ಭಾನುವಾರ, ಜನವರಿ 12, 2020

ಪ್ರೀತಿಯೆಂದರೆ ಇದೇನೇ..

ಯಶೋಧೆಯ ಬಳಿ ಕುಳಿತ ರಾಧೆ ಯಶೋದೆಯ ಕಾಲನ್ನೊತ್ತುತ್ತಾ ಕೇಳುತ್ತಾಳೆ. "ಅಮ್ಮ, ನೀವು ನಿಜವಾಗಿಯೂ ಸುಖವಾಗಿರುವಿರಾ? ನಿಮ್ಮಲ್ಲಿ ಖುಷಿ ಇದೆಯಾ?". ಆಗ ಯಶೋದೆ ಹೇಳುತ್ತಾಳೆ "ನನ್ನ ಸುಖ ಸಂತೋಷಗಳೆಲ್ಲಾ ಇದ್ದದ್ದು ಕೃಷ್ಣನಲ್ಲಿ. ಕೃಷ್ಣನೇ ನನ್ನಿಂದ ದೂರಾದ ಮೇಲೆ ನನ್ನ ನೆಮ್ಮದಿ, ಶಾಂತಿ, ಸುಖ ಇವುಗಳೆಲ್ಲಾ ಎಲ್ಲಿವೆ? ನಿಜಕ್ಕೂ ನನ್ನ ಬದುಕು ಪ್ರೀತಿ ಇಲ್ಲದೆ ಬರಡಾಗಿದೆ." ಎಂದು ಹೇಳುತ್ತಾ ಯಶೋದೆ ರಾಧೆಗೆ ಮರು ಪ್ರಶ್ನಿಸುತ್ತಾಳೆ "ನೀನು ಕೃಷ್ಣನಿಲ್ಲದೆ, ಸುಖವಾಗಿ ಇರುವೆಯಾ?" ಇದಕ್ಕೆ ರಾಧೆ ಉತ್ತರಿಸುತ್ತಾಳೆ "ಕೃಷ್ಣ ಎಲ್ಲಿಗೆ ಹೋಗಿರುವನಮ್ಮಾ? ಇಲ್ಲೇ ಇದ್ದಾನಲ್ಲ. ನನ್ನ ಮಾಧವ ನನ್ನೊಳಗೇ ಇರುವನು. ಅವನು ಭೌತಿಕವಾಗಿ ಇಲ್ಲಿ ಪ್ರಸ್ತುತನಿಲ್ಲ ಅಷ್ಟೇ. ಅವನು ಎಂದೆಂದಿಗೂ ನನ್ನೊಳಗೆ ಸದಾ ಜೀವಂತವಾಗಿದ್ದಾನೆ."

