ಅಪರ್ಣಾಳ ಕೈ ಹಿಡಿದು ಕುಳಿತಿದ್ದರು ಮೈನಾವತಿಯವರು. "ಹೌದು ಕಂದಾ, ಕೆಲವೊಮ್ಮೆ ಎಲ್ಲವನ್ನೂ ಮರೆಯಲು ಸಾಧ್ಯವಾಗದು. ಮರೆವೆಂಬುದು ಕೆಲವೊಮ್ಮೆ ವರವೂ ಹೌದು, ಶಾಪವೂ ಹೌದು. ಕೆಲವೊಮ್ಮೆ ಮರೆಯಲು ಸಾಧ್ಯವಾಗದೇ ಇರುವಾಗ ಸಂಪೂರ್ಣ ನಿರ್ಲಕ್ಷಿಸಿ ಬಿಡಬೇಕು. ನಿನ್ನ ಮನಸ್ಸಿನ ತಾಕಲಾಟಗಳನ್ನು ನಾನು ಸಂಪೂರ್ಣ ಅರ್ಥಮಾಡಿಕೊಳ್ಳದಿರಬಹುದು. ಆದರೆ, ಕೊಂಚವಾದರೂ ನಾನು ತಿಳಿದುಕೊಳ್ಳಬಲ್ಲೆ. ನಾನು ನಿನ್ನನ್ನು ಹೆತ್ತು, ಹೊತ್ತು ಸಾಕದಿದ್ದರೂ ಕೈ ತುತ್ತು ನೀಡಿರುವೆ. ಹೆತ್ತಾಗ ಮಾತ್ರವೇ ತಾಯಿ ಎನ್ನಿಸಿದಿದ್ದರೆ ಯಶೋದೆ ಕೃಷ್ಣನಿಗೆ ತಾಯಿಯಾಗುತ್ತಲೇ ಇರಲಿಲ್ಲ. ಕಂದಾ, ಎಷ್ಟೋ ಸಾರಿ ನೀನು ಕಾತ್ಯಾಯಿನಿಯ ಜೊತೆಯಲ್ಲಿ ಮನೆಗೆ ಬಂದು ಹೋದ ಮೇಲೆ ಅವಳಿಗೂ ನನಗೂ ಹುಸಿಮುನಿಸಿನ ಜಗಳವಾಗಿದಿದ್ದೆ. ನಾನು ಅವಳಿಗಿಂತ , ನಿನ್ನ ಮೇಲೆಯೇ ಹೆಚ್ಚು ಮಮತೆ ತೋರುತ್ತೇನೆ ಎಂಬುದು ಅವಳ ವಾದ. ಒಮ್ಮೆ ಕಣ್ಮುಚ್ಚಿ ದೀರ್ಘವಾದ ಉಸಿರು ತೆಗೆದುಕೋ.. ಎಲ್ಲವೂ ಸರಿಯಾಗುತ್ತದೆ ಎಂಬ ಆಶಾಭಾವ ಇರಲಿ. ಸರಿಯಾಗದಿದ್ದರೂ ಸರಿಪಡಿಸುವೆ ಎಂಬ ಛಾತಿ ಇರಲಿ. ನೀನು ನಿನ್ನ ತಾಳ್ಮೆಯ, ಪರಿಪೂರ್ಣ ಪ್ರೀತಿಯಿಂದ ಅಶುತೋಷ್ ನಂತಹಾ ಹಿಮಬಂಡೆಯನ್ನೇ ಅಲುಗಾಡಿಸಿದವಳು. ಅಂತಹಾದ್ದರಲ್ಲಿ ನೀನೇ ಹೀಗೆ ಧೈರ್ಯಗೆಟ್ಟರೆ ಹೇಗೆ ? ಅಳುವುದಾದಲ್ಲಿ ಅತ್ತು ಬಿಡು, ಅಳುವನ್ನು ತಡೆ ಹಿಡಿಯಬೇಡ. ಆದರೆ, ಮತ್ತದೇ ಕಾರಣಕ್ಕೆ ನೀನು ಮತ್ತೆಂದೂ ಅಳಬಾರದು. ಇನ್ನು ಮುಂದೆ ಯಾವಾಗಲೂ ನಾನು ನಿನ್ನ ಜೊತೆಗೇ ಇರುವೆ" ಎಂದವರ ಮಾತು ಕೇಳಿ ಅವರ ಮಡಿಲಲ್ಲಿ ತಲೆ ಇಟ್ಟು ಎದೆಯ ನೋವನ್ನೆಲ್ಲಾ ಬಸಿಯುವಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳು.
