೀನವೂ ಆಗಿತ್ತು. ಆಗಲಂತೂ ಗಿರಿಜೆಯ ಪಾಡು ಕೇಳುವುದೇ ಬೇಡ. ಇರುವ ಒಬ್ಬ ಮಗುವನ್ನೇ ಕಾಪಾಡಿದರೆ ಸಾಕು ಎಂದು ನಿರ್ಧಾರ ಮಾಡಿ ಬಿಟ್ಟಿದ್ದಳು. ವೈದ್ಯರು ಹುಷಾರಿನಿಂದ ನೋಡಿಕೊಳ್ಳಲು ಹೇಳಿದರೂ ಆಕೆಗೆ ಸಮಾಧಾನವಿಲ್ಲ. ದೇವರ ಮೊರೆಯನ್ನು ಹೊಕ್ಕಾಗಿತ್ತು ಅವಳು. ಜಯರಾಮ ಚೇತರಿಸಿಕೊಂಡು ಆರೋಗ್ಯವಂತನಾದರೂ ಆಕೆಯ ಆತಂಕ ನಿಂತಿರಲಿಲ್ಲ.


ವೈಜ್ಞಾನಿಕತೆ, ಅವೈಜ್ಞಾನಿಕತೆಗಳ ಎಲ್ಲೆಗಳನ್ನು ಮೀರಿ ಗಿರಿಜೆಯ ಮಾತೃವಾತ್ಸಲ್ಯ.. ತಾರ್ಕಿಕ ವಿಚಾರಗಳನ್ನು ಒಪ್ಪಿಕೊಂಡು, ಕಂದನ ಹಂಬಲಕ್ಕೆ ತಾಯ್ತನದಲ್ಲಿ ಮಾಡಿಸುವ ಒಳ್ಳೆಯ ಕಾರ್ಯಗಳನ್ನೆಲ್ಲ ಇಲ್ಲಿ ಸೊಗಸಾಗಿ ತೆರೆದಿಟ್ಟಿದ್ದಾರೆ ಲೇಖಕಿ. 


ಇದು ಆಗಿನ ಒಂದು ವಾಸ್ತವದ ತುಣುಕನ್ನು ನಮ್ಮೆದುರು ಬಿಡಿಸಿಟ್ಟಂತೆ ಕಾಣುತ್ತದೆ. ಸುಂದರವಾದ ಓದು.


~ವಿಭಾ ವಿಶ್ವನಾಥ್

ರಂಜನಿ


ಕಥೆಯ ಶೀರ್ಷಿಕೆ : ರಂಜನಿ

ಲೇಖಕರು : ಶಾಂತಾದೇವಿ ಮಾಳವಾಡ


"ಕಿತ್ತೂರಿನ ಮುತ್ತಿನ ಪಾಲಕಿ

ಹತ್ತಿ ಮರೆಯುತ್ತಿರುವ ರಾಣಿ

ಮುತ್ತಿನ ವೇಣಿ ಕೋಕಿಲ ವಾಣಿ

ಹತ್ತು ದಿಕ್ಕಿನೊಳು ಕಲ್ಯಾಣಿ"


ಹೀಗೆ ಪ್ರಸಿದ್ಧಿ ಪಡೆದಿದ್ದ ಕಿತ್ತೂರು ಚೆನ್ನಮ್ಮನ ಕೋಟೆಯ ವೈಭವವನ್ನು ತೋರಿಸುತ್ತಾ..1824ರ ಅಕ್ಟೋಬರ್ ನಲ್ಲಿ ಚೆನ್ನಮ್ಮ ಬ್ರಿಟಿಷರನ್ನು ಸೋಲಿಸಿ ವಿಜಯೋತ್ಸವ ಆಚರಿಸಿದ ಸಂದರ್ಭವನ್ನು, ಪ್ರತಿ ವರ್ಷವೂ ದೀಪೋತ್ಸವವನ್ನಾಗಿ ಆಚರಿಸಿ ವಿಜಯೋತ್ಸವವನ್ನು ನೆನೆಸಿಕೊಳ್ಳುವ ಪ್ರಸಂಗವನ್ನು ಹೇಳುತ್ತಲೇ ರಂಜನಿಯ ಕಥೆಯನ್ನು ತೆರೆದಿಡುತ್ತಾರೆ.


ಕಿತ್ತೂರ ಕೋಟೆಯ ಅವಶೇಷಗಳನ್ನು ನೋಡಲು ಹೋಗಿ ಗಾಢ ನಿದ್ರೆ ಆವರಿಸಿದ್ದವರಿಗೆ ಗೆಜ್ಜೆಯ ನಾದದಿಂದ, ತಾಳ-ಮದ್ದಲೆ, ವೀಣೆ, ಮೃದಂಗಗಳ ಧ್ವನಿ ಕೇಳಿ ಬರುತ್ತದೆ. ಆಗ ಆ ಸಂದರ್ಭವನ್ನು ಪರಿಚಯಿಸಿಕೊಳ್ಳುವ ರಂಜನಿಯನ್ನು ಪರಿಚಯಿಸುತ್ತಾರೆ.


ಚೆನ್ನಮ್ಮನ ಕಿತ್ತೂರಿನಲ್ಲಿಯೇ ಇದ್ದ ಕಿತ್ತೂರಿನ ರಾಜನೊಬ್ಬ ಸರ್ವಸ್ವವನ್ನು ತ್ಯಾಗ ಮಾಡಿ ಬಂಧು-ಬಳಗದ ವಿರೋಧ ಕಟ್ಟಿಕೊಂಡು, ಸಮಾಜದಿಂದ ತಿರಸ್ಕೃತಗೊಂಡು, ಸ್ವಧರ್ಮದಿಂದ ವಂಚಿತಳಾದ ಪ್ರೇಮಿಯ ನೆನಪಿನ ಸಂಚಿ ಬಿಚ್ಚಿಕೊಳ್ಳುತ್ತದೆ.


