ಭಾನುವಾರ, ಫೆಬ್ರವರಿ 2, 2020

ಕಳಂಕಿನಿ

ಪ್ರತಿ ರಾತ್ರಿ ಹುಟ್ಟಿ, ಮರು ಹಗಲು ಸಾಯುವ 
ಚಂದ್ರನಿಗೆ ಕಲೆಗಳಿದ್ದರೂ, ಕಳಂಕವಿಲ್ಲ..
ಪ್ರತಿ ರಾತ್ರಿ ಸತ್ತು,ಸತ್ತು ಮರು ಬೆಳಿಗ್ಗೆ ಹುಟ್ಟುವ
ಕಲೆಗಳಿಲ್ಲದ ನಿತ್ಯಮುತ್ತೈದೆ ಕಳಂಕಿನಿ

ಹೀಗೊಂದು ಬರಹ ಪುಸ್ತಕದ ಬೆನ್ನುಡಿಯಾಗಿ ಅಚ್ಚಾಗಿ ಮನಸೆಳೆದಿತ್ತು. ಆ ಪುಸ್ತಕಕ್ಕೆ ಯಾವುದೇ ಮುನ್ನುಡಿ, ಬೆನ್ನುಡಿಗಳು ಇರಲಿಲ್ಲ. ಗ್ರಂಥಾಲಯದಲ್ಲಿ ಈ ವಾರ ಪುಸ್ತಕವನ್ನು ಹುಡುಕುವಾಗ ಸಿಕ್ಕ ಪುಸ್ತಕ ಅದು. ಪುಸ್ತಕದ ಹೆಸರು "ಕಳಂಕಿನಿ".. ಅಡಿ ಬರಹ "ಕೆಂಪು ದೀಪದ ಕೆಳಗಿನ ಗತದ ಕತ್ತಲು". ಯಾಕೋ ಕಳಂಕಿನಿ ಎಂಬ ಹೆಸರು ಮನಸೆಳೆದಿತ್ತು. ಪ್ರಸಿದ್ಧ ಲೇಖಕರ ಹೆಸರು ಅಥವಾ ಯಾರದ್ದೋ ಶಿಫಾರಸ್ಸು ಹೊಂದಿದ್ದ ಪುಸ್ತಕಗಳನ್ನೇ ಓದಲೆಂದು ಆರಿಸಿಕೊಳ್ಳುತ್ತಿದ್ದ ನನಗೆ ಯಾಕೋ ಈ ಪುಸ್ತಕ ಮನಸೆಳೆದಿತ್ತು. ನಾನು ಪುಸ್ತಕ ಓದುವ ಗೀಳು ಹಚ್ಚಿಸಿಕೊಂಡು 5 ರಿಂದ 6 ತಿಂಗಳಾಗಿರಬಹುದೇನೋ ಅಷ್ಟೇ.. ಪುಸ್ತಕ ಓದುವ ಹುಚ್ಚು ಹತ್ತಿಸಿದ ದೀಪಾ ಏಕೋ ನೆನಪಾದಳು. ಅವಳನ್ನು ಕಂಡು ಒಂದು ವಾರದ ಮೇಲಾಗಿತ್ತು. ನಾನು ಪ್ರಪೋಸ್ ಮಾಡಿದ ದಿನದಿಂದ ನನ್ನ ಕಣ್ಣಿಗೆ ಅವಳು ಕಂಡಿರಲೇ ಇಲ್ಲ.