ಯಶೋದೆಗೆ ಬೆರಗು. ರಾಧೆ ಮುಂದುವರಿಸುತ್ತಾಳೆ "ಪ್ರೀತಿ ಎಂದರೆ ಏನಮ್ಮ? ಪ್ರೀತಿಸುವವರಿಲ್ಲದೆ ಬದುಕಲೇ ಆಗುವುದಿಲ್ಲವೇ? ಈಗ ಕೆಲ ಹೊತ್ತಿಗೆ ಮುಂಚೆ ನೀವೇ ಹೇಳಿದಿರಿ.. ಕೃಷ್ಣನೇ ನನ್ನ ಪ್ರೀತಿ, ನೆಮ್ಮದಿ ಎಂದೆಲ್ಲಾ. ಕೃಷ್ಣನನ್ನು ನೀವು ಪ್ರೀತಿಸುತ್ತಾ ಇದ್ದಿರಿ. ಕೃಷ್ಣ ನಿಮ್ಮನ್ನು ಪ್ರೀತಿಸಿದರೂ, ಪ್ರೀತಿಸದಿದ್ದರೂ ನೀವು ಅವನನ್ನು ಇಷ್ಟ ಪಡುತ್ತಲೇ ಇದ್ದೀರಿ. ಇಷ್ಟ ಪಡುತ್ತಲೇ ಇರುತ್ತೀರಿ. ಪ್ರೀತಿ ಏನನ್ನೂ ಬಯಸುವುದಿಲ್ಲ. ನಿಸ್ವಾರ್ಥ ಪ್ರೀತಿಗೆ ಯಾರ ಅನುಕಂಪ, ಮರುಪ್ರೀತಿ ಯಾವುದೂ ಬೇಕಾಗಿಯೇ ಇಲ್ಲ. ಕೆಲವೊಮ್ಮೆ ನಾವು ಪ್ರೀತಿಸುವ ಭರದಲ್ಲಿ, ಯಾವುದೋ ಜಿದ್ದಿಗೆ ಬಿದ್ದಂತೆ ಒಬ್ಬರನ್ನು ಪ್ರೀತಿಸುತ್ತಲೇ ಹೋಗುತ್ತೇವೆ. ಆ ಭರದಲ್ಲಿ ನಮ್ಮ ಸುತ್ತಮುತ್ತಲಿನವರು ತೋರುತ್ತಿರುವ ಪ್ರೀತಿ ನಮಗೆ ಕಾಣಿಸುವುದೇ ಇಲ್ಲ. ನಿಮ್ಮ ಪತಿ ನಿಮ್ಮನ್ನು ಅಗಾಧವಾಗಿ ಪ್ರೀತಿಸುತ್ತಾರೆ. ನಂದಗೋಕುಲದ ನಿವಾಸಿಗಳೂ ನಿಮ್ಮನ್ನು ಇನ್ನಿಲ್ಲದಂತೆ ಪ್ರೀತಿಸುತ್ತಾರೆ. ಅಂತಹಾ ನಿರ್ಮಲವಾದ ಪ್ರೀತಿಯೇ ನಿಮ್ಮನ್ನು ಬದುಕಿಸಿಕೊಂಡಿರುವುದು. ಒಲವಿನಿಂದಲೇ ಅಲ್ಲವೇ ಈ ಪ್ರಕೃತಿ ಇರುವುದು. ಪ್ರೀತಿ ಎಂಬುದು ಎಂದಿಗೂ ಹೂವು-ದುಂಬಿಯಂತೆ ಇದ್ದರೇ ಚೆಂದವೆನಿಸುತ್ತದೆ. ಜನನ, ಕಾಯುವಿಕೆ, ಸಾರ್ಥಕತೆ ನಂತರ ಮರಣ. ರಾಗ-ದ್ವೇಷಗಳಿಲ್ಲದ ಪ್ರೀತಿಯ ಭಾವವೇ ಪುಳಕ ತರುವುದಲ್ಲವೇ? ಈಗ ಹೇಳಿ ಅಮ್ಮ, ನಿಮ್ಮ ಪ್ರೀತಿ ಬರೀ ಕೃಷ್ಣನಿಗೇ ಮೀಸಲಾಗಿರುವುದೇಕೆ?"

ಯಶೋದೆ ಹೇಳುತ್ತಾಳೆ "ವಯಸ್ಸಿನಲ್ಲಿ ನೀನು ನನಗಿಂತ ಕಿರಿಯಳಾಗಿರುವೆ ಹುಡುಗಿ ಆದರೆ ನಿನ್ನ ಅನುಭವ, ತರ್ಕದ ಎದುರು ನಾನೆಷ್ಟರವಳು ಹೇಳು? ನನ್ನ ಪ್ರೀತಿ ಕೃಷ್ಣನಿಗೆ ಮಾತ್ರ ಮೀಸಲಾಗಿಲ್ಲ. ಪ್ರೀತಿಯ ಬಹು ದೊಡ್ಡ ಪಾಲು ಅವನಿಗೆ ಅಷ್ಟೆ, ಪ್ರೀತಿ ಹಂಚಿದಷ್ಟೂ ಅನಂತ ಕಣೇ, ಕಡಿಮೆಯಾದರೆ ಅದು ಪ್ರೀತಿಯೇ ಅಲ್ಲ. ಪ್ರೀತಿಯ ಈ ವ್ಯಾಖ್ಯಾನವನ್ನು ಇಷ್ಟು ಚೆಂದವಾಗಿ ಹೇಳುತ್ತೀಯಲ್ಲ. ನಿನಗೆ ಅದು ಹೊಳೆದದ್ದಾದರೂ ಹೇಗೆ? ನಿನಗದನ್ನು ಹೇಳಿದವರಾದರೂ ಯಾರು?". ರಾಧೆ ಉತ್ತರಿಸುತ್ತಾಳೆ. "ಪ್ರೀತಿಯ ಪಾಠವನ್ನು ಹೇಳಿಕೊಟ್ಟೇ ಕಲಿಯಬೇಕೇನು? ಅನುಭವಕ್ಕಿಂತ ದೊಡ್ಡ ಗುರುವಾದರೂ ಎಲ್ಲಿ ದಕ್ಕಬೇಕು? ಹೇಳಿ. ಆದರೆ, ಅನುಭವದ ಅನುಭೂತಿಗೆ ನನ್ನನ್ನು ತಳ್ಳಿದವನು ಕೃಷ್ಣ ಎಂಬುದೂ ಸುಳ್ಳಲ್ಲ."