ಕಿತ್ತೂರಿನ 9ನೇ ದೊರೆಯಾಗಲಿದ್ದ ಫಕೀರ ರುದ್ರಸರ್ಜನ ಆಸ್ಥಾನಕ್ಕೆ ನೃತ್ಯ ಮಾಡಲು ಬಂದವಳು ಬಗೆಬಗೆಯ ನೃತ್ಯವನ್ನು ಮಾಡಿ ಯುವರಾಜರ ಮನ ಗೆಲ್ಲುತ್ತಾಳೆ, ಜೊತೆಗೆ ಯುವರಾಜರಿಗೂ ಮನಸೋಲುತ್ತಾಳೆ. ಇಬ್ಬರೂ ಪ್ರೇಮ ಬಂಧನದಲ್ಲಿ ಸಿಲುಕುತ್ತಾರೆ. ರಂಜನಿಯ ತಾಯಿಗೆ ಆಕೆಯನ್ನು ರಾಜನರ್ತಕಿಯನ್ನಾಗಿಸುವ ಆಸೆ ಇದ್ದರೆ, ದೊರೆಗಳ ಉತ್ಸಾಹ ಕಂಡು ರಾಜಮಾತೆಗೆ ಚಿಂತೆ ಹತ್ತಿ,  ಅವರನ್ನು ಮದುವೆಗೆ ಒತ್ತಾಯಿಸುತ್ತಿದ್ದರು. 


ಆದರೆ ದೃಢನಿಶ್ಚಯದಿಂದ ಫಕೀರ ರುದ್ರಸರ್ಜನು ರಂಜನಿಯನ್ನು ವಿವಾಹವಾಗಲು ನಿಶ್ಚಯಿಸಿದಾಗ ರಂಜನಿ ಹಿಂತೆಗೆಯುತ್ತಾಳೆ. ಆಕೆ ಮುಸಲ್ಮಾನರವಳು, ಜೊತೆಗೆ ನರ್ತಕಿ. ಈ ವಿವಾಹ ಧರ್ಮಸಮ್ಮತವಾಗಲಾರದು, ಜನರು ಒಪ್ಪುವುದಿಲ್ಲ ಎಂದಾಗ ಯುವರಾಜರಿಗೆ ರಂಜನಿಯ ಸಮ್ಮತಿ ಮಾತ್ರ ಬೇಕಾಗಿರುತ್ತದೆ. ನೀವು ಮತ್ತೊಬ್ಬರನ್ನು ಮದುವೆಯಾಗಿ, ನಾನು ಇಲ್ಲಿಯೇ ಇರುತ್ತೇನೆ ಎಂದರೂ ಕೇಳದೆ "ದೇಹ ಎರಡೇ ಇದ್ದರೂ ಮನ, ಆತ್ಮ ಒಂದೇ" ಎನ್ನುತ್ತಾ ನೀನು ಹೃದಯದ ಸಾಮ್ರಾಜ್ಞಿಯಾಗಿರುವಾಗ ಬೇರೊಂದು ಹೆಣ್ಣನ್ನು ತೋರಿಕೆಯ ರಾಣಿಯನ್ನಾಗಿ ಮಾಡುವುದು ಸಾಧ್ಯವಿಲ್ಲವೆಂದು ದೃಢವಾಗಿ ಹೇಳುತ್ತಾರೆ.


ಮಂತ್ರಿಗಳು ಸಹ ರಾಜರಿಗೆ "ನೀವು ಆಕೆಯನ್ನು ಪ್ರೇಮಿಸುತ್ತಿದ್ದರೆ ರಾಜನರ್ತಕಿಯನ್ನಾಗಿ ಮಾಡೋಣ. ಇನ್ನೂ ಮುಂದೆ ಹೋಗಿ ಆಕೆ ಪಟ್ಟದರಸಿಯಾಗಲು ಸಾಧ್ಯವಿಲ್ಲ. ಆದರೆ, ವೀರಶೈವ ದೀಕ್ಷೆ ಕೊಡಿಸಿ ವಿವಾಹವಾಗಬಹುದು" ಎನ್ನುತ್ತಾರೆ.


"ಧರ್ಮಕೊಬ್ಬ ಹೆಂಡತಿ, ಪ್ರೇಮಕೊಬ್ಬ ನರ್ತಕಿ" ಎನ್ನುವ ನೀತಿ ನನಗೆ ಒಪ್ಪಿಗೆ ಇಲ್ಲ ಎನ್ನುತ್ತಾ.. ಆಕೆಗೆ ವೀರಶೈವ ದೀಕ್ಷೆ ಕೊಡಿಸಿ ವಿವಾಹವಾಗುತ್ತಾರೆ. ರಂಜನಿ ನಿರಂಜನಿಯಾಗುತ್ತಾಳೆ. ರಂಜನಿಯ ತಾಯಿ ಇದರಿಂದ ಸಿಟ್ಟಿಗೆದ್ದು ಉತ್ತರ ಭಾರತಕ್ಕೆ ಹೋಗುತ್ತಾಳೆ. ಫಕೀರ ರುದ್ರಸರ್ಜರು ರಾಜ್ಯತ್ಯಾಗ ಮಾಡುತ್ತಾರೆ.


ಅಲ್ಲಿಂದ ದೂರ ಬಂದು ದೇಶನೂರಿಗೆ ಹೋಗಿ ಮೊಘಲ ಪದ್ಧತಿಯಂತೆ ಅರಮನೆ ಕಟ್ಟಿಸಿ ನೆಲೆಸುತ್ತಾರೆ. ಅರಮನೆಯ ಸುತ್ತ ಕಟ್ಟಿಸಿದ ಭದ್ರವಾದ ಕೋಟೆ ರುದ್ರಗಢವೆಂದು ಪ್ರಸಿದ್ಧವಾಗುತ್ತದೆ. ಅರಮನೆಯನ್ನು 'ರಂಜನಿ ಮಹಲ್' ಎಂದು ಕರೆಯತೊಡಗುತ್ತಾರೆ. ಪ್ರೇಮದ ಸವಿಯಲ್ಲಿ ಉಲ್ಲಾಸವಾಗಿ ಬಾಳುತ್ತಾರೆ. ಆದರೆ, ಪಕೀರ ರುದ್ರಸರ್ಜರ ಆಸೆಯಂತೆಯೇ ಪೂರ್ವಜರ ಸಮಾಧಿಗಳಿರುವ ಕಲ್ಮಠದಲ್ಲಿಯೇ ಸಮಾಧಿಯಾಗಬೇಕು ಎನ್ನುವ ಅವರ ಆಸೆಗಾಗಿ ಮರಳಿ ಕಿತ್ತೂರಿಗೆ ಬರುತ್ತಾರೆ. ಫಕೀರ ರುದ್ರಸರ್ಜರ ಕಿತ್ತೂರ ಕಲ್ಮಠದ ಸಮಾಧಿಯ ಮೇಲೆ ಈ ಅಮರ ಪ್ರೇಮದ ಕಥೆಯನ್ನು ಕೆತ್ತಿಸುತ್ತಾರೆ. ರಂಜನಿ ಹಾಗೂ ರುದ್ರಸರ್ಜರ ಸಮಾಧಿ ಪಕ್ಕಪಕ್ಕದಲ್ಲಿಯೇ ನಿರ್ಮಾಣವಾಗುತ್ತದೆ. 