ಪ್ರತಿ ಭಾನುವಾರ ತಪ್ಪದೇ ಅವಳು ಬರುತ್ತಿದ್ದ ಜಾಗ ಇದು. ದೇವರ ಮೇಲೆ ಹೂ ತಪ್ಪಿದರೂ ಅವಳು ಈ ಗ್ರಂಥಾಲಯಕ್ಕೆ ಬರುವುದು ತಪ್ಪುತ್ತಿರಲಿಲ್ಲ. ಅವಳನ್ನು ಒಂದು ವರ್ಷದಿಂದ ಅವಳನ್ನು ನೋಡುತ್ತಿದ್ದರೂ ಅವಳ ಪರಿಚಯ ಬಹಳ ಇತ್ತೀಚಿನದ್ದು. ಆದರೆ ಅವಳ ವ್ಯಕ್ತಿತ್ವ ಸೆಳೆಯುವ ಸೂಜಿಗಲ್ಲಿನಂತದ್ದು. ಅಮ್ಮನಂತಹ ಅಂತಃಕರಣ, ಅಕ್ಕನಂತಹಾ ಅಕ್ಕರೆ, ಗೆಳತಿಯ ಕಾಳಜಿ ಇವೆಲ್ಲವೂ ಇತ್ತು. ಹಾಗಾಗಿಯೇ ಇವಳೇ ನನ್ನ ಜೀವನ ಸಂಗಾತಿ ಎಂಬ ತೀರ್ಮಾನಕ್ಕೆ ಬಂದು ನನ್ನ ನಿರ್ಧಾರವನ್ನು ತಿಳಿಸಿ ಅವಳ ಒಪ್ಪಿಗೆಗಾಗಿ ಕಾದಿದ್ದೆ. ಸ್ಪಷ್ಟ ಗುರಿಯಿಲ್ಲದ, ಕನಸಿಲ್ಲದ ನನ್ನನ್ನು ನಿರ್ದಿಷ್ಟ ಬಾಳ ಪಥದತ್ತ ತಿರುಗಿಸಿದವಳು ಅವಳು. ಅವಳಿಗೆ ಏನೂ ಅಲ್ಲದ ನನ್ನನ್ನೇ ಇಷ್ಟು ಕಾಳಜಿ ಮಾಡುತ್ತಿದ್ದವಳು ನನ್ನ ಬದುಕಲ್ಲಿ ಬಂದರೆ ನನ್ನ ಬದುಕು ಎಷ್ಟು ಸುಂದರವಾಗಬಹುದು ಅಲ್ಲವೇ..? ಇದೇ ಯೋಚನೆಯೇ ನನ್ನನ್ನು ಅವಳ ಹತ್ತಿರ ಆ ವಿಚಾರವನ್ನು ಪ್ರಸ್ತಾಪಿಸಿದ್ದು..