ಎಷ್ಟೋ ಹೊತ್ತಿನ ನಂತರ ಸಾವರಿಸಿಕೊಂಡು "ಅಮ್ಮಾ, ನೀವೆಲ್ಲಾ ಸತ್ತು ಹೋದಿರಿ ಎಂಬ ಸುದ್ದಿ ಕೇಳಿದೆ. ಆದರೆ, ನೀವಿನ್ನು ಬದುಕಿದ್ದೀರಿ ಎಂಬುದನ್ನು ನೋಡಿ ಅರೆಕ್ಷಣ ಸಂತಸವಾಯಿತು. ಆದರೆ, ನನಗೆ ಎಲ್ಲವೂ ಅಯೋಮಯವಾಗುತ್ತಿದೆ. ಅಮ್ಮ, ಬದುಕಿನಲ್ಲಿ ನನ್ನನ್ನು ಹಿಂದಿನ ಎಲ್ಲಾ ಸಮಸ್ಯೆಗಳಿಂದ ಹೊರತಂದು ಎಷ್ಟರಮಟ್ಟಿಗೆ ರೂಪಿಸಿದ್ದೀರಿ ಎಂದರೆ ನನ್ನ ಪ್ರತಿ ಏಳ್ಗೆಯ, ನನ್ನ ಪ್ರತಿ ಯಶಸ್ಸಿನ ಹಿಂದೆ, ಧೈರ್ಯದ ಹಿಂದೆ ನೀವಿದ್ದಿರಿ. ನಾನು ನನ್ನ ಶಾಲಾದಿನಗಳ ನಂತರ ಮತ್ತೆ ನಿಮ್ಮನ್ನು ನೋಡಿದ್ದು ಕಾತ್ಯಾಯಿನಿಯ ಜೊತೆ ಮನೆಗೆ ಬಂದಾಗ. ಅಷ್ಟೊತ್ತಿಗಾಗಲೇ ನಾನು ನಿಮ್ಮ ಮಾರ್ಗದರ್ಶನದಲ್ಲಿ ಅತ್ಯುತ್ತಮ ವ್ಯಕ್ತಿಯಾಗಿ ರೂಪುಗೊಂಡಿದ್ದೆ. ಆಗ ನಿಮ್ಮ ಕಣ್ಣಲ್ಲಿ ಕಂಡ ಹೊಳಪನ್ನು ಮತ್ತೆ ನಾನು ಅಳಿಸಿಬಿಟ್ಟೆನೇ ಅಮ್ಮಾ..? ಅತ್ಯುತ್ತಮ ಶಿಕ್ಷಕರು ಮಾತ್ರವೇ ವಿದ್ಯಾರ್ಥಿಗಳನ್ನು ಮಕ್ಕಳಂತೆ ಭಾವಿಸುತ್ತಾರೆ. ನೀವು ನನ್ನನ್ನು ಮಗಳಿಗಿಂತಲೂ ಮಿಗಿಲಾಗಿ ನೋಡಿಕೊಂಡಿದ್ದೀರಿ. ನೀವು ನನ್ನ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸಿಬಿಟ್ಟೆನೇ ಅಮ್ಮಾ..? ಆದರೆ, ನೀವೆಲ್ಲರೂ ಸತ್ತಿರಿ ಎಂಬ ಸುದ್ದಿ ಕೇಳಿ ನಾನು ದುಃಖ ಪಟ್ಟದ್ದೆಷ್ಟು ಗೊತ್ತೇ..? ಹಾಗಾದರೆ, ಕಾತ್ಯಾಯಿನಿ ಕೂಡಾ ಬದುಕಿರುವಳೇ..? ಅಣ್ಣ, ಅತ್ತಿಗೆ, ಅಪ್ಪ ಎಲ್ಲರೂ ಬದುಕಿರುವರೇ ಹೇಳಿ ಅಮ್ಮ ಇಷ್ಟೆಲ್ಲಾ ಸತ್ಯವನ್ನು ನನ್ನಿಂದ ಮುಚ್ಚಿಟ್ಟದ್ದು ಏಕೆ ? ಇದೆಲ್ಲವನ್ನೂ ತಿಳಿದರೆ ಅಶು ತುಂಬಾ ಖುಷಿ ಪಡುತ್ತಾನೆ. ಅವನು ಕಣ್ಣು ಬಿಟ್ಟ ತಕ್ಷಣ ಕಾತ್ಯಾಯಿನಿಯನ್ನು ಅವನ ಮುಂದೆ ತಂದು ನಿಲ್ಲಿಸಿ, ನಾನು ಅವನಿಂದ ದೂರ ಹೊರಟುಬಿಡುತ್ತೇನೆ, ಈಗ ಹೊರಟಂತೆ. ಅಶು ಖುಷಿಯಾಗಿದ್ದರೆ ನನಗೆ ಅಷ್ಟೇ ಸಾಕು ಅಮ್ಮ"