ಈಗ ಈ ಅಮರ ಪ್ರೇಮದ ಕಥೆಯನ್ನು ಸಾರುತ್ತಾ ಅವರಿಬ್ಬರ ಆತ್ಮಗಳು ಜೊತೆಯಾಗಿ ತಿರುಗಾಡುತ್ತಾ.. ಅಮರ ಪ್ರೇಮಿಗಳಾಗಿರುವ ಕಥೆಯನ್ನು ಹೇಳುತ್ತಲೇ ರಂಜನಿ ಮಾಯವಾಗುತ್ತಾಳೆ.


ಇತಿಹಾಸದಲ್ಲಿ ಹೀಗೆ ಮರೆಯಾದ ಕಥೆಯೊಂದು ಹೀಗೆ ಕಾಣಸಿಗುತ್ತದೆ. ಅಧಿಕಾರ, ವ್ಯಾಮೋಹ ಎಲ್ಲದಕ್ಕಿಂತಲೂ ಪ್ರೇಮವೇ ಮಿಗಿಲು ಎಂದು ಕೈಹಿಡಿದ ಹೆಣ್ಣನ್ನು ಕೊನೆಯವರೆಗೂ ಜೊತೆಯಾಗಿದ್ದು ಕಾಪಾಡಿದ ಫಕೀರ ರುದ್ರಸರ್ಜ ಹಾಗೂ ಆತನ ಆಶಯದಂತೆಯೇ ನಡೆಯುವ ಅಷ್ಟೇ ಪ್ರೇಮವನ್ನು ವ್ಯಕ್ತಪಡಿಸುವ ರಂಜನಿಯ ಐತಿಹಾಸಿಕ ಕಥೆಯನ್ನು ಕಣ್ಮುಂದೆ ಬರುವಂತೆ ಸೊಗಸಾಗಿ ಚಿತ್ರಿಸಿದ್ದಾರೆ ಶಾಂತಾದೇವಿ ಮಾಳವಾಡರವರು. ಭಾವುಕತೆಯೇ ಪ್ರಧಾನವಾಗಿರುವ ಕಥೆ ಇದು.


1982 - 83 ರಲ್ಲಿ ಡಾ|| ವೀಣಾ ಶಾಂತೇಶ್ವರ ಅವರು ಸಂಪಾದಿಸಿರುವ 'ಲೇಖಕಿಯರ ಕಥಾಸಂಕಲನ'ದಲ್ಲಿ ನನ್ನ ಓದಿಗೆ ಸಿಕ್ಕ ಕಥೆ ಇದು.


~ವಿಭಾ ವಿಶ್ವನಾಥ್

ಸವಿಗಾನ (ಪುಸ್ತಕ ಯಾನ - 430)


ಪುಸ್ತಕದ ಶೀರ್ಷಿಕೆ : ಸವಿಗಾನ 

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 2003

ಎರಡನೇ ಮುದ್ರಣ : 2024


ಬಣ್ಣದ ಭ್ರಮರ, ಅದೃಷ್ಟದ ಆಟ, ಸವಿಗಾನ ಮತ್ತು ಶ್ರೀರಾಗ ವೈಭೋಗ ಈ ನಾಲ್ಕು ಸಾಮಾಜಿಕ ಕಾದಂಬರಿಗಳ ಸಂಯುಕ್ತ ಸಂಪುಟ ಈಗ ಮರು ಮುದ್ರಣವಾಗಿ ಓದುಗರಿಗೆ ಲಭ್ಯವಿದೆ. 


ಈಗ ನಾನು ಪರಿಚಯಿಸುತ್ತಿರುವ ಕಾದಂಬರಿ ಸವಿಗಾನ.


ಮಾಧುರ್ಯಪೂರ್ಣವಾಗಿರುವ ಈ ಕಾದಂಬರಿಯ ಶೀರ್ಷಿಕೆ ಬದುಕಿನ ಸವಿಗಾನವನ್ನು ಸೂಚಿಸುತ್ತದೆಯಾದರೂ.. ತನ್ನ ಬದುಕನ್ನು ಸವಿಗಾನವನ್ನಾಗಿಸಿಕೊಳ್ಳಲು ಗಂಡನ ಕಿರುಕುಳವನ್ನು ಧಿಕ್ಕರಿಸಿ, ಸ್ವತಂತ್ರವಾಗಿ ಬದುಕು ನಿರ್ಮಿಸಿಕೊಂಡು ಆತನನ್ನು ಹಾದಿಗೆ ತಂದು ವಿವಾಹವನ್ನು ಸರಿಪಡಿಸಿಕೊಳ್ಳುವ ಕಥಾಹಂದರ ಇಲ್ಲಿದೆ.


ಭೀಮಣ್ಣ ಹಾಗೂ ಶಾರದಮ್ಮ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು. ಮಗಳು ಉಷಾಳ ವಿವಾಹವಾಗಿತ್ತು. ಈ ಕಾದಂಬರಿಯ ಮುಖ್ಯ ಪಾತ್ರವಾದ ರತ್ನಾ ಇವರ ಎರಡನೆಯ ಮಗ ಸುರೇಶನ ಪತ ತ್ನಿಇವರಿಬ್ಬರ ವಿವಾಹವಾಗಿ ಐದು ವರ್ಷವಾಗಿತ್ತು. ಮಗ ರವಿ ಯು. ಕೆ. ಜಿ ಓದುತ್ತಿದ್ದ. ಮೊದಲನೆಯ ಸೊಸೆ ಶ್ರೀಮಂತೆಯಾಗಿದ್ದ ಲಲಿತ.