ಇಂಜಿನಿಯರಿಂಗ್ ಮಾಡಿ ಕೆಲಸಕ್ಕೆ ಹೋಗದೆ ಅಲೆಯುತ್ತಿದ್ದ ಜೊತೆಗೆ ಕೈಕೊಟ್ಟ ಪ್ರೀತಿಸಿದವಳ ಹಿಂದಿನ ನೆನಪುಗಳು ರೀತಿ ಸುಮುಖ್ ನ ಬದುಕಲ್ಲಿ ಅವನನ್ನು ಭಾದಿಸುತ್ತಿದ್ದವು. ಲೈಬ್ರರಿಯ ರೋಡಿನಲ್ಲಿ ಇದ್ದ ಟೀ ಅಂಗಡಿ ಅಲ್ಲೇ ಇದ್ದ ಕಟ್ಟೆ ಅವನ ಬೆಳಗಿನ ತಾಣವಾದರೆ, ರಾತ್ರಿ ಅಲ್ಲೇ ಪಕ್ಕದ ರಸ್ತೆಯ ಬಾರು. ಅವನ ಅಪ್ಪ-ಅಮ್ಮ ಇವನನ್ನು ತಿದ್ದಲಾಗದೆ ಏನಾದರೂ ಮಾಡಿಕೋ ಎಂದು ಬಿಟ್ಟು ಸುಮ್ಮನಾಗಿದ್ದರು. ಸುಮುಖ್ ನ ನೆನಪಿನ ಶಕ್ತಿ ಬಹಳ ಚೆನ್ನಾಗಿತ್ತು. ಬುದ್ದಿವಂತ ವಿದ್ಯಾರ್ಥಿಯೇ.. ಆದರೆ, ಪ್ರೇಮ ವೈಫಲ್ಯ ಅವನನ್ನು ಆ ಸ್ಥಿತಿಗೆ ದೂಡಿತ್ತು. ಎಂದಿನಂತೆ ವಾರ ವಾರವೂ ಲೈಬ್ರರಿಗೆ ಬರುತ್ತಿದ್ದ ದೀಪಾಳನ್ನು ನೋಡುತ್ತಿದ್ದ. ಅವತ್ತು ಕೆಲ ಹುಡುಗರು ಅವಳನ್ನು ಚುಡಾಯಿಸುತ್ತಿದ್ದರು. ಅದನ್ನು ಕಂಡವನು ಅವಳನ್ನು ಅವರಿಂದ ರಕ್ಷಿಸಿದ್ದ. ಅದಾದ ನಂತರ ಅವರ ಪರಿಚಯ ಸ್ನೇಹಕ್ಕೆ ತಿರುಗಿತು. ಅವಳ ಪುಸ್ತಕ ಪ್ರೇಮ ಇವನನ್ನೂ ಓದುವಂತೆ ಸೆಳೆಯಿತು. ಪುಸ್ತಕದ ಶಕ್ತಿಯೇ ಅಂತಹದ್ದು. ಕುತೂಹಲಕ್ಕೆಂದು ಪುಸ್ತಕ ತೆಗೆದವನು ಅದು ಮುಗಿಯುವವರೆಗೂ ಬಿಡದೇ ಓದಿದ. ಸ್ಫೂರ್ತಿ ಕತೆಗಳನ್ನು ಓದಿದ, ಆತ್ಮಕತೆ, ಸಾಮಾಜಿಕ ಕಾದಂಬರಿ ಎಲ್ಲವನ್ನೂ ಓದಿದ..ಅವಳೊಡನೆ ಚರ್ಚಿಸಿದ, ಓದಿನ ಜೊತೆಗೆ ಅವನ ವಿಚಾರಧಾರೆ, ವಿಶ್ಲೇಷಣಾ ಶಕ್ತಿ ಎಲ್ಲವೂ ಬಲಾಗುತ್ತಿತ್ತು. ಅದರ ಪ್ರಭಾವದಿಂದಾಗಿ, 3 ತಿಂಗಳಷ್ಟರೊಳಗೆ ಅವನ ಬದುಕಿನ ಗತಿಯೇ ಬದಲಾಯಿತು. ಕೆಲಸಕ್ಕೆ ಹೋಗಲು ಶುರು ಮಾಡಿದ, ಮನೆಯ ಜವಾಬ್ದಾರಿ ತೆಗೆದುಕೊಂಡ. ಅವನ ಅಪ್ಪ-ಅಮ್ಮನಿಗೆ ಇವನ ಈ ಹೊಸ ಪರಿ ಆಶ್ಚರ್ಯ ತಂದಿತು ಜೊತೆಗೆ ಸಂತೋಷವನ್ನೂ.. ಇದಕ್ಕೆ ಕಾರಣವಾದ ದೀಪಾಳನ್ನು ನೋಡಲು ಅವರಿಗೂ ಆಸೆ. ಅವಳನ್ನು ಕರೆತರುವಂತೆ ಹೇಳಿದ್ದರು. ಸುಮುಖ್ ಗೆ ಅವಳ ಕುಟುಂಬ ಅಥವಾ ಅವಳ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಅಲ್ಲದೇ, ಇವನು ಮನೆಗೆ ಆಹ್ವಾನಿಸಿದಾಗ ಅವಳು ನಯವಾಗಿಯೇ ಮುಂದೆ ತಳ್ಳುತ್ತಾ ಬರುತ್ತಿದ್ದಳು. ಅವಳೊಡನೆ ಅನಾಥಾಶ್ರಮ, ವೃದ್ದಾಶ್ರಮಕ್ಕೆ ಹೋಗಿದ್ದನೇ ಹೊರತು ಅವಳ ಮನೆಗೆ ಹೋಗಿರಲಿಲ್ಲ. ಅವಳ ಮನೆ ಎಲ್ಲಿದೆ ಎಂಬುದೂ ಅವನಿಗೆ ತಿಳಿದಿರಲಿಲ್ಲ, ಅವಳ ಕುಟುಂಬದ ಕುರಿತು ಇವನೂ ಕೇಳಿರಲಿಲ್ಲ, ಅವಳೂ ಹೇಳಿರಲಿಲ್ಲ. ಹೀಗೆಯೇ ಇಬ್ಬರ ಸ್ನೇಹ ಮುಂದುವರಿಯುತ್ತಿರುವಾಗಲೇ ಅವಳಿಗೆ ಅವನು ಪ್ರೀತಿಯನ್ನು ನಿವೇದಿಸಿದ್ದು.

