ಅಂದು ಶೇಖರನ ತಿಥಿ. ಎಲ್ಲರೂ ತಿಂಡಿ ತಿನ್ನಲು ಕೂರಬೇಕೆಂದುಕೊಳ್ಳುವಷ್ಟರಲ್ಲಿ ಅವನ ಹೆಂಡತಿಯಿಂದ ಜೋರಾದ ಮಾತು ಕೇಳಿಸಿತು. "ಬನ್ನಿ,ಬನ್ನಿ, ತಿಂಡಿ ತಿನ್ನಿ. ಅವರಿದ್ದಿದ್ದರೆ ತಿಂಡಿ ತಿನ್ನಿಸದೆ ಕಳುಹಿಸುತ್ತಾ ಇದ್ರಾ?", "ಇವರು ನಿಂಬೆಹಣ್ಣು ಮಾರ್ತಾರೆ, ಶೇಖರ್ ಗೆ ಇವರಂದ್ರೆ ಅದೇನೋ ಮಮತೆ, ಮಮ್ಮಿ ತರಹಾನೇ ಇದ್ದಾರೆ ಅಂತಾ ಬಂದಾಗಲೆಲ್ಲಾ ಕೂರಿಸಿ, ಮಾತಾಡಿಸಿ ಕಳುಹಿಸುತ್ತಾ ಇದ್ರು."ಅಂತಾ ಎಲ್ಲರಿಗೂ ಕೇಳಿಸುವ ಹಾಗೆ ದೊಡ್ಡ ದ್ವನಿಯಲ್ಲಿ ಮಾತನಾಡಿಸಿ, ಯಾರಿಗೋ ಕೈ ಸನ್ನೆಯಲ್ಲೇ ಕರೆದು ತಿಂಡಿ ಕೊಡು ಅಂತಾ ಹೇಳಿ, ಆ ದೊಡ್ಡ ಬಂಗಲೆಯೊಳಗೆ ಹೋಗಿಬಿಟ್ಟಳು.
ಕಣ್ಣಲ್ಲಿ ನೀರು ತುಂಬಿಕೊಂಡ ವಯಸ್ಸಾದ ಅಜ್ಜಿಯೊಬ್ಬರು ಬಂದು ತಿಂಡಿ ತಿಂದು ಹೊರಡುವುದಕ್ಕೆ ಎದ್ದು ನಿಂತಾಗ, ಹೈ ಸೊಸೈಟಿ ಜನ ಎನ್ನಿಸಿಕೊಂಡವರು ಯಾರೂ, ಅವರನ್ನು ಮಾತಾಡಿಸುವುದಕ್ಕೂ ಮುಂದೆ ಬರದೆ ಅಲ್ಲೇ ನಿಂತು ಅನುಕಂಪದ ದೃಷ್ಟಿಯಿಂದ ನೋಡುವಾಗ, ನನಗೆ ತಡೆಯಲಾಗದೆ , "ಬನ್ನಿ ಅಮ್ಮ, ಒಳಗಡೆ ಬಂದು ಅವರಿಗೆ ಪೂಜೆ ಮಾಡಿ ಹೋಗಿ" ಅಂದಾಗ, ಇಲ್ಲ ತಾಯಿ ಹೊರಡುತ್ತೇನೆ ಎಂದು ಗೇಟಿನ ಹೊರಗೆ ಬಂದು ಅವರ ನಿಂಬೆ ಹಣ್ಣಿನ ಬುಟ್ಟಿಯನ್ನು ಯಾರಾದರೂ ಹೊರಿಸುತ್ತಾರೇನೋ ಅಂತಾ ನೋಡುತ್ತಾ ನಿಂತಿದ್ದಾಗ ಹೋಗಿ ಕೇಳಿದೆ. "ಶೇಖರಾ, ಅಷ್ಟೊಂದು ಪ್ರೀತಿಯಿಂದ ಕರೆದು ತಿಂಡಿ ಕೊಡುತ್ತಾ ಇದ್ದನಂತೆ, ನೀವ್ಯಾಕೆ ಅವನಿಗೆ ಪೂಜೆ ಕೂಡಾ ಮಾಡದೆ ಹೊರಟು ನಿಂತಿದ್ದೀರಾ? ಅದೂ ಒಳಗಡೆಗೂ ಬರದೆ..?" ಅಂದೆ.