ರತ್ನಾಳ ತಂದೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಖಾಸಗಿ ಸಂಸ್ಥೆಯ ಹೈಸ್ಕೂಲ್ ವಿಭಾಗದಲ್ಲಿ ಉಪಾಧ್ಯಾಯನಾಗಿದ್ದ ಸುರೇಶ ಆರ್ಕೆಸ್ಟ್ರಾ ನಡೆಸುತ್ತಿದ್ದ. ರತ್ನಾಳ ಚಿಕ್ಕಮ್ಮನ ಮಗಳು ಗಾಯತ್ರಿ ಅವನೊಂದಿಗೆ ಹಾಡುತಿದ್ದಳು. ಗಾಯತ್ರಿಗಿಂತ ರೂಪಸಿ ರತ್ನ, ಗಾಯತ್ರಿ ತಂದೆ ತಾಯಿಗೆ ಒಬ್ಬಳೇ ಮಗಳು. ಗಾಯತ್ರಿ ಇಂಜಿನಿಯರ್ ವರನನ್ನು ವಿವಾಹವಾದ ತಿಂಗಳಲ್ಲಿ ಸರಳವಾಗಿ ದಿಢೀರ್ ಎಂದು ಸುರೇಶ ಹಾಗೂ ರತ್ನಾರ ವಿವಾಹವಾಗಿತ್ತು. 


ರತ್ನಾ ಬಹಳ ಸ್ವಾಭಿಮಾನದ ಸ್ವಭಾವದವಳು. ತಾನು ಕೇಳಿದಾಕ್ಷಣ ಮರು ಮಾತಾಡದೆ ಹಣ ಹಾಗೂ ಸೌಂದರ್ಯ ಕಂಡು ವಿವಾಹಕ್ಕೆ ಒಪ್ಪುವಳೆಂದು ನೆನೆಸಿದ್ದ ಸುರೇಶನ ಮನಸ್ಥಿತಿಗೆ ವಿರುದ್ಧವಾಗಿ ಕಟ್ಟುನಿಟ್ಟಾದ ಶರತ್ತುಗಳನ್ನು ಹಾಕಿಯೇ ವಾಸ್ತವವನ್ನು ತೋರಿಸಿಯೇ ಸರಳವಾದ ವಿವಾಹವಾಗಿದ್ದಳು ರತ್ನ, ತಮ್ಮ ಮನೆಯ ಹೆಚ್ಚುಗಾರಿಕೆಯನ್ನು ತೋರಿಸಲು ಹೋದಾಗ "ಈ ಭವ್ಯ ಬಂಗಲೆ ನಿಮ್ಮ ಸ್ವಂತದ್ದಲ್ಲ, ನಿಮ್ಮ ತಂದೆ-ತಾಯಿಯದ್ದೂ ಅಲ್ಲ. ಅತ್ತಿಗೆ ಕಡೆಯಿಂದ ಬಂದ ಬಳುವಳಿ. ಅವರು ಹೋಗೆಂದಾಗ ಇಲ್ಲಿಂದ ಹೊರನಡೆಯಬೇಕು" ಎಂದು ಸತ್ಯವನ್ನು ಅವನ ಮುಖಕ್ಕೆ ತೋರಿದ್ದಳು.


ಆತನ ಸುಳ್ಳು ಶ್ರೀಮಂತಿಕೆಯನ್ನು ನಮ್ಮದೇ ಎಂದಾಗ ನಿರಾಕರಿಸಿ, ಸ್ವಾಭಿಮಾನದಿಂದ ಜೀವಿಸಲು ಪುಟ್ಟ ಮನೆ ಮಾಡೋಣವೆಂದರೂ ಒಪ್ಪಿರಲಿಲ್ಲ. ಬುದ್ಧಿವಂತೆಯಾದರೂ ಮುಂದೆ ಓದಲು ಸಾಧ್ಯವಾಗದೆ, ಸರಿಯಾದ ಕೆಲಸ ಸಿಗದೆ ಸದ್ಯಕ್ಕೆ ಲಲಿತಾಳಿಗೆ ಸಹಾಯಕಳಾಗಿ ಆ ಮನೆಯಲ್ಲಿಯೇ ನೆಲೆಸಿದಳು. ಮದುವೆಯಾದ ವರ್ಷದಲ್ಲಿಯೇ ರವಿಯೂ ಜನಿಸಿದ. ಶಾರದಮ್ಮನವರು ಸೊಸೆಯಂದಿರನ್ನು ಭೇದ-ಭಾವ ಮಾಡುತ್ತಿರಲಿಲ್ಲವಾದರೂ ಮಗಳ ಮೇಲೆ ಅಧಿಕ ವ್ಯಾಮೋಹ.


ಸುರೇಶ ಆರ್ಕೆಸ್ಟ್ರಾ ಮೇಷ್ಟ್ರು, ವಾದ್ಯಗಳು, ರೂಮಿನ ಬಾಡಿಗೆ ಎಂದು ನೆಪ ಹೇಳಿ ಮನೆಗೆ ಒಂದು ಪೈಸೆಯನ್ನೂ ಕೊಟ್ಟಿರಲಿಲ್ಲ. ಸ್ವಾಭಿಮಾನಿ ರತ್ನ ಅವನಿಂದ ತಮ್ಮಿಬ್ಬರ ಮನೆ ಖರ್ಚಿಗೆಂದು 3000 ಕೊಡಿಸುತ್ತಿದ್ದಳು. ಲಲಿತಾಳಿಗೆ ಅವಳ ಕಷ್ಟದ ಅರಿವಿದ್ದು ತಿಂಗಳ ಕೊನೆಯಲ್ಲಿ ಅದೇ ಹಣದಲ್ಲಿ 500 ರೂಪಾಯಿಗಳನ್ನು ರತ್ನಳಿಗೆ ಕೊಡುತ್ತಿದ್ದಳು. ಮಗನನ್ನು ಕಾನ್ವೆಂಟಿಗೆ ಸೇರಿಸಲು ಹಣಕೊಡಲು ಒಪ್ಪಿರಲಿಲ್ಲ ಸುರೇಶ. ಮತ್ತೆ ಅವನು ನಡೆಸುತ್ತಿದ್ದ ಆರ್ಕೆಸ್ಟ್ರಾ 'ಶ್ರೀಶೃತಿ ಆರ್ಕೆಸ್ಟ್ರಾ' ಎಂಬ ಹೆಸರಿನಲ್ಲಿ ಜಗದೀಶನ ನೇತೃತ್ವದಲ್ಲಿ ಮತ್ತೆ ಶುರುವಾಗಿತ್ತು. ಈಗ ಅಲ್ಲಿಗೆ ಗಾಯಕನಾಗಿ ಹೋಗುತ್ತಿದ್ದ ಸುರೇಶ.