"ಕಳಂಕಿನಿ"ಯ ಮೊದಲ ಪುಟ ತೆರೆದವನು ಅದರಲ್ಲಿಯೇ ಮುಳುಗಿ ಹೋದ. 

ಬದುಕಿನಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದರೆ ಅಲ್ಲಿ ಬದುಕಿನ ಅರ್ಥವೇ ಬದಲಾಗುತ್ತದೆ. ಬದುಕನ್ನು ಬಂದಂತೆ ಸ್ವೀಕರಿಸಿ ಬದುಕಿಬಿಡಬೇಕು. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಅಪ್ಪನಿಗೆ ಹುಟ್ಟಿದ್ದು ಹೆಣ್ಣು ಎಂದು ಅರಿವಾದಾಗಲೇ ತಿರಸ್ಕಾರ ಹುಟ್ಟಿತ್ತು, ಜೊತೆಗೆ ಆ ಹೆರಿಗೆಯಲ್ಲಿ ಅಮ್ಮನೂ ತೀರಿ ಹೋದದ್ದು ಜೊತೆಯಾಯಿತು. ಅಮ್ಮನನ್ನು ತಿಂದುಕೊಂಡವಳು ಎಂಬ ಪಟ್ಟ ದೊರೆಯಿತು. ಅಪ್ಪನಿಗೆ ಹೊಸ ಹೆಂಡತಿ ಬಂದಳು. ಅಪ್ಪನಿಗೇ ಬೇಡವಾದ ಮಗು ಮಲತಾಯಿಗೆ ಬೇಕಾದ್ದು ಹೇಗಾದೀತು..? ತಿರಸ್ಕಾರ, ಅವಮಾನಗಳಲ್ಲೇ ಬದುಕು ಕಳೆಯಿತು. ಶಾಲೆಯ ಮುಖವನ್ನೇ ಕಾಣಲಿಲ್ಲ, ಮನೆಯ ಚಾಕರಿಯಲ್ಲೇ ಸಮಯ ಕಳೆದು ಬಿಡುತ್ತಿತ್ತು. ಯೌವ್ವನ ಎಂಬುದು ಬದುಕನ್ನು ಮತ್ತಷ್ಟು ದುಸ್ತರಗೊಳಿಸಿತ್ತು. ಮದುವೆ ಎಂಬ ಕನಸಲ್ಲಿದ್ದವಳಿಗೆ, ಮದುವೆಯ ವಾಸ್ತವದ ಬಿಸಿ ಮುಟ್ಟಿತ್ತು. 40 ವರ್ಷದ ಒಬ್ಬನಿಗೆ 18 ವರ್ಷದ ನನ್ನನ್ನು ಕಟ್ಟಿದ್ದರು.. ಅದೂ ಧಿಡೀರ್ ಮದುವೆ, ಅವನ ಪೂರ್ಣ ಮತ್ತು ಪೂರ್ವದ ಪರಿಚಯವಿಲ್ಲ. ಕುಟುಂಬ ಬಂದಿರಲಿಲ್ಲ. ಧಿಕ್ಕರಿಸಿ ನಿಲ್ಲುವ ಅಧಿಕಾರ ನನಗಿರಲಿಲ್ಲ.

