ಗುರುವಾರ, ಜನವರಿ 16, 2020

ಶಾಲಿನಿಯ ಆಹಾರ

ಶಾಲಿನಿ ತಟ್ಟೆಯಲ್ಲಿದ್ದ ತಿಂಡಿಯಲ್ಲಿ ಸ್ವಲ್ಪ ಭಾಗವನ್ನೂ ತಿನ್ನದೆ ಹಾಗೇ ಬಿಟ್ಟು ಶಾಲೆಗೆ ಹೊರಡುತ್ತಿರುವಾಗ ಅಪ್ಪ ಕೇಳಿದರು "ಶಾಲಿನಿ ತಿಂಡಿ ಯಾಕೆ ತಿಂದಿಲ್ಲ ನೀನು?", ಆಗ ಶಾಲಿನಿ "ಪಪ್ಪಾ ನನಗೆ ಆ ಪಲ್ಯ ಇಷ್ಟ ಇಲ್ಲ, ಜೊತೆಗೆ ಅಮ್ಮ ರಾಗಿ ರೊಟ್ಟಿ ಮಾಡಿದ್ದಾರೆ. ನನಗೆ ರಾಗಿ ರೊಟ್ಟಿನೂ ಇಷ್ಟ ಇಲ್ಲ, ಅದಕ್ಕೆ ನಾನು ತಿಂಡಿ ತಿಂದಿಲ್ಲ" ಎಂದು ಹೇಳಿದಳು. ಅಷ್ಟರಲ್ಲಿ ಅಜ್ಜಿ ಬಂದು "ಹೋಗ್ಲಿ ಬಿಡೋ, ಬೇರೆ ತಿಂಡಿ ಮಾಡಿಕೊಟ್ಟರೆ ಆಯ್ತು." ಅಂದು ಶಾಲಿನಿಯನ್ನು ಅಪ್ಪನ ಕೈಯಿಂದ ಬಚಾವ್ ಮಾಡಿದರು. 

"ಯಾವ ತಿಂಡಿ ಬೇಕು ನಿನಗೆ?" ಅಂತಾ ಅಜ್ಜಿ ಕೇಳಿದ್ದಕ್ಕೆ "ನನಗೆ ಮ್ಯಾಗಿ ಬೇಕು. ಮ್ಯಾಗಿ ಆದರೆ ಚೆನ್ನಾಗಿರುತ್ತೆ. ಕೈಯಲ್ಲಿ ತಿನ್ನೋ ಆಗಿಲ್ಲ ಜೊತೆಗೆ ಗಟ್ಟಿಯಾಗಿಯೂ ಇರಲ್ಲ" ಅಂತಾ ಹೇಳಿದಳು ಶಾಲಿನಿ. ಆಗಿನ ಅವಳ ಸಮಾಧಾನಕ್ಕೆ ಮ್ಯಾಗಿ ಮಾಡಿ ತಿನ್ನಿಸಿ ಕಳುಹಿಸಿದರು.

ಸಂಜೆ ಮನೆಗೆ ಬಂದ ಶಾಲಿನಿಯನ್ನು ಅಜ್ಜಿ ಕೇಳಿದರು. "ಈ ಭಾನುವಾರ ಊರಲ್ಲಿರೋ ಮಾವನ ಮನೆಗೆ ಹೋಗಿ ಬರೋಣ. ಬರ್ತೀಯಾ?" ಅಂತಾ ಕೇಳಿದರು. "ಆಯ್ತು ಅಜ್ಜಿ ಬರುತ್ತೇನೆ" ಎಂದು ಒಪ್ಪಿಕೊಂಡಳು ಶಾಲಿನಿ. 