ಮುಂದೆ ಸುರೇಶನ ನಿಜಬಣ್ಣ ಒಂದೊಂದಾಗಿ ಅರಿವಾಗುತ್ತಾ ಹೋಗುತ್ತದೆ. ದಾಂಪತ್ಯದ ಆಕರ್ಷಣೆ ತಪ್ಪಿದ್ದು, ಗಂಡ ಸಂಪಾದಿಸುತ್ತಿದ್ದ, ಇಟ್ಟಿದ್ದ ಹಣ ಹೆಂಡತಿಗೆ ತಿಳಿದಿಲ್ಲದ್ದು ಮಾತ್ರವಲ್ಲ ಸಿಗುತ್ತಲೂ ಇರಲಿಲ್ಲ. ಆರ್ಕೆಸ್ಟ್ರಾದಿಂದ ಬಂದ ಹಣ ಎಷ್ಟು ಎಂಬ ಲೆಕ್ಕವನ್ನೇ ಆತ ಹೇಳುತ್ತಿರಲಿಲ್ಲ. ಅಲ್ಲದೆ, ಕುಡಿತದ ಚಟ ಶುರುವಾಗಿದ್ದು ಜೋರಾಗಿತ್ತು. ಮನೆಯಲ್ಲಿ ಯಾರ ಮಾತನ್ನೂ ಆತ ಕೇಳುತ್ತಿರಲಿಲ್ಲ. ಜಗದೀಶ ಶುರು ಮಾಡಿದ ಆರ್ಕೆಸ್ಟ್ರಾದಲ್ಲಿನ ಗಾಯಕಿಯ ತಂಗಿ ಊರ್ಮಿಳ ಸುರೇಶನಿಗೆ ಗಂಟು ಬಿದ್ದಳು.


ಮುಂಬೈಯಿಂದ ಬಂದ ನಾದಿನಿ ಉಷಾ ತನ್ನನ್ನು ಲೆಕ್ಕಕ್ಕೆ ಇಟ್ಟಿಲ್ಲದಿರುವುದನ್ನು ಕಂಡು ಸ್ವಾಭಿಮಾನಿ ರತ್ನಾಳ ಆತ್ಮಾಭಿಮಾನಕ್ಕೆ ಪೆಟ್ಟಾಗಿತ್ತು. ಗಂಡನ ವಿಚಾರವೆಲ್ಲವೂ ತವರಿನವರೆಗೂ ತಿಳಿದಿತ್ತು. ಶ್ರೀಮಂತರಾಗಿದ್ದ ಗಾಯಿತ್ರಿ ಈಗ ಇವಳಿಗೊಂದು ದಾರಿ ತೋರಿದ್ದಳು. ಗಾಯತ್ರಿಯ ಗಂಡ 3 ವರ್ಷ ಅಮೆರಿಕೆಗೆ ಹೋಗುತ್ತಿದ್ದರಿಂದ ಅವಳು ಒಬ್ಬಳೇ ಇರಬೇಕಾಗಿ ಬಂದಿತು. ಅತ್ತೆ ಮನೆಯಲ್ಲಿಯೂ ಹೊಂದಿಕೊಂಡಿರಲಿಲ್ಲ. ಹಾಗಾಗಿ ಅವಳ ಮನೆಯಲ್ಲಿ ರತ್ನಳನ್ನು ಜೊತೆಗಿರಲು ಕರೆದಿದ್ದಳು. ಅವಳ ಮನೆಯಲ್ಲಿಯೇ ಇದ್ದುಕೊಂಡು ಎಂ.ಬಿ.ಎ ಮಾಡಿದರೆ ನಂತರ ಆಕೆಯ ಗಂಡನ ಕಂಪನಿಯಲ್ಲಿ ಅವಳಿಗೊಂದು ಕೆಲಸ ಕೊಡಿಸುತ್ತೇನೆ ಎಂದಿದ್ದಳು. ಮಕ್ಕಳಿಲ್ಲದ ಅವರಿಗೆ ರವಿಯನ್ನು ದತ್ತು ಕೊಡಲು ಕೇಳಿದಳು. ಮಗುವನ್ನು ದತ್ತು ಕೊಟ್ಟರೆಂದು ದೂರದಲ್ಲಿರುವ ಅವಶ್ಯಕತೆ ಇರಲಿಲ್ಲ. ಮಗುವನ್ನು ಲಾಲಿಸಲು ಸಂಪೂರ್ಣ ಅಧಿಕಾರವಿತ್ತು. ಅಲ್ಲದೆ ರತ್ನಳ ತಮ್ಮಂದಿರ ಬದುಕನ್ನು ಉತ್ತಮವಾಗಿಸಲು ದಾರಿ ತೋರಿದ್ದಳು


ರ್ಯಾಂಕ್ ಸ್ಟೂಡೆಂಟ್ ಆಗಿ ಅಪರಿಮಿತ ಬುದ್ಧಿವಂತೆಯಾಗಿದ್ದರೂ.. ಅಡುಗೆ ಮನೆಯಲ್ಲಿ ನಾನು ಕತ್ತಲಿನಲ್ಲಿ ಕೊಳೆತು ಹೋಗಬಾರದೆಂದು ಬೇರೆಲ್ಲಾ ಕಿಂಡಿಗಳು ಮುಚ್ಚಿದಾಗ ಬೆಳಕಾಗಿ ಬಂದಿದ್ದ ಉಷಾಳ ಮಾತಿಗೆ ಒಪ್ಪಿದಳು. 


ಅಲ್ಲದೆ, ನಯವಾಗಿಯೇ ಓರಗಿತ್ತಿ ಹಾಗೂ ಅತ್ತೆ ಕೆಲಸಗಾತಿಯ ಪಟ್ಟ ಕಟ್ಟಿದರು. ಹಣ ಹೊಂದಿಸಲು ಲಲಿತಾಳ ತಾಯಿಯ ಮನೆಯಲ್ಲಿಯೂ ಅಡಿಗೆಯವಳಾಗಿಯೂ ದುಡಿದಿದ್ದ ರತ್ನಳಿಗೆ ಪ್ರೀತಿ, ಮಮತೆಗಳು ಇಲ್ಲದ್ದು ಮಾತ್ರವಲ್ಲದೆ.. ಚುಚ್ಚು ಮಾತುಗಳು ಕೇಳುತ್ತಿದ್ದವು. ಹೀಗಿದ್ದ ಸಂದರ್ಭದಲ್ಲಿ ರತ್ನಾ ಆ ಮನೆಯಿಂದ ಹೊರಬಂದದ್ದು ಹೇಗೆ..?