ಮದುವೆಯಾದ ದಿನವೇ ಪಯಣ ಬೆಂಗಳೂರಿನತ್ತ ಸಾಗಿತು. ಇತ್ತ ತವರಿನ ಕೊಂಡಿ ಕಳಚಿತ್ತು.. ಅಷ್ಟಕ್ಕೂ ಕಳಚಿಕೊಳ್ಳಲಾದರೂ ಏನಿತ್ತು..? ಸಂಸಾರ ಸಾಗುತ್ತಿತ್ತು.. ಅಂದುಕೊಂಡಂತೆ ಅಲ್ಲದಿದ್ದರೂ ತವರಿಗಿಂತಾ ಸೊಗಸಾಗಿ. ಈಗಲೂ ಆತನ ವಿವರಗಳೇನೂ ನನಗೆ ತಿಳಿದಿರಲಿಲ್ಲ. ಆದರೆ, ದಿನಕಳೆದಂತೆ ಆ ಬೀದಿಯ ಪರಿಚಯವಾಯಿತು. ಹಗಲೆಲ್ಲಾ ನಿದ್ರೆಯಲ್ಲಿದ್ದು, ರಾತ್ರಿಯೆಲ್ಲಾ ಎಚ್ಚರವಿರುವ ಸ್ಥಳ ಅದು ಎಂದು ತಿಳಿಯುವಷ್ಟರಲ್ಲಿಯೇ ನನ್ನನ್ನೂ ಆತ ಅಲ್ಲಿಗೇ ಮಾರಿಯಾಗಿತ್ತು. ತಪ್ಪಿಸಿಕೊಳ್ಳಲು ಸಾಧ್ಯವಾಗದ ಬಿಗಿ ಪಹರೆ. ದಿಕ್ಕರಿಸಿ, ದಿಕ್ಕರಿಸಿ ಸುಸ್ತಾಗಿ ಮಲಗಿದ್ದಾಗಲೇ ಆಕ್ರಮಣ ನಡೆದಿತ್ತು. ಕಾಲಕ್ರಮೇಣ ಅದು ರೂಢಿಯಾಯಿತು. ಆ ಬದುಕಿಗೆ ಒಗ್ಗಿಕೊಂಡಾಗಿತ್ತು.