ಅವತ್ತು ರಾತ್ರಿ ಊಟಕ್ಕೆ ಕೂತಾಗ ಶಾಲಿನಿಯದ್ದು ಮತ್ತೆ ರಗಳೆ. "ನಂಗೆ ಮುದ್ದೆ ಬೇಡ, ಬರೀ ಅನ್ನ ಸಾಕು" ಅಂತಾ. ಹಾಕಿಕೊಟ್ಟ ಅನ್ನದಲ್ಲೂ ಅರ್ಧ ಅನ್ನವನ್ನು ಹಾಗೇ ಬಿಟ್ಟು 'ರೂಬಿ'ಗೆ ಹಾಕಮ್ಮ, ನನಗೆ ಸಾಕು ಅಂತಾ ಹೇಳಿ ಊಟವನ್ನು ಅರ್ಧಕ್ಕೇ ಬಿಟ್ಟು ಎದ್ದು ಹೋದಳು. ಶಾಲಿನಿಯದ್ದು ದಿನವೂ ಇದೇ ಕಥೆ. ಊಟ, ತಿಂಡಿಯನ್ನು ಸರಿಯಾಗಿ ತಿನ್ನದೇ ಇರುವುದು. ರಾಗಿ ರೊಟ್ಟಿ, ರಾಗಿ ಮುದ್ದೆ ತಿನ್ನದೆ ಬರೀ ಜಂಕ್ ಫುಡ್ ಅನ್ನೇ ತಿನ್ನುವುದು. ಯಾರು ಎಷ್ಟೇ ಬುದ್ದಿಮಾತು ಹೇಳಿದರೂ ಅವಳು ಕೇಳುತ್ತಲೇ ಇರಲಿಲ್ಲ. ಚಿಕ್ಕ ಮಗು ಹಟ ಮಾಡಿತು ಅಂತಾ ಅವಳು ಕೇಳಿದ್ದನ್ನೆಲ್ಲಾ ಕೊಡಿಸುತ್ತಾ ಬಂದಿದ್ದಕ್ಕೆ ಇವತ್ತೂ ಸಹಾ ಅವಳು ಅದೇ ಅಭ್ಯಾಸವನ್ನು ಮುಂದುವರಿಸಿದ್ದಳು. ಅಪ್ಪ, ಅಮ್ಮ, ಅಜ್ಜಿ ಸೇರಿ ಇದನ್ನು ಹೇಗಾದರೂ ಸರಿ ಮಾಡಲೇಬೇಕು ಅಂತಾ ಉಪಾಯ ಮಾಡಿ ಶಾಲಿನಿಯನ್ನು ಊರಿಗೆ ಹೊರಡಿಸಿದ್ದರು.

ಭಾನುವಾರ ಅಜ್ಜಿ, ಮೊಮ್ಮಗಳು ಇಬ್ಬರೂ ಊರಿಗೆ ಹೊರಟರು. ಅವತ್ತು ಬೆಳಿಗ್ಗೆ ಬೇಗನೆ ಹೊರಟಿದ್ದರಿಂದ ಶಾಲಿನಿ ಬೆಳಿಗ್ಗೆ ಹಾಲನ್ನೂ ಸಹಾ ಕುಡಿದಿರಲಿಲ್ಲ. ಬೆಳಿಗ್ಗೆ ಬೇಗ ಎದ್ದಿದ್ದರಿಂದ ಅವಳಿಗೆ ಹೊಟ್ಟೆ ಬೇರೆ ಹಸಿಯುತ್ತಿತ್ತು. ಹಳ್ಳಿಯಲ್ಲಿನ ಅವಳ ಮಾವನ ಮನೆಗೆ ಬಂದಾಗ ತಿಂಡಿಯ ಸಮಯವಾಗಿತ್ತು. ಅತ್ತೆ ಬಿಸಿ ಬಿಸಿ ರಾಗಿರೊಟ್ಟಿ ಹಾಕುತ್ತಾ ಕೂತಿದ್ದರು. ಜೊತೆಗೆ ತರಕಾರಿ ಪಲ್ಯ. ಶಾಲಿನಿ ಎಂದಿನಂತೆ ಅಂದೂ ಕೂಡಾ ತಿಂಡಿ ಬೇಡವೆಂದು ಹಟ ಮಾಡುತ್ತಾ ಕುಳಿತಿದ್ದಳು . ಅದರೆ ಅವಳ ಹಟಕ್ಕೆ ಮಣಿದು ಜಂಕ್ ಫುಡ್ ಅಥವಾ ಫಾಸ್ಟ್ ಫುಡ್ ಕೊಡಲು ಅಲ್ಲಿ ಯಾರೂ ಇರಲಿಲ್ಲ. ಕೊನೆಗೆ ಹೊಟ್ಟೆ ಹಸಿವು ತಾಳಲು ಆಗದೆ ಅದನ್ನೇ ತಿಂದಳು. ಆಮೇಲೆ ಅಜ್ಜಿಯ ಜೊತೆಗೆ ಹೇಳಿದಳು "ನನಗೆ ಅವು ಇಷ್ಟಾನೇ ಆಗುತ್ತಿರಲಿಲ್ಲ, ಆದರೆ ಅವು ತುಂಬಾ ಚೆನ್ನಾಗಿವೆ. ಹೊಟ್ಟೆ ತುಂಬಾ ತಿಂದೆ" ಎಂದು ಹೇಳಿದಳು. ಅದಕ್ಕೆ ಅಜ್ಜಿ "ರಾಗಿಯಲ್ಲಿ ತುಂಬಾ ಶಕ್ತಿ ಇರುತ್ತದೆ, ರಾಗಿ ತಿಂದವನಿಗೆ ರೋಗ ಬರುವುದಿಲ್ಲ. ಅದನ್ನು ತಿಂದರೆ ನೀನು ಗಟ್ಟಿಯಾಗುತ್ತೀಯ. ಅಲ್ಲದೇ ತರಕಾರಿಗಳಲ್ಲಿ ವಿಟಮಿನ್, ಪ್ರೋಟೀನ್ ಎಲ್ಲವೂ ಇರುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಇರುತ್ತದೆ. ಹಣ್ಣುಗಳು, ಸೊಪ್ಪುಗಳು ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಮುಂದೆ ಇದನ್ನೆಲ್ಲಾ ತಿನ್ನಬೇಕು. ಜಂಕ್ ಫುಡ್ ಅನ್ನು ತಿನ್ನಬಾರದು. ಹೆಚ್ಚು ಚಾಕಲೇಟ್ ತಿಂದರೆ ಹಲ್ಲೆಲ್ಲಾ ಹುಳುಕಾಗುತ್ತದೆ. ಮ್ಯಾಗಿ, ಚಿಪ್ಸ್, ಕರಿದ ತಿಂಡಿಗಳಲ್ಲಿ ನಿನ್ನ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ" ಎಂದು ಹೇಳಿದರು. "ಸರಿ ಅಜ್ಜಿ, ನಾನು ಆಟ ಆಡಲು ಹೋಗಬೇಕು" ಅಂತಾ ಹೇಳಿ ಅಲ್ಲಿಂದ ಓಡಿದಳು.