ಸುರೇಶ ಹಾಗೂ ಗಾಯತ್ರಿ ಒಬ್ಬರನ್ನು ಒಬ್ಬರು ಪ್ರೀತಿಸಿದ್ದರೇ...? ಅವರಿಬ್ಬರ ಮಧ್ಯೆ ಇದ್ದ ಬಾಂಧವ್ಯವಾದರೂ ಹೇಗಿತ್ತು, ಆ ವಿಚಾರವೆಲ್ಲವೋ ರತ್ನಗಳಿಗೆ ತಿಳಿದದ್ದು ಹೇಗೆ..? ರವಿಯನ್ನು ದತ್ತು ಪಡೆಯುವ ವಿಚಾರವನ್ನು ಕೈಬಿಡುವ ವಿಷಯದಲ್ಲಿ ವಿರಸ ಬರದೆ ಅದು ಸುಖಾಂತ್ಯವಾದ ಬಗೆ ಹೇಗೆ..? ಗಾಯತ್ರಿಯ ಗಂಡ ವಾಪಾಸು ಬಂದಾಗ ಅವರ ದಾಂಪತ್ಯದಲ್ಲಿ ಆದ ಬದಲಾವಣೆ ಏನು..? ರತ್ನ ಮನೆಯಿಂದ ಹೊರ ಬಂದ ನಂತರ ಸುರೇಶನ ಪಾಡು ಏನಾಯಿತು..? ಊರ್ಮಿಳಾ ಸುರೇಶನ ಬದುಕಿನಿಂದ ದೂರಾದದ್ದೇಕೆ.. ಸುರೇಶ ಯಾವ ಪರಿಸ್ಥಿತಿಯಲ್ಲಿ ರತ್ನಳ ಬಳಿ ಬಂದ ? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ನೋಡಿ ಕಾದಂಬರಿ ಸವಿಗಾನ ಸ


ಗಾಯಿತ್ರಿಯ ತಂದೆಯ ಶ್ರೀಮಂತಿಕೆಯ ದರ್ಪ ಕಾಲಕ್ರಮೇಣ ಇಳಿದದ್ದು ಒಂದು ರೀತಿಯ ಬದುಕಿನ ಬದಲಾವಣೆಯಾದರೆ... ಲಲಿತಾ ಹಾಗೂ ಶಾರದಮ್ಮನವರು ರತ್ನಾಳನ್ನು ನೋಡುವ ಹಾಗೂ ಆಕೆಯನ್ನು ಕುಗ್ಗಿಸುವ ಸಂದರ್ಭಗಳನ್ನು ತಂದೊಡ್ಡುವಾಗ ಮೊದಲಿನ ಆತ್ಮೀಯತೆ ಸಂಪೂರ್ಣವಾಗಿ ಕಡಿಮೆಯಾಗಿರುತ್ತದೆ. ಇದು ಮತ್ತೊಂದು ರೀತಿಯ ಬದುಕಿನ ಏರಿಳಿತ, 


ಹಣವಿದ್ದಾಗ ಮಾತ್ರ ಮನುಷ್ಯನಿಗೆ ಬೆಲೆ ಎನ್ನುವಂತಹ ನಡುವಳಿಕೆಗಳನ್ನು ಇಲ್ಲಿ ಉಷಾ, ಲಲಿತಾ ಹಾಗೂ ರತ್ನರನ್ನು ಕಾಣುವ, ಮಾತನಾಡಿಸುವ ರೀತಿಯಲ್ಲಿ ಗುರುತಿಸಬಹುದು.


ಈ ಕಾದಂಬರಿಯಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ರತ್ನಾಳ ಸ್ವಾಭಿಮಾನದ ನಡೆ ಇಷ್ಟವಾಗುತ್ತದೆ. ಲಲಿತಾಳ ಜೊತೆ ಎಲ್ಲದಕ್ಕೂ ಹೊಂದಿಕೊಂಡು ಹೋಗಬಹುದಾದರೂ.. ತನ್ನದೇ ಆದ ಸ್ವಂತ ವ್ಯಕ್ತಿತ್ವವನ್ನು ಪ್ರತಿ ಹೆಜ್ಜೆಯಲ್ಲಿಯೂ ರೂಢಿಸಿಕೊಳ್ಳುತ್ತಾ ಹೋಗುವುದನ್ನು ಗುರುತಿಸಬಹುದು. ತನ್ನದೇ ಕೆಲಸ ಹುಡುಕುವ ಪ್ರಯತ್ನ, ಮನೆಯಲ್ಲಿ ಕೆಲಸ ಮಾಡುವುದು, ಲಲಿತಳ ಮನೆಯಲ್ಲಿಯೂ ಅಡಿಗೆಯವಳಾಗಿ ದುಡಿಯುವುದು ಇದೆಲ್ಲವನ್ನೂ ಮೀರಿ ಕಷ್ಟಕ್ಕೆ ತಕ್ಕ ಪ್ರತಿಫಲವೆಂಬಂತೆ ಮುಂದೆ ಒಳ್ಳೆಯ ಬದುಕು ರತ್ನಾಳದ್ದಾಗುವುದು ಖುಷಿ ತರುತ್ತದೆ.


ವಿದ್ಯಾವಂತೆಯಾದರೂ.. ಹಣ ಬಂದರೂ.. ತಪ್ಪು ಮಾಡಿದ ಸುರೇಶನನ್ನು ಮತ್ತೆ ಕಂಡಾಗ ಆತ ಪಶ್ಚಾತಾಪ ಪಡುತ್ತಿದ್ದಾನೆಂಬುದರ ಅರಿವಾಗಿ ತನ್ನ ಸಂಸಾರವನ್ನು ಕಟ್ಟಿಕೊಳ್ಳುವ ರೀತಿ ವಿವಾಹಕ್ಕೆ ಕೊಡುವ ಪ್ರಾಶಸ್ತ್ಯಯನ್ನು ತೋರುತ್ತದೆ.