ಮಗು ಹುಟ್ಟುವ ಮುನ್ಸೂಚನೆ ಸಿಕ್ಕಿತ್ತು. ಯಾರ ರಕ್ತದ ಕೂಸೋ ಅರಿವಿರಲಿಲ್ಲ ಆದರೆ ನನ್ನ ಕರುಳ ಬಳ್ಳಿ ಎಂಬ ಮಮಕಾರವಿತ್ತು. ಯಾರೂ ತೋರದ ಧೈರ್ಯ ತೋರಿದೆ. ಮಗಳು ಹುಟ್ಟಿದಳು. ಅಲ್ಲಿಂದ ಹೊರನಡೆದು ಹೊಸ ಬದುಕು ಕಟ್ಟಿಕೊಳ್ಳಲು ಹೊರಟರೆ ಎಲ್ಲರೂ ಗತವನ್ನು ಕೆಣಕುವವರೇ.. ಕಡೆಗೆ ಕೆಂಪು ದೀಪದ ಬೆಳಕು ಆಸರೆಯಾಯಿತು. ಆ ಕೆಂಪು ದೀಪದ ನೆರಳು ಸಹಾ ಅವಳನ್ನು ಸೋಕದಂತೆ ಮುಚ್ಚಟ್ಟೆಯಾಗಿ ಬೆಳೆಸಿದೆ. ಅಕ್ಷರ ಕಲಿಸುವ ಅಮ್ಮನಾದಳು ಅವಳು. ಏಕಾಂಗಿತನ ತೊಡೆಯುವ ಗೆಳತಿಯಾದಳು. ಆದರೆ, ಒಂದು ದಿನ ಅವಳು ಕಲಿಸಿದ ವಿದ್ಯೆಯೇ ಅವಳ ನನ್ನ ಸಂಬಂಧವನ್ನು ಬಲಿ ಪಡೆಯಿತು. ಅವಳಿಲ್ಲದಾಗ ನನ್ನ ಏಕಾಂಗಿತನ ತೊಡೆಯಲು ಬರೆದ ನನ್ನ ಗತದ ಬದುಕು ನಾನು ತಿಳಿಸದ ನನ್ನ ಬದುಕಿನ ಸತ್ಯವನ್ನೆಲ್ಲಾ ಅವಳೆದುರು ತೆರೆದಿಟ್ಟಿತ್ತು. ಅಂದಿನಿಂದ ಅವಳ ಪಾಲಿಗೆ ನಾನು "ಕಳಂಕಿನಿ". ಅವಳಿಗಾಗಿ ಪ್ರತಿ ರಾತ್ರಿ ಸತ್ತು, ಸತ್ತು ಹುಟ್ಟುತ್ತಿದ್ದೆ ಆದರೆ ಅವಳ ಪಾಲಿಗೆ ನಾನು ಈಗ ಸಂಪೂರ್ಣ ಸತ್ತಿದ್ದೇನೆ. ಸಮಾಜಕ್ಕೆ ನನ್ನದೊಂದು ಕಡೆಯ ಪ್ರಶ್ನೆ. ಸಾಧ್ಯವಾದರೆ ಉತ್ತರಿಸಿ.

ಪ್ರತಿ ರಾತ್ರಿ ಹುಟ್ಟಿ, ಮರು ಹಗಲು ಸಾಯುವ 
ಚಂದ್ರನಿಗೆ ಕಲೆಗಳಿದ್ದರೂ, ಕಳಂಕವಿಲ್ಲ..
ಪ್ರತಿ ರಾತ್ರಿ ಸತ್ತು,ಸತ್ತು ಮರು ಬೆಳಿಗ್ಗೆ ಹುಟ್ಟುವ
ಕಲೆಗಳಿಲ್ಲದ ನಿತ್ಯಮುತ್ತೈದೆ ಕಳಂಕಿನಿ

ಏಕೆ???

ಪುಸ್ತಕ ಮುಗಿದಾಗ ಸುಮುಖ್ ಕಣ್ಣ ತುಂಬಾ ಕಂಬನಿ. ಅವನ ಬಳಿ ಅದಕ್ಕೆ ಉತ್ತರವಿಲ್ಲ. ಅವನ ಬಳಿ ಅಷ್ಟೇ ಅಲ್ಲ ಮತ್ತಾರ ಬಳಿಯೂ ಉತ್ತರವಿಲ್ಲ.

ಅಷ್ಟರಲ್ಲಿ ದೀಪಾ ಬಂದಳು. ಎದ್ದು ಹೊರನಡೆದ, ಅವಳು ಮಾತನಾಡುವ ಮುನ್ನವೇ ಅವಳೊಡನೆ ಈ ಪ್ರಶ್ನೆ ಕೇಳಿದ.. ಮೊದಲಿಗೆ ಇದಕ್ಕೆ ಉತ್ತರಿಸು. ನಂತರ ಈ "ಕಳಂಕಿನಿ"ಯರ ಕಳಂಕ ತೊಡೆಯುವ ನನ್ನ ಕಾರ್ಯಕ್ಕೆ ಜೊತೆಯಾಗುವೆಯಾ ಹೇಳು..? ಎಂದ. ಅವಳಿಗೆ ಮತ್ತೇನೂ ಹೇಳಲು ತೋಚಲಿಲ್ಲ.