ಅದಕ್ಕೆ ಆ ಅಜ್ಜಿ "ನೀವು ಕೂಡಾ ಅವಳ ಮಾತಿಗೆ ಬೆರಗಾಗಿ ಬಿಟ್ರಾ?" ಅಂದ್ರು. ನನಗೆ ಆಶ್ಚರ್ಯ ಆಯ್ತು, ಎಲ್ಲರೂ ಶೇಖರನ ಹೆಂಡತಿಯ ನಾಟಕೀಯ ವರ್ತನೆ ಮತ್ತು ಮಾತುಗಳ ಬಗ್ಗೆ ಹೇಳಿದ್ದರೂ ನನಗೇಕೋ ನಂಬಿಕೆ ಬಂದಿರಲಿಲ್ಲ. ಅದೇಕೋ ಈ ಮುಗ್ದ ಅಜ್ಜಿಯ ಮಾತನ್ನು ಕೇಳುತ್ತಾ ಹೋದಂತೆ ಶೇಖರನ ಮತ್ತು ಅವನ ಹೆಂಡತಿಯ ಮತ್ತೊಂದು ಮುಖ ಪರಿಚಯವಾಗುತ್ತಾ ಹೋಯಿತು.
ನನಗೆ ಅದನ್ನು ಅಜ್ಜಿ ಹೇಳಿದ್ದು ಹೀಗೆ.
"ಆ ಯಪ್ಪಾ ತುಂಬಾ ಒಳ್ಳೆಯವರು, ಆದರೆ ಯಾಕೆ ಇವರನ್ನು ಮದುವೆ ಮಾಡಿಕೊಂಡನೋ ಗೊತ್ತಿಲ್ಲ. ಮನೆ-ಅಳಿಯನ ರೀತಿ ಬದುಕುತ್ತಾ ಇದ್ದ ಇವರಿಗೆ, ಅಮ್ಮನ ಬಗ್ಗೆ ಪ್ರೀತಿ-ಕಾಳಜಿ ಇದ್ದರೂ ಅಮ್ಮನನ್ನು ಕರೆದುಕೊಂಡು ಬಂದು ಇಟ್ಟುಕೊಳ್ಳೋ ಸ್ವಾತಂತ್ರ್ಯ ಕೂಡಾ ಇರಲಿಲ್ಲ. ದುಡಿಯುತ್ತಾ ಇದ್ದದ್ದು ಇವರೇ ಆಗಿದ್ರೂ, ನಿರ್ಧಾರ ಅವಳದ್ದೇ.
ನಾನು ಬಂದಾಗಲೆಲ್ಲಾ 20 ರೂಪಾಯಿಗಳ ನಿಂಬೆಹಣ್ಣು ತೆಗೆದುಕೊಂಡು 50 ರೂಪಾಯಿ ಕೊಡ್ತಾ ಇದ್ರು. ಚಿಲ್ಲರೆ ಇಲ್ಲ ಅಂದ್ರೆ, ಚಿಲ್ಲರೆ ಬೇಡ ಇಟ್ಕೊಳ್ಳಿ ಅಂತಾ ಹೇಳ್ತಾ ಇದ್ರು. ಅವರ ಹೆಂಡತಿಗೆ ಬೀದಿಯಲ್ಲಿ ನನ್ನ ಜೊತೆಯಲ್ಲಿ ವ್ಯಾಪಾರ ಮಾಡುತ್ತಾ ಇದ್ದದ್ದು ಅವರ ದೊಡ್ಡಸ್ತಿಕೆಗೆ ಕುಂದು ಅಂತಾ ಅಂದುಕೊಳ್ತಾ ಇದ್ರು. ಅಷ್ಟೆಲ್ಲಾ ಇದ್ರೂ ನನಗೆ ಹೆಚ್ಚಿಗೆ ದುಡ್ಡು ಕೊಡುತ್ತಾ ಇದ್ದುದ್ದಕ್ಕಾಗಿ ಹಂಗಿಸುತ್ತಾ ಇದ್ರು, ಇವರು ಕೂಡಾ ಆಮೇಲಾಮೇಲೆ ಅದನ್ನು ನೋಡಲೂ ಆಗದೆ, ಆಯಮ್ಮನಿಗೆ ಜೋರು ಮಾಡಲೂ ಆಗದೆ ನಿಂಬೆಹಣ್ಣು ಕೊಂಡು ಅದನ್ನು ಅವರ ಕೈಯಲ್ಲಿ ಒಳಗಿಡುವುದಕ್ಕೆ ಕೊಟ್ಟು ಕಳಿಸಿ,ಆಮೇಲೆ ದುಡ್ಡು ಕೊಡ್ತಾ ಇದ್ರು.