ಚೆಂದದ ಕಾದಂಬರಿಯ ಸುಲಲಿತ ಓದು.


~ವಿಭಾ ವಿಶ್ವನಾಥ್

ತೇಲಿ ಹೋದ ಮೋಡ


ಕಥೆಯ ಶೀರ್ಷಿಕೆ : ತೇಲಿ ಹೋದ ಮೋಡ

ಲೇಖಕರು : ಗೀತಾ ಕುಲಕರ್ಣಿ


ಆನಂದ ನಾಲ್ಕೈದು ದಿನಗಳ ಜ್ವರದ ತಾಪದಿಂದ ಜರ್ಜರಿತನಾಗಿ ತಾಳ್ಮೆಯನ್ನು ಕಳೆದುಕೊಂಡಿದ್ದ. ಮೂರು ತಾಸಿನ ಹಿಂದೆ ತಾನಾಗಿಯೇ ಮಡದಿ ಶೈಲೆಯನ್ನು ನಾಟಕಕ್ಕೆ ಹೋಗಿ ಬರಲು ಕಳುಹಿಸಿದ. ಆದರೆ, ಈಗ ಅವನ ಮನಸ್ಸು ತೀರ ವಿರುದ್ಧವಾಗಿ ಯೋಚಿಸತೊಡಗಿತ್ತು. ಹಾಗೆ ಯೋಚಿಸಿದಂತೆಲ್ಲಾ ಶೈಲೆಯ ಅಂದಿನ ನಡವಳಿಕೆಯೇ ವಿಚಿತ್ರವೆನಿಸತೊಡಗಿತ್ತು. ಆತನಿಗೆ ಜ್ವರ ಇರುವಾಗ ತಾನು ನಾಟಕ ನೋಡಲು ಹೋಗುವುದಿಲ್ಲ ಎಂದು ಹೇಳುತ್ತಾಳೆನೋ ಎಂದುಕೊಂಡಿದ್ದ ಅವನ ನಂಬಿಕೆ ಹುಸಿಯಾಗಿದ್ದೇ ಇದಕ್ಕೆ ಕಾರಣವಾಗಿತ್ತು.


ತನ್ನ ಮದುವೆಯಾದ ದಿನದಿಂದ ಇಂದಿನವರೆಗೆ ತನ್ನನ್ನು ಹಾಗೂ ಶೈಲೆಯನ್ನು ನೆನಪಿಸಿಕೊಳ್ಳತೊಡಗಿದ್ದ. ಜನ 'ಹೆಂಡತಿ ಹೇಳಿದಂತೆ ಕುಣಿಯುತ್ತಾನೆ' ಎಂದರೂ ಲೆಕ್ಕಿಸದೆ... ಪಾರ್ಟಿ, ಸಿನಿಮಾ, ಮೀಟಿಂಗ್ ಏನಿದ್ದರೂ ಶೈಲೆಯನ್ನು ಜೊತೆಗೊಂಡು ಹೋಗುತ್ತಿದ್ದ. 'ಹೆಣ್ಣು ಮನೆಯ ಒಳಗೆ, ಹೊರಗಿನ ಕಾರ್ಯ ಅವಳದ್ದಲ್ಲ' ಎನ್ನುವ ಜನರನ್ನು ಮನೆ-ಮನ ಎರಡರಿಂದಲೂ ಬಹಳ ದೂರವಿಡುತ್ತಿದ್ದ. ಈ ಅತಿ ಸಮಾನತೆಯ ಹುಚ್ಚು ಶೈಲೆಗೆ ಕೆಲವೊಮ್ಮೆ ಹಿಂಸೆಯಾಗುತ್ತಿತ್ತು ಆದರೆ ಪತಿಯ ಮೇಲಿನ ಅಪಾರ ಪ್ರೀತಿ ಅದೆಲ್ಲವನ್ನು ಸಹಿಸುವ ಶಕ್ತಿ ಕೊಟ್ಟಿತ್ತು.


ಈಗ ಎರಡು ವರ್ಷದಿಂದ ಆತನ 'ನ್ಯಾಷನಲ್ ಫಾರ್ಮಸಿ' ತುಸು ಇಳಿಮುಖವಾದ ಗಳಿಕೆಯನ್ನು ಕಾಣುತ್ತಿತ್ತು. ಅವನ ಅಂದಿನ ಉತ್ಸಾಹ ಮರೆಯಾಗಿ ಬೇಸರ ತಲೆದೋರಿತ್ತು. ಮನೆಯಲ್ಲಿ ಒಂದು ರೀತಿಯ ತಾತ್ಸಾರ ಭಾವವಿತ್ತು. ಇದನ್ನರಿತ ಶೈಲೆ ಹದ ತಪ್ಪದಂತೆ ಚೊಕ್ಕವಾಗಿ ಸಂಸಾರವನ್ನು ನಡೆಸುತ್ತಿದ್ದಳು. ಅವರ ಆತ್ಮೀಯ ಸಂಭಾಷಣೆ ಹಾಗೂ ಶೈಲೆಯ ಆದರದ ಭಾವಗಳು ಅವನನ್ನು ಮತ್ತೆ ಚೈತನ್ಯದಾಯಕವಾಗಿಸುತ್ತಿತ್ತು. ನಳ-ದಮಯಂತಿಯರ ಕಥೆ ಅವರ ದಾಂಪತ್ಯಕ್ಕೆ ಹತ್ತಿರವಾದ ಸಂದರ್ಭವನ್ನು ತೋರಿದಂತಾದಾಗ ಇಬ್ಬರೂ ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದರು.


ಅಂದು ತಾನು ನೋಡಿದ ನಾಟಕದ ವಿಷಯವನ್ನೆಲ್ಲಾ ಹೇಳಿ ಆನಂದನನ್ನು ಸಂತಸಪಡಿಸಬೇಕೆಂದು ಬಂದಿದ್ದವಳಿಗೆ ಆತನ ವರ್ತನೆ ಬಿಡಿಸಲಾರದ ಒಗಟಿನಂತಾಗಿತ್ತು. ಮುನಿಸು, ಬಲವಾದ ಕೈಯ್ಯ ಹಿಡಿತ ಯಾವುದೋ ದುಷ್ಟಶಕ್ತಿ ಅವನಲ್ಲಿ ಆಟವಾಡುತ್ತಿರಬಹುದು ಎನ್ನಿಸಿತು. ಜೊತೆಗೆ ಅವನ ಮಾತಿನ ಬಾಣಗಳನ್ನು ಆಕೆ ಸಹಿಸದಾದಳು.