ಯಶೋದೆ ಕೇಳುತ್ತಾಳೆ. "ನಿನಗಿಂತ ಹಿರಿಯಳು ನಾನು, ನಿನಗಿಂತ ಕೃಷ್ಣನೊಡನೆ ಹೆಚ್ಚು ಸಮಯ ಕಳೆದಿರುವವಳು ನಾನು. ನನಗೆ ದೊರೆಯದ ಅನುಭೂತಿ ನಿನಗೆ ದೊರೆತದ್ದಾದರೂ ಹೇಗೆ?" ರಾಧೆ ಹೇಳುತ್ತಾಳೆ "ಪ್ರೀತಿ ದಕ್ಕಿದವರಿಗೆ ದಕ್ಕಿಸಿಕೊಂಡಷ್ಟೂ ದೊರೆಯುತ್ತದೆ. ನೀವು ಪ್ರೀತಿಯನ್ನು ನೀಡುವುದರಲ್ಲೇ ತಲ್ಲೀನರಾಗಿದ್ದಿರಿ. ನಾನು ಪ್ರೀತಿಯನ್ನು ಪಡೆದುಕೊಳ್ಳುವುದರಲ್ಲೇ ತಲ್ಲೀನಳಾಗಿದ್ದೆ. ನೀವು ಕೃಷ್ಣನಿಗೆ ಕಲಿಸುವ ಗುರುವಾಗಿದ್ದಿರಿ. ನಾನು ಅವನಿಂದ ಕಲಿಯುವ ಶಿಷ್ಯೆಯಾಗಿದ್ದೆ. ಗುರುವಿಗೆ ಕಲಿಸುವ ಶಿಷ್ಯ ಇರುವುದುಂಟೇ? ಕೃಷ್ಣನಿಂದ ಪ್ರೀತಿಯ ಅನುಭೂತಿ ದಕ್ಕಿರುವುದು ನನಗಾದರೂ.. ಕೃಷ್ಣನಿಗೆ ಪ್ರೀತಿಸುವುದನ್ನು ಕಲಿಸಿದ ಗುರು ನೀವೇ ಅಲ್ಲವೇ? ನಿರ್ಮಲ ಪ್ರೀತಿಯ ಸವಿಯುಣಿಸಲು ಪ್ರಥಮ ಪಾಠ ಮಾಡಿದವರು ನೀವೇ ಅಲ್ಲವೇ? ಹೆತ್ತ ಮಗನಲ್ಲದಿದ್ದರೂ, ಹೆತ್ತ ಮಗನಿಗಿಂತಲೂ ಹೆಚ್ಚು ಪ್ರೀತಿಸಿದಿರಿ. ನಿಷ್ಟೂರವಾದ ಸತ್ಯ ಕೂಡಾ ನಿಮ್ಮೆದುರು ತಲೆಬಾಗಿ ನಿಂತು ಸುಳ್ಳಿನ ಮುಖವಾಡ ಧರಿಸುವಂತೆ ಮಾಡಿದ್ದೀರಿ. ಯಾರು ತಾನೇ ಹೇಳಬಲ್ಲರು ನೀವು ಕೃಷ್ಣನ ಸಾಕುತಾಯಿ ಎಂದು..? ಪ್ರೀತಿಯ ಭಾವವಿರುವುದು ಭಾವಿಸುವ ಮನಸ್ಸಿನಲ್ಲಿ, ತೋರಿಸುವ ಮಮತೆಯಲ್ಲಿ, ನಿಷ್ಕಲ್ಮಶ ಅಂತಃಕರಣದಲ್ಲಿ. ನೀವು ತೋರ್ಪಡಿಸಿದ್ದು ಪ್ರೀತಿಯನ್ನು, ಬರೀ ಪ್ರೀತಿಯನ್ನು. ಆದರೆ ನೀವು ಅನುಭವಿಸುತ್ತಿರುವುದು ದುಃಖವನ್ನು, ವಿರಹವನ್ನು. ಪ್ರೀತಿ ಕೊಟ್ಟವರಿಗೆಲ್ಲಾ ಕೃಷ್ಣ ಯಾವ ರೂಪದಲ್ಲಾದರೂ ಒಳಿತು ಮಾಡುತ್ತಾನೆ ಎಂಬ ಮಾತಿಗೆ ನೀವೇ ಕಪ್ಪು ಚುಕ್ಕಿಯಾಗಲು ಹೊರಟಿರುವಿರಲ್ಲ ಅಮ್ಮ. ಇದು ಸರಿಯೇ?"