ಮಾತನಾಡುತ್ತಲೇ ಇದ್ದವಳ ಮಾತನ್ನು ನಿಲ್ಲಿಸಿ " ಏನೆಂದೆ ನೀನು.. ? ಅಶುವನ್ನು ಬಿಟ್ಟು ಹೊರಟಿದ್ದೆಯಾ..? ಎಲ್ಲಿಗೆ..? ಯಾಕೆ..? ನಿಮ್ಮ ನಡುವೆ ಏನಾದರೂ ಜಗಳವಾಯಿತೇ..? ಯಾಕೆ ಹೀಗೆ ನೀನು ತಾಳ್ಮೆ ತಪ್ಪಿದೆ..? ನಿನಗೆ ಅರಿವಿದೆಯೇ ನೀನು ಎಷ್ಟು ದೊಡ್ಡ ತಪ್ಪು ಮಾಡುತ್ತಿದ್ದೆ ಎಂಬುದಾಗಿ..? " ಮೈನಾವತಿಯವರ ಮಾತು ಕಟುವಾಯಿತು.
"ಅದು ಅಮ್ಮ, ಆದೆಲ್ಲಾ ಒಂದು ದೊಡ್ಡ ಕತೆ, ಸಮಯ ಸಿಕ್ಕಾಗ ಅದನ್ನೆಲ್ಲಾ ಹೇಳುವೆ ಅಮ್ಮಾ. ನನ್ನ ತಪ್ಪಿನ ಅರಿವು ನನಗಾಗಿದೆ ಅಮ್ಮಾ.. ಬೇಕೆಂದು ತಾಳ್ಮೆ ತಪ್ಪಿ ಮಾಡಿದುದಲ್ಲ ಅಮ್ಮ. ನಿಮ್ಮ ಮಾರ್ಗದರ್ಶನದಿಂದ ರೂಪುಗೊಂಡವಳು ನಾನು. ನಾನು ನನ್ನ ಅಶುವನ್ನು ದುಃಖಕ್ಕೆ ದೂಡಲಾರೆ. ಅವನಿಗೇನಾದರೂ ಆದರೆ ನಾನು ಬದುಕಿರುವೆ ಎಂದುಕೊಂಡಿರುವಿರಾ ನೀವು ? ಅದೆಲ್ಲವನ್ನು ಬಿಡಿ. ಕಾತ್ಯಾಯಿನಿಯ ಬಗ್ಗೆ ಹೇಳಿ ಅಮ್ಮ. ಎಲ್ಲಿದ್ದಾಳೆ ಅವಳು ..?" ಎಂದಳು ಅಪರ್ಣಾ. "ಕಾತ್ಯಾಯಿನಿ ಈಗ ಬರಿಯ ನೆನಪು ಮಾತ್ರ ಅಪ್ಪು, ಅವಳಿದ್ದಳು ಎಂಬ ನೆನಪಷ್ಟೇ ಈಗ ಜೀವಂತ. ನಾನು, ವಿರಾಜ್ ಇಬ್ಬರೇ ಈಗ ಬದುಕಿರುವವರು. ಹೆಚ್ಚಿನದ್ದೇನನ್ನೂ ಈಗ ಕೇಳಬೇಡ, ಸತ್ಯವನ್ನು ಅರಗಿಸಿಕೊಳ್ಳಲು ಧೈರ್ಯ ಬೇಕು. ಕೆಲವೊಂದು ವಿಚಾರಗಳು ಯಾವಾಗ ಅರಿವಾಗಬೇಕೋ ಆಗಲೇ ತಿಳಿಯಬೇಕು. ಕೆಲವೊಂದನ್ನು ಮೊದಲೇ ಅರಿಯಲು ಹೊರಟರೆ ಅನರ್ಥವಾಗುತ್ತದೆ ಕಂದಾ. ನಿನಗೊಂದು ಪುಟ್ಟ ಕತೆ ಹೇಳುತ್ತೇನೆ ಕೇಳು.