ಬೆಳಗಿನ ಹೊತ್ತಿಗೆ ಆತನ ಸಿಟ್ಟು ಇಳಿದಿತ್ತು. ಶೈಲೆಯ ಮುದುಡಿದ ದೇಹ, ಕಪ್ಪಿಟ್ಟ ಮುಖ ರಾತ್ರಿಯ ನೆನಪನ್ನು ತಂದುಕೊಟ್ಟಿತ್ತಾದರೂ ಆಕೆಯನ್ನು ಮಾತನಾಡಿಸುವ ಆಲೋಚನೆಯನ್ನು ಬಿಟ್ಟು ಹಿಂದಕ್ಕೆ ಹೊರಟಿದ್ದ.


ಇಷ್ಟು ಸಮಯವಾದರೂ ಏಳದಿದ್ದ ಅತ್ತಿಗೆಯನ್ನು ಸುವರ್ಣ ಎಚ್ಚರಗೊಳಿಸಲು ಹೋದಾಗ ಅವಳ ಮ್ಲಾನವದನ, ಏಳಲು ಮನಸ್ಸಿಲ್ಲದಿರುವಿಕೆ, ಬಾತುಕೊಂಡಿದ್ದ ಮುಖ, ಊದಿದ್ದ ಕಣ್ಣುಗಳು ಎಲ್ಲವೂ ಬೇರೆಯದ್ದೇ ಕಥೆಯನ್ನು ಹೇಳುತ್ತಿತ್ತು.


 ತಂದೆ-ತಾಯಿಯರನ್ನು ಒಮ್ಮೊಮ್ಮೆ ಬಿಟ್ಟು ಇದ್ದಾಳೇನೋ.. ಆದರೆ, ಅಣ್ಣ ಅತ್ತಿಗೆಯರನ್ನು ಬಿಟ್ಟಿರಲಾಗದ ಸುವರ್ಣೆಗೆ ಅತ್ತಿಗೆಯ ಈ ಬಗೆ ಹೊಸತು. ಮಗುವಿಗೆ ಹಾಗೂ ಕೆಲಸಕ್ಕೆ ಬಂದ ಲಚುಮಿಗೆ ಎಲ್ಲರಿಗೂ ಶೈಲೆಯ ಆ ಪರಿ ಕಂಡು ಬೇಸರವೇ ...


ಶೈಲೆಯ ಮನಸ್ಸಿನ ಆಲೋಚನೆಗಳು ಆತ್ಮಹತ್ಯೆಯನ್ನು ಮುಟ್ಟಿ ಬಂದಿದ್ದರೂ.. ಗಂಡ-ಮಗನ ಯೋಚನೆ, ಜೊತೆಗೆ ಅಷ್ಟು ದಿನದ ಪ್ರೀತಿ ಅದನ್ನು ಹಿಂತೆಗೆಯುವಂತೆ ಮಾಡಿತ್ತು.


'ಸಂಸಾರ ಗುಟ್ಟು ವ್ಯಾಧಿ ರಟ್ಟು, ಎಂಬುದನ್ನು ಅರಿತಿದ್ದ ಶೈಲೆ ಯಾರೊಡನೆಯೂ ತನ್ನ ಮನಸ್ಸಿನ ನೋವನ್ನು ಬಿಚ್ಚಿಟ್ಟಿರಲಿಲ್ಲ. ಅತ್ಯಾಪ್ತಳಾಗಿದ್ದ ನಾದಿನಿಯೂ ಕೆದಕಲು ಹೋಗಿರಲಿಲ್ಲ. ಸುವರ್ಣ ಅತ್ತಿಗೆಯ ನೋವನ್ನು ಊಹಿಸಿದಳಾದರೂ... ಆಕೆಗೆ ಏಕಾಂತವನ್ನು ಒದಗಿಸಿ ಕೊಟ್ಟಳು.


ದಿಂಬಿನಡಿ ಸಿಕ್ಕ ಆನಂದನ ಕೈಬರಹದ ಪತ್ರ ಶೈಲೆಗೆ ಎದೆಭಾರವನ್ನೆಲ್ಲಾ ಇಳಿಸಿ ಮನಸನ್ನು ಹಗುರಾಗಿಸಿತು. 


"ಇರುಳಿನ ದುಃಖದ ಬೇಗೆ ಇಷ್ಟು ಲಘುವಾಗಿ, ಬಿಳಿಯ ಮೋಡವಾಗಿ ತೇಲಿ ಹೋದೀತೆಂದು ಶೈಲೆ ಭಾವಿಸಿರಲಿಲ್ಲ."


ಶೈಲೆಯ ಮನದ ನೋವು ಕಳೆದು ಹಗುರಾದಂತೆ ಈ ಕತೆಯ ಓದು ನಮ್ಮನ್ನೂ ಹಗುರಾಗಿಸುತ್ತದೆ.


ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೂ ನಂತರ ಹಮ್ಮ-ಬಿಮ್ಮು ಇಟ್ಟುಕೊಳ್ಳದಂತೆ, ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಬೇಡಿದ ಆನಂದನ ಗುಣ.. ಜೊತೆಗೆ ತನ್ನ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಆನಂದನನ್ನು ಮತ್ತೊಬ್ಬರ ಮುಂದೆ ಸಣ್ಣವನಾಗಿಸದ ಶೈಲೆಯ ಗುಣ ಇದ್ದಾಗ ಅಂತಹ ದಾಂಪತ್ಯಗಳು ದೀರ್ಘಕಾಲ ಸಾಗುವ ಚಿತ್ರಣ ಈ ಕಥೆಯ ಮೂಲಕ ವ್ಯಕ್ತವಾಗಿದೆ.


ಈ ಕಥೆ ಕೆ. ನರಸಿಂಹ ಮೂರ್ತಿಯವರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಕನ್ನಡದ ಅತ್ಯುತ್ತಮ ಸಣ್ಣ ಕಥೆಗಳು ಮೂರನೆಯ ಸಂಪುಟದಲ್ಲಿ ನನ್ನ ಓದಿಗೆ ಸಿಕ್ಕಿತು. 


~ವಿಭಾ ವಿಶ್ವನಾಥ್