ಸುತ್ತಮುತ್ತ ಇದ್ದ ನಿಂಗಿ, ಈರ, ಸುಮತಿ, ರಾಹುಲ್ ಎಲ್ಲರನ್ನೂ ಸೇರಿಸಿಕೊಂಡು ಆಟ ಆಡುತ್ತಾ ಇರುವಾಗ ಈರ ಇದ್ದಕ್ಕಿದ್ದಂತೆ ತಲೆ ಸುತ್ತಿ ಬಿದ್ದು ಬಿಟ್ಟ. ಶಾಲಿನಿಗೆ ಭಯವಾಗಿ ಮಾವನನ್ನು ಕರೆದಳು. ಈರನನ್ನು ಡಾಕ್ಟರ್ ಹತ್ತಿರ ಕರೆದುಕೊಂಡು ಹೋದಾಗ ಡಾಕ್ಟರ್ ಹೇಳಿದರು. "ಸರಿಯಾಗಿ ಊಟ, ತಿಂಡಿ ತಿನ್ನದೆ ಹೀಗಾಗಿದ್ದಾನೆ, ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗುತ್ತಿಲ್ಲ" ಎಂದು ಹೇಳಿ ಇಂಜೆಕ್ಷನ್ ಕೊಟ್ಟು, ಗ್ಲೂಕೋಸ್ ಹಾಕಿ, ಮಾತ್ರೆ,ಟಾನಿಕ್ ಎಲ್ಲವನ್ನೂ ಕೊಟ್ಟು ಕಳುಹಿಸಿದರು. ಶಾಲಿನಿ ಅಜ್ಜಿಯ ಹತ್ತಿರ ಎಲ್ಲವನ್ನೂ ಹೇಳಿ ಅಜ್ಜಿಗೆ "ನಾನೂ ಇನ್ನು ಊಟ, ತಿಂಡಿಯನ್ನು ಚೆನ್ನಾಗಿ ತಿನ್ನುತ್ತೇನೆ." ಎಂದು ಭಾಷೆ ನೀಡಿದಳು.

ಅವತ್ತಿನಿಂದ ಶಾಲಿನಿ ಯಾರ ಕೈಯಲ್ಲೂ ಹೇಳಿಸಿಕೊಳ್ಳದೆ ತಟ್ಟೆಯಲ್ಲಿ ಹಾಕಿಕೊಟ್ಟ ಊಟವನ್ನು ಚೂರೂ ಉಳಿಸದೆ ಖಾಲಿ ಮಾಡುತ್ತಾಳೆ. ಹಾಲು ಕುಡಿದು, ಹಣ್ಣು ತಿನ್ನುತ್ತಾಳೆ. ಜಂಕ್ ಫುಡ್ ತಿನ್ನುವುದಿಲ್ಲ. ಶಾಲಿನಿ ಬದಲಾದಳು. ನೀವೂ ಬದಲಾಗ್ತೀರಾ ಅಲ್ವಾ?

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