ಕೆಲವೊಮ್ಮೆ ರಗಳೆ ತೆಗೆದು "ಮನೆಯಲ್ಲಿ ನಿಂಬೆಹಣ್ಣು ಇದ್ದಾವೆ, ಸುಮ್ಮನೆ ಯಾಕೆ ತೆಗೆದುಕೊಳ್ಳೂತ್ತೀರಾ?" ಅಂತಾ ತೆಗೆದುಕೊಳ್ಳುವುದಕ್ಕೆ ಬಿಡದೆ ಇರುವಾಗ, "ಅದನ್ನೆಲ್ಲಾ ಜೂಸ್ ಮಾಡಿ ಕೊಡು , ಇವತ್ತೇ ಕುಡಿದು ಖಾಲಿ ಮಾಡುತ್ತೇನೆ, ಈಗ ಸುಮ್ನಿರು" ಅಂದು ನಿಂಬೆಹಣ್ಣು ಕೊಂಡುಕೊಳ್ತಾ ಇದ್ರು.
ಕೆಲವೊಮ್ಮೆ ಇವರ ಮನೆ ಕಡೆ ಬರೋದೇ ಬೇಡ ಅಂದುಕೊಳ್ಳುತ್ತಾ ಇದ್ದರೂ,ಆ ಯಪ್ಪ ಹೇಳಿದ ಮಾತು ಆ ಯೋಚನೆಯನ್ನು ಬಿಡುವ ಹಾಗೆ ಮಾಡಿತು."ಅಮ್ಮನ್ನಂತೂ ಚೆನ್ನಾಗಿ ನೋಡಿಕೊಂಡು,ಅವರ ಜೊತೆ ಮಾತಾಡೋ ಯೋಗ ಇಲ್ಲದ ಹಾಗೆ ಆಯ್ತು. ನೀವು ನಮ್ಮಮ್ಮನ ತರಹಾನೇ ಇದ್ದೀರಾ.. ನೀವೂ ಬರದೇ ಇರಬೇಡಿ" ಅಂತಿದ್ರು.
ಬಂದಾಗಲೆಲ್ಲಾ ತಿಂಡಿ ಕೊಡು ಅಂದ್ರೆ ಮನೆಯಲ್ಲಿ ಮಿಕ್ಕಿದ್ದನ್ನೆಲ್ಲಾ ತಂದು ಕೊಡ್ತಾ ಇದ್ಲು ಆ ಮಹಾತಾಯಿ.ಕೆಲವೊಮ್ಮೆ ಹಳಸಿದ ಪದಾರ್ಥ ಕೂಡಾ ಇರ್ತಾ ಇತ್ತು. ಜೊತೆಗೆ "ಇಷ್ಟು ದೊಡ್ಡ ಮನೆಯ ಅನ್ನ ತಿನ್ನೋಕೂ ಪುಣ್ಯ ಮಾಡಿರಬೇಕು" ಅಂತಾ ಹಂಗಿಸುತ್ತಿದ್ದಳು. ಆ ಮನುಷ್ಯನ ಮನಸ್ಸಿಗೆ ಬೇಜಾರಾಗದೇ ಇರಲಿ ಅಂತಾ ಅದನ್ನು ತೆಗೆದುಕೊಂಡು, "ಈಗಷ್ಟೇ ತಿಂಡಿ ತಿಂದು ಬಂದಿದ್ದೀನಿ,ಆಮೇಲೆ ತಿಂತೀನಿ" ಅಂತಾ ಹೇಳಿ ಹೊರಟು ಬಿಡ್ತಾ ಇದ್ದೆ.
"ಹೊರಗಡೆ ಮಾತಾಡಿದ್ರೇ ಸಹಿಸದವಳು, ಮನೆ ಒಳಗಡೆ ಬಂದ್ರೇ ಸಹಿಸುತ್ತಾಳಾ? ನನ್ನನ್ನು ಕರೆದು ಅಷ್ಟು ಜೋರಾಗಿ ಮಾತನಾಡಿ ತಿಂಡಿ ತಿನ್ನಿ ಅಂದಿದ್ದು ಪ್ರತಿಷ್ಟೆಗೇ ಹೊರತು ಮತ್ತೇನಿಲ್ಲ."