ನಿನ್ನಂತಹಾ ಒಬ್ಬಳು ಪುಟ್ಟ ಹುಡುಗಿ ಕುತೂಹಲದಿಂದ ರೇಷ್ಮೆ ಹುಳು ತನ್ನ ಗೂಡಿನಿಂದ ಹೊರಬರವುದನ್ನು ತನ್ನ ಬಟ್ಟಲು ಕಂಗಳಿಂದ ಆಶ್ಚರ್ಯವಾಗಿ, ಕೂಲಂಕುಷವಾಗಿ ಗಮನಿಸುತ್ತಿದ್ದಳು. ದಿನಗಳು ಕಳೆಯುತ್ತಿದ್ದಂತೆ ಅದು ಕೊಂಚ ಕೊಂಚವಾಗಿ ಕಷ್ಟಪಟ್ಟು ಗೂಡನ್ನು ಹೊಡೆದು ಹೊರಬರುವುದನ್ನು ಗಮನಿಸುತ್ತಿದ್ದವಳಿಗೆ ಒಂದು ಆಲೋಚನೆ ಬಂದಿತು. ಅದು ಅಷ್ಟು ಕಷ್ಟ ಪಟ್ಟು ಯಾಕೆ ಗೂಡಿನಿಂದ ಹೊರ ಬರಬೇಕು, ಗೂಡಿನಿಂದ ನಾನೇ ಆಚೆ ತೆಗೆದರೆ ಎಂಬ ಆಲೋಚನೆ ಕೂಡಾ ಬಂದಿತು. ಆಗ ಅವಳು ಒಂದು ಚೂಪಾದ ಬ್ಲೇಡ್ ತೆಗೆದುಕೊಂಡು ಗೂಡಿನಿಂದ ಹೊರ ಬರುವ ದಾರಿ ಮಾಡಿದಳು. ಅದು ಗೂಡಿನಿಂದ ಹೊರಬಂದ ಕೆಲವೇ ಕ್ಷಣದಲ್ಲಿ ಸತ್ತು ಹೋಯಿತು. ಅವಳಿಗೆ ಆಶ್ಚರ್ಯ, ಏಕೆ ಹೀಗೆ ಎಂದು. ಆಗ ಅದನ್ನೆಲ್ಲಾ ಗಮನಿಸುತ್ತಿದ್ದ ಅವಳ ಅಮ್ಮ ಹೇಳಿದರು. "ಕಂದಾ, ಕೆಲವು ಕೆಲಸಗಳನ್ನು ನಾವು ಬಲವಂತವಾಗಿ ಮಾಡಿದಾಗ ಅದರ ಫಲ ದೊರೆಯದೇ ಹೋಗುತ್ತದೆ. ಮೊದಲ ಗೂಡಿನಿಂದ ಬಂದ ಹುಳು ತನ್ನ ಸ್ವಯಂ ಶಕ್ತಿಯಿಂದ ಗೂಡಿನಿಂದ ಹೊರಬಂದಿತು, ನೋವಾದರೂ ಅದು ಹೊರಗಿನ ಪ್ರಪಂಚಕ್ಕೆ ಒಡ್ಡಿಕೊಂಡು ಬದುಕುವ ವಾತಾವರಣಕ್ಕೆ ಸ್ವಲ್ಪ ಸ್ವಲ್ಪವೇ ಒಗ್ಗಿಸಿಕೊಂಡಿತು. ಆದರೆ, ನೀನು ಹೊರತೆಗೆದ ಹುಳು ಹೊರಗಿನ ವಾತಾವರಣಕ್ಕೆ ಒಮ್ಮೆಲೆ ಒಗ್ಗಿಸಿಕೊಳ್ಳಲು ಬಹಳ ಕಷ್ಟಪಟ್ಟಿತು. ಹಾಗಾಗಿಯೇ ಹಠಾತ್ ಪರಿಣಾಮಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗದೇ ಸತ್ತು ಹೋಯಿತು."