ಸುಮುಖ್ ನಿಗೆ ತನ್ನ ಬದುಕಿನ ಕುರಿತು ಹೇಳಲೆಂದು ಬಂದಿದ್ದವಳ ಕಣ್ಣು ಅವನು ಹಿಡಿದಿದ್ದ ಪುಸ್ತಕದ ಮೇಲೆ ಹೋಯಿತು. ಅವಳಿಗೆ ಅವನ ಪ್ರಶ್ನೆಯ ಮೂಲ ಅರಿವಾಯಿತು. "ಆ ಪುಸ್ತಕ ಬರೆದವಳು ನನ್ನಮ್ಮ. ನನ್ನ ಬದುಕಿನ ಕುರಿತು ಹೇಳ ಹೊರಟಾಗಲೆಲ್ಲಾ ಯಾವದೋ ಅವ್ಯಕ್ತ ಭಾವ ತಡೆದು ನಿಲ್ಲಿಸುತ್ತಿತ್ತು. ಅಮ್ಮ ಅಂದು ಇದಿಷ್ಟನ್ನೂ ಬರೆದಿಟ್ಟು ಮತ್ತೆ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಳು. ದುಡುಕಿ ನಾನಾಡಿದ್ದ ಮಾತು ಮತ್ತೆ ಬರುವಂತಿರಲಿಲ್ಲವಲ್ಲಾ.. ಅವಳ ಬದುಕನ್ನು ಎಲ್ಲರಿಗೂ ತಿಳಿಸಬೇಕಿನಿಸಿತು. ಅವಳ ಪ್ರಶ್ನೆಗೆ ಉತ್ತರ ಹುಡುಕಬೇಕೆನಿಸಿತು. ಹಾಗಾಗಿಯೇ ಈ ಪುಸ್ತಕ ಅಚ್ಚಾಯಿತು. ಅಮ್ಮ ಹೋದ ನಂತರ ನಾನು ಹಚ್ಚಿಕೊಂಡದ್ದು ಪುಸ್ತಕಗಳನ್ನು ಬಿಟ್ಟರೆ ನಿನ್ನನ್ನು.. ನನ್ನ ಹಿಂದಿನ ಕತೆ ತಿಳಿದರೆ ನಿನ್ನನ್ನೂ ಕಳೆದುಕೊಳ್ಳಬೇಕಾಗಬರಬಹುದು ಎಂದು ಏನೂ ತಿಳಿಸಲಿಲ್ಲ. ಈಗಲೂ ನಿನಗೆ ನನ್ನ ಜೊತೆಯಾಗುವ ಆಸೆ ಇದೆಯೇ..?" ಎಂದು ಕೇಳಿದಳು ದೀಪಾ.

ದೀಪದ ಬೆಳಕಿನಲ್ಲಿ ಹೊಳಪುಗೊಂಡೆ
ಕೆಂಪು ದೀಪದ ಅಡಿಯ ಕತ್ತಲ ಮರೆಯಾಗಿಸಲು
ಮತ್ತೆ ಈ ದೀಪದಾರಿಯಾಗಿ ಹೊರಡುವೆ
ಕತ್ತಲು-ಬೆಳಕಿನ ಸಮರದಲ್ಲಿರುವ
ಕಳಂಕಿನಿಯರ ಕಳಂಕವ ತೊಡೆಯಲು

ಎಂದು ಉತ್ತರಿಸಿದ. ಇಬ್ಬರ ಜೊತೆಯಾದ ಹೆಜ್ಜೆಯ ಕಾಣಲು ಏಕೋ ಚಂದ್ರ ಮೋಡವಿದ್ದರೂ ದಾಟಿ ಮೆಲ್ಲನೆ ಹೊರಬರುತ್ತಿದ್ದ. ಕೆಂಪು ದೀಪ ಮಂಕಾಗುತ್ತಿತ್ತು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