ಯಶೋದೆಯ ಆಲೋಚನಾ ಲಹರಿ ಮಗನ ಅಭ್ಯುದಯದತ್ತ ಹೊರಳಿತ್ತು. "ಪ್ರೀತಿ ಹಂಚಿದವರಿಗೆ, ಪ್ರೀತಿಯೇ ಪ್ರತ್ಯುತ್ತರವಾಗಿತ್ತು. ಅಂತಹಾ ಕೃಷ್ಣ ತನ್ನ ತಾಯಿಗೆ ಪ್ರೀತಿ ಹಂಚಲಿಲ್ಲವೆಂದು ಹೇಳುವವರಾದರೂ ಯಾರು? ಹಾಗೆ ಹೇಳುವವರು ಮೂಢರು ಅಷ್ಟೇ. ಭಯವಿದ್ದೆಡೆ ಗೌರವವೂ ಇರುವಂತೆ, ಪ್ರೀತಿ ಇದ್ದೆಡೆ ವಿರಹವೂ ಸಾಮಾನ್ಯ. ಆದರೆ ಅದರಲ್ಲಿ ಪ್ರೀತಿಯ ಪಾಲೇ ಹೆಚ್ಚು. ಕೃಷ್ಣ ಎಂದಿಗೂ ನನ್ನಿಂದ ದೂರಾಗುವುದಿಲ್ಲ. ಹಿಡಿಸಲಾರದಷ್ಟು ಸಂತಸ ಕೊಟ್ಟ ಕೃಷ್ಣನ ನೆನಪುಗಳು ಪ್ರೀತಿಯ ಪ್ರತಿರೂಪವಾಗಿ ನನ್ನ ಬಳಿಯೇ ಇವೆ. ನನ್ನ ಕನಸು ಮನಸ್ಸಿನಲ್ಲಿರುವ ಕೃಷ್ಣ ಇನ್ನು ಇಲ್ಲಿರುವ ಅಣು-ಅಣುವಿನಲ್ಲಿಯೂ ಪಸರಿಸುತ್ತಾನೆ. ಪ್ರೀತಿ ನೀಡುತ್ತಾನೆ." ಎಂದು ಹೇಳುತ್ತಾ ಲಗುಬಗೆಯಿಂದ ಎಲ್ಲರ ಯೋಗಕ್ಷೇಮದ ಕಡೆ ಗಮನ ಹರಿಸಲು ಎದ್ದು ಹೊರಟಳು ಯಶೋದೆ.

ಇತ್ತ ವಾದ-ವಿವಾದ ಮಾಡಿ ಅಮ್ಮನನ್ನು ಸಂತುಷ್ಟಗೊಳಿಸಿ, ಚಿಂತಾಮುಕ್ತಳನ್ನಾಗಿ ಮಾಡಿದ ಖುಷಿಯಲ್ಲಿ ರಾಧೆಯಲ್ಲಡಗಿದ್ದ ಕೃಷ್ಣ ತನ್ನಲ್ಲೇ ಅಂದುಕೊಂಡ "ಪ್ರೀತಿಯೆಂದರೆ ಇದೇನೇ.."

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