"ಅಪರ್ಣಾ, ತಾನಾಗಿಯೇ ಕೆಲ ರಹಸ್ಯಗಳು ಬಿಚ್ಚಿಕೊಳ್ಳುವ ಮೊದಲೇ ನಾವು ಅದನ್ನು ಬಲವಂತವಾಗಿ ಬಿಚ್ಚಿಸಿಕೊಳ್ಳಲು ಹೋಗಬಾರದು ಕಂದಾ. ಇಷ್ಟು ದಿನಗಳೇ ಕಾದಿದ್ದೀಯ, ಇನ್ನು ಕೆಲವೇ ದಿನಗಳಷ್ಟೇ ಎಲ್ಲವೂ ಸರಿಯಾಗುತ್ತದೆ. ಅಶು ಕೂಡಾ ಹುಷಾರಾಗುತ್ತಾನೆ. ನೀನೀಗ ಧೈರ್ಯದಿಂದ ಎಲ್ಲವನ್ನೂ ಎದುರಿಸು. ನಿನ್ನೊಂದಿಗೆ ಇನ್ನು ನಾನು ಎಂದಿಗೂ ಇರುತ್ತೇನೆ. ಕಾತ್ಯಾಯಿನಿಯನ್ನು ನಿನ್ನಲ್ಲೇ ಕಾಣುತ್ತೇನೆ." ಎಂಬ ಮೈನಾವತಿಯ ಮಾತು ಕೇಳಿ ನಿರಾಳಲಾದಳು.
ಅಷ್ಟರಲ್ಲಿ "ಅಪರ್ಣಾ" ಎಂಬ ಮಾತು ಕೇಳಿ ಅತ್ತ ತಿರುಗಿದವಳ ಬಾಯಲ್ಲಿ ಸಣ್ಣ ಉದ್ಗಾರ ಹೊರಟಿತು "ಅಪ್ಪಾ" ಎಂದು. ಮರುಕ್ಷಣವೇ ಕಟುವಾಗಿ "ಯಾರು ನೀವು..?ಇಲ್ಲಿಗೆ ಏಕೆ ಬಂದಿದ್ದೀರಿ..? ಸತ್ತಿದ್ದೇನೋ ಬದುಕಿದ್ದೇನೋ ಎಂದು ನೋಡಲು ಬಂದಿದ್ದೀರಾ..?" ಎಂಬ ಮಾತನ್ನು ಕೇಳಿ ಅವರು ಅಲ್ಲೇ ನಿಂತರು.
ಅಪರ್ಣಾಳ ಗತವೇನು..? ಅವಳ ತಂದೆಯ ಜೊತೆಗೆ ಅವಳು ಕಟುವಾಗಿ ವರ್ತಿಸಲು ಕಾರಣವೇನು ? ಊಹಿಸಬಲ್ಲಿರಾ?
(ಸಶೇಷ)
(ಎಂದಿನಂತೆ ಈ ಬಾರಿಯೂ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹದ ಸ್ಫೂರ್ತಿ. ಓದಿದವರು ತಪ್ಪದೇ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ)
~ವಿಭಾ ವಿಶ್ವನಾಥ್