"ಹೆತ್ತ ಮಕ್ಕಳು ನನ್ನನ್ನು ಸಾಕುವುದಕ್ಕೆ ದುಡ್ಡು ಕೇಳ್ತಾರೆ, ಅದನ್ನು ಕೊಟ್ಟರೂ ಪ್ರೀತಿಯಿಂದ ಒಂದು ದಿನವೂ ಮಾತನಾಡಿಸುವುದಿಲ್ಲ.ಅಂತಾದ್ರಲ್ಲಿ ನನ್ನಲ್ಲಿ ಅವರ ಅಮ್ಮನ ರೂಪ ಕಂಡು ಮಾತಾಡಿಸ್ತಾ ಇದ್ದ ಈತ ನಿಜವಾಗಲೂ ಒಳ್ಳೆಯ ಮನುಷ್ಯ" ಅಂತಾ ಹೇಳಿ ಬುಟ್ಟಿ ಹೊರಿಸಿಕೊಂಡು ಹೊರಟೇ ಬಿಟ್ಟರು.
"ಶೇಖರಾ ಯಾರಿಗೂ ಬಿಡಿಗಾಸು ಬಿಚ್ಚೋದಿಲ್ಲ, ಅಮ್ಮ ಸತ್ತಾಗಲೂ 2 ದಿನ ಉಳಿಯದೆ ದೊಡ್ಡಸ್ತಿಕೆ ತೋರಿಸಿ ಹೊರಟ" ಎಂಬ ಸುತ್ತಮುತ್ತಲಿನವರ ಅಪವಾದಗಳಿಗೆ ಕಾರಣ ಸಿಕ್ಕಿತು.
ಮಕ್ಕಳ ದುರಾಸೆಯಿಂದ ಬೀದಿ-ಬೀದಿಯಲ್ಲಿಅಲೆಯುತ್ತಿರುವ ಅಮ್ಮನಿಗೆ ಮಗನಾದ.ಹೆತ್ತ ತಾಯಿಯನ್ನು ನೋಡಿಕೊಳ್ಳಲಾಗದ ಅಸಹಾಯಕತೆಯಲ್ಲಿ ಕೊರಗಿ ತನ್ನದೇ ಮಾರ್ಗದಿಂದ ಒಬ್ಬಳು ಮಮತಾಮಯಿ ತಾಯಿಯನ್ನು ಪಡೆದುಕೊಂಡ. ಮಕ್ಕಳ ಪ್ರೀತಿಗೆ ಹಂಬಲಿಸುತಿದ್ದ ಅಮ್ಮನಿಗೆ ಮಗನ ಪ್ರೀತಿ ಸಿಕ್ಕಿತು. ತಾಯಿಯ ಪ್ರೀತಿಗೆ ಹಂಬಲಿಸುತ್ತಿದ್ದವನಿಗೆ ದೊಡ್ಡಸ್ತಿಕೆಯ ಅಹಂ ಅನ್ನು ತೊರೆದು ಶರಣಾದಾಗ ತಾಯಿಯ ವಾತ್ಸಲ್ಯ ಸಿಕ್ಕಿತು.
ಜನ್ಮ ಮಾತ್ರ ತಾಯಿ-ಮಕ್ಕಳ ಬಂಧವನ್ನು ಬೆಸೆಯುವುದಿಲ್ಲ, ಜೀವನ ಕೂಡಾ ತಾಯಿ-ಮಕ್ಕಳನ್ನು ಹತ್ತಿರ ತಂದು ಯಾವುದೋ ಎಳೆಯಿಂದ ಸೇರಿಸುತ್ತದೆ ಎಂಬ ಸತ್ಯ ದರ್ಶನವನ್ನು ಶೇಖರ ಮಾಡಿಸಿದ್ದ. ಋಣಾನುಬಂಧ ಕೇವಲ ಪಶು, ಪತ್ನಿ, ಮಕ್ಕಳು, ಮನೆಗೆ ಮಾತ್ರವಲ್ಲ. ಮಮತೆಯಿಂದ ಕೂಡಿದ ಇಂತಹಾ ತಾಯಿ ಮಕ್ಕಳ ಸಂಬಂಧವೂ ಋಣಾನುಬಂಧವೇ...
